Click here to Download MyLang App

ನೆನಪು ಅನಂತ (ಪ್ರಿಂಟ್ ಪುಸ್ತಕ)

ನೆನಪು ಅನಂತ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್ತರ್ ಅನಂತಮೂರ್ತಿ
ಮಾಮೂಲು ಬೆಲೆ
Rs. 180.00
ಸೇಲ್ ಬೆಲೆ
Rs. 180.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

ನಿರೂಪಣೆ: ಪೃಥ್ವೀರಾಜ ಕವತ್ತಾರು

 

ಮೇಷ್ಟ್ರು ದಿನವಿಡೀ ನಿರಂತರವಾಗಿ ಹನಿಗಡಿಯದ ವಿಚಾರಧ್ಯಾನದಲ್ಲಿದ್ದವರು. ಸದಾ ಮನೆ ತುಂಬಾ ಭೇಟಿಗೆ ಬರುವ ಜನ, ಮಾತು ಚರ್ಚೆಗಳೇ ತುಂಬಿದ್ದರೂ ಗಂಭೀರ ವಿಚಾರಗಳಾಚೆ ಒಂದು ಕ್ಷಣವೂ ಅವರು ಸಮಯ ಕಳೆದವರಲ್ಲ. ಮೇಡಂ ಇಲ್ಲಿ ಬರೆದುಕೊಂಡಂತೆ ಅವರು ಎಲ್ಲರಂತೆ ಒಬ್ಬ ಗೃಹಿಣಿ. ಪ್ರೀತಿಸಿ ಮದುವೆಯಾದ ಅವರಿಗೂ ಇಂತಹ ಜೀನಿಯಸ್ ಬರಹಗಾರ ಪತಿಯೊಡನೆ ಸಂಸಾರ ನಡೆಸುವುದು ಸರಳ ವಿಚಾರವಲ್ಲ. ಮೇಷ್ಟ್ರು ಸದಾ ಸಮಾನತೆಯ ಬುನಾದಿಯ ಮೇಲೆ ಪ್ರಜಾಪ್ರಭುತ್ವದ ಆದರ್ಶ ಸಮಾಜದ ಕನಸುಗಾರರು. ಸಂಸಾರ ಲೌಕಿಕ ಜವಾಬ್ದಾರಿಯನ್ನು ಬೇಡುವ ವಾಸ್ತವ. ಮೇಷ್ಟರೊಡನೆ ಅವರ ಓದು ಬರಹದ ನಿರಂತರ ಧ್ಯಾನಗಳಿಗೆ ತೊಂದರೆ ಆಗದಂತೆ ಕುಟುಂಬವನ್ನು ಬೆಳೆಸಿದ ಜೀವಪ್ರೀತಿಯ ಕಥನವಿದು...

- ಎಸ್.ಆರ್. ವಿಜಯಶಂಕರಪ್ರಸಿದ್ಧರ ಪತ್ನಿಯ ಏಳುಬೀಳುಗಳ ಮಾಮೂಲಿ ಕಥನವಾಗದೆ, ಏನೆಂಥ ಹೊತ್ತಿನಲ್ಲೂ ಹೆಣ್ಣಿನ ಆಯ್ಕೆ ಮತು ಆದ್ಯತೆಗಳು ಕುಟುಂಬವನ್ನು ಉಳಿಸಿ, ಬೆಳೆಸುತ್ತ, ಪೊರೆಯುವುದೇ ಆಗಿರುತ್ತವೆ ಎನ್ನುವುದನ್ನು ಈ ಕಥನ ಹೇಳುತ್ತದೆ. ಆದರೆ, ಇದು ಮಿತಿಯಲ್ಲ, ಇದಕ್ಕೂ ಕೊನೆಯಿಲ್ಲದ ತಾಳ್ಮೆ ಮತ್ತು ಶಕ್ತಿ ಬೇಕು. ಇದರಾಚೆಗೆ ಅನ್ನೋನ್ಯ ಸಖ್ಯದ ಸಂಭ್ರಮ ಮತ್ತು ಬಿಕ್ಕಟ್ಟುಗಳನ್ನೂ ಇದು ಧ್ವನಿಸುತ್ತದೆ... ಗೃಹಸ್ಥ ಧರ್ಮದ ಗಂಧ ತೇಯುವುದು ಹೆಣ್ಣಿನ ಮೂಲಧರ್ಮ ಎಂದು ಹೇಳಲಾಗುತ್ತದೆ. ಅದು ಕರಾರಲ್ಲ, ಸಾಮಾಜಿಕ ಹೇರುವಿಕೆಯ ಕಾರಣಕ್ಕಾಗಿ ಮಾತ್ರ ನಿಭಾಯಿಸುವಂಥದ್ದಲ್ಲ. ಅದನ್ನು ಹೆಣ್ಣು ತನಗೆ ಬೇಕಾಗಿ, ಕೊನೆಯಿಲ್ಲದ ಪ್ರೀತಿ ಮತ್ತು ತನ್ಮಯತೆಯಲ್ಲಿ ನಿಭಾಯಿಸುತ್ತಾಳೆ. ಅದಕ್ಕೆ ಲೋಕದ ಮನ್ನಣೆ ಈ ಕಾರಣಕ್ಕಾಗಿ ಸಲ್ಲಬೇಕು ಎಂದು ಎಸ್ತರ್ ಅವರ ಈ ನಿರೂಪಣೆ ಹೆಣ್ಣಿನ ಮೆಲುವಾಗಿಯೂ ಗಟ್ಟಿಯಾದ ವಿಶಿಷ್ಟ ಶೈಲಿಯಲ್ಲಿ ಒತ್ತಾಯಿಸುತ್ತದೆ.
 

- ಎಂ. ಎಸ್. ಆಶಾದೇವಿ

 

ಸುರಗಿ ಮರದ ನೆರಳಿನಲ್ಲಿ

ಎಸ್ತರ್ ಅನಂತಮೂರ್ತಿ

 

ಈಗಲೂ ಅಲ್ಲಿಲ್ಲಿ ಹೋದಾಗಲೆಲ್ಲ ‘ಅವರೇ ಅನಂತಮೂರ್ತಿಯವರ ಹೆಂಡತಿಎಂದು ನನ್ನನ್ನು ಗುರುತಿಸುವುದನ್ನು ಕಂಡಿದ್ದೇನೆ. ನಾನು ಕೂಡ ಅನಂತಮೂರ್ತಿಯವರ ಹೆಂಡತಿಯಾಗಿಯೇ ಲೋಕಕ್ಕೆ ಪರಿಚಯವಾದವಳು. ವಿಶ್ವಪ್ರಸಿದ್ಧ ಲೇಖಕರೊಬ್ಬರ ಪತ್ನಿ ಎಂದು ಹೇಳಿಕೊಳ್ಳಲು ನನಗೆ ಅಭಿಮಾನವೇ. ‘ನನ್ನದೆಂಬುದು ಏನೂ ಇಲ್ಲ, ಎಲ್ಲ ಅವರದ್ದೇಎಂಬಂಥ ಸಮರ್ಪಣಭಾವದಲ್ಲಿ ಜೀವಿಸಿದವಳು ನಾನು. ಸುಮಾರು ಐದೂವರೆ ದಶಕಗಳ ಕಾಲ ಯು. ಆರ್. ಅನಂತಮೂರ್ತಿಯವರ ಜೊತೆಗೆ ಸುಗ್ಗಿ-ಸಂಕಟಗಳನ್ನು ಹಂಚಿಕೊಂಡಿದ್ದೇನೆಅಚ್ಚರಿಯ ಸಂಗತಿ ಎಂದರೆ ಅವರು ಇರುವಾಗ ನನಗೆ ಹೀಗೆ ಅನ್ನಿಸಿರಲಿಲ್ಲ ಅಥವಾ ಅನ್ನಿಸಲು ಅವಕಾಶವೇ ಇರಲಿಲ್ಲ . ಹೀಗೆ ಅಂದರೆ ಹೇಗೆ ಎಂದು ನೀವು ಕೇಳಬಹುದು. ‘ನನಗೂ ಒಂದು ಬದುಕು ಇದೆಎಂಬಂಥ ಅನಿಸಿಕೆಯದು. ಅವರ ಬದುಕೇ ನನ್ನದು ಎಂಬಂತಿದ್ದ ನನಗೆ ಅವರಿಲ್ಲ ಎಂದು ಅರಿವಾದ ಕ್ಷಣದಲ್ಲಿ ಖಾಲಿತನವೊಂದು ಕಾಡತೊಡಗಿತು. ‘ನಿನಗೆ ನೀನೇ ಗೆಳತಿಎಂದು ಹೇಳಿಕೊಳ್ಳಬೇಕಾದ ಸ್ಥಿತಿಯದು.

ಪ್ರೀತಿಸಿದ್ದಾಯಿತು, ಮದುವೆಯಾಯಿತು, ಮಕ್ಕಳಾಯಿತು, ಮನೆಯಿಂದ ಮನೆಗೆ ಊರಿನಿಂದ ಊರಿಗೆ ದೇಶದಿಂದ ದೇಶಕ್ಕೆ ಅಲೆದದ್ದಾಯಿತು, ಅನಾರೋಗ್ಯದ ವಿರುದ್ಧ ಹೋರಾಡಿದ್ದಾಯಿತು... ಉಸಿರಾಡುವುದಕ್ಕೂ ಬಿಡುವು ಇಲ್ಲವೇನೋ ಎಂಬಂಥ ಒತ್ತೊತ್ತಿನ ಘಟನೆಗಳ ಭಾಗವಾಗಿ ಇಷ್ಟು ದೂರ ಸಾಗಿ ಬಂದಿದ್ದೇನೆ. ಅನಂತಮೂರ್ತಿ ಇರುವಾಗಲೆಲ್ಲ ನಮ್ಮ ಮನೆ ತುಂಬ ಜನ. ಮೈಸೂರಿನಲ್ಲಿರಲಿ ದೆಹಲಿಯಲ್ಲಿರಲಿ ಕೊಟ್ಟಾಯಂನಲ್ಲಿರಲಿ  ಬೆಂಗಳೂರಿನಲ್ಲಿರಲಿ ವಿದೇಶದಲ್ಲಿರಲಿ... ಅನಂತಮೂರ್ತಿ ಹೋದಲ್ಲೆಲ್ಲ ಅಭಿಮಾನಿಗಳು. ಯಾವುದಾದರೂ ಸಾಹಿತ್ಯಿಕ ವಿಷಯದ ಬಗ್ಗೆ ಚರ್ಚೆ ಮಾಡುವವರಿಂದ ತೊಡಗಿ ಕೆಲಸ-ಕಾರ್ಯಗಳಿಗೆ ಶಿಫಾರಸು ಪತ್ರಗಳನ್ನು ಬರೆಸಿಕೊಳ್ಳುವವರ ತನಕ ಒಬ್ಬರಲ್ಲ ಒಬ್ಬರು ನಮ್ಮ ಮನೆಯಲ್ಲಿ ಇದ್ದೇ ಇದ್ದರು. ನನಗೆ ಕಾಫಿ ಬಿಸ್ಕತ್ ಪೂರೈಸುವುದೇ ಕೆಲಸವಾಗಿರುತ್ತಿತ್ತು.

ಈಗ ಅವರೆಲ್ಲ ಎಲ್ಲಿ ಹೋದರು!

ಎಸ್ತರ್, ಯಾರು ಬಂದರು ನೋಡು’, ‘ಎಸ್ತರ್, ಇಲ್ಲಿ ಬಾ’, ‘ಎಸ್ತರ್, ಚಹಾ ಮಾಡು’- ನನ್ನ ದೈನಿಕದ ಭಾಗವೇ ಆಗಿದ್ದ ಇಂಥ ನುಡಿಗಳು ಇನ್ನು ಕೇಳಿಸಲಾರವೆಂದು ಖಚಿತವಾದ ಕ್ಷಣದಲ್ಲಿ ನನಗೆ  ಒಂದು ರೀತಿಯ ಅನಾಥಪ್ರಜ್ಞೆ ಇದ್ದಕ್ಕಿದ್ದಂತೆ ಕಾಡಲಾರಂಭಿಸಿತ್ತು.

ಎಲ್ಲರೂ ಅನಂತಮೂರ್ತಿಯವರನ್ನು ಮರೆತೇಬಿಟ್ಟಿದ್ದಾರೇನೋ ಅನ್ನಿಸಿತೊಡಗಿದಾಗ ನಾನಾದರೂ ನೆನಪಿಸಿಕೊಳ್ಳಬೇಕಲ್ಲ...

ಒಮ್ಮೆ ಪೃಥ್ವಿರಾಜ ಕವತ್ತಾರು ನನ್ನ ಅನುಭವಗಳನ್ನು ಬರೆಯಬೇಕೆಂದು ಕೇಳಿಕೊಂಡರು. ನಾನಾದರೂ ಏನು ಬರೆಯಬಲ್ಲೆ? ನಿಜ ಹೇಳಬೇಕೆಂದರೆ, ನನ್ನ ಬದುಕಿನಲ್ಲಿ ನಾನು ಬರೆದವಳೇ ಅಲ್ಲ, ಬರೆಯಬೇಕೆಂದು ಅನ್ನಿಸಲಿಲ್ಲ. ಬರೆಯುವುದೆಲ್ಲ ಅನಂತಮೂರ್ತಿಗೆ ಬಿಟ್ಟಿದ್ದು; ಅದು ನನ್ನ ಕೆಲಸವಲ್ಲ ಎಂದು ಭಾವಿಸಿದ್ದೆ. ಹಾಗೆ ನೋಡಿದರೆ, ಅವರು ಬರೆಯುವುದಕ್ಕೂ ಅನುವು ಮಾಡಿಕೊಟ್ಟದ್ದು ನಾನೇ. ಇಬ್ಬರೂ ಬರಹಗಾರರಾಗುತ್ತಿದ್ದರೆ ಬದುಕು ಬದುಕಲು ಸಮಯವೇ ಇರುತ್ತಿರಲಿಲ್ಲ. ಒಬ್ಬರು ಬರೆಯುವುದು, ಇನ್ನೊಬ್ಬರು ನೆರವಾಗುವುದು ಎಂಬಂಥ ತೋಲನದಲ್ಲಿ ನಮ್ಮ ದಿನ ಕಳೆದಿದ್ದೆವು. ಕೆಲವೊಮ್ಮೆ ನಾನು ಅಲ್ಲೊಂದು ಇಲ್ಲೊಂದು ಕವನಗಳನ್ನು ಅನುವಾದಿಸಿರಬಹುದು. ಅವುಗಳನ್ನು ಗಾಳಿಯಲ್ಲಿ ತೂರಿಬಿಟ್ಟಾಗಿದೆ. ಈಗ ಹುಡುಕಿದರೂ ಅವು ಸಿಗುವುದಿಲ್ಲ. ಮನೆವಾರ್ತೆಯನ್ನು ನೋಡಿಕೊಳ್ಳುವುದರಲ್ಲಿ, ಶಾಲೆಯಲ್ಲಿ ಮಕ್ಕಳಿಗೆ ಕಲಿಸುವುದರಲ್ಲಿ ನನ್ನ ದಿನಗಳು ತುಂಬಿಕೊಂಡುಬಿಟ್ಟಿದ್ದವು. ಕನಸು ಕಾಣಲು, ಕವನ ಬರೆಯಲು ಧ್ಯಾನವಾದರೂ ಎಲ್ಲಿತ್ತು?

ನೀವು ಹೇಳಿ ನಾನು ಬರೆಯುತ್ತೇನೆಎಂದು ಪೃಥ್ವಿರಾಜ ಒತ್ತಾಯಿಸಿದಾಗ ನಾನುಸರಿಎಂದೆ.

ಹಾಗೆ ಈ ಆತ್ಮಕಥನ ಸಿದ್ಧವಾಗಿದೆ. ನಾನು ಏನು ಹೇಳಿದ್ದೇನೋ ಅದನ್ನೆಲ್ಲ ದಾಖಲಿಸಿದ್ದಾರೆ ಎಂದಲ್ಲ, ಏನನ್ನು ಲೋಕಕ್ಕೆ ಹೇಳಬೇಕು ಅಷ್ಟನ್ನೇ ನಿರೂಪಿಸಿದ್ದಾರೆ. ಅದು ನನಗೆ ಇಷ್ಟವಾಗಿದೆ. ಅನಂತಮೂರ್ತಿಯವರ ಹೆಂಡತಿಯಾಗಿ ನಾನು ಹೇಗೆ ಬದುಕಿದ್ದೆನೋ ಮತ್ತು ಹೇಗೆ ಬದುಕಲಿಲ್ಲವೋ ಅದು ಓದುಗರಿಗೆ ಮುಖ್ಯವೇ ಹೊರತು, ಉಳಿದಂತೆ ಎಲ್ಲ ಗೃಹಿಣಿಯರಂಥದೇ ಬದುಕಿನ ವಿವರಗಳನ್ನು ಕಟ್ಟಿಕೊಂಡು ಯಾರಿಗೇನು? ಅಲ್ಲದೆ, ಈಗಾಗಲೇ ಪ್ರಕಟವಾಗಿರುವ  ಆತ್ಮಕತೆ ಸುರಗಿಯಲ್ಲಿರುವ ವಿಚಾರಗಳು ಇಲ್ಲಿ ಪುನರಾವರ್ತನೆಯಾಗದಂತೆಯೂ ಇಲ್ಲಿ ನೋಡಿಕೊಳ್ಳಬೇಕಾಗಿತ್ತು.

ಸೆಲೆಬ್ರಿಟಿಯ ಹೆಂಡತಿಯಾಗುವುದು ಬಹಳ ಕಷ್ಟ. ಅಂಥ ಕಷ್ಟ ನನಗೂ ಅನುಭವಕ್ಕೆ ಬಂದಿದೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಕ್ಲೀಶೆಯಾದ ವಾಕ್ಯವೊಂದು ಇಲ್ಲಿ ನೆನಪಿಗೆ ಬರುತ್ತದೆ. ಅದನ್ನು ಯಾರಾದರೂ ನನಗೆ ಅನ್ವಯಿಸಿ ಹೇಳಿದರೆ, ನಾನು ನಿರಾಕರಿಸುವುದಿಲ್ಲ, ಸುಮ್ಮನೆ ನಗುತ್ತೇನೆ.

ಪುಟಗಳು: 160

Customer Reviews

No reviews yet
0%
(0)
0%
(0)
0%
(0)
0%
(0)
0%
(0)