Click here to Download MyLang App

ಹೋಳುಗಳಿಲ್ಲದ ಹುಳಿ. (ಕಥೆ) - ಬರೆದವರು : ಅನುಪಮ ದೇಬ್ ಗುಪ್ತ | ಸಾಮಾಜಿಕ


"ಊಂ....ಏನಮ್ಮಾ ಇವತ್ತು ಕೂಡಾ ಹುಳಿಯಲ್ಲಿ ತರಕಾರಿ ಹೋಳುಗಳಿಲ್ಲ. ವಾರಕ್ಕೆ ನಾಲ್ಕು ದಿನ ಹೋಳು ಇಲ್ಲದ ಹುಳಿ ಮಾಡ್ತೀಯಾ...."ರಾಗ ಎಳೆದ ಕಿರಣ."ಇದೆಂದರೆ ನಿಮ್ಮಪ್ಪನಿಗೆ ಇಷ್ಟ ಕಣೋ.ಅವರಿಷ್ಟದ್ದೂ ಮಾಡ್ಬೇದ್ವಾ?ಇದೇ ರಗಳೆ ಆಯ್ತು ನಿಂದು"ರೇಗಿದಳು ರೇಣು.ಮುಖ ಊದಿಸಿಕೊಂಡೇ ಊಟ ಮಾಡಿ ಎದ್ದ ಕಿರಣ್ ಒಂದಗಳೂ ಬಿಡದೇ ತಿಂದಿದ್ದ. ಮನಸ್ಸು ಕಲಕಿ ಕಣ್ಣಂಚು ಒದ್ದೆಯಾಯಿತು ರೇಣುವಿಗೆ.
ಮದುವೆಯ ಬಳಿಕ ಸಾಲಾಗಿ ಹುಟ್ಟಿದ್ದವು ಐದು ಗಂಡು ಮಕ್ಕಳು,ಅರುಣ್,ವರುಣ್,ತರುಣ್,ತಪನ್ ಮತ್ತು ಕಿರಣ್.ಬಳಿಕ ಮಗಳು ನಮಿತಾ.ಅಂಚೆ ಕಚೇರಿಯಲ್ಲಿ ಪೋಸ್ಯ್ ಮಾಸ್ಟರ್ ಆಗಿದ್ದ ಈಶ್ವರ್ ತರುವ ಸಂಬಳದಲ್ಲಿ ಬಾಡಿಗೆ ಕಟ್ಟಿ ಮನೆ ಖರ್ಚು ನಿಭಾಯಿಸುವುದರ ಜೊತೆ ಆರು ಮಕ್ಕಳ ಓದು,ಬೇಕು ಬೇಡಗಳು ಉಸಿರುಗಟ್ಟಿಸುವಂತೆ ಮಾಡುತ್ತಿದ್ದವು.ಹಾಗಾಗಿ ತರಕಾರಿಗಳನ್ನು ಕೊಳ್ಳಲು ಸ್ವಲ್ಪ ಕಷ್ಟವೇ ಇತ್ತು.ವಾರದಲ್ಲಿ ಹಾಗೂ ಹೀಗೂ ಮೂರು ದಿನ ಏನಾದರೂ ಕಾಯಿಪಲ್ಲೆ ಕೊಂಡು ಅಡುಗೆ ಮಾಡಿ ಮಿಕ್ಕ ದಿನ ಹುಣಿಸೆಹಣ್ಣು ಕಿವಿಚಿ ಬೆಲ್ಲ ಹಾಕಿ ಒಗ್ಗರಣೆ ಮಾಡಿ ಗೊಡ್ಡು ಸಾರು ಪಾತ್ರೆ ತುಂಬಾ ಮಾಡಿ ಬಡಿಸುತ್ತಿದ್ದಳು.ಮಿಕ್ಕವರಾರೂ ಕಮಕ್ ಕಿಮಕ್ ಎನ್ನದೇ ಬಡಿಸಿದ್ದನ್ನು ತಿಂದು ಏಳುತ್ತಿದ್ದರು.ಆದರೆ ಐದನೆಯ ಮಗ ಕಿರಣ್ ಗೆ ತರಕಾರಿ ಹೋಳುಗಳ ಸಾಂಬಾರ್ ತುಂಬಾ ಇಷ್ಟ ಈ ಗೊಡ್ಡು ಸಾರನ್ನು 'ಹೋಳಿಲ್ಲದ ಹುಳಿ'ಎಂದು ಹೆಸರಿಟ್ಟವನೂ ಅವನೇ.ಅದನ್ನು ಬಡಿಸಿದಾಗ ರಾಗ ಎಳೆಯುತ್ತಿದ್ದನಾದರೂ ಮೊದಲಿನಿಂದ ಮಾಡಿಸಿದ ರೂಢಿಯ ಪ್ರಕಾರ ಊಟ ಪೂರ್ತಿ ತಿಂದು ಏಳುತ್ತಿದ್ದ.ಒಮ್ಮೊಮ್ಮೆ ಅವನ ಗೆಳೆಯನ ಮನೆಯ ಬಳ್ಳಿಯಲ್ಲಿ ಬಿಟ್ಟ ಚಪ್ಪರದವರೆಕಾಯಿ ತಂದು "ಅಮ್ಮಾ ಇದರ ಹುಳಿ ಮಾಡು"ಎಂದು,ಅಂದಿನ ದಿನ ಹೆಚ್ಚಿನ ಹೋಳು ಹಾಕಿಸಿಕೊಂಡು ಸಂತಸದಿಂದ ತಿನ್ನುತ್ತಿದ್ದ.
ದಿನಗಳು ಉರುಳಿದವು.ಬೆಳೆಯುತ್ತಿದ್ದಂತೆಯೇ ಮನೆಯ ಪರಿಸ್ಥಿತಿ ಅರ್ಥವಾದ ಬಳಿಕ ಕಿರಣ್ ಏನು ಬಡಿಸಿದರೂ ಏನೂ ಅನ್ನುತ್ತಿರಲಿಲ್ಲ.
ಈಶ್ವರ್ ನಿವೃತ್ತಿ ಆಗುವ ಹೊತ್ತಿಗೆ ನಾಲ್ವರು ಗಂಡು ಮಕ್ಕಳಿಗೂ ಓದು ಮುಗಿಸಿ ಕೆಲಸ ಸಿಕ್ಕಿತ್ತು.ಇಬ್ಬರು ಸೊಸೆಯರೂ ಬಂದಿದ್ದರು. ಆರ್ಥಿಕ ಸ್ಥಿತಿ ಚೆನ್ನಾಗಿತ್ತು.
ಇನ್ನು ಒಂದೇ ವರ್ಷದಲ್ಲಿ ಕಿರಣ್ ಓದು ಕೂಡಾ ಮುಗಿಯಿತು ಬಳಿಕ ಕಿರಣ್ ಗೆ ದೂರದ ಒರಿಸ್ಸಾದ ಕಟಕ್ ನಲ್ಲಿ ಕೆಲಸ ಸಿಕ್ಕಿತು.ರೇಣು ತುಂಬಾ ಅತ್ತಳು.ಆದರೆ ಆಕರ್ಷಕ ಸಂಬಳ,ಒಳ್ಳೆಯ ಕೆಲಸ ಆದುದರಿಂದ ಕಿರಣ್ ಗಟ್ಟಿ ಮನಸ್ಸು ಮಾಡಿ ಹೊರಟು ಹೋದ.
ಒಂದು ವರ್ಷದ ತನಕ ರಜೆ ಸಿಕ್ಕದ ಕಾರಣ ಮನೆಗೆ ಬರಲಿಲ್ಲ ಕಿರಣ್.ಮಿಕ್ಕೆಲ್ಲ ಮಕ್ಕಳೂ ಜೊತೆಗೇ ಇದ್ದರೂ ಕೊನೆಯ ಮಗನನ್ನು ಕಾಣದೇ ಕಂಗಳು ಸೋತು ಹೋದಂತೆ ಅನ್ನಿಸಿ ದುಃಖ ಉಕ್ಕುತ್ತಿತ್ತು.ಹೀಗಿರುವಾಗ ನಮಿತಾ ಳ ಮದುವೆ ನಿಷ್ಕರ್ಷೆ ಆಯಿತು.ಮದುವೆಗೆ ಹದಿನೈದು ದಿನ ರಜೆ ಹಾಕಿ ಬರುವೆನೆಂದು ಕಿರಣ್ ಹೇಳಿದಾಗ ರೇಣುವಿನ ಸಂತಸಕ್ಕೆ ಪಾರವೇ ಇಲ್ಲ.ಇನ್ನೇನು ಮಾರನೆಯ ದಿನ ಕಿರಣ್ ಬರುವೆನೆಂದು ಅರುಣ್ ಗೆ ಹೇಳಿ ಬಗೆಬಗೆಯ ತರಕಾರಿ ತರಿಸಿ,ಎಲ್ಲ ಹಾಕಿ ಕೂಟು ಮಾಡೋಣ ಎಂದುಕೊಂಡಳು. ಅಷ್ಟರಲ್ಲಿ ವರುಣ್ ಫೋನ್ ತಂದು ಕೊಡುತ್ತಾ "ಅಮ್ಮಾ ಕಿರಣ್ ಲೈನ್ ನಲ್ಲಿ ಇದ್ದಾನೆ ಏನೋ ಮಾತನಾಡಬೇಕಂತೆ"ಎಂದ.ಫೋನ್ ಹಿಡಿದು "ಹಲೋ" ಎಂದಾಕ್ಷಣ ಕಿರಣ್ "ಅಮ್ಮಾ ನಾಳೆ ಊಟಕ್ಕೆ ಏನು ಮಾಡ್ತಾ ಇದೀಯಾ?"ಎಂದ.ಅದಕ್ಕುತ್ತರವಾಗಿ ರೇಣು "ನಿನಗಿಷ್ಟವಾಗುವ ಎಲ್ಲಾ ತರಕಾರಿಗಳ ಕೂಟು..."ಎನ್ನುತ್ತಿದ್ದಂತೆ ಮಾತನ್ನು ಮುಂದುವರಿಸಬಿಡದ ಕಿರಣ್ "ಅಮ್ಮಾ ಪ್ಲೀಸ್ ನಾಳೆ ಹೋಳಿಲ್ಲದ ಹುಳಿ ಮಾಡಮ್ಮಾ ಯಾಕೋ ಬಾಯಿ ಕೆಟ್ಟಿದೆ. ನನಗೆ ಆ ಹೋಳಿಲ್ಲದ ಹುಳಿ ತಿನ್ಬೇಕೂ ಅಂತ ಆಸೆ ಆಗಿದೆ"ಎಂದ.ಒದ್ದೆಯಾದ ಕಣ್ಣುಗಳನ್ನು ಒರೆಸಿಕೊಳ್ಳುತ್ತಾ "ಖಂಡಿತಾ ಮಾಡ್ತೀನಿ ಕಣೋ"ಎಂದಳು ರೇಣು