Click here to Download MyLang App

ವೀರಪ್ಪನ್ ಕಾಡಿನಲ್ಲಿ ಆ ರಾತ್ರಿ : ರಾಜೇಂದ್ರ ಕುಮಾರ್ ಗುಬ್ಬಿ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟಸ್ವರೂಪದ ಕನ್ನಡ |

  ವೀರಪ್ಪನ್ ಕಾಡಿನೊಳಗೆ ಆ ರಾತ್ರಿಯ‌ ಪಯಣ.....

ಅಂದು 1995ರ ಕ್ರಿಸ್ಮಸ್ ಹಬ್ಬಕ್ಕೆ ಹಿಂದೆ ಮುಂದೆ ಸೇರಿ ಮೂರು ದಿನ ಕೆಲಸಕ್ಕೆ ರಜಾ ಹಾಕಿ , ನಾನು ನನ್ನ ಗೆಳೆಯ, ಅವರ ಮನೆಯಿರುವ  ದೊಡ್ಡ ಗಾಜನೂರಿಗೆ (ಡಾ. ರಾಜಕುಮಾರ್ ರವರ  ಹುಟ್ಟಿದ ಊರು, ತಮಿಳುನಾಡಿನ ತಾಳವಾಡಿ ಸಮೀಪ) ಹೊರಟೆವು .  ಅವರ ಮನೆಗೆ ಬೆಳ್ಳಂಬೆಳಿಗ್ಗೆ ಹೋಗಿ, ಸ್ನಾನ, ಮಾಡಿ ತಿಂಡಿತಿಂದೆವು. ನಂತರ ರಾಜಕುಮಾರರು ಹುಟ್ಟಿದ ಊರಾದ್ದರಿಂದ ಎಲ್ಲಾ ಕಡೆ ತಿರುಗಾಡಿ ಅವರ ಊರನ್ನು ನೋಡಿದ ನಂತರ ಬನ್ನಾರಿ ಅಮ್ಮನ್ ದೇವಾಲಯ, ಚಿಕ್ಕ ಹೊಳೆ ಜಲಾಶಯ ಎಲ್ಲಾ ನೋಡಿಕೊಂಡು ನನ್ನ ಗೆಳೆಯನ ಸಂಬಂಧಿಕರ ಮನೆ ಕೊಳ್ಳೇಗಾಲದ ಸಮೀಪ ಒಂದು ಊರಿಗೆ ಹೋಗಿ ತಮ್ಮ ಮನೆಗೆ ಹಿಂತಿರುಗಿ ಬರುವಾಗ ವಿಪರೀತ ಮಳೆಯಾಗಿ ಸ್ವಲ್ಪ ತಡವಾಯಿತು, ಹಾಗೂ ಅಂದು ಕ್ರಿಸ್ಮಸ್ ಹಬ್ಬದ ರಜೆ ಇದ್ದಿದ್ದರಿಂದ ನಮಗೆ ಬಸ್ ಸಿಗದೆ ತುಂಬಾ ಕಷ್ಟವಾಯಿತು, ಆದರೂ ಏನೇನೋ ಪಡಬಾರದ ಕಷ್ಟಪಟ್ಟು ಕೊಳ್ಳೇಗಾಲದಿಂದ ಬಸ್, ನಂತರ ಲಾರಿ ಹಿಡಿದು ಚಿಕ್ಕ ಹೊಳೆ ಜಲಾಶಯದ

 ಹತ್ತಿರದ ಒಂದು ಸ್ಥಳಕ್ಕೆ ಬಂದೆವು, ಆಗ ಸಮಯ ರಾತ್ರಿ 9-30 , ಅಲ್ಲಿಂದ ಗೆಳೆಯನ ಊರು ತಮಿಳುನಾಡಿನ ಗಡಿ ಹಳ್ಳಿ ತಾಳವಾಡಿ ಗೆ ಹೋಗಬೇಕೆಂದರೆ ಪೂರ್ತಿ ಕಾಡಿನ ಮಧ್ಯೆಯ ರಸ್ತೆಯಲ್ಲಿಯೇ ಹೋಗಬೇಕು,  ಅಂದು ರಾತ್ರಿಯ ಸಮಯದಲ್ಲಿ ಯಾವುದೇ ಬಸ್, ಲಾರಿ, ಯಾವುದೂ

 ಲಭ್ಯವಿಲ್ಲದ್ದರಿಂದ ನಾವುಗಳು   ಇಬ್ಬರೇ ನಡೆದುಕೊಂಡು ಹೋಗಲು ತೀರ್ಮಾನಿಸಿದೆವು, ಅವರ ಮನೆ ತಲುಪಲು ಕನಿಷ್ಟವೆಂದರೂ ನಾಲ್ಕು ಗಂಟೆಯ ಸಮಯ ಆಗುವುದೆಂದು ಅರಿತು ನಡೆಯಲು ಪ್ರಾರಂಭಿಸಿದೆವು, ಆ ರಾತ್ರಿ ಸಮಯ, ತುಂತುರು ಮಳೆಯೂ ಬರುತ್ತಿದೆ, ನಮಗೆ ಕಾಡಿನ ಮಧ್ಯೆ ಪಯಣಿಸುವುದು ಅಭ್ಯಾಸವೂ ಇಲ್ಲ, ಜೊತೆಗೆ ಹೆದರಿಕೆ ಬೇರೆ, ಹಾಗೂ ಯಾವುದಾದರೂ ಕಾಡುಮೃಗಗಳು ಬಂದರೆ ಎಂಬ ಭಯ ಒಂದು ಕಡೆಯಾದರೆ ಮತ್ತೊಂದೆಡೆ ವೀರಪ್ಪನ್ ಭಯ, ಕಾರಣ ..... ಕಳೆದ ವಾರವಷ್ಟೇ ವೀರಪ್ಪನ್, "ದಿಂಬಂ" ಅರಣ್ಯ ಪ್ರದೇಶದಲ್ಲಿ ಕರ್ನಾಟಕದ ಐದಾರು ಮಂದಿ ಪೊಲೀಸರನ್ನು ನಿರ್ದಾಕ್ಷಿಣ್ಯವಾಗಿ ಕೊಂದುಹಾಕಿದ್ದನು, ಅದು ಬೇರೆ ಭಯ, ಸರಿ ಧೈರ್ಯ ಮಾಡಿ ನಡೆಯುತ್ತಾ, ತಲೆಹರಟೆ ಮಾತನಾಡುತ್ತಾ ಹೊರಟೆವು, ಗೆಳೆಯನೇನೋ ಕೈಯಲ್ಲಿ ಒಂದರಹಿಂದೆ ಒಂದರಂತೆ

 ಸಿಗರೇಟು ಸೇದುತ್ತಲೇ ನಡೆಯುತ್ತಿದ್ದಾನೆ, ಆದರೆ ನಾನು.......ಇನ್ನೇನು ಇದೆಯಲ್ಲಾ ದೇವರ ಧ್ಯಾನ, ದೇವರೇ ಕಾಪಾಡಪ್ಪಾ ಎಂದುಕೊಂಡು ದೇವರುಗಳ ಹೆಸರುಗಳನ್ನು ಮನದಲ್ಲೇ ಜಪಿಸುತ್ತಾ ನಡೆದು, ಹಾಗೂ ಹೀಗೂ ಅರ್ಧರಾತ್ರಿಯ 1-30 ಕ್ಕೆ ಸರಿಯಾಗಿ ತಾಳವಾಡಿ ಗ್ರಾಮದ ಲೈಟು ಬೆಳಕು ಕಂಡೆವು, ಆಗ ಧೈರ್ಯ ಬಂದಿತು, ಅಷ್ಟರಲ್ಲಿ ಅಲ್ಲಿ ಒಂದು ಪೆಟ್ಟಿ ಅಂಗಡಿ ಕಂಡಿತು, ಅಲ್ಲಿ ಹೋಗಿ ಕುಳಿತು ಬಿಸಿ ಬಿಸಿ ಚಹಾ ಕುಡಿದು ಮತ್ತೆ ಅಲ್ಲಿಂದ ಐದು

 ಕಿ. ಮೀ.ದೂರ  ನಡೆದು ಗೆಳೆಯನ ಊರು, ಮನೆಗೆ,  ಸುಮಾರು ಬೆಳಗಿನಜಾವ 2-30ಕ್ಕೆ ತಲುಪಿದೆವು.

ಆದರೆ ಆ ಕಾಡಿನ ಮಧ್ಯೆ, ಅಂದು ಅರ್ಧರಾತ್ರಿಯಲ್ಲಿ ನಮಗೆ ಯಾವುದೇ ಕಾಡುಪ್ರಾಣಿಗಳ ಉಪಟಳವಾಗಲೀ, ವೀರಪ್ಪನ್ ಸಹಚರರಾಗಲೀ ಸಿಗಲಿಲ್ಲ, ಎಲ್ಲವೂ ದೇವರ ದಯೆ ಎಂದುಕೊಂಡು ಮನೆ ತಲುಪಿದೆವು.

 

 -ರಾಜೇಂದ್ರ ಕುಮಾರ್ ಗುಬ್ಬಿ

              ‌‌                     ‌ ಕನಸುಗಳ ಕಥೆಗಾರ