Click here to Download MyLang App

ಅಮ್ಮ - ಬರೆದವರು :ಪೂರ್ಣೇಶ ಎಸ್ | ಸಾಮಾಜಿಕ |ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ

ಅಮ್ಮ :-ತನ್ನ ನೋವ ಮರೆತು, ನಮ್ಮೆಲ್ಲರ ಓಲೈಸುವ ಜಗಜನನಿ!
ಆ ದಿನ ಸಂಜೆ ಕೆಲಸ ಮುಗಿಸಿ ತಡವಾಗಿ ಮನೆಗೆ ಬಂದ ತಕ್ಷಣ,ಬೆಳಿಗ್ಗೆ ಇಂದ ಮನೇಲಿ ಇದ್ದ ಅವನ ಅಮ್ಮ "ಪ್ರಶು, ಈಗ ಬಂದ್ಯೇನೋ.. ಯಾಕೋ ಲೇಟಾಯ್ತು.. ಏನು ತೊಂದರೆ ಆಗಿಲ್ಲ ತಾನೆ" ಅಂತ ಗಾಬರಿಯಿಂದ ಕೇಳ್ತಾರೆ. ಅವನು ತಲೆ ಬಗ್ಗಿಸಿ ಫೋನ್ ನೋಡುತ್ತಲೇ ಅಮ್ಮನ ಮಾತನ್ನ ಬಲ ಕಿವಿಯಿಂದ ಕೇಳಿ ಎಡ ಕಿವಿಯಿಂದ ಬಿಟ್ಟು “ಹು ಹು” ಅಂತ ತಲೆ ಆಡಿಸಿ ಅವಳ‌ ಕಡೆಯೂ ಸಹ ನೋಡದೆ ರೂಮಿಗೆ ಹೋಗಿ ದಬಾರ್ ಅಂತ ಬಾಗಿಲು ಹಾಕಿಕೊಂಡ. ಊಟಕ್ಕೆ ಬಾರೋ ಅಂತ ಕರೆದಾಗ ರೂಮಿನಿಂದ ಹೊರಗೆ ಬಂದ.  ಅಮ್ಮ ಊಟ ಬಡಿಸಿದರು. ಏನೂ ಮಾತಾಡದೆ ಊಟ ಮಾಡ್ತಿದ್ದ ಪ್ರಶಾಂತ. ಇನ್ನೇನು ಪ್ರಶುವಿನೊಟ್ಟಿಗೆ ಮಾತಾಡಬೇಕು ಅಷ್ಟರಲ್ಲಿ ಪಕ್ಕದಲ್ಲಿ ಇದ್ದ ಫೋನ್ ರಿಂಗ್ ಆಯ್ತು. ಪ್ರಶಾಂತ ತಕ್ಷಣ ತಟ್ಟೆಯಲ್ಲಿ ಕೈ ತೊಳೆದು ಫೋನ್ ಕಿವಿಗಿಟ್ಟುಕೊಂಡು ಎದ್ದು ಹೋದ. ತಾಯಿಯ ಊಟ ಆಯ್ತಾ ಅಂತ ಸಹ ಕೇಳಲಿಲ್ಲ ಪುಣ್ಯಾತ್ಮ. ಮತ್ತೆ ಫೋನಿನಲ್ಲಿ ಯಾರೊಟ್ಟಿಗೋ ಮಾತಾಡ್ತಾ ರೂಮಿಗೆ ಹೋಗಿ ದಬಾರ್ ಅಂತ ಬಾಗಿಲು ಹಾಕಿಕೊಂಡ. ದಿನವೆಲ್ಲ ಕೆಲಸ ಮಾಡಿ ದಣಿದಿರ್ತಾನೆ ಆರಮ್ ಮಾಡ್ಲಿ ನಾನು ಬೆಳಿಗ್ಗೆ ಎದ್ದಮೇಲೆ ಮಾತಾಡ್ಸಬೋದು ಅಂತ ಈ ತಾಯಿ ತನಗೆ ತಾನೆ ಮನಸ್ಸಲ್ಲಿ ಸಮಾಧಾನ ಮಾಡಿಕೊಂಡು ಪ್ರಶು ಎಷ್ಟು ತಿಂದನೋ ಅದಕ್ಕಿಂತ ಎರಡು ತುತ್ತು ಕಡಿಮೆಯೇ ತಿಂದು ಮಲಗುತ್ತಾಳೆ. ಬೆಳಿಗ್ಗೆ ಪ್ರಶಾಂತ ಏಳೋ ಅಷ್ಟರಲ್ಲಿ ಒಂಭತ್ತು ಗಂಟೆ. ಹತ್ತು ಗಂಟೆಗೆ ಆಫೀಸಿನಲ್ಲಿರಬೇಕು. ಇನ್ನೊಂದೇ ಗಂಟೆ ಉಳಿದಿರೋದು, ಅರ್ಧ ಗಂಟೆ ಅವಧಿಯಲ್ಲಿ ಎದ್ದು ಸ್ನಾನ ಮಾಡಿ ಆಫೀಸಿಗೆ ರೆಡಿ ಆಗ್ತಾನೆ. ರೂಮಿಂದ ಹೊರಗೆ ಬರ್ತಾನೆ, ಅಷ್ಟೊತ್ತಿಗೆ ತಿಂಡಿ ಸಿದ್ದವಾಗಿರುತ್ತೆ. ಆತುರಾತುರವಾಗಿ ಬಂದು ತಿಂಡಿ ತಿನ್ನುತ್ತಲೇ ಫೋನ್ ಕೈಗೆತ್ತಿಕೊಂಡು ಯಾರೊಟ್ಟಿಗೋ ಮಾತಾಡ್ತಾ ಇರ್ತಾನೆ. ಈಗಲೂ ಪ್ರಶುನ ಮಾತಾಡಿಸೋಕೆ ಆಗೋದಿಲ್ಲ ಅಮ್ಮನಿಗೆ. ಬಾಗಿಲಿನಿಂದ “ಅಮ್ಮ ತರಕಾರಿ” ಅಂತ ಕೂಗ್ತಾಳೆ ತರಕಾರಿ ಮಾರೋಳು. ಇವನು ಫೋನಿನಲ್ಲಿ ಮಾತಾಡಿ ಮುಗಿಸೋ ಅಷ್ಟ್ರಲ್ಲಿ ತರಕಾರಿ ತಂದುಬಿಡೋಣ ಅಂತ ಪಟ ಪಟ ಟೊಮೆಟೊ, ಬದನೆಗಳ ಆರಿಸಿ ತರಕಾರಿ ತಗೊಂಡು ಒಳಗೆ ಬರ್ತಾಳೆ. ಆಲ್ರೆಡಿ ತಿಂಡಿ ತಿಂದು ಮುಗಿಸಿದ ಪ್ರಶಾಂತ. ಅವನು ಕೈ ತೊಳೆದ ತಕ್ಷಣ ಒರೆಸಿಕೊಳ್ಳೋಕೆ ಬಟ್ಟೆ ಕೊಟ್ಟು ಅವನನ್ನೇ ದಿಟ್ಟಿಸಿ ನೋಡ್ತಾಳೆ, ಅವನು " ಯಾ ಯಾ, ಆಮ್ ಆನ್ ದಿ ವೇ" ಅಂತ ಫೋನಿನಲ್ಲಿ ಬ್ಯುಸಿ. ಸರಿ ಸಂಜೆ ಬಂದಾಗ ಮಾತಾಡೋಣವೆಂದು ಖುಷಿಯಿಂದ ಕಳಿಸಿಕೊಡ್ತಾಳೆ ತಾಯಿ. ಅವನು ಹಾಗೆ ಮಾತಾಡ್ತಾ ಮಾತಾಡ್ತಾ ಅಮ್ಮನಿಗೆ ಹೋಗಿ ಬರ್ತೀನಿ ಅಂತ ಹೇಳೋದಿರಲಿ ತಿರುಗಿ ನೋಡದೆಯು ಹೋಗ್ತಾನೆ.

        ಇದು ಕೇವಲ ಒಂದು ದಿನದ್ದಲ್ಲ, ಇದು ಪ್ರತಿನಿತ್ಯ ನಡೆಯೋದು. ಹೀಗೆ ಒಂದು ದಿನ, ಇವತ್ತು ನಾಳೆ ಅಂತ ತಳ್ಳಿ ತಿಂಗಳುಗಟ್ಟಲೇ ಕಳೆದಿವೆ. ಆ ತಾಯಿ ಮಗನೊಟ್ಟಿಗೆ ಮಾತಾಡಿ ಸರಿ ಸುಮಾರು ಆರು ತಿಂಗಳು. ತಾಯಿಯ ಬಾಯಿಗೆ ಯಾರೋ ಬೀಗ ಹಾಕಿದಂತಾಗಿದೆ. ಮನೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಯಾರೂ ಇಲ್ಲ.. ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿದಾಗಲಿಂದ ತಾಯಿಯೊಟ್ಟಿಗೆ ಸರಿಯಾಗಿ ಮುಖ ಕೊಟ್ಟು ಕೂಡ ಮಾತಾಡಿಲ್ಲ ಪ್ರಶಾಂತ. ಬೆಂಕಿ ಉಂಡೆಗಳಂತ ನೋವನ್ನು ನುಂಗುತ್ತಾ ಯಾರಲ್ಲೂ ಹೇಳಲಾಗದೆ ತಾನೇ ತನ್ನನ್ನು ಸಮಾಧಾನ ಮಾಡಿಕೊಳ್ಳುತ್ತಾ ದಿನ ಕಳೆಯುತ್ತಿದ್ದಳು ಆ ತಾಯಿ.
          ಆ ದಿನ ಮಧ್ಯಾಹ್ನ ಪ್ರಶಾಂತನಿಗೆ ಕರೆ ಹೋಯ್ತು. ಅವನಿಂದ ಉತ್ತರವಿಲ್ಲ. ಸದಾ ಆ ಫೋನ್ ಎದುರೇ ಇರುತ್ತಿದ್ದ ಅವನು ಆ ದಿನ ಯಾಕೋ ಅದರಿಂದ ದೂರ ಇದ್ದ. ಕೆಲಸದ ಒತ್ತಡವೋ ಏನೋ. ಕೆಲಸಕ್ಕೆ ವಿರಾಮ ಕೊಟ್ಟು ಬಂದು ನೋಡ್ತಾನೆ, ಎಂಟು ಮಿಸ್ಡ್ ಕಾಲ್. ಯಾರಿರಬಹುದು ಎಂದು ಅವರಿಗೆ ಕಾಲ್ ಮಾಡ್ತಾನೆ. ಆ ಕಡೆ ಇಂದ " ಏ ಪ್ರಶಾಂತ ಎಷ್ಟು ಸಲನೋ ಫೋನ್ ಮಾಡೋದು.. ನಾನು ವೆಂಕಮ್ಮ ಮಾತಾಡ್ತಿರೋದು. ಇಲ್ಲಿ ನಿಮ್ಮ ಅಮ್ಮ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಬೇಗ ಬಾ" ಅಂತ ಹೇಳಿದೊಡನೆ ಕಾಲ್ ಕಟ್ ಮಾಡ್ತಾರೆ. ತರಕಾರಿ ಮಾರೋ ವೆಂಕಮ್ಮ ಕರೆ ಮಾಡಿರ್ತಾಳೆ. ಈತನಿಗೆ ಆಗ ತಾಯಿಯ ಬಗ್ಗೆ ಯೋಚನೆ ಬಂತು. ಕೆಲಸವನ್ನೆಲ್ಲಾ ಅರ್ಧಕ್ಕೆ ನಿಲ್ಲಿಸಿ ಹೇಳದೇ ಕೇಳದೇ ಆಸ್ಪತ್ರೆಗೆ ದೌಡಾಯಿಸಿದ.
         


         ಇಲ್ಲಿ ಆಗಬಾರದ್ದೇನು ಆಗಿರಲಿಲ್ಲ. ಆರು ತಿಂಗಳಿಂದ ನಡೆಯುತ್ತಿದ್ದ ಮೌನದ ಅರಬರೆ ಉಪವಾಸದಿಂದ ಆಯಾಸ ಆಗಿ ತಲೆ ಸುತ್ತು ಬಂದು ಪ್ರಜ್ಞೆ ತಪ್ಪಿ ಬಿದ್ದಿರ್ತರೆ ಅವನ ಅಮ್ಮ. ಬೆಳಗ್ಗೆ ತರಕಾರಿ ಕೊಳ್ಳುವಾಗ ಎಲ್ಲಿ ಮಗನೊಟ್ಟಿಗೆ ಮಾತಾಡೋ ಚಾನ್ಸ್ ಹೋಗಿಬಿಡುತ್ತೋ ಅಂತ ವೆಂಕಮ್ಮನ ಬಳಿ ತರ್ಕಾರಿ ತಗೊಂಡು ದುಡ್ಡು ಇಸ್ಕೋಳಕ್ಕೆ ಆಮೇಲೆ ಬಾ ಹೇಳಿ ಕಳಿಸಿರ್ತಾಳೆ. ಹೆತ್ತ ಮಗನ ಹತ್ತಿರ ಮಾತಾಡೋಕು ಅವಕಾಶ! ಬೆಳಿಗ್ಗೆ ಪ್ರಶಾಂತ ಆಫೀಸಿಗೆ ಹೋದ ಸ್ವಲ್ಪ ಹೊತ್ತಲ್ಲೇ ಈಕೆ ಇಲ್ಲಿ ಪ್ರಜ್ಞೆ ತಪ್ಪಿ ಬಿದ್ದಳು. ದುಡ್ಡು ಇಸ್ಕೋಳಕ್ಕೆ ಅಂತ ವೆಂಕಮ್ಮ ಬಂದಾಗ ಆ ತಾಯಿ ಬಿದ್ದಿರೋದನ್ನ ನೋಡಿ ನೀರು ಚಿಮುಕಿಸಿ ಎಚ್ಚರಗೊಳಿಸಲು ಪ್ರಯತ್ನ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ. ಕೂಡಲೇ ಪಕ್ಕದ ಕ್ಲಿನಿಕ್ ಗೆ ಕರೆದೊಯ್ತಳೆ. ಡಾಕ್ಟರು ಏನಾಗಿದೆ ಅಂತ ನೋಡಿ ಒಂದು ಗ್ಲೂಕೋಸ್ ಹಾಕ್ಸಿ ಮಲಗಿಸುತ್ತಾರೆ. ಸ್ವಲ್ಪ ಹೊತ್ತಿನ ನಂತರ ತಾಯಿಗೆ ಪ್ರಜ್ಞೆ ಬಂತು. ಆದರೆ ಯಾರಿಗೂ ಪ್ರತಿಕ್ರಿಯೆ ಕೊಡ್ತಾ ಇಲ್ಲ. ಯಾವುದಕ್ಕೂ ಜವಾಬು ಕೊಡ್ತಾ ಇಲ್ಲ. ವೆಂಕಮ್ಮ ಬಂದು "ಅಮ್ಮ ನಾನು ತರಕಾರಿ ಮಾರೋಳು, ನಾನೇ ನಿಮ್ಮನ್ನು ಇಲ್ಲಿಗೆ ಕರ್ಕೊಂಡು ಬಂದಿದ್ದು" ಅಂತಾಳೆ. ಆ ತಾಯಿ ಮುಗ್ಧತೆಯಿಂದ ಅವಳ ಮುಖವನ್ನೇ ದಿಟ್ಟಿಸಿ ನೋಡ್ತಾರೆ. "ನಿಮ್ಮ ಮಗನಿಗೆ ಫೋನ್ ಮಾಡಿದ್ದೀನಿ, ಬರ್ತಾ ಅವರೆ" ಅಂತ ಹೇಳಿದೊಡನೆ ಆ ತಾಯಿಯ ಹುಬ್ಬು ಮೇಲೇರುತ್ತೆ, ಕಣ್ಣುಗಳು ತುಂಬುತ್ತೆ, ಕಿವಿ ನಿಮಿರುತ್ತೆ, ಅತ್ತ ಇತ್ತ ನೋಡಿ ಮತ್ತೆ ಸುಮ್ಮನಾಗ್ತಾಳೆ. ಡಾಕ್ಟರು ಮತ್ತು ವೆಂಕಮ್ಮ ಏನು ಕೇಳಿದರೂ ಯಾವುದಕ್ಕೂ ಉತ್ತರ ಕೊಡದೆ ಮಂಕಾಗಿ ಕೂರುತ್ತಾಳೆ. ಈಕೆಗೆ ಏನಾಗ್ತಿದೆ ಅಂತ ಡಾಕ್ಟರ್ ಕೂಡ ಅಚ್ಚರಿಯಿಂದ ನೋಡ್ತಾರೆ.  ಇಲ್ಲಿ ಆಗಬಾರದ್ದೇನು ಆಗಿಲ್ಲ ಆದರೆ ಆಗಬೇಕಾದ್ದೇ ಆಗಿದೆ.
              ಇತ್ತ ಪ್ರಶಾಂತ ಅಮ್ಮನನ್ನ ನೋಡಬೇಕು ಅಂತ ಆತುರದಿಂದ ಬರ್ತಿದ್ದಾನೆ. ಫೋನ್ ರಿಂಗ್ ಆಗ್ತಿದೆ, ಮೆಸೇಜ್ ಮೇಲೆ ಮೆಸೇಜ್ ಬರ್ತಿದೆ ಆದರೆ ಈಗ ಅದನ್ನು ಲೆಕ್ಕಿಸುತ್ತಿಲ್ಲ. ಈ ಆರು ತಿಂಗಳು ಮನೆಗೆ ಬಂದ ಕೂಡಲೇ ಊಟ ಮಾಡಿ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಒಬ್ಬನೇ ಇರುತ್ತಿದ್ದರೂ ತಾಯಿ ನೆನಪಾಗದವನಿಗೆ ಈಗ ತಾಯಿಯ ಅರಿವಾಗಿತ್ತು. ಓಡೋಡಿ ಬಂದ ಆಸ್ಪತ್ರೆಗೆ. ಡಾಕ್ಟರು ಮತ್ತು ವೆಂಕಮ್ಮ ಇಬ್ಬರೂ ಆ ತಾಯಿಯನ್ನು ಮಾತನಾಡಿಸಲು ಯತ್ನ ಮಾಡ್ತಿದ್ದಾರೆ ಆದರೆ ಲಾಭವಿಲ್ಲ. ಪ್ರಶಾಂತ ಓಡಿಬಂದು "ಅಮ್ಮ" ಅಂದಕೂಡಲೇ ಸುಸ್ತಾಗಿ ಮಂಕಾಗಿ ಕೂತಿದ್ದ ಆ ತಾಯಿ ಮಗನನ್ನು ನೋಡಿದೊಡನೆ ಖುಷಿಯಾಗ್ತಾಳೆ. ಆರು ತಿಂಗಳ ಆದ್ಮೇಲೆ ಮಗ ಅವಳನ್ನ ಅಮ್ಮ ಅನ್ನೋದನ್ನ ಕೇಳಿ ಈಕೆಗೆ ಆನಂದ ಉಕ್ಕಿ ಬರುತ್ತೆ. ಇಷ್ಟು ದಿನದ ನೋವೆಲ್ಲಾ ಒಂದೆ ಒಂದು ಮಾತಲ್ಲಿ ಕರಗಿಹೋದಂತೆ ನಿರಾಳ ಆಗ್ತಾಳೆ. ಪ್ರಶಾಂತ ಬಂದು ಕಾಲಿಗೆ ಬಿದ್ದು ಅಳ್ತಾನೆ. ಆಗ ಆ ತಾಯಿ, "ಯಾಕೋ ಪ್ರಶು ಇಷ್ಟು ಸುಸ್ತಾಗಿದ್ಯ, ಎಷ್ಟು ಸಲ ಹೇಳಿದ್ದೀನಿ ನಿಂಗೆ ಓಡಿ ಆಯಾಸ ಮಾಡ್ಕೋಬೇಡ ಅಂತ ನನ್ನ ಮಾತೇ ಕೇಳಲ್ಲ ನೀನು" ಅಂತಾಳೆ. ತಾನು ಎಂಥಾ ನೋವಲ್ಲಿದ್ದರೂ ಮಗ ಚೂರು ದುಃಖ, ಕಷ್ಟದಲ್ಲಿದ್ದರೆ ಮೊದಲು ನಮ್ಮ ನೋವಿಗೆ ಮಿಡಿಯುವ ಶಕ್ತಿ ಇರೋದು ತಾಯಿ ಹೃದಯಕ್ಕೆ ಮಾತ್ರ. ಅದಕ್ಕೆ ತಾಯಿ ಪ್ರೀತಿಯನ್ನ ಅಮೃತಕ್ಕೆ ಹೋಲಿಸೋದು ಅನ್ನಿಸುತ್ತೆ. ಈ ಮಾತನ್ನ ಕೇಳಿ ಪ್ರಶಾಂತ ದುಃಖ ತಡೀಲಾರದೆ ನಾನು ಈವರೆಗೆ ಎಂಥಾ ತಪ್ಪು ಮಾಡ್ತಿದ್ದೆ ಅಂತ ಪಶ್ಚಾತಾಪದಿಂದ ತಾಯಿಯ ಕಾಲನ್ನು ಬಿಡದೆ ತಬ್ಬಿ ಕ್ಷಮೆ ಕೋರುವಂತೆ ಅಳುತ್ತಾನೆ. ವೆಂಕಮ್ಮ ಮತ್ತು ಡಾಕ್ಟರು ಕೂಡ ಇದನ್ನೆಲ್ಲಾ ಕಣ್ಣೆದುರೇ ನೋಡಿ ಅವರೂ ಭಾವುಕರಾಗ್ತಾರೆ. ಕೆಲ ಹೊತ್ತಿನ ನಂತರ ಎಲ್ಲರ ಅಳೋ ಸರದಿ ಮುಗಿಸಿ ಕಣ್ಣೊರೆಸಿಕೊಂಡು ಮನೆಗೆ ಹೊರಡುತ್ತಾರೆ. ಪ್ರಶಾಂತ ವೆಂಕಮ್ಮನ ಸಹಾಯಕ್ಕೆ ಸದಾ ಋಣಿ ಅಂತ ಹೇಳಿ ತರಕಾರಿಗೆ ಕೊಡಬೇಕಾದ ಹಣ ಕೊಟ್ಟು ಕಳುಹಿಸುತ್ತಾನೆ.
          ಡಾಕ್ಟರಿಗೆ ಫೀಸ್ ಕೊಡೋಕೆ ಅಂತ ಹೋದಾಗ ಪ್ರಶಾಂತ "ಅಮ್ಮನ ಆರೋಗ್ಯದಲ್ಲಿ ಏನೂ ತೊಂದರೆ ಇಲ್ಲ ಅಲ್ವಾ ಡಾಕ್ಟರ್" ಅಂತ ಕೇಳ್ತಾನೆ. ಅದಕ್ಕೆ ಡಾಕ್ಟರು, " ತೊಂದರೆ ಇದೆ. ಇದೇ ತುಂಬಾ ಮುಖ್ಯ. ನೀ ಬರೋ ಮುಂಚೆ  ನಿಮ್ಮ ಅಮ್ಮನಿಗೆ ನಾ ಮಾಡೋ ಚಿಕಿತ್ಸೆ ಎಲ್ಲಾ ಮಾಡಿ ಆಕೆಗೆ ಪ್ರಜ್ಞೆ ಬಂದಾಗಿನಿಂದ ನಾನು ಗಮನಿಸ್ತಾ ಇದ್ದೆ. ನಮ್ಮ ಯಾವ ಮಾತಿಗೂ ಉತ್ತರ ಕೊಡದ ಮಾನಸಿಕ ಸ್ಥಿತಿ ಅಲ್ಲಿ ಇದ್ದೋರು, ನಮ್ಮ ಯಾವ ಪ್ರಕ್ರಿಯೆಗೂ ಪ್ರತಿಕ್ರಿಯೆ ಕೊಡದೇ ಇದ್ದೋರು, ನೀನು ಬಂದು 'ಅಮ್ಮ' ಅಂದ ಕೂಡಲೇ ಆಕೆಗೆ ಚಲನವಲನ ಬಂದು ಮಂಕಾಗಿದ್ದೋರು ಹಸನ್ಮುಖರಾದರು. ನಾನು ಯೋಚನೆ ಮಾಡ್ತಿದ್ದೆ ವೈಜ್ಞಾನಿಕವಾಗಿ ಸಾಭೀತಾಗಿರೋ ಔಷಧಿ ಕೆಲಸ ಮಾಡ್ತಿಲ್ಲ ಆದರೆ ನಿನ್ನ ಪ್ರೀತಿಯ ಮಾತು ಇದಕ್ಕೆ ಔಷಧಿ ಆಯ್ತಲ್ಲ. ಆ ಭಗವಂತ ಈ ಮಮಕಾರದ ಮಾತಲ್ಲಿ ಎಂಥಾ ಗುಣ ಇಟ್ಟಿದ್ದಾನೆ ಅಂತ. ಇದೇ ನಿಮ್ಮ ಅಮ್ಮನ ತೊಂದರೆ. ನಿಮ್ಮ ಅಮ್ಮನಿಗೆ ಖಾಯಿಲೆ ನೀನೆ, ಇದಕ್ಕೆ ಔಷಧಿನೂ ನೀನೆ. ಬರಿ ನಿನ್ನೊಬ್ಬಳ ತಾಯಿ ಅಲ್ಲ. ಪ್ರಪಂಚದ ಎಲ್ಲಾ ತಾಯಂದಿರದ್ದೂ ಇದೇ ಪರಿಸ್ಥಿತಿ. ಎಲ್ಲೋ ಇರೋ ಕಾಣದೆ ಇರೋರ ಜೊತೆಗೆ ಗಂಟೆಗಟ್ಟಲೆ ಮಾತಾಡೋದಕ್ಕಿಂತ ಕಣ್ಣೆದುರಿರೋ ತಾಯಿ ಜೊತೆ ದಿನಕ್ಕೆ ಒಂದು ಹತ್ತು ನಿಮಿಷ ಸಮಯ ಮಾಡ್ಕೊಂಡು ಅವರತ್ರ ಪ್ರೀತಿಯಿಂದ ಮಾತಾಡಿದ್ರೆ ಅವರಿಗೆ ಯಾವ ಖಾಯಿಲೆನೂ ಬರೋಲ್ಲ. ರಾತ್ರಿಯೆಲ್ಲಾ ಮೊಬೈಲ್ ಒತ್ತೋದರ ಬದಲು ತಾಯಿಯ ಕಾಲನ್ನಾದರು ಒತ್ತಿದರೆ ಪುಣ್ಯ ಆದ್ರೂ ಬರ್ತದೆ. ಇನ್ನು ಮುಂದಾದರೂ ತಾಯಿಗೆ ಬಿಡುವು ಮಾಡ್ಕೊಳಿ ಮಿಸ್ಟರ್ ಪ್ರಶಾಂತ್ " ಅಂದರು. ಅವನು ಮಾಡುತ್ತಿದ್ದ ತಪ್ಪಿನ ಅರಿವಾಗಿದ್ದ ಪ್ರಶಾಂತನಿಗೆ ಡಾಕ್ಟರ್ ಹೇಳಿದ ಮಾತು ಮನದಟ್ಟಾಯಿತು. ಪ್ರಶಾಂತ ಕಿಟಕಿಯಾಚೆಯಿಂದ ಹೊರಗೆ ಕೂತಿದ್ದ ಅಮ್ಮನನ್ನು ನೋಡಿದ, ಅಮ್ಮ ಎಂದಿಗಿಂತ ಖುಷಿಯಿಂದ ಇದ್ದಂತೆ ಕಂಡಿತು. ಈ ಖುಷಿ ಕೊನೆಯ ವರೆಗೂ ಹೀಗೆ ಇರೋ ಹಾಗೆ ನೋಡಿಕೊಳ್ತಿನಿ ಅಂತ ನಿರ್ಣಯ ಮಾಡಿದ.
           ಹೀಗೆ ಮಕ್ಕಳಿಗೆ ಈ ಕತೆಯನ್ನು ಹೇಳಿ ಮುಗಿಸಿದೆ. ಈ ಕತೆ ಕೇಳಿ ಕೂತಿದ್ದ ಮಕ್ಕಳೆಲ್ಲ ತಾವು ದೊಡ್ಡವರಾದ ಮೇಲೆ ಪ್ರಶಾಂತ ಮಾಡಿದ ತಪ್ಪು ನಾನು ಮಾಡಲ್ಲ ಅಂತ ಒಬ್ಬ, ಅಮ್ಮನನ್ನು ನಾನೂ ಯಾವ ನೋವು ಬಾರದಂತೆ ಚೆನ್ನಾಗಿ ನೋಡ್ಕೋತೀನಿ ಅಂತ ಇನ್ನೊಬ್ಬ, ಅಮ್ಮನನ್ನು ಬಿಟ್ಟು ಎಲ್ಲೂ ಹೋಗಲ್ಲಾ ಅಂತ ಮಗದೊಬ್ಬ. ಇವರ ಉತ್ಸಾಹ ನೋಡಿ ನಾನೂ ಖುಷಿ ಪಟ್ಟೆ. ಇದರ ಮಧ್ಯೆ ಒಬ್ಬ ಹುಡುಗ ಓಡಿಬಂದು ತಾಯಿಯ ಬಗ್ಗೆ ಕತೆ ಆಯ್ತು ಈಗ ಒಂದು ಕವನ ಹೇಳಿ ಅಂತ ಪಟ್ಟು ಹಿಡಿದು ಕೂತ. ಈ ಹುಡುಗ ಕೇಳಿದ್ದನ್ನು ನೋಡಿ ಮಕ್ಕಳೆಲ್ಲಾ ಕೇಳೋಕೆ ಶುರು ಮಾಡ್ಬಿಟ್ರು. ಇವತ್ತಿಗೆ ಕತೆ ಸಾಕು ಕವನ ನಾಳೆ ಹೇಳ್ತೀನಿ ಅಂತ ಅವರನ್ನೆಲ್ಲಾ ಕಳಿಸಿದೆ. ಆದರೂ ಆ ಹುಡುಗ ಕೇಳಿದ್ದು ನನ್ನ ಮನಸ್ಸಿನಲ್ಲಿ ಪದೇ ಪದೇ ಮೂಡ್ತಾ ಇತ್ತು. ಯಾರು ಈ ತರ ಕೇಳ್ತಿರೋರು ಅಂತ ಯೋಚನೆ ಮಾಡಿದರೆ ನನ್ನ ಅಂತರಾಳ. ನನ್ನ ಅಂತರಾಳದ ಮನವಿ ಇದು. ಇದೂ ಕೂಡ ತಾಯಿ ಬಗ್ಗೆ ಕವನ ಬರಿ ಕವನ ಬರಿ ಅಂತ ಹೇಳ್ತಿದೆ. ಅಂತರಾಳದಿಂದ ಬಂದಾಗ ಅದನ್ನು ಮನವಿ ಅಂದುಕೋಬೇಕೋ ಆದೇಶ ಅಂದುಕೋಬೇಕೋ ಗೊತ್ತಾಗಲ್ಲ. ಆದರೂ ಆಗಿದ್ದು ಆಗಲಿ ಅಂತ ಕವನ ಬರೆದೆ ಹೀಗೆ,

ಬರಿ ಬರಿ ಅಂದರೆ ಏನಂತ ಬರೀಲೀ..
ತಾಯಿ ಮೇಲೆ ಏನು ಬರುದ್ರು ಕಡಿಮೆನೇ..
ನಾವು ಏನಾದ್ರೂ ಸಾಧಿಸಿರ್ಲಿ..
ಅದೆಲ್ಲಾ ಅವಳ ಕೃಪೆನೇ..
ಸಂಬಂಧಕ್ಕೋಳಗಾಗಿ ಇವಳನ ಮರಿಬೇಡ..
ಆ ಸಂಬಂಧಗಳು ಹುಟ್ಟಿದ್ದು ಇವಳು ಬಂದಮೇಲೇನೇ..
ಇಡೀ ಸೃಷ್ಟಿಯಲಿ ನಿಂಗೆ ಕೆಡಕು ಬಯಸದೇ
ಇರೋ ಒಂದೇ ಒಂದು ಹೃದಯನೇ..
ಅದು ತಾಯಿ-ನೇ., ಅದು ತಾಯಿ-ನೇ..
ಬರಿ ಬರಿ ಅಂದರೆ ಏನಂತ ಬರೀಲೀ..
ನನ್ನ ಬರೆದದ್ದೇ ಅವಳು ತಾನೇ..!

ತಾಯಿಯಿಂದ ನಾವು, ನೀವು, ಇಡೀ ಮನುಕುಲ.