Click here to Download MyLang App

ಮತ್ತೊಮ್ಮೆ ಪ್ರೀತಿ : ನೀಲಕಂಠ ಮಾಗಿ | ರೊಮ್ಯಾನ್ನ್ | ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ | ಯಾವ ದನಿಯಲ್ಲಿ ಆಡಿಯೋ ಕತೆಯಾಗಬೇಕು ಅನ್ನುವ ಕುರಿತು ಲೇಖಕರ ಆಯ್ಕೆ: ಗಂಡು ಧ್ವನಿ

ಅನುಕಂಪದ
ಅವಳದೊ ಇನ್ನೂ ನಾಲ್ಕರ ವಯಸ್ಸು ನೀರಲ್ಲಿ ಆಟಕ್ಕೆ ಇಳಿದವಳು ಅರ್ದ ಗಂಟೆಯಾದರೂ ಬರಲಿಲ್ಲ. ಸಾಕು ಬಾ ಮಾನು ಪುಟ್ಟ ಎಂದು ಕೂಗಿದರೂ ಬರಲಿಲ್ಲ. ಕಿಲ ಕಿಲ ನಾ ಬರಕಿಲ್ಲ ಎಂದು ಅಣುಗಿಸಿ ಮತ್ತೆ ಅದೇ ನೀರಿನಾಟ...

ನನಗೆ ಅಲ್ಲಿ ಹೆಚ್ಚು ಹೊತ್ತು ಸಮಯ ಕಳೆಯುವ ಶಕ್ತಿ ಇಲ್ಲ... ಹಳೆಯ ನೆನಪುಗಳ ಸುಳಿಗೆ ಮತ್ತೆ ಎಲ್ಲಿ ಸಿಕ್ಕಿ ಹಾಕಿ ಕೊಳ್ಳುತ್ತೇನೋ ಎಂಬ ಭಯ..!

ಕಾರಣ ಅವಳು...ಅವಳೇ...ಅವಳೊಬ್ಬಳೆ...!!!

ಹೌದು ನನ್ನ ಜೀವನದಲ್ಲಿ ಇಂದು ಪಡುತ್ತಿರೋ ಎಲ್ಲಾ ನೋವಿಗೆ ಅವಳೊಬ್ಬಳೆ ಕಾರಣ... ಅವಾಗೆಲ್ಲ ಈ ನದಿ ತೀರದಲ್ಲಿ ಅವಳ ಜೊತೆ ಕಳೆದ ಸುಮಧುರ ಕ್ಷಣಗಳು ಇಂದು ನನ್ನ ಗಂಟಲುಬ್ಬಿಸಿವೆ...

ಹೀಗೆ ಆಗತ್ತೆ ಅಂತಾನೆ ನಾನು ಎರಡು ವರ್ಷ ಈಕಡೆ ಬಂದಿರಲಿಲ್ಲ... ಇಂದು ಮಾನ್ವಿಯ ಹಟಕ್ಕೆ ಸೋತು ಬಂದೆ...

ಇನ್ನು ಹೆಚ್ಚು ಕೂರಲು ಆಗಲಿಲ್ಲ ನನಗೆ... ಮನಸಿನ ತೊಳಲಾಟಕ್ಕೆ ಸೋತು ಸಿಟ್ಟಲ್ಲಿ ಎದ್ದು ಹೋಗಿ ಮಾನ್ವಿಯನ್ನು ಕೈ ಹಿಡಿದು ಕರೆತಂದು ಗಾಡಿಯಲ್ಲಿ ಕೂರಿಸಿಕೊಂಡು ಐವತ್ತರ ವೇಗ ದಾಟಿ ದಾರಿ ನೋಡುತ್ತಾ ಓಡಿಸುತ್ತಿದ್ದೆ...

ಎಲ್ಲಿತ್ತೋ ಆ ಕರು ಗೊತ್ತಿಲ್ಲ ನನ್ನ ಬೈಕಿಗೆ ಅಡ್ಡ ಬಂತು... ಮುಂದಿನ ಕ್ಷಣ ಎತ್ತಲೋ ಇದ್ದ ನನ್ನ ಮನ, ಬೈಕಿನ ವೇಗ ಎರಡು ನಿಂತವು...

ನನ್ನ ಮುಂದೆ ಹೆದರಿ ಕೂತಿದ್ದ ಮಾನ್ವಿ ನನ್ನ ತಿರುಗಿ ನೋಡಿ ಅಳೋದೊಂದು ಬಾಕಿ...ಅಷ್ಟು ಗಾಬರಿಯಾಗಿದ್ದಳು... ಅವಳಿಗೆ ಸಮಾಧಾನ ಮಾಡಿ ಎದೆಗೆ ಅವಚಿಕೊಂಡು ಹಣೆಗೊಂದು ಮುತ್ತನಿಟ್ಟೆ... ಮನಸು ಚೂರು ಹಗುರ ಆಯ್ತು... ಮತ್ತೇ ಪಯಣ ಮನೆ ಕಡೆಗೆ...

*******************************************

ಎರಡು ವರ್ಷದ ಸ್ನೇಹ...ನಾಲ್ಕು ವರ್ಷದ ಪ್ರೀತಿ...ಮತ್ತೆರಡು ವರ್ಷದ ವಿರಹ... ಈ ಎಂಟು ವರ್ಷದಲ್ಲಿ ನನ್ನ ಜೀವನ ಎತ್ತಲೋ ಸಾಗಿ... ಎತ್ತಲೋ ಬಂದು ನಿಂತಿದೆ...

ನನ್ನ ಪ್ರೀತಿ ಮೇಲೆ ನನಗೆ ನಂಬಿಕೆಯೂ ಇತ್ತು... ಖಂಡಿತ ಅದು ಪ್ರೀತಿಯೇ ಎಂದು ಗೊತ್ತಿತ್ತು... ಆದರೆ ಅವಳಿಗೆ ಮೊದಲು ಪ್ರೀತಿ ಎನಿಸಿದರೂ ಎಂಜಿನಿಯರಿಂಗ್ ಕೊನೆಯಲ್ಲಿ ಆಕರ್ಷಣೆ ಎನಿಸಿತಂತೆ... ಪಿಯುಸಿ ಒಟ್ಟಿಗೆ ಓದಿ ಸ್ನೇಹವಾಗಿದ್ದ ನಮ್ಮ ನಡುವಿನ ಬಂಧ.. ಇಂಜಿನಿಯರಿಂಗ್ ಸೇರುವಾಗ ಪ್ರೀತಿಯಾಗಿ ಬದಲಾಗಿತ್ತು... ಅವಳೇ ಮೊದಲು ಪ್ರೇಮ ನಿವೇದಿಸಿದ್ದು
..

ನಾಲ್ಕು ವರ್ಷ ಎಲ್ಲವೂ ಚೆನ್ನಾಗೇ ಇತ್ತು... ಓದಿನಲ್ಲೂ ನಾವಿಬ್ಬರೂ ಮೊದಲೇ... ಇಡೀ ಕ್ಯಾಂಪಸ್ ಗೆ ನಮ್ಮ ಪ್ರೀತಿಯ ಪರಿಚಯ ವಿತ್ತು... ಪ್ರತಿ ವರ್ಷ ನಡೆಯುವ ಕಾಲೇಜ್ ಫೆಸ್ಟ್ ಅಲ್ಲಿ Mr and Mrs College ನಮಗೆ ಬಹುಮಾನ...ಕೊನೆ ವರ್ಷದಲ್ಲಿ ಒಂದೊಳ್ಳೆ ಕಂಪನಿಗೆ ಸೆಲೆಕ್ಟ್ ಕೂಡ ಆದೆವು... ಆದರೆ ಎಕ್ಸಾಮ್ ಎಲ್ಲಾ ಮುಗಿದು ಅವಳ ಹುಟ್ಟಿದ ಹಬ್ಬವನ್ನು ಆಚರಿಸಲು ನನ್ನ ಮನೆಯವರಿಗೆ ನನ್ನ ಪ್ರೀತಿಯ ವಿಷಯ ತಿಳಿಸಿ ಮನೆಗೆ ಕರೆದುಕೊಂಡು ಹೋಗಲು ಬಂದ ದಿನವೇ ನನ್ನನ್ನು ಅವಳು ತೊರೆದು ಹೋಗಿದ್ದು...

"ನಿನ್ನ ಚಾಣಾಕ್ಷತೆ, ಧೈರ್ಯ, ಸಹಾಯ ಗುಣ, ಬುದ್ದಿವಂತಿಕೆ ನೋಡಿ ಪ್ರೀತಿ ಎಂದು ತಿಳಿದುಕೊಂಡಿದ್ದೆ...ಆದರೆ ಅದು ಕೇವಲ ಆಕರ್ಷಣೆ ಅಷ್ಟೆ ಅಂತ ಇವಾಗ ಅರ್ಥ ಆಗ್ತಾ ಇದೆ ಭುವನ್... ಸಾರಿ ನಿನ್ನ ಸಮಯ ಹಾಳು ಮಾಡಿದ್ದಕ್ಕೆ... ನನ್ನ ತಪ್ಪನ್ನ ಕ್ಷಮಿಸಿ ನಿನ್ನ ಜೀವನ ಕಟ್ಟಿಕೊ... ಬೈ..." ಇಷ್ಟೇ ಅವಳು ಹೇಳಿ ಹೋಗಿದ್ದು...ಅವಳು ನನ್ನ ತೊರೆದು ಹೋಗಿ ಎರಡು ವರ್ಷ ವಾಯಿತು...ಆದರೆ ನನ್ನ ಮನದಿಂದ ಒಂದಿಂಚು ಕೂಡಾ ಅಲುಗಾಡಿಲ್ಲ... ಅವಳು ಹೇಳಿದ್ದಕ್ಕೆ ಕ್ಯಾಂಪಸ್ ಅಟೆಂಡ್ ಮಾಡಿದ್ದ ನಾನು ತಿರುಗಿ ಅದರ ಕಡೆ ನೋಡಲಿಲ್ಲ...

*******************************************

ಅಂದು ನನ್ನ ಆಫೀಸ್ ಕೆಲಸ ಮುಗಿಸಿ ಮನೆಗೆ ಬಂದೆ... ಅಣ್ಣ ನನಗಾಗಿ ಕಾಯುತ್ತಿದ್ದ ಅನಿಸುತ್ತೆ...ಬಂದ ತಕ್ಷಣ ಕರೆದು ಫ್ರೆಶ್ ಆಗಿ ಬಾ ಮಾತಾಡಬೇಕು ಎಂದು ಹೇಳಿ ಆತನ ಕೋಣೆಗೆ ತನ್ನ ವೀಲ್ ಚೇರ್ ಮೇಲೆ ಹೋದ...ಬಟ್ಟೆ ಬದಲಿಸಿ ಅವನ ಕೋಣೆಗೆ ನಾನು ಹೋದೆ...

"ನನಗೆ ಆಕ್ಸಿಡೆಂಟ್ ಆದಗಿಂದ ನೀನೇ ಮನೆ ನೋಡಿ ಕೊಳ್ತ ಇದಿಯ... ಸ್ವಂತ ಕಂಪನಿ ಕಟ್ಟಿದಿಯ... ಹಂಚಿನ ಮನೆಯನ್ನ ಎರಡಂತಸ್ತಿನ ಮನೆ ಮಾಡಿದಿಯ... ಅಪ್ಪ ಅಮ್ಮನನ್ನು... ನನ್ನನ್ನೂ.. ನನ್ನ ಮಗಳ ಜವಾಬ್ದಾರಿಯನ್ನು ನೀನೇ ನೋಡಿಕೊಳ್ತ ಇದಿಯ... ಆದರೂ ನಿನಗಾಗಿ..."

ಇನ್ನು ಏನೋ ಹೇಳಲು ಹೊರಟಿದ್ದ ಅಣ್ಣನನ್ನು ತಡೆದು ಕೇಳಿದೆ... " ಅಣ್ಣ ಇದೆಲ್ಲ ಈಗ ಯಾಕೆ ಹೇಳ್ತಾ ಇದಿಯ..."

ನನ್ನಕಡೆ ಒಂದು ನಸುನಗೆ ಸೂಸಿ ಹೇಳಿದ " ಹೆಚ್ಚು ಹೇಳಲ್ಲ...ನೇರ ವಿಷಯಕ್ಕೆ ಬರ್ತೀನಿ... ಆಕ್ಸಿಡೆಂಟ್ ನಿಂದ ನನ್ನ ಮಗಳು ಅವಳ ಅಮ್ಮನನ್ನು ಕಳೆದುಕೊಂಡಳು...ಈಗ ನನಗೆ ಮತ್ತೊಂದು ಮದುವೆ ಆಗಿ ಅವಳಿಗೆ ತಾಯಿ ತರಲು ಸಾಧ್ಯ ಇಲ್ಲ...ಆ ಆಸೆಯೂ ಇಲ್ಲ... ಅವಳಿಗೆ ತಾಯಿ ನೀನೇ ತರಬೇಕು... ಅಮ್ಮನಿಗೂ ವಯಸ್ಸು 60 ಆಗಿದೆ... ಮನೆ ನೋಡಿಕೊಳ್ಳಲು ಒಂದು ಹೆಣ್ಣಿದ್ದರೆ ಚೆಂದ..."

ಇದೆ ವಿಷಯ ಇರಬಹುದು ಎಂದು ಊಹಿಸಿದ್ದ ನನಗೆ ಹೆಚ್ಚು ಆಶ್ಚರ್ಯ ಆಗಲಿಲ್ಲ... ಮನಸಲ್ಲಿ ನೂರು ನೋವಿದ್ದರೂ ಒಪ್ಪಿಕೊಂಡೆ... ಅಮ್ಮ ಅಪ್ಪನ ಕಾಳಜಿಗಾಗಿ, ಮಾನ್ವಿಯ ಭವಿಷ್ಯಕ್ಕಾಗಿ, ಮನೆಯ ಸಂತೋಷಕ್ಕಾಗಿ...

"ಸರಿ ಮದುವೆ ಆಗ್ತೀನಿ... ನೀವೇ ಹೆಣ್ಣು ಹುಡುಕಿ ನಾನೆಲ್ಲಿಗೂ ಬರಲ್ಲ... ನೀವು ತೋರಿಸಿದವಳಿಗೆ ಮೂರು ಗಂಟು ಕಟ್ಟುತ್ತೇನೆ... ನಿಮ್ಮ ಆಯ್ಕೆ ತಪ್ಪಾಗಲ್ಲ ಎಂದು ನಂಬಿಕೆ ಇದೆ..." ಅಷ್ಟು ಹೇಳಿ ನನ್ನ ರೂಮಿಗೆ ಸೇರಿದೆ...ಬಾಗಿಲು ಮುಚ್ಚಿ ಬಂದು...ಶವರ್ ಆನ್ ಮಾಡಿ ಕೆಳಗೆ ಕೂತು ಹದಿನೈದು ನಿಮಿಷ ಕಳೆದರೂ ಕಣ್ಣೀರಿನ ಹರಿವು ನಿಂತಿಲ್ಲ... ಮನಸಲ್ಲಿ ಭಾವನೆಗಳ ಅಂತರ್ಯುದ್ಧವೇ ನಡೀತಿದೆ...

*********************************************

ಅಣ್ಣನ ಬಳಿ ಮಾತನಾಡಿ ಮೂರು ವಾರ ಕಳೆದಿದೆ... ನಾನು ಬೆಳಗ್ಗೆ ಆಫೀಸ್ ಗೆ ಹೊರಡುವಾಗ ಬಂದು "ಸಂಜೆ ಮನೆಗೆ ಬೇಗ ಬಾ... ವಾರದ ಹಿಂದೆ ಒಂದು ಹೆಣ್ಣು ನೋಡಿ ಬಂದಿದ್ದೆವು... ಅವಳು ನಿನ್ನ ಬಳಿ ಮಾತಾಡಲೇ ಬೇಕಂತೆ... ನಮಗೆಲ್ಲ ಒಪ್ಪಿಗೆ ಇದೆ... ನೀನು ಮಾತನಾಡಿ ನೋಡು... ಒಪ್ಪಿಗೆ ಆದರೆ ಮುಂದು ಬರೆಯೋಣ..." ಎಂದ... ನಾನು ಹೂ ಬರ್ತೀನಿ ಎಂದು ಶೆಡ್ ನಿಂದ ಕಾರು ತೆಗೆದು ಹೊರಟೆ...

"ಮನೆಯ ಅವಶ್ಯಕತೆಗಾಗಿ 24 ರ ವಯಸ್ಸಿಗೆ ಮದುವೆಗೆ ಒಪ್ಪಿದ್ದೆನೆ... ಇನ್ನ ಅವಳು 20 21 ಇರಬಹುದು... ಆ ಹುಡುಗಿ ನಮ್ಮ ಮನೆ ನಡೆಸುತ್ತಾಳ... ದೇವರೇ ಬಲ್ಲ..." ಕಾರಿನಲ್ಲಿ ಕೂತ ನನ್ನ ಆಲೋಚನೆಗಳಿಗೆ ಮಿತಿ ಇಲ್ಲ...

ಸಂಜೆ ಆಫೀಸ್ ನಿಂದ ಬೇಗ ಹೊರಟೆ... ವಾಚ್ಮೆನ್ ಗೇಟು ತೆರೆದ... ಒಳಗಡೆ ಕಾರು ತಂದು ನಿಲ್ಲಿಸಿ ಕೆಳಗೆ ಇಳಿದು ಮನೆ ಕಡೆ ನೋಡಿದೆ...

ಮನೆ ಪೂರ್ತಿ ಕೃತಕ ವಿಧ್ಯುತ್ ದೀಪಗಳಿಂದ ಸಿಂಗಾರಗೊಂಡಿದೆ... ಕತ್ತಲಾದರೆ ಕಣ್ಣಿಗೆ ಹಬ್ಬವಾಗುವುದಂತು ಸತ್ಯ... ಹಾಗೇ ಮುಂದೆ ನಡೆದು ಷೂ ಕಳಚಿ ಹಾಲ್ ಗೆ ಬಂದೆ... ಮನೆಯ ಒಳಗೂ ತಾಯಾರಿ ಜೋರಾಗಿದೆ...

ಅಪ್ಪ ಬಂದು ಬೇಗ "ತಯಾರಾಗು...ನಿನ್ನ ಹಾಸಿಗೆಮೇಲೆ ಬಟ್ಟೆ ಇದೆ...ಅದನ್ನೇ ಹಾಕಿಕೋ..."
ಹಾ ಅದನ್ನೇ ಹಾಕಿ ಕೊಳ್ಳುವೆ ಎಂದು ಹೇಳಿ ಬಂದೆ...

ನನಗೆ ಎಲ್ಲೋ ಏನೋ ಮಿಸ್ ಆಗ್ತಿದೆ ಅಂತ ಅನುಮಾನ... ಹೆಣ್ಣು ನನ್ನ ನೋಡಿ ಮಾತನಾಡಿ ಹೋಗಲು ಇಷ್ಟು ಆಡಂಬರ ಯಾತಕ್ಕಾಗಿ ಅಂತ ತಿಳಿಯಲಿಲ್ಲ... ಅಣ್ಣ ಸಿಕ್ಕರೆ ಕೇಳುತ್ತೇನೆ ಅಂತ ಅಪ್ಪನನ್ನ ಮುಂದೆ ಬಿಟ್ಟಿದ್ದಾನೆ ಎಂದು ತಿಳಿಯಲು ಹೆಚ್ಚು ಸಮಯ ಬೇಕಿಲ್ಲ...

ನನ್ನ ಕೋಣೆಗೆ ಬಂದೆ ಬ್ಯಾಗ್ ತೆಗೆದು ಟೇಬಲ್ ಮೇಲಿಟ್ಟು ಹಾಸಿಗೆ ಹತ್ತಿರ ಬಂದೆ... ಹಾಸಿಗೆ ಮೇಲೆ ಮೆರೊನ್ ಬಣ್ಣದ ಬ್ಲೆಜ್ಜೆರ್, ಸಿಲ್ಕ್ ಶರ್ಟ್, ಅದಕ್ಕೊಪ್ಪುವ ಮರೂನ್ ಬಣ್ಣದ ಪ್ಯಾಂಟ್... ಅಂದು ಅವಳ ಹುಟ್ಟು ಹಬ್ಬ ಆಚರಿಸಲು ಇಬ್ಬರಿಗೂ ಒಂದೇ ಬಣ್ಣದ ಕಪಲ್ ಡ್ರೆಸ್ ತಂದಿದ್ದೆ... ಅಂದು ಅವಳು ಹೇಳಿ ಹೋದ ನಂತರ ಮನೆಗೆ ಬಂದು ರೂಮಿನಿಂದ ಹೊರಗೆ ಎಸೆದಿದ್ದಷ್ಟೆ ನೆನಪು... ಮತ್ತೆ ಇಂದೆ ನೋಡುತ್ತಿರೋದು...

ನನಗೆ ಈ ಬಟ್ಟೆ ಬೇಕಿರಲಿಲ್ಲ... ಎರಡು ವರ್ಷ ಇದನ್ನು ಎತ್ತಿಟ್ಟಿದ್ದರು ಎಂದು ಇಂದೆ ತಿಳಿದದ್ದು... ಆದರೂ ಅಪ್ಪನ ಆಜ್ಞೆ ಎಂದೂ ಮೀರಿಲ್ಲ... ಮನದಲ್ಲಿ ಎದ್ದೇಳಿತ್ತಿರೋ ಭಾವನೆ ಎಂಬ ಅಲೆಗಳ ಹೊಡೆತ ತಡೆದುಕೊಳ್ಳುವ ಸಾಮರ್ಥ್ಯ ಇನ್ನು ಇಲ್ಲ... ಸೀದಾ ಹೋಗಿ ಶವರ್ ಕೆಳಗೆ ನಿಂತೆ... 30 ನಿಮಿಷದಲ್ಲಿ ಅದೇ ಡ್ರೆಸ್ ತೊಟ್ಟು ಹೊರಗೆ ಬಂದೆ... ಪಕ್ಕದ ರೂಮಿ ನಿಂದ ಕೈ ಬಳೆ ಸದ್ದು... ಅಣ್ಣ ಅತ್ತಿಗೆ ಇದ್ದ ರೂಮು ಅದು... ಅತ್ತಿಗೆ ಅಗಲಿದ ನಂತರ ಅಣ್ಣ ಬೇರೆ ರೂಮಿಗೆ ಹೋದ... ಆ ರೂಮ್ ಅಲ್ಲಿ ನನ್ನವಳ ನೆನಪು ಕಾಡುತ್ತೆ ಅಂತ... ಅತ್ತಿಗೆಯ ಕೈ ಬಳೆ ಸದ್ದು ನಿಂತ ನಂತರ ಮತ್ತೆ ಅದೇ ಥರದ ಸದ್ದು... ಮನಸ್ಸಿಗೆ ಸ್ವಲ್ಪ ತಂಪು... ನನ್ನ ನೋಡಲು ಬಂದ ಹುಡುಗಿ ಇರಬೇಕು ಎಂದು ಊಹಿಸಿ ಕೆಳಗೆ ಬಂದೆ...

ಅಪ್ಪ ಅಮ್ಮ ಅಣ್ಣ ನನ್ನ ನೋಡಿ ಒಂದು ನಗೆ ಸೂಸಿದರು... ಮಾನ್ವಿಯಂತು ಚಿಕ್ಕು ಮಸ್ತ್ ಕಾಣ್ತಾ ಇದಿಯ ಅಂತ ಕೆನ್ನೆಗೆ ತುಟಿಯೊತ್ತಿದಳು... ನಾನು ಅವಳಿಗೊಂದು ಮುತ್ತು ನೀಡಿ ನಿನ್ನಷ್ಟೇನು ಚೆನ್ನಾಗಿ ಕಾಣುತ್ತಿಲ್ಲ ಬಿಡು ಎಂದೆ... ಅವಳ ನಗುವಿನಲ್ಲಿ ಕಳೆದುಹೋದ ನನಗೆ ಎಚ್ಚರಿಸಿದ್ದು ಮೇಲಿನಿಂದ ಬರುತ್ತಿದ್ದ ಗೆಜ್ಜೆ ಸಪ್ಪಳ...

ತಿರುಗಿ ಮೇಲೆ ನೋಡಿದೆ... ಮರೂನ್ ಬಣ್ಣದ ಸೀರೆ... ಅದೇ ಬಣ್ಣದ ಕೈ ಬಳೆ... ಗಾಳಿಗೆ ಹಾರುತ್ತಿರೋ ಅವಳ ಕೇಶರಾಶಿ... ಕಾಮನಬಿಲ್ಲಿನಂತ ತಿದ್ದಿ ತೀಡಿದ ಹುಬ್ಬು... ಹವಳದ ಆಕಾರದ ಹಣೆ ಬೊಟ್ಟು... ಬಟ್ಟಲು ಕಂಗಳು... ನೀಳ ನಾಸಿಕ... ಬಿಲ್ಲಿನಾಕಾರದ ಅವಳ ಅಧರಗಳು... ಒಂದು ಕ್ಷಣ ನನ್ನೆ ನಾ ಮರೆತೆ... ಅವಳ ಹುಟ್ಟು ಹಬ್ಬಕ್ಕೆ ತಂದಿದ್ದ ಸೀರೆ ತೊಟ್ಟು ಅವಳೇ ಎದುರಿಗೆ ಬಂದಿದ್ದಾಳೆ... ಸೀರೆಯ ನೆರಗನ್ನು ಚಿಮ್ಮಿಕೊಂಡು ನನ್ನ ಬಳಿಗೆ ಬರುತ್ತಿದ್ದಾಳೆ... ನನ್ನ ಮೈ ಎಲ್ಲಾ ಸಣ್ಣಗೆ ನಡುಗುತ್ತಿದೆ... ಅವಳೇ ಬಂದು ನನ್ನ ಕೈ ಹಿಡಿದು "ಹ್ಯಾಪಿ ಬರ್ತ್ಡೇ ಭೂ" ಎಂದಳು... ಆವಾಗಲೇ ನನಗೆ ನೆನಪಾಗಿದ್ದು ಇಂದು ನನ್ನ ಹುಟ್ಟು ಹಬ್ಬ ಎಂದು... ಏನು ಹೇಳಬೇಕು ಎಂದು ತಿಳಿಯಲಿಲ್ಲ... ಹೃದಯದ ಬಡಿತ ಜೋರಾಗಿ ಬಡಿದುಕೊಳ್ಳುತ್ತಿದೆ... ಆದರೂ ತುಸು ಧೈರ್ಯ ತಂದುಕೊಂಡು ತಡವರಿಸಿ " ಥ್ಯಾ... ಥ್ಯಾ... ಥ್ಯಾಂಕ್ಸ್..." ಎಂದೆ... ಒಂದು ನಗೆ ಕೊಟ್ಟಳು... ಅದೇ ನಗು... ಆರು ವರ್ಷಗಳ ಅವಳ ಜೊತೆಗಾರಿಕೆಯಲ್ಲಿ ಆ ನಗುವೇ ನನ್ನನ್ನು ಹೆಚ್ಚು ಸೆಳೆದದ್ದು...

ಅವಳನ್ನ ನೋಡುತ್ತಾ ನಿಂತ ನನ್ನನ್ನು ಎಚ್ಚರಿಸಿದ್ದು ಮಾನ್ವಿಯೇ... ಚಿಕ್ಕು ಆಮೇಲೆ ನೋಡುವಂತೆ ಬಾ ಕೇಕ್ ಕಟ್ ಮಾಡು ಎಂದಳು... ಆವಾಗಲೇ ನಾನು ಗಮನಿಸಿದ್ದು ಅವಳ ಅಪ್ಪ ಅಮ್ಮ ಅಣ್ಣ... ನನ್ನ ಕಂಪನಿ ವರ್ಕರ್ಸ್... ಅಪ್ಪ ಅಣ್ಣನ ಗೆಳೆಯರು ಎಲ್ಲರೂ ಬಂದಿದ್ದಾರೆಂದು... ನನ್ನ ತಲೆಯಲ್ಲಿ ನೂರೆಂಟು ಪ್ರಶ್ನೆಗಳು... ಉತ್ತರಿಸುವವರಾರು...??

ನಿನ್ನ ಗೊಂದಲಗಳಿಗೆ ನಾನೇ ಉತ್ತರಿಸುವೆ ಎಂದು ಕಣ್ಣಲ್ಲೇ ಹೇಳಿ ಕೈ ಹಿಡಿದು ಕರೆದೊಯ್ದಳು ನನ್ನ ಹೃದಯದೊಡತಿ... ಮನಸ್ಸಿಗೆ ತುಸು ಸಮಾಧಾನ ಆಗಿದೆ ಅನಿಸ್ತು... 

ನಂತರ ಕೇಕ್ ಕತ್ತರಿಸಿದೆ... ಒಬ್ಬೊಬ್ಬರೇ ಬಂದು ಶುಭಾಶಯ ತಿಳಿಸಿದರು... ಎಲ್ಲರಿಗೂ ನಗುಮೊಗದಿಂದಲೇ ಧನ್ಯವಾದ ಹೇಳಿದೆ...

ಹಾಗೇ ಒಬ್ಬೊಬ್ಬರೇ ಹೊರಡುತ್ತಿದ್ದರು... ನಾನು ಎರಡು ಗಂಟೆ ಇಂದ ನಿಂತು ಕಾಲು ನೋವಾಗಿ ಅಲ್ಲೇ ಸೋಫಾದ ಮೇಲೆ ಕೂತು ಎಲ್ಲರನ್ನೂ ನೋಡುತ್ತಿದ್ದೆ...

ಅಪ್ಪ ಅಮ್ಮ ನನ್ನವಳ ಅಮ್ಮ ಅಪ್ಪನೊಂದಿಗೆ ಮಾತಾಡುತ್ತಿದ್ದಾರೆ... ನನ್ನಣ್ಣ ಅವಳ ಅಣ್ಣನೊಂದಿಗೆ ಮಾತಾಡುತ್ತಿದ್ದಾನೆ... ಮಾನ್ವಿ ನನ್ನವಳ ಜೊತೆ ಏನೋ ಕೀಟಲೆ ಮಾಡುತ್ತಾ ನಗುತ್ತಾ ಆಡುತ್ತಿದ್ದಾಳೆ... ಈ ಮನೆಯಲ್ಲಿ ಇಷ್ಟು ಸಂಭ್ರಮ ಬಂದಿದ್ದು ಇಂದೆ ನಾನು ನೋಡಿದ್ದು... ಹೀಗೆ ಯೋಚನೆಗಳ ನಡುವೆ ಇದ್ದವನ್ನನ್ನ ಎಚ್ಚರಿಸಿದ್ದು ಅಪ್ಪ...

"ಅತಿಥಿಗಳು ಹೋಗಾಯ್ತು... ನಾವೂ ಊಟ ಮಾಡೋಣ ಭುವ..." ಎಂದರು...

ನಾನು ನಕ್ಕು ತಲೆ ಆಡಿಸಿದೆ... ಉಳಿದದ್ದು ನನ್ನ ಮನೆಯವರು ಹಾಗು ಅವಳ ಮನೆಯವರು... ಡೈನಿಂಗ್ ಟೇಬಲ್ ನತ್ತ ನಡೆದೆವು... ಊಟದ ನಡುವೆ ಎಲ್ಲರೂ ಏನೇನೋ ಮಾತಾಡುತ್ತಿದ್ದಾರೆ... ನನಗೆ ಅದರ ಪರಿವಿಲ್ಲ... ಊಟ ಮುಗಿಸಿ ಕೈ ತೊಳೆದೆ... ಅವಳದು ಊಟ ಆಗಿತ್ತು ಅವಳು ಕೈ ತೆಳೆದು ಎದ್ದಳು...

ಅಪ್ಪ ನನ್ನ ನೋಡಿ ಅವಳಿಗೆ ಹೇಳಿದರು  " ಅವನಿಗೆ ತಲೆ ತುಂಬಾ ಬರೀ ಪ್ರಶ್ನೆಗಳೇ ತುಂಬಿದಾವೆ ಈಗ... ಮೊದಲು ಎಲ್ಲಾ ಬಗೆಹರಿಸು... ಹೊರಗಡೆ ಗಾರ್ಡನ್ ಖಾಲಿ ಇದೆ... ನಿಮ್ಮ ಏಕಾಂತಕ್ಕೆ ನಾವ್ಯಾರೂ ಭಂಗ ತರಲ್ಲ..." ಅವರ ಮಾತಿಗೆ ಎಲ್ಲರೂ ನಕ್ಕರು...

ನನಗೆ ಅಪ್ಪ ಹೇಳಿದ್ದು ಕೇಳಿ ಮುಜುಗರ ತಡೆದು ಕೊಳ್ಳಲು ಆಗಲಿಲ್ಲ... ದರ ದರ ನಡೆದು ಗಾರ್ಡನ್ ಕಡೆ ಸಾಗಿದೆ... ಅಲ್ಲೇ ಕಟ್ಟೆ ಮೇಲೆ ಕೂತೆ... ಕೂತು ತುಸು ಹೊತ್ತಿಗೆ ಅವಳು ಬಂದಳು... ಪಕ್ಕದಲ್ಲೇ ಕೂತಳು...  ನನಗೆ ಏನು ಕೇಳಲು ನೂರು ಪ್ರಶ್ನೆಗಳಿವೆ...ಕೇಳಲು ನಾಲಿಗೆ ಹೊರಳುತ್ತಿಲ್ಲ...

ಅವಳೇ ಮೊದಲು ತುಟಿ ಬಿಚ್ಚಿದಳು... " ನಿನ್ನ ಗೊಂದಲಗಳಿಗೆ ಉತ್ತರಿಸುವೇ ಭೂ" ಎಂದು ಶುರು ಮಾಡಿದಳು...

ಕಾಲೇಜಿನ ದಿನಗಳಲ್ಲಿ ನಮ್ಮ ಪ್ರೀತಿ ನೋಡಿ ಶುಭ ಹಾರೈಸಿದವರಂತೆ ಹೊಟ್ಟೆ ಉರಿದುಕೊಂಡವರು ಇದ್ದರು... ಅವರಲ್ಲೇ ಯಾರೋ ಒಬ್ಬರು ನಮ್ಮ ವಿಷಯ ಅವಳ ಅಣ್ಣನಿಗೆ ತಿಳಿಸಿದ್ದಾರೆ... ಅವನು ಮೊದಲೇ ಪೊಲೀಸ್... ಇವಳಿಗೆ ಹೆದರಿಸಿದ್ದಾನೆ... ನನ್ನನ್ನು ಮರೆತು ಮನೆಯವರು ತೋರಿಸಿದ ಹುಡುಗನೊಂದಿಗೆ ಮದುವೆ ಆದರೆ ಒಳ್ಳೆಯದು... ಇಲ್ಲದಿದ್ದರೆ ನನ್ನನ್ನು ಯಾವುದಾದರೂ ಕೇಸ್ ಹಾಕಿ ಜೈಲಿಗೆ ಅಟ್ಟುತ್ತೇನೆ... ಎಂದೆಲ್ಲಾ ಹೇಳಿದ್ದಾನೆ... ಇವಳು ಹೆದರಿ ಅಂದು ನನಗೆ ಹಾಗೆ ಹೇಳಿ ಊರು ಬಿಟ್ಟು ವಿದೇಶಕ್ಕೆ ಹಾರಿ M.Tech ಮಾಡಲು ಹೋದಳು... ಹೋದ ವಾರ ಅವನೇ ಫೋನ್ ಮಾಡಿ ಭಾರತಕ್ಕೆ ಬರಲು ಹೇಳಿದನಂತೆ... ನನ್ನ ಅಪ್ಪ ಅಣ್ಣ ಅವರ ಮನೆಗೆ ಹೋಗಿ ನಮ್ಮ ಪ್ರೀತಿ ಬಗ್ಗೆ ತಿಳಿಸಿ ಹಿಂದೆ ನಡೆದಿದ್ದಲ್ಲಾ ಹೇಳಿದ್ದಾರೆ... ಆಗಲೇ ಅವಳ ಅಣ್ಣನಿಗೆ ತಿಳಿದದ್ದು ಆತ ತನ್ನ ತಂಗಿ ಇಂದ ದೂರ ಮಾಡಿದ್ದು ತನ್ನ ಪ್ರಾಣ ಸ್ನೇಹಿತನ ತಮ್ಮನನ್ನು ಎಂದು... ಆತ ಮಾಡಿದ ಘನ ಕಾರ್ಯವೆಲ್ಲ ಅಲ್ಲೇ ಹೇಳಿ ಕ್ಷಮೆಯನ್ನು ಕೇಳಿ ಮದುವೆಗೆ ಅವನ ಅಪ್ಪ ಅಮ್ಮನನ್ನು ಒಪ್ಪಿಸಿದ್ದಾನೆ... ನಂತರ ಇಂದು ನನ್ನ ಹುಟ್ಟಿದ ಹಬ್ಬಕ್ಕೆ ಸರ್ಪ್ರೈಸ್ ಆಗಿ ನನಗೆ ವಿಷಯ ತಿಳಿಸಲು ಪ್ಲಾನ್ ಮಾಡಿದ್ದು ನಾನೇ ಎಂದು ಹೇಳಿ...ಧೀರ್ಘ ಉಸಿರು ಬಿಟ್ಟು ನನ್ನೆಡೆಗೆ ನೋಡಿ ತುಟಿಯಂಚಲ್ಲಿ ನಕ್ಕಳು...

ನನಗೆ ನನ್ನ ಅಪ್ಪ ಅಣ್ಣನ ಮೇಲೆ ತುಸು ಹೆಚ್ಚು ಗೌರವ ಬಂದು ಬಿಟ್ಟಿತು... ಹೆಚ್ಚೇನು ಹೇಳಲು ಆಗುತ್ತಿಲ್ಲ... ಅವಳನ್ನು ಎಳೆದು ಎದೆಗೆ ಒರಗಿಸಿಕೊಂಡೆ... "ನನ್ನನು ಮದುವೆ ಆದಮೇಲೆ ನಿನ್ನ ಅಣ್ಣನ ಮಾತು ಕೇಳಿ ನನ್ನ ಬಿಟ್ಟು ಹೋಗಲ್ಲ ತಾನೇ..." ಎಂದು ಕೇಳಿದೆ... ಅವಳಿಗೆ ತುಸು ನೋವಾಯಿತು ಎನಿಸಿತು... ನನ್ನನ್ನು ತಬ್ಬಿದಳು... ಹಣೆಗೆ ಒಂದು ಮುತ್ತನಿಟ್ಟು... " ಐ ಲವ್ ಯು ಭೂಮಿ"  ಎಂದೆ...ಅವಳಿಗೆ ನಾಚಿಕೆ ಆಯಿತು ಅನಿಸುತ್ತೆ... ಮತ್ತಷ್ಟು ಗಟ್ಟಿಯಾಗಿ ತಬ್ಬಿದಳು... "

ನನ್ನ ಪ್ರೀತಿ ನನಗೆ ಸಿಕ್ಕಿತು... ಮತ್ತೊಮ್ಮೆ ಸಿಕ್ಕಿತು...

*********************************************

ನಮ್ಮ ಮದುವೆ ನಡೆದು 4 ವರ್ಷ ಕಳೆದಿದೆ... ಮಾನ್ವಿಯ ಜೊತೆ ಆಡಲು ತುಂಟ ವಿಧ್ಯುತ್ ಕೂಡ ಬಂದಿದ್ದಾನೆ... 😉...ಮುಕ್ತಾಯ....

- ಎನ್ ಕೆ ಎಮ್