Click here to Download MyLang App

ಸೇಡು - ಬರೆದವರು : ಅಚಲ ಬಾಪಟ್ | ಥ್ರಿಲ್ಲರ್

"Conjuring -The devil made me do it, ಮೂವಿ ನೋಡಿದೆ ಕಣೋ ನಿನ್ನೆ "ಎಂದ ಶ್ರೇಯಸ್

"ಸಕ್ಕತ್ ಭಯ ಆಗತ್ತೆ ಅಲ್ವೆನೋ, ಸೂಪರಾಗಿದೆ ಮೂವಿ" ಎಂದ ರಾಹುಲ್

"ಹೌದು ನನಗಂತೂ ರಾತ್ರಿ ಮಲಗಕ್ಕೆ ಹೆದ್ರಿಕೆಯಾಯ್ತು ಅಬ್ಬಾ!ಎಷ್ಟು ಭಯಾನಕವಾಗಿದೆ."ಎಂದ ಶ್ರೇಯಸ್

"ಹ್ಹ...ಹ್ಹಾ.. ಹಾ ...ಲೋ, ಏನ್ರೋ ಪುಕ್ಕಲು ನನ್ಮಕ್ಕಳ. ಮೂವಿಗೆಲ್ಲಾ ಹೆದರಕೊಳ್ಳುತ್ತೀರಾ? ಭೂತ ಅನ್ನೋದೇ ಸುಳ್ಳು .ಇನ್ನು ಮೂವಿಯಲ್ಲಿ ಅದನ್ನ ನೋಡಿ ಇಟ್ಕೊಂಡಿದ್ದೀರಲ್ಲ ,ಏನ್ ಹೇಳಬೇಕು ನಿಮಗೆ ?"ಎಂದ ಅಮೋಘ

"ಇಲ್ಲ ನಿನಗೆ ಗೊತ್ತಿಲ್ಲ, ನಮ್ಮಜ್ಜಿ ಎಷ್ಟೊಂದು ಭೂತಗಳ ಕಥೆ ಹೇಳ್ತಾ ಇದ್ರು ಗೊತ್ತಾ ? ನಿಜ ಭೂತಗಳು ಇರುತ್ತವಂತೆ. "ಎಂದ ಶ್ರೇಯಸ್

"ಏನು ಭೂತ ಇರುತ್ತಾ? ಅದನ್ನ ನೋಡ್ದೋರು ಯಾರು? ನೀನೇನೋ ನೋಡಿದಿಯಾ? ಇದೆಲ್ಲಾ ನಮ್ಮ ಮನಸ್ಸಿನ ಭ್ರಮೆ ಅಷ್ಟೆ. "ಎಂದ ಅಮೋಘ

"ಇಲ್ಲ ಅಮೋಘ ,ನನ್ನ ಪ್ರಕಾರ ಹೇಗೆ ಧನಾತ್ಮಕ ಶಕ್ತಿ ಇರುತ್ತದೆಯೋ,ಅದೇ ರೀತಿ ಋಣಾತ್ಮಕ ಶಕ್ತಿಗಳು ಕೂಡ ಇರುತ್ತೆ. ದೇವ್ರು ಇರೋ ಥರಾನೇ ದೆವ್ವಗಳು ಕೂಡ. ಇದು ನನ್ನ ನಂಬಿಕೆ "ಎಂದ ರಾಹುಲ್ ಗಂಭೀರವಾಗಿ.

"ನೀವು ಯಾವ ಕಾಲದಲ್ಲಿ ಇದ್ದೀರೋ ?ವಿಜ್ಞಾನ ಇಷ್ಟು ಮುಂದುವರಿದಿದೆ. ಇನ್ನೂ ಭೂತ- ಗೀತ ಅಂದುಕೊಂಡು ಕೂತಿದೀರಲ್ಲ. ಒಮ್ಮೆ ಅದನ್ನು ತೋರಿಸಿ ಆಗ ನಾನು ನಂಬ್ತೀನಿ"ಅಂದ ಅಮೋಘ

"ಏಯ್ ಹಂಗೆಲ್ಲ ಹೇಳ್ಬಿಡೋ ನಿಜಾನೆ ಎದುರುಗಡೆ ಬಂದ್ಬಿಡುತ್ತೆ. "ಅಂದ ಶ್ರೇಯಸ್

"ಲೋ ಪುಕ್ಕಲ,ಹೆದರ್ಕೋ ಬೇಡ" ಎಂದ ಅಮೋಘ ನಗುತ್ತಾ

"ಈಗೇನು ನೀನು ಭೂತಗಳನ್ನು ನಂಬುವುದಿಲ್ಲ ಅಲ್ವಾ ? ಹಾಗಾದ್ರೆ ನಾಳೆ ರಾತ್ರಿ , ಸುಮಾರು ವರ್ಷದಿಂದ ಪಾಳು ಬಿದ್ದಿರುವ ಹಳೆ ಬಂಗ್ಲೆ ಇದೆಯಲ್ಲಾ? ಅಲ್ಲಿಗೆ ಒಬ್ನೇ ಹೋಗ್ತೀಯಾ ?"ಎಂದು ಪ್ರಶ್ನಿಸಿದ ರಾಹುಲ್

"ಓ ಖಂಡಿತ ಹೋಗ್ತಿನಿ. ಆದರೆ ನಾನು ಹೋಗಿದ್ದೀನೋ ಇಲ್ಲವೋ, ಅಲ್ಲಿ ಭೂತ ಇದ್ಯೋ ಇಲ್ವೋ, ಅಂತ ನೋಡಲಿಕ್ಕೆ ನೀವೂ ನನ್ನ ಜೊತೆ ಬರಬೇಕು." ಎಂದ ಅಮೋಘ

"ಸರಿ ನಾವು ನಿನ್ನ ಜೊತೆ ಬರ್ತೀವಿ. ಅಲ್ವೆನೋ ಶ್ರೇಯಸ್" ಅಂದ ರಾಹುಲ್

"ನೀವೇನಾದ್ರೂ ಮಾಡ್ಕೊಳಿ, ನಾನಂತೂ ಬರಲ್ಲ ಭಯ ಆಗತ್ತೆ" ಎಂದ ಶ್ರೇಯಸ್.

ಅಂತೂ ಮೂರೂ ಜನ ಸ್ನೇಹಿತರು ಮಾರನೆಯ ದಿನ ರಾತ್ರೆ ಊರಿನ ಸ್ವಲ್ಪ ಹೊರಗಿದ್ದ ಸುಮಾರು ವರ್ಷದಿಂದ ಪಾಳುಬಿದ್ದ ಬಂಗಲೆಗೆ ಹೋಗುವುದೆಂದು ನಿರ್ಧರಿಸಿದ್ದರು. ಹೋಗಲು ಸ್ವಲ್ಪವೂ ಮನಸ್ಸಿಲ್ಲದಿದ್ದ ಶ್ರೇಯಸ್ ನನ್ನು ಒತ್ತಾಯಪೂರ್ವಕವಾಗಿ ಎಳೆದುಕೊಂಡು ಹೊರಟರು ರಾಹುಲ್ ಹಾಗೂ ಅಮೋಘ.

ಮನೆಯವರ ಕಣ್ಣುತಪ್ಪಿಸಿ ಹೊರಟ ಸ್ನೇಹಿತರು ಪಾಳು ಬಂಗಲೆ ಬಳಿ ತಲುಪಿದರು. ಮನೆಯ ಮುಖ್ಯದ್ವಾರ ತಳ್ಳಿದ ಕೂಡಲೇ ತೆರೆದುಕೊಂಡಿತು. ಒಳಗೆ ಕತ್ತಲು.ಮುಖಕ್ಕೆ ತಾಗುವ ಜೇಡರ ಬಲೆ. ಅಲ್ಲಲ್ಲಿ ಜೋತುಬಿದ್ದ ಬಾವಲಿಗಳು, ಮುರುಕು ಕಿಟಕಿ, ಕೀ.... ಎನ್ನುವ ಬಾಗಿಲುಗಳ ಸದ್ದು. ತಾವು ತಂದ ಟಾರ್ಚ್ ಸಹಾಯದಿಂದ ಮನೆಯ ಒಂದೊಂದೇ ಕೋಣೆಗಳನ್ನು ಪ್ರವೇಶಿಸಿದರು ಸ್ನೇಹಿತರು.

ಮನೆಯ ದೊಡ್ಡ ಪಡೆಸಾಲೆಯಲ್ಲಿ ಮುರಿದು ಬಿದ್ದ ಸೋಫಾ, ಧೂಳು ಮೆತ್ತಿರುವ ಹಳೆಯ ವರ್ಣಚಿತ್ರ , ಒಂದಾನೊಂದು ಕಾಲದ ಫ್ಯಾನ್, ಒಂದೊಮ್ಮೆ ಈ ಮನೆಯೂ ಬದುಕಿ ಬಾಳಿತ್ತು ಎಂಬುದಕ್ಕೆ ಸಾಕ್ಷಿಯಾಗಿತ್ತು.

ಒಂದೊಂದೇ ಕೋಣೆಗಳನ್ನು ನೋಡುತ್ತಾ ಹೊರಟ ಸ್ನೇಹಿತರಿಗೆ ಧೈರ್ಯ ಹೆಚ್ಚಾಯಿತು.

"ನೋಡ್ರೋ ನಾನು ಹೇಳಿರ್ಲಿಲ್ವಾ ಭೂತ- ಗೀತ ಎಲ್ಲ ಬರೀ ಸುಳ್ಳು. ಅದು ನಮ್ಮ ಮನದ ಭಾವನೆ ಅಷ್ಟೆ ನೋಡಿ ಇಡೀ ಮನೆ ನೋಡಿಯಾಯ್ತು ಎಲ್ಲಾದ್ರೂ ಏನಾದರೂ ಸಿಕ್ತಾ?" ಎಂದ ಅಮೋಘ

"ಆಯ್ತು ಬಿಡು, ನಮಗೂ ಒoದು ಅನುಭವ ಆದ ಹಾಗಾಯ್ತು. ಇನ್ನು ಒoದು ರೂಮ್ ಬಾಕಿ ಇದೆ. ಅಲ್ಲಿ ನೋಡಿಕೊಂಡು ಹೊರಟು ಬಿಡೋಣ." ಎಂದ ರಾಹುಲ್

"ಬೇಡ ಬಿಡ್ರೋ, ಸಾಕಾಯ್ತು. ನನಗಂತೂ ಹೆಜ್ಜೆಹೆಜ್ಜೆಗೂ ಭಯ. ಈ ಧೂಳು ತುಂಬಿರುವ ಮನೆ, ಜೇಡರಬಲೆ ಮುಖಕ್ಕೆ ತಾಗುವ ಬಾವಲಿಗಳು. ಸಾಕು ಇನ್ನು ಹೋಗೋಣ." ಎಂದ ಶ್ರೇಯಸ್

"ಬನ್ನಿ, ಬನ್ನಿ ಆ ರೂಮನ್ನೂ ನೋಡಿಬಿಡೋಣ"ಎಂದ ಅಮೋಘ

ಅಮೋಘನ ಮುಂದಾಳತ್ವದಲ್ಲಿ ಕೊನೆಯ ರೂಮನ್ನು ಹೊಕ್ಕರು ಸ್ನೇಹಿತರು. ವಿಶಾಲವಾದ ಕೊಠಡಿ. ಮುರಿದುಬಿದ್ದ ಮಂಚ. ಮತ್ತದೇ ಧೂಳು ತುಂಬಿದ ಫ್ಯಾನ್. ಒoದುಮೇಜು ಹಾಗೂ ಆರಾಮ ಕುರ್ಚಿ.

"ಲೋ ಆ ಚೇರ್ ನೋಡ್ರೋ ಅಲುಗಾಡುತ್ತಾ ಇದೆ. ನನಗಂತೂ ಭಯ ಆಗ್ತಾ ಇದೆ ಬನ್ನಿ ಹೋಗೋಣ" ಎಂದ ಶ್ರೇಯಸ್

"ಅದು ಗಾಳಿಗೆ ಅಲ್ಲಾಡುತ್ತ ಇರೋದು ಸುಮ್ನೆ ಹೆದರಬೇಡ "ಎಂದ ಅಮೋಘ

ಅಮೋಘ ಅಷ್ಟು ಹೇಳಿ ಬಾಯಿ ಮುಚ್ಚುವ ಮೊದಲೇ ಕುರ್ಚಿ ಜೋರಾಗಿ ಅಲುಗಾಡಲು ಶುರುವಾಯಿತು.ಯಾರೋ ಆ ಕುರ್ಚಿಯಲ್ಲಿ ಕೂತು ತೂಗುತ್ತಿರುವ ಹಾಗಿತ್ತು.

"ಯಾರು? ಯಾರಿದ್ದೀರಿ? ಕುರ್ಚಿಯ ಮೇಲೆ"ಎಂದು ಪ್ರಶ್ನಿಸಿದ ಅಮೋಘ

"ಬೇಡ ಬನ್ನಿ ಹೋಗೋಣ. ದಯವಿಟ್ಟು ಬನ್ನಿ, ಎಂಬ ಶ್ರೇಯಸ್ ನ ಮಾತು ಕೇಳುವ ಪರಿಸ್ಥಿತಿಯಲ್ಲಿ ಉಳಿದ ಇಬ್ಬರು ಇರಲಿಲ್ಲ.

"ನಾನು ......ಸೌಗಂಧ ......"ಎನ್ನುವ ಧ್ವನಿ ಇವರಿಗೆ ಬೆನ್ನು ಮಾಡಿದ್ದ ಕುರ್ಚಿಯ ಕಡೆಯಿಂದ ಬಂದಿತು.
ಒಂದೇ ಸಾರಿಗೆ ಸ್ನೇಹಿತರ ಕಡೆ ಮುಖ ಮಾಡಿದ ಕುರ್ಚಿಯಲ್ಲಿ ಬಿಳಿಯ ಆಕೃತಿಯೊಂದು ಕೈಯಲ್ಲಿ ಮಗು ಹಿಡಿದಂತೆ ಕುಳಿತಿತ್ತು.

ಶ್ರೇಯಸ್ ಅದನ್ನು ನೋಡಿ ಭಯದಿಂದ ನಡುಗತೊಡಗಿತು.ಅಮೋಘ ಹಾಗೂ ರಾಹುಲ್ ಮನದಲ್ಲೂ ಭಯದ ಕಂಪನ.ಆದರೂ ಸೋಲು ಒಪ್ಪಿಕೊಳ್ಳಬಾರದೆಂಬ ಅಮೋಘನ ಹಠ.

"ಯಾರು...,?ಯಾರು ನೀವು ?ಇಲ್ಲೇನು ಮಾಡುತ್ತಿದ್ದೀರಿ?" ಎಂದ ಅಮೋಘ

"ಹ್ಹ.... ಹ್ಹ .....ಹಾ...ಈ ಮನೆ ನನ್ನದು. ನೀವ್ಯಾರು? ಇಲ್ಲಿಗೇಕೆ ಬಂದಿರಿ? "ಎಂದು ಆಕೃತಿ ಪ್ರಶ್ನಿಸಿತು

"ಆಯ್ತು ನಾವಿಲ್ಲಿಂದ ಹೊರಡುತ್ತೇವೆ,ನೀವು ಯಾವಾಗಲೂ ಇಲ್ಲೇ ಇರುವುದಾ?"ಎಂದು ಪ್ರಶ್ನಿಸಿದ ರಾಹುಲ್

" ಹೌದು ಇದು ನನ್ನ ಮನೆ. ನಾ ಬದುಕಿದ ಮನೆ.ನಾ ಸತ್ತ ಮನೆ.ನನ್ನ ಸರ್ವಸ್ವವನ್ನೂ ಕಳೆದುಕೊಂಡ ಮನೆ.ನನ್ನ ಮುದ್ದು..... ಕಂದನನ್ನು ಸಾಯಿಸಿದ ಮನೆ " ಎಂದು ಆಕೃತಿ ಹೇಳುವಾಗ ಧ್ವನಿ ದುಃಖಭರಿತ ವಾಗಿತ್ತು.

ಇದನ್ನು ಕೇಳುತ್ತಿದ್ದಂತೆಯೇ ಅಮೋಘ ಹಾಗೂ ರಾಹುಲ್ ನಲ್ಲಿ ಕಥೆ ಕೇಳುವ ಉತ್ಸಾಹ ಹೆಚ್ಚಾಯಿತು.ಬೇಡ ಬೇಡ ಎಂದು ಹೇಳುತ್ತಿದ್ದ ಶ್ರೇಯಸ್ ನನ್ನು ಗಣನೆಗೆ ತೆಗೆದುಕೊಳ್ಳದೆ ಇಬ್ಬರು ಧೈರ್ಯ ಮಾಡಿ ಕೇಳಿಯೇ ಬಿಟ್ಟರು,

"ಯಾಕೆ ಏನಾಯ್ತು? ಏನು ನಿಮ್ಮ ಕಥೆ? "

"ನನ್ನ ಕಥೆ .....ನನ್ನ ಕಥೆ ಕೇಳೋ ಧೈರ್ಯ ನಿಮ್ಮಲ್ಲಿದೆಯಾ?, ಏ ಹುಡುಗ ನೀನು, ನೀನು ನನ್ನ ಕಥೆ ಕೇಳುತ್ತೀಯಾ ?ಎಂದು ಅಮೋಘ ನನ್ನು ಪ್ರಶ್ನಿಸಿತು ಆಕೃತಿ.

"ಹೇಳಿ ಕೇಳೋಣ, ನಿಮ್ಮದೇನು ಕಥೆಯೆಂದು "ಎಂದ ಅಮೋಘ

" ನನ್ನದೊಂದು ಚೆಂದದ ಸಂಸಾರವಿತ್ತು. ಪ್ರೀತಿಸುವ ಗಂಡ.ಬೇಕಾದಷ್ಟು ಶ್ರೀಮಂತಿಕೆ.ಜೊತೆಗೆ ನಾನು ತಾಯಿಯಾಗುವ ಸಂಭ್ರಮದಲ್ಲಿದ್ದೆ... ಆದರೆ
ಆ ದಿನ... ಆ ಕರಾಳ ದಿನ. ಹೇಗೆ ಮರೆಯಲಿ?ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಯ ಸಮಯ. ಮನೆಯಲ್ಲಿ ಯಾರೂ ಇರಲಿಲ್ಲ. ಅತ್ತೆ ನೆಂಟರ ಮನೆಗೆ ಹೋಗಿದ್ದರು.ಪತಿ ಕೆಲಸಕ್ಕೆ ಹೋಗಿದ್ದರು. ನಾನು ಅಡುಗೆಯ ತಯಾರಿಯಲ್ಲಿದ್ದೆ. ಕರೆಗಂಟೆ ಸದ್ದಾಯಿತು.ಹೋಗಿ ನೋಡಿದರೆ ನನ್ನ ಮೈದುನ, ತನ್ನ ಸ್ನೇಹಿತರೊಡನೆ ನಿಂತಿದ್ದರು. ನಾನು ಅವರನ್ನು ಆದರದಿಂದ ಬರಮಾಡಿಕೊಂಡೆ. ಅವರಿಗೆ ಪಾನಕ ತರಲು ಅಡುಗೆ ಮನೆಗೆ ಹೋದೆ. ಹಿಂದಿನಿಂದ ಕೈಗಳು ನನ್ನನ್ನು ಬಳಸಿ ಹಿಡಿದಂತಾಯಿತು. ಭಯಗೊಂಡು ಒಮ್ಮೆಲೆ ತಿರುಗಿದೆ. ನೋಡಿದರೆ ನನ್ನ ಮೈದುನ. ಎಂದೂ ಈ ರೀತಿ ನಡೆದುಕೊಳ್ಳದ ಅವರ ವರ್ತನೆಗೆ ಭಯವಾಯಿತು. ನಾನು ಮುಂದೇನು ಮಾತನಾಡುವ ಮೊದಲೇ,ನನ್ನ ಬಾಯನ್ನು ಮುಚ್ಚಿದ ಅವರು,ನನ್ನನ್ನು ಎಳೆದುಕೊಂಡು, ಇದೇ ಕೋಣೆ.... ಈ ಕೋಣೆಗೆ ಬಂದರು.ಅಲ್ಲಿ ಅವರ ಸ್ನೇಹಿತರಿದ್ದರು.ಇಬ್ಬರೂ ಸೇರಿ ನನ್ನ ಮೇಲೆ ...........ಏನು? ಎತ್ತ ?ಎಂದು ತಿಳಿಯುವ ಮೊದಲೇ ಎಲ್ಲ ನಡೆದುಹೋಗಿತ್ತು.

ಈಗ ಶುರುವಾಯ್ತು ಅವರ ವಿಕೃತಿ. ನನ್ನ ತುಂಬು ಹೊಟ್ಟೆಗೆ ಕಾಲಿನಿಂದ ಜೋರಾಗಿ ಒದೆಯ ತೊಡಗಿದರು.ನನ್ನೆಲ್ಲಾ ಕಷ್ಟದಲ್ಲೂ ನನ್ನೊಳಗಿನ ತಾಯಿ ಜಾಗೃತಳಾದಳು. ತನ್ನ ಮೈದುನನ ಕಾಲುಹಿಡಿದೆ.ದಯವಿಟ್ಟು ನನಗೆ ಜೀವಿಸುವ ಅವಕಾಶ ಕೊಡು.ನನ್ನ ಮಗುವಿಗೆ ಏನು ಮಾಡಬೇಡ.ನಾನು ವಿಷಯ ಯಾರಲ್ಲೂ ಹೇಳುವುದಿಲ್ಲ. ಇಲ್ಲಿಂದ ದೂರ ಹೊರಟು ಹೋಗುತ್ತೇನೆ .ದಯವಿಟ್ಟು ನಮ್ಮನ್ನು ಬಿಟ್ಟು ಬಿಡು.ಎಂದು ಬೇಡಿಕೊಂಡೆ.
ನನ್ನದೋ ಅರಣ್ಯರೋದನ.ಕೇಳುವ ಕಿವಿಗಳು ಕಿವುಡಾಗಿತ್ತು.ಅವರಿಬ್ಬರೂ ನೀಡುತ್ತಿದ್ದ ಪ್ರತಿ ಹೊಡೆತವೂ ನನ್ನ ಗರ್ಭಕ್ಕಲ್ಲ ನನ್ನ ಮನಕ್ಕೆ ತಾಗುತ್ತಿತ್ತು.ನನ್ನ ಕಂದನ ಮೂಕ ರೋದನ ನನ್ನನ್ನು ತಟ್ಟುತ್ತಿತ್ತು.ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ.

ಅಂತೂ ಅವರ ಏಟುಗಳನ್ನು ತಾಳಲಾರದೆ ನನ್ನ ಮಗು ಹೊಟ್ಟೆಯಲ್ಲಿ ತೀರಿಕೊಂಡಿತು. ಆ ವೇದನೆಯಲ್ಲಿ ಬಳಲುತ್ತಿದ್ದ ನನ್ನನ್ನು ಚಾಕುವಿನಿಂದ ತಿವಿದು ಕೊಂದರು.ವೇದನೆ, ನೋವು,ಅಯ್ಯೋ! ತಡಿಯಲಾರೆ,ನೀರು! ನೀರು!ಎಂದು ಕೂಗುತ್ತಲೇ ಪ್ರಾಣ ಬಿಟ್ಟೆ.

ಹೆಂಡತಿಯ ಮಗುವಿನ ಪ್ರಾಣಕ್ಕಿಂತ ಮನೆಯ ಮರ್ಯಾದೆ ಮುಖ್ಯ ಎಂದು ನನ್ನ ಪತಿ ಹಾಗೂ ಅತ್ತೆ ವಿಷಯವನ್ನು ಅಲ್ಲೇ ಮುಚ್ಚಿಬಿಟ್ಟರು.ಯಾರೋ ಹೊರಗಿನವರ ಕೃತ್ಯ ಎಂದು ಬಿಂಬಿಸಲಾಯಿತು." ಎಂದು ತನ್ನ ಕಥೆ ಮುಗಿಸಿತ್ತು ಆಕೃತಿ

ಕಥೆ ಕೇಳುತ್ತಿದ್ದ ಶ್ರೇಯಸ್ ಹಾಗೂ ರಾಹುಲ್ ಕಣ್ಣುಗಳು ತುಂಬಿ ಬಂದವು.

"ಹಾಗಾದರೆ ನೀವು ನಿಮ್ಮ ಸೇಡು ತೀರಿಸಿಕೊಳ್ಳಲಿಲ್ಲವೇ ?ಅವರನ್ನು ಬಿಟ್ಟು ಬಿಟ್ಟಿರಾ?" ಎಂದ ರಾಹುಲ್

"ಅವರನ್ನು ಬಿಡುವುದಾ.....ಸಾಧ್ಯವೇ ಇಲ್ಲ .ಅದಕ್ಕಾಗಿ ತಾನೇ ನನ್ನ ಈ ರೂಪ. ನನ್ನ ಗಂಡ,ಅತ್ತೆ, ಮೈದುನ ಇವರೆಲ್ಲರೂ ಪ್ರಯಾಣಿಸುತ್ತಿದ್ದ ಕಾರನ್ನು ಅಪಘಾತ ಮಾಡಿಸಿದೆ. ಅಲ್ಲೇ ....ಅಲ್ಲೇ....ವಿಲವಿಲನೆ ಒದ್ದಾಡಿ ಸತ್ತರು.ಮೂರೂ ಜನ. ಹ್ಹ ...ಹ್ಹ...ಹ್ಹಾ....."ಎಂದಿತು ಆಕೃತಿ

"ಮತ್ತೆ ಆ ನಿನ್ನ ಮೈದುನನ ಸ್ನೇಹಿತ?"ಎಂದು ಪ್ರಶ್ನಿಸಿದ ಅಮೋಘ

"ಆ ವಿಕೃತ ವ್ಯಕ್ತಿಯನ್ನ ಆತ್ಮಹತ್ಯೆ ಮಾಡಲು ಪ್ರಚೋದಿಸಿದೆ. ಸತ್ತ ಪಾಪಿ! "ಎಂದಿತು ಆಕೃತಿ

"ಅಲ್ಲಿಗೆ ಎಲ್ಲರನ್ನು ಮುಗಿಸಿದ ತೃಪ್ತಿ ಅಲ್ಲವೇ ? ಮತ್ತೇಕೆ ಇನ್ನೂ ಇಲ್ಲೇ ಇದ್ದೀರಾ?"ಎಂದು ಪ್ರಶ್ನಿಸಿದ ರಾಹುಲ್

"ನನಗೇನು ಈ ರೂಪದ ಆಕರ್ಷಣೆ ಇಲ್ಲ.ಮುಕ್ತಿಯು ಇಲ್ಲದ ಪುನರ್ಜನ್ಮವೂ ಅಲ್ಲದ ಅತಂತ್ರ ಪರಿಸ್ಥಿತಿ. ನಾನೇನು ಮಾಡಲಿ? ಬೇರೆ ದಾರಿ ಕಾಣದೆ ಹೀಗೆ ಇದ್ದೀನೆ. ಇನ್ನೊಂದು ಕೆಲಸ ಬಾಕಿ ಉಂಟು. ಅದನ್ನು ಮುಗಿಸಿದ ಕೂಡಲೇ ಹೊರಟು ಬಿಡುತ್ತೇನೆ".ಎನ್ನುತ್ತಾ ಆಕೃತಿ ತಾನು ಕುಳಿತಿದ್ದ ಕುರ್ಚಿಯನ್ನು ಜೋರಾಗಿ ತೂಗತೊಡಗಿತು.ಒಮ್ಮೆಲೇ ಅವರು ನಿಂತ ಕೋಣೆಯ ಬಾಗಿಲು ಹಾಕಿಕೊಂಡಿತು.ಇಷ್ಟು ಹೊತ್ತಿನ ತನಕವೂ ಕಾಣದಿದ್ದ ಕಣ್ಣು, ಕೆಂಪಿನ ಬೆಂಕಿಯುಂಡೆಯಂತೆ ಕಾಣತೊಡಗಿತು. ಹ್ಹ..ಹ್ಹ...ಹ್ಹಾ...ಎಂದು ಜೋರಾಗಿ ನಗತೊಡಗಿತು.

"ಏಕೆ ಏನಾಯ್ತು !?"ಎಂದು ನಡುಗುತ್ತಲೇ ಕೇಳಿದ ರಾಹುಲ್


"ಇವನು...., ಈ ನಿಮ್ಮ ಸ್ನೇಹಿತನನ್ನು ಸಾಯಿಸಬೇಕು" ಎಂದು ಅಮೋಘನ ಬಳಿಬಂದು ನಿಂತಿತು ಆಕೃತಿ.

"ಅಯ್ಯೋ ದಯವಿಟ್ಟು ನನ್ನ ಬಿಟ್ಬಿಡಿ. ನಾನೇನು ಮಾಡಿದ್ದೇನೆ ?ಎಂದು ಅಂಗಲಾಚತೊಡಗಿದ ಅಮೋಘ

"ಹೀಗೆ....... .ಹೀಗೆ.... ಬೇಡಿದ್ದೆ ಅಂದು ನಾನು. ಯಾರೂ ನನ್ನ ಮಾತು ಕೇಳಲಿಲ್ಲ.ನನ್ನ ಮಗುವನ್ನು ಕೊಂದೇಬಿಟ್ಟರಲ್ಲಾ? ಅವರ ಮಗನನ್ನು ಸುಮ್ನೆ ಬಿಡ್ತೀನಾ ......?."

"ಏನು ಹೇಳ್ತಾ ಇದ್ದೀರಾ? ಅಮೋಘ ನಿಮಗೇನು ಮಾಡಿದ್ದಾನೆ? ದಯವಿಟ್ಟು ಅವನಿಗೆ ತೊಂದರೆ ಕೊಡಬೇಡಿ." ಎಂದು ರಾಹುಲ್ ಅಂಗಲಾಚಿದ

"ಅಮೋಘನ ತಂದೆಯೇ ಆ ನನ್ನ ಮೈದುನನ ಸ್ನೇಹಿತ" ಎಂದಿತು ಆಕೃತಿ

ಗಾಬರಿಯಿಂದ ನಡುಗುತ್ತ ನಿಂತಿದ್ದ ಅಮೋಘನಿಗೆ ಮಾತೇ ಹೊಳೆಯಲಿಲ್ಲ.

"ತಂದೆ ಮಾಡಿದ ತಪ್ಪಿಗೆ ಮಗನಿಗೇಕೆ ಶಿಕ್ಷೆ. ದಯವಿಟ್ಟು ಅವನನ್ನು ಬಿಟ್ಟುಬಿಡಿ."ಎಂದು ಮತ್ತೊಮ್ಮೆ ಬೇಡಿಕೊಂಡರು ಶ್ರೇಯಸ್ ಹಾಗೂ ರಾಹುಲ್

"ಖಂಡಿತ ಇಲ್ಲ. ನನ್ನ ಮಗುವನ್ನ ಕೊಂದವರ ಮಗನನ್ನ ಕೊಲ್ಲದಿದ್ದರೆ ನನಗೆ ತೃಪ್ತಿಯೇ ಇಲ್ಲ." ಎನ್ನುತ್ತಾ
ಅಮೋಘ ನನ್ನು ಲೀಲಾಜಾಲವಾಗಿ ಎತ್ತಿದ ಆಕೃತಿ ಅವನ ರುಂಡವನ್ನು ಬಾಟಲಿಯ ಮುಚ್ಚಳ ದಂತೆ ತಿರುಗಿಸಿ ನೆಲಕ್ಕೆ ಬಿಸಾಡಿತು.ಮುಂಡವನ್ನು ಕೈಯಲ್ಲಿ ಹಿಡಿದು ಗಟಗಟ ರಕ್ತವನ್ನು ಕುಡಿಯಿತು.

"ಅಯ್ಯೋ! ಭಯಾನಕ! "ಎನ್ನುತ್ತಾ ಶ್ರೇಯಸ್ ತಲೆ ತಿರುಗಿ ಬಿದ್ದ.

ರಾಹುಲ್ ಇದ್ದಬದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ ಅರ್ಧ ಕಣ್ಣಿನಿಂದಲೇ ಆಕೃತಿಯ ಆಟಗಳನ್ನೆಲ್ಲಾ ನೋಡುತ್ತಿದ್ದ.

ಅಮೋಘನ ಮುಂಡದಿಂದ ರಕ್ತವನ್ನೆಲ್ಲ ಹೀರಿದ ಆಕೃತಿಯ ಮುಖ ನಿಧಾನವಾಗಿ ರೌದ್ರತೆಯಿಂದ ಶಾಂತತೆಯ ಕಡೆಗೆ ತಿರುಗಿತು. ಅಮೋಘನ ಮುಂಡವನ್ನು ನೆಲಕ್ಕೆ ಬಿಸಾಡಿದ ಆಕೃತಿ. ಸಂಪೂರ್ಣ ಶಾಂತ ಮುದ್ರೆಯನ್ನು ಧರಿಸಿ ನೋಡ ನೋಡುತ್ತಿದ್ದಂತೆಯೇ ಅನಂತದಲ್ಲಿ ಲೀನವಾಗಿ ಹೋಯಿತು.

**********************
.