Click here to Download MyLang App

ಕಾಳಿ : ರಾಜೇಂದ್ರ ಕುಮಾರ್ ಗುಬ್ಬಿ | ಮಕ್ಕಳ ಕತೆ | ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ |

 

ಕಾಳಿ

ಸ್ವಾಮಿನಿಷ್ಠ ಬೇಟೆಗಾರ ನಾಯಿ

 

  ಸದಾ ಹಸಿರಿನಿಂದ ಕಂಗೊಳಿಸುವ ಸಂಪದ್ಭರಿತವಾದ ಕಾಡು, ಆ ಕಾಡಿನಲ್ಲಿ ತುಂಬಾ ಬಲಿಷ್ಠವಾದ, ಸುಮಾರು ನಾಲ್ಕು ಅಡಿ ಎತ್ತರದ, ಐದು ಅಡಿ ಉದ್ದದ, ಮಾರುದ್ದ ಕಿವಿಯ,  ಹೊಳಪು ಕಂಗಳ ಒಂದು ಕಪ್ಪುಬಣ್ಣದ ನಾಯಿಯೊಂದಿತ್ತು, ಅದರ ಹೆಸರು ಕಾಳಿ.....ಎಂದು.

      ಅದು ಬೇಟೆಯಾಡುವುದರಲ್ಲಿ ತುಂಬಾ ನಿಸ್ಸೀಮನೆನಿಸಿದ್ದನು. ಅವನು ಗಾಳಿಯ ಸಹಾಯದಿಂದ ಬರುವ ವಾಸನೆ  ಗ್ರಹಿಸಿ, ಇಂತಿಂಥದ್ದೇ ಪ್ರಾಣಿ ಎಂದು ಕಂಡು ಹಿಡಿಯುತ್ತಿದ್ದನು. ಯಾವುದೇ ಬೇಟೆ ಇವನ ಕೈಯಿಂದ ತಪ್ಪಿಸಿಕೊಂಡು ಹೋಗುವುದಕ್ಕೆ

ಆಸ್ಪದವೇ ಇರಲಿಲ್ಲ. ಇಂಥಾ ಕಾಳಿ ಈ ಕಾಡಿನೊಳಗೆ ಹೇಗೆ ಬಂದನೆಂದರೆ......

      ಈ ಕಾಡಿನ ಪಕ್ಕದ ಹಳ್ಳಿಯಲ್ಲಿ ವೀರಬಾಹು ಎಂಬ ಬೇಟೆಗಾರನಿದ್ದನು, ಅವನ ಸ್ವಾಮಿನಿಷ್ಠ ಶಿಷ್ಯ ಈ ಕಾಳಿ, ಇವನು ತನ್ನ ಒಡೆಯನ ಜೊತೆಗೆ ಸುಮಾರು ವರ್ಷಗಳಿಂದಲೂ ಇದ್ದವನು. ಅವನು ಒಂದು ಮಾತು ಹೇಳಿದರೆ ಸಾಕು,  ಒಂದು ಮೈಲು ದೂರದಲ್ಲಿ ಓಡುತ್ತಿದ್ದ ಯಾವುದೇ ಪ್ರಾಣಿಗಳಾಗಿರಲಿ ಕ್ಷಣಮಾತ್ರದಲ್ಲಿ ಹೋಗಿ ತನ್ನ ಬಲಿಷ್ಠ ಬಾಹುಗಳಿಂದ ಹಿಡಿದು, ಹಣ್ಣುಗಾಯಿ ನೀರುಗಾಯಿ ಮಾಡಿ ತಂದು ತನ್ನ ಒಡೆಯನಿಗೆ  ಒಪ್ಪಿಸುವಂಥಾ ಸ್ವಾಮಿನಿಷ್ಠ ಕಾಳಿ ಈತ.      

      ಒಮ್ಮೆ ತನ್ನ ಒಡೆಯ ವೀರಬಾಹು ಜೊತೆ ಈ ಕಾಡಿಗೆ ಬೇಟೆಗೆಂದು ಬಂದಿರುವಾಗ ತನ್ನ ಒಡೆಯ ಒಪ್ಪಿಸಿದ ಒಂದು ಕೆಲಸ, ಆ ಒಡೆಯನ ಎದುರಿಗೆ ಒಂದು ಜಿಂಕೆ

ಓಡಿಹೋಗಿದೆ, ಅದಕ್ಕೆ ತನ್ನ ಬಿಲ್ಲಿನಿಂದ ಬಾಣಹೂಡುವ ಮೊದಲೇ ಅವನಿಂದ ಕಣ್ತಪ್ಪಿಸಿ ಓಡಿಹೋಗಿದೆ, ಇದರಿಂದ ಕೆರಳಿ ಕೆಂಡವಾದ ಕಾಳಿಯ ಯಜಮಾನ, ವೀರಬಾಹು.......ಹೇಗಾದರೂ ಮಾಡಿ ತನ್ನ ಬೇಟೆ ಹಾಳಾಗಬಾರದೆಂದು, ತನ್ನ ಸ್ವಾಮಿನಿಷ್ಠ ಸೇವಕನಾದ ಕಾಳಿಗೆ ಒಪ್ಪಿಸಿದ್ದಾನೆ, ಯಾವಾಗ ತನ್ನ ಒಡೆಯ ವೀರಬಾಹು ತನಗೆ ಈ ಕೆಲಸ ಒಪ್ಪಿಸಿದನೋ, ಅದಕ್ಕೂ ತುಂಬಾ ಖುಷಿಯಾಗಿ ಕೂಡಲೇ ಆ ಜಿಂಕೆಯ ಹಿಂದೆ ಓಡಲಾರಂಭಿಸಿದೆ, ಆ ಜಿಂಕೆಯನ್ನು  ತನ್ನ ಒಡೆಯನಿಗೆ ಒಪ್ಪಿಸಲು ಹೋಗಿರುವಂಥಾ ಸಮಯದಲ್ಲಿ ಆ ಜಿಂಕೆ , ಕಾಳಿಗೆ ಹೆದರಿ ಮತ್ತಷ್ಟು ದೂರಕ್ಕೆ ಓಡಿ ಹೋಗಿದೆ, ಕಾರಣ ಒಂದು ಪೊದೆಯಲ್ಲಿ ತನ್ನ ನಾಲ್ಕು ಚಿಕ್ಕ ಮರಿಗಳನ್ನು ಬಿಟ್ಟು ಬಂದಿತ್ತು, ಅವುಗಳಿಗೆ ಆಹಾರ ಸಂಪಾದಿಸಿಕೊಂಡು ಹೋಗಲು ಬಂದಿತ್ತು, ಆಗ ಈ ಕಾಳಿ ಇದರ ಬೆನ್ನಟ್ಟಿದ್ದಾನೆ, ಆದ್ದರಿಂದ ಕಾಳಿಗೆ ಹೆದರಿ ಮತ್ತಷ್ಟು ಓಡಿ

ಹೋಗುತ್ತಿತ್ತು.  ಏಕೆಂದರೆ.......ಈ ಕಾಳಿಯ ವರ್ತನೆ ಇಡೀ ಕಾಡಿಗೆ ಚಿರಪರಿಚಿತ, ಅದು ತನ್ನ ಬೇಟೆಯ ಗುರಿ ಇಟ್ಟರೆ........ ಆ ಪ್ರಾಣಿ  ಒಂದಲ್ಲಾ.......ಐದು ಮೈಲು ದೂರಕ್ಕೆ ಓಡಿ ತಪ್ಪಿಸಿಕೊಂಡು ಬೆಟ್ಟದ ಗುಹೆಯಲ್ಲಿರಲಿ, ದೊಡ್ಡ ಮರದ ತುದಿಯಲ್ಲಿ ಅವಿತು ಕುಳಿತಿರಲಿ, ಪೊದೆಯ ಒಳಗಿರಲಿ,  ನೀರಿನ ಆಳದಲ್ಲಿರಲಿ ಅದನ್ನು ಬೇಟೆಯಾಡಿ ಹೆಡೆಮುರಿ ಕಟ್ಟಿ ತಂದು ತನ್ನ ಒಡೆಯನಿಗೆ ಒಪ್ಪಿಸುವಂಥಾ ನಿಷ್ಠಾವಂತ ಬೇಟೆಗಾರ ಈ ಕಾಳಿ.

 ಹೀಗೇ ಓಡಿ, ಓಡಿದ ಜಿಂಕೆ ನಿರ್ಧಾರ ಮಾಡಿತು........ ಇಂದು ಈ ಕಾಳಿ ನನ್ನ ಮೇಲೆ ಕಣ್ಣಾಕಿಬಿಟ್ಟಿದ್ದಾನೆ, ಅವನು ಗುರಿ ಇಟ್ಟ ಬೇಟೆ ತಪ್ಪಿಸಿಕೊಳ್ಳಲೇ ಆಗದು, ಇಂದು ಹೇಗಾದರೂ ಮಾಡಿ ತನ್ನ ಪ್ರಾಣ ಉಳಿಸಿಕೊಳ್ಳಲೇಬೇಕು, ತನ್ನ ಮರಿಗಳನ್ನು ಅನಾಥರನ್ನಾಗಿ ಮಾಡಬಾರದು, ಎಂಬ ಹಟದಿಂದ

 ಓಡಿತು......... ಓಡಿತು......ಆದರೆ...‌....ಅದರ ಹಿಂದೆ ಅದೇ ವೇಗದಲ್ಲಿ ಕಾಳಿ ಓಡಿ ಬರುತ್ತಿದ್ದಾನೆ, ಆ ಜಿಂಕೆಗೂ ಕಾಳಿಗೂ ಅರ್ಧ ಮೈಲು ಅಂತರವಿದೆ ಅಷ್ಟೇ......... ಆದರೆ........ ಆದರೆ.......ಓಡಿ, ಓಡಿ ತುಂಬಾ ದಣಿದಿದ್ದ ಜಿಂಕೆಗೆ,  ತನ್ನ ಕಾಲುಗಳು ಸೋಲುತ್ತಿವೆ, ಹೃದಯ ಬಡಿದುಕೊಳ್ಳತೊಡಗಿದೆ, ಕಣ್ಣುಗಳು ಮಂಜಾಗುತ್ತಿವೆ, ಏನಪ್ಪಾ ಮಾಡುವುದು ಈಗ........ದೇವರೇ ಕಾಪಾಡು ಎಂದು ದೇವರಲ್ಲಿ ಮೊರೆ ಹೊಕ್ಕಿ, ಆದದ್ದಾಗಲಿ ಕಾಳಿಗೆ ಶರಣಾಗುವಾ , ಅವನನ್ನೇ ಬೇಡಿಕೋಳ್ಳುವಾ......ಎಂದು ಧೈರ್ಯ ಮಾಡಿ ಓಡುವುದನ್ನು ಬಿಟ್ಟು ನಿಂತಲ್ಲೇ ನಿಂತುಬಿಟ್ಟಿತು, ಅದು ನಿಂತದ್ದು ಕಂಡು ಜೋರಾಗಿ ಓಡಿ ಬರುತ್ತಿದ್ದ ಕಾಳಿ.....ಅರೇ......ಇದೇನಿದು ನನಗೆ‌ ಹೆದರಿ ಹೀಗೆ‌ ನಿಂತಿತಾ, ಅಥವಾ ನನ್ನ ಮುಂದೆ ತೊಡೆ ತಟ್ಟಿ ನನಗೇ ಎದುರಾಗಿ ಪ್ರತಿಸ್ಪರ್ಧಿಯಾಗಿ

ಕಾಳಗಕ್ಕೆ ನಿಂತಿತಾ ಎಂದು ಒಮ್ಮೆ ಕಾಳಿಗೇ ಭಯವಾಗಿ..........ಅದೂ ನೋಡುವಾ ಏನಾಗುವುದೋ ಎಂದು ಜಿಂಕೆ ಹತ್ತಿರ ಬಂದು ದುರುಗುಟ್ಟಿ ನೋಡತೊಡಗಿತು.

    ಆಗ ಈ ಜಿಂಕೆ ಹೇಳಿತು ಧನ್ಯತೆಯಿಂದ ಕಾಳೀ......ಕಾಳೀ......ನನಗೆ ಈ ಒಂದು ಬಾರಿ ಪ್ರಾಣಭಿಕ್ಷೆ ದಯಪಾಲಿಸು, ನನ್ನ ಮಕ್ಕಳು ನಾಲ್ಕು ಮಂದಿ ಇದ್ದಾರೆ, ಅವರಿನ್ನೂ ಚಿಕ್ಕವರು, ಅವರು ಪೊದೆಗಳಲ್ಲಿ ಅವಿತಿದ್ದಾರೆ, ತುಂಬಾ ಹೊಟ್ಟೆ ಹಸಿವಿನಿಂದ ಬಳಲಿದ್ದಾರೆ, ಅವರಿಗೇನಾದರೂ ಆಹಾರ ತೆಗೆದುಕೊಂಡು ಹೋಗಬೇಕು, ನಿನ್ನಂತೆ ನಾನೂ ಸಹ ಪ್ರಾಣಿಯಲ್ಲವೇ........ನೀನು ಆ ನಿನ್ನ ಒಡೆಯನಲ್ಲಿ ಮಾತನಾಡಿ ನನ್ನನ್ನು ಮನೆಗೆ ದಯಮಾಡಿ ಕಳಿಸು, ನಾನು ನಿನ್ನ ಈ ಸ್ನೇಹ ಎಂದೂ ಮರೆಯುವುದಿಲ್ಲ,  ಎಂದು ಪರಿಪರಿಯಾಗಿ ಬೇಡಿಕೊಂಡಾಗ , ಇಷ್ಟು ದಿನದಿಂದ ಕ್ರೂರಿಯಾಗಿ ನಡೆದುಕೊಳ್ಳುತ್ತಿದ್ದ

 ಕಾಳಿಗೆ ಅಂದು ಜಿಂಕೆಯ ಮಾತುಗಳನ್ನು ಕೇಳಿ ತುಂಬಾ ಕನಿಕರಪಟ್ಟುಕೊಂಡು, ಸರಿ.......ಬಾ ನೋಡುವಾ......ನಿನಗೆ ನಾನೇನೋ  ಪ್ರಾಣಭಿಕ್ಷೆ ದಯಪಾಲಿಸುವೆ, ಆದರೆ ನಾನೆಂದೂ ನನ್ನ ಒಡೆಯನ ಮಾತನ್ನು ಮೀರುವುದಿಲ್ಲ, ಅವನ ಮನೆಯ ಉಪ್ಪು ತಿಂದು ಅವನಿಗೆ ದ್ರೋಹ ಬಗೆಯಲಾರೆ, ಅವನ ಬಳಿ ನಿನ್ನನ್ನು ಕರೆದುಕೊಂಡು ಹೋಗುವೆ, ಹಾಗೂ ನಿನ್ನ ಪರವಾಗಿ ಒಂದೆರಡು ಮಾತುಗಳನ್ನಾಡುವೆ, ಅವನೇನಾದರೂ ನಿನ್ನ ಮೇಲೆ ಕನಿಕರ ಪಟ್ಟು ನಿನ್ನನ್ನು ಬಿಟ್ಟು ಕಳಿಸಿದರೆ ನನ್ನದೇನೂ ಅಭ್ಯಂತರವಿಲ್ಲ, ಎಂದು ಧೈರ್ಯ ಹೇಳಿ ತನ್ನ ಒಡೆಯನ ಬಳಿಗೆ ಕಾಳಿ, ಆ ಜಿಂಕೆಯನ್ನು ಕರೆದುಕೊಂಡು ಹೋಯಿತು.

      ಆ ಒಡೆಯ ವೀರಬಾಹು ಇದ್ದ ಜಾಗಕ್ಕೂ ಇವರಿಬ್ಬರೂ ಇದ್ದ ಜಾಗ ಸುಮಾರು ನಾಲ್ಕೈದು ಮೈಲುಗಳ ಅಂತರ, ಆದರೆ

ಅಷ್ಟರಲ್ಲಿ ಜಿಂಕೆ ಓಡಿ, ಓಡಿ ತುಂಬಾ ಬಳಲಿದ್ದರಿಂದ ಹಿಂತಿರುಗಿ ಕಾಳಿಯ ಜೊತೆ ಬರಲು ತುಂಬಾ ಆಯಾಸ ಪಡಬೇಕಾಯಿತು, ಅಲ್ಲಲ್ಲೇ ಕಾಲುಗಳ ನೋವಿನಿಂದ ಹಾಗೂ ಬಾಯಾರಿಕೆಯಿಂದ ಒಂದಿಷ್ಟೂ ದೂರ ನಡೆಯಲಾರದೆ ಕುಸಿದು ಕುಳಿತು ಬಿಟ್ಟಿತು, ಈಗ ಕಾಳಿಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ, ಆದರೂ ಜಿಂಕೆ ಅವಸ್ಥೆ ನೋಡಿ ಅಯ್ಯೋ.......ಪಾಪ ಎನಿಸಿ, ಆ ಜಿಂಕೆಯನ್ನು ತನ್ನ ಮೇಲೆ ಕುಳಿತುಕೊಳ್ಳುವಂತೆ ಹೇಳಿ,  ಅದನ್ನು ಹೊತ್ತುಕೊಂಡು ಬರಬರನೆ ಓಡುತ್ತಾ ತನ್ನ ಒಡೆಯನ ಬಳಿಗೆ ಬಂದರೆ.......ಬಂದರೆ........ಅಯ್ಯೋ ದುರ್ವಿಧಿಯೇ.........

ಅಷ್ಟರಲ್ಲಿ ತನ್ನ ಒಡೆಯ ವೀರಭಾಹು......ನಿಂತ ಜಾಗದಲ್ಲಿಯೇ ಕುಸಿದು ಬಿದ್ದವನಂತೆ,  ಶರೀರವೆಲ್ಲಾ ರಕ್ತಸಿಕ್ತವಾಗಿ, ಸಾವು ಬದುಕಿನ ನಡುವೆ 

ಒದ್ದಾಡುತ್ತಾ ಈಗಲೋ ಆಗಲೋ ಪ್ರಾಣಹೋಗುವ ಹಾಗೆ ಒದ್ದಾಡುತ್ತಿದ್ದಾನೆ. 

     ಆಗ ಕಾತರದಿಂದ ತನ್ನ ಒಡೆಯ ವೀರಬಾಹು ಬಳಿಗೆ ಬಂದ ಕಾಳಿಯನ್ನು ತಬ್ಬಿಕೊಂಡ ವೀರಬಾಹು ಅದನ್ನು ಮುದ್ದಾಡುತ್ತಾ ಒಂದೇ ಸಮನೆ ಅಳತೊಡಗಿದನು. ಕಾಳಿಯೂ ಅಳತೊಡಗಿತು, ವೀರಬಾಹು ಅವಸ್ಥೆ ಕಂಡು ಮರುಗಿತು, ಹಾಗೂ ಇವರಿಬ್ಬರ ಸ್ನೇಹ ಕಂಡು ಜಿಂಕೆಗೂ ಮುರುಕು ಹುಟ್ಟಿತು, ಈ ವೀರಬಾಹುಗೆ ಏನಾಯಿತೆಂದು ಕಾಳಿ ಹಾಗೂ ಜಿಂಕೆ ಕೇಳಿದರು, ಆಗ ವೀರಬಾಹು ಹೇಳಿದ "ತಾನು ಕಾಳಿ ಹೋದ ದಿಕ್ಕಿನತ್ತ ನೋಡುತ್ತಾ ನಿಂತಿರುವಾಗ ಯಾವುದೋ ದಿಕ್ಕಿನಿಂದ ಒಂದು ಹುಲಿ ತನ್ನ ಮೇಲೆರಗಿ ಭಯಂಕರ ಗಾಯಗೊಳಿಸಿ ನನ್ನನ್ನು ನೆಲಕ್ಕೆ ಕೆಡವಿತು, ಆಗ ನಾನೇನೂ ಸುಮ್ಮನೆ ನೆಲಕ್ಕೆ ಬೀಳಲಿಲ್ಲ, ನನ್ನಲ್ಲಿದ್ದ ಹರಿತವಾದ ಕತ್ತಿಯಿಂದ ಅದರ

 ದೇಹಕ್ಕೆ ಹಾಗೂ ಕಾಲುಗಳಿಗೆ ತುಂಬಾ ಘಾಸಿಗೊಳಿಸಿದೆ, ಆಗ  ಕತ್ತಿಯಿಂದ ಕಾಲು ಮುರಿದುಕೊಂಡು, ಮುರಿದ ಕಾಲುಗಳಿಂದ  ರಕ್ತ ಸೋರಿಸಿಕೊಳ್ಳುತ್ತಾ ಹಾಗೂ ಭಯದಿಂದ ಹುಲಿ....... ಬಂದ ದಾರಿಗೆ ಸುಂಕವಿಲ್ಲದಂತೆ ತನ್ನ ಪೊದೆಕಡೆ ಕುಂಟುತ್ತಾ ಓಡಿಹೋಯಿತು, ನನಗಂತೂ ಪ್ರಾಣ ಹೋಗುವಂತಹ  ಪೆಟ್ಟಾಗಿದೆ, ನಾನಂತೂ ಜೀವಸಹಿತ ಉಳಿಯುವುದಿಲ್ಲ, ತುಂಬಾ ರಕ್ತ ಹರಿದು ಹೋಗಿದೆ, ನೀನು ಬರಲಿ ಎಂದು ಕಾಯುತ್ತಾ ಜೀವ ಹಿಡಿದಿಟ್ಟುಕೊಂಡಿರುವೆ , ನಾನು ಇದುವರೆಗೂ ಅದೆಷ್ಟು ಕಾಡುಪ್ರಾಣಿಗಳನ್ನು  ನಿರ್ದಾಕ್ಷಿಣ್ಯವಾಗಿ ನಿನ್ನ ಸಹಾಯದಿಂದ ಕೊಂದುಹಾಕಿರುವೆ, ನನಗೆ ಈಗ ಕಾಡುಪ್ರಾಣಿಯಿಂದಲೇ ಅಂತ್ಯವಾಗುವ ಕಾಲ ಪ್ರಾಪ್ತಿ ಯಾಯಿತು, ನಾನಂತೂ ಇನ್ನು ಉಳಿಯುವುದಿಲ್ಲ, ನೀನು ಇದುವರೆಗೂ ನನಗೆ ಮಾಡಿರುವ ಸಹಾಯಕ್ಕಾಗಿ ನಿನಗೆ‌ ಧನ್ಯವಾದ ತಿಳಿಸಿ ಪರಲೋಕಕ್ಕೆ

 ಹೋಗೋಣವೆಂದು ಇದುವರೆಗೂ ಕಾಯುತ್ತಿದ್ದೆ, ಇನ್ನು ನೀನು ನಿನ್ನ ಪಾಡಿಗೆ ಹಾಯಾಗಿರು, ಎಂದು ಅಂತಿಮವಾಗಿ ಕಾಳಿಯನ್ನು ತಬ್ಬಿಕೊಂಡನು ವೀರಬಾಹು, ಆ ನಂತರ ಕಾಳಿ ತುಂಬಾ ರೋಧಿಸತೊಡಗಿತು, ಮತ್ತೆ ವೀರಬಾಹು ಕೇಳಿದ, ಕಾಳಿಯನ್ನು, ಹೌದು.....ಈ ಜಿಂಕೆಯನ್ನು ಕೊಲ್ಲಲೆಂದೇ ಅದನ್ನು ಹಿಂಬಾಲಿಸಿಕೊಂಡು ಹೋಗಿ, ಅದನ್ನು ಸಾಯಿಸಲಾರದೇ ಅದನ್ನು ಜೊತೆಗೇ ಕರೆತಂದಿರುವೆಯಲ್ಲಾ.......ಏನು ಸಮಾಚಾರ ಎಂದು ಕೇಳಿದನು, ಆಗ ಕಾಳಿ ಈ ಹಿಂದೆ ನಡೆದ ವೃತ್ತಾಂತ ವನ್ನೆಲ್ಲಾ ಹೇಳಿತು, ಆಗ ವೀರಬಾಹು ಸರಿ.....ನೀನೇ ಪ್ರಾಣಭಿಕ್ಷೆ ಕೊಟ್ಟಿರುವೆಯಲ್ಲಾ, ನನ್ನದೇನೂ ಅಭ್ಯಂತರವಿಲ್ಲ, ಇನ್ನು ಮುಂದೆ ನೀನು ಹಾಗೂ ಜಿಂಕೆ‌ ತುಂಬಾ ವರುಷಗಳವರೆಗೂ ಸ್ನೇಹದಿಂದ ಬದುಕಿ ಬಾಳಿ ಎಂದು ಹೇಳಿದ ವೀರಬಾಹುವಿನ ಪ್ರಾಣಪಕ್ಷಿ ಹಾರಿಹೋಯಿತು.

     ತನ್ನ ಒಡೆಯ ವೀರಬಾಹುವಿನ ಶವವನ್ನು ದುಃಖ ದಿಂದಲೇ ಕಾಳಿ ಹಾಗೂ ಜಿಂಕೆ ಒಂದು ಸಮಾಧಿ ತೋಡಿ ಅದರೊಳಗಿಟ್ಟು ಕಣ್ಣೀರಿನಿಂದಲೇ ಅಂತ್ಯಕ್ರಿಯೆ ಮಾಡಿ ದುಃಖದಿಂದ ಅಂತಿಮ ವಿದಾಯ ಹೇಳಿದವು. ಆನಂತರ ಕಾಳಿ ಹಾಗೂ ಜಿಂಕೆಯು ಪೊದೆಯೆಡೆಗೆ ಹೋದವು, ಅಷ್ಟರಲ್ಲಿ ಜಿಂಕೆಯ ಮರಿಗಳು ಹೊಟ್ಟೆ ಹಸಿವಿನಿಂದ ತುಂಬಾ ಬಳಲಿದ್ದವು.

ಅಲ್ಲಿಗೆ ಹೋದ ತಾಯಿ ಜಿಂಕೆಯನ್ನು ನೋಡಿದ ಮರಿ ಜಿಂಕೆಗಳು ಖುಷಿಯಿಂದ ಕುಣಿದಾಡಿದವು, ತಾಯಿ ಜಿಂಕೆ ತನ್ನ ಮರಿಗಳಿಗೆ, ತನ್ನ ಹೊಸ ಸ್ನೇಹಿತ ಕಾಳಿಯ ತ್ಯಾಗದ ಕಥೆ ಹೇಳಿ, ಅವರುಗಳಿಗೆ ಪರಿಚಯಿಸಿತು, ಕಾಳಿಯನ್ನು ನೋಡಿದ ಮರಿ ಜಿಂಕೆಗಳು ಅವನನ್ನು ತಬ್ಬಿಕೊಂಡು ಕುಣಿದಾಡಿದವು.

     ನಂತರ ಕಾಳಿ, ಜಿಂಕೆಯನ್ನು ತನ್ನ

 ಮರಿಗಳೊಂದಿಗೆ ಇರಲು ಹೇಳಿ ತಾನು ಮರಿಜಿಂಕೆಗಳಿಗೆ ಆಹಾರ ತರಲು ಹೋಗಿ ಕೆಲ ಸಮಯದ ನಂತರ ಆಹಾರ ತಂದು ಜಿಂಕೆ ಹಾಗೂ ಮರಿಗಳಿಗೆ ನೀಡಿತು. ಅಂದಿನಿಂದ ತಾಯಿ ಜಿಂಕೆ, ಮರಿ ಜಿಂಕೆಗಳು ಹಾಗೂ ಕಾಳಿ ಬಹಳ ಕಾಲದವರೆಗೂ ಆನಂದದಿಂದ ಬಾಳಿದವು. 

ನೀತಿ: ನಮಗೆ ಎಂಥಾ ಕಷ್ಟ ಬಂದಾಗಲೂ ಕೂಡ ನಾವುಗಳು , ನಮ್ಮ ಎದುರಿಗಿರುವ ಶತೃಗಳಿಗೆ ಹೆದರದೆ ಧೈರ್ಯದಿಂದ ಅವರನ್ನು ಯುಕ್ತಿಯಿಂದ ಎದುರಿಸಿದರೆ ಅವರ ಮನಸ್ಸು ಕರಗಲೂಬಹುದು,

 

-ರಾಜೇಂದ್ರ ಕುಮಾರ್ ಗುಬ್ಬಿ

                              ಕನಸುಗಳ ಕಥೆಗಾರ