ನಮ್ಮ ಆಡಿಯೋಗೆ ನಿಮ್ಮ ದನಿ - MyLang Talent Hunt
ಇದು ಆಡಿಯೋಪುಸ್ತಕಗಳ ಕಾಲ. ನಿಮ್ಮ ದನಿಯಲ್ಲಿ ಕನ್ನಡ ಪುಸ್ತಕವೊಂದನ್ನು ಓದುಗರಿಗೆ ತಲುಪಿಸಬೇಕು ಅನ್ನುವ ಆಸೆಯಿದೆಯೇ? ನಾವು ನಿಮಗಾಗಿ ಒಂದು ಅದ್ಭುತ ಅವಕಾಶ ತರುತ್ತಿದ್ದೇವೆ.
ನೀವು ಮಾಡಬೇಕಿರುವುದು ಇಷ್ಟೇ:
2.ಇಲ್ಲವೇ 7259268000 ನಂಬರಿಗೆ ವಾಟ್ಸಾಪ್ ಮಾಡಬಹುದು ಇಲ್ಲವೇ contact@mylang.in ವಿಳಾಸಕ್ಕೆ ಮಿಂಚೆಯಲ್ಲೂ ಕಳಿಸಬಹುದು.
ನಿಮ್ಮ ದನಿಯನ್ನು
ನೀವು ವಿಜೇತರಾದರೆ ನಿಮ್ಮ ದನಿಯಲ್ಲಿ ಈ ಕತೆಯನ್ನು ಆಡಿಯೋ ರೂಪದಲ್ಲಿ ತರುವ ಅವಕಾಶ ನಿಮ್ಮದಾಗಲಿದೆ. ಜೊತೆಯಲ್ಲಿ ಇದನ್ನು ಒಂದು ಮೈಕ್ರೊ ಆಡಿಯೋ ಪುಸ್ತಕದ ರೂಪದಲ್ಲಿ ಮೈಲ್ಯಾಂಗ್ ಅಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಮಾರಾಟದಲ್ಲಿ 20% ರಾಯಲ್ಟಿ ಶೇರ್ ನಿಮ್ಮದಾಗಲಿದೆ
ಇನ್ಯಾಕೆ ತಡ, ನಿಮ್ಮ ದನಿಯಲ್ಲಿ ಕನ್ನಡದ ಓದುಗರನ್ನು ತಲುಪುವ ಈ ಸುವರ್ಣವಕಾಶ ನಿಮ್ಮದಾಗಿಸಿಕೊಳ್ಳಿ!
ಕೊನೆಯ ದಿನಾಂಕ: 10 April 2022
----------------
ಚಾಳೀಸು
ಲೇಖಕರು: ಜೋಗಿ | ಕಾಡು ಹಾದಿಯ ಕತೆಗಳು ಕಥಾ ಸಂಕಲನ
ಶ್ರೀನಿವಾಸನೀಗೀಗ ನಲವತ್ತೆರಡು. ಮದುವೆಯಾಗಿ ಹದಿಮೂರು ವರ್ಷವಾಗಿದೆ. ಮೊದಲನೆಯ ಮಗಳು ಗೀತಾ. ಆರನೇ ತರಗತಿ ಓದುತ್ತಿದ್ದಾಳೆ. ಕಿರಿಯ ಮಗನಿಗಿನ್ನೂ ನಾಮಕರಣವಾಗಿಲ್ಲ. ಮೊನ್ನೆ ಮೊನ್ನೆ ಅತ್ತೆ ಕಾಗದ ಬರೆದು ತಮ್ಮ ಕುಲದೇವರಾದ ‘ಲಕ್ಷ್ಮಿನರಸಿಂಹ ಪ್ರಸನ್ನ’ನ ಹೆಸರನ್ನೇ ಇಡಬೇಕೆಂದು ಹೇಳಿದ್ದಾರೆಂದು ಮೀನಾಕ್ಷಿ ಹೇಳಿದ್ದು ಈ ಹೊತ್ತಿನವರೆಗೂ ನೆನಪಿದೆ. ಅದರ ಜೊತೆಗೇ ತನ್ನ ಅಪ್ಪನ ಹೆಸರನ್ನು ಸೇರಿಸಿ ಇಡಬೇಕೆಂದು ಅಮ್ಮನ ಆಸೆ. ಅದೆಲ್ಲ ಸೇರಿದರೆ ಹೆಸರು ಒಂದೂವರೆ ಮೈಲಿ ಉದ್ದವಾಗುವುದರಿಂದ ನೀಟಾಗಿ ಶಿಶಿರ ಅಂತಿಟ್ಟರೆ ಚೆನ್ನಾಗಿರುತ್ತೆ ಅನ್ನುವುದು ಈತನ ಅನ್ನಿಸಿಕೆ. ಅದನ್ನಿನ್ನೂ ಯಾರ ಹತ್ತಿರವೂ ಹೇಳಿ ಕೊಂಡಿಲ್ಲ ಅಷ್ಟೇ.
ಶ್ರೀನಿವಾಸ ಖಾಸಗಿ ಸಂಸ್ಥೆಯೊಂದರಲ್ಲಿ ಹದಿನೇಳು ವರ್ಷಗಳಿಂದ ಗುಮಾಸ್ತನಾಗಿದ್ದಾನೆ. ವರ್ಷಕ್ಕೊಮ್ಮೆ ಬಾಸ್ ತಾನೇತಾನಾಗಿ ಐವತ್ತು ರೂಪಾಯಿ ಬಡ್ತಿ ನೀಡುತ್ತಾ ಬಂದಿರುವುದರಿಂದ ಅವರ ಜೊತೆಗೆ ಈತನಿಗೆ ಯಾವುದೇ ರೀತಿಯ ಅಸಮಾಧಾನವೂ ಇಲ್ಲ. ತಿಂಗಳ ಕೊನೆಗೆ ಅವರು ಕೊಡುವ ಸಾವಿರದಿನ್ನೂರು ರೂಪಾಯಿಗಳನ್ನು ಮೀನಾಕ್ಷಿಯ ಕೈಯಲ್ಲಿರಿಸಿದರೆ ಆತನ ಕರ್ತವ್ಯ ಅಷ್ಟರಮಟ್ಟಿಗೆ ಮುಗಿಯುತ್ತದೆ. ದಿನದಿನದ ಖರ್ಚಿಗೆ ಆತ ಬರೆಯುವ ಕತೆಗಳಿಂದ, ಲೇಖನಗಳಿಂದ ಬರುವ ಸಂಭಾವನೆ ಸಾಕಾಗುತ್ತದೆ. ಇತ್ತೀಚಿನ ವಾರಪತ್ರಿಕೆಯಲ್ಲಿ ಆತ ಬರೆದ ಕತೆಗೆ ಅರವತ್ತೇಳು ಮೆಚ್ಚುಗೆ ಪತ್ರ ಬಂದದ್ದು ಆತನ ಜನಪ್ರಿಯತೆಗೆ ಸಾಕ್ಷಿ ಅನ್ನುವುದು ಆತನ ಗೆಳೆಯರೆಲ್ಲ ಹೆಮ್ಮೆಯಿಂದ ಆಡಿಕೊಳ್ಳುವ ಸಂಗತಿ. ಅಂತಹ ಪತ್ರಗಳಿಗೆಲ್ಲ ಮೀನಾಕ್ಷಿಯೇ ಒಂದೆರಡು ಸಾಲು ಉತ್ತರ ಬರೆದು ಈತನ ಹೊಣೆಯನ್ನು ಬಹುಮಟ್ಟಿಗೆ ಕಡಿಮೆ ಮಾಡುತ್ತಾಳೆ. ಹಾಗಾಗಿ ಶ್ರೀನಿವಾಸ ಆಫೀಸು ಮುಗಿಸಿ ಬಂದ ಕೂಡಲೇ ತನ್ನ ಸಾಹಿತ್ಯ ಕೃಷಿಯಲ್ಲಿ ತೊಡಗಿ ಕೊಳ್ಳುವುದು ಬಹುಮಟ್ಟಿಗೆ ಸಾಧ್ಯವಾಗಿದೆ. ಹೀಗಾಗಿ ಸಾವಿರದೊಂಬೈನೂರ ಎಂಭತ್ತೆಂಟರ ನವೆಂಬರ್ ತಿಂಗಳ ಹದಿನೈದರವರೆಗೂ ಶ್ರೀನಿವಾಸ ಸಕಲ ಸಹಿತ ಸುಖಭೋಗಗಳನ್ನು ಯಥಾನುಶಕ್ತಿ ಅನುಭವಿಸುತ್ತಾ ಸುಖಿಯಾಗಿದ್ದ ಎಂದರೆ ಯಾರೂ ಚಕಾರವೆತ್ತುವುದು ಸಾಧ್ಯವೇ ಇರಲಿಲ್ಲ.
ನವೆಂಬರ್ ತಿಂಗಳ ಹದಿನಾರನೇ ತಾರೀಕಿನ ಬೆಳಿಗ್ಗೆ ಏಳುವ ಹೊತ್ತಿಗೆ ಶ್ರೀನಿವಾಸನಿಗೆ ವಿಪರೀತ ತಲೆನೋವು. ಕಣ್ಣುಬಿಟ್ಟರೆ ಕಣ್ಣುಬಿಟ್ಟಂತೆ ಅನಿಸಲಿಲ್ಲ. ತನ್ನ ಮಲಗುವ ಕೋಣೆಯ ಗೋಡೆಗೆ ನೇತುಹಾಕಿದ್ದ ತಾನು ಮತ್ತು ಮೀನಾಕ್ಷಿ ಜೊತೆಗೇ ಕೂತು ತೆಗೆಸಿಕೊಂಡಿದ್ದ ಫೋಟೋ ಕೂಡಾ ಅಸ್ಪಷ್ಟ ಕಾಣಿಸಿತು. ಮಂಚಕ್ಕೆ ಅಂಟಿಕೊಂಡಂತೆ ಇರಿಸಿದ್ದ ಪುಸ್ತಕದ ಕಪಾಟು. ಅದರ ಎದುರಿಗಿರುವ ಬರೆಯುವ ಮೇಜು, ಬೀದಿಯನ್ನು ಇಣಿಕಿ ನೋಡುತ್ತಿದ್ದ ಕಿಟಕಿಗೆ ಇಳಿಬಿಟ್ಟ ಪರದೆ ಎಲ್ಲವೂ ಮಸುಕು ಮಸುಕಾಗಿ ಕಾಣಿಸತೊಡಗಿದವು. ಇನ್ನೂ ಬೆಳಕು ಹರಿದಿಲ್ಲ ಅಂದುಕೊಂಡು ಮತ್ತೆ ಮಲಗಲು ಯತ್ನಿಸಿದ. ನಿದ್ದೆ ಬರಲಿಲ್ಲ. ಅಷ್ಟು ಹೊತ್ತಿಗೆ ರೂಮಿನೊಳಗೆ ಬಂದ ಆಕೃತಿ ಅಮ್ಮನ ಥರ ಕಾಣಿಸಿ, ಬಿಚ್ಚಿಹೋಗಿದ್ದ ಲುಂಗಿಯನ್ನು ತಡಕಾಡಿ ಅವಸರವಸರ ವಾಗಿ ಸುತ್ತಿಕೊಂಡು “ನೀನ್ಯಾಕೆ ಬಂದೆ ಅಮ್ಮ” ಕೇಳಿದೊಡನೆ “ಬೆಳಿಗ್ಗೆ ಬೆಳಿಗ್ಗೇನೇ ಏನ್ರೀ ತಮಾಷೆ” ಅಂದ ಸ್ವರ, ಕಿವಿಗೆ ಮೀನಾಕ್ಷಿಯೇ ಒಳಗೆ ಬಂದದ್ದು ಅಂತ ಸಾರಿ, ಕಿವಿ ಅದನ್ನು ಮೆದುಳಿಗೆ ಕಳಿಸಿ ನಿಜಕ್ಕೂ ಒಳಗೆ ಬಂದದ್ದು ಮೀನಾಕ್ಷಿಯೇ ಅಂತ ಮನಸ್ಸು ಅಚ್ಚರಿಪಟ್ಟುಕೊಳ್ಳು ತ್ತಿರುವಾಗ ಮೊದಲ ಬಾರಿಗೆ ತನ್ನ ಕಣ್ಣಿಗೇನೋ ಆಗಿದೆ ಅನ್ನುವ ಅನುಮಾನ ಮೂಡತೊಡಗಿ ಶ್ರೀನಿವಾಸ ಎದ್ದು ಹೊರಹೋಗುವ ಯತ್ನದಲ್ಲಿ ಬಾಗಿಲಿಗೆ ಎಡವಿದ.
ಸ್ನಾನ ಮುಗಿಸುವ ಹೊತ್ತಿಗೆ ಮೀನಾಕ್ಷಿ, ಅವಸರಪಡಿಸಿ ಆಫೀಸಿಗೆ ಹೊರಡಿಸಿದಳು. ರಸ್ತೆಗೆ ಬಂದರೆ ರಸ್ತೆ ಕೂಡಾ ಹೊಸತೊಂದು ಲೋಕದ ಥರ ಕಾಣಿಸತೊಡಗಿತ್ತು. ದಾರಿಯುದ್ದಕ್ಕೂ ಯಾರ್ಯಾರಿಗೋ ಯಥೇಚ್ಛ ಎಡವಿ ಬೈಸಿಕೊಂಡ. ಯಾವ್ಯಾವುದೋ ರೂಟಿನ ಬಸ್ಸು ಹತ್ತಿ ಕಂಡಕ್ಟರನ ಹತ್ತಿರ ಉಗಿಸಿಕೊಂಡು ಎಲ್ಲೆಲ್ಲಿಯೋ ಇಳಿದು, ಮತ್ತೆ ದಾರಿ ಹುಡುಕುತ್ತಾ ಆಫೀಸು ತಲುಪುವ ಹೊತ್ತಿಗೆ ಬೆವರಿನ ಮುದ್ದೆಯಾಗಿಬಿಟ್ಟಿದ್ದ. ತನ್ನ ಬದುಕಿನ್ನು ಮುಗಿಯಿತು ಅನ್ನಿಸತೊಡಗಿ ಅದರ ಹಿಂದೆಯೇ ತಾನಿನ್ನು ಬದುಕಿರಬಾರದು ಅನ್ನುವ ವೈರಾಗ್ಯ ಕೂಡಾ ಮೂಡಿ ಒಂಥರದ ನಿರಾಸಕ್ತಿಯಲ್ಲಿ ಆಫೀಸು ಹೊಕ್ಕು ತನ್ನ ಖುರ್ಚಿಯಲ್ಲಿ ಕೂತ.
ಟೇಬಲ್ ಮೇಲಿದ್ದ ಪೇಪರ್‌ಗಳು, ಫೈಲುಗಳು ಕೂಡಾ ತಾನು ನೋಡಿಯೇ ಇರದ ಅಕ್ಷರಗಳನ್ನು ಹೊತ್ತುಕೊಂಡಿದ್ದವು. ಶ್ರೀನಿವಾಸನಿಗೆ ತಾನು ಹೊಕ್ಕದ್ದು ತನ್ನದೇ ಆಫೀಸಿಗೆ ಹೌದಷ್ಟೇ ಅನ್ನುವ ಅನುಮಾನ ಮೂಡತೊಡಗಿ ತನ್ನ ಪಕ್ಕದ ಖುರ್ಚಿಯಲ್ಲಿ ಸುಧಾಕರನಿದ್ದಾನೆಯೇ ಅನ್ನುವುದನ್ನು ಖಚಿತಪಡಿಸಿಕೊಳ್ಳಲು ಅತ್ತ ತಿರುಗಿದ. ಕುರ್ಚಿ ಖಾಲಿಯಾಗಿತ್ತು. ಅಷ್ಟು ಹೊತ್ತಿಗೆ “ಏನಯ್ಯಾ, ರಮಾನ ಜಾಗದಲ್ಲಿ ಕೂತಿದ್ದೀಯ” ಅನ್ನುತ್ತಾ ಒಳಬಂದದ್ದು ಸುಧಾಕರ ಅಂತ ಖಚಿತವಾದದ್ದೂ, ತಾನು ಕೂತದ್ದು ತನ್ನ ಮಾಮೂಲಿ ಕುರ್ಚಿ ಅಲ್ಲವೆನ್ನುವುದು ಗ್ರಹಿಕೆಗೆ ಬರತೊಡಗಿದ್ದು, ಒಮ್ಮೆಗೇ ತಾನು ಕುರುಡನಾಗಿಬಿಟ್ಟೆ ಅನ್ನುವ ಅನಿಷ್ಟವೊಂದನ್ನು ಶ್ರೀನಿವಾಸನ ಮನಸ್ಸಿನಲ್ಲಿ ಗಾಢವಾಗಿ ಬಿತ್ತಿಬಿಟ್ಟಿತು.
ಶ್ರೀನಿವಾಸನಿಗೆ ಎಷ್ಟೇ ಯತ್ನಿಸಿದರೂ ಒಂದೇ ಒಂದು ಅಕ್ಷರವನ್ನೂ ಓದುವುದು ಸಾಧ್ಯವಾಗಲೇ ಇಲ್ಲ. ಬಾಸ್ ಮೇಲಿಂದ ಮೇಲೆ ನಿನ್ನೆ ಕೊಟ್ಟ ರಿಪೋರ್ಟ್ ಫೈನಲೈಸ್ ಮಾಡಿ ಆಯ್ತಾ ಅಂತ ಕೇಳತೊಡಗಿದರು. ಕೊನೆಗೊಮ್ಮೆ ಅಲ್ಲಿ ಕೂತಿರುವುದೇ ಹಿಂಸೆಯಾಗಿ ನೇರ ಬಾಸ್‌ನ ಚೇಂಬರ್‌ನತ್ತ ನಡೆದ.
ಬಾಸ್ ಕುರ್ಚಿಯಲ್ಲಿ ಒರಗಿ ಕೂತು ತನ್ನ ಕನ್ನಡಕ ತೆಗೆದು ವರಸುತ್ತಾ ಶ್ರೀನಿವಾಸ ಹೇಳಿದ್ದನ್ನೆಲ್ಲ ಕೇಳಿದರು. ಈತ ತನ್ನ ಸಮಸ್ಯೆಯನ್ನೆಲ್ಲ ಹೇಳಿ ಮುಗಿಸಿದ ಕೂಡಲೇ “ಅದಕ್ಕೆಲ್ಲ ಯಾಕೆ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿ. ನಿನಗೆ ಈಗ ಬೇಕಾದದ್ದು ಕನ್ನಡಕ. ವಯಸ್ಸಾದಂತೆಲ್ಲ ಇದೆಲ್ಲ ಸಾಮಾನ್ಯ” ಅಂದರು. ಶ್ರೀನಿವಾಸನಿಗೆ ತನಗೆ ಇದು ಯಾಕೆ ಹೊಳೆಯಲಿಲ್ಲ ಅನ್ನಿಸಿ ಅರ್ಧ ದಿನ ರಜೆ ಬರೆದು ಹೋದ. ಹಾಗೇ ಮನೆಗೆ ಮರಳಿದ.
ಶ್ರೀನಿವಾಸ ಮೀನಾಕ್ಷಿಯ ಜೊತೆ ಕಣ್ಣಿನ ಡಾಕ್ಟರ ಹತ್ತಿರ ಹೋದ. ಅವರು ಶ್ರೀನಿವಾಸನನ್ನ ಕೂಲಂಕುಷ ಪರೀಕ್ಷೆ ನಡೆಸಿದರು. ಯಾವ್ಯಾವುದೋ ಹತ್ಯಾರಗಳನ್ನು ಬಳಸಿ ಈತನ ಒಳಗು- ಹೊರಗುಗಳನ್ನೆಲ್ಲ ಜಾಲಾಡಿದರು. ಈತ ಗೋಡೆಯೇ ಇಲ್ಲ ಅಂದುಕೊಂಡ ಕಡೆ ತೋರಿಸಿ “ಆ ಗೋಡೆಗೆ ನೇತುಹಾಕಿದ್ದ ಪಟ್ಟಿಯಲ್ಲಿ ಬರೆದ ಅಕ್ಷರಗಳನ್ನು ಓದು” ಅಂದರು. ಶ್ರೀನಿವಾಸನಿಗೆ ಡಾಕ್ಟರು ತನ್ನನ್ನು ತನ್ನ ಹೆಂಡತಿಯೆದುರೇ ಅವಮಾನ ಮಾಡ್ತಿದ್ದಾನೆ ಅನ್ನಿಸಿ ಕೋಪಬಂತು. ತಡೆದುಕೊಂಡು ಕೂತ. ಕೊನೆಗೆ ಡಾಕ್ಟರು “ಚೀಟಿ ಬರ್ಕೊಡ್ತೀನಿ. ಕನ್ನಡಕ ಮಾಡಿಸಿಕೊಳ್ಳಿ” ಅಂದು ಈತ ಕೊಟ್ಟ ದುಡ್ಡನ್ನು ಜೇಬಿಗೆ ತುರುಕಿಸಿಕೊಂಡು ಗಬ್ಬುನಗೆ ನಕ್ಕರು. ಶ್ರೀನಿವಾಸ ಎಡಗೈಯಲ್ಲಿ ಚೀಟಿ ಹಿಡಿದುಕೊಂಡು, ಬಲಗೈಯಲ್ಲಿ ಹೆಂಡತಿಯ ಎಡಗೈ ಹಿಡಿದುಕೊಂಡು ಎಡವುತ್ತ ಎಡವುತ್ತ ಮನೆಗೆ ಬಂದ. ಮೀನಾಕ್ಷಿ ಶ್ರೀನಿವಾಸನನ್ನು ಮನೆಯಲ್ಲೇ ಕೂರಿಸಿ ಹೊಸ ಸೀರೆ ಉಟ್ಟು ಹೊರಗಡೆ ಹೋಗಿ ರಾತ್ರಿ ಹೊತ್ತಿಗೆ ಕನ್ನಡಕದ ಜೊತೆಗೆ ಮರಳಿದಳು. ಶ್ರೀನಿವಾಸನಿಗೆ ಆಗಲೇ ಕನ್ನಡಕ ಹಾಕಿಕೊಳ್ಳಬೇಕು ಅನ್ನಿಸಿತು. ಮೀನಾಕ್ಷಿ “ಈಗಲೇ ಬೇಡ, ನಾಳೆ ಬೆಳಿಗ್ಗೆ ಹಾಕ್ಕೊಳ್ಳುವಿರಂತೆ” ಅಂದುಬಿಟ್ಟಳು.
ಶ್ರೀನಿವಾಸ ಸಾವಿರದೊಂಬೈನೂರ ಎಂಬತ್ತೆಂಟರ ನವೆಂಬರ್ ತಿಂಗಳ ಹದಿನೇಳನೇ ತಾರೀಖಿನಂದು ಬೆಳಿಗ್ಗೆ ಮೂರೂವರೆಗೆ ಎದ್ದು ಕೂತಿದ್ದ. ಇವತ್ತು ತಾನು ಹೊಸ ವ್ಯಕ್ತಿಯಾಗ್ತಿದ್ದೇನೆ ಅಂತ ಅವನಿಗೆ ಮೇಲಿಂದ ಮೇಲೆ ಅನ್ನಿಸತೊಡಗಿತ್ತು. ಎದ್ದಕೂಡಲೇ ಹೆಂಡತಿಯನ್ನು ಎಬ್ಬಿಸಿ “ಎಲ್ಲಿಟ್ಟಿದ್ದೀಯೆ ಕನ್ನಡಕ ಕೊಡು” ಅಂದ. ಆಕೆ ಮಂಪರಿನಲ್ಲೇ “ಏನ್ರಿ ನಿಮ್ಮ ಗೋಳು. ನಡು ರಾತ್ರೀಲಿ ಅದೇನು ನೋಡಬೇಕೂಂತಿದ್ದೀರಿ ಬೆಳಗಾಗಲಿ” ಅಂದು ಹೊರಳಿ ಮಲಗಿದಳು. ಶ್ರೀನಿವಾಸ ಹಾಸಿಗೆಯಲ್ಲೇ ಕೂತುಕೊಂಡು ಬೆಳಗು ಮಾಡಿದ.
ಸ್ನಾನ ಮುಗಿಸುವ ಹೊತ್ತಿಗೆ ಮೀನಾಕ್ಷಿ ಕನ್ನಡಕ ತಂದುಕೊಟ್ಟಳು. ಹಾಕಿಕೊಂಡ. ಮತ್ತೆ ಎಲ್ಲವೂ ನಿಚ್ಚಳವಾಗಿ ಕಾಣಿಸತೊಡಗಿತು. ಆಹಾ! ಎಂಥ ಕನ್ನಡಕ ಅಂತ ಅದರ ಅದ್ಭುತ ಶಕ್ತಿಗೆ ಬೆರಗಾಗುತ್ತ ಅದನ್ನು ಮನಸೋ ಇಚ್ಛೆ ಕೊಂಡಾಡಿದ. ಅದನ್ನೊಮ್ಮೆ ನೋಡಬೇಕು ಅನ್ನಿಸಿತು. ತೆಗೆದುನೋಡಿದರೆ ಏನೂ ಕಾಣಿಸಲಿಲ್ಲ. ಅರೆ! ನನ್ನ ಕನ್ನಡಕವನ್ನು ನಾನು ನೋಡೋದು ಸಾಧ್ಯವೇ ಇಲ್ಲವೇ ಅಂದುಕೊಂಡ. ಕನ್ನಡಿಯ ನೆನಪಾಯ್ತು. ಕನ್ನಡಕ ಹಾಕಿಕೊಂಡು ಕನ್ನಡಿ ಮುಂದೆ ನಿಂತ. ಕನ್ನಡಿಯೊಳಗೆ ಶ್ರೀನಿವಾಸ ಕನ್ನಡಕಧಾರಿಯಾಗಿ ನಿಂತಿದ್ದ. ಹೆಮ್ಮೆ ಅನ್ನಿಸಿತು. ಆದರೂ ತಾನು ಕಾಣುತ್ತಿರುವುದು ಕನ್ನಡಕಧಾರಿ ಶ್ರೀನಿವಾಸನನ್ನೇ ಹೊರತು ಶ್ರೀನಿವಾಸನ ಕನ್ನಡಕವನ್ನಲ್ಲವಲ್ಲ ಅನ್ನಿಸಿ ಬೇಜಾರಾಯ್ತು. ತನ್ನ ಕನ್ನಡಕವನ್ನು ತಾನು ನೋಡುವುದು ಕೊನೆಗೂ ಸಾಧ್ಯವಿಲ್ಲ ಅಂದುಕೊಂಡು ಮತ್ತೊಮ್ಮೆ ಕನ್ನಡಿ ನೋಡಿದ. ತನ್ನ ಮೈಯ ಅಂಗಾಂಗಗಳೂ ಸುಸ್ಪಷ್ಟ ಕಂಡವು. ಕೂದಲು ಬೆಳ್ಳಗಾಗುತ್ತ ಬರುತ್ತಿತ್ತು. ಕಣ್ಣ ಸುತ್ತ ಚರ್ಮ ಜೋತುಬಿದ್ದಿತ್ತು. ಕೆನ್ನೆಗಳು ಬಿಗಿ ಕಳೆದುಕೊಂಡು ಸುಕ್ಕುಸುಕ್ಕಾಗಿದ್ದವು. ಶ್ರೀನಿವಾಸನಿಗೆ ಎಲ್ಲಿಲ್ಲದ ಗುಮಾನಿಗಳು ಮೂಡತೊಡಗಿದವು. ತಾನು ಇಷ್ಟು ವರ್ಷ ದುಡಿದುಡಿದು ಹಣ್ಣಾಗಿದ್ದೇನೆ. ತನ್ನ ಹೆಂಡತಿ ಮಕ್ಕಳೆಲ್ಲ ಆರಾಮವಾಗಿದ್ದಾರೆ ಅನ್ನಿಸಿ ಅವರೆಲ್ಲರ ಪ್ರೀತಿಯ ಬಗ್ಗೆ, ಪ್ರಾಮಾಣಿಕತೆಯ ಬಗ್ಗೆ ಅನುಮಾನಗಳು ಹುಟ್ಟತೊಡಗಿದವು.
ಒಂಬತ್ತೂವರೆಯವರೆಗೆ ಶ್ರೀನಿವಾಸ ಕನ್ನಡಿ ಮುಂದೆ ನಿಂತುಕೊಂಡು ಕನ್ನಡಕ ಹಾಕಿಕೊಳ್ಳುತ್ತ ತೆಗೆಯುತ್ತಾ ಆಗಾಗ ಅದನ್ನು ಲುಂಗಿಯಲ್ಲಿ ಒರೆಸುತ್ತಾ ಯೋಚಿಸುತ್ತಿದ್ದ. ಮೀನಾಕ್ಷಿ ಬಂದು “ಆಫೀಸಿಗೆ ಲೇಟಾಗೋಲ್ಲವೇ” ಅಂತ ಕೇಳಿದ್ದಕ್ಕೆ ಶ್ರೀನಿವಾಸನಿಗೆ ಎಲ್ಲಿಲ್ಲದ ಸಿಟ್ಟು ಬಂದು “ಗೊತ್ತೇ. ಲೇಟಾಗುತ್ತೆ ಲೇಟಾಗಿಯೇ ಹೋಗ್ತೇನೆ. ನೀನ್ಯಾರೇ ಕೇಳೋದಿಕ್ಕೆ. ನಿನಗೆ ಕಬಳಿಸೋದಿಕ್ಕೆ ಹೊತ್ತು ಹೊತ್ತಿಗೆ ತಂದು ಸುರಿದರೆ ಸಾಕಲ್ಲ” ಅಂತೆಲ್ಲ ವಾಚಾಮಗೋಚರ ಬೈದುಬಿಟ್ಟ. ಮೀನಾಕ್ಷಿಗೆ ತಾನು ಏನು ಹೇಳಬಾರದ್ದು ಹೇಳಿದೆ ತಿಳಿಯದೆ ಸಮಜಾಯಿಷಿ ನೀಡಬೇಕೆನ್ನುವಷ್ಟರಲ್ಲಿ “ಗೆಟ್‌ಲಾಸ್ಟ್” ಅಂತ ಕಿರುಚಿ, ಆಫೀಸಿಗೆ ಹೋಗುವ ತಯಾರಿ ನಡೆಸಿದ.
ದಾರಿಯಲ್ಲಿ ಎಂದಿನ ಹಾಗೆ ಗೌರೀಶ ಸಿಕ್ಕಿದ. ನಗುನಗುತ್ತಾ ಮಾತನಾಡಿಸಿ “ಏನಯ್ಯಾ ಚಾಳೀಸು” ಕೇಳಿದ. ಶ್ರೀನಿವಾಸ ವ್ಯಂಗ್ಯವಾಗಿ ನಕ್ಕು ಈ ಸೂ....ಮಗ ನನ್ನ ಹಾಗೆ ಆಫೀಸು, ಕೆಲಸ.... ಅಂತೆಲ್ಲ ಹೆಣಗದೆ ಅಪ್ಪ ಮಾಡಿಟ್ಟ ಆಸ್ತಿ ಕರಗಿಸುತ್ತ ಹಾಯಾಗಿದ್ದಾನೆ ಅಂದುಕೊಳ್ಳುತ್ತ ಇಂತಹವರೆಲ್ಲ ಈ ವ್ಯವಸ್ಥೆಯ ತಲೆ ಹಿಡುಕರು ಅನ್ನುವ ತೀರ್ಮಾನಕ್ಕೆ ಬಂದು ಆತನ ಜೊತೆ ಒಂದೂ ಮಾತನ್ನು ಆಡದೇ ಬರಿದೇ ನಡೆದುಬಿಟ್ಟ.
ಆಫೀಸಿನಲ್ಲಿ ಸಹೋದ್ಯೋಗಿಗಳೆಲ್ಲ ಬಾಸ್ ಮುಂದಿನ ತಿಂಗಳು ಸಂಬಳ ಹೆಚ್ಚಿಸುವ ಕುರಿತು ಮಾತನಾಡಿಕೊಳ್ಳುತ್ತಿದ್ದರು. ಸುಧಾಕರ ಶ್ರೀನಿವಾಸನ ಹತ್ತಿರ “ಇನ್ನು ನಿನಗೆಷ್ಟು ಬರುತ್ತದೋ” ಕೇಳಿದ. ಶ್ರೀನಿವಾಸ ಆತನ ಪ್ರಶ್ನೆಗೆ ಉತ್ತರಿಸುವ ಗೋಜಿಗೇ ಹೋಗದೆ “ಈ ಬಂಡವಾಳ ಶಾಹಿ ಬಾಸ್ ನಮಗೆಲ್ಲ ವರ್ಷಕ್ಕೆ ಕೇವಲ ಐವತ್ತು ರೂಪಾಯಿ ಹೆಚ್ಚಿಸುತ್ತಿದ್ದಾರೆ. ಅವರಿಗೆ ವರ್ಷದ ಲಾಭ ಐವತ್ತು ಸಾವಿರ ಹೆಚ್ತಾ ಇದೆ. ನಿಮಗೆ ಯಾಕೆ ಇದೆಲ್ಲ ಅರ್ಥವಾಗೋಲ್ಲ” ಕೇಳಿದ. ಅವರೆಲ್ಲ ಮಾತನಾಡದೇ ಸುಮ್ಮನಿದ್ದಾಗ ಈತ ಶೋಷಣೆಯ ಬಗ್ಗೆ, ಆರ್ಥಿಕ ಅಸಮಾನತೆಯ ಬಗ್ಗೆ ಎಲ್ಲರೂ ಬಳಸಿ ಬಳಸಿ ಎಸೆದುಬಿಟ್ಟ ಶಬ್ದಗಳನ್ನು ಜೋಪಾನವಾಗಿ ಎತ್ತಿಕೊಂಡು ಆಡುತ್ತ ಹಿಗ್ಗಾ ಮುಗ್ಗ ಬೈಯತೊಡಗಿದ. ಅವರೆಲ್ಲ ಈತನ ದಿಢೀರ್ ಬದಲಾವಣೆಗೆ ಅಚ್ಚರಿಪಡುತ್ತ ಸುಮ್ಮನಿದ್ದಾಗ, ಈತ ತನ್ನ ನಿಷ್ಠುರ ಧೋರಣೆಗೆ ತನ್ನೊಳಗೆ ಖುಷಿಪಡುತ್ತ ಕನ್ನಡಕ ತೆಗೆದು ಅಪಾರ ಕಾಳಜಿಯಿಂದ ಅದನ್ನು ಒರೆಸುತ್ತಾ ಕೂತುಕೊಂಡ.
ನಾಲ್ಕೂವರೆಯ ಹೊತ್ತಿಗೆ ಸಹೋದ್ಯೋಗಿ ನಳಿನ ಬಂದು “ಶ್ರೀನಿವಾಸ್, ನಾನು ಸ್ವಲ್ಪ ಬೇಗ ಹೋಗಬೇಕು. ಈ ಪೇಪರ್ ಸ್ವಲ್ಪ ನೋಡ್ತೀರಾ ಪ್ಲೀಸ್” ಅಂತ ಗೋಗರೆದಳು. ಶ್ರೀನಿವಾಸ ಒಮ್ಮೆ ತಲೆಯೆತ್ತಿ ಅವಳನ್ನೇ ನೋಡಿ “ನನಗೆ ನನ್ನದೇ ಆದ ಕೆಲಸಗಳಿವೆ. ಇನ್ನು ಮುಂದೆ ಇಂತಹ ಕೆಲಸಗಳಿಗೆ ನನ್ನ ಹತ್ತಿರ ಬರಬೇಡ” ಎಂದವನೇ ಮತ್ತೆ ತನ್ನ ಫೈಲಿನೊಳಗೆ ಬಿದ್ದ. ಆಕೆ ಅವಮಾನ, ನಾಚಿಕೆಯಿಂದ ತನ್ನ ಹಿಂದೆ ಅಸಹನೀಯ ಮೌನವನ್ನುಳಿಸಿ ಮರಳುವಾಗ ಶ್ರೀನಿವಾಸನಿಗೆ ಖುಷಿಯಾಯ್ತು.
ಮನೆಗೆ ಹೋಗುವಾಗ ಎಂದಿನಂತೆ ಚಾಕಲೇಟು ಕೊಳ್ಳಲಿಲ್ಲ. ಮೇಲೆ ಬಿದ್ದು ತಿಂಡಿ ಕೇಳಿದ ಗೀತಾಳನ್ನು ಗದರಿಸಿ ಮತ್ತೂ ಹಟ ಮಾಡಿದಾಗ ಎರಡೇಟು ಬಿಗಿದು ದೂರ ಕಳಿಸಿದ. ಮೀನಾಕ್ಷಿಗೆ ಶ್ರೀನಿವಾಸನ ಈ ಬದಲಾವಣೆಗೆ ಕಾರಣ ತಿಳಿಯಲಿಲ್ಲ. ಆಕೆಯ ಜೊತೆ ಕೂಡಾ ಶ್ರೀನಿವಾಸ ಮಾತನಾಡುವ ತೊಂದರೆ ತೆಗೆದುಕೊಳ್ಳಲಿಲ್ಲ. ರಾತ್ರಿ ಮಲಗುವಾಗ ಕೂಡಾ ಶ್ರೀನಿವಾಸ ಕನ್ನಡಕ ತೆಗೆದಿಡುತ್ತಿರಲಿಲ್ಲ.
ಶ್ರೀನಿವಾಸನ ಈ ನಡವಳಿಕೆ ಬರಬರುತ್ತಾ ವಿಪರೀತವಾಗುತ್ತಿರುವುದನ್ನು ಕಂಡು ಮೀನಾಕ್ಷಿಗೆ ಗಾಬರಿಯಾಯಿತು. ತಾನಾಯಿತು, ತನ್ನ ಕನ್ನಡಕವಾಯಿತು ಅನ್ನುವಂತೆ ಶ್ರೀನಿವಾಸ ಮೌನಿಯಾಗ ತೊಡಗಿದ. ಮಾತನಾಡಿದರೆ ಸಿಡುಕುತ್ತಿದ್ದ. ಆ ರಾತ್ರಿ ಮಲಗಿದಾಗ ಮೀನಾಕ್ಷಿ “ಕನ್ನಡಕ ತೆಗೆದಿಟ್ಟು ಮಲಗಬಾರದೇ” ಕೇಳಿದಳು “ಯಾಕೆ” ಕೇಳಿದ. “ಭಯವಾಗುತ್ತೆ. ನೀವು ತುಂಬ ಗಂಭೀರವಾಗಿದ್ದೀರ. ಹ್ಯಾಗ್ಯಾಗೋ ಆಡ್ತೀರ” ಅಂದಳು. ಶ್ರೀನಿವಾಸ ಹೆಮ್ಮೆಯಿಂದ “ಈಗ ನನಗೆ ನಿಮ್ಮ ನಿಜವಾದ ಬಣ್ಣ ಗೊತ್ತಾಗಿದೆ ಕಣೇ. ಇನ್ನು ನಿಮ್ಮನ್ನೆಲ್ಲ ಹ್ಯಾಗೆ ಆಡಿಸ್ತೀನಿ ನೋಡ್ತಿರು. ನನ್ನನ್ನ ಬುದ್ದು ಅಂದ್ಕೊಂಡಿದ್ದೀರಿ ನೀವೆಲ್ಲ” ಅಂದು ಗಹಗಹಿಸಿ ನಕ್ಕ.