Click here to Download MyLang App

ಕಾಲಘಟ್ಟ :ಲಕ್ಷ್ಮಣ ಶರೆಗಾರ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟಸ್ವರೂಪದ ಕನ್ನಡ |

ಕತೆ
ಕಾಲ ಚಕ್ರ
“ನೀನು ನಿನ್ನ ಕೊರಳೊಳಗಿನ ತಾಳಿ, ಹಣೆ ಮೇಲಿನ ಕುಂಕುಮ ತೆಗೆಯುವ ತನಕ ನನಗೆ ಹೆಣ್ಣು ಕೊಡಲು ಅವರು ತಯಾರಿಲ್ಲ!”-
ಮಗನ ಮಾತನ್ನು ಕೇಳಿ ಇನ್ನೂ ನಿಂತೇ ಇದ್ದರೆ ಕೆಳಗೆ ಬೀಳುವುದು ಖಚಿತವಾಗಿ ಕುಸಿದು ಕುಳಿತುಬಿಟ್ಟೆ.
ಆಮೇಲೆ ಅವನು ಅದೆಷ್ಟೋ ಹೊತ್ತು ಅದೇನೆನೊ ಹೇಳುತ್ತ ಸಂತೈಸಿದನಾದರೂ ಅದಾವುದರ ಪರಿವಿಲ್ಲದೆ ಬುಡ ಕಡಿದ ಮರದ ತೆರದಿ ಎದ್ದು ನಿಲ್ಲಲಾಗದವಳಂತೆ ಬಿದ್ದು ಹೋಗಿಬಿಟ್ಟೆ.
ಮಧ್ಯಾಹ್ನ ಹಾಲಿನವನು ಬಂದು ಬಾಗಿಲು ಬಡಿಯುವವರೆಗೂ ಈ ಪ್ರಪಂಚದೊ0ದಿಗಿನ ಸಂಪರ್ಕವೆ ಕಡಿದುಹೋಗಿತ್ತು. ಗಂಡನ ಹೆಣ ನನ್ನೆದುರು ಇರುವಾಗಲೂ ನಾನು ಇಷ್ಟೊಂದು ಘಾಸಿಗೊಂಡಿರಲಿಲ್ಲ!
“ಇವರೇಕೆ ಜೊತೆಗಿಲ್ಲ?” ಎಂದಳುವ ಹಾಗೇ, “ಇಂಥವರೇಕೆ ಜೊತೆಗಿದ್ದಾರೆ?” ಎಂದು ಕೂಡ ಅಳುವಂಥಾದರೆ ಅದು ಅಳುವವರ ಪಾಡೇ ಹೊರತು ಇದ್ದವರ, ಇರದವರ ಕಾರಣ ಇರಲಿಕ್ಕಿಲ್ಲ ಅಲ್ಲವೆ?
ಮಕ್ಕಳು ಸಣ್ಣವರಿದ್ದಾಗ ಪಟಾಕಿ ಹಾರಿಸುತ್ತಾರೆ.
ದೊಡ್ಡವರಾದ ಮೇಲೆ ಬಾಂಬ್ ಹಾಕುತ್ತಾರೆ!
ವಯಸ್ಸಾದ ಮೇಲೆ ತಂದೆ-ತಾಯಿಯರು ಅವಷೇಶಗಳಾಗಿಬಿಡುತ್ತಾರೆ!
ಎದೆ ಹಾಲು ಕುಡಿಸಿ ಬೆಳೆಸಿದವಳ ಎದೆಯೊಳಗೆಯೆ ಕೊಳ್ಳಿ ಇಡುವವರನ್ನೇ ಮಕ್ಕಳೆನ್ನುತಾರೆಂದರೆ ಅಂಥ ಮಕ್ಕಳು ಯಾವ ಜನ್ಮಕ್ಕೂ ಬೇಡ!
ನನ್ನ ಭಾವನೆಯನ್ನು ಘಾಸಿಗೊಳಿಸಿದ್ದಕ್ಕೆ ನಾನು ಛಿದ್ರಗೊಳ್ಳಲಿಲ್ಲ, ನೊಂದುಕೊಳ್ಳಲಿಲ್ಲ. ಇಂಥದ್ದಕ್ಕೆಂತಲೆ ಅಂತ ಕಾರಣ ಹೇಳಿದನಲ್ಲ ಅದಕ್ಕೆ ನಾನು ಛಿದ್ರಗೊಂಡಿದ್ದು, ಕೊಚ್ಚಿಹೋಗಿದ್ದು.
ಮಗನ ಆ ಮಾತು ಇನ್ನಿಲ್ಲವೆಂಬತೆ ನನ್ನ ಬೇರಿಗಿಳಿದು ಜೀವನವೆಂದರೇನೆಂದು ಮತ್ತೊಮ್ಮೆ ಮೊದಲಿನಿಂದ ಆಲೋಚಿಸುವುದಕ್ಕೆ ಮಜಬೂರು ಮಾಡುತ್ತದೆ. ಕತ್ತಿಯ ಅಲಗನ್ನು ನೇರವಾಗಿ ಎದೆಯೊಳಗೆ ಇಳಿಸಿಕೊಂಡ ಯಾತನೆಯಾಗುತ್ತದೆ. ಚೀತ್ಕಾರ ಗಂಡನ ಸಾವಿಗಾಗಿ, ನನ್ನ ನೋವಿಗಾಗಿ ಅಲ್ಲವೆಂದರೆ ಅದು ಬದುಕಿನ ಇಂಥದೊಂದು ದುರಂತಕ್ಕಾಗಿಯೆ ಇರಬೇಕಲ್ಲವೆ?
ನಿಂತ ನೆಲ ಅದುರಿ, ಬದುಕು ಚದುರಿ ಹೋಗುವಂತೆ ಮಗನ ಮಾತಿನ ರೂಪದಲ್ಲಿಹಠಾತ್ತಾಗಿ ಬಂದು ಅಪ್ಪಳಿಸಿದ ರಾಕ್ಷಸ ಅಲೆಗೆ ಕಂಪಿಸಿಬಿಡುತ್ತೇನೆ.
ಸುಮ್ಮನೆ ಮಂಚದ ತುದಿಗೆ ಕೂತು ಸಣ್ಣದೊಂದು ಸಾಂತ್ವನ ಹೇಳಲು ಗಂಡನಿಲ್ಲ.
...2ನೇ ಪುಟಕ್ಕೆ
-2-
ಮಗುವಿನ ಮಮತೆಯಿಂದ ಹಿಡಿದು, ಮಡದಿಯ ಮೋಹದವರೆಗೆ..
ಅವ್ವನ ಕಳ್ಳು-ಬಳ್ಳಿಯಿಂದ ಹಿಡಿದು ಸೂಳೆಯ ಸೆಳೆತದವರೆಗೆ..
ಎಲ್ಲವೂ ಕೊಟ್ಟು-ಕೊಳ್ಳುವ ವ್ಯವಹಾರವೇ ಆಗಿರುತ್ತವೆ.
ಭಾವ-ಬಂಧನ ಅಂತೆಲ್ಲ ಹೇಳಿಕೊಳ್ಳುವುದು ಸುಮ್ಮನೆ ನೆಪಗಳೆ ಇದ್ದಾವು!
ಇಲ್ಲದೆ ಇದ್ದಲ್ಲಿ ಆ ಬೇಡ ವಾಲ್ಮೀಕಿಯಾಗುತ್ತಿರಲಿಲ್ಲ.
ಸಮಯ ನೋಡಿಕೊಳ್ಳಲು ಗಡಿಯಾರದ ಕಡೆಗೆ ಮುಖ ತಿರುಗಿಸುತ್ತೇನೆ. ಒತ್ತಿ ಒರೆಸಿದ0ತೆಲ್ಲ ಕಣ್ಣೇ ಕಾಣುವುದಿಲ್ಲ. ಬಿಡದೆ ತುಂಬುವ ಒರತೆ.. ಖೋಡಿ ಮನಸ್ಸು ಕಲ್ಲಾಗುವುದೇ ಇಲ್ಲ.. ಒಂದ್ಸಲ ಕರಗಿ ಖಾಲಿಯಾಗುವ ಮೇಣವೂ ಆಗುವುದಿಲ್ಲ.
ಹೊಕ್ಕುಳ ಬಳ್ಳಿಯೆ ಕುತ್ತಿಗೆ ಬಿಗಿದು ಉಸಿರು ಕಟ್ಟಿಸಹೊರಟರೆ ಏನನ್ನು ನಂಬಿ ಬದುಕುವುದು...?
ನಮಗೆ ಬೇಕಾದ ರೀತಿಯಲ್ಲಿಯೆ ನಾವು ಕಾಲ ಕಳೆಯುವುದು, ಬದುಕುವುದು. ಅಲ್ಲವೆಂದರೆ ನಮ್ಮನ್ನು ನಾವೇ ಒಪ್ಪಿಕೊಳ್ಳದಿದ್ದ ಹಾಗಲ್ಲವೆ? ಮಗನಿಗೆ ನನ್ನ ಭಾವನೆಗಿಂತ ತನ್ನ ಬೆಚ್ಚಗಿನ ಬದುಕು ದೊಡ್ಡದಾಯಿತು. ಅಲ್ಲದಿದ್ದರೆ ನನ್ನೆದುರು ಅಂಥ ಆ ಮಾತನಾಡುವ ಸಾಹಸ ಮಾಡುತ್ತಿರಲಿಲ್ಲ.
ನಾನು ಬೆಳೆಸಿದ ಮಗನೆ ಇವನು...?
ಜೀವನವು ದೊಡ್ಡದೆ ಇರುತ್ತದೆ.
ಬದುಕುವ ನಾವುಗಳೆ ಸಣ್ಣವರಿರುತ್ತೇವೆ.
ನನಗೆ ಮಗನು ಸುಖಿಯಾಗಿರುವುದು ಮುಖ್ಯ. ಅದರರ್ಥ: ಅವನ ಸುಖವು ನನ್ನ ಸಮಾಧಿಯ ಮೇಲೆ ಅರಳುವುದಾಗಿರುವುದಿಲ್ಲವಲ್ಲ?
ಎದೆಯ ತುಂಬ ಗಾಳಿ ತುಂಬಿಕೊಂಡು ಹೊರಬಿಡುತ್ತೇನೆ. ಗಂಡನ ನೆನಪೇ ಆ ಗಾಳಿಯಾಗಿ ಎದೆಯೊಳಗೆ ತುಂಬಿಕೊಳ್ಳುತ್ತದೆ! ಕಣ್ಮುಚ್ಚಿಕೊಂಡರೆ ಗಂಡನ ಮುಖವೇ ನನ್ನೆದುರು ಸ್ವಚ್ಚವಾಗಿ ನಿಂತುಬಿಡುತ್ತದೆ.
ಮಗನ ಮಾತು ಗಂಡನ ಆತ್ಮಕ್ಕೆ ಕೇಳಿಸದಿರಲೀಂತ ಮನೆ ಬಾಗಿಲು ಹಾಕುತ್ತೇನೆ. ಕೋಣೆಯ ಬಾಗಿಲು ಮುಂದೆ ಮಾಡಿ ಮುಖದ ತುಂಬ ಮುಸುಕೆಳೆಯುತ್ತೇನೆ. ಪಡಸಾಲೆಯಲ್ಲಿ ಯಾರೋ ನಡೆದಾಡಿದ ಸದ್ದಿಗೆ ಮುಸುಕು ಸರಿಸಿ ಆಲಿಸುತ್ತೇನೆ. ಕಿಟಕಿಯಲ್ಲಿ ತೂರಿ ಬರುವ ಗಾಳಿಯಲ್ಲಿ ಗಂಡನ ವಾಸನೆಯನ್ನು ಗುರುತಿಸಿ ಮತ್ತೆ ಅಳು ಒಳಗಿನಿಂದ ಉಕ್ಕಿಬರುತ್ತದೆ.
...3ನೇ ಪುಟಕ್ಕೆ

-3-
ನಾನು ಘಾಯಗೊಂಡಿದ್ದೇನೆ, ನೊಂದಿದ್ದೇನೆ, ನಿರಾಶಳಾಗಿದ್ದೇನೆ. ನನ್ನ ಕಣ್ಣ ತುಂಬ ನೀರಿವೆ. ಮನಸ್ಸು ರೋಧಿಸುತ್ತಿದೆ. ಹೇ! ದೇವರೆ..! ಬದುಕಿನಲ್ಲಿಯೂ ದುರಂತಗಳಿರುತ್ತವೆಂದರೆ ಅಂಥ ಬದುಕನ್ನು ಹೇಗಾದರೂ ಬದುಕಿ ಬೀಸಾಡಬಹುದು. ಬದುಕೇ ದುರಂತವಾಗುವುದಾದರೆ, ಅದಕ್ಕೆ ನಮ್ಮ ಕನಸೇ ಕಣ್ತಿಯುವ ಮೊಣಚಾದರೆ ಅಂಥ ಬದುಕು ಬದುಕೇ ಅಲ್ಲ.
ಯಾರಿಗಾಗಿಯೂ ನಾವು ಇರುವುದಿಲ್ಲ. ನಮಗಾಗಿ ಬದುಕೂ ಇರುವುದಿಲ್ಲ. ಪ್ರತೀ ಕ್ಷಣ ನಾವು ಛಿದ್ರಗೊಳ್ಳುತ್ತಲೇ ಇರುತ್ತೇವೆ.
ನನ್ನ ಭಾವನೆಯನ್ನು ತೇಜೋವಧೆಗೊಳಿಸುವ ಅಧಿಕಾರವನ್ನು ಮಗನಿಗೆ ಆತ ಪ್ರೀತಿಸುವ ಆ ಹುಡುಗಿಯ ದಾವಣಿ, ತುಟಿಯ ಕೆಂಪು ಕೊಟ್ಟವೆ...? ಹಾಗಿದ್ದಲ್ಲಿ ಈ ನನ್ನ ಸೆರಗಿಗೆ, ಕರುಳಿನ ಕೂಗಿಗೆ ಅಸ್ತಿತ್ವವೇ ಇಲ್ಲವೆ?
ಜೀವನವು ಹೀಗೆಯೆ ಇರುತ್ತದೆ... ಒಡಕು ಒಡಕಾಗಿ, ಮಸಕು ಮಸಕಾಗಿ.. ಅಪೂರ್ಣವಾಗಿ.
ನನ್ನೊಳಗಿನ ಗಾಢಶೂನ್ಯತೆ ನನಗೆ ಮತ್ತು ನನ್ನನ್ನು ನೋಡುತ್ತ ಇರುವ ಗಂಡನ ಆ ಅಸಹಾಯಕ ಆತ್ಮಕ್ಕೆ ಮಾತ್ರ ಅರ್ಥವಾಗಲು ಸಾಧ್ಯವಿದೆ.
ತಪ್ಪಿಹೋದ ಜೀವನದ ಆಸರೆ, ಭರವಸೆಯಿಂದ ಜೀವನದಲ್ಲಿ ಅಂಥದೊ0ದು ಗಾಢಶೂನ್ಯತೆ ಅಮರಿಕೊಳ್ಳುತ್ತದೆ. ಆಗಲೇ ಅಲ್ಲವೆ ಬದುಕನ್ನು ಇಲ್ಲೀತನಕ ಗ್ರಹಿಸಿದ್ದು, ಅರ್ಥೈಸಿದ್ದು ಏನೂ ಅಲ್ಲವೆಂದು ಅನ್ನಿಸುವುದು!
ನಿಜ ಏನೆಂದರೆ-
ಯಾವ ತಿಳಿವಳಿಕೆಯೂ ಪೂರ್ಣವಾಗಿರುವುದಿಲ್ಲ. ಮತ್ತದೆ ಭ್ರಮನಿರಸನ... ಮತ್ತದೇ ಹುಡುಕಾಟ. ಸ್ಥಾಯಿಯಾಗಿ ನಿಲ್ಲದ ಎಲ್ಲವೂ ಚದುರುವ ಚಿತ್ರಗಳು.
ಹಾಗೆ ನೋಡಿದರೆ-
ಒಬ್ಬರ ಜೀವನದ ಮೇಲೆ ಇನ್ನೊಬ್ಬರು ಅಧಿಕಾರ ಸ್ಥಾಪಿಸಲು ಹೊರಡುವುದೂ ಒಂದು ಶೋಷಣೆಯೆ ಆಗಿರುತ್ತದೆ.
ಅಷ್ಟಕ್ಕೂ ಮಗನ ಆ ವಕ್ರ ಮಾತಿನ ಹಿಂದೆ ಸ್ವಂತದ್ದೊಂದು ಸುಂದರ ಬದುಕಿನ ಕನಸೇ ಇದ್ದಿತಲ್ಲ...
ಹರಿಯುವ ಪ್ರವಾಹದ ಎದುರು ಇಷ್ಟವೆಂದು ನಿಂತುಕೊಳ್ಳುವವರನ್ನು ಯಾರು ಕೇಳುವರು...?
ಕಾಲಕ್ಕೆ ನನ್ನ ಅಸ್ತಿತ್ವ, ನನ್ನ ಇರುವಿಕೆ ಗಣನೆಯಿಲ್ಲ! ಉದುರುವ ಎಲೆಗಳ ಲೆಕ್ಕ ಕಾಲಕ್ಕೆ ಇರುವುದಿಲ್ಲ!! ಉದುರಿಬಿದ್ದು ಗೊಬ್ಬರವಾವುದಷ್ಟೇ ಈಗ ಉಳಿದಿರುವುದು.
ಮಣ್ಣಿನೊಳಗಡೆ ಉಸಿರು ಕಟ್ಟಿಸಿಕೊಳ್ಳುವ ಬೀಜ ಉಸಿರಾಡುವುದು ಚಿಗಿತ ಟೊಂಗೆಗಳ ಮೂಲಕವೇ ಅಲ್ಲವೆ...?
ಕತ್ತಲು, ಮಿಸುಕಾಡಲೂ ಆಗದ ಅವಸ್ಥೆಯಲ್ಲಿ ಬೀಜ ಹಿಂಸೆಯಾಗುತ್ತದೆಂದು ಕಮರುವ ವಿಚಾರದ್ದಾಗಿರುವುದಿಲ್ಲ. ಅದರೊಳಗಿನ ನೆರಳು ಕೊಡುವ ಸಂಕಲ್ಪವೇ ಮರವಾಗುವಂತೆ ಪ್ರೇರೇಪಿಸುತ್ತದಲ್ಲವೆ...?
-4-
ದುಃಖವನ್ನು ಗಂಟಲಿನಲ್ಲಿ ಒತ್ತಿ ಹಿಡಿದುಕೊಂಡು, ತುಟಿಗಳ ಮೇಲೆ ನಗುವನ್ನು ಲೇಪಿಸಿಕೊಳ್ಳುವುದು ತಾಯಂದಿರಿಗೆ ಮಾತ್ರ ಸಾಧ್ಯವಾಗುತ್ತದೆ.
ಆಸರೆಯ ಅಗತ್ಯವಿರುವ ಈ ಇಳಿವಯಸ್ಸಿನಲ್ಲಿ ನನ್ನಿ0ದ ನನ್ನ ಗಂಡನನ್ನು ಕಸಿದು, ನಮ್ಮಿಬ್ಬರನ್ನು ಅಗಲಿಸಿದ ಆ ದೇವರನ್ನು ನಾನು ಶಪಿಸಿತ್ತೇನೆ!
ನನ್ನೊಳಗಿನ ಅಭದ್ರತೆ, ಅತಂತ್ರತೆಯನ್ನು ಮುಚ್ಚಿಕೊಳ್ಳಲು ನಾನು ಹಣೆ ಮೇಲೆ ಇನ್ನೂ ಕುಂಕುಮ ಇಟ್ಟುಕೊಳ್ಳುತ್ತಿದ್ದೇನೆ!
ಮನಸ್ಸಿನ ಒಳಪದರಿನ ಮೇಲೆ ಚಿತ್ತಾರವಾಗುವ ಗಂಡನ ನೆನಪನ್ನು ಒರೆಸಿ ಹಾಕುವುದು ಹಣೆ ಮೇಲಿನ ಕುಂಕುಮವನ್ನು ಸಲೀಸಾಗಿ ಅಳಿಸಿ ಹಾಕಿದಷ್ಟು ಸುಲಭವಾದುದೆ?
ಹಿಡಿದುಕೊಂಡ ಕೈಗಳೊಳಗಿನ ಬಿಸುಪಿನ ಸಾಂಗತ್ಯ ಸಾಂದ್ರವಾಗುವಂತೆ ಅಖಂಡ ನಲವತ್ತು ವರ್ಷಗಳ ಕಾಲ ಒಂದೇ ಸವನೆ ಧೇನಿಸಿದವಳು ಗಂಡ ಇಲ್ಲವಾದ ಮಾತ್ರಕ್ಕೆ ಕೊರಳೊಡ್ಡಿ ಕಟ್ಟಿಸಿಕೊಂಡ ಮಂಗಳ ಸೂತ್ರವನ್ನು ಅಷ್ಟು ಸುಲಭವಾಗಿ ತೆಗೆದುಹಾಕಲಾದೀತೆ?
ಸೌಭಾಗ್ಯವತಿ, ವಿಧವೆ-ಅನ್ನುವುದು ಗಂಡನೆ0ಬುವವನ ಇರುವಿಕೆ, ಇಲ್ಲದಿರುವಿಕೆಯನ್ನು ಅವಲಂಬಿಸಿರುವುದಿಲ್ಲ. ಅದೊಂದು ಮಾನಸಿಕ ಅವಸ್ಥೆ. ಮನಸ್ಸಿನ ಆ ಸ್ತರವೇ ನಿಜವಾದ ಬದುಕಾಗಿರುತ್ತದೆ.
ಆಗ... ಆಗಾಗ ಅರಿವಿಲ್ಲದೆ ಪರಸ್ಪರ ಬಿಟ್ಟಿರುತ್ತಿದ್ದೆವು. ಈಗ... ಒ0ದರೆಘಳಿಗೆ ಬಿಡಲಾಗುತ್ತಿಲ್ಲ! ಮುತ್ತೆ ಒಟ್ಟಿಗಿದ್ದದ್ದು ಆಗಲಾ...? ಈಗಲಾ...?
ಜೀವ, ಆತ್ಮಗಳನ್ನು ಮೇಳೈಸಿದ ಜೊತೆಗಾರನನ್ನು ಭೌತಿಕವಾಗಿ ಕಳೆದುಕೊಂಡು ಒಂಟಿಯಾಗಿರುವುದು ಮಾತ್ರ ಸತ್ಯವಾಗಿದೆ.
ಗಂಡನನ್ನು ಬಿಟ್ಟು ಬದುಕುವುದಕ್ಕೆ ಸಾಧ್ಯವೇ ಇರಲಿಲ್ಲ! ವಿಪರ್ಯಾಸವೆಂದರೆ, ಕೊನೆಗೆ ಗಂಡನೊ0ದಿಗೆ ಹೋಗಲಾಗಲಿಲ್ಲ!!
ಯಾಕೆ ನನ್ನನ್ನೂ ಕರೆತರಲಿಲ್ಲೆಂದು ಕರೆದೊಯ್ಯದ ಅವನನ್ನು ಕೇಳಲಿದ್ದೇನೆ.
ಮುಖಾಮುಖಿಗೆ ನನಗಾಗಿ ಅಲ್ಲೇ ಕಾದಿರುತ್ತಾನಾ...?!
ಬದುಕುವುದು ಇದೆಯೆಂದರೆ ಸಾಯುವುದೂ ಇದೆ.. ಎಲ್ಲವೂ ಕ್ಷಣಿಕವಿದೆಯೆಂದು ಗೊತ್ತಿದ್ದರೂ ಬದುಕಲೇಬೇಕೆನ್ನುವುದು ಹಠವೆ? ಅನಿವಾರ್ಯವೆ? ದುರಂತವೆ...?
ಬೇಡುವುದು ಬದುಕನ್ನೇ ಆದರೂ ಬದುಕುವುದು ಸಾವನ್ನೇ ಅಲ್ಲವೆ...?
...5ನೇ ಪುಟಕ್ಕೆ

-5-
ಬೆಳಕಿಗಾಗಿ ದೀಪ ಹಚ್ಚುತ್ತೇವೆ...
ಬೆಳಕಿನಲ್ಲಿ ಕುರೂಪಗಳನ್ನು ನೋಡಲಾಗದೆ ಕಣ್ಮುಚ್ಚಿಕೊಳ್ಳುತ್ತೇವೆ.
ಎಲ್ಲವೂ ಸ್ವಾರ್ಥಕಾಗಿಯೆ ಆದರೆ, ಪ್ರೀತಿಗಾಗಿ ಯಾವುದೂ ಆಗಿರುವುದಿಲ್ಲವೆ...?
ಎಲ್ಲ ಅಲೆಗಳೂ ದಂಡೆಯನ್ನು ಮುಟ್ಟಿಯೆ ಹೋಗುತ್ತವೆ. ಹಾಗೆ ದಂಡೆ ಮುಟ್ಟಿದ ಅಲೆ ಎಲ್ಲಿ ಹೋಯಿತೆಂದು ಕೇಳಿದರೆ ಏನು ಹೇಳುವುದು...?
ತವಕಿಸುವುದು ದಂಡೆಯನ್ನು ಮುಟ್ಟಲೋ? ದಂಡೆ ಮುಟ್ಟಿ ಅನಂತದಲ್ಲಿ ಲೀನವಾಗಲೋ...?
ಯಾವುದು ಉಳಿಯುತ್ತದೆ...?
ದಂಡೆ ಮುಟ್ಟಿ ಮೂಡಿಸಿದ ಗುರುತು ರೆಪ್ಪೆ ಪಿಳಿಕಿಸುವಷ್ಟರಲ್ಲಿ ಅಳಿಸಿಹೋಗಿರುತ್ತದೆ.
ಎಲ್ಲವೂ ಕ್ಷಣಿಕವಿದೆ.
ಮನುಷ್ಯನಿಗೆ ಬದುಕಿರುತ್ತದೆಂದು ಎಲ್ಲರೂ ಹೇಳುತ್ತಾರೆ..

ಬದುಕೆನ್ನುವುದೇ ಭ್ರಮೆಯೆಂದು ಬಲ್ಲವರು ಹೇಳುತ್ತಾರೆ.
ಹೇಳಲು ಏನಿದೆ? ಎಲ್ಲವೂ ಪೂರ್ವನಿಯೋಜಿತವಿದೆ!
-0-

(ದಿನಾ0ಕ 18-4-2004 ರ ಕರ್ಮವೀರ ವಾರ ಪತಿಕೆಯಲ್ಲಿ ಪ್ರಕಟವಾದ ಕತೆ)