Click here to Download MyLang App

ಸೂರ್ಯಪ್ರಭೆ - ಬರೆದವರು : ವಿಷ್ಣು ಭಟ್ ಹೊಸಮನೆ | ಸಾಮಾಜಿಕ

ಮಧುಬಾಹುವಿನ ಕಳೇಬರವನ್ನು ಅವನ ಮನೆಯಂಗಳದಲ್ಲಿಳಿಸುವಾಗ ಮನೆಯ ಕದ ಹಾಕಿತ್ತು. ಸೇನಾಳುಗಳು ಮಧುಬಾಹುವಿನ ಹೆಂಡತಿ ಸೂರ್ಯಪ್ರಭೆಯನ್ನು ಕೂಗಿ ಕರೆದರು. ಎಷ್ಟು ಕರೆದರೂ ಉತ್ತರ ಬಾರದಿದ್ದಾಗ ಅಲ್ಲಿಯೇ ಆತನ ಶವವನ್ನು ಬಿಟ್ಟು ಹೊರಟುಹೋದರು.

ಸೂರ್ಯಪ್ರಭೆ ಗಂಡನ ಯೋಚನೆಯಲ್ಲಿಯೇ ಊರ ಕೆರೆಯಲ್ಲಿ ಅರಸನ ಬಟ್ಟೆಗಳನ್ನೆಲ್ಲ ತೊಳೆದು-ಹಿಂಡಿ, ಎಲ್ಲ ಬಟ್ಟೆಗಳನ್ನು ಸೇರಿಸಿ, ಗಂಟುಕಟ್ಟಿ ತಲೆಯ ಮೇಲಿಟ್ಟುಕೊಂಡು ಮನೆಯಂಗಳಕ್ಕೆ ಕಾಲಿಡುತ್ತಿದ್ದಂತೆ ರಕ್ತಸಿಕ್ತವಾಗಿ ಬಿದ್ದಿದ್ದ ಗಂಡನ ಶವವನ್ನು ನೋಡಿ ಕಂಗಾಲಾಗಿ ಹೋದಳು. ಬಟ್ಟೆಯಗಂಟನ್ನು ಅಲ್ಲಿಯೇ ಬಿಸಾಡಿ ಓಡಿಬಂದು ಗಂಡನನ್ನು ಕರೆಯುತ್ತ್ತ ಆತನ ಹೆಣದ ಮೇಲೆ ಬಿದ್ದು ಉರುಳಾಡಿದಳು. ಅತ್ತಳು, ಕಿರುಚಿಕೊಂಡಳು ಇಲ್ಲ ಹತ್ತಿರದಲ್ಲೆಲ್ಲೂ ಯಾವುದೇ ಮನೆಗಳಿಲ್ಲದ ಕಾರಣ ಯಾರಿಗೂ ಇವಳ ಅಳು ಕೇಳಿಸಲಿಲ್ಲ; ಮಧುಬಾಹುವಿನ ಕಿವಿಗಪ್ಪಳಿಸುತ್ತಿತಾದರೂ ಶವಕ್ಕೆ ಕಿವಿ ಕೇಳಿಸುವುದಿಲ್ಲವಲ್ಲ.

***

ಆದಿನ ಮಧುಬಾಹು ಅರಮನೆಯಿಂದ ಬಂದವನ ಮುಖದಲ್ಲಿ ಯಾವುದೋ ದುಗುಡ ತುಂಬಿತ್ತು.

“ಸೂರೀ..ಸೂರೀ...”

“ಏನಾಯಿತು?!”

“ಕೌರವ-ಪಾಂಡವರ ನಡುವೆ ಸಂಗ್ರಾಮ ನಿರ್ಧಾರವಾಯಿತಂತೆ, ಇನ್ನು ಕೆಲವೇ ದಿನಗಳಲ್ಲಿ ರಣಕಣದಲ್ಲಿ ರಕ್ತಹರಿಯುವುದು ಖಂಡಿತ”

ಸೂರ್ಯಪ್ರಭೆಯ ಮುಖ ಕಪ್ಪುಗಟ್ಟಿತು. ಆಂತಂಕದ ಛಾಯೆ ಆವರಿಸಿತು.

“ಛೇ! ನಮ್ಮ ಅರಸ ಸುಯೋಧನನಿಗೇಕೆ ಯುದ್ಧದ ಆಸೆ. ಕೃಷ್ಣ ಸಂಧಾನಕ್ಕೆ ಬಂದಾಗ ಐದು ಗ್ರಾಮಗಳನ್ನು ಕೇಳಿದನಂತಲ್ಲ, ಅವನ್ನು ಕೊಟ್ಟುಬಿಟ್ಟಿದ್ದರೆ ಈ ಯುದ್ಧಕ್ಕೆ ಅವಕಾಶವೇ ಇರಲಿಲ್ಲ. ಅಲ್ಲವೇ? ನನಗೆ ಭಯವಾಗುತ್ತಿದೆ.”

“ಅದು ದಾಯಾದಿ ದ್ವೇಷ. ಕೇವಲ ಆಸ್ತಿಯ-ಆಳ್ವಿಕೆಯ ಜಗಳವಲ್ಲ. ಹಾಗಾಗಿ ಸುಯೋಧನನಿಗೆ ಹಗೆ.”

“ಅದೆಲ್ಲ ಸರಿ. ಆದರೆ ನಮ್ಮಂತಹ ಅಮಾಯಕರು ಈಗ ಏನು ಮಾಡುವುದು, ಬೇರೆ ರಾಜ್ಯಕ್ಕೆ ಹೋಗೋಣ, ನನಗೆ ಯುದ್ಧವೆಂದರೆ ಕೈಕಾಲುಗಳು ನಡುಗುತ್ತವೆ. ನಾನು ಅನಾಥೆಯಾದುದಕ್ಕೆ ಕಾರಣವಾದುದೇ ಈ ಯುದ್ಧ.” ಎಂದು ಹೇಳುವಾಗ ಸೂರ್ಯಪ್ರಭೆಯ ಕಣ್ಣಲ್ಲಿ ನೀರು ತುಂಬಿತ್ತು.

“ನನಗೂ ಅದೇ ಯೋಚನೆ. ನಾವು ರಾಜ್ಯ ಬಿಟ್ಟು ಹೋಗುವಂತಿಲ್ಲ. ಇವತ್ತು ರಾಜಾಜ್ಞೆಯಾಗಿದೆ. ಯಾರೂ ರಾಜ್ಯವನ್ನು ಬಿಡುವಂತಿಲ್ಲ. ಅಷ್ಟೇ ಅಲ್ಲ...”

“ಏನು.. ಅಷ್ಟೇ ಅಲ್ಲ..?!” ಆತಂಕದಿಂದಲೇ ಕೇಳಿದಳು.

“ಪಾಂಡವರ ವಿರುದ್ಧ ಹೋರಾಡಲು ಎಲ್ಲರೂ ರಣರಂಗಕ್ಕೆ ಹೋಗಲು ಸಿದ್ಧರಾಗಿರಬೇಕಂತೆ..”

ಸೂರ್ಯಪ್ರಭೆಗೆ ಈಗ ಕೋಪ ನೆತ್ತಿಗೇರಿತು.

“ಪಾಪಿ..ಅವನು. ಮಕ್ಕಳನ್ನು ತಿದ್ದಬೇಕಾದ ಅಪ್ಪ-ಅಮ್ಮ ಕುರುಡರಾಗಿದ್ದರೆ ಇದೇ ಗತಿ. ನಾವೆಲ್ಲ ಹೋಗಿ ಹೋರಾಡುವುದಕ್ಕೆ ಇದು ರಾಜ್ಯ-ರಾಜ್ಯದ ನಡುವಿನ ಕದನವೇನು? ಅಣ್ಣ-ತಮ್ಮಂದಿರ ಜಗಳದಲ್ಲಿ ನಾವು ಸಾಯುವುದೆಷ್ಟು ನ್ಯಾಯ?”

“ನನಗೂ ಅದೇ ಚಿಂತೆ. ಏನು ಮಾಡಬೇಕೆಂಬುದೇ ತೋಚುತ್ತಿಲ್ಲ. ಯುದ್ಧವಿದ್ಯೆಯೇ ತಿಳಿಯದ ನಾನು ರಣಕಣಕ್ಕಿಳಿಯಬೇಕಾಗಿ ಬಂದರೆ ಬದುಕಿ ಬರುವುದಾದರೂ ಉಂಟೇ?” ಎಂದ ಖೇದಭಾವದಿಂದ.

“ಛೆ! ಹಾಗೆಲ್ಲ, ಅಪಶಕುನ ನುಡಿಯಬೇಡಿ. ಎಲ್ಲರ ಕಣ್ಣುತಪ್ಪಿಸಿ ಇಲ್ಲಿಂದ ಹೊರಟು ಬಿಡುವ.”

“ಅದು ಸಾಧ್ಯವಿಲ್ಲದ ಮಾತು. ಯಾರೂ ಹೊರಹೋಗಬಾರದೆಂದು ಅರಸ ಎಲ್ಲಾ ಕಡೆ ಗುಪ್ತಚರರನ್ನು ನೇಮಿಸಿದ್ದಾನಂತೆ.”

“ಅಂದರೆ.. ಮುಂದೇನು?!”

“ಗೊತ್ತಿಲ್ಲ. ಯುದ್ಧಕ್ಕೆ ಕರೆದಾಗ ಹೋಗಲೇಬೇಕು.”

ಸೂರ್ಯಪ್ರಭೆಗೆ ಕೊರಳೊತ್ತರಿಸಿ ಬಂತು. ಇಬ್ಬರಿಗೂ ಮುಂದೇನು ಮಾಡುವುದೆಂದು ತೋಚಲಿಲ್ಲ.

“ನಾವು ಯುದ್ಧದಲ್ಲಿಯೇ ಸಾಯಬೇಕೆಂದಿದ್ದರೆ ಸತ್ಯದ ಪರವಾಗಿಯಾದರೂ ಹೋರಾಡುವ. ನಾನು ಆ ಪಾಂಡವರ ಪಕ್ಷಕ್ಕೆ ಸೇರಿಬಿಡುತ್ತೇನೆ.” ಎನ್ನುವಾಗ ಮಧುಬಾಹು ಗದ್ಗದಿತನಾಗಿದ್ದ.

“ಅದೂ ಸರಿ. ನಮ್ಮ ಹೊಟ್ಟೆಪಾಡಿಗಾಗಿ ಅರಸನ ಬಟ್ಟೆಯನ್ನು ಮಡಿಮಾಡುತ್ತಿದ್ದೇವಷ್ಟೆ. ಮನದಲ್ಲಿ ಕೊಳೆಯೇ ತುಂಬಿದ ಇಂತಹ ಅರಸನಿಗೆ ಮಡಿಬಟ್ಟೆಯಾದರೂ ಯಾಕೆ? ಒಳ್ಳೆಯತನವಿದ್ದಲ್ಲಿ ಗೆಲವು ಇದ್ದೇ ಇರುತ್ತದೆ. ನೀವು ಅಂತಹ ಸಂದರ್ಭ ಬಂದರೆ ಪಾಂಡವರ ಪರವಾಗಿಯೇ ಹೋರಾಡಿ.”

“ಆದರೆ ಪಾಂಡವರದ್ದು ಸಣ್ಣಸೇನೆ..ನಾಳೆ ಏನಾದರೂ ಸುಯೋಧನನ ಮೋಸದ ಯುದ್ಧದಿಂದ ಕೌರವರೇ ಗೆದ್ದರೆ? ಆಗ ನಾನು ಪಾಂಡವರ ಪರವಾಗಿ ಹೋರಾಡಿದ್ದೆ ಎಂಬ ಸಂಗತಿ ತಿಳಿದರೆ? ಉಪ್ಪುಂಡ ಮನೆಗೆ ಅನ್ಯಾಯ ಮಾಡಿದೆ ಎಂದು ಕೌರವರು ನನ್ನನ್ನು ಸುಮ್ಮನೆ ಬಿಟ್ಟಾರೆಯೇ? ನನಗೆ ಆಗಲೂ ಉಳಿಗಾಲ ಉಂಟೇ?”

“ಅದೂ ಸರಿ. ನಮ್ಮ ಬದುಕು ಕಟ್ಟಿಕೊಳ್ಳುವುದು ಮುಖ್ಯ. ಆದಷ್ಟು ಯುದ್ಧದಿಂದ ದೂರವೇ ಇದ್ದುಬಿಡುವ. ನಿಮ್ಮನ್ನಗಲಿ ನಾನಿರಲಾರೆ. ಅಂತಹ ಸಂದರ್ಭಬಾರದೇ ಹೋಗಲಿ” ಎನ್ನುವಾಗ ಅವಳಿಗೆ ಅಳುವನ್ನು ತಡೆದುಕೊಳ್ಳಲಾಗಲಿಲ್ಲ.

“ಅಳಬೇಡ. ಧೈರ್ಯದಿಂದಿರು. ಸುಯೋಧನ ಎಲ್ಲರೂ ಯುದ್ಧದಲ್ಲಿ ಪಾಲ್ಗೊಳ್ಳಲೇಬೇಕೆಂದು ಕಟ್ಟುನಿಟ್ಟಾಗಿ ಕರೆದುಕೊಂಡು ಹೋದನೆಂದಾದರೆ ನಾನೂ ಅಸಹಾಯಕನೆ.”

“ದುಷ್ಟತನ ತುಂಬಿದ ಆ ಕೌರವರು ನಮ್ಮನ್ನು ಬಲಿಕೊಡಲು ಸಿದ್ಧರಾಗಿಯೇ ಇದ್ದಾರೆ ಅಲ್ಲವೇ?. ಅಂತಹ ಕರೆ ಬಂದರೆ ನೀವು ಹೋದರೂ ಕೂಡ ಯಾರಿಗೂ ತಿಳಿಯದಂತೆ ರಣಕಣದ ಸುರಕ್ಷಿತಸ್ಥಳದ ಬದಿಯಲ್ಲೆಲ್ಲೋ ನಿಂತುಬಿಡಿ.”

“ಆಯಿತು. ಹಾಗೆಯೇ ಮಾಡುತ್ತೇನೆ.” ಅದು ಅಷ್ಟು ಸುಲಭದ ಮಾತಲ್ಲ ಎಂಬುದು ಮಧುಬಾಹುವಿಗೆ ತಿಳಿದಿತ್ತು.

***

“ಹಸ್ತಿನಾವತಿಯ ಪುರುಷರೆಲ್ಲರೂ ಪಾಂಡವರ ಮೇಲೆ ಮುತ್ತಿಗೆ ಹಾಕಲು ರಣರಂಗದಲ್ಲಿ ಸೇರಬೇಕು. ಇದು ರಾಜಾಜ್ಞೆ. ತಪ್ಪಿದಲ್ಲಿ ಶಿರಶ್ಛೇದನ ಮಾಡಲಾಗುವುದು” ಎಂಬ ವಾರ್ತೆಯನ್ನು ದೂತರು ಎಲ್ಲ ಮನೆಗೆ ತಲುಪಿಸಿದರು.


ಅಳುತ್ತ ಬೀಳ್ಕೋಟ್ಟ ಸೂರ್ಯಪ್ರಭೆಯ ಮುಖವನ್ನು ಕೊನೆಯದಾಗಿ ನೋಡುತ್ತಿರುವೆನೋ ಎಂಬಂತೆ ನೋಡಿ ಮಧುಬಾಹು ಭಾರವಾದ ಹೆಜ್ಜೆಗಳನ್ನಿಡುತ್ತ ರಣರಂಗದತ್ತ ಹೊರಟ. ಯಾರಿಗೂ ತಿಳಿಯದ ಹಾಗೆ ರಣರಂಗದ ಮೂಲೆಯಲ್ಲಿ ನಿಂತುಕೊಂಡ. ಸೇನಾಸಾಗರವನ್ನು ಸೀಳಿಕೊಂಡು ಮಧುಬಾಹುವಿನ ಹಿಂಬದಿಯಿಂದ ಬಂದ ಬಾಣವೊಂದು ನೇರವಾಗಿ ಅವನ ಶರೀರವನ್ನು ಹೊಕ್ಕಿತು. ವಿಲವಿಲನೆ ಒದ್ದಾಡುತ್ತ, ಸೂರೀ...ಎಂದು ಕೂಗಿಕೊಳ್ಳುತ್ತ ಮಧುಬಾಹು ನೆಲಕ್ಕುರುಳಿದ.

***

ಸೂರ್ಯಪ್ರಭೆಗೆ ಯುದ್ಧವೆಂದರೆ ಭಯ. ಅವಳು ಚಿಕ್ಕವಳಿದ್ದಾಗ ನಡೆದ ಯುದ್ಧದಿಂದಾಗಿ ಅಪ್ಪ-ಅಮ್ಮನನ್ನು ಕಳೆದುಕೊಂಡು ಅನಾಥಳಾದ ಹುಡುಗಿ ಈ ಸೂರ್ಯಪ್ರಭೆ. ಅನಾಥೆಯಾದ ಇವಳನ್ನು ಸಾಕಿದ್ದು ಹತ್ತಿರದಲ್ಲಿ ವಾಸವಿದ್ದ ಮಕ್ಕಳಾಗದ ಚಿಂತೆಯಲ್ಲಿದ್ದ ಮಡಿವಾಳ ಸೂರ್ಯಕೇಶ. ಹಸ್ತಿನಾವತಿಯ ಅರಸ ಕೌರವನರಮನೆಯ ಬಟ್ಟೆಗಳನ್ನು ಮಡಿ ಮಾಡುವ ಕಾಯಕದಲ್ಲಿದ್ದ ಈ ಮಧುಬಾಹು ಸೂರ್ಯಪ್ರಭೆಯನ್ನು ಇಷ್ಟಪಟ್ಟು ತಾನೇ ಅವಳ ಮನೆಗೆ ಹೋಗಿ ಮದುವೆಯ ವಿಚಾರ ತಿಳಿಸಿ, ಒಪ್ಪಿಸಿ ಮದುವೆಯಾಗಿದ್ದ. ಇಂದು ಹೆಣವಾಗಿ ಬಂದಿರುವ ಗಂಡನನ್ನು ನೋಡಿ ಬೊಬ್ಬೆಹೊಡೆದು ಕೆಲವು ಕ್ಷಣ ಮೂರ್ಛೆ ಹೋದಳು; ಮತ್ತೆ ಅನಾಥಳಾದಳು.

***

ಸೂರ್ಯಪ್ರಭೆಯ ಕಣ್ಣೀರು ಬತ್ತಲಿಲ.್ಲ; ಅದು ನಿಧಾನವಾಗಿ ಕೋಪದ ರೂಪವನ್ನು ಪಡೆದುಕೊಳ್ಳುತ್ತಾ ಹೋಯಿತು.

ತನಗಾದ ಅನ್ಯಾಯ ಇನ್ನಾರಿಗೂ ಆಗಬಾರದೆಂದು ಈ ಯುದ್ಧ ನಿಲ್ಲಿಸಲು ಹೇಳಬೇಕೆಂದುಕೊಂಡು ನೇರವಾಗಿ ಸುಯೋಧನನ್ನು ಕಾಣಲು ಹೋದಳು. ಆತ ಇವಳನ್ನು ಹತ್ತಿರಕ್ಕೆ ಬರಲೂ ಬಿಡದೆ ಸೈನಿಕರಿಂದ ಹೊರಗಟ್ಟಿದ.

ಭೀಷ್ಮಾಚಾರ್ಯರು ಎದುರಾದರು. ತಕ್ಷಣವೇ ಅವರ ಕಾಲಿಗೆ ಬಿದ್ದು ಅತ್ತಳು.

“ಯಾರು ನೀನು? ಏನಾಯಿತು?”

“ನಾನು ಸೂರ್ಯಪ್ರಭೆ. ನಿಮ್ಮ ದಾಯಾದಿ ಜಗಳದಿಂದಾಗಿ ಪ್ರಾಣಕಳೆದುಕೊಂಡ ಮಧುಬಾಹುವಿನ ಹೆಂಡತಿ. ಹಿರಿಯರಾದ ನೀವಾದರೂ ಈ ಯುದ್ಧವನ್ನು ತಡೆಯಬಾರದಿತ್ತೆ? ನೋಡಿ, ಗಂಡನನ್ನು ಕಳೆದುಕೊಂಡು ಅನಾಥೆಯಾಗಿದ್ದೇನೆ. ನಿಮ್ಮ ಕೌಟುಂಬಿಕಕಲಹದಲ್ಲಿ ಇನ್ನೆಷ್ಟು ಮಂದಿ ಪ್ರಾಣ ತೆರಬೇಕು? ಎಷ್ಟು ಮನೆಯವರು ಗಂಡನನ್ನೋ ಅಪ್ಪನನ್ನೋ ಮಗನನ್ನೂ ಕಳೆದುಕೊಳ್ಳಬೇಕು ಹೇಳಿ..ದಯವಿಟ್ಟು ಈ ಯುದ್ಧ ನಿಲ್ಲಿಸಿ..”ಎಂದು ಗೋಳಿಟ್ಟಳು.

“ಹೆಣ್ಣೇ, ನಿನ್ನ ನೋವುಗಳು ನನಗರ್ಥವಾಗುತ್ತದೆ. ಆದರೆ ನಾನು ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿದೆ. ಅಲ್ಲದೆ ಈಗ ಪರಿಸ್ಥಿತಿ ಕೈಮೀರಿ ಹೋಗಿದೆ. ಯಾರಿಂದಲೂ ತಡೆಯಲಾಗದು..ನನ್ನಿಂದಲೂ..”

“ಅಂದರೆ, ನೀವು ಮಕ್ಕಳನ್ನು ಬೆಳಸಿದ ರೀತಿಯ ಪ್ರತೀಕವಿದೆಂದು ಹೇಳಿ.”

“ಹಾಗಲ್ಲವದು, ರಾಜಮನೆತನಗಳಲ್ಲಿ ಇದೆಲ್ಲ ತೀರಾ ಸಹಜವಾದುದು. ಇದು ಸ್ವಲ್ಪ ದೊಡ್ಡಪ್ರ್ರಮಾಣದಲ್ಲಿದೆಯಷ್ಟೆ. ಚಿಕ್ಕವರಿದ್ದಾಗ ತಿದ್ದಿತೀಡಿದ ಬುದ್ಧಿಯನ್ನು ಹಾಗೆ ಬೆಳಸಿಕೊಂಡರಷ್ಟೇ ಅದರ ಫಲ. ದೊಡ್ದವರಾಗುತ್ತಿದ್ದಂತೆ ಯಾವುದೋ ದುರಾಸೆಗೆ ಬಲಿಯಾಗಿ ಕೆಟ್ಟ ನಡೆಗೆ ಮುಂದಾದರೆ ಹಿರಿಯರಾದ ನಾವು ಏನು ಮಾಡಲಿಕ್ಕಾಗುತ್ತದೆ?”

“ಅಂದರೆ, ನಿಮ್ಮ ಪ್ರಕಾರ ಈ ಯುದ್ಧ ಸಮಂಜಸವಾದುದು ಎಂದಾಯಿತಲ್ಲವೇ?”

“ಯುದ್ಧ ಮಾಡುತ್ತಿರುವುದು ಸರಿಯೆಂದು ನಾನು ಹೇಳುವುದಿಲ್ಲ. ಕೆಲವು ಒಳ್ಳೆಯವರ ಮತ್ತು ಹಲವು ದುರುಳರ ಅಂತ್ಯ ಈ ರೀತಿಯಲ್ಲಿಯೇ ಆಗಬೇಕೆಂಬುದು ವಿಧಿಲಿಖಿತವಿರಬಹುದು.”

“ಎಂಬಲ್ಲಿಗೆ, ನನ್ನ ಗಂಡನ ಸಾವು, ನನ್ನ ವೈಧವ್ಯವೆಲ್ಲಯೂ ವಿಧಿಲಿಖಿತವೆಂದಾಯಿತು. ನಿಮಗೆ ಹೆಂಡತಿಯೂ ಇಲ್ಲ; ಸ್ವಂತ ಮಕ್ಕಳೂ ಇಲ್ಲ. ಇದ್ದಿದ್ದರೆ ಯಾವುದು ವಿಧಿಲಿಖಿತ, ಯಾವುದು ಸ್ವಯಂಕೃತವೆಂಬುದು ನಿಮಗೆ ಅರಿವಾಗುತ್ತಿತ್ತು. ಇನ್ನು ನಿಮ್ಮಲ್ಲಿ ಮಾತಾಡಿ ಪ್ರಯೋಜನವಿಲ್ಲ” ಎಂದು ದಸದಸನೆ ಅಲ್ಲಿಂದ ಹೊರಟಳು.

ಭೀಷ್ಮರು ತಾವು ಮದುವೆಯಾಗದೇ ಇರುವುದೂ ವಿಧಿಲಿಖಿತವೇ ಎಂದುಕೊಳ್ಳುತ್ತ, ಇವಳ ಪ್ರಶ್ನೆಗಳಿಗೆ ಉತ್ತರಿಸಲಾಗದ ತನ್ನ ದೌರ್ಬಲ್ಯಕ್ಕೆ ಮರುಗುತ್ತ ನಾಳಿನ ದಿನವೇ ಹರಿಪಾದದಲ್ಲಿ ಶರೀರವನ್ನು ತ್ಯಜಿಸುವ ನಿರ್ಧಾರ ಕೈಗೊಂಡರು.


ಅಲ್ಲಿಂದ ಹೊರಟವಳಿಗೆ ದ್ರೋಣರು ಇದಿರಾದರು. ತತ್‍ಕ್ಷಣವೇ ಅವರಿಗೆ ಅಡ್ಡನಿಂತು ಅವರಲ್ಲಿಯೂ ಯುದ್ಧ ನಿಲ್ಲಿಸುವಂತೆ ಕೋರಿದಳು.

“ಅದೆಲ್ಲ ಸಾಧ್ಯವಿಲ್ಲದ ಮಾತು. ಕ್ಷತ್ರಿಯರಲ್ಲಿ ಇದೆಲ್ಲ ಹೊಸತೇನಲ್ಲ. ನಿನ್ನ ಗಂಡ ಸತ್ತಿದ್ದರೂ ಆತ ಊಟ ಕೊಟ್ಟವನ ಋಣತೀರಿಸಿದಂತೆ. ಇನ್ನು ನಿನ್ನ ವೈಧವ್ಯದ ಬಗ್ಗೆ ಯೋಚಿಸಬೇಡ. ಯುದ್ಧ ಮುಗಿಯಲಿ, ನಿನ್ನ ಬದುಕಿಗೆ ಆಸರೆಯನ್ನು ಅರಮನೆಯಿಂದ ವ್ಯವಸ್ಥೆಯಾಗುವಂತೆ ನಾನೇ ಮಾಡುತ್ತೇನೆ.”

“ಎಷ್ಟು ಸುಲಭವಾಗಿ ಹೇಳಿಬಿಟ್ಟಿರಿ ಗುರುಗಳೇ?! ಈ ಯುದ್ಧದಿಂದಾಗಿ ಇಡೀ ಹಸ್ತಿನಾವತಿಯಲ್ಲಿ ಎಷ್ಟು ಹೆಮ್ಮಕ್ಕಳು ವಿಧವೆಯಾದರು, ಎಷ್ಟು ಮಕ್ಕಳು ಅಪ್ಪನನ್ನೂ ತಾಯಂದಿರು ಮಕ್ಕಳನ್ನೂ ಕಳೆದುಕೊಂಡು ಅನಾಥರಾದರೆಂಬ ಅರಿವು ನಿಮಗಿಲ್ಲವೇ? ಒಬ್ಬ ಗುರುವಾಗಿ ತಮ್ಮ ಶಿಷ್ಯಂದಿರು ಈ ರೀತಿ ಹೊಡೆದಾಡುವುದನ್ನು ತಡೆಯುವ ಶಕ್ತಿ ನಿಮ್ಮಲ್ಲಿಲ್ಲವೇ? ನನಗಾದ ಅನ್ಯಾಯ ಪರರಿಗಾಗುವುದು ಬೇಡ. ಈ ಕೂಡಲೆ ಯುದ್ಧವನ್ನು ತಡೆಯಿರಿ” ಎನ್ನುತ್ತ ಅಂಗಲಾಚಿದಳು.

“ನೀನು ಹೇಳಿದುದೆಲ್ಲವೂ ಸರಿಯೇ. ಹೇಗೆ ನಿನ್ನ ಗಂಡ ಕೌರವರ ಮನೆಯ ಉಪ್ಪುಂಡ ತಪ್ಪಿಗೆ ಯುದ್ಧರಂಗಕ್ಕೆ ಕಾಲಿಟ್ಟನೋ ಅಂತಹ ಸಂದಿಗ್ಧದಲ್ಲಿ ನಾನೂ ಇದ್ದೇನೆ. ಎಲ್ಲವೂ ಕಾಲನ ಆಟ. ನೋಡು, ಪಾಂಡವರ ಪಕ್ಷದಲ್ಲಿ ದೇವನಾದ ಕೃಷ್ಣನೇ ಇದ್ದರೂ ಈ ಯುದ್ಧ ನಡೆಯುವುದನ್ನು ತಡೆಯಲಾಗಲಿಲ್ಲ. ನಿನ್ನ ಪ್ರಶ್ನೆಗಳಿಗೆ ಅವನೇ ಉತ್ತರಿಸಿಯಾನು ಹೋಗಿ ಅವನನ್ನು ಕಾಣು..ಕಾಲಾಯ ತಸ್ಮೈ ನಮಃ” ಎಂದು ಸುಮ್ಮನಾದರು.

‘ದ್ರೋಣರೆಂದಂತೆ ದೇವನೆನಿಸಿರುವ ಕೃಷ್ಣನನ್ನೇ ಬೇಡಿಕೊಳ್ಳುವುದು ಸರಿ. ಇವರೆಲ್ಲ ಯಾವುದೂ ತಮ್ಮ ಕೈಯಲಿಲ್ಲವೆಂಬಂತಾಡುತ್ತಿದ್ದಾರೆ’ ಎಂದುಕೊಳ್ಳುತ್ತ ಕೋಪದಿಂದ ಪಾಂಡವರ ಬಿಡಾರದತ್ತ ಹೋದಳು.

***

ಮಂದಸ್ಮಿತನಾಗಿ ಕುಳಿತಿದ್ದ ಕೃಷ್ಣನನ್ನು ಕಾಣುತ್ತಿದ್ದಂತೆ ಸೂರ್ಯಪ್ರಭೆಗೆ ತನ್ನ ಮನಸ್ಸು ಹಗುರಾದಂತೆ ಭಾಸವಾಯಿತು. ನೇರವಾಗಿ ಅವನಿದಿರು ನಿಂತಳು. ಅವಳಿಗರಿವಾಗದೆ ಅವಳ ಕೈಗಳು ಕೃಷ್ಣನಿಗೆ ವಂದಿಸತೊಡಗಿದವು.

ಕೃಷ್ಣ ‘ಯಾರಿವಳು?!’ ಎಂಬಂತೆ ಅವಳತ್ತ ದೃಷ್ಟಿ ಹರಿಸಿದ.

ಸೂರ್ಯಪ್ರಭೆ ಮಾತಿಗೆ ಶುರುವಿಟ್ಟುಕೊಂಡಳು.

“ನೀನು ದೇವರಂತೆ; ಪವಾಡಪುರುಷನಂತೆ. ಆದರೆ ಈ ಯುದ್ಧದಿಂದಾಗುತ್ತಿರುವ ಅನಾಹುತಗಳನ್ನು ತಿಳಿದೂ ಬರಿದೆ ಕುಳಿತಿರುವುದಾದರೂ ಸರಿಯೇನು? ಯುದ್ಧವೇ ಸಂಭವಿಸದಂತೆ ತಡೆಯಬಹುದಾಗಿತ್ತು. ಆದರೆ ನೀನೇ ಸಾರಥಿಯಾಗಿ ಯುದ್ಧದಲ್ಲಿ ತೊಡಗಿಕೊಂಡಿದ್ದೀಯ. ನನ್ನಂಥ ಅನಾಥೆಯ ನೋವು ದೇವನೆನಿಸಿಕೊಂಡ ನಿನಗೆ ಗೊತ್ತಾಗದೇನು? ಈ ಪಾಂಡವರು ಮತ್ತು ಕೌರವರ ಆಸ್ತಿಯ ಜಗಳದಿಂದಾಗಿ ಇದಕ್ಕೆ ಸಂಬಂಧವೇ ಇಲ್ಲದ ಇನ್ನೂ ಎಷ್ಟು ಜೀವಗಳು ಸತ್ತು ಮಣ್ಣಾಗಬೇಕೋ? ಇವತ್ತಿಗೇ ನಿಲ್ಲಿಸಿ ಬಿಡು. ನಿನ್ನಿಂದ ಸಾಧ್ಯವಿದೆಯಂತೆ. ದೋಣರು ಹೇಳಿದ್ದಾರೆ. ನೀನು ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡಬಹುದಂತೆ. ನಾನು ಅನುಭವಿಸುತ್ತಿರುವ ನೋವು ಇನ್ನಾರ ಮನೆಯ ಕದವನ್ನೂ ತಟ್ಟದಿರಲಿ. ಕೃಪೆತೋರಿ ಈ ಯುದ್ಧವನ್ನು ಇಲ್ಲಿಗೆ ನಿಲ್ಲುವಂತೆ ಮಾಡು” ಎನ್ನುತ್ತ ಅಳುತ್ತ ಕೃಷ್ಣನ ಪಾದವನ್ನು ಹಿಡಿದುಕೊಂಡಳು.


ಕೃಷ್ಣನಿಗೆ ನಗು ಬಂತು. ಆದರೆ ಅವಳ ಅಸಹಾಯಕತೆಗೆ ಆತ ಬೆಲೆಕೊಟ್ಟು ಸಮಾಧಾನಿಸಲೇಬೇಕಿತ್ತು.

“ಇದೆಲ್ಲ ಅವರವರ ಕರ್ಮಫಲಗಳೇ ಹೊರತು ನನ್ನ ಕೈಯಲ್ಲಿ ಏನೂ ಇಲ್ಲ. ನಾನು ದೇವನಾದರೂ ಭುವಿಯಲ್ಲಿ ಮತ್ತೆ ಮತ್ತೆ ದುಷ್ಟಶಿಕ್ಷಕ-ಶಿಷ್ಟರಕ್ಷಕನಾಗಿ ಅವತಾರ ಎತ್ತುತ್ತಿರುವುದು ಧರ್ಮವನ್ನುಳಿಸುವುದಕ್ಕಾಗಿಯೇ ಅಲ್ಲವೆ? ಅವರವರ ಪೂರ್ವಜನ್ಮದ ಪಾಪಕರ್ಮಫಲಾನುಸಾರವಾಗಿ ಹುಟ್ಟುತ್ತಾರೆ-ಬದುಕುತ್ತಾರೆ-ಸಾಯುತ್ತಾರೆ. ದುಷ್ಟರಿಗೆ ಶಿಕ್ಷೆಯಾಗುವಾಗ ಇಂತಹ ಸಾವು-ನೋವುಗಳು ಇದ್ದದ್ದೇ.”

“ನೀನೊಬ್ಬ ದೇವನಾಗಿ ನಿನ್ನಿಂದ ಇಂತಹ ಉತ್ತರವನ್ನು ನಿರೀಕ್ಷಿಸಿರಲಿಲ್ಲ. ಈ ಪಾಪಕರ್ಮಫಲ ಎಂದರೇನು? ಒಬ್ಬನಿಗೆ ತಾನು ಇಂದು ಮಾಡಿದ ತಪ್ಪಿಗೆ ಈಗಲೇ ಶಿಕ್ಷೆಯಾಗಬೇಕೇ ಹೊರತು ಮುಂದಿನ ಜನ್ಮದಲ್ಲಿ ಶಿಕ್ಷಿತನಾಗುವುದಾದರೂ ಎಷ್ಟರ ಮಟ್ಟಿಗೆ ಸರಿ? ಪೂರ್ವಜನ್ಮದ ನೆನಪೇ ಇರದ ಮೇಲೆ ಈ ಜನ್ಮದಲ್ಲಿ ಶಿಕ್ಷೆ ಅನುಭವಿಸಿಯಾದರೂ ಫಲವೇನು? ಇಷ್ಟಕ್ಕೂ ಮೊದಲು ನನ್ನ ಅಪ್ಪ-ಅಮ್ಮ ಸತ್ತರು, ಈಗ ನನ್ನ ಗಂಡ ಸತ್ತ. ಇಲ್ಲಿ ಪಾಪಕರ್ಮ ಮಾಡಿದವರು ಯಾರು? ನನ್ನ ಅಪ್ಪ-ಅಮ್ಮನೋ, ಗಂಡ ಮಧುಬಾಹುವೋ ಅಥವಾ ನಾನೋ? ಶಿಕ್ಷೆ ಅವರಿಗೆ ಎಂದಾದರೆ ಸತ್ತಮೇಲೆ, ಈ ಭೂಮಿಯಲ್ಲಿ ಇಲ್ಲವಾದ ಮೇಲೆ ಅವರು ಶಿಕ್ಷೆಯನ್ನು ಅನುಭವಿಸಲಿಕ್ಕಾದರೂ ಏನುಂಟು? ಅಥವಾ ನನಗೇ ಶಿಕ್ಷೆ ಎಂದಾದರೆ ನನ್ನಿಂದಾಗಿ ಅವರಿಗೇಕೆ ಈ ಸಾವಿನ ಶಿಕ್ಷೆ? ಹಾಗಾದರೆ ಪಾಂಡವರೋ ಕೌರವರೋ ಮಾಡಿದ ಪೂರ್ವಜನ್ಮಕರ್ಮಫಲದಿಂದಾಗಿ ನಡೆಯುತ್ತಿರುವ ಈ ಯುದ್ಧದಲ್ಲಿ ಪ್ರಜೆಗಳು ಅರಸನ ಆಜ್ಞೆಗೋ ಪಾಂಡವರ ಮೇಲಿನ ಪ್ರೀತಿಗೋ ಬಂದು ಯುದ್ಧದಲ್ಲಿ ಪ್ರಾಣ ತ್ಯಜಿಸುವುದು ಸರಿ ಎಂದು ಒಪ್ಪುವುದಾದರೂ ಹೇಗೆ?

“ನಿನ್ನೆಲ್ಲ ಪ್ರಶ್ನೆಗಳು ಒಪ್ಪತಕ್ಕವೇ. ಪಾಪಕರ್ಮಕ್ಕೂ ಅದರಿಂದಾಗಿಯೇ ಮರುಜನ್ಮದಲ್ಲಿ ಅನುಭವಿಸುವ ಶಿಕ್ಷೆಗೂ ಸಂಬಂಧವೇ ಇಲ್ಲ ಎಂದೆನಿಸುವುದು ಸಹಜವೇ. ಆದರೆ ಯಾರು ಸತ್ಕರ್ಮದಿಂದ ಬದುಕುತ್ತಾನೋ ಆತನಿಗೆ ಇನ್ನೊಂದು ಜನ್ಮವೆಂಬುದೇ ಇಲ್ಲ. ಆ ಪಾಪಕರ್ಮಗಳನ್ನು ಹೊತ್ತುಕೊಂಡು ಬಂದ ಜೀವಕ್ಕೆ ಸಂಬಂಧಪಟ್ಟ ಎಲ್ಲಾ ಜೀವಿಗಳೂ ಕೂಡ ಪಾಪಕರ್ಮದ ಫಲದಿಂದಾಗಿಯೇ ಬಂದಿರುತ್ತವೆ. ಆದ್ದರಿಂದ ಮನೆಯಲ್ಲೊಬ್ಬ ಸತ್ತನೆಂದರೆ ಅದರ ದುಃಖವನ್ನನುಭವಿಸುವ ಮನೆಯವರೆಲ್ಲರೂ ಇನ್ನಾವುದೋ ಪಾಪಕರ್ಮದಿಂದಾಗಿಯೇ ಹುಟ್ಟಿದವರಾದ್ದರಿಂದ ಆ ಅಗಲುವಿಕೆಯ ನೋವನ್ನನುಭವಿಸುತ್ತಾರೆ. ಹಾಗಾಗಿ ಈ ಪಾಪಪುಣ್ಯಗಳ ಫಲ ಅನುಭವಿಸುವಾಗ ಈ ಜನ್ಮದಲ್ಲಾದರೂ ಪುಣ್ಯಕರ್ಮಗಳಲ್ಲಿಯೇ ತೊಡಗಿಕೊಂಡರೆ ಮುಂದೆ ಮತ್ತೊಂದು ಜನ್ಮದಲ್ಲಿ ಹುಟ್ಟಬೇಕಾಗಿಲ್ಲ; ಪಾಪಕರ್ಮಗಳನ್ನು ಅನುಭವಿಸಬೇಕಾಗಿಲ್ಲ.”

“ಅಂದರೆ ನಾನೋ ನನ್ನಂಥವರೋ ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವಾಗಿ ಇಂದು ಅನಾಥರಾಗಿ ಬದುಕುವಂತಾಗಿದೆ ಎಂದಾಯಿತು. ಆದರೆ ಈ ಅಸಹಜ ಸಾವು ಸಮಂಜಸವೇ? ಬಾಳಿ ಬದುಕಬೇಕಾದ ನನ್ನವರು ಈ ರೀತಿ ಅಕಾಲದಲ್ಲಿ ಸಾಯುವುದು ಉಚಿತವೇನು?”

“ಸಾವು ಎಂಬುದು ಸಾವು ಅಷ್ಟೆ. ವಯಸ್ಸು-ಆಯುಷ್ಯ ಎಂಬುದೆಲ್ಲ ಮನುಜನ ಲೆಕ್ಕಾಚಾರಗಳಷ್ಟೆ. ಸಾವೆಂಬುದೇ ಶಿಕ್ಷೆ ಎಂದು ನಿರ್ಧರಿತವಾಗಿದ್ದರೆ ಅದು ಇಂದೂ ಬರಬಹುದು ನಾಳೆಯೂ ಬರಬಹುದು ಅಥವಾ ಮುದಿತನ ಬಂದಮೇಲೆಯೂ ಬರಬಹುದು. ಸಾವೆಂಬುದು ಪೂರ್ವನಿಗದಿತ. ಅದು ದೇಹ-ಆರೋಗ್ಯ-ಆಯಸ್ಸನ್ನೆಲ್ಲ ನೋಡಿ ಬರುವುದಿಲ್ಲ. ಸಾವೆಂಬುದೇ ಮುಕ್ತಿ. ಪೂರ್ವಜನ್ಮದ ಪಾಪಕರ್ಮದ ಭಾಗ ಕಡಮೆ ಇದ್ದಾಗ ಸಾವು ಬೇಗನೆ ಬರುತ್ತದೆ. ಆತ ಮುಕ್ತನಾಗುತ್ತಾನೆ. ಇನ್ನು ಅತಿಯಾದ ಪಾಪಕರ್ಮದಿಂದಾಗಿ ಜನಿಸಿದವನಿಗೆ ಬದುಕಬೇಕೆಂಬ ಆಸೆ ಹೆಚ್ಚುತ್ತಿದ್ದಂತೆ ಸಾವೇ ಶಿಕ್ಷೆಯಾಗಿ ಬಂದು ಮತ್ತೆ ಮರುಜನ್ಮವನ್ನೂ ಹೊಂದುತ್ತಾನೆ. ಹಾಗಾಗಿ ಸಾವಿಗೆ ಕಾರಣವಿಲ್ಲ. ಸಾವೇ ಗತಿ ಎಂಬಂತಿರುವ ರೋಗಿಯನ್ನೂ ವೈದ್ಯ ರಕ್ಷಿಸುತ್ತಾನೆ, ಆದರೆ ಗಟ್ಟಿಮುಟ್ಟಾದ ಜೀವದ ವ್ಯಕ್ತಿಯು ಕ್ಷುಲ್ಲಕವಾದ ದೇಹಪೀಡೆಯಿಂದ ಸಾಯುತ್ತಾನೆ. ಆ ಹೊತ್ತಿಗೆ ವೈದ್ಯನೂ ಅಸಹಾಯಕನಾಗಿಬಿಟ್ಟಿರುತ್ತಾನೆ.”

“ಆದರೆ ನೀನು ದುಷ್ಟಶಿಕ್ಷಕನಾಗುವ ಬದಲು ಆ ದುಷ್ಟರಲ್ಲಿರುವ ದುಷ್ಟತನವನ್ನಷ್ಟೇ ಕೊಂದು, ಅವರು ಒಳ್ಳೆಯವರಾಗಿ ಬಾಳುವಂತೆ ಮಾಡಬಹುದಲ್ಲ. ಆಗ ಈ ಸಾವು-ನೋವುಗಳು ಕಡಮೆಯಾಗುವುದುದಿಲ್ಲವೇ?”

ಕೃಷ್ಣನಿಗೆ ನಗು ಬಂತು..

“ಹೌದು. ನಿನ್ನ ಮಾತು ಸರಿಯೇ. ಆದರೆ ದುಷ್ಟತನವನ್ನು ನಾನು ಕೊಲ್ಲಬೇಕಾಗಿಲ್ಲ. ಎಲ್ಲರೂ ಅವರಾಗಿಯೇ ತಮ್ಮಲ್ಲಿನ ದೌಷ್ಟ್ಯವನ್ನು ಬಿಟ್ಟಾಗ ತಾವಾಗಿಯೇ ಎಲ್ಲರೂ ಒಳ್ಳೆಯವರಾಗುತ್ತಾರೆ. ಆಗ ನಾನು ಅವತಾರ ಎತ್ತಬೇಕಾದ ಪ್ರಸಂಗವೇ ಇರಲಿಲ್ಲ. ಇದೇ ಕೌರವರನ್ನು ನೋಡು, ನಾನು ಸಂಧಾನಕ್ಕೆ ಬಂದಾಗ ಒಳ್ಳೆಯತನದಿಂದ ನನ್ನ ಮಾತನ್ನು ಒಪ್ಪಿಕೊಂಡಿದ್ದರೆ ಇಂದು ಯುದ್ಧವಾಗುತ್ತಿತ್ತೇನು? ಕೌರವ ಅನ್ನ ಕೊಟ್ಟಿದ್ದಾನೆಂಬ ಕಾರಣಕ್ಕೆ ಅವನ ದುಷ್ಟತನಕ್ಕೆ ಬೆಂಬಲವಾಗಿ ಆತನ ಸೈನ್ಯ ಸೇರಿಕೊಂಡ ಜನತೆಯೂ ದುಷ್ಟರೇ ಆದಂತಾಯಿತಲ್ಲವೆ? ಈ ದುಷ್ಟತನವೆಂಬುದು ಮನಸ್ಸು. ಅಂಥ ಮನಸ್ಸನ್ನು ಹೊಂದಿದ ದೇಹದ ಶಕ್ತಿ ದುಷ್ಟತನಕ್ಕೇ ಬಳಕೆಯಾಗುತ್ತ ಹೋಗುತ್ತದೆ. ಆ ದುಷ್ಟಮನಸ್ಸನ್ನು ನಾನು ಕೊಲ್ಲುತ್ತೇನೆಂದರೆ ಶರೀರದಿಂದ ಅದನ್ನು ಬೇರ್ಪಡಿಸಲೇ ಬೇಕು. ಮನಸ್ಸೇ ಇಲ್ಲದೆ ಬದುಕುವುದಾದರೂ ಹೇಗೆ? ಇದನ್ನೇ ಸಾವು ಎಂದು ಕರೆಯುತ್ತೇವೆ.”

“ಹಾಗಾದರೆ ನಾನೇನು ತಪ್ಪು ಮಾಡಿದ್ದೇನೆ? ನನಗೇಕೆ ಈ ಶಿಕ್ಷೆ? ನಾನು ಯಾರು?” ಸೂರ್ಯಪ್ರಭೆಗೆ ಈಗ ತನ್ನ ಬಗ್ಗೆ ತಿಳಿಯಬೇಕೆಂಬ ಆಸೆ ಹುಟ್ಟಿತು.

“ನೀನು ತ್ರೇತಾಯುಗದಲ್ಲಿ ವಾಲಿಯ ಪತ್ನಿ ತಾರೆಯಾಗಿದ್ದವಳು. ವಾಲಿ ಸುಗ್ರೀವನ ಪತ್ನಿ ರುಮೆಯನ್ನು ಎಳೆದು ತಂದಿರಿಸಿಕೊಂಡಾಗ ನೀನು ವಾಲಿಯನ್ನು ವಿರೋಧಿಸಲಿಲ್ಲ. ಅನಾಥೆಯಂತಾಗಿದ್ದ ಅವಳ ನೋವು ನಿನ್ನನ್ನು ಶಪಿಸಿದ ಕಾರಣದಿಂದಾಗಿಯೂ ಆ ಪಾಪಕರ್ಮದಿಂದಾಗಿಯೂ ಇಂದು ನೀನು ಅನಾಥಳಾಗಿ ಈ ನೋವನ್ನೆಲ್ಲ ಅನುಭವಿಸುವಂತಾಯಿತು.”

“ಹಾಗಾದರೆ, ನನಗಿನ್ನು ಮುಕ್ತಿಕರುಣಿಸಿ ಬಿಡು..”

“ನನ್ನ ಪಾದಸ್ಪರ್ಶದಿಂದ ನಿನ್ನ ಪಾಪವೂ ಪರಿಹಾರವಾಯಿತು. ನಾನು ಅವತಾರ ಕಳಚಿಕೊಳ್ಳಬೇಕಾದ ಸಮಯದ ಸೂಚನೆಯೂ ನಿನ್ನಿಂದ ಬಂದಾಯಿತು” ಎಂದಾಗ ಸೂರ್ಯಪ್ರಭೆಗೆ ಆಶ್ಚರ್ಯವಾಯಿತು.

“ಅಂದರೆ! ನಿನ್ನ ಒಗಟಿನ ಮಾತುಗಳು ನನಗೆ ಅರ್ಥವಾಗುತ್ತಿಲ್ಲ..”

“ಹಿಂದೆ ರಾಮಾವತಾರದಲ್ಲಿ ನಿನ್ನ ಪತಿಯಾಗಿದ್ದ ವಾಲಿಗೆ ನಾನು ಮರೆಯಲ್ಲಿ ನಿಂತು ಬಾಣಹೂಡಿ ಮರಣವನ್ನು ಕರುಣಿಸಿದ ನನ್ನ ಋಣಭಾರ ಬಾಕಿಯಿದೆ. ಆತನೂ ಈ ಯುಗದಲ್ಲಿ ಬೇಡನಾಗಿ ಹುಟ್ಟಿ ನನ್ನ ನಿರ್ಯಾಣವನ್ನು ಅವನಿಗರಿವಿಲ್ಲದೆ ಕಾಯುತ್ತಿದ್ದಾನೆ. ಮುಂದೊಂದು ದಿನ ಅವನ ಬಾಣ ನೀನು ಸ್ಪರ್ಶಿಸಿದ ಬೆರಳಿಗೇ ಬಂದು ಚುಚ್ಚಲಿದೆ. ನೀನು ಮುಟ್ಟಿದ ಈ ಬೆರಳು ಅವನ ಕಣ್ಣಿಗೆ ಬೀಳಲು ನೀನು ಸಹಾಯಕಳಾಗಿ ನಿಂತುಬಿಟ್ಟೆ. ಹಿಂದಿನ ಜನ್ಮದ ಪಾತಿವ್ರತ್ಯಧರ್ಮದ ಹಾಗೂ ಈ ಜನ್ಮದ ಸತ್ಕರ್ಮಗಳ ಶಕ್ತಿಯಿದು. ಆತನ ಬಾಣ ನನಗೆ ಚುಚ್ಚಿದ ದಿನವೇ ನಿನಗೆ ಮುಕ್ತಿ.”

ಸೂರ್ಯಪ್ರಭೆಯಲ್ಲಿ ಯಾವುದೇ ಪ್ರಶ್ನೆಗಳುಳಿಯಲಿಲ್ಲ. ‘ರಾಮವತಾರದಲ್ಲಿ ವಾಲಿಗೆ ಮರೆಯಲ್ಲಿ ನಿಂತು ಬಾಣಹೂಡಿದ ತಪ್ಪಿಗೆ ದೇವನಾದ ಕೃಷ್ಣನೇ ಶಿಕ್ಷೆಯನ್ನನುಭವಿಸುವಾಗ ಸಾಮಾನ್ಯಳಾದ ನಾನು ಅನುಭವಿಸುತ್ತಿರುವ ನೋವುಗಳು ಸಹಜವಾದುದೇ ಎಂದಾಯಿತು’ ಎಂದುಕೊಂಡು ಕೊನೆಯ ಬಾರಿಗೆ ಕೃಷ್ಣನನ್ನು ಕಾಣುತ್ತಿರುವೆನೇನೋ ಎಂಬಂತೆ ಆತನ ರೂಪವನ್ನು ಕಣ್ಣಿನಲ್ಲಿ ತುಂಬಿಕೊಂಡು ನಮಸ್ಕರಿಸಿ ಅಲ್ಲಿಂದ ಹೊರಟಳು.


ಕೃಷ್ಣ ಆಶೀರ್ವದಿಸಿ ಮುಗುಳ್ನಕ್ಕ.


ಸೂರ್ಯಪ್ರಭೆ ಸ್ವಲ್ಪ ದೂರ ಹೋಗುತ್ತಿದ್ದಂತೆ ಬೇಡನೊಬ್ಬ ಅವಳತ್ತ ನೋಡಿ ನಕ್ಕು, ಹಿಂಬಾಲಿಸಲಾರದಷ್ಟು ವೇಗದಲ್ಲಿ ಓಡಿ ಹೋದದಂತಾಯಿತು.