Click here to Download MyLang App

ಹಣ್ಣೆಲೆಗಳ ನಡುವೆ - ಬರೆದವರು : ಸಂತೆಬೆನ್ನೂರು ಫೈಜ್ನಟ್ರಾಜ್ | ಸಾಮಾಜಿಕ


ಎದ್ದು ಕುಂದ್ರಬಾರದಾ? ಸೊಂಟದ ನರನಾಡಿ ಏನಾಗ್ಬೇಕವು? ಎದ್ದಾಗ್ಲಿಂದ ಹಂಗೇ ಬಿದ್ಕೊಂಡಿರೇದೇನ್ ಚೆಂದ ಹೇಳು.. ..ಹಲ್ಲಲ್ ಸಿಕ್ಕಿದ್ದ ಅಡಿಕೆ ಚೂರು ಊದುಬತ್ತಿ ಕಡ್ಡಿಯಿಂದ ಎಬ್ತಾ ಬಸಪ್ಪ ಒಂದೇ ಸಮನೇ ಮಾತಾಡ್ತಿದ್ದ. ರುದ್ರವ್ವ ಮಾತ್ರ ಹರಕು ಚಾಪೆ ಮೇಲೆ ಕಳ್ಳು ಪಚ್ಚಿ ಹೊರಬಂದ ದಿಂಬು ತಲೆಗಾನಿಸಿ ಗಿಲಾವಿಲ್ಲದ ಗೋಡೆಯ ಇಟ್ಟಿಗೆಗಳನ್ನೇ ಎಣಿಸುವಂತೆ ನೋಡುತ್ತಿದ್ದಳು.


ಸೊಸೆ ತಂದುಕೊಟ್ಟ ಬೆಲ್ಲದ ಕಾಪಿ ಬಸಪ್ಪ ಹೀರಿ ಮತ್ತೆ ಎಲೆ ತೆಗೆದು ತೊಡೆ ಮೇಲಿದ್ದ ಹರಕು ಪಂಚೆಗೆ ಒರೆಸೊರೆಸಿ ವಯಸ್ಸು ಎಂಬತ್ತಾದರೂ ಒಂದೂ ಬೀಳದ ಹಲ್ಲುಗಳ ನಡುವೆ ಒಗೆದ ದುಂಡಡಕೆಗೆ ನಾಲಗೆಯ ಸಲಕೆಯಿಂದ ಅತ್ತ ಇತ್ತ ಉರುಳಾಡಿಸುತ್ತಿದ್ದ. ರುದ್ರವ್ವ ಕಾಪಿ ಕಡೆ ತಿರುಗಿಯೂ ನೋಡಿರಲಿಲ್ಲ. ನೊಣಗಳು ಅದನ್ನೇ ಸ್ವಿಮ್ಮಿಂಗ್ ಫೂಲ್ ಮಾಡಿಕೊಂಡು ಈಜುತ್ತಿದ್ದವು!


ಇದು ನಿತ್ಯದ ಕತೆ.

ದೊಡ್ಡ ಮಗನ ಮನೆಯಲ್ಲಿ ಬಸಪ್ಪನ ವಾಸ. ಮನೆ ಬಸಪ್ಪ ಕಟ್ಟಿಸಿದ್ದೇ ಆದರೂ ಮಕ್ಕಳೆಲ್ಲಾ ಬೆಳೆದ್ದು ಅವರ ಬದುಕು ಅವರವರೇ ಕಟ್ಟಿಕೊಂಡ ಮೇಲೆ ತನ್ನದೇ ಮನೆ ಇರುವಾಗ ತಾನೇಕೆ ಮತ್ತೊಬ್ಬರ ಮನೇಲಿರಲಿ ಅಂತ ಯಾವ ಮಗನ ಮನೆಗೂ ಹೋಗದೇ ಅಲ್ಲಿಯೇ ಉಳಿದಿದ್ದ. ಆಚೆ ಓಣಿಯಲ್ಲೇ ಇನ್ನೊಬ್ಬ ಮಗ ಸಿದ್ಲಿಂಗ ಕಬ್ಬಿಣದಂಗಡಿ ವ್ಯಾಪಾರಿ. ಬ್ರಾಹ್ಮಣರ ಅಗ್ರಹಾರದಂತಿರುವ ಬೀದಿಯಲ್ಲಿ ಸಿಕ್ಕ ಒಂದು ಕರಿ ಹೆಂಚಿನ ಮನೆ ಕೊಂಡಿದ್ದ. ತಾಯಿಯನ್ನು ಬಾಲ್ಯದಿಂದಲೂ ಹಚ್ಚಿಕೊಂಡ ಈತ ಮದುವೆಯಾದ ನಂತರವೂ ಮಡದಿ ಮಕ್ಕಳ ಜೊತೆ ತಾಯಿಯನ್ನೂ ಇಟ್ಟುಕೊಂಡು ಆರೈಕೆ ಮಾಡುತ್ತಿದ್ದ!


ಬಸಪ್ಪನ ಮಾತಿಗೆ ರುದ್ರವ್ವ ಒಂದೂ ಮಾತಾಡದೇ ಮೌನ ಹೊದ್ದು ಮಲಗಿದ್ದಳು.

‘ಮಕ್ಕ, ಮಕ್ಕ ಮಲಗಿ ಮಲಗಿ ಪಕ್ಕೇಲಿ ಗಾಯ ಆಗಿ ಗಾಯ ಕೀವಾಗಿ ಕೀವಿಂದ ಹುಳ ಹೊರಬಂದಾಗ ‘ಬಾರೋ ಹುಳ ಆಯಿ’ ಅಂತ ನನ್ನ ಕರೆದ್ರೆ ನಾನಂತೂ ಬರಲ್ಲ ನೋಡು, ಈಸಪ್ಪನ ಗುಡಿಗ್ ಹೋಗಿ ಬಿದ್ಕಂತೀನಿ ಅಷ್ಟೆ!’

ಆದರೂ ರುದ್ರವ್ವ ಮಗ್ಗುಲೂ ಬದಲಿಸಲಿಲ್ಲ. ಬಸಪ್ಪ ಬಾಯಲ್ಲಿದ್ದ ಕೆಂಪು ರಸ ಆಚೆ ಉಗುಳಲು ಎದ್ದ. ಗಂಡ ಹೋದ ಅಂತ ರುದ್ರವ್ವ ಎದ್ದಳು. ಉಗುಳಿ ತಿರುಗಿ ಬಂದ ಗಂಡನ್ನ ನೋಡಿ ಹಂಗೇ ತುಪಕ್ಕನೆ ಚಾಪೆ ಅವುಚಿ ಉಲ್ಡಿದ್ದು ನೋಡಿದ ಬಸಪ್ಪನಿಗೆ ನಗೂನೂ ಜೊತೆಗೆ ತುಸು ಕೋಪನೂ ಬಂತು.

‘ಥೂ ಕತ್ತೆ ಲೌಡಿ, ಬೇವಾರ್ಸಿ ಮುಂಡೆ ಗಂಡ ಅಂದ್ರೆ ಆಟು ಸದರನ, ಚಿಕ್ಕಾಸಿನ ಬೆಲೆ ಇಲ್ಲ, ನಾಟಕ ಮಾಡ್ತಿಯ ನಾಟ್ಕ, ಚಿಕ್ಮಗನ್ ಮನೇಲಿ ಒಳ್ಳೊಳ್ಳೇದು ಸಿಗುತ್ತೆ ಅಂತ ತಿನ್ಕಂಡ್,ಬಿದ್ಕಂಡ್ ಇದ್ದೀಯ ಥೂ’ ಅನ್ನುತ್ತಾ ರುದ್ರವ್ವನ ಕತ್ತು ಹಿಡಿದು ಎತ್ತಿ ಕೂರಿಸುವುದಕ್ಕೂ ಅವಳು ನೆಲ ರಾಪೋದಕ್ಕೂ ಕೋಪ ನೆತ್ತಿಗೇರಿ ರುದ್ರವ್ವನ್ನ ನೆಲಕ್ಕೆ ಕುಕ್ಕಿಬಿಟ್ಟ. ಕರ‍್ರೋ ಅಂತ ಕಿರುಚಿ ಜೋರು ಬಾಯಿ ಮಾಡಿ ಅಳುವ ದನಿಗೆ ಒಳಗಿದ್ದ ಸೊಸೆ ಓಡಿ ಬಂದಳು. ಹಲ್ಲು ಕಟ ಕಟ ಅನ್ನುವ ಶಬ್ಧ ಮಾತ್ರ ಕೇಳುತ್ತಿತ್ತು.


ಹಲ್ ಕಡಿಯೋದು ರೂಢಿ ಬಸಪ್ಪನಿಗೆ! ಅಷ್ಟು ವಯಸ್ಸಾದ್ರೂ ದವಡೆಯ ಹಲ್ಲುಗಳು ಮಾತ್ರ ಅಲ್ಲಾಡದೇ ಬಾಯಲ್ಲಿ ಕೂತಿದ್ದವು! ಬಂದು ನೋಡಿದ ಸೊಸೆಗೆ ಏನಾಯ್ತೆಂದು ಅರ್ಥವಾಗಿತ್ತು. ದಿನಾ ನೋಡೋ ಗೋಳಿದು ಅಂತ ಒಳ ಹೋದಳು. ಹಲ್ ಕಡಿಯೋ ಸದ್ದು ಅವಳು ಒಳ ಹೋದರೂ ಕೇಳುತ್ತಿತ್ತು!

ಸ್ವಲ್ಪ ಹೊತ್ತು ಬಿಟ್ಟು ಅಂಡೆತ್ತಿ ಜೋರಾಗಿ ಊಸೊಂದು ಬಿಟ್ಟು ಎದ್ದ. ಕಣ್ಣೀರು ಒರೆಸಿಕೊಳ್ಳುತ್ತಲೇ ಉಂಡು ಹೋಗಂತೆ ಬಾ ಎಂದು ರುದ್ರವ್ವ ಕೈ ಸನ್ನೆ ಮಾಡಿದಳು.

‘ನಿನ್ ಮಗನ್ ಊಟ ಯಾವನಿಗ್ ಬೇಕು ಹೋಗೆ, ತಿಂದ್ ಸಾಯಿ ನೀನೆ..’ ಅನ್ನುತ್ತಾ ದೊಡ್ಡ ಕಣ್ಣ ಬಿಟ್ಟು ತನ್ನ ಮನೆ ಕಡೆ ನಡೆದ!


ಸೊಸೆ ಒಳಗಿಂದ ಹೆಚ್ಚಿಟ್ಟಿದ್ದ ಕಲ್ಲಂಗಡಿ ಹೋಳು ತಂದು ಕೂಗಿದರೂ ಬಸಪ್ಪ ತಿರುಗಿ ನೋಡದೇ ಉಗಿಯುತ್ತಾ ಹೋದ. ಉಗಿದಿದ್ದು ಬಾಯ ರಸವೋ, ತನ್ನ ಹೆಂಡತಿಗೋ ಸೊಸೆ ತಂದ ಕಲ್ಲಂಗಡಿಗೋ ತಿಳಿಯಲಿಲ್ಲ!

* * *

ರುದ್ರವ್ವ ಪಾಡೇ ಇದ್ದಳು. ಆರು ತಿಂಗಳು ಚಿಕ್ಕ ಮಗ ಸಿದ್ಲಿಂಗನ ಮನೇಲಿದ್ರೆ ಇನ್ನಾರು ತಿಂಗಳು ರಾಣಿಬೆನ್ನೂರಲ್ಲಿರೋ ಒಬ್ಬಳೇ ಮಗಳು ಸೌಭಾಗ್ಯನ ಮನೇಲಿ ಠಿಕಾಣಿ. ಮೊಮ್ಮಕ್ಕಳು ನೆಪ್ಪಾಗ್ತಾರಂತ ಮಗಳ ಮನೆ ಹೋಗಿ ತಿಂಗಳಾಗಿತ್ತು ಚೆನ್ನಾಗೇ ಇದ್ದಾಳೆಂದು ಆಗಾಗ ಅಕ್ಕ ಫೋನ್ ಮಾಡ್ತಾನೇ ಇರ‍್ತಿದ್ಲು. ಮೊನ್ನೆ ಇದ್ದಕ್ಕಿದ್ದಂತೆ ಸೌಭಾಗ್ಯ ಫೋನ್ ಮಾಡಿ ‘ಅವ್ವಾ ಯಾಕೋ ಹೆಂಗೆಗೋ ಆಡ್ತಾಳ್ ಕಣೋ, ಕತ್ ವಾಲಿದೆ ಒಂದ್ ಕೈ ಒಂದ್ ಕಾಲು ಸೆಟಗಂಡದೆ, ನಂಗ್ ಕೈಕಾಲ್ ಆಡ್ತಿಲ್ಲ ಏನ್ಮಾಡ್ಲಪ್ಪ’ ಅಂತ ಅಬ್ಬರಿಸಿ ಗೋಳಾಡಿದಳು.

‘ಅಕ್ಕ ನಾನಿಲ್ಲಿ, ನೀನಲ್ಲಿ ನಾ ಏನ್ ಮಾಡಲಿ? ಮೊದಲು ಕೊಬ್ಬರಿ ಎಣ್ಣೆ ಕುಡಿಸಿ ಸೀದಾ ನಿಂಗೊತ್ತಿರೋ ಡಾ. ತೋರಿಸು, ಏನ್ ಹೇಳ್ತಾರೆ ಕೇಳಿ ನಂಗೆ ಫೋನ್ ಮಾಡು, ಅಷ್ಟರಲ್ಲಿ ನಾನು ಮತ್ತು ಅಣ್ಣ ದಾವಣಗೆರೆ ಮುಟ್ತೀವಿ ನಂತರ ಮುಂದಿಂದ್ ನೋಡನ’ ಅಂತ ಫೋನಿಟ್ಟ!

ಅಂಗಡಿ ಬಾಗಿಲು ಹಾಕಿ ಅಣ್ಣಂಗೆ ‘ಬಾಯಿಲ್ಲಿ’ ಅಂತ ಅಂಗಡಿ ಹತ್ರ ಕರೆಸಿ ಸಿಕ್ಕ ಅಮರೇಶ್ವರ ಬಸ್ ಹತ್ತಿ ಇಬ್ಬರೂ ಕುಂತರು. ನಂತರ ಹೆಂಡತಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು. ಅಮ್ಮನ ಸ್ಥಿತಿಗೆ ಏನು ಹೇಳುವುದು? ಅರಾಮಾಗಿ ತಿಂದುಂಡು ಚೆನ್ನಾಗಿಯೇ ಮನೇಲಿ ಇದ್ದವಳು. ಅಣ್ಣನ ಮನೆಗೆ, ಅಂದರೆ ತಾನು ಲಗ್ನ ಆಗಿ ಸೊಸೆಯಾಗಿ ಬಂದ ಮನೆಗೆ ಏನಂದ್ರೂ ಕಾಲಿಡಲ್ಲ. ಹೋದರೂ ಐದು ನಿಮಿಷ ಹತ್ತು ನಿಮಿಷ ಮಾತ್ರ. ‘ಹಂಗಲ್ಲಮ್ಮ, ಅವನೂ ಮಗ ಅದೂ ದೊಡ್ಡ ಮಗ ತೀರಾ ಅವನ ಮನೆಗು ಹೋಗದಿದ್ರೆ ಬೇಜಾರಾಗಲ್ವ? ಚಿಕ್ಕಣ್ಣ ಅಂತೂ ಬೇರೆ ಊರಲ್ಲಿದ್ದಾನೆ, ಇದ್ದೂರಲ್ಲಿ ಅದೂ ಪಕ್ಕದ ಬೀದಿಲಿರೋ ಮಗನ ಮನೆಗೆ ಹೋಗಕೆ ರಾಗ ತೆಗಿತಿಯಲ್ಲಮ್ಮ’ ಅಂತ ಸಿದ್ಲಿಂಗ ಅಂದರೇ....


‘ಸಿದ್ಲಿಂಗ ಮಕ್ಳು ಹೆಂಗಿದ್ರೂ ಮಕ್ಳೆ ಕಣ, ನಿನ್ ಮನೆಲಿ ದಿನಾ ಮುದ್ದೆ ಇಕ್ಕೋ ಇಲ್ಲೇ ತಿಂದು ಇಲ್ಲೇ ಸಾಯ್ತೀನಿ, ಆದರೆ ಆ ಮನಿಗ್ ಹೋಗು ಅನಬೇಡ. ಅಲ್ಲಿ ಅಮೃತನೇ ಇಕ್ಕಿದ್ರೂ ಗಂಟ್ಲಾಗ್ ಇಳಿಯಲ್ಲ ಕಣೋ, ವಯಸ್ಸಾದ್ ಜೀವಗಳು ಉಣ್ಣಕ್ ಕೇಳಲ್ಲ ಕಣೋ ಮಕ ನೋಡಿ ಮನೆ ಮಂದಿ ನಾಕು ಮಾತಾಡಿದ್ರೂ ಉಪ್ವಾಸನೇ ಇದ್ದು ಬಿಡಬಹುದು, ನಿಂಗ್ ಭಾರ ಆದರೆ ಹೇಳು ಮಗಳಿದಾಳೆ ಹೋಕ್ಕೀನಿ’ ಅಂದು ಬಾಯಿ ಮುಚ್ಚಿಸುತ್ತಿದ್ದಳು.

ದೊಡ್ಡಣ್ಣ ಕೂಡ ಅಮ್ಮ ನಮ್ಮನಿಗ್ ಬರಲ್ಲ ಅಂತ ಆಗಾಗ ಸಿದ್ಲಿಂಗನ ಮೇಲೆ ಮುನಿಸಿಕೊಳ್ತಿದ್ದ... ಆದರೆ ಆ ಮುನಿಸು ತಾತ್ಕಾಲಿಕ ಮಾತ್ರ!

ರುದ್ರವ್ವ ಎರಡು ತಿಂಗಳಾಗಲ್ಲ ರಾಣೆಬೆನ್ನೂರು ಅಂತ ಕನವರಿಸಿ ಊಟ ಕಮ್ಮಿ, ಮಾತು ಕಮ್ಮಿ. ಮೊಮ್ಮಕ್ಕಳ ಬಳಿ ‘ಅತ್ತೆನ ನೋಡ್ಕಂಡ್ ಬರ‍್ತಿನ್ರೋ ನಿಮ್ಮಪ್ಪಂಗೆ ಹೇಳ್ರೋ’ ಅಂತ ಸಂದೇಶ ರವಾನೆ ಮಾಡಿಬಿಡೋಳು!

ಹಿತ್ತಲಲ್ಲಿ ಬೆಳೆದ ಸೊಪ್ಪು, ನುಗ್ಗೆಕಾಯಿ, ತೆಂಗಿನಕಾಯಿ, ಇನ್ನೂ ಹೀಚಾಗಿದ್ದರೂ ಇದ್ದಬದ್ದ ಪೇರಲೆ ಕಾಯಿ ತರಿದು ಕರೇ ಪ್ಲಾಸ್ಟಿಕ್ ಕವರುಗಳಲ್ಲಿ ಸ್ಟಾಕು! ಮನೆಗಂತ ಬೆಳೆಸಿರೋ ನಾನಾ ನಮೂನಿ ತರಕಾರಿ ಅದು ಇದೂ ಅಂತ ಎರಡ್ಮೂರು ಚೀಲ ಮಾಡ್ಕಂಡು ಕುಂತ್ರೆ ಮುಗೀತು. ಕರಕೊಂಡು ಹೋಗಿ ಬಾಡ ಕಡೆಯಿಂದ ಹೋಗೋ ರಿಪಬ್ಲಿಕ್ ಬಸ್ಸೇ ಹತ್ತಿಸಬೇಕು. ಆ ದಾರೀಲಿ ಹೋದ್ರೆ ದಾವಣಗೆರೆ ಗೌರ್ಮೆಂಟ್ ಬಸ್ ನಿಲ್ದಾಣ ಸಿಗೋದು, ಅಲ್ಲಿಂದ ರಾಣೆಬೆನ್ನೂರಿಗೆ ಒಂದೇ ಬಸ್ಸು. ಇಲ್ಲಿ ಹತ್ತಿಸಿ ಫೋನ್ ಮಾಡಿದರೆ ಅಕ್ಕನ ಮಗ ಬಂದು ಆಟೋದಲ್ಲಿ ಮನಗೆ ಕರೆದುಕೊಂಡು ಹೋಗ್ತಾನೆ!


ರುದ್ರವ್ವ ಹಂಗ್ ನೋಡಿದ್ರೆ ಗಟ್ಟಿ ಜೀವ ಬಾಲ್ಯದಿಂದಲೂ ಮಸೀದಿ ಮುಂದಲ ಐನ್ಯಾರ ಮನೀಗೆ ವ್ಯವಸಾಯದ ಸೀ ಬಾವಿಯಿಂದ ದಿನಾ ಇಪ್ಪತ್ತು ಕೊಡ ನೀರು ಸೇದಾಕಿ ಆರಾಣೆ ಏಳಾಣೆ ಇಸ್ಕಂಡು, ಮತ್ತೆ ತುಂಬಿದ ಮನೆಯ ಇಡೀ ಕೆಲಸ. ಅಲ್ಲಿನ ದೊಡ್ಡ ಮಗಳಾಗಿ ಮಾಡಿ ಬಾಳಿದ ಮಗಳು!


ಹುಟ್ಟಿನಿಂದ ಮಾಂಸ, ಕೋಳಿ ಎಂತದ್ದೂ ಇಲ್ಲ. ತಿನ್ನೋ ಜಾತಿಲಿದ್ರೂ ಇದೇನವ್ವ ಅಂತ ವಾರಿಗೆಯ ಮಂದಿ ಹೇಳಿದ್ರೂ ಮೂಸ್ತಿರಲಿಲ್ಲ ರುದ್ರವ್ವ. ವಾರಕ್ಕೊಮ್ಮೆ ಬಸಪ್ಪ ಮಾಂಸ ತರೋನು. ಅಚ್ಚಕಟ್ಟಾಗಿ ಗಂಡಂಗೆ ಮಕ್ಕಳಿಗೆ ಮಾಡಿ ಹಾಕ್ತಿದ್ಲೇ ಹೊರತು ಅದರ ಕಡೆ ಕಣ್ಣೂ ಹಾಕ್ತಿರಲಿಲ್ಲ. ತಾನು ಮಾತ್ರ ಒಲೆಯ ಕೆಂಡದ ಮೇಲೆ ಎಲ್ಡು ಹಸಿಮೆಣಸಿನಕಾಯಿ ಒಂದು ದಪ್ಪನೆ ಟಮಟೆ ಒಂದು ಬದನೆಕಾಯಿ ಸುಟಕೊಂಡು ಉಪ್ಪಾಕಿ ಕಿವುಚಿಕೊಂಡು ಮುರುಕು ಮುದ್ದೆ, ಹಿಡಿ ಅನ್ನ ತಿಂದ್ರೆ ಊಟ ಮುಗೀತು. ಅಪ್ಪಿ ತಪ್ಪಿ ಮಾಂಸದ ಸಾರಿನ ಸೌಟು ತನ್ನ ಗೊಜ್ಜಿಗೆ ತಾಕಿದರೂ ಅಂದು ರುದ್ರವ್ವಂದು ಉಪವಾಸನೆ!

ಇಡೀ ದಿನ ಮನೆ ಕೆಲ್ಸ ಮಾಡ್ತಾ ಮೂರು ಗಂಡು ಒಂದು ಹೆಣ್ಣು ಮಕ್ಕಳನ್ನು ಸಾಕಿ ಬೆಳೆಸಿದಳು. ಬಸಪ್ಪ ದುಡಿಮೆಸ್ಥ ಅಷ್ಟೇ; ಮನೆ ಮನ್ತ್ಯಾ ನ ಅಷ್ಟಕ್ಕಷ್ಟೆ!

ಒಬ್ರೂ ನೆಟ್ಟಗ್ ಓದ್ಲಿಲ್ಲ ಸೌಭಾಗ್ಯ ಎರಡನೆಯವಳಾದರೂ ಬೇಗ ಕಂಕ್ಣ ಕೂಡ್ತು ಅನ್ನೋ ಕಾರಣಕ್ಕೆ ಸೀಲ್ ಇಟ್ಗೆ ಡೀಲರಂತ ರಾಣೇಬೆನ್ನೂರಿನ ಗಂಡಿಗೆ ಕೊಟ್ಟು ಮದುವೆ ಮಾಡಿದ್ರು.

ಸೌಭಾಗ್ಯಗೆ ಮದುವೆ ಬಗ್ಗ ತಕರಾರಿರಲಿಲ್ಲ ಆದರೆ ಗಂಡಿಗೆ ನೆತ್ತಿ ಮೇಲೆ ಕೂದಲು ಕಮ್ಮಿ ಅಂತ ಎರಡು ಮೂರು ದಿನ ಊದ್ಕಂಡು ಕುಂತಿದ್ಲು. ಅಜ್ಜಿ, ರುದ್ರವ್ವನ ಅವ್ವ ‘ಅಯ್ಯೋ ಕೂಸೇ ಕೂದಲ ಜೊತಿಗಾ ಸಂಸಾರ ಮಾಡ್ತೀಯ, ಒಳ್ಳೆ ಹುಡುಗ ಮನೆ, ಮನೆಯವರು ಒಳ್ಳೆ ಜನ ಈಗೇನವ್ವ ಸಣ್ ಸಣ್ ಮಕ್ಳಿಗೂ ಕೂದ್ಲು ಉದುರ್ತವೆ’ ಅಂತ ಸಮಾಧಾನ ಮಾಡಿದಾಗ ಮದುವೆ ಮುಗಿದಿತ್ತು.

ಬಸ್ಸು ಆರನೇ ಮೈಲಿಕಲ್ಲು ದಾಟಿದಾಗ ಮತ್ತೆ ಫೋನು ‘ಅದೇ ಅಂತ ಕಣಪ್ಪ, ಇಲ್ಲಿ ತೋರಿಸಿದೆ ಹೆಂಗಾರ ಆಗ್ಲಿ ಅಂತ ದಾವಣಗೆರೆಗೆ ಕರ‍್ಕಂಡ್ ಬಂದೀನಿ, ನೀ ಎಲ್ಲಿದ್ದೀಯ’ ಅಂತ ಅಕ್ಕ ಹೇಳಿದಾಗ ಸಿದ್ಲಿಂಗನಿಗೆ ಕಾದ ಕಬ್ಣದ ಮೇಲೆ ಸುತ್ತಿಗೇಲಿ ಬಡ್ದಂಗಾತು. ಆದರೂ ‘ಆತು ಕಣವ್ವ ಅಲ್ಲೇ ಇರಿ ಹತ್ ನಿಮಿಷದಲ್ಲಿ ಅಲ್ಲಿರ್ತಿನಿ’ ಎನ್ನುತ್ತಾ ಸೀಟು ಬಿಟ್ಟೆದ್ದ. ಹಿಂದೆ ಅಣ್ಣನೂ!


ಹಳೇ ದನಗಳನ್ನು ಹಿಡಿದಾಡ್ದಂಗೆ ಹೊಸ ದನಗಳನ್ನು ಹಿಡ್ದಾಡದ್ ಕಷ್ಟ- ಅನ್ನೋ ಅಜ್ಜಿ ಮಾತು ನೆಪ್ಪಾಗಿ ಅಮ್ಮನ ಲಕ್ವ ತನಗೇ ಹೊಡಿತೇನೋ ಅಂತ ನೊಂದುಕೊಂಡ ಸಿದ್ಲಿಂಗ. ದೊಡ್ಡ ದೇಹ, ಎತ್ತರದ ಆಳು ಅಮ್ಮ, ಅವಳನ್ನ ಈಗ ಸಂಬಾಳಿಸೋದು ಕಷ್ಟ. ಮನೇಲಿ ನಾನಿದ್ರೆ ಹೆಂಗೋ ಆಗ್ತದೆ, ಅಂಗ್ಡಿಲ್ ಕೂತಾಗ ಹೊರಗೆ, ಒಳ್ಗೆ ಅಂದ್ರೆ ಹೆಂಡ್ರ ಕೈಲಾದೀತಾ? ಸೊಳ್ಳೆಯಂತಾ ಜೀವ ಅದು. ಮಕ್ಳು ಸ್ಕೂಲಿಗೋಗ್ತವೆ, ಅತ್ತೆ ಸೊಸೆ ಇಬ್ರೆ! ಎತ್ತಾಡಕ್ ನಾ ಮನೇಲಿದ್ರೆ ಕೂಳಿಗೆ ಕಾಳೆಂಗ್ ಕೂಡ್ಯಾವು?


ರಾಣೆಬೆನ್ನೂರಿಂದ ಅಮ್ಮನ್ನ ಹಾಕ್ಕೊಂಡ್ ಬಂದ ಓಮಿನಿ ಕಂಡ ಕೂಡಲೇ ಸಿದ್ಲಿಂಗ ಓಡಿಹೋಗಿ ಅವ್ವನ್ನ ನೋಡ್ದ. ಅಣ್ಣ ಹಿಂದಿದ್ದ. ಎಚ್ಚರವಾಗೇ ಇದ್ದಳು. ಡೋರ್ ತೆಗೆದು ಗಲ್ಲ ಮುಟ್ಟಿ ‘ಏನಮ್ಮ ಏನ್ ಮಾಡ್ಕಂಡೆ’ ಅಂದ ಸಿದ್ಲಿಂಗನ ಮಾತಿಗೆ ರುದ್ರವ್ವ ಕೆಳದುಟಿ ಉಲ್ಟಾ ಮಾಡಿ ಕಣ್ತುಂಬಿಕೊಂಡು ಗೊಗ್ಗರು ದನಿ ಮಾಡಿ ಅತ್ತುಬಿಟ್ಟಳು.

ಸಿದ್ಲಿಂಗನಿಗೆ ಎದೆ ಎಲ್ಡು ಮೂರಾದಂಗ್ ಆಗಿತ್ತು. ಭಾವ ಅಷ್ಟು ದೂರದಲ್ಲಿ ಮೌನವಾಗಿ ನಿಂತವರು ಹತ್ತಿರ ಬಂದರು. ಅಕ್ಕ ಕೂಡಾ ಅತ್ತು ಅತ್ತು ಕಣ್ಣು ಕೆಂಪಾಗಿಸಿಕೊಂಡಿದ್ದಳು. ಅಣ್ಣ ಅಮ್ಮನ ಕಾಲತ್ರ ಕೂತು ಕಣ್ಣೀರಿಡುತ್ತಿದ್ದ.

‘ಈಗೇನೂ ಇಲ್ಲೇ ಎಸ್ ಎಸ್ ಆಸ್ಪತ್ರೆಲಿ ತೋರಿಸೋಣವೋ ಅಥವಾ ಲಕ್ವಗೆ ಅಂತ ಇರೋ ಅಳಗಕ್ಕೆ ಹೋಗೋಣವೋ’ ಭಾವ ಬೆನ್ನ ಮೇಲೆ ಕೈಯಿಟ್ಟು ಹೇಳಿದರು.

‘ನೀವು ದೊಡ್ಡವರು ನೀವು ಹೇಗೆ ಹೇಳ್ತಿರೋ ಹಾಗೆ’ ಅಂತ ಅಣ್ಣ ಅಂದ.

‘ನೀವು ಮಕ್ಕಳು ನಾ ಅಳಿಯ ನಿಮ್ಮ ನಿರ್ಧಾರ ಮುಖ್ಯ’ ಅಂದಾಗ ಸಿದ್ಲಿಂಗ ಫೋನ್ ತೆಗೆದು ಮೂರು ನಾಲ್ಕು ಜನ ಗೆಳೆಯರಿಗೆ ವಿಷಯ ಹೇಳಿ ಸಲಹೆ ಕೇಳಿದ. ಅಳಗದಂತೆಯೇ ಪಿಬಿ ರೋಡಲ್ಲಿ ‘ಅಶ್ವಿನಿ ಕ್ಲಿನಿಕ್ ಅಂತ ಇದೆ ಸಧ್ಯಕ್ಕೆ ತೋರಿಸಿ ಮೈನರ್ ಆದ್ರೆ ಸರಿ ಹೋಗುತ್ತೆ’ ಅನ್ನುವ ಅಭಿಪ್ರಾಯಕ್ಕೆ ಮಣಿದು ಗಾಡಿ ಅಲ್ಲಿಗೆ ತಿರುಗಿಸಿದರು. ಅಮ್ಮ ಸಿದ್ಲಿಂಗನ ಮುಖವೇ ನೋಡ್ತಾ ಇದ್ದದುರ ಜೊತೆಗೆ ಕಣ್ಣ ನೀರು ಜಾರುತ್ತಲೇ ಇದ್ದವು.


‘ಬಸವನ ಹಬ್ಬ ಹತ್ರ ಬಂತು ಮಗಳೂರಿಗೆ ಈಗ ಹೋಗದು ಬ್ಯಾಡ ಕಣವ್ವ ಹಬ್ಬ ಆದಮ್ಯಾಕೆ ನಾವು ಮಕ್ಳು ಜೊತಿಗ್ ಬರ್ತಿವಿ ಹೋಗನಂತೆ, ವರ್ಸಾತು ರಾಣೆಬೆನ್ನೂರಿಗೆ ಹೋಗದೇ...’

ಅಂದರೂ ಊಟ ಬಿಟ್ಟಂಗ್ ಮಾಡಿ ಕೊನಿಗೆ ದೊಡ್ಡ ಮಗನ ಮನೆಗೆ ಹೋಗಿ ಅಲ್ಲಿಂದ ಬಸ್ ಹತ್ತಿ ರಾಣೆಬೆನ್ನೂರು ಸೇರಿದ್ದ ತನಗೆ ಎಂತಾ ಪರಿಸ್ಥಿತಿ ಬಂತು, ನಿನ್ ಮಾತು ಕೇಳಬೇಕಿತ್ತು ಕಣೋ ಸಿದ್ಲಿಂಗ ಅನ್ನೋ ನೋವು ರುದ್ರವ್ವನ ಕಣ್ಣಲ್ಲಿ ನೀರಾಗಿ ಹರಿಯುತ್ತಿದ್ದವು.

ಚೀಟಿ ಪಡೆದು ಅಮ್ಮನನ್ನ ಅಜಮಾಸು ಎತ್ತಿಕೊಂಡು ಡಾಕ್ಟರ್ ಬಳಿಯ ಸಿಂಗಲ್ ಬೆಡ್ ಮೇಲೆ ಮಲಗಿಸಿದ ಸಿದ್ಲಿಂಗ. ಕೈ ಬಾಯಿ ಕಾಲು ಸೂಕ್ಷ್ಮವಾಗಿ ಪರೀಕ್ಷಿಸಿದ ವೈದ್ಯರು; ಕಡಿಮೆ ಪ್ರಮಾಣದಲ್ಲಿ ಆಗಿದೆ, ಬೇಗ ಕರೆತಂದಿದ್ದು ಒಳ್ಳೆಯದಾಯಿತು. ಎರಡು ದಿನಕ್ಕೊಮ್ಮೆ ಹತ್ತು ದಿನ, ನಂತರ ವಾರಕ್ಕೊಮ್ಮೆ ಒಂದು ತಿಂಗಳು , ತಿಂಗಳಿಗೊಮ್ಮೆ ಒಂದು ವರ್ಷ ಇಂಜೆಕ್ಷನ್ ಮಾಡಿಸಿ. ಜೊತೆಯಲ್ಲಿ ಈ ಪುಡಿ ಬಿಸಿ ನೀರು ಅಥವಾ ಹಾಲಿನಲ್ಲಿ ಕೊಡಿ . ಈ ಎಣ್ಣೆ ಕೈ ಕಾಲಿಗೆ ಮಸಾಜ್ ಮಾಡ್ತಾ ಇರಿ. ಚಳಿಯಿಂದ ಹುಷಾರು’ ಅಂತ ದೊಡ್ಡ ಸಿರಿಂಜಲ್ಲಿ ಔಷಧಿ ತುಂಬಾ ತುಂಬಿಕೊಂಡು ಅಮ್ಮನ ತಿರುಗಿದ ಕೈಯ ಬೆರಳ ನರ ಹುಡುಕಿ ಹಿಡಿದು ಚುಚ್ಚಿದಾಗ ಅಮ್ಮ ಚಿಕ್ಕ ಮಕ್ಕಳಂತೆ ಮುಖ ಮಾಡಿ ಅತ್ತಳು. ಸುಮಾರು ಒಂದುವರೆ ನಿಮಿಷದ ವರೆಗೆ ಔಷಧಿ ಅಮ್ಮನ ದೇಹ ಪ್ರವೇಶಿಸಿತು.

ಪುನಃ ಎತ್ತಿಕೊಂಡೆ ಹೊರಬಂದು ಒಂದು ಕಟ್ಟೆ ಮೇಲೆ ಕೂರಿಸಿದೆವು. ಈಗ ಅಣ್ಣ ಅಕ್ಕ ಮತ್ತು ಸಿದ್ಲಿಂಗನ ಮನಸಲ್ಲಿ ಕೋಟಿ ಕೋಟಿ ಪ್ರಶ್ನೆ!

ಎಲ್ಲಿಗೇ ಪಯಣ

ಯಾವುದೋ ದಾರಿ.... ಹಾಡು ಸಿದ್ಲಿಂಗ ಮನಸಲ್ಲಿ ಬಂದು ಹೋಯಿತು!


ಇದ್ದದ್ದು ಅಕ್ಕನ ಮನೇಲಿ, ಆಗಿದ್ದು ಅಲ್ಲೇ ಮತ್ತೆ ಅಲ್ಲಿಗೇ ಕಳಿಸಲಾ? ಅಣ್ಣ ದೊಡ್ಡಮಗ ಈಗ ಅಮ್ಮ ಅವನ ಮನೆಗೆ ನಿರಾಕರಿಸಲಾರಳು ಕಳಿಸಲಾ? ಮೊದಲಿಂದ ನಮ್ಮನೆಲಿದ್ದು ಈಗ ಹೀಗಾದಾಗ ಬೇರೆ ಎಲ್ಲಿಗೆ ಕಳಿಸಲಿ? ದಾರಿ ಮೂರಿದ್ದವು. ಮನಸು ಒಂದಿರಲಿಲ್ಲ ಅನ್ನೋದು ಅಮ್ಮನಿಗೆ ಚೆನ್ನಾಗಿ ಗೊತ್ತಿತ್ತು. ಅಮ್ಮ ಮೂವರ ಮುಖ ನೋಡುತ್ತಾ ಕಣ್ಣ ನೀರು ಮೇಣದ ಹನಿಗಳಂತೆ ಉದುರಿಸುತ್ತಲೇ ಇದ್ದಳು.

ಅಕ್ಕನೇ ದಿನಗಳ ಇಂಜೆಕ್ಷನ್ ಮುಗಿಯೋತನಕ ನಮ್ಮನೇಲೇ ಇರಲಿ ಅಂದಳು. ತಿಂಗಳ ನಂತರ ಸೀದಾ ಬಂದಿದ್ದೇ ಸಿದ್ಲಿಂಗನ ಮನೆಗೆ! ಬೆಳಿಗ್ಗೆ ಹೇಗೋ ಸಿದ್ಲಿಂಗನೇ ಹಿತ್ತಲಿಗೊಯ್ದು ನೀರಕಡಿಗ್ ಕುಂರ‍್ಸಿ ತೊಳೆದು ಬ್ರಷ್ಷು ಮಾಡಿಸಿ ಮಕ ತೊಳೆಸಿ ಮತ್ತೆ ಮಂಚಕ್ಕ ಕರೆ ತಂದು ಮೇಕೆ ಹಾಲಿಗೆ ಆ ಪುಡಿ ಹಾಕಿ ಕುಡಿಸಿ ಬಾಯೊರೆಸಿ ಕೆಳಗ್ ಕೂತು ಮಂಡಿಯಿಂದ ಕಾಲು,ಕೈ ಗಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಮಕಕ್ಕೆ ಮಾತ್ರ ರುದ್ರವ್ವನೇ ಒಂದು ಕೈಯಿಂದ ತಾನೇ ತೀಡಿಕೊಳ್ಳುವಳು.

ಮದ್ಯಾಹ್ನದ ವೇಳೆ ಮಕ್ಕಳಿರಲ್ಲ, ಗಂಡ ಇರಲ್ಲ ಸಿದ್ಲಿಂಗನ ಹೆಂಡ್ತಿ ಎತ್ತಾಡೋದು ಸಾಕಾಗಿ ಗೋಳಾಡೋಳು. ಅದರ ಪಡಿಪಾಟಲು ನೋಡಲಾರದೆ ಒಮ್ಮೊಮ್ಮೆ ವ್ಯಾಪಾರ ಇದ್ರೂ ಮನೆಗೆ ಸಿದ್ಲಿಂಗ ಓಡೋಡಿ ಬರ‍್ತಿದ್ದ. ಒಮ್ಮೊಮ್ಮೆ ರಾತ್ರಿ ಪೂರಾ ಜಾಗರಣೆ ಮಾಡೋ ಹಾಗೆ ಅವ್ವನ್ನ ಕಾಯೋನು. ಸಿದ್ಲಿಂಗನ ಈ ಅವತಾರಕ್ಕೆ ರುದ್ರವ್ವ ಸದಾ ಕಣ್ಣೀರು ಹಾಕುವಳು.


ಸಿದ್ಲಿಂಗನೂ ಮನುಷ್ಯ. ಅವನಿಗೂ ಕೋಪ, ಬೇಸರ ಬರುತ್ತೆ. ಬಸಪ್ಪನ ವಯಸ್ಸೀಗ ಎಂಭತ್ತು ದಾಟಿದೆ. ಅವ್ವನ ಪರಿಸ್ಥಿತಿ ಅರಿಯದೇ ಮನೆಗೆ ಬಂದಾಗೆಲ್ಲಾ ಬಾಯಿಗೆ ಬಂದಂತೆ ಬೈಯೋದು, ‘ಆ ಮನೆಗೆ ಬಾರೆ ಇಲ್ಯಾಕ್ ಬಿದ್ದು ಸಾಯ್ತಿ, ನಾವೇ ಬೇರೆ ಅಡಿಗೆ ಮಾಡ್ಕಂಡ್ ತಿನ್ನಣ’ ಅಂತ ಎಳೆದಾಡೋದು ರುದ್ರವ್ವ ಚಿಟ್ಟನೆ ಚೀರಿ ಅಳೋದು. ಇದು ಸದಾ ನಡೆಯುವ ಹಳೆಯ ದಂಪತಿಗಳ ಹೋರಾಟದ ಬದುಕು!

ಸಂಜೆ ಬಂದಾಗ ಸಿದ್ಲಿಂಗನ ಎದುರು ತೊದಲು ನುಡಿಗಳಲ್ಲಿ ಅಪ್ಪ ಮಾಡಿದ್ ಹೇಳುವಾಗ ಕೆನ್ನೆ ತುಂಬಾ ಕಣ್ಣ ನೀರು. ಮೈ ಬೆಂಕಿ ಮಾಡಿಕೊಂಡು ಅಣ್ಣನ ಮನೆಗೆ ಹೋಗಿ ಅಪ್ಪನ್ನ ಗದರಿಸಿ ಕೇಳಿದ್ರೆ ‘ಇಲ್ಲಪ್ಪ ನಾ ನಿನ್ ಮನೆಗೆ ಬಂದಿಲ್ಲ, ನಿಮ್ಮೌವನ್ನ ನಾನ್ಯಾಕ್ ಬೈಲಿ’ ಅಂತ ಅಂದಾಗ ವಯಸಿನ ಅರಳುಮರಳು ಅಂತ ಬೇಜಾರು ಮಾಡ್ಕೊಂಡು ಬರೋನು.


ರುದ್ರವ್ವ ಊಟಕ್ಕೆ ,ಹಾಲಿಗೆ, ಮಾತ್ರೆಗೆ ಒಲ್ಲೆ ಅಂತ ಹಠ ಮಾಡಿದರೆ ಜೋರು ಮಾಡಿ, ಬೈದಾಡಿ ಕೈಲಿದ್ದ ತಟ್ಟೆ ಲೋಟ ನೆಲಕ್ ಒಗೆದು ಬಿಡುತ್ತಿದ್ದ. ಆ ಇಡೀ ದಿನ ತಾಯಿ ಮಗ ಇಬ್ರೂ ಉಪವಾಸ.

ಅವ್ವನ್ನ ಹೆಂಗೋ ಸಿದ್ಲಿಂಗ ಇತ್ತೀಚಿಗೆ ಸ್ವತಂತ್ರವಾಗಿ ನಡೆಯುವಷ್ಟು ದಾರಿಗೆ ತಂದಿದ್ದ. ಆದರೆ ಬಸಪ್ಪ ಬಂದು ಬಂದು ಇಂಥಾ ಹಿಂಸೆಯ ಮಾತಾಡಿ ರುದ್ರವ್ವನ ಅರ್ಧ ಶಕ್ತಿ ಕಸಿದು ಬಿಡೋ ಸುದ್ದಿ ಕೇಳಿ ಸಿದ್ಲಿಂಗ ಅಪ್ಪನ ಮೇಲೆ ಅಪ್ಪನಂಗೇ ಹಲ್ ಹಲ್ ಕಡಿತಿದ್ದ.

ಇವತ್ತು ಆಗಿದ್ದು ಅದೇ, ಬೆಳಿಗ್ಗೆ ಬಂದು ರುದ್ರವ್ವನ ಬೈದು, ಎಳೆದಾಡಿ ಹೋದ ಸುದ್ದಿ ಕೇಳಿ ಸಿದ್ಲಿಂಗ ಕುದ್ದು ಹೋಗಿದ್ದ. ಹೆಂಡತಿ ಮುದ್ದೆ ಸಾರು ತಟ್ಟಿಗಿಟ್ಕಂಡ್ ಬಂದ್ರೂ ಅಣ್ಣನ ಮನೆ ಕಡೆ ನಡೆದೇ ಬಿಟ್ಟ.

ಅಣ್ಣನ ಮನೆ ಬಾಗಿಲು ಅರ್ಧ ಮುಚ್ಚಿತ್ತು. ಚರಂಡಿ ಪಕ್ಕದ ಚಪ್ಪಡಿಗಳ ಮೇಲೆ ಚಪ್ಪಲಿ ಬಿಟ್ಟು ಮೈ ವಾರೆ ಮಾಡಿ ಒಳಗಡಿಯಿಟ್ಟ. ಅಣ್ಣನ ದನಿ ಜೋರಾಗಿ ಕೇಳ್ತಿತ್ತು ‘ನೀ ಮಾಡೋದೇನಿದೆ ? ಮೂರೊತ್ತು ಅರಾಮಾಗಿ ಉಂಡು ಶಿವ ಶಿವಾ ಅಂತ ಕುಂದ್ರಬಾರದ?ಬೀದಿಲಿರೋ ಬೇರೆ ಮುದುಕರು ಹಿಂಗೇ ಆಡ್ತಾರಾ, ದಿನಾ ಹೋಗಿ ಅವ್ವನ್ನ ಯಾಕ ಹಿಂಸೆ ಮಾಡ್ತಿಯಾ? ಏನಾರ ಹೇಳಿದ್ರೆ ಹೊಲಸು ಮಾತಾಡ್ತಿಯಾ, ಹಿರೇಮನುಷ್ಯ ನೀನು ನಮ್ ತಲೆಗಿರೋ ದೊಡ್ಡ ತಲೆ ಅಷ್ಟು ತಿಳಿಯಲ್ವ?

ಅವ್ವ ಅಂತೂ ನನ್ನ ಮನಿಗೆ ಬರಲ್ಲ, ನೀನಾದ್ರೂ ನಮ್ಮನೆಲಿದ್ದು ನಮ್ ಮರ್ಯಾದೆ ಕಾಪಾಡು. ಹಟ್ಟಿ ಜನ ನೋಡಪ್ಪ, ದೊಡ್ಡ ಮಗ ಅವ್ವ ಅಪ್ಪನ್ನ ಸಾಕಲಾರದೇ ಸಣ್ ಮಗನ್ ಮನೇಲಿ ಬಿಟ್ಟಾನೆ ಅಂತ ಆಡ್ಕಬೇಕಾ? ಥೂ ಇಂಥಾ ಬಾಳು ಯಾಕಪ್ಪ ಅಂತ ಕಣ್ಣೀರು ಹಾಕ್ತಿದ್ದ’

ಸಿದ್ಲಿಂಗ ಕಲ್ಲಾಗಿ ಅಲ್ಲೇ ನಿಂತ.

‘ನೀವೆಲ್ಲಾ ಒಂದೇ ಕಣ್ರೋ ನಾ ಒಬ್ಬ ಅನಾಥ, ಆ ಬೇವಾರ್ಸಿ ನಿಮ್ಮೌವ್ವ ಚಿಕ್ಕ ಮಗ, ಬಿಟ್ರೆ ಮಗಳ ಮನೆ ಅಂತ ಹೋಕ್ಕಾಳೆ, ಇದು ಅವಳ ಮನೆ ಅಲ್ವಾ? ಇಲ್ಲಿ ಬಿದ್ದು ಸಾಯಬೇಕು,ಗಂಡ ಏನಾದ? ಉಂಡ್ನಾ? ಉಪವಾಸನಾ? ನೋಡನ ಅನ್ನೋ ದರ್ದು ಬೇಡವಾ? ನಾಳೆ ಬೆಳಿಗ್ಗೆನೇ ಹೋಗಿ ಅವಳನ್ನು ಕರೆದುಕೊಂಡು ದೇಶಾಂತರ ಹೋಕ್ಕೀನಿ’.

ಬಾಯಲ್ಲಿದ್ದ ಕೆಂಪುರಸ ಉಗಿಯಕ್ಕೆ ಹೊರ ಬರೋದಕ್ಕೂ ನಿಂತ ಸಿದ್ಲಿಂಗನ್ನ ನೋಡೋದಕ್ಕೂ ಸರಿಯಾಯಿತು. ಉಗಿದು ಬಂದು ‘ಓ ಬಾರೋ ನಿಮ್ಮಣ್ಣ ಹೇಳಿ ಕಳಿಸಿದ್ನೇನೋ ಬಾ ಹೊಡಿಯಕ್ ಬಂದ್ಯಾ? ನೀವೆಲ್ಲಾ ಒಂದೇ, ಬಾ ಬಾ ಅವಳು ನೆಟ್ಟಗಿದ್ದಿದ್ರೆ ಇಷ್ಟೆಲ್ಲಾ ಆಗ್ತಿತ್ತಾ’

ಬಸಪ್ಪನ ದನಿ ಕೇಳಿ ಒಳಗಿದ್ದ ಅಣ್ಣ ಬಂದು ಸಿದ್ಲಿಂಗನ್ನು ‘ ಬಾರೋ ಒಳಗೆ ’ ಅಂದ.

‘ಏನ್ ಮಾಡನಣ್ಣ ತಲೆ ಕೆಟ್ಟ ಈ ಅಪ್ಪನ್ನ? ತಾನೂ ನೆಮ್ಮದಿಯಿಂದ ಇರಲ್ಲ, ಅವ್ವನ್ನು ಇರಕ್ ಬಿಡಲ್ಲ’

ಸಿದ್ಲಿಂಗ ತಲೆ ಮೇಲೆ ಕೈ ಹೊತ್ತ.

ನಂಗೂ ಅದೇ ಯೋಚನೆಯಾಗಿದೆಯಪ್ಪ, ಊರೇ ಬಿಟ್ಟು ಹೋಗೋಣ್ವ ಅಂತ ಅನ್ನಿಸಿದೆ. ಅಂದಾಗ ಒಳಗಿದ್ದ ಅತ್ತಿಗೆ ಕಾಪಿ ಲೋಟ ಮೈದುನನಿಗೆ ಕೊಟ್ಟು ‘ಏನೂ ತಲಿಗೆ ಹಚ್ಕಬೇಡಿ ವಯಸ್ಸಾದವರೆಲ್ಲ ಹಂಗೆಯ.... ಮಕ್ಳಿದ್ದಂಗೆ ಅವು. ಕೈಲಾದ ಸೇವೆ ಮಾಡಿ, ಕೆಟ್ಟ ಮಕ್ಕಳು ಅನ್ನಿಸ್ಕಬೇಡಿ. ನಮ್ಮ ಮಕ್ಳು ಹಂಗ್ ಮಾಡಿದ್ರೆ ಸಹಿಸ್ಕಳಲ್ವಾ... ನಮಗೂ ವಯಸ್ಸಾಗ್ತದೆ, ನಾವು ಇವರಷ್ಟು ವರ್ಷ ಬದುಕ್ತಿವೋ ಇಲ್ವೋ ಇದ್ದಷ್ಟು ದಿನ ಸೇವೆ ಮಾಡನ ನಡ್ರಿ’ ಅಂದಾಗ ಸಿದ್ಲಿಂಗ ಹೌದೆಂಬಂತೆ ಎದ್ದು ನಡೆದ.

ಕಟ್ಟೆ ಮೇಲಿದ್ದ ಬಸಪ್ಪ ‘ಉಂಡು ಹೋಗಂತೆ ಬಾರೋ’ ಅಂದಾಗ ಸಿದ್ಲಿಂಗನ ಕಣ್ಣಲ್ಲಿ ನೀರು ಬಂತು. ಅತ್ತಿಗೆಯ ಮಾತುಗಳನ್ನು ಮೆಲುಕು ಹಾಕ್ತಾ ಮನೆಗೆ ಬಂದ.

ಸಿದ್ಲಿಂಗನ ಹೆಂಡ್ತಿ ಮುದ್ದೆ ತುತ್ತು ಮಾಡಿ ಮಾಡಿ ತಟ್ಟಲಿದ್ದ ಸಾರೊಳಕ್ಕೆ ಹಾಕಿ ಅತ್ತೆಗೆ ಉಣ್ಣಲು ಕೊಡುತ್ತಿದ್ದಳು.

ಅವ್ವನ ಕಣ್ಣಲ್ಲಿ ನೀರಿತ್ತು

ಸಿದ್ಲಿಂಗ ನೋಡಿಯೂ ನೋಡದಂತೆ ಮೌನವಾಗಿ ಹಿತ್ತಲಿಗೆ ಹೋದ!
ಸಂತೆಬೆನ್ನೂರು ಫೈಜ್ನಟ್ರಾಜ್