Click here to Download MyLang App

ಮೂರ್ಖರಾದ ಮೂವರು ಸಹೋದರರು : ರಾಜೇಂದ್ರ ಕುಮಾರ್ ಗುಬ್ಬಿ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟಸ್ವರೂಪದ ಕನ್ನಡ

 ಬನ್ನೇರುಘಟ್ಟ ರಸ್ತೆಯ ಕೋಳಿ ಫಾರಂ ಕಥೆ

ಸುಮಾರು 1992 ಇರಬೇಕು, ನಮ್ಮ ತುಂಬಾ ಅತ್ತಿರದ ಆತ್ಮೀಯ ಸಂಬಂಧಿಕರೊಬ್ಬರು,   ಅವರ ಮನೆ ನಮ್ಮ ಮನೆಗೆ ತುಂಬಾ ಹತ್ತಿರದಲ್ಲೇ ಇದ್ದಿದ್ದರಿಂದ ನಮ್ಮ ಕಷ್ಟಗಳಿಗೆ ಅವರು ಸ್ಪಂದಿಸುತ್ತಿದ್ದರು, ಅವರ ಕಷ್ಟಗಳಿಗೆ ನಾವು ಸ್ಪಂದಿಸುತ್ತಿದ್ದೆವು, ನಾವೆಲ್ಲರೂ ಆಗಾಗ ಅವರ ಮನೆಗೆ ಹೋಗಿ ಬರುತ್ತಿದ್ದೆವು, ಅವರೂ ನಮ್ಮ ಮನೆಗೆ ಬರುತ್ತಿದ್ದರು,  ಅವರಿಗೆ ಇಬ್ಬರು ಗಂಡು ಮಕ್ಕಳು,  ಮೊದಲನೆ ಮಗ ಆಗತಾನೆ ಕಷ್ಟ ಪಟ್ಟು ಎಸ್.ಎಸ್.ಎಲ್.ಸಿ ಮುಗಿಸಿದ್ದ. ಅವನ ತಂದೆಯವರ ಆಸೆ,  ಮುಂದೆ ಅವನೂ ತನ್ನಂತೆಯೇ ಹೆಚ್ಚು ಓದಬೇಕೆಂದು, ಆದರೆ ಅವನಿಗೋ ಕೆಲಸಕ್ಕೆ ಹೋಗಬೇಕೆಂಬ ಆಸೆ, ಅವನಿಗೂ ಅವನ ತಂದೆಯವರಿಗೂ ಯಾವುದರಲ್ಲಿಯೂ ಸಾಮರಸ್ಯವಿರಲಿಲ್ಲ, "ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆಳೆಯಿತು"

ಎಂಬ ನಾಣ್ಣುಡಿಯಂತಿದ್ದರು, ಅದು ಅವನ ತಾಯಿಯ ಅತಿಯಾದ ಪ್ರೀತಿಯಿಂದ ಹಾಗಾಗಿದ್ದ, ಹೀಗೇ ಜೀವನ ಸಾಗಿತ್ತು, ಒಂದು ದಿನ ಶುಕ್ರವಾರ ಸುಮಾರು ಸಂಜೆ ವೇಳೆ, ನಮ್ಮ ಅಣ್ಣ ಅವರ ಮನೆಗೆ

 

ಹೋಗಿದ್ದಾರೆ,  ಹೀಗೆ ಅವರು, ಇವರು ಕೋಣೆಯಲ್ಲಿ ಕುಳಿತು ಕಾಫಿ ಕುಡಿಯುತ್ತಿರಬೇಕಾದರೆ ಅಲ್ಲೇ ಪುಸ್ತಕದ  ಅಲ್ಮೇರಾದ ಮೇಲೇ ಒಂದು ಕಾಗದದ ಪತ್ರ ನೋಡಿದ್ದಾರೆ, ಆಶ್ಚರ್ಯದಿಂದ ಅದೇನೆಂದು ತೆರೆದು ನೋಡಿದ್ದಾರೆ ಇಬ್ಬರೂ, ಓದಲು ತುಂಬಾ ಕುತೂಹಲವಾಗಿ ಪೂರ್ಣವಾಗಿ ಓದಿ ಕ್ಷಣಕಾಲ ದಿಗ್ಭ್ರಮೆ ಗೊಂಡಿದ್ದಾರೆ ಅವರು, ಆಗ ತಕ್ಷಣ ತನ್ನ ಹೆಂಡತಿಯನ್ನು ಕರೆದು ಈ ಪತ್ರ ತೋರಿಸಿದ್ದಾರೆ, ಅವರೂ ಆ ಪತ್ರ ಓದಿ ಪತ್ರದಲ್ಲಿದ್ದ ವಿಷಯ ತಿಳಿದು ಏನೂ ತಿಳಿಯದವರಂತೆ ಹೊರನಡೆದು , ನಾಟಕೀಯವಾಗಿ ದುಃಖಿಸುವ ರೀತಿ ನಟನೆಮಾಡುತ್ತಾ, ತನ್ನ  ಗಂಡನನ್ನೇ ಬೈಯುತ್ತಾ ಕುಳಿತಿದ್ದಾರೆ.

ಆ ಪತ್ರದಲ್ಲಿದ್ದ ವಿಷಯವೇನೆಂದರೆ, ಅಂದು ಬೆಳಿಗ್ಗೆ ಅವರ ಹಿರಿಯ ಮಗ ಮನೆಯಿಂದ ಕೆಲಸಕ್ಕೆಂದು ಹೋದವನು ಸಂಜೆಯಾದರೂ ಮನೆಗೇ ಬಂದಿರಲಿಲ್ಲ, ಪ್ರತಿದಿನ ಮಧ್ಯಾಹ್ನ ದ ಹೊತ್ತಿಗೆ ಊಟಕ್ಕೆ ಮನೆಗೆ ಬಂದು ಬಿಡುತ್ತಿದ್ದವನು ಅಂದು ಇನ್ನೂ ಬರದೇ ಮನೆಯಿಂದ ಓಡಿಹೋಗಿದ್ದ,

ಆ ಪತ್ರದಲ್ಲಿ ಈ ರೀತಿ ಬರೆದಿದ್ದ "ನಾನು ತಂದೆಯವರ ಕಿರುಕುಳ ತಾಳಲಾರದೆ ಮನಸ್ಸಿಗೆ ನೋವಾಗಿ ಅವರಿಂದ ದೂರವಿದ್ದು ಎಲ್ಲೋ ದೂರ ಹೋಗಿ

 

ಬದುಕಲು ನಿಮಗ್ಯಾರಿಗೂ ಹೇಳದೆ ಕೇಳದೆ  ಮನೆಬಿಟ್ಟು ಹೋಗುತ್ತಿರುವೆ, ನಿಮಗೆ ನನ್ನ ಮೇಲೆ ಒಂದಿಷ್ಟೂ ಅಕ್ಕರೆ ಯಿಲ್ಲ, ಎಲ್ಲಾ ಪ್ರೀತಿಯೂ ನಿಮ್ಮ ಚಿಕ್ಕ ಮಗನ ಮೇಲೆಯೇ ಇದೆ, ಆದ್ದರಿಂದ ನಾನು ನಿಮಗೆ ಭಾರವಾಗಿರುವೆ, ಈಗ ನಾನಿಲ್ಲದಿರುವುದರಿಂದ ಆ ಒಬ್ಬ ಮಗನನ್ನು ಚೆನ್ನಾಗಿ ಪ್ರೀತಿಸಿ, ಓದಿಸಿ ಚೆನ್ನಾಗಿ ನೋಡಿಕೊಳ್ಳಿ, ಮತ್ತೆಂದೂ ನಿಮ್ಮ ಮನೆಗೆ ಬರುವುದಿಲ್ಲ, " ಎಂದು ಬರೆದು ಎಲ್ಲರಿಗೂ ಕಾಣುವ ರೀತಿ ಆ ಪುಸ್ತಕ ಕಪಾಟಿನ ಮೇಲೆ ಇಟ್ಟು ,ಕೆಲವು ಬಟ್ಟೆಗಳಿರುವ ಬ್ಯಾಗು ತೆಗೆದುಕೊಂಡು ಹೊರಟುಹೋಗಿರುವುದು ತಿಳಿದು ಅವರಿಗೂ ಮನಸ್ಸಿಗೆ ತುಂಬಾ ನೋವಾಗಿ ಹಾಗೇ ನಿಸ್ಸಹಾಯಕರಾಗಿ ಕುಳಿತುಬಿಟ್ಟರು, ಹೊರಗೆ ಅವರ ಹೆಂಡತಿಯ ಗೊಣಗಾಟ ತಾರಕಕ್ಕೇರಿತ್ತು, ಇವರಿಬ್ಬರ ನಡುವಣ ಜೋರಾದ ಸಂಭಾಷಣೆಯಿಂದ ನಾವೆಲ್ಲರೂ ಅವರ ಮನೆಗೆ ಬಂದು ನಡೆದ ಘಟನೆಬಗ್ಗೆ ಕೇಳಿ ನಮಗೂ ತುಂಬಾ ದುಃಖ ವಾಗಿ ಮುಂದೆ ಏನು ಮಾಡುವುದೆಂದು ತಿಳಿಯದಾಯಿತು, ಆದಷ್ಟು ಅವರಿಗೆ ಧೈರ್ಯ ಹೇಳಿದೆವು, ಮುಂದೇನುಮಾಡುವುದೆಂದು ನಾನು, ನನ್ನ ಇಬ್ಬರು ಅಣ್ಣಂದಿರು ಸೇರಿ ಕಾರ್ಯರೂಪಕ್ಕಿಳಿದು ಏನಾದರೂ ಮಾಡಿ ಅವನನ್ನು ಹುಡುಕಿಕೊಂಡು ಬರಬೇಕೆಂದು

 

ರಾತ್ರಿಯೆಲ್ಲಾ ಚರ್ಚಿಸಿ, ಮರುದಿನ ಇಡೀ ಶನಿವಾರ ಅವನ ಕೆಲವು ಆತ್ಮೀಯ ಸ್ನೇಹಿತರು ನನಗೂ ಸ್ನೇಹಿತರಾಗಿದ್ದರಿಂದ ಅವರನ್ನೇಲ್ಲಾ ಸಂಧಿಸಿ ಅವನ ಬಗ್ಗೆ ಮಾಹಿತಿಯನ್ನು ಪಡೆದೆವು , ಆಗ ನಮಗೆ ತಿಳಿದ ಒಂದು ವಿಷಯ ಕೇಳಿ ನಮಗೆ, ಹಾಗೂ ಆತನ ತಂದೆಯವರಿಗೆ ಆಶ್ಚರ್ಯವಾಯಿತು,  ಅದೇನೆಂದರೆ ಆತನ ತಾಯಿ, ಹಾಗೂ ಅವನ ಕೆಲವು ಸ್ನೇಹಿತರ ಸಹಾಯದಿಂದಲೇ ಈ ಕೃತ್ಯಕ್ಕೆ ಕೈಹಾಕಿದ್ದ, ಅವರುಗಳು ಕೊಟ್ಟ ಮಾಹಿತಿಯಂತೆ ಆತ ಎಲ್ಲೂ ದೂರ ಹೋಗದೇ ಇಲ್ಲೇ  ಬನ್ನೇರುಘಟ್ಟ ರಸ್ತೆಯ ಲ್ಲಿದ್ದ ತನ್ನ ಸ್ನೇಹಿತ ಕೆಲಸಮಾಡುವ ಒಂದು ಕೋಳಿ ಫಾರಂನಲ್ಲಿ ಕೆಲಸಕ್ಕೆ ಹೋಗುವೆ ಎಂದು ತಿಳಿಸಿ ಹೋದನೆಂದೂ ತಿಳಿಸಿದರು, ಆದರೆ ಯಾವ ಕೋಳಿ ಫಾರಂ ಎಂದು ವಿಳಾಸ ತಿಳಿಸಲಿಲ್ಲ, ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಬಿಟ್ಟರು.

ನಮ್ಮ ಮನೆಯಲ್ಲಿ, ಅವರ ಮನೆಯಲ್ಲಿ ಸರಿಯಾಗಿ ಊಟ, ತಿಂಡಿ ಮಾಡದೇ ಎಲ್ಲರೂ ಅವನದೇ ಚಿಂತೆಯಲ್ಲಿದ್ದೆವು.

ಸರಿ ಮರುದಿನ ಭಾನುವಾರ ನಾವು ಮೂವರಿಗೂ ಅದೇ ಕೆಲಸ.

 ಅಂದು ಬೇಗನೆ ಎದ್ದು ಒಬ್ಬ ಅಣ್ಣ ಒಂದು ಕಡೆ ಹೊರಟರು, ನಾನು ಮತ್ತೊಬ್ಬ ಅಣ್ಣ ಒಂದು ಸ್ಕೂಟಿ

 

ತೆಗೆದುಕೊಂಡು ಬನ್ನೇರುಘಟ್ಟ ರಸ್ತೆಯಲ್ಲಿದ್ದ ಒಂದೊಂದೇ ಕೋಳಿ ಫಾರಂನಲ್ಲಿ ಹುಡುಕಾಟ ಪ್ರಾರಂಭಮಾಡುತ್ತಾ ಹೊರಟೆವು, ಸುಮಾರು ಬೆಳ್ಳಂಬೆಳಗ್ಗೆ ಆರು ಗಂಟೆಗೇ ಹೊರಟೆವು,  ಈಗಿನಂತೆ ಮೂವತ್ತು ವರ್ಷಗಳ ಹಿಂದೆ ಬನ್ನೇರುಘಟ್ಟ ರಸ್ತೆ ಇಷ್ಟೊಂದು ಅಭಿವೃದ್ದಿಯಾಗಿರಲಿಲ್ಲ, ಈ ಬೆಂಗಳೂರು ಹಾಲಿನ ಡೈರಿಯಿಂದ ಹಿಡಿದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದವರೆಗೂ ಒಂದಿಷ್ಟೂ ಅಭಿವೃದ್ಧಿಯಾಗಿರಲಿಲ್ಲ,  ಇಂದು ದೊಡ್ಡ ದೊಡ್ಡ ವಸತಿ ಸಮುಚ್ಚಯಗಳಿರುವ , ಮಾಲುಗಳಿರುವ, ಆಸ್ಪತ್ರೆಗಳಿರುವ ಜಾಗದಲ್ಲೆಲ್ಲಾ ವಿಪರೀತ ಕೋಳಿ ಫಾರಂಗಳೇ ತುಂಬಿಹೋಗಿದ್ದವು, ಕಣ್ಣಿಗೆ ಕಾಣುವಷ್ಟು ದೂರವೂ ಕೇವಲ ಕೋಳಿಫಾರಂಗಳೇ ಇದ್ದವು ಎಂದರೆ ನಂಬಲೇಬೇಕು, ಇಂದಿಗೂ ಅಂದಿಗೂ ಎಷ್ಟೊಂದು ವ್ಯತ್ಯಾಸ, ನನ್ನ ಪ್ರಕಾರ ಅಂದು ಆ ರಸ್ತೆ ಯಲ್ಲಿ ಸುಮಾರು ನೂರು, ನೂರೈವತ್ತು ಕೋಳಿಫಾರಂಗಳಿದ್ದಿರಬೇಕೆಂದು ನನ್ನ ಊಹೆ.

ಸರಿ ನಮಗೆ ಅವನದೇ ಚಿಂತೆಆವರಿಸಿದ್ದರಿಂದ ತಿಂಡಿ ತಿನ್ನಬೇಕೆಂಬ ನೆನಪೂ ಬರಲಿಲ್ಲ, ನಮ್ಮ ಗುರಿ ಕೇವಲ ಒಂದು ಹೇಗಾದರೂ ಮಾಡಿ ಅವನನ್ನು ಹುಡುಕಿತರಬೇಕೆಂಬುದು

ಹಾಗೇ ಕೇವಲ ಕಾಫಿ ಕುಡಿದು ಹೊರಟೆವು, ರಸ್ತೆಯ

 

ಇಕ್ಕೆಲಗಳಲ್ಲಿ ಕಣ್ಣಿಗೆ ಕಾಣುವ ಎಲ್ಲಾ ಕೋಳಿ ಫಾರಂಗಳಲ್ಲಿ ಅವನ ಹೆಸರು ಹೇಳಿ ಅಂಥವನು ನಿಮ್ಮಲ್ಲೇನಾದರೂ ಕೆಲಸಕ್ಕೆ ಬಂದಿರುವನಾ ಎಂದು ಕೇಳಿಕೊಂಡು ಬರುತ್ತಿದ್ದೆವು, ಆ ಕೋಳಿಫಾರಂಗಳೋ ಗಬ್ಬುನಾರುವ ವಾಸನೆ,  ಸುಮಾರು ಐವತ್ತು ಅಡಿ ದೂರದಿಂದಲೇ ನಮಗೆ ವಾಂತಿಯಾಗುವ ಅನುಭವ, ಆದರೂ ಇದನ್ನೆಲ್ಲಾ ಸಹಿಸಿಕೊಂಡೆವು, ಕಾರಣ ನಾವುಗಳು ಶುದ್ಧ ಸಸ್ಯಾಹಾರಿ ಜೊತೆಗೆ ನಮಗೆ ಅವನ ಮೇಲಿದ್ದ ಅಕ್ಕರೆಯಿಂದ, ಹೀಗೇ ಸುಮಾರು ಸಂಜೆ ನಾಲ್ಕು ಗಂಟೆಯಾದರೂ ನಮಗೆ ಹೊಟ್ಟೆ ಹಸಿದಿರುವುದೂ ಗಮನಕ್ಕೆ ಬರಲಿಲ್ಲ, ಅವನನ್ನು ಹುಡುಕುವ ಭರದಲ್ಲಿ, ಅಂದು ಸುಮಾರು ಐವತ್ತು ಅರವತ್ತು ಚಿಕ್ಕದಾದ ದೊಡ್ಡದಾದ ಕೋಳಿ ಫಾರಂಗಳಲ್ಲಿ ಹುಡುಕಿದೆವು, ಎಲ್ಲೂ ಅವನ ಸುಳಿವಿಲ್ಲ, ಅವನು ನಮಗೂ ಚಳ್ಳೆಹಣ್ಣು ತಿನ್ನಿಸಿದ್ದ, ಕಾರಣ ಅವನು ತನ್ನ ಸ್ನೇಹಿತರಿಗೆ ತಿಳಿಸಿರುವಂತೆ ಕೋಳಿ ಫಾರಂನಲ್ಲಿ ಹೋಗದೇ ಬೇರೆಲ್ಲೋ ಹೋಗಿದ್ದ, ನಾವುಗಳು ಅಮಾಯಕರು ಅವನ ಸ್ನೇಹಿತರ ಮಾತು ಕೇಳಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಲ್ಲಾ ಕೋಳಿಫಾರಂಗಳನ್ನು ನೋಡಿದ್ದಾಯಿತು, ಬರಿಗೈಲಿ ಅಂದು ರಾತ್ರಿ ಏಳು ಗಂಟೆ ಸಮಯಕ್ಕೆ ಹಿಂದಿರುಗಿ ಮನೆಗೆ ಬಂದೆವು, ನಮ್ಮ ಇನ್ನೊಬ್ಬ ಅಣ್ಣನೂ ಬರಿಗೈಲೇ ಬಂದಿದ್ದರು,

 

ಪೊಲೀಸರಿಗೆ ಕಂಪ್ಲೇಂಟ್ ಕೊಡೋಣವೆಂದು ಅಂದುಕೊಂಡೆವು,  ಆದರೆ ಮುಂದಿನವಾರ ಅವರ ಬಂಧುಗಳ ಹೊಸಮನೆ ಗೃಹಪ್ರವೇಶವಿದ್ದಿದ್ದರಿಂದ ಆಗ ಬರುವ ನೆಂಟರಿಷ್ಟರಿಂದ ಏನಾದರೂ ವಿಷಯ ತಿಳಿಯಬಹುದಾ ಎಂದು ನೋಡಿಕೊಂಡು ಆನಂತರ  ಪೊಲೀಸು ಸ್ಟೇಷನ್ನಿಗೆ ಹೋದರಾಯಿತು ಅಂದುಕೊಂಡು ಒಂದುವಾರ ಕಾದೆವು ಈಗಿನಂತೆ ಆಗ ಮೊಬೈಲ್ ಇರಲಿಲ್ಲ, ಫೋನುಗಳೇ ಕಡಿಮೆ ಇದ್ದವು, ಕೇವಲ ಪತ್ರಗಳು ಮಾತ್ರ ಚಲಾವಣೆಯಲ್ಲಿದ್ದವು.

ಒಂದುವಾರ ಬಂದೇಬಿಟ್ಟಿತು, ನಾವು ಯಾವುದೇ ದೂರದ ಸಂಬಂಧಿಕರಿಗೆ ವಿಷಯ ತಿಳಿಸಿರಲಿಲ್ಲ, ಸುಮ್ಮನೆ ರಗಳೆ ಏಕೆಂದು ನಮ್ಮ ನಮ್ಮಲ್ಲೇ ವಿಷಯ ಇತ್ತು,

ಆ ದಿನ ಎಲ್ಲರೂ ಗೃಹಪರವೇಶಕ್ಕೆ ಹೋಗಿದ್ದೆವು, ಆಗ ಕೆಲವು ಸಂಬಂಧಿಕರು ಹೇಳಿದರು ಆತ ಒಂದು ವಾರದಿಂದ ಮೈಸೂರಿನಲ್ಲೇ ಇದ್ದಾನಂತಲ್ಲ, ಅವನೇಕೆ ಈ ಸಮಾರಂಭಕ್ಕೆ ಬರಲಿಲ್ಲ ಎಂದು ನಮ್ಮನ್ನೇ ಪ್ರಶ್ನಿಸಿದರು, ನಾವುಗಳು ಏನೂ ಹೇಳದೆ ಸ್ವಲ್ಪ ಸಮಾಧಾನ ಪಟ್ಟುಕೊಂಡು ನಿಟ್ಟುಸಿರು ಬಿಟ್ಟೆವು, ಆದರೆ ಅದೇ ಸಮಾರಂಭಕ್ಕೆ ಆತ್ಮೀಯ ಸಂಬಂಧಿಕರೊಬ್ಬರು, ಅವನಿಂದ ನಡೆದ ವಿಷಯವನ್ನೆಲ್ಲಾ ಕೇಳಿ ತಿಳಿದು, ಸ್ವಲ್ಪ ಬುದ್ಧಿ ಹೇಳಿ

 

ಕರೆದುಕೊಂಡುಬಂದಿದ್ದರು, ಅವರ ಜೊತೆ ಸ್ವಲ್ಪ ತಡವಾಗಿ ಬಂದ ಈ ಮಹಾನುಭಾವ , ನಾವ್ಯಾರೂ ಆತನ ಸಹವಾಸಕ್ಕೆ ಹೋಗದೆ ಅವರ ಹೆತ್ತವರಿಗೇ  ಬಿಟ್ಟೆವು, ಅವರವರಲ್ಲಿ ಏನೇನೋ ಸಂಧಾನ ನಡೆದು ಮತ್ತೆ ಒಂದಾದರು ಅಪ್ಪ-ಮಗ. ಇವರಿಬ್ಬರ ಮಧ್ಯೆ

ಮೂರ್ಖರಾದದ್ದು ನಾವುಗಳು ಮೂರು ಜನ ಸಹೋದರರು.

 

-ರಾಜೇಂದ್ರ ಕುಮಾರ್ ಗುಬ್ಬಿ