Click here to Download MyLang App

ದಡೂತಿ ಕೋಳಿ ಬಾಡಿನೆಸರು : ಗಿರೀಶ್ ಕುಮಾರ್ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಮೈಸೂರು-ಮಂಡ್ಯ ಶೈಲಿಯ ಕನ್ನಡ | ಯಾವ ದನಿಯಲ್ಲಿ ಆಡಿಯೋ ಕತೆಯಾಗಬೇಕು ಅನ್ನುವ ಕುರಿತು ಲೇಖಕರ ಆಯ್ಕೆ: ಗಂಡು ಧ್ವನಿ

ಸೊಳ್ಳೆ ಕಚ್ಚಿದ ಕಡೆಯಲ್ಲೆಲ್ಲಾ ಕೆರೆದುಕೊಳ್ಳುತ್ತಾ ನಾನು ಎದ್ದು ಕುಳಿತಾಗ ಅವಾಗ ತಾನೆ‌ ಕುರಿ ಮೇಯಿಸಿಕೊಂಡು ಮನೆಗೆ ಬಂದಿದ್ದ ನಮ್ಮಜ್ಜಿ ಅಡುಗೆ ಮನೆಯಲ್ಲಿ ದಡ ಬಡ ಸದ್ದು ಮಾಡುತ್ತಾ ಕಾಫಿ ಕಾಯಿಸುತ್ತಿದ್ದಾರೆಂಬುದು ಅಡುಗೆ ಮನೆಯಿಂದ ಬರುತ್ತಿದ್ದ ಘಮ ಘಮ ವಾಸನೆಯಿಂದಲೇ ತಿಳಿಯಿತು. ಮಧ್ಯಾಹ್ನ ನಮ್ಮಜ್ಜಿ ಮಾಡಿ ಹಾಕಿದ್ದ ಕೋಳಿ ಸಾರು ರಾಗಿ ಮುದ್ದೆ ತಿಂದು ಒಳ್ಳೆ‌ ನಿದ್ರೆ ಹತ್ತಿತ್ತು. ಸಮಯ ಹೋಗಿದ್ದೆ ನನಗೆ ತಿಳಿಯಲಿಲ್ಲ. ನಾನು ಎದ್ದು ನೋಡಿದಾಗ ಸಮಯ ಸುಮಾರು ಸಂಜೆ ನಾಲ್ಕು ಗಂಟೆಯಾಗಿತ್ತು. ನಾನು ಮಾರನೆ ದಿನ ಆಫೀಸಿಗೆ ಹೋಗಬೇಕಾಗಿದ್ದರಿಂದ ಸಂಜೆ ಬೆಂಗಳೂರಿಗೆ ಹೊರಡುತ್ತೇನೆಂದು ಅಜ್ಜಿ ತಾತನಿಗೆ ಮೊದಲೇ ತಿಳಿಸಿದ್ದೆ. ಅವರು ‘ಹುಣ್ಣಿಮೆ ಕಳಿದಿಲ್ಲ ಸಂದೆ ಹೊತ್ತಲ್ಲಿ ಯಾಕೆ ಹೋಗ್ತಿಯಾ? ಹೊತ್ತಾರೆನೆ ಎದ್ದು ಹೋಗುವಂತೆ’ ಅಂತ ಹೇಳಿದರು ಆದರೆ ನಾನು ಕೇಳಲಿಲ್ಲ. ಸಂಜೆನೆ ಹೋಗುತ್ತೇನೆ ಸ್ವಲ್ಪ ಕೆಲಸವಿದೆ ಅಂತ ಹೇಳಿ ಅವರನ್ನ ಸುಮ್ಮನಾಗಿಸಿದ್ದೆ. ಅದರಂತೆ ಎದ್ದು ರೆಡಿಯಾಗಿ ಸ್ವಲ್ಪ ಕಾಫಿ ಹೀರಿಕೊಂಡು ನಮ್ಮ ತಾತ ಮೂಟೆಯಲ್ಲಿ ಕಟ್ಟಿ ಇಟ್ಟಿದ್ದ ಒಂದಷ್ಟು ತೆಂಗಿನಕಾಯಿಗಳನ್ನ ಸ್ಕೂಟರಿಗೆ ಹಾಕಿಕೊಂಡು ಬೆಂಗಳೂರಿನ ಕಡೆಗೆ ಹೊರಡಲು ಅಣಿಯಾದೆ ಅಷ್ಟರಲ್ಲಿ ಎಲ್ಲೊ ಹೊರಗೆ ಹೊಗಿದ್ದ ನಮ್ಮ ತಾತ ಬಂದರು ‘ಎನಯ್ಯ ಮದ್ವೆ ವಿಷ್ಯ ಏನ್ ಮಾಡ್ದೆ?’ ಎಂದು ನಗು ನಗುತಾ ಕೇಳಿದರು. ನಾನು ತಮಾಷೆಗೆ ‘ಹು ಚೆನ್ನಾಗ್ ಯೋಚ್ನೆ‌ ಮಾಡಿದೀನಿ. ಇನ್ನೊಂದ್ ಸಲ ಊರಿಗ್ ಬಂದಾಗ ಹೆಂಡ್ರು ಜೊತೆನೆ ಬರ್ತಿನಿ’ ಎಂದು ಹೇಳಿ ಅಲ್ಲಿಂದ ಹೊರಟೆ.

ಅಜ್ಜಿ ಮನೆಯಿಂದ ಹೊರಟು ಸ್ವಲ್ಪ ದೂರ ಬರುತ್ತಿದ್ದಾಗೆ ಪಕ್ಕದ ಮಾವಿನ ತೋಪಿನ ಕಡೆಯಿಂದ ಒಂದೆರಡು ನವಿಲುಗಳು ಕೇಕೆ ಹಾಕುತ್ತಿದ್ದದ್ದು ಕೇಳಿಸಿತು. ನಾನು ನೋಡೋಣವೆಂದು ತಕ್ಷಣ ಸ್ಕೂಟರ್ ನಿಲ್ಲಿಸಿ ಎಂಜಿನ್ ಆಫ್ ಮಾಡಿದೆ. ನಾನು ಕಳ್ಳ ಕಣ್ಣುಗಳಲ್ಲಿ ಅವನ್ನು ಹುಡುಕುತ್ತಿದ್ದದ್ದು ಅವಕ್ಕೆ ತಿಳಿಯಿತೋ ಏನೋ ಅವು ಶಬ್ದ ಮಾಡುವುದನ್ನೆ ನಿಲ್ಲಿಸಿ ಬಿಟ್ಟವು. ನಾನು ನಿಂತಿದ್ದ ಜಾಗ ಸ್ವಲ್ಪ ಎತ್ತರದಲ್ಲಿ ಇದ್ದುದ್ದರಿಂದ ಸುತ್ತಲೂ ಹಬ್ಬಿರುವ ಮಾವಿನ ತೋಪು ಮತ್ತು ತೋಪಿನೊಳಗೆ ಅಲ್ಲಲ್ಲಿ ಕುಳಿತಿರುವ ಬಂಡೆಗಳೆಲ್ಲಾ ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಸ್ವಲ್ಪ ದೂರದಲ್ಲಿ ಅಜ್ಜಿ ಊರಿನ ಹತ್ತಿಪ್ಪತ್ತು ಮನೆಗಳು ಬೆಂಕಿ ಪೊಟ್ಣಣದಂತೆ ಕಾಣುತ್ತಿದ್ದವು‌. ಹಕ್ಕಿಗಳು ಗುಂಪು ಗುಂಪಾಗಿ ಗೂಡು ಸೇರಲು ಹೊರಟ್ಟಿದ್ದವು. ನನ್ನ ನೇರಕ್ಕೆ ಸೂರ್ಯ ತನ್ನ ಕೆಲಸ ಮುಗಿಸಿಕೊಂಡು ರಂಗಾಗಿ ಕೆಂಪಗೆ ಹೊಳೆಯುತ್ತಾ ಚಿನ್ನದ ಹೊಳೆಯಲ್ಲಿ ಮುಳುಗಲು ಕಾತುರದಿಂದ ಕಾಯುತ್ತಿದ್ದಂತೆ ಕಾಣುತ್ತಿತ್ತು. ಇತ್ತ ಕೆಂಪವಡೇರಹಳ್ಳಿಯ ಒಂದಿಬ್ಬರು ತಮ್ಮ ತಮ್ಮ ಕುರಿ ದನಗಳ ಜೊತೆಗೆ ಊರಿನ ಕಡೆಗೆ ರಸ್ತೆಯಲ್ಲಿ ಧೂಳು ಎಬ್ಬಿಸುತ್ತಾ ಹೊರಟಿದ್ದರು. ಹತ್ತಾರು ಹಕ್ಕಿಗಳು ಸುತ್ತೆಲ್ಲಾ ಚಿಲಿಪಲಿ ಶಬ್ದ ಮಾಡುತ್ತಿದ್ದವು. ನಾನು ಬೆಂಗಳೂರಿಗೆ ಹೋಗುವುದನ್ನು ಮರೆತು ಅಲ್ಲಾಗುತ್ತಿದ್ದುದ್ದನ್ನೆಲ್ಲಾ ನೋಡುತ್ತಾ ಸುಮ್ಮನೆ ಅಲ್ಲೆ ನಿಂತುಬಿಟ್ಟೆ. ಕೆಲವು ಹೊತ್ತಿನ ನಂತರ ಸ್ಕೂಟರಿನ ಮೇಲೆ ಇಟ್ಟಿದ್ದ ಮೂಟೆ ಕಡೆಯಿಂದ ಏನೋ ಶಬ್ದ ಬಂದಂತಾಯಿತು ತಿರುಗಿ ನೋಡಿದರೆ ಒಂದೆರಡು ಮಂಗಗಳು ಸೇರಿಕೊಂಡು ಮೂಟೆಯನ್ನ ಹರಿಯಲು ಪ್ರಯತ್ನ ಮಾಡುತ್ತಿದ್ದವು. ನಾನು ಕೋಲು ತೆಗೆದುಕೊಂಡು ಅವುಗಳನ್ನು ಓಡಿಸುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು. ಇವುಗಳ ದೆಸೆಯಿಂದ ನಾನು ನಮ್ಮೂರಿನ ಸೌಂದರ್ಯ ಸವಿಯುಲು ನಿಂತಿದ್ದ ನನ್ನ ತಪಸ್ಸಿಗೆ ಭಂಗವಾದಂತಾಯಿತು.

ನಮ್ಮೂರಿನಿಂದ ಬೆಂಗಳೂರಿಗೆ ಹೋಗಲು ಹಲವಾರು ದಾರಿಗಳಿವೆ ಸಾವನದುರ್ಗ ಫಾರೇಸ್ಟು ಮೂಲಕ, ರಾಮಾನಗರ ಟೌನ್ ಮೂಲಕ, ಸುಗ್ಗನಹಳ್ಳಿ, ಮಂಚನಬೆಲೆ ಹೀಗೆ ಹಲಾವಾರು ದಾರಿಗಳ ಮೂಲಕ ಹೋಗಬಹುದು. ನಾನು ಯಾವುದೇ ದಾರಿಯಲ್ಲಿ ಹೋಗಬೇಕಾದರೂ ರಾಮನಗರ – ಮಾಗಡಿ ರಸ್ತೆಯಲ್ಲಿ ನಮ್ಮೂರಿನ ಕಡೆಗೆ ಹೋಗಲು ತಿರುವ ಪಡೆದುಕೊಳ್ಳವ ಕಡೆಯಲ್ಲಿ ರಸ್ತೆಯ ಬಳಿಯಿರುವ ದೊಡ್ಡಮ್ಮನ ಮನೆಯ ಮುಖಾಂತರವೇ ಹೋಗಬೇಕು. ಶನಿವಾರ ಬೆಳಿಗ್ಗೆ ಊರಿಗೆ ಹೋಗುವಾಗಲೇ ಇವರ ಮನೆಗೆ ಹೋಗಿ ಮಾತನಾಡಿಸಿಕೊಂಡು ಬಂದಿದ್ದೆ. ಆದರೆ ಇವರು ‘ಬೆಂಗ್ಳೂರಿಗೆ ಹೋಗುವಾಗ ಹಿಂಗೆ ಬಂದು ಊಟ ಮಾಡ್ಕೊಂಡು ಹೋಗು’ ಅಂತ ಹೇಳಿದ್ದರು. ಈಗಾಗಲೇ ತುಂಬಾ ಸಮಯವಾಗಿ ಕತ್ತಲಾಗುವ ಮುನ್ಸೂಚನೆಗಳು ಕಾಣುತ್ತಿದ್ದರಿಂದ ಇವರ ಮನೆಗೆ ಹೋಗುವುದನ್ನ ಹೇಗಾದರೂ ತಪ್ಪಿಸಿಕೊಳ್ಳಲೆಂದೇ ಹೆಲ್ಮೆಟ್ ಧರಿಸಿ ವೇಗವಾಗಿ ಹೋಗಿಬಿಡೋವೆಂದು ನಿರ್ಧರಿಸಿದ್ದೆ. ಹೆಲ್ಮೆಟ್ ಹಾಕಿಕೊಂಡು ಊರಿನ ಕಡೆಯಿಂದ ಬಂದು ಹೆದ್ದಾರಿಯಲ್ಲಿ ಬಲ ತಿರುವು ಪಡೆದು ಇನ್ನೇನು ದೊಡ್ಡಮ್ಮನ ಮನೆಯನ್ನು ದಾಟಿಬಿಡಬೇಕು ಎನ್ನುವಷ್ಟರಲ್ಲಿ ರಸ್ತೆಯ ಆ ಬದಿಯಿಂದ ಒಂದು ಗಿರಿರಾಜ ಕೋಳಿಯೊಂದು ನನ್ನ ಸ್ಕೂಟರಿಗೆ ಅಡ್ಡಲಾಗಿ ಬಂದುಬಿಟ್ಟಿತು. ಮೊದಲೇ ನಾನು ಕೊಂಚ ವೇಗವಾಗಿ ಬರುತ್ತಿದ್ದರಿಂದ ನಿಯಂತ್ರಣ ತಪ್ಪಿ ಕೋಳಿಗೆ ಸರಿಯಾಗಿ ಗುದ್ದಿದೆ. ಸ್ಕೂಟರಿನ ಮುಂದಿನ ಚಕ್ರ ಕೋಳಿಯ ತಲೆಮೇಲೆ ಹರಿದು ಅದರ ತಲೆ ಪೂರ್ತಿ ಅಪ್ಪಚ್ಚಿಯಾಯಿತು.
ಇದನ್ನ ನೋಡಿದಾಕ್ಷಣ ಪೆಟ್ಟಿಗೆ ಅಂಗಡಿಯ ಬಳಿ ಬೀಡಿ ಸೇದುತ್ತಾ ಕುಳಿತಿದ್ದ ಮುದುಕನೊಬ್ಬ ‘ಅಯ್ಯಯ್ಯೋ ರಾಜಣ್ಣ ಬೇಗ ಓಡ್ ಬಾರಯ್ಯ ಇಲ್ಲಿ’ ಎಂದು ಕೂಗತೊಡಗಿದ. ಈ ಮುದುಕ ಚಿರಾಡುತ್ತಿದ್ದಾಗೆ ಅಲ್ಲೆ ಅಕ್ಕ ಪಕ್ಕ ನಿಂತಿದ್ದ ಕೆಲವರು, ಮಾಗಡಿ ಕಡೆಗೆ ಬಸ್ಸಿಗೆ ಕಾಯುತ್ತಿದ್ದ ಒಂದಿಬ್ಬರು ಸಹ ಜಮಾಯಿಸಿ ಬಿಟ್ಟರು. ‘ಈ ದರಿದ್ರ ಕೋಳಿಗೆ ಸಾಯೋದಕ್ಕೆ ಬೇರೆ ಯಾವ ವೆಹಿಕಲ್ಲು ಸಿಗಲಿಲ್ವ’ ಎಂದು ಶಾಪ ಹಾಕುತ್ತಾ ನಾನು ಅಲ್ಲಿ ಜಮಾಯಿಸಿದ್ದ ಜನರನ್ನೆಲ್ಲಾ ನೋಡುತ್ತಾ ಅಮಾಯಕನಂತೆ ಪಿಳಿ ಪಿಳಿ ಕಣ್ಣು ಬಿಡುತ್ತಾ ನಿಂತಿದ್ದೆ.

ಅಲ್ಲಿದ್ದವರಲ್ಲಿ ಯಾರೋ ಒಬ್ಬ ‘ಅಲ್ಲ ಕಣಯ್ಯ ನೋಡ್ಕಂಡು ಬರಕಾಗಲ್ವೆ? ಹಿಂಗೆ ಧಿಮಾಕಲ್ಲಿ ಕೂಟ್ರು ಬುಟ್ಕೊಂಡ್ ಹೋಗಿ ಅದೇನ್ ದಬಾಕಿರೋ ನಾ ಕಾಣೆ’ ಎಂದು ಹೇಳಿದ ಜೊತೆಗೆ ಅಲ್ಲಿ ನೆರೆದಿದ್ದವರಲ್ಲಿ ಕೆಲವರು ‘ನಿಂಗೆ ಕಣ್ ಕಾಣಕಿಲ್ವ?’
‘ಹಿಂಗೆ ಪಾಸ್ಟಾಗಿ ಹೋಗಾಕೆ ಈ ರೋಡ್ನ ಏನ್ ಹೈವೆ ಅಂದ್ಕೊಂಡಿದ್ದೀಯಾ?’ ಅಂತೆಲ್ಲಾ ನಾ ಮುಂದು ತಾ ಮುಂದೆ ಎಂಬಂತೆ ಪೈಪೋಟಿಯಲ್ಲಿ ಬೈಯಲು ಶುರುಮಾಡಿದರು.

ನಾನು ಇವರ ಯಾವ ಮಾತಿಗೂ ಮರು ಮಾತನಾಡದೇ ಸುಮ್ಮನೇ ಸ್ಕೂಟರಿನ ಮೇಲೆಯೇ ಕುಳಿತಿದ್ದೆ ಯಾಕೆಂದರೆ ಇಂತಹ ಸಂದರ್ಭದಲ್ಲಿ ಮಾತನಾಡಿದಷ್ಟು ನಮ್ಮ ಮೇಲೆಯೇ ಟ್ಯಾಕ್ಸು ಬೀಳುವ ಸಂಭವ ಹೆಚ್ಚು‌ ಅಂದರೆ ಕೋಳಿಯ ಮಾಲೀಕ ಹೇಳಿದಷ್ಟು ಹಣ ಕೊಟ್ಟು ಹೋಗಬೇಕಾಗುತ್ತದೆ. ನಾವು ಹೆಚ್ಚು ಹೆಚ್ಚು ದಬಾಯಿಸುತ್ತಾ ಹೋದಷ್ಟು ಕೋಳಿಯ ಬೆಲೆ ದುಪ್ಪಟವಾಗುತ್ತಾ ಹೋಗುತ್ತದೆ. ಸತ್ತ ಕೋಳಿಗೆ ಡಿಮ್ಯಾಂಡು ಬರುವುದೇ ಅವಾಗ ನೋಡಿ.

ಮುದುಕ ಮತ್ತೆ ‘ಯೋ ರಾಜಣ್ಣ ಒಳಗ್ ಏನ್ ಮಾಡ್ತಿದ್ದೀಯಾ? ನಿನ್ ಮನೆ ಕಾಯೋಗ ಬೇಗ್ ಬಾರೋ ಇಲ್ಲಿ’ ಎಂದು ಮತ್ತೊಮ್ಮೆ ಕೂಗಿದ. ನನಗೆ ಅಲ್ಲಿ ಆಗುತ್ತಿದ್ದ ಗಡಿಬಿಡಿಯಲ್ಲಿ ನಾನು ಎಲ್ಲಿ ಇದ್ದೇನೆ? ಯಾವ ಕಡೆ ಹೋಗುತ್ತಿದ್ದೇನೆ? ಯಾಕೆ ಇಲ್ಲಿ ನಿಂತಿದ್ದೇನೆ? ಎಂಬುದೆಲ್ಲಾ ಸಂಪೂರ್ಣ ಮರೆತಂತಾಗಿತ್ತು ಹಾಗಾಗಿ ರಾಜಣ್ಣ ನನ್ನ ದೊಡ್ಡಪ್ಪ ಎಂಬುದು ಸಹ ನನಗೆ ಮರೆತುಹೋಗಿತ್ತು. ಈ ಮುದುಕ ಕೂಗು ಹಾಕಿದ ಮೇಲೆ ಅಲ್ಲಿ ನೆರೆದಿದ್ದ ಜನರನ್ನೆಲ್ಲಾ ‘ಹೇ ಬಿಡ್ರೊ ಜಾಗನ’ ಅಂತ ಪಕ್ಕಕ್ಕೆ ಸರಿಸುತ್ತಾ ಅಲ್ಲಿಗೆ ಬಂದ ನಮ್ಮ ದೊಡ್ಡಪ್ಪನನ್ನು ನೋಡಿದ ಕೂಡಲೆ ಸ್ಪಲ್ಪ ಧೈರ್ಯಬಂದಂತಾಗಿ ನಾನು ಸ್ಕೂಟರಿನ ಸ್ಟಾಂಡು ಹಾಕಿ ನಿಲ್ಲಿಸಿ ನಾನು ಪಕ್ಕದಲ್ಲೆ ನಿಂತುಕೊಂಡೆ.
ನನ್ನನ್ನು ನೋಡಿದ ಅವರು ‘ಇದ್ಯಾಕ್ ಮಗ ಇಲ್ಲಿದಿಯಾ?’ ಎಂದರು. ನನಗೆ ಏನು ಹೇಳಬೇಕೆಂದು ತಿಳಿಯದೆ ಸುಮ್ಮನೆ ನಿಂತುಕೊಂಡಿದ್ದೆ.

ನಮ್ಮ ದೊಡ್ಡಪ್ಪ ತಲೆ ಅಪ್ಪಚ್ಚಿಯಾಗಿ ಬಿದ್ದಿದ್ದ ಆ ದಢೂತಿ ಕೊಳಿಯನ್ನ ನೋಡುತ್ತಾ ನಿಂತಿದ್ದರು. ಈ ಮುದುಕ ದೊಡ್ಡಪ್ಪನನ್ನೇ ಯಾಕೆ ಕರೆದನೆಂದು ನನಗೆ ತಿಳಿದಿರಲಿಲ್ಲ.
ಅಲ್ಲಿ ನಡೆದಿರುವುದೇನು ಎಂದು ಊಹಿಸಲು ದೊಡ್ಡಪ್ಪನಿಗೆ ಹೆಚ್ಚು ಸಮಯ ಹಿಡಿಯಲಿಲ್ಲ ಯಾಕೆಂದರೆ ಆ ಕೋಳಿಯ ಮೇಲೆ ಹರಿದ ನನ್ನ ಸ್ಕೂಟರ್ ಸಹ ಕೋಳಿಯ ಪಕ್ಕದಲ್ಲೆ ಇತ್ತು.
ಎಂದೆರಡು ಕ್ಷಣದ ನಂತರ ‘ಅಲ್ಲ ಕಣ್ಲ ಮಗ ಇದ್ಯಾಕ್ ಹಿಂಗ್ ಮಾಡ್ಬಿಟ್ಟೆ!’ ಎಂದು ಹೇಳಿ ನಂತರ ಅವರು ಆ ಕೋಳಿ ಎತ್ತಿಕೊಂಡು ‘ಹೇ ಇವ್ನು ನಮ್ ಹೈದನೇ ಕಣ ಎಲ್ರೂ ನಡಿರೋ’ ಎಂದು ಹೇಳಿ ಮನೆ ಕಡೆಗೆ ಹೋದರು.

ನನಗೆ ಅವಾಗ ಹೊಳೆಯಿತು ಈ ದರಿದ್ರ ಕೋಳಿ ದೊಡ್ಡಪ್ಪನ ಮನೆಯದೇ ಎಂದು. ಅಲ್ಲಿ ಇದ್ದವರು ಏನು ಮಾತನಾಡಲಿಲ್ಲ, ನಾನಂತು ಏನು ಮಾತನಾಡುವಂತೆಯೇ ಇರಲಿಲ್ಲ. ಅದೇ ಸಮಯಕ್ಕೆ ಮಾಗಡಿ ಕಡೆಗೆ ಹೋಗುವ ಬಸ್ಸು ಬಂದಿತು ಕೆಲವರು ಬಸ್ಸು ಹತ್ತಿದರು ಅಲ್ಲಿದ್ದವರಲ್ಲಿ ಸ್ವಲ್ಪ ಜನಸಂಖ್ಯೆ ಕಡಿಮೆಯಾಯಿತು. ಉಳಿದವರೂ ಸಹ ಅವರವರಲ್ಲೇ ಮಾತನಾಡಿಕೊಳ್ಳುತ್ತಾ ಹೊರಟುಹೋದರು. ಕೊನೆಗೆ ಅಲ್ಲಿ ಉಳಿದಿದದ್ದು ಮಾತ್ರ ನಾನು ಮತ್ತು ನನ್ನ ಸ್ಕೂಟರ್. ನಾನಲ್ಲದೇ ಬೇರೆಯವರಾಗಿದ್ದರೇ ಈಗಾಗಲೇ ಒಂದು ಜಟಾಪಟಿ ನಡೆದು ಅಲ್ಲಿರುವವರೆಲ್ಲಾ ಸೇರಿ ಆ ಕೋಳಿಗೆ ಒಂದು ಬೆಲೆ ಕಟ್ಟಿ ರಸ್ತೆ ಮಧ್ಯದಲ್ಲೆ ವ್ಯಾಪಾರ ಮುಗಿಸಿಬಿಡುತ್ತಿದ್ದರು.

ನಮ್ಮ ದೊಡ್ಡಪ್ಪ ಮನೆಗೆ ಹೋದ ಮೇಲೆ ನಾನು ಸಹ ಅವರ ಮನೆಗೆ ಹೋಗಿ ಮನೆಯ ಹಿಂದೆ ಹಾಲು ಕರೆಯುತ್ತಿದ್ದ ದೊಡ್ಡಮ್ಮನ ಜೊತೆ ನಡೆದಿದ್ದನ್ನೆಲ್ಲಾ ವಿವರವಾಗಿ ತಿಳಿಸುವಾಗ ಅವರ ಒಂದೆರಡು ಹನಿ ಕಣ್ಣೀರು ಸೆರಗಿನ ಮೇಲೆ ಬಿದ್ದದ್ದು ಕಾಣಿಸಿತು. ನಾನಲ್ಲಿ ಹೆಚ್ಚಿನ ಸಮಯ ಇರುವಂತಿರಲಿಲ್ಲ ಹೆಲ್ಮೆಟ್ ಹಾಕಿಕೊಂಡು ಮನೆಗೆ ಬರದೇ ತಪ್ಪಿಸಿಕೊಂಡು ಹೋಗುವ ಪ್ಲಾನ್ ಮಾಡಿದ್ದು ಅಲ್ಲದೇ ಇವಾಗ ನಮ್ಮ ದೊಡ್ಡಮ್ಮ ಪ್ರೀತಿಯಿಂದ ಸಾಕಿದ್ದ ಕೋಳಿಯನ್ನು ಸಹ ಕೊಂದುಹಾಕಿರುವುದರಿಂದ ನನಗೆ ಅವರ ಜೊತೆ ಹೆಚ್ಚು ಮಾತನಾಡಲು ಧೈರ್ಯ ಸಾಲಲಿಲ್ಲ ತಕ್ಷಣ ನಾನು ಹೋಗಿ ಬರುತ್ತೇನೆಂದು ತಿಳಿಸಿ ಹೊರಟೆ. ಸ್ಕೂಟರಿನ ಬಳಿಗೆ ಬಂದಾಗ ನಮ್ಮ ದೊಡ್ಡಪ್ಪ ನಿಂತಿದ್ದರು ನಾನು ಏನು ಮಾತನಾಡದೇ ಸ್ಕೂಟರ್ ಸ್ಟಾರ್ಟ್ ಮಾಡಲು ನೋಡುತ್ತಿದ್ದೆ ಅವಾಗ ಅವರು ‘ಇರೋ ಮಗ ಕೋಳಿ ಬಾಡು ತಿಂದ್ಕೊಂಡು ಹೋಗೊವಂತೆ’ ಎಂದರು. ಇವರು ಹೀಗೆ ಮಾತನಾಡುತ್ತಿದ್ದದ್ದು ನೋಡಿ ನನಗೆ ಆಶ್ಚರ್ಯವಾಯಿತು. ನಾನು ಅವರ ಕೋಳಿ ಸಾಯಿಸಿದ್ದೇನೆಂಬ ಯಾವ ಕೋಪವೂ ಅವರಿಗೆ ಇದ್ದಂತೆ ಕಾಣಲಿಲ್ಲ. ಈ ಗಿರಿರಾಜ ಕೋಳಿಯನ್ನ ಕುಯ್ದು ಬಾಡಿನೆಸರು ಮಾಡಿ ಹಾಕು ಎಂದು ನಮ್ಮ ದೊಡ್ಡಪ್ಪ ತುಂಬಾ ದಿನಗಳಿಂದ ದೊಡ್ಡಮ್ಮನನ್ನು ಕೇಳುತ್ತಿದ್ದರಂತೆ ಆದರೆ ದೊಡ್ಡಮ್ಮ ಇದಕ್ಕೆ ಒಪ್ಪಿರಲಿಲ್ಲ. ಇವಾಗ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದ ಹಾಲು ಅನ್ನ ಎಂಬಂತಾಗಿ ಕೋಳಿ ಬಾಡಿನ ರುಚಿನೋಡಲು ರೆಡಿಯಾಗಿದ್ದ ನಮ್ಮ ದೊಡ್ಡಪ್ಪ ನನ್ನನ್ನು ಶಿಕಾರಿ ಮಾಡಿದ ವೀರನಂತೆ ಮಾತನಾಡಿಸುತ್ತಿದ್ದದ್ದು ಅವರಿಗಾಗುತ್ತಿದ್ದ ಖುಷಿಯಿಂದಲೇ ತಿಳಿಯುತ್ತಿತ್ತು. ಆದರೆ ನಾನು ಮಾತ್ರ ಮರ್ಯಾದೆಗೆ ಅಂಜಿ ಬಾಡಿನೆಸರಿಗೆ ಕೂರುವುದು ಸರಿಯಲ್ಲವೆಂದು ಅಲ್ಲಿಂದ ಹೊರಟೆ.