ನಮ್ಮ ದೇಶದ ಈಶಾನ್ಯ ಭಾಗದಲ್ಲಿರುವ ಹಾಗೂ ಬಾಂಗ್ಲಾದೇಶ, ಚೀನಾ, ಮ್ಯಾನ್ಮಾರ್ ಮತ್ತು ಭೂತಾನ್ ದೇಶಗಳೊಡನೆ ಗಡಿಗಳನ್ನು ಹೊಂದಿರುವ ರಾಜ್ಯಗಳನ್ನು 'ಸೆವೆನ್ ಸಿಸ್ಟರ್ಸ್' ಎಂದು ಕರೆಯುತ್ತಾರೆ. ಯಾರಿಗೇ ಆಗಲಿ, ಈ ರಾಜ್ಯಗಳನ್ನು ಹೀಗೇಕೆ ಕರೆಯುತ್ತಾರೆ, ಆ ರಾಜ್ಯಗಳ ಜನಜೀವನವಾಗಲೀ, ಪರಿಸರವಾಗಲೀ ಏಕರೂಪವಾಗಿದೆಯೇ ಅಥವಾ ದೇಶದ ಈಶಾನ್ಯ ತುದಿಯಲ್ಲಿ ವಿವಿಧ ದೇಶಗಳೊಡನೆ ಗಡಿಯಲ್ಲಿದ್ದು, ಎಲ್ಲಾ ಕಷ್ಟನಷ್ಟಗಳಿಗೂ ಅಕ್ಕ ತಂಗಿಯರಂತೆ ಪರಸ್ಪರ ಸ್ಪಂದಿಸುತ್ತಿವೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಶ್ರೀಧರ ರಾವ್ ಅವರು ಹುಡುಕಿದ್ದಾರೆ.
ಶ್ರೀಧರ ರಾವ್ ಅವರು ತಮ್ಮ ಪ್ರವಾಸ ಕಥನದುದ್ದಕ್ಕೂ ಆಯಾ ಪ್ರದೇಶಗಳಲ್ಲಿ ತಲೆತಲಾಂತರದಿಂದ ಜೀವಿಸುತ್ತಿರುವ ವಿವಿಧ ಗುಡ್ಡಗಾಡು ಬುಡಕಟ್ಟು ಜನಾಂಗಗಳ ಬಗ್ಗೆ, ಅವುಗಳ ಜಾನಪದ ಸಂಸ್ಕೃತಿ, ಜೀವನ ಶೈಲಿ, ಧಾರ್ಮಿಕ ವೈವಿಧ್ಯತೆ, ಹಬ್ಬಗಳ ಆಚರಣೆಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ.