
ಒರಿಸ್ಸಾದ ತೀರ್ಥ ಕ್ಷೇತ್ರ ಪುರಿ, ಕೊನಾರ್ಕ್ ಹಾಗೂ ಭುವನೇಶ್ವರಗಳನ್ನು ಸಂದರ್ಶಿಸಬೇಕೆಂಬ ಆಸೆ ಒಂದೆರಡು ವರ್ಷಗಳಿಂದ ಕಾಡುತ್ತಿತ್ತು.
ಯಾವುದೋ ಕಾರಣಗಳಿಂದಾಗಿ ಸಂಸಾರದೊಂದಿಗಾಗಲೀ, ಗೆಳೆಯರೊಂದಿಗಾಗಲೀ ಹೋಗುವುದು ಅಸಾಧ್ಯವೆನಿಸಿದಾಗ , ಅದೊಂದು ರಾತ್ರಿ ಬ್ಯಾಗ್ ಹಿಡಿದು ಒಂಟಿಯಾಗಿ ಹೊರಟೆ.
ಪ್ರವಾಸದಿಂದ ಮರಳಿದ ಬಳಿಕವೂ ಹಲವಾರು ದಿನ ಅದೇ ಗುಂಗು. ಯಾವಾಗಲೂ, ಆಗಷ್ಟೇ ಮುಗಿದ ಪ್ರವಾಸದ ಬಗ್ಗೆಯೇ ಮಾತುಕತೆ. ಅಂತಹುದೇ ಒಂದು ಸಂವಾದದ ವೇಳೆ, ಪ್ರೀತಿಯ ಮಡದಿ ಕೇಳಿದಳು...
"ಒಂಟಿಯಾಗಿ ಪ್ರವಾಸಕ್ಕೆ ಹೋಗುತ್ತೇವೆ ಎನ್ನುವ ಗಂಡಸರು ತಮ್ಮ ಜೊತೆ ಬೇರಾರನ್ನೋ ಕರೆದುಕೊಂಡು ಹೋದರೆ ಮನೆಯಲ್ಲಿರುವವರಿಗೆ ತಿಳಿಯುತ್ತದೆಯೇ...?"
ಹೌದಲ್ಲವೇ...? ಅಂದಿತು ಮನಸ್ಸು. ಅದೇ ಕ್ಷಣ ಕಥಾ ನಾಯಕ ಪ್ರಣವನ ಚಿತ್ರಣ ತಲೆಯಲ್ಲಿ ಮೂಡಲಾರಂಭಿಸಿತ್ತು. ದಾಂಪತ್ಯದ ಹೊರಗಿನ ಸಂಬಂಧವೊಂದು ಪತಿ ಪತ್ನಿಯರ ಜೀವನದಲ್ಲಿ ಉಂಟು ಮಾಡಬಹುದಾದ ಸನ್ನಿವೇಶದ ಬಗ್ಗೆ ಆರಂಭಿಸಿದ ಕಥೆ ಒಂದೆರಡು ಸಂಚಿಕೆಗಳನ್ನು ಬರೆದು ಮುಗಿಸುವುದರೊಳಗೆ ರೋಚಕ ಕಾದಂಬರಿಯಗುವತ್ತ ಹೆಜ್ಜೆ ಹಾಕುತ್ತಿರುವುದರ ಅರಿವಾಯಿತು.
ಅಲ್ಲಿಂದ ಪ್ರತಿ ಸಂಚಿಕೆಯಲ್ಲೂ ತಿರುವುಗಳನ್ನು ಪಡೆಯುತ್ತಾ ಸಾಗಿದ ಕಥೆ ಅಂತಿಮ ಸಂಚಿಕೆಯ ಕೊನೆಯ ಶಬ್ದದವರೆಗೂ ತನ್ನ ರೋಚಕತೆ ಹಾಗೂ ರಹಸ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಅಂದರೆ ತಪ್ಪಾಗಲಾರದು ಅಂದುಕೊಳ್ಳುತ್ತೇನೆ.
ತನ್ನ ಸಾಧನೆಯ ಮೂಲಕ ಕಂಪನಿಯೊಂದರಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ ಯುವಕನೋರ್ವನ ದಾಂಪತ್ಯದ ಹೊರಗಿನ ಸಾಹಸದ ಬಗ್ಗೆ ಹೆಚ್ಚೇನೂ ಹೇಳದೇ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ...
ಪತ್ನೀ ಸಮೇತ ಪ್ರಣವ...
ಓದುಗರ ಮನೋರಂಜನೆಯನ್ನೇ ಮುಖ್ಯ ಧ್ಯೇಯವಾಗಿರಿಸಿ ಬರೆದ ಈ ಕಾದಂಬರಿಯನ್ನು, ಓದಿ, ಆನಂದಿಸಿ ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಮನವಿ.
Disclaimer
ಈ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳು, ಘಟನೆಗಳು ಹಾಗೂ ಸನ್ನಿವೇಶಗಳು ಸಂಪೂರ್ಣ ಕಾಲ್ಪನಿಕವಾಗಿವೆ. ಯಾವುದೇ ಜೀವಂತ ಯಾ ಮೃತ ವ್ಯಕ್ತಿಗಳು ಅಥವಾ ಸಂಘ, ಸಂಸ್ಥೆ ಇತ್ಯಾದಿಗಳೊಂದಿಗೆ ಯಾವುದೇ ರೀತಿಯ ಸಾಮ್ಯತೆ ಕಂಡು ಬಂದಲ್ಲಿ ಅದು ಕಾಕತಾಳೀಯ ಹಾಗೂ ಉದ್ದೇಶ ಪೂರ್ವಕವಲ್ಲ.