Click here to Download MyLang App

ಚನ್ನಕೇಶವ,  ಅಕಾಕಿ ಕೋಟು ಮತ್ತು ಇತರ ನಾಟಕಗಳು,  Chennakeshava,  Akakikotu,

ಅಕಾಕಿ ಕೋಟು ಮತ್ತು ಇತರ ನಾಟಕಗಳು (ಇಬುಕ್)

e-book

ಪಬ್ಲಿಶರ್
ಚನ್ನಕೇಶವ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಅಕಾಕಿ ಕೋಟು: ಇದು ರಷ್ಯಾದ ಪ್ರಸಿದ್ಧ ಲೇಖಕ ನಿಕೊಲೊಯ್ ಗೊಗೊಲ್ ನ ಪ್ರಸಿದ್ಧ ನೀಳ್ಗತೆಯಾದ ಓವರ್‌ಕೋಟ್ ಎಂಬ ಕತೆಯ ರಂಗರೂಪ. ಈ ಕತೆಯನ್ನು ರಂಗದ ಮೇಲೆ ತರುವುದು ನಿಜವಾಗಿಯೂ ಸವಾಲಿನ ಕೆಲಸ. ಏಕೆಂದರೆ ಇಲ್ಲಿನ ನಾಟಕೀಯತೆಯೆಲ್ಲವೂ ಮನೋಗತವಾಗಿರುವಂಥವು; ಅಂಥದನ್ನು ಮತ್ತೊಮ್ಮೆ ಚನ್ನಕೇಶವ ಅವರು ಅವರ ಮೇಳದ ಗುಂಪು, ಸಂಗೀತ, ರಂಗ ಸಜ್ಜಿಕೆ ಮೊದಲಾದ ಪರಿಕರಗಳ ಮೂಲಕ ರಂಗರೂಪಕ್ಕೆ ತಂದಿದ್ದಾರೆ. ಊರು, ಪಾತ್ರಗಳ ಹೆಸರು ಎಲ್ಲವೂ ರಷ್ಯಾದ್ದೇ ಆಗಿದ್ದರೂ ನಡುನಡುವೆ ಇದ್ದಕ್ಕಿದ್ದಂತೆ ಮನೆಮಾಲಕಿಯ ಪಾತ್ರ ತೆಲುಗಿನಲ್ಲಿ ಮಾತನಾಡುತ್ತದೆ. ಇಂಥ ಅನೇಕ ನಾಟಕೀಯತೆಯನ್ನು ಬಹಳ ಸಲೀಸಾಗಿ ಬಳಸುವ ಮೂಲಕ ಚನ್ನಕೇಶವ ಅವರು ದೂರದ ರಷ್ಯಾದ ಕತೆಯನ್ನು ನಮ್ಮ ನಿಮ್ಮ ಸುತ್ತಲೂ ನಡೆಯಬಹುದಾದ ಕತೆ ಎಂಬಂತೆ ತಂದು ನಿಲ್ಲಿಸುತ್ತಾರೆ. ಇನ್ನು ಈ ಕಥೆಯ ಮುಖ್ಯ ಜೀವಾಳವೇ ಒಂದು ಒಳ್ಳೆಯ ಓವರ್‌ಕೋಟು. ರಷ್ಯಾದ ಕೊರೆಯುವ  ಚಳಿಗಾಲವನ್ನು ತಡೆದುಕೊಳ್ಳಬೇಕೆಂದರೆ ಒಂದೊಳ್ಳೆ ಕೋಟು ಬೇಕು ನಮ್ಮ ಕಥಾನಾಯಕನಿಗೆ. ಸದಾ ಹಿಮಸುರಿವ ರಷ್ಯಾದ ಅಂತಹ ಚಳಿಗಾಲವನ್ನು ಚನ್ನಕೇಶವ ಅವರು ಹೇಗೆ ರಂಗದ ಮೇಲೆ ತಂದಿದ್ದಿರಬಹುದು ಎಂಬ ಕುತೂಹಲ ನನಗೆ ಖಂಡಿತಾ ಇದೆ.

ಕೋಟೆಮನೆ ಪೋಲೀಸ್ ಸ್ಟೇಷನ್: ಉತ್ತರಕನ್ನಡಜಿಲ್ಲೆ ಯಲ್ಲಾಪುರದ ಬಳಿಯ ಮಂಚಿಕೇರಿ ಎಂಬ ಹಳ್ಳಿಯೊಂದರಲ್ಲಿ ವಾಸವಾಗಿರುವ ಸಿದ್ಧಿ ಜನಾಂಗದ (ನೂರಾರು ವರ್ಷಗಳ ಹಿಂದೆ ಬ್ರಿಟಿಷರ ದಬ್ಬಾಳಿಕೆಯ ಫಲವಾಗಿ ಆಫ್ರಿಕಾದಿಂದ ಗುಲಾಮರಾಗಿ ಭಾರತಕ್ಕೆ ಬಂದು ಇಲ್ಲೇ ನೆಲೆಯೂರಿ ಕನ್ನಡದವರೇ ಆಗಿಹೋದ ಸಮುದಾಯ) ಹೆಣ್ಣು ಮಗಳೊಬ್ಬಳ ಅತ್ಯಾಚಾರ ಹಾಗೂ ಕೊಲೆಯೊಂದು ನಡೆಯುತ್ತದೆ. ಅದನ್ನು ವಿಚಾರಣೆ ನಡೆಸಲು ಕಾಡಿನ ನಡುವೆ ಇರುವ ಪುಟ್ಟ ಊರೊಂದರ ಪೋಲೀಸ್ ಸ್ಟೇಷನ್ ಇಡೀ ಕಥಾನಕದ ಕೇಂದ್ರ ವಸ್ತುವಾಗಿ ಮುಂದೆ ಬರುತ್ತದೆ. ಈ ಅತ್ಯಾಚಾರ ಹಾಗೂ ಕೊಲೆಯು ಒಬ್ಬೊಬ್ಬರ ಬಾಯಲ್ಲಿ ಒಂದೊಂದು ತಿರುವು ಪಡೆದುಕೊಳ್ಳುತ್ತ ಪ್ರಕರಣ ಜಟಿಲವಾಗುತ್ತ ಸಾಗಿ ಸತ್ಯ ಯಾವುದು ಎಂಬುದೇ ಗೋಚರಿಸದೇ ಹೋಗುತ್ತದೆ. ಜಪಾನಿನ ಜಗತ್ಪ್ರಸಿದ್ಧ ಸಿನಿಮಾ ನಿರ್ದೇಶಕ ಅಕಿರಾ ಕುರೊಸವಾನ ರಶೋಮನ್ ಎಂಬ ಸಿನಿಮಾದ ಕತೆಯನ್ನು ನೆನಪಿಸುವಂತಿದೆ ಈ ನಾಟಕ. ಈ ನಾಟಕದಲ್ಲಿ ಸಿದ್ಧಿ ಸಮುದಾಯದ ಜನಪದ ಹಾಡುಗಳು, ನುಡಿಗಟ್ಟುಗಳು, ಆಚರಣೆಗಳು, ಕೊಂಕಣಿ ಭಾಷೆ, ಇವೆಲ್ಲವನ್ನೂ ಬಹಳ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ ಚನ್ನಕೇಶವ ಅವರು. ಅವರ ಬೇರೆ ನಾಟಕಗಳಿಗೂ ಈ ನಾಟಕಕ್ಕೂ ಬಹಳ ವ್ಯತ್ಯಾಸವನ್ನು ಕಾಣಬಹುದಾಗಿದೆ. ಈ ನಾಟಕವನ್ನೂ ಸಹ ಅವರು ಮಂಚಿಕೇರಿಯ ಸಿದ್ದಿ ಸಮುದಾಯದವರೊಂದಿಗೆ ಕಲೆತು ಬೆರೆತು ಅಲ್ಲಿಯೇ ನಾಟಕ ರಚನೆ ಮಾಡಿರುವ ಸಾಧ್ಯತೆ ಇದೆ.

ಕಂತು: ವಿವೇಕ ಶಾನಭಾಗರ ಕಂತು ಎಂಬ ಕತೆಯನ್ನು ಆಧರಿಸಿ ಮಾಡಿದ ರಂಗರೂಪ ಈ ನಾಟಕ. ಉತ್ತರ ಕನ್ನಡ ಜಿಲ್ಲೆಯ ಮಾವಿನೂರು ಎಂಬ ಊರೊಂದು ಏಕಾಏಕಿ ಎರಡು ಮಹತ್ತರ ಕಾರಣಗಳಿಂದ ಇಡೀ ದೇಶ ವಿದೇಶಗಳ ಚರ್ಚೆಯ ವಿಷಯವಾಗಿ ಬಿಡುತ್ತದೆ; ಒಂದು, ಮುಂದೆ ಬರಲಿರುವ ಖಗ್ರಾಸ ಸೂರ್ಯಗ್ರಹಣವು ಸಂಪೂರ್ಣವಾಗಿ ಗೋಚರಿಸುವುದು ಈ ಊರಿನಿಂದ ಎಂಬುದು ಜಗತ್ತಿನಲ್ಲೇ ಆ ಊರಿಗೊಂದು ವಿಶೇಷ ಸ್ಥಾನ ತಂದುಕೊಟ್ಟರೆ, ಸರ್ಕಾರ ತರಲು ಇಚ್ಛಿಸಿರುವ ಅಣೆಕಟ್ಟೆ ಯೋಜನೆಯಿಂದ ಅನೇಕ ಊರುಗಳ ಜೊತೆಗೆ ಆ ಊರು ಮುಳುಗಡೆ ಆಗಲಿರುವುದು ಮತ್ತೊಂದು ವಿಷಯ. ಈ ಎರಡು ವಿಷಯಗಳ ನಡುವೆ ಆ ಊರಿನ ಪಾತ್ರಗಳು ಹೇಗೆಲ್ಲ ಬದುಕಿ ಬಾಳುತ್ತವೆ ಎಂಬುದು ಈ ಕತೆಯ ಕಥಾವಸ್ತು. ಈ ಕಥೆಯನ್ನು ಚನ್ನಕೇಶವ ಅವರು ಮೊದಲು ನಾಟಕ ರೂಪ ಮಾಡಿ ಆಡಿಸಿದ್ದು ಯಲ್ಲಾಪುರ ಬಳಿಯ ಮಂಚಿಕೇರಿ ಎಂಬ ಊರಿನ ಜನಕ್ಕೆ. ಅಲ್ಲೇ ಕುಳಿತು ಅಲ್ಲಿನ ಜನರ ಆಡು ನುಡಿಗಳನ್ನು ಬಳಸಿಕೊಂಡು ರಂಗರೂಪ ಮಾಡಿದ್ದಾರೆ ಚನ್ನಕೇಶವ ಅವರು. ನಂತರ ಇದನ್ನು ಅವರು ನೀನಾಸಮ್ ರಂಗಶಿಕ್ಷಣ ಕೇಂದ್ರಕ್ಕೆ ಆಡಿಸಿದರು. ಅಲ್ಲಿ ನಟನಾಗಿ ಹಾಗೂ ತಂತ್ರಜ್ಞನಾಗಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಒದಗಿದ್ದು ನನ್ನ ಪುಣ್ಯ ಎಂದೇ ಭಾವಿಸುತ್ತೇನೆ. ಇಲ್ಲಿ ನನಗೆ ಅವರು ನಾಟಕವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ತೀರಾ ಒಳಗಿನ ಸಂಪನ್ಮೂಲವಾಗಿ ಕಾಣುವ ಅವಕಾಶ ನನಗೆ ಒದಗಿ ಬಂದಿತ್ತು. ನಾಟಕ ನಿರ್ದೇಶನದ ಎಲ್ಲ ವಿಭಾಗಗಳನ್ನೂ ಅವರು ನಿರ್ವಹಿಸುತ್ತಿದ್ದ ರೀತಿಯನ್ನು ನೋಡಲು ಹಾಗೂ ಅದನ್ನು ಮುಂದೆ ಅವಲೋಕಿಸಿಕೊಳ್ಳಲು ಇದರಿಂದ ನನಗೆ ಅನುಕೂಲವಾಯಿತು. ಉತ್ತರಕನ್ನಡ ಭಾಷೆಯನ್ನು, ಹಾಗೂ ಕಥೆಯನ್ನು ದೃಶ್ಯಗಳಾಗಿ ಮಾಡಿಕೊಂಡಿರುವ ರೀತಿ, ಮತ್ತು ಒಂದು ಸ್ವತಂತ್ರ ನಾಟಕವೊಂದಕ್ಕೆ ಇರಬೇಕಾದ ಸಂರಚನೆಯೊಂದು ಈ ರಂಗರೂಪಕ್ಕೆ ಸಿಕ್ಕಿರುವುದು ಮತ್ತೂ ಒಂದು ವಿಶೇಷ.

ಇವಿಷ್ಟೂ ನಾಟಕಗಳನ್ನು ಓದಿದ ನಂತರ ಚನ್ನಕೇಶವ ಅವರ ರಂಗ ಅಭಿರುಚಿಯೂ ಸಹ ಇದರಲ್ಲಿ ಗೋಚರವಾಗುತ್ತದೆ. ಅವರು ಬರಿದೆ ಮನರಂಜನೆಯನ್ನು ನೀಡುವ ನಾಟಕಗಳನ್ನು ಆಯ್ಕೆ ಮಾಡಿಕೊಂಡಿಲ್ಲ. ಎಲ್ಲವೂ ಆಂತರ್ಯದಲ್ಲಿ ಆಯಾ ಕಾಲದ ಏರಿಳಿತಗಳನ್ನು ಧ್ವನಿಸುವಂತಹ ನಾಟಕಗಳನ್ನೇ ಆರಿಸಿಕೊಂಡು ಬರೆದುಕೊಂಡಿದ್ದಾರೆ. ಮತ್ತು ಈ ಎಲ್ಲಾ ನಾಟಕಗಳಲ್ಲಿ ಬರೀ ನಟರೇ ಮುಖ್ಯವಾಗಿರದೆ ನಾಟಕೀಯತೆಯೇ ಪ್ರಧಾನವಾಗಿವೆ. ಸಂಗೀತ, ಸಂಗೀತದ ಮೇಳ, ಸೂತ್ರಧಾರ, ಅವರ ಹಿಮ್ಮೇಳ, ಇವೆಲ್ಲವೂ ಗ್ರೀಕ್ ನಾಟಕಗಳಲ್ಲಿ ಹಾಗೂ ನಮ್ಮ ಜನಪದ ನಾಟಕಗಳಲ್ಲಿ ಕಾಣಬಹುದಾದ ಅತ್ಯಂತ ಜನಪ್ರಿಯ ಹಾಗೂ ಅತ್ಯಂತ ಯಶಸ್ವೀ ನಾಟಕೀಯ ತಂತ್ರಗಳಾಗಿವೆ. ಈ ತಂತ್ರಗಳನ್ನು ಚನ್ನಕೇಶವ ಅವರು ತಮ್ಮ ಬಹುತೇಕ ನಾಟಕಗಳಿಗೆ ಬಹಳ ಯಶಸ್ವಿಯಾಗಿ ಕಸಿಮಾಡಿಕೊಂಡಿದ್ದಾರೆ.

ಇನ್ನು ಅವರು ಸ್ವತಃ ಚಿತ್ರ ಕಲಾವಿದರಾಗಿರುವುದರಿಂದ ಇಡೀ ರಂಗವನ್ನೇ ಒಂದು ಕ್ಯಾನ್ವಾಸಿನಂತೆ ಮಾಡಿಕೊಂಡು ರಂಗಭೂಮಿಯ ರಂಗಸಜ್ಜಿಕೆ, ಪರಿಕರ, ವೇಷಭೂಷಣ, ನಟನಟಿಯರು, ಬೆಳಕು ಹೀಗೆ ಎಲ್ಲಾ ರಂಗ ಸಂಪನ್ಮೂಲಗಳನ್ನು ಯಶಸ್ವಿಯಾಗಿ ಬಳಸಿಕೊಂಡು ತಮ್ಮ ಕಲಾಕೃತಿಗಳನ್ನು ಕಟ್ಟಬಲ್ಲವರಾಗಿದ್ದರು. ಅವರ ಈ ನಾಟಕಗಳಲ್ಲಿ ಬರುವ ಗುಂಪು ಗುಂಪು ಸನ್ನಿವೇಶಗಳು, ಸಂಗೀತದ ಮೇಳ ಇವೆಲ್ಲವೂ ಬರಿದೆ ಅವರ ರಂಗದ ಮೇಲಿನ ನಾಟಕಕ್ಕಷ್ಟೆ ಸಂಬಂಧಿಸಿದ್ದಲ್ಲದೆ ಒಟ್ಟೂ ಅವರ ರಂಗಜೀವನವನ್ನೇ ಸೂಚಿಸುವಂತಿದೆ. ಅವರ ನಾಟಕಗಳಲ್ಲಿ ರಂಗದ ಮೇಲೆ ಕಾಣುವ ನಟನಟಿಯರ ಗುಂಪಿಗಿಂತ ದುಪ್ಪಟ್ಟು ನಾಟಕದ ಹೊರಗೆ, ಹಿಂದೆ, ಮುಂದೆ, ಅಕ್ಕ-ಪಕ್ಕ ಸದಾ ಅವರೊಂದಿಗೆ ಕಾಣಬಹುದಾಗಿತ್ತು. ಇದು ಅವರ ರಂಗ ಕೃಷಿಗೆ ಒಂದು ಉದಾಹರಣೆ. ಇಲ್ಲಿನ ಯಾವ ನಾಟಕವನ್ನೂ ಅವರು ಬೆಂಗಳೂರಿನಂತಹ ಕೇಂದ್ರದಲ್ಲಿ ಕುಳಿತು ಮಾಡಿದ ನಾಟಕಗಳಲ್ಲ. ಎಲ್ಲವೂ ಕರ್ನಾಟಕದ ಬೇರೆ ಬೇರೆ ಊರುಗಳ ಬೇರೆ ಬೇರೆ ತಂಡಗಳಿಗೋಸ್ಕರ ಬರೆದು ಮಾಡಿದಂತವು. ಹಾಗೆ ನಾಟಕ ಆಡಿಸಲು ಹೋಗುವಾಗ ಅವರೊಬ್ಬರೇ ಎಲ್ಲೋ ಯಾವುದೋ ಊರಿಗೆ, ತಂಡಕ್ಕೆ ಹೋಗಿ ನಾಟಕ ಮಾಡಿಸಿ ಬಂದ ಉದಾಹರಣೆಗಳೇ ನಮಗೆ ಸಿಗುವುದಿಲ್ಲ. ರಂಗಭೂಮಿ ಎಂಬುದು ಒಂದು ಸಮಷ್ಠಿ ಪ್ರಕ್ರಿಯೆ ಎಂಬುದು ಅವರ ನಾಟಕದ ಪ್ರಾಸೆಸ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಬಹಳ ಚೆನ್ನಾಗಿ ಅನುಭವಕ್ಕೆ ದಕ್ಕುವ ವಿಷಯವಾಗಿತ್ತು. ಇಂಥ ಸಂದರ್ಭಗಳಲ್ಲಿಯೇ ನಿಜವಾದ ‘ರಂಗಪುರಾಣಗಳ’ ಹೇಳಿಕೆ ಕೇಳಿಕೆ, ಕಟ್ಟುವಿಕೆ, ಕೆಡವುವಿಕೆಗಳು ನಡೆಯುತ್ತಿದ್ದವು! ಇವೆಲ್ಲವೂ ಸಹ ಎಲ್ಲರನ್ನೂ ರಂಗಭೂಮಿಯಲ್ಲಿ ಇನ್ನೂ ನಿಖಟವಾಗಿ, ಆಪ್ತವಾಗಿ ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಿತ್ತು. ಅಂಥ ಪ್ರೇರೇಪಣೆಯ ಕೇಂದ್ರ ಬಿಂದುವಾಗಿದ್ದರು ಚನ್ನಕೇಶವ ಅವರು.

ಇದೀಗ ರಂಗಭೂಮಿಗೆ ಬಂದ ಹೊಸ ಹುಡುಗ ಹುಡುಗಿಯರಿಂದ ಹಿಡಿದು ಹತ್ತಾರು ವರ್ಷಗಳು ಕೆಲಸ ಮಾಡಿಕೊಂಡಿರುವ ರಂಗಕರ್ಮಿಗಳ ಸಮೇತ ಎಲ್ಲರಿಗೂ ಅವರು ಒಬ್ಬ ಒಳ್ಳೆಯ ಗೆಳೆಯ, ಗುರು, ಮಾರ್ಗದರ್ಶಕ, ರಂಗಪುರಾಣದ ಅದ್ವರ್ಯು, ಹೀಗೆ ಎಲ್ಲವೂ ಆಗಿದ್ದರು. ಈ ಗುಣ ಅವರ ಫಾರ್ಮ್‌ಗೂ ಸಹಜವಾಗಿ ವ್ಯಾಪಿಸಿತ್ತು. ಅದಕ್ಕೆ ಉದಾಹರಣೆಯಾಗಿ ಇಲ್ಲಿನ ನಾಟಕಗಳನ್ನು ನೋಡಬಹುದಾಗಿದೆ. ಇಲ್ಲಿನ ಬಹುತೇಕ ನಾಟಕಗಳು ಅತ್ತ ಸಾಹಿತ್ಯ ಕೃತಿಗಳಂತೆ ಘನವೂ ಅಲ್ಲದ, ಜಡವೂ ಅಲ್ಲದ, ತಾಲೀಮು ಪಠ್ಯ ಅಥವಾ ಪ್ರೊಡಕ್ಷನ್ ಸ್ಕ್ರಿಪ್ಟ್ ಎಂದು ನಾವೇನು ಕರೆಯುತ್ತೇವೋ ಅವನ್ನು ಹೋಲುತ್ತಿರುವಂತಿವೆ. ಇದೇ ಕಾರಣದಿಂದ ಚನ್ನಕೇಶವ ಅವರು ಇವನ್ನು ಪ್ರಕಟಿಸುವ ಗೋಜಿಗೆ ಹೋಗಿರಲಿಲ್ಲ ಎಂದು ಕಾಣುತ್ತದೆ. ಮೊದಲೇ ನಾಟಕಗಳ ಅಭಾವವಿರುವ ಈ ಸಂದರ್ಭದಲ್ಲಿ ಏನಿಲ್ಲದೆ ಹೋದರೂ ಕನ್ನಡ ರಂಗಭೂಮಿಗೆ ಎಂಟು ಹೊಸ ನಾಟಕ ಕೃತಿಗಳು ಸಿಕ್ಕಂತಾಗುತ್ತದೆ. ಆ ದೃಷ್ಟಿಯಿಂದ ಇವನ್ನೆಲ್ಲ ಆರಿಸಿ, ಸಂಕಲನ ಮಾಡಿ, ಮುತುವರ್ಜಿಯಿಂದ ಪ್ರಕಟಿಸುತ್ತಿರುವ ಥಿಯೇಟರ್ ತತ್ಕಾಲ್ ಬುಕ್ಸ್ ಪ್ರಕಾಶನಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

- ಮೌನೇಶ ಬಡಿಗೇರ

 

ಪುಟಗಳು : 200

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)