Click here to Download MyLang App

ಚೀನಾ ದೇಶದಲ್ಲಿ ಬೊಜ್ಜು ಕರಗಿಸಿ, ಸಪೂರನಾಗಿದ್ದು. : ರಾಜೇಂದ್ರ ಕುಮಾರ್ ಗುಬ್ಬಿ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟಸ್ವರೂಪದ ಕನ್ನಡ

ಸಪೂರನಾಗಿದ್ದು....(ಕಥೆ)

 ನಾನು ಚೀನಾ ಪ್ರವಾಸ ಕೈಗೊಂಡೆ,

ಕಾರಣ ನನ್ನ ವಿಪರೀತ ಬೊಜ್ಜು, ನನ್ನ ವಯಸ್ಸು  ಮೂವತ್ತೆರಡು, ನಾನು ವಿಪರೀತ ಬೊಜ್ಜು ಬೆಳೆಸಿಕೊಂಡಿದ್ದರಿಂದ ನನ್ನನ್ನು ಮದುವೆಯಾಗಲು ಯಾವ ಹುಡುಗಿ ಯೂ ಒಪ್ಪುತ್ತಿರಲಿಲ್ಲ,  ನನ್ನನ್ನು

 ಬಾಲ್ಯದಿಂದಲೂ ಭೀಮ, ಘಟೋತ್ಕಜ ಎಂದು ಮೂದಲಿಸುತ್ತಿದ್ದರು, ನನ್ನ ತೂಕ ಸುಮಾರು ನೂರೈವತ್ತು,  ನನ್ನನ್ನು  ಗೆಳೆಯರೂ ಅಷ್ಟಾಗಿ ಇಷ್ಟ ಪಡದಿದ್ದರಿಂದ, ನನಗೂ ಸಣ್ಣಗಾಗಬೇಕೆಂದು ಆಸೆಯಾಗಿ,  ಇದನ್ನು ಕರಗಿಸಲು ಒಳ್ಳೆಯ ಕಂಪನಿಗಳ ಬಗ್ಗೆ ಗೂಗಲ್ ನಲ್ಲಿ ಹುಡುಕಾಡಿ, ಚೀನವೇ ಉತ್ತಮವೆಂದು ತಿಳಿದು, ಅಲ್ಲಿಯ ಒಂದು ಕಂಪನಿ ನಮಗೆ ದೊರೆಯಿತು, ಅದೂ ಸರ್ಕಾರದಿಂದ  ನೂರಕ್ಕೆ ನೂರು ಉತ್ತಮವೆಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆಂದು ತಿಳಿದೆವು,  ಎಲ್ಲ ಕಂಪನಿಗಿಂತಲೂ ಈ ಕಂಪೆನಿಯಲ್ಲಿ ಐವತ್ತರಷ್ಟು ಹಣ ಕಡಿಮೆಯೆಂದು ತಿಳಿದು, ಅದೂ ಚೀನಾದ ವಸ್ತುಗಳು ಬೇರೆಲ್ಲ ದೇಶಗಳ ವಸ್ತುಗಳಿಗಿಂತ ಕಡಿಮೆಯಲ್ಲವೇ , ಅಷ್ಟು ಕಡಿಮೆಯೆಂದರೂ ಎಷ್ಟು ಹಣ ಗೊತ್ತೇ, ಸುಮಾರು ಒಂದು ಕೋಟಿ ಭಾರತೀಯ ಹಣದಲ್ಲಿ, ನನ್ನ ತಂದೆ ಸಹ ತುಂಬಾ ಕಂಪನಿಗಳ ಮಾಲೀಕರಾದ್ದರಿಂದ ನನಗೂ ಹಣದ ಕೊರತೆಯಿರಲಿಲ್ಲ, ಆರು ತಿಂಗಳ ಚಿಕಿತ್ಸೆ, ಎಲ್ಲವೂ ಫೈವ್ ಸ್ಟಾರ್ ಆತಿಥ್ಯ, ಅಲ್ಲಿಗೇ ಹೋಗಿ ಚಿಕಿತ್ಸೆ ಪಡೆಯಲು ತೀರ್ಮಾನಿಸಿದೆ, ಅದರಂತೆ ಆನ್ಲೈನ್ನಲ್ಲಿಯೇ ಎಲ್ಲವನ್ನೂ ಮುಗಿಸಿ, ಐವತ್ತರಷ್ಟು ಹಣ ಮೊದಲೇ ಮುಂಗಡ ಸಂದಾಯ ಮಾಡಬೇಕು, ಉಳಿದದ್ದು ಆರು ತಿಂಗಳಿನ ಚಿಕಿತ್ಸೆ ಮುಗಿದ ನಂತರ

 ನಿಮಗೆ ಅವರ ಚಿಕಿತ್ಸೆ ತೃಪ್ತಿಯಾಗಿದ್ದರೆ, ಅದೂ ಅಂತಿಮವಾಗಿ ನಮಗೆ NOC ಪತ್ರ ಕೊಟ್ಟು , ನಾವು ಮನೆಗೆ ಹಿಂದಿರುಗುವಾಗ ಸಂದಾಯ ಮಾಡಿಬರಬೇಕು, ಅಲ್ಲಿಯವರೆಗೂ ಮಧ್ಯದಲ್ಲಿ ಒಂದು ಪೈಸೆಯೂ ಕೊಡುವಂತಿಲ್ಲ, ಅದೂ ನನ್ನ ಚಿಕಿತ್ಸೆ ಜೊತೆಗೆ ಒಬ್ಬರು ಸಹಾಯಕರಿಗೂ ಅವರಲ್ಲಿ ಉಚಿತ ಆತಿಥ್ಯ ದೊರೆಯುವುದೆಂದೂ ಇದರಲ್ಲಿ ಉಲ್ಲೇಖವಾಗಿತ್ತು, ನಾವು ಇವರ ಜೊತೆ ಒಡಂಬಡಿಕೆ ಮಾಡಿಕೊಂಡು ಅರ್ಧ ಹಣ ರೂ.50,00,000/- ಇಲ್ಲಿಂದಲೇ ಸಂದಾಯ ಮಾಡಿದೆವು, ಅವರಿಂದ ಖಾತರಿ ಪತ್ರ ಕೂಡ ಆನ್ ಲೈನ್ ನಲ್ಲೇ ಬಂದಿತು ಇದೆಲ್ಲಾ ಕೇವಲ ಒಂದು ದಿನದಲ್ಲಿ ಖಾತ್ರಿಯಾಯಿತು, ನಾವು ಮುಂದಿನವಾರ ಚೀನಾಗೆ ಬಂದು ತಲುಪಿ ಎಂದು ತಿಳಿಸಿದರು, ನನಗೆ ಒಂದು ತಿಂಗಳ ನಂತರ ಚಿಕಿತ್ಸೆ ಎಂದೂ ನಮೂದಿಸಲಾಗಿತ್ತು, ಆದರೆ ಅಲ್ಲಿವರೆಗೂ ಇಡೀ ಚೀನಾದ ಪ್ರಮುಖ ನಗರಗಳ ವೀಕ್ಷಣೆ, ಅಲ್ಲಿಯ ಹವಾಗುಣಕ್ಕೆ, ಆಹಾರಕ್ಕೆ, ಭಾಷೆಗೆ ಹೊಂದಿಕೊಳ್ಳಲು ನಮಗೆ ಈ ಒಂದು ತಿಂಗಳು ಸಮಯ ಕೊಟ್ಟಿದ್ದರು, , ಒಂದು ಸೂಕ್ತ ದಿನ ಅಲ್ಲಿಂದ ನಮಗೆ ಒಂದು ಫೋನ್ ಕರೆ ಸಹ ಬಂದಿತು, ಅವರೂ ಚೀನಾ ಭಾಷೆ ಜೊತೆ ಇಂಗ್ಲೀಷ್, ಹಿಂದಿ ಮಾತನಾಡುವ ಸಿಬ್ಬಂದಿ, ಅವರು ನನಗೆ ಹಿಂದಿಯಲ್ಲಿ ಇಂಥ ದಿನ

 ಬನ್ನಿರಿ, ಹೀಗೆ, ಹಾಗೆ ಎಂದೆಲ್ಲಾ ವಿವರಿಸಿ ನಮಗೆ ವಿಮಾನದಲ್ಲಿ ಹೋಗುವ ಟಿಕೇಟುಗಳನ್ನೂ ಕಳಿಸಿದರು ಅದೂ ಆನ್ಲೈನ್ನಲ್ಲಿ,  ನಾನು ತುಂಬಾ ಬೊಜ್ಜು ಇರುವ ಮನುಷ್ಯನಾಗಿದ್ದರಿಂದ ನಮಗೆ ಚೀನಾ ದ ವಿಶೇಷ ವಿಮಾನದಲ್ಲಿ ಹೋಗುವ ವ್ಯವಸ್ಥೆ ಮಾಡಿದ್ದರು.

       ಇಬ್ಬರೂ ಆರು ತಿಂಗಳ ಮಟ್ಟಿಗೆ  ಚೀನಾ ಗೆ ಹೋಗುವ ದಿನವೂ ಬಂದಿತು, ನಾನು, ನನ್ನ ಅಪ್ಪ, ಅಲ್ಲಿ ತಲುಪ್ಪುತ್ತಿದ್ದಂತೆ ಆ ಕಂಪನಿಯ ಇಬ್ಬರು ಸದಸ್ಯರು ಕಾರಿನಲ್ಲಿ ಬಂದು ಏರ್ಪೋರ್ಟ್ ನಿಂದಲೇ ನಮ್ಮನ್ನು ಕರೆದುಕೊಂಡು ಹೋದರು, ನಾವು ಇದುವರೆಗೂ ಟಿ.ವಿಯಲ್ಲಿ ನೋಡುತ್ತಿದ್ದ ಚೀನಾ,

ವ್ಹಾ ರೇ ವ್ಹಾ ಅದೆಷ್ಟು ಸುಂದರವಾಗಿದೆ, ಮುಗಿಲಿಗೇ ಮುತ್ತಿಡುವ ಗಗನಚುಂಬಿ ಬಣ್ಣ ಬಣ್ಣದ ಕಟ್ಟಡಗಳು, ಎಲ್ಲೆಲ್ಲೂ  ಪ್ಲೈಓವರ್ ರಸ್ತೆಗಳು, ಭಾರತದ ಪ್ರಮುಖ ನಗರಗಳಲ್ಲಿರುವಂತೆ ಇಲ್ಲಿ ವಾಹನಗಳ ದಟ್ಟಣೆ ಇಲ್ಲ, ಕಸ, ಗಲೀಜುಗಳಿಲ್ಲ, ಎಲ್ಲೆಲ್ಲೂ ಸ್ವಚ್ಛತೆ, ಎಲ್ಲೆಲ್ಲೂ ಕಾರು, ಸರ್ಕಾರೀ ಬಸ್ಸುಗಳದೇ ಹವಾ , ಬೈಕುಗಳು ತುಂಬಾ ಕಡಿಮೆ, ಸೈಕಲ್ಲುಗಳೂ ಇವೆ, ನನ್ನ ಜೊತೆ ಬಂದಿದ್ದ ಕಂಪನಿಯವರು ಭಾರತೀಯ ಭಾಷೆಗಳಾದ ಇಂಗ್ಲೀಷ್, ಹಿಂದಿ, ಚೀನಾ ಭಾಷೆ ಮೂರನ್ನೂ ಬಲ್ಲವರಾದ್ದರಿಂದ ನಮ್ಮ ಜೊತೆಗೆ ಸಹಾಯಕ್ಕೆಂದು  ಇದ್ದರು, ಇವರುಗಳು ಆರು ತಿಂಗಳೂ ನಮ್ಮ

 ಜೊತೆಗಿದ್ದು ನಮ್ಮ ಬೇಕು, ಬೇಡಗಳನ್ನೆಲ್ಲಾ ನೋಡಿಕೊಳ್ಳುತ್ತಿದ್ದರು, ಇವರ ತಿಂಗಳ ಸಂಬಳವೇ ಯಾವ ಸಾಫ್ಟವೇರ್ ಇಂಜಿನಿಯರ್ ಸಂಬಳಕ್ಕಿಂತ‌ ಕಡಿಮೆ ಏನೂ ಇಲ್ಲ, ಅದೂ ಅಲ್ಲದೇ ಇವರ ಎಲ್ಲಾ ಖರ್ಚುವೆಚ್ಚ ಗಳನ್ನೂ ಅದೇ ಆಸ್ಪತ್ರೆಯೇ ಭರಿಸುತ್ತದೆ, ಅವರಿಗೆ ವರುಷಕ್ಕೆ ಒಮ್ಮೆ ರಜಾ.

ನಮ್ಮನ್ನು ನೇರವಾಗಿ ಒಂದು ಫೈವ್ ಸ್ಟಾರ್ ಹೋಟೆಲ್ ಗೆ ಕರೆದುಕೊಂಡು ಹೋದರು, ಅಬ್ಬಾ ನಾನು ತಂದೆಯವರೊಡನೆ ಸುಮಾರು ದೊಡ್ಡ ದೊಡ್ಡ ಹೋಟೆಲುಗಳನ್ನು ವಿದೇಶ, ಭಾರತದ ಇತರ ನಗರಗಳಲ್ಲಿ ನೋಡಿರುವೆ, ಆದರೆ ಅಂಥ ಹೋಟೆಲು ಇದುವರೆಗೂ ನೋಡಿರಲಿಲ್ಲ,ಇದು ಹೋಟೆಲ್ಲಾ ಅಥವಾ ದೇವೇಂದ್ರನ ಇಂದ್ರಲೋಕವಾ ಎಂದು ಒಂದರೆಕ್ಷಣ ದಂಗಾದೆವು, ಆ ಕೊಠಡಿ ಸಂಪೂರ್ಣ ಸಮುದ್ರಕ್ಕೆ ಅಂಟಿಕೊಂಡೇ ಇದೆ ನಾವು ನೇರವಾಗಿ ಸಮುದ್ರಕ್ಕೇ ಕೊಠಡಿಯಿಂದ ನೀರಿನಲ್ಲಿ ಜಾರಿಕೊಂಡೇ ಹೋಗಬಹುದು, ಕೊಠಡಿಯೊಳಗೇ ನೇರವಾಗಿ ಸಮುದ್ರದಿಂದ ಬೀಸುವ ತಂಗಾಳಿ, ಪ್ರತಿಯೊಂದು ಚಿನ್ನ ಲೇಪಿಸಿರುವ ವಸ್ತುಗಳು, ಎಲ್ಲವೂ  ಕಂಪ್ಯೂಟರ್ ಮಯ,  ಎಲ್ಲಿ ನೋಡಿದರೂ ಸುಂದರ ಹುಡುಗಿಯರೇ ತೆಳ್ಳಗೆ, ಬೆಳ್ಳಗೆ ಬಳುಕಾಡುವ ಲತೆಯಂತೆ, ಇರುವ ಅವರುಗಳು ನಾವು ಕಂಪ್ಯೂಟರ್ ಹಲಗೆ ಮೇಲೆ

 ಒಂದು ಗುಂಡಿ ಹೊತ್ತಿದ್ದರೆ ಸಾಕು ಹಿಂದೆಯೇ ಬಂದು ನಿಂತಿರುವ ಈ ಸುಂದರಿಯರು, ಒಬ್ಬರೂ ಪುರುಷರಿಲ್ಲ,  ಅದೂ ಎಂಥ ಹುಡುಗಿಯರು ಅಂತೀರಾ ವ್ಹಾ ವ್ಹಾ ವ್ಹಾ ರಂಭೆ, ಊರ್ವಶಿ ಮೇನಕೆ, ತಿಲೋತ್ತಮೆ ಎಲ್ಲರನ್ನೂ  ಮೀರಿಸುವಂಥಾ ಸುಂದರಿಯರು, ನಿದ್ರೆ ಬರದಂಥವರೂ ಸುಖವಾಗಿ ನಿದ್ರೆಗೆ ಜಾರುವಂಥಹ ಕೊಠಡಿಗಳು, ಹಾಸಿಗೆ, ಹೊದಿಕೆಗಳು,  ಸಮುದ್ರದ ತಂಗಾಳಿ

ಜೊತೆಗೆ ಸುಂದರ ನಿರ್ಮಲ ಆಕಾಶ, ಚಂದ್ರ, ನಕ್ಷತ್ರಗಳ ನೋಟ, ಪ್ರಕೃತಿಯ ನೇರ ಆಸ್ವಾದ , ನೀವು ಬಯಸುವ ಜಗತ್ತಿನ ಎಲ್ಲಾ ದೇಶಗಳ ಆಹಾರ, ಪಾನೀಯ, ವಸ್ತುಗಳು, ಏನುಬೇಕಾದರೂ ಇಲ್ಲಿ ನೀವು ಕೊಠಡಿಯಲ್ಲಿರುವ ಕಂಪ್ಯೂಟರ್ ಪರದೆ ಮೇಲೆ ಬರುವ ಮೆನು ನೋಡಿ ನಮೂದಿಸಿದ ಕ್ಷಣಮಾತ್ರದಲ್ಲಿ ಬಿಸಿ ಬಿಸಿಯಾದ ತಾಜಾ ಆಹಾರವನ್ನು ಸುಂದರಿಯೊಬ್ಬಳು ತನ್ನ ಕೈಯಿಂದ  ನೇರವಾಗಿ ನಿಮ್ಮ ಬಾಯಿಗೆ ತಿನ್ನಿಸುತ್ತಾಳೆ, ಇವರುಗಳಿಂದಲೇ ದಿನಕ್ಕೆ ಮೂರು ಬಾರಿ ನಾನಾರೀತಿಯ ತೈಲಗಳಿಂದ ಮಸಾಜ್,  ಹೀಗಿದ್ದರೆ ಯಾರಿಗೆ ತಾನೆ ನಿದ್ರೆ  ಬರೊಲ್ಲ, ಊಟ ಸೇರೊಲ್ಲ ಹೇಳಿ, ಹೀಗೇ ದಿನಗಳು ಕಳೆಯುತ್ತಿದ್ದೆವು , ನನಗೆ ಆಗಾಗ ನಮ್ಮ ಸಮಯ ಕೇಳಿ ನನಗೆ ಬೊಜ್ಜು ದೇಹದ  ಕೆಲವು ಪರೀಕ್ಷೆಗಳನ್ನು ನಡೆಸುತ್ತಿದ್ದರು, ಎಲ್ಲವನ್ನೂ ಈ ಒಂದು ತಿಂಗಳಿನಲ್ಲಿ

 ಪರೀಕ್ಷಿಸಿ, ನನ್ನ ದೇಹವನ್ನು ಯಾವ ರೀತಿಯಲ್ಲಿ ಕರಗಿಸಬೇಕೆಂದು ಅರಿತುಕೊಂಡ ತಜ್ಞ ವೈದ್ಯರುಗಳ‌ ಸಮೂಹ ತಿಳಿದುಕೊಂಡು ಅದಕ್ಕೆ ತಕ್ಕಂತೆ ಮುಂದೆ ಅದೇ ರೀತಿ ಚಿಕಿತ್ಸೆ ನೀಡಲು ಈ ಒಂದು ತಿಂಗಳು ತಯಾರು ಮಾಡಿಕೊಂಡರು.

ನಾನು, ಇವರುಗಳ ಅತಿಯಾದ ಆತಿಥ್ಯದಿಂದ ಮತ್ತೆ ಹದಿನೈದು ಕೆ.ಜಿ. ತೂಕ ಹೆಚ್ಚಾಗಿ ಬಿಟ್ಟೆ, ಅವರು ನೀಡುವ ವಿವಿಧ ದೇಶಗಳ ಆಹಾರ, ಪಾನೀಯ, ದೇವಲೋಕದಂತಹ ದರ್ಬಾರು, ನೋಡಲು ಅಪ್ಸರೆಯಂತೆ ಕಾಣುವ ಚೀನೀ ಸುಂದರಿಯರು.

        ಒಂದು ತಿಂಗಳು ಚೀನಾದ ಎಲ್ಲಾ ಸ್ಥಳಗಳನ್ನು, ಅಲ್ಲಿಯ ಐತಿಹಾಸಿಕ ಕಟ್ಟಡಗಳನ್ನು , ಚೀನಾ ಮಹಾಗೋಡೆ, ಅವರ ಆಹಾರ ಪದ್ದತಿ, ಅವರ ಭಾಷೆ ಎಲ್ಲವನ್ನೂ ತಿಳಿದುಕೊಂಡೆವು, ಇದೇ ಜೀವನ ಅಂದುಕೊಂಡರೆ......

        ಮರುದಿನದಿಂದ ನನಗೆ ಕಠಿಣವಾದ ಚಿಕಿತ್ಸೆ ಕೊಡುವುದೆಂದು ತಿಳಿಸಿದರು, ತಕ್ಷಣದಿಂದ ನನಗೆ ಪಥ್ಯವಿರಲೇಬೇಕೆಂದು ನಿಗದಿಯಾಗಿತ್ತು ಇದುವರೆಗೂ ಉತೃಷ್ಟ ಮಟ್ಟದ ಆರೈಕೆಯಿಂದ ನಾನು ಬೊಜ್ಜು ಕರಗಿಸುವುದನ್ನು ಮರೆತು, ಇದೇ ಜೀವನ ಚೆನ್ನಾಗಿದೆ ಎಂದುಕೊಂಡೆ,  ಹೀಗೇ ಅನುಭವಿಸಿಕೊಂಡು ಜೀವನದಲ್ಲಿ ಮುಂದುವರೆಯೋಣ ಅನ್ನಿಸಿತು

 ಕ್ಷಣಕಾಲ, ಆದರೇ ಇದೆಲ್ಲವೂ ಕ್ಷಣಿಕವೆಂದು ಈಗ ತಿಳಿಯಿತು.

ಚಿಕಿತ್ಸೆಯ‌ ಮೊದಲದಿನದ ಭಾಗವಾಗಿ ಸುಮಾರು ರಾತ್ರಿ ಒಂದು ಗಂಟೆಯ ವೇಳೆಗೆ ನನ್ನನ್ನು ಒಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು, ಅದಂತೂ ಅತ್ಯಂತ ಬೃಹತ್ತಾದ, ಚೀನಾದಲ್ಲಿಯೇ ಹೆಸರುವಾಸಿಯಾದ ಫೈವ್ ಸ್ಟಾರ್ ಆಸ್ಪತ್ರೆ, ಅಲ್ಲಿ ನನ್ನನ್ನು ದಾಖಲು ಮಾಡಿಕೊಂಡರು, ಅಲ್ಲಿ ಒಂದು ಕಂಪ್ಯೂಟರ್ ಹಲಗೆಯಲ್ಲಿ ಮತ್ತಷ್ಟು ನಮೂದಿಸಲು ಹೇಳಿದರು, ಮೊದಲನೆಯದಾಗಿ ನನಗೆ ಯಾವ ರೀತಿಯ ಚಿಕಿತ್ಸೆ,

1.ಪೂರ್ಣ ಪ್ರಾಕೃತಿಕವಾದ ಚಿಕಿತ್ಸೆ:

2.ಪ್ರಾಕೃತಿಕ/ಯಾಂತ್ರಿಕ ಚಿಕಿತ್ಸೆ

3.ಪೂರ್ಣ ಯಾಂತ್ರಿಕವಾದ ಚಿಕಿತ್ಸೆ

ನಾನು ಎರಡನೇ ಸಂಖ್ಯೆ ಆಯ್ದುಕೊಂಡೆನು,

ನನಗೋ ನಿದ್ದೆ ಕಣ್ಣು ಕುಕ್ಕುವಷ್ಟು, ಅಲ್ಲಿ ಹೋದಬಳಿಕ ನಿದ್ರೆಗೆ ಜಾರಿದೆ, ಪಕ್ಕದ ಕೋಣೆಯಲ್ಲಿಯೇ ನನ್ನ ಅಪ್ಪನೂ ಇಳಿದುಕೊಂಡಿದ್ದರು, ಮರುದಿನ ಬೆಳಿಗ್ಗೆ ನಿದ್ರೆಯಿಂದ ಎಚ್ಚರಗೊಂಡೆ, ನೋಡುತ್ತೀನಿ, ನನ್ನನ್ನು  ಬೇರೊಂದು ಕೊಠಡಿಗೆ ಸಾಗಿಸಿದ್ದಾರೆ, ಬರೀ ಜಿರಳೆಗಳು,ಚೇಳು,  ಕಪ್ಪೆ ಇನ್ನೂ ನಮ್ಮ ಊರಿನಲ್ಲಿ ಹಳೆಯ ಮನೆಯಲ್ಲಿ ನೋಡುತ್ತಿದ್ದ ಕ್ರಿಮಿ,ಕೀಟಗಳೆಲ್ಲಾ

 ಇವೆ,  ನನ್ನ ಸುತ್ತಲೂ ಹಾಸಿಗೆಯ ಮೇಲೆಲ್ಲಾ ಓಡಾಡುತ್ತಿವೆ., ತುಂಬಾ ಕೆಟ್ಟದಾಗಿದೆ ಕೊಠಡಿ, ಎಲ್ಲೆಲ್ಲೂ ಕೊಳೆತು ನಾರುವ ವಾಸನೆ, ಅದರ ವಾಸನೆಗೇ ಜ್ಞಾನ ತಪ್ಪಿಬೀಳಬೇಕು ಅನ್ನುವಂತಿದೆ, ಅಲ್ಲಿಗೆ ಬರುವ, ಆರೈಕೆ ಮಾಡುವವರೂ ತುಂಬಾ ಗಲೀಜಾಗಿದ್ದರು, ನನ್ನನ್ನು ಮರೆತು ಯಾವುದಾದರೂ ಉಗ್ರಾಣದ ಕೊಠಡಿಗೇ ತಂದುಬಿಟ್ಟಿದ್ದಾರಾ ಎಂದು ಅನಿಸಿತು, ತಕ್ಷಣ ನನ್ನ ತಂದೆಯನ್ನು ಭಯದಿಂದ ಕೂಗಿ ಕರೆದೆ, ಅವರು ಬಂದು ಅವಾಕ್ಕಾದರು, ಅವರೂ ನಮ್ಮ ಸಹಾಯಕ್ಕಿದ್ದ ವ್ಯಕ್ತಿಯನ್ನು ಕರೆದು ಕೇಳಿದರು, ಏನಿದು ಇಂಥಾ ಗಲೀಜು ಕೊಠಡಿ ಕೊಟ್ಟಿದ್ದಾರೆ ಎಂದು, ಅವರು ಹೇಳಿದರು, ಇದೂ ಪ್ರಾಕೃತಿಕ ಚಿಕಿತ್ಸೆಯ ಒಂದು ಭಾಗವೆಂದೂ, ರೋಗಿಗೆ ಊಟದ ಬಗ್ಗೆ ಜಿಗುಪ್ಸೆ ಬರುವಂತಾಗಬೇಕು, ಇದೆಲ್ಲಾ ಮೊದಲನೇ ಹಂತವೆಂದೂ, ಇದು ಒಂದು ವಾರವಿರುವುದೆಂದೂ, ಇವುಗಳ ಮಧ್ಯೆಯೇ ಬದುಕಿರುವಾಗ ಇವುಗಳ  ಸಹವಾಸದಿಂದ ನಾವು ಊಟ, ತಿಂಡಿ ಅತಿಯಾಗಿ ತಿನ್ನಲೂ ಅಸಹ್ಯ ಪಡಬೇಕು, ಏಕೆಂದರೆ ನನ್ನ ಬೊಜ್ಜು ಕರಗಬೇಕಾದರೆ ಸಿಕ್ಕ ಸಿಕ್ಕ ಆಹಾರವನ್ನೆಲ್ಲಾ ತಿನ್ನದೇ ಪಥ್ಯವಿರಬೇಕಾದದ್ದು ಒಳ್ಳೆಯದೆಂದೂ ತಿಳಿಸಿದರು, ಆದರೆ ಅಪ್ಪ ನ ಕೊಠಡಿ ಯಥಾಪ್ರಕಾರ ಫೈವ್ ಸ್ಟಾರ್

 ಹೋಟೆಲ್ ಕೊಠಡಿಯ ಮಾದರಿಯಲ್ಲೇ ಇತ್ತು, ಇಲ್ಲಿ ಈ ರೀತಿ,  ಛೇ.....ನನಗೋ ಇಲ್ಲಿರುವುದು ಒಂದು ಕ್ಷಣವೂ ಒಂದು ದಿನದಂತೆ ಆಯಿತು, ಆಗಾಗ  ಸಿಬ್ಬಂದಿ ಗಳು ಬರುತ್ತಿದ್ದರು, ನನಗೆ ಅಲ್ಪ ಸ್ವಲ್ಪ ರುಚಿಯಲ್ಲದ ಆಹಾರ ತರುತ್ತಿದ್ದರು, ಅದೂ ಸರಿಯಾಗಿ ಬೇಯಿಸದ ಆಹಾರ, ಅಲ್ಲದೆ ಅದರಲ್ಲೂ ನೊಣ, ಇರುವೆ, ಜಿಲ್ಲೆಗಳ ಮರಿಗಳೇ ಕಾಣುತ್ತಿದ್ದವು, ನನಗೆ ಬರುಬರುತ್ತಾ ತಿನ್ನುವುದನ್ನು ಏನು ನೋಡಿದರೂ ಅಸಹ್ಯವಾಗುತ್ತಿತ್ತು,  ಅದೂ ನನಗೆ ಆಹಾರ ಕೊಡುವ ಸಮಯದಲ್ಲಿ ಪೂರ್ಣ ಬೆಳಕಿರದೇ ನಸುಗತ್ತಲು ಇರುತ್ತಿತ್ತು, ಕಾರಣ, ಪಥ್ಯದಿಂದ ನನಗೆ ತುಂಬಾ ಹೊಟ್ಟೆ ಹಸಿದಿರುವುದು ಸಹಜ, ಆಗ ಊಟದಲ್ಲಿ ಏನಿದ್ದರೂ ತಿಂದು ಬಿಡುತ್ತೇವೆ ಎಂದು ಈ ರೀತಿಯ ಉಪಾಯ, ಇದು ಕಡಿಮೆಯಾಗಲೆಂದೇ ಈ ರೀತಿ ಆಹಾರ ಪದ್ದತಿ, ಅದೂ ನಾವುಗಳು ಚೀನಾದ ನಗರಗಳಲ್ಲಿ ಒಂದು ತಿಂಗಳು ಸುತ್ತಾಡುವಾಗ ಅವರ  ಹೋಟೆಲ್ ಗಳಲ್ಲಿ ಮಾಂಸಾಹಾರಿಯೆಂದರೆ ಇಂಥ ಪ್ರಾಣಿಗಳಿಂದ ಮಾಡಿದ ಭಕ್ಷ್ಯ ಭೋಜನಗಳನ್ನು ಯಥೇಚ್ಚ ವಾಗಿ ತಿನ್ನುವುದು ಜನರನ್ನು ನೋಡಿದ್ದೇನೆ, ಅಲ್ಲಿಯ ಹೋಟೆಲುಗಳಲ್ಲಿ ಹೆಬ್ಬಾವಿನ ತುಂಡುಗಳನ್ನೂ ಫ್ರೈ ಮಾಡಿ ಫೋರ್ಕ್ ಗಳಲ್ಲಿ ಕಚ್ಚಿ ಕಚ್ಚಿ ತಿನ್ನುತ್ತಿದ್ದ ಬಹಳ ಮಂದಿಯನ್ನು ನೋಡಿರುವೆ,

 ನಾವು  ಸಸ್ಯಾಹಾರಿ ಪದಾರ್ಥಗಳನ್ನು ತಿನ್ನುವಾಗ ಖುಷಿ ಪಡುವುದಕ್ಕಿಂತ ಅಧಿಕ ಖುಷಿಯಾಗಿ ತಿನ್ನುವರು ಅವರುಗಳು.

          ನನಗೋ ಈ ಒಂದು ವಾರ ಆ ಕೀಟಾಣುಗಳ ಜೊತೆ ಬಾಳುವೆ ನಡೆಸುವಷ್ಟರಲ್ಲಿ, ಅವರು ಹೇಳಿದಂತೆ ಊಟದ ಮೇಲೆ ಖಂಡಿತಾ ಜಿಗುಪ್ಸೆ ಬಂದುಬಿಟ್ಟಿತ್ತು, ಈ ಕೀಟಾಣುಗಳ ಜೊತೆ ಇದ್ದು ಬದುಕುವುದೇ ಪ್ರಾಕೃತಿಕ ಚಿಕಿತ್ಸಾ ಪದ್ದತಿಯಂತೆ ಅವರ ಪ್ರಕಾರ .

        ಅದೂ ಈ ಒಂದು ತಿಂಗಳು ಅವರು ನಮ್ಮನ್ನು ಅವರ  ದೇಶದಲ್ಲಿ ತಿರುಗಾಡಲು ಬಿಟ್ಟಿದ್ದರಲ್ಲಾ ಅದರ ಪ್ರಭಾವ, ಮಾಂಸಾಹಾರಿ ಆಹಾರಗಳನ್ನು ಕೊಡುತ್ತಿದ್ದರು, ಅದೂ ಕೆಟ್ಟ, ವಾಸನೆಯಿಂದ ಕೂಡಿದ ಅದೋ ಯಾವ ಪ್ರಾಣಿಯದು ಎಂಬುದೇ ಗೊತ್ತಾಗುತ್ತಿರಲಿಲ್ಲ,   ಅದೂ ಅದನ್ನು ತರುತ್ತಿದ್ದವರೇನು  ಈ ಮೊದಮೊದಲು ಬರುತ್ತಿದ್ದ ಸುರಸುಂದರಿಯರು ಅಂದುಕೊಂಡಿರಾ, ಅಲ್ಲ, ಅವರನ್ನು ನೋಡುತ್ತಿದ್ದಂತೆ, ನನ್ನ ಮನದಲ್ಲಿ, ಈ ಹುಡುಗಿಯರ ಸಹವಾಸವೇ  ಬೇಡ , ಮದುವೆಯೂ ಬೇಡ, ಎಂದು ಜೀವನದಲ್ಲಿ ಜಿಗುಪ್ಸೆ ಬಂದು ಹಿಮಾಲಯಕ್ಕೆ ಓಡಿಬಿಡಬೇಕು ಅಂಥಾ ಸೇವಕಿಯರು, ಅವರು ತಂದು ಕೊಡುತ್ತಿದ್ದರು, ಯಾರಿಗೂ ಹೇಳುವಹಾಗಿಲ್ಲ, ನನ್ನ ಪರಿಸ್ಥಿತಿ, ಅಲ್ಲಿ ಅಪ್ಪನಿಗೋ ವಿವಿಧ ಬಗೆಯ ಭಕ್ಷ್ಯಭೋಜನಗಳು, ನನಗೆ ಈ ರೀತಿ,

 ನಾನು ಅಳಬೇಕೋ ,ನಗಬೇಕೊ ತಿಳಿಯದಾಯಿತು, ಇಲ್ಲಿಂದ ಓಡಿ ಹೋಗೋಣವೆ ಎಂದು ಕೆಲವು ಬಾರಿ ಯೋಚಿಸಿರುವೆ, ಆದರೆ ಎಲ್ಲಿ ಹೋಗೋದು, ತಿಳಿಯದ ಜಾಗ.

 ಅದೂ ಅಲ್ಲದೆ ನನ್ನ ಮನಸ್ಸು ಹೇಳಿತು, ನೀನು.. ಐಶ್ವರ್ಯ ರೈರಂತೆ ಶೂನ್ಯ ಸೊಂಟದವನಾಗಿ ನೀ ಮೆಚ್ಚುವ ಹುಡುಗಿಯನ್ನು ಮದುವೆಯಾಗಬೇಕಲ್ಲವಾ ಈಗ ಇದೆಲ್ಲವನ್ನೂ ಸಹಿಸಿಕೋ ನಿನಗೂ ಒಳ್ಳೆಯ ದಿನಗಳು ಬರುವುವು ಎಂದು ಬುದ್ದಿ ಹೇಳಿದಂತಾಗಿ ನಾನು ಇದೆಲ್ಲವನ್ನೂ ಸಹಿಸಿಕೊಂಡೆ, ಅಷ್ಟರಲ್ಲಿ ನನಗಿಷ್ಟ ವಾದ ಚೀನಿ ಮೆನು ಗಳಾದ ಪಿಜ್ಜಾ, ಬರ್ಗರ್, ಗೋಬಿ ಮಂಚೂರಿ, ನೂಡಲ್ಸ್, ಮಾಂಸಾಹಾರಿ ಆಹಾರಗಳನ್ನು  ತಿನ್ನುವುದು ಇರಲಿ ಅದರ ಹೆಸರು ಹೇಳಿದರೆ ಸಾಕು ವಾಕರಿಕೆ ಬಂದು ಬಿಡುತ್ತಿತ್ತು,

ಮತ್ತೆ ಇನ್ನೊಂದು ವಾರ ಸಸ್ಯಾಹಾರೀ ಆಹಾರವೂ ಅದೇ ರೀತಿ ಇದ್ದು ಯಾವ್ಯಾವುದೋ ಗೊತ್ತಿಲ್ಲದ ಚೀನಾದ ಕಾಡುಗಳಲ್ಲಿ ಬೆಳೆಯುತ್ತಿದ್ದ ಗೆಡ್ಡೆ ಗೆಣಸುಗಳನ್ನು, ಹಣ್ಣು, ಹಂಪಲುಗಳನ್ನು ಕೊಡುತ್ತಿದ್ದರು, ಅವುಗಳೂ ಒಂದೂ ಸಿಹಿಯೂ ಇಲ್ಲ, ಎಲ್ಲವೂ ಆಗಲಕಾಯಿಯ ಹಾಗೆ ಕಹಿ, ನಿಂಬೆಹಣ್ಣಿನ ಹಾಗೇ ಹುಳಿ, ಈ ಹಣ್ಣುಗಳನ್ನು ಭಾರತದಲ್ಲಿ ಎಂದೂ ನೋಡಿರಲಿಲ್ಲ,  ಅವುಗಳೂ ಎಲ್ಲಿ ಬೆಳೆದಿದ್ದವೋ,

 ಯಾವ ಮೋರಿಯಲ್ಲಿ ಬೆಳೆದಿದ್ದವೋ ದೇವರಿಗೇ ಗೊತ್ತು, ಒಂದು ದಿನದ ಆಹಾರವಾಗಿ ಅವರ ನೆಚ್ಚಿನ , ನಮ್ಮ ಶಾವಿಗೆ ಮಾದರಿಯ ಆಹಾರವಾಗಿ ನೂಡಲ್ಸ್ ಜೊತೆಗೆ ಎರಡು ಕಡ್ಡಿಗಳನ್ನು ಕೊಟ್ಟರು, ನಾನು ಈ ಒಂದು ತಿಂಗಳು ನಮ್ಮನ್ನು ತಿರುಗಾಡಲು ಬಿಟ್ಟಿದ್ದರಲ್ಲಾ ಆಗ ಇದನ್ನು ಈ ಕಡ್ಡಿಗಳ ಸಹಾಯದಿಂದ ತಿನ್ನುವುದು ಅಭ್ಯಾಸ ಮಾಡಿಕೊಂಡಿದ್ದೆ, ಆದರೆ ಅಂದು ಅದನ್ನು ನೋಡಿದೊಡನೆ ಜೋರಾಗಿ ಅರಚಿ ಕೊಂಡೆ , ನಾನು ಕಿರುಚಿದ ಶಬ್ಧಕ್ಕೆ ಇಡೀ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು, ಜೊತೆಗೆ ನನ್ನ ಅಪ್ಪನೂ ಸಹ ಓಡಿಬಂದರು, ಏನಾದರೂ ಅನಾಹುತವಾಯಿತಾ ಎಂದು, ಏತಕ್ಕೆ ಎಂದು ಕೇಳಿದರು, ನಾನು ಈ ನೂಡಲ್ಸ್ ನೋಡಿದೊಡನೆ ಇದು ನಮ್ಮ ಊರಿನ ಎರೆಹುಳುಗಳು ಎಂದು ಭಯಪಟ್ಟು ಗಾಬರಿಗೊಂಡಿದ್ದೆ,

ಆಗ ಅವರೆಲ್ಲರೂ ನಕ್ಕು, ಸುಮ್ಮನೆ ಒಳಗೆ ಹೋದರು.

       ಈ ಮೊದಲು ಸಿಕ್ಕದ್ದೆಲ್ಲಾ ತಿನ್ನುತ್ತಿದ್ದೆ ನಾನು ಈಗ ತುಂಬಾ ಬದಲಾಗಿದ್ದೆ, ಸುಮಾರು ಕಾಲು ಭಾಗದಷ್ಟು ಕಡಿಮೆಯಾಗಿದ್ದೆ, ಆದರೂ ಇನ್ನೂ ತುಂಬಾ ಇಳಿಸಬೇಕಿತ್ತು ಹೊಟ್ಟೆಯನ್ನು, ಮತ್ತಿನ್ಯಾವ ರೀತಿಯ‌ ಚಿಕಿತ್ಸೆ ಇರುವುದೋ ದೇವರೇ ಕಾಪಾಡಪ್ಪ ಎಂದು ಮೊದಲಬಾರಿಗೆ ದೇವರಲ್ಲಿ ಮೊರೆಇಟ್ಟೆ,

 ಹೊಟ್ಟೆಬಾಕತನ ಮಾಯವಾಗಿತ್ತು,   ಹೀಗೇ ನಾಲ್ಕು  ತಿಂಗಳು ಮುಗಿಯಿತು, ನಾನಾ ರೀತಿಯ ಆಹಾರದ  ಪ್ರಯೋಗಗಳನ್ನು ನನ್ನ ದೇಹದ ಮೇಲೆ ಮಾಡಿದರು, ಅಷ್ಟರಲ್ಲಿ ನಾನೂ ಸ್ವಲ್ಪ ಕರಗುತ್ತಾ, ಸಿಕ್ಕಿದ್ದೆಲ್ಲಾ ತಿನ್ನುವುದು ಬಿಟ್ಟು ಅವರು ಏನು ಕೊಡುವರೋ ಅದನ್ನು ಮಾತ್ರ ಕೊಟ್ಟಷ್ಟು,ಇಷ್ಟಪಟ್ಟು ತಿನ್ನುತ್ತಿದ್ದೆ, ಈ ರೀತಿಯ‌ ಕೆಟ್ಟ ಆಹಾರಗಳನ್ನು ಕೊಟ್ಟ ನಂತರ ನನಗೆ ಸೇರದೇ ವಾಕರಿಕೆ ಯಾಗದಂತೆ ಔಷಧಿಗಳನ್ನು ಕೊಟ್ಟು ನಾನು ಅದೆಲ್ಲವನ್ನೂ  ಮರೆಯುವಂತೆ ಮಾಡುತ್ತಿದ್ದರು, ನನಗೆ ಹಿಂದಿನ ದಿನ ಹೇಗೆಲ್ಲಾ ಆಹಾರ ಕೊಟ್ಟಿದ್ದರು ಎಂಬುದು ಜ್ಞಾಪಕಬರದಂತೆ ಚಿಕಿತ್ಸೆ ಕೊಡುತ್ತಿದ್ದರು.

ಇನ್ನು ಎರಡು ತಿಂಗಳು ಬಾಕಿ ಇದೆ

ಈಗ ಯಂತ್ರ ಗಳಿಂದ ಚಿಕಿತ್ಸೆ ಶುರುವಾಯಿತು, ಎಲ್ಲ ಯಂತ್ರಗಳ ಸಹಾಯದಿಂದ ನನ್ನ ದೇಹವನ್ನು ದಂಡಿಸಬೇಕಿತ್ತು ,

ಬೆಳಗಿನ ಜಾವ ನಿದ್ರೆಯಿಂದ ಏಳಬೇಕಿತ್ತು, ಇಡೀ ದಿನ ಹಗಲು,  ರಾತ್ರಿ ನನ್ನ ಹೊಟ್ಟೆ ನೆಲದ ಮೇಲೆ ಇರುವ ತಿರುಗುವ  ರೋಲರ್ ಗಳ ಮೇಲೆ ಇರುವಂತೆ ಮಲಗಿಸಿ , ನನ್ನ ಹಿಂಭಾಗದ ನಿತಿಂಬಗಳ ಮೇಲೂ ಆ ರೋಲರ್ ಗಳು  ತಿರುಗುತ್ತಿದ್ದವು,  ಅವುಗಳ ಮಧ್ಯದಲ್ಲಿ ದಿನದ ನಾಲ್ಕು ಗಂಟೆ ನಾನು

 ಮಲಗಿರಬೇಕಿತ್ತು,  ಹೊಟ್ಟೆಯಲ್ಲಿ ಹಾಗೂ ಹಿಂಭಾಗದ ಲ್ಲಿೆರುವ ದುರ್ಮಾಮ್ಸ ಕರಗಲು ಸಹಾಯವಾಗುತ್ತಿತ್ತು, ಆಸ್ಪತ್ರೆಯಲ್ಲಿ ಒಂದು ಮಿಶಿನ್ ಇದ್ದು ಅದು MRI Scan machineಥರ,  ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಅದರಲ್ಲಿ ಚಿಕಿತ್ಸೆ ಪ್ರಾರಂಭಿಸಿದರು, ನಾನು ಅದರೊಳಗೆ ನಿಂತರೆ, ನನ್ನ ತೊಡೆಯಿಂದ ಕುತ್ತಿಗೆವರೆಗೂ ಮುಚ್ಚಿಕೊಳ್ಳುತ್ತಿತ್ತು, ಸುಮಾರು ಹತ್ತು ಗಂಟೆಯ ಅವಧಿ, ಕೊನೆಗೆ ನನ್ನ ದೇಹದಿಂದ ಅಲ್ಪ ಸ್ವಲ್ಪ ಉಳಿದ ದುರ್ಮಾಂಸ, ಮತ್ತು ಹೊಟ್ಟೆ ಭಾಗದಲ್ಲಿ ಮಾಂಸವೆಲ್ಲಾ ಖಾಲಿಯಾದ ನಂತರ ಜೋತುಬಿದ್ದ ಹೊಟ್ಟೆಯ ಚರ್ಮ ಮತ್ತು ಹಿಂಭಾಗದ ನಿತಿಂಬಗಳ ಹೆಚ್ಚಾದ ಚರ್ಮವನ್ನು ಕತ್ತರಿಸಿ ಒಲಿದು ಸುಂದರ ದೇಹವನ್ನು ತಯಾರು ಮಾಡುತ್ತದೆ, (ಹೀಗೆ ಚಿಕಿತ್ಸೆ ಪಡೆಯುವಾಗ ಸುಮಾರು ಒಂದು ವಾರ ನನಗೆ ಎಚ್ಚರವಿರಲಿಲ್ಲ) ನಂತರ ಒಂದು ದಿನಕ್ಕೆ ಎರಡುಬಾರಿ  ಆ ಒಲಿದಿರುವ ಚರ್ಮಕ್ಕೆ ನಾನಾ ರೀತಿಯ ಮುಲಾಮುಗಳ ಲೇಪನ ಚಿಕಿತ್ಸೆ ಜೊತೆಗೆ ನಾನಾವಿಧವಾದ ನೈಸರ್ಗಿಕ ತೈಲಗಳಿಂದ ಅಭ್ಯಂಜನ ಸ್ನಾನ, ಆಹಾರವಾಗಿ ಕೇವಲ ಹಣ್ಣಿನ  ತಂಪು ಪಾನೀಯಗಳು, ಮಲಗಿ, ನಿಂತು, ಕುಳಿತು ಹೀಗೆ ನಾನಾ ವಿಧವಾದ ವ್ಯಾಯಾಮ  ಕಸರತ್ತು ಗಳನ್ನು ಎಡೆಬಿಡದೆ ಮಾಡಲೇಬೇಕಿತ್ತು, ಇದೂ ಒಂದು

ತಿಂಗಳು ಕಳೆದು, ಅಂತಿಮವಾಗಿ ಇನ್ನೊಂದು ತಿಂಗಳು ಮತ್ತಷ್ಟು ಕಠಿಣವಾದ ಚಿಕಿತ್ಸೆಗಳು ಪ್ರಾರಂಭವಾದವು,  ಆಗ ನನ್ನ ಜೊತೆ ಒಬ್ಬರೂ ಚೀನಾ ಸುಂದರಿಯರಿರಲಿಲ್ಲ, ಎಲ್ಲವೂ ಯಾಂತ್ರಿಕವಾದ ರೋಬೋಟುಗಳ ಸಹಾಯದಿಂದ  ನಡೆಯುತ್ತಿದ್ದವು, ಅವುಗಳ ಬಳಿ ನನ್ನ ರೋಧನೆ ಹೇಗೆ ಹೇಳಿಕೊಳ್ಳೋದು, ಎಲ್ಲವೂ ದೂರದ ಒಂದು ಕೋಣೆಯಿಂದಲೇ ನಿಯಂತ್ರಣ ಮಾಡುತ್ತಿದ್ದರು, ಅವರುಗಳು  ಎಲ್ಲವನ್ನೂ ಸಿ ಸಿ ಕ್ಯಾಮೆರಾ ಗಳ ಮುಖಾಂತರ ನನ್ನ ದೇಹದ ಹೊಟ್ಟೆಯ ಭಾಗಗಳನ್ನು ನೋಡುತ್ತಾ, ರೋಬೋಟುಗಳನ್ನು ಬಳಸಿಕೊಂಡು ಔಷಧಿ, ಚುಚ್ಚುಮದ್ದುಗಳ ಚಿಕಿತ್ಸೆ ಕೊಡುತ್ತಿದ್ದರು.

        ಎಲ್ಲವೂ ಮುಗಿಯುವ ಹಂತಕ್ಕೆ ಬಂದಿತು , ನಾನೂ ನೂರೈವತ್ತಕ್ಕೂ ಹೆಚ್ಚು ತೂಗುತ್ತಿದ್ದವನು  ಸುಮಾರು ಎಪ್ಪತ್ತು ಕೆ.ಜಿ.ಗೆ ಇಳಿದಿದ್ದೆ , ನನಗೂ ತುಂಬಾ ಖುಷಿಯಾಯಿತು.

        ಆಸ್ಪತ್ರೆಯ‌ ಸಿಬ್ಬಂದಿಗಳು ನನಗೆ NOC ಕೊಟ್ಟು , ನಮಗೆ ಬೀಳ್ಕೋಡುಗೆ ಸಮಾರಂಭವನ್ನು ಏರ್ಪಡಿಸಿದ್ದರು, ಆಗ ನನಗೆ ತಿಳಿದದ್ದು ಅಂದು ನನ್ನ ಹಾಗೇ ದೇಶ ವಿದೇಶಗಳಿಂದ ಇಂಥ ದಡೂತಿ ಪುರುಷ, ಮಹಿಳೆಯರು ಇಲ್ಲಿಗೆ ಬಂದು ಸಂಪೂರ್ಣವಾಗಿ ಸಪೂರರಾಗಿ ಹೋಗುವರೆಂದು, ಈ ರೀತಿಯ

ಬೀಳ್ಕೊಡುಗೆ ಸಮಾರಂಭಗಳು ಪ್ರತಿ ತಿಂಗಳೂ ಇಲ್ಲಿ ಸರ್ವೇಸಾಮಾನ್ಯ, ಪ್ರತಿ ತಿಂಗಳೂ ಇಲ್ಲಿಂದಲೇ ನೂರಾರು ಮಂದಿ ಹೀಗೆ ಚಿಕಿತ್ಸೆ ಪಡೆದು ಹೋಗುವರು.

      ನಮ್ಮನ್ನು ನಾನಾ ರೀತಿಯ ಚೀನೀ ಉಡುಗೊರೆಗಳನ್ನು ನೀಡಿ ಸತ್ಕರಿಸಿದರು, ಅಲ್ಲದೇ ನಾನು ಚೀನಾಗೆ ಬಂದಂದಿನಿಂದ ಹೇಗೆಲ್ಲಾ ಸುತ್ತಾಡಿದೆ, ಏನೇನು ಆಹಾರ ತಿಂದೆ, ಹೇಗೆ ತಿಂದೆ ಎಷ್ಟೆಷ್ಟು ತಿಂದೆ, ಹೇಗೆ ಆಸ್ಪತ್ರೆಯಲ್ಲಿ ಕಷ್ಟ, ಸುಖ, ನೋವು ಅನುಭವಿಸಿದೆ ಬಂದಾಗ ಎಷ್ಟು ದಪ್ಪಗಿದ್ದೆ, ಇಂದು ಎಷ್ಟಿರುವೆ, ಏನೇನೆಲ್ಲಾ ಚಿಕಿತ್ಸೆಯಾಯಿತು, ಹೇಗಿದ್ದೆ, ಹೇಗಾದೆ,   ಎಂಬುದೆಲ್ಲವನ್ನೂ ಒಂದು CDಮಾಡಿ ದೊಡ್ಡ ಪರದೆಯ ಮೇಲೆ‌ ನನಗೆ ತೋರಿಸಿ, ಅದನ್ನು ನನಗೆ ಜ್ಞಾಪಕ ವಾಗಿ ಕೊಟ್ಟರು, ಅದೆಲ್ಲವನ್ನೂ ಅದ್ಹೇಗೆ, ಅದಾವ ಸಮಯದಲ್ಲಿ ನನ್ನ ಜೊತೆಗೇ ಇದ್ದು ಕ್ಯಾಮೆರಾದಲ್ಲಿ ಸೆರೆಹಿಡಿದರೆಂಬುದೇ ಯಕ್ಷಪ್ರಶ್ನೆ, ನಾನೂ ಅವರಿಗೆ ಏನಾದರೊಂದು ಉಡುಗೊರೆಯನ್ನು ಕೊಡಬೇಕೆಂದು ಯೋಚಿಸಿ, ಅವರದೇ ಭಗವಂತನಾದ ಬುದ್ಧನ ಚಿಕ್ಕದಾದ ಒಂದು ಚಿನ್ನದ ವಿಗ್ರಹವನ್ನು ನೀಡಿದೆ.

ಮತ್ತೆ ನಮ್ಮಿಬ್ಬರನ್ನೂ ಅವರ ಇಬ್ಬರು ಸಿಬ್ಬಂದಿಗಳು ವಿಮಾನದವರೆಗೂ ಬಂದು ಬೀಳ್ಕೊಟ್ಟರು.

ನಾನು ಖುಷಿಯಾಗಿ ನನ್ನ ತವರಿಗೆ ಹಿಂದಿರುಗಿದೆ‌

      ಈಗ ಹಿಂದಿನ ನಾನು ನಾನಾಗಿರಲಿಲ್ಲ , ಐಶ್ವರ್ಯ ರೈ ಅಷ್ಟು ತೀರಾ ಸಣ್ಣಗಾಗದಿದ್ದರೂ ಒಬ್ಬ ಪುರುಷ ಈ ವಯಸ್ಸಿನಲ್ಲಿ ಎಷ್ಟಿರಬೇಕೋ ಅಷ್ಟು ಇದ್ದೆ, ಮನೆಗೆ ನಾನು ಬರುವದಿನ ನನ್ನ ಕುಟುಂಬದವರು, ಆತ್ಮೀಯ ಗೆಳೆಯರು, ಎಲ್ಲರೂ ಸೇರಿದ್ದಾರೆ, ನಾನು ಬಂದೊಡನೆ, ಎಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದಂತೆ ನನಗೂ ಖುಷಿಯಾಗಿ ಇಷ್ಟು ದಿನ ನಡೆದದ್ದನ್ನೆಲ್ಲಾ ವಿವರಿಸಿದೆ, ಎಲ್ಲರೂ ಖುಷಿಪಟ್ಟರು, ಅಂದಿನಿಂದ ನಾನೂ ಅತಿಯಾಗಿ ತಿಂದು ದಡೂತಿ ದೇಹ‌ಬೆಳೆಸೋದುಬಿಟ್ಟು ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿದೆ,

ಚೀನಾದಿಂದ ಬಂದ ಒಂದು ತಿಂಗಳೊಳಗಾಗಿ ಒಂದು ಸುಂದರ ಹುಡುಗಿ ಜೊತೆ ನನ್ನ ವಿವಾಹ ಗೊತ್ತು ಮಾಡಿದರು, ಮದುವೆಗೆ ಇನ್ನೂ ನಾಲ್ಕು ತಿಂಗಳು ಸಮಯ ಇತ್ತು, 

ಆದರೆ ದಿನಗಳು ಕಳೆದಂತೆ ನನ್ನ ದೇಹದ ಮೇಲೆಯೇ ಏಕೋ ನನಗೆ ಅನುಮಾನ ಮೂಡತೊಡಗಿತು, ಕಾರಣ ಚೀನಾದಿಂದ ಬಂದಾಗ ಸುಮಾರು ಎಪ್ಪತ್ತು  ಕೆ.ಜಿ. ತೂಗುತ್ತಿದ್ದವನು, ದಿನಗಳೆದಂತೆ ಕಡಿಮೆಯಾಗುತ್ತಾ ಬಂದೆ, ಈ ಮೂರು ತಿಂಗಳಲ್ಲಿ ಎಷ್ಟು ಕಡಿಮೆಯಾಗಿದೆ ಅಂದರೆ, ಹದಿನೈದು ಕೆ.ಜಿ. ವರೆಗೂ , ನನಗೆ ಭಯವಾಯಿತು , ಆ ಚೀನಾದವರನ್ನು ಫೋನಿನಲ್ಲಿ ಸಂಪರ್ಕಿಸಿದರೆ,

ಅವರಿಂದ ನಕಾರಾತ್ಮಕ ಉತ್ತರ , ಅದೂ ಅಲ್ಲದೆ ಅವರು , ನಾವು ಹೇಳಿದಂತೆ ,NOC ಕೊಟ್ಟು ಕೈ ತೊಳೆದುಕೊಂಡಿದ್ದಾರೆ.

ಮತ್ತೆ ನನಗೆ‌ ಭಯ ಕಾಡತೊಡಗಿತು, ಮದುವೆಯಾಗುವುದೋ ಇಲ್ಲವೋ , ನಾನು ಹೀಗೆ ಕರಗಿಹೋಗುವೆನಾ ಎಂದು ಹಗಲು, ರಾತ್ರಿ ಭಯವಾಗತೊಡಗಿತು, ಕನಸಿನಲ್ಲೂ ನನಗೆ ಕಾಡಿ, ನಿದ್ರೆಯೇ ಇಲ್ಲದಂತೆ ಆಯಿತು, ನನ್ನನ್ನು ಮದುವೆಯಾಗುವ ಹುಡುಗಿ ನನ್ನನ್ನು ನೋಡಿ ಭಯಪಟ್ಟು ಓಡಿಹೋಗಿ,

,ನಾನು ಇವನನ್ನು ಮದುವೆಯಾಗಲಾರೆ, ಇವನು ಕಡ್ಡಿ ರೀತಿ ಇದ್ದಾನೆ , ಗಾಳಿ ಬೀಸಿದರೆ ತೂರಿಕೊಂಡು ಹೋಗುವಹಾಗಿದ್ದಾನೆ, ಎಂದು.

  ಆಗ ಮದುವೆಯೂ ಮುರಿದುಬೀಳುವ ಸಂದರ್ಭ ಬಂದಿತು, ನನಗೋ ಜೀವನ ಏಕೆ ಹೀಗಾಯಿತು ಎಂದುಕೊಂಡು ನಮಗೆ ತಿಳಿದಿರುವ ಒಬ್ಬ ವೈದ್ಯರ ಬಳಿ ಹೋದೆ, ಅವರು ನನಗೆ ಕೆಲವು ನ್ಯೂಟ್ರಿಷನ್ ಔಷಧಿಗಳನ್ನು ಸುಮಾರು ನಾಲ್ಕೈದು ತಿಂಗಳು ಉಪಯೋಗಿಸುವುದಕ್ಕೆ ಹೇಳಿ, ಕೆಲವು ಯೋಗಾಸನ, ವಾಕಿಂಗ್ ಮಾಡಲು ಹೇಳಿದರು,

ಅವರು ಹೇಳಿದಂತೆ ಕೇಳಿದೆ,  ಔಷಧಿಗಳನ್ನು

ತೆಗೆದುಕೊಂಡೆ,

ಈಗ ನಾನು  ನಾನಾಗುವ ಸಮಯ ಬಂದಿತು, ಸಪೂರವಾಗಿದ್ದ ನನ್ನ ದೇಹ‌ ಒಂದು ಹಂತಕ್ಕೆ ಬಂದಿತು, ಈಗ ನನ್ನದೇಹದ  ಗಾತ್ರ ಸುಮಾರು ಎಪ್ಪತ್ತು ಇದೆ, ನಾನು ಅದೇ ಹುಡುಗಿಯನ್ನು ಮನಸಾರೆ ಮೆಚ್ಚಿ ಮದುವೆಯಾಗಿ, ಎರಡು ಮಕ್ಕಳ ಸುಖೀ ಕುಟುಂಬ ನನ್ನದಾಗಿದೆ.

     

       -ರಾಜೇಂದ್ರ ಕುಮಾರ್ ಗುಬ್ಬಿ