Click here to Download MyLang App

dharmashree, s l byrappa, s l bairappa, s l bhairappa, s l bhyrappa, s l byarappa, s l bayrappa, s l bairappa novels, s l byrappa books, s l bhyarappa, s l byrapp, s l birappa, s l birappa, s l birappa, s l bhyrappa books, s l bhyarapp, s l bhirappa, s l bhayrappa, s l bhairappa novels, s l bhairappa book, s l bairappa , bairappa

ಧರ್ಮಶ್ರೀ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಎಸ್.ಎಲ್. ಭೈರಪ್ಪ
ಮಾಮೂಲು ಬೆಲೆ
Rs. 285.00
ಸೇಲ್ ಬೆಲೆ
Rs. 285.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಇದು ನಾನು ಓದಿದ ಭೈರಪ್ಪನವರ ಮೊದಲ ಕಾದಂಬರಿ. ಮುನ್ನೂರ ಮೂವತ್ತಮೂರು ಪುಟಗಳ ಕಾದಂಬರಿಯ ಪ್ರತಿ ಪುಟದ ಪ್ರತಿ ಸಾಲಿನ ಪ್ರತಿ ಪದ ಅಕ್ಷರಗಳನ್ನು ಸವಿಯುವ ಮೂಲಕ ಹಲವು ವರ್ಷಗಳಿಂದ ಅವರನ್ನು ಓದಬೇಕೆನ್ನುವ ಬಯಕೆಗೆ ಬಂಧಮುಕ್ತವಾಯಿತು. ಭಾರತವನ್ನು ಕಾಡುತ್ತಿರುವ ಹಲವು ಸಮಸ್ಯೆಗಳಿವೆ. ಅದರಲ್ಲಿ ಧರ್ಮಕ್ಕೆ ಕುರಿತ ಸಮಸ್ಯೆಗಳೂ ಒಂದು. ಧರ್ಮ ತಂದೊಡ್ಡುವ ಸಂಕಟಗಳನ್ನು ಅರಗಿಸಿಕೊಳ್ಳಲಾಗದೆ ಯಾವುದೋ ಆಮಿಷಕ್ಕೋ, ಆತುರದ ನಿರ್ಧಾರಕ್ಕೋ ಬಿದ್ದು ಮತಾಂತರವಾಗುವುದು ಧರ್ಮ ತಂದೊಡ್ಡುವ ಇನ್ನೊಂದು ಗಂಭೀರ ಸಮಸ್ಯೆ. “ಧರ್ಮಶ್ರೀ” ಕಾದಂಬರಿಯ ಮುಖ್ಯ ಜೀವಾಳ ಧರ್ಮ ಮತ್ತು ಮತಾಂತರ.

ನಾವು ಭಾರತೀಯರು ವೇದ ಪುರಾಣ ಕಾಲದಿಂದಲೂ ನಮ್ಮದೇ ಆದ ನಂಬುಗೆಯನ್ನ, ಆಚರಣೆಯನ್ನ, ಧರ್ಮಕ್ಕೆ ಸಂಬಂಧಪಟ್ಟ ರೀತಿ ರಿವಾಜುಗಳನ್ನ ಅನುಸರಿಸಿಕೊಂಡು ಬಂದಿರುವುದು ಸರಿಯಷ್ಟೇ. ಆ ಎಲ್ಲಾ ರೀತಿಯ ರಿವಾಜುಗಳೂ ಕಾಲಕಾಲಕ್ಕೆ ಸಾಣೆ ಹಿಡಿಯದುದರ ಪರಿಣಾಮವಾಗಿ ಅನ್ಯ ಮತೀಯರು, ಅನ್ಯ ಕೋಮಿನ ಆಕ್ರಮಣ ನಮ್ಮ ಧರ್ಮದ ಮೇಲಾಯಿತು. ಯಾವುದೇ ಧರ್ಮವಾಗಲಿ ಬದಲಾದ ಕಾಲಕ್ಕೆ ತಕ್ಕಂತೆ ತನ್ನನ್ನು ತಾನು ಪರಾಮರ್ಶಿಸಿಕೊಳ್ಳಬೇಕು. ಇಲ್ಲವಾದಲ್ಲಿ ಪರಕೀಯ ದಾಳಿಗಳು ಕೇವಲ ಧರ್ಮದ ಮೇಲಷ್ಟೇ ಅಲ್ಲ ಇಡೀ ಜನಾಂಗದ ಮೇಲೆ ನಡೆಯುತ್ತದೆ. ಇದ್ದ ನೆಲೆಯನ್ನು ಬಿಟ್ಟು ಪರನೆಲೆ ಹುಡುಕಿ ಹೋಗುವ ದೂರ್ವ್ಯಸನಕ್ಕೆ ನಾವು ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆಯೇ ಕಾರಣ ಎಂದು ಸರಳವಾಗಿ ಬೆಟ್ಟುಮಾಡಿ ತೋರಿಸಬಹುದಾದರೂ ಗ್ರಹಿಕೆಗೆ ಸಿಗದ ಅನೇಕ ಕಾರಣಗಳಿವೆ. ಮುಖ್ಯವಾಗಿ ಕಾಲಕಾಲಕ್ಕೆ ಧರ್ಮ, ನಿಸ್ಸಂಶಯವಾಗಿ, ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು. ತನ್ನಲ್ಲಿರುವ ಹುಳುಕು, ದೋಷಗಳು ಅದೆಷ್ಟೇ ಪುರಾತನವಾದುದಿರಲಿ ಕೈಬಿಡಬೇಕು. ಸರ್ವರಿಗೂ ಸಮ್ಮತವಾಗುವ ಧರ್ಮಾಚರಣೆಯ ಅನುಷ್ಠಾನ ಸಾಧ್ಯವಿಲ್ಲದಿದ್ದರೂ ಕೊನೆಪಕ್ಷ ಬಹುಮತವಿರುವ ಧರ್ಮಾಚರಣೆ ಒಳಿತು. ಧರ್ಮನಿರಪೇಕ್ಷಿತರಾದಾಗ ಮಾತ್ರ ಇಂಥಹದ್ದೊಂದು ಆಮೂಲಾಗ್ರ ಬದಲಾವಣೆ ತರಲು ಸಾಧ್ಯವಾಗುತ್ತದೆ.

ತಾನಿರುವ ಧರ್ಮದಿಂದ ಯಾವ ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲೆ ಎನ್ನುವ ನಂಬಿಕೆಯಿರುವುದೋ ಅಲ್ಲಿಯವರೆಗೂ ಆ ಧರ್ಮಕ್ಕೆ ಧಕ್ಕೆ ಬರುವುದಿಲ್ಲ. ಅದು ಸಂರಕ್ಷಿತ ವಲಯದಲ್ಲಿ ಬೆಚ್ಚಗೆ ಮಲಗಿರುತ್ತದೆ. ಬೌದ್ಧಿಕ ದಿವಾಳಿತನದೊಂದಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆಗಳುಂಟಾದಾಗ ಮನುಷ್ಯ ಅನ್ಯ ಧರ್ಮದೆಡೆ ಸುಲಭವಾಗಿ ಆಕರ್ಷಿತನಾಗುತ್ತಾನೆ. ಒಂದು ಧರ್ಮದಲ್ಲಿರುವ ಅಸಮಾನತೆಯನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ದಾಳ ಹಾಕುವರು ಉದಯಿಸುವುದು ಆಗಲೇ. ಧರ್ಮ ಉಳಿಯುವುದು ಬಿಡುವುದು ಕೋಮಿನವರ ನಡುವೆ ಇರಬೇಕಾದ ಒಗ್ಗಟ್ಟಿನ ಪ್ರಶ್ನೆಯಲ್ಲಲ್ಲ, ನಂಬಿಕೆ ಅಪನಂಬಿಕೆಯ ಮಾತಂತೂ ಅಲ್ಲವೇ ಅಲ್ಲ. ಧರ್ಮದೆಡೆಗಿನ ಸಮಗ್ರ ಪರಿಕಲ್ಪನೆಯ ಏರಿಳಿತವೇ ಧರ್ಮಕ್ಕಂಟಿರುವ ಮಾರಕ ಎನ್ನುವುದನ್ನು ಮರೆಯಬಾರದು. ಜೊತೆಗೆ ಅತೀ ಎನ್ನುವಷ್ಟು ಧರ್ಮಗ್ರಾಹಿತ್ವ, ಮತಾಂಧತೆ ಕೂಡ ಒಂದು ಧರ್ಮವನ್ನು, ಅದರ ಮೂಲಪರಿಕಲ್ಪನೆಯ ತಳಹದಿಯನ್ನು ಬುಡಮೇಲು ಮಾಡಬಲ್ಲದು. ಧರ್ಮವನ್ನು ಆಚರಿಸುವದು ಬೇರೆ ಅನುಷ್ಠಾನಕ್ಕೆ ತರುವುದು ಬೇರೆ. ತನ್ನ ವೈಯುಕ್ತಿಕ ನಂಬಿಕೆಗಳನ್ನು ನಾಲ್ಕು ಗೋಡೆಗಳ ಸಮ್ಮುಖದಲ್ಲಿ ಆಚರಿಸಿ ತಪ್ಪಿಲ್ಲ. ಅದೇ ಶ್ರೇಷ್ಠ, ಸರ್ವರೂ ಅದನ್ನೇ ಅನುಸರಿಸಬೇಕೆನ್ನುವುದು ಅಪಾನುಷ್ಠಾನವೇ ಆದೀತು. ಯಾವುದೇ ಧರ್ಮಕ್ಕೆ ಈ ಮನೋಸ್ಥಿತ್ಯಂತರ ಮುಳುಗು ತರಬಲ್ಲದು. ಹಾಗೆ ಮನೋಸ್ಥಿತ್ಯಂತರಕ್ಕೆ ಒಳಗಾಗಿ, ವಿವರಿಸಲಾಗದ ಬಾಹ್ಯ ಕಾರಣಗಳಿಗೆ ಸಿಕ್ಕು ತನ್ನ ಪಥವನ್ನು ಬದಲಿಸಿದ ವಿದ್ಯಾವಂತನೊಬ್ಬನ ಕಥೆಯೇ “ಧರ್ಮಶ್ರೀ”. ಸತ್ಯನಾರಾಯಣ ಹಳ್ಳಿಯಲ್ಲಿ ಹುಟ್ಟಿದ್ದರೂ, ಮಾವನ ಮನೆಯ ಕಷ್ಟಕಾರ್ಪಣ್ಯದಲ್ಲಿ ಬೆಳೆದಿದ್ದರೂ, ಬಡತನವನ್ನೇ ಹೊದ್ದು ಮಲಗಿದ್ದರೂ ಓದುವುದನ್ನು ನಿಲ್ಲಿಸುವುದಿಲ್ಲ. ಬದುಕಿನ ತಿರುಗಣಿ ಆತನನ್ನು ಎತ್ತಲಿಂದೆತ್ತಲೋ ತಿಪ್ಪರಲಾಗ ಹಾಕಿಸುತ್ತದೆ. ಕೊನೆಗೆ ಮೈಸೂರಿಗೆ ಬಂದು ಬೀಳುತ್ತಾನೆ. ಮರೆತು ಹೋಗಿದ್ದ ಬಾಲ್ಯದ ಗೆಳತಿಯೊಬ್ಬಳು ಅವನಿಗೆ ಮತ್ತೆ ಸಿಕ್ಕಾಗ ಕಥೆಯ ಆಯಾಮ ಬದಲಾಗುತ್ತಾ ಹೋಗುತ್ತದೆ.

ಈ ಹಂತದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಭೈರಪ್ಪನವರು ಪಾತ್ರ ಹೆಣೆಯುವ ವೈಶಿಷ್ಟ್ಯತೆ ತಿಳಿಯುತ್ತದೆ. ಬಾಲ್ಯದ ಗೆಳತಿ ರಾಚಮ್ಮ ಸಿಗುವ ತನಕ ಭೈರಪ್ಪನವರು ಸತ್ಯನಾರಾಯಣನ ಬಾಲ್ಯ ಮತ್ತು ಆತನ ಹಿನ್ನೆಲೆಯನ್ನಷ್ಟೇ ಕಟ್ಟಿಕೊಡುತ್ತಾರೆ. ನಂತರ ಮೈಸೂರಿಗೆ ಬಂದಿಳಿಯುವ ಸತ್ಯನಾರಾಯಣ ಓದಿಗಾಗಿ ಪಡುವ ಪಾಡುಗಳು, ವಿದ್ಯಾರ್ಥಿ ಜೀವನದ ಆಗುಹೋಗುಗಳು, ರಾಚಮ್ಮ ಮತ್ತು ಸತ್ಯನಾರಾಯಣರ ನಡುವೆ ಧರ್ಮದ ಬಗ್ಗೆ ನಡೆಯುವ ಚರ್ಚೆಗಳು, ಹಾಸ್ಟೆಲ್ಲಿನಲ್ಲಿ ನಡೆಯುವ ಆಂತರಿಕ ಕಲಹಗಳು, ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಗೆಳೆಯ ಶಂಕರನ ಜೊತೆ ದೀರ್ಘವಾಗಿ ನಡೆಸುವ ಸಂವಾದಗಳು ಕಥೆಗೊಂದು ಗಟ್ಟಿ ಹಿನ್ನೆಲೆಯನ್ನು ಒದಗಿಸಿಕೊಡುತ್ತವೆ. ಮುಂದೇನು ಎಂದು ನಿರೀಕ್ಷಿಸಿದ ಓದುಗರಿಗೆ ಕಥೆಯಲ್ಲಿ ಕುತೂಹಲ ಬರುವುದು ರಾಚಮ್ಮನ ನಾದಿನಿ ಲಿಲ್ಲಿ ಪ್ರವೇಶವಾದ ಬಳಿಕ. ಅಫ್ಕೋರ್ಸ್ ಎಲ್ಲಾ ಕಥೆಕಾದಂಬರಿಗಳಲ್ಲಿಯೂ ಹೊಸ ಪಾತ್ರಗಳು ಪ್ರವೇಶ ಪಡೆಯುತ್ತದೆ. ಆದರೆ ಲಿಲ್ಲಿ ಪಾತ್ರ ಭೈರಪ್ಪನವರು ಕಟ್ಟಿಕೊಡುವ ಪರಿಯಿದೆಯೆಲ್ಲಾ? ಆಕೆಯ ಉಪಸ್ಥಿತಿ ಇರದೇ ಕಾದಂಬರಿಯೇ ಮುಂದುವರೆಯದು ಎನ್ನುವ ಮಟ್ಟಿಗಿದೆ. ಆ ಹಿನ್ನೆಲೆಯಲ್ಲಿ ನೋಡಿದಾಗ ಭೈರಪ್ಪನವರು ಹುಟ್ಟುಹಾಕುವ ಪ್ರತಿಯೊಂದು ಪಾತ್ರವೂ ಅನನ್ಯವಾದುದೇ. ಕಥೆಯನ್ನು ಹೆಣೆಯುವ, ಹೆಣೆದ ಕಥೆಯನ್ನು ಹಂದರಗೊಳಿಸುವ ಭೈರಪ್ಪನವರ ತಂತ್ರ ಇಲ್ಲಿ ನನಗಿಷ್ಟವಾಯಿತು.

ಲಿಲ್ಲಿ ಆಕೆ ಆಧುನಿಕ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕಾಲೇಜ್ ಓದುವ ಹುಡುಗಿ. ಹಿಂದೂ ಧರ್ಮದ ಬಗ್ಗೆ ಸತ್ಯನಾರಾಯಣನಿಗಿದ್ದ ನಿಲುವು ಕಂಡು ಮೊದಲು ಮೂಗು ಮುರಿದರೂ ನಂತರ ಆತನಿಗಿದ್ದ ನಿಶ್ಚಿತತೆ ಕಂಡು ಬೆರಗಾಗುತ್ತಾಳೆ. ಅನ್ಯ ಕೋಮಿನವರ ಮೂಲ ನೆಲೆ ಹಿಂದುವೇ ಆಗಿತ್ತು, ರಕ್ತಕಣಗಳು ಹಿಂದುತ್ವದ ತಂತುವಿನೊಂದಿಗೆ ಬೆಸೆದುಕೊಂಡಿವೆ ಎನ್ನುವ ಮಾರ್ಮಿಕ ಸತ್ಯವನ್ನು ಆಕೆಗೆ ಅರಹುತ್ತಾನೆ. ಆಕೆ ನಿಧಾನವಾಗಿ ಹಿಂದೂ ಧರ್ಮದ ಕಡೆ ಆಕರ್ಷಿತಳಾಗುತ್ತಾಳೆ. ಸತ್ಯನಾರಾಯಣನಿಗೂ ಅವಳ ಮೇಲೆ ಅನುರಾಗ ಮೂಡುತ್ತದೆ. ಅಲ್ಲೀವರೆವಿಗೂ ಯಾವುದೇ ನಿರ್ಧಾರವನ್ನಾಗಲೀ, ನಿರ್ಣಯವನ್ನಾಗಲೀ ಸ್ವತಂತ್ರವಾಗಿ ತೆಗದುಕೊಳ್ಳುತ್ತಿದ್ದ ಸತ್ಯನಾರಾಯಣ ಲಿಲ್ಲಿಯನ್ನು ಪ್ರೀತಿಸಿದ ನಂತರ ಯಾವ ಸಣ್ಣ ನಿರ್ಧಾರ ಮಾಡಲು ಶಕ್ತ್ಯನಿಲ್ಲದೆ ಧಂಧ್ವಕ್ಕೆ ಬೀಳುತ್ತಾನೆ. ಅದು ಅವನ ಅಸಹಾಯಕತೆಯೂ ಹೌದು, ಬಲಹೀನತೆಯೂ ಹೌದು.

ಧರ್ಮವೇ ಎಲ್ಲಕ್ಕಿಂತ ಮುಖ್ಯ ಎಂದು ನಂಬಿದ್ದ ಸತ್ಯನಾರಾಯಣನ ನಡೆ ಇದ್ದಕ್ಕಿದ್ದಂತೆ ಬದಲಾಗಿ ಧರ್ಮಕ್ಕಿಂತ ಪ್ರೀತಿಯೇ ಮುಖ್ಯ ಎನ್ನುವಲ್ಲಿಗೆ ಬಂದು ತಲುಪಿದಾಗ ಅಲ್ಲಿಯವರೆಗೂ ಕಾದಂಬರಿಯಲ್ಲಿ ಚರ್ಚಿಸಿದ ಹಿಂದೂ ಧರ್ಮದ ಬಗೆಗಿನ ಸಂಗತಿಗಳು ಅವನ ಪಾಲಿಗೆ ಕೇವಲ ಬೂಸಾ ಆಗಿಬಿಡುತ್ತವೆ ಎನ್ನುವುದು ಖೇದಕರ. ಆನಂತರ ತನ್ನ ಹಿಂದಿನ ಧರ್ಮದ ಬಗ್ಗೆ ಮೋಹಿತನಾಗುತ್ತನಾದರೂ ಕೇವಲ ಲಿಲ್ಲಿಯ ಜೊತೆಗಿನ ಸಂಬಂಧ ಉಳಿಸಿಕೊಳ್ಳುವ ಒಂದೇ ಕಾರಣಕ್ಕಾಗಿ ತನ್ನೆಲ್ಲ ಆಶಯವನ್ನು ಬಲಿಹಾಕುವ ಆತನ ನಡೆ ಬಾಲಿಶ ಎನಿಸುತ್ತದೆ. ಕಥೆ ಮುಂದುವರೆಯುವ ತಂತ್ರ ಇದಾಗಿರಬಹುದೆಂದುಕೊಂಡರೂ ಶಂಕರ ಮತ್ತು ಸತ್ಯನಾರಾಯಣರು ಅದುವರೆವಿಗೂ ನಂಬಿದ್ದ ಅವರ ಧರ್ಮನಿಷ್ಠತೆಗಳೆಲ್ಲ ಏನಾದವು ಎನ್ನುವ ಪ್ರಶ್ನೆ ಮೂಡಿ ನಿಲ್ಲುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಶಂಕರನೇ ಸತ್ಯ ಮತ್ತು ಲಿಲ್ಲಿಯರ ಮನೆಯಲ್ಲಿ ಊಟ ಮಾಡುತ್ತಾನೆ, ಕಾಫಿ ಕುಡಿಯುತ್ತಾನೆ. ಅವನು ಏನೇ ಉದಾರಿಯಾಗಿದ್ದಾನೆ ಎಂದುಕೊಂಡರೂ, ಧರ್ಮದ ಮೇಲಿಮ ತನ್ನ ಚಿಂತನೆಯನ್ನು ಪರಿಶೀಲನೆಗೊಳಪಡಿಸಿಕೊಂಡಿದ್ದಾನೆ ಅಂದರೂ ಅಲ್ಲೀವರೆಗೂ ಧರ್ಮದ ಬಗ್ಗೆ ತಾನಿಟ್ಟುಕೊಂಡಿದ್ದ ಆದರ್ಶಗಳು ವಾಸ್ತವತೆಯಿಂದ ದೂರ ಇದ್ದವು ಎನ್ನುವುದನ್ನು ಸೂಚಿಸುವ ಮೂಲಕ ಮಾನವತೆಗೆ ಮೀರಿದ ಧರ್ಮವಾವುದಯ್ಯ ಎನ್ನುವ ದಾಸವಾಣಿ ನೆನಪಿಗೆ ತರುತ್ತದೆ. ಆ ನಿಟ್ಟಿನಲ್ಲಿ ನೋಡಿದಾಗ ಇಡೀ ಕಾದಂಬರಿಯಲ್ಲಿ ಧರ್ಮನಿರಪೇಕ್ಷಿತವಾದ ಪಾತ್ರಗಳು ಎಂದರೆ ದೇವಿಪ್ರಸಾದ್ ಮತ್ತು ಲಿಲ್ಲಿ.

ಜಗತ್ತಿನ ಎಲ್ಲ ತೊರೆ ಹಳ್ಳ ಕೊಳ್ಳ ನದಿಗಳು ಸೇರುವುದು ಸಾಗರದ ಒಡಳಲಾಲವನ್ನೇ ಎನ್ನುವಂತೆ ಜಗತ್ತಿನ ಎಲ್ಲಾ ಧರ್ಮಗಳೂ ಲೀನವಾಗುವುದು ಮನುಷ್ಯತ್ವದಲ್ಲಿ ಮಾತ್ರ. ಮನುಷ್ಯನಿಗಾಗಿ ಧರ್ಮ, ಧರ್ಮವೇ ಜೀವನವಲ್ಲ, ಧರ್ಮವನ್ನು ಮೀರಿದ ಮನುಷ್ಯತ್ವವಿಲ್ಲ ಎನ್ನುವ ಆಶಯ ಈ ಕಾದಂಬರಿಯಲ್ಲಿ ಎಷ್ಟರ ಮಟ್ಟಿಗೆ ನೆರವೇರಿದೆಯೋ ಬಲ್ಲವರು ಹೇಳಬೇಕು. ಇದು ನಾನು ಓದಿದ ಭೈರಪ್ಪನವರ ಮೊದಲ ಕಾದಂಬರಿಯಾದ್ದರಿಂದ ನನ್ಮ ಒಟ್ಟೂ ಗ್ರಹಿಕೆಯಲ್ಲಿ ತಪ್ಪಿರಬಹುದು. ಹಾಗೆ ತಪ್ಪಿದ್ದರೆ ದಯವಿಟ್ಟು ತಿಳಿಸಿ.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ

 

ಕೃಪೆ  https://pustakapremi.wordpress.com

 

ಪುಟಗಳು : 264

Customer Reviews

No reviews yet
0%
(0)
0%
(0)
0%
(0)
0%
(0)
0%
(0)