Click here to Download MyLang App

ನೆರೆ : ರವಿ ಪಾಟಿಲ್ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಧಾರವಾಡ ಶೈಲಿಯ ಕನ್ನಡ | ಯಾವ ದನಿಯಲ್ಲಿ ಆಡಿಯೋ ಕತೆಯಾಗಬೇಕು ಅನ್ನುವ ಕುರಿತು ಲೇಖಕರ ಆಯ್ಕೆ: ಗಂಡು ಧ್ವನಿ

ನೆರೆ

ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು
ಪದ ಕುಸಿಯೆ ನೆಲವಿಹುದು-ಮಂಕುತಿಮ್ಮ!!
ನಮ್ಮೂರ ಸೇತುವೆಯ ಮೇಲೆ ಹಾದು ಹೋಗುವಾಗ ಕತ್ತನ್ನು ಎಡಕ್ಕೆ ಇಲ್ಲವೇ ಬಲಕ್ಕೆ ತಿರುಗಿಸಿದರೆ ಕಾಣುವ ಕೃಷ್ಣೆಯನ್ನು ನೋಡಿದರೆ ನನ್ನ ಕಣ್ಣುಗಳು ಕ್ಷಣಕ್ಕೆ ಆದ್ರ್ರಗೊಂಡು ಬಿಡುತ್ತವೆ. ಆ ನದಿ ತಂದಿಡುವ ಮಹಾಪುರದ ಪ್ರಭಾವ ಅಷ್ಟಿಷ್ಟಲ್ಲ. ಅದನ್ನು ಅನುಭವಿಸುವ ಜೀವಗಳಿಗೇ ಅದರ ವೇದನೆ ಅರ್ಥವಾಗುವಂಥಾದ್ದು! ಪ್ರತಿವರ್ಷವೂ ಬರುವ ಜೂನ್, ಜುಲೈ, ಆಗಸ್ಟ್ ತಿಂಗಳುಗಳು ಎದೆಯಲ್ಲೊಂದು ದೊಡ್ಡ ನಡುಕವನ್ನೇ ಹುಟ್ಟಿಸಿಬಿಡುತ್ತವೆ. ಎಲ್ಲರಿಗೂ ತಿಳಿದಂತೆ ಜೂನ್‍ನಲ್ಲಿ ಮಳೆಗಾಲ ಆರಂಭವಾಗಿ ಮಹಾರಾಷ್ಟ್ರದ ಮಹಾಬಲೇಶ್ವರ, ಕೊಯ್ನಾ, ಕೊಲ್ಲಾಪುರ ಮುಂತಾದೆಡೆಗಳಲ್ಲಿ ಸುರಿಯುವ ಮಳೆಯಿಂದಾಗಿ ಹಳ್ಳಕೊಳ್ಳಗಳೆಲ್ಲಾ ಹರಿದುಬಂದು ಕೃಷ್ಣೆಯನ್ನು ಹೊಕ್ಕುಬಿಡುತ್ತವೆ. ಆಗ ನಮ್ಮ ಎದೆಯಲ್ಲಿ ತಳಮಳ ಶುರುವಾಗುತ್ತದೆ. ಕೊಯ್ನಾ ಡ್ಯಾಂನಿಂದ ಹೆಚ್ಚಾದ ನೀರನ್ನು ಮುಂದೆ ಹರಿದು ಬಿಡಲಾಗುತ್ತದೆ. ಅಲ್ಲಿಗೆ ಬೆಳಗಾಂ ಜಿಲ್ಲೆಯ ನೂರಾರು ಹಳ್ಳಿಗಳು ಮಹಾಪೂರದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನದಿಯ ತಟದಲ್ಲಿರುವ ರೈತರ ಪಾಡು ಹೇಳತೀರದು, ಕೇಳತೀರದು! ಒಂದು ಮಗುವಿನಂತೆ ಗೊಬ್ಬರಹಾಕಿ ಬೆಳೆಸಿದ ಪೈರು, ನೀರುಪಾಲಾದೀತೆಂಬ ಆತಂಕ ಒಂದೆಡೆಯಾದರೆ ದನಕರುಗಳು ಮನೆಯೊಳಗಿನ ಸಾಮಗ್ರಿಗಳು ನೀರಲ್ಲಿ ನೀರಾಗಿ ಹೋದಾವೆಂಬ ಅಳುಕು ಇನ್ನೊಂದೆಡೆ. ಈ ಕೃಷ್ಣೆಯ ಪ್ರತಾಪ ಊಹಿಸಲಸಾಧ್ಯ, ಒಮ್ಮೆ ತುಂಬಿ ಬಂದರೆ ಅಷ್ಟೇ! ಊರಿಗೆ ಊರೇ ನೀರ ಪಾಲು!
ಉದ್ಯೋಗದ ನಿಮಿತ್ಯ ನಾನು ಬೆಂಗಳೂರಿನಲ್ಲಿ ನೆಲೆಸಿರುವುದರಿಂದ ಜೂನ್, ಜುಲೈ ತಿಂಗಳುಗಳು ಬಂದರೆ ನಾನು ಇಲ್ಲಿಂದಲೇ ಬೆಚ್ಚಿಬೀಳುತ್ತೇನೆ. ಕಾರಣ ಮನೆಗೆ ಫೋನುಮಾಡಿ, ‘ಹೊಳೆ ಎಷ್ಟು ಬಂದಿದೆ?’ ಎಂದು ಕೇಳುವಾಗ ಗಂಟಲೆಲ್ಲಾ ಬಿಗಿಯಾಗಿರುತ್ತದೆ; ಎಷ್ಟು ಆತಂಕವೆಚಿದರೆ... ಆಹಾ... ಹೇಳಲಾರದಷ್ಟು! ‘ಎರಡು ಅಡಿ ಬಂದಿದೆ’, ‘ನಾಲ್ಕು ಬೆರಳು ಮಾತ್ರ ಬಂದಿದೆ’, ‘ನಿನ್ನೆ ರಾತ್ರಿ ಕಬ್ಬಿನ ಗದ್ದೆಗೆ ನೀರು ಹೊಕ್ಕಿದೆ’, ‘ಇನ್ನೆರಡು ದಿನ ಮಹಾರಾಷ್ಟ್ರದಲ್ಲಿ ಮಳೆ ನಿಲ್ಲದಂತೆ’, ‘ಇನ್ನೂ ಎರಡು ದಿನ ನೀರು ಕೊಯ್ನಾ ಡ್ಯಾಂನಿಂದ ಬಂದೇ ಬರುತ್ತದೆ ಅಂತೆ’ ಎಂದೆಲ್ಲಾ ಅಮ್ಮ ವರದಿ ಒಪ್ಪಿಸುವಾಗ ನಾನು ಕುಂತಲ್ಲೇ ಕುಸಿದುಹೋಗುತ್ತೇನೆ. ಒಂದೊಂದು ಬಾರಿ ಅಪ್ಪ ಬೆಳ್ಳಂಬೆಳಗ್ಗೆ ಫೋನು ಮಾಡಿ ‘ಲೋ ರವಿ, ನಮ್ಮ ಹೊಳಿ ಪಂಪ್‍ಸೆಟ್ ಮೋಟಾರು ಮುಳಗ್ಯದೆ; ನೀರಿಂದ ಮ್ಯಾಲೆತ್ತೋಕೆ ಬಸಣ್ಣ (ನನ್ನಣ್ಣ) ತನ್ನ ಗೆಳೆಯರೊಂದಿಗೆ ಈಗ ಹೋಗ್ಯಾನೆ, ಇನ್ನೂ ಅಂವ ಟೀ ಕೂಡಾ ಕುಡೀದ ಹಂಗ ಎದ್ದ ಹೋಗ್ಯಾನ, ನಾನೂ ಪಾನಾ ತುಗೊಂಡ ಹೊಂಟಿನಿ... ಹೊಳೀಕಡೆ’, ಎಂದು ಅಪ್ಪ ಹೇಳುವಾಗ, ‘ನಾನೂ ಅಲ್ಲೇ ಇದ್ದಿದ್ದರೆ ಮೋಟಾರ್ ಎತ್ತೋಕೆ ಹೋಗಬಹುದಿತ್ತಲ್ಲ, ಬೇಗನೇ ಎತ್ತಿ ಅದನ್ನ ರಿಪೇರಿ ಮಾಡಿ ಮತ್ತೆ ಕೂಡ್ರಿಸಬಹುದಿತ್ತಲ್ಲಾ’ ಎಂದು ಗೆಳೆಯರಿಗೆ ಹೇಳಿ ನನ್ನ ದುಃಖವನ್ನು ಹಂಚಿಕೊಳ್ಳುತ್ತೇನೆ. ಕೆಲವೊಂದು ಸಾರಿ ನೀರೊಳಗೆ ಮುಳುಗಿ ಮೋಟಾರ್ ಸಿಗದೇ ಮೇಲೆ ಬಂದ ಅಣ್ಣನ ಕಣ್ಣಿನಲ್ಲಿ ಕಣ್ಣೀರು ಕಾಣಿಸುತ್ತಿತ್ತು.
ಆರು ವರ್ಷಗಳ ಹಿಂದೆ ಬಂದಿದ್ದ ಪ್ರವಾಹ ಮಾತ್ರ ಯಮಲೋಕದಿಂದ ಸ್ವತಃ ಯಮದೇವನೇ ಎದೆಗೆ ಬಂದುನಿಂತ ಅನುಭವ ನೀಡಿತ್ತು. ಆ ಪ್ರವಾಹಕ್ಕೆ ಎಲ್ಲವೂ ಕೊಚ್ಚಿಹೋಗಿತ್ತು. ಊರಿಗೆ ಊರೇ ಕಣ್ಣುತುಂಬಿ ಅತ್ತಿತ್ತು. ಒಬ್ಬರ ಕೈಯಲ್ಲಿ ದನಕರು, ಮತ್ತೊಬ್ಬರ ಕೈಯಲ್ಲಿ ಬಟ್ಟೆಬರೆ, ಟ್ರಂಕು, ಸಂದೂಕ, ಲ್ಯಾಂಟೀನು, ಟಿ.ವಿ., ಕಾಟು, ಪಾತ್ರೆಪಗಡು, ದಿನಬಳಕೆಯ ಸಾಮಗ್ರಿಗಳು ಹೀಗೆ...
ಹಿಂದೆ ನಾನು ಎಸ್.ಎಸ್.ಎಲ್.ಸಿಯಲ್ಲಿ ತುಂಬಾ ಜಾಣನೆಂದು ಹೆಸರು ಪಡೆದು ಇಡೀ ಶಾಲೆಗೆ ಪ್ರಥಮ ರ್ಯಾಂಕ್ ಬಂದಿದ್ದೆನಾದ್ದರಿಂದ ಮನೆಯ ತುಂಬಾ ನನ್ನ ಪುಸ್ತಕಗಳಿದ್ದು ಅಂದಿನ ಆ ಮಹಾಪುರದಲ್ಲಿ ನನ್ನ ಅಜ್ಜಿ, ‘ನೋಡೋ ಶಂಕ್ರು, ನಮ್ಮ ಹುಡಗನ ಪುಸ್ತಕಾ ಎಲ್ಲಾ ಯೂರಿಯಾ ಚೀಲದಾಗ ಗಂಟಕಟ್ಟಿ ಇಟ್ಟೀನಿ, ಮೊದಲು ಅವನ್ನ ಎತ್ತಕೊಂಡು ಹೋಗು’, ಎಂದು ಅಪ್ಪನಿಗೆ ಆಜ್ಞೆಯಿತ್ತಿದ್ದಳು. ಅಪ್ಪ ಅಜ್ಜಿಯ ಮಾತು ಮೀರದೆ ನನ್ನ ಪುಸ್ತಕದ ಚೀಲವನ್ನು ಮೊತ್ತ ಮೊದಲು ಸಾಗಿಸಿದ್ದ. ಅಂದು ಬಂದಿದ್ದ ಆ ಪ್ರವಾಹಕ್ಕೆ ಎಲ್ಲ ಪ್ರಾಣಿಗಳು ತತ್ತರಿಸಿಹೋಗಿದ್ದವು. ನಮ್ಮ ದೊಡ್ಡ ಎಮ್ಮೆಯ ಕರುವೊಂದು ನೀರಲ್ಲಿ ಮುಳುಗಿ ಸತ್ತೇ ಹೋಗಿತ್ತು. ಎಷ್ಟೋ ಜನ ರೈತರು ತಮ್ಮ ತಮ್ಮ ಎಮ್ಮೆಗಳನ್ನು ಸಾಗಿಸುವುದರಲ್ಲಿ ಮನೆಯಲ್ಲಿರುವ ಬೆಲೆಬಾಳುವ ಸಾಮಾನುಗಳನ್ನೇ ಮರೆತಿದ್ದರು. ಕೊನೆಗೆ ಅವೆಲ್ಲ ನೀರಲ್ಲಿ ನೀರಾಗಿದ್ದವು. ಯಾವ ಯಾವ ವಸ್ತುಗಳನ್ನು ಎಲ್ಲಿಂದ ತಂದ್ವಿ ಎಲ್ಲಿಗೆ ಸಾಗಿಸಿದ್ವಿ ಎಂಬುದೂ ಅಸ್ಪಷ್ಟವಾಗಿತ್ತು. ಈ ನದಿಯೊಳಗೆ ಎಷ್ಟೊಂದು ಭೀಕರ ಶಕ್ತಿಯಿದೆ ಎಂಬಂತೆ ಊರಿಗೆ ಊರೇ ಬೆರಗುಗೊಂಡು ನೋಡಿತ್ತು; ಅತ್ತಿತ್ತು. ಆದರೆ ಅವರ ಆ ದುಃಖವನ್ನು ಕೇಳುವವರಾರು?
ನಾನು ಆಗ ಕಾಲೇಜಿನಲ್ಲಿ ಓದುತ್ತಿದ್ದೆ. ಅಪ್ಪ-ಅಮ್ಮ ನನಗೆ ಇದರ ಬಗ್ಗೆ ಸರಿಯಾದ ಮಾಹಿತಿಯನ್ನೇ ನೀಡುತ್ತಿರಲಿಲ್ಲ. ‘ಇನ್ನೂ ನೀರು ಕೆಳಗೆ ಇದೆ, ಮ್ಯಾಲೆ ಬಂದಿಲ್ಲ’ ಎಂದು ಸುಳ್ಳುಗಳನ್ನು ಹೇಳುತ್ತಿದ್ದರು. ನಾನು ಚನ್ನಾಗಿ ಓದಬೇಕು, ನನಗೇಕೆ ಕಷ್ಟಕಾರ್ಪಣ್ಯಗಳನ್ನು ಕಿವಿಗೆ ಹಾಕಬೇಕೆಂಬುದು ಅವರ ಇಚ್ಛೆಯಾಗಿತ್ತು! ನಾನು ಚನ್ನಾಗೇ ಓದುತ್ತಿದ್ದೆನಾದರೂ ಮನಸ್ಸೆಲ್ಲಾ ಹಳ್ಳಿಯಲ್ಲೇ, ಹೊಳೆಯ ದಂಡೆಯಲ್ಲೇ ಇರುತ್ತಿತ್ತು. ಏನಾಯ್ತು ಏನಾಯ್ತು ಎಂಬಂತೆ! ಕೆಲವೊಂದು ಬಾರಿ ತಮ್ಮ ಕಾಳುಕಡಿಗಳ ಚೀಲಗಳನ್ನು ಮನೆಯ ಅಟ್ಟದ ಮೇಲೆ ಸುರಕ್ಷಿತವಾಗಿರುತ್ತವೆಂದು ಇಟ್ಟಿರುತ್ತಿದ್ದರು ಜನ. ಅಷ್ಟು ಮೇಲಕ್ಕೆ ನೀರು ಬರುವುದಿಲ್ಲವೆಂಬ ನಂಬಿಕೆ! ಆದರೆ ಮನೆಬಿಟ್ಟು ಬೇರೆಲ್ಲೋ ನೆಲೆ ನಿಂತಾಗ ನೀರು ತುಂಬಾ ಬಂದು ಮನೆ ಪೂರ್ತಿ ನೀರಲ್ಲಿ ನಿಂತುಕೊಂಡ ಸುದ್ದಿತಿಳಿದರೆ ಅವರ ಕಣ್ಣಲ್ಲಿ ನೀರು ಬರುತ್ತಿತ್ತು. ಅಂತಹ ಸಂದರ್ಭಗಳಲ್ಲಿ ಸರ್ಕಾರ ನಿರ್ಮಿಸಿದ್ದ ಗಂಜಿಕೇದ್ರಗಳಲ್ಲಿ ಕೊಡುವ ಅನ್ನವನ್ನು ತಿನ್ನಲು ನಮಗೆ ಮನಸ್ಸು ಬರುತ್ತಿರಲಿಲ್ಲ. ಎಲ್ಲರಿಗೂ ಒಂದೇ ಚಿಂತೆ! ಮನೆ ಹೇಗಿರಬೇಕು, ಅಲ್ಲಲ್ಲಿ ಅಟ್ಟವೇರಿಸಿಟ್ಟ ಸಾಮಾನುಗಳು ಏನಾದಾವು ಎಂಬುದು! ಹೆಂಗಸರಿಗೆ ಹಪ್ಪಳ, ಸಂಡಿಗೆ, ಶಾವಿಗೆ ಡಬ್ಬಗಳ ಬಗ್ಗೆ ಚಿಂತೆ, ಗಂಡಸರಿಗೆ ಬೆಲೆಬಾಳುವ ವಸ್ತುಗಳ ಚಿಂತೆ! ಒಂದು ಸಾರಿ ಅಮ್ಮ ಅಕ್ಕ ಸೇರಿ ಒಂದು ಯೋಜನೆ ಮಾಡಿದ್ದರು. ಅದೇನೆಂದರೆ ದೇವರ ಚಿಕ್ಕ ಕೋಣೆಯಲ್ಲಿ ಒಂದು ಗಣೇಶನ ಮೂರ್ತಿಯನ್ನು ಅಲ್ಲೇ ಬಿಟ್ಟು ಬಂದಿದ್ದರು. ಹಾಗೇಕೆ ಅಲ್ಲೇ ಬಿಟ್ಟುಬಂದಿದ್ದೀರೆಂದು ನಾನವರನ್ನು ಕೇಳಿದ್ದಾಗ, ‘ಗಣೇಶನ ಕೃಪೆಯಿಂದ ಗಂಗಮ್ಮ ತಾಯಿ ಬೇಗ ಇಳೀತಾಳೆ’ ಎಂಬ ನಂಬಿಕೆಯ ಉತ್ತರವನ್ನು ಕೊಟ್ಟಿದ್ದರು. ನಾನು ಮೆತ್ತಗೆ ನಕ್ಕಿದ್ದೆ. ಒಣಸಂಡಿಗೆಯೆಂದರೆ ನನಗೆ ತುಂಬಾ ಇಷ್ಟ. ಅದಕ್ಕೆ ಅಮ್ಮನಿಗೆ ಫೋನುಮಾಡಿ ‘ಅಮ್ಮಾ ಸಂಡಿಗೆ ಡಬ್ಬಿ ಹೇಗಿದೆಯಂತೆ, ನೀರಲ್ಲಿ ಮುಳುಗಿಲ್ಲ ತಾನೆ?’ ಎಂದು ತಮಾಷೆ ಮಾಡುತ್ತಿದ್ದೆ. ಆ ನೋವಿನಲ್ಲೂ ಅಮ್ಮ ತಮಾಷೆಯನ್ನು ಹೊಟ್ಟೆಗೆ ಹಾಕಿಕೊಂಡು ನಗುತ್ತಿದ್ದಳು. ಸರ್ಕಾರ ತೆರೆದಿದ್ದ ಗಂಜೀಕೇಂದ್ರಗಳು ದಿನದ ಇಪ್ಪತ್ನಾಲ್ಕು ಗಂಟೆಯೂ ತೆರೆದಿರುತ್ತಿದ್ದವು. ಯಾವಾಗಲಾದರೂ ಹೋಗಿ ಊಟ ಮಾಡಬಹುದಿತ್ತು. ಆದರೆ ಹಸಿವೆಯೇ ಆಗುತ್ತಿರಲಿಲ್ಲ ಮತ್ತು ರಾತ್ರಿಯಿಡೀ ನಿದ್ರೆಯೇ ಬರುತ್ತಿರಲಿಲ್ಲ. ರಾತ್ರಿಯಿಡೀ ಹಸುಗಳು ಮೇವಿಲ್ಲದೇ ಒದರುತ್ತಿರುವಾಗ ನಮಗೆ ನಿದ್ರೆಯಾದರೂ ಹೇಗೆ ಬಂದೀತು!
ನಾನು ಆರನೆಯ ತರಗತಿಯಲ್ಲಿದ್ದಾಗಲೊಮ್ಮೆ ಮಹಾಪೂರ ಬಂದಿತ್ತು. ಆಗ ನನಗೆ ತಿಳುವಳಿಕೆ ಕಮ್ಮಿ. ನಾವು ಗೆಳೆಯರೆಲ್ಲಾ ಸೇರಿ ನದಿಯ ದಡಕ್ಕೆ ಹೋಗಿ ನದಿಯೊಳಗೆ ಹರಿದುಬರುತ್ತಿದ್ದ ಪೆರಲ ಹಣ್ಣುಗಳನ್ನು ಹಿಡಿದು ತಿನ್ನುತ್ತಿದ್ದೆವು. ಗದ್ದೆಯಲ್ಲೆಲ್ಲಾ ಸೊಂಟದ ಮಟ್ಟಕ್ಕೆ ನೀರು ಬಂದು ನಿಂತಾಗ ಬಾಳೆ ದಿಂಡುಗಳಿಂದ ತೆಪ್ಪಗಳನ್ನು ಕಟ್ಟಿ ನೀರಲ್ಲಿ ಸುತ್ತಾಡಿ ಹರ್ಷಿಸುತ್ತಿದ್ದೆವು. ಆ ಸಂಭ್ರಮ, ಸಡಗರ, ಸಂತಸ ಹೇಳತೀರದು. ಈಗಲೂ ಆ ದಿನಗಳು ನನ್ನ ಕಣ್ಣುಗಳಲ್ಲ್ಲಿ ಅಚ್ಚೊತ್ತಿವೆ. ಅಣ್ಣ ಗಂಜೀಕೇಂದ್ರದಿಂದ ಒಮ್ಮೆ ದೊಡ್ಡ ತೆಪ್ಪ ಕಟ್ಟಿಕೊಂಡು ಗೆಳೆಯರೊಂದಿಗೆ ನೀರಲ್ಲಿ ಅರ್ಧ ಕಿಲೋಮೀಟರಿನಷ್ಟು ದೂರದಲ್ಲಿದ್ದ ನಮ್ಮ ಮನೆಯತ್ತ ಹೋಗಿ ಬಂದಿದ್ದ. ಅಟ್ಟವೇರಿಸಿಟ್ಟ ಸಾಮಾನುಗಳನ್ನು ನೋಡಿಕೊಂಡು ಬರಲೆಂದು ಹೋಗಿದ್ದ! ‘ಅಪ್ಪ ನಮ್ಮ ಮನೆ ಪೂರ್ತಿ ಮುಳಗ್ಯದೆ, ಟಿ.ವಿ. ಎಂಟೇನಾ ಮಾತ್ರ ಒಂಚೂರು ಕಾಣಸ್ತಿದೆ’, ಎಂದು ಆತ ಹೇಳುವಾಗ ಅವನ ಕಣ್ಣಲ್ಲಿ ನೀರು ಕಾಣುತ್ತಿತ್ತು. ಕ್ಷಣಕ್ಕೆ ನಮ್ಮೆಲ್ಲರ ಕಣ್ಣುಗಳೂ ತೇವಗೊಳ್ಳುತ್ತಿದ್ದವು. ಲಕ್ಷಾಣುಗಟ್ಟಲೇ ಬೆಲೆಬಾಳುವ ಸಾಮಾನುಗಳು ಅಟ್ಟದ ಮೇಲಿದ್ದವು. ಎಲ್ಲವೂ ನೀರ ಪಾಲು! ಕೆಲವೊಂದಿಷ್ಟು ಗುಡಿಸಲುಗಳು ಪ್ರವಾಹದ ರಭಸಕ್ಕೆ ನೀರೊಂದಿಗೆ ಹರಿದುಕೊಂಡೇ ಹೋಗಿದ್ದವು. ಅವುಗಳಿದ್ದ ಸ್ಥಳವೂ ಕೂಡ ಗುರುತು ಸಿಗದಂತೆ! ಸ್ವಲ್ಪ ನೀರಿಳಿದ ಮೇಲೆ ಅಣ್ಣನೊಂದಿಗೆ ಅಪ್ಪನೂ ತೆಪ್ಪದ ಮೇಲೆ ಅಲ್ಲಿಗೆ ಹೋಗಿದ್ದ. ಬಾಗಿಲು ತೆರೆದು ಒಳಗೆ ಹೆಜ್ಜೆಯಿಟ್ಟಾಗ ಮನೆಯಲ್ಲಿ ಇನ್ನೂ ಸೊಂಟದವರೆಗೆ ನೀರಿತ್ತು! ನೀರಿನಲ್ಲಿ ಹಪ್ಪಳ, ಸಂಡಿಗೆ, ಶಾವಿಗೆ, ಜೋಳ, ಬೇಳೆಕಾಳುಗಳು, ಪಾತ್ರೆಗಳು ತೇಲಾಡುತ್ತಿದ್ದವು! ಅಣ್ಣ ಅಮ್ಮನಿಗೆ ಹಪ್ಪಳ, ಸಂಡಿಗೆಗಳ ವಿಚಾರವನ್ನು ಹೇಳಿದಾಗ ಅಮ್ಮ ಇನ್ನಿಲ್ಲದಂತೆ ಅತ್ತಿದ್ದಳು.
ಪ್ರವಾಹವೆಲ್ಲಾ ಕಡಿಮೆಯಾಗಿ, ನೀರು ಇಳಿದುಹೋದ ಮೇಲೆ ನದಿಯು ಮತ್ತೆ ಯಥಾಸ್ಥಿತಿಗೆ ಬಂದಾಗ ನಾವೆಲ್ಲ ಉಸಿರುಬಿಡುತ್ತಿದ್ದೆವು. ನೀರೆಲ್ಲಾ ಇಳಿದುಹೋದ ಮೇಲೂ ತೇವಾಂಶವಿರುತ್ತಿತ್ತು. ತಿಂಗಳುಗಟ್ಟಲೇ ಬೇಕಾಗುತ್ತಿತ್ತು, ಅದು ಆರುವುದಕ್ಕೆ! ದನಕರುಗಳನ್ನು ನೀರಿನಲ್ಲಿ ಕಟ್ಟಿರುತ್ತಿದ್ದೆವು. ಅಪ್ಪ, ಅಣ್ಣ ಮತ್ತು ಅಮ್ಮ ಅಲ್ಲಿನ ನೀರನ್ನು ಪೊರಕೆಯಿಂದ ಗುಡಿಸಿ ರೊಜ್ಜನ್ನೆಲ್ಲಾ ತಿಪ್ಪೆಗೆ ಎಸೆಯುತ್ತಿದ್ದರು. ಎಮ್ಮೆಗಳು ರೊಜ್ಜನ್ನು ಮಾಡಿಕೊಂಡಿರುತ್ತಿದ್ದವು. ತುಂಬಾ ದಿನಗಳವರೆಗೆ ನೀರಿರುತ್ತಿತ್ತಾದ್ದರಿಂದ ನೆಲವೆಲ್ಲಾ ಒಂಥರಾ ಕೊಳಕು ಕೊಳಕಾಗಿ ನಾರುತ್ತಿತ್ತು. ಸೊಳ್ಳೆಗಳು ವಿಪರೀತವಿರುತ್ತಿದ್ದವು. ಅಣ್ಣ ಸಂಜೆಯಾದರೆ ಹಸಿಯಾದ ಎಲೆಗಳಿಂದ ದನಗಳ ಹಿಂದೆ ಹೊಗೆ ಹಾಕುತ್ತಿದ್ದ. ಕ್ರಮೇಣ ಸೊಳ್ಳೆಗಳೆಲ್ಲ ಕಡಿಮೆಯಾಗುತ್ತಿದ್ದವು. ಇನ್ನು ಗದ್ದೆಯಲ್ಲಿದ್ದ ಕಬ್ಬಿನ ಸುಳಿಗಳೊಳಗೆ ನೀರು ಸೇರಿಕೊಂಡು ಕಬ್ಬೆಲ್ಲ ನಾಶವಾಗಿ ಹೋಗಿರುತ್ತಿತ್ತು. ಲಕ್ಷಗಟ್ಟಲೇ ಬೆಲೆಬಾಳುವ, ಮಗುವಿನಂತೆ ಬೆಳೆಸಿದ ಕಬ್ಬಿನ ಗದ್ದೆ ನೋಡಲು ಸ್ಮಶಾನದಂತೆ ಕಾಣುತ್ತಿತ್ತು. ಅಪ್ಪ ಮತ್ತು ಅಣ್ಣನ ಕಣ್ಣುಗಳನ್ನು ನೋಡಲಾಗುತ್ತಿರಲಿಲ್ಲ.
ಮನೆಯ ಬಾಗಿಲು ತೆರೆದು ಒಳಗೆ ಹೊಕ್ಕಾಗ ರುದ್ರಭೂಮಿಯನ್ನು ಹೊಕ್ಕ ಅನುಭವವಾಗುತ್ತಿತ್ತು. ಎಲ್ಲೆಂದರಲ್ಲಿ ಸಾಮಾನುಗಳು ಬಿದ್ದಿರುತ್ತಿದ್ದವು. ಎಲ್ಲವನ್ನು ಎತ್ತಿ ಹೊರ ಅಂಗಳಕ್ಕೆ ತಂದಿಡುತ್ತಿದ್ದೆವು. ಅಮ್ಮ, ಅಕ್ಕ ಮತ್ತು ನನ್ನ ತಂಗಿ ಎಲ್ಲರೂ ಅವನ್ನು ಹಸನಾಗಿ ತೊಳೆಯುತ್ತಿದ್ದರು. ಬಿಸಿಲಿಗೆ ಒಣಗಿಸುತ್ತಿದ್ದರು. ಅಪ್ಪ ಮತ್ತು ಅಣ್ಣ ಮನೆಯನ್ನೆಲ್ಲಾ ಸ್ವಚ್ಛವಾಗಿ ತೊಳೆಯುತ್ತಿದ್ದರು. ಮತ್ತೊಂದು ಹೊಸ ಜೀವನ ಹೂಡಿದಂಥ ಅನುಭವ! ಎರಡು, ಮೂರು ವರ್ಷಕ್ಕೊಮ್ಮೆ ಇಂಥ ಯಾತನೆ ಇದ್ದಿದ್ದೇ, ಅದೂ ಹೇಳತೀರದ್ದು! ಎಷ್ಟು ಬಾರಿ ತೊಳೆದರೂ ಮನೆ ಸ್ವಚ್ಛವಾಗುತ್ತಿರಲಿಲ್ಲ. ಸುಮಾರು ಅರ್ಧ ಅಡಿಯಷ್ಟು ಮಣ್ಣು ನೆಲದ ಮೇಲೆ ಕೆನೆಗಟ್ಟಿರುತ್ತಿತ್ತು. ಕರೆಂಟ್ ವೈರುಗಳೆಲ್ಲ ತೇವಗೊಂಡು ಸರಿಯಾಗಿ ವಿದ್ಯುತ್ ಕೂಡಾ ಇರುತ್ತಿರಲಿಲ್ಲ. ಅದೊಂದು ತೆರನಾದ ವಾಸನೆ, ಕಪ್ಪೆ, ಜಿಟ್ಟೆ, ಸೊಳ್ಳೆ ಮೊದಲಾದವುಗಳ ವಟವಟ, ಲೊಚಲೊಚ ರಾತ್ರಿಯನ್ನು ಇನ್ನೂ ಗಾಡಾಂಧಕಾರಗೊಳಿಸುತ್ತಿದ್ದವು. ಅಂಥದ್ದರಲ್ಲಿ ಅಮ್ಮ ರೊಟ್ಟಿತಟ್ಟಿ, ಅನ್ನ ಕುದಿಸಿ ಬಡಿಸುತ್ತಿದ್ದಳು. ಕೆಲವೊಮ್ಮೆ ನೆಂಟರಿಷ್ಟರು ಬಂದು ನಮ್ಮನ್ನು ವಿಚಾರಿಸಿಕೊ0ಂಡು ಹೋಗುತ್ತಿದ್ದರು. ಬರುವಾಗ ಬುತ್ತಿಯನ್ನು ಕಟ್ಟಿಕೊಂಡು ಬರುತ್ತಿದ್ದರು. ಅವರು ‘ಹಾಗಾಗಬಾರದಿತ್ತು’, ‘ಹೀಗಾಗಬಾರದಿತ್ತು’ ಎನ್ನುತ್ತಿದ್ದರೇ ವಿನಃ ನಮ್ಮ ಗೋಳನ್ನು ಕೇಳಿಯೂ ಕೇಳದಂತೆ ‘ಹಾಂ...ಹೂಂ...’ ಎಂದು ಹೊರಡು ಹೋಗುತ್ತಿದ್ದರು. ಕೊನೆಗೂ ನಮ್ಮ ಗೋಳು ನಮಗೇ ಉಳಿದುಬಿಡುತ್ತಿತ್ತು. ಇಂಥ ಮಹಾಪೂರಗಳು ಬಂದಾಗ ಎಷ್ಟೇ ದ್ವೇಷವಿರಲಿ ನೆರೆಹೊರೆಯವರೆಲ್ಲಾ ಒಂದಾಗಿ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. ಎಲ್ಲರದೂ ಒಂದೇ ಗೋಳಿರುತ್ತಾದ್ದರಿಂದ ಅವರಿಗೆ ನಾವು ನಮಗೆ ಅವರು ಎನ್ನುವಂತೆ ಸಹಾಯಹಸ್ತ ಚಾಚುತ್ತಿದ್ದೆವು.
ಸರ್ಕಾರ ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರಧನವನ್ನು ಘೋಷಿಸುತ್ತಿತ್ತು. ಲಕ್ಷಗಟ್ಟಲೇ ಕಳೆದುಕೊಂಡ ರೈತರಿಗೆ ಐದೋ ಹತ್ತೋ ಸಾವಿರ ರೂಪಾಯಿಗಳ ಪರಿಹಾರವನ್ನು ಘೋಷಿಸಿದಾಗ ನಮಗೆ ಅಷ್ಟಿಷ್ಟು ಸಂತಸವಾಗುತ್ತಿತ್ತು. ಅಷ್ಟಾದರೂ ಕೊಟ್ರಲ್ಲ ಎಂಬ ಜ್ವಲಂತಕ್ಕೆ! ಅಧಿಕಾರಿಗಳು ಅದು ಇದು ಎಂದು ಸರ್ವೇಗಳನ್ನು ಮಾಡುತ್ತಿದ್ದರು. ಕೊನೆಗೂ ‘ಚೆಕ್ಕುಗಳು’ ‘ಬಂದೇ' ಬಿಡುತ್ತಿದ್ದವು. ಅವರಿಗೆ ಇನ್ನೂರೋ ಐನೂರೋ ಕೊಟ್ಟು, ಐದು ಸಾವಿರದ್ದೋ ಹತ್ತು ಸಾವಿರದ್ದೋ ಒಂದು ಚೆಕ್ಕು ಪಡೆಯುವಷ್ಟರಲ್ಲಿ ಕಣ್ಣೀರು ಕಪಾಳು ಕಾಣುತ್ತಿತ್ತು. ಒಂದು ಚೀಲ ಜೋಳ, ಒಂದು ಚೀಲ ಅಕ್ಕಿಗೆ ಅದು ಸಧ್ಯ ಸರಿಹೋಗುತ್ತಿತ್ತು. ಇಂಥ ಯಾತನೆ ನಮಗೆ ಪ್ರತಿವರ್ಷವೂ ಇರುವುದಿಲ್ಲವಾದರೂ ಐದಾರು ವರ್ಷಗಳಿಗೊಮ್ಮೆಯಾದರೂ ಇದು ಇದ್ದಿದ್ದೇ! ಮತ್ತೊಮ್ಮೆ ಕಣ್ಣೀರು ಕಪಾಳಿಗೆ! ಸರ್ಕಾರ ನಮ್ಮನ್ನು ಯೋಜನಾ ನಿರಾಶ್ರಿತರೆಂದು ಘೋಷಿಸಿಬಿಟ್ಟಿದೆಯಷ್ಟೇ! ಆದರೆ ಅದೆಲ್ಲಿ ಸ್ಥಳ ಕೊಡುತ್ತಾರೋ, ಅದೆಷ್ಟು ಪರಿಹಾರಧನ ಕೊಡುತ್ತಾರೋ ಇನ್ನೂ ಕಾಯಬೇಕು! ಅದಕ್ಕೆ ಅಧಿಕಾರಿಗಳಿಗೆಷ್ಟು ‘ಲಂಚ’ ಕೊಡಬೇಕೋ ಕಾಲವನ್ನೇ ಕೇಳಿನೋಡಬೇಕು! ಅದೇನೇ ಆಗಲಿ ಈಗ ಮತ್ತೊಂದು ಮಳೆಗಾಲ ಸಮೀಪ ಬರುತ್ತಿದೆ. ಈಗ ಮತ್ತೆ ನನ್ನ ಎದೆಯಲ್ಲಿ ತಳಮಳ ಶುರುವಾಗಿದೆ!