Click here to Download MyLang App

ನ್ಯಾಯವೇ ದೇವರು : ರಾಜೇಂದ್ರ ಕುಮಾರ್ ಗುಬ್ಬಿ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟಸ್ವರೂಪದ ಕನ್ನಡ

 

ಕೌಟುಂಬಿಕ ನ್ಯಾಯಾಲಯದಲ್ಲಿನ  ಕಟಕಟೆಯಲ್ಲಿ ಸುಮಾರು ದಿನಗಳಿಂದ ನಡೆಯುತ್ತಿದ್ದ ವಾದ, ಪ್ರತಿವಾದಗಳನ್ನು ಆಲಿಸಿದ್ದ  ನ್ಯಾಯಾಧೀಶರು,

ಎರಡೂ ಕುಟುಂಬಗಳ ಹಿರಿಯರಿಗೆ, ಹಾಗೂ ದಂಪತಿಗಳಿಗೆ ಪ್ರತ್ಯೇಕವಾಗಿ ಆಪ್ತ ಸಮಾಲೋಚನಾ ಸಭೆಗಳನ್ನು ನಡೆಸಿದರೂ ಏನೂ ಪ್ರಯೋಜನವಾಗಲಿಲ್ಲ. ನ್ಯಾಯಾಧೀಶರು ಮುಂದಿನ ಸೋಮವಾರ ಅಂತಿಮವಾಗಿ ತೀರ್ಮಾನ ಕೊಡುವುದಾಗಿ ತಿಳಿಸಿ ನ್ಯಾಯಾಲಯದ ಕಲಾಪವನ್ನು ಅಂದಿಗೆ ಆಖೈರುಗೊಳಿಸಿ ಹೊರನಡೆದರು.

       ಸುಂದರೇಶ್, ನಂದಿತಾ ದಂಪತಿಗಳು ಮನೆಯವರ  ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದವರು, ಅವರುಗಳ ಹೆತ್ತವರು ಒಬ್ಬರಿಗಿಂತ ಒಬ್ಬರು ಶ್ರೀಮಂತರು, ಅವರುಗಳ ಹಣದ ಮದದಿಂದ, ಅಹಂಕಾರ, ಪ್ರತಿಷ್ಟೆಗಳಿಂದ ಅವರುಗಳು ಈ ಸಂಬಂಧಕ್ಕೆ ಸುತಾರಾಂ ಒಪ್ಪಿಗೆ ಕೊಡದ

ಕಾರಣ, ಸುಂದರೇಶ್-ನಂದಿತಾ  ಇಬ್ಬರೂ ದೇವಾಲಯದಲ್ಲಿ ಮದುವೆಯಾಗಿ ದೊಡ್ಡದೊಂದು ಮನೆ ಮಾಡಿ ಸುಮಾರು ಎರಡು ವರ್ಷಗಳ ತನಕ  ಇಬ್ಬರೇ ಇದ್ದರು , ಅವರಲ್ಲಿ ತುಂಬಾ ಅನ್ಯೋನ್ಯತೆ ಇತ್ತು, ಚೆನ್ನಾಗಿ ಓದಿರುವ ಹಾಗೇ ಒಳ್ಳೆಯ ಕೆಲಸಗಳಲ್ಲಿದ್ದಾರೆ,  ಕೈ ತುಂಬಾ ಸಂಬಳ, ಆಳು, ಕಾಳುಗಳು.   ಅವರಿಗೆ ಮದುವೆಯಾದ ಎರಡು ವರುಷಗಳ ನಂತರ ಹೆಣ್ಣು ಮಗಳು ಹುಟ್ಟಿದಳು, ಇವಳು ಹುಟ್ಟುವವರೆಗೂ ಸುಂದರವಾಗಿದ್ದ ಕುಟುಂಬ, ಮಗು ಯಾವಾಗ ಹುಟ್ಟಿತೋ ಆಗಿನಿಂದ ಅವರ ಕುಟುಂಬದಲ್ಲಿ ಬಿರುಕು ಹುಟ್ಟಿತು.

        ಆ ಹೆಣ್ಣು ಮಗುವೇ ಬಬಿತಾ,  ತುಂಬಾ ಸುಂದರ ಹಾಗೂ ಚೂಟಿ ಹುಡುಗಿ, ಸುಂದರೇಶ್ ದಂಪತಿಗಳ ಮನೆ ನಾಲ್ಕು ಕೊಠಡಿಗಳಿರುವ ಭವ್ಯ ಮನೆ , ಅಡಿಗೆ ಮಾಡಲು, ಮನೆ ಸ್ವಚ್ಛ ಮಾಡಲು, ಮನೆ ಕಾವಲು ಕಾಯಲು,  ಇಬ್ಬರ ಎರಡು ಕಾರುಗಳನ್ನು ಚಾಲನೆ ಮಾಡಲು ಇಬ್ಬರು ಚಾಲಕರು ಜೊತೆಗೆ ಬಬಿತಾಳನ್ನು ನೋಡಿಕೊಳ್ಳಲು ಸುಮಾರು ಐವತ್ತು ವರ್ಷ ದಾಟಿರುವ ಮಹಿಳೆ, ಶಾರದಮ್ಮ ಇದ್ದಾರೆ, ಶಾರದಮ್ಮನವರಂತೂ ತನ್ನ ಮೊಮ್ಮಗಳಿಗಿಂತಲೂ ಹೆಚ್ಚು ಪ್ರೀತಿಯಿಂದ ಸಲಹುತ್ತಾರೆ, ಅವರೆಂದರೆ ಬಬಿತಾಳಿಗೆ ತುಂಬಾ ಪ್ರೀತಿ, ಆತ್ಮೀಯತೆ , ಮೂರೊತ್ತೂ ಅವರೇ ಬಬಿತಾಳಿಗೆ ಆಸರೆ. ಕಾರಣ ಬಬಿತಾಳ ಹೆತ್ತವರು ಬಬಿತಾಳನ್ನು ಚೆನ್ನಾಗಿ ನೋಡಿಕೊಳ್ಳಲು ಆಗುತ್ತಿರಲಿಲ್ಲ, ಬಬಿತಾಳಿಗೆ ತಂದೆ, ತಾಯಿಯ ಪ್ರೀತಿಯೇ ಸಿಗುತ್ತಿರಲಿಲ್ಲ, ಅವರುಗಳು ತಮ್ಮ ಕೆಲಸಗಳು ಮುಗಿದ ನಂತರವೂ ಆ ಕ್ಲಬ್, ಈ ಕ್ಲಬ್, ಸ್ನೂಕರ್ ಕ್ಲಬ್, ಮಹಿಳಾ ಸಂಘ.....ಸಂಗಡಿಗರ ಜೊತೆ ಪ್ರವಾಸ,  ಎಂದು ಸುತ್ತುತ್ತಾ ರಾತ್ರಿ ಯಾವಾಗಲೋ ಬಂದು ಮನೆ

ಸೇರುತ್ತಿದ್ದರು, ಇದರಿಂದ ಬಬಿತಾಳು ಹೆತ್ತವರ ಪ್ರೀತಿಯಿಂದ ಸೊರಗಿಹೋಗಿದ್ದಳು, ಅವಳಿಗೆ ಶಾರದಮ್ಮ ನವರೇ ಎಲ್ಲವೂ ಆಗಿದ್ದರು, ಒಂದು ದಿನವೂ ಈ ಬಬಿತಾಳನ್ನು ಹೊರಗೆಲ್ಲೂ  ಒಟ್ಟಿಗೆ ಕರೆದುಕೊಂಡು ಹೋಗುತ್ತಿರಲಿಲ್ಲ, ಸುಂದರೇಶ್, ನಂದಿತಾ ದಂಪತಿಗಳು, ಪ್ರೀತಿಯನ್ನಂತೂ ಕೊಡುತ್ತಿರಲಿಲ್ಲ.

     ಇವರಿಬ್ಬರೂ ಪ್ರೀತಿಸಿ ಮದುವೆ ಮಾಡಿಕೊಂಡ ನಂತರ  ಸುಮಾರು  ವರುಷಗಳ ತನಕ ಈ ಇಬ್ಬರ ಹೆತ್ತವರು,  ತಮ್ಮ ಮಕ್ಕಳಿಂದ ದೂರವಿದ್ದವರು.   ಇವರ ಮನೆಕಡೆ ಮುಖಹಾಕಿ ಮಲಗದವರು, ಯಾವಾಗ ಬಬಿತಾ ಹುಟ್ಟಿದಳೋ ಆಗ ಮೆಲ್ಲಮೆಲ್ಲನೆ ಅವಳನ್ನು ನೋಡುವ ನೆಪದಲ್ಲಿ, ಪ್ರೀತಿ ಮಾಡುವ ಸಲುವಾಗಿ ಇಬ್ಬರ ಹೆತ್ತವರು, ಅವರ ಸಂಬಂಧಿಗಳು ಒಬ್ಬೊಬ್ಬರಾಗಿ ಇವರುಗಳ ಸನಿಹಕೆ ಬರತೊಡಗಿದಂತೆ, ಅವರುಗಳ ಹೆತ್ತವರ,ಸಂಬಂಧಿಗಳ ಹೇಳಿಕೆಗಳಿಂದ, ಚಾಡಿ ಮಾತುಗಳಿಂದ ಈ ದಂಪತಿಗಳ ನಡುವೆ ವಿಪರೀತ ಮನಸ್ತಾಪಗಳು ಹುಟ್ಟಿಕೊಂಡು ಇಬ್ಬರಲ್ಲೂ ದ್ವೇಷ, ಅಸೂಯೆಗಳು,  ಅನುಮಾನಗಳು ಹೆಚ್ಚುತ್ತಾ ಹೋದಂತೆ ಬಬಿತಾಳ ಬಗ್ಗೆ ತಿರಸ್ಕಾರವೂ ಹೆಚ್ಚುತ್ತಾ ಹೋಯಿತು, ಬಬಿತಾಳಿಗೂ ಸಹ ತನ್ನ ತಂದೆ, ತಾಯಿಯರ ಬಗ್ಗೆ ತಿರಸ್ಕಾರ ಮನೋಭಾವನೆ ಬೆಳೆಯಲು ಪ್ರಾರಂಭಿಸಿತು, ಅವಳು ಸಂಪೂರ್ಣವಾಗಿ ಸಾಕು ಅಜ್ಜಿ ಶಾರದಮ್ಮನವರನ್ನೇ ಅವಲಂಬಿಸುವಂತಾಯಿತು, ಈ ನಡವಳಿಕೆ ಸುಂದರೇಶ್, ನಂದಿತಾರಿಗೂ ಸರಿಯೇ ಎನಿಸಿತು, ಅವರಿಗೆ ಬಬಿತಾಳನ್ನು ಸಾಕುವ ಹೊಣೆಯಿಂದ ಹೊರಬಂದರೆ ಸಾಕೆಂದೆನಿಸಿತು, ಯಾರಾದರೂ ಸಾಕಲಿ, ನಮಗೆ ಅವಳು ಬೇಡವೇ ಬೇಡ ಎನ್ನುವ ಕಠೋರ  ನಿರ್ಧಾರಕ್ಕೆ ಬಂದಿದ್ದರು, ಅವಳನ್ನು

ಸಂಪೂರ್ಣವಾಗಿ ತಿರಸ್ಕರಿಸುವ  ಮನಸ್ಥಿತಿಗೆ ಬಂದಿದ್ದರು, ಅವರುಗಳ ಹೆತ್ತವರೂ ಸಹ ಬಬಿತಾಳನ್ನು ದ್ವೇಷಿಸುತ್ತಿದ್ದರು, ಇಬ್ಬರೂ ವಿಚ್ಛೇದನ ನೀಡಿ ಹೊರಬಂದರೆ ಇಬ್ಬರಿಗೂ ಬೇರೊಂದು ಮದುವೆ ಮಾಡಿಸಲೂ ಹೊಂಚುಹಾಕುತ್ತಿದ್ದರು, ಆ ಬಬಿತಾಳನ್ನು ಯಾವುದಾದರೂ ವಿದ್ಯಾರ್ಥಿ ನಿಲಯಕ್ಕೆ ಸೇರಿಸುವ ಬಗ್ಗೆಯೂ ಚರ್ಚೆಗಳು ಆಗುತ್ತಿದ್ದವು, ಇದು ಎಲ್ಲಿಗೆ ಬಂದು ನಿಂತಿತು ಎಂದರೆ ಒಂದೇ ಮನೆಯಲ್ಲಿ ಇಬ್ಬರೂ ಪ್ರತ್ಯೇಕವಾದ  ಕೋಣೆಗಳಲ್ಲಿ  ವಾಸಿಸತೊಡಗಿದರು, ಆದರೆ ಬಬಿತಾ ಮಾತ್ರ ಶಾರದಮ್ಮನವರ ಜೊತೆ ಇರತೊಡಗಿದಳು.

     ಇವರುಗಳ ನಡುವೆ ಆಳವಾದ ಬಿರುಕು ಮೂಡಿತು,

ಎಷ್ಟೆಂದರೆ  ಇವರಿಬ್ಬರೂ ನ್ಯಾಯಾಲಯಕ್ಕೆ ತಮ್ಮ ತಮ್ಮ ವಕೀಲರುಗಳ ಮುಖಾಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿಯೂಬಿಟ್ಪರು, ಇವರುಗಳ ಈ ನಡೆ ಅವರುಗಳ ಹೆತ್ತವರಿಗೂ ಖುಷಿ ನೀಡುತ್ತಿತ್ತು, ಕಾರಣ ಅವರುಗಳಿಗೆ ಈ ಸಂಬಂಧ ಬೇರ್ಪಡಿಸುವ ಒಂದು ಹುನ್ನಾರವಾಗಿತ್ತು, ಅದರಿಂದ ಲಾಭ ಪಡೆಯುತ್ತಿದ್ದವರು ಅವರುಗಳ ಸಂಬಂಧಿಕರು.

    ದಂಪತಿಗಳಿಬ್ಬರೂ ಅವರವರ ವಕೀಲರ ಮುಖಾಂತರ ಪ್ರತ್ಯೇಕವಾಗಿ ಅಂತಿಮವಾಗಿ ಒಂದು ನಿರ್ಧಾರಕ್ಕೆ ಬಂದಿದ್ದರು ಅದೇನೆಂದರೆ ವಿಚ್ಛೇದನ ಪಡೆದೇತೀರುವುದು.  ಅದರಂತೆ ನ್ಯಾಯಾಲಯದಲ್ಲಿ ಪ್ರತ್ಯೇಕವಾಗಿ ದಾವೆ ಹೂಡಿದ ಸುಂದರೇಶ್, ನಂದಿತಾ ತಮ್ಮ ವಕೀಲರುಗಳ  ವಾದ ತುಂಬಾ ಗಟ್ಟಿಯಾಗಿರುವಂತೆ ಮಾಡಲು, ಹೇರಳವಾಗಿ ಹಣ ಖರ್ಚು ಮಾಡತೊಡಗಿದರು.

       ಇವರುಗಳ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿದ

ಕೌಟುಂಬಿಕ ನ್ಯಾಯಾಲಯ ಸುಮಾರು ದಿನಗಳವರೆಗೆ ಇವರುಗಳ ವಕೀಲರು ಮಂಡಿಸಿದ ವಾದ ವಿವಾದಗಳನ್ನು  ಆಲಿಸಿದ ನ್ಯಾಯಾಧೀಶರು ಇವರುಗಳಿಬ್ಬರ ಹತ್ತು ವರ್ಷದ ಮಗಳು ಬಬಿತಾಳ ಬಗ್ಗೆ ಮೃದು ಧೋರಣೆಹೊಂದಿ ಆ ಹುಡುಗಿಗಾಗಿ ದಂಪತಿಗಳ ನಡುವೆ  ಆಪ್ತ ಸಮಾಲೋಚನಾ ಸಭೆಯನ್ನೂ ಏರ್ಪಡಿಸಿದರು, ಅದೂ ಏನೊಂದೂ ಪರಿಹಾರ ಕಾಣದೆ,  ಅವರುಗಳು ವಿಚ್ಛೇದನಕ್ಕೆ ಬದ್ದರಾಗಿದ್ದರು, ಮಗಳು ಬಬಿತಾಳಬಗ್ಗೆ ಒಂದಿಷ್ಟೂ ಕನಿಕರ ಹೊಂದಿಲ್ಲದ ಈ ದಂಪತಿಗಳನ್ನು, ಅವರ ಕುಟುಂಬದವರನ್ನು ನ್ಯಾಯಾಧೀಶರು ತುಂಬಾ ತರಾಟೆಗೆ ತೆಗೆದುಕೊಂಡರು, ಆದರೂ ಕೊನೆಗೆ ಮುಂದಿನ ಸೋಮವಾರ ಅಂತಿಮ ತೀರ್ಪು ನೀಡುವುದಾಗಿ ತಿಳಿಸಿದರು.

       ಅವರು ಹೇಳಿದ ದಿನ ಸೋಮವಾರ ಅಂತಿಮ ತೀರ್ಪಿಗೆ ಎಲ್ಲರೂ ಕಾತರರಾಗಿ ಕಾಯುತ್ತಿದ್ದಾರೆ, ಎರಡೂ ಕಡೆಯವರು ನ್ಯಾಯಾಲಯದಲ್ಲಿ ತುಂಬಾ ಜನ ಸೇರಿದ್ದಾರೆ, ಸುಂದರೇಶ್-ನಂದಿತಾ , ಬೇರೆ ಬೇರೆ ದಿಕ್ಕುಗಳಲ್ಲಿ ಕುಳಿತಿದ್ದರೆ, ಬಬಿತಾ ತನ್ನ ಸಪ್ಪೆಮೋರೆಯಿಂದ ಸಾಕು ಅಜ್ಜಿಯೊಡನೆ ಪ್ರೇಕ್ಷಕರ ಗ್ಯಾಲರಿಯ ಒಂದು ಭಾಗದಲ್ಲಿ ಕುಳಿತಿದ್ದಾಳೆ.

     ಸರಿಯಾದ ಸಮಯಕ್ಕೆ ನ್ಯಾಯಾಧೀಶರು ಆಗಮಿಸಿದರು ನ್ಯಾಯಾಲಯಕ್ಕೆ, ಇಡೀ ನ್ಯಾಯಾಲಯದಲ್ಲಿ ಸಂಪೂರ್ಣ ಮೌನ ಮೂಡಿದೆ,

ನ್ಯಾಯಾಧೀಶರು ತಮ್ಮ ತೀರ್ಪು ಓದಲಾರಂಭಿಸಿದರು, ಮೊದಲಾಗಿ ಈ ದಂಪತಿಗಳಿಗೆ ನ್ಯಾಯಾಲಯ ವಿಚ್ಛೇದನ ನೀಡಿದೆ, ಆದರೆ ಇವರೀರ್ವರರ ಮಗಳು ಇನ್ನೂ ಅಪ್ರಾಪ್ತ ಬಾಲಕಿಯಾಗಿರುವುದರಿಂದ ಅವಳನ್ನು ನೋಡಿಕೊಳ್ಳುವ

 

ಜವಾಬ್ದಾರಿಯನ್ನು ಮೊದಲ ಆರು ತಿಂಗಳುಗಳು ತಾಯಿಯೂ ಮತ್ತೆ ಆರು ತಿಂಗಳು ತಂದೆಯೂ ಸಾಕುವಂತೆ ತೀರ್ಪು ನೀಡುತ್ತಿರುವಾಗಲೇ ನಂದಿತಾಳ ವಕೀಲರು ಆಕ್ಷೇಪಣೆ ಸಲ್ಲಿಸಿದರು, ಮೊದಲು ತಂದೆ ನೋಡಿಕೊಳ್ಳುವಂತೆ ಆದೇಶ ನೀಡಬೇಕೆಂದು ಕೋರಿಕೊಂಡರು, ಇದಕ್ಕೆ ಸುಂದರೇಶ್ ನ ವಕೀಲರು ತಮ್ಮ ಆಕ್ಷೇಪಣೆ ಸಲ್ಲಿಸಿ ನ್ಯಾಯಾಧೀಶರು ನೀಡಿರುವ ತೀರ್ಪಿನಂತೆ ಮೊದಲು ತಾಯಿಯೇ ನೋಡಿಕೊಳ್ಳಬೇಕೆಂದು ವಾದಿಸಿದರು, ವಾದಕ್ಕೆ ಪ್ರತಿವಾದಗಳು ನಡೆಯುತ್ತಿರಬೇಕಾದರೆ ಅದೆಷ್ಟು ಸಮಯದಿಂದ ತುಂಬಾ ಸಂಯಮದಿಂದ ಕುಳಿತು ತನ್ನ ತಂದೆ-ತಾಯಿ ಹಾಗೂ ಅವರ ಕಡೆಯವರು ಕಚ್ಚಾಡುತ್ತಿದ್ದದ್ದನ್ನು ನೋಡುತ್ತಿದ್ದ ಅಮಾಯಕ ಬಾಲಕಿ ಬಬಿತಾ ಇಡೀ ನ್ಯಾಯಾಲಯಕ್ಕೆ ಕೇಳಿಸುವಂತೆ ಜೋರಾಗಿ ಅಳುತ್ತಾ ಕಿರುಚಿಕೊಂಡು, ಹೊರಗೆ ಓಡತೊಡಗಿದಳು, ನನಗೆ ಅಪ್ಪ, ಅಮ್ಮ ಇಬ್ಬರೂ ಬೇಡ, ನಾನು ಅವರ ಜೊತೆ ಹೋಗೊಲ್ಲ, ನನಗೆ ಅಪ್ಪ, ಅಮ್ಮ ಇಬ್ಬರೂ ಇಲ್ಲ, ಅವರು ನನ್ನನ್ನು ಸಾಯಿಸಿಬಿಡ್ತಾರೆ, ಹೊಡೆಯುತ್ತಾರೆ, ಬೈತಾರೆ, ನಾನು ಅವರ ಜೊತೆ ಹೋಗೊಲ್ಲ......... ಹೋಗೊಲ್ಲ........ನನಗೆ ತುಂಬಾ ಭಯವಾಗ್ತಿದೆ, ನಾನು ನನ್ನ ಶಾರದ ಅಜ್ಜಿ ಜೊತೆಗೆ ಇರ್ತೀನಿ ನನ್ನನ್ನು ಬಿಟ್ಟುಬಿಡಿ ಎಂದು ಅಳುತ್ತಾ ನ್ಯಾಯಾಲಯದಿಂದ ಹೊರಗೆ ಓಡಿದಳು, ಇವಳ ಈ ನಡೆಯಿಂದ ಕ್ಷಣಕಾಲ ನ್ಯಾಯಾಲಯದಲ್ಲಿ ನೀರವ ಮೌನ ಆವರಿಸಿತು, ಅಲ್ಲದೇ ಎಲ್ಲರೂ ಬಬಿತಾಳು ಏನಾದರೂ ಅನಾಹುತ ಮಾಡಿಕೊಂಡು ಬಿಟ್ಟಾಳು ಎಂದು ಅವಳನ್ನು ರಕ್ಷಿಸಲು ಅವಳ ಹಿಂದೆ ಓಡಿದರು ಮೊದಲಿಗೆ ಶಾರದಮ್ಮ ಕಿರುಚಿಕೊಳ್ಳುತ್ತಾ

ಬಬಿತಾ......ಬಬಿತಾ......ಎಲ್ಲಿರುವೆ ಬಾರಮ್ಮಾ ಎಲ್ಲಿರುವೆ ಎಂದು ಅವಳಹಿಂದೆ ಓಡಿಹೋಗಿ ಹೋದರೆ, ಬಬಿತಾಳ ಹೆತ್ತವರು ತಮ್ಮ ಸ್ಥಳ ಬಿಟ್ಟು ಕದಲಲಿಲ್ಲ, ಅಲ್ಲಿದ್ದವರೆಲ್ಲರೂ ಈ ದೃಶ್ಯ ಕಂಡು ಮೂಕವಿಸ್ಮಿತರಾಗಿ ನೋಡುತ್ತಿದ್ದರು.

        ಬಬಿತಾ ಓಡಿಹೋಗಿ ನ್ಯಾಯಾಲಯದ ಕಟ್ಟಡದ ಹೊರಗಿನ ಒಂದು ಮೂಲೆಯಲ್ಲಿ ಅಳುತ್ತಾ ಕುಳಿತಿದ್ದ ದ್ದನ್ನು ಕಂಡು ಅವಳನ್ನು ಸಮಾಧಾನಪಡಿಸಿ ಶಾರದಮ್ಮ ಕರೆತಂದರು ನ್ಯಾಯಾಲಯದೊಳಕ್ಕೆ ,

ಬಬಿತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು, ಅವಳನ್ನು ಸಮಾಧಾನಪಡಿಸುವುದೇ ಶಾರದಮ್ಮ ನವರಿಗೆ ಕಷ್ಟದ ಕೆಲಸವಾಯಿತು,  ಆದರೂ ಬಬಿತಾಳ ತಾಯಿ,ತಂದೆಯವರು ಹಾಗೂ ಅವರ ಕುಟುಂಬದವರು  ಕಲ್ಲು ಹೃದಯಿಗಳಾಗಿ ಆ ಮಗುವಿನ ಆರೈಕೆ ಕಡೆ ಗಮನ ಕೊಡದೆ,  ತಮ್ಮದೇ ಹಟ ಗೆಲ್ಲುವಂತೆ ವಾದಿಸಲು ಪ್ರಯತ್ನಪಡುತ್ತಿದ್ದರು, ಇದೆಲ್ಲವನ್ನೂ ಗಂಭೀರವಾಗಿ ಗಮನಿಸುತ್ತಿದ್ದ ನ್ಯಾಯಾಧೀಶರು, ಎಲ್ಲರನ್ನೂ ತರಾಟೆಗೆ‌ತೆಗೆದುಕೊಂಡರು, ಮೊದಲು ಸುಂದರೇಶ್- ನಂದಿತಾ ದಂಪತಿಗಳಿಗೆ ಜೊತೆಯಲ್ಲಿ ಅವರ ಮಗಳು ಬಬಿತಾಳೊಡನೆ  ಆಪ್ತ ಸಮಾಲೋಚನಾ ಸಭೆ ಏರ್ಪಡಿಸಿ, ಈ ಮುಗ್ಧ ಮಗುವಿನ ಮುಂದಿನ ದಾರಿ ಬಗ್ಗೆ ಮನವರಿಕೆ ಮಾಡಿಕೊಟ್ಟು, ಈ ಅರ್ಜಿಯನ್ನು ತಿರಸ್ಕರಿಸಿ ಈ ದಾವೆ ಹೂಡಲು ಸಹಕರಿಸಿದ ದಂಪತಿಗಳ ಇತರೆ ಎಲ್ಲಾ ಕುಟುಂಬದವರಿಗೆ ಸುಖಾಸುಮ್ಮನೆ, ಸುಂದರವಾಗಿ ಸಾಗುತ್ತಿದ್ದ ಕುಟುಂಬದಲ್ಲಿ ಅನಾವಶ್ಯಕ ವಾಗಿ ಭಾಗಿಯಾಗಿದ್ದಕ್ಕೆ ಅವರಿಗೆ ಈ ಬಾರಿ ಕೇವಲ ಚೀಮಾರಿ ಹಾಕಿ , ಸುಂದರೇಶ್-ನಂದಿತಾ ದಂಪತಿಗಳಿಗೆ  ತಮ್ಮ ಮಗಳು ಬಬಿತಾಳೊಡನೆ ಬದುಕುವಂತೆ ಎಚ್ಚರಿಕೆ ನೀಡಿದರು ಇದಕ್ಕೆ

ತಪ್ಪಿನಡೆದರೆ ಸೆರೆಮನೆವಾಸ ಅನುಭವಿಸುಬೇಕಾಗುತ್ತದೆ ಎಂದು  ಬುದ್ದಿ ಹೇಳಿ ಸುಂದರೇಶ್-ನಂದಿತಾ ದಂಪತಿಗಳು ಮಗಳು ಬಬಿತಾಳೊಡನೆ ಬಾಳುವಂತೆ ಹೇಳಿ ಕಳಿಸಿದರು.

      ಸುಂದರೇಶ್-ನಂದಿತಾ ದಂಪತಿಗಳು ತಾವು ಮಾಡಿದ ತಪ್ಪಿನ ಅರಿವಾಗಿ ಒಂದಾಗಿ ತಮ್ಮ ಮಗಳು ಬಬಿತಾಳೊಡನೆ ಸುಂದರ ಬದುಕು ಕಟ್ಟಿಕೊಂಡು ಬದುಕತೊಡಗಿದರು. ಬೇರೆಯವರ ಮಾತು ಕೇಳಿ ತಮ್ಮ ಮನೆಯನ್ನು ಹಾಳುಮಾಡಿಕೊಂಡಿದ್ದ ಸುಂದರೇಶ್ ನಂದಿತಾ ದಂಪತಿಗಳು ಈಗ ಸರಿದಾರಿಯಲ್ಲಿ ನಡೆಯತೊಡಗಿದರು, ಬಬಿತಾಳೊಡನೆ ಕ್ರಮೇಣ ಪ್ರೀತಿ ತೋರಲಾರಂಭಿಸಿದರು, ಜೊತೆಗೆ ಬಬಿತಾಳನ್ನು ಇದುವರೆಗೂ ಹೂವಿನಂತೆ ಸಾಕಿಸಲಹಿದ್ದ ಶಾರದಮ್ಮ ನವರನ್ನೂ ತಮ್ಮ ಜೊತೆಯಲ್ಲಿಯೇ ಇಟ್ಟುಕೊಂಡರು,  ಬಬಿತಾಳೂ ತಂದೆ ತಾಯಿ ಪ್ರೀತಿಯನ್ನು ಸವಿಯುತ್ತಾ, ಆನಂದದಿಂದ ಬೆಳೆಯುತ್ತಾ ಚೆನ್ನಾಗಿ ಓದತೊಡಗಿದಳು.

 

-ರಾಜೇಂದ್ರ ಕುಮಾರ್ ಗುಬ್ಬಿ