Click here to Download MyLang App

ಸರಣಿ ಗೋಕರ್ಣದ ಗಜಗೌರಿ: ಕತೆ:ಗಜ ಗೌರಿ ಪರಿಚಯ - ಬರೆದವರು :ರವಿಕುಮಾರ್ ಎಮ್ | ಸಾಮಾಜಿಕ |ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ

" ತಾತಾ...ಬನ್ನಿ ಬೇಗ " ಕಿರುಚುತ್ತಿದ್ದಳು ಗೌರಿ.
" ಏ ನಾನೇನು ಮೇಸ್ಟ್ರುನ ಹೊಡಿಯೋಕೆ ಬಂದಿಲ್ಲ. ನೋಡಿ ಮಾತಾಡ್ಸೋಣ ಅಂತ ಬಂದೆ. ಬಿಡು ಎದ್ದೇಳು, ಗುಲಾಬಿ ಮುಳ್ಳು ಚುಚ್ಚುತಾ ಅವೆ " ನರಳುತ್ತಿದ್ದ ಗಜ.
ಅಷ್ಟರಲ್ಲಿ ಗೌರಿಯ ಕಿರುಚಾಟ ಕೇಳಿ ಹೊರಗೆ ಓಡಿ ಬಂದಿದ್ದರು, ಹೆಗಡೆಯವರು.
" ಏನಾಯ್ತು ಗೌರಿ. ಯಾರಿವ್ನು? ಬಿಡು, ಅವ್ನು  ಏಳಲಿ ಮೇಲೆ. ನೋಡೋಣ ಯಾರೂ ಅಂತ "
ಎದ್ದು ನಿಂತು ಮೈ ಕೊಡವುತ್ತಿದ್ದ ಗಜ ಅವರ ಕಡೆ ದೀನಾನಾಗಿ ನೋಡುತ್ತಿದ್ದ. ಮೇಸ್ಟ್ರು ನನ್ನ ಗುರ್ತು ಹಿಡೀತಾರೋ ಇಲ್ವೋ ಅನ್ನೋದು ಅವನ ಯೋಚನೆ.
ಬಿಟ್ರೆ ಓಡ್ಹೋಗ್ತಾನೇನೋ ಅನ್ನೋದು ಗೌರಿಯ ಯೋಚನೆ.

ಇನ್ನೂ ತನ್ನ ಕೈ ಹಿಡ್ಕೊಂಡು ಬಿಡಲೊಲ್ಲದ ಅವಳ ಕಡೆ  ತಿರುಗಿ ಅವನೆಂದ,
" ಮೇಷ್ಟ್ರೇ, ನಾನು, ಗಜ. ಗಜಪತಿ.ನಮ್ ಹೋಟೆಲ್ಲಿಗೆ ಬರ್ತೀರಲ್ಲಾ ನೀವು. ಟೀ ಕೊಡ್ತೀನಲ್ಲ, ಅದೇ ಗಜಪತಿ. ಕೈ ಬಿಡಾಕ್ಹೇಳ್ರಿ. ನೋವಾಗ್ತದೆ " ಎಂದ.
ಟಾರ್ಚ್ ಲೈಟ್ ಬೆಳಕಿನಲ್ಲಿ ಅವನನ್ನು ಗುರ್ತು ಹಿಡಿದ ಹೆಗಡೆಯವರು, ಆಶ್ಚರ್ಯ ಚಕಿತಾರಾದರು.
" ಏನೋ, ಗಜಪತಿ. ನೀನು, ಇಲ್ಲಿ, ಇಷ್ಟೊತ್ನಲ್ಲಿ? ಏನ್ ಬೇಕಾಗಿತ್ತು?. ಗೌರಿ, ಅಯ್ಯೋ ಇವ್ನು ನಂಗೆ ಗೊತ್ತಮ್ಮಾ. ನಾನು ಹೇಳಿದ್ನಲ್ಲ, ಶಿವಮೂರ್ತಿ, ಅವರ ಹೋಟೆಲ್ನಲ್ಲಿ ಕೆಲ್ಸ ಮಾಡ್ತಾನೆ. ಬಲು ಚುರುಕು ಇವ್ನು. ಏನೂ ಪರವಾಗಿಲ್ಲ, ಬಿಡು ಅವನ್ನ " ಗೌರಿಯ ಕೈ ಬಿಡಿಸುತ್ತ, ಗಜನನ್ನ ಒಳಗೆ ಕರೆದೊಯ್ದರು.
" ಗಜಪತಿ, ಇವ್ಳು ಗೌರಿ ಅಂತ. ನನ್ನ ಮೊಮ್ಮಗಳ ಥರ. ನೀನೇನೂ ಯೋಚ್ನೆ ಮಾಡ್ಬೇಡ. ಅವಳೇನು ಮಾಡಲ್ಲ ನಿನ್ನ. ಹೇಳು ಯಾಕೆ ಬಂದೆ ಇಲ್ಲಿಗೆ? " ಗಜನನ್ನ ಕೂಡಿಸಿ, ಕುಡಿಯಲು ನೀರು ಕೊಟ್ಟು, ಸಾವಕಾಶವಾಗಿ ಕೇಳಿದರು ಮೇಸ್ಟ್ರು.
" ಮೇಷ್ಟ್ರೇ, ನೀವು ಹುಷಾರಾಗಿರಿ. ಬೆಳಿಗ್ಗೆ ನಿಮ್ಮನ್ನ ಏನೇನೋ ಅಂದ್ರಲ್ಲ ಆ ಮೂರು ಜನ, ಜೊತೆಗೆ ಇನ್ನೊಬ್ಬನೂ ಬಂದಿದ್ದ. ನಾಲ್ಕೂ ಜನ ಸೇರಿ ಏನೋ ಮಾಡ್ತಾರಂತೆ ನಿಮ್ಮನ್ನ. ಅವ್ರಲ್ಲಿ ಕಿಟ್ಟಿ ಅನ್ನೋನು ಹೇಳ್ತಿದ್ದ, " ಏನಾದ್ರೂ

ಪ್ಲಾನ್ ಮಾಡಬೇಕು ಕಣೋ, ಈ ಮುದುಕನ್ನ, ಅಂದ್ರೆ ನಿಮ್ಮನ್ನ, ಬಿಡ್ಬಾರ್ದು ಅಂತಿದ್ದ. ನಾಳೆ ಬೆಳಿಗ್ಗೆ ಬೆಟ್ಟದ ಮೇಲೆ ಸುಂಕದಮ್ಮನ ಗುಡಿ ಹತ್ರ ಸೇರ್ತಾರಂತೆ, ಪ್ಲಾನ್ ಮಾಡೋಕೆ. ಅದೇನ್ ಮಾಡ್ತಾರೋ ಗೊತ್ತಿಲ್ಲ. ನೀವು ಮಾತ್ರ ಹುಷಾರಾಗಿರಿ. ಇದನ್ ಹೇಳ್ಲಿಕ್ಕೆ ಬಂದೆ ನಾನು. ಈಯಮ್ಮ ನೋಡಿದ್ರೆ.... ಹಿಂಗ್ ಮಾಡಿಬಿಟ್ಲು " ಕೆತ್ತಿ ಹೋಗಿದ್ದ ಮೊಣ ಕೈ ಉಜ್ಜಿಕೊಳ್ಳುತ್ತಾ ಹೇಳಿದ ಗಜ.
" ಅಯ್ಯೋ, ಸಾರಿ ಗಜಪತಿ. ನಂಗೊತ್ತಿರ್ಲಿಲ್ಲ. ತಾತ ಒಬ್ರೇ ಇರ್ತಾರಲ್ಲ, ಅದಕ್ಕೇ ನಾನೂ ಹೆದ್ರಿದ್ದೆ " ಎಂದಳು ಗೌರಿ.
" ಆಯ್ತು ಬಿಡು, ಅಕ್ಕಾ. ಆದ್ರೂ, ಭಾಳ ಗಟ್ಟಿದ್ದೀ ನೀನು. ಇನ್ನೊಂದ್ ನಿಮಿಷ ನೀನು ಕೈ ಬಿಟ್ಟಿರ್ಲಿಲ್ಲ ಅಂದ್ರೆ, ನಿನ್ನೇ ಕೆಳಗ್ ಬೀಳಿಸ್ತಿದ್ದೆ. ಬ್ಯಾಡ ಬುಡು ಹೆಣ್ಮಗಳು ಅಂತ ಸುಮ್ನಿದ್ದೆ. ಆದ್ರೂ, ಬಲು ಗಟ್ಟಿ ನಿನ್ ಕೈಯಿ. ಅಬ್ಬಬ್ಬಾ... ಎಂತ ಹಿಡ್ತ " ಇನ್ನೂ ಕೈಗಳನ್ನೇ ಸವರಿಕೊಳ್ಳುತ್ತಾ ನಕ್ಕ ಗಜ.
" ಓ... ಅಷ್ಟು ಶೂರನ ನೀನು. ಎಲ್ಲಿ, ಮತ್ತೆ ಮಲ್ಕೋ. ನಾನ್ ಬೆನ್ಮೇಲೆ ಕೂಡ್ತಿನಿ. ಬೀಳ್ಸಿ ತೋರ್ಸು " ಗೌರಿ ಚಾಲೆಂಜ್ ಗೆ ತಯಾರಾಗಿದ್ದಳು.

ಹೆಗಡೆಯವರಿಗೆ ಏನೂ ಮಾಡುವುದು ಎಂದೇ ತೋಚಲಿಲ್ಲ. ವಿನಾಕಾರಣ ಗಜ ಈ ವಿಷಯದಲ್ಲಿ ತಲೆ ಇಡುವುದು ಅವರಿಗೆ ಇಷ್ಟವಾಗಲಿಲ್ಲ. ಗೌರಿಯನ್ನು ನೆನೆದರೂ ಭಯವಾಗಿತ್ತು. ಇವನೇ ಹಿಂಗಾದ್ರೆ, ಇನ್ನು ಗೌರಿ ಏನು ಮಾಡಲಿಕ್ಕಿಲ್ಲ? ಇವರನ್ನು ತಕ್ಷಣ ಮನೆಗೆ ಕಳಿಸುವುದು ಉತ್ತಮ ಎಂದುಕೊಂಡರು.

ಗಜ ಮತ್ತು ಗೌರಿಯನ್ನ ಸಮಾಧಾನಪಡಿಸುತ್ತ," ಸರಿ, ನೀವಿನ್ನು ಮನೆಗ್ ಹೋಗಿ ಮಲ್ಕೊಳ್ಳಿ. ನಾನು ನಾಳೆ ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಡ್ತೀನಿ. ಎಲ್ಲಾ ಸರಿಹೋಗುತ್ತೆ. ಹೋಗ್ರಿ... ಮನೆಗ್ ಹೋಗ್ರಿ ಇಬ್ರೂ. ಗೌರಿ, ನಾನು ಹೇಳೋವರೆಗೂ ಬಂಗ್ಲೆ ಕಡೆ ಬರ್ಬೇಡ. ಸರೀನಾ? " ಎಂದು ಅವರಿಬ್ಬರನ್ನೂ ಗೇಟ್ ದಾಟಿಸಿ ಮನೆಯೊಳಗೆ ಹೋದರು ಹೆಗಡೆಯವರು.

••••••••••••••••••••

" ಏ ಗಜ, ತುಂಬಾ ನೋಯ್ತಿದ್ಯೇನೋ? ಮುಳ್ಳು ಚುಚ್ಚಿತಾ? ಎಲ್ಲಿ ತೋರ್ಸು

ನೋಡೋಣ " ಎಂದು ಗಜನ ಹೆಗಲ ಮೇಲೆ ಕೈ ಹಾಕಿ ಕೇಳಿದಳು ಗೌರಿ.
ಅವರಿಬ್ಬರೂ ಹೆಗಡೆಯವರ ಬಂಗ್ಲೆಯಿಂದ ಹೊರ ಬಂದಿದ್ದರು. ಗೌರಿ ಸೈಕಲ್ ತಳ್ಳಿಕೊಂಡು ಬರುತ್ತಿದ್ದಳು. ಗಜ ಅವಳ ಜೊತೆಗೇ ನಡೆಯುತ್ತಿದ್ದ.
" ಏ ಬಿಡಮ್ಮ. ನಂಗೇನೂ ಆಗಿಲ್ಲ. ಮುಳ್ಳು ಚುಚ್ಚಿದೆ ಅಷ್ಟೇ. ಪರವಾಗಿಲ್ಲ, ನಂಗೇನೂ ಬೇಜಾರಿಲ್ಲ ಬಿಡು. ಅಕ್ಕ, ನಿಂಗೇನೂ ಆಗಿಲ್ಲ ತಾನೇ " ಊರಲ್ಲಿ ತಾನು ಬಿಟ್ಟು ಬಂದಿದ್ದ ಅಕ್ಕನನ್ನು ನೆನಪಿಸುತ್ತಿದ್ದಳು ಗೌರಿ. ಅಕ್ಕನನ್ನು ನೆನೆದು ಕಣ್ಣಲ್ಲಿ ನೀರು ತುಂಬಿತ್ತು ಗಜನಿಗೆ.

" ಏನಿಲ್ಲ ಬಿಡೋ. ಅದು ಸರಿ, ಏನ್ ಮಾಡೋಣ ಇವಾಗ? ತಾತಗೆ ಬಂದಿರೋ ಅಪಾಯ ಹೆಂಗೆ ತಪ್ಪಿಸೋದು? ತಾತ ಬೇರೆ ಅಪ್ಪನಿಗೂ ಹೇಳ್ಬೇಡ ಅಂದಿದಾರೆ. ಈಗ ನಾವೇ ಏನಾದ್ರೂ ಮಾಡ್ಬೇಕು " ಎಂದಳು ಗೌರಿ.
" ನಾವೇ ಅಂದ್ರೆ? ನಾವಿಬ್ರುನಾ? ನಾನೂ ನೀನೂ ಏನ್ ಮಾಡ್ಲಿಕ್ಕಾಗುತ್ತೆ? ಏ ಸುಮ್ಕಿರಮ್ಮ. ಸಣ್ಣವ್ರು ನಾವೇನ್ ಮಾಡ್ಬಹುದು"
" ಅಲ್ಲ ಕಣೋ. ಅವ್ರು ಏನ್ ಪ್ಲಾನ್ ಮಾಡ್ತಿದಾರೆ ಅನ್ನೋದಾದ್ರು ತಿಳ್ಕೊಬಹುದಲ್ಲ ನಾವು"
" ಅದ್ಹೆಂಗೆ? ನಾವು ಕೇಳಿದ್ರೆ ಅವ್ರು ಹೇಳ್ಬಿಡ್ತಾರಾ? " ನಕ್ಕ ಗಜ.
" ಇಲ್ಲ, ಅವ್ರು ಹೇಳಲ್ಲ. ನಾವೂ ಕೇಳೋದೂ ಬೇಡ. ಪ್ಲಾನ್ ಮಾಡ್ಲಿಕ್ಕೆ ಎಲ್ಲಿ ಸೇರ್ತಾರೆ ಅನ್ನೋದು ನಿಂಗೆ ಗೊತ್ತು ತಾನೇ. ಅಲ್ಲಿಗೆ ನಾವೂ ಹೋಗೋಣ. ಅವ್ರಿಗೆ ಗೊತ್ತಿಲ್ದೆ. ಕದ್ದು ಮುಚ್ಚಿಟ್ಕೊಂಡು ಅವ್ರು ಏನ್ ಮಾತಾಡ್ತಾರೋ ಕೇಳಿದ್ರಾಯ್ತು. ಏನಂತೀಯಾ? "
" ಹೂ , ಹೋಗೋಣ. ಸುಂಕದಮ್ಮನ ಗುಡಿ. ಬೆಟ್ಟದ ತುತ್ತ ತುದಿ ಅದು. ಅಲ್ಲಿವರ್ಗು ಬರ್ಲಿಕ್ಕೆ ಆಗುತ್ತಾ ನಿಂಗೆ? ಅಷ್ಟು ಎತ್ತರಕ್ಕೆ ಏರ್ತೀಯಾ? "

" ಓಹ್ಹೋಹ್ಹೂ.....ಹುಡುಗಿ ಅಂದ್ರೆ, ಬೆಟ್ಟ ಹತ್ತೋಕಾಗಲ್ಲ ಅನ್ಕೊಂಡ್ಯ? ನೀನು ಮಾತ್ರ, ಚೋಟುದ್ದ ಇದೀಯ. ಬೆಟ್ಟ ಹತ್ತಿ ಬಿಡ್ತೀಯಾ? ರೇಸ್ ಮಾಡೋಣ್ವಾ, ನಮ್ಮನೆವರ್ಗೆ? ಬಾ.... " ಎನ್ನುತ್ತಾ ಸೈಕಲ್ ತಳ್ಳಿಕೊಂಡೇ ಓಡಲು ಶುರು ಮಾಡಿದಳು ಗೌರಿ. ಗಜನೂ ಓಡತೊಡಗಿದ್ದ. ಇಬ್ಬರೂ ಓಡುತ್ತ, ನಗುತ್ತ ಒಬ್ಬರನ್ನೊಬ್ಬರು ಹಿಂದೆ ಹಾಕುತ್ತ, ಗೌರಿ ಮನೆ ಇರುವ ಬೀದಿಗೆ ಬಂದರು.
ಅಲ್ಲಿಂದ ಗಜ ಹೋಟೆಲಿನತ್ತ ಹೆಜ್ಜೆ ಹಾಕಿದ. ಗೌರಿ ಸೈಕಲ್  ಜಗುಲಿ ಮೇಲೆ ಏರಿಸಿ, ಮನೆ ಒಳಗೆ ನಡೆದಳು.