Click here to Download MyLang App

ಮೈಲ್ಯಾಂಗ್ ಬುಕ್ಸ್ ಬಗ್ಗೆ

ಹಿನ್ನೆಲೆ:

ನೂರಾರು ವರ್ಷಗಳಿಂದಲೂ ಪುಸ್ತಕಗಳು ಸಮಾಜದಲ್ಲಿ ಜ್ಞಾನ ಮತ್ತು ಸಂಸ್ಕೃತಿಯನ್ನು ಪಸರಿಸುವ ಶಕ್ತಿಶಾಲಿಯಾದ ಸಾಧನಗಳಾಗಿವೆ. ಆದರೆ ಭಾರತೀಯ ನುಡಿಗಳಲ್ಲಿ, ಅದರಲ್ಲೂ ಕನ್ನಡದಲ್ಲಿ, ಇಂದು, ಆಧುನಿಕ ಹೊಳಹುಗಳು ಮತ್ತು ಜ್ಞಾನವನ್ನು ಜನರಿಗೆ ಮುಟ್ಟಿಸಬಲ್ಲ ಪುಸ್ತಕಗಳ ಕೊರತೆಯಿದೆ. ಜಾಗತಿಕ ಸಮಾಜದ ಈ ಹೊತ್ತಿನ ಒಟ್ಟಾರೆ ಕಾಣ್ಕೆ ಮತ್ತು ಕಲ್ಪನೆಗಳ ಆಳ ವಿಸ್ತಾರಗಳನ್ನು ಸರಿಯಾಗಿ ಜನರಿಗೆ ತಲುಪಿಸಬಲ್ಲ ಪುಸ್ತಕಗಳ ಕೊರತೆಯಿಂದಾಗಿ ಪ್ರಾದೇಶಿಕ ನುಡಿಯಾಡುಗರಾದ ಕೋಟ್ಯಾಂತರ ಜನರು ಇಂದಿನ ಕಾಲಕ್ಕೆ ತಕ್ಕಂತೆ ಹೆಜ್ಜೆ ಇಡುವಲ್ಲಿ ಮತ್ತು ಅದು ಒದಗಿಸಿರುವ ಅನಂತ ಅವಕಾಶಗಳಿಗೆ ತಮ್ಮನ್ನು ತಾವು ಸಶಕ್ತವಾಗಿ ಒಡ್ಡಿಕೊಳ್ಳುವಲ್ಲಿ ಸೋಲುತ್ತಿದ್ದಾರೆ. ಮತ್ತು ಭವಿಷ್ಯದಲ್ಲಿ ಮಾನವ ಸಮಾಜವು ಎದುರಿಸಬೇಕಾಗಿರುವ ವಿವಿಧ ರೀತಿಯ ಸವಾಲುಗಳ ಸರಿಯಾದ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವಲ್ಲಿಯೂ ಹಿಂದೆ ಬೀಳುತ್ತಿದ್ದಾರೆ. ಕನ್ನಡದಲ್ಲಿ ಒಂದು ಹೊಸಗಾಲದ ಮೌಲ್ಯಗಳುಳ್ಳ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಕಟ್ಟುವುದರ ಮೂಲಕ ಈ ಕೊರತೆಯನ್ನು ನಮ್ಮ ಕೈಲಾದ ಮಟ್ಟಿಗೆ ತುಂಬಿಕೊಡಬೇಕೆನ್ನುವ ಆಶೆಯನ್ನು ನಾವು ಹೊತ್ತಿದ್ದೇವೆ. ಪುಸ್ತಕಗಳ ವಿತರಣೆಗಾಗಿ ಈ-ಬುಕ್ಸ್ ಟೆಕ್ನಾಲಜಿಯನ್ನು ಬಳಸುವುದು ಮತ್ತು ಜಾಗತಿಕ ಪುಸ್ತಕ ಪ್ರಕಾಶನ ಸಂಸ್ಥೆಗಳ ಉನ್ನತ ವಿಧಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಇವೇ ಮುಂತಾದ ಸುಧಾರಣೆಗಳನ್ನು ತರಬೇಕೆಂಬ ಸಂಕಲ್ಪವನ್ನು ಮಾಡಿಕೊಂಡಿದ್ದೇವೆ. 

ನಾವು ಯಾರು:

ಮೈಲ್ಯಾಂಗ್ ಬುಕ್ಸ್ ಎನ್ನುವುದು ಒಂದು ಹೊಚ್ಚ ಹೊಸ ಕನ್ನಡ ಪುಸ್ತಕಗಳ ಪ್ರಕಾಶನ ಸಂಸ್ಥೆ. ಇದನ್ನು ಕಟ್ಟುತ್ತಿರುವ ತಂಡದವರಾದ ನಾವು ಟೆಕ್ನಾಲಜಿ ಆಧಾರಿತ ಸಾಪ್ಟ್ ವೇರು ಕಂಪೆನಿಗಳನ್ನು ಕಟ್ಟುವಲ್ಲಿ ಮತ್ತು ಅವನ್ನು ನಡೆಸುವಲ್ಲಿ ದಶಕಗಳ ಪರಿಣತಿಯನ್ನು ಹೊಂದಿದ್ದೇವೆ. ಅಷ್ಟೇ ಅಲ್ಲದೆ, ಕನ್ನಡ ಪುಸ್ತಕಗಳನ್ನು ಚಿಕ್ಕಂದಿನಿಂದಲೂ ಓದಿಕೊಂಡು ಅವುಗಳಿಂದ ದಕ್ಕಿದ ಜ್ಞಾನ ಮತ್ತು ಮೌಲ್ಯಗಳ ಫಲಾನುಭವಿಗಳಾಗಿದ್ದೇವೆ. ಹಾಗಾಗಿ ಕನ್ನಡ ಪುಸ್ತಕಗಳ ಮತ್ತು ಅವುಗಳನ್ನು ಓದುವ ಸಂಸ್ಕೃತಿಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದೇವೆ.  ಟೆಕ್ನಾಲಜಿ ಗೊತ್ತಿದ್ದ ಮಾತ್ರಕ್ಕೆ ಏನನ್ನು ಬೇಕಾದರೂ ಯಾರ ನೆರವೂ ಇಲ್ಲದೆ ಸಾಧಿಸಿಬಿಡುತ್ತೇವೆ ಎನ್ನುವ ಹಮ್ಮು ನಮಗಿಲ್ಲ. ಹಾಗಾಗಿ ಕನ್ನಡ ಸಾಹಿತ್ಯ ಲೋಕದ ಮತ್ತು ಪುಸ್ತಕೋದ್ಯಮದ ಪರಿಣತರಿಂದ ಮಾರ್ಗದರ್ಶನವನ್ನೂ ನೆರವನ್ನೂ ಪಡೆದು ಅದಕ್ಕೆ ನಮ್ಮ ಟೆಕ್ನಾಲಜಿಯ ಚಳಕವನ್ನು ಸೇರಿಸಿ ಒಂದು ಯಶಸ್ವೀ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಕಟ್ಟಬೇಕೆನ್ನುವ ಹೆಬ್ಬಯಕೆಯೊಂದಿಗೆ ಮುಂದಡಿಯಿಡುತ್ತಿದ್ದೇವೆ. 

ನಮ್ಮ ಗುರಿ ಮತ್ತು ದಾರಿ:

  • ಕತೆ (ಫಿಕ್ಷನ್) ಮತ್ತು ಕತೆಗೆ ಹೊರತಾದ (ನಾನ್-ಫಿಕ್ಷನ್) ಪ್ರಕಾರಗಳಲ್ಲಿ ಯುವ ಓದುಗರನ್ನು ಸೆಳೆಯಬಲ್ಲ (ಉತ್ತಮ ಸಾಹಿತ್ಯಿಕ ಮೌಲ್ಯಗಳನ್ನು ಬಿಟ್ಟುಕೊಡದೇ) ಮತ್ತು ಅವರಿಗೆ ಉಪಯಕ್ತವಾದ ಜ್ಞಾನವನ್ನು ಒದಗಿಸಬಲ್ಲ ಹೊಸ ಪುಸ್ತಕಗಳನ್ನು ಹೊರತರುವುದು. 
  • ಕನ್ನಡಕ್ಕೆ ಹೊಸತಾದ ಪುಸ್ತಕ ಪ್ರಕಾರಗಳನ್ನು (genres) ತರುವುದು. 
  • ಈ-ಬುಕ್ಸ್ (ಎಲೆಕ್ಟ್ರಾನಿಕ್ ಬುಕ್ಸ್) ಮೂಲಕ ಹೆಚ್ಚು ಹೆಚ್ಚು ಓದುಗರನ್ನು ತಲುಪುವುದು. 
  • ಮೊಬೈಲ್ ಫೋನಗಳ ಮೂಲಕವೇ ಪುಸ್ತಕಗಳನ್ನು ಕೊಂಡು ಅದರೊಳಗೇ ಓದುವಂಥ ಟೆಕ್ನಾಲಜಿಯ ಮೂಲಕ ಪುಸ್ತಕ ಕೊಳ್ಳುವ ಮತ್ತು ಓದುವ ಪ್ರಕ್ರಿಯೆಯನ್ನು ಸುಲಭ ಮಾಡುವುದು.
  • ಡಿಜಿಟಲ್ ಮಾರ್ಕೆಟಿಂಗ್ ಮುಂತಾದ ಆಧುನಿಕ ವಿಧಾನಗಳನ್ನು ಬಳಸಿ ಕನ್ನಡ ಪುಸ್ತಕಗಳನ್ನು ಹೆಚ್ಚು ಹೆಚ್ಚು ಜನಪ್ರಿಯ ಗೊಳಿಸುವುದು.
  • ಆಡಿಯೋ ಪುಸ್ತಕಗಳ (ಕೇಳು-ಪುಸ್ತಕಗಳು) ಮೂಲಕ ಕನ್ನಡ ಪುಸ್ತಕಗಳ ಮಾರುಕಟ್ಟೆಯನ್ನು ಹಿಗ್ಗಿಸುವುದು.  
  • ಪ್ರತಿಭಾನ್ವಿತ ಬರಹಗಾರರಿಗೆ ಒಳ್ಳೆಯ ಲಾಭಾಂಶವನ್ನು ರಾಯಧನದ ಮೂಲಕ ತಲುಪಿಸಿ ಅವರನ್ನು ಹೆಚ್ಚು ಹೆಚ್ಚು ಯಶಸ್ವಿಯಾಗಿಸುವುದು. ಇದರಿಂದಾಗಿ ಅವರು ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು. 
  • ಪ್ರತಿಭಾನ್ವಿತ ಹೊಸ ಬರಹಗಾರರಿಗೆ ಅವಕಾಶಗಳನ್ನು ಕಲ್ಪಿಸಿಕೊಡುವುದು.