Click here to Download MyLang App

ಹಸ್ತ ಸಾಮುದ್ರಿಕೆ - ಬರೆದವರು : ಕೌಂಡಿನ್ಯ ಕೊಡ್ಲುತೋಟ

ಹಸ್ತ ಸಾಮುದ್ರಿಕೆ

'ಶಾರದೆಯ ಮದುವೆಗೆಂದು'
ಹರಗು ಛಾವಡಿ ಮೇಲೆ ಹಾಸಿದ್ದ ಚಾದರದಿ ಮೂಡಿತ್ತು ಕುಸುರಿ ರಂಗು
ಶ್ರಾವಣದ ಸಂಜೆಯಲಿ ಬಂತು ಎತ್ತಿನ ಬಂಡಿ, ನೆಂಟರನು ಕರೆದುಕೊಂಡು

ಗಂಡು ಹೆಣ್ಣಿನ ಕಣ್ಣ ಒಪ್ಪಿಗೆಯ ಕಾಯದೆಯೆ, ನಿಗದಿ ಆಗಿತ್ತು ದಿನವು
ಜೋಯಿಸರ ಮನೆಯಲ್ಲಿ ಕಟ್ಟಿತ್ತು ತೋರಣವು ಶಾರದೆಯ ಮದುವೆಗೆಂದು

ನೆರೆದಿರುವ ’ಬದಿ’ಯವರು ಒಗ್ಗರಣೆ ಹಾಕಿದರು ಸೀದಿಸಲು ಅಡುಗೆಯನ್ನು
ಅವರ ತೊಡರುಗಳೆಲ್ಲ ನಡೆಯದೆಯೆ ಶಾರದೆಯು ಏರಿದಳು ಹಸೆಮಣೆಯನು

ಸಪ್ತಪದಿಯನು ತುಳಿದ ಮುದ್ದು ಮಗಳನು ಅಪ್ಪಿ ಜೋಯಿಸರು ಮಗುವಾದರು
ತಂದೆ ಕಾಲುಗಳನ್ನು ಬಿಗಿದಪ್ಪಿ ಮದುಮಗಳು ಕಣ್ಣೀರ ಮುತ್ತಿಟ್ಟಳು.

ಹೀಗೇ, ಕೆ.ಎಸ್ ನರಸಿಂಹಸ್ವಾಮಿಗಳನ್ನು ನೆನೆಸಿಕೊಂಡು, ನೂರು ವರ್ಷ ಹಿಂದೆ ಹೋಗಿ, ಆಗಿನ ಕಾಲದ ಮದುವೆಯ ಸಂಭ್ರಮ ಮತ್ತು ಅದರ ತಾಪತ್ರಯಗಳ ಬಗ್ಗೆ ಒಂದು ಕವನ ಬರೆಯಲು ಹವಣಿಸುತ್ತಿದ್ದ ವಾಸುಗೆ ಮಳೆ ನಿಂತ ಅರಿವಾಯಿತು. ಮನೆಯ ಮಹಡಿಯಲ್ಲಿದ್ದ ತನ್ನ ಕೋಣೆಯ ಕಿಟಿಕಿಗಳನ್ನು ಮೆಲ್ಲನೆ ತೆಗೆದು ತುಸು ದೂರದಲ್ಲಿದ್ದ ಹೂ ಬಳ್ಳಿಯ ಕಮಾನು ಕಟ್ಟಿದ್ದ ಮುಖ್ಯ ಧ್ವಾರವನ್ನು ದಿಟ್ಟಿಸ ತೊಡಗಿದ್ದ. ಇವನದೇನೋ ಬಾರೀ ಅದೃಷ್ಟವೇ ಇರಬೇಕು, ವಾಸುಕಿಯ ಕಾಯುವಿಕೆಯಿಂದ ಬೇಸರವಾಗುವ ಮೊದಲು ಝಲ್ ಝಲ್ ಎಂಬ ಗೆಜ್ಜೆಯ ಸದ್ದು ಮೊಳಗಿಯಾಗಿತ್ತು! ಅಪ್ಪನಿಗೆ ಜನಿವಾರ ಹಾಗು ಭಸ್ಮದ ಉಂಡೆಯನ್ನು ಕೊಂಡುಹೋಗುವ ನೆಪವನ್ನು ಮಾಡಿಕೊಂಡು ಬಂದಿದ್ದ ಈ ಚಂದನದ ಗೊಂಬೆಯು ನಮ್ಮ ತ್ರ್ಯಂಬಕೇಶ್ವರ ಮಹಾದೇವಾಲಯದ ಅರ್ಚಕರಲ್ಲೊಬ್ಬರಾದ ಸೋಮಸುಂದರ ಶಾಸ್ತ್ರಿಗಳ ಮಗಳು ಸುಬೋಧಿನಿ. ಇವಳ ಗುಣ ಸೌಂದರ್ಯ ಗಳನ್ನು ನಾನು ಹೊಗಳಬೇಕೆಂದರೆ... ಇವಳು ನನ್ನ ಈ ಹಿಂದಿನ ಕಥೆಗಳಲ್ಲಿ ಬಂದ ಎಲ್ಲಾ ನಾಯಕಿಯ ಪಾತ್ರಗಳಿಗಿಂತಲೂ ಹೆಚ್ಚು ಚೆಲುವೆ! ಹಾಗೂ ಈ ಕಾಲಕ್ಕೆ ತಕ್ಕಷ್ಟು ಬುದ್ಧಿವಂತೆ.
ದೇಗುಲದ ರಥ ಬೀದಿಯಲ್ಲಿರುವ ಮೂರನೆಯ ಮನೆಯೇ ನಮ್ಮ ಕಥಾ ನಾಯಕ ವಾಸುಕಿಯದು. ಇದೇ ತ್ರ್ಯಂಬಕೇಶ್ವರ ದೇವಾಲಯದ ಸಹಾಯಕ ಕಾರ್ಯದರ್ಶಿಯಾಗಿರುವ ವಾಸುಕಿ ಒಬ್ಬ ಉತ್ತಮ ಅಭಿವ್ಯಕ್ತಿ ಉಳ್ಳ ಉದಯೋನ್ಮುಖ ಕವಿಯೂ ಹೌದು ಮತ್ತು ಇಂತಹಾ ಸುಂದರ ಕಥಾನಾಯಕಿಗೆ ಸರಿಹೊಂದುವಂತಹಾ ಚೆಲುವನೂ ಹೌದು. ವಾಸುಕಿಯ ತಂದೆ ಜಾನಕಿ ರಾಯರು ವೃತ್ತಿಯಿಂದ ಪೂಜಾ ಸಾಮಗ್ರಿಗಳ ಅಂಗಡಿಯ ಮಾಲಿಕ. ಆದರೆ ಆ ಸುತ್ತ-ಮುತ್ತಲಿನ ಊರುಗಳಿಗೆ ಜಾನಕಿರಾಯರೆಂದರೆ ಒಬ್ಬ ಅದ್ಭುತ ಜ್ಯೋತಿಷಿ. ಜ್ಯೋತಿಷ್ಯಕ್ಕೆ ಮಂಗಳವಾರ ಮತ್ತು ಶನಿವಾರವನ್ನು ಧಾರೆ ಎರೆದಿದ್ದ ರಾಯರು, ಉಳಿದ ದಿನಗಳಲ್ಲಿ ಮನೆಗೆ ಹೊಂದಿಕೊಂಡಂತೆಯೇ ಇದ್ದ ಅಂಗಡಿಯಲ್ಲಿ ವ್ಯಾಪಾರದೊಳಗೆ ಮಗ್ನರಾಗಿರುತ್ತಿದ್ದರು.
ಇವನು ನಾಯಕ, ನಾಯಕಿಯ ಕಥೆ ಹೇಳುವುದನ್ನು ಬಿಟ್ಟು ಎಲ್ಲಿಯೋ ಅಡ್ಡ ಹೊರಟ ಅನ್ಕೊಂಡ್ರಾ? ಇಲ್ಲ... ಖಂಡಿತಾ ಇಲ್ಲ.
ಸುಬೋಧಿನಿ ಜಾನಕಿರಾಯರ ಬಳಿ ಜನಿವಾರ ಮತ್ತು ಭಸ್ಮವನ್ನು ಕೇಳಿ ನಿದಾನವಾಗಿ ಬಲಪಾರ್ಶ್ವವಿರುವ ಆ ಮನೆಯ ಟೆರಾಸಿನತ್ತ ದೃಷ್ಟಿ ನೆಟ್ಟಿದ್ದಳು. ಅವಳ ಕಣ್ಣುಗಳಲಿ ತನ್ನ ಕಣ್ಣುಗಳನ್ನು ಇಳಿಬಿಡಲು ಮೇಲೆ ನಿಂತು ಸಿದ್ದವಾಗಿದ್ದ ವಾಸುಕಿ ಅಂದಿನ ಅವಳ ಮಂದಹಾಸ ತುಂಬಿದ ನೋಟದಿಂದ ಸಾವಿರ ಕವನಗಳಿಗೆ ಬೇಕಾದ ಪದ: ಪುಂಜಗಳನ್ನು ಸ್ಪೂರ್ತಿಯಾಗಿ ಎರವಲು ಪಡೆದುಕೊಂಡಿದ್ದ. ಇವರುಗಳದ್ದು ಇಂದು ನಿನ್ನೆಯ ಪರಿಚಯವಲ್ಲ. ಬಾಲ್ಯದಿಂದ ಒಬ್ಬರನ್ನೊಬ್ಬರು ನೋಡಿದವರೇ. ವಯಸ್ಸಿನಲ್ಲಿ ಇಬ್ಬರ ನಡುವೆ ನಾಲ್ಕು ವರ್ಷದ ಅಂತರವಿದ್ದರೂ ದೇವಾಲಯಕ್ಕೂ ಇವರಿಬ್ಬರ ಮನೆಗಳಿಗೂ ಅವಿನಾಭಾವ ಸಂಬಂಧವಿತ್ತಾದ್ದರಿಂದ ಇವರಿಬ್ಬರಿಗೂ ಪರಿಚಯ ಸಾಮಾನ್ಯವೆಂಬಂತೆಯೇ ಇತ್ತು. ಆದರೆ ಇದಕ್ಕೆ ಪ್ರೇಮದ ಲೇಪ ಸಿಕ್ಕಿದ್ದು ಎರೆಡು ವರುಷಗಳ ಹಿಂದಿನ ಕಾರ್ತೀಕ ದೀಪೋತ್ಸವದ ಕಾರ್ಯಕ್ರಮವೊಂದರಲ್ಲಿ. ಆ ಕಾರ್ಯಕ್ರವಮಲ್ಲಿ ಸುಬೋಧಿನಿ ಮಕ್ಕಳೊಂದಿಗೆ ಪಟಾಕಿ ಹೊಡೆಯುತ್ತಿದ್ದಳು. ಆಗ ಅನಿರೀಕ್ಷಿತವಾಗಿ ಬಂದ ಬೆಂಕಿಯ ಕಿಡಿಯೊಂದು ಅವಳ ನೆರಿಗೆಯ ನೈಲಾನ್ ಲಂಗಕ್ಕೆ ಹೊತ್ತಿಕೊಂಡುಬಿಟ್ಟಿತ್ತು. ಬಟ್ಟೆಯನ್ನು ಧಗ್ ಎಂದು ಆವರಿಸಿದ ಬೆಂಕಿಯ ಶಾಖಕ್ಕೆ ಸುಬೋಧಿನಿ ಹೌಹಾರಿ ಹೋಗಿದ್ದಳು. ಈ ಅಪಾಯದ ತೀವ್ರತೆಯನ್ನು ಅರಿತ ಜನರು ಕಣ್ಣು, ಕೈ-ಕಾಲು ಬಿಡುವಂತೆ ನೋಡುತ್ತಿರುವಾಗ ಅಲ್ಲಿಗೆ ಓಡಿಬಂದ ವಾಸುಕಿಯು ಶೀಘ್ರವಾಗಿ ಅವಳನ್ನು ಎತ್ತಿಕೊಂಡು ಹೋಗಿ ಪಕ್ಕದಲ್ಲಿದ್ದ ದೇಗುಲದ ಪುಷ್ಕರ್ಣಿಯಲ್ಲಿ ಮುಳುಗಿಸಿ, ಆಗಬಹುದಾಗಿದ್ದ ಅಪಾಯವನ್ನು ತಪ್ಪಿಸಿದ್ದ. ಇದನ್ನು ಎಲ್ಲರೂ ಒಂದು ಘಟನೆ ಎಂದಷ್ಟೇ ಪರಿಗಣಿಸಿ ವಾಸುಕಿಯನ್ನುಹೊಗಳಿ ಅಟ್ಟಕ್ಕೇರಿಸಿದ್ದರು. ಆದರೆ ಈ ಎರೆಡು ಜೀವಗಳ ಮಧ್ಯೆ ಈ ಘಟನೆ ಹೊಸದೊಂದು ಅಧ್ಯಾಯಕ್ಕೆ ನಾಂದಿಯಾಯಿತೆಂಬುದನ್ನು ಯಾರೂ ಗಮನಿಸಿಯೇ ಇರಲಿಲ್ಲ.
ನಾನು ಕಥೆ ಹೇಳುತ್ತಿರುವ ಶೈಲಿ ನೋಡಿ, ಇದ್ಯಾವುದೋ ಹತ್ತೊಂಬತ್ತನೇ ಶತಮಾನದ ಕಥೆ ಅಂದುಕೊಂಡುಬಿಡಬೇಡಿ ಇದು ಈ ಶತಮಾನಕ್ಕೇ ಸೇರಿದ್ದು ಯಾಕೆಂದರೆ ಇವರಿಬ್ಬರ ಮನೆಗಳು ಹತ್ತಿರದಲ್ಲೇ ಇತ್ತಾದರೂ ಇವರು ಪರಸ್ಪರ ಮಾತುಕತೆಗೆ ಮೊಬೈಲೇ ಸೇತುವೆಯಾಗಿತ್ತು.

ನಿವೇದನೆ
ಬೆಣ್ಣೆಯ ಬಣ್ಣದ ಓ ಸುಕುಮಾರಿ
ನನ್ನ ಅರಮನೆಯ ರಾಜಕುಮಾರಿ
ನಿನ್ನಯ ಗುಂಗದು ನನ್ನಾವರೆಸಿದೆ
ಪ್ರೀತಿಯ ಒಪ್ಪಿಕೊ ನೀ ದಯೆ ತೋರಿ.

ಹೀಗೆ ಗೀಚಿದ ಒಂದಷ್ಟು ಸಾಲುಗಳನ್ನು ವಾಟ್ಸ್ಯಾಪ್ನಲ್ಲಿ ಸುಬೋಧಿನಿಗೆ ತಲುಪಿಸುವ ಧೈರ್ಯ ಮಾಡುವ ಮೂಲಕ ವಾಸುಕಿಯು ತನ್ನ ಪ್ರೇಮ ನಿವೇದನೆಗೆ ಈ ಕವನಗಳನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿದ್ದ. ತನ್ನ ಜೀವ ಉಳಿಸಿದವನೆಂಬ ಕಾರಣಕ್ಕೂ, ಅವನ ಸೌಂದರ್ಯಕ್ಕೋ ಅಥವಾ ಅವನ ಕವನಗಳಿಗೋ ಒಟ್ಟಿನಲ್ಲಿ ವಾಸುಕಿಯ ವ್ಯಕ್ತಿತ್ವಕ್ಕೆ ಸುಬೋಧಿನಿ ಸಹಾ ಮಾರುಹೋಗಿದ್ದಳು. ಒಂದೇ ಬೀದಿಯಲ್ಲಿ ಇದ್ದರೂ ಸಹಾ ಯಾರಿಗೂ ಗೊತ್ತಾಗದಂತೆ ತಮ್ಮ ಪ್ರಣಯವನ್ನು ಇಬ್ಬರೂ ಮುಂದುವರೆಸಿದ್ದರು. ಹಾಡುವುದನ್ನು ಹವ್ಯಾಸವಾಗಿ ಅಷ್ಟೇ ಇಟ್ಟುಕೊಂಡಿದ್ದ ಸುಬೋಧಿನಿಗೆ ವಾಸುಕಿ ಕೊಟ್ಟ ಪ್ರೋತ್ಸಾಹದಿಂದ ಅವಳು ದೇವಾಲಯದಲ್ಲಿ ವಾರಕ್ಕೆ ಮೂರು ದಿನ ಮಕ್ಕಳಿಗೆ ಸಂಗೀತ ಹೇಳಿಕೊಡುವ ಜೊತೆಗೆ ಸಂಗೀತದಲ್ಲಿ ನಿದಾನವಾಗಿ ವಿದ್ವತ್ ಸಾಧಿಸುವ ಹಂತವನ್ನು ತಲುಪಿದ್ದಳು.
ದೇಗುಲದ ಆಡಿಟ್ಗೆ ಸಂಬಂಧಪಟ್ಟ ಕೆಲಸಕ್ಕೆಂದು ಮೂರುದಿನದ ಹಿಂದೆ ಬೆಂಗಳೂರಿಗೆ ಹೋಗಿದ್ದ ವಾಸುಕಿಯ ಇಲ್ಲದಿರುವಿಕೆಯು ಸುಬೋಧಿನಿಯಲ್ಲಿ ಅದೇನೋ ಖಾಲೀತನವನ್ನು ಮೂಡಿಸಿತ್ತು. ಅವನು ಅಂದಿನ ದಿನ ಬೆಳಿಗ್ಗೆ ಬರುವನೆಂದು ತಿಳಿದಿದ್ದರಿಂದ ಸುಬೋಧಿನಿ ಅವರಮ್ಮನಬಳಿ “ಅಮ್ಮ ನಾನು ಜಾನಕಿರಾಯರ ಮನೆಗೆ ಹೋಗಿ ಬರುತ್ತೇನೆ... ಆಯ್ತಾ?” ಎಂದರೆ, ಅಮ್ಮ ಅತ್ತಲಿಂದ “ಈ ಉರಿ ಬಿಸ್ಲಲ್ಲಿ ಯಾಕೆ? ಸಂಜೆ ಹೋಗ್ಬಹುದಲ್ವೇನೇ?” ಎಂದಿದ್ದರು. ಅಮ್ಮನಿಗೇನು ಗೊತ್ತು ನನ್ನ ವಿರಹ ವೇದನೆ ಎಂದು ಮನದಲ್ಲೆ ಯೋಚಿಸಿದ ಸುಬೋಧಿನಿ, ಮಜ್ಜಿಗೆ ಕಡೆಯುತ್ತಿದ್ದ ಅಮ್ಮನಬಳಿ ಬಂದು ಅಮ್ಮನ ಬೆನ್ನು ಸವರುತ್ತಾ “ಅಮ್ಮಾ ಜಾನಕಿ ರಾಯರ ಹತ್ರ ನನ್ನ ಹಸ್ತ ತೋರಿಸ್ಬೇಕು ಅನಿಸ್ತಿದೆ ಕಣಮ್ಮಾ. ಅವ್ರು ತುಂಬ ಚೆನ್ನಾಗಿ ಹಸ್ತ ನೋಡ್ತಾರಂತೆ... ನನ್ನ ಸ್ನೇಹಿತೆಗೆ ಅವ್ರು ಹೇಳಿಧ್ಹಾಗೇ ಆಗಿದೆ... ಪ್ಲೀಸ್ ನೂರುಪಾಯಿ ಕೊಡು. ನಾನೂ ಇವತ್ತು ನನ್ನ ಹಸ್ತ ಅವ್ರಿಗೆ ತೋರುಸ್ತೀನಿ” ಎಂದು ಅಮ್ಮನ ತಲೆ ಮೇಲೆ ಬೆಣ್ಣೆ ಸವರಿದ್ದಳು. ಮಗಳ ಮಾತಿಗೆ ಮರುಳಾದ ಸುಬೋಧಿನಿಯ ತಾಯಿ “ಇಷ್ಟ್ ಒಳ್ಳೇ ಬುದ್ಧಿ ನಿನ್ಗ್ಯಾವತ್ ಬಂತೇ? ಇರ್ಲಿ ಹೋಗ್ಬಾ...” ಎಂದು ಕಳುಹಿಸಿದರು.
ಕಣ್ಣ ತುಂಬ ವಾಸುಕಿಯನ್ನು ಮತ್ತವನ ನೆನಪನ್ನು ತುಂಬಿಕೊಂಡಿದ್ದ ಸುಬೋಧಿನಿ ಇಂದು ಹೇಗಾದರೂ ಮಾಡಿ ವಾಸುಕಿಯ ಮಹಡಿಗೆ ಹೋಗಿ ಅವನ ಜೊತೆ ಕೆಲ ಕಾಲ ಮಾತನ್ನಾಡಿ ಅವನ ಕವನಗಳನ್ನು ಓದಿ ಬರಬೇಕೆಂದುಕೊಂಡಿದ್ದಳು ಮತ್ತು ’ವಾಸು ನಾನು ಈಗ ನಿಮ್ಮನೆಗೇ ಬರ್ತಿದೀನಿ ನಿನ್ನ ನೋಡ್ಬೇಕು ಅಂತ ನನಗೆ ತುಂಬಾ ಅನಿಸ್ತಿದೆ, ನೀನು ನಿನ್ನ ಕವನಗಳನ್ನೆಲ್ಲಾ ನನ್ನೆದುರು ಉದುರಿಸಲು ತಯಾರಾಗಿರು ಪುಟ್ಟು” ಎಂದು ಸಂದೇಶ ಕಳಿಸಿದ್ದಳು.
ಅಂದು ವಾಸುಕಿಯ ಅಪ್ಪ ಅಮ್ಮ ಇಬ್ಬರೂ ಹತ್ತಿರದ ನೆಂಟರ ಕಡೆಯ ಮದುವೆಗೆಂದು ಶಿವಮೊಗ್ಗಕ್ಕೆ ಹೋಗಿದ್ದರಾದ್ದರಿಂದ ಮನೆಯಲ್ಲಿ ವಾಸುಕಿ ಒಬ್ಬನೇ ಇದ್ದ. ಇಂದು ಮನೆಯ ಹೊರ ಜಗುಲಿಯ ವಿಶಾಲ ಕಂಬಕ್ಕೆ ಒರಗಿ ಗೇಟಿನ ಬಾಗಿಲನ್ನೇ ಕಾಯುತ್ತಿದ್ದ ವಾಸುಕಿ ಸುಬೋಧಿನಿ ಬರುತ್ತಿದ್ದಂತೆಯೇ ಪುಳಕಿತನಾದ. ಅವಳೊಂದಿಗೆ ಮೊದಲ ಸಲ ನಮ್ಮ ಮನೆಯಲ್ಲಿ ಒಂಟಿಯಾಗಿ ಕಾಲ ಕಳೆಯುವ ಅವಕಾಶ ಕೊಟ್ಟ ಆ ತ್ರ್ಯಂಬಕೇಶ್ವರ ಮನದಲ್ಲೇ ನಮಸ್ಕರಿಸುತ್ತಾ “ ಬನ್ನಿ ಈ ಮನೆಯ ಮುಂದಿನ ಪಟ್ಟದರಸಿಯವರೇ... ಈ ನಿಮ್ಮ ಮಹಾರಾಜ ನಿಮಗೆಂದು ಕಾಯುತ್ತಿದ್ದಾನೆ” ಎಂದು ನಾಟಕೀಯ ರೀತಿಯಲ್ಲಿ ಹೇಳಿ ನಕ್ಕ. ನಂತರ ಅವರಿಬ್ಬರ ಮಾತು, ಮೌನ, ನಾಚಿಕೆ, ತುಂಟಾಟ, ಹುಸಿ ಮುನಿಸು, ಹಾಡು, ಕವನ, ವಾಸುಕಿಯ ಕೈತುತ್ತಿನ ಊಟ ಹೀಗೆ ಎಲ್ಲವೂ ಮುಗಿದು ಸೂರ್ಯ ಮನೆಯ ಸೇರುವ ವೇಳೆಗೆ ಸುಬೋಧಿನಿಯೂ ಮನೆ ಸೇರಿದ್ದಳು. ಆದರೆ ಅವಳು ಅಮ್ಮನ ಬಳಿ “ ಅಮ್ಮಾ ಜಾನಕಿರಾಯರು ಮನೇಲಿರ್ಲಿಲ್ಲ, ಅದ್ಕೇ ನನ್ನ ಸ್ನೇಹಿತೆ ವೃಂದಾ ಮನೆಗೆ ಹೋಗಿದ್ದೆ... ಅಲ್ಲೇ ಊಟನೂ ಆಯ್ತು” ಎನ್ನುತ್ತಾ.
ಹರಗು ಛಾವಡಿ ಮೇಲೆ ಹಾಸಿದ್ದ ಚಾದರದಿ ಮೂಡಿತ್ತು ಚಿಟ್ಟೆ ರಂಗು,
.....................................................................................
ಜೋಯಿಸರ ಮನೆಯಲ್ಲಿ ಕಟ್ಟಿತ್ತು ತೋರಣವು ಶಾರದೆಯ ಮದುವೆಗೆಂದು!

ವಾಸುಕಿಯ ಈ ಕವನಕ್ಕೆ ರಾಗ ಹಾಕುತ್ತಾ ತನ್ನ ಮತ್ತು ವಾಸುಕಿಯ ಮದುವೆಯ ಕನಸಿನಲ್ಲಿ ಸುಬೋಧಿನಿ ಮುಳುಗಿದ್ದಳು.
ಹೀಗೆ ತ್ರ್ಯಂಬಕೇಶ್ವರ ಜಾತ್ರೆ, ದೇವಾಲಯದ ಕಾರ್ಯಕ್ರಮ, ಬಯಲು ಯಕ್ಷಗಾನ, ಊರು ಮನೆಯ ಸಮಾರಂಭಗಳು ಇಲ್ಲೆಲ್ಲಾ ಬೆಳೆಯುತ್ತಲೇ ಸಾಗಿದ್ದ ಇವರ ಪ್ರೀತಿಗೆ ಈಗ ಶನಿಯ ವಕ್ರದೃಷ್ಟಿ ಬೀರಿಸುವ ಕರ್ತವ್ಯ ನನ್ನದೇ ಅಲ್ಲವೆ?
ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ದೇಣಿಗೆ ವಸೂಲಿಗೆ ದೇವಾಲಯದ ಖಜಾಂಚಿಗಳೊಂದಿಗೆ ಹದಿನೈದು ದಿನಗಳಿಗೋಸ್ಕರ ಹೊರ ರಾಜ್ಯಗಳಿಗೆ ಹೋಗುವ ಜವಾಬ್ದಾರಿ ವಾಸುಕಿಯ ಹೆಗಲು ಹತ್ತಿದ್ದರಿಂದ ವಾಸುಕಿ ಸುಬೋಧಿನಿಯ ನೆನಪ ಬುತ್ತಿಯನ್ನು ಎದೆಯಲ್ಲಿರಿಸಿಕೊಂಡು ರೈಲು ಹತ್ತಿದ್ದ.
ವಾಸುಕಿ ಇರದಿದ್ದರೂ ಯಾಕೋ ಅವರ ಮನೆಗೆ ಹೋಗಬೇಕು, ಮಹಡಿಯಮೇಲೆ ಅವನ ಕಳ್ಳಗಣ್ಣಿನ ನೆರಳು ಕಾಣಬೇಕು, ಹಾಗಾದರೂ ಅವನ ಅವನ ನೆನಪಿನಿಂದ ದೂರವಿರಬಹುದೆಂಬ ಉದ್ದೇಶದಿಂದ ವಾಸುಕಿಯ ಮನೆಯ ಗೇಟಿನಬಳಿ ಬಂದ ಸುಬೋಧಿನಿಯನ್ನು ಕಂಡ ಜಾನಕಿ ರಾಯರು ಒಳ ಕರೆದು ಮಾತನಾಡಿಸಿದರು. ಇಲ್ಲಿ ಬಂದಿದ್ದಕ್ಕೆ ಏನು ನೆಪ ಹೇಳಬೇಕೋ ತಿಳಿಯದಾದಾಗ “ ಜಾನಕೀ ಮಾವ, ನೀವು ತುಂಬಾ ಚೆನ್ನಾಗಿ ಹಸ್ತ ನೋಡ್ತೀರಂತೆ... ನಂದೂ ನೋಡಿ ಮಾವ... ನಾನು ನೂರು ರುಪಾಯಿ ಕೊಡ್ತೀನಿ... ಊರ್ಮನೆಯವ್ಳಲ್ವಾ...” ಎಂದು ರಾಗ ಹಾಡಿದಳು. ಅವಳ ಮಾತಿನ ಮೋಹಕತೆಗೆ ಮರುಳಾದ ರಾಯರು “ನಿನ್ಗೆಲ್ಲಾ ದುಡ್ ಕೇಳದ್ಯಾರು ಪುಟ್ಟೀ? ತೋರ್ಸು ನಿನ್ ಹಸ್ತಾನ” ಎನ್ನುತ್ತಾ ರಾಯರು ಸುಬೋಧಿನಿಯ ಕೈಯ ರೇಖೆಗಳನ್ನು ನೋಡಲು ಪ್ರಾರಂಭಿಸಿದರು.
ಜ್ಯೋತಿಷ್ಯ ಶಾಸ್ತ್ರವನ್ನು ಅರೆದು ಕುಡಿದಿದ್ದ ರಾಯರ ಭವಿಷ್ಯ ಇಲ್ಲಿಯತನಕ ಸುಳ್ಳಾದ ಇತಿಹಾಸವೇ ಇರಲಿಲ್ಲ. ಇದೇ ಭಯವು ರಾಯರನ್ನು ಕಾಡಿತ್ತು. ಅವಳ ಆ ಕೈಗಳಲ್ಲಿನ ರೇಖೆಗಳನ್ನು ಓದುತ್ತಿದ್ದ ರಾಯರಿಗೆ ಚಿಂತೆ ಮನೆ ಮಾಡಿತ್ತು. ಸುಬೋಧಿನಿ “ ಮಾವ ಯಾಕೆ ಸುಮ್ಮನಿದ್ದೀರಿ? ಅಂತಾದ್ದೇನಿದೆ ನನ್ನ ಈ ಹಸ್ತದಲ್ಲಿ? ಹೇಳಿ” ಎಂದು ದುಂಬಾಲು ಬಿದ್ದಳು. ಆದರೆ ರಾಯರು ಮನದಲ್ಲೇ “ದೇವರೆ ನಾನು ನನ್ನ ಜ್ಯೋತಿಷ್ಯ ಶಾಸ್ತ್ರದ ಪರಿಣಿತಿಯ ಬಗ್ಗೆ ಗರ್ವ ಪಡುತ್ತಿದ್ದೆ. ಆದರೆ ಮೊದಲ ಬಾರಿಗೆ ನಾನು ನೋಡಿದ ಈ ಭವಿಷ್ಯವು ಸುಳ್ಳಾಗಲಿ ಅನಿಸುತ್ತಿದೆ ದಯಮಾಡಿ ನಾನು ನೋಡಿದ ಭವಿಷ್ಯ ಹುಸಿಯಾಗುವಂತೆ ಮಾಡು” ಎಂದು ತಮ್ಮ ಇಷ್ಟ ದೇವರಾದ ತ್ರ್ಯಂಬಕೇಶ್ವರ ರನಲ್ಲಿ ಪ್ರಾರ್ಥಿಸಿದ್ದರು. “ಮಗಳೇ ನಿನ್ನ ಹಸ್ತ ರೇಖೆ ಬಹಳ ಚನ್ನಾಗಿದೆಯಮ್ಮಾ, ನೀನು ಮುಟ್ಟಿದೆಲ್ಲಾ ಚಿನ್ನವಾಗುತ್ತದೆ ಹೋಗಿಬಾರಮ್ಮಾ... ಹಾಗೆಯೇ ನಿನ್ನ ತಂದೆಯವರಬಳಿ ನನ್ನನ್ನೊಮ್ಮೆ ಕಾಣಲು ಹೇಳು” ಎಂದು ಪುಸಲಾಯಿಸಿ ಮನೆಗೆ ಕಳಿಸಲು ಪ್ರಯತ್ನಿಸಿದರು ಆದರೆ
ಸುಬೋಧಿನಿಗೆ ಜಾನಕಿಮಾವನ ವರ್ತನೆ ಅಸಹಜವೆನಿಸಿತ್ತಾದ್ದರಿಂದ ಅವಳು ದಿನಾಲೂ ಸಂಜೆಯ ಸಮಯದಲ್ಲಿ ರಾಯರ ಮನೆಯ ಜಗುಲಿಯಮೇಲೆ ಹೋಗಿ ಕುಳಿತು ರಾಯರ ಬಾಯಿಂದ ಸತ್ಯ ತಿಳಿಯುವ ಪ್ರಯತ್ನ ಮಾಡುತ್ತಿದ್ದಳು. ಒಂದು ದಿನ ಮುಂಜಾನೆಯೇ ಬಂದ ಸುಬೋಧಿನಿ “ಜಾನಕಿಮಾವ ನೀವು ಸತ್ಯ ಹೇಳೋವರೆಗೆ ಇಲ್ಲಿಂದ ಹೋಗೋದೂ ಇಲ್ಲ ಮತ್ತು ಏನನ್ನೂ ತಿನ್ನೋದೂ ಇಲ್ಲ ಎಂದು ಮಕ್ಕಳಂತೆ ಹಠ ಹಿಡಿದು ಕುಳಿತ ಸುಬೋಧಿನಿಯ ಒತ್ತಾಯಕ್ಕೆ ಸೋತ ರಾಯರು ಬಹಳಾ ಬೇಸರದಿಂದ ತಾನು ಕಂಡ ಭವಿಷ್ಯದ ಅರಿವನ್ನು ಅವಳಿಗೆ ಮೂಡಿಸಿದ್ದರು.
ವಿವಿಧ ರಾಜ್ಯಗಳನ್ನು ಸುತ್ತಿಬಂದ ವಾಸುಕಿಯು ಸಂತಸದಲ್ಲಿದ್ದನಾದರೂ ಈಗ ನಾಲ್ಕುದಿನದಿಂದ ಸುಬೋಧಿನಿ ಯಾವುದೇ ಸಂದೇಶಗಳನ್ನು ಕಳುಹಿಸದ್ದನ್ನು ಗಮನಿಸಿ ತುಸು ಚಿಂತಿತನಾಗಿದ್ದ. ಆ ದಿನ ಸಂಜೆ ಅವಳು ನನ್ನನ್ನು ನೋಡಲು ಇಲ್ಲಿಗೇ ಬರುತ್ತಾಳೆಂದು ಮನೆಯ ಟೆರಾಸನ್ನು ಹತ್ತಿ ಕಾಯುತ್ತಿದ್ದವನಿಗೆ ನಿರಾಸೆ ಕಾದಿತ್ತು. ಆದಿನ ಅವಳ ಆಗಮಿಸದ ನಿರಾಸೆಯಲ್ಲಿ ತೀವ್ರ ಬೇಸರಗೊಂಡಿದ್ದ ವಾಸುಕಿಯು ಮರುದಿನ ಮುಂಜಾನೆಯೇ ಎದ್ದು ಅವಳ ಮನೆಗೇ ಹೋಗಬೇಕೆಂದು ಯೋಚಿಸಿ ಅಲ್ಲಿ ಹೋಗಲು ಒಂದು ನೆಪ ಹುಡುಕಿದ್ದ. ಅಪ್ಪನ ಅಂಗಡಿಗೆ ಬಂದಿದ್ದ ಹೊಸಾ ಕಂಪೆನಿಯ ಊದಿನಕಡ್ಡಿಯ ಪೊಟ್ಟಣವನ್ನು ತೆಗೆದುಕೊಂಡು ಸೋಮಸುಂದರ ಶಾಸ್ತ್ರಿಗಳ ಮನೆಯ ಎದುರು ಹೋಗಿದ್ದ. ಬಹಳಾ ಅಪರೂಪಕ್ಕೆ ಮನೆಗೆಬಂದಿದ್ದ ವಾಸುಕಿಯನ್ನು ಶಾಸ್ತ್ರಿಗಳ ಹೆಂಡತಿ ಅಂದರೆ ಅವನ ಬಾವಿ ಅತ್ತೆ ಬಹಳಾ ಆದರದಿಂದಲೇ ಸ್ವಾಗತಿಸಿದರಾದರೂ ಸುಬೋಧಿನಿಯ ವಿಷಯವನ್ನು ಪ್ರಸ್ತಾಪಕ್ಕೆ ತರಲು ಸೋತಿದ್ದ ವಾಸುಕಿ ಬಹಳಾ ಕಾಲ ಅವಳ ಒಂದು ನೆರಳಾದಾರೂ ಕಾಣುತ್ತದೆಯೇ ಎಂದು ಕಾದು ನಿರಾಸೆಯಿಂದ ಮನೆಯೆಡೆ ಹೆಜ್ಜೆ ಹಾಕಿದ್ದ. ಆದರೆ ನನ್ನನ್ನು ಕಾಣಲು ಆಸೆಯಿಂದ ಬಂದು ನಿರಾಸೆಯಿಂದ ಹೋಗುತ್ತಿರುವ ವಾಸುಕಿಯನ್ನು ಸುಬೋಧಿನಿ ಮನೆಯ ಮಾಳಿಗೆಯ ಕಿಟಿಕಿಯಿಂದಲೇ ನೋಡಿ ಕಣ್ಣೀರಿನ ಕೋಡಿ ಹರಿಸಿದ್ದಳು. ಧನಾತ್ಮಕ ಯೋಚನೆಯ ವ್ಯಕ್ತಿತ್ವದ ವಾಸುಕಿ ಸುಬೋಧಿನಿಗೆ ಮೈ ಹುಷಾರಿಲ್ಲವೇನೋ, ಅಥವಾ ಮತ್ತೇನೋ ನನ್ನಬಳಿಯೂ ಹೇಳಿಕೊಳ್ಳಲಾಗದ ತೊಂದರೆಯಾಗಿರಬಹುದು ಅಥವಾ ನಾನು ಅವಳನ್ನು ಇಷ್ಟು ದಿನ ಬಿಟ್ಟಿದ್ದುದಕ್ಕೆ ಹುಸಿ ಮುನಿಸನ್ನು ತೋರಿಸುತ್ತಿರಬಹುದು... ಒಂದೆರೆಡು ದಿನಗಳಲ್ಲಿ ಸರಿಹೋಗುತ್ತಾಳೆಂದು ಸುಮ್ಮನಾದ.

ಕಷ್ಟಗಳು ಬಂತೆಂದು ಜೀವವನು ತ್ಯಜಿಸದಿರು
ಬ್ರಹ್ಮ ಮತ್ತೆ ಕೊಡಲಾರ ನಿನಗೆ ಉಸಿರನ್ನು
ನಿನಗಾಗಿ ಇದ್ದದ್ದು ನಿನಗೇ ಸಿಗುವುದು ಮತ್ತೆ
ಕಾಯುವುದ ಮರೆಯದಿರು ಅವಸರದ ಜಗದಿ...

ಹೀಗೆ ಹಿಂದೊಮ್ಮೆ ತಾನೇ ಬರೆದ ಈ ಸಾಲುಗಳು ಮುಂದೆ ತನ್ನನ್ನೇ ನುಂಗುವುದೆಂಬ ಭಯ ವಾಸುಕಿಯನ್ನು ಹೊಕ್ಕಿತ್ತೆಂದರೆ ಅದಕ್ಕೆ ಅವನು ಸುಬೋಧಿನಿಯ ಮೇಲಿಟ್ಟಿದ್ದ ಬೆಟ್ಟದಷ್ಟು ಪ್ರೀತಿ, ಭರವಸೆಗಳೇ ಕಾರಣವಾಗಿತ್ತು. ಅವನು ದಿನಾ ಸಂಜೆ ಅವಳ ಕಾಲ್ಗೆಜ್ಜೆಯ ಧ್ವನಿಗಾಗಿ ಕಾಯುತ್ತಿದ್ದ, ಮೊಬೈಲ್ನಲ್ಲಿ ಯಾವುದೇ ಸಂದೇಶಗಳು ಬಂದರೂ ಅದು ನನ್ನ ಅರಗಿಣಿಯದ್ದೇ ಎಂದು ಭಾವಿಸುತ್ತಿದ್ದ. ಆದರೆ ಅವಳು ನನ್ನನ್ನು ಬೇಕೆಂದೇ ದೂರವಿಡಲು ಪ್ರಯತ್ನಿಸುತ್ತಿದ್ದಾಳೆ ಎಂಬುದನ್ನು ಮನಗೊಂಡ ವಾಸುಕಿಯು ತನ್ನ ಎಲ್ಲಾ ಆದರ್ಶಗಳನ್ನು ಮತ್ತು ತನ್ನ ಸಾಹಿತ್ಯದ ಪುಟಗಳನ್ನೇ ಮರೆತು ಅವಳ ನೆನಪಿನಲ್ಲಿ ಸಿಕ್ಕಿ ಕೃಷವಾಗತೊಡಗಿದ್ದ. ದಿನೇ ದಿನೇ ಮಾನಸಿಕವಾಗಿ ಕೊರಗುತ್ತಾ ದೈಹಿಕವಾಗಿ ಸೊರಗುತ್ತಿದ್ದ ಮಗನ ಭವಿಷ್ಯ ಅಥವಾ ವರ್ತಮಾನವನ್ನು ಗುರುತಿಸಿ ಅದಕ್ಕೊಂದು ಪರಿಹಾರೋಪಾಯ ಕಂಡುಹಿಡಿಯಲು ಜಾನಕಿರಾಯರು ಸಮಯಕೊಡದದ್ದೇ ವಿಪರ್ಯಾಸ.
ಇತ್ತೀಚೆಗೆ ನಡೆದ ತ್ರ್ಯಂಬಕೇಶ್ವರ ಕಲ್ಯಾಣಮಂಟಪದ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಬಂದಿದ್ದ ಸುಬೋಧಿನಿ ವೇದಿಕೆಯ ಮೂಲೆಯಲ್ಲಿ ರೋಗಗ್ರಸ್ತನಂತೆ ನಿಂತಿದ್ದ ವಾಸುಕಿಯನ್ನು ನೋಡಿ ಮುಮ್ಮಲ ಮರುಗಿದ್ದಳು. ದೇಗುಲದ ಕಾರ್ಯಕ್ರಮಗಳಲ್ಲಿ ಚಿಗುರೆಯ ಉತ್ಸಾಹ ತೋರುತ್ತಿದ್ದ ನನ್ನ ಪ್ರಿಯತಮನ ಈ ಸ್ಥಿತಿಗೆ ನಾನೇ ಕಾರಣವೆಂದು ಅವಳಿಗೆ ಅನಿಸಿದರೂ ದೈವ ಲೀಲೆಯೇ ಇದಕ್ಕೆಲ್ಲಾ ಕಾರಣವೆಂದು ಬಗೆದು ಅವನೆದುರು ಕಾಣಿಸಿಕೊಳ್ಳುವ ಪ್ರಯತ್ನ ಮಾಡದೆಯೇ ಮನೆಯತ್ತ ಓಡಿದ್ದಳು.
ದೇಗುಲದಿಂದ ಮನೆಗೆ ಬಂದದ್ದೇ ಸುಬೋಧಿನಿಯು ಮೊದಲು ಮಾಡಿದ ಕೆಲಸವೆಂದರೆ ಒಂದು ಪೆನ್ನು ಮತ್ತು ಪುಸ್ತಕವನ್ನು ತೆಗೆದುಕೊಂಡು ಅದರಲ್ಲಿ
ನನ್ನ ಪ್ರೀತಿಯ ವಾಸು,
ನಾನು ನಿನ್ನನ್ನು ಇಂದಿಗೂ ಅಂದಿನಷ್ಟೇ ಪ್ರೀತಿಸುತ್ತಿದ್ದೇನೆ ಕಣೋ… ಆದರೆ ಏನು ಮಾಡುವುದು? ನಮಗೆ ಜೊತೆಯಾಗಿ ಬಾಳುವ ಯೋಗವಿಲ್ಲ. ನನ್ನ ಹಣೆಬರಹವೇ ಅಷ್ಟು... ನನ್ನ ಕೈ ರೇಖೆಗಳ ಪ್ರಕಾರ ನಾನು ಕೇವಲ ಇಪ್ಪತ್ತೆರೆಡು ವರುಷಗಳ ಕಾಲ ಮಾತ್ರಾ ಬದುಕುತ್ತೀನಂತೆ ಕಣೋ... ಅಂದರೆ ಇವತ್ತಿಗೆ ಕೇವಲ ಒಂದು ದಿನ! ಜ್ಯೋತಿಷ್ಯದ ಪ್ರಕಾರ ನಾಳೆಯೇ ನನಗೆ ಈ ಭೂಮಿಯ ಮೇಲೆ ಉಸಿರಾಡಲು ಕೊನೆಯ ದಿವಸ. ನಾಳೆಯಿಂದ ಬರೀ ನೆನಪಷ್ಟೇ ಆಗುವ ನನ್ನನ್ನು ನೆನಸಿ ನೀನು ಕೊರಗುವುದಕ್ಕಿಂತಾ ನನ್ನನ್ನು ಬಿಟ್ಟಿರುದನ್ನು ಕಲಿಯಲಿ ಎಂದು ಆಸೆಪಟ್ಟು ಒಂದು ವರುಷಗಳ ಕಾಲ ನಿನ್ನಿಂದ ದೂರ ಉಳಿಯಲು ಪ್ರಯತ್ನಿಸಿದೆ ಆದರೆ ನೀನು ನನ್ನ ನೆನಪನ್ನು ಅಳಿಸಲಾಗದೇ ಹೀಗಾಗಿಬಿಟ್ಟಿರುವಿಯಲ್ಲೋ... ನಿನಗೆ ನನ್ನಮೇಲೆ ನಿಜವಾದ ಪ್ರೀತಿ ಇದ್ದರೆ ಈ ಪತ್ರವನ್ನು ನೀನು ಓದಿದ ನಂತರ ನನ್ನನ್ನು ಸಂಪೂರ್ಣ ಮರೆತು ಹೊಸ ಜೀವನವನ್ನು ಕಟ್ಟಿಕೊಳ್ಳಬೇಕು. ನಾನು ನಿನ್ನ ಮಗನೋ ಅಥವಾ ಮಗಳೋ ಆಗಿ ಹುಟ್ಟಿಬರಲು ಅವಕಾಶ ಕಲ್ಪಿಸಿಕೊಡಬೇಕು ಎಂಬುದಷ್ಟೇ ನನ್ನಾಸೆ...
ಇಂತಿ ನಿನ್ನನ್ನು ಸದಾ ಪ್ರೀತಿಸುವ ನಿನ್ನವಳು,
‘ಬೋಧಿ’
ಎಂದು ಬರೆದು ಕಾಗದವನ್ನು ಮೇಜಿನಮೆಲಿಟ್ಟು ಹತಾಶೆಯ ಹೊದಿಕೆ ಹೊದ್ದು ಜವರಾಯನ ಎದುರು ನೋಡುತ್ತ ಮಲಗಿದ್ದಳು.
ಜಾನಕಿರಾಯರು ಕೊಟ್ಟ ಆ ದಿನಾಂಕ ಬಂದೇಬಿಟ್ಟಿದೆ... ಇಂದು ಮಧ್ಯರಾತ್ರಿಯಲ್ಲಿ ಸುಬೋಧಿನಿಯ ಜೀವ ಹೋಗುವುದಿದೆ. ಜಾನಕಿರಾಯರು ಸುಬೋಧಿನಿಯನ್ನು ಉಳಿಸಲೆಂದು ಅಹೋರಾತ್ರಿ ಜಪ ಮಾಡಲು ತ್ರ್ಯಂಬಕೇಶ್ವರ ಸನ್ನಿಧಿಯಲ್ಲಿ ಕುಳಿತಿದ್ದಾರೆ... ಸೋಮಸುಂದರ ಶಾಸ್ತ್ರಿಗಳು ಹೋಮ ಕುಂಡಕ್ಕೆ ಹವಿಸ್ಸನ್ನು ಸಮರ್ಪಿಸುತ್ತಿ ದ್ದಾರೆ. ಇವರಿಬ್ಬರಿಗೆ ಬಿಟ್ಟರೆ ಈ ಗುಟ್ಟು ಮತ್ಯಾರಿಗೂ ಕೂಡಾ ತಿಳಿದಿಲ್ಲ.
ಇತ್ತ ವಾಸುಕಿ ಮಹಡಿಯ ಮೇಲೆನಿಂತು ಸುಬೋಧಿನಿಗಾಗಿ ಕಾಯುತ್ತಿದ್ದಾನೆ. ಅವನಲ್ಲಿ ಆಸೆ ಬತ್ತಿದ್ದರು ಕೂಡಾ ಎಲ್ಲೊ ಪವಾಡ ನಡೆದು ನನ್ನ ಮನದರಸಿ ಈ ಮಧ್ಯರಾತ್ರಿ ಓಡಿಬಂದು ನನ್ನನ್ನು ತಬ್ಬಿಕೊಂಡು ಅವಳು ಮಾಡಿದ ಈ ತಪ್ಪಿಗೆ ಕ್ಷಮೆ ಕೇಳುತ್ತಾಳೆ ಎಂಬ ಭ್ರಮೆಯಲ್ಲಿದ್ದಾನೆ.
ಸುಬೋಧಿನಿ ತನ್ನ ಬದುಕಿನಲ್ಲಿ ನಡೆದ ಸಿಹಿಗಳನ್ನು ಮತ್ತು ಕಹಿಗಳನ್ನು, ತಾನು ನೋಡಿದ ಸುಂದರ ಕ್ಷಣಗಳನ್ನೂ ಮತ್ತು ಕರುಣಾಜನಕ ಕಥೆಗಳನ್ನೂ ನೆನಸಿಕೊಂಡು, “ದೇವರೇ ನನಗಂತೂ ಅರ್ಧ ಆಯಸ್ಸನ್ನು ಕೊಟ್ಟೆ ಆದರೆ ನನ್ನ ಅಮ್ಮ ಅಪ್ಪ, ವಾಸುಕಿ, ಜಾನಕೀಮಾವ ಮತ್ತು ಶಕುಂತಲತ್ತೆ, ಈ ಎಲ್ಲರಿಗೂ ದೀರ್ಘಾಯುಷ್ಯ ಕೊಡಪ್ಪಾ ಎಂದು ಬೇಡಿಕೊಂಡು, ತನಗಾಗಿ ದೇವಾಲಯದಲ್ಲಿ ಅಹೋರಾತ್ರಿ ಪ್ರಾರ್ಥನೆಗೆ ಕುಳಿತವರಿಗೆ ನಮಸ್ಕರಿಸಿ ತನ್ನ ಗೆಜ್ಜೆಯನ್ನು ಬಿಚ್ಚಿ ತಾನು ಹಿಂದಿನ ದಿನ ಬರೆದಿದ್ದ ಪತ್ರದಮೇಲಿಟ್ಟು ವಿಚಿತ್ರವಾದ ಸಂಕಟದೊಂದಿಗೆ ಮಲಗಿದಳು!
ಇತ್ತ ವಾಸುಕಿಯ ತಲೆ ಭೋರ್ಗುಡುವ ಸಮುದ್ರವಾಗಿತ್ತು. ಎಷ್ಟೇ ಪ್ರಯತ್ನಪಟ್ಟರೂ ಮರೆಯಲಾಗದ ಸುಬೋಧಿನಿಗೆ ಮೊದಲಬಾರಿ ಮನಬಂದಂತೆ ವಾಚಾಮಗೋಚರವಾಗಿ ಬೈದು ಸ್ಥಿಮಿತ ತಪ್ಪಿದ ದೇಹವನ್ನು ಹೇಗೋ ಹಾಸಿಗೆಗೆ ಆನಿಸಿದ.
ಹಿಂದಿನ ದಿನದ ಕತ್ತಲೆಯು ಕಳೆದು ಬೆಳಕು ಮನೆ ಮಾಡಿತ್ತು. ಸೋಮಸುಂದರ ಶಾಸ್ತ್ರಿಗಳು ಜಾನಕಿರಾಯರೊಂದಿಗೆ ತಮ್ಮ ಮನೆಗೆ ತೆರಳಿ, ಸುಬೋಧಿನಿಯ ಕೋಣೆಯ ಬಾಗಿಲಿನತ್ತ ನಿಂತರು. ಇನ್ನೇನು ಅಲ್ಲಿ ಕಣ್ಣೀರಿನ ಹೊಳೆ ಹರಿಯಬೇಕೆನ್ನುವಷ್ಟರಲ್ಲಿ ಸುಬೋಧಿನಿಗೆ ಎಚ್ಚರವಾಗಿತ್ತು!!

ಹೌದು, ಈ ಕಥೆಗೆ ಇದು ನಾನು ಕೊಡಲೇಬೇಕಿದ್ದ ತಿರುವು.
ಜಾನಕೀರಾಯರ ಹಸ್ತ ಶಾಸ್ತ್ರ ಮೊದಲಬಾರಿ ಸುಳ್ಳಾಗಿತ್ತಾದರೂ ಆ ಸುಳ್ಳನ್ನು ರಾಯರು ಬಹಳಾ ಸಂಭ್ರಮಿಸಿದರು. ಸಾಯುವ ಜೀವವೊಂದು ಉಳಿದಾಗ ಸಹಜವಾಗಿ ಯಾವ ಸಂಭ್ರಮವಿರುತ್ತದೆಯೋ ಆ ಎಲ್ಲಾ ಸಂಭ್ರಮವೂ ಅಲ್ಲಿ ಮನೆ ಮಾಡಿತು. ಬದುಕಿ ಉಳಿದ ಖುಷಿಯಲ್ಲಿ ತೇಲಾಡುತ್ತಿದ್ದ ಸುಬೋಧಿನಿ ಮೊದಲು ಜಾನಕಿರಾಯರ ಕಾಲಿಗೆಬಿದ್ದು ಆಶೀರ್ವಾದ ಪಡೆದು, ನಗುತ್ತಾ “ಮಾವಾ ನಿಮ್ಮ ಜ್ಯೋತಿಷ್ಯ ಮೊದಲಬಾರಿಗೆ ನನ್ನಿಂದ ಸುಳ್ಳಾಯಿತು.. ಹಹ್ಹಾ,,” ಎನ್ನುತ್ತಾ ತನಗೆ ವಾಸುಕಿಯಮೇಲಿದ್ದ ಪ್ರೀತಿಯನ್ನು ಮನೆಯವರೆಲ್ಲರ ಬಳಿ ಹೇಳಿ, ಎಲ್ಲರನ್ನೂ ಒಪ್ಪಿಸಿ, ತನ್ನ ಪ್ರಿಯತಮನನ್ನು ನೋಡಲು ಭಾವೀ ಅತ್ತೆ ಮಾವನ ಜೊತೆ ವಾಸುಕಿಯ ಮನೆಗೆ ಹೊರಟಳು.
ಮೂವರೂ ವಾಸುಕಿಯು ಕೋಣೆಯ ಬಾಗಿಲನ್ನು ತಟ್ಟಿದರು. ದಿನಾ ಐದು ಗಂಟೆಗೇ ಏಳುತ್ತಿದ್ದವನು ಇಂದು ಏಳಾದರೂ ಏಳದ ವಾಸುಕಿಯನ್ನು ಬೈಯುತ್ತಾ ಜಾನಕಿರಾಯರು ಬಾಗಿಲನ್ನು ಜಾಡಿಸಿ ಒದ್ದರು. ಆಗ ಅಲ್ಲಿ ಕಂಡಿದ್ದು ಕೋಣೆಯ ಫ್ಯಾನಿನಲ್ಲಿ ನೇತಾಡುತ್ತಿದ್ದ ವಾಸುಕಿಯ ದೇಹ!! ನೋಡಲು ಭಯ ಹುಟ್ಟಿಸುವ ಮುಖಭಾವದಲ್ಲಿ ಶವವಾಗಿದ್ದ ವಾಸುಕಿಯನ್ನು ಕಂಡ ಸುಬೋಧಿನಿ ಈಗ ಅಕ್ಷರಸಹ ಹುಚ್ಚಿಯಂತಾಗಿದ್ದಳು. ದಿಗ್ಭ್ರಾಂತಿಯಲ್ಲಿ ಮುಳುಗಿದ್ದ ಜಾನಕೀರಾಯರ ಕಾಲಿಗೆ ಮತ್ತೆ ನಮಸ್ಕರಿಸಿದ ಸುಬೋಧಿನಿ ಈಗ ವಿಚಿತ್ರವಾಗಿ ಗಹಗಹಿಸಿ ನಗುತ್ತಾ, ವಿಕೃತ ಕಣ್ಣುಗಳಿಂದ ಹೀಗೆಂದಳು “ಜಾನಕಿ ಮಾವಾ ಇಂಟರ್ನಲ್, ಕೊನೆಗೂ ನಿಮ್ಮ ಜ್ಯೋತಿಷ್ಯ ಸುಳ್ಳಾಗಿ ಹೋಯಿತು”. ಅವಳ ವಿಕೃತ ನಗು ಇಡೀ ಮನೆಯನ್ನು ಆವರಿಸಿತ್ತು.