Click here to Download MyLang App

ಹುಂಜ - ಬರೆದವರು : ಅಜಯ್ ಕುಮಾರ್ ಎಂ ಗುಂಬಳ್ಳಿ | ಸಾಮಾಜಿಕ


ಸಂಜೆ ಹೊತ್ತಲ್ಲಿ ಮುನಿಯಮ್ಮ ಮಾರಿಗುಡಿಗೆ ಬಂದು ತನ್ನ ಹುಂಜಕ್ಕಾಗಿ ಅಲೆದಾಡುತ್ತಿದ್ದಳು. ಹಳ್ಳಿಕಟ್ಟೆಯ ಮೇಲೆ ಕಣ್ಣಾಡಿಸಿ, ಬೇಲಿಬೆಳ್ಳಾರ ಹಡುಕಿ, ಸಂದಿಗುಂದಿ ಇಣುಕಿ ಸುಸ್ತಾಗಿದ್ದವಳಿಗೆ ರೋಷವು ಹೇಚ್ಚಾಗುತ್ತಿತ್ತು. ಮುಸ್ಸಂಜೆ ಬಲಿಯುತ್ತ ಕತ್ತಲಾದಾಗ ಅವಳಿಗೆ ದಾರಿ ಕಾಣಿಸುವುದು ಕಷ್ಟವಾಯಿತು. ಕರೆಂಟಿದ್ದರೆ ಮಾರುದ್ದದವರೆಗು ದೇವಸ್ಥಾನದ ಬಲ್ಬುಗಳು ಬೆಳಕ ಚೆಲ್ಲಿರುತ್ತಿದ್ದವು. ಹಾಳಾದ ಕರೆಂಟಿಲ್ಲದೇ ಕೇರಿ ತುಂಬ ಗವ್ವಗತ್ತಲು. ಒಂದೊಂದೆ ಹೆಜ್ಜೆ ಹಿಡುತ್ತ ಹಟ್ಟಿಯತ್ತ ಸಾಗುತ್ತಿದ್ದವಳಲ್ಲಿ ದುಗುಡ ಉಕ್ಕುತ್ತ ಶಾಪ ಹಾಕಿದಳು. ಹೊಟ್ಟೆ ಬಡಿದಳು. ದೂಳು ಎರುಚುತ್ತ ‘ನನ್ನ ಕೋಳಿ ತಿಂದೋರ ಹಟ್ಟಿ ನಾಶ ಆಗೋಗ್ಲೋ.’ ಎಂದು ಗೋಳಿಟ್ಟಳು. ಆ ಹುಂಜಕ್ಕೆ ಅನ್ನ, ಇಟ್ಟು ಅನ್ನದೇ ತಾನು ಉಣ್ಣುವಾಗ ತಟ್ಟೆಯಿಂದಲೇ ಎಸೆಯುತ್ತಿದ್ದಳು. ಅಲ್ಲದೇ ಅದು ಬೀದಿಯಲ್ಲಿ ಎಲ್ಲರ ಕಣ್ಣು ಕುಕ್ಕಿತ್ತು. ಬೀದಿಯ ಜನರೆಲ್ಲ ‘ತಿಂದ್ರೂವಿ ಇಂಥ ಹುಂಜಾನ ತಿನ್ಬೇಕು’ ಎಂದು ಮಾತಾಡಿದ್ದರು. ಮೊನ್ನೆ ತಾನೇ ಹುಂಜಕ್ಕೆಂದು ಹೊಸ ಪಂಜರ ಖರೀದಿಸಿ, ಗಂಜಲದಿಂದ ತಾರಿಸಿ ಅಟ್ಟಲ ಮೇಲಿಟ್ಟಿದ್ದಳು. ಬೆಳಿಗ್ಗೆಯಿಂದ ಒಂದೇ ಸಮನೆ ಓಡಾಡಿದ್ದರಿಂದ ಕಾಲುಗಳು ನೋಯುತ್ತಿದ್ದವು. ಹಟ್ಟಿ ಬಾಗಿಲಿಗೆ ಬಂದು ‘ಉಸ್ಸೋ’ ಎಂದು ಕಾಲು ನೀಟಿ ಕೂತಳು. ಹಟ್ಟಿ ಒಳಗೇ ಸೀಮೆ ಎಣ್ಣೆ ದೀಪ ಕಸ್ಸಿದ ರಂಗಮ್ಮ ಅವ್ವನ ಮುಂದಕ್ಕೆ ಟೀ ತಂದಿಟ್ಟು ‘ಅದ್ಯಾವ ಮುಂಡೇ ಕದ್ದು ತಿಂದ್ಲೋ. ಅವ್ರ ಮನ ಹತ್ತಿ ಉರ್ದೋಗ. ಹೋದ್ದದ್ದು ತಿರ್ಗ ಬಂದದಾ’ ಕುಡಿಯವ್ವ ಅಂದಳು. ಮಗಳ ಮಾತು ಮಡಿಲಿಗೆ ಕೆಂಡ ಸುರಿದಂತಾಗಿ ಮುನಿಯಮ್ಮ ಟೀ ಲೋಟವ ಕೆಳಕಿಟ್ಟು ಪುನ ಬಾಯ್ತೆಗೆದಳು. ಅವ್ವನ ಸ್ವಭಾವ ತಿಳಿದಿದ್ದ ರಂಗಮ್ಮ ಹೆಚ್ಚಿಗೆ ಸೊಲ್ಲೆತ್ತಲಿಲ್ಲ.
ಹೆಚ್ಚಿಗೆ ಕೋಳಿ, ಹುಂಜಗಳು ಹಿತ್ತಲು, ಬೇಲಿ-ಬೆಳ್ಳಾರ, ಕಸದ ರಾಶಿ ಬಳಿ, ತಿಪ್ಪೆಯ ಸಮೀಪ, ಬಚ್ಚಲಿನ ಒಳಗೆ, ಇನ್ನಿತರ ಜಾಗಗಳಲ್ಲಿ ಅಡ್ಡಾಡುತ್ತವೆ. ತನ್ನ ಹುಂಜದ ಬಗ್ಗೆ ಮುನಿಯಮ್ಮನಿಗೆ ಎಲ್ಲಿಲ್ಲದ ಭರವಸೆ ಇತ್ತು. ಅದು ಎಂದಿಗೂ ಇನ್ನೊಬ್ಬರ ಹಟ್ಟಿ ಮುಂದಕ್ಕೆ ಹೋಗಿದ್ದಿಲ್ಲ. ಈ ಬೀದಿಯಿಂದ ಆ ಬೀದಿವರೆಗೆ ಎಲ್ಲಿಗೇ ಹೋಗಿದ್ದರೂ ಹೊತ್ತು ಮುಳುಗುವುದರೊಳಗೆ ಹಟ್ಟಿ ಬಾಗಿಲಿಗೆ ಬರುತ್ತಿತ್ತು. ಆಗೋಮ್ಮೆ ಎರಡು ದಿನ ಕಾಣೆಯಾಗಿದ್ದು ಮೂರನೆ ದಿವಸಕ್ಕೆ ದಿಡೀರನೆ ಪ್ರತ್ಯಕ್ಷವಾಗಿತ್ತು. ಇತ್ತೀಚೆಗೆ ನಾಯಿಗಳ ಆಕ್ರಮಣ ಕೋಳಿಗಳ ಮೇಲೆ ಮಾಮೂಲಿನದ್ದು. ನಾಯಿ ದಾಳಿಗೆ ಸತ್ತು ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದ ಅವುಗಳ ಮೇಲೆ ಕಾಗೆಗಳು ಎರಗಿರುತ್ತಿದ್ದವು. ಜೊತೆಗೆ ಇರುವೆ, ಇನ್ನಿತರ ಕೀಟಗಳು ಮುತ್ತಿರುತ್ತಿದ್ದವು.
ಮುನಿಯಮ್ಮ ಎಚ್ಚರಾದಾಗ ಸೂರ್ಯ ಉದಯಿಸಿರಲಿಲ್ಲ. ಬಾಗಿಲ ಸದ್ದಿಗೆ ಕಣ್ಬಿಟ್ಟ ರಂಗಮ್ಮ ನಿದ್ದೆಗಣ್ಣಿನಲ್ಲಿ ಏನಂದಳೋ ಅವಳಿಗೆ ತಿಳಿಯದಂತಿತ್ತು. ಸಣ್ಣಗೆ ಚಳಿಗಾಳಿ. ಇಬ್ಬನಿ ಬಿದ್ದ ನೆಲ. ಅಲ್ಲೊಂದು ಇಲ್ಲೊಂದು ಮನೆಯಲ್ಲಿ ಬೆಳಕಿತ್ತು. ಮಾಮೂಲಿಯಾಗಿ ಮುನಿಯಮ್ಮ ಏಳುತ್ತಿದ್ದುದು ಐದು ಗಂಟೆಗೆ. ಮಸೀದಿಯಲ್ಲಿ ಸಾಬ್ರು ಕೂಗುವುದೇ ಇವಳಿಗೆ ಅಲಾರಾಮ್. ಹುಂಜ ಕಾಣೆಯಾಗಿದ್ದರಿಂದ ಕಣ್ಣಿಗೆ ನಿದ್ದೆ ಹತ್ತಿರಲಿಲ್ಲ. ಕಾತಲಿಸುತ್ತಲೇ ಹೊರಗೆ ನಡೆದಿದ್ದಳು. ಗಲ್ಲೀಲಿ ಉಚ್ಚೆ ಉಯ್ಯುತ್ತಿದ್ದ ಸೋಮಣ್ಣ ತಲೆ ಕೆದರಿದ್ದ, ಬಾಗು ಬೆನ್ನಿನ, ಇಂಚಿಂಚೆ ನಡೆಯುತ್ತಿದ್ದ ಮುನಿಯಮ್ಮನ ಕಂಡು ಬೆಚ್ಚಿದ. ಕ್ಷಣ ಹೊತ್ತಿನ್ ಮ್ಯಾಲ ಅವನಿಗೆ ಹೋದದ್ದು ಮುದುಕಿ ‘ಮುನಿಯಮ್ಮ’ನೆಂದು ಅರುವಾಗಿ ಅಂಜಿದ್ದಕ್ಕೆ ಬೇಜಾರು ಮಾಡಿಕೊಂಡ. ಹಟ್ಟಿಯ ಒಳಗಿನಿಂದಲೇ ಕೆಲವು ಹುಂಜಗಳು ಕೂಗಿದ ಸದ್ದಿಗೆ ಮುದುಕಿಗೆ ಜೀವ ಸಮಾಧಾನ ಆದಂತಾಗಿ ಹುಡುಕುವುದ ಮುಂದುವರೆಸಿದಳು. ರೋಡಿನಲ್ಲಿ ಬಿದ್ದುಕೊಂಡಿದ್ದ ನಾಯಿಗಳು ಬೊಗಳಿದವು. ತನ್ನಪಾಡಿಗೆ ಅವಳು ನಡೆಯುತ್ತಿದ್ದಳು. ಬೊಗಳಿದ ನಾಯಿಗಳು ಮೆತ್ತಗಾದವು.
ದೇವರಿಗೆ ಬಿಟ್ಟಿದ್ದ ಗೂಳಿ ನಾಗರಾಜನ ಹಟ್ಟಿ ಮುಂದಿದ್ದ ಹುಲ್ಲನ್ನು ಮೇದು ಮೆಲುಕು ಹಾಕುತ್ತಿತ್ತು. ಹೆಚ್ಚು ಮಂದಿ ಅದು ದೇವರಿಗೆ ಬಿಟ್ಟಿದ್ದೆಂದು ಅದಕ್ಕೆ ಹೊಡೆಯುವುದಿಲ್ಲ. ಬದಲಿಗೆ ಬಸವ ತಾನೇ ಮೇಯ್ದರೆ ಮೇಯಲಿ ಎನ್ನುವರು. ಬೇರೆ ಮಾಮೂಲಿ ಹಸುವೋ, ಎತ್ತೋ ಮೇಯ್ದರೆ ಅಟ್ಟಾಡಿಸಿಕೊಂಡು ಹೊಡೆದು ಬರುತ್ತಾರೆ. ಮಿತಿ ಮೀರಿದರೆ ಅವುಗಳ ಒಡೆಯರು ನ್ಯಾಯದ ಸ್ತಾನಕ್ಕೆ ಬಂದರು ಅಚ್ಚರಿ ಪಡಬೇಕಾಗಿಲ್ಲ. ಸಾಬ್ರು ಕೂಗಿದ ಟೇಮಿಗಿಂತ ಹತ್ತು ನಿಮಿಷ ಲೇಟಾಗಿ ಎದ್ದು ಹೊರಕ್ಕೆ ಬಂದ ನಾಗಾರಜ ಗೂಳಿ ಕಂಡು ಮನೆ ಮೇಲಿಟ್ಟಿದ್ದ ಬಿದಿರು ಕಡ್ಡಿ ಎತ್ಕಂಡು ಹಲ್ಲು ಕಚ್ಚುತ್ತ ಎತ್ತಿನೆಡೆಗೆ ಓಡಿದ. ಗೂಳಿ ಓಡಲು ಶುರು ಮಾಡಿತು. ಬಿಡದೇ ಅದರ ಹಿಂದೆಯೇ ಓಡಿದ ನಾಗರಾಜ ಕೊನೆಗು ಅದರ ಬೆನ್ನಿಗೆ ಎರಡೇಟು ಬಿಗಿದ. ಕಂದು ಬಣ್ಣದ ಗೂಳಿ ಮೈಮೇಲೇ ಬರೆ ಎಳೆದಂಗೆ ಬಾಸುಂಡೆ ಮೂಡಿತ್ತು. ಊರು-ಕೇರಿಯ ರಸ್ತೆಗಳಿಗೆ ಸಿಮೆಂಟ್ ಹೊದಿಕೆ ಹಾಕಿಸಿಕೊಳ್ಳುವ ಭಾಗ್ಯ ಬಂದು ಕಾರ್ಯ ಪ್ರಗತಿಯಲ್ಲಿತ್ತು. ಮಣ್ಣಿನ ರಸ್ತೆಯನ್ನು ಅಗೆದು ಕೆಳಕ್ಕೆ ದಪ್ಪ ಜೆಲ್ಲಿಕಲ್ಲು ಹರಡಿ ಅದರ ಮೇಲೆ ಸರಳುಗಳ ಕಟ್ಟಿದ್ದರು. ಚಾವಡಿ ತನಕ ಸಾಗಿದ್ದ ಮುನಿಯಮ್ಮ ರಂಗಯ್ಯನ ಹಿತ್ತಲಿನ ದಾರೀಲಿ ಸರಳು ತಡೆದು ಬಿದ್ದಳು. ಅವಳ ಕೈಗೆ ತಂತಿ ಪರಚಿ ರಕ್ತ ಬರತೊಡಗಿತು. ತಿಪ್ಪೆಗೆ ಕಸ ಹೊತ್ತುಕೊಂಡು ಹೋಗುತ್ತಿದ್ದ ಮಾದಯ್ಯ ಯಾರೋ ಬಿದ್ದರೆಂದು ಕಸದ ಮಕ್ಕರಿ ಕೆಳಗಿಟ್ಟು ಅಲ್ಲಿಗೆ ಓಡಿಹೋಗಿ ಮುನಿಯಮ್ಮನನ್ನು ಎತ್ತಿ, ಏಟಾಗಿದಿಯಾ? ಇಲ್ಲವೋ? ಎಂಬುದನ್ನು ಖಾತ್ರಿ ಪಡಿಸಿಕೊಂಡು ಅವಳನ್ನೇ ಬೈದ. ಅವಳು ಕೈ ನೋಡಿಕೊಂಡಳು. ಅವನಿಗೆ ರಕ್ತ ಕಾಣಿಸಿ ತಕ್ಷಣ ಹಟ್ಟಿಗೆ ಓಡಿ ಕಾಫಿಪುಡಿ ತಂದು ಗಾಯಕ್ಕೆ ಹಚ್ಚಿದ. ಗಾಯಕ್ಕೆ ಕಾಫಿಪುಡಿ ಬಿದ್ದದ್ದರಿಂದ ಉರಿ ಹೆಚ್ಚಾಯಿತು. ಅವಳನ್ನು ಜೋಪಾನವಾಗಿ ಮನೆಗೆ ಕರಕೊಂಡು ಹೋಗಿ, ರಂಗಮ್ಮನ ಎಚ್ಚರಿಸಿ ‘ಅವ್ವನ್ನ ನೋಡ್ಕಬಾರ್ದ’ ಅಂದು ತನಗೆ ತೋಚಿದ ನಾಲ್ಕಾರು ಬುದ್ದಿ ಮಾತೇಳಿ ಅಲ್ಲಿಂದ ಮಕ್ಕರಿಯಿದ್ದ ಜಾಗಕ್ಕೆ ಬಂದ. ಮಾದಯ್ಯ ಹೋದ ಮ್ಯಾಲೆ ಎದ್ದು ಬಂದ ರಂಗಮ್ಮನಿಗೆ ಅವ್ವನದು ಆಸೆಬುರುಕು ತನ ಅನಿಸಿ ‘ಹೋದ್ರೆ ಹೋಯ್ತು ಹುಂಜ. ಅದಕ್ಕಾಗಿ ನೀನು ಬಿದ್ದು ಬಂದಿದಿಯಾ. ಹೆಚ್ಚುಕಡಿಮೆ ಆಗಿದ್ರೆ ಏನ್ ಗತಿ’ ಎಂದು ಕಾಳಜಿಯನ್ನು ಕೋಪದಲ್ಲಿ ಹೇಳಿದಳು. ಮುದುಕಿ ಮಾತಾಡದೇ ಕುರಿ ಹಂಗೇ ಮಗಳಿಂದೆ ಹಟ್ಟಿಯ ಒಳಗೋದಳು. ಸೆರಗಿನಲ್ಲಿ ಗಂಟಿಕ್ಕಿದ ಮುದುರಿದ ನೋಟು ಅವಳ ಕೈಗೆ ಬಂದು ಹಾಲು ತರಲು ಅಂಗಡಿ ಕಡೆಗೆ ಓಡಿದಳು. ಮಬ್ಬಿಗೆ ಯಾವ ಅಂಗಡಿಗಳು ತೆರೆದಿರುವುದಿಲ್ಲ. ಹೋಟೆಲ್ಲುಗಳು, ಟೀ ಅಂಗಡಿಗಳಷ್ಟೇ ತರೆದಿರುತ್ತವೆ. ಟೀ ಅಂಗಡಿಯವನು ಎರಡು ದಿನಗಳಿಂದ ಹಾಲಿನ ವ್ಯಾಪಾರವನ್ನು ನಿಲ್ಲಿಸಿದ್ದನು. ರಂಗಮ್ಮ ಬಸ್ಟ್ಯಾಂಡಿಗೆ ಹೋದಳು. ಗುರು ಅಂಗಡಿ ಬಾಗಿಲು ತೆಗೆದು ಗಂಧದ ಕಡ್ಡಿ ಕಸ್ಸಿ ಕೈಮುಗಿಯುತ್ತಿದ್ದ. ಅವನದೊಂದೇ ಆರು ಗಂಟೆಗೆ ಓಪನ್ನಾಗುವ ಚಿಲ್ಲರೆ ಅಂಗಡಿ. ಹಾಲಿನ ಪ್ಯಾಕೆಟ್ ಹಿಡಿದು ಬೀಳುವದನ್ನು ಲೆಕ್ಕಿಸದೇ ಸರಸರ ನಡೆದು ಮನೆಗೆ ಬಂದಳು. ಅವ್ವನ ನೋಡಿ ಕಣ್ಣಂಚಲ್ಲಿ ನೀರು ಬಂದದ್ದನ್ನು ಒರೆಸಿಕೊಂಡು ಒಲೆಯ ಮುಂದೆ ಕೂತಳು. ಕೊಳಗದಂತಿದ್ದ ಲೋಟದಲ್ಲಿ ಟೀ ತುಂಬಿ ಅವ್ವನ ಮುಂದಕ್ಕಿಟ್ಟಳು. ಮುದುಕಿ ಟೀ ಹೀರುತ್ತ ‘ಅದೈ ರಂಗಿ ಆ ಹುಂಜನಾದ್ರೂ ಹುಡುಕವ್ವಾ’ ಅಂದಳು. ಪಿತ್ತ ನೆತ್ತಿಗೇರಿದ ರಂಗಮ್ಮ ‘ಕಲ್ತ ಬುದ್ದಿ ಬುಡಕಾದ್ದ ಯೋಳು’ ಎಂದು ಅವ್ವನನ್ನು ಕೆಕ್ಕರಿಸಿ ನೋಡುತ್ತ ಪಂಜರ ಎತ್ತಿದಳು. ಕೋಳಿ, ಹುಂಜಗಳು ಹೊರಗೆ ಓಡಿದವು.
ಶಿವನಂಜಯ್ಯ ಮಗಳು-ಅಳಿಯ ಬರುವ ಖುಷಿಯಲ್ಲಿ ಬಿರುಸಿನ ನಡಿಗೆಯಲ್ಲಿ ಮುನಿಯಮ್ಮನ ಹಟ್ಟಿ ಬಾಗಿಲಿಗೆ ಬಂದ.
ರಂಗಮ್ಮ ‘ಇದ್ಯಾಕ ಮಾವ ಮಬ್ಬಿಗೆ’ ಅಂದಳು.
‘ನಿಮ್ಮವ್ವ ಇಲ್ವಾ ರಂಗೇ’ ಶಿವನಂಜಯ್ಯ ಕೇಳಿದ.
‘ಅವ್ವಾ ನಂಜ ಮಾವ ಬಂದನ ನೋಡು ಬಾ’ ಕೂಗಿದಳು ರಂಗಮ್ಮ.
ಮಂಡಿಗಳನ್ನು ಹಿಡಿದುಕೊಂಡು ಎದ್ದು ಮುನಿಯಮ್ಮ ಹೊರಕ್ಕೆ ಬಂದು ‘ಯಾರಪ್ಪೈ’ ಅಂದಳು.
‘ನಾನು ಶಿವನಂಜ’
ಅವಳಿಗೆ ಗೊತ್ತಾಗದೇ ಪುನ ‘ಯಾರಪ್ಪೈ’ ಅಂದಳು.
‘ನಾನು ಶಿವನಂಜ. ಶಿವನಂಜಾ’ ಜೋರಾಗಿ ಕಿರುಚಿದ.
ಶಿವನಂಜಯ್ಯ ಹುಂಜವನ್ನು ನೋಡಿ ವಾರದ ಹಿಂದೆ ಕೇಳಿದ್ದ. ಮುದುಕಿ ಕೊಡುವುದಾಗಿ ಮಾತುಕೊಟ್ಟು ಮುಂಗಡವಾಗಿ ಹಣ ಪಡೆದಿದ್ದಳು. ಈಗ ಅವನು ಹುಂಜ ತೆಗೆದುಕೊಂಡು ಹೋಗಲು ಬಂದಿದ್ದ.
‘ಹುಂಜ ನೆನ್ನೆಯಿಂದ ಹಟ್ಟಿಗೆ ಬಂದಿಲ್ಲ ಮಾವ’ ರಂಗಮ್ಮ ತಿಳಿಸಿದಳು.
‘ನನ್ನ ಮಗಳು-ಅಳಿಯ ಇವತ್ತೇ ಬರ್ತಾರೆ. ಸಂಜೆಗೆ ಬೇಕು ರಂಗೀ’ ಶಿವನಂಜಯ್ಯ ಮುನಿಸಿನಿಂದ ನುಡಿದ.
ಮುನಿಯಮ್ಮ ಬಾಯ್ತೆಗೆದು “ಸಂಜೆಯೊಳಗೆ ನಾನೇ ಹುಂಜನ ನಿಮ್ಮ ಅಟ್ಟಿಗೆ ತಲುಪುಸ್ತೀನಿ” ಅಂದಳು.
ಮುದುಕಿ ನೀಯತ್ತು ಬಲ್ಲವನಾಗಿದ್ದ ಶಿವನಂಜ ‘ಸಾಯಂಕಾಲ ನಾನೇ ಬತ್ತಿನಿ’ ಎಂದು ಹೇಳಿ ವಲ್ಲದ ಮನಸ್ಸಿನಿಂದ ಹೊರಟ.
ರಂಗಮ್ಮ ವಿಚಾರಿಸಿದ್ದಕ್ಕೆ ‘ಭಾನುವಾರದ ಕಂತಿಗೆ ಕಟ್ಟೋಕೆ ಹುಂಜ ಮಾರಿದ್ದು’ ಅಂದಳು ಮುನಿಯಮ್ಮ.
ಮೂರು ತಿಂಗಳಿಂದೆ ರಂಗಮ್ಮ ಬಿದ್ದು ಬಲಗೈ ಮೂಳೆ ಮುರಿದಿತ್ತು. ಆಗ ಅವಳ ಚಿಕಿತ್ಸೆಗೆ ಎರಡು ಸಾವಿರ ಖರ್ಚಾಗಿತ್ತು. ಡಾಕ್ಟರ್ ಬಳಿ ಹೋಗಿ ಕೈ ಕಟ್ಟಿಸಿಕೊಂಡು ಬಂದಿದ್ದರೂ, ಅದು ಸರಿ ಕೂತಿಲ್ಲವೆಂದು ಜನರ ಮಾತಿಗೆ ತಲೆಕೆಡಿಸಿಕೊಂಡು ರಂಗಮ್ಮ ಅವ್ವನೆದುರಿಗೆ ಅತ್ತಿದ್ದಳು. ಆಗ ನಾಟಿ ವೈದ್ಯರ ಕರೆಸಿ ಬಿದಿರಿನ ಅಚ್ಚೆಗಳಿಂದ ಕೈ ಕಟ್ಟಿಸಿದ್ದಳು. ಆಗ ಮೂರು ಸಾವಿರ ರೂಪಾಯಿ ಖರ್ಚಾಯಿತು. ನಂತರದಲ್ಲಿ ಅವಳ ಹಾರೈಕೆಗೆ ಖರ್ಚು. ಹೀಗೆ ಅವಳದು ಅಂತ ಇದ್ದ ದುಡ್ಡೆಲ್ಲ ಮುಗಿದಿತ್ತು. ಅಂದಹಾಗೇ ಮುನಿಯಮ್ಮ ದುಡಿತ ಬಿಟ್ಟು ನಾಲ್ಕೈದು ವರ್ಷಗಳು ತುಂಬಿದ್ದವು. ಸರ್ಕಾರದಿಂದ ವೃದ್ಯಾಪ್ಯ ವೇತನ ಎಂದು ಸಾವಿರ ರೂಪಾಯಿ ಬರುತ್ತಿದ್ದರಲ್ಲಿ ಅವಳು ಮನೆಗೆ ಬಳಸಿ, ಅಷ್ಟು ಇಷ್ಟು ಉಳಿಸಿದ್ದು ಮಗಳ ಕಷ್ಟಕಾಲದಲ್ಲಿ ಕೈಹಿಡಿದಿತ್ತು. ಎರಡು ತಿಂಗಳ ಮೇಲೆ ಚೇತರಿಸಿಕೊಂಡಿದ್ದ ರಂಗಮ್ಮ ಡಾಕ್ಟರ್ ಸಲಹೆ ಬದಿಗೊತ್ತಿ ಬಲಗೈಯಲ್ಲಿ ಹೆಚ್ಚುಬಾರದ ವಸ್ತುಗಳನ್ನು ಎತ್ತುತ್ತಿದ್ದಳು. ಮನೆಗೆಲಸವನ್ನು ಮಾಡುತ್ತಿದ್ದಳು. ಮುನಿಯಮ್ಮ ಮಗಳನ್ನು ಬೈದರು ಅವಳು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಯಾರಾದರೂ ಕೂಲಿಗೆ ಕರೆದರೆ ಸಾಕೆನ್ನುತ್ತಿದ್ದಳು. ಆದರೆ ಕೈ ಮುರಿದುಕೊಂಡಂದಿನಿಂದ ಯಾರು ಅವಳನ್ನು ಕೂಲಿಗೆ ಕರೆಯುತ್ತಿರಲಿಲ್ಲ. ಕೇಳಿದರೆ ‘ನಿನ್ನ ಕೈಯಲ್ಲಿ ಮೊದಲಿನಂಗೆ ಕೆಲ್ಸ ಮಾಡೋಕಾಗಲ್ಲ’ ಎಂದು ನೆಪ ಹೇಳುತ್ತಿದ್ದರು.
ಹುಣಸೆ ಮರದ ಬಳಿ ನಾಯಿ ದಾಳಿಯಿಂದ ಹುಂಜ ಅರಜೀವವಾಗಿ ಒದ್ದಾಡುತ್ತಿತ್ತು. ಸುದ್ದಿ ತಿಳಿದ ರಂಗಮ್ಮ ಅವ್ವನಿಗೆ ತಿಳಿಸದೇ ತಾನೊಬ್ಬಳೇ ಹೊರಟು ದೂರದಿಂದಲೇ ಗುರುತಿಡಿದು ವಾಪಸ್ಸಾದಳು. ಸತ್ತಿದ್ದ ಹುಂಜ ಅವರದಾಗಿರಲಿಲ್ಲ.
ಶಿವನಂಜ ಮಗಳು-ಅಳಿಯನಿಗಾಗಿ ಕಾಯುತ್ತಿದ್ದ. ನಾಲ್ಕೈದು ಭಾರಿ ಕರೆ ಮಾಡಿ ವಿಚಾರಿಸಿಕೊಂಡಿದ್ದರು ಅವನ ಜೀವಕ್ಕೆ ನೆಮ್ಮದಿ ಇರಲಿಲ್ಲ. ಹೈಕಳೊಂದಿಗೆ ಆಡುತ್ತಿದ್ದ ಪುಟ್ಟ ‘ಅಕ್ಕ ಬಂದ. ಅಕ್ಕ ಬಂದ’ ಎನ್ನುತ್ತ ಶಿವನಂಜನ ಮನೆಗೆ ಓಡಿಬಂತು. ಶಿವನಂಜನ ಮುಖದಲ್ಲಿ ನಗು ಮೂಡಿತು. ಗಂಡ-ಹೆಂಡತಿ ಹಿಡಿದಿದ್ದ ಬ್ಯಾಗು ತರಾವರಿ ತಿಂಡಿಗಳನ್ನು ಒಳಗಿಟ್ಟುಕೊಂಡಿತ್ತು. ಓಡಿಬಂದಿದ್ದ ಹೈದನಿಗೆ ಏನು ಸಿಗಲಿಲ್ಲ. ಶಿವನಂಜಯ್ಯನಿಗೆ ಹುಂಜದ ದಿಗಿಲಾಗಿ ಮನೆ ಬಿಟ್ಟು ಹೊರಟಿದ್ದ.
ಹುಂಜದ ಪತ್ತೆ ಸಿಕ್ಕದೇ ಮುನಿಯಮ್ಮ ಕಂಗಾಲಾಗಿದ್ದಳು. ಯಾರ ಮಾತನ್ನು ಅವಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ರಂಗಮ್ಮ ಬಾಯಾಕಿ ಬೈಸಿಕೊಂಡು ಸುಮ್ಮನಾಗಿದ್ದಳು. ಮುದುಕಿ ಕಳೆದಹೋದ ಹುಂಜದ ಜೊತೆಯ ಹುಂಜವನ್ನು ತಡಕಾಡಿದಳು. ಅದೂ ಸಿಕ್ಕಿರಲಿಲ್ಲ. ಕೊನೆಗೆ ಸಿಕ್ಕಿದ ಅದನ್ನು ಉಪಾಯದಿಂದ ಹಿಡಿದ ಅವಳು ಶಿವನಂಜಯ್ಯನ ಹಟ್ಟಿ ದಾರಿಗೆ ಬಿದ್ದಳು. ಅವ್ವನ ಕರೆದು ರಂಗಮ್ಮ ‘ನನ್ ಕಿವಿಲಿರೋ ಓಲೆಗಳನ್ನು ಗಿರಿವಿಗಿಟ್ಟು ನಾಳೆ ಅವನ ದುಡ್ಡು ಕೊಟ್ಟರಾಯಿತು ಬವ್ವ’ ಎಂದು ಕೂಗಿದಳು. ‘ಅವ್ನ ಋಣ ನಮಗ್ಯಾಕವ್ವ. ಮಾತಿನಂತೆ ಅವ ಕೊಟ್ಟಿರೋ ದುಡ್ಡುಗ ಈ ಹುಂಜ ಕೊಟ್ಬುಟ್ಟು ಬತ್ತಿನಿ’ ಎನ್ನುತ್ತ ಮುನಿಯಮ್ಮ ಮರೆಯಾದಳು.
ಹುಂಜ ಹಿಡಿದು ಬರುತ್ತಿದ್ದ ಮುನಿಯಮ್ಮನ ಕಂಡ ಶಿವನಂಜ ಅಲ್ಲೇ ನಿಂತುಕೊಂಡ. ಮುದುಕಿ ಕೂಸಿಗಿಂತಲೂ ನಿಧಾನ ನಡೆದು ಬರುತ್ತಿದ್ದಳು. ಶಿವನಂಜನ ಮುಖ ಅರಳುತ್ತ ‘ಕೊಡವ್ವ’ ಅಂತ ಎರಡೆಜ್ಜೆ ಮುಂದೆ ಹೋಗಿ ಈಸಿಕೊಂಡನು. ಹುಂಜ ‘ಕ್ಕೊಕ್ಕೊಕ್ಕೊ’ ಸದ್ದು ಮಾಡುತ್ತಲೇ ಇತ್ತು.
ಹಟ್ಟಿಗೆ ಬಂದ ಶಿವನಂಜ ಹುಂಜಕ್ಕಾಗಿ ಪಂಜರ ಹುಡುಕಾಡಿದ. ಇದ್ದ ಒಂದೇ ಒಂದು ಪಂಜರದಲ್ಲಿ ಕದ್ದು ತಂದಿದ್ದ ಮುನಿಯಮ್ಮನ ಹುಂಜ ಹೊರಕ್ಕೆ ಬರಲು ಹವಣಿಸುತ್ತಿತ್ತು. ಬೇರೆ ದಾರಿ ಇಲ್ಲದೇ ಆ ಹುಂಜವನ್ನು ಅದೇ ಪಂಜರದೊಳಕ್ಕೆ ಬಿಟ್ಟ. ಒಂದೇ ಮನೆಯ ಎರಡು ಹುಂಜಗಳು ಒಂದೇ ಪಂಜರದಲ್ಲಿದ್ದರೂ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ಪತರಗುಟ್ಟಿದವು.