Click here to Download MyLang App

ಹೋಮ್ ಸ್ಟೇ ನಲ್ಲಿದ್ದ ದೆವ್ವ - ಬರೆದವರು : ಪಿ.ಎಸ್.ರಂಗನಾಥ | ಥ್ರಿಲ್ಲರ್

ರಾತ್ರಿ ಸುಮಾರು ಒಂಬತ್ತು ಗಂಟೆ, ಮೈಸೂರು ಕೊಡಗು ರಾಜ್ಯ ಹೆದ್ದಾರಿಯಲ್ಲಿ ಆ ಕಾರ್ ಚಲಿಸುತಿತ್ತು. "ಕೊಡಗು ಹೋಮ್ ಸ್ಟೇ"
ಅನ್ನು ಅವರು ತಲುಪಬೇಕಿತ್ತು. ಮುಖ್ಯ ರಸ್ತೆ ಬಿಟ್ಟು ಅತಿ ಬೇಗ ತಲುಪುವ ಬೇರೆ ಮಾರ್ಗದಲ್ಲಿ ಹೋಗೋಣ ಎಂದು ಒಂದು
ಅಡ್ಡರಸ್ತೆಯಲ್ಲಿ ಪಯಣಿಸುತಿದ್ದರು. ರಾತ್ರಿಯ ಕಗ್ಗತ್ತಲು, ಕಾರಿನ ಹೆಡ್ ಲೈಟ್ ಬಿಟ್ಟು ಬೇರೆ ಯಾವುದೇ ಬೆಳಕು ಆ ರಸ್ತೆಯಲ್ಲಿ
ಬೀಳುತ್ತಿರಲಿಲ್ಲ. ಸುಮಾರು ಹದಿನೈದು ನಿಮಿಷಗಳು ಸಂಚರಿಸುತಿದ್ದರೂ ಎದುರುಗಡೆಯಿಂದಾಗಲಿ, ಹಿಂದೆಯಿಂದಲೂ ಯಾವುದೇ
ವಾಹನಗಳು ಸಂಚರಿಸುತ್ತಿರಲಿಲ್ಲ. ಒಂದೇ ಒಂದು ಊರಾಗಲಿ, ಮನೆಗಳಾಗಲಿ ಕಾಣಲಿಲ್ಲ. ಕಾರಿನಲ್ಲಿದ್ದವರಿಗೆ ದಾರಿತಪ್ಪಿದೆವು ಎಂಬ
ಭಯ ಕಾಡಲಾರಂಬಿಸಿತು. ಮೊಬೈಲ್ ನೆಟ್ ವರ್ಕ್ ಸಹ ಇರಲಿಲ್ಲ. ಅವರ ಅದೃಷ್ಟಕ್ಕೆ, ಇಂತಹ ಸಮಯದಲ್ಲಿ, ಎದುರಿಗೆ ಒಬ್ಬ
ವ್ಯಕ್ತಿ ಬರುತಿದ್ದ. ಕಾರನ್ನ ನಿಲ್ಲಿಸಿ ಅವರನ್ನ ಮಾತನಾಡಿಸಿದರು. ಕೊಡಗು ಹೋಮ್ ಸ್ಟೇ ಗೇ ಈ ರಸ್ತೆ ಮೂಲಕ ಹೋಗ ಬಹುದಾ?
ಎಂದು ಕೇಳಿದಾಗ, ಅಯ್ಯೋ ನೀವ್ಯಾಕೆ ಈ ರಸ್ತೆಯಲ್ಲಿ ಬರುವುದಿಕ್ಕೆ ಹೋದಿರಿ. ರಾತ್ರಿ ಹೊತ್ತಿನಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರ
ವಿರಳ. ಅದೂ ಅಲ್ಲದೆ, ನೀವು ಬಂದ ರಸ್ತೆಯ ಐದು ಕಿ.ಮಿ ಹಿಂದೆ ದೆವ್ವಗಳು ಓಡಾಡುತ್ತವೆ ಅಂತ ಜನ ಹೇಳ್ತಾರೆ......
ದೆವ್ವಗಳು ಓಡಾಡೋ ರಸ್ತೆಯಾ? ಸಾರ್ ಅಲ್ಲೊಂದು ಬೋರ್ಡ್ ಹಾಕಿಸಬಹುದಲ್ಲ ಸಾರ್ "ರಾತ್ರಿ ಹೊತ್ತಿನಲ್ಲಿ ದೆವ್ವಗಳು
ಓಡಾಡುತ್ತವೆ" ಅಂತ ಮಂಜ ಹೇಳಿದ.
ಲೇ ಸುಮ್ಮನಿರೋ ಎಂದ ರಮೇಶ...
ಹೇಗೂ ಬಂದಿದ್ದೀರಿ, ಮುಂದೆ ಬಲಗಡೆ ತಿರುಗಿ. ಅಲ್ಲಿಂದ ಏಳು ಕಿ.ಮಿ. ದೂರದ ರಸ್ತೆಯನ್ನ ಕ್ರಮಿಸಿದ ನಂತರ,
ರಸ್ತೆಯಬದಿಯಲ್ಲೊಂದು ಬೋರ್ಡ್ ನಲ್ಲಿ ಕೊಡಗು ಹೋಮ್ ಸ್ಟೇ ಬಲಗಡೆಗೆ ಎನ್ನುವ ಆರೋ ಮಾರ್ಕ್ ನೋಡ್ತೀರಿ, ಆ ಕಡೆ
ಹೋಗಿ ಎಂದರು.
ಕಾರ್ ನಲ್ಲಿದ್ದವರಿಗೆ ಬದುಕಿದೆಯಾ ಬಡಜೀವ ಎಂದು, ಅಲ್ಲಿಂದ ವೇಗವಾಗಿ ಹೊರಟು ಹೋದರು. ಏಳು ಕಿ.ಮಿ. ನಂತರ, ಕಾರ್
ನಲ್ಲಿದ್ದ ವೀರೇಶ್ ನೋಡ್ರೋ. ಇಲ್ಲೇ ಬಲಗಡೆ ತಿರುಗಬೇಕು. ಸ್ವಲ್ಪ ನಿಲ್ಲಿಸು. ಎಂದು ಕಾರ್ ಅನ್ನು ನಿಲ್ಲಿಸಿದರು. ಆ ಮುಖ್ಯ
ರಸ್ತೆಯಲ್ಲಿ ಬೀದಿ ದೀಪಗಳಿರಲಿಲ್ಲ ಅಲ್ಲಿಯೂ ಗಾಡ ಕತ್ತಲು. ಹಾಗೇಯೇ ಆ ಹೋಮ್ ಸ್ಟೇ ಕಡೆಗೆ ಹೋಗುವ ದಾರಿಯಲ್ಲೂ ಸಹ
ಕತ್ತಲೇ.
ಕಾರ್ ಅನ್ನು ತೆಗೆದುಕೊಂಡು ಆ ಕಡೆ ಹೊರಟರು ಸುಮಾರು ಎರಡು ಮೂರು ಫರ್ಲಾಂಗ್ ದೂರದ ದಾರಿ. ಒಂದೈದು ನಿಮಿಷದಲ್ಲಿ ಆ
ಸ್ಥಳವನ್ನು ತಲುಪಿದರು. ಅಲ್ಲೂ ಸಹ ಕತ್ತಲು. ಯಾರೂ ಇರಲಿಲ್ಲ. ಮೊಬೈಲ್ ಟಾರ್ಚ್ ಸಹಾಯದಿಂದ ಬಾಗಿಲತ್ತ ನೋಡಿದರೆ,

ಅದಕ್ಕೆ ಬೀಗ ಹಾಕಲಾಗಿತ್ತು. ಆಗಲೇ ಫೋನ್ ಮಾಡಿದಾಗ ಇನ್ನೊಂದು ಹತ್ತು ನಿಮಿಷದಲ್ಲಿ ತಲುಪುತ್ತೀನಿ ಅಂತ ಅವರು ಹೇಳಿದ್ರು,
ಸ್ವಲ್ಪ ಕಾಯೋಣ ಇರು ಎಂದು ರಮೇಶ ಹೇಳಿದ. ಸ್ವಲ್ಪ ಹೊತ್ತಾದ ಮೇಲೆ ಮತ್ತೊಮ್ಮೆ ಕಾಲ್ ಟ್ರೈ ಮಾಡಿದರೆ ಫೋನ್ ನಾಟ್
ರೀಚಬಲ್.
ಬೇರೆ ನಂಬರ್ ಇರಲಿಲ್ಲ. ಅಲ್ಲಿನ ಬೋರ್ಡ್ ನೋಡಿದರು ಮತ್ತೊಂದು ನಂಬರ್ ಸಿಕ್ತು.
ಆ ನಂಬರ್ ಗೆ ಕಾಲ್ ಮಾಡಿ, ಸಾರ್ ನಾವು ಹೋಮ್ ಸ್ಟೇ ಗೆ ಗೆಸ್ಟ್ ಗಳಾಗಿ ಬಂದಿದ್ದೀವಿ. ಆನಂದ್ ಅನ್ನುವವರು ಇನ್ನೊಂದು ಹತ್ತು
ನಿಮಿಷದಲ್ಲಿ ಬರ್ತೀನಿ ಅಂತ ಹೇಳಿದ್ದರು ಇನ್ನೂ ಅವರು ಬಂದಿಲ್ಲ, ಅವರ ಫೋನ್ ಬೇರೆ ನಾಟ್ ರೀಚಬಲ್, ಕತ್ತಲೇ ಬೇರೆ ಇದೆ
ಏನು ಮಾಡಬೇಕು ಗೊತ್ತಾಗ್ತಿಲ್ಲ. ಯಾರನ್ನಾದರು ಕಳುಹಿಸ್ತೀರಾ?
ನೀವು ಬರ್ತೀರ ಅಂತ ಹೇಳಿ, ಆಗಲೇ ಅವರು ಹೊರಟು ತುಂಬಾ ಹೊತ್ತಾಯ್ತು. ಇಷ್ಟೊತ್ತಿಗಾಗಲೇ ಬಂದಿರಬೇಕಿತ್ತು.
ಇಲ್ಲಾ ಸಾರ್, ಯಾರೂ ಬಂದಿಲ್ಲ. ನೀವೆ ಬೇಗ ಬಂದು ರೂಮ್ ಕೊಡಿ ಸಾರ್.
ಸರಿ ಬರ್ತೀನಿ ಅಂತ ಅವರು ಫೋನ್ ಡಿಸ್ ಕನೆಕ್ಟ್ ಮಾಡಿದರು.
ಯಾಕೆ ರಮೇಶ, ಇಷ್ಟು ಐಸೋಲೇಟೆಡ್ ಆಗಿ ಇರುವ ಈ ಜಾಗದಲ್ಲಿ ರೂಮ್ ಬುಕ್ ಮಾಡಿದ್ಯಾ ಎಂದು ಮಂಜು ಕೇಳಿದ.
ರೂಮ್ಸ್ ತುಂಬಾ ರೀಸನಬಲ್ ರೇಟ್ ಸಿಗುತ್ತೆ ಮತ್ತು ಊಟ ಚೆನ್ನಾಗಿದೆ ಅಂತ ಆಫೀಸಿನ ಮಿತ್ರನೊಬ್ಬ ಹೇಳಿದ್ದರಿಂದ ಮಾಡಿದೆ
ಎಂದು ರಮೇಶ ಹೇಳಿದ.
ವಿಜಯ್, ಮೂತ್ರ ವಿಸರ್ಜನೆ ಮಾಡಿ ಬರ್ತೀನಿ ಎಂದು ಹೋದ. ಅವನು ಹಾಗೆ ಆ ಕಡೆ ಹೋಗುವಾಗ ಏನೋ ಶಬ್ದ ಬಂದಂತಾಯಿತು.
ಕತ್ತಲೆಯಲ್ಲಿ ಆ ಶಬ್ದ ಕೇಳಿ ಅವನಿಗೆ ಸ್ವಲ್ಪ ಭಯವಾಯಿತು. ಅದೇ ಹೊತ್ತಿನಲ್ಲಿ ಬೈಕ್ ನಲ್ಲಿ ಆ ಹೋಮ್ ಸ್ಟೇ ನ ಮ್ಯಾನೇಜರ್
ಒಬ್ಬರು ಬಂದರು. ಈಗ ಫೋನ್ ನಲ್ಲಿ ಮಾತನಾಡಿದ್ರಲ್ಲ ನಾನು ಶ್ರೀನೀವಾಸ್ ಅಂತ. ಆನಂದ್ ಇಷ್ಟೋತ್ತು ಎಲ್ಲಿಗೆ ಹೋದ್ರೊ
ಗೊತ್ತಿಲ್ಲ. ನಾನು ಸಹ ಫೋನ್ ಮಾಡಿದೆ ಆದರೆ ಅವರ ಫೋನ್ ನಾಟ್ ರೀಚಬಲ್. ಈ ಹೋಮ್ ಸ್ಟೇ ನೋಡಿಕೊಳ್ಳೋದು ಅವರೇ.
ಇಲ್ಲಿ ಟೋಟಲ್ಲಾಗಿ ಐದು ಹೋಮ್ ಸ್ಟೇ ನಡೆಸ್ತಿದ್ದೀವಿ. ಅದರಲ್ಲಿ ಇದೊಂದು ಎಂದು ವಿವರಿಸುತ್ತ, ಬಾಗಿಲು ತೆಗೆದು ಇನ್ವರ್ಟರ್
ಆನ್ ಮಾಡಿ ಲೈಟ್ ಸ್ವಿಚ್ ಆನ್ ಮಾಡಿದ. ಎರಡು ಕೋಣೆ ತೋರಿಸಿ ಇದರಲ್ಲಿ ನೀವು ಉಳಿದುಕೊಳ್ಳಿ ಎಂದು ಹೇಳಿ, ನೀರು ತಂದು
ಕೊಟ್ಟ. ಊಟ ಮಾಡಿಕೊಂಡು ಬರ್ತೀರಿ ಅಂತ ಆನಂದ್ ಹೇಳಿದ್ದ. ನಿಮ್ಮದು ಊಟ ಆಗಿದ್ಯಾ? ಎಂದು ಕೇಳಿದ?
ಊಟ ಮುಗಿಸಿಕೊಂಡು ಬಂದಿದ್ದೇವೆ. ಈಗ ರೆಸ್ಟ್ ಮಾಡ್ತೀವಿ , ಬೆಳಿಗ್ಗೆ ಟಿಫಿನ್ ಕಾಫಿಗೆ ವ್ಯವಸ್ಥೆ ಮಾಡಿ ಎಂದು ರಮೇಶ್ ಹೇಳ್ತಾನೆ.
ಸಾರ್, ನಿಮ್ಮದು ಗಾಡಿಯಿದೆಯಲ್ಲಾ, ಇಲ್ಲೇ ಹತ್ತಿರದಲ್ಲಿ ನಮ್ಮದು ಇನ್ನೊಂದು ಹೋಮ್ ಸ್ಟೇ ಇದೆ ಅಲ್ಲಿಗೆ ಬಂದುಬಿಡಿ ಎಂದು
ಶ್ರೀನೀವಾಸ್ ಹೇಳಿದ.
ಆಯ್ತು ಬಿಡಿ. ಬೆಳಿಗ್ಗೆ ಬರ್ತೀವಿ ಎಂದರು.
ಶ್ರೀನೀವಾಸ್ ಹೊರಟ ಮೇಲೆ. ಎಲ್ಲರೂ ಮಲಗಲಿಕ್ಕೆ ರೂಮ್ ಗೆ ಹೋದರು.
ಐದಾರು ಗಂಟೆಯ ಪ್ರಯಾಣ ಮಾಡಿದ್ದರಿಂದ ಎಲ್ಲರಿಗೂ ಸುಸ್ತಾಗಿತ್ತು. ಹಾಸಿಗೆ ಸಿಕ್ಕೊಡನೇ ಲೈಟ್ ಆಫ್ ಮಾಡಿ ಎಲ್ಲರೂ
ಮಲಗಿದರು.
ಮಲಗಿದ ಸ್ವಲ್ಪ ಹೊತ್ತಿನ ನಂತರ, ಕಿಟಕಿಯ ಕಡೆಯಿಂದ ಕೀರಲು ಶಬ್ದ ಬಂತು.
ಆ ಶಬ್ದಕ್ಕೆ ಬೆಚ್ಚಿಬಿದ್ದ ವಿಜಯ್ ತಟ್ ಎಂದು ಮೇಲೆದ್ದ.
ಅದೇ ಸಮಯದಲ್ಲಿ ಮಿಂಚು ಮತ್ತು ಗುಡುಗಿನ ಶಬ್ದಕೇಳಿ ಮೈ ನಡುಗಿದ ಅನುಭವ.
ಪಕ್ಕದಲ್ಲಿ ಮಲಗಿದ್ದ ನಾಗರಾಜ್ ನನ್ನು ಲೇಯ್ ಎದ್ದೇಳೋ ಎದ್ದೇಳೋ ಎಂದು ಅವನನ್ನ ಎಚ್ಚರಿಸಿದ.
ಯಾಕೋ ಏನಾಯ್ತು ಎಂದು ಕಣ್ಣು ಉಜ್ಜುತ್ತಾ ಮೇಲೆ ಎದ್ದ.
ಇಲ್ಲಿ ದೆವ್ವ ಇದೆ!!!
ಏನು ದೆವ್ವಾನಾ! ಎಂದು ಹೌ ಹಾರಿದ.
ನಾನು ಒಂದಕ್ಕೆ ಹೋಗಿದ್ನಾ, ಆಗ ನನಗೆ ಆ ಅನುಭವ ಬಂತು, ಈಗ ಮಲಗಿದ್ದಾಗ ಯಾರೋ ನರಳುವ ಶಬ್ದ ಬಂತು. ಕಿಟಕಿ ಕಡೆ
ಗಮನ ಇಟ್ಟು ಕೇಳು ಎಂದ.
ಅಯ್ಯಯ್ಯಪ್ಪಾ, ನನಗೆ ದೆವ್ವ ಅಂದರೆ ಭಯಕಣೋ, ಹಿಂಗೆಲ್ಲಾ ಹೇಳಿ ಹೆದರಿಸಬೇಡ ಮಾರಾಯಾ.
ಅದೇ ಸಮಯದಲ್ಲಿ ಮೂಲೆ ಕೋಣೆಯಿಂದ ಎನೋ ಟಪ್ ಅಂತ ದೊಡ್ಡದಾದ ಶಬ್ದ ಬಂತು.
ವಿಜಯ್ ಮತ್ತು ನಾಗರಾಜ್ ಗೆ‌ ಎದೆ ನಡುಗಿ ದಂತಾಯ್ತು.
ಆ ಶಬ್ದ ಕೇಳಿ, ಇನ್ನೊಂದು ರೂಮಿನಲ್ಲಿ ಮಲಗಿದ್ದ ರಮೇಶ ಮತ್ತು ವೀರೇಶ ರಿಗೆ ಎಚ್ಚರವಾಯಿತು.
ಏನಾಯ್ತು ಎಂದು ನೋಡಲು ಕೋಣೆಯಿಂದ ಹೊರಗಡೆ ಬಂದರು.

ಅದೇ ಮೂಲೆ ಕೋಣೆಯ ಕಿಟಕಿ ಗಾಳಿಯಿಂದ ಟಪ ಡಪ ಎಂದು ಹೊಡೆದುಕೊಳ್ಳುವ ಶಬ್ದ ಬಂತು.
ವಿಜಯ್, ನಾಗರಾಜ್ ಎದ್ದು ಈಚೆ ಬಂದರು ಮತ್ತೊಂದು ರೂಮಿನಿಂದ ಮಂಜು ಮತ್ತು ರಾಮಕೃಷ್ಣ ಎದ್ದು ಬಂದರು.
ದೆವ್ವ ಇದೆಯಂತೆ ಅಂತ ವಿಜಯ್ ಹೇಳಿದ ಕಣ್ರೋ ಎಂದು ನಾಗರಾಜ್ ಹೇಳಿದ.
ಏನು ದೆವ್ವಾನಾ!!! ಎಂದು ಎಲ್ಲರೂ ಒಟ್ಟಾಗಿ.
ರಜೆಯ ಮಜಾ ಅನುಭವಿಸಲು ಬಂದಿದ್ದೀವೆ, ಏನಪ್ಪಾ ಇದೆಲ್ಲಾ ಎಂದು ಗಾಬರಿ ಬಿದ್ದರು.
ಹಾಂ!, ಬನ್ನಿ, ಎಂದು ಕಿಟಕಿ ಕಡೆ ಹೋದ.
ಯಾರೂ ಅವನ ಹಿಂದೆ ಬರಲಿಲ್ಲ. ದೆವ್ವದ ಕತೆ, ಸಿನಿಮಾಗಳನ್ನು ನೋಡಿದ್ದ ಅವರು ದೆವ್ವಗಳು ಏನೆಲ್ಲಾ ಮಾಡಬಹುದು ಎಂದು
ಊಹಿಸಿ ಕೊಳ್ಳ ತೊಡಗಿದರು.
ಏನೇ ಸ್ವಲ್ಪ ಶಬ್ದವಾದರೂ‌ ಅದು ದೆವ್ವದ್ದೇ ಎನ್ನುವಂತಾಯ್ತು.
ಏನೂ ಆಗಲ್ಲ ಬನ್ರಪ್ಪಾ, ಎಂದು ಬಲವಂತ ಮಾಡಿ, ಕೇಳಿಸ್ಕೊಳ್ರೀ ಎಂದು ಕಿಟಕಿಯಕಡೆ ಕಿವಿ ಇಟ್ಟರು.
ಸ್ವಲ್ಪ ಹೊತ್ತಿನ ನಂತರ ಮತ್ತದೇ ಶಬ್ದ.
ಈಗ ಭಯ ಬೀಳುವ ಸರದಿ ಎಲ್ಲರದ್ದೂ. ಅದೇ ಸಮಯದಲ್ಲಿ, ಅಡಿಗೆ ಮನೆಯಿಂದ ಪಾತ್ರೆಯೊಂದು ಕೆಳಗೆಬಿತ್ತು.
ಎಲ್ಲರ ಜಂಘಾ ಬಲವೇ ಉಡುಗಿ ಹೋದಂತಾಯ್ತು.
ಏನಾದರು ಅನಾಹುತ ಆಗುವ ಮುಂಚೆ ಬೇರೆ ಕಡೆ ಹೋಗೋಣೋ, ಬೇಗ ಬೇಗ ಬ್ಯಾಗ್ ತಗಳ್ರೋ ಎಂದು ವಿಜಯ್ ಹೇಳಿದ.
ವಿಜಯ್ ಹೇಳಿದ್ದು ಎಲ್ಲರಿಗೂ ಸರಿಎನಿಸಿತು.
ರಮೇಶ್, ಸ್ವಲ್ಪ ಕಾಯ್ರೋ, ಆ ಶ್ರೀನೀವಾಸ್ ಮತ್ತು ಆನಂದ್ ಗೆ ಫೋನ್ ಮಾಡೋಣ ಎಂದು ಫೋನ್ ಮಾಡಿದ್ರೆ, ಅವನ ಮೊಬೈಲ್
ಮತ್ತೆ ನಾಟ್ ರೀಚಬಲ್, ಶ್ರೀನಿವಾಸ್ ಗೆ ಕಾಲ್ ಮಾಡಿದ್ರು, ಮೊದಲ ಕಾಲ್ ತೆಗೆದುಕೊಳ್ಳಲಿಲ್ಲ. ಮತ್ತೊಮ್ಮೆ ಕಾಲ್ ಮಾಡಿದಾಗ,
ಆ ಕಾಲ್ ಅಟೆಂಡ್ ಮಾಡಿದ. ರೀ ಶ್ರೀನಿವಾಸ್, ಈ ಮನೆಯಲ್ಲಿ ದೆವ್ವ ಇದೆ, ನಾವು ಬರ್ತಿದ್ದಿವಿ ಬೇರೆ ರೂಮ್ ವ್ಯವಸ್ಥೆ ಮಾಡಿ
ಎಂದು ರಮೇಶ್ ಹೇಳಿದ.
ಸಾರ್, ಇಷ್ಟೊತ್ತಿನಲ್ಲಿ ಆಗಲ್ಲ ಬೆಳಿಗ್ಗೆ ಮಾಡಿಕೊಡ್ತೀನಿ. ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ.
ಏನ್ರೀ ದೆವ್ವದ ಜತೆ ಅಡ್ಜಸ್ಟ್ ಮಾಡಿಕೊಂಡಿರಬೇಕ!!!
ಲೋ ಏನೋ ಇದು ಅಡ್ಜಸ್ಟ್ ಮೆಂಟ್, ಪೋನ್ ಕೊಡೋ ನಾನು ಮಾತನಾಡ್ತೀನಿ ಎಂದು ವಿಜಯ್ ಫೋನ್ ತೆಗೆದುಕೊಂಡು ನಡೆದ
ಘಟನೆಗಳನ್ನ ವಿವರಿಸಿದ.
ಎಲ್ಲವನ್ನೂ ಕೇಳಿಸಿಕೊಂಡ ಶ್ರೀನೀವಾಸ್, ಆಯ್ತು ನೀವು ಯೋಚಿಸ ಬೇಡಿ ನಾವು ಬರ್ತೀವಿ ಎಂದು, ಅಲ್ಲಿದ್ದ ಕೆಲಸದವರನ್ನ
ಕರೆದುಕೊಂಡು ಹೊರಟ.
ಇವರು ಲಗೇಜ್ ಎತ್ತಿಕೊಂಡು ಹೊರಗಡೆ ಬಂದರು.
ಅದಕ್ಕೆ ಕಣ್ರೋ, ಜನ ಇರುವ ಕಡೆ ವಾಸಕ್ಕೆ ಬರಬೇಕು ಅನ್ನೋದು. ನಾವು ಬಯಲು ಸೀಮೆಯವರು ನಮಗೆಲ್ಲ ಇಂತಹದ್ದು ಅಭ್ಯಾಸ
ಇರಲ್ಲ ಎಂದು ವೀರೇಶ್ ಹೇಳಿದ. ಹೀಗೆ ಒಬ್ಬೊಬ್ಬರು ಒಂದೊಂದು ಮಾತನಾಡುತಿದ್ದರು. ಸ್ವಲ್ಪ ಸಮಯದ ನಂತರ
ಜೀಪೋಂದರಲ್ಲಿ ಶ್ರೀನಿವಾಸ್ ಆಗಮಿಸಿದ.
ವಿಜಯ್ ಮುಂದೆ ಬಂದು, ಬನ್ನಿ ತೋರಿಸ್ತೀನಿ ಎಂದು ತಾನು ಮಲಗಿದ್ದ ಕೋಣೆಯ ಕಡೆ ಕರೆದುಕೊಂಡು ಹೋಗಿ ಎಲ್ಲವನ್ನ
ವಿವರಿಸಿದ.
ದೆವ್ವ ಭೂತದ ಕತೆ ಕೇಳಿದ್ದ ಹೊರತು ಶ್ರೀನೀವಾಸ್ ಗೆ ಇಂತಹದ್ದೆಲ್ಲ ಅನುಭವವಾಗಿರಲಿಲ್ಲ.
ಸ್ವಲ್ಪ ಹೊತ್ತು ರೂಮಿನಲ್ಲಿ ಕಾದು ಕುಳಿತರು.
ನಿಶ್ಯಬ್ದ.....
ಸ್ವಲ್ಪ ಸಮಯದ ನಂತರ, ಮತ್ತದೇ ಕೀರಲು ಶಬ್ದ. ಶ್ರೀನೀವಾಸ್ ಗೆ ಈಗ ಆಶ್ಚರ್ಯವಾಯಿತು. ಟಾರ್ಚ್ ಬಿಟ್ಟು ಆಕಡೆ ನೋಡಿದ.
ಅಲ್ಲೊಂದು ಪೊದೆ. ಕೆಲ ಮರಗಿಡಗಳು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಯಾವುದಾದರು ಕಾಡು ಪ್ರಾಣಿಯಿರಬಹುದು ಎಂದು
ಯೋಚಿಸಿದ, ಆದರೆ ಅದು ಆ ಧ್ವನಿ ಮನುಷ್ಯರ ತರಹ ಇದ್ದಿದ್ದರಿಂದ, ಪ್ರಾಣಿ ಎಂದು ನಿರ್ಧರಿಸಲು ಹೋಗಲಿಲ್ಲ.
ಅದೇ ಸಮಯಕ್ಕೆ ಮೂಲೆ ಕೋಣೆಯ ಕಿಟಕಿಯ ಬಾಗಿಲು ಹೋಯ್ದಾಡುತಿತ್ತು. ಅಲ್ಲಿಗೆ ಹೋಗಿ ಅದನ್ನ ಮುಚ್ಚಿದ. ಅದೇ ರೀತಿ
ಯಾವುದಾದರು ಕಿಟಕಿ ತೆರೆದಿದೆಯೇ ಎಂದು ನೋಡಿದ., ಯಾವುದೇ ಕಿಟಕಿ ತೆರೆದಿಲ್ಲದಿದ್ದರಿಂದ ಹೊರಗೆ ಬಂದು ತನ್ನ ಪರಿಚಿತರಿಗೆ
ಫೋನ್ ಮಾಡಿ ಸ್ಥಳಕ್ಕೆ ಬರಲು ಹೇಳಿದ.

ಆನಂದ್ ಗೆ ಮತ್ತೆ ಕರೆ ಮಾಡಲು ಪ್ರಯತ್ನಿಸಿದ, ನಾಟ್ ರೀಚಬಲ್ ಆದ್ದರಿಂದ ಸುಮ್ಮನಾದ. ಮಾರುತಿ ಮತ್ತು ಮಹಾಬಲ ಒಂದು
ಬೈಕ್ ನಲ್ಲಿ ಬಂದರು, ಅವರು ಬಂದದ್ದು ನೋಡಿ ಶ್ರೀನೀವಾಸ್ ಅವರ ಬಳಿ ಬಂದು ಇದು ದೆವ್ವ ಆಗಿದ್ರೆ, ಇಷ್ಟೊತ್ತು ಒಂದೇ
ಸ್ಥಳದಲ್ಲಿ ಇರುವುದು ಸಾಧ್ಯವಿಲ್ಲ. ಇಲ್ಲಿ ಬೇರೇ ಏನೋ ಇದೆ, ಅದೇನೋ ನೋಡೋಣ ಬನ್ನಿ ಎಂದು ಅವರನ್ನ ಆ ಪೊದೆಯ ಬಳಿ
ಕರೆದುಕೊಂಡು ಹೋದ.
ಇವರು ಹೊರಟಿದ್ದನ್ನ ನೋಡಿ, ಸಾರ್ ಈ ರಾತ್ರಿ ಹೊತ್ತಿನಲ್ಲಿ ದಯವಿಟ್ಟು ಬೇಡ, ಏನಾದರು ಅನಾಹುತ ಆದರೆ ಸಮಸ್ಯೆ
ಯಾಗುತ್ತೆ. ಬೆಳಿಗ್ಗೆ ನೋಡೋಣ ಬನ್ನಿ ಎಂದು ವೀರೇಶ್ ಹೇಳಿದ.
ಅವರಕಡೆ ಮುಗುಳುನಗುತ್ತಾ, ಸಮಸ್ಯೆ, ಅನಾಹುತ, ಭಯ ಅವೆಲ್ಲ ನಮ್ಮ ಬಳಿ ಇಲ್ಲ ಸಾರ್ ಎಂದು ಆ ಕಡೆ ಹೊರಟರು. ಟಾರ್ಚ್
ಬೆಳಕನ್ನ ಸುತ್ತಮುತ್ತಲೂ ಬಿಟ್ಟು ನೋಡಿದರು. ಸ್ವಲ್ಪ ದೂರದಲ್ಲಿ, ಒಂದು ಬೆಳಕು ಒಂದು ಕ್ಷಣ ಡಿಮ್ ಡಿಪ್ ಆಗುವುದು ಕಂಡು
ಬಂತು. ಆ ಕಡೆ ನೋಡುತ್ತಾ, ಇದೇನು ಈ ತರಹ ಬೆಳಕು ಬರ್ತಿದೆ ಎಂದು ಆ ಕಡೆ ಹೊರಟರು. ಗಿಡ ಬಳ್ಳಿಗಳಿಂದ ಆವೃತ್ತವಾಗಿದ್ದ
ಪ್ರದೇಶ. ಯಾವುದಾದರು ವಿಷಜಂತುವೋ ಅಥವ ಕಾಡು ಮೃಗವೋ ಹತ್ತಿರದಲ್ಲಿದ್ದರೆ ಏನು ಎನ್ನುವ ಆತಂಕ. ಆದರೂ
ಧೈರ್ಯದಿಂದ ಮುನ್ನುಗಿದರು.
ಒಮ್ಮೆಲೆ ಗುಡುಗು ಮಿಂಚಿನ ಆರ್ಭಟ. ಮತ್ತೊಮ್ಮೆ ಆತಂಕ ವನ್ನು ಸೃಷ್ಟಿ ಮಾಡುವ ಕ್ಷಣ. ಒಂದು ಕ್ಷಣ ಅನ್ನಿಸಿಯೇ ಬಿಡ್ತು, ಬೆಳಿಗ್ಗೆ
ಬಂದರೆ ಆಯ್ತಲ್ಲವೇ ಎಂದು. ಇಷ್ಟು ದೂರ ಬಂದಮೇಲೆ ಹಿಂದೆ ಸರಿಯುವ ಮಾತೇಕೆ ಎಂದು ಅತ್ತಕಡೆ ಹೊರಟೇ ಬಿಟ್ಟರು.
ಬಳ್ಳಿಗಳನ್ನ ತುಂಡರಿಸುತ್ತ, ಮುಂದಡಿಇಟ್ಟರೆ, ಅವರಿಗೆ ಆಶ್ಚರ್ಯ. ಬಳ್ಳಿಗಳನ್ನ ಸರಿಸಿ ನೋಡಿದರೆ ಅಲ್ಲೊಂದು ಸ್ಕೂಟರ್ ಹಳ್ಳಕ್ಕೆ
ಮುಖ ಮಾಡಿ ಬಿದ್ದಿತ್ತು. ನೋಡಿದರೆ ಅದು ಆನಂದ್ ನ ಗಾಡಿ. ಅಯ್ಯೋ, ಆನಂದ್ ಎಂದು ಬಳ್ಳಿಗಳನ್ನ ಸರಿಸುತ್ತ ಪೊದೆಗಳನ್ನ
ತಡಕಾಡಿದರು. ಕಿಟಕಿಯ ಎದುರಿಗೆ ಇದ್ದ ಆಪೊದೆಯಲ್ಲಿ, ಆನಂದ್ ಬಿದ್ದಿದ್ದ. ಅವನನ್ನ ಮೇಲೇಕ್ಕೆ ಎತ್ತಿ, ಹೊರಗೆ ತೆಗೆದುಕೊಂಡು
ಬಂದರು.
ಅವನನ್ನ ನೋಡಿದ ಎಲ್ಲರಿಗೂ ಆಶ್ಚರ್ಯ!!!
ಅಯ್ಯೋ ಯಾರ್ ಸಾರ್, ಇವರು?
ಇಷ್ಟೊತ್ತು ದೆವ್ವ ಅಂದುಕೊಂಡಿದ್ರಲ್ಲ ಅವರೇ ಇವರು.
ಮತ್ತೆ, ಅದು ಹೇಗೆ ಪೊದೆಯಲ್ಲಿ ಇದ್ರು?
ಅಯ್ಯೋ ಮೇಲ್ಗಡೆ ರಸ್ತೆಯಲ್ಲಿ ಬರುವಾಗ ಬಹುಶಃ ಸ್ಕಿಡ್ ಆಗಿ ಅಥವಾ ಯಾವುದಾದರೂ ಗಾಡಿ ಗುದ್ದಿರಬಹುದು, ಹೀಗಾಗಿ
ಅಲ್ಲಿಂದ ಕೆಳಗಡೆ ಬಿದ್ದಿದ್ದಾರೆ ಎಂದು ಆಸ್ಪತ್ರೆಗೆ ಹೊರಟರು.
ಅಯ್ಯೋ ಛೇ, ಎಂತಾ ಅನಾಹುತ‌ ಆಯ್ತಲ್ಲಾ ಎಂದು ಎಲ್ಲರೂ ಪರಿತಪಿಸುವಂತಾಯ್ತು.