Click here to Download MyLang App

ಹೃದಯದ ಜಗಲಿ ಹೊಕ್ಕವಳು - ಬರೆದವರು : ಸುಬ್ರಹ್ಮಣ್ಯ ಶಾಸ್ತ್ರಿ

ಕಿಸೆಯಲ್ಲಿದ್ದ ಮೊಬೈಲ್ ತೆಗೆದು ನೋಡಿದಾಗ ಗಂಟೆ ಬೆಳಿಗ್ಗೆ 8:30. ಈ ದಿನವೂ ಲೇಟ್ ಆಗಿತ್ತು." ಛೇ ದಿನಾಲೂ ಲೇಟ್ ಆಗ್ತಪ(ಆಗ್ತದೆ), ನಾಳೆಯಿಂದಾದ್ರೂ ಬೇಗ ಎದ್ಕಳ(ಏಳಬೇಕು) ಸಾಯ್ಲಿ" ಎಂದು ಒಳಮನಸ್ಸು ಕಾಳಜಿ ಮಾಡುತ್ತಿತ್ತು. ಬಸ್ಸು ತಿರುಗಾಡುವ ಮುಖ್ಯರಸ್ತೆಗೆ ಬಂದಾಗ ನನ್ನ ಬಲಪಾರ್ಶ್ವದಿಂದ ನಾನು ಹತ್ತಬೇಕಿದ್ದ ಬಸ್ಸು ವೇಗವಾಗಿ ಧಾವಿಸುತ್ತಿತ್ತು, ಕೂಗಳತೆ ದೂರದಲ್ಲೇ ಬಸ್‌ನಿಲ್ದಾಣ; ಜಿದ್ದಿಗೆ ಬಿದ್ದವನಂತೆ ಬಸ್ಸಿನ ಜೊತೆಗೆ ಓಡಿದೆ; . ನನ್ನ ಮತ್ತು ಬಸ್ಸಿನ ನಡುವೆ ಈಗ ಸ್ಪರ್ದೆ ಏರ್ಪಟ್ಟಿತ್ತು, ಬಸ್ಸಿನ ವೇಗಕ್ಕೆ ಓಡಲಾಗದೆ ಸೋಲೊಪ್ಪಿಕೊಂಡರೂ ಬಸ್ಸನ್ನು ಹತ್ತಲು ಯಶಸ್ವಿಯಾದೆ. ಕೂಡಲೇ ಸೀಟ್ ಒಂದನ್ನು ಆಕ್ರಮಿಸಿಕೊಂಡು ಉಫ್ ಎಂದು ನಿಟ್ಟುಸಿರು ಬಿಟ್ಟೆ, ಸುತ್ತಮುತ್ತಲಿದ್ದ ಅಪರಿಚಿತ ಕಣ್ಣುಗಳು ನನ್ನನ್ನೇ ನೋಡಿದವು; ನಾನು ಒಂದು ಕ್ಷಣ ಕಣ್ಮುಚ್ಚಿದೆ, ಏನೋ ತಟ್ಟನೆ ನೆನಪಾಗಿ ಕುತ್ತಿಗೆ ನೆರವಾಗಿಸಿದೆ; ಮತ್ತೆ ಅದೇ ಪರಿಚಿತ ಆಕೃತಿ ಆದರೆ ನಿರ್ಜೀವ ವಸ್ತುವಲ್ಲ, ನನ್ನ ಮನಸ್ಸಿಗೆ ಪರಿಚಿತವಾಗಿದ್ದ, ನಾನು ದಿನಾಲೂ ನೋಡುತ್ತಿದ್ದ ಕಾಲೇಜು ಹುಡುಗಿ. ಅವಳ ಸೌಂದರ್ಯ, ನಡತೆ ಇತ್ಯಾದಿ ಇತ್ಯಾದಿಗಳೆಲ್ಲವೂ ನನ್ನ ಮನಸ್ಸಿನಲ್ಲಿ ಅಳಿಸಲಾಗದ ಜಾಗವೊಂದನ್ನು ನಿರ್ಮಿಸಿಕೊಟ್ಟಿತ್ತು. ಎಂದಿನಂತೆ ಅವಳನ್ನೊಮ್ಮೆ ಕಣ್ತುಂಬಿಕೊಂಡು ಮತ್ತೆ ಸೀಟಿಗೆ ಒರಗಿದೆ, ಪ್ರತಿದಿನ ನನ್ನ ಬಸ್ಸಿನಲ್ಲೇ, ಅದೂ ನಾನು ಹೋಗುವ ಸಮಯಕ್ಕೆ ಸರಿಯಾಗಿ, ಮತ್ತೆ ನಾನು ಇಳಿಯುವ ಜಾಗದಲ್ಲಿಯೇ ಅವಳು ಬಸ್ಸಿಳಿಯುತ್ತಿದ್ದುದು. ಅಬ್ಬಾ ಏನು ಕಾಕತಾಳೀಯ!! ಹೀಗೆ ನನ್ನ ಪ್ರಯಾಣದ ಜೊತೆಗಾರ್ತಿ. ಮಾತನಾಡಿಸಬೇಕೆಂದು ಅಂದುಕೊಂಡಿದ್ದರೂ ನನ್ನಲ್ಲಿದ್ದ ಭಯ ನನಗೆ ದಿಗ್ಬಂಧನ ವಿಧಿಸಿತ್ತು.ಮತ್ತೆ ಕಣ್ಣು ಬಿಟ್ಟು ಅವಳ ಕಡೆ ನೋಡಿದೆ;ಸಿಗುತ್ತಿದ್ದುದು ಒಂದೇ ಕೋನದ ನೋಟವಾದರೂ ನನ್ನ ಕವಿಹೃದಯ ಅವಳ ಬಗ್ಗೆ ತರಹೇವಾರಿ ಕವನಗಳನ್ನು ಒಪ್ಪಿಸುತ್ತಿತ್ತು. ಹೀಗೆ ಪ್ರತಿದಿನ ಕಾವ್ಯ ಸಮ್ಮೇಳನ ನನ್ನ ಮನಸ್ಸಿನಲ್ಲಿ ವಿಜೃಂಭಣೆಯಿಂದ ಸಾಗುತ್ತಿತ್ತು. ಪ್ರತಿದಿನ ನಾನು ಗಮನಿಸುತ್ತಿದ್ದ ಅಂಶ ಅಂದರೆ ಅವಳ ಸರಳತೆ, ಶಿಸ್ತಿನ ಉಡುಗೆ-ತೊಡುಗೆಗಳು. ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಜೈ ಜೈ ಅಂದುಕೊಂಡು, ಮುಖಕ್ಕೆ ಒಂದಿಂಚು ಮೇಕಪ್ ಬಳಿದುಕೊಂಡು ತಮ್ಮದೇ ಲೋಕದಲ್ಲಿ ತೇಲಾಡುತ್ತಿರುವ ಮಾಮೂಲಿ ಪೇಟೆ ಹುಡುಗಿಯರಿಗಿಂತ ಬಿನ್ನವಾಗಿದ್ದಳು ಯಾಕಂದರೆ ನನ್ನ ಇಷ್ಟೂ ದಿವಸದ ಗಮನದಲ್ಲಿ ಒಂದು ಬಾರಿಯೂ ಮೊಬೈಲ್ ಬಳಸಿದ್ದಾಗಲಿ, ಇಯರ್ ಫೋನ್ ಬಳಸಿದ್ದಾಗಲಿ ನೋಡೇ ಇಲ್ಲ. ಮತ್ತೆ ಮೇಕಪ್ ಅಂತೂ ಇಲ್ಲವೇ ಇಲ್ಲ; ಆದರೆ ಅವಳ ಕೂದಲೊಂದೇ ನನಗೆ ತಲೆ ಚಿಟ್ಟು ಹಿಡಿಸಿದ್ದು "ಈ ಕೂದಲಿಗೆಂತ ಅಟ್ಲಕಾಯಿ ಹಾಕುತ್ತಾಳಾ? ಇಲ್ಲ ಕಡ್ಲೆ ಹಿಟ್ಟು ಹಾಕಬಹುದು? ಹೀಗೆ ತರಲೆ ಪ್ರಶ್ನೆಗಳು ನನ್ನನ್ನು ಕೆಣಕುತ್ತಿದ್ದವು. ಬಹುಷಃ ನಮ್ಮ ಕರಾವಳಿ ಕಡೆಯವಳೇ ಇರಬೇಕು ಎಂದು ಮನಸ್ಸು ಯಾವಾಗಲೂ ಲೆಕ್ಕ ಹಾಕುತ್ತಿತ್ತು.

ಹೀಗೆ ಒಂದಿನ ನಾನು ಬಸ್ಸಿನಲ್ಲಿದ್ದೆ, ಆದರೆ ಸೀಟು ಸಿಕ್ಕಿರಲಿಲ್ಲ ಅವಳೆಲ್ಲಿ ಇರಬಹುದೆಂದು ಕಣ್ಣು ಹಾಯಿಸಿದೆ! ಇಲ್ಲ ! ಎಲ್ಲೂ ಇಲ್ಲ !!. ಬಹುಷಃ ಕಾಲೇಜಿಗೆ ರಜೆ ಹಾಕಿರಬಹುದು ಎಂದು ಸುಮ್ಮನಾದೆ. ಹಾಗೆ ಸುಮ್ಮನೆ ಬಸ್ಸಿನ ಮಧ್ಯಬಾಗಿಲಿನ ಕಡೆಗೆ ನೋಡಿದಾಗ ಮೈ ಜುಮ್ ಎಂದಿತು ಬಾಗಿಲಿಗೆ ತಾಗಿಕೊಂಡಿದ್ದ ಅಂಗವಿಕಲರ ಉಲ್ಟಾಸೀಟಿನಲ್ಲಿ ಅರಗಿಣಿ ಕುಳಿತಿದ್ದಾಳೆ, ಅದೇ ಅನಾಮಿಕ ಅರಗಿಣಿ !! ನನ್ನ ಮನಸ್ಸಿನಲ್ಲಿ ಬಾಡಿಗೆ ಮನೆಯೊಂದನ್ನು ತೆಗೆದುಕೊಂಡಿದ್ದ ಪರಿಚಿತೆ. ಅವಳ ಪಕ್ಕದಲ್ಲಿ ಮತ್ತೊಬ್ಬಳು ಕುಳಿತಿದ್ದಾಳೆ ಬಹುಶಃ ಅವಳ ಗೆಳತಿ ಇರಬಹುದು, ಬೇಕಂತಲೇ ಬಸ್ಸಿಳಿಯುವ ನೆಪದಲ್ಲಿ ಅವಳ ಹತ್ತಿರ ಹೋಗಿ ನಿಂತೆ ಅದೇ ಸಮಯಕ್ಕೆ ಸರಿಯಾಗಿ ಕಣ್ಣೆತ್ತಿ ನನ್ನನ್ನು ನೋಡಿದಳು, ಅದೂ ಚಂದದ ಸೀರೆ ಬೇರೆ ಉಟ್ಟಿದ್ದಾಳೆ, Ethnic day ಇರಬಹುದು ಎಂದು ನನ್ನ ಅಂದಾಜು ಹಾಕಿದೆ, ನಾನು ನಿಂತುಕೊಂಡಿದ್ದೇನೆ ಅವಳು ನನ್ನ ಮುಂದೆ ಕುಳಿತಿದ್ದಾಳೆ, ಸ್ವರ್ಗಕ್ಕೆ ಮೂರೇ ಗೇಣು!! ಇಡೀ ದಿನ ನಿಂತುಕೊಂಡೇ transformer testing ಮಾಡುತ್ತಿದ್ದಾಗಲೂ ಇಷ್ಟು ಕಾಲು ಸೋಲುತ್ತಿರಲಿಲ್ಲ, ಈಗ ಯಾಕೋ ಸತ್ವ ಕಳೆದುಕೊಂಡಿದೆ, ತಲೆ ತಿರುಗಿ ಕಣ್ಣು ಮಂಜಾಗಿ ಬೀಳುವಂತಾದೆ. ಬಸ್ ಕಂಡಕ್ಟರ್ " ಎಷ್ಟು ಸರಿ ಹೇಳೋದು ಅರ್ಥ ಆಗಲ್ವಾ, ಹಿಂದೆ ಹೋಗಿ ಅಂದ್ರೆ "ಅಂತ ಬೈದಿದ್ದೂ ನೆನಪಿಲ್ಲ. ಅದ್ಯಾವ ಮಾಯೆಯಲ್ಲಿ ಬಸ್ಸು ನಾನಿಳಿಯುವ ಸ್ಟಾಪ್ ಹತ್ತಿರ ಬಂತೋ ತಿಳಿಯಲಿಲ್ಲ, ಅತ್ತ ಕಂಡಕ್ಟರ್ " ಬೃಂದಾವನ ಸ್ಟಾಪ್ ಇಳಿಯೋರು " ಅಂತ ಕೂಗಿದ. ತತ್ತರಿಕೆ ಸ್ಟಾಪ್ ಈಗಲೇ ಬರಬೇಕಾ ಎಂದು ಹಲ್ಲು ಕಚ್ಚಿಕೊಂಡೆ. ಅಲ್ಲೇ ಕೂತುಕೊಂಡಿದ್ದ ಅವಳು ಥಟ್ಟನೆ ಎದ್ದಳು, ಈಗ ನನಗೂ ಅವಳಿಗೂ ಮುಖಾಮುಖಿ . ಮತ್ತೆ ಕಾಲುಗಳು ನಿಸ್ತೇಜಗೊಂಡವು, ತಲೆ ತಿರುಗಿತು ಕೂಡಲೇ ಅವಳು ನನ್ನನ್ನೊಮ್ಮೆ ದುರುಗುಟ್ಟಿಕೊಂಡು ನೋಡಿದಳು, ಈಗ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದವು. ಮತ್ತೆ ಆ ಕಡೆಯಿಂದ ಕಂಡಕ್ಟರ್ " ನೀವೂ ಇಳಿಯುದಿಲ್ಲ ಇಳಿವರಿಗೂ ಜಾಗ ಬಿಡುವುದಿಲ್ಲವಲ್ಲ' ಎಂದು ವದರಿದ. ಕೂಡಲೇ ನಾನು ದಡಬಡಾಯಿಸಿಕೊಂಡು ಬಸ್ಸಿಳಿದೆ. ಅವಳೂ ಬಸ್ಸಿಳಿದು ನನ್ನನ್ನು ಮೀರಿ ಮುಂದೆ ನಡೆದು ಹೋಗುತ್ತಿದ್ದಳು. ನನ್ನ ಕಂಪನಿಯೂ ಅದೇ ಮಾರ್ಗವಾಗಿ ಹೋಗಬೇಕಾದ ಕಾರಣ ಅವಳ ಹಿಂದೆಯೇ ನಡೆದು ಹೋದೆ, ಅಷ್ಟರಲ್ಲೇ ಅವಳಿಗೊಂದು ಫೋನ್ ಕಾಲ್ ಬಂತು ರಿಸೀವ್ ಮಾಡಿ " ಆಯಿ(ಅಮ್ಮ) ನಾನು ಕಾಲೇಜು ಹತ್ರ ಇದ್ನೇ(ಇದ್ದೇನೆ), ನಂಗೆ ಈಗ ಮಾತಾಡುಲೆ(ಮಾತಾಡಲು) ಟೈಮ್ ಇಲ್ಲೆ(ಇಲ್ಲ) ನಾನು ನಿಂಗೆ ಆಮೇಲೆ ಕಾಲ್ ಮಾಡ್ತೆ(ಮಾಡ್ತೇನೆ )" ಎಂದು ಅಚ್ಚ ಹವ್ಯಕ ಕನ್ನಡ ದಲ್ಲಿ ಮಾತಾಡಿದ್ದಳು; ಇದನ್ನು ಕೇಳಿಸಿಕೊಂಡ ನನಗೆ ಸ್ವರ್ಗಕ್ಕೆ ಒಂದೇ ಗೇಣು ಅಂತ ಅನ್ನಿಸಿತು, ಆ ದಿನ ನಡೆದದ್ದೇನು ಅನ್ನುವುದೇ ನೆನಪಿರಲಿಲ್ಲ.

ಮತ್ತೆ ಈ ದಿನ ಅವಳು ಸಿಕ್ಕರೆ ಏನಾದರಾಗಲಿ ಮಾತನಾಡಿಸೋದೇ ಎಂದು ನನ್ನ ಮನಸ್ಸಿನಲ್ಲಿ ಬೀಷ್ಮ ಪ್ರತಿಜ್ಞೆ ತೆಗೆದುಕೊಂಡು. ಗಜಗಾಂಭೀರ್ಯದಿಂದ ಬಸ್ ಸ್ಟಾಪ್ ಕಡೆ ಹೆಜ್ಜೆ ಹಾಕಿದೆ. ಬಸ್ಸನ್ನೇರಿದಾಗ ಆರಿಸಿಕೊಂಡದ್ದು ಕೊನೆಯ ಸೀಟು. ತುಡಿತ ಇನ್ನೂ ಹೆಚ್ಚಾಗಿತ್ತು, ಕತ್ತನ್ನು ನೇರವಾಗಿಸಿ ಅವಳನ್ನು ನೋಡಲು ತವಕಿಸಿದೆ, ಎಲ್ಲೂ ಕಾಣಸಿಗಲಿಲ್ಲ, ನನ್ನನ್ನು ನೋಡಿದ ಕಂಡಕ್ಟರ್ "ಟಿಕೆಟ್ ಬೇಕಾ" ಎಂದು ಪ್ರಶ್ನಿಸಿದ; ನಾನು ಪಾಸ್ ಇದೆ ಎಂದು ಉತ್ತರಿಸಿ ಕಣ್ಮುಚ್ಚಿ ಕುಳಿತೆ. ಮತ್ತೆ ಮನಸ್ಸಿನಲ್ಲಿ ಅವಳ ಯೋಚನಾಪ್ರವಾಹ "ಏನು ಮಾಡೋದು? ಮಾತನಾಡಿಸಬೇಕಾ ? ಬೇಡವಾ ? ಮಾತನಾಡಿಸಿದರೆ ಏನೆಂದು ಮಾತನಾಡಿಸಲಿ ?" ಮಾತನಾಡಿಸಿದ್ದನ್ನು ಯಾರಾದರೂ ನೋಡಿದರೆ ನನ್ನಂತಹ ಸಭ್ಯನ ಗತಿಯೇನು ?" ಎಂದು. ಹೀಗೆ ಇಳಿಯುವ ನಿಲ್ದಾಣ ಬಂದಾಗಲೇ ತಿಳಿದದ್ದು ನಾ ಹುಡುಕುತ್ತಿದ್ದ ಹುಡುಗಿ ನನ್ನ ಬಸ್ಸಿನಲ್ಲಿಯೇ ಇದ್ದಳೆಂದು . ಅವಳು ಕೆಳಗಿಳಿದು ನಡೆದು ಹೋಗುತ್ತಿದ್ದಳು ಇನ್ನೇನು ಮಾತನಾಡಿಸಬೇಕೆಂದು ನುಗ್ಗಿದಾಗ ಅವಳ ಗಂಭೀರ ಮುಖ ನೆನಪಿಗೆ ಬಂದು ನನ್ನ ಆತ್ಮವಿಶ್ವಾಸದ ಸೌಧ ಕುಸಿದಿತ್ತು. ಅಷ್ಟರಲ್ಲೇ ಅವಳು ಕಾಲೇಜು ಆವರಣ ತಲುಪಿದ್ದಳು. ಹೋದರೆ ಹೋಗಲಿ ಆಮೇಲೆ ಮಾತನಾಡಿಸಿದರಾಯಿತೆಂದು ಸಮಾಧಾನ ತಂದುಕೊಂಡು ನಮ್ಮ ಕಂಪನಿಯ ಕಡೆ ಹೆಜ್ಜೆ ಹಾಕಿದೆ, ಆ ದಿನ ಬೇಗ ಬೇಗ ಕೆಲಸ ಮುಗಿಸಿ ಕಂಪನಿಯಿಂದ ಹೊರಡಲನುವಾದಾಗ ಗಂಟೆ ಆರು:ಐದು ಹೊಟ್ಟೆ ಬೇರೆ ತಾಳ ಹಾಕುತ್ತಿತ್ತು ಅವಳ ಕಾಲೇಜಿನ ಗೇಟಿನ ಬಳಿಯಿದ್ದ ಚುರುಮುರಿ ಅಂಗಡಿಯಿಂದ ಚುರುಮುರಿ ತೆಗದುಕೊಂಡು ತಿನ್ನಲಾರಂಭಿಸಿದೆ" ಆಹಾ ಎಂಥ ರುಚಿ ಕೊಟ್ಟ ದುಡ್ಡಿಗೆ ಮೋಸವಿಲ್ಲ "ಪದೇ ಪದೇ ತಿನ್ನಬೇಕು ಅನ್ನುವಷ್ಟು ನನ್ನನ್ನು ಮರಳು ಮಾಡಿತ್ತು . ಮುಕ್ಕಾಲು ಭಾಗ ತಿಂದು ಮುಗಿಸಿ ಹಿಂತಿರುಗಿ ನೋಡಿದಾಗ ನನ್ನ ಕಣ್ಣನ್ನು ನಾನೇ ನಂಬಲಿಲ್ಲ ಅವಳು ನನ್ನ ಹಿಂದೆಯೇ ಅವಳ ಗೆಳತಿಯ ಜೊತೆ ಚುರುಮುರಿ ತಿನ್ನುತ್ತಿದ್ದದ್ದು ಕಾಣಿಸಿತು, ಅಷ್ಟು ಹೊತ್ತಿಗೆ ನನ್ನ ಸಂಪೂರ್ಣ ಗಮನ ಅವಳ ಹಾವಭಾವದ ಮೇಲೆ ಮಾತು ಮಾತಿಗೂ ನಾಚಿಕೆಯ ಮುಗುಳ್ನಗು, ಉದ್ದೇಶಪೂರ್ವಕವಾಗಿ ಅವಳ ಮುಖದ ಮೇಲೆ ವಕ್ಕರಿಸುತ್ತಿದ್ದ ಮುಂಗುರುಳು ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಇವೆಲ್ಲದರ ನಡುವೆ ನನ್ನ ಚುರುಮುರಿ ಖಾಲಿಯಾದದ್ದೇ ತಿಳಿಯಲಿಲ್ಲ. ಮನೆಗೆ ತೆರಳಲು ನಾನು ಹೊರಡುವುದಕ್ಕೂ, ಅವಳು ಹೊರಡುವುದಕ್ಕೂ ಸಮಯ ಸರಿ ಹೋಯಿತು. ಆಗ ನನಗನಿಸಿದ್ದು "ಇಂಥ ಒಳ್ಳೆ ಸಮಯ ಯಾವಾಗಲೂ ಸಿಗುವುದಿಲ್ಲ ಏನಾದರಾಗಲಿ ಒಮ್ಮೆ ಮಾತನಾಡಿಸೋಣ" ಎಂದು. ಈ ಬಾರಿ ನಾನು ಮುಂದೆ, ಅವಳು ಮತ್ತು ಅವಳ ಗೆಳತಿ ನನ್ನ ಹಿಂದೆ. ಹೇಗೆ ಮಾತನಾಡಿಸಬೇಕೆಂದುಕೊಂಡಾಗ ಉಪಾಯವೊಂದು ಹೊಳೆಯಿತು " ಹೇಗಾದರೂ ಅವಳು ಹವ್ಯಕ ಹುಡುಗಿ ಹಾಗಾಗಿ ನಾನೂ ಕೂಡ ಅವಳೆದುರು ಅವಳ ಊರಿನವನೆಂದು ಬಿಂಬಿಸಿಕೊಳ್ಳಲು ಮೊಬೈಲ್ ತೆಗೆದು ಯಾರ ಜೊತೆಗೋ ಮಾತನಾಡುವ ಹಾಗೆ ಗಟ್ಟಿಯಾಗಿ ಅವಳಿಗೆ ಕೇಳುವ ಹಾಗೆ ಹವ್ಯಕ ಕನ್ನಡ ದಲ್ಲಿ ಮಾತನಾಡತೊಡಗಿದೆ , ಹಾಗೆ ಅವಳ ಪ್ರತಿಕ್ರಿಯೆಗಾಗಿ ತಿರು ತಿರುಗಿ ನೋಡುತ್ತಿದ್ದೆ ಆದರೇನು ಪ್ರಯೋಜನವಾಗಲಿಲ್ಲ ಯಾಕಂದರೆ ಅವಳು ತನ್ನ ಗೆಳತಿಯ ಜೊತೆ ಮಾತುಕತೆಯಲ್ಲಿ ಮಗ್ನಳಾಗಿದ್ದಳು.

ಅಷ್ಟರಲ್ಲಿ ನಾನು ಬಸ್ ಸ್ಟಾಂಡ್ ತಲುಪಿದ್ದೆ, ಅವಳೂ ನನ್ನ ಪಕ್ಕದಲ್ಲಿ ಬಂದು ನಿಂತಳು. ನಾನು ಬಸ್ ನೋಡುವ ನೆಪದಲ್ಲಿ ಅವಳನ್ನು ಕಣ್ತುಂಬಿಕೊಂಡೆ. ಮನೆಗೆ ಹೋಗುವುದು ಲೇಟ್ ಆದರೂ ತೊಂದರೆ ಇಲ್ಲ ಅವಳು ಹತ್ತುವ ಬಸ್ಸಿಗೆ ಹೋಗುವುದೆಂದು ನಿರ್ಧರಿಸಿದೆ, ನನ್ನ ಮನಸ್ಸನ್ನು ತಿಳಿದವಳಂತೆ ಬಂದ ಬಸ್ಸನ್ನು ಹತ್ತಿಯೇ ಬಿಟ್ಟಳು ನಾನೂ ತಡ ಮಾಡದೆ ಅದೇ ಬಸ್ ಹತ್ತಿ ಕುಳಿತೆ, ನನ್ನ ಅದೃಷ್ಟವೆಂಬಂತೆ ನನ್ನ ಮುಖ ಸರಿಯಾಗಿ ಕಾಣಿಸುವ ಹಾಗೆ ಅವಳು ದೂರದಲ್ಲಿ ಕುಳಿತಿದ್ದಳು,ಬ್ಯಾಗಿನಿಂದ ಇಯರ್ ಫೋನ್ ತೆಗೆದು ಮೊಬೈಲ್ಗೆ ಪೋಣಿಸಿ ಯಾರ ಬಳಿಯೋ ಮಾತಾಡ ತೊಡಗಿದಳು, ಅರೆ ನಾನು ಮೊದಲ ಬಾರಿ ಅವಳು ಇಯರ್ ಫೋನ್ ಹಾಕಿದ್ದನ್ನು ನೋಡಿದ್ದು, ಕ್ಷಣ ಕ್ಷಣಕ್ಕೂ ನನ್ನ ಕಡೆ ನೋಡಿ ಮುಗುಳ್ನಗೆ ಬೀರಲಾರಂಭಿಸಿದಳು,ನಾನೂ ತಡ ಮಾಡಲಿಲ್ಲ ಅವಳ ನಗುವಿಗೆ ಪ್ರತಿನಗು ಬೀರಿದೆ. ನನ್ನ ಹಿಂಭಾಗದಲ್ಲಿ ಯಾರೋ ಮೊಬೈಲ್ನಲ್ಲಿ ಹವ್ಯಕ ಕನ್ನಡದಲ್ಲಿ ಮಾತನಾಡುತ್ತಿರುವುದು ಕೇಳಿಸಿತು,ಈ ಅಪರಿಚಿತರ ಬೆಂಗಳೂರಿನಲ್ಲಿ ನಮ್ಮ ಊರಿನವರನ್ನು ಕಂಡರೆ ಯಾವಾಗಲೂ ಮೊದಲೇ ಮಾತನಾಡಿಸುತ್ತಿದ್ದೆ.ಹಿಂಬದಿ ತಿರುಗಿ ನೋಡಿದಾಗ ಕಾಲೇಜು ಹುಡುಗನೆಂದು ತಿಳಿಯಿತು ಆ ಕ್ಷಣವೇ ತಿರುಗಿ " ಎಲ್ ಆತ ತಮ ನಿಂಗೆ(ಎಲ್ಲಿ ಆಯಿತು ನಿನಗೆ ) ?" ಎಂದೆ. ಆತ ಯಾವುದೋ ಲೋಕದಿಂದ ಭೂಮಿಗೆ ಬಂದವನಂತೆ " ಏನು ?" ಅಂದ.ನಾನು ಮತ್ತೊಮ್ಮೆ " ಯಾವ್ ಊರು ನಿಂದು? "ಎಂದು ಮರುಪ್ರಶ್ನೆ ಹಾಕಿದಾಗ ಹೊನ್ನಾವರ ಎಂದುತ್ತರಿಸಿದ. ಆಗ ನನ್ನ ಪರಿಚಯವನ್ನೂ ಹೇಳಿಕೊಂಡಕೂಡಲೇ ಆತ ಖಾಲಿಯಿದ್ದ ನನ್ನ ಪಕ್ಕದ ಸೀಟಿನಲ್ಲಿ ಬಂದು ಕುಳಿತುಕೊಂಡ:ಹಾಗೆ ಮಾತನಾಡುತ್ತಾ ಅವನು; ಅವಳು ಓದುತ್ತಿದ್ದ ಕಾಲೇಜಿನವನೆಂದು ತಿಳಿಯಿತು. ಕೂಡಲೇ ಏನೋ ನೆನಪಾದಂತಾಗಿ ದೂರದಲ್ಲಿ ಕುಳಿತಿರುವ ಅವಳ ಮುಖ ನೋಡಿದೆ; ಅವಳೂ ನಮ್ಮ ಕಡೆಗೆ ನೋಡುತ್ತಿದ್ದಾಳೆ; ನನಗೆ ಏನೋ ಕಸಿವಿಸಿ, ಇನ್ನೇನು ಆತನ ಬಳಿ ಮೊಬೈಲ್ ನಂಬರ್ ಕೇಳಬೇಕೆಂದುಕೊಂಡಾಗ ಆತ ಕೈ ಕುಲುಕಿ " ಮತ್ತೆ ಸಿಗುವ "ಎಂದು ಹೇಳಿ ಬಸ್ಸಿಳಿಯಲು ಹೊರಟ,ನಾನು ಸರಿ ಎಂದು ತಲೆ ಅಲ್ಲಾಡಿಸಿ ಅವಳ ಕಡೆ ನೋಡಿದಾಗ ಅವಳೂ ಸೀಟಿನಿಂದ ಎದ್ದು ಬಸ್ಸಿಳಿಯಲು ಮುಂದಾದಳು, "ಯಾರಲ್ಲಿ ಹೆಚ್. ಎಮ್ .ಟಿ ಥೀಯೇಟರ್ ಇಳಿಯೋರು " ಅಂತ ಕಂಡಕ್ಟರ್ ಕೂಗಿದ. ಈ ಬಾರಿಯೂ ಏನು ಬೇಕಾದರಾಗಲಿ ಎಂದು ಅವಳನ್ನು ಮಾತನಾಡಿಸಲು ನಿರ್ಧರಿಸಿ ಬಸ್ಸಿಳಿದೆ. ನಾನು ಇಳಿದದ್ದು ನೋಡಿ ಆಗ ಮಾತನಾಡಿಸಿದ್ದ ಗೆಳೆಯ "ನೀವೇನು ಇಲ್ಲಿ " ಎಂದು ಕೇಳಿದ ನಾನು " ಇಲ್ಲಿ ಸ್ವಲ್ಪ ಕೆಲಸ ಇತ್ತು " ಎಂದು ಹಾರಿಕೆಯ ಉತ್ತರ ಕೊಟ್ಟೆ. ನಾನು "ನಿಮ್ಮ ಮನೆ ಇಲ್ಲೆಯಾ(ಇಲ್ಲೇನಾ ) ?" ಎಂದಾಗ, ಅವನು "ಇಲ್ಲ ಇಲ್ಲೇ ಥಿಯೇಟರ್ ಗೆ ಫಿಲ್ಮಿಗ್ ಹೋಗವು(ಹೋಗಬೇಕು )" ಅಂದ. ಅದಾಗಲೇ ಅವಳು ನಾವಿದ್ದ ಕಡೆಗೆ ನಡೆದು ಬರುತ್ತಿದ್ದಳು. ನನಗೆ ಗಂಟಲೆಲ್ಲ ಒಣಗಿದ ಅನುಭವ ಜೊತೆಗೆ ಆಶ್ಚರ್ಯ ಬೇರೆ!! ಇನ್ನೇನು ಮಾತನಾಡಿಬೇಕೆಂದು ಬಾಯಿ ತೆರೆದಾಗ ನನ್ನ ಪಕ್ಕದಲ್ಲಿದ್ದ ಹೊಸ ಗೆಳೆಯ ನನ್ನನ್ನು ಅವಳಿಗೆ ಪರಿಚಯಿಸುತ್ತ " ಇವರಿಗೆ ನಮ್ಮೂರೇ ಆತಡ(ಆಯಿತಂತೆ), ಬಸ್ಸಲ್ಲಿ ಪರಿಚಯ ಆಗಿದ್ದು" ಎಂದ. ನಾನು ಮೌನಕ್ಕೆ ಶರಣಾಗದೆ ಬೇರೆ ದಾರಿ ಇರಲಿಲ್ಲ. ಆತನೇ ಮುಂದುವರಿದು " ಇವಳು ನನ್ನ ಫ್ರೆಂಡ್ ನನ್ನ ಪಕ್ಕದ ಕ್ಲಾಸ್ " ಅಂದ ಹಾಗಂದಿದ್ದೇ ತಡ ಅವಳ ಮುಖ ಅರಳಿದ ಕೆಂಪಾದ ತಾವರೆಯಂತಾಯಿತು. ನಾನು " ಹಲೋ " ಎಂದು ಕೈ ಕುಲುಕಲು ಹೋದೆ, ಅವಳು ನಿರಾಕರಿಸಿ ನನಗೆ ಕೈ ಮುಗಿದುಬಿಟ್ಟಳು; ನನಗೆ ಒಂದು ಕ್ಷಣ ಮುಜುಗರವಾದಂತಾಗಿ ಹುಸಿನಗೆ ಬೀರಿದೆ. ಆಗ ಆತ " ನಮಗೆ ಲೇಟ್ ಆಗ್ತು(ಆಗುತ್ತದೆ) ನಂಗೊ(ನಾವು) ಹೊರಡ್ತೋ(ಹೊರಡುತ್ತೇವೆ) ಮತ್ತೆ ಸಿಗುವ" ಅಂದ. ನಾನು ಸರಿ ಎಂದು ತಲೆ ಅಲ್ಲಾಡಿಸಿ ಬೀಳ್ಕೊಟ್ಟೆ. ಯಾಕೋ ಸುಸ್ತಾದಂತಾಗಿ ಬಸ್ ಸ್ಟ್ಯಾಂಡಿನಲ್ಲಿ ಕುಳಿತುಕೊಂಡೆ.ಬಂದಿದ್ದ ಬಸ್ಸನ್ನು ಹತ್ತಲು ಯಾಕೋ ಮನಸಾಗಲಿಲ್ಲ, ತಿಂದಿದ್ದ ಮಂಡಕ್ಕಿ ಚುರುಮುರಿಯ ಹುಳಿತೇಗು ಮೇಲಿಂದ ಮೇಲೆ ಬರುತ್ತಿತ್ತು. ಅವರಿಬ್ಬರೂ ಕೈ ಕೈ ಹಿಡಿದು ಥೀಯೇಟರ್ ಕಡೆಗೆ ಹೋಗುತ್ತಿರುವುದು ಕಾಣಿಸಿತು, ಅಷ್ಟೊತ್ತಿಗೆ ಬಂದಿದ್ದ ಬೀದಿನಾಯಿಯೊಂದು ನನ್ನನ್ನೊಮ್ಮೆ ದಿಟ್ಟಿಸಿನೋಡಿ ನಾನು ಕುಳಿತಿರುವ ಪಕ್ಕದಲ್ಲಿದ್ದ ಕಸದಬುಟ್ಟಿಗೆ ತ್ವರಿತವಾಗಿ ಮೂತ್ರವಿಸರ್ಜನೆ ಮಾಡಿ ಹೊರಟುಹೋಗಿತ್ತು. ಇಷ್ಟು ದಿವಸ ಕಾಟಾಚಾರಕ್ಕೆ ಸಂಧ್ಯಾವಂದನೆ ಮಾಡುತ್ತಿದ್ದ ನನಗೆ ಗಂಭೀರವಾಗಿ ೧೦೮ ಗಾಯತ್ರಿ ಜಪದ ಸಂಧ್ಯಾವಂದನೆ ಮಾಡಬೇಕೆಂದು ಅನ್ನಿಸಿತು.