Click here to Download MyLang App

ಹೇಳದೆ ಹೋದೆಯಾ ಅಮ್ಮಾ : ರಾಜೇಂದ್ರ ಕುಮಾರ್ ಗುಬ್ಬಿ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟಸ್ವರೂಪದ ಕನ್ನಡ

ಹೇಳದೆ ಹೋದೆಯಾ.............ಅಮ್ಮಾ

 

         ಹೌದು, ಅದೊಂದು ದಿನ ನಮ್ಮನ್ನೆಲ್ಲಾ ಬಿಟ್ಟು ಯಾರಿಗೂ ಹೇಳದೇ ಹೋದರು ನಮ್ಮ ಅಮ್ಮ.

 ಆ ದಿನ ತಾ. 14-04-2020ರ ಮಂಗಳವಾರ ಎಂದಿನಂತೆಯೇ ಇದ್ದರು ಅಮ್ಮ.

 ಅಂದು ಯಾರಿಗೂ ಹೇಳದೇ ಮತ್ತೆ ಹಿಂತಿರುಗಿ ಬಾರದಂತ ಲೋಕಕ್ಕೆ ಹೋಗಿಬಿಡುವೆನೆಂದು ಸ್ವತಃ ಅಮ್ಮನಿಗೇ ತಿಳಿದಿರಲಿಲ್ಲ,ಅಷ್ಟೊಂದು ಲವಲವಿಕೆ ಯಿಂದ, ಆರೋಗ್ಯವಾಗಿದ್ದರು ಅಮ್ಮ.

ಆಗ ಇಡೀ ದೇಶವೇ ಮೊದಲ ಹಂತದ ಕೊರೋನ ಮಹಾಮಾರಿಯಿಂದ,  ಲಾಕ್ ಡೌನ್ ನಿಂದ ತತ್ತರಿಸಿ ಹೋಗಿದ್ದ ಸಮಯ, ಯಾರಿಗೂ ಇದರ ಬಗ್ಗೆ ಅರಿವೇ ಇರಲಿಲ್ಲ. ಇಂಥದೊಂದು ರೋಗದಿಂದ ಇಡೀ ದೇಶವೇ ಸ್ತಬ್ಧ ವಾಗಿತ್ತು.ಯಾರೂ ಮನೆಯಿಂದ ಹೊರಗೆ ಬರುವಂತಿರಲಿಲ್ಲ,ಬಂದವರೂ ಪೊಲೀಸರ ಅತಿಥಿ ಗಳಾಗುತ್ತಿದ್ದರು, ಆಗ ನಾವಿದ್ದ ಬೆಂಗಳೂರಿನ ಬಡಾವಣೆಯ ನಮ್ಮ ಮನೆಯ  ರಸ್ತೆಯ  ಅಕ್ಕ ಪಕ್ಕದ ಎರಡೂ ರಸ್ತೆಗಳಲ್ಲಿ ಯಾರೋ ವಿದೇಶದಿಂದ ಬಂದವರು ಕೊರೋನದಿಂದ ಸಾವನ್ನಪ್ಪಿದ್ದಾರೆ ಎಂದು ಮೂರೂ ರಸ್ತೆಗಳನ್ನು ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ದಿಗ್ಬಂಧನ ಮಾಡಿದ್ದರು. ಜೊತೆಗೆ

 

ಒಂದಿಷ್ಟು ಪೊಲೀಸರು ಕಾವಲಿಗೆ.

 

         ನಾವುಗಳೆಲ್ಲರೂ ಯಾರೂ ಹೊರಗೆ ಎಲ್ಲೂ ಹೋಗುವಂತಿಲ್ಲ, ಹೊರಗಿನವರು ಯಾರೂ ಬರುವಂತಿರಲಿಲ್ಲ. ನಾವೆಲ್ಲಾ ಮನೆಯಲ್ಲೇ ಹಗಲು ರಾತ್ರಿ ಟಿ.ವಿ .,ಮೊಬೈಲ್ ನೋಡುವುದು ಗೊತ್ತಿರುವವರೊಂದಿಗೆ ಮೊಬೈಲ್ನಲ್ಲಿ ಮಾತನಾಡುವುದು, ಮೂರೊತ್ತೂ ಊಟ, ಇವೇ ದೈನಂದಿನ ದಿನಚರಿಯಾಗಿತ್ತು.  ಅಂಗಡಿಗಳು, ಹೋಟೆಲ್ ಗಳು, ಶಾಪಿಂಗ್ ಮಾಲ್ ಗಳು, ಸಿನೇಮಾ ಮಂದಿರಗಳು, ಶಾಲಾ-ಕಾಲೇಜುಗಳಾವುವೂ ಇಲ್ಲ.

ಅದು ಎರಡಂತಸ್ತಿನ ಮನೆ,  ಕೆಳ ಅಂತಸ್ತಿನಲ್ಲಿ ಅಮ್ಮ, ಅಪ್ಪ, ನನ್ನ ತಮ್ಮ, ಅವನ ಸಂಸಾರ ಇದ್ದರು. ಮೊದಲ ಅಂತಸ್ತಿನಲ್ಲಿ ನಾನು ನಮ್ಮ ಸಂಸಾರ ಇದ್ದಿತು.

 ನನಗೆ ಆಗ 58 ವರುಷ , ಅಮ್ಮನಿಗೆ 79 ವರುಷಗಳು,

ನಾನು ಮದುವೆಯಾಗುವವರೆಗೂ ಅಮ್ಮನ ಮುದ್ದಿನ ಮಗಳಾಗಿ ಅವರ ಮಡಿಲಲ್ಲಿ ಬೆಳೆದವಳು , ನಾನು ಶಾಲೆ, ಕಾಲೇಜು, ನಂತರ ಸರ್ಕಾರಿ  ಕೆಲಸ ಮುಗಿಸಿ ದಣಿದು ಮನೆಗೆ ಬರುವಷ್ಟರಲ್ಲಿ ಅಮ್ಮ ನನಗಾಗಿ ಕಾಫಿ, ತಿಂಡಿ ಮಾಡಿಟ್ಟು ನನಗಾಗಿ ಕಾಯುತ್ತಿದ್ದರು. ಆಗ ಕೆಳಗಿನ ಮನೆಯಲ್ಲೇ ಇದ್ದೆವು, ನಂತರ ಮೂವತ್ನಾಲ್ಕು ವರುಷಗಳ ಹಿಂದೆ ನಾನು

 

ಮದುವೆಯಾದ ದಿನದಿಂದ ಅದೇ ಮನೆಯ ಮೊದಲಿನ ಅಂತಸ್ತಿನಲ್ಲಿ ಮನೆ ಮಾಡಿದೆವು. ಕೆಳಗಿನ ಅಡುಗೆ ಮನೆ ಪಕ್ಕ ಎರಡೂ ಮನೆಗಳಿಗೆ ಗಾಳಿ ಬೆಳಕು ಬರಲೆಂದು ಸ್ವಲ್ಪ ಜಾಗ ಬಿಟ್ಟಿದ್ದೆವು ಅಲ್ಲಿಂದಲೇ ಅಮ್ಮ ನನ್ನನ್ನು ಪ್ರತಿದಿನ, ದಿನಕ್ಕೆ ಏನಿಲ್ಲವೆಂದರೂ ನಾಲ್ಕೈದು ಬಾರಿ, ಅದೂ ಒಮ್ಮೆ ಕೂಗಿದರೆ ಮೂರು, ನಾಲ್ಕು ಸಾರಿ ನನ್ನ ಹೆಸರು ಹಿಡಿದು ಸರಳಾ ಸರಳಾ ಎಂದು ನನ್ನನ್ನು ಕೂಗುತ್ತಿದ್ದರು. ಇದು ಸುಮಾರು ಮುವತ್ನಾಲ್ಕು ವರುಷಗಳಿಂದ ಅಮ್ಮ ನನ್ನು ಕರೆಯುವುದು ರೂಢಿಯಾಯಿತು.

 

      ಕೆಳಗಿನ ಮನೆಗೆ ಯಾರಾದರೂ ನೆಂಟರು, ಸಂಬಂಧಿಕರು ಬಂದರೆ, ಅಥವಾ ಕೆಳಗಿನ ಮನೆಯಲ್ಲೇನಾದರೂ ವಿಶೇಷ ಅಡುಗೆ, ತಿಂಡಿ ಮಾಡಿದರೆ ಕೊಡಲು ಅಥವಾ ನಾನೇನಾದರೂ ವಸ್ತುಗಳನ್ನು ಮೇಲಿಂದ ತರಲು ಈ ರೀತಿ‌ ಸರಳಾ ಸರಳಾ ಎಂದು ಕೂಗುತ್ತಿದ್ದರು. ಇದೊಂಥರಾ ನಮ್ಮಿಬ್ಬರಿಗೂ ಇಂಟರ್ನಲ್ ಫೋನ್ ಮಾದರಿ ಇತ್ತು. ಒಮ್ಮೊಮ್ಮೆ ಅಮ್ಮ ಊರಲ್ಲಿ ಇಲ್ಲದ ಸಮಯದಲ್ಲಿ ಅಮ್ಮ ಕೂಗಿದಂತಾಗಿ ಆ ಬಂದೆ ಎಂದು ಹಲವುಬಾರಿ ಕೂಗಿಕೊಂಡು ಬಂದ  ಉದಾಹರಣೆಗಳಿವೆ.  ಕೆಲವು ಬಾರಿಯಂತೂ ಅಮ್ಮ ಕೂಗದಿದ್ದರೂ ನಾನೇ

 

ಕೆಳಗಿಳಿದು  ಹೋಗಿ ಅಮ್ಮಾ ಕೂಗಿದೆಯಾ ಎಂದು ಕೇಳಿದ್ದುಂಟು .

 

         ಹೀಗಿರುವಾಗ ಅಂದು ರಾತ್ರಿ 7-30ರ ಹೊತ್ತಿಗೆ ಅಮ್ಮ ಎಂದಿನಂತೆಯೇ ತಿಂಡಿ ತಯಾರು ಮಾಡಿದ್ದಾರೆ ಜೊತೆಗೆ ಪಲ್ಯ ಮಾಡಿ ನನ್ನನ್ನು ಕೆಳಗಿನಿಂದಲೇ ಸರಳಾ ಸರಳಾ ಸರಳಾ ಎಂದು ಕರೆದರು. ನಾನು ಹೋಗಿ ಪಲ್ಯ ತೆಗೆದುಕೊಂಡು ಕೆಲವು ವಸ್ತುಗಳನ್ನು ಕೊಟ್ಟು ಮೇಲೆ ಬಂದು ನಾವುಗಳೂ ತಿಂಡಿ ತಿಂದೆವು. ಕೆಳಗೆ ಸುಮಾರು ರಾತ್ರಿ 8-30ರ ಸಮಯ ಅಂದೂ ಕೂಡಾ ಎಲ್ಲರೂ ಕುಳಿತು ತಿಂಡಿ ತಿಂದಿದ್ದಾರೆ.

 

       ತಿಂಡಿ ತಿಂದ ನಂತರ ತಂದೆಯವರೊಡನೆ ಪ್ರತಿದಿನ ರಾತ್ರಿ 10-30 ರವರೆಗೂ ಟಿ.ವಿ.ಸೀರಿಯಲ್ ನೋಡಿ ಮಲಗುವುದು ಇವರ ದೈನಂದಿನ ದಿನಚರಿಯಾಗಿತ್ತು. ಅಂದು ಏಕೋ ಬೆನ್ನು ನೋಯುತ್ತಿದೆ ನಾನು ಮಲಗುವ ಕೋಣೆಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುವೆ ಎಂದು ಹೇಳಿ ಕೋಣೆಗೆ ಹೋಗಿದ್ದಾರೆ. ಅಂದು ಅಮ್ಮನಿಗೇ ತಿಳಿದಿರಲಿಲ್ಲ ಇದೇ ಕೊನೆಯ ಬಾರಿ , ಇನ್ನೆಂದೂ ಈ ಕೋಣೆಯಿಂದ ಹೊರಗೆ ಬರಲಾರೆ ಎಂದು.

 

     ತಂದೆಯವರೂ ಕೆಲ ಕಾಲ  ಟಿ.ವಿ. ನೋಡುತ್ತಾ ತಮ್ಮ ದೈನಂದಿನ ಕಛೇರಿ ಕೆಲಸಗಳಕಡೆ ಗಮನ ಕೊಡುತ್ತಾ ಅಮ್ಮನ ಕಡೆ ನಿಗಾ ಇಡುವುದು ಮರೆತೇಬಿಟ್ಟರು.

ರಾತ್ರಿ ಹೊರಗೆ ಎಲ್ಲೆಲ್ಲೂ ನೀರವ ಮೌನ, ಆಗ ಸಮಯ 10-30 ಆಗ ತಂದೆಯವರೂ ಮಲಗಲು ಕೋಣೆಗೆ ಹೋಗಿ ಅಮ್ಮನನ್ನು ಆರೋಗ್ಯ ಹೇಗಿದೆಯೆಂದು ವಿಚಾರಿಸಲು ಎಬ್ಬಿಸಲು ಹೋದರೆ ಎಚ್ಚರವಾಗದಿದ್ದಾಗ ಅವರನ್ನು ತಟ್ಟಿ ಅಲುಗಾಡಿಸಿದ್ದಾರೆ, ಇದ್ದಕ್ಕಿದ್ದಂತೆ ಭಯಗೊಂಡು ಕಿರುಚಿಕೊಂಡಿದ್ದಾರೆ.ಇವರ ಕಿರುಚಾಟ ಕೇಳಿ ಕೆಳಗಿನ ಮತ್ತೊಂದು ಕೋಣೆಯಲ್ಲಿದ್ದ ತಮ್ಮನ ಸಂಸಾರ, ಮೇಲಿದ್ದ ನಾವೆಲ್ಲಾ ಧಾವಿಸಿ ಬಂದು  ಕೇಳಿದರೆ  , ತಂದೆಯವರೂ ಜ್ಞಾನವಿಲ್ಲದೇ ಕುಸಿದುಬಿದ್ದಿದ್ದಾರೆ ಅವರಿಗೆ ನೀರು ಕುಡಿಸಿ ಏನಾಯಿತೆಂದು ನೋಡುವಷ್ಟರಲ್ಲಿ ಪಕ್ಕದಲ್ಲಿ ಮಲಗಿರುವ ಅಮ್ಮ ಉಸಿರಾಡುತ್ತಿಲ್ಲ, ತಡಮಾಡದೆ ಕಾರಿನಲ್ಲಿ ಅಮ್ಮನವರನ್ನು ಕುಳ್ಳಿರಿಸಿ ಕೊಂಡು ನಮ್ಮ ಮನೆ ಪಕ್ಕದ  ರಸ್ತೆಯಲ್ಲಿದ್ದ ನಮ್ಮ ಕುಟುಂಬ ವೈದ್ಯರ ಬಳಿ ಹೋದೆವು, ಅವರು ಪರೀಕ್ಷಿಸುತ್ತಿದ್ದರೆ ನಾವುಗಳು ದುಃಖ ಬರಿತ ಕಣ್ಣುಗಳಿಂದ ಏನಾದರೊಂದು ಒಳ್ಳೆಯ ಸಮಾಚಾರ ಹೇಳುವರಾ ಎಂದು , ಆದರೆ ಪರೀಕ್ಷಿಸಿದ

 

ವೈದ್ಯರು ಹೇಳಿದರು ಇವರ ಪ್ರಾಣ ಹೋಗಿ ತುಂಬಾ ಸಮಯವಾಗಿದೆ. ಅವರು ಬೆನ್ನು ನೋಯುತ್ತಿದೆ ಎಂದು ಹೇಳಿದಾಗಲೇ ಬಂದಿದ್ದರೆ ಉಳಿಸುವ ಪ್ರಯತ್ನ ಮಾಡಬಹುದಿತ್ತು.ಎಂದು ಹೇಳಿದರು ನಮಗೆಲ್ಲಾ ಹೃದಯ ಸ್ಥಂಭನವಾದಂತಾಗಿ ಅಮ್ಮನ ನೆನೆದು ಎಲ್ಲರೂ ಗಳಗಳನೆ ಅಳತೊಡಗಿದೆವು.

 

      ತಂದೆಯವರೋ ನಾನು ಆಕೆಯನ್ನು ಬೆನ್ನುನೋವು ಎಂದಾಗಲೇ ಕರೆದುಕೊಂಡು ಬಂದಿದ್ದರೆ ಉಳಿಯುತ್ತಿದ್ದರೇನೋ ನಾನೇ ತಪ್ಪು ಮಾಡಿದೆ ಎಂಬ ಅಪರಾಧಿ ಮನೋಭಾವದಿಂದ ತಲೆತಗ್ಗಿಸಿ ಕುಸಿದು ಕುಳಿತರು ಅವರನ್ನು ನಾವೆಲ್ಲಾ ಸಮಾಧಾನ ಮಾಡಿ, ಅಲ್ಲಿಂದ ಅಮ್ಮನ ಶವವನ್ನು ತಂದು ಕೆಳ ಮನೆಯ ವರಾಂಡದಲ್ಲಿ ಇರಿಸಿದೆವು. ಅಮ್ಮನ ಆ ಸುಂದರ ಮುಖ ನೋಡಿ, ನೋಡಿ ಎಲ್ಲರೂ ಜೋರಾಗಿ ಅಳತೊಡಗಿದೆವು ಯಾರಿಗೆ ಯಾರೂ ಸಮಾಧಾನ ಮಾಡುವ ಸ್ಥಿತಿಯಲ್ಲಿ ಇಲ್ಲ, ಅಕ್ಕ ಪಕ್ಕದ ಮನೆಯವರೂ ಬಂದು ಯಾರನ್ನು ಯಾರೂ ಮುಟ್ಟದ ಸಂದರ್ಭ, ಆಗ ಏನು ಮುಟ್ಟಿದರೂ ಸ್ಯಾನಿಟೈಸರ್ ಬಳಸಬೇಕಿತ್ತು, ಜೊತೆಗೆ ಮುಖಕ್ಕೆ ಮಾಸ್ಕ್ ಧರಿಸಬೇಕಿತ್ತು ಕಡ್ಡಾಯವಾಗಿ. ಆದರೂ ಕೆಲವರು ನಮ್ಮ ಅಕ್ಕ ಪಕ್ಕದ ಹಿತೈಷಿಗಳು ನಮ್ಮನ್ನೆಲ್ಲಾ ಸಂತೈಸಲು ಬಂದರು, ಪೊಲೀಸರೂ ಬಂದು ಬೇಗ

 

ಬೇಗ ಅಂತ್ಯಸಂಸ್ಕಾರಗಳನ್ನು ಮಾಡಿ ಮುಗಿಸಬೇಕು, ಕೆಲವೇ ಮಂದಿ ಭಾಗವಹಿಸಬೇಕು, ನಾಳೆ ಮದ್ಯಾಹ್ನ ದೊಳಗೆ ಎಲ್ಲಾ ಮಾಡಿ ಮುಗಿಸಬೇಕು ಎಂದು ಕಟ್ಟಪ್ಪಣೆ ಮಾಡಿದರು.

 

      ಆಗ ಶವಸಂಸ್ಕಾರ ಮಾಡಲು, ಶವ ಸುಡಲು ಸ್ಮಶಾನದಲ್ಲಿ ತುಂಬಾ ಕ್ಯೂ , ಆಗ ಸಾವಿನ ಪ್ರಮಾಣ ತುಂಬಾ ಜಾಸ್ತಿ ಬೇರೆ,

ಸರಿ ನಾವೆಲ್ಲಾ ಎಷ್ಟು ಹೊತ್ತು ಅಳುತ್ತಾ ಕುಳಿತರೂ ಅಮ್ಮ ಹಿಂತಿರುಗಿ ಬರಲಾರಳು ಅಂದು ನಮಗೆ ನಾವೇ ಸಮಾಧಾನ ಪಟ್ಟುಕೊಂಡು ಮುಂದಿನ ಕಾರ್ಯಕ್ಕೆ ತೊಡಗಿದೆವು ಎಲ್ಲಾ ಸಂಬಂಧಿಕರಿಗೆ, ಆತ್ಮೀಯರಿಗೆ ಫೋನ್ ಮಾಡಿ ತಿಳಿಸಿದೆವು ದೂರದಿಂದ ಯಾರೂ ಬರುವಂತಿರಲಿಲ್ಲ, ಹೆಚ್ಚು ಅತ್ತಿರದ ಸಂಬಂಧಿಕರೂ ಬರಲಿಲ್ಲ, ಯಾವುದೇ ಖಾಸಗಿ, ಸರ್ಕಾರೀ ವಾಹನಗಳು ಓಡಾಡುವಂತಿರಲಿಲ್ಲ, ಕೇವಲ ಐದಾರು ಕಿ.ಮೀ. ದೂರದವರು ಮಾತ್ರ, ಅದೂ ಯಾರು ಸಾವನ್ನಪ್ಪಿದ್ದಾರೆ ಅವರ ಫೋಟೊ, ಜೊತೆಗೆ ವೈದ್ಯರ ಸರ್ಟಿಫಿಕೇಟ್ ತೋರಿಸಬೇಕಿತ್ತು.

 

     ಎಲ್ಲರೂ ಒಂದೊಂದು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನನಗೂ  ಅಮ್ಮನು

 

ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದು ನೆನೆದು ತುಂಬಾ ಅಳು ಬಂತು, ಅಮ್ಮನ ಜೊತೆಗಿನ ಒಡನಾಟ ಹಳೆಯ ನೆನಪುಗಳೆಲ್ಲಾ ಒಂದರಹಿಂದೆ ಒಂದರಂತೆ ಮನದಲ್ಲಿ ಬಂದವು, ಪ್ರತಿಯೊಂದಕ್ಕೂ ಅಳುವುದು ನನಗೆ ನಾನೇ ಸಮಾಧಾನಪಟ್ಟುಕೊಳ್ಳುವುದು ಹೀಗೇ ಮಾಡುತ್ತಿದ್ದೆ

ಕೆಲಸಮಯ ನಿದ್ರಿಸಿ ವಿಶ್ರಾಂತಿ ಪಡೆಯೋಣವೆಂದು ಕಣ್ಣು ಮುಚ್ಚಿದರೆ, ಕುಳಿತರೆ, ನಿಂತರೆ ಅಮ್ಮನೇ ಕಣ್ಣು ಮುಂದೆ ಬಂದು ಎಚ್ಚರಗೊಳ್ಳುತ್ತಿದ್ದೆ ಆದ್ದರಿಂದ ಹಾಗೆಯೇ ಕೆಲಕಾಲ ಕುಳಿತು ವಿಶ್ರಮಿಸೋಣವೆಂದು ಮೊದಲ ಅಂತಸ್ತಿನ ನನ್ನ ಮಲಗುವ ಕೋಣೆಗೆ ಹೋಗಿ ಹಾಗೇ ಗೋಡೆಗೆ ಒರಗಿ ಕುಳಿತೆ, ಅದಾಗಲೋ ನಿದ್ರೆಗೆ ಜಾರಿ ಚೆನ್ನಾಗಿ ನಿದ್ರಿಸುವಾಗ ಇದ್ದಕ್ಕಿದ್ದಂತೆ ಅಮ್ಮಾ ಕೂಗಿದೆಯಾ ಎಂದು ಅಮ್ಮನನ್ನು ಕೂಗಿಕೊಳ್ಳುತ್ತಾ ಎಚ್ಚರಗೊಂಡೆ ಅದೇ ಸಮಯದಲ್ಲಿ ನನ್ನ ಮಗ ಮೇಲಿನ ರೂಂನಲ್ಲಿ ಬಂದಿದ್ದ ನನ್ನ ಈ ಕೂಗು ಕೇಳಿ ಅವನಿಗೆ ಭಯವಾಗಿ ಅಮ್ಮಾ ಏನಾಯಿತೆಂದು ಕೇಳಿ ಕುಡಿಯಲು ಸ್ವಲ್ಪ ನೀರು ಕೊಟ್ಟ, ನಾನು ಎಚ್ಚರಗೊಂಡು ನೋಡಿದರೆ ಮೇಲೆ ಫ್ಯಾನು ತಿರುಗುತ್ತಿದೆ ಆದರೆ ನಾನು ಮಾತ್ರ  ತುಂಬಾ ಬೆವರಿರುವೆ, ನನ್ನನ್ನು ಅಮ್ಮ ಕೆಳಗಿನಿಂದ ಸರಳಾ ಸರಳಾ ಎಂದು ಕೂಗಿದಂತಾಗಿ ಎಚ್ಚರಗೊಂಡಿದ್ದೆ .

 

      ಇಲ್ಲ ಅಮ್ಮ ಇನ್ನೆಂದೂ ಈ ರೀತಿ ಕೂಗಲಾರಳು ಇದೆಲ್ಲಾ ನನ್ನ ಭ್ರಮೆ ಅಂದುಕೊಂಡು ನನಗೆ ನಾನೇ ಸಮಾಧಾನ ಪಟ್ಟುಕೊಂಡು ಕೆಳಗಿಳಿದು ಬಂದರೆ ಅಮ್ಮ ಅದೇ ನಗುಮೊಗದಿಂದ ಮಲಗಿದ್ದಾಳೆ ಸುತ್ತಲು ಹಲವಾರು ಜನ ಕುಳಿತಿದ್ದಾರೆ, ನಾನೂ ಹೋಗಿ ಅಮ್ಮನ ಪಕ್ಕ ಕುಳಿತು ಅಮ್ಮನ ಮುಖ, ತಲೆ ನೇವರಿಸುತ್ತಾ ಅವಳ ಒಂದೊಂದು ನೆನಪುಗಳನ್ನು ಮನದಲ್ಲೇ ನೆನೆಯುತ್ತಾ ಕಣ್ಣೀರಾಕುತ್ತಾ ಕುಳಿತೆ. ಈಗಲೂ ಒಮ್ಮೊಮ್ಮೆ ಅಮ್ಮ ನನ್ನನು ಸರಳಾ ಸರಳಾ ಎಂದು ಕೂಗಿದಂತೆ ಆಗಾಗ ಎಚ್ಚರಗೊಳ್ಳುವೆ.

ಇನ್ನು ಅಮ್ಮ ನೆನಪು ಮಾತ್ರ.

 

             -ರಾಜೇಂದ್ರ ಕುಮಾರ್ ಗುಬ್ಬಿ

            ಕನಸುಗಳ ಕಥೆಗಾರ