Click here to Download MyLang App

ಹೀಗೊಂದು ಸ್ವಗತ(ಕಥೆ) - ಬರೆದವರು : ಅನುಪಮ ದೇಬ್ ಗುಪ್ತ | ಸಾಮಾಜಿಕ

ಹೀಗೊಂದು ಸ್ವಗತ(ಕಥೆ)
"ಕೈಗೆ ಸ್ವೇಲ್ಲಿಂಗ್ ಬಂದಿದೆ.ಡ್ರಿಪ್ಸ್ ಸೂಜಿ ಕಾಲಿಗೆ ಹಾಕಲಾ?"ಕೇಳುತ್ತಿದ್ದಳು ನರ್ಸ್.
"ಸರಿ ಸಿಸ್ಟರ್.ಹಾಗೆಯೇ ಮಾಡಿ"ಎಂದಳು ಮಧು
ಹಾಸ್ಪಿಟಲ್ ಬೆಡ್ ಮೇಲೆ ಮಲಗಿರುವ ನನಗೆ ಎಲ್ಲಾ ಗೊತ್ತಾಗ್ತಾ ಇದೆ.ಆದರೆ ಏನೂ ಹೇಳೋಕೂ ಆಗ್ತಿಲ್ಲ.ಎಲ್ಲ ಮರಗಟ್ಟಿರುವ ಫೀಲಿಂಗ್.ದೇಹವೀಡಿ ನೋವು.ಎಲ್ಲೆಂದೂ ಅರಿತುಕೊಳ್ಳಲು ಆಗದಂತೆ.
"ಮಧೂ ಕುಡಿಯೋಕೆ ಬಿಸಿನೀರು ತರ್ತೀನಿ"ಹೀಗೆಂದಿದ್ದು ನನ್ನ ನಾದಿನಿ,ಅಂದರೆ ಮಧುವಿನ ಅಕ್ಕ ಪಲ್ಲವಿ.
"ಕೊಡಿ ಪ್ಲಾಸ್ಕ್,ನಾನು ತರ್ತೀನಿ"ಎಂದರು ನನ್ನ ಅಣ್ಣ.
ನಾನು ಮೂರು ದಿನಗಳಿಂದ ಮೂಕ ಪ್ರೇಕ್ಷಕನಾಗಿದ್ದೇನೆ.
ಒಮ್ಮೊಮ್ಮೆ ಇವರೆಲ್ಲ ಬಂದು ಕುಳಿತು ತಲೆ ಸವರುತ್ತಾರೆ.ಮಾತನಾಡುತ್ತಾರೆ. ಉತ್ತರ ಕೊಡಬೇಕು ಎನ್ನಿಸುತ್ತೆ.ಆದರೆ ಆಗ್ತಾ ಇಲ್ಲ.ನನಗೆ ಗೊತ್ತು,ನಾನು ಕೆಲವೇ ದಿನಗಳ ಅತಿಥಿ ಇಲ್ಲಿ ಎಂದು.ಹೊರಡುವ ದಿನಗಳೂ ಹತ್ತಿರ ಬಂದಿವೆ ಎಂದು.ಮಧುವನ್ನು ನೋಡಿದಾಗ ಸಂಕಟವಾಗುತ್ತೆ.ಅಳಬೇಕು ಎನ್ನಿಸಿದರೂ ಅಳಲು ಆಗ್ತಿಲ್ಲ.ಕಲ್ಲಂತೇ ಆಗಿಬಿಟ್ಟಿದ್ದಾಳೆ ನನ್ನ ಮಧು.ಕಣ್ಣು ಮುಚ್ಚಿದರೆ ಮನಸ್ಸು ಹಿಂದೆ ಓಡುತ್ತೆ.
ಹೌದು. ಬರೋಬ್ಬರಿ ಮೂವತ್ತು ವರ್ಷಗಳಾಗಿತ್ತು,ನಾನು ಮಾಧವಿಯನ್ನು ಮದುವೆಯಾಗಿ.ಗುಜರಾತ್ ನ ಸೂರತ್ ನಿಂದ ಕೆಲಸದ ಬೇಟೆಯಲ್ಲಿ ಬಂದಿದ್ದ ನನಗೆ ಬೆಂಗಳೂರಿನಲ್ಲಿ ಸುಲಭವಾಗಿಯೇ ಕೆಲಸ ಸಿಕ್ಕಿತ್ತು.ಸಿಟಿಯಲ್ಲಿ ಬಾಡಿಗೆ ಹೆಚ್ಚಾಗಿದ್ದ ಕಾರಣ ಸ್ವಲ್ಪ ದೂರದಲ್ಲಿ ಮನೆ ಮಾಡಿದ್ದೆ.ಕೆಲದಿನಗಳ ಬಳಿಕ ನನ್ನೊಡನೆ ಬಂದು ಸೇರಿಕೊಂಡಿದ್ದ ಹೂಗ್ಲಿಯ ಆಶಿಷ್ ಚೌಧರಿ.ಅವನೇ ನನಗೆ ಸಿಗರೇಟ್ ಹಾಗೂ ಕುಡಿತ ಕಲಿಸಿದ್ದು.ಅದೊಂದು ಹೋಳಿ ಹಬ್ಬದಲ್ಲಿ,ನಮ್ಮೂರಲ್ಲಿ ಭಾಂಗ್ ಕುಡಿದಿದ್ದ ನಾನು ಅದು ಹೇಗೆ ಮನೆಗೆ ಬಂದಿದ್ದೇನೋ ನೆನಪಿಲ್ಲ.ಎರಡು ದಿನ ಹಾಸಿಗೆಯಲ್ಲಿ ಬಿದ್ದೇ ಇದ್ದೆ ಎಂದು ಅಮ್ಮ ಹೇಳಿದ್ದರು.ಆ ಬಳಿಕ ನಶೆಯ ಸುದ್ದಿಗೆ ಹೋಗಿರಲಿಲ್ಲ ನಾನು.ಆದರೆ ಈ ಆಶಿಷ್ ಗೀಳು ಹತ್ತಿಸಿದ."ಎಲ್ಲ ನೆಂಟರೂ ಊರಲ್ಲಿ.ಮನಸ್ಸು ಸ್ವಲ್ಪ ರಿಲ್ಯಾಕ್ಸ್ ಆಗುತ್ತೆ"ಎನ್ನುತ್ತಿದ್ದ.ಆರಂಭದಲ್ಲಿ ಬೇಡ ಅನ್ನಿಸಿದರೂ ಬಳಿಕ ಅದು ಪ್ರಿಯವಾಯ್ತು.ಅಷ್ಟರಲ್ಲಿ ಆಶಿಷ್ ದುಬೈನಲ್ಲಿ ಕೆಲಸ ಸಿಕ್ಕಿತೆಂದು ಹೊರಟೇ ಹೋದ.ನನ್ನೆಲ್ಲ ಒಂಟಿತನ ನೋವಿಗೂ ಅದೇ ಮದ್ದಾಯ್ತು ಎಂದು ಬೇರೆ ಹೇಳಬೇಕಿಲ್ಲ. ಹೀಗೆ ವರ್ಷಗಳು ಕಳೆದವು.ಅಮ್ಮ ಒಮ್ಮೆ ಊರಿನಿಂದ ಬಂದವರು "ದಿನಾ ಕುಡೀತೀಯಾ?ಬೇಡ ಕಣೋ.ಒಳ್ಳೇ ಹುಡುಗ ನೀನು.ಹೀಗ್ಯಾಕೆ?"ಎಂದು ನೊಂದಿದ್ದರು.ನಾನು ನಕ್ಕು "ಈಗ್ಲೂ ನಾನು ಒಳ್ಳೇ ಹುಡುಗನೇ ಅಮ್ಮ.ಈಗಿನ ಕಾಲದಲ್ಲಿ ಸಿಗರೇಟ್,ಡ್ರಿಂಕ್ಸ್ ಎಲ್ಲಾ ಕಾಮನ್.ಫ್ಯಾಶನ್ ಕೂಡಾ"ಎಂದೆ. ಅದಕ್ಕವರು "ಬೇಗ ಮದ್ವೆ ಮಾಡ್ಕೊಳೋ'ಎಂದಿದ್ದರು.
ನಾನು ಬಸ್ ನಲ್ಲಿ ಆಫೀಸಿಗೆ ಹೋಗುತ್ತಿದ್ದುದು.ಅಲ್ಲೂ ಗೆಳೆಯರ ಗುಂಪೊಂದಿತ್ತು.ನಾವೆಲ್ಲ ಡ್ರೈವರ್ ಪಕ್ಕದಲ್ಲಿದ್ದ ಸೀಟ್ ನಲ್ಲಿ ಕುಳಿತುಕೊಳ್ಳುತ್ತಿದ್ದೆವು
.ಆಗಲೇ ಪರಿಚಯವಾಗಿದ್ದಳು ಮಾಧವಿ.ಅಂದು ನೂರು ರೂಪಾಯಿಗೆ ಚಿಲ್ಲರೆ ಇಲ್ಲದ ಕಾರಣ ಕಂಡಕ್ಟರ್ ಅವಳನ್ನು ಬಸ್ಸಿಂದ ಇಳಿ ಎಂದಾಗ ಅವಳ ಅಳು ಮುಖ ನೋಡಿ ನಾನೇ ಟಿಕೆಟ್ ಕೊಂಡಿದ್ದೆ.ಹಾಗಾಗಿತ್ತು ನಮ್ಮ ಪರಿಚಯ. ಕಾಫಿ ಬೋರ್ಡ್ ನಲ್ಲಿ ಕೆಲಸ ಮಾಡುತ್ತಿದ್ದ ಮಾಧವಿಯ ಸರಳ ಸ್ವಭಾವ ನನಗೆ ತುಂಬಾ ಇಷ್ಟವಾಗಿತ್ತು. ಅವಳಿಗೆ ಇಬ್ಬರು ಅಕ್ಕಂದಿರು,ನನಗೆ ಇಬ್ಬರು ಅಣ್ಣಂದಿರು.ನಾವಿಬ್ಬರೂ ಮಧ್ಯಮ ವರ್ಗದವರೇ. ಪರಿಚಯ ಪ್ರೇಮದಲ್ಲಿ ತಿರುಗಿ ಬಳಿಕ ಎರಡೂ ಕಡೆಯಿಂದ ಸಮ್ಮತಿ ಸಿಕ್ಕಿ,ಮದುವೆ ಕೂಡಾ ಆಗಿತ್ತು.ಚಿಕ್ಕದೊಂದು ಬಾಡಿಗೆ ಮನೆಯಲ್ಲೇ ಸಂಸಾರ ಹೂಡಿದ್ದೆವು.ಮಾಧವಿ( ಮಧು),ಅಲ್ಪ ತೃಪ್ತೆ.ಇಂಥದ್ದೇ ಬೇಕು ಎಂದು ಎಂದೂ ಕೇಳಿದ್ದಿಲ್ಲ.ಅವಳಿಗಿದ್ದ ಒಂದು ಕೆಟ್ಟ ಸ್ವಭಾವ ಎಂದರೆ ಮುಂಗೋಪ.ಕೋಪ ಎನ್ನುವುದು ಮೂಗಿನ ತುದಿಯ ಮೇಲೆಯೇ ಇರುತ್ತಿತ್ತು. ಅದರ ಭರಾಟೆಯಲ್ಲಿ ಬೈದು,ಬಳಿಕ ಪಶ್ಚಾತ್ತಾಪ ಪಡುತ್ತಿದ್ದಳು ಮಧು.ಅವಳಿಗೆ ಸಿಟ್ಟು ನೆಟ್ಟಿಗೇರುತ್ತಿದ್ದುದು ನನ್ನ ಚಟಗಳಿಂದ.ಸಿಗರೇಟ್ ಮತ್ತು ಒಮ್ಮೊಮ್ಮೆ ಮದಿರೆ. ಒಮ್ಮೊಮ್ಮೆ ನಿಯಂತ್ರಣ ಮೀರಿದಾಗ ಕೂಗಾಡುತ್ತಿದ್ದಳು ಮಧು.ಅವಳ ಕೋಪ ಹೆಚ್ಚು ಹೊತ್ತು ಇರುವುದಿಲ್ಲವೆಂದು ಅರಿತಿದ್ದ ನಾನು ಅವಳ ಬೈಗುಳನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಲೇ ಇರಲಿಲ್ಲ.
ಮದುವೆಯಾದ ಹೊಸತರಲ್ಲಿ ಅದನ್ನು ಬಿಡಿಸಲು ಪ್ರಯತ್ನ ಪಟ್ಟಳು ಮಧು.ಆದರೆ ಅದು ನನ್ನನ್ನು ಬಿಡಲಿಲ್ಲ.ನಿಮ್ಮ ಮೊದಲ ಹೆಂಡತಿ ಅದು.ನಾನೇನಿದ್ದರೂ ಎರಡನೆಯವಳು ಎನ್ನುತ್ತಿದ್ದಳು ಮಧು.
ಮದುವೆಯಾಗಿ ಎರಡು ವರ್ಷಗಳ ಬಳಿಕ ಹುಟ್ಟಿದಳು ವರ್ಷಾ.ಬದುಕಲ್ಲಿ ಹರ್ಷವನ್ನೇ ತಂದಳು.ಅವಳ ಅದೃಷ್ಟವೋ ಏನೋ,ಹಾಗೂ ಹೀಗೂ ಸ್ವಂತ ಮನೆ ಮಾಡಿಕೊಂಡೆವು.ಆ
ಮನೆಯ ಸಾಲ ತೀರಿಸುವುದು ನನ್ನ ಜವಾಬ್ದಾರಿ ಆಗಿತ್ತು, ಮಿಕ್ಕ ಖರ್ಚುಗಳನ್ನೆಲ್ಲ ಮಧುವೇ ನೋಡಿಕೊಳ್ಳುತ್ತಿದ್ದಳು.ಮಧುವಿಗೆ ದೇವಸ್ಥಾನಗಳಿಗೆ ಹೋಗುವುದೆಂದರೆ ಬಲು ಇಷ್ಟ. ಎಲ್ಲಾದರೂ ದೂರದ ದೇವಾಲಯಗಳಿಗೆ ಹೋಗುವುದಿದ್ದರೆ,ನನ್ನ ಅನುಮತಿಗಾಗಿ ಕಾದು, ಬಳಿಕ ಹೋಗುತ್ತಿದ್ದಳು. ಒಮ್ಮೆ ತಿರುಪತಿಗೆ ಕೂಡ ಒಬ್ಬಳೇ ಹೋಗಿ ಬಂದಿದ್ದಳು ಮಧು.
ಆದರೆ ಒಂದೇ ಒಂದು ದಿನ ಸೀರೆ ಕೊಡಿಸಿ ಎಂದಾಗಲೀ, ಒಡವೆ ಕೊಡಿಸಿ ಎಂದಾಗಲೀ ನನ್ನನ್ನು ಕೇಳಲಿಲ್ಲ ಮಧು.ಮದುವೆಯಾದ ಮೊದಲ ಗೌರಿ ಹಬ್ಬಕ್ಕೆ ನಾನು ಆಲಸೂರಿನಲ್ಲಿದ್ದ ಫ್ಯಾರಿಕೋ ಶೋ ರೂಮ್ ನಿಂದ 350 ರೂಪಾಯಿಯ ಸೀರೆ ಕೊಡಿಸಿದ್ದೆ.ಮಧು ಅದನ್ನು ಇನ್ನೂ ಇಟ್ಟುಕೊಂಡಿದ್ದಾಳೆ.
ಇನ್ನೂ ಒಂದು ವಿಷಯ ಏನೆಂದರೆ, ಈ ಚಟ ನನ್ನ ಕಾರ್ಯದಕ್ಷತೆಗೆ ಅಡ್ಡಿ ಬರಲಿಲ್ಲ.ಏನೇ ಆದರೂ ಸರಿಯಾದ ಸಮಯಕ್ಕೆ ಹೊರಟು ಕೆಲಸಕ್ಕೆ ಹೋಗುತ್ತಿದ್ದೆ.ಆಫೀವಿನಲ್ಲಿ ನನಗೆ ಗೌರವವಿತ್ತು.ಅಲ್ಲಿನ ಅನೇಕ ಕೆಲಸ ಕಾರ್ಯಗಳೂ ನನ್ನ ನಿಯಂತ್ರಣದಲ್ಲೇ ಇತ್ತು.ಈ ಬಗ್ಗೆ ಮಧು ತುಂಬಾ ಹೆಮ್ಮೆ ಪಡುತ್ತಿದ್ದಳು "ನೀವು ಎಷ್ಟು ಸಿನ್ಸಿಯರ್.ಆ ದೇವರು ಕೂಡಾ ಮೆಚ್ತಾನೆ"ಎಂದಾಗ ನಾನು ಹೇಳುತ್ತಿದ್ದೆ "ಹೌದು ಮಧು,ಅನ್ನ ಕೊಡುವ ಧಣಿಗೆ ಮೋಸ ಮಾಡಕೂಡದು"ಅಂತ.
ವರ್ಷಾ ಡಿಗ್ರಿ ಕೊನೆ ವರ್ಷದಲ್ಲಿದ್ದಾಗ ಅವಳಿಗೆ ನೆಂಟಸ್ತನ ಬಂತು.ಮಧುವಿನ ಸಂಬಂಧಿಕರ ಮದುವೆಗೆ ಬಂದಿದ್ದ ಹುಡುಗ ಸಂದೇಶ್,ವರ್ಷಳನ್ನು ಇಷ್ಟ ಪಟ್ಟಿದ್ದ. ಬೇಡವೆನ್ನಲು ಕಾರಣಗಳೇ ಇರಲಿಲ್ಲ.ಮದುವೆಯಾಗಿ ಮೂರು ವರ್ಷಗಳ ಬಳಿಕ ಸಂದೇಶ್ ನನ್ನು ಅವರ ಕಂಪನಿ ಲಾಸ್ ಎಂಜಲಿಸ್ ಗೆ ಕಳುಹಿಸಿತ್ತು. ಈಗ ಅಲ್ಲೇ ಇದ್ದಾರೆ ಅವರ ಮಗನೊಂದಿಗೆ.
ಮೊಮ್ಮಗನನ್ನು ಅಡಿಸುವ ಅವಕಾಶ ನಮಗೆ ಸಿಗಲಿಲ್ಲ.
ಹೇಗೂ ಸಾಲವೆಲ್ಲ ತೀರಿಸಿ ಇಳಿ ವಯಸ್ಸಿನಲ್ಲಿ ನೆಮ್ಮದಿಯಿಂದ ಬಾಳೋಣ ಎಂದುಕೊಳ್ಳುತ್ತಿದ್ದಾಗಲೇ ನನಗೆ ಅನಾರೋಗ್ಯ ಕಾಡತೊಡಗಿತ್ತು.ಹೊಟ್ಟೆಯಲ್ಲೆಲ್ಲೋ ನೋವು.ಚುಚ್ಚಿದಂತೇ. ಹಸಿವೇ ಆಗುತ್ತಿರಲಿಲ್ಲ. ನನಗೇನೋ ಆಗಿದೆ ಎಂದು ಅರ್ಥವಾಗಿತ್ತು.ಅಂದು ಮಧು ಚಪಾತಿ ಲಟ್ಟಿಸುತ್ತಿದ್ದಾಗ ಅವಳ ಬಳಿ ನಿಂತು"ಮಧು ಐ ಲವ್ ಯು, ಇನ್ನೊಂದು ಜನ್ಮದಲ್ಲೂ ನೀನೇ ನನ್ನ ಹೆಂಡತಿಯಾಗಬೇಕು"ಎಂದೆ. ಅವಳು ಪ್ರಶ್ನಾರ್ಥಕವಾಗಿ ನನ್ನನ್ನು ನೋಡಿದಳಷ್ಟೇ.ದಿನ ಹೋಗುತ್ತಾ ತಿನ್ನುವುದೇ ಬೇಡ ಎನ್ನಿಸುತ್ತಿತ್ತು.
ಮಧುವಿಗೆ ಕಾಣದಂತೇ ಬೆಳಗ್ಗಿನ ತಿಂಡಿ ಮೆತ್ತಗೆ ಚೆಲ್ಲಿ ಬಿಡುತ್ತಿದ್ದೆ.ಕೆಲಸಕ್ಕೆ ಹೊರಡುವ ತರಾತುರಿಯಲ್ಲಿ ಮಧು ಗಮನಿಸಿರಲಿಲ್ಲ.ಆದರೆ ಎಷ್ಟು ದಿನ?ಅಂದು ಸಿಕ್ಕಿ ಹಾಕಿಕೊಂಡೆ.ತುಂಬಾ ಕೋಪ ಮಾಡಿಕೊಂಡಳು. ಆಗ ನಿಜ ಹೇಳಿದೆ.ತಕ್ಷಣ ಡಾಕ್ಟರ್ ಹತ್ತಿರ ಬರೆಸಿಕೊಂಡು ಸ್ಕಾನಿಂಗ್ ಮಾಡಿಸಿಕೊಳ್ಳಲೇಬೇಕು ಎಂದು ಹಠ ಹಿಡಿದಳು ಮಧು.
ನಾನು ನನ್ನೆಲ್ಲ ಆರೋಗ್ಯ ತೊಂದರೆಗಳಿಗೆ ಹೋಗುತ್ತಿದ್ದುದು, ಡಾ.ಮಾಯಾ ಬಳಿ.ಆಕೆ ಹೋಮಿಯೋಪತಿ ಡಾಕ್ಟರ್.ನನಗೆ ಡಾ.ಮಾಯಾ ಪರಿಚಯ ಕೂಡಾ ಆಗಿದ್ದು ಮಧು ಮುಖಾಂತರವೇ.ನನ್ನನ್ನು ಚಟ ವಿಮುಕ್ತಗೊಳಿಸಲೆಂದು ಅಲ್ಲಿ ಆಪಾಯಿಂಟ್ಮೆಂಟ್ ತೆಗೆದುಕೊಂಡು ಕರೆದುಕೊಂಡು ಹೋಗಿದ್ದಳು ಮಧು.ಅದೇ ಸಮಯದಲ್ಲಿ ನನಗೆ ವೇರಿಕೋಸ್ ವೆಯಿನ್ ಶುರುವಾಗಿ ಕುಂಟಲಾರಂಭಿಸಿದ್ದೆ.ಮಾಯಾ ನನ್ನ ಚಟ ಬಿಡಿಸುವುದಕ್ಕೂ,ಆ ವೇರಿಕೋಸ್ ವೆಯಿನ್ ಗೂ ಔಷಧಿ ಕೊಟ್ಟರೂ,ನನ್ನ ಕಾಲು ಸಂಪೂರ್ಣ ಗುಣವಾಯ್ತು.ಆದರೆ ಚಟ ಹಠ ಮಾಡಿಕೊಂಡು ನನ್ನನ್ನು ಬಿಡಲೇ ಇಲ್ಲ.ಮಧು ಕೂಡಾ ಪ್ರಯತ್ನ ಬಿಟ್ಟಳು.ಆದರೆ ತದನಂತರ ಡಾ.ಮಾಯಾ ಸಕ್ಕರೆ ಕಾಹಿಲೆ ಸೇರಿದಂತೆ ನನ್ನೆಲ್ಲ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಔಷಧಿ ನೀಡುತ್ತಿದ್ದ ಕಾರಣ ನನಗೆ ಅವರಲ್ಲಿ ನಂಬಿಕೆ ಇತ್ತು.ಅಷ್ಟೇ ಅಲ್ಲ.ಮೊದಲಿಂದಲೂ ನನಗೆ ಅಲೋಪತಿ ಎಂದರೆ ಆಗುತ್ತಲೇ ಇರಲಿಲ್ಲ.
ಸ್ಕಾನಿಂಗ್ ಬರೆದುಕೊಟ್ಟಿದ್ದು ಕೂಡಾ ಮಾಯಾ ನೇ.
ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ಹಿಂದಿನ ದಿನದವರೆಗೂ ಆಫೀಸಿಗೆ ಹೋಗಿ ಕಾರ್ಯ ನಿರ್ವಹಿಸಿ ಬಂದೆ.
ಅಂದು, ಎರಡು ಬಾರಿ ವೈಡಲ್ ಎಂದು ಸ್ಕಾನ್ ಮಾಡಿ ರಿಪೋರ್ಟ್ ಕೊಡುವಾಗ ನರ್ಸ್ ಮಧುವಿನತ್ತ ಕರುಣೆಯಿಂದ ನೋಡಿದ್ದನ್ನು ನಾನೂ ಗಮನಿಸಿದೆ.ರಿಪೋರ್ಟ್ ನೋಡಿ,ಮಧು"ನಿಮಗೆ ಹೊಟ್ಟೆಯಲ್ಲಿ ಗಂಟುಗಳಿವೆಯಂತೆ"ಎಂದಳು."ಬಿಡು.ಡಾ ಮಾಯಾ ಔಷಧಿ ಕೊಟ್ಟು ಗುಣ ಪಡಿಸುತ್ತಾರೆ"ಎಂದೆ ನಾನು.
ಖಾಲಿ ಹೊಟ್ಟೆಯಲ್ಲಿ ಇಬ್ಬರೂ ಹೋಗಿದ್ದೆವು.ಬರುವಾಗ ನಾನು ಮಧುವನ್ನು ಹೋಟೆಲೊಂದಕ್ಕೆ ಊಟಕ್ಕೆ ಕರೆದೊಯ್ದೆ."ನಂದಿ ಗ್ರ್ಯಾಂಡ್"ಅಂತ. ಸರ್ವಿಸ್ ಹಾಲ್ ನಲ್ಲಿ ಇಬ್ಬರೇ.ಊಟ ಆರ್ಡರ್ ಮಾಡಿದೆವು.ನನಗೆ ಇಳಿಯಲಿಲ್ಲ,ಮಧುವಿಗೆ ತಿನ್ನಲಾಗಲಿಲ್ಲ.ಬರುವಾಗ ನಾನು ಒಂದು ಸಿಗರೇಟ್ ಕೊಂಡೆ.ಒಂದು ಕೈಯಲ್ಲಿ ಸಿಗರೇಟ್, ಇನ್ನೊಂದು ಕೈಯನ್ನು ಮಧು ಹಿಡಿದುಕೊಂಡಳು.
ಮಾರನೆಯ ದಿನ ಮಾಯಾ ಬಳಿ ಇಬ್ಬರೂ ಹೋದೆವು.ರಿಪೋರ್ಟ್ ನೋಡಿ ಮಾಯಾ"ಇದು ಕಾನ್ಸರ್.ಸ್ಟಮಕ್ ಕಾನ್ಸರ್. ತಕ್ಷಣ ಪೆಟ್ ಸ್ಕಾನ್ ಮಾಡಿಸಿ ಎಷ್ಟು ಸ್ಪ್ರೆಡ್ ಆಗಿದೆ ನೋಡ್ಬೇಕು.ಆಮೇಲೆ ನನ್ನ ಬಳಿ ಬನ್ನಿ"ಎಂದಳು.
ಅಂದು ಆಟೋನಲ್ಲಿ ಮನೆಗೆ ಹಿಂದಿರುಗುವಾಗ ಮಧು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ನನಗೂ ಅಳು ಬರುತ್ತಿದ್ದರೂ ಅವಳ ಮುಂದೆ ನಾನೂ ಅತ್ತರೆ ಕಂಗೆಡುತ್ತಾಳೆ ಎಂದು,ನಿರ್ವಿಕಾರತ್ವ ನಟಿಸಿದೆ.ಮನೆಗೆ ಬಂದು ಮಧುವಿನ ಬಳಿ ಅಂದೆ "ನಾನು ಕುಡಿಯುವದರಿಂದ ಬಂತೇನೋ ಇದು.ಆದರೆ ನನಗಿಂತ ಹೆಚ್ಚು ಕುಡಿಯುವವರನ್ನು ಕಂಡಿದ್ದೇನೆ.ಅವರು ಚೆನ್ನಾಗಿ ಇದ್ದಾರೆ"ನನ್ನ ಮಾತು ಕೇಳಿ ಮಧು ಪುನಃ ಭೋರೆಂದು ಅತ್ತಳು.
ಪೆಟ್ ಸ್ಕಾನ್ ಆಯಿತು. ಡಾ ಮಾಯಾ ಅದರ ರಿಪೋರ್ಟ್ ನೋಡಿ,ಬೇರೆಲ್ಲೂ treatment ಬೇಡ,ಹೋಮಿಯೋ ಔಷಧಿಯೇ ಕೊಡಿ ಎಂದು ಹೇಳಿದಳಲ್ಲದೆಯೇ,ನಾಚುರೋಪತಿಯಿಂದ ಗುಣವಾಗುತ್ತೆ ಎಂದು ಹೇಳಿದ್ದು ಮಧುವಿಗೆ ಮುಳುಗುವವರಿಗೆ ಹುಲ್ಲುಕಡ್ಡಿಯಂತೆ ಕಂಡಿತ್ತು. ಹೋಮಿಯೋ ಔಷಧಿ ಜೊತೆಗೆ ಹದಿನೈದು ದಿನ ನಾಚುರೋಪತಿ ಕೂಡಾ ಆಯಿತು.ನನ್ನ ಆರೋಗ್ಯ ಸುಧಾರಿಸಿದಂತೆ ಕಂಡು ಮಧು ಖುಷಿಯಾಗಿದ್ದಳು.ಆದರೆ ನನಗೆ ಗೊತ್ತಿತ್ತು.ಇದು ಸರಿಹೋಗುವುದಲ್ಲ ಎಂದು. ಆದರೆ ಧೈರ್ಯವಂತೆ ಮಧುವನ್ನು ಕಂಗೆಡಿಸಬಾರದೆಂಬ ಒಂದೇ ಕಾರಣದಿಂದ ನಾನು ಧೈರ್ಯ ನಟಿಸಿದೆ.
ಸ್ವಲ್ಪದಿನಗಳಲ್ಲಿಯೇ ಬೆನ್ನು ಮೂಳೆಯಲ್ಲಿ ನೋವು ಶುರುವಾಯಿತು. ಔಷಧಿಯ ಪ್ರಭಾವದಿಂದ ಇಡೀ ದಿನ ನಿದ್ದೆ ಮಂಪರು. ಊಟ ಸೇರದ ಕಾರಣ ಜೂಸ್ ಎಳನೀರು ಕುಡಿಯುತ್ತಿದ್ದೆ.ಕೊನೆ ಕೊನೆಗೆ ಅದೂ ಇಳಿಯದಂತಾಯ್ತು.ಪರಿಸ್ಥಿತಿ ಹದಗೆಟ್ಟಿದ್ದನ್ನು ಅರಿತು, ನನ್ನ ಅಣ್ಣ ಬಂದರು.ಮಧು ಡಾಕ್ಟರ್ ರನ್ನು ಮನೆಗೆ ಕರೆದು ವಾರಕ್ಕೆರಡು ದಿನ ನನಗೆ ಸಲೈನ್ ಹಾಕಿಸುತ್ತಿದ್ದಳು.ಬಾಡಿ ಕೃಶವಾಗಿದ್ದ ಮಧುವನ್ನು ಕಂಡು ಕರುಳು ಕಿವಿಚಿದಂತೇ ಅದರೂ ನಾನು ಕೋಪವನ್ನೇ ನಟಿಸುತ್ತಿದ್ದೆ.ಅವಳನ್ನು ಘಟ್ಟಿಯಾಗಿ ಇಡಲು ನನಗಿದ್ದ ದಾರಿ ಅದೊಂದೇ.
ಅಂದು ನನ್ನ ಅಣ್ಣ ಒತ್ತಾಯ ಮಾಡಿ ಎರಡು ಚಮಚ ಆಪಲ್ ಜ್ಯೂಸ್ ಕುಡಿಸಿದ್ದರಷ್ಟೇ,ನನಗೆ ಎದೆ ನೋವು ಶುರುವಾಗಿತ್ತು. ಬಳಿಕ ನಾನು ನಾನಾಗಿ ಉಳಿಯಲಿಲ್ಲ.ಮಧು ಅಳುತ್ತಲೇ ಆಂಬುಲೆನ್ಸ್ ನಲ್ಲಿ ನನ್ನನ್ನು ಆಸ್ಪತ್ರೆಗೆ ತಂದು ಸೇರಿಸಿದಳು.ಆಗ ಅವಳ ಅಕ್ಕ ಕೂಡ ಅವಳ ಸಹಾಯಕ್ಕೆ ಬಂದಿದ್ದು ನನಗೆ ಹಾಯೆನಿಸಿತ್ತು. ಆದರೆ ಮೊದಲೇ ಹೇಳಿದಂತೆ ನಾನು ಮೂಕ ಪ್ರೇಕ್ಷಕ.ರಾತ್ರಿ ಮಧು ಮಲಗಿದರೆ,ಅವಳ ಅಕ್ಕ ಪಲ್ಲವಿ ನನ್ನ ಪಕ್ಕ ಕುಳಿತು ನೋಡುತ್ತಾ ಇರ್ತಾರೆ.ಮಾತನಾಡೋಣ ಎನ್ನಿಸಿದರೂ ಆಗುತ್ತಿಲ್ಲ.
ಇವತ್ತಿಗೆ ನಾಲ್ಕು ದಿನವಾಯ್ತು ಈ ಆಸ್ಪತ್ರೆಗೆ ಸೇರಿ.ಇನ್ನು ಮೂರು ದಿನಕ್ಕೆ ವರ್ಷಾ ಬರ್ತಾ ಇದ್ದಾಳಂತೆ,ನನ್ನನ್ನು ನೋಡಲು. ಮಧು ನರ್ಸ್ ಹತ್ತಿರ ಹೇಳುತ್ತಿದ್ದುದು ಕೇಳಿಸಿತ್ತು.ಅಲ್ಲಿಯವರೆಗೂ ಇರ್ತೀನೆ?
ಡಾಕ್ಟರ್ ಬಂದು ನೋಡಿಕೊಂಡು ಹೋದರು. ಏನೋ ಸಂಕಟ ಆಗ್ತಾ ಇದೆ.
ಇಲ್ಲ..ಇಲ್ಲ.ಎಲ್ಲ ನೋವೂ ಬಿಟ್ಟೆ ಬಿಡ್ತು.ಬಿಡುಗಡೆಯಾದಂತೆ ಅನ್ನಿಸ್ತಿದೆ.ಇದೇನು?ನನ್ನ ಪ್ರಾಣ,ದೇಹದಿಂದ ಬೇರೆಯಾಯ್ತಾ?ಹೌದು. ಡಾಕ್ಟರ್ ಮಧುವಿಗೆ ಹೇಳ್ತಾ ಇದ್ದಾರೆ. ಮಧುವಿನ ಕಣ್ಣಲ್ಲಿ ನೀರೇ ಇಲ್ವಲ್ಲ. ನಾಲ್ಕು ತಿಂಗಳಿನಿಂದ ಒದ್ದಾಡಿದ ಕಾರಣವೇನೋ.
**************************************
(ಮೂರು ತಿಂಗಳ ಬಳಿಕ)
ಮಧು ಒಬ್ಬಳೇ ಆಗಿಬಿಟ್ಟಳು.ನಾನು ನಕ್ಷತ್ರವಾಗಿದ್ದೀನಿ.ನಮ್ಮ ಅಜ್ಜಿ ಕಥೆ ಹೇಳುತ್ತಿದ್ದಾಗ ನಿಜಾನಾ ಎಂದುಕೊಳ್ಳುತ್ತಿದ್ದುದು ನಿಜ ಎಂದು ಈಗ ಗೊತ್ತಾಗಿದೆ.ಬೇಕೆನಿಸಿದಾಗ ಮಧುವನ್ನು ನೋಡಿಕೊಂಡು ಹೋಗ್ತೀನಿ.
ಇದೇನು?ಮಲಗಿಕೊಂಡು ಬಿಕ್ಕಿ ಬಿಕ್ಕಿ ಅಳ್ತಾ ಇದಾಳಲ್ಲ ಮಧು?
"ಯಾಕೆ ನನ್ನನ್ನು ಒಂಟಿ ಮಾಡಿ ಹೋದ್ರಿ. ಒಮ್ಮೆ ನಿಮ್ಮ ಹತ್ರ ಮಾತನಾಡಬೇಕು ರೀ.ಮಧು ಮಧು ಅಂತ ದಿನಕ್ಕೆ ನೂರು ಸಲ ಕರೀತಾ ಇದ್ರಿ ಒಮ್ಮೆ ಕರೀರಿ ಪ್ಲೀಸ್"ಎಂದು ಅಳ್ತಾ ಇದಾಳಲ್ಲ.ನಾನು ಅಸಹಾಯಕ.
ಮಧು ಅಳುತ್ತಾ ಮಲಗಿಬಿಟ್ಲು.ಮೆಲ್ಲಗೆ ಹೋಗಿ ತಲೆ ನೇವರಿಸಿ ಹೇಳಿದೆ "ಜೊತೆಗಿಲ್ಲದಿದ್ದರೇನು?ನಿನ್ನ ಕಣ್ಣಿಗೆ ಕಾಣದಿದ್ದರೇನು?.ನಾನು ಯಾವತ್ತೂ ನಿನ್ನ ಬೆಂಗಾವಲಾಗಿ ಇರ್ತೀನಿ.ನೀನು ಎಷ್ಟು ಧೈರ್ಯವಂತೆ ಮಧು.ನನ್ನ ಕಾಹಿಲೆಯ ಜೊತೆ ಒಬ್ಬಳೇ ಹೋರಾಡಿದ್ದೀಯ.ಧೈರ್ಯಗುಂದಬೇಡ.
ಬರುವ ಜನ್ಮದಲ್ಲೂ ನೀನೇ ನನ್ನ ಹೆಂಡತಿ"
ಮಧುವಿನ ಮುಖದಲ್ಲಿ ನಗು ಕಂಡು ಸಂತಸ ನನಗೆ.
ಮಾರನೆಯ ದಿನ ಮಧು ಅಕ್ಕನ ಬಳಿ ಫೋನ್ ನಲ್ಲಿ ಹೇಳುತ್ತಿದ್ದಳು "ಅವರು ನಿನ್ನೆ ಕನಸಲ್ಲಿ ಬಂದಿದ್ರು ಕಣೇ. ಮನಸ್ಸಿಗೆ ಕೊಂಚ ಸಮಾಧಾನ ಆಯ್ತು.