Click here to Download MyLang App

ಭವಿಷ್ಯದ ಅವಾಂತರ : ರಾಜೇಂದ್ರ ಕುಮಾರ್ ಗುಬ್ಬಿ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟಸ್ವರೂಪದ ಕನ್ನಡ

ಒಮ್ಮೆ ರಾಜಾಜಿ ನಗರದ ಒಂದು ಶಾಸ್ತ್ರ ಹೇಳುವ ಜ್ಯೋತಿಷ್ಯಿ ಹತ್ತಿರ ನನ್ನ ಭವಿಷ್ಯ ಕೇಳಲು ಹೋದೆ, ಅದೊಂದು ತುಂಬಾ ಚಿಕ್ಕದಾದ ಸುಮಾರು 8/8 ಅಡಿಯ ಅಂಗಡಿ , ನಾನು ಒಳಹೊಕ್ಕ ತಕ್ಷಣ ಅಲ್ಲೊಬ್ಬ ಮಧ್ಯವಯಸ್ಕ ಉದ್ದನೆಯ ಗಡ್ಡ, ಮೀಸೆ ಬಿಟ್ಟು ಹಣೆಗೆ ದಟ್ಟಣೆಯ ಬಿಳೀ ವಿಭೂತಿಯ ಮೂರು ಉದ್ದದ ಪಟ್ಟಿಗಳ ಮೇಲೆ ಸುಮಾರು ಒಂದೂವರೆ ಇಂಚಿನ ವ್ಯಾಸವುಳ್ಳ ಕುಂಕುಮದ ತಿಲಕವಿಟ್ಟು, ಕಿವಿಗಳಿಗೆ ಚಿನ್ನದ ಲೋಲಾಕುಗಳು, ಕೈಗಳಿಗೆ  ದೊಡ್ಡದಾದ ಕೈಗಡಗ, ಕೊರಳಲ್ಲಿ ಎರಡು ದೊಡ್ಡದಾದ ರುದ್ರಾಕ್ಷಿ ಮಾಲೆಯ ಜೊತೆ ಮೂರು, ನಾಲ್ಕು ಚಿನ್ನದ ಸರ ಧರಿಸಿ, ಮೈಸೂರು ರೇಷಿಮೆ ಜುಬ್ಬಾ, ಪಂಚೆ, ಜೊತೆಗೆ ರುಮಾಲು ಧರಿಸಿ, ಠೀಕುಠಾಕಾಗಿ ವಿಜೃಂಭಿಸುತ್ತ ದೊಡ್ಡ ಸಿಂಹಾಸನ ಮಾದರಿಯ ಕುರ್ಚಿಯಲ್ಲಿ ಆಸೀನನಾಗಿದ್ದನು.

    ಅವನ ಎದುರಿಗೆ ಒಂದು ಮಧ್ಯವಯಸ್ಕ ದಂಪತಿ  ಆಸೀನರಾಗಿದ್ದರು, ಅದರಲ್ಲಿ ಆ ಪತಿ ತುಂಬಾ  ತೂಕವುಳ್ಳವನಾಗಿದ್ದನು, ಅಂದರೆ ದೇಹದಲ್ಲೂ ಜೊತೆಗೆ ಅಂತಸ್ತಿನಲ್ಲೂ......... ಎರಡೂ ಕೈಗಳು

ಎಂಟೂ ಬೆರಳುಗಳಿಗೆ ಚಿನ್ನದ ಉಂಗುರಗಳು, ಕೊರಳಲ್ಲಿ ಕಿರುಬೆರಳು ಗಾತ್ರದ ನಾಲ್ಕು ಚಿನ್ನದ ಸರಗಳು...............

ಇನ್ನು ಅವನ ಧರ್ಮಪತ್ನಿ......ಕೇಳಬೇಕೇ......ಅವಳೂ ಅವನಷ್ಟೇ ತೂಕದವಳು ಜೊತೆಗೊಂದರ್ಧ ಕೇಜಿಯಷ್ಟು ಚಿನ್ನವನ್ನು ದೇಹದ ಮೇಲೆ ಹೊತ್ತು ಕುಳಿತಿದ್ದಳು, ಅದೇನು ಪರಿಹಾರ  ಕೇಳಲು ಬಂದಿದ್ದರೋ ಆ ದೇವರಿಗೇ ಗೊತ್ತು.

  ನಾನು ಅಚಾನಕ್ಕಾಗಿ ಆ ಕೋಣೆಯ ಒಳಹೊಕ್ಕಾಗ ನನ್ನನ್ನು ನೋಡಿದ ಆ ಮೂವರ ಮುಖದಲ್ಲೂ ನಾನೊಬ್ಬ ಉಗ್ರಗಾಮಿಯೇ ಬಂದಿರುವಂತೆ ನನ್ನನ್ನು ಗುರುಗುಟ್ಟಿ ನೋಡತೊಡಗಿದರು, ನಂತರ ಆ ಜ್ಯೋತಿಷಿಯು ನನ್ನನ್ನು ಕುರಿತು ಏನು........ಏನು.........ಬಂದಿದ್ದು, ಏನು ಬೇಕು ಎಂಬಂತೆ ಪ್ರಶ್ನೆಗಳ‌ ಸುರಿಮಳೆಯನ್ನೇ ಸುರಿಸಿದನು. ನಾನು ಆಗ...ನನ್ನ ಬಗ್ಗೆ ಸ್ವಲ್ಪ ಜ್ಯೋತಿಷ್ಯ ಕೇಳಬೇಕಿತ್ತು........ಎಂದು ಹೇಳಿದೆ. ಅಷ್ಟರಲ್ಲಿ ಆ ಬಂದಿದ್ದ ದಂಪತಿಗಳದೂ ಮಾತುಕಥೆ ಮುಗಿದಿತ್ತು ಅನ್ಸುತ್ತೆ, ಅವರೂ ನನಗೆ‌ ಕುರ್ಚಿ ಬಿಟ್ಟು ಎದ್ದು ಹೊರನಡೆದರು, ಅವರುಗಳು ಹೊರ ನಡೆಯುವಾಗಲೂ ಆ ಕಿರಿದಾದ ಬಾಗಿಲಿಗೂ

 ಸಾಲದಾಯಿತು, ಆ ಆನೆಯಂಥಾ ದೇಹಹೊಂದಿದ್ದ ದಂಪತಿಗಳಿಗೆ, ಆದರೂ ಹಾಗೆ ಹೀಗೆ ಒದ್ದಾಡುತ್ತಾ ಇಬ್ಬರೂ ಹೊರ ನಡೆದರು, ನಾನು ಆಸೀನನಾದೆ.

  ಅವನ ಕೋಣೆಯೋ ಹತ್ತಾರು ಚಂಡಿ, ಚಾಮುಂಡಿ ದೇವಿಯರು  ಉದ್ದನೆಯ ಕೆಂಪು ನಾಲಿಗೆಯನ್ನು ಹೊರಚಾಚಿ, ಎಡಗೈಲಿ ರಕ್ಕಸರ ರಕ್ತಸಿಕ್ತ ರುಂಡಗಳನ್ನಿಡಿದು, ಬಲಗೈಲಿ ರಕ್ತ ಸೋರುವ ಉದ್ದನೆಯ ತ್ರಿಶೂಲ ಹಿಡಿದ ಫೋಟೋಗಳು, ಚಾಮುಂಡಿ ದೇವಿಯ ಒಂದು ಪಂಚಲೋಹದ ವಿಗ್ರಹ ಜೊತೆ,  ನಾನಾ ವಿಧವಾದ ಭಂಗಿಗಳಲ್ಲಿ ರುವ ವಿವಿಧ ದೇವಿಯರ ದೊಡ್ಡ, ದೊಡ್ಡ ಫೋಟೋಗಳು,  ಹರಿಶಿಣ, ಕುಂಕುಮ, ಹೂಗಳಿಂದ ಪೂಜೆ ಮಾಡಿರುವ, ಮಂತ್ರಿಸಿದ ನಿಂಬೆ ಹಣ್ಣುಗಳು, ಹಚ್ಚಿ ಉರಿಯುತ್ತಿರುವ ಕರ್ಪೂರಗಳು ಊದುಬತ್ತಿಯ ದಟ್ಟಣೆಯ ಹೊಗೆಯಿಂದ ಕೂಡಿದ ಅವನ ಕೊಠಡಿ ಯಲ್ಲಿ ಅವನನ್ನು ನೋಡುತ್ತಿದ್ದಂತೆ ನನಗೆ ಎಲ್ಲವೂ ಆದಂತೆ ಅನುಭವ, ಮೈಯೆಲ್ಲಾ ಬೆವೆತು ಹೋದೆ,  ಎಷ್ಟು ಬೇಗ ಹೊರಗೆ ಓಡಿಬಿಡುವೆನೋ ಎಂದುಕೊಂಡು ಹಿಂದಕ್ಕೆ ತಿರುಗಿದೆ, ಆಗ ಆತ ನಿಧಾನವಾಗಿ ಬನ್ನಿ ಏನು ಸಮಾಚಾರ ಬಂದಿದ್ದು, ಎಂದು ಗಡಸು ಧ್ವನಿಯಲ್ಲಿ ಕೇಳಿದ, ಏನೂ ಇಲ್ಲ.......ನನಗೆ ಏಕೋ ವ್ಯಾಪಾರದಲ್ಲಿ

ಏನು ಮಾಡಿದರೂ ಸಕ್ಸೆಸ್ ಆಗ್ತಿಲ್ಲ ಅದಕ್ಕೇ ಪರಿಹಾರ ಕೇಳೋಣವೆಂದು ಬಂದೆ , ಎಂದು ಹೇಳಿದೆ,

ಆತ ಹೇಳಿದ ಈಗ ನಿಮ್ಮಲ್ಲಿ ಎಷ್ಟು ಹಣವಿದೆ ಎಂದು ಕೇಳಿದ, ನಾನೆಂದೆ ಹಣವಿಲ್ಲದಿರೋದಕ್ಕೇ ಬಂದಿರುವುದು ನಿಮ್ಮ ಬಳಿ, ಎಂದೆ. ಆತ ಮತ್ತೆ....ಈಗ ಒಂದೈನೂರು ರೂಪಾಯಿ ಕೊಡಿ ನಾನೆಲ್ಲಾ ನಿಮ್ಮ ಕಷ್ಟ ಪರಿಹಾರ ಮಾಡುವೆ ಅಂತ ಹೇಳಿದ, ಈತನಿಂದ ಎಷ್ಟು ಬೇಗ ತಪ್ಪಿಸಿಕೊಂಡು ಹೊರಗೆ ಹೋಗುವೆನೋ ಅಂದು ಕಾಯುತ್ತಿದ್ದೆ , ಆಗ ನನ್ನ ಜೇಬು ತಡಕಾಡಿದೆ ಸುಮಾರು ಅರವತ್ತೈದು ರೂಪಾಯಿ ಸಿಕ್ಕಿತು, ಹೆಚ್ಚು ಹಣ ಒಳಜೇಬಿನಲ್ಲಿತ್ತು, ಅದನ್ನು ಆತನೆದುರಿಗೆ ತೆಗೆಯಲಿಲ್ಲ,  ಅದನ್ನೇ ಅವನ ಕೈಗಿತ್ತು ಹೊರಗೆ ಓಡಿ ಬಂದೆ, ಅಷ್ಟರಲ್ಲಿ ನಾನು ಬೆವೆತು ನನ್ನ ಬಟ್ಟೆಗಳೆಲ್ಲಾ ತೊಯ್ದು ತೊಪ್ಪೆಯಾಗಿ, ಮೈ ನಡುಗುವಂತೆ ಭಾಸವಾಯಿತು, ನಾನು ಅವನಿಂದ ತಪ್ಪಿಸಿಕೊಂಡು ಬಂದು ಒಂದು ಕಲ್ಲಿನ ಕಟ್ಟೆಯ ಮೇಲೆ ಕುಳಿತು ಸುಮಾರು ಅರ್ಧ ಗಂಟೆ ಸುಧಾರಿಸಿಕೊಂಡು, ನಂತರ ಮನೆಕಡೆ ಹೊರಟೆ.

ನನಗೆ ಬೇಕಿತ್ತಾ........ಇದೆಲ್ಲಾ........ಹಣವಿಲ್ಲದಿದ್ದಾಗ

 

       -ರಾಜೇಂದ್ರ ಕುಮಾರ್ ಗುಬ್ಬಿ