Click here to Download MyLang App

ಕುಮಟೇಗೆ ಬಂದ ಕಿಂದರಜೋಗಿ (ಪ್ರಿಂಟ್ ಪುಸ್ತಕ)

ಕುಮಟೇಗೆ ಬಂದ ಕಿಂದರಜೋಗಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಯಶವಂತ ಚಿತ್ತಾಲ
ಮಾಮೂಲು ಬೆಲೆ
Rs. 165.00
ಸೇಲ್ ಬೆಲೆ
Rs. 165.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಯಾವುದೋ ಅಪರಿಚಿತ ಊರಿನ ಬಗ್ಗೆ ಲೇಖಕರು ಕಟ್ಟಿಕೊಡುವ ವರ್ಣನೆಗಳಿಗೇ ನಮ್ಮ ಮನಸ್ಸನ್ನು ಒಪ್ಪಿಸಿ ಅಲ್ಲಿಯ ಚಿತ್ರಣಗಳನ್ನು ಯಥಾವತ್ತಾಗಿ ಕಲ್ಪಿಸಿಕೊಳ್ಳಲು ಶಕ್ಯವಾಗುವಾಗ ಈಗ ನನ್ನದೇ ಊರಾದ ಕುಮಟೆಯ ಬಗ್ಗೆ, ಇಲ್ಲಿರುವ ಸ್ಥಳಗಳ ಬಗ್ಗೆ ಓದುವಾಗ ಅರ್ಥವಾಗದ ಅವ್ಯಕ್ತ ರೋಮಾಂಚನ ಉಂಟಾಗಿದ್ದು ಸಹಜವೇ.

ಚಿತ್ತಾಲರು ಕಟ್ಟಿಕೊಟ್ಟಿರುವ ತೊಂಬತ್ತರ ದಶಕದ ಕುಮಟೆಯ ರೂಪದೊಂದಿಗೆ ಇಂದಿನದ್ದನ್ನು ತಳುಕು ಹಾಕಿ, ಹೊಲಿಕೆಗಳು ಕಂಡಷ್ಟೂ ಪುಳಕಗೊಳ್ಳುವ ನನ್ನ ಬಗ್ಗೆ ನನಗ್ಯಾವ ಅತಿಶಯವೂ ಕಾಣಲಾರದು. ತಮ್ಮ ಊರಿನ ಬಗ್ಗೆ ಅಭಿಮಾನವಿರುವ ಪ್ರತಿಯೊಬ್ಬರ ಭಾವನೆಯೂ ಇಂಥದ್ದೇ ಎನ್ನುವುದು ನಿಸ್ಸಂದೇಹ.

ನನ್ನ ದಿನನಿತ್ಯದ ಬದುಕಿನ ವ್ಯಸ್ತತೆಗೆ ಕುರುಹುಗಳಾಗಿ ನಿಂತಿರುವ ನನ್ನ ಊರಿನ ಮಣಕಿಗ್ರೌಂಡ್, ಬಸ್ತಿಪೇಟೆ, ಮೂರುಕಟ್ಟೆ, ಅಘನಾಶಿನಿ ನದಿ.. ಇವೆಲ್ಲವುಗಳ ಭೂತಕಾಲದ ಸ್ವರೂಪವನ್ನೊಮ್ಮೆ ಈಗ ಇಣುಕಿ ನೋಡಲು ಸಾಧ್ಯವಾಗಿರುವುದಕ್ಕೆ ಹಿಗ್ಗಾಗುತ್ತದೆ.

ಹೊಸದಾಗಿ ಬಂದ ಯಾರಿಗಾದರೂ ಮೊದಲ ನೋಟಕ್ಕೇ ಮೂಡುವ ಪುರಾತನ ಊರೆಂಬ ಭಾವವನ್ನು ಇನ್ನಷ್ಟು ದೃಢಗೊಳಿಸುವಂತೆ ನಿಂತ ಕೆಂಪುಧೂಳಿನ ಮಾಸಲು ಮನೆಗಳು ಇಲ್ಲಿ ಸಾಮಾನ್ಯ.
ಲೇಖಕರು ಕಂಡಿದ್ದು, ಇಂದು ನಾನೂ ಕಾಣಬಲ್ಲೆ, ಮುಂದೂ ಇದು ಶಾಶ್ವತ ಎಂದ ಭ್ರಮೆ ಮೂಡಿಸುವಾಗ ಅಸಲಿಗೆ ಈ ಊರು ಬದಲಾವಣೆಗೆ ತೆರೆದುಕೊಳ್ಳಲಾರದೇ? ಅಥವಾ ಬದಲಾವಣೆಗಳನ್ನು ತನ್ನ ನಿರ್ಲಿಪ್ತಿತನದಲ್ಲಿ ಅಡಗಿಸಿಕೊಂಡು ಬಿಡುವ ಧೈತ್ಯತೆ ಇಲ್ಲಿನ ನೆಲದ ಸಹಜಾತಿಸಹಜ ಗುಣವೇ? ಖಂಡಿತ ಅರ್ಥವಾಗದು!

ಹೊಸತರದ ಬದಲಾವಣೆಗಳೆಲ್ಲವನ್ನೂ ತನ್ನ ಸೆರಗಿನಲ್ಲಿ ಬಾಚಿಕೊಂಡು ಮತ್ತದೇ ಅವಿಚ್ಛಿನ್ನವಾದ ಹಳೆಯ ಕಳೆಯಿಂದಲೇ ತನ್ನ ಅಸ್ತಿತ್ವವನ್ನು ಗಟ್ಟಿಗೊಳ್ಳಿಸಿಕೊಂಡಿರುವ ಇದರ ಗೂಢತೆ ಎಂದೆಂದೂ ಬಿಚ್ಚಿಕೊಳ್ಳಲಾರದೇನೋ.

ಇದರ ಸುತ್ತಲು ಸುತ್ತಿಕೊಂಡ ಚಿತ್ತಾಲರ ಕಥೆಗಳಿಗೂ ಕುಮಟೆಯ ಗಾಢವಾದ ಮಣ್ಣಿನ ಘಮವಿದೆ, ಧೋ ಎಂದು ಸುರಿಯುವ ಮಳೆಯ ತಂಪಿದೆ, ಸಮುದ್ರದಲೆಗಳ ಏರಿಳಿತವಿದೆ.
ಕಥೆಗಳ ಸ್ಥೂಲ ಪರಿಚಯವನ್ನೂ ಮಾಡಿಕೊಡಲಾರದಂತಹ ಎಷ್ಟು ಮಾತ್ರ ದಕ್ಕಿವೆಯೋ ಎಂಬ ಕಳವಳದ ಭಾವವಿದೆ.
ಅಭಿವ್ಯಕ್ತಿಯಿಂದ ಕೊಸರಿಕೊಂಡು, ಅನುಭೂತಿಗೆ ಮಾತ್ರ ನಿಲುಕಬಲ್ಲ ಕಥೆಗಳಿವು.

ನಿರ್ಲಿಪ್ತಿಯೇ ಮೂರ್ತಿವೆತ್ತಂತಿರುವ ಇಲ್ಲಿಯವರ ಶಾಂತತೆ ಮತ್ತದರ ಆಳದೊಳಗಿನ ವಿಕ್ಷಿಪ್ತತೆಯಂತೆ ಕಥೆಗಳು ಸಹ.
ಹಿಡಿತಕ್ಕೆ ಸಿಗದ ಮನಸ್ಸಿನ ಕಿತಾಪತಿಗಳೆಲ್ಲ ತಮ್ಮವೇ ಎನ್ನುವಂತೆ ಬೀಗುವ ಪಾತ್ರಗಳು ಮೊದಲಿಂದ ಕೊನೆಯವರೆಗೂ ನಿಗೂಢತೆಯಲ್ಲಿಯೇ ಉಳಿಸಿಬಿಡುತ್ತವೆ.

ನಾವು ಮೇಲ್ನೋಟಕ್ಕೆ ಕಂಡುಕೊಳ್ಳುವ ಒಂದು ವ್ಯಕ್ತಿಯ ಜೀವನಕ್ಕೆ ಮತ್ತವನ ಪ್ರವೃತ್ತಿಗಳಿಗೆ ನಮ್ಮ ಅಭಿಪ್ರಾಯವನ್ನು ಮೀರಿ ನಿಲ್ಲುವ ಅನೇಕ ಆಯಾಮಗಳಿದ್ದೇ ಇವೆ.
ರಜೆಗೆಂದು ಕುಮಟೆಗೆ ಬಂದಾಗಲೆಲ್ಲಾ ಯಾವುದಾದರೂ ಹಗರಣಕ್ಕೆ ತಗಲಿಕೊಳ್ಳುವ ಚಿತ್ತಾಲರು ಮನುಷ್ಯನಲ್ಲಿ ಸುಪ್ತವಾಗಿರುವ, ಗ್ರಹಿಕೆಗೆ ನಿಲುಕದ ಇನ್ನೊಂದೇ ಮಜಲುಗಳನ್ನು ತಡಕುತ್ತಾ ಹೋಗುತ್ತಾರೆ. ಇನ್ನೊಬ್ಬರ ಊಹೆಗಳಿಗಿಂತ ಭಿನ್ನವಾದ ಊಹೆಗಳ ಮೂಲಕ ಸಾಧ್ಯಸಾಧ್ಯತೆಗಳನ್ನು ತೆರೆದಿಡುತ್ತಾರೆ.

“ವಿಸರ್ಜನೆ” ಹೆಚ್ಚು ಕಾಡಿದ ಕಥೆ. “ಕುಮಟೆಗೆ ಬಂದ ಕಿಂದರಿಜೋಗಿ” ಎಲ್ಲಿಂದೆಲ್ಲಿಗೋ ತಳುಕು ಹಾಕುವ ಮಾನವನ ಸಹಜ ಪ್ರವೃತ್ತಿಗೆ ಹಿಡಿತ ಕನ್ನಡಿ.
……… ಪದ ಹೇಳೇ ಮುಖದ ಮೇಲೆ ತುಂಟ ನಗೆ ತುಳುಕಿಸಿದ ಕಥೆ.
ಹೀಗೆ ಪ್ರತಿ ಕಥೆಗಳು ಒಂದಷ್ಟು ನೋವು ನಲಿವುಗಳನ್ನು, ಮತ್ತೊಂದಿಷ್ಟು ಬೆರಗನ್ನು, ಹೀಗೂ ಇರಬಹುದೇ ಎಂಬ ಅಚ್ಚರಿಗಳನ್ನು, ಇನ್ನೊಬ್ಬನೊಳಗಿನ ಎಲ್ಲವನ್ನೂ ಅರಿಯಲಾಗದು ಎಂಬ ಸತ್ಯ ಮುರಿಯುವ ಅಹಂಕಾರವನ್ನು, ಮನುಷ್ಯನ ಜೀವನದಲ್ಲಿ ಉದುಗಿ ಹೋಗಿರುವ ಕಥೆಗಳನ್ನು ಎಳೆ ಎಳೆಯಾಗಿ ಬಿಡಿಸುತ್ತವೆ.

ಅಲ್ಲದೇ ಈ ಕಥೆಗಳೆಲ್ಲವೂ ಕಲ್ಪನೆಯ ಜಾಡಿನವಲ್ಲ. ಲೇಖಕರ ಗಾಢವಾದ ಜೀವನಾನುಭವದ ಮೂಸೆಯಲ್ಲಿ ಹೊರ ಬಂದಂತವು.
ಒಟ್ಟಾರೆ ಪುಸ್ತಕ ಓದಿನ ರಸಾಸ್ವಾದನೆಗೆ ಅಗತ್ಯವಿರುವ ವಸ್ತುವಿಷಯಗಳೆಲ್ಲವೂ ಇಲ್ಲಿ ಕಾಣಬಹುದು.

ಕುಮಟೆ ಮತ್ತು ಉತ್ತರ ಕನ್ನಡ ಜಿಲ್ಲೆಯವರು ಓದಲೇಬೇಕಾದ ಪುಸ್ತಕವಿದು. ಓದುವಾಗಾಗುವ ವಿಶೇಷ ಅನುಭೂತಿಯನ್ನು ಅನುಭವಿಸಲಾದರೂ ಓದಬೇಕು.

ಕಥೆಗಳನ್ನು ಕಟ್ಟಿಕೊಡುವ ಬಗೆಗೆ, ಆಳವಾಗಿ ಅಷ್ಟೇ ನವಿರಾಗಿ ನಿರೂಪಿಸುವ ಶೈಲಿಗೆ ಚಿತ್ತಾಲರನ್ನು ಎಲ್ಲರೂ ಓದಬೇಕು..

ಕವಿತಾ ಭಟ್

 

ಕೃಪೆ  https://pustakapremi.wordpress.com/

ಪುಟಗಳು : 172

Customer Reviews

No reviews yet
0%
(0)
0%
(0)
0%
(0)
0%
(0)
0%
(0)