Click here to Download MyLang App

ಮೂಚಿಮ್ಮ (ಪ್ರಿಂಟ್ ಪುಸ್ತಕ)

ಮೂಚಿಮ್ಮ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ.ಅಜಿತ್ ಹರೀಶಿ
ಮಾಮೂಲು ಬೆಲೆ
Rs. 170.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

 

ಬರೆದವರು: ಡಾ.ಅಜಿತ್ ಹರೀಶಿ

ಪ್ರಕಾಶಕರು: ಮೈಲ್ಯಾಂಗ್ ಬುಕ್ಸ್

Publisher: MyLang Books

ಸುಳಿದಾಡುವ ಗಾಳಿಯಲ್ಲಿ ಒಲಿದು ಬಂದಂತೆ ಬಂದ ನನ್ನ ಗೆಳೆಯ ಡಾ. ಅಜಿತ್ ಹರೀಶಿ ಕೃತಿಗಳ ಒಳಗೆ ದಟ್ಟವಾದ ಮಾನವೀಯ ಸೆಲೆಗಳನ್ನು ನಾನು ಅನೇಕ ಬಾರಿ ಕಂಡಿದ್ದೇನೆ. ಅವರು ಮಿತಭಾಷಿ ಮತ್ತು ಅನೇಕ ಬಾರಿ ಮೌನಿ. ಅಜಿತ್ ಕಥೆಗಳನ್ನು ಓದಿದಾಗಲೆಲ್ಲಾ ನನಗೆ ಅವರ ಮೌನದ ಅರ್ಥ ಏನು ಎಂಬುದು ಈ ಕೃತಿಯಲ್ಲಿ ಗೊತ್ತಾಗಿದೆ. 


"ಆವಿ” ಕಥೆಯ ಶರತ್ ಅಥವಾ ದಿಶಾಗಿಂತ ಸುನೀಲನ ಮೌನ ಹೆಚ್ಚು ಆಪ್ಯಾಯಮಾನವಾಗುತ್ತದೆ. “ಮೂಚಿಮ್ಮ” ಕಥೆಯಲ್ಲಿ ಬಾಂದು ಕಲ್ಲಿನ ಆ ಕಡೆ ಮತ್ತು ಈ ಕಡೆ ಎರಡು ಪುಟ್ಟ ಪುಟ್ಟ ಔಷಧೀಯ ಗಿಡಗಳನ್ನು ಕೈಯಾರೆ ನೆಟ್ಟ ಮೂಚಿಮ್ಮನ ಮೌನ ಹರಿದಾಡುತ್ತದೆ. “ವಿಲಿಪ್ತ”ದ ಗುರೂಜಿ ವರಲೆ ತಿಂದ ಕಾಷ್ಠವಾಗಿ ಆತನ ಮೌನವೇ ಆತನನ್ನು ಒಳಗೊಳಗೆ ತಿಂದು ಮುಗಿಸುತ್ತದೆ. “ದಹನ”ದ ಕನಸಿನ ಸ್ವಾಮಿ ಗಂಗಾಧರನ ಕನಸುಗಳು ಮತ್ತೊಂದು ಮೌನವನ್ನು ಓದುಗನಿಗೆ ಅರ್ಥಪೂರ್ಣವಾಗಿ ದಾಟಿಸುತ್ತದೆ.”ಪತನ”ದ ವಿನಯನ ಬರಹಗಳಲ್ಲಿ ಮೌನವೇ ಕಥೆಯ ಹೆಚ್ಚುಗಾರಿಕೆಯನ್ನು ತೋರಿಸುತ್ತದೆ.”ಜನಾರ್ದನ” ಕಥೆಯಲ್ಲಿ ಜನಾರ್ದನ ಭಟ್ಟರ ಮೌನ ಪುಂಡ ಮಗನನ್ನು ಪರಿವರ್ತಿಸುತ್ತದೆ. “ಬೆಸುಗೆ”ಯ ಸುಮಾ, ಸಿರಿ ಮತ್ತು ಪ್ರಶಾಂತರ ನಡುವಿನ ಪ್ರೀತಿಯ ಸ್ಪರ್ಶದಲ್ಲಿ ತಾನೇ ಮೌನಕ್ಕೆ ಸರಿದ ರೀತಿ ಆಪ್ಯಾಯಮಾನವೆನಿಸುತ್ತದೆ. “ತಾನೊಂದು ಬಗೆದರೆ” ಕಥೆಯಲ್ಲಿ ಸುದೀರ್ಘ ವಿವರಗಳ ನಡುವೆಯೂ ವೆಂಕಟ ತನ್ನ ನಿರೂಪಣೆಯಲ್ಲಿ ಕೊಟ್ಟ ಅಖಂಡ ಮೌನವೊಂದು ನಮ್ಮನ್ನು ದಾಟಿ ಹೋದ ಭಾಸವಾಗುತ್ತದೆ. “ಪರಿವರ್ತನೆ” ಕಥೆಯ ಅನಂತ ಹೆಗಡೇರು ಕಾಲದ ಓಟದಲ್ಲಿ ತಾನೂ ಭಾಗಿಯಾಗಲಾರದೇ ಮೌನ ಸಾಕ್ಷಿಯಾಗಿ ಕೊನೆಗೂ “ಅಪೀ ನಿಧಾನ ಓಡೇ” ಎಂದು ಹೇಳುವಲ್ಲಿಗೆ ಮನಸ್ಸು ಮುದ್ದೆಯಾಗುತ್ತದೆ. “ನಟ’’ ಕಥೆಯಲ್ಲಿ ನಟರಾಜನ ಅಳು ಅವನ ಮನಸ್ಸಿನ ಮೌನದ ಹರಿವಿನಂತೆ ತಾಕುತ್ತದೆ.

ಈ ಕೃತಿಯಲ್ಲಿ ಬಹಳಷ್ಟು ಕಥೆಗಳು ಸಾಗರಸೀಮೆಯ ಲಹರಿಗಳನ್ನು ಢಾಳಾಗಿ ಹರಿಸಿವೆ. ಭರಣಿಯಲ್ಲಿ ಹೊದ್ದು ಮುಚ್ಚಿದ ಅಪ್ಪೆಮಿಡಿಯ ಸೋನೆಯಂತೆ ಘಮ ಇವೆ. ಒಂದೊಂದು ಕಥೆಯೂ ಕಾಯಿ ಹಾಲಿಗೆ ತೊಡೆದೇವು ಮುರುಕಿದಂತೆ ಓದಿನ ರುಚಿಗೆ ನಮ್ಮನ್ನು ಅಣಿಗೊಳಿಸುತ್ತದೆ.

- ಗೋಪಾಲಕೃಷ್ಣ ಕುಂಟಿನಿ

 

ಅಜಿತ್ ಅವರ ಕತೆಗಳನ್ನು ಓದುವಾಗ ಮೊದಲು ನನಗೆ ವಿಶಿಷ್ಟವೆನಿಸಿದ್ದು ವಿಷಯಗಳ, ಕಥಾಸೂತ್ರಗಳ, ಮತ್ತು ಪಾತ್ರಗಳ ವೈವಿಧ್ಯ. ಒಳನಾಡಿನ ಹಳ್ಳಿಗಳ, ಸಣ್ಣ ಊರುಗಳ ಬೆಳೆಗಾರರ ಬದುಕಿನಿಂದ ಹಿಡಿದು ನಗರ ಜೀವನದ ಸೂಕ್ಷ್ಮಗಳ ವರೆಗೂ ಅವರ ಕತೆಗಳ ಹರಹು ಸರಾಗವಾಗಿ ಹಬ್ಬುತ್ತದೆ. ನೆಲದ ಸೊಗಡಿನ ಘಮವನ್ನು ಎಲ್ಲಿಯೂ ಕಳೆದುಕೊಳ್ಳದೆಯೇ ಆಧುನಿಕ ಜೀವನದ ತೊಡಕುಗಳ ಬಗ್ಗೆ , ಸೂಕ್ಷ ಪ್ರಶ್ನೆಗಳ ಬಗ್ಗೆಯೂ ಅಪರೂಪದ ಸಂವೇದನೆಯನ್ನು ಅವರು ಮಿಡಿಯುತ್ತಾರೆ. ಕತೆಗಾರರಲ್ಲಿ ಇಂಥ ವಿಸ್ತಾರ ನಿಜಕ್ಕೂ ಅಪರೂಪ. ಹೊರನೋಟಕ್ಕೆ ಎರಡು ತುದಿಗಳಂತೆ ಕಂಡು ಬರುವ ಇವೆರಡು ಜೀವನ ದೃಷ್ಟಿಗಳ ನಡುವೆ ಸೇತುವೆಗಳನ್ನು ಕಟ್ಟಬಲ್ಲ ಅಜಿತ್ ರಂಥ ಕತೆಗಾರರು ಕನ್ನಡಕ್ಕೆ ಇಂದು ನಿಜಕ್ಕೂ ಬೇಕಾಗಿದ್ದಾರೆ. 

-ಪವಮಾನ್ ಅಥಣಿ, ಮೈಲ್ಯಾಂಗ್ ಬುಕ್ಸ್

  

ಪುಟಗಳು: 142 

Customer Reviews

Based on 4 reviews
75%
(3)
25%
(1)
0%
(0)
0%
(0)
0%
(0)
ಕ.ಭ.

ಡಾ. ಅಜಿತ್ ಹರೀಶಿ ಅವರ ಕಥೆಗಳನ್ನು ಓದುವಾಗ ಆಪ್ತ ಭಾವವೊಂದು ನುಸುಳುವುದನ್ನು ಹಿಂದಿನ ಸಂಕಲನಗಳನ್ನು ಓದುವಾಗಲೂ ಗಮನಿಸಿದ್ದೇನೆ. ಸರಳವಾದ ನಿರೂಪಣೆ, ಪ್ರಕೃತಿ, ಸಮಾಜ, ಜನಜೀವನವನ್ನು ಸೂಕ್ಷ್ಮವಾಗಿ ಗ್ರಹಿಸುವ ಅವರ ಸಂವೇದನಾಶೀಲತೆ ಕಾರಣವಿರಬಹುದು ಎನ್ನಿಸಿದ್ದಿದೆ. ಆದರೆ ಅದಕ್ಕೂ ಮೀರಿದ ನಿಜಾಯಿತಿ, ಮುಗ್ಧತೆ, ಹೇಳುವುದನ್ನು ನಿರ್ಲಿಪ್ತಿಯಿಂದ ಹೇಳುವ ಶೈಲಿ ಸೆಳೆದಿರಲಿಕ್ಕೂ ಸಾಕು.

ಹತ್ತು ಕಥೆಗಳಿರುವ ಮೂಚಿಮ್ಮ ಕಥಾಸಂಕಲನದ ಪ್ರತಿ ಕಥೆಯೂ ವಿಶಿಷ್ಟ ಮತ್ತು ವಿಭಿನ್ನ. ಇಲ್ಲಿರುವ ಕಥೆಗಳಿಗೆ ಸಭ್ಯತೆಯನ್ನು ಮೀರಿ ಅತೀ ರಂಜಕವಾಗಿಬಿಡುವ ಅವಕಾಶಗಳು ಯಥೇಚ್ಛವಾಗಿ ಇರುವಾಗಲೂ ಸಂಬಂಧಗಳ ಮೇಲಿನ ನಂಬಿಕೆ, ಪ್ರೀತಿಯನ್ನು ಕಳೆದುಕೊಳ್ಳದೇ ಮುಗ್ಧವಾಗಿ ಉಳಿಯುತ್ತವೆ.

ಮೂಚಿಮ್ಮ ಕಥೆಯ ಮೂಕಾಂಬಿಕೆ ತನ್ನ ಕೊನೆಗಾಲದಲ್ಲಿ ರವೀಶನಿಗೆ ನಾಟಿವಿದ್ಯೆಯ ಗೌಪ್ಯಯತೆಯನ್ನು ಹೇಳಿ ಕೊಡುವುದಕ್ಕೆ ಬರುತ್ತಾಳೆ. ಆದರೆ ಅದಕ್ಕೂ ಮೀರಿದ ಸ್ವಉದ್ದೇಶ ಅಲ್ಲಿ ಗೋಚರವಾಗುತ್ತದೆ. ಮನೆಗೆ ಬಂದ ಮೂಚಿಮ್ಮಳ ಉಪಚಾರಕ್ಕೂ ಮೊದಲು ಆಸಕ್ತಿ ತೋರದ ಸುಚ್ಚಿಯಂತಹ ವ್ಯವಹಾರಸ್ಥ ಹೆಣ್ಣು ಮಗಳು ಸಹ ಮೂಕಾಂಬಿಕೆಯ ಆಗಮನದ ಮೂಲ ಉದ್ದೇಶ ತಿಳಿದಾಗ ಕಸಿವಿಸಿಗೆ ಒಳಗಾಗದಿರುವುದು ಮತ್ತು ರವೀಶನೇ ಕ್ಷಣ ಪ್ರಲೋಭನೆಗೆ ಒಳಗಾಗುವುದು ಅಚ್ಚರಿ ತರುತ್ತದೆ. ಬದುಕು ಚೊಕ್ಕವಾಗಿ ಕಟ್ಟಿಕೊಳ್ಳುವುದಕ್ಕೆ ಅಗತ್ಯವಾಗಿ ಅಲೌಕಿಕವಾದ ವಿದ್ಯೆಯೇ ಬೇಕು ಎನ್ನುವುದು ಲೇಖಕನ ಧ್ವನಿ.

ರಾತ್ರಿ ಬೀಳುವ ಕನಸುಗಳು ಹಗಲ್ಲಲಿ ವಾಸ್ತವವಾಗಿ ಮಾರ್ಪಾಡಾಗುವುದನ್ನು ಕಾಣುವ ಶಕ್ತಿ ಇರುವ ದಹನ ಕಥೆಯ ಅವಧೂತರ ಪೂರ್ವಾಶ್ರಮದ ಬದುಕು ಮತ್ತು ಅಂತದ್ದೊಂದು ಹಾದಿಗೆ ತಿರುವು ಪಡೆದ ಘಟನೆಗಳನ್ನು ನೆನೆದರೆ ಸೋಜಿಗವಾಗುತ್ತದೆ. ವಾಸ್ತವದ ಜೊತೆಗೆ ಕಲ್ಪನೆಯ ಎಳೆಯೂ ಸೇರಿದರೆ ಮಾತ್ರ ಕಲೆ ಪ್ರಕಾಶಿಸಲು ಸಾಧ್ಯ. ಇಲ್ಲದಿದ್ದರೆ ಕಥೆ ಶುಷ್ಕ ವರದಿಯಾಗಿಬಿಡುವ ಅಪಾಯವುಂಟು. ಆದರೆ ಕಲೆಯೇ ಒಟ್ಟಾರೆ ಬದುಕಲ್ಲ ಎನ್ನುವುದಕ್ಕೆ ಸಹಜವಾದ ಹರಿವಿನ, ನಮ್ಮ ನಡುವೆಯೂ ನಡೆದಿರಬಹುದಾದ, ನಮ್ಮೊಳಗೂ ಘಟಿಸುವ ಸಾಧ್ಯತೆಯಿರುವ ಮಿಕ್ಕುಳಿದ ಕಥೆಗಳೇ ಸಾಕ್ಷಿ.

ನಟ, ಪತನ, ವಿಲಿಪ್ತ ಕಥೆಗಳಲ್ಲಿ ಗೋಚರವಾಗುವ ವ್ಯಕ್ತಿತ್ವದ ಅಧೋಮುಖ ಮತ್ತು ಬೆಸುಗೆ, ಪರಿವರ್ತನೆ, ಆವಿ ಕಥೆಗಳಲ್ಲಿ ಕಾಣುವ ಊರ್ಧ್ವತ್ವ ಗಮನ ಸೆಳೆಯುವಂತದ್ದು.
ಇಲ್ಲಿರುವ ಪ್ರತಿ ಕಥೆಗಳ ಆಶಯ ಹೆಕ್ಕಿ ಹೇಳುವುದಕ್ಕಿಂತ ಓದಿ ಅನುಭವಿಸುವುದೇ ದಿವ್ಯ ಅನುಭೂತಿ. ಅಜಿತರೇ ಹೇಳುವಂತೆ ಈ ಕಥೆಗಳು "ಬದುಕು ಬಂದಂತೇ ಎದುರಿಸುವ ಅವರ ಚಾಳಿಗೆ ಪ್ರತೀಕವಾಗಬಲ್ಲಂತವು.
ಯಾವುದೇ ಬರಹಗಾರನಾಗಲಿ ತನ್ನ ಮೂಲ ನೆಲೆಯ ವ್ಯಾಮೋಹದಿಂದ ಕಳಚಿಕೊಳ್ಳುವುದು ಸುಲಭವಲ್ಲ. ಅಜಿತರು ಸಹ ತಮ್ಮ ನೆಲೆಯನ್ನೇ ಬಹುತೇಕ ಕಥೆಗಳ ರಂಗವಾಗಿಸಿದ್ದಾರೆ. ಮೊಗೆದಷ್ಟೂ ತುಂಬಿಕೊಳ್ಳುವ ಇಂತಹ ಬಾಲ್ಯದ ನೆನಪುಗಳು ಮತ್ತು ಹುಟ್ಟಿ ಬೆಳೆದ ಊರಿನ ಪ್ರೇಮ ಓದುಗನಲ್ಲಿಯೂ ಅನೇಕ ನೆನಪುಗಳನ್ನು ಕೆದಕಿ ಪ್ರಭಾವಿಸುವ ಶಕ್ಯವಿದೆ. ಈ ಕಾರಣಕ್ಕಾಗಿಯೇ ಕಥೆಗಳು ಆಪ್ತವಾಗಿಬಿಡುವುಂಟು.
ಒಟ್ಟಾರೆ ಅಜಿತರ ಕಥೆಗಳನ್ನು ಓದುತ್ತಿದ್ದರೆ, ಅಪರೂಪಕ್ಕೆ ಸಿಕ್ಕ ಆಪ್ತ ಗೆಳೆಯನೊಬ್ಬ ಊರುಕೇರಿಯ ಕಥೆಗಳನ್ನು, ಪ್ರಸಂಗಗಳನ್ನು ಸಲುಗೆಯಿಂದ ಹೇಳುತ್ತಿರುವಂತೆ ಭಾಸವಾಗುತ್ತದೆ.

G
G.K.

ಮೂಚಿಮ್ಮ (ಪ್ರಿಂಟ್ ಪುಸ್ತಕ)

V
V.B.H.
ಭವದ ಬಂಧನದ, ಬಿಡುಗಡೆಯ ನೋಟ ಈ ಸಂಕಲನ.

ಮೂಚಿಮ್ಮ ಚಂದದ ಪುಸ್ತಕ, ಹಗುರ ಕಾಗದ, ಅಂದದ ಮುದ್ರಣ, ಕತೆಯ ಅಂತರಂಗದ ಕನ್ನಡಿ ಹಿಡಿದ ಹಾಗೆ ಕತೆಗಳಿಗೆ ಸತೀಶ್ ಯಲ್ಲಾಪುರ ಅವರು ಬರೆದ ಚಿತ್ರಗಳು ತುಂಬಾ ಇಷ್ಟವಾದವು.

ಈ ಸಂಕಲನ ವಿಭಿನ್ನ ಅನುಭವವನ್ನು ಕೊಟ್ಟಿದ್ದು ನಿಜ. ಕಥೆಯ ಪ್ರತಿ ಪಾತ್ರಗಳೂ ಓದು ಮುಗಿದ ಮೇಲೂ ಮನದಲ್ಲಿ ಉಳಿಯುತ್ತವೆ. ಅಜಿತರಿಗೆ ಮನುಷ್ಯನ ಸೂಕ್ಷ್ಮ ಭಾವ ಮತ್ತು ಸಂಬಂಧವನ್ನು ಕಥೆಯಾಗಿಸುವ ಕಲೆ ಸಿದ್ಧಿಸಿದೆ. ಮೂಚಿಮ್ಮ ಸಂಕಲನದ ಹತ್ತು ಕಥೆಗಳು ಜಗತ್ತಿನ ಹತ್ತು ಮುಖಗಳನ್ನು ತೆರೆದಿಡುತ್ತವೆ. ಇದು ಹೀಗೆ ಆಗುತ್ತದೆ ಎಂದು ಓದುತ್ತಾ ಹೋದವನಿಗೆ ಕೊನೆಯಲ್ಲಿ ಬೇರೆಯೇ ತಿರುವಿನಲ್ಲಿ ನಿಲ್ಲಿಸಿ ಬಿಡುತ್ತಾರೆ. ಓದುಗನ ಮನಸ್ಸನ್ನು ಗೆಲ್ಲಲು ಇಷ್ಟು ಸಾಕು.

ಮನುಷ್ಯನಿಗೆ ಇವತ್ತಿನ ದಿನ ಕಷ್ಟ ಅನ್ನಿಸುತ್ತಿರುವಾಗಲೇ ನಾಳೆಯ ಬಗ್ಗೆ ಸಣ್ಣ ಕೂತೂಹಲ ಹುಟ್ಟುತ್ತಲೇ ಇರುತ್ತದೆ. ಒಂದು ನೆಮ್ಮದಿಯ ಕಿರಣ ಎಲ್ಲಿಂದಾದರೂ ಬಂದು ಬೆಳಗಲಿ ಎಂಬ ಆಶಯ ಇದ್ದೇ ಇರುತ್ತದೆ. ಪ್ರೀತಿಯಲ್ಲಿ ಬಿದ್ದೊಡನೆ ಒಂದೊಳ್ಳೆ ಉದ್ಯೋಗ, ಪ್ರೀತಿಸಿದರೊಂದಿಗೆ ಮದುವೆ, ಮಗು ಇವಿಷ್ಟು ನಾಳೆಯನ್ನು ಸುಖವಾಗಿ ಇಡಬಲ್ಲದು ಎಂಬ ನಂಬಿಕೆ ಗಟ್ಟಿಯಾಗುತ್ತಾ ಹೋಗುತ್ತದೆ. ಇಷ್ಟಾದ ಮೇಲೆ ಬದುಕಿನ ಹೋರಾಟಕ್ಕೆ ಸಜ್ಜಾಗಿ ಹೊರಡಬೇಕು. ಈ ಆವಿ ಕಥೆಯಲ್ಲಿ ಹೀಗೆ ಹೊರಟವನು ಶರತ್. ಅವನ ಜೊತೆಯಾದವಳು ದಿಶಾ. ನಡುವೆ ಸುನಿಲ್ ಇಣುಕಿದ. ಒಂದು ಸ್ನೇಹ, ಪ್ರೀತಿ ಮತ್ತು ಬದುಕಿನ ಸೋಲು ಜೊತೆಗೆ ಸಂಸಾರದ ಗೆಲುವು ಈ ಮೂರನ್ನೂ ಕತೆ ಹೇಳುತ್ತ, ವಿಧಿಯಾಟದದ ನಾಟಕದ ಜೊತೆಗೆ ಸುಖಾಂತ್ಯ ಕಾಣುತ್ತದೆ. ಶುದ್ಧ ಪ್ರೀತಿ ಮತ್ತು ಹೆಣ್ಣಿನ ಔದಾರ್ಯ ಈ ಕತೆ ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ. ಜೊತೆಗೇ ಹೆಣ್ಣು ಜೀವ ಅದೆಷ್ಟೋ ಸಲ ಅವಕಾಶ ಇದ್ದರೂ ತನ್ನ ಇಷ್ಟಗಳು ತನಗೆ ಅನಿವಾರ್ಯವಲ್ಲ ಎಂಬ ನಿರ್ಧಾರಕ್ಕೆ ಯಾಕಾದರೂ ಬರುತ್ತಾಳೋ ಎಂಬ ಪ್ರಶ್ನೆಯನ್ನು ಈ ಕಥೆ ಓದುಗನ ಮನಸ್ಸಿನಲ್ಲಿ ಉಳಿಸುತ್ತದೆ.

ಈ ಸಂಕಲನದ ಎರಡನೆಯ ಕಥೆ ನಟ. ನಟರಾಜನ ಕಥೆ ಅಥವಾ ಒಂದು ಗಂಡು ಮನಸ್ಸಿನ ಕಥೆ ಎನ್ನಬಹುದು. ತಟ್ಟನೆ ಯಾವುದೋ ಸಾಹಸಕ್ಕೆ ಕೈ ಹಾಕಿಬಿಡುವ ಮನಸ್ಥಿತಿ ಹಲವರಲ್ಲಿ ಇರುತ್ತದೆ. ಅಂತಹದ್ದೇ ಮನಸ್ಥಿತಿಯ ನಟರಾಜನ ಕಥೆ ಜಿಂಕೆಯನ್ನು ಸಾಕುವ ನಿರ್ಧಾರದಿಂದ ಆರಂಭವಾಗುತ್ತದೆ. ಕಾಡು ಪ್ರಾಣಿಯೊಂದು ಸಾಕು ಪ್ರಾಣಿಯಾಗಿ ಉಳಿಸಿ ಕೊಂಡಾಗ ಮನುಷ್ಯ ಮತ್ತು ಪ್ರಾಣಿಗಳ ನಡುವೆ ಹುಟ್ಟಿಕೊಳ್ಳುವ ಪ್ರೀತಿಯನ್ನು ಈ ಕಥೆ ಹೇಳುತ್ತ ಅದಕ್ಕೆ ಸಮಾನಾಂತರ ದಲ್ಲಿ ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳು ಹೀಗೂ ಇರುತ್ತವೆ ಎಂಬುದನ್ನು ಕತೆ ತೋರಿಸುತ್ತದೆ. ಕಾಮ ಎಂಬುದು ಗಂಡಸಿನ ಅಹಂಕಾರದ ರೂಪವಾಗಿ, ಗಂಡಸಿನ ಪ್ರೀತಿ ಎಂಬುದು ಅದೆಷ್ಟು ಆಳವೂ ಆಗಿದೆ ಎಂಬುದನ್ನು ಕಥೆ ಎರಡು ಭಾಗದಲ್ಲಿ ಬಿಡಿಸಿಟ್ಟಿದೆ. ವಿಭಿನ್ನ ಬಗೆಯ ಈ ಕಥೆ ಹಿತವಾಗಿದೆ.

ಮೂಚಿಮ್ಮ ಕತೆ ತುಂಬಾ ಆಪ್ತ. ಇದಕ್ಕೆ ಕಾರಣ ನಾನೂ ಹವ್ಯಕ ಭಾಷೆ ಬಲ್ಲವನಾಗಿದ್ದೂ ಕೂಡ ಒಂದು ಕಾರಣ. ಪ್ರತಿ ಊರಲ್ಲಿ ಮೂಕಾಂಬಿಕೆಯಂತಹ ಜೀವ ಬಹುಶಃ ಎಂದೋ ಉಳಿದು ಅಳಿದು ಹೋಗಿರಬಹುದು. ಒಂದು ಕಾಲದ ಮಜ್ಜಿಗೆ ಕಪಾಟಿನ ಯಜಮಾನಿಕೆಯ ಗುಟ್ಟನ್ನು ರಸವತ್ತಾಗಿ ಹೇಳುತ್ತದೆ. ಮೂಚಿಮ್ಮ ನಾವೆಲ್ಲ ನೋಡಿದ ವ್ಯಕ್ತಿಯೇ ಆಗಿದ್ದಾಳೆ. ಇಲ್ಲಿ ಮೂಚಿಮ್ಮ ಪಾತ್ರವೇ ಒಂದು ಕಾಲದ ಕಥೆಯನ್ನು ಹೇಳುತ್ತದೆ. ಒಂದು ಸಣ್ಣ ರಹಸ್ಯ ಇದರಲ್ಲಿದೆ. ಇದು ಹವ್ಯಕ ಭಾಷೆಯ ಬಳಕೆಯಿಂದಲೂ ಭಿನ್ನ ವಸ್ತುವಿನಿಂದಾಗಿಯೂ ಇಷ್ಟವಾಗುತ್ತದೆ.

ವಿಲಿಪ್ತ ಕಥೆ ಮನುಷ್ಯನ ಮನಸ್ಸಿನ ತೊಳಲಾಟ ಮತ್ತು ಸಮಾಜದಲ್ಲಿ ತನ್ನ ಸ್ಥಾನ ಇವೆರಡೂ ಪರಸ್ಪರ ಸಂಘರ್ಷಕ್ಕೆ ಇಳಿದಂತೆ ವ್ಯಕ್ತಿಯೊಬ್ಬನನ್ನು ಕಾಡುವ ಕಥೆ. ಸಾರ್ವಜನಿಕವಾಗಿ ವ್ಯಕ್ತಿಯೊಬ್ಬ ಗುರುವೋ ನಾಯಕನೋ ಇನ್ನೇನೋ ಆಗಿ ಗೌರವದ ಸ್ಥಾನದಲ್ಲಿ ಗುರುತಿಸಲ್ಪಟ್ಟಾಗ ತನ್ನ ವಯಕ್ತಿಕ ಆಸೆ, ಆಸಕ್ತಿಗಳಿಂದ ಅನಿವಾರ್ಯವಾಗಿ ದೂರವಾಗುತ್ತ, ತನ್ನದಲ್ಲದ ಬದುಕನ್ನು ಬದುಕುತ್ತಾ, ಇವೆಲ್ಲವುಗಳಿಂದ ಪಾರಾಗಲು ಯತ್ನಿಸುತ್ತ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುವವನ ನೋವು ಈ ಕಥೆಯಲ್ಲಿ ಅಡಗಿದೆ. ವಿನಾಕಾರಣ ಹತ್ತಿರವಾಗಿ, ಶುದ್ಧ ಸಂಬಂಧ ಅಶುದ್ಧವಾಗಿ ಪ್ರಚಾರ ಪಡೆದು, ಒಂದು ಅನಿಯಂತ್ರಿತ ಸಂಧರ್ಬದಲ್ಲಿ ಕುತಂತ್ರಕ್ಕೆ ಸಿಲುಕಿ ನಲಗುವ ಜಯಪ್ರಕಾಶನ ಕಥೆ ಪ್ರಸ್ತುತ ಜಗತ್ತಿನ ಒಂದು ತಣ್ಣನೆಯ ಕ್ರೌರ್ಯವನ್ನು ದೃಶ್ಯ ರೂಪದಲ್ಲಿ ತೋರಿದಂತೆ ಓದುಗನ ಮುಂದೆ ಹಿಡಿದಿದೆ.

ಪತನ ಕಥೆಯ ಶೀರ್ಷಿಕೆಯೇ ಹೇಳುವಂತೆ ಪ್ರತಿ ಯೊಂದಕ್ಕೂ ಒಂದು ಕೊನೆ ಯಿದೆ. ಆದರೆ ಈ ಕೊನೆಗೆ ಕಾಲಮಾನವಿಲ್ಲ. ಈಗಲೇ ಬರಬಹುದು, ಮುಂದೆಂದೋ ಬರಬಹದು. ಬರುವುದು ಖಚಿತ. ಈ ಕಥೆಯಲ್ಲಿ ನಾಯಕನ ಪುರುಷತ್ವದ ಅಹಮಿಕೆ ಪತನ ಆಗುತ್ತಾ, ಈ ಪತನದ ಕಾರಣದಿಂದಾಗಿಯೇ ನಾಯಕ ಬದುಕಿದ್ದು ಸತ್ತಂಗಾಗುತ್ತಾನೆ. ಅಂಥವನ ಪತ್ನಿಯೊಬ್ಬಳ ಮೌನದ ಒಳಗೇ ಅವಳನ್ನು ಕದಡುವ ನೋವನ್ನು ಆ ನೋವಿಂದ ಬಿಡುಗಡೆ ಹೊಂದಲು ಯತ್ನಿಸುತ್ತಾ ಕೊನೆಗೂ ಸೋತು ನಿಂತ ಗಂಡನಿಗೆ ಮತ್ತೆ ಸಂಗಾತಿಯಾಗಿ ನಿಲ್ಲುತ್ತಾಳೆ. ಏನೇ ಇದ್ದರೂ ಕೊನೆಗೆ ಗೆಲ್ಲುವುದು ಪ್ರಕೃತಿ. ಎಂಬುದನ್ನು ಕಥೆ ಮಾರ್ಮಿಕವಾಗಿ ಹೇಳುತ್ತದೆ.

ದಹನ ಕಥೆ ಎರಡು ಜೀವಗಳ ಜೀವನವನ್ನು ಹೇಳುತ್ತ ಒಂದೇ ಬಿಂದುವಿನಲ್ಲಿ ಇವರನ್ನು ಸೇರಿಸಿ ಒಂದು ಆಘಾತವನ್ನು ನೀಡುತ್ತದೆ. ಬದುಕಿನ ಅನಿವಾರ್ಯ ಬದಲಾವಣೆಗಳನ್ನು ಈ ಕಥೆಯಲ್ಲಿ ಚಂದ ಚಿತ್ರಿಸಿದ್ದಾರೆ. ಕೊನೆಯ ತನಕ ಕುತೂಹಲ ಉಳಿಸಿಕೊಂಡು ಸಾಗುವ ಈ ಕಥೆ ಕೊನೆಯಲ್ಲಿ ಊಹಿಸದ ತಿರುವು ಪಡೆದುಕೊಳ್ಳುತ್ತದೆ. ಸಾವು ಬಂದೆರಗದೇ ಆತ್ಮಹತ್ಯೆ ಕೂಡ ಅಸಾಧ್ಯ ಎನ್ನುತ್ತದೆ ಕಥೆ.

ಜನಾರ್ದನ ಕಥೆ ಇವತ್ತಿನ ಕಥೆ. ಕೊರೋನ ಕಾಲದ ಸಂದಿಗ್ಧವನ್ನು ಕಥೆ ತೋರಿಸಿದೆ. ಈ ಜನಾರ್ದನ ಭಟ್ಟರು ಕಥೆ ಮುಗಿದ ಮೇಲೂ ಕಾಡುತ್ತಾರೆ. ಬೆಸುಗೆ ಭಿನ್ನ ರೀತಿಯ ಪ್ರೇಮ ಕಥೆ. ಮದುವೆ ಬೇಡ ಎಂದು ಕುಳಿತ ಹುಡುಗಿಯ ಮನದಲ್ಲಿ ಪ್ರೀತಿ ಯಾಕೆ ಹುಟ್ಟುತ್ತೆ? ಮೇಲೆ ಏನಾಗುತ್ತೆ? ತಿಳಿಯಲು ಕಥೆ ಓದಬೇಕು. ಸಣ್ಣ ಸಿನಿಮಾದಂತೆ ರಂಜಿಸುವ ಕಥೆ ಇದು.

ನಾನೊಂದು ಬಗೆದರೆ ಈ ಸಂಕಲನದಲ್ಲಿರುವ ನೀಳ್ಗತೆ. ಮಲೆನಾಡು, ಮಲೆನಾಡಿನ ನೆರೆ, ಬದುಕು ಬವಣೆ ಎಲ್ಲವನ್ನೂ ಪರಿಚಯಿಸಿ ಅಲ್ಲಿನ ಭಾಷೆಯೂ ಇಲ್ಲಿ ಬಳಕೆ ಆಗಿದ್ದು ವಿಶೇಷ ಮೆರುಗು. ಒಂದು ಸಂಬಂಧವನ್ನು ಸೂಕ್ಷ್ಮವಾಗಿ ಹೇಳುವ ಈ ಕಥೆ ವಿಭಿನ್ನವಾಗಿ ಹೆಣೆದ ಕಥೆ. ಎರಡು ನಾಯಕರು ಇರುವ ಈ ಕಥೆಯಲ್ಲಿ ಮೊದಲಾರ್ಧ ಒಬ್ಬನೂ ದ್ವಿತೀಯಾರ್ಧ ಇನ್ನೊಬ್ಬನೂ ತನ್ನ ಕಥೆಯನ್ನು ಹೇಳುವ ತಂತ್ರ ಚೆನ್ನಾಗಿದೆ. ಈ ತಂತ್ರದ ರಹಸ್ಯ ಬಯಲಾಗುವುದೇ ಕಥೆಯ ಕೊನೆಯಲ್ಲಿ. ಇದೊಂದು ಅದ್ಭುತ ಕಥೆ.

ಪರಿವರ್ತನೆ ಬದಲಾವಣೆ ಜಗದ ನಿಯಮ ಎಂಬ ಸಾಲಿನಿಂದ ಶುರುವಾಗಿ ಹೆಗಡೇರಿಗೆ ತಾವು ಅರ್ಥೈಸಿದ ಪ್ರೀತಿಯೇ ಬೇರೆ, ನಿಜದ ಪ್ರೀತಿಯೇ ಬೇರೆ ಎಂಬುದಕ್ಕೆ ತಮ್ಮ ಮನೆಯಲ್ಲೇ ಉದಾಹರಣೆ ಸಿಕ್ಕಾಗ ಆಶ್ಚರ್ಯದ ಜೊತೆಗೆ ಮುಂದೇನು ಎಂಬ ಜಿಜ್ಞಾಸೆಗೆ ಬಿದ್ದು, ತಾವೇ ಪರಿಹಾರ ಕಂಡು ಕೊಳ್ಳುತ್ತಾರೆ. ಅಪ್ಪಟ ಪ್ರೇಮ ಕಾಮವನ್ನೂ ಮೀರಿದ್ದು ಎನ್ನುವುದನ್ನು ಕಥೆ ಮನದಟ್ಟು ಮಾಡುತ್ತದೆ.

ಎಲ್ಲ ಕಥೆಗಳನ್ನು ಓದಿಯೇ ಅನುಭವಿಸ ಬೇಕು. ಶೈಲಿ, ತಂತ್ರ, ಭಾಷೆ, ಕೆಲವು ಸೂಕ್ಷ್ಮ ಸನ್ನಿವೇಶಗಳಲ್ಲಿ ಜಾಣತನ, ನಿರ್ವಹಣೆ, ನಿರೂಪಣೆ ಎಲ್ಲವೂ ಕಥೆಗಾರರ ಯಶಸ್ಸು. ಪ್ರತಿ ಕಥೆಯಲ್ಲೂ ಊಹಿಸದ ತಿರುವುಗಳು ಇರುವುದು ಇನ್ನೊಂದು ಗರಿ. ಕಥೆಗಳ ಒಳಗೆ ಅಜಿತ್ ಅವರು ಬದುಕಿನ ಹರಿವಿನ ಹಲವು ದಾರಿಗಳನ್ನು ಪರಿಚಯಿಸಿದ್ದಾರೆ. ಅನಗತ್ಯವಾಗಿ ಏನನ್ನೂ ಸೇರಿಸದೆ, ಕತೆಗೆ ಅಂತ್ಯ ಕೊಟ್ಟು, ಓದುಗನ ಮನದಲ್ಲಿ ಉಳಿಯುವಂತೆ ಮಾಡಿದ್ದಾರೆ.

ಮ.ವ.ಮ.

ಮೌನದ ವಿಶ್ಲೇಷಣೆ

ಜೀವನದಲ್ಲಿ ನಿರಂತರ ಎಂದರೆ ಬದಲಾವಣೆ. ಆದರೆ ಮನುಷ್ಯನ ಮನಸ್ಸು ವಿಚಿತ್ರ. ಅದು ವಿಪರೀತ ಘಾಸಿಗೊಳ್ಳುವುದೇ ಬದಲಾವಣೆಗೆ.

ನೀರಿನಲ್ಲಿ ಉಪ್ಪು, ಹಾಲಿನಲ್ಲಿ ಸಕ್ಕರೆ ಕರಗುವಂತಹ ಬದಲಾವಣೆ ನಮ್ಮ ನಿತ್ಯ ಜೀವನದ ಪ್ರಾಕೃತಿಕ ನಿಯಮ. ಅದನ್ನು ನಾವು ಗಮನಿಸುವುದೇ ಇಲ್ಲ. ಒಂದೋ ನಮ್ಮದೇ ಭ್ರಮಾಲೋಕದಲ್ಲಿ ಭವಿಷ್ಯವನ್ನು ಯೋಚಿಸುತ್ತಿರುತ್ತೇವೆ, ಅಥವಾ ಇದ್ದುದ್ದರಲ್ಲೇ ತೃಪ್ತಿಯಾಗಿ, ಯಾವುದೇ ಬದಲಾವಣೆಯನ್ನು ಬಯಸದೆ ಇರುತ್ತೇವೆ.

ತೊಂದರೆ ಇರುವುದೇ ಇಲ್ಲಿ. ಯಾವುದಾದರೂ ಸಮಯದಲ್ಲಿ, ನಮ್ಮ ಭ್ರಮೆಯಾಗಿರಲಿ, ಅಥವಾ ನಾವು ನಿರೀಕ್ಷಿಸದ ಬದಲಾವಣೆಯಾಗಲೀ, ಧುತ್ತನೆ ನಮ್ಮೆದುರು ಬಂದು ನಿಂತರೆ, ನಾವು ಗಲಿಬಿಲಿಗೊಳ್ಳುತ್ತೇವೆ. ವ್ಯಘ್ರರಾಗುತ್ತೇವೆ, ಕುಗ್ಗಿ ಹೋಗುತ್ತೇವೆ ಅಥವಾ ಮೌನಕ್ಕೆ ಶರಣಾಗಿ, ವೇದಾಂತಿಗಳಾಗುತ್ತೇವೆ. ಹಾಗಾಗಿ, ಇಂಗ್ಲಿಷ್ ನಲ್ಲಿ ಒಂದು ಮಾತಿದೆ:

`Circumstances alter the cases, as broken noses alter the faces’

ಈ ಕ್ಷಣಗಳೇ ಸಣ್ಣ ಕಥೆಗಳು ಹುಟ್ಟುವ ಸಮಯ. ಈ ಕ್ಷಣಗಳನ್ನು ಗಮನಿಸುವ ತಾಳ್ಮೆ ನಮಗಿರಬೇಕು ಅಷ್ಟೆ. ಇಲ್ಲದಿದ್ದರೆ, ಎಷ್ಟೋ ಅದ್ಭುತ ಕ್ಷಣಗಳನ್ನು ನಿಷ್ಕೃಷ್ಟವಾಗಿ ಅರ್ಥೈಸಿಕೊಂಡು, ನಿರ್ಲಕ್ಷಿಸುತ್ತೇವೆ. ಈ ಕ್ಷಣಗಳಲ್ಲಿ ಹುಟ್ಟುವ ಮಾನಸಿಕ ಕ್ಷೋಭೆಗಳು, ತತ್ವಜ್ಞಾನ, ತಿರುವುಗಳು, ತೆಗೆದುಕೊಳ್ಳುವ ನಿರ್ಧಾರಗಳು, ಸಂಬಂಧಿಸಿದ ವ್ಯಕ್ತಿಯಲ್ಲದೆ, ಅವನ ಪರಿಸರದಲ್ಲೂ ಬದಲಾವಣೆ ತರುತ್ತದೆ.

ಉದಾಹಾರಣೆಗೆ, ಚಿಕ್ಕ ಮಗುವಿಗೆ ಅಪ್ಪನೇ ಹೀರೋ ಮತ್ತು ಅಪ್ಪ ಹೇಳಿದ್ದೆಲ್ಲ ಸತ್ಯ. ಶಾಲೆಗೆ ಹೋಗಲು ಶುರು ಮಾಡಿದ ಮೇಲೆ, ಮೇಷ್ಟ್ರು ಹೇಳಿದ ಮಾತು ಕೇಳಿ, ಮೊದಲ ಬಾರಿಗೆ ಅಪ್ಪನ ಮಾತಿನ ಮೇಲೆ ಸಂಶಯ ಶುರುವಾಗುತ್ತದೆ. ಮುಂದೆ, ಮೀಸೆ ಚಿಗುರುವ ಹೊತ್ತಿಗೆ, ಅಪ್ಪನ ಮಾತು ಒಣ ವೇದಾಂತದಂತೆಯೂ, ಜೀವನದ ಸತ್ಯಕ್ಕೆ ದೂರವಾದಂತೆಯೂ ಅನಿಸಲು ಶುರುವಾಗುತ್ತದೆ.

ಮತ್ತೆ ಅಪ್ಪನ ನೆನಪಾಗುವುದು ಮದುವೆಯಾಗಿ, ಮಕ್ಕಳಾಗಿ, ಅವು ಶಾಲೆಗೆ ಹೋಗಲು ಶುರುವಾದ ಮೇಲೆ. ಮಕ್ಕಳು ತನ್ನನ್ನು ಧಿಕ್ಕರಿಸಲು ಆರಂಭಿಸಿದಾಗ, ಅಪ್ಪನಾಡುತ್ತಿದ್ದ ಮಾತುಗಳು ಎಷ್ಟು ಸತ್ಯ ಎನ್ನುವ ಅರಿವಾಗಲು ಶುರುವಾಗುತ್ತದೆ. ಕೊನೆಗೆ, ಮಕ್ಕಳು ತನ್ನನ್ನು ನಿರ್ಲಕ್ಷಿಸಿದಾಗ, ಈಗ ಅಪ್ಪನಿದ್ದಿದ್ದರೆ, ಅವನನ್ನು ಚೆನ್ನಾಗಿ ನೋಡಿಕೊಳ್ಳಬಹುದಿತ್ತು ಎಂದು ಅನ್ನಿಸಲು ಶುರುವಾಗುತ್ತದೆ.

ಬದಲಾವಣೆಗಳು, ಮಾನಸಿಕ ತುಮುಲಗಳು ಮತ್ತು ತಿರುವುಗಳ ಫಲಿತಾಂಶಕ್ಕೆ ಹಲವು ಮುಖಗಳಿವೆ. ಅವುಗಳಲ್ಲಿ ಮೌನವೂ ಒಂದು. ಕೆಲವು ಕಥೆಗಳನ್ನು ಓದುವಾಗ ಓದುಗ ಮೌನವಾದಾರೆ, ಇನ್ನು ಕಥೆಗಳಲ್ಲಿ ಪಾತ್ರಗಳೇ ಮೌನವಾಗಿರುತ್ತವೆ. ಪಾತ್ರಗಳು ಮೌನವಾದಾಗ ಓದುಗನ ಮನಸ್ಸು ಕಥೆಗಾರನಾಗುತ್ತಾನೆ. ಆ ಮೌನಕ್ಕೆ ತನ್ನದೇ ಆದ ಅರ್ಥಗಳನ್ನು ಹುಡುಕಲು ಆರಂಭಿಸುತ್ತಾನೆ.

ಈ ಮೌನಗಳ ಅನೇಕ ಮುಖಗಳನ್ನು ನಾನು ಅನುಭವಿಸಿದ್ದು ಡಾ ಅಜಿತ್ ಹರೀಶಿಯವರ `ಮೂಚಿಮ್ಮ’ ಸಂಕಲನ ಓದಿದಾಗ. ಹತ್ತು ಸಣ್ಣ ಕಥೆಗಳಲ್ಲಿ ನೂರೆಂಟು ಮೌನಗಳು ಅಡಗಿವೆ. ಡಾ ಹರೀಶಿಯವರ ವೈಶಿಷ್ಟ್ಯವೆಂದರೆ, ಪಾತ್ರಗಳ ಮಾತಿನಲ್ಲೇ ಮೌನಗಳು ಅಡಗಿರುವುದು.
ಮಲೆನಾಡಿನ, ಉತ್ತರ ಕನ್ನಡ ಜಿಲ್ಲೆಯ ಜೀವನದ ಮಧ್ಯೆ ಅಡಕವಾಗಿರುವ ಈ ಕಥೆಗಳ ಎಷ್ಟೊ ಪಾತ್ರಗಳ ಮಾತಿನಲ್ಲೇ ಅವ್ಯಕ್ತ ಮೌನಗಳಿವೆ. ಓದುಗನ ಕಲ್ಪನೆಗಳಿಗೆ ವಿಫುಲವಾದ ಅವಕಾಶಗಳಿವೆ.

ತನ್ನ ಕನಸಿಗಾಗಿ ವ್ಯಕ್ತಿತ್ವ ಪರಕಾಯ ಪ್ರವೇಶ ಮಾಡುವ ನಟ, ಕನಸು ಕೈಗೆಟುಗಿದಾಗ ಮೂಡುವ ವೈರಾಗ್ಯದ ಕಾರಣ ಹುಡುಕುವ ಕೆಲಸ ಓದುಗನಾದಾಗಿದೆ. ಪ್ರೀತಿಯ ಮೂಚಿಮ್ಮ ಬಾಂದುಕಲ್ಲು ಅಗೆಸಿದ ರಹಸ್ಯ ತಿಳಿದ ರವೀಶನ ಹುಳಿ ನಗೆ ಚೆಲ್ಲಿ, `ಚಿಕ್ಕಮ್ಮನಲ್ಲೇ ಅಮ್ಮ ಸೇರಿಕೊಂಡಿದ್ದಾಳೆ, ತಾಯಿ ಪ್ರೀತಿಗೆ ಭೇದವಿಲ್ಲ,’ ಎಂದುಕೊಳ್ಳುವ ಹೊಸ ತತ್ವಜ್ಞಾನದ ಹಿಂದೆ ಮೌನ ಕಾಡುತ್ತದೆ.

ಮೂರ್ನಾಲ್ಕು ಕಥೆಗಳಂತೂ ಬಹಳಷ್ಟು ಕಾಡಿದವು. ಪತನ ಕಥೆಯು, ಜೀವನದಲ್ಲಿ ಉತ್ತುಂಗ ಕಂಡ ಎಷ್ಟೋ ಜನರ ಆತ್ಮಕಥೆಯಂತೆ ತೋರುತ್ತದೆ. ಆ ಕಥೆ ಓದುತ್ತಾ ಒಂದು ಘಟನೆ ನೆನಪಾಯಿತು. ಇತ್ತೀಚೆಗೆ, ನನ್ನ ಸ್ವಾರ್ಥಕ್ಕಾಗಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರಿಗೆ ಸ್ವಲ್ಪ ಕಾಟ ಕೊಟ್ಟಿದ್ದೆ. ಮಾತಿನ ಮಧ್ಯೆ ಅವರು ತಾವು ಮೂರನೇ ಪುಸ್ತಕ ಬರೆಯುತ್ತಿರುವುದಾಗಿ ಹೇಳಿದರು. ಆ ವಿಷಯವನ್ನು ಜೋಗಿಯವರ ಬಳಿ ಪ್ರಸ್ತಾವಿಸುತ್ತಾ, `ನೋಡಿ, ತೇಜಸ್ವಿಯವರು ಇದ್ದಾಗ ಮ್ಯಾಡಂ ಏನೂ ಬರೆಯಲಿಲ್ಲ. ಈಗ ಮೂರನೇ ಪುಸ್ತಕ ಬರೆಯುತ್ತಿದ್ದಾರೆ. ಅವರು ಆಗಲೂ ಬಹಳ ತಿಳುವಳಿಕೆಯುಳ್ಳವರಾಗಿದ್ದರು. ವಿಚಿತ್ರ ಎನ್ನಿಸುತ್ತದೆ,’ ಎಂದೆ.

`ಕೆಲವೊಮ್ಮೆ ಹಾಗಾಗುತ್ತದೆ. ಮನೆಯಲ್ಲಿ ಒಂದು ಪ್ರತಿಭೆ ಬೆಳಗುತ್ತಿದ್ದರೆ, ಇನ್ನೊಬ್ಬರಿಗೆ ತಮ್ಮ ಪ್ರತಿಭೆ ಮರೆತು ಹೋಗಿರುತ್ತದೆ. ಎಷ್ಟೋ ಜನ ಯಶಸ್ವಿ ಜನರ ಪತ್ನಿಯರು, ಬರೀ ಪತ್ನಿಯರಾಗಿಯೇ ಉಳಿದಿರುತ್ತಾರೆ. ಅವರಿಗೆ ತಮ್ಮ ಪ್ರತಿಭೆಯ ಬಗ್ಗೆ ಯಾವುದೇ ಆಲೋಚನೆಗಳಿರುವುದಿಲ್ಲ. ಈಗ ರಾಜೇಶ್ವರಿ ಮ್ಯಾಡಂ ಒಬ್ಬರೇ ಇರುವುದರಿಂದ, ಅವರ ಪ್ರತಿಭೆಯೂ ಹೊರಗೆ ಬರುತ್ತಿದೆ,’ ಎಂದು ಜೋಗಿ ಹೇಳಿದರು.

ಆಗ ಅದು ಸರಿ ಅಂತ ಅನ್ನಿಸಿದರೂ, ಕುವೆಂಪು ಬದುಕಿದ್ದಾಗಲೇ ತೇಜಸ್ವಿಯವರ ಪ್ರತಿಭೆ ಪ್ರಕಾಶಮಾನವಾಗಿಯೇ ಹೊರ ಬಂದಿದ್ದು ನೆನಪಾಯಿತು. ಅದರ ಜೊತೆ, ಜೋಗಿ ಹಿಂದೊಮ್ಮೆ ಬರೆದಿದ್ದ ಸಾಲು ನೆನಪಾಯಿತು. `ಕುವೆಂಪುರವರ ಅತ್ಯುತ್ತಮ ಕೃತಿ ತೇಜಸ್ವಿ… ಬೇಂದ್ರೆಯವರ ಅತಿ ಕೆಟ್ಟ ಕೃತಿ ವಾಮನ ಬೇಂದ್ರೆ.’

ಅದಕ್ಕೆ ಸರಿಯಾಗಿ, ಒಮ್ಮೆ ವಾಮನ ಬೇಂದ್ರೆಯವರು, `ಆಲದ ಮರದ ಕೆಳಗೆ ಬೆಳೆಯುವ ಕಷ್ಟ ಬಯಲಲ್ಲಿ ನಿಂತವರಿಗೆ ಗೊತ್ತಾಗುವುದಿಲ್ಲ,’ ಎಂದಿದ್ದರು. ಹಾಗಾದರೆ, ಕುವೆಂಪು ಆಲದ ಮರವಲ್ಲವೇ? ಎಂದೂ ಯೋಚಿಸಿದ್ದೆ. ನಿಧಾನವಾಗಿ ಅರ್ಥವಾಯಿತು. ತೇಜಸ್ವಿ ಆಲದ ಮರದ ಕೆಳಗೆ ಕೂರಲೂ ಇಲ್ಲ. ಅದರ ಸುತ್ತ ಸೈಕಲ್ ಹೊಡೆದು, ತಮ್ಮ ಪಾಡಿಗೆ ಊರು ಸುತ್ತಲು ಹೋಗಿದ್ದರು. ಭಾವನಾತ್ಮಕ ಕುವೆಂಪುರವರಿಗೂ, ಪ್ರಾಯೋಗಿಕ ತೇಜಸ್ವಿಗೂ, ಅಜಗಜಾಂತರ ವ್ಯತ್ಯಾಸವಿತ್ತು.

ಅಂತಹ ವ್ಯತ್ಯಾಸ ಪತನ ಕಥೆಯಲ್ಲಿ ಹೌದೋ, ಅಲ್ಲವೋ ಎನ್ನುವಂತೆ ಇಣುಕಿ ನೋಡಿ ನಮ್ಮನ್ನು ಅಣಕಿಸುತ್ತದೆ.

ದಹನ, ಜನಾರ್ಧನ, ತಾನೊಂದು ಬಗೆದರೆ ಮತ್ತು ಪರಿವರ್ತನೆ ಕಥೆಗಳು ಭಾವನಾತ್ಮಕವಾಗಿಯೂ ಕಾಡುತ್ತವೆ. ಒಂದರೆಡು ಸಾಧಾರಣ ಕಥೆಗಳು ಸಹ ಪುಸ್ತಕದಲ್ಲಿ ಸ್ಥಾನ ಪಡೆದಿವೆ ಎಂದರೆ ತಪ್ಪಾಗಲಾರದು.

ಎಲ್ಲಕ್ಕಿಂತ ಹೆಚ್ಚಾಗಿ, ಮಲೆನಾಡು ಪ್ರದೇಶದ ಅನುಭವ, ಅದರಲ್ಲೂ ಹವ್ಯಕ ಭಾಷೆ ಮತ್ತು ಅಡುಗೆಯ ವಿವರಗಳು, ಒಮ್ಮೆ ಯಾಣಕ್ಕೆ ಹೋದಾಗ, ನನಗೆ ಪರಿಚಯವಿಲ್ಲದಿದ್ದರೂ ನರಸಿಂಹ ಭಟ್ಟರ ಮನೆಯಲ್ಲಿ ಉಳಿದ ನೆನಪಾಯಿತು. ಆ ಅನುಭವಕ್ಕೆ ವಿಜಯ್ ಜೋಶಿಗೆ ಧನ್ಯವಾದ ಹೇಳಬೇಕಷ್ಟೆ.

ಮಾಕೋನಹಳ್ಳಿ ವಿನಯ್ ಮಾಧವ