Click here to Download MyLang App

ಮುಖವಾಡ : ಬರೆದವರು ಗಿರಿಜಾ ರಾಜ್ ಎಲ್ | ಸಾಮಾಜಿಕ | ಕತೆಯ ಒಳನುಡಿ ಶೈಲಿ -ಶಿಷ್ಟ ಸ್ವರೂಪದ ಕನ್ನಡ | ಯಾವ ದನಿಯಲ್ಲಿ ಆಡಿಯೋ ಕತೆಯಾಗಬೇಕು ಅನ್ನುವ ಕುರಿತು ಲೇಖಕರ ಆಯ್ಕೆ: ಗಂಡಿನ ದನಿಯಲ್ಲಿ

ಮುಖವಾಡ

ನನ್ನ ಸುತ್ತ ಕಕೂನಿನ ಹಾಗೆ ಗೂಡುಕಟ್ಟಿಕೊಂಡು ಬಿಟ್ಟಿದ್ದೇನೆ, ನನ್ನನ್ನು ಅಲ್ಲಿಂದ ಸಂತಸದ ಚಿಟ್ಟೆಯಾಗಿ ಹೊರತರಬಲ್ಲ ಒಲುಮೆಯ ಜೀವದ ಬರವಿಗಾಗಿ ಕಾತುರದಿಂದ ನಿರೀಕ್ಷಿಸುತ್ತ, ಎಲ್ಲರಿಂದಲೂ ದೂರವಾಗಿ ಈ ಸಣ್ಣಗೂಡಿನಲ್ಲಿ ತಪಿಸುತ್ತಿದ್ದೇನೆ.
ನನ್ನ ಜೀವನದಲ್ಲಿ ಅನಪೇಕ್ಷಿತವಾಗಿ ನಡೆದ ವಿಚಿತ್ರ, ವಿಷಮ ಪ್ರಸಂಗವೊಂದು ನನ್ನನ್ನು ಈ ತೆರನಾದ ಸಂಕಟಕ್ಕೆ ದೂಡಿತು. ತಪ್ಪು ನನ್ನದಾಗಿರಬಹುದು; ಆದರೆ ತಪ್ಪು ನನ್ನದಲ್ಲ! ವಿಚಿತ್ರವಾಗಿದೆ ನನ್ನ ವಾದ ಎನ್ನಿಸಬಹುದು!

ಪುರಾಣದ ಅಹಲ್ಯೆಯ ಕತೆಗೂ ನನ್ನ ಕತೆಗೂ ವ್ಯತ್ಯಾಸವೇನಿಲ್ಲ! ಇಷ್ಟಕ್ಕೂ ಅಹಲ್ಯೆಯ ವಿಷಯದಲ್ಲಿ, ಒಂದು ಪ್ರಶ್ನೆ ಬಿಟ್ಟೂ ಬಿಡದೆ ಕಾಡಿಸುತ್ತದೆ. ಕಾಮರೂಪಿಯಾದ ಇಂದ್ರ, ಗೌತಮರ ರೂಪದಲ್ಲಿ ಅಹಲ್ಯೆಯ ಬಳಿಗೆ ಬಂದಾಗ. . . ನಮ್ಮ ಹಾಗೆ ಸಾಮಾನ್ಯ ನರಮಾನವಿಯಲ್ಲ ಅವಳು! ಪತಿವ್ರತೆ. . . ಇಂದ್ರನ ವಂಚನೆ ತಿಳಿಯುವಷ್ಟು ಸಾಮರ್ಥ್ಯ ಅವಳ ಪಾತಿವ್ರತ್ಯಕ್ಕಿರಲಿಲ್ಲವೇ? ಅಥವಾ ಅವಳಿಗೆ ಗೊತ್ತಾಗದ ಹಾಗೆ. . . ಇಂದ್ರ ಏನಾದರೂ ತಂತ್ರ ಹೂಡಿದನೋ. . . ಅಂಥ ವಿದ್ಯೆಗಳೆಲ್ಲಾ ಅವನಿಗೆ ಕರತಲಾಮಲಕ! ಅದರಲ್ಲೂ ದೇವೇಂದ್ರ! ಸದಾ ಸುಖವನ್ನು ಸೂರೆ ಹೊಡೆದು ಅನುಭವಿಸುವವನು! ಇರಲಿ, ಗೌತಮರು ಶಾಪ ನೀಡಿದರು, ಉಶ್ಯಾಪ ನೀಡುವಷ್ಟು ಕರುಣೆಯನ್ನೂ ತೋರಿದರು, ರಾಮನ ಚರಣಸ್ಪರ್ಶದಿಂದ ಶಾಪ ಪರಿಹಾರವಾಗಿ ನಂತರ ಗೌತಮರು ಸತಿಯನ್ನು ಸ್ವೀಕರಿಸಿದರು. ಆದರೆ ನನ್ನ ಗಂಡ ಯಾವುದಕ್ಕೂ ಅವಕಾಶವನ್ನೇ ನೀಡಲಿಲ್ಲ. ನಾನು ಮೂರ್ಛೆಯಿಂದ ತಿಳಿದೇಳುವ ಹೊತ್ತಿಗೆ, ನನ್ನನ್ನು ತಿರಸ್ಕರಿಸಿ ಹೊರಟೇಬಿಟ್ಟಿದ್ದ.

ಇಂದು ಕೃಶಕಾಯದ ಮೇಲೆ ತೊಗಲಿನ ಹೊದಿಕೆ ಹೊತ್ತಂತಿರುವ ನಾನು, ಒಂದು ಕಾಲದಲ್ಲಿ ಚೆಲುವಿನ ಖನಿಯಾಗಿದ್ದೆ. ಈ ವಿಕೃತಿಯ ಶರೀರದೊಳಗೆ ಮಿಡಿಯುತ್ತಿರುವ ಜೀವವನ್ನು ಭದ್ರವಾಗಿ ಹಿಡಿದು ನನ್ನವನ ಬರವಿಗಾಗಿ ಕಾಯುತ್ತಿದ್ದೇನೆ.
ನನ್ನ ವಾಸದ ಈ ಸಣ್ಣ ಮನೆಗೆ ಒಂದೇ ಕಿಟಕಿ. ಈ ಗೂಡನ್ನು ಊರ ಹೊರಗಿದೆ ಎಂದು ನಾನೇ ಆರಿಸಿಕೊಂಡದ್ದು. ಊರಿನೊಳಗಿದ್ದು ತಲೆಗೊಂದರಂತೆ ಗಳುಹುವ ಊರವರ ಬಾಯಿಗೆ ಬೀಳುವುದಕ್ಕಿಂತ ಈ ‘ಒಂಟಿಬಡುಕತನ’ವೇ ಲೇಸೆಂದು ಮಗಳನ್ನು ಒಪ್ಪಿಸಿ ಇಲ್ಲಿಗೆ ಬಂದಿದ್ದೇನೆ.

ಕಿಟಕಿಯಿಂದ ನೇರವಾಗಿ ಕೊಂಚ ದೂರದಲ್ಲಿ ಒಂದು ಮರ. . . ಅಸ್ಥಿಪಂಜರದ ಹಾಗೆ ಬೋಳು ಬೋಳಾಗಿ ದಿಕ್ಕು ದಿಕ್ಕಿಗೆ ಒಣಕಾಷ್ಠಗಳಂತಹ ರೆಂಬೆಕೊಂಬೆಗಳು ಚಾಚಿಕೊಂಡಿದ್ದವು. ಅದನ್ನು ಈಗಿರುವ ನನ್ನ ಸ್ಥಿತಿಗೆ ಉಪಮೆಯಾಗಿ ಹೋಲಿಸಿಕೊಳ್ಳುತ್ತಿದ್ದೆ. ಆದರೆ ಚೈತ್ರಮಾಸ ಕಾಲಿಡುತ್ತಿದ್ದಂತೆ, ಒಣಕೊರಡೂ ಕೊನರಿ ಕೊಂಬೆರೆಂಬೆಗಳಲ್ಲಿ ಪ್ರಾಣಾಗ್ನಿ ಪ್ರವಹಿಸಿ, ಜೀವಸಂಚಾರವಾಗಿ ಚಿಗುರು ಎಲೆಗಳಿಂದ ತುಂಬಿ ನಳನಳಿಸಲಾರಂಭಿಸಿದಾಗ ಓಹ್! ಇದೆಂಥ ಅದ್ಭುತ ಎನಿಸುತ್ತದೆ.

ಮತ್ತೆ ಬೋಳಾದರೂ ಮತ್ತೆ ಮತ್ತೆ ಎಳೆ ಚಿಗುರುಗಳ ರಾಶಿಯಿಂದ ಕಳಕಳಿಸುವ ಭರವಸೆ ಅದಕ್ಕಿದೆ; ಚೈತ್ರ ಬಂದೇ ಬರುತ್ತಾನೆ. ಹಸಿರು ಎಲೆ, ಕೆಂಪು ಹೂವುಗಳ ದಿವ್ಯರೂಪ ನೀಡುತ್ತಾನೆ. ಆದರೆ ತಾನು! ಮನುಷ್ಯಳು ವೃದ್ಧಾಪ್ಯ ಯೌವನಕ್ಕೆ ಹಿಂತಿರುಗಲು ಸಾಧ್ಯವೇ? ಅಯ್ಯೋ ಬೇಡ ಬೇಡ ಎಂದು ಚೀರಬೇಕೆನಿಸುತ್ತದೆ. ಒಂದು ಸಲ ಅನುಭವಿಸಿದ್ದೇ ಸಾಕು. . . ನನ್ನ ಗಮನ ಮತ್ತೆ ಆ ಮರದೆಡೆಗೆ ಹೋಗುತ್ತದೆ. ನಳನಳಿಸುವ ಹಸಿರು, ಬಿಸಿಲಿಗೆ ಹೊಳೆಯುತ್ತಿದೆ. ಆ ರಾಶಿಯೊಳಗಿನಿಂದ ಇತ್ತೀಚೆಗೆ ಕೆಂಪು ಮೊಗ್ಗುಗಳು ಇಣುಕುತ್ತಿದೆ. . . ಈ ರೀತಿ ಒಣಗಿ ಮತ್ತೆ ರಸತುಂಬಿಕೊಳ್ಳುವ ಅವಕಾಶ, ಒಂದೇ ಜನ್ಮದಲ್ಲಿ ಮನುಷ್ಯನಿಗೆ ಇಲ್ಲ! ಆದರೆ ಒಂದೇ ಜನ್ಮದಲ್ಲಿ ಒಳಗಿನಿಂದ ಪರಿಪಕ್ವತೆ ಪಡೆಯುವ ಅದೃಷ್ಠ ಪಡೆದಿದ್ದಾನಲ್ಲವೇ? ವೃದ್ಧಾಪ್ಯ ಎಂದರೇನೇ “ಹೊರಗೆ ಒಣಗಿ, ಸುಕ್ಕಾಗಿ, ಒಳಗೆ ಅರಳುವುದು ತಾನೆ?”

ಹಗಲಿರುಳು ಒಂದೇ ಅಮಲು. . . ನನ್ನವನು ಬರಬೇಕು. ನನ್ನ ತಪ್ಪಿಲ್ಲ ಎಂದು ನಾನವನಿಗೆ ಮನವರಿಕೆ ಮಾಡಿಕೊಡಬೇಕು. ನನಗೂ ಹೊರಪ್ರಪಂಚಕ್ಕೂ ಸಂಪರ್ಕ ಏರ್ಪಡಿಸುವ ಈ ಪುಟ್ಟ ಕಿಟಕಿ ಬಂದೇ ಬರುತ್ತಾನೆಂದು ನಂಬಿಕೊಂಡಿರುವ ನಾನೊಲಿದವನ ಮುಖದರ್ಶನ ಮಾಡಿಸಬಹುದೆಂದು ಕಾಯುತ್ತಿದ್ದೇನೆ. ನನ್ನ ಬದುಕನ್ನು ತನ್ನ ವೈಯುಕ್ತಿಕ ಆಮಿಷಗಳ ಈಡೇರಿಕೆಗಾಗಿ ಛಿದ್ರಗೈದವನ ಮೇಲಿನ ಆಕ್ರೋಶಕ್ಕಿಂತ ನನ್ನ ಗಂಡನ ಆಗಮನ ನನಗೆ ಮುಖ್ಯವಾಗಿತ್ತು. ನನ್ನ ಬದುಕಿನಲ್ಲಿ ಚೆಲ್ಲಾಟವಾಡಿದವನು ಎಷ್ಟೊಂದು ಕ್ಷುಲ್ಲಕ ಎನಿಸುತ್ತದೆ, ಅಷ್ಟೇ!
ನನ್ನ ಶರೀರ ಕೃಶವಾಗಿರುವುದನ್ನು ನೋಡಿ ಮಗಳು ಕಣ್ಣೀರಿಡುತ್ತ “ಇದೇನು ಹುಚ್ಚು ನಿನ್ನದು ಅಮ್ಮ, ಅಪ್ಪ ಬಂದು ‘ನಿನ್ನ ತಪ್ಪಿಲ್ಲ’ ಎಂದು ಹೇಳಿದರೇನು? ಬಿಟ್ಟರೇನು? ಅದನ್ನು ಕಟ್ಟಿಕೊಂಡು ಏನಾಗಬೇಕು? ನಿನ್ನ ತಪ್ಪಿಲ್ಲ! ಎಂದು ನಿನ್ನಾತ್ಮಕ್ಕೆ ಅರಿವಾಗಿದೆ ತಾನೇ? ಸಾಕು. ನಿನ್ನಂತಹ ಪ್ರೀತಿಯ ಹೆಂಡತಿಯನ್ನು ಬಿಟ್ಟು ಹೋಗುವ ಮುನ್ನ ಒಂದಿಷ್ಟು ತಡೆದು ಯೋಚಿಸಿ, ನಿರ್ಧಾರ ಕೈಗೊಳ್ಳಬೇಕಿತ್ತು. ನೀನು ಮೂರ್ಛೆ ಬಿದ್ದಿರುವಾಗ ನಿರ್ಲಕ್ಷಿಸಿ ಹೋದವನ ಬಗ್ಗೆ ಯಾಕೆ ಮಮಕಾರ? ಇದೇ ಹಂಬಲದಲ್ಲಿ ನೀನು ಸರಿಯಾಗಿ ಆಹಾರ ತೆಗೆದುಕೊಳ್ಳದೆ ನಿನ್ನ ಶರೀರ ಎಷ್ಟು ಸೊರಗಿದೆ, ನೋಡಿಕೊಂಡಿರುವೆಯಾ ಕನ್ನಡಿಯಲ್ಲಿ? ಯಾಕೀ ತ್ಯಾಗ, ಪ್ರಾಮಾಣಿಕತೆ, ಈ ಅಸೀಮ ಪ್ರೇಮ! ಇವುಗಳ ಅರಿವೇ ಇಲ್ಲದೆ ಎಲ್ಲೋ ಅಲೆದಾಡುವ ಅಪ್ಪನಿಗಾಗಿ. . ಇದಕ್ಕೇನಾದರೂ ಅರ್ಥವಿದೆಯೇ? ನೀನಿನ್ನೂ ಯಾವ ಕಾಲದಲ್ಲಿ ಇದ್ದೀಯೆ ಅಮ್ಮ?” ಎಂದಳು.
ನನ್ನ ಮಗಳು ನನಗೇ ಬುದ್ಧಿ ಹೇಳುವಷ್ಟು ದೊಡ್ಡವಳಾದಳೇ? ಹೆಮ್ಮೆ ಎನಿಸಿತು. ಅವರು ನನ್ನ ತೊರೆದು ಹೋದಾಗ ಎಂಟು-ಒಂಬತ್ತು ವರ್ಷಗಳ ಪುಟ್ಟ ಹುಡುಗಿ. . .ಚಂದನ ದೊಡ್ಡವಳಾಗಿ ಸುಂದರ ಹೆಣ್ಣಾದಳು. ಊರಿಗೆ ಶಾಲೆಯ ಮಾಸ್ತರಾಗಿ ಬಂದ ತರುಣ ಸುಭಾಶ್ ಚಂದನಳನ್ನು ಮೆಚ್ಚಿಕೊಂಡು ತಾನೇ ಬಂದು ನನ್ನ ಜೊತೆ ಮಾತಾಡಿ ತಂದೆ, ತಾಯ್ಗಳನ್ನು ಕರೆತಂದು ಪರಿಚಯ ಮಾಡಿಸಿದ. ಒಳ್ಳೆಯವನಂತೆ ಕಂಡುಬಂದ. ಮದುವೆ ಸುಬ್ರಮ್ಮಣ್ಯಸ್ವಾಮಿ ದೇವಾಲಯದಲ್ಲಿ ಸರಳವಾಗಿ ನಡೆದು ಹೋಯಿತು. ಈಗ ಅವರ ಮಡಿಲಲ್ಲಿ, ಅವರ ಅಕ್ಕರೆಯ ಮಗುವಾಗಿ ಅರಳಿದ ಪುಟಾಣಿ ಶರತ್ಚಂದ್ರ ಇದ್ದಾನೆ. ಐದು ವರುಷಗಳ ಮೊಮ್ಮಗ ನನಗೆ ಪ್ರತಿದಿನ ಊಟ ತರುತ್ತಾನೆ. ಇಷ್ಟೆಲ್ಲಾ ಆದರೂ ಅವರು ಬರಲೇ ಇಲ್ಲ. . . .


ಒಮ್ಮೊಮ್ಮೆ ಮಗಳ ಮಾತುಗಳು ಸರಿ ಎನಿಸಿದರೂ, ಗಂಡನನ್ನು ಬಿಟ್ಟುಕೊಡಲು ಮನಸು ಬರುವುದಿಲ್ಲ. “ಇಲ್ಲ ಚಂದು, ಅವರು ನನ್ನನ್ನು ಬಹಳ ಇಷ್ಟಪಟ್ಟು ಮದುವೆಯಾದರು. ದೇಶ ರಕ್ಷಿಸುವ ಕಷ್ಟದ ಕೆಲಸ ಅವರದು. ರಜೆ ಸಿಕ್ಕ ಕೂಡಲೇ ಓಡಿ ಬರುತ್ತಿದ್ದರು. ಅವರ ಶಾಂತ ಸ್ವಭಾವ, ಉದಾತ್ತ ಗುಣಗಳನ್ನು ನಾನೆಂದಾದರೂ ಮರೆಯಬಲ್ಲೆನೇ? ಅವಳು ‘ಅಮ್ಮಾ ಅದೆಲ್ಲ ಸರಿ! ಹೋಗಲಿ ಬಿಡು, ನಿನ್ನನ್ನು ಒಪ್ಪಿಸುವುದು ನನ್ನಿಂದ ಆಗುವುದಿಲ್ಲ. ನನಗೇನೂ ಅಪ್ಪನ ಮೇಲೆ ಅಭಿಮಾನ ಇಲ್ಲೆಂದುಕೊAಡೆಯಾ, ಅವರ ನೆನಪಿನಲ್ಲಿ ನೀನು ಕೃಶವಾಗಿ ಏನು ಸಾಧಿಸುತ್ತೀಯ? ಅವರು ಬಂದಾಗ ನೋಡಲು, ಮಾತಾಡಿಸಲು, ಮಾತಗಳನ್ನು ಕೇಳಲು ಶಕ್ತಿಯಿರಬೇಡವೇ? ಇವತ್ತು ಶರತ್ ಕೈಯಲ್ಲಿ ಕಳುಹಿಸುವ ಊಟ ಖಾಲಿಯಾಗಬೇಕು. ನಿನ್ನನ್ನು ನೋಡೋಣವೆನಿಸಿ ಬಂದೆ. ಅಡುಗೆ ಕೆಲಸ ಅರ್ಧಂಬರ್ಧ ಆಗಿದೆ’ ಎಂದು ನನ್ನ ಕೈಗಳನ್ನು ಹಿಡಿದು ಮೃದುವಾಗಿ ಅದುಮಿ ಹೊರಟಳು.

‘ಅಜ್ಜೀ ಬಾಗಿಲು ತೆಗಿ’ ಮುದ್ದಾದ ಎಳೆದನಿ ನನ್ನ ಕಿವಿದೆರೆಗಳನ್ನು ತಾಕಿದ್ದೇ ತಡ ನನಗರಿಯದಂತೆ ನನ್ನ ಮುಖದಲ್ಲಿ ನಗು ತುಂಬಿಕೊಳ್ಳುತ್ತದೆ. ಅವನನ್ನು ಬಿಗಿದಪ್ಪಿ, ಮುದ್ದಾಡಿ ಎತ್ತಿಕೊಳ್ಳಲು ಹೋದಾಗ ‘ಬಿಡಜ್ಜಿ ನಿನ್ನಿಂದ ಎತ್ತಿಕೊಳ್ಳಲು ಆಗಲ್ಲ. . . ಬಿಡು ನಾನೇ ಬರುತ್ತೇನೆ’ ಕೊಸರಾಡಿ ಕೆಳಗಿಳಿದು ತೊದಲು ಮಾತಾಡಿ ಜೀವಕ್ಕೆ ಹೂಮಳೆಗೆರೆಯುತ್ತಾನೆ. ಅಲ್ಲಿದ್ದ ಸ್ಟೂಲಿನ ಮೇಲೆ ಕ್ಯಾರಿಯರ್ ಇಟ್ಟು “ಇವತ್ತು ನೀನು ಪೂರ್ತಿ ತಿನ್ನಬೇಕಂತೆ ಅಮ್ಮ ಹೇಳಿದೆ, ನಾನು ಸ್ಕೂಲಿಗೆ ಹೋಗ್ಬೇಕು ರ್ತೀನಿ’ ಎಂದು ಎಂದಿನAತೆ ಅಜ್ಜಿಯ ಬಡಕಲು ಕೆನ್ನೆಗೆ ಮುತ್ತಿಟ್ಟು ಓಡಿಬಿಡುತ್ತಾನೆ.

ಕ್ಷಣದ ಹಿಂದೆ ಸ್ವರ್ಗವೇ ಅಲ್ಲಿದ್ದಂತೆ ಭ್ರಮೆ ಸೃಷ್ಟಿಸಿದ್ದ ಆ ಮುದ್ದು ಮಾಂತ್ರಿಕ! ಅವನು ಅಲ್ಲಿಂದ ಕಣ್ಮರೆಯಾದೊಡನೆ ಎಲ್ಲ ಮಾಯವಾಗಿ ಮತ್ತೆ ಶೂನ್ಯ ಕವಿಯಿತು.

ಆ ಶೂನ್ಯತೆಯ ಖಿನ್ನತೆಯನ್ನು ತಪ್ಪಿಸಿಕೊಳ್ಳಲೆಂಬಂತೆ ನನ್ನ ಹಳೆಯ ಪ್ರೇಮಕತೆಯನ್ನೂ ಅದರೊಂದಿಗೇ ಹೆಣೆದುಕೊಂಡ ದುರಂತವನ್ನೂ ಕಣ್ಣುಮುಚ್ಚಿ ಧೇನಿಸಲಾರಂಭಿಸುತ್ತೇನೆ. ನನ್ನ ಬಗೆಗಣ್ಣಿನೆದುರು ಹೃದಯಕ್ಕೆ ಆಪ್ತವಾದ ಹಳೆಯ ಚಿತ್ರಗಳ ಆಲ್ಬಂ ಬಿಚ್ಚಿಕೊಳ್ಳುತ್ತದೆ.
ಬಹುತೇಕ ಕಾರ್ಯಕ್ರಮಗಳಿಗೆ, ಕಾರ್ಯಚಟುವಟಿಕೆಗಳಿಗೆ ಆಸರೆಯಾಗಿರುವ ಆ ವಿಶಾಲವಾದ ಅಶ್ವತ್ಥಕಟ್ಟೆ ಆ ಊರಿನ ಪ್ರಮುಖವಾದ, ಎಲ್ಲರಿಗೂ ಪ್ರಿಯವಾದ ಸ್ಥಳ. ಪಕ್ಕದಲ್ಲಿ ಒಂದು ದಿಬ್ಬವೂ ಇದೆ. ಆ ವೃಕ್ಷದ ಬಿಳಲುಗಳು ವಿಶಾಲವಾಗಿ ಆವರಿಸಿಕೊಂಡು ಬಿಸಿಲ್ಗಾಲದಲ್ಲಿ ಒಳ್ಳೇ ತಂಪಾಗಿರುತ್ತಿತ್ತು. ಅಲ್ಲೇ ಒಂದು ದಿನ ಆ ದಿಬ್ಬದ ಮೇಲೆ ಆ ಯುವಕ ನಿಂತು ಧೀರೋದಾತ್ತವಾಗಿ ಸ್ಫೂರ್ತಿ, ಆವೇಶಗಳಿಂದ ಮಾತಾಡುತ್ತಿದ್ದಾನೆ. ಸುತ್ತ ನೆರೆದ ಗೆಳೆಯರು, ಜನಗಳು ಚಪ್ಪಾಳೆ ಹೊಡೆದು ಹುರಿದುಂಬಿಸುತ್ತಿದ್ದರು. ಊರಿನ ಒಂದಿಷ್ಟು ಹುಡುಗಿಯರ ಮಧ್ಯೆ ಅವಳೂ ಇದ್ದಳು. ಯಾವುದೋ ಮೋಡಿಗೊಳಗಾದಂತೆ ಆಗಿತ್ತು. ಅರಳುಗಣ್ಣುಗಳಿಂದ ಅವನ ಧೀರಗಂಭೀರ ಶಾರೀರ, ಶರೀರ ಎರಡನ್ನೂ ಮನಸ್ಸು, ಕಣ್ಣುಗಳಿಗೆ ತುಂಬಿಕೊಳ್ಳುತ್ತ ನಿಂತ ಕ್ಷಣ ತನಗೇ ಅರಿಯದಂತೆ ಅನುರಾಗದ ಅಲೆಯೊಂದು ಶರೀರದಾದ್ಯಂತ ಸಂಚರಿಸಿ ಪುಳಕವೆಬ್ಬಿಸಿತು. ಆದರೆ ಇನ್ನೆರಡು ಕಣ್ಣುಗಳು ಪ್ರೀತಿಯಿಂದ ಅವಳನ್ನೇ ದಿಟ್ಟಿಸುತ್ತಿದ್ದುದು ಅವಳಿಗರಿವಾಗಲಿಲ್ಲ. . . .
ಅವನು ಈ ರೀತಿ ಭಾಷಣ ಮಾಡುವುದು, ಜನ ಸೇರುವುದು ಹೊಸದೇನಲ್ಲ. ಮುಖ್ಯವಾಗಿ ಅವನ ಮಾತುಗಳೆಲ್ಲ ದೇಶಭಕ್ತಿಯನ್ನು ಕುರಿತದ್ದೇ ಆಗಿರುತ್ತಿತ್ತು. ಊರಿನ ಹಿರಿಯರೂ ಅಭಿಮಾನದಿಂದ ಬೆನ್ನು ತಟ್ಟುತ್ತಿದ್ದರು, ಅವನೇ ಅಲೋಕ!
ಮುಂದೆ ತಾನಾಗೇ ಸೃಷ್ಟಿಯಾದ ಎರಡು-ಮೂರು ಪ್ರಸಂಗಗಳಲ್ಲಿ ಅವನ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತು. ಊರಿನ ಹಿರಿಯರೆಲ್ಲ ಹರಸಿ, ಮದುವೆಯೂ ನಡೆದುಹೋಯಿತು. ಆದರೆ ದೇಶಭಕ್ತಿಯ ಸೆಳೆತ ಅವನನ್ನು ಬಿಟ್ಟಿರಲಿಲ್ಲ. ಇವನಿಂದ ಸ್ಫೂರ್ತಿಗೊಂಡ ಐದಾರು ಯುವಕರೂ ಸೇರಿ ಎಲ್ಲರೂ ಹೋಗಿ ಸೈನ್ಯಕ್ಕೆ ಸೇರಿಯೇ ಬಿಟ್ಟರು.
ಮಧುರವಾಗಿ ತೇಲುತ್ತಿದ್ದ ಸಂಸಾರ ನೌಕೆಗೆ ಪ್ರೀತಿಯ ಸಂತಾನವಾಗಿ ಪುಟ್ಟ ಚಂದನ ಸೇರುವ ಹೊತ್ತಿಗೆ ಇನಿಯ ದೇಶದ ಗಡಿಪ್ರದೇಶವನ್ನು ಸೇರಿದ್ದ.

ಅಲೋಕನ ಜೊತೆಯಲ್ಲೇ ಓದಿದ ಗೆಳೆಯನೊಬ್ಬ ಹೆಚ್ಚುಕಡಿಮೆ ಅವನಷ್ಟೇ ಎತ್ತರ-ಬಣ್ಣ ಒಂದೇ, ಆದರೂ ಸ್ವಭಾವಗಳಲ್ಲಿ ಅಂತರವಿತ್ತು. ಅವರಿಬ್ಬರೂ ಸ್ನೇಹಿತರೇ, ಆದರೆ ಸಂಗ್ಯಾ-ಬಾಳ್ಯಾ ಸೇಹದಷ್ಟು ನಿಕಟವಲ್ಲದಿದ್ದರೂ, ಅಲೋಕ ಎಲ್ಲರನ್ನೂ ಪ್ರೀತಿಸುತ್ತಿದ್ದ. . .ಅಲೋಕ ಮದುವೆಯಾಗುವ ಮುನ್ನವೇ ಈ ಗೆಳೆಯ ಶೇಖರ್, ಚೇತನಳನ್ನು ಇಷ್ಟಪಟ್ಟಿದ್ದ. ಮದುವೆಯಾಗುವ ಆಸೆಯಿಂದ ಅವನ ಮದುವೆಗೆ ಮುನ್ನವೇ, ತನ್ನ ಕಡೆಯ ಹಿರಿಯರೊಬ್ಬರನ್ನು ಹೆಣ್ಣು ಕೇಳಲು ಕಳುಹಿಸಿ ಪ್ರಯತ್ನ ಮಾಡಿದ್ದರೂ ಅದು ಫಲಿಸಿರಲಿಲ್ಲ. ನಿರಾಸೆಯಿಂದ ಸುಮ್ಮನಾದರೂ, ಅಲೋಕ ಅವಳನ್ನು ಮದುವೆಯಾದ ನಂತರವೂ, ಅಲೋಕ ಇಲ್ಲದ ವೇಳೆ ಮನೆಗೆ ಹೋಗುತ್ತಿದ್ದ. ಅದು ಇಷ್ಟವಿರದ ಚೇತನಾ ಬಾಯಿಬಿಟ್ಟು ಹೇಳಿದಾಗ ಅವಮಾನವಾದಂತಾಗಿ ಸುಮ್ಮನಾಗಿಬಿಟ್ಟ. ಅವನ ತಾಯಿ ಬೇಸರದಿಂದ ಇರುತ್ತಿದ್ದ ಅವನಿಗೆ ಮದುವೆ ಮಾಡಲು ಪ್ರಯತ್ನ ಮಾಡಿದರೂ, ಅವನು ಈಗಲೇ ಏನವಸರ? ಎಂದು ನುಣುಚಿಕೊಂಡ.. . ತಾನು ಬಯಸಿದವಳು ಸಿಗದ ಹೊರತು ಈ ಜೀವನವೇ ವ್ಯರ್ಥ! ಎಂದು ಬಹುವಾಗಿ ತಲೆಕೆಡಿಸಿಕೊಂಡಿದ್ದ ಶೇಖರ್ ಅವಳಿನ್ನು ತನಗೆ ಸಿಗುವುದಿಲ್ಲ ಎಂಬ ಬೇಸರದಿಂದಲೋ ಅಥವಾ ಇನ್ನಾವ ಆಲೋಚನೆಯಿಂದಲೋ ಆ ಊರನ್ನೇ ಬಿಟ್ಟು ಹೊರಟುಹೋಗಿದ್ದ. ಇದ್ದ ಒಬ್ಬ ಮಗ ಹೀಗೆ ಮಾಡಿದುದಕ್ಕೆ ನಾಲ್ಕು ದಿನ ಆ ತಾಯಿ ಅತ್ತು ಸುಮ್ಮನಾದಳು. . . ಸೊಸೆ, ಮೊಮ್ಮಕ್ಕಳ ಕನಸು ಅವಳ ಎದೆಯಲ್ಲೇ ಸಮಾಧಿಯಾದವು. . . .
***
ಸೈನ್ಯ ಸೇರಿದ ಮೇಲೆ ಅಲೋಕ-ಚೇತನರ ಸಮಾಗಮ ಒಮ್ಮೊಮ್ಮೆ ಅಪರೂಪವಾಗುವುದು ಅನಿವಾರ್ಯವಾಗಿಬಿಡುತ್ತಿತ್ತು. . . ರಜೆ ಸಿಕ್ಕರಂತೂ ಅವನು ಹೆಂಡತಿ,ಮಗಳ ನೆನಪಿನಲ್ಲಿ ಹಾರಿಬಂದುಬಿಡುತ್ತಿದ್ದ. ಪುಟ್ಟ ಮಗಳು ಚಂದನ ಅಪ್ಪ ಬರುವುದನ್ನೇ ಕಾಯ್ದುಕೊಂಡಿರುತ್ತಿದ್ದಳು. . . .
ಒಂದು ದಿನ ಸುದ್ದಿ ಕೊಡದೆ ಅಲೋಕ ಬಂದ. ಯಾವಾಗಲಾದರೊಮ್ಮೆ ಅಲೋಕ ಹಾಗೆ ಮಾಡುತ್ತಿದ್ದುದುಂಟು. ಸಂತೋಷ ಸಂಭ್ರಮ ಅಲ್ಲಿ ಹೊನಲಾಗಿ ಹರಿಯಿತು. ಹಬ್ಬದಡಿಗೆ ಮಾಡಿದಳು ಚೇತನ. ಆ ರಾತ್ರಿ ತುಂಬ ಉನ್ಮಾದಿತನಂತೆ ನಡೆದುಕೊಂಡ ಅಲೋಕ. ಸ್ವಭಾವತ: ಶಾಂತ ಸ್ವಭಾವದ ಅಲೋಕನ ಈ ಪರಿ ಅವಳಿಗೆ ಅಚ್ಚರಿ ಎನಿಸಿದರೂ, ಬಹಳ ದಿನಗಳಾಗಿರುವುದರಿಂದ ಈ ಆತುರ. . ಎಂದು ನಾಚಿಕೆಯಿಂದ ಸುಮ್ಮನಾಗಿಬಿಟ್ಟಳು.

ಮರುದಿನ ಇದೇನು ಹೀಗೆ ಸುದ್ದಿ ಕೊಡದೆ ಬಂದಿರಿ? ಎಂದಾಗ ಕದನ ವಿರಾಮ ಘೋಷಣೆಯಾಗಿದೆ. ೧೫ ದಿನಗಳ ರಜೆಯ ಮೇಲೆ ಬಂದಿದ್ದೇನೆ ಸಂತೋಷ ತಾನೆ ಎಂದು ಅವಳ ಗಲ್ಲವೆತ್ತಿ ಚುಂಬಿಸಿದ್ದ! ಅದಕ್ಕಿಂತ ನನಗಿನ್ನೇನು ಭಾಗ್ಯವಿದೆ? ಎಂದು ಮನಸಾರ ನಕ್ಕಿದಳು ಚೇತನಾ. . .

ಸೌಂದರ್ಯದ ಮಾಯೆಯೇ ಅಂಥದು! ಅದನ್ನು ಪಡೆದುಕೊಳ್ಳಲು ಏನು ಮಾಡಲು ಸಿದ್ಧರಾಗುವ ಹಾಗೆ ಅದು ಪ್ರೇರೇಪಿಸುತ್ತದೆ. ಕಾಣುವ ಕಣ್ಣು ಶುದ್ಧವಾಗಿದ್ದರೆ ಸ್ತ್ರೀಯೊಬ್ಬಳು ದೇವಿಯೋ, ಮಾತೆಯೋ ಆಗಿ ಕಾಣಬಹುದು. ಕಾಮದ ಕಣ್ಣಿನಲ್ಲಿ ನೋಡಿದಾಗ ಅವಳು ಕೇವಲ ಕಾಮದ ಬೊಂಬೆಯಂತೆಯೇ ಕಾಣುತ್ತಾಳೆ. ಮನಸ್ಸಿನಂತೆ ಕಾಣ್ಕೆ!
ಐದನೆಯ ದಿನ, ಮುಖವಾಡ ಧರಿಸಿ ಬಂದು ಅವಳೊಂದಿಗೆ ಸುಖದಿಂದ ಕಳೆದ ಆ ಅನಾಮಿಕ, ಅವಳ ಗಂಡ ಸೈನ್ಯದಿಂದ ಬರುವ ಸುಳಿವು ಅರಿತು ಸದ್ದಿಲ್ಲದೆ, ಯಾರ ಕೈಗೂ ಸಿಗದೆ ಕತ್ತಲಲ್ಲಿ ಕರಗಿ ಮಾಯವಾಗಿ ಹೋದ. . . .
***
ಬಹಳ ದಿನಗಳ ನಂತರ ಕದನವಿರಾಮ ಘೋಷಣೆಯಾಗಿ ಅಲೋಕ ಆನಂದ ತುಂದಿಲನಾಗಿ ತನ್ನೂರಿನ ದಾರಿ ಹಿಡಿದ. ಅನೇಕ ವರುಷಗಳಿಂದ ತನಗೆ ಆಪ್ತವಾಗಿದ್ದ ಊರಿನ ದಾರಿಯಲ್ಲಿ ತನ್ನ ಲಗೇಜ್ ಹೆಗಲಿಗೆ ತಗುಲಿಹಾಕಿಕೊಂಡು ಉತ್ಸಾಹದಿಂದ ಓಡುನಡಿಗೆಯಲ್ಲಿ ಹೋಗತೊಡಗಿದ. . . .
ದಾರಿಯಲ್ಲಿ ಭೇಟಿಯಾದ ಗೆಳೆಯರು, ಊರಿನವರಿಗೆ “ಎಷ್ಟು ಖುಷಿಯಾಗಿದೆ. ರಜೆ ಸಿಕ್ಕಿರಲಿಲ್ಲ. ಬಹಳ ದಿನಗಳಾಗಿತ್ತು, ಎಲ್ಲಾ ಚೆನ್ನಾಗಿದ್ದೀರ?” ಎಂದು ಕೇಳಿದ. ಅಲೋಕನೆಡೆಗೆ ಅಚ್ಚರಿಯಿಂದ ನೋಡಿ “ಏನು ತಮಾಷೆ ಮಾಡ್ತಿದ್ದೀರಿ? ಅಲೋಕ್, ನಿನ್ನೆ ಬೆಳಗ್ಗೆ ಕೆರೆಯ ಏರಿಯ ಬಳಿ ಸಿಕ್ಕಿದ್ದಿರಿ, ಮಾತನಾಡಿಸಿದ್ದೇನೆ’ ಎಂದಾಗ ಉಳಿದ ಮೂವರೂ “ಹೌದು! ನೀವು ಬಂದು ನಾಲ್ಕೈದು ದಿನಗಳೇ ಆಗಿರಬಹುದು” ಎಂದರು. ಅಲೋಕನಿಗೆ ಅಚ್ಚರಿಯಾಯಿತು. ಏಪ್ರಿಲ್ ಮೊದಲ ತಾರೀಖು ಅಲ್ಲವಲ್ಲ ಇವತ್ತು. . . ಇದೇನು ಕನಸೇ? ಎಂದುಕೊಳ್ಳುತ್ತಿರುವಾಗಲೇ ಅವರು ಮಾತಾಡಿಕೊಂಡು ಮುಂದೆ ಹೊರಟುಹೋಗಿದ್ದರು. “ಏನಿದು ವಿಚಿತ್ರ? ಇಲ್ಲೇನೋ ಇದೆ ಮರ್ಮ! ಅಥವಾ ಅವರು ಸುಮ್ಮನೆ ತಮಾಷೆಗೆ ಹೇಳಿರಬಹುದು! ಎಂದು ಬೇಗ ಮನೆಯಕಡೆ ಹೆಜ್ಜೆಹಾಕಿದ.
ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಚೇತನ ಅಚ್ಚರಿ, ಸಂತಸಗಳಿಂದ ‘’ಇದೇನ್ರಿ, ನಿನ್ನೆ ರಾತ್ರಿ ತಾನೆ ನಾನು ಇವತ್ತೇ ಹೊರಡಬೇಕಾಗಿದೆ. ಅಂತ ಲಗೇಜು ಸಮೇತ ಹೋಗಿದ್ದಿರಿ, ಏನಾಯಿತು?” ಎಂದವಳನ್ನು ವಿಚಿತ್ರವಾಗಿ ನೋಡಿದನು. ಏನಾಗಿದೆ ಇವರಿಗೆಲ್ಲ. ಇದಾವುದೋ ಮಾಯದ ಊರಿಗೆ ಬಂದು ಬಿಟ್ಟದ್ದೇನೆಯೇ?
“ಏನು ಏನಾಗಿದೆ ಚೇತನ ನಿನಗೆ? ದಾರಿಯಲ್ಲಿ ಗೆಳೆಯರು ಸಿಕ್ಕಿ ಅವರೂ ಹಾಗೇ ಅಂದರು. ನಾಲ್ಕೈದು ದಿನಗಳ ಹಿಂದೆಯೇ ಮನೆಗೆ ಬಂದೆ ಅಂತ. ಏನಿದು?” ಎಂದ ಚಿಂತೆಯಿಂದ. .
ಚೇತನಾ “ಹೌದು! ಇವತ್ತಿಗೆ ಐದು ದಿನಗಳಾಯಿತು ನೀವು ಬಂದು” ಎಂದಳು. ಅವನು ಕೋಪದಿಂದ ‘ಏನು ಹೇಳ್ತಾ ಇದೀಯಾ? ಮೊನ್ನೆ ಕದನವಿರಾಮ ಘೋಷಣೆ ಆಗಿದ್ದು, ಆ ನಂತರವೇ ರಜೆ ಹಾಕಿ ಇವತ್ತು ರ್ತಾ ಇದೀನಿ” ಎಂದ. ಅವಳು ಐದು ದಿನಗಳ ಹಿಂದೆಯೂ ಹೀಗೇ ಹೇಳಿದ್ದು ನೀವು”, “ಓ ಏನಾಗ್ತಿದೆ ಇಲ್ಲಿ? ದೇವರೇ” ಎಂದು ಜೋರಾಗಿ ಕೂಗಿದ ಅಲೋಕ. ಚೇತನಾ ಅವನ ಆರ್ಭಟಕ್ಕೆ ನಡುಗಿ ಹೋದಳು... “ಓಹ್! ನನ್ನ ಗಂಡ ಸುಳ್ಳು ಹೇಳುತ್ತಿಲ್ಲ. . . ಆದರೆ ಐದು ದಿನಗಳಿಂದ ಅವರು ನನ್ನೊಂದಿಗೆ ಇದ್ದದ್ದೂ ನಿಜ. ಇದು ಹೇಗೆ ಸಾಧ್ಯ? ಇವರಲ್ಲದೆ ಹೋದರೆ ಇನ್ಯಾರು ನನ್ನೊಂದಿಗೆ. . . .” ಮುಂದಿನದನ್ನು ಊಹಿಸಲೂ ಆಗದೆ ಪ್ರಜ್ಞೆ ತಪ್ಪಿ ದೊಪ್ಪನೆ ಬಿದ್ದಳು.

ಹಳ್ಳಿಗೆ ಹಳ್ಳಿಯೂ ಅಲ್ಲದ, ಶಹರಿಗೆ ಶಹರೂ ಅಲ್ಲದ ಆ ಊರಿನಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ವಿಷಯ ಹರಡಿ ಇಡೀ ಊರೇ ಅರ್ಧಘಂಟೆಯಲ್ಲಿ ಮನೆಯ ಮುಂದೆ ನೆರೆದಿತ್ತು. ಆ ಊರಿನ ಹಿರಿಯರಾದ ಅಪ್ಪಣ್ಣಾಚಾರ್ “ನಿನ್ನ ಹೆಂಡತಿ ಹೇಳ್ತಾ ಇರೋದು ನಿಜ ಅಲೋಕು. ಊರಿನಲ್ಲಿ ನಿನ್ನನ್ನ ಐದು ದಿನಗಳಿಂದ ನೋಡಿದವರಿದ್ದಾರೆ”.

ಅಲೋಕ ಜೋರಾಗಿ ಕೂಗಿದ “ಇಲ್ಲ. . . .ಇಲ್ಲ. . . ಇಲ್ಲ. . . ಸಾಧ್ಯವಿಲ್ಲ. ನಮ್ಮ ಕ್ಯಾಪ್ಟನ್ ಬಳಿಗೆ ಹೋಗಿ ರಜೆ ಕೇಳಿಕೊಂಡು ಊರಿಗೆ ಹೊರಟಿದ್ದು ಇನ್ನೂ ಎದುರಿಗೇ ನಡೆದಂತಿದೆ. ನಾನು ಊರಿಗೆ ಬಂದೇ ಎಂಟು ತಿಂಗಳಾಯಿತು” ಎಂದ.

ಜನರು ಚಕಿತರಾದರು. ಇದೆಂತಹ ವಿಚಿತ್ರ! ಹಾಗಾದರೆ ಬೇರೆ ಯಾರೋ ಅನಾಮಿಕ ವ್ಯಕ್ತಿ ಮುಖವಾಡ ಧರಿಸಿ ವಂಚನೆ ಮಾಡಿರಬಹುದೇ?” ಇವತ್ತೇನು ಬೇಕಾದರೂ ಆಗಬಹುದು. ಏನೆಲ್ಲ ಕಂಡು ಹಿಡಿದಿದ್ದಾರೆ. ಅಸಲಿ-ನಕಲಿ ಯಾವುದೂ ಗೊತ್ತಾಗುವುದಿಲ್ಲ. . .” ಎಂದು ತಲೆಗೊಂದರಂತೆ ಮಾತಾಡತೊಡಗಿದರು. “ಬೇರೆ ಯಾರೋ”. . . ಮುಂದಕ್ಕೆ ಊಹಿಸಲಾಗಲಿಲ್ಲ, ನಡುಗಿಹೋದ ಅಲೋಕ!

ಮೂರ್ಛೆಗೊಂಡಿದ್ದ ಚೇತನಳನ್ನು ಮಗಳು ಮತ್ತು ಒಂದಿಬ್ಬರು ಹೆಂಗಸರು ನೀರು ಚುಮುಕಿಸಿ ಎಚ್ಚರಿಸುವ ಪ್ರಯತ್ನ ಮಾಡುತ್ತಿದ್ದರು. ಅಪ್ಪಣ್ಣಾಚಾರಿ ‘ಹಾಗಾದರೆ ನಿನ್ನಂತೆ ವೇಷ ಧರಿಸಿ ಬಂದವನು ಮುಖವಾಡದ ಮನುಷ್ಯನೇ. .ಛೇ ಛೇ. .” ಅಲೋಕ ಮುಂದೆ ಕೇಳಲಾರದೆ ಹಿಂದೆ ಮುಂದೆ ಯೋಚಿಸದೆ ಲಗೇಜು ಕೈಯಲ್ಲಿ ಇದ್ದಂತೆಯೇ ಜನ ನೋಡು ನೋಡುತ್ತಿದ್ದಂತೆಯೇ ಹಿಂತಿರುಗಿ ಹೋಗಿಬಿಟ್ಟ. ಮಗಳ ‘ಅಪ್ಪಾ ಅಪ್ಪಾ’ ಎಂಬ ಕರೆಯೂ ಅವನ ಮನವನ್ನು ಕರಗಿಸಲಿಲ್ಲ. . .

ಜನರೆಲ್ಲ ಗಜಿಬಿಜಿ ಮಾಡುತ್ತ ನಿಧಾನವಾಗಿ ಚದುರಿದರು. ಸ್ವಲ್ಪ ಹೊತ್ತಿನ ನಂತರ ಎಚ್ಚರಗೊಂಡ ಚೇತನಾ, ಎಲ್ಲಾ ಕಡೆ, ಕಣ್ಣಾಡಿಸಿ ಗಂಡನಿಗಾಗಿ ಹುಡುಕಾಡಿದಳು. ‘ಅಮ್ಮ, ಅಪ್ಪ ಹೊರಟು ಹೋದರು’ ಎಂದು ಅಳುತ್ತ ಚಂದನ ತಾಯಿಯನ್ನು ಅಪ್ಪಿಕೊಂಡಳು. ಅಳುತ್ತಳುತ್ತ ತನ್ನ ಬದುಕಿನಲ್ಲಿ ಇಂಥ ಕ್ರೌರ್ಯ ಮೆರೆದವನನ್ನು ನಾನಾ ವಿಧವಾಗಿ ದೂಷಿಸತೊಡಗಿದಳು. ಚೇತನಾ! ಧೂರ್ತ, ನಿಷ್ಕರುಣಿ, ಕ್ರೂರಿ, ಸ್ವಾರ್ಥಿ. . ನೊಂದ ಮನಸ್ಸು ಅವನಿಗೆ ವಿಶೇಷಣಗಳನ್ನು ಆರೋಪಿಸುತ್ತಲೇ ಹೋಯಿತು. ಆದರೆ ಅವನ ಧೂರ್ತತೆಯನ್ನು ಎತ್ತಿ ಹಿಡಿಯುವ ಸಾಮರ್ಥ್ಯ ಅವು ಯಾವುವಕ್ಕೂ ಇರಲಿಲ್ಲ!. . . .

ಚೇತನಾ ನಿಧಾನವಾಗಿ ಹಳೆಯ ನೆನಪುಗಳ ಆಳದಿಂದ ವಾಸ್ತವಕ್ಕೆ ಮರಳಿದಳು. ಒಣಗಿದ ಕಪೋಲಗಳ ಮೇಲೆ ಕಣ್ಣೀರಿಳಿಯತೊಡಗಿತು. ಏನೇನೆಲ್ಲ ಆಗಿಹೋಯಿತು. ಅವರ ಮನಸ್ಸು ಕರಗಲು ಇನ್ನೆಷ್ಟು ವರುಷಗಳು ಬೇಕೋ! ಅಲ್ಲಿಯವರೆಗೆ ನಾನಿರುತ್ತೇನೋ ಇಲ್ಲವೋ ಎಂಬ ಹತಾಶ ಭಾವನೆ ಕವಿಯತೊಡಗಿತು. . .

ಕಾಲ ಯಾರಿಗೂ ಕಾಯದೆ ಉರುಳುತ್ತದೆ. . .ಶರತ್ಚಂದ್ರನ ಪ್ರೀತಿಯ ಚೇತನಜ್ಜಿಯ ಕೂದಲುಗಳೆಲ್ಲ ಬೆಳ್ಳಗಾಗಿವೆ. . . ಕಣ್ಣುಗಳೂ ಅಸ್ಪಷ್ಟವಾಗಿ ಕಾಣುತ್ತವೆ. . . ಕಿವಿಗಳೂ ತಮ್ಮ ಶಕ್ತಿಯನ್ನು ಕಳೆದುಕೊಂಡಿವೆ. ನಿರಾಶೆಗಳ ದಟ್ಟ ಕಾರ್ಮೋಡಗಳು ಕವಿದ ಆ ವೃದ್ಧ ಮುಖವೂ ಬೆಳಗುತ್ತದೆ ‘ಶರತ್’ ಎಂಬ ಹೆಸರಿಗೆ, ಅನೇಕ ವೇಳೆ ಅಜ್ಜಿಯ ಜೊತೆ ಇದ್ದು ಅಲ್ಲೇ ಕುಳಿತು ‘ಹೋಂವರ್ಕ್’ ಮಾಡುತ್ತ ಕುಳಿತುಬಿಡುತ್ತಿದ್ದ.
ಅಂದು ಬಹುಹೊತ್ತು ಕಿಟಕಿಯಿಂದ ಆಚೆ ನೋಡುತ್ತ ನಿಂತೇ ಇದ್ದಳು. . . ಆ ಮರದ ಬಳಿಯಲ್ಲಿ ಯಾರೋ ವ್ಯಕ್ತಿ, ಕುಳಿತುಕೊಂಡು ಮುಖವನ್ನೆಲ್ಲ ಕೆರೆದುಕೊಳ್ಳುತ್ತ ಕುಳಿತಿದ್ದ. ಕಿಟಕಿಯಲ್ಲಿ ಅವಳ ಮುಖ ಕಂಡಕೂಡಲೇ ತನ್ನೆರಡೂ ಕೈಗಳನ್ನು ತಲೆಯ ಮೇಲಿಟ್ಟು ಕೈಮುಗಿಯತೊಡಗಿದ. ನಂತರ ಕೈಗಳಿಂದ ಎರಡೂ ಕೆನ್ನೆ ಬಡಿದುಕೊಂಡ. . . ಯಾರಿರಬಹುದು? ಅವರೇ ಇರಬಹುದೇ? ‘ನನ್ನವನು ಅಲೋಕ’ ಎಂದು ಮೆಲ್ಲನೆ ಉಸುರಿಕೊಂಡಳು. ಅವರಾಗಿದ್ದರೆ ಅಲ್ಲೇಕೆ ಕುಳಿತುಕೊಳ್ಳುತ್ತಾರೆ? ಎಂದುಕೊAಡು ಹೋಂವರ್ಕ್ ಮಾಡುತ್ತಿದ್ದ ಮೊಮ್ಮಗನ ಕಡೆಗೆ ತಿರುಗಿ “ಚಿನ್ನು. . ಮರಿ..ಬಾ ಇಲ್ಲಿ” ಎಂದು ಕರೆದಳು. . . ಅವನು ‘ಏನಜ್ಜಿ’ ಎಂದು ಓಡಿಬಂದ. “ಅಲ್ಲಿ ನೋಡು ಆ ಮರದ ಬಳಿ, ಯಾರೋ ಕೂತಿದ್ದಾರೆ. ಯಾರು ಚಿನ್ನು ಅವರು?” ಅಲೋಕ ತಾತ ಇರಬಹುದಾ?” ಎಂದಳು.

ಅಲೋಕ ಕಿಟಕಿಯೊಳಗಿನಿಂದ ಇಣುಕಿ, ‘ಅಯ್ಯೋ. . .ತಾತ ಅಲ್ಲ ಅಜ್ಜಿ. . . ಶೇಖರ್ ಅಂಕಲ್. . ಹುಚ್ಚರಾಗಿಬಿಟ್ಟಿದ್ದಾರೆ ಅಂತ ಅಮ್ಮ ಹೇಳುತ್ತಿದ್ದಳು. . .’ ಎಂದ. ಅವಳಿಗೆ ಸರಿಯಾಗಿ ಕೇಳಿಸಲಿಲ್ಲ “ಯಾರು ಚಿನ್ನು? ಯಾರು ಚಿನ್ನು?” ಎಂದು ಕೇಳುತ್ತಲೇ ಹೋದಳು. . . ಮರ್ನಾಲ್ಕು ಸಲ ಹೇಳಿ ಬೇಸರವಾದ ಮೊಮ್ಮಗ “ಇವತ್ತೆಲ್ಲಾ ಆ ಆ ಅಂತ ಅಂತಾನೆ ಇರು, ತುಂಬ ಕಿವುಡಿಯಾಗಿದ್ದಿ, ಹೋಗಜ್ಜಿ” ಎಂದು ಗೆಳೆಯನೊಂದಿಗೆ ಆಡಲು ಓಡಿದ. . . .

ಮರುದಿನವೂ ಅದೇ ದೃಶ್ಯ. . . ಅದೇ ವ್ಯಕ್ತಿ. . .ಎರಡು ಕೈಗಳನ್ನು ತಲೆಯ ಮೇಲೆ ಹಿಡಿದು ಕೈಮುಗಿಯುತ್ತಾನೆ. ಕೆನ್ನೆ ಕೆನ್ನೆ ಬಡಿದುಕೊಳ್ಳುತ್ತಾನೆ. . . ಮಗಳು ಚಂದನ “ಅಮ್ಮ ಇನ್ನೂ ಅಪ್ಪ ಬರುತ್ತಾರೆ ಎಂಬ ಆಸೆಯೇ?” ಎನ್ನುತ್ತಾಳೆ. ಆ ಆ ಎನ್ನುತ್ತಾಳೆ ಅಮ್ಮ, “ಅಮ್ಮನ ಜೊತೆ ಮಾತನಾಡುವುದೇ ಕಷ್ಟವಾಗಿದೆ. . . ಏನೂ ಕೇಳಿಸಲ್ಲ” ಎಂದು ಗೊಣಗಿಕೊಳ್ಳುತ್ತಾಳೆ.

“ಅದಾರು ನೋಡು ಚಂದು. . . ಮರದ ಬಳಿ. ಚಿನ್ನು ಏನೋ ಅಂದ ನಿನ್ನೆ. . . ನನಗೆ ಕೇಳಿಸಲೇ ಇಲ್ಲ”. . .
ದನಿಯೂ ಇತ್ತೀಚೆಗೆ ಕಂಪಿಸುತ್ತಿದೆ. . . ಚಂದನ ಕಿಟಕಿಯಲ್ಲಿ ಇಣುಕಿ “ಅವನು ಯಾರೆಂದು ಹೇಳಲಿ? ಅವನೂ ಒಂದು ರೀತಿಯಲ್ಲಿ ನಿನ್ನ ಗಂಡನೇ. . . ಆದರೆ ಗಂಡನಲ್ಲ” ಎಂದು ಹೇಳಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. . . “ಏನೆಂದೆ? ಆ. . .ಆ. . .ಆ. . .” ಎಂಬ ಚೇತನಜ್ಜಿಯ ಶಬ್ದಗಳು ಗಾಳಿಯಲ್ಲಿ ಲೀನವಾದವು.