Click here to Download MyLang App

ಕವಿದದ್ದು ನಿಶೆಯೊ.. ಉಷೆಯೊ? - ಬರೆದವರು: ಬಿವಸು ಭಾಗ್ಯ | ಸಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ

"ಏನಿದು?!" 
"ನಿನ್ನ ತೃಪ್ತಿಯ ಛಾಯೆ, ನನ್ನ ಸಮಾಧಾನದ ಬಿಂಬ!" 
"ನನಗರ್ಥವಾಗಲಿಲ್ಲ!"
"ಅರ್ಥವಾಗುವುದು ಬೇಡ, ಲೋಟದಲ್ಲಿರುವ ಮದಿರೆಯನ್ನು ಹೀರು, ನನ್ನೆಲ್ಲವನ್ನು ನಿನಗೊಪ್ಪಿಸಿಬಿಡುವೆ, ನಿನ್ನ ನೋವಿನ ಗುರುತನ್ನು ನನ್ನೀ ದೇಹದಲ್ಲಿ ಮೂಡಿಸಿಬಿಡು!".
ಅವನ ಕರಗಳನ್ನು ತನ್ನ ಕುತ್ತಿಗೆಗೆ ಬಳಸಿ, ಅವನ ತೊಡೆಯ ಮೇಲೆ ಕುಳಿತುಕೊಂಡಳು. ನಶೆಯೇರುತ್ತಾ ಕವಿದದ್ದು ನಿಶೆಯೊ?, ಉಷೆಯೊ?! ತಿಳಿಯದವನಿಗೆ.

" ಉಷೆ.. ಉಷೆ.." ಅವನ ಕನವರಿಕೆಗೆ ಬೆಳಕು ಹರಿಯಿತು. 
ಹಾಲ್ಬಿಳುಪು ಪಾದಗಳಿಗೆ ಗೆಜ್ಜೆಯನ್ನು ಶೃಂಗರಿಸುತ್ತಾ ಎದುರಿಗೆಯೆ ಇದ್ದ ಕುರ್ಚಿಯ ಮೇಲೆ ಕುಳಿತಿದ್ದ ಉಷಾ ಅವನತ್ತ ಮುಗುಳುನಕ್ಕು, ಹೊರಡೆಂದು ಸನ್ನೆ ಮಾಡುವಾಗ ಅವಳ ಕಂಗಳ ಗಾಢ ಕಾಡಿಗೆಯನೆ ನೋಡುತ್ತಿದ್ದನಾತ. 
"ಹೊರಡದೆ  ಇದ್ದರೆ ಬುಕ್ಕಿಂಗ್ ಆದ ಗಿರಾಕಿಗೆ ಮೋಸವಾಗುತ್ತದೆ ಹುಡುಗ!" ಎಂದಾಗ ಮುಗುಳುನಕ್ಕು ಅವಳನ್ನಪ್ಪಿ ಹೊರಟುಹೋದ. 

*****

ಮಲಗಿರುವ ವ್ಯಕ್ತಿಯ ಸೊಂಟದ ಮೇಲೆ ಅವಳಿದ್ದಳು. ಇಂದು ಹತ್ತನೇಯ ಭೇಟಿ, ಒಂಭತ್ತನೇಯ ಮಿಲನದ ಸವಿ!. 
"ಉಷೆ, ನಿನ್ನೀ ಗುರುತಿನ ಛಾಯೆ ನನ್ನ ನೋವಿನದ್ದೆ ಬಿಂಬ ಅಲ್ಲವೆ?!. ನಾನು ಯಾಕೆ ಹೀಗೆ ನಿನಗೆ ನೋವು ಕೊಟ್ಟೆ?, ಕುಡಿಸಬೇಡ ನನಗೆ. ಒಂದು ನಿಮಿಷ.." ಎಂದವನೆ ಅವಳ ಸೊಂಟವನ್ನು ಹಿಡಿದು ಪಕ್ಕಕ್ಕೆ ಕೂರಿಸಿ ಮೇಲೆದ್ದು ತನ್ನ ಬ್ಯಾಗ್ ತೆರೆದು ಅದರೊಳಗಿದ್ದ ಒಂದು ಗುಲಾಬಿ ಹೂವನಿಂದ ಅವಳ ಬೆನ್ನಿಗೆ ಮುತ್ತಿಟ್ಟ.
"ಇನ್ನು ನೋವು, ಬಿಂಬ, ಛಾಯೆ ಯಾವುದು ಬೇಡ. ನನ್ನೊಡನೆ ಬಂದುಬಿಡು. ನಾನು ಪ್ರತಿನಿತ್ಯ ಕಾಣುತ್ತಿದ್ದ ಕನಸೆ ಇದಕ್ಕೆಲ್ಲಾ ಕಾರಣ ಕ್ಷಮಿಸಿಬಿಡು" ಎನ್ನುತ್ತಾ ಅವಳ ಪಾದಗಳನ್ನು ಎದಗೊತ್ತಿಕೊಂಡ.

"ಏನು ಮಾಡುತ್ತಿದ್ದೀಯ?, ಬಿಡು. ಇದು ಎದೆಗೊತ್ತುವ ಪಾದವಲ್ಲ. ನೆನಪಿದೆಯಾ?, ಆ ಮೊದಲ ದಿನ ನನ್ನಾ ನಿನ್ನ ಭೇಟಿಯ ದಿನ. ನಿನಗೂ ಹೊಸದು, ನನಗೂ ಹೊಸದು. ನಾನಿನ್ನೂ ಪಳಗದ ಹೆಣ್ಣು, ನೀನು ಅನುಭವಿಸಿಯೂ ನೊಂದವ. ಇಷ್ಟು ದಿನ ಕಂಡದ್ದು ಕನಸಲ್ಲ, ಆ ದಿನ ನಡೆದದ್ದೆ ನಿನ್ನ ಪ್ರತಿದಿನದ ಕನಸು. ಅದನ್ನು ಮರೆತುಬಿಡಬೇಡ, ನಿನ್ನ ನೋವು ನನ್ನ ತೃಪ್ತಿಯೂ ಹೌದು. ಹೆಂಡತಿ ಪರ ಹುಡುಗನ ಜೊತೆಗೆ ಹಾಸಿಗೆಯಲ್ಲಿ ಹೊರಳಾಡುವುದು ಕಂಡರೂ ಮನ್ನಿಸಿ ಸ್ವೀಕರಿಸಿದ್ದವನು ನೀನು, ಆದರೆ ಅಷ್ಟಕ್ಕೆ ನಿಲ್ಲದ ಆಕೆ ಮುಂದುವರೆದು ನಿನ್ನ ಮುಗ್ಧತನದ ಉಪಯೋಗದಿಂದ ಕಡೆಗೂ ಮಗುವಿನ ತಾಯಿ ಆದಾಗ ನೀನೆಷ್ಟು ಪರಿತಪಿಸಿರಬಹುದು??, ನಿನ್ನ ನೋವು ನನಗೆ ಗೊತ್ತು. ಅದೆಲ್ಲವನ್ನೂ ದಾಟಿ ಆಕೆ ನವಮಾಸ ಗರ್ಭಿಣಿಯಾಗಿ ನಿನ್ನೆದುರೆ ಪ್ರಾಣ ಕಳೆದುಕೊಂಡಳೆಂದಾಗ ಅದ್ಯಾವ ಬಗೆಯ ದುಃಖಕ್ಕೆ ಒಳಗಾಗಿರಬಹುದು ನೀನು?. ಪ್ರೇಮಿಸಿದವನಿಂದ ಮೋಸವಾದಾಗ, ನಿನಗೆ ಅವಳು ಮಾಡಿದ ಮೋಸದ ಅರಿವಾಗಿದೆ. ಆದರೆ ನೀನು ಆಗಲೂ ಅವಳನ್ನು ದೂಷಿಸದೆ ಇದ್ದೆ ತಪ್ಪು ಮಾಡಿಬಿಟ್ಟೆ. ಕಡೆಗೆ ಮಗು, ಅವಳು ಹೋದರು, ನೀನು ಕುಡಿತಕ್ಕೆ ದಾಸನಾದೆ, ಇದೆಲ್ಲವನ್ನೂ ಮೀರಿ ನಿನ್ನ ಚಿಂತೆಯಲ್ಲಿ ನೊಂದ ತಾಯಿಗೆ ಹೃದಾಯಾಘಾತ ಆದಾಗ ನೀನು ಒಂಟಿಯಾದೆ, ಬದುಕು ಬೇಡವೆನ್ನುವ ಹಂತದಲ್ಲಿ ಕುಡಿತವೊಂದೆ ಜೊತೆಯಾದದ್ದು. ಅದೇ ಸಮಯ ಇಲ್ಲಿಗೆ ಹೇಗೆ?, ಯಾಕೆ ಬಂದೆ? ಗೊತ್ತಿಲ್ಲ. ಬಂದವನು ನನ್ನನ್ನು ಉಳಿಸಿದೆ!. ದಂಧೆಗೆ ತಂದುಹಾಕಿದವ ದುಡ್ಡು ತೆಗೆದುಕೊಂಡು ಪರಾರಿಯಾದ. ಬಂದ ನನಗೆ ಏನು ಮಾಡಬೇಕು ತಿಳಿಯದೆ ಪರಿತಪಿಸುವಾಗ ನೀನು ಮೊದಲಿಗೆ ಬಾಗಿಲು ತೆರೆದು ಒಳಬಂದೆ. ನನ್ನನ್ನು ಅಪ್ಪಿದೆ, ಅತ್ತೆ. ನಿನ್ನ ಕಥೆಯನ್ನು ಅರುಹಿದೆ , ನನ್ನ ಜೀವದ ಮೊದಲ ರಾತ್ರಿ ನಾನು ಸತ್ತು ಬದುಕಿದೆ. ನಿನ್ನೊಡನೆ ದೇಹದಲಿ ಅಂದು ಬೆರೆಯದೆ ಹೋದರೂ ಭಾವದಲ್ಲಿ ಬೆರೆತು ಕಲೆತುಬಿಟ್ಟೆ. ನಿನ್ನ ನೋವಿಗೆ ಹಚ್ಚಿಟ್ಟ ಸಿಗರೇಟಿನ ತುಂಡನ್ನು ನನ್ನೆದೆಗೆ ಒತ್ತಲು ನಾನೇ ಹೇಳಿದೆ, ನಿನಗೆ ಬೇಕೆಂದಲ್ಲಿ ಒತ್ತು, ನನ್ನ ಬಿಕ್ಕು ನಿನ್ನ ನೋವಿಗೆ ಉಪಶಮನವೆಂದರೆ ಅದು ನನ್ನ ಪುಣ್ಯವೆವೆಂದೆ. ಇಂದು ನಮ್ಮ ಒಂಭತ್ತನೆಯ ಮಿಲನದ ರಾತ್ರಿ!, ಹೂವಿನೊಂದಿಗೆ ಬಂದಿದ್ದೀಯ. ನಿನ್ನ‌ ನೋವು ಕಳೆದುಹೋಗಿದೆ , ಇನ್ನಾದರೂ ಬದುಕು, ಎಲ್ಲವನ್ನು ಮರೆತು ಬದುಕು, ಹೊಸದಾಗಿ ಬದುಕು. ನಿನ್ನವರು ಎನಿಸಿಕೊಂಡವರು ಇನ್ನೂ ಇದ್ದಾರೆ, ಕಳೆದುಹೋದದ್ದು ಹೋದದ್ದೆ" ಎಂದು ಧೀರ್ಘವಾಗಿ ಮಾತನಾಡಿ ಅವನನ್ನು ತನ್ನ ಬೊಗಸೆಯಲಿ ತುಂಬಿಕೊಂಡು ಎದೆಗೊತ್ತಿಕೊಂಡಳು.

"ಸರೀ.. ಈ ಬದುಕನ್ನು ಬದುಕುತ್ತೇನೆ, ಬಂದುಬಿಡು ನನ್ನ ಜೊತೆಗೆ. ನಿನಗೆ ದಿನಕ್ಕೆ, ತಿಂಗಳಿಗೆ, ವರ್ಷಕ್ಕೆ ಎಷ್ಟು ಹಣ ಸಂಪಾದನೆ ಆಗುತ್ತಿತ್ತೊ ಅದರ ಐದು ಪಟ್ಟು ನಿನ್ನ ಜೀವನವಿಡೀಯ ಸಂಪಾದನೆಯನ್ನೆ ಹೊತ್ತು ತಂದಿದ್ದೇನೆ. ಅದನ್ನು ಕೊಟ್ಟು ಬಿಡಿಸಿಕೊಂಡು ಹೋಗುತ್ತೇನೆ!" 
"ಬಿಡಿಸಿಕೊಂಡು ಎಲ್ಲಿಗೆ ಹೋಗುತ್ತೀಯ?, ಈ ಬಂಧನದಿಂದ ಮತ್ತೊಂದು ಬಂಧನಕ್ಕೊ??, ಇದು ಬಂಧನ ಎಂದು ಎಂದೊ ಅನ್ನಿಸಿ, ಮರೆಯಾಯಿತು!, ಹೌದು ನೀನು ಕರೆದೊಯ್ಯುವ ಸ್ಥಳ, ಸಮಾಜ ನನಗೆ ಬಂಧನ ಆಗಬಹುದು. ನಿನ್ನ ಬಂಧನದಲ್ಲಿ ನನ್ನ ಬದುಕು ಅಸಾಧ್ಯ. ನನ್ನ ಈ ವೃತ್ತಿಯನ್ನು ಅಲ್ಲೂ ಮಾಡಲು ಅವಕಾಶ ಇತ್ತರೆ..! ನಾನು ಬರುತ್ತೇನೆ!" ಎಂದಳು.

"ನಿನ್ನನ್ನು ಬಂಧನದಿಂದ ಬಿಡಿಸಿಕೊಂಡು ಹೋಗುತ್ತಿದ್ದೇನೆ ಅಂದುಕೊಂಡಿದ್ದೆ!, ಆದರೆ ನಾನೇ ಬಂಧನದೊಳಗೆ ಸಿಲುಕಿಸುತ್ತೇನೆ ಎಂದು ಅರಿವಾಗಲಿಲ್ಲ. ಅಲ್ಲಿಯೂ ವೃತ್ತಿ ನಡೆಯುತ್ತದೆ ಎಂದಮೇಲೆ ನಡೆಯಲಿ, ಇದೇ ಜಾಗದಲ್ಲೆ ನಿನ್ನೊಡನೆ ಬೆರೆತದ್ದು, ಆಗಲೂ ಈಗಲೂ ಅದೇ ಪ್ರೇಮವಿದೆ. ಮುಂದೆಯೂ ಅದೇ ಇರುತ್ತದೆ. ನಿನ್ನ ಇಷ್ಟಕ್ಕೆ ಅನುಸಾರವಾಗಿ ನಿನಗೆ ನಾನಿರುತ್ತೇನೆ" ಅವನೆಂದಾಗ
"ನಿನಗೆ ನೋವಾದಾಗ ಬಾ ಇಲ್ಲಿಗೆ!, ನಿನ್ನ ಸಮಾಧಾನದ ಬಿಂಬವಾಗಿ, ನಿನ್ನ ತೃಪ್ತಿಯ ಛಾಯೆಯಾಗಿ ನಾನಿಲ್ಲಿದ್ದೇನೆ. ನಿನ್ನೊಡನೆ ಕಳೆದ ಮೊದಲ ದಿನ, ನಾವಿಬ್ಬರು ಸೇರದೆ ಇದ್ದರೂ ಭಾವದ ಮಿಲನ ಆಗಿಹೋಗಿತ್ತು. ಅಂದಿನಿಂದ ನನ್ನೊಡನೆ ಯಾರೇ ಕಳೆದರೂ ನನಗೆ ದೊಡ್ಡದಾಗಿ ಯಾವುದೇ ಭಾದೆಯಾಗಲಿಲ್ಲ. ದೇಹವನ್ನು ಮಾತ್ರ ಕೊಟ್ಟು ಸಂಪಾದೆನೆಗೆ ಇಳಿಯುತ್ತಾರೆ(ಅದು ಅವರ ಸ್ವಾರ್ಥಕ್ಕೊ, ಅವರ ಕಷ್ಟಕ್ಕೊ) ಎನ್ನುವವರ ನಡುವೆ ನಾನು ಮನಸನ್ನು ಕೊಟ್ಟುಬಿಡುತ್ತೇನೆಯೊ ಹುಡುಗ!. ಇದು ಸಾಧ್ಯವಾದದ್ದು ನಿನ್ನಿಂದ. 
ನಿನ್ನಂತೆ ಇಲ್ಲಿಗೆ ಬರುವವರು ಅನೇಕರು. ಕೆಲವರು ಹೇಳಿಕೊಳ್ಳುತ್ತಾರೆ, ಕೆಲವರು ಹೇಳರು. ಕೆಲವರಿಗೆ ನನ್ನಂತಹವರ ಅಗತ್ಯ ಹೆಚ್ಚೇ ಇದೆ. ಕೆಲವರು ಹಣವಿದೆ, ತೆವಲಿದೆ ಅಂತಲೆ ಬರುತ್ತಾರೆ ಬರಲಿಬಿಡು.. ಅದುವೂ ಒಂದು ಅವಶ್ಯಕತೆಯೆ ತಾನೆ?!, ನನಗೆ ಹಣದ ಅವಶ್ಯಕತೆ, ಅವರಿಗೆ ಸುಃಖದ ಅವಶ್ಯಕತೆ. ನನ್ನನ್ನು ವೃತ್ತಿಯಲ್ಲಿ ತೊಡಗಿಸಿಕೊಂಡದ್ದಾಗಿದೆ, ಇದೇ ಜಾಗದಲ್ಲಿ ನಾನು ಕಾಯುತ್ತಲೆ ಇರುತ್ತೇನೆ, ಆದರೆ ನೀನು ಬರಬೇಡ!, ಬರಬಾರದು..! ಬಂದರೆ ನೋವಿನೊಡನೆ ಬಾ.. ನೋವು ಬರಬಾರದು ಎಂಬುದೇ ಆಶಯ" ಎಂದವಳು ಗುಲಾಬಿ ಹೂವನ್ನು ತೆಗೆದುಕೊಂಡು ಅವನ ಪಾದಕ್ಕೊಂದು ಮುತ್ತಿಟ್ಟು ಬಾಗಿಲು ಹಾಕಿಕೊಂಡು ಹೊರಹೋಗಿಬಿಟ್ಟಳು.

ಹೋಗುವಾಗ ಅವಳ ಬೆನ್ನಹಿಂದೆ ತಾನು ಸುಟ್ಟಿದ್ದ ಗಾಯದ ಕಲೆ ಅವನನ್ನು ನೆಟ್ಟಿತ್ತು. ಕಣ್ತುಂಬಿಕೊಂಡು ಹೊರಗೆ ಬಂದವನ ಬ್ಯಾಗಿನಲ್ಲಿ ಅವನಿಡೀ ಆಸ್ತಿ ಪತ್ರ ಉಳಿದಿತ್ತು. ಈ ಉದ್ಯೋಗದಲ್ಲಿ ತೊಡಗಿದ ಮೇಲೆ ಅವಕಾಶ ಸಿಕ್ಕರೂ, ಸುಖ ಜೀವನ, ಹೊರಗಿನ ಪ್ರಪಂಚದಲ್ಲಿ ಬಾಳುವವರ ಸಂಖ್ಯೆ ಕಡಿಮೆ ಏಕಾಗುತ್ತಿದೆ ಎಂದು ಯೋಚಿಸಿದಾಗ ಉಷಾಳ ಬಿಂಬ ಎದುರು ಬಂದಿತ್ತು. ಇನ್ನು ಕೆಲವರಿಗೆ ಇದೇ ಅನಿವಾರ್ಯ ಎಂಬುದು ತಿಳಿಯಿತು, ಕಾರಣಗಳು ಹಲವು. 
ಈ ಮನೆಗೆ ಆಸ್ತಿ ಧಾನ ಮಾಡಿದರೂ ಯಾವ ಬದಲಾವಣೆ ಕಾಣುವುದಿಲ್ಲ ಎಂಬುದು ಅರಿತಮೇಲೆ ಹೊರಹೋದ. ಒಂದುವೇಳೆ ಅದನ್ನು ಕೊಟ್ಟಿದ್ದರೆ ದಂಧೆಯಲ್ಲಿ ಮುಖ್ಯ ವ್ಯಕ್ತಿಗಳಿಗೆ ಆಹಾರವಾಗಿ ಎರವಲು ಎಂಬುದು ಉಷಾಳ ನಡೆಯಿಂದಲೆ ಅರ್ಥವಾಗಿತ್ತು. ಅವನೀಗ ಜೀವನದಲ್ಲಿ ನೊಂದು ಬರಬೇಕೊ?, ಉಷೆಯನ್ನು ಕಾಣದೆಯೆ ಉಳಿಯಬೇಕೊ ಗೊಂದಲವಾಯಿತು. ಕಡೆಗೆ "ನೋವು ಬರಲೇಬಾರದು" ಎಂಬ ಆಶಯವನ್ನು ಒತ್ತಿ ಹೇಳಿದ್ದರಿಂದ ಎದ್ದುಹೋದ..