Click here to Download MyLang App

ಹೆತ್ತವರು ಮತ್ತು ಭೂಮಿಯ ಆಯಸ್ಸು : ವಿರೇಶ್ ಹಿರೇಮಠ್ | ಕೌಟುಂಬಿಕ | ಕತೆಯ ಒಳನುಡಿ ಶೈಲಿ - ಶಿಷ್ಟಸ್ವರೂಪದ ಕನ್ನಡ |


"ಏನ್ ಸಾವಿತ್ರಮ್ಮ ಅರಾಮಿದ್ದೀಯ, ನಿನ್ ನೋಡಿ ಬಾಳ ದಿಸ ಆತು, ನಿನ್ ಮಗ-ಸೊಸೆ ಎಲ್ಲಾ ಅರಾಮಿದ್ದಾರಾ.."

"ಬಾ ಪಾರವ್ವ ಕೂತ್ಕೊ.... ಏನೋ ದೇವ್ರು ಇಟ್ಟಂಗಿದಿನಿ, ಮೈಯಲ್ಲಿ ಸಕ್ತಿ ಇಲ್ಲ, ದುಡಿಯಾಕಾಗಂಗಿಲ್ಲ. ಮಗ-ಸೊಸೆನಾ..... ಥೂ ಅವ್ರ್ ಹಾಳಾಗ್ ಹೋಗ್ಲಿ ಎರ್ಡೊತ್ತು ಊಟ ಹಾಕ್ಲಾರ್ದೇ ಮನೆಯಿಂದ ಹೋರಗಾಕ್ಬಿಟ್ರವ್ವ....ನನ್ ಗೋಳ್ ಯಾರಿಗೇಳ್ಲಿ...!!"

"ಹೇ... ಹೋಗ್ಲಿ ಬಿಡು ಮಾರಾಯ್ತಿ ಅದುಕ್ಯಾಕ ಅಂಗ್ ಲಟಿಗೆ ಮುರಿತಿ, ಅವ್ರವ್ರ್ ಕರ್ಮ ಅವ್ರ್ ಉಣ್ತರ....ಹೇಂಗೋ ದೇವ್ರಿಟ್ಟಂಗ್ ಇದ್ ಬಿಡು, ಹಂಗೆಲ್ಲಾ ಮಕ್ಳಿಗೆ ಶಪಿಸ್ಬಾರ್ದು....!!"

ಗೆಳೆಯರೇ...
ಮೇಲಿನ ಡೈಲಾಗ್ ಗಳು ಯಾವುದೋ ಡ್ರಾಮಾದ್ದೋ ಅಥವಾ ಧಾರಾವಾಹಿದೋ ಅಂದ್ಕೊಂಡ್ರೇನೋ, ಅಲ್ಲ....ಮೂರು ವರ್ಷಗಳ ಹಿಂದೆ ನಾನು ಬಳ್ಳಾರಿಯಿಂದ ನೆಲ್ಲೂರಿಗೆ ಬರುವಾಗ ಬಳ್ಳಾರಿ ಬಸ್ ಸ್ಟಾಂಡ್ ನ 'ಉರವಕೊಂಡ' ಬಸ್ ನಿಲ್ಲುವ ಜಾಗದಲ್ಲಿ ಇಬ್ಬರು ವಯಸ್ಸಾದ ತಾಯಂದಿರ ನಡುವಿನ ಯಥಾವತ್ತಾದ ಸಂಭಾಷಣೆ ಇದು....

ಸುಮ್ಮನೆ ಆ ತಾಯಿಯನ್ನ ಗಮನಿಸಿದೆ...
ಕೃಶವಾಗಿ ಬಾಗಿದ ದೇಹ
ಮಾಸಿದ ಹಳೆಯ ಸೀರೆ
ಸುಕ್ಕುಗಟ್ಟಿ ಜೋತುಬಿದ್ದ ಮುಖ
ಮೂಳೆಗಳಿಗಂಟಿದ ಚರ್ಮ
ನಡುಗುತ್ತಿದ್ದ ಕೈ-ಕಾಲುಗಳು
ನೋಡಿದರೆ 'ಕಾಯಕವೇ ಕೈಲಾಸ' ವೆಂಬಂತೆ ಬದುಕಿದ ಜೀವದಂತೆ ಕಾಣುತ್ತಿತ್ತು...
ಆದರೆ ಯಾರೇನೇ ಕೈ ಬಿಟ್ಟರೂ ಬದುಕೇ ಬದುಕುತ್ತೇನೆಂಬ ಛಲ, ಹಠ ಆಕೆಯ ಕಣ್ಣುಗಳಲಿತ್ತು...
ಮನಸ್ಸಿನ್ನೂ ಸದೃಡವಾದಂತಿತ್ತು. ಬದುಕಿನ ಎಲ್ಲಾ ಮಜಲುಗಳನ್ನ, ಸುಖ-ದುಖಃಗಳನ್ನ ಸಮನಾಗಿ ಅನುಭವಿಸಿದ ಆಕೆಯ ಮನಸ್ಸು ಈ ವಯಸ್ಸಲ್ಲಿ ಮಗ-ಸೊಸೆ ಕೈ ಬಿಟ್ಟಿದ್ದಕ್ಕೆ ಸಹಜವಾಗೆ ಆಕ್ರೊಶಗೊಂಡಿತ್ತು...

ಸುಮಾರು ಹೊತ್ತು ಆ ತಾಯಂದಿರು ಮಾತನಾಡಿಕೊಂಡು ಎದ್ದು ಹೊರಡುವ ವೇಳೆ ಅಚಾನಕ್ಕಾಗಿ ಆ ಕಡೆ ನೋಡಿದ ನನಗೆ ಬರಸಿಡಿಲು ಬಡದಂಗಾತು...! ಯಾಕಂದ್ರೆ ಮಗ-ಸೊಸೆ ಹೊರಗಾಕಿದ ಆ ತಾಯಿಗೆ ಒಂದು ಕಾಲಿಲ್ಲ...!! walking stick ನ ಸಹಾಯದಿಂದ ಕುಂಟುತ್ತಾ ಸಾಗುತ್ತಿದ್ದ ಆ ತಾಯಿಯನ್ನ ನೋಡಿ ಅವಕ್ಕಾದೆ...!!!

ಸ್ನೇಹಿತರೇ...
ಇತ್ತೀಚೆಗೆ ತಂದೆ-ತಾಯಿಯರನ್ನ ಕಡೆಗಣಿಸುವವರ ಸಂಖ್ಯೆ ಈ ನಾಗರೀಕ ಸಮಾಜದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ, ಅವರು ಮುಪ್ಪಿನ ಕಾಲಕ್ಕೆ ಅಲ್ಲಿ-ಇಲ್ಲಿ ತಿಂದು ಬದುಕಿ ಕೊನೆಗೊಂದಿನ ತುತ್ತು ಕೂಳಿಗಾಗಿ ಬೀದಿ-ಬೀದಿಯಲಿ ಬಿಕ್ಷೆ ಬೇಡಿ ಜೀವನ ಸಾಗಿಸುವುದನ್ನ ನೋಡಿದರೆ ಎಲ್ಲೋ ಒಂದು ಕಡೆ ನಮ್ಮ ಯುವ ಜನಾಂಗ ಹಾದಿ ತಪ್ಪುತ್ತಿದೆಯಾ...?? ಅಪ್ಪ-ಅಮ್ಮ ಅಂದ್ರೆ "Father's day" "Mother's day" special ಅಂದ್ಕೊಂಡ್ಬಿಟ್ಟಿದ್ದಾರಾ...?? ಗೊತ್ತಿಲ್ಲ..

ತಾಯಿಯ ಎದೆಹಾಲನ್ನ ಅಕೆಯ ಅನುಮತಿಯಿಲ್ಲದೇ/ಅನುಮತಿ ಬೇಕಿಲ್ಲದೇ ಎಲ್ಲವೂ ನಮಗೇನೋ/ನಮ್ಮದೇನೋ ಎಂಬಂತೆ ಕುಡಿದು ಅವಳ ಆರೈಕೆಯಲಿ ಬೆಳೆದು ಮುಂದೆ ದೊಡ್ಡವರಾದಾಗ ಅಕೆಯ "ಆ" ಋಣ ತೀರಿಸಲಿಕ್ಕಾದರೂ ಮುಪ್ಪಿನ ಕಾಲಕ್ಕೆ ಎರಡೊತ್ತು ಊಟ ಹಾಕಲಾರದ ದುಸ್ತಿತಿಗೆ ಬಂದು ತಲುಪಿದ್ದೇವಾ...!!!?? ಗೊತ್ತಿಲ್ಲ...
.........
.........
.........
ಎಲ್ಲರೂ ಒಂದು ಸಾರಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಗಂಭೀರ ಚಿಂತನೆ ಇದು...

"ಮುಪ್ಪಿನ ಕಾಲಕ್ಕೆ ಹೆತ್ತವರು ಮಕ್ಕಳಾಗಿ ಬಿಡುವುದು, ಮಕ್ಕಳು ತಂದೆ-ತಾಯಿಯರಾಗಿ ಅವರಿಬ್ಬರ ಸೇವೆ ಮಾಡುವುದು...ನಿಜಕ್ಕೂ ಇದೊಂದು ಅವೀಸ್ಮರಣೀಯ ಅನುಭೂತಿ...."

"ಅನುಭವಿಸಿಯೇ ಬಿಡಬೇಕೊಮ್ಮೆ ತಪ್ಪದೇ, ಏಕೆಂದರೆ ತಪ್ಪಿಸಿಕೊಂಡರೆ ಸಿಗುವುದಿಲ್ಲ ನೋಡಿ ಮತ್ತೇ ಇಂತಾ ಸದಾವಕಾಶ, ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವೇನೈತಿ!..."

ಮದುವೆಯಾಗಿ, ಮಕ್ಕಳಾದ ಮೇಲೆ ಹೆಂಡತಿಯ ಸೆರಗಿನಲ್ಲಿ ಸುಖ ಕಂಡುಕೊಂಡು ಅದರಲ್ಲೇ ಹುದುಗಿ ಹೋಗಿರುವವರಿಗೆ, ಚಿಕ್ಕವರಿದ್ದಾಗ ಬೆಚ್ಚಗಿಟ್ಟು ಪ್ರತಿದಿನವೂ ತನ್ನ ಕಣ್ ರೆಪ್ಪಿಯಲಿ ಮಾಂಸದ ಮುದ್ದೆಯಂತಿದ್ದ ಕೂಸನ್ನ ಸಾಕಿ ಸಲಹಿ‌ ದೊಡ್ಡವರನ್ನಾಗಿ ಮಾಡಿದ ಆ ಅಮ್ಮನ 'ಸೆರಗು' ಯಾಕೆ ನೆನೆಪಾಗುವುದಿಲ್ಲ...??

ನಮಗೆ ಜ್ವರ ಬಂದರೆ, ತನಗೇ ಬಂದಿದೆಯೇನೋ ಎಂಬಂತೆ...ಹಲುಬುತ್ತಾ ಜ್ವರ ಕಡಿಮೆಯಾಗುವರೆಗೂ ಊಟ ನಿದ್ದೆ ಬಿಟ್ಟು ಚಟಪಟಿಸಿದ್ದನ್ನ ಮರೆತಿದ್ದೇಗೆ ಮತ್ತು ಯಾಕೆ..??

ನಾವು ಮಳೆಯಲ್ಲಿ ತೊಯ್ದುಕೊಂಡು ಬಂದಾಗ, ಆಕೆ ನಮ್ಮನ್ನ ಬೈಯದೇ ಹುಸಿಮುನಿಸಿನಿಂದ ಮಳೆಯನ್ನೇ ಬೈದು ನಮ್ಮ ತೊಯ್ದ ತಲೆಯನ್ನ ಅಕ್ಕರೆಯಿಂದ ಒರೆಸಿದ ಅಮ್ಮನ ಆ 'ಸೆರಗು' ನೆನಪಾಗುವುದಿಲ್ಲ ಯಾಕೆ?? God knows...!!!

ಹೌದು...ಮುಪ್ಪಿನ ಕಾಲಕ್ಕೆ ಅವರೂ ಕೂಡ ಚಿಕ್ಕ ಮಕ್ಕಳಂತಾಗುತ್ತಾರೆ, ಹಠ ಹಿಡಿಯುತ್ತಾರೆ...ರಚ್ಚೆ ಹಿಡಿಯಲೂಬಹುದು....ಯಾಕೆ ನಾವು ಕೂಡ ಚಿಕ್ಕವರಿದ್ದಾಗ ಅದನ್ನೇ ತಾನೆ ಮಾಡಿದ್ದು, ಆಗ ಅದೆನ್ನೆಲ್ಲಾ ಅವರು ಸಹಿಸಿಕೊಂಡು, ಅದರ ಜತೆ ನಮ್ಮ ಭವಿಷ್ಯದ ಜವಾಬ್ದಾರಿಯನ್ನೂ ಕೂಡ ಹೊತ್ತಿರಲಿಲ್ಲವೇ...!! ಈಗ ಅವರ ಭವಿಷ್ಯದ ಚಿಂತೆ ಬೇಡ,... ಬದುಕಿರುವವರೆಗೂ ಅವರನ್ನ ಚೆನ್ನಾಗಿ ನೋಡಿಕೊಂಡರೆ ಸಾಕಲ್ಲವೆ...???

ಆ ಸಣ್ಣ ಜೀವಗಳ ಜೀವನವು ನೀರ ಮೇಲಿನ ಗುಳ್ಳೆಯಂತೆ, ಯಾವಾಗ 'ಫಟ್' ಅನ್ನುತ್ತವೋ ಯಾರೂ ಬಲ್ಲವರಿಲ್ಲ...
ತೀರಿಕೊಂಡ ಮೇಲೆ ಅವರು
ಓಡಾಡಿದ ಜಾಗ,
ಕೂತ ಸ್ಥಳ,
ಆಡಿದ ಮಾತುಗಳನ್ನ ನೆನಪಿಸಿಕೊಂಡು ನಾವು 'ಅನಾಥ ಪ್ರಜ್ಞೆ' ಅನುಭವಿಸುವುದಕ್ಕಿಂತಾ ಅವರು ಇರುವವರೆಗೆ ಚೆನ್ನಾಗಿ ನೋಡಿಕೊಂಡು ಅವರಿಗೆ 'ಅನಾಥ ಪ್ರಜ್ಞೆ' ಕಾಡದ ಹಾಗೆ ಮಾಡಿದರೆ ಸಾಕಲ್ಲವೇ, ಮತ್ತಿನ್ನೇನು..??

ನಾವು ಜಗತ್ತಿನ ಯಾವ ಮೂಲೆಯಲ್ಲಿದ್ದರೂ, ಹೆತ್ತವರ ಮುಪ್ಪಿನ ಕಾಲಕ್ಕೆ ಅವರ ಸೇವೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕೇ ಹೊರೆತು...ಹೀಗೆ ಅವರನ್ನ ಬೀದಿ ಪಾಲು ಮಾಡಿ ಹೆಂಡತಿ ಮಕ್ಕಳೊಂದಿಗೆ ಇದ್ದುಬಿಟ್ಟರೆ ಅವರ ಗತಿಯೇನೆಂಬುದುದನ್ನ ಒಂದು ಕ್ಷಣ ಯೋಚಿಸಬಾರದೇಕೆ...?? ಆ ಹಿರಿಯ ಜೀವಗಳು ನೊಂದು-ಬೆಂದು ಹಿಡಿ ಶಾಪ ಹಾಕುತ್ತಾ ಗೊತ್ತು ಗುರಿ ಇಲ್ಲದೇ ಬೀದಿ-ಬೀದಿ ಅಲೆಯುತ್ತಿದ್ದರೆ, ಅದನ್ನ ನೋಡಿಕೊಂಡು ಅದೇಗಯ್ಯಾ ನೆಮ್ಮದಿಯಿಂದ ಇರೋದಕ್ಕೆ ಸಾದ್ಯ...??

ಈಗಿನ ಮುಂದುವರೆದ ವಿಜ್ಞಾನ ಯುಗದಲ್ಲಿ ಇಡೀ ಭೂಮಂಡಲವನ್ನೇ ಸರ್ವನಾಶಮಾಡಿಬಿಡಬಲ್ಲ ಅಸ್ತ್ರಗಳು ನಮ್ಮಲ್ಲಿದ್ದರೂ......ಅವು ಭೂಮಿಯ ಮೇಲಿನ ಜೀವ ಸಂಕುಲವನಷ್ಟೇ ನಾಶ ಮಾಡಬಲ್ಲವೇ ಹೊರ್ತು ಈ ಭೂಮಿಯ ಆಯಸ್ಸನ್ನ ಎಂದಿಗೂ ಕಡಿಮೆ ಮಾಡಲಾರವು...!! ಇಂತಾ ಅದೆಷ್ಟೋ ಸರ್ವನಾಶಗಳನ್ನ ಈ ಭೂಮಿ ಕಂಡಿದೆ ಮತ್ತು ಅದರಿಂದಲೇ ಜೀವ ಸಂಕುಲದ ಉಗಮವಾಗಿದೆ...ಕೋಟ್ಯಾಂತರ ವರ್ಷಗಳ ಹಿಂದೆ ಹಳೆ ಜೀವಿಗಳ ನಾಶ ಹಾಗು ನವ ಜೀವಿಗಳ ಉಗಮ ಹಾಗೂ ಬೆಳವಣಿಗೆ ಆದದ್ದು ಇದೇ ರೀತಿಯಲ್ಲವೇ..

ಆದರೆ....ಯಾವತ್ತು ತಾಯಿಯ ನೋವನ್ನ ಲೆಕ್ಕಿಸದೇ ತನ್ನ ಉಳಿವಿಗಾಗಿ ಗರ್ಭಸೀಳಿಕೊಂಡು ಬಂದ ಮಕ್ಕಳು ಬದುಕಿದ್ದೂ..!! ಹೆತ್ತವರು ತುತ್ತು ಕೂಳಿಗಾಗಿ ಬಿಕ್ಷೆ ಬೇಡುವುದಕ್ಕೆ ಬೀದಿಗಿಳಿತ್ತಾರೋ.... ಅವತ್ತಿನಿಂದಲೇ ಈ ಭೂಮಿಯ ಆಯಸ್ಸು ಕಡಿಮೆಯಾಗತೊಡಗುತ್ತದೆ...!! ಮತ್ತು ಸರ್ವ ನಾಶದ ಕಡೆಗೆ ಹೆಜ್ಜೆ ಇಡತೊಡಗುತ್ತದೆ....!!!

ಹಾಗಾಗಬಾರದೆಂಬುದೇ ಈ ಲೇಖನದ ಆಶಯ...

ಒಂಟಿ ಕಾಲನ್ನ ಎಳೆದುಕೊಂಡು, ಪುಡಿ ಕಾಸಿಗಾಗಿ ಅವರಿವರಲ್ಲಿ ಕೈ ಚಾಚುತ್ತಾ ಹೊರಟ ಆ ತಾಯಿಯನ್ನ ಅಂದು ನೋಡಿದ ಮೇಲೆ ಇಂದು ಯಾಕೊ ನನಗೆ ನನ್ನ ತಾಯಿಯ ನೆನಪಾಗಿ ಕಣ್ಣಾಲಿಗಳು ತುಂಬಿಕೊಂಡವು...ಮತ್ತೆ ಅಲ್ಲಿಂದ ಆ ತಾಯಿ ಕುಂಟುತ್ತಾ ಎಲ್ಲಿ ಹೋದ್ಲೋ ಆಕೆಯ ಮುಂದಿನ ಭವಿಷ್ಯ ಏನೋ ಎಂತೋ... ಅಂತೂ ಸ್ವಲ್ಪ ಹೊತ್ತಿಗೆ ಕತ್ತಲಲ್ಲಿ ಮರೆಯಾಗಿ ಹೋದಳು. ಇಂತಾ ಅದೆಷ್ಟು ತಾಯಂದಿರುಗಳು ಹೀಗೆ ಬದುಕುತ್ತಿದ್ದಾರೋ ದೇವರಿಗೆ ಗೊತ್ತು...ಇದನೆಲ್ಲಾ ನೋಡಿದ ಮೇಲೆ ಮನಸ್ಸು ವ್ಯಾಕುಲಗೊಂಡು ನನ್ನೆಲ್ಲಾ ಅನಿಸಿಕೆ/ಅಭಿಪ್ರಾಯಗಳನ್ನ ಗೆಳೆಯರಾದ ನಿಮ್ಮ ಮುಂದೆ ಹೇಳಿಕೊಳ್ಳುವುದಕ್ಕೋಸ್ಕರವೇ ಇಷ್ಟೆಲ್ಲಾ ಬರೀಬೇಕಾಯ್ತು...

ಇಲ್ಲಿ ಯಾರ ಮನಸ್ಸನ್ನೂ ನೋಯಿಸುವ / ಛೇಡಿಸುವ ಉದ್ದೇಶವಂತೂ ಖಂಡಿತಾ ಇಲ್ಲ ನನ್ನ ಈ ಚಿಂತನೆಯಲಿ...

ಹೆತ್ತವರನ್ನ ಕಡೆಗಣಿಸಿ, ಹೇಳ ಹೆಸರಿಲ್ಲದಂತೆ ಸರ್ವನಾಶ ಕಂಡ ಎಷ್ಟೋ ಉದಾಹರಣೆಗಳಿವೆ ನಮ್ಮೀ ಇತಿಹಾಸದಲಿ!!.

ಇನ್ಮುಂದೆ ಹೀಗಾಗದಿರಲಿ...

✍️......ವೀರೇಶ್ ನಾಗಲಾಪುರ