Click here to Download MyLang App

ಕಿರ್ಮಾನಿ ಮತ್ತು ಹದಿಮೂರು ಚಕ್ರದ ಲಾರಿ - ಬರೆದವರು : ಸುಜಯ್ ಪಿ | ಸಾಮಾಜಿಕ |ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ

ಮೊನ್ನೆ ಎಂದಿನಂತೆ ಬರುವ ಒಂದು ಮಂಗಳವಾರದ ದಿನ ಮುಗಿಲೂರಿನ ಕೆರೆಯ ಬದಿಯಲ್ಲಿ ಟಾರು ರಸ್ತೆ ಎಂಬ ನೆನಪಿಗಾಗುವಷ್ಟೇ ಟಾರು ಉಳಿದಿದ್ದ ರಸ್ತೆಯಲ್ಲಿ ಕಿರ್ಮಾನಿಯ ಲಾರಿ ಕಿರುಚಿಕೊಂಡು ಬಂದು ನಿಂತಿತು.
ನಾನೂ ಊರು ಬಿಟ್ಟು ಪೇಟೆ ಸೇರಿದ ಮೇಲೆ ಹಲವಾರು ವರ್ಷದ ನಂತರವೇ ಕಿರ್ಮಾನಿಯ ಲಾರಿ ನೋಡಿದ್ದು.
ಕಿರ್ಮಾನಿ ಮತ್ತು ಅವನ ಲಾರಿ ಕಂಡೊಡನೆ ಮನಸ್ಸು ವರ್ಷಗಳ ಹಿಂದೆ ಓಡಿತು.
ಮುಗಿಲೂರಿನ ಮಣ್ಣಿಗೆ ಮೊತ್ತಮೊದಲು ಲಾರಿ ಓಡಿಸಿಕೊಂಡು ಬಂದವನು ಕಿರ್ಮಾನಿ.
ತೀರಾ ಹಳ್ಳಿಯೂ ಅಲ್ಲದ ಪೇಟೆಯೂ ಅಲ್ಲದಂತಿದ್ದ ನಮ್ಮ ಮುಗಿಲೂರಿಗೆ ಆ ಹೆಸರು ಯಾಕೆ ಬಂದಿರಬಹುದೆಂದು ನಾನೂ ಒಂದೆರಡು ಬಾರಿ ತಲೆಕೆಡಿಸಿಕೊಂಡಿದ್ದೆ.
ಇಲ್ಲಿ ಮುಗಿಲು ಜಾಸ್ತಿ ಇರಬಹುದೇನೋ ಅಂತ ನೀವಂದುಕೊಂಡರೆ ಅದು ತಪ್ಪು, ಮಳೆಗಾಲದಲ್ಲೂ ಅಷ್ಟೇನೂ ಮುಗಿಲುಗಳು ಬರದ ಊರಿದು.
ವಿಷ್ಣುಮೂರ್ತಿ ದೇವಾಲಯದ ಸಣ್ಣ ದ್ವಾರದೊಂದಿಗೆ ಆರಂಭವಾಗುವ ಮುಗಿಲೂರು ಸಂಜೀವಣ್ಣನ ಹೇರ್ ಕಟ್ಟಿಂಗ್ ಅಂಗಡಿಯೊಂದಿಗೆ ಕೊನೆಯಾಗುತಿತ್ತು.
ಎಲ್ಲರೂ ಹೆಚ್ಚೇನೂ ಓದದೇ ನೆಮ್ಮದಿಯಿಂದ ಬದುಕಲು ಬೇಕಾದಷ್ಟೇ ಕೆಲಸ ಮಾಡಿಕೊಂಡು ಉಂಡು ಮಲಗುವುದಷ್ಟೇ ಇಲ್ಲಿನ ದಿನಚರಿಯಾಗಿತ್ತು.
ಆಗ ಸಿನೇಮಾ ಥಿಯೇಟರುಗಳೆಲ್ಲ ಇಲ್ಲದಿದ್ದರಿಂದ ಮುಗಿಲೂರಿನ ಜನರಿಗೆ ಮನಸ್ಸಾದರೆ ಟೆಂಟಿನ ಬಿಳಿ ಬಟ್ಟೆಯ ಮೇಲೆ ಅದೆಷ್ಟು ಬಾರಿ ನೋಡಿದ ಸಿನಿಮಾವಾದರು ಸರಿ ಮತ್ತೆ ನೋಡುತಿದ್ದರು.
ಇಂಥ ಮುಗಿಲೂರಿನಿಂದ ಊರು ಬಿಟ್ಟು ಹೊರ ಊರಿಗೆ ಕೆಲಸಕ್ಕೆಂದು ಹೋದವರಲ್ಲಿ ಕಿರ್ಮಾನಿಯೂ ಒಬ್ಬ.
ಲಾರಿ ಕ್ಲೀನರ್ ಆಗಿ ಹೋದವನು ಒಂದೇ ವರ್ಷದಲ್ಲಿ ಲಾರಿಯೊಂದನ್ನು ಮುಗಿಲೂರಿನವರೆಗೂ ಓಡಿಸಿಕೊಂಡು ಬಂದಿದ್ದ‌.
ಆಗ ಮುಗಿಲೂರಿನ ಜನ ಅಷ್ಟು ದೊಡ್ಡ ವಾಹನವನ್ನು ಅಷ್ಟು ಹತ್ತಿರದ ನೋಡಿದ್ದು ಕಡಿಮೆಯೇ. ಚಿಕ್ಕ ಮಗುವೊಂದು ಜಾದೂಗಾರನ್ನು ನೋಡುವ ಕಣ್ಣಿನಲ್ಲಿಯೇ ಜನ ಕಿರ್ಮಾನಿಯನ್ನು ನೋಡಿದ್ದರು.
ಮುಗಿಲೂರಿನ ಪುಡಿಮಕ್ಕಳಂತೂ ಲಾರಿ ಡ್ರೈವರ್ ಆಗುವ ಮಹಾನ್ ಕನಸನ್ನೂ ಮನದೊಳಗೇ ಕಟ್ಟಿಕೊಂಡರು. ಕೆಲವು ಮಕ್ಕಳು ಲಾರಿಯ ಸ್ಟೆಪ್ನಿ ಚಕ್ರವನ್ನೂ ಅನ್ವೇಷಿಸಿ ಕಿರ್ಮಾನಿಯ ಲಾರಿಗೆ ಹನ್ನೆರಡಲ್ಲ ಹದಿಮೂರು ಚಕ್ರವಿದೆ ಎಂದೂ ಘೋಷಿಸಿಬಿಟ್ಟಿದ್ದರು. ಒಟ್ಟಿನಲ್ಲಿ ಕಿರ್ಮಾನಿ ಮುಗಿಲೂರಿಗೆ ಸಣ್ಣ ಮಟ್ಟಿನ ಸೆಲೆಬ್ರಿಟಿ ಆಗಿಟ್ಟಿದ್ದ.
ಕಿರ್ಮಾನಿ ಮೈನ್ಸ್ ಲಾರಿಯ ಡ್ರೈವರ್ ಆದ ಮೇಲೆ ಮೂರು ನಾಲ್ಕು ತಿಂಗಳಿಗೆ ಒಂದು ಬಾರಿ ಊರಿಗೆ ಬರುತ್ತಿದ್ದ. ಬಂದವನು ಎಂಟತ್ತು ದಿನದ ರಜೆಯಲ್ಲಿರುತಿದ್ದ.
ಅವನು ಬಂದರೆ ಮುಗಿಲೂರಿಗೆ ಹೊಸದೊಂದು ಜೋಶ್ ಬರುತಿತ್ತು.
ನನಗೆ ನೆನಪಿದ್ದಂತೆ ಕಿರ್ಮಾನಿಯ ಲಾರಿಯೊಳಗೊಂದು ಸಣ್ಣ ಗೂಡು ಇತ್ತು. ಅದರಲ್ಲಿ ಲಾರಿ ಸಾಗುವ ದಾರಿಗಳಲ್ಲಿ ಅನಾಥವಾಗಿ ಸಿಗುವ ಪ್ರಾಣಿ ಪಕ್ಷಿಗಳ ಮರಿಗಳನ್ನು ಸ್ವಲ್ಪ ದಿನ ಸಾಕಿ ಆಮೇಲೆ ಬಿಟ್ಟು ಬಿಡುತಿದ್ದ. ಒಂದು ಬಾರಿ ಬಂದಾಗ ಗಿಡುಗದ ಮರಿ‌ಯೊಂದು ಗೂಡೊಳಗಿತ್ತು. ಅಗ ನಾನೂ ಲಾರಿಯೊಳಗಿನ ಗಿಡುಗದ ಮರಿಯನ್ನು ಅಚ್ಚರಿಯಿಂದ ನೋಡಿದ್ದೆ.
ಮಕ್ಕಳಿಗೆ ಲಾರಿಯ ಮೇಲಿನ ಮೋಹವಾದರೆ ವಯಸ್ಕರಿಗೆ ಕಿರ್ಮಾನಿಯ ಮೂರು ತಿಂಗಳ ಲಾರಿ ಯಾತ್ರೆಯ ನಡುವೆ ನಡೆವ ರೋಚಕ ಕಥೆಗಳನ್ನು ಕೇಳುವುದು ಇಷ್ಟದ ವಿಷಯವಾಗಿತ್ತು.
ಕಿರ್ಮಾನಿ ಭಾರತದ ಭೂಪಟದ ಕುತ್ತಿಗೆಯವರೆಗೆ ಬೆರಳು ತೋರಿಸಿ “ಇಲ್ಲಿಗೆ ಹೋಗಿದ್ದೆ” ಎನ್ನುವಾಗ ಕರ್ನಾಟಕದ ದಕ್ಷಿಣ ಕನ್ನಡದ ಮುಗಿಲೂರೆಂಬ ಹಳ್ಳಿಯ ಹುಡುಗರಿಂದ ಹಿಡಿದು ಬಿಳಿಗಡ್ಡದ ಹಲ್ಲಿಲ್ಲದ ಅಜ್ಜಂದಿರವರೆಗೆ ಎಲ್ಲರೂ ಅಚ್ಚರಿಯಿಂದ ಕಿವಿಯಾನಿಸಿ ಕೇಳುತಿದ್ದರು.
ಇವರೆಲ್ಲರ ನಡುವೆ ಅತ್ತ ಹುಡುಗನೂ ಇತ್ತ ದೊಡ್ಡವನೂ ಅಲ್ಲದಂತಿದ್ದ ನಾನು ಕಿರ್ಮಾನಿಯ ಎಲ್ಲ ಪುರಾಣಗಳಿಗೂ ಪ್ರೇಕ್ಷಕನಾಗಿದ್ದೆ.
ಮೂರು ತಿಂಗಳ ಲಾರಿ ಟ್ರಿಪ್ ಮುಗಿಸಿ ಬಂದನೆಂದರೆ ಕಿರ್ಮಾನಿಯ ಕಿಸೆಯೂ ತುಂಬಿ ಇರುತ್ತಿತ್ತು.
ಅಲ್ಮೋಸ್ಟ್ ಎಲ್ಲ ಲಾರಿ ಡ್ರೈವರುಗಳು ಕುಡುಕರೇ ಆಗಿರುತ್ತಾರೆ. ಆದರೆ ಕಿರ್ಮಾನಿ ಕುಡಿಯುತ್ತಿರಲಿಲ್ಲ. ಸಿಗರೇಟು ಮಾತ್ರ ತುಂಬಾನೇ ಸೇದುತಿದ್ದ.
ಟ್ರಿಪ್ಪು ಮುಗಿಸಿ ಮುಗಿಲೂರಿಗೆ ಬಂದಾಗಲೆಲ್ಲ ಅವನು ತರುವ ಸಿಗರೇಟಿಗಾಗಿಯೇ ಕಾಯುವವರು ಹಲವರಿದ್ದರು.
ಸಿಗರೇಟಿನ ಘಾಟು ಹೆಂಡತಿ ಅವ್ವಮ್ಮಳಿಗೆ ಇಷ್ಟವಿಲ್ಲದ್ದರಿಂದ ಊರಿಗೆ ಬಂದರೆ ಕಷ್ಟಪಟ್ಟು ಸಿಗರೇಟಿನಿಂದ ದೂರವಿರುತ್ತಿದ್ದ.
ಅವ್ವಮ್ಮ ಅಂದರೆ ಅವನಿಗೆ ತುಂಬಾ ಪ್ರೀತಿ. ಪ್ರತೀ ಟ್ರಿಪ್ಪು ಮುಗಿಸಿ ಬಂದಾಗಲೂ ತಪ್ಪದೇ ಅವಳಿಗೊಂದು ಉಡುಗೊರೆ ತರುತಿದ್ದ. ಅವನು ಊರಿಗೆ ಬಂದಾಗ ಅವನು ತಂದ ಉಡುಗೊರೆಯ ಬಗ್ಗೆಯೂ ಚರ್ಚೆಗಳು ನಡೆಯುತಿತ್ತು. ಅವನು ಅವ್ವಮ್ಮಳಿಗೆ ಉಡುಗೊರೆ ತರದೆ ಊರಿಗೆ ಬಂದಿದ್ದೇ ಇಲ್ಲ ಅನ್ನಬಹುದು.
ಅವನು ಮೂಕಿ ಅವ್ವಮ್ಮಳನ್ನು ಮದುವೆಯಾದದ್ದೂ ಒಂದು ವಿಚಿತ್ರ ಸನ್ನಿವೇಶದಲ್ಲಿ. ಅವ್ವಮ್ಮ, ಕರ್ನಾಟಕ- ಆಂದ್ರಪ್ರದೇಶ ಗಡಿಯವಳು. ಕಿರ್ಮಾನಿಯ ಲಾರಿ ಕೆಲವೊಮ್ಮೆ ಒಂದೇ ದಾರಿಯಲ್ಲಿ ವಾರಕೊಮ್ಮೆ ಹೋಗುತ್ತಿದ್ದರಿಂದ ಆ ದಾರಿಯ ಅಂಗಡಿ, ಹೋಟೆಲಿನವರೆಲ್ಲ ಪರಿಚಿತರಾಗಿದ್ದರು.
ಆ ಊರಲ್ಲಿ ಬಸ್ಸಿಗೆ ಕಾದು ಕೂತವರಿದ್ದರೆ ಕಿರ್ಮಾನಿ ತನ್ನ ಲಾರಿಯಲ್ಲಿ ಎಲ್ಲಿವರೆಗೆ ಸಾಧ್ಯವೋ ಅಲ್ಲಿವರೆಗೆ ಕೂರಿಸಿಕೊಂಡು ಹೋಗುತ್ತಿದ್ದ.
ಈ ರೀತಿ ಬಂದವರಲ್ಲಿ ಅವ್ವಮ್ಮ ಮತ್ತು ಅವಳಮ್ಮ ಇಬ್ಬರು.
ಇಪ್ಪತ್ತಾರರ ಹರೆಯದ ಅವ್ವಮ್ಮ ನೋಡಲು ಸ್ವಲ್ಪ ಕಪ್ಪಾದರೂ ತುಂಬಾ ಲಕ್ಷಣ. ಆದರೆ ಮದುವೆಯ ಸಂಬಂಧಗಳು ಬಂದಾಗ ಏನಾದರೂ ಕಾರಣದಿಂದ ತಪ್ಪುತ್ತಿತ್ತು‌. ಅದಕ್ಕಾಗಿ ಪಕ್ಕದೂರಿನ ದೇವಾಲಯಕ್ಕೆ ಏಳು ವಾರಗಳ ಕಾಲ ಪ್ರತೀ ಶುಕ್ರವಾರ ಪ್ರದಕ್ಷಿಣೆ ಹಾಕಬೇಕೆಂದೂ ಎಂಟನೇ ವಾರ ಮದುವೆ ಸಂಬಂಧ ಕೈಗೂಡುವುದೆಂದು ಯಾರೋ ಹೇಳಿದ್ದರು.
ಈ ರೀತಿ ದೇವಾಲಯ ಹೊರಟ ಮೊದಲ ವಾರವೇ ಕಿರ್ಮಾನಿಯ ಲಾರಿ ಹತ್ತಿದ್ದರು, ಅಮ್ಮ ಮಗಳು.
ಮೂರು ವಾರಗಳು ಕಳೆದಿತ್ತು. ಪ್ರತೀ ವಾರವೂ ಕಿರ್ಮಾನಿಯ ಲಾರಿಯನ್ನೇ ಹತ್ತಿದ್ದರು.
ಊರೂರು ತಿರುಗುವ ಲಾರಿಯೊಂದು ಮದುವೆಯ ಮಾತುಕತೆಯಾಗುವ ಮನೆಯಾಗಿ ಬದಲಾದ ತೀರಾ ವಿಚಿತ್ರವೊಂದು ಸಂಭವಿಸಿದ್ದು ಆವಾಗಲೇ.
ಮಾತೇ ಬರದ ಅವ್ವಮ್ಮಳಿಗೂ ಮಾತು ಬಂದರೂ ಅವಳ ಭಾಷೆ ಬರದ ಕಿರ್ಮಾನಿಗೂ ಅದ್ಯಾವ ಘಳಿಗೆಯಲ್ಲಿ ಅಷ್ಟು ಗಟ್ಟಿಯಾದ ಪ್ರೇಮವಾಯಿತೋ ತಿಳಿಯದು ಏಳು ವಾರಗಳ ದೇವಾಲಯದ ಪ್ರದಕ್ಷಿಣೆಗೆ ಇನ್ನೂ ಎರಡು ವಾರಗಳಿರುವಾಗಲೇ ಕಿರ್ಮಾನಿ ಅವ್ವಮ್ಮಳ ಅಮ್ಮನ ಬಳಿ ತಾವಿಬ್ಬರೂ ಮದುವೆಯಾಗುತ್ತೇವೆ, ಒಪ್ಪಿ ಎಂದು ಕೇಳಿಬಿಟ್ಟ.
ನನಗೆ ಈ ಕಥೆ ಕೇಳಿದಾಗ ಇವರಿಬ್ಬರಿಗೂ ಆ ಪರಿಯ ಪ್ರೇಮವಾಗಿದ್ದು ಸಹಜವೇ ಅಥವಾ ಇದು ಆ ದೇವರು ಅವ್ವಮ್ಮಳ ಭಕ್ತಿಗೆ ಮೆಚ್ಚಿ ಮಾಡಿದ ಪವಾಡ ಇರಬಹುದೇ ಎಂಬ ಸಂಶಯವೂ ಬಂದಿತ್ತು.
ಕಿರ್ಮಾನಿ ಅವ್ವಮ್ಮಳನ್ನು ಅವಳ ಊರಿನಲ್ಲೇ ಮದುವೆಯಾಗಿ ಒಂದೆರಡು ದಿನದ ನಂತರ ಲಾರಿಯಲ್ಲೇ ಮುಗಿಲೂರಿಗೆ ಕರೆದು ಬಂದಿದ್ದ. ಅಂದಿನಿಂದ ಅವರಿಬ್ಬರ ಪ್ರೇಮದಲ್ಲಿ ಒಂಚೂರೂ ಕಮ್ಮಿಯಾಗಿದ್ದಿಲ್ಲ. ಮೂಕಿ ಅವ್ವಮ್ಮ ಮತ್ತು ಕಿರ್ಮಾನಿಯ ನಡುವೆ ಮಾತಿಲ್ಲದಿದ್ದರೂ ಯಾವುದೋ ಒಂದು ಗೂಢ ಪ್ರೇಮಭಾಷೆಯೊಂದು ತಿಳಿದ ಅತಿಮಾನುಷರಂತೆ ಬದುಕುತಿದ್ದರು.
ಇವೆಲ್ಲವನ್ನೂ ನೋಡುತ್ತಲೇ ಕಾಲ ಕಳೆದ ನನಗೆ ಆವಾಗೆಲ್ಲಾ ಕಿರ್ಮಾನಿ ಒಂದು ಅಚ್ಚರಿಯಂತೆ ಕಂಡಿದ್ದ.
ಕಿರ್ಮಾನಿಗೀಗ ಐವತ್ತು ದಾಟಿದೆ, ಅವ್ವಮ್ಮಳನ್ನು ಇಂದಿಗೂ ಅಷ್ಟೇ ಪ್ರೀತಿಸುತ್ತಾನೆ. ನಾನು ಮೊನ್ನೆ ನೋಡಿದ್ದು ಕೂಡ ಟಾರು ರಸ್ತೆಯ ಬದಿಯಲ್ಲಿ ಲಾರಿ ನಿಲ್ಲಿಸಿ ಕೈಯಲ್ಲೊಂದು ಉಡುಗೊರೆ ಹಿಡಿದು ಮನೆಯ ಕಡೆ ನಡೆಯುತ್ತಿರುವ ಕಿರ್ಮಾನಿಯನ್ನು.