Click here to Download MyLang App

ಅನಾಥ ಸಾವು.- ಬರೆದವರು :ರಾಜೇಂದ್ರ ಕುಮಾರ್ ಗುಬ್ಬಿ | ಸಾಮಾಜಿಕ |ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ |

"ಅನಾಥ ಸಾವು..........

ಕಲ್ಲಯ್ಯಾ ...... ಕಲ್ಲಯ್ಯಾ......ಎಲ್ಲಪ್ಪಾ ..... ಎಲ್ಲಿರುವೆ....ಕಾಣ್ತಾನೇಇಲ್ಲ, ಅದೆಲ್ಲಿ ಹೆಂಡ ಕುಡ್ಕೊಂಡು ಬಿದ್ಕೊಂಡಿದ್ದೀಯಾ....... ಕಲ್ಲಯ್ಯಾ....ಎಲ್ಲಿದ್ದೀಯಪ್ಪಾ........ಬಾರಪ್ಪಾ... ಬೇಗ ಬಂದು ಒಂದು ಗುಂಡಿ ತೋಡಯ್ಯಾ.....ಇನ್ನೇನು ಸಂಜೆಯೊಳಗೆ ಒಂದು ಶವ ಬರೋದ್ರಲ್ಲಿದೆ.  ಎಂದು ಒಂದೇ ಸಮನೆ ಆ ಸ್ಮಶಾನದ ಮುಖ್ಯಸ್ಥರು ಗುಂಡಿ ತೋಡುವ ಕಲ್ಲಯ್ಯನನ್ನು ಕೂಗುತ್ತಾ ಬಂದರು,  ಇಡೀ ಸ್ಮಶಾನವನ್ನೆಲ್ಲಾ ಹುಡುಕಿದರೂ ಕಲ್ಲಯ್ಯನ ಸುಳಿವೇ ಇಲ್ಲ, ಅದೆಲ್ಲಿ ಹೋದ ಈ ಕಲ್ಲಯ್ಯಾ.......ಎಂದು ಇಡೀ ಸ್ಮಶಾನವೆಲ್ಲಾ ಕೇಳುವಂತೆ ಕೂಗಿದರೂ ಅವನ ಸುಳಿವಿಲ್ಲ.
       ಹೌದು ವಯಸ್ಸು ಅರವತ್ತಾದರೂ, ಆರಡಿ ಎತ್ತರದ ಅಜಾನುಬಾಹು,  ಇನ್ನೂ ಕರಗದ ಗಂಡೆದೆಯ ದೇಹ , ತರುಣರು ಮೂವರು ಅಗೆದು ಸಿದ್ಧ ಪಡಿಸುವ, ಆರು-ಮೂರು ಅಡಿಯ  ಒಂದು ಶವದ ಗುಂಡಿಯನ್ನು ಅಷ್ಟೇ ಸಮಯದಲ್ಲಿ ಈ ಕಲ್ಲಯ್ಯ ಒಂದು ಹೆಂಡದ ಬಾಟಲ್ ಕುಡಿದು ಮಾಡಿ ಮುಗಿಸುವಂಥಾ ಅಂಗಸೌಸ್ಠವ, ತಲೆ, ಮುಖದ ತುಂಬೆಲ್ಲಾ ಹರಡಿರುವ  ಕೂದಲೆಲ್ಲಾ ಅಚ್ಛ ಬಿಳಿಬಣ್ಣದ್ದಾಗಿದ್ದರೂ ಮಣ್ಣಿನ ಬಣ್ಣಕ್ಕೆ ತಿರುಗಿ, ಬುಜದವರೆಗೂ ಇಳೆಬಿಟ್ಟಿವೆ, ಮಾತು ಕಡಿಮೆ, ಕಡಿಮೆ ಏನು? ಮಾತೇಇಲ್ಲ, ಸ್ನಾನ ಮಾಡಿ ಅದೆಷ್ಟೋ ವರುಷಗಳು ಕಳೆದಿವೆ, ಆದರೂ ಆತನ ಮುಖದ ತೇಜಸ್ಸು ಮಾತ್ರ ಕಡಿಮೆಯಾಗಿಲ್ಲ,ಅವನ ಕೆಲಸ ಕೇವಲ ಆರಡಿ-ಮೂರಡಿ ಶವದ ಗುಂಡಿ ತೋಡೋದು ಬಿಟ್ಟರೆ ಮತ್ತಿನ್ನೇನೂ ಬರೊಲ್ಲ, ಅವನ ಧಿರಿಸು.....ಒಂದು ಜುಬ್ಬಾ......ಬಿಳೀ ಬಣ್ಣದದ್ದಾದರೂ ಅದೂ ಬಣ್ಣ ಮಾಸಿದೆ , ಒಂದು  ಪಟಾಪಟಿ  ಚಡ್ಡಿ, ಕಾಲಿನ ಮಂಡಿವರೆಗೂ, ಊಟ ಕಡಿಮೆ, ಕಡಿಮೆ ಏನು ಬಂತು, ಆ ಊರು ಹೊರಗಿನ ಸ್ಮಶಾನದಲ್ಲಿ ಯಾರು ಇವನಿಗೆ ಊಟ ತಂದು ಕೊಡ್ತಾರೆ, ಬರೀ ಹೆಂಡ ಅಷ್ಟೇ.....ಆದರೂ ಪ್ರತಿದಿನ ಸಂಜೆಯಾಗುತ್ತಲೇ ಹೆಂಡದ ಅಂಗಡಿಗೆ ಹಾಜರು, ಈ ಕಲ್ಲಯ್ಯ.   ಆ ಅಂಗಡೀಲಿ ಪ್ರತಿದಿನ ಒಂದೊಂದು ಹೆಂಡದ ಬಾಟಲಿ ಕೊಡುವಂತೆ ಊರಿನ ಮುಖ್ಯಸ್ಥರು ಹೇಳಿರೋದ್ರಿಂದ ಆ ಮಾಲೀಕ, ಕಲ್ಲಯ್ಯನ ಮುಖ ನೋಡ್ತಿದ್ದಂತೆ ಅವನ ಕೈಗಿಡುತ್ತಾನೆ, ಜೊತೆಗೊಂಡಿಷ್ಟು, ಬಿಸಿ, ಬಿಸಿ ಬೋಂಡ, ಬಜ್ಜಿ, ಉಪ್ಪಿನಕಾಯಿ, ಇವೇ ಅವನ ಪ್ರತಿದಿನದ ಊಟ.
     ಈ ಕಲ್ಲಯ್ಯ ಯಾವ ಊರಿನವನು, ಇಲ್ಲಿಗೆ ಹೇಗೆ ಬಂದ, ಇವನಿಗೆ ಮದುವೆಯಾಗಿದೆಯಾ, ಹೆಂಡತಿ, ಮಕ್ಕಳು, ಹೆತ್ತವರು, ಹಿಂದೆ, ಮುಂದೆ......ಯಾರೂ ತಿಳಿದಿಲ್ಲ, ಆದರೆ ಹೀಗೇ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇದೇ ಸ್ಮಶಾನದಲ್ಲಿ ಗುಂಡಿ ತೋಡುವ ಮಾದ ಎಂಬುವವನಿದ್ದ, ಅವನೂ ಇವನ ಹಾಗೆಯೇ , ಆದರೆ ಒಂದು ದಿನ ಒಂದು ಅನಾಥ ಶವವನ್ನು ಈ ಕಲ್ಲಯ್ಯನೆಂಬ ಮನುಷ್ಯ ತಲೆಮೇಲೆ ಹೊತ್ತು ತಂದು ಈ ಮಾದನ ಮನ ಒಲಿಸಿ, ಇದು ಅನಾಥ ಭಿಕ್ಷುಕ ಶವ, ಇದನ್ನು ಹೇಗಾದರೂ ಮಾಡಿ ಹೂತು ಬಿಡು ಎಂದು ಗೋಗರೆದು, ಒಂದು ಬಾಟಲ್ ಹೆಂಡ ಕೊಡಿಸಿ ಅವನ ಕೈಯಿಂದ ಗುಂಡಿ ತೋಡಿಸಿ , ಇಬ್ಬರೂ ಸೇರಿ ಆ ಅನಾಥ ಶವದ ಅಂತ್ಯ ಕ್ರಿಯೆ ಮಾಡಿ ಮುಗಿಸಿದ್ದರು, ಅಂದಿನಿಂದ ಈ ಇಬ್ಬರೂ ಇದೇ ಸ್ಮಶಾನದಲ್ಲಿ ಒಟ್ಟೊಟ್ಟಿಗೇ ಶವಗಳ ಗುಂಡಿ ತೋಡೋದು, ಅಂತ್ಯಕ್ರಿಯೆ ಮಾಡೋದು, ಸ್ಮಶಾನವನ್ನು ಸ್ವಚ್ಛ ಮಾಡೋದು ಹೀಗೇ ಮಾದನ ಕೆಲಸಗಳಿಗೆ ಕೈಜೋಡಿಸುತ್ತಾ ಇಲ್ಲೇ ಉಳಿದನೆಂದೂ ಹೇಳುತ್ತಿದ್ದರು ಊರ ಮಂದಿ, ಆನಂತರದಲ್ಲಿ ಒಂದು ದಿನ ಶವದ ಗುಂಡಿ ತೋಡುವಾಗ ಗುಂಡಿಯೊಳಗೇ ಹೃದಯಾಘಾತವಾಗಿ ಎಪ್ಪತ್ತು ವರ್ಷದ ಮಾದ ಸಾವನ್ನಪ್ಪಿದ್ದಾಗ ಇದೇ ಐವತ್ತು ವರ್ಷದ ಕಲ್ಲಯ್ಯ ಬಿಕ್ಕಿ ಬಿಕ್ಕಿ ಅಳುತ್ತಾ ಮಾದನ ಶವದ ಅಂತ್ಯಸಂಸ್ಕಾರವನ್ನೂ ಮಾಡಿ ಕಂಬನಿ ಮಿಡಿದಿದ್ದ,  ಅಂದಿನಿಂದಲೂ ಇದೇ ಕಲ್ಲಯ್ಯ ಈ ಸ್ಮಶಾನದ ಉಸ್ತುವಾರಿಯೂ ಆಗಿದ್ದಾನೆ.
       ಈಗ ಈ ಸ್ಮಶಾನದ ಮುಖ್ಯಸ್ಥರು ಬಂದು ಕಲ್ಲಯ್ಯ ನನ್ನು ಹುಡುಕುತ್ತಿದ್ದಾರೆ ಆದರೆ ಅವನ ಸುಳಿವೇಇಲ್ಲ, ಏನಪ್ಪಾ ಮಾಡೋದು, ಬೇರೆ ಕಾರ್ಮಿಕರು ಈ ಕೆಲಸಕ್ಕೆ ಸಿಗೊಲ್ಲ, ಬೇರೆ ಊರಿಂದ ಕರೆಸೋಣವೆಂದರೆ....ಅವರಿಗೂ ಸ್ಮಶಾನದ ಕೆಲಸಗಳಿದ್ದರೆ.....ಅವರೂ ಬರೋಲ್ಲ, ಅದೆಲ್ಲಿ........ ಹೆಂಡದ ಮತ್ತು ಬಂದು, ಯಾವ ಮರದ ಕೆಳಗೆ ಅಥವಾ ಯಾವ  ಸಮಾಧಿ ಮೇಲೆ ಮಲಗಿದ್ದಾನೋ, ಇಷ್ಟು ದೊಡ್ಡ ಸ್ಮಶಾನದಲ್ಲಿ ಎಲ್ಲೀಂತ ಹುಡುಕೋದು, ಸಮಯ ಬೇರೆ ಮೀರಿಹೋಗ್ತಿದೆ, ಎಂದು ಅವರಿಗೆ ತಲೆ ಬಿಸಿಯಾಯಿತು, ಈಗಾಗಲೇ ಹನ್ನೊಂದು ದಾಟಿದೆ, ಇನ್ನೂ ಇವನ ಸುಳಿವಿಲ್ಲ, ಇಷ್ಟರಲ್ಲಿ ಸಾವಾಗಿರುವವರ ಮನೆಯ ಸಂಬಂಧಿಗಳು ಒಮ್ಮೆ ಬಂದು ಶವದ ಗುಂಡಿ ಪರಿಶೀಲಿಸುವರು, ಆದರೆ ಕೆಲಸವಿನ್ನೂ ಪ್ರಾರಂಭವೇ ಆಗಿಲ್ಲ.....ಎಂದು ನಾನಾ ಚಿಂತೆ ಆವರಿಸಿತ್ತು ಸ್ಮಶಾನದ ಮುಖ್ಯಸ್ಥರಿಗೆ.
      ಈ ಮುಖ್ಯಸ್ಥರು ಸ್ಮಶಾನದ ಒಳಗೆ ಹೋಗುತ್ತಿದ್ದಂತೆ ಅದೆಲ್ಲಿಂದಲೋ ಒಂದು ನಾಯಿ ಬೊಗುಳತೊಡಗಿತು, ಅದೂ ಕಲ್ಲಯ್ಯನ ಗೆಳೆಯನೇ, ಅವನೆಲ್ಲಿರುತ್ತಾನೋ ಅದೂ ಅಲ್ಲದೇ ಇರುತ್ತೆ, ಅದು ಬೊಗಳಿದ  ದಿಕ್ಕಿಗೆ ನೋಟ ಬೀರಿದ್ದರೆ ಅದು ಸ್ಮಶಾನದ ಆ ಕೊನೆಗೆ ಇದೆ , ಸ್ಮಶಾನದೊಳಗೆ ಹೋಗಲು ಆಗದು ಆ ಸ್ಥಳಕ್ಕೆ, ಕಾರಣ ಗಿಡಗೆಂಟೆಗಳು ತುಂಬಾ ಬೆಳೆದು ಚಿಕ್ಕ ಕಾಡಿನಂತಾಗಿದೆ ಸ್ಮಶಾನ, ಅಲ್ಲಿಗೆ ಹೋಗಬೇಕೆಂದರೆ ಸುಮಾರು ಒಂದು ಮೈಲು ಸುತ್ತಿ ಬಳಸಿ ಅಲ್ಲಿಗೆ ಹೋಗಬೇಕು, ನಾಯಿ ಇನ್ನೂ ಬೊಗಳುತ್ತಲೇಇದೆ, ನಾಯಿ ಎಲ್ಲಿ ಬೊಗಳುತ್ತೋ ಅಲ್ಲಿ ಕಲ್ಲಯ್ಯ ಇದ್ದೇಇರುವನೆಂಬ ನಂಬಿಕೆ ಬಹಳ ವರ್ಷಗಳಿಂದ ಮುಖ್ಯಸ್ಥರು ಕಂಡುಕೊಂಡ ಉಪಾಯ, ಆ ನಾಯಿ ಇಲ್ಲದೇ ಇದ್ದ ಪಕ್ಷದಲ್ಲಿ ಆ ಕಲ್ಲಯ್ಯ ಎಲ್ಲಾದರೂ, ಎಂದಾದರೂ ಹೀಗೆ ಹೆಂಡ ಜಾಸ್ತಿಯಾಗಿ ಕುಡಿದು ಬಿದ್ದಿದ್ದರೆ ಹುಡುಕುವುದು ಸಾಧ್ಯವೇ ಇಲ್ಲ
     ಸರಿ, ಮುಖ್ಯಸ್ಥರು ಗಡಿಬಿಡಿಯಿಂದ ಒಂದು ಬೈಕ್ ಏರಿ ಆ ದಿಕ್ಕಿಗೆ ಡುರ್ರ್...........ಅಂತ ಬಂದರೆ ಮತ್ತಷ್ಟು ಜೋರಾಗಿ ಬೊಗಳುತ್ತಲೇಇದೆ ನಾಯಿ, ಇವರು ಬಂದದ್ದನ್ನು ಗಮನಿಸಿದ ನಾಯಿ ಸುಮಾರು ದೂರ ಇರುವಾಗಲೇ ಅವರನ್ನು ನೋಡಲು ಓಡೋಡಿ ಬಂದಿದೆ, ಅದಕ್ಕೆ ಈ ಮುಖ್ಯಸ್ಥರ ಬಳಿ ಏನೋ ವಿಷಯ ಹೇಳುವ ತವಕ, ಅವರಿಗೋ ನಾಯಿಕಡೆ ಗಮನವಿಲ್ಲ, ಸಧ್ಯ ಕಲ್ಲಯ್ಯ ಸಿಕ್ಕರೆ ಸಾಕೆಂದು ಅವನ ಕೈಲಿ ಶವದ ಗುಂಡಿ ತೋಡಿಸಿದರೆ ತನ್ನ ಕೆಲಸ ಮುಗಿಯಿತೆಂದು ಭಾವಿಸಿ, ಸ್ಮಶಾನದ ಒಳಗೆ ಬಂದು ಕಲ್ಲಯ್ಯ ಎಲ್ಲಿ ಎಂದು ಹುಡುಕುತ್ತಿದ್ದರೆ, ನಾಯಿಯು ಬೊಗಳುವುದು ಮತ್ತಷ್ಟು ಜೋರಾಗಿದೆ, ಇವರ ಹಿಂದೆಯೇ ಸುತ್ತುತ್ತಾ ಏನೋ ಕಾತರದಿಂದ ಅತ್ತಿಂದಿತ್ತ ಓಡಾಡುತ್ತಿದೆ, ಇವರ ಪಂಚೆ ಹಿಡಿದು ಎಳೆಯುತ್ತಿದೆ, ಇವರಿಗೆ ಒಂದೂ ಅರ್ಥವಾಗುತ್ತಿಲ್ಲ, ನಾಯಿಯನ್ನು ದೂರ ತಳ್ಳಿದ ಅವರ ನೋಟವೆಲ್ಲಾ  ಆ ಕಲ್ಲಯ್ಯ ನ ಕಡೆಯೇ ಆದರೂ ಅವನ ಸುಳಿವಿಲ್ಲ, ನಾಯಿಯ ಆರ್ಭಟ ಜೋರಾಗುತ್ತಾ, ಅತ್ತ ಓಡುತ್ತಿದೆ, ಇತ್ತ ಓಡುತ್ತಿದೆ, ಮುಖ್ಯಸ್ಥರ ಪಂಚೆ ಮತ್ತೆ ಮತ್ತೆ ಎಳೆದು ಕರೆದುಕೊಂಡು ಹೋಗಲು ಚಡಪಡಿಸುತ್ತಿದೆ, ಯಾವಾಗ ಕಲ್ಲಯ್ಯನ ಸುಳಿವಿಲ್ಲ, ಆಗ ಇವರಿಗೂ ನಾಯಿಯ ಕಡೆ ಗಮನ ಬಂದು ಅದು ಕರೆದುಕೊಂಡು ಹೋದ ದಿಕ್ಕಿಗೆ ಅದರ ಹಿಂದೆಯೇ ಹೋದರೆ ಅಲ್ಲಿ ಕಲ್ಲಯ್ಯ ಒಂದು ಹಾಳು ಮಂಟಪದ ಕೆಳಗೆ ಅನಾಥ ಶವವಾಗಿ ಬಿದ್ದಿದ್ದಾನೆ, ಅದಾವ ಸಮಯದಲ್ಲಿ ಕಲ್ಲಯ್ಯನ ಪ್ರಾಣಪಕ್ಷಿ ಹಾರಿ ಹೋಗಿದೆಯೋ ತಿಳಿಯಲಿಲ್ಲ, ಈಗ ಮತ್ತಷ್ಟು ಗಾಬರಿಯಾದರು, ಮುಖ್ಯಸ್ಥರು, ಒಂದುಕಡೆ  ಆಗಲೇ ಮಧ್ಯಾಹ್ನ ದ ಸಮಯವಾಗಿದೆ, ಇನ್ನೂ ಶವದ ಗುಂಡಿ ತೋಡಿಲ್ಲ, ಇತ್ತ ಗುಂಡಿ ತೋಡುವ ಕಲ್ಲಯ್ಯನೇ ಅಸುನೀಗಿದ್ದಾನೆ, ಅವನ ದೇಹದ ಹತ್ತಿರ ಅವನೇ ಸಾಕಿ ಬೆಳೆಸಿದ ನಾಯಿ,  ತನ್ನ ಧಣಿ ಸತ್ತಿದ್ದರಿಂದ ಅವನ ದೇಹದ ಮೇಲೆಲ್ಲಾ ಮುತ್ತಿಡುತ್ತಿದೆ, ಈಗ ಸಮಯ ವ್ಯರ್ಥಮಾಡುವಂತಿಲ್ಲ, ಮೊದಲು ಯಾರಾದರೂ ಬೇರೆ ಕಾರ್ಮಿಕರನ್ನು ಕರೆತಂದು ಗುಂಡಿ ತೋಡಿಸಿ, ನಂತರ ಇವನಿಗೊಂದು ಗುಂಡಿ ತೋಡಿಸಬೇಕು, ಅದಕ್ಕೂ ಮೊದಲು ಅವನ ಹತ್ತಿರ ಧೈರ್ಯವಾಗಿ ಹೋಗಿ ಅವನ ಶವವನ್ನು ಪರಿಶೀಲಿಸಿದರೆ ಹಿಂದಿನ ದಿನವೇ ಯಾವಾಗಲೋ ಅವನ ಪ್ರಾಣ ಹೋಗಿದೆ ಇವನೂ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ.
   ಕೂಡಲೇ ಊರಿಗೆ ಹಿಂತಿರುಗಿ ಬಂದು ಊರವರಿಗೆಲ್ಲಾ ವಿಷಯ ಮುಟ್ಟಿಸಿ ಮುಂದಿನ ಕಾರ್ಯಗಳ ಬಗ್ಗೆ ಚರ್ಚೆ ಮಾಡಿ ಮತ್ತಷ್ಟು ಸಿಬ್ಬಂದಿಯೊಂದಿಗೆ ಬೇರೆ ಊರಿನ ಸ್ಮಶಾನದ ಗುಂಡಿ ತೋಡುವ ಕಾರ್ಮಿಕರ ಮನವೊಲಿಸಿ ಕರೆಸಿ, ಗುಂಡಿ ತೋಡಿಸಿದರು.
    ನಂತರ ಊರವರ ಸಹಾಯದಿಂದ ಇಷ್ಟುದಿನದಿಂದ ಊರವರ ಶವಗಳಿಗೆ ಒಂದಿಷ್ಟೂ ಹಣ ಪಡೆಯದೆ ಶವಸಂಸ್ಕಾರಕ್ಕೆ ಗುಂಡಿ ತೋಡಿ ಸಹಾಯ ಮಾಡುತ್ತಿದ್ದ ಕಲ್ಲಯ್ಯನ ಅಂತ್ಯಸಂಸ್ಕಾರ ವನ್ನು ಮಾಡಿ ಮುಗಿಸಿದ್ದರು.

-ರಾಜೇಂದ್ರ ಕುಮಾರ್ ಗುಬ್ಬಿ