ಮೌನದ ವಿಶ್ಲೇಷಣೆ
ಜೀವನದಲ್ಲಿ ನಿರಂತರ ಎಂದರೆ ಬದಲಾವಣೆ. ಆದರೆ ಮನುಷ್ಯನ ಮನಸ್ಸು ವಿಚಿತ್ರ. ಅದು ವಿಪರೀತ ಘಾಸಿಗೊಳ್ಳುವುದೇ ಬದಲಾವಣೆಗೆ.
ನೀರಿನಲ್ಲಿ ಉಪ್ಪು, ಹಾಲಿನಲ್ಲಿ ಸಕ್ಕರೆ ಕರಗುವಂತಹ ಬದಲಾವಣೆ ನಮ್ಮ ನಿತ್ಯ ಜೀವನದ ಪ್ರಾಕೃತಿಕ ನಿಯಮ. ಅದನ್ನು ನಾವು ಗಮನಿಸುವುದೇ ಇಲ್ಲ. ಒಂದೋ ನಮ್ಮದೇ ಭ್ರಮಾಲೋಕದಲ್ಲಿ ಭವಿಷ್ಯವನ್ನು ಯೋಚಿಸುತ್ತಿರುತ್ತೇವೆ, ಅಥವಾ ಇದ್ದುದ್ದರಲ್ಲೇ ತೃಪ್ತಿಯಾಗಿ, ಯಾವುದೇ ಬದಲಾವಣೆಯನ್ನು ಬಯಸದೆ ಇರುತ್ತೇವೆ.
ತೊಂದರೆ ಇರುವುದೇ ಇಲ್ಲಿ. ಯಾವುದಾದರೂ ಸಮಯದಲ್ಲಿ, ನಮ್ಮ ಭ್ರಮೆಯಾಗಿರಲಿ, ಅಥವಾ ನಾವು ನಿರೀಕ್ಷಿಸದ ಬದಲಾವಣೆಯಾಗಲೀ, ಧುತ್ತನೆ ನಮ್ಮೆದುರು ಬಂದು ನಿಂತರೆ, ನಾವು ಗಲಿಬಿಲಿಗೊಳ್ಳುತ್ತೇವೆ. ವ್ಯಘ್ರರಾಗುತ್ತೇವೆ, ಕುಗ್ಗಿ ಹೋಗುತ್ತೇವೆ ಅಥವಾ ಮೌನಕ್ಕೆ ಶರಣಾಗಿ, ವೇದಾಂತಿಗಳಾಗುತ್ತೇವೆ. ಹಾಗಾಗಿ, ಇಂಗ್ಲಿಷ್ ನಲ್ಲಿ ಒಂದು ಮಾತಿದೆ:
`Circumstances alter the cases, as broken noses alter the faces’
ಈ ಕ್ಷಣಗಳೇ ಸಣ್ಣ ಕಥೆಗಳು ಹುಟ್ಟುವ ಸಮಯ. ಈ ಕ್ಷಣಗಳನ್ನು ಗಮನಿಸುವ ತಾಳ್ಮೆ ನಮಗಿರಬೇಕು ಅಷ್ಟೆ. ಇಲ್ಲದಿದ್ದರೆ, ಎಷ್ಟೋ ಅದ್ಭುತ ಕ್ಷಣಗಳನ್ನು ನಿಷ್ಕೃಷ್ಟವಾಗಿ ಅರ್ಥೈಸಿಕೊಂಡು, ನಿರ್ಲಕ್ಷಿಸುತ್ತೇವೆ. ಈ ಕ್ಷಣಗಳಲ್ಲಿ ಹುಟ್ಟುವ ಮಾನಸಿಕ ಕ್ಷೋಭೆಗಳು, ತತ್ವಜ್ಞಾನ, ತಿರುವುಗಳು, ತೆಗೆದುಕೊಳ್ಳುವ ನಿರ್ಧಾರಗಳು, ಸಂಬಂಧಿಸಿದ ವ್ಯಕ್ತಿಯಲ್ಲದೆ, ಅವನ ಪರಿಸರದಲ್ಲೂ ಬದಲಾವಣೆ ತರುತ್ತದೆ.
ಉದಾಹಾರಣೆಗೆ, ಚಿಕ್ಕ ಮಗುವಿಗೆ ಅಪ್ಪನೇ ಹೀರೋ ಮತ್ತು ಅಪ್ಪ ಹೇಳಿದ್ದೆಲ್ಲ ಸತ್ಯ. ಶಾಲೆಗೆ ಹೋಗಲು ಶುರು ಮಾಡಿದ ಮೇಲೆ, ಮೇಷ್ಟ್ರು ಹೇಳಿದ ಮಾತು ಕೇಳಿ, ಮೊದಲ ಬಾರಿಗೆ ಅಪ್ಪನ ಮಾತಿನ ಮೇಲೆ ಸಂಶಯ ಶುರುವಾಗುತ್ತದೆ. ಮುಂದೆ, ಮೀಸೆ ಚಿಗುರುವ ಹೊತ್ತಿಗೆ, ಅಪ್ಪನ ಮಾತು ಒಣ ವೇದಾಂತದಂತೆಯೂ, ಜೀವನದ ಸತ್ಯಕ್ಕೆ ದೂರವಾದಂತೆಯೂ ಅನಿಸಲು ಶುರುವಾಗುತ್ತದೆ.
ಮತ್ತೆ ಅಪ್ಪನ ನೆನಪಾಗುವುದು ಮದುವೆಯಾಗಿ, ಮಕ್ಕಳಾಗಿ, ಅವು ಶಾಲೆಗೆ ಹೋಗಲು ಶುರುವಾದ ಮೇಲೆ. ಮಕ್ಕಳು ತನ್ನನ್ನು ಧಿಕ್ಕರಿಸಲು ಆರಂಭಿಸಿದಾಗ, ಅಪ್ಪನಾಡುತ್ತಿದ್ದ ಮಾತುಗಳು ಎಷ್ಟು ಸತ್ಯ ಎನ್ನುವ ಅರಿವಾಗಲು ಶುರುವಾಗುತ್ತದೆ. ಕೊನೆಗೆ, ಮಕ್ಕಳು ತನ್ನನ್ನು ನಿರ್ಲಕ್ಷಿಸಿದಾಗ, ಈಗ ಅಪ್ಪನಿದ್ದಿದ್ದರೆ, ಅವನನ್ನು ಚೆನ್ನಾಗಿ ನೋಡಿಕೊಳ್ಳಬಹುದಿತ್ತು ಎಂದು ಅನ್ನಿಸಲು ಶುರುವಾಗುತ್ತದೆ.
ಬದಲಾವಣೆಗಳು, ಮಾನಸಿಕ ತುಮುಲಗಳು ಮತ್ತು ತಿರುವುಗಳ ಫಲಿತಾಂಶಕ್ಕೆ ಹಲವು ಮುಖಗಳಿವೆ. ಅವುಗಳಲ್ಲಿ ಮೌನವೂ ಒಂದು. ಕೆಲವು ಕಥೆಗಳನ್ನು ಓದುವಾಗ ಓದುಗ ಮೌನವಾದಾರೆ, ಇನ್ನು ಕಥೆಗಳಲ್ಲಿ ಪಾತ್ರಗಳೇ ಮೌನವಾಗಿರುತ್ತವೆ. ಪಾತ್ರಗಳು ಮೌನವಾದಾಗ ಓದುಗನ ಮನಸ್ಸು ಕಥೆಗಾರನಾಗುತ್ತಾನೆ. ಆ ಮೌನಕ್ಕೆ ತನ್ನದೇ ಆದ ಅರ್ಥಗಳನ್ನು ಹುಡುಕಲು ಆರಂಭಿಸುತ್ತಾನೆ.
ಈ ಮೌನಗಳ ಅನೇಕ ಮುಖಗಳನ್ನು ನಾನು ಅನುಭವಿಸಿದ್ದು ಡಾ ಅಜಿತ್ ಹರೀಶಿಯವರ `ಮೂಚಿಮ್ಮ’ ಸಂಕಲನ ಓದಿದಾಗ. ಹತ್ತು ಸಣ್ಣ ಕಥೆಗಳಲ್ಲಿ ನೂರೆಂಟು ಮೌನಗಳು ಅಡಗಿವೆ. ಡಾ ಹರೀಶಿಯವರ ವೈಶಿಷ್ಟ್ಯವೆಂದರೆ, ಪಾತ್ರಗಳ ಮಾತಿನಲ್ಲೇ ಮೌನಗಳು ಅಡಗಿರುವುದು.
ಮಲೆನಾಡಿನ, ಉತ್ತರ ಕನ್ನಡ ಜಿಲ್ಲೆಯ ಜೀವನದ ಮಧ್ಯೆ ಅಡಕವಾಗಿರುವ ಈ ಕಥೆಗಳ ಎಷ್ಟೊ ಪಾತ್ರಗಳ ಮಾತಿನಲ್ಲೇ ಅವ್ಯಕ್ತ ಮೌನಗಳಿವೆ. ಓದುಗನ ಕಲ್ಪನೆಗಳಿಗೆ ವಿಫುಲವಾದ ಅವಕಾಶಗಳಿವೆ.
ತನ್ನ ಕನಸಿಗಾಗಿ ವ್ಯಕ್ತಿತ್ವ ಪರಕಾಯ ಪ್ರವೇಶ ಮಾಡುವ ನಟ, ಕನಸು ಕೈಗೆಟುಗಿದಾಗ ಮೂಡುವ ವೈರಾಗ್ಯದ ಕಾರಣ ಹುಡುಕುವ ಕೆಲಸ ಓದುಗನಾದಾಗಿದೆ. ಪ್ರೀತಿಯ ಮೂಚಿಮ್ಮ ಬಾಂದುಕಲ್ಲು ಅಗೆಸಿದ ರಹಸ್ಯ ತಿಳಿದ ರವೀಶನ ಹುಳಿ ನಗೆ ಚೆಲ್ಲಿ, `ಚಿಕ್ಕಮ್ಮನಲ್ಲೇ ಅಮ್ಮ ಸೇರಿಕೊಂಡಿದ್ದಾಳೆ, ತಾಯಿ ಪ್ರೀತಿಗೆ ಭೇದವಿಲ್ಲ,’ ಎಂದುಕೊಳ್ಳುವ ಹೊಸ ತತ್ವಜ್ಞಾನದ ಹಿಂದೆ ಮೌನ ಕಾಡುತ್ತದೆ.
ಮೂರ್ನಾಲ್ಕು ಕಥೆಗಳಂತೂ ಬಹಳಷ್ಟು ಕಾಡಿದವು. ಪತನ ಕಥೆಯು, ಜೀವನದಲ್ಲಿ ಉತ್ತುಂಗ ಕಂಡ ಎಷ್ಟೋ ಜನರ ಆತ್ಮಕಥೆಯಂತೆ ತೋರುತ್ತದೆ. ಆ ಕಥೆ ಓದುತ್ತಾ ಒಂದು ಘಟನೆ ನೆನಪಾಯಿತು. ಇತ್ತೀಚೆಗೆ, ನನ್ನ ಸ್ವಾರ್ಥಕ್ಕಾಗಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರಿಗೆ ಸ್ವಲ್ಪ ಕಾಟ ಕೊಟ್ಟಿದ್ದೆ. ಮಾತಿನ ಮಧ್ಯೆ ಅವರು ತಾವು ಮೂರನೇ ಪುಸ್ತಕ ಬರೆಯುತ್ತಿರುವುದಾಗಿ ಹೇಳಿದರು. ಆ ವಿಷಯವನ್ನು ಜೋಗಿಯವರ ಬಳಿ ಪ್ರಸ್ತಾವಿಸುತ್ತಾ, `ನೋಡಿ, ತೇಜಸ್ವಿಯವರು ಇದ್ದಾಗ ಮ್ಯಾಡಂ ಏನೂ ಬರೆಯಲಿಲ್ಲ. ಈಗ ಮೂರನೇ ಪುಸ್ತಕ ಬರೆಯುತ್ತಿದ್ದಾರೆ. ಅವರು ಆಗಲೂ ಬಹಳ ತಿಳುವಳಿಕೆಯುಳ್ಳವರಾಗಿದ್ದರು. ವಿಚಿತ್ರ ಎನ್ನಿಸುತ್ತದೆ,’ ಎಂದೆ.
`ಕೆಲವೊಮ್ಮೆ ಹಾಗಾಗುತ್ತದೆ. ಮನೆಯಲ್ಲಿ ಒಂದು ಪ್ರತಿಭೆ ಬೆಳಗುತ್ತಿದ್ದರೆ, ಇನ್ನೊಬ್ಬರಿಗೆ ತಮ್ಮ ಪ್ರತಿಭೆ ಮರೆತು ಹೋಗಿರುತ್ತದೆ. ಎಷ್ಟೋ ಜನ ಯಶಸ್ವಿ ಜನರ ಪತ್ನಿಯರು, ಬರೀ ಪತ್ನಿಯರಾಗಿಯೇ ಉಳಿದಿರುತ್ತಾರೆ. ಅವರಿಗೆ ತಮ್ಮ ಪ್ರತಿಭೆಯ ಬಗ್ಗೆ ಯಾವುದೇ ಆಲೋಚನೆಗಳಿರುವುದಿಲ್ಲ. ಈಗ ರಾಜೇಶ್ವರಿ ಮ್ಯಾಡಂ ಒಬ್ಬರೇ ಇರುವುದರಿಂದ, ಅವರ ಪ್ರತಿಭೆಯೂ ಹೊರಗೆ ಬರುತ್ತಿದೆ,’ ಎಂದು ಜೋಗಿ ಹೇಳಿದರು.
ಆಗ ಅದು ಸರಿ ಅಂತ ಅನ್ನಿಸಿದರೂ, ಕುವೆಂಪು ಬದುಕಿದ್ದಾಗಲೇ ತೇಜಸ್ವಿಯವರ ಪ್ರತಿಭೆ ಪ್ರಕಾಶಮಾನವಾಗಿಯೇ ಹೊರ ಬಂದಿದ್ದು ನೆನಪಾಯಿತು. ಅದರ ಜೊತೆ, ಜೋಗಿ ಹಿಂದೊಮ್ಮೆ ಬರೆದಿದ್ದ ಸಾಲು ನೆನಪಾಯಿತು. `ಕುವೆಂಪುರವರ ಅತ್ಯುತ್ತಮ ಕೃತಿ ತೇಜಸ್ವಿ… ಬೇಂದ್ರೆಯವರ ಅತಿ ಕೆಟ್ಟ ಕೃತಿ ವಾಮನ ಬೇಂದ್ರೆ.’
ಅದಕ್ಕೆ ಸರಿಯಾಗಿ, ಒಮ್ಮೆ ವಾಮನ ಬೇಂದ್ರೆಯವರು, `ಆಲದ ಮರದ ಕೆಳಗೆ ಬೆಳೆಯುವ ಕಷ್ಟ ಬಯಲಲ್ಲಿ ನಿಂತವರಿಗೆ ಗೊತ್ತಾಗುವುದಿಲ್ಲ,’ ಎಂದಿದ್ದರು. ಹಾಗಾದರೆ, ಕುವೆಂಪು ಆಲದ ಮರವಲ್ಲವೇ? ಎಂದೂ ಯೋಚಿಸಿದ್ದೆ. ನಿಧಾನವಾಗಿ ಅರ್ಥವಾಯಿತು. ತೇಜಸ್ವಿ ಆಲದ ಮರದ ಕೆಳಗೆ ಕೂರಲೂ ಇಲ್ಲ. ಅದರ ಸುತ್ತ ಸೈಕಲ್ ಹೊಡೆದು, ತಮ್ಮ ಪಾಡಿಗೆ ಊರು ಸುತ್ತಲು ಹೋಗಿದ್ದರು. ಭಾವನಾತ್ಮಕ ಕುವೆಂಪುರವರಿಗೂ, ಪ್ರಾಯೋಗಿಕ ತೇಜಸ್ವಿಗೂ, ಅಜಗಜಾಂತರ ವ್ಯತ್ಯಾಸವಿತ್ತು.
ಅಂತಹ ವ್ಯತ್ಯಾಸ ಪತನ ಕಥೆಯಲ್ಲಿ ಹೌದೋ, ಅಲ್ಲವೋ ಎನ್ನುವಂತೆ ಇಣುಕಿ ನೋಡಿ ನಮ್ಮನ್ನು ಅಣಕಿಸುತ್ತದೆ.
ದಹನ, ಜನಾರ್ಧನ, ತಾನೊಂದು ಬಗೆದರೆ ಮತ್ತು ಪರಿವರ್ತನೆ ಕಥೆಗಳು ಭಾವನಾತ್ಮಕವಾಗಿಯೂ ಕಾಡುತ್ತವೆ. ಒಂದರೆಡು ಸಾಧಾರಣ ಕಥೆಗಳು ಸಹ ಪುಸ್ತಕದಲ್ಲಿ ಸ್ಥಾನ ಪಡೆದಿವೆ ಎಂದರೆ ತಪ್ಪಾಗಲಾರದು.
ಎಲ್ಲಕ್ಕಿಂತ ಹೆಚ್ಚಾಗಿ, ಮಲೆನಾಡು ಪ್ರದೇಶದ ಅನುಭವ, ಅದರಲ್ಲೂ ಹವ್ಯಕ ಭಾಷೆ ಮತ್ತು ಅಡುಗೆಯ ವಿವರಗಳು, ಒಮ್ಮೆ ಯಾಣಕ್ಕೆ ಹೋದಾಗ, ನನಗೆ ಪರಿಚಯವಿಲ್ಲದಿದ್ದರೂ ನರಸಿಂಹ ಭಟ್ಟರ ಮನೆಯಲ್ಲಿ ಉಳಿದ ನೆನಪಾಯಿತು. ಆ ಅನುಭವಕ್ಕೆ ವಿಜಯ್ ಜೋಶಿಗೆ ಧನ್ಯವಾದ ಹೇಳಬೇಕಷ್ಟೆ.
ಮಾಕೋನಹಳ್ಳಿ ವಿನಯ್ ಮಾಧವ