Click here to Download MyLang App

ಸೀತಮ್ಮನ ಮೊಮ್ಮಗ - ಬರೆದವರು : ವಾಣಿ ಸುರೇಶ್ ಕಾಮತ್

ಬೆಳ್ಬೆಳಗ್ಗೆ “ ಸೀತಮ್ಮನ ಮೊಮ್ಮಗ ತೆಂಗಿನಮರದಿಂದ ಬಿದ್ದು ಸತ್ತುಹೋದ ಅಂತೆ” ಎನ್ನುವ ಮೆಸೇಜು ವಾಟ್ಸಾಪ್ ನಲ್ಲಿ ಹರಿದಾಡಿದಾಗ ಹಯ್ಯಮ್ಮ ಎಂದು ರಾಂಪುರ ಮತ್ತು ಸುತ್ತಲಿನ ನಾಲ್ಕು ಹಳ್ಳಿಯ ಜನ ಸಮಾಧಾನದ ಉಸಿರು ಬಿಟ್ಟಿದ್ದರು! ಯಾರಾದ್ರೂ ಸತ್ತು ಹೋದ್ರೆ ಜನರು ಖುಷಿ ಪಡ್ತಾರಾ? ಎಂಬ ಪ್ರಶ್ನೆ ನಿಮಗೆ ಮೂಡಿದರೆ ಈ ಕತೆಯನ್ನೊಮ್ಮೆ ಕೇಳಿ.
ಸುಮಾರು ನಲವತ್ತೈದು ವರ್ಷಗಳ ಹಿಂದೆ ಸೀತಮ್ಮ ಮೂರು ವರ್ಷದ ಮಗನನ್ನು ಸೊಂಟದಲ್ಲಿ ಕೂರಿಸಿ, ಕೈಯ್ಯಲ್ಲೊಂದು ಬ್ಯಾಗು ಹಿಡಿದು ಬಸ್ಸಿನಿಂದ ಇಳಿದಾಗ ರಾಂಪುರದ ಜನರಿಗೇನೂ ಅಚ್ಚರಿಯಾಗಿರಲಿಲ್ಲ. ಪೀಚುದೇಹದ, ಸಾಮಾನ್ಯರೂಪಿನ, ಬಡ ಹೆಣ್ಣುಮಗಳನ್ನು ಬಸ್ ಸ್ಟಾಂಡಿನ ಪಕ್ಕದ ಪೇಪರಂಗಡಿಯಲ್ಲಿ ನಿಂತಿದ್ದ ಸೋಮಾರಿಗಳ್ಯಾರೂ ಕ್ಯಾರೇ ಮಾಡಿರಲಿಲ್ಲ! ಹೀಗೆ ಬಸ್ಸಿನಿಂದ ಇಳಿದ ಸೀತಮ್ಮ ಸೀದಾ ನಡೆದದ್ದು ಲಕ್ಷ್ಮೀನಿವಾಸ ಹೋಟೆಲಿನ ಹಿಂಬಾಲಿಗಿನ ಕಡೆಗೆ. ಅದೇ ದಿನ ಮಧ್ಯಾಹ್ನ ರುಬ್ಬುಕಲ್ಲಿನ ಎದುರು ಪ್ರತಿಷ್ಠಾಪನೆಗೊಂಡ ಸೀತಮ್ಮ , ಮುಂದಿನ ಹದಿನೈದು ವರ್ಷ ದೋಸೆ, ಇಡ್ಲಿ, ಉದ್ದಿನಬೋಂಡಾದ ಹಿಟ್ಟನ್ನು ರುಬ್ಬಿದ್ದೇ ರುಬ್ಬಿದ್ದು! ಹೋಟೆಲಿನ ಹಿಂದೆಯೇ ಇದ್ದ ಮಾಲಿಕ ಶ್ಯಾಮಭಟ್ರ ಮನೆಯ ಉಗ್ರಾಣವೇ ತಾಯಿ-ಮಗನ ಅರಮನೆಯಾಯಿತು! ರಾಂಪುರ ಹಳ್ಳಿಯಿದ್ದದ್ದು ಊರಾಗಿ ಬದಲಾಗುತ್ತಿದ್ದಂತೆ ಸೀತಮ್ಮನ ಮಗ ರಂಗ ಕೂಡ ದೊಡ್ಡವನಾಗಿದ್ದ. ಆದರೆ ಅವನ ದೇಹ ಬೆಳೆಯಿತೇ ವಿನಹ ಬುದ್ದಿ ಅಷ್ಟು ಚುರುಕಾಗಿರಲಿಲ್ಲ. ಸದಾ ಕಾಲ ಅಮ್ಮನ ನೆರಳಿನಲ್ಲೇ ಇರುವಂಥಾ ಸ್ವಭಾವದವನ ಬಗ್ಗೆ ರಾಂಪುರದ ಜನತೆಗೂ ಅಸಡ್ಡೆ! ಹೀಗೆ ಊರಲ್ಲಿ ಇದ್ದೂ ಇಲ್ಲದಂತಿದ್ದ ತಾಯಿ-ಮಗ ಸಣ್ಣ ರೀತಿಯಲ್ಲಿ ಫೇಮಸ್ ಆದದ್ದು ಲಕ್ಷ್ಮೀನಿವಾಸ ಹೋಟೆಲ್ ಮುಚ್ಚಿಹೋಗಿದ್ದರಿಂದ!
ರಸ್ತೆ ಅಗಲೀಕರಣ ಮಾಡಲು ಹೋಟೆಲಿನ ಕಟ್ಟಡವನ್ನು ತೆರವುಗೊಳಿಸಬೇಕೆಂದು ನೋಟಿಸ್ ಬಂದಾಗ, ಶ್ಯಾಮಭಟ್ಟರಿಗೆ ತಾನು ರಿಟೈರ್ಮೆಂಟ್ ತಗೋಳೋಣ ಅನಿಸಿತ್ತು. ಇಬ್ಬರು ಗಂಡುಮಕ್ಕಳೂ ಫಾರಿನ್ ನಲ್ಲಿ ಸೆಟಲ್ ಆಗಿ, ತಾನೂ ಸಾಕಷ್ಟು ದುಡ್ಡು ಮಾಡಿದ್ದರಿಂದ ಹೋಟೆಲಿನ ಮೈಮುರಿಯುವ ಕೆಲಸದ ಬಗ್ಗೆ ವೈರಾಗ್ಯ ಮೂಡಿತ್ತು. ಕೊನೆಗೆ ಹೋಟೆಲಿನ ಗ್ಯಾಸ್ ಸ್ಟವ್ವು, ದೋಸೆ ಕಾವಲಿ, ಬಾಣಲಿ, ರುಬ್ಬುಕಲ್ಲು, ಒಂದಿಷ್ಟು ಗ್ಲಾಸು- ಪ್ಲೇಟಿನ ಜೊತೆಗೆ ಹತ್ತು ಸಾವಿರ ರೂಪಾಯಿ ಸೀತಮ್ಮನಿಗೆ ಕೊಟ್ಟು ಹೋಟೆಲಿಗೆ ಪರ್ಮನೆಂಟಾಗಿ ಬೀಗ ಜಡಿದು ಶ್ಯಾಮಭಟ್ರು ಉತ್ತರಭಾರತ ಯಾತ್ರೆಗೆ ಹೊರಟೇಬಿಟ್ರು! ಇತ್ತ ಸೀತಮ್ಮ ಒಂದು ಗಾಡಿಯನ್ನು ಖರೀದಿಸಿ, ಬೆಳಗ್ಗೆ ದೋಸೆ, ಇಡ್ಲಿ, ವಡೆ ಮಾರುತ್ತಾ,ಸಂಜೆ ಮೆಣಸಿನ ಬಜ್ಜಿ, ಆಲೂಬೋಂಡಾ ಮಾರುತ್ತಾ ತನ್ನ ಜೀವನದ ಬಂಡಿಯನ್ನು ಎಳೆಯಲು ಶುರು ಮಾಡಿದಳು. ಆಕೆಯ ಕೈರುಚಿಗೆ ಮಾರುಹೋಗಿ ಸ್ವಲ್ಪ ದಿನದಲ್ಲೇ ಜನರು ನೊಣದಂತೆ ಗಾಡಿಯನ್ನು ಮುತ್ತಲು ಶುರು ಮಾಡಿದರು. ಸುತ್ತಲಿನ ಹಳ್ಳಿಯಿಂದ ವ್ಯಾಪಾರಕ್ಕೆಂದು ಬರುವ ಜನರಿಗೆ ಸೀತಮ್ಮನೇ ಅನ್ನಪೂರ್ಣೆಯಾದಳು! ಜೊತೆಗೆ ಕತ್ತಲಾಗುವ ಹೊತ್ತಿಗೆ ಪಕ್ಕದ ಬಾರಿಗೆ ಬರುವವರಿಗೆ ಖಾರದ ಮೆಣಸಿನಕಾಯಿ ಬಜ್ಜಿ ಸಪ್ಲೈ ಮಾಡುವ ಕೆಲಸವನ್ನೂ ಹೊತ್ತುಕೊಂಡಳು! ಇದರಿಂದ ಕೈಯ್ಯಲ್ಲಿ ನಾಲ್ಕು ಕಾಸು ಕೂಡಿ ನದಿ ಬದಿಯಲ್ಲಿ ಒಂದು ಸಣ್ಣಮನೆಯನ್ನು ಕೊಳ್ಳುವಂತಾದಳು. ಕೋಲೆ ಬಸವನಂತಿದ್ದ ಮಗನಿಗೆ ಪಕ್ಕದೂರಿನ ಪಾಪದ ಹುಡುಗಿ ಪದುಮಳನ್ನು ಸೊಸೆಯಾಗಿ ತಂದುಕೊಂಡು ಜೀವನದ ಒಂದು ಘಟ್ಟವನ್ನು ಪಾಸು ಮಾಡೇಬಿಟ್ಟಳು ಸೀತಮ್ಮ!
ಕೆಲವೇ ತಿಂಗಳುಗಳಲ್ಲಿ ಪದುಮ ಗರ್ಭಿಣಿಯಾದಾಗ ಸೀತಮ್ಮ ಖುಷಿಯಿಂದ ಬೀಗಿದಳು. ಆದರೆ ಅವಳಿಗೆ ನವಮಾಸಗಳು ತುಂಬಿಕೊಂಡಂತೆ ಸೀತಮ್ಮಳಿಗೆ ಯೋಚನೆ ಶುರುವಾಯಿತು! “ ಇನ್ನು ಐದು ದಿನದಲ್ಲಿ ಮಾಲಯ ಮುಗಿಯತ್ತೆ. ಅಲ್ಲಿವರ್ಗೂ ತಡ್ಕೊಳ್ಳೇ ಹುಡುಗಿ!” ಎಂದು ಅಂಗಲಾಚಿದಾಗ ಪದುಮ “ ನಾನೇನು ಬೇಕಂತ್ಲೇ ಹೆರ್ತೀನಾ ಅತ್ತೇ? “ ಎಂದು ಬೇಸರಪಟ್ಟುಕೊಂಡು ಸುಮ್ಮನಾದಳು. ಮಹಾಲಯ ಅಮವಾಸ್ಯೆಯ ಹಿಂದಿನ ರಾತ್ರಿ ಪದುಮಳಿಗೆ ಜೀವದಲ್ಲಿ ಅತಿಯಾದ ಸಂಕಟ! ಮಲಗಲೂ ಆಗಲ್ಲ, ಕೂರಲೂ ಆಗಲ್ಲ ಎನ್ನುವಂತಾಗಿ ರಾತ್ರಿ ಹಗಲು ಮಾಡಿದಳು. ಮರುದಿನ ಬೆಳಗ್ಗೆ ಹನ್ನೊಂದು ಗಂಟೆಯಾಗುವ ಹೊತ್ತಿಗೆ “ ಅತ್ತೇ, ಇನ್ನು ನನ್ನಿಂದ ತಡೆಯಲೇ ಆಗ್ತಿಲ್ಲ!” ಎಂದು ಫೋನ್ ಮಾಡಿದಾಗ ಸೀತಮ್ಮ ಗಾಡಿಯನ್ನು ಇದ್ದ ಹಾಗೆಯೇ ಬಿಟ್ಟು, ರಂಗನಿಗೆ “ ನರ್ಸಮ್ಮನನ್ನು ಕರ್ಕೊಂಡು ಬಾ” ಎಂದು ಹೇಳಿ ಮನೆಯ ಕಡೆ ಓಡಿದಳು! ಪದುಮಳ ಬಿಪಿ, ಪಲ್ಸ್ ನೋಡಿ ಅವಳ ಉಬ್ಬಿದ ಹೊಟ್ಟೆಯ ಮೇಲೆ ಸ್ಟೆತಾಸ್ಕೋಪ್ ಇಟ್ಟು ನೋಡಿದ ನರ್ಸಮ್ಮನ ಹಣೆಯ ಮೇಲೆ ನೆರಿಗೆ ಮೂಡಿತ್ತು! “ ಮಗೂದು ಎದೆ ಬಡಿತ ಕಡಿಮೆ ಅನ್ನಿಸ್ತಿದೆ ಸೀತಮ್ಮ! ಈವಾಗ್ಲೇ ದೊಡ್ಡಾಸ್ಪತ್ರೆಗೆ ಹೋಗಿ ಅಪರೇಷನ್ ಮಾಡಿಸಿ ಮಗೂನ ಉಳಿಸ್ಕೊಳ್ಳಿ” ಎಂದಾಗ ಮೂವರಿಗೂ ಹೃದಯ ಬಾಯಿಗೆ ಬಂದಂತಾಗಿತ್ತು! “ಸುಖ ಪಡೆಯುವುದು ನನ್ನ ಹಣೆಬರಹದಲ್ಲಿ ಬರೆದಿರಲೇ ಇಲ್ಲವೇನೋ! “ ಎಂದು ಸೀತಮ್ಮ ಅಳುತ್ತಾ ಕಾರಿನ ಪ್ರಕಾಶನಿಗೆ ತಕ್ಷಣವೇ ಬಾ ಎಂದು ಫೋನ್ ಹಾಕಿದಳು. ಪದುಮ ಕಷ್ಟಪಟ್ಟು ಎದ್ದು, ಮನೆಯ ಹೊರಗಿರುವ ಬಚ್ಚಲುಮನೆಗೆ ನಡೆದಳು. ನಿನ್ನೆ ರಾತ್ರಿಯಿಂದ ಹೊಟ್ಟೆಯಲ್ಲಿದ್ದ ಮಗು ಒದೆಯದೆ ಇದ್ದದ್ದು ಮನಸ್ಸಿಗೆ ಹೊಳೆದು ತಾಯ್ತತನದ ಸುಖ ತನಗಿಲ್ಲವೇನೋ ಎಂದು ಮೌನವಾಗಿ ಕಣ್ಣೀರುಗರೆದಳು. ಮಟಮಟ ಮಧ್ಯಾಹ್ನದ ಹನ್ನೆರಡು ಗಂಟೆ ಹೊತ್ತಲ್ಲಿ ಮಹಾಲಯ ಅಮವಾಸ್ಯೆಯೆಂದು ನದಿಯಲ್ಲಿ ನಿಂತು ತರ್ಪಣ ನೀಡುವವರನ್ನೂ, ಪಿಂಡಪ್ರದಾನ ಮಾಡುವವರನ್ನೂ ಸುಮ್ಮನೇ ನಿಂತು ನೋಡುತ್ತಿದ್ದಾಗ…
“ಠಪ್್” ಎಂದು ಬೆನ್ನಿಗೆ ಜೋರಾಗಿ ಹೊಡೆದ ರಭಸಕ್ಕೆ ಎರಡು ಅಡಿ ಮುಂದಕ್ಕೆ ಹೋಗಿ ಕವುಚಿ ಬಿದ್ದಳು ಪದುಮ!! ಯಾವುದೋ ಒಂದು ಶಕ್ತಿ ತನ್ನೊಳಗೆ ಹೋದಂತೆ, ಮೈ ಬೆಚ್ಚಗಾದಂತೆ ಅನ್ನಿಸಿ ನಡುಗಿಹೋದಳು! “ ಓಓಓ….” ಎಂದು ಕೇಳಿದ ಬೊಬ್ಬೆ ಮತ್ತು ಢಬ್ ಎಂದು ಬಿದ್ದ ಸದ್ದು ಕೇಳಿ ಬ್ಯಾಗಲ್ಲಿ ಸೀರೆ ತುಂಬಿಸುತ್ತಿದ್ದ ಸೀತಮ್ಮ ಓಡಿಬಂದಳು! ಬಿದ್ದವಳ ಮುಖಕ್ಕೆ ನೀರು ಚಿಮ್ಮಿಸಿ, ಅವಳನ್ನು ಎಬ್ಬಿಸಿ ಕೂರಿಸುವಷ್ಟರಲ್ಲಿ “ ಅಯ್ಯೋ, ಹೊಟ್ಟೆ ನೋಯ್ತಿದೆ ಅತ್ತೇ!” ಎಂದು ಕಿರುಚಲು ಶುರು ಮಾಡಿದ್ದಳು ಪದುಮ! ಕಾರಿನ ಪ್ರಕಾಶ ಬಂದು ಹಾರ್ನ್ ಮಾಡಿದಾಗ ರಂಗ ಓಡಿಹೋಗಿ ಅವನನ್ನು ಮನೆಯ ಹಿತ್ತಿಲಿಗೆ ಕರೆ ತಂದ.ಮೂವರೂ ಸೇರಿ ಪದುಮಳನ್ನು ಎತ್ತಿ ಕಾರಿನಲ್ಲಿ ಕೂರಿಸಿ ತಮ್ಮೂರಿನ ಆಸ್ಪತ್ರೆಗೇ ಕೊಂಡೊಯ್ದರು. ಬಿಸಿಲಿನಲ್ಲಿ ನಡೆದುಕೊಂಡು ಬಂದು ಸುಸ್ತಾಗಿದ್ದ ನರ್ಸಮ್ಮ ನೀರು ಕುಡಿದು ಸುಧಾರಿಸಿಕೊಳ್ಳುವಷ್ಟರಲ್ಲಿ, ಸ್ಪೀಡಾಗಿ ಬಂದು ನಿಂತ ಕಾರಿನ ಹಾರ್ನ್ ಕೇಳಿ ಹೊರಗೆ ಹೋದಳು. ನೋವಿನಿಂದ ಕಿರುಚುತ್ತಿದ್ದ ಪದುಮಳನ್ನು ನೋಡಿ ಲೇಬರ್ ವಾರ್ಡಿಗೆ ಹೋಗಿ ಹೆರಿಗೆಗೆ ತಯಾರಿ ಮಾಡಲು ಶುರು ಮಾಡಿದಳು. ಲೇಬರ್ ರೂಮಿಗೆ ಹೋದ ಐದೇ ನಿಮಿಷದಲ್ಲಿ ಹೆರಿಗೆಯಾಗಿ, ಮಗುವಿನ ಅಳು ಕೇಳಿಸಿದಾಗ ಸೀತಮ್ಮ ನಿಂತಲ್ಲೇ ದೇವರಿಗೆ ಕೈ ಮುಗಿದಳು! “ಇದೆಂಥಾ ಪವಾಡ! ಈ ಮಗು ಬದುಕುವ ಚಾನ್ಸೇ ಇರ್ಲಿಲ್ಲ!” ಎಂದು ತನ್ನೊಳಗೆ ತಾನೇ ಹೇಳಿಕೊಳ್ಳುತ್ತಾ ನರ್ಸಮ್ಮ ತನ್ನ ಎದೆಯ ಮೇಲೊಂದು ಕ್ರಾಸ್ ಎಳೆದಳು! ಮಗುವಿಗೆ ಸ್ನಾನ ಮಾಡಿಸಿ, ಬಟ್ಟೆಯಲ್ಲಿ ಸುತ್ತಿ ತಂದು ಸೀತಮ್ಮನ ಕೈಯ್ಯಲ್ಲಿಟ್ಟಾಗ ತನ್ನ ಜೀವನದಲ್ಲಿ ಇನ್ನೊಂದು ತಿರುವು ಬರುತ್ತಿದೆಯೆಂದು ಅವಳಿಗೆ ಗೊತ್ತಾಗಲೇ ಇಲ್ಲ!!
ಅಂತೂ ಸುಖ ಪ್ರಸವವಾಗಿ ಮನೆಗೆ ಬಂದು, ಹತ್ತನೆಯ ದಿನ ಮಗುವಿಗೆ ‘ರಾಜಶೇಖರ’ ಎಂದು ನಾಮಕರಣ ಮಾಡಲಾಯ್ತು. ಮಗುವಿನ ಲಾಲನೆ ಪಾಲನೆಯಲ್ಲಿ ಮುಳುಗಿದ ಪದುಮ ಅಂದು ತನ್ನ ಬೆನ್ನಿಗೆ ಹೊಡೆದು ತಳ್ಳಿದವರ್ಯಾರು ಎನ್ನುವುದನ್ನು ಮರೆತುಬಿಟ್ಟಳು ಕೂಡ! ಮಗುವಿನ ರಾಕ್ಷಸ ಹಸಿವನ್ನು ತಣಿಸಲಾಗದೆ ಲ್ಯಾಕ್ಟೋಜನ್ನಿನ ಡಬ್ಬಿಯನ್ನು ತರಿಸಲಾಯ್ತು! ದೊಡ್ಡ ಸೈಜಿನ ಬಾಟಲಿಯ ತುಂಬಾ ಹಾಲನ್ನು ನಿಮಿಷದಲ್ಲೇ ಖಾಲಿ ಮಾಡುವ ಮಗುವನ್ನು ಅಚ್ಚರಿಯಿಂದ ನೋಡುತ್ತಿದ್ದಳು ಪದುಮ! “ ಇಷ್ಟು ಸಣ್ಮಗು ಇಷ್ಟೊಂದು ಹಾಲು ಕುಡಿಯತ್ತಾ ಅತ್ತೇ?!” ಎಂದು ಕೇಳಿದಾಗ “ ಥೂ, ಬಿಡ್ತು ಅನ್ನೇ! ಮಗೂಗೆ ತಾಯಿ ದೃಷ್ಟಿನೇ ತಾಗತ್ತಂತೆ “ ಎಂದು ಹೇಳಿ ಸೀತಮ್ಮ ಸೊಸೆಯ ಬಾಯಿ ಮುಚ್ಚಿಸಿದಳು. ಆದರೆ ಮೆಡಿಕಲ್ಲಿನ ಹುಡುಗ ವಾರಕ್ಕೊಂದು ಲ್ಯಾಕ್ಟೋಜನ್ ಡಬ್ಬಿಯನ್ನು ಕೊಳ್ಳುವ ರಂಗನನ್ನು “ ನೀವು ಮನೆಯವ್ರು ಕೂಡ ಕಾಫಿ, ಚಾ ಇದ್ರಿಂದ್ಲೇ ಮಾಡ್ತೀರೋ ಹೇಗೇ?” ಎಂದು ತಮಾಷೆ ಮಾಡಿದಾಗ ಮಾತ್ರ ಸೀತಮ್ಮ ದುರ್ಗಿಯ ಅವತಾರ ತಾಳಿದಳು! ಸೀದಾ ಮೆಡಿಕಲ್ಲಿಗೆ ಹೋಗಿ ಆ ಹುಡುಗನನ್ನು ಶರಂಪರ ಬೈದುಬಿಟ್ಟು ಮೊಮ್ಮಗನ ಪರ ವಹಿಸುವ ಕಾರ್ಯಕ್ಕೆ ನಾಂದಿ ಹಾಕಿಬಿಟ್ಟಳು!
ಅಂತೂ ಅತ್ತು, ನಕ್ಕು, ಉರುಳಿ, ತೆವಳಿ, ಹನ್ನೊಂದು ತಿಂಗಳಿಗೆ ನಡೆಯಲು ಕಲಿತ ರಾಜ ಆಮೇಲೆ ಓಡಿದ್ದೇ ಓಡಿದ್ದು! ಒಂದು ಕ್ಷಣ ಕೂರದ ಮಗುವನ್ನು ಸುಧಾರಿಸುವುದೇ ಸಾಕಾಗಿ ಹೋಗುತ್ತಿತ್ತು ಪದುಮನಿಗೆ! ಬಾಯಲ್ಲಿ ಬೆಟ್ಟು ಇಟ್ಟು ಬೆರ್ಚಪ್ಪನಂತೆ ತನ್ನ ಬಳಿಯೇ ಕೂತಿರುತ್ತಿದ್ದ ರಂಗನನ್ನು ನೋಡಿದ್ದ ಸೀತಮ್ಮನಿಗೆ ಮೊಮ್ಮಗನನ್ನು ಹಿಡಿಯಲಾಗುತ್ತಿರಲಿಲ್ಲ. ರಾಜನಿಗೆ ಎರಡು ವರ್ಷ ತುಂಬಿದ ಕೂಡಲೇ ಅಂಗನವಾಡಿಗೆ ಕಳಿಸಿದರೆ, ಇವನ ತುಂಟಾಟ ತಡೆಯಲಾರದೆ ಮುಂದಿನ ವರ್ಷ ಕಳಿಸಿ ಎಂದು ಟೀಚರ್ ಹೇಳೇಬಿಟ್ರು! ಮೂರು ವರ್ಷ ತುಂಬಿದ ನಂತರ ಕಳಿಸಿದ್ರೆ ದಿನಕ್ಕೊಂದು ಕಂಪ್ಲೇಂಟು ಹೇಳುವ ಇತರ ತಾಯಂದಿರ ಕಾಟ ತಡೆಯಲಾಗದೆ ಸೀತಮ್ಮ ತಾನಾಗೇ ಮೊಮ್ಮಗನನ್ನು ಅಂಗನವಾಡಿಗೆ ಕಳಿಸುವುದನ್ನು ನಿಲ್ಲಿಸಿಬಿಟ್ಟಳು! ಎರಡ್ಮೂರು ಸಲ ಮರದ ಮೇಲಿಂದ ಬಿದ್ದು, ನದಿಯಲ್ಲಿ ಮುಳುಗೇಳಿ, ಬೈಕಿಗೆ ಅಡ್ಡಬಂದು ಬೈಕುಗಳನ್ನೇ ಬೀಳಿಸಿ, ಟಿವಿ ಮೊಬೈಲುಗಳನ್ನು ಪುಡಿಗೈದು ತನ್ನ ಪರಾಕ್ರಮ ತೋರಿಸುತ್ತಾ ಐದು ವರ್ಷ ತುಂಬಿದ ಮೇಲೆ ಚರ್ಚ್ ಶಾಲೆಯ ಇಂಗ್ಲೀಷ್ ಮೀಡಿಯಂ ಶಾಲೆಗೆ ರಾಜನನ್ನು ಭರ್ತಿಮಾಡಲಾಯ್ತು.
ಶಾಲೆ ಸೇರಿದ ಮೇಲೆ ರಾಜ ತನ್ನ ಹೆಸರಿನಂತೆ ರಾಜನೇ ಆದ! ಇಷ್ಟವಿದ್ದರೆ ತರಗತಿಯಲ್ಲಿ ಕೂತ, ಇಲ್ಲದಿದ್ದರೆ ತರಗತಿಯಿಂದ ಹೊರಗೆ ಒಂದೇ ಓಟ! ಒಂದು ದಿನ ಒಂದಕ್ಷರ ಬರೆಯದಿದ್ದರೆ ಮತ್ತೊಂದು ದಿನ ಮುಂದಿನ ಪಾಠವನ್ನೂ ಓದಿ ಅದರ ಉತ್ತರ ಬರೆದಿಡುತ್ತಿದ್ದ! ಇತರ ಮಕ್ಕಳ ಪೆನ್ಸಿಲು, ರಬ್ಬರು, ತಿಂಡಿಯ ಮೇಲೆ ಕಣ್ಣು ಬಿದ್ದರೆ ಅದನ್ನು ಎಳೆದು ತೆಗೆದುಕೊಳ್ಳುವವನೇ! ಕೇಳಿದರೆ, ನನಗದು ಇಷ್ಟವಾಯ್ತು. ಅದಕ್ಕೆ ತಗೊಂಡೆ ಎಂಬ ಮುಲಾಜಿಲ್ಲದ ಉತ್ತರ ನೀಡುತ್ತಿದ್ದ! ಕ್ರಿಕೆಟ್ ಆಡುವಾಗ ಬ್ಯಾಟಿಂಗ್ ತನಗೇ ಮೊದಲು ಸಿಗಬೇಕು, ತಾನು ಸೆಂಚುರಿ ಹೊಡೆಯುವವರೆಗೂ ಆಡಬೇಕು ಎನ್ನುತ್ತಿದ್ದ! ಹೈಸ್ಕೂಲು ಸೇರುವಷ್ಟರಲ್ಲಿ ಸಿಕ್ಕಸಿಕ್ಕವರ ತೆಂಗಿನಮರ ಗಳನ್ನು ಏರಿ ಎಳನೀರು ಕುಡಿಯುವುದು, ಸೀಬೆ ದಾಳಿಂಬೆಯನ್ನು ಕಿತ್ತು ತಿನ್ನುವುದು, ಸ್ಕೂಟರಿಗೆ ಕೀ ಮರೆತುಬಿಟ್ಟವರ ಸ್ಕೂಟರನ್ನು ತೆಗೆದುಕೊಂಡು ಹೋಗುವುದು, ಗಂಟೆಗಟ್ಟಲೆ ನದಿಯಲ್ಲಿ ಈಜುವುದು ಮುಂತಾದವೇ ಜಾಸ್ತಿಯಾಗಿ ಸೀತಮ್ಮನಿಗೆ ಮೊಮ್ಮಗನ ಪರವಾಗಿ ಕ್ಷಮೆ ಕೇಳುವುದೇ ಕೆಲಸವಾಗಿ ಬಿಟ್ಟಿತು! ಹದಿನೈದು ವರ್ಷಕ್ಕೇನೇ ಆರು ಫೀಟ್ ಎತ್ತರ ಬೆಳೆದ ಮೊಮ್ಮಗನಿಗೆ ಬಾಗಿ ಹೋದ ಅಜ್ಜಿಯ ಮಾತೆಲ್ಲಿ ಕೇಳಿಸಬೇಕು? ಅಪ್ಪ ಅಮ್ಮನ ಭಯವಂತೂ ಮೊದಲೇ ಅವನಿಗಿರಲಿಲ್ಲ ಬಿಡಿ! ಶಾಲೆಯಿಂದ ಅಥವಾ ಯಾರದೋ ಮನೆಯಿಂದ ಕರೆ ಬಂದರೆ ಗಾಡಿಯನ್ನು ಪದುಮಳಿಗೆ ವಹಿಸಿ ಚಟಚಟನೆ ಸೀತಮ್ಮ ಹೊರಟುಬಿಡುವಳೇ! ಕಣ್ಣೀರಾಕಿ, ಸೆರಗೊಡ್ಡಿ ಮೊಮ್ಮಗನನ್ನು ಕ್ಷಮಿಸಿರೆಂದು ಕೇಳಿ ಕೇಳಿ ಒಂದು ದಿನ ರಾಂಪುರದ ಜನರು ರಾಜನ ಹೆಸರನ್ನೇ ಮರೆತುಬಿಟ್ಟರು! ‘ಸೀತಮ್ಮನ ಮೊಮ್ಮಗ’ ಎಂಬ ಹೆಸರೇ ರಾಜನಿಗೆ ಪರ್ಯಾಯವಾಗಿ ಹೋಯಿತು!
ಹೀಗೆಯೇ ನಡೆಯುತ್ತಿದ್ದರೆ ರಾಂಪುರದ ಜನರು ರಾಜನನ್ನು ಸಹಿಸಿ ಸುಮ್ಮನಿರುತ್ತಿದ್ದರೇನೋ! ಆದರೆ ಮುಂದೆ ನಡೆದ ಎರಡು ಘಟನೆಗಳು ಅವರನ್ನು ಬೆಚ್ಚಿಬೀಳುವಂತೆ ಮಾಡಿತು! ಮೊದಲನೆಯ ಘಟನೆ ಕ್ರಿಕೆಟ್ ಆಡುವಾಗ ರಾಂಪುರದ ಪುಡಿರೌಡಿ ಒಕ್ಕಣ್ಣ ಚಂದ್ರನ ಮಗನ ಜೊತೆ ನಡೆದ ಜಗಳ! ಕ್ರಿಕೆಟ್ ಫೀಲ್ಡಿನಲ್ಲಿ ಸುಮಾರು ನೂರು ಜನ ನೋಡುತ್ತಿದ್ದಂತೆ “ನನ್ನ ಮಗನ ಮೇಲೇ ಕೈ ಎತ್ತುತ್ತಿಯೇನೋ?” ಎಂದು ಗರ್ಜಿಸಿದ ಚಂದ್ರ ರಾಜನ ಕಾಲರ್ ಹಿಡಿದಿದ್ದ! ಅದೇ ವೇಗದಲ್ಲಿ ಚಂದ್ರನ ಕಾಲರ್ ಹಿಡಿದು ಅವನ ಕಣ್ಣುಗಳನ್ನೇ ಕೋಪದಿಂದ ದೃಷ್ಟಿಸುತ್ತಿದ್ದ ರಾಜನ ಕಣ್ಣುಗಳು ಕಂದುಬಣ್ಣದಿಂದ ನೀಲಿಬಣ್ಣಕ್ಕೆ ತಿರುಗಿದ್ದವು!! ಎರಡೇ ನಿಮಿಷದಲ್ಲಿ ಚಂದ್ರ ಪುಂಗಿಯ ನಾದಕ್ಕೆ ಮರುಳಾದ ನಾಗರದಂತೆ ಮೆಲ್ಲನೆ ಅಲ್ಲಿಂದ ಸರಿದುಹೋಗಿದ್ದ! “ಇವತ್ತು ಸೀತಮ್ಮನ ಮೊಮ್ಮಗನ ಹೆಣ ಬೀಳೋದು ಗ್ಯಾರಂಟಿ!” ಎಂದು ಗುಸುಗುಸು ಮಾತಾಡುತ್ತಿದ್ದ ಜನರು ಇದನ್ನು ನೋಡಿ ಬೆಕ್ಕಸ ಬೆರಗಾಗಿ ಅಲ್ಲಿಂದ ಜಾರಿಕೊಂಡಿದ್ದರು! ಸೀತಮ್ಮನ ಕಿವಿಗೆ ಈ ಸುದ್ದಿ ಕೂಡಲೇ ಬಿದ್ದರೂ “ಕಣ್ಣಾರೆ ನೋಡದೆ ನಾನಿದನ್ನು ನಂಬಲ್ಲ” ಎಂದು ಮೊಮ್ಮಗನ ಪರ ವಕಾಲತ್ತು ನಡೆಸೇಬಿಟ್ಟಳು!
ಎರಡನೇ ಘಟನೆಯಂತೂ ರಾಂಪುರಕ್ಕೆ ರಾಜನ ಬಗ್ಗೆ ಭೀತಿಯನ್ನೇ ಹುಟ್ಟಿಸಿಬಿಟ್ಟಿತು! ಜೀಪ್ ಡ್ರೈವರುಗಳಿಗೆ ದುಡ್ಡು ಕೊಟ್ಟು ಕದ್ದು ಮುಚ್ಚಿ ಡ್ರೈವಿಂಗ್ ಕಲಿತಿದ್ದ ರಾಜ ಒಂದು ದಿನ ಯಾರನ್ನೋ ಮಾತನಾಡಿಸಲು ಅಕ್ಕಪಕ್ಕದ ಹಳ್ಳಿಗಳಿಗೆ ಸರ್ಕಿಟ್ ಹೊಡೆಯುವ ಕೊಹಿನೂರ್ ಬಸ್ ಹತ್ತಿದ. ಬಸ್ಸಿನ ಕೀಯನ್ನು ಡ್ರೈವರ್ ಬಸ್ಸಲ್ಲೇ ಇಟ್ಟಿದ್ದನ್ನು ನೋಡಿದವನೇ, ಸೀದಾ ಡ್ರೈವರ್ ಸೀಟಿಗೆ ಹಾರಿ ಇಂಜಿನ್ ಸ್ಟಾರ್ಟ್ ಮಾಡಿ ಬಸ್ಸನ್ನು ಮುಂದಕ್ಕೆ ಕೊಂಡೊಯ್ದೇ ಬಿಟ್ಟ! ಹೆದರಿ ಕಂಗಾಲಾದ ಜನರು ಬೊಬ್ಬೆ ಹಾಕಿದಾಗ ಸುತ್ತಮುತ್ತಲಿದ್ದ ಜನರು, ಡ್ರೈವರು ಬಸ್ಸಿನ ಹಿಂದೆಯೇ ಓಡಿದರು! ಸುಮಾರು ಇನ್ನೂರು ಮೀಟರ್ ಹೋದ ಮೇಲೆ ಏನು ಮಾಡಬೇಕೆಂದು ತಿಳಿಯದೆ ಮಾರ್ಗದ ಮಧ್ಯೆಯೇ ಬಸ್ಸನ್ನು ನಿಲ್ಲಿಸಿಬಿಟ್ಟ ರಾಜ ! ಬಸ್ಸನ್ನು ಸುತ್ತುವರಿದ ಜನರು “ಇವತ್ತು ಇವನಿಗೆ ಬುದ್ದಿ ಕಲಿಸಲೇ ಬೇಕು!” ಎಂದು ಮಾತಾಡಿಕೊಳ್ಳುತ್ತಾ ಪೋಲಿಸ್ ಸ್ಟೇಷನ್ ಗೆ ಫೋನ್ ಮಾಡಿ ಸಬ್ ಇನ್ಸ್ಪೆಕ್ಟರನ್ನು ಬಸ್ಸಿರುವ ಜಾಗಕ್ಕೆ ಕರೆದೇಬಿಟ್ಟರು! ತನಗೂ ಈ ಘಟನೆಗೂ ಸಂಬಂಧವೇ ಇಲ್ಲದಂತೆ ತಣ್ಣಗೆ ನಿಂತಿದ್ದ ರಾಜನ ಬಳಿ ಜನರ್ಯಾರೂ ಸುಳಿಯಲಿಲ್ಲ. ಅವತ್ತು ರಾಜನ ನೀಲಿಗಣ್ಣನ್ನು ನೋಡಿ ತಲೆತಗ್ಗಿಸಿ ಹೋದ ಒಕ್ಕಣ್ಣ ಚಂದ್ರ ಇವತ್ತಿಗೂ ಮಂಕು ಬಡಿದಂತೆ ಕೂತದ್ದನ್ನು ನೋಡಿದ ಜನರು ರಾಜನಿಂದ ಹತ್ತಡಿ ದೂರದಲ್ಲಿ ನಿಂತು, ಅವನೊಂದಿಗೆ ಕಣ್ಣು ಕಲೆತುಹೋಗದಂತೆ ಎಚ್ಚರಿಕೆ ವಹಿಸಿ ನಿಂತಿದ್ದರು. ಜೀಪಿನಿಂದ ಕೆಳಗಿಳಿದು ಬಂದ ಕಡಕ್ ಅಧಿಕಾರಿ ಎಸ್ಸೈ ಕೆಂಪಯ್ಯ ಹದಿನಾರರ ಹುಡುಗನನ್ನು ತುಸು ಅಸಡ್ಡೆಯಿಂದಲೇ ನೋಡಿದರು. ರಾಜ ಮತ್ತು ಚಂದ್ರನ ಘಟನೆ ಅವರ ಕಿವಿಗೆ ಬಿದ್ದಿದ್ದರೂ ಅವರದನ್ನು ನಂಬಿರಲಿಲ್ಲ. “ವಯಸ್ಸು ಈ ತರ ಆಡಿಸತ್ತೆ. ಒಂದು ಸಲ ಕಡಕ್ ಆಗಿ ಎಚ್ಚರಿಕೆ ಕೊಟ್ಟರೆ ಸಾಕು. ಕಂಪ್ಲೇಂಟ್ ಕೊಡಿಸಿ ಒಳಗೆ ಹಾಕುವುದೇನೂ ಬೇಡ!” ಅಂದುಕೊಳ್ಳುತ್ತಾ ರಾಜನೆದುರಿಗೆ ನಿಂತು “ ಏನೋ ಹುಡುಗಾ? ಹೀರೋ ಆಗೋ ಶೋಕಿನಾ ನಿಂಗೆ?” ಎಂದು ಗಡುಸಾಗಿ ಕೇಳಿದರು. ಜನರು ಎರಡು ಹೆಜ್ಜೆ ಹಿಂದೆ ಇಟ್ಟು ಮುಂದೇನಾಗತ್ತೋ ಎಂದು ತುದಿಗಾಲಲ್ಲಿ ನಿಂತರು! ಸೊಂಟದ ಮೇಲೆ ಎರಡೂ ಕೈಗಳನ್ನಿಟ್ಟು ಎಸ್ಸೈ ಕೆಂಪಯ್ಯನವರ ಕಣ್ಣಲ್ಲಿ ಕಣ್ಣಿಟ್ಟ ರಾಜನ ಕಣ್ಣುಗಳು ನೀಲಿಬಣ್ಣ ತಳೆಯುತ್ತಿದ್ದಂತೆ, ಜನರು ಜೀವ ಕೈಯ್ಯಲ್ಲಿಡಿದು ಓಟಕ್ಕಿತ್ತರು! ಸಮ್ಮೋಹನಕ್ಕೆ ಒಳಗಾದವರಂತೆ ಎಸ್ಸೈ ಕೆಂಪಯ್ಯನವರು ಜೀಪಿನ ಬಳಿ ನಡೆಯುತ್ತಿದ್ದಂತೆ ಜೀಪ್ ಡ್ರೈವರ್ ಜೀಪಿಗೆ ಜೀವ ಕೊಟ್ಟಾಗಿತ್ತು. ಕೆಂಪಯ್ಯನವರು ಜೀಪಲ್ಲಿ ಕೂತದ್ದೇ ತಡ, ಒಂದೇ ನಿಮಿಷದಲ್ಲಿ ಜೀಪು ಧೂಳೆಬ್ಬಿಸಿ ಮಾಯವಾಯಿತು! ಆಮೇಲೆ ಅಲ್ಲಿ ಉಳಿದದ್ದು ರಾಜ ಮತ್ತು ಖಾಲಿ ಬಸ್ ಮಾತ್ರ!!
ಮುಂದಿನ ಹದಿನೈದು ನಿಮಿಷದಲ್ಲಿ ರಾಂಪುರದ ಮುಖಂಡರಾದ ಲಿಂಗೇಗೌಡರ ಮನೆಯ ಅಂಗಳದಲ್ಲಿ ಜನರು ಸೇರಿದರು. ಸೀತಮ್ಮ, ರಂಗ ಮತ್ತು ಪದುಮರನ್ನು ಅಲ್ಲಿಗೆ ಕರೆಸಿಕೊಳ್ಳಲಾಯಿತು.
ಎಂದಿನಂತೆ ಕಣ್ಣೀರು ಹಾಕಿ ಕ್ಷಮೆ ಕೇಳುವ ವಿಷಯ ಇದಲ್ಲವೆಂದು ತಿಳಿದೋ ಏನೋ ಸೀತಮ್ಮ ಕಲ್ಲಿನಂತೆ ಕುಳಿತಿದ್ದಳು! ಮಹಾಲಯ ಅಮವಾಸ್ಯೆ ದಿನ ಹುಟ್ಟಿದ ರಾಜನ ಮೈಮೇಲೆ ಈಗ ಮಹಾಲಯದ ಸಮಯದಲ್ಲಿ ದೆವ್ವ ಹೊಕ್ಕುತ್ತದೆ ಎಂದು ಜನರು ತೀರ್ಮಾನಿಸಿ ಆಗಿತ್ತು. ಅದಕ್ಕೆ ಒಗ್ಗರಣೆ ಹಾಕುವಂತೆ ನರ್ಸಮ್ಮ “ ಈ ಮಗು ಬದುಕಲು ಸಾಧ್ಯವೇ ಇರ್ಲಿಲ್ಲ ಹಿರಿಯರೇ! ನಾನು ಚೆಕಪ್ ಮಾಡಿ ಇಪ್ಪತ್ತೇ ನಿಮಿಷದಲ್ಲಿ ಆರೋಗ್ಯವಂತ ಮಗು ಹುಟ್ಲಿಕ್ಕೆ ಹೇಗೆ ಸಾಧ್ಯ? ನಾನು ಇದನ್ನು ದೇವ್ರ ಪವಾಡ ಎಂದು ನಂಬಿದ್ದೆ! ಈಗ ನೋಡಿದ್ರೆ……” ಎಂದು ರಾಗ ಎಳೆದಾಗ ಪದುಮ ಬೆಚ್ಚಿ ಬಿದ್ದಳು! ತನ್ನನ್ನು ಯಾರೋ ಹಿಂದಿನಿಂದ ಹೊಡೆದು ತಳ್ಳಿ, ತಾನು ಬಿದ್ದದ್ದು ಇಷ್ಟು ವರ್ಷಗಳ ನಂತರ ನೆನಪಾಯ್ತು! ಎಷ್ಟಾದರೂ ಹೆತ್ತಕರುಳು ತಾನೆ? ತಾನು ಬಾಯಿ ಬಿಟ್ಟರೆ ಜನರು ತನ್ನ ಮಗನನ್ನು ಕೊಲ್ಲಲು ಹೇಸುವುದಿಲ್ಲವೆಂದು ತಿಳಿದು ಉಸಿರು ಬಿಗಿಹಿಡಿದು ಕುಳಿತಳು ಪದುಮ! ಸಭೆಯ ಕೊನೆಗೆ ನಾಳೆ ಮಹಾಲಯ ಅಮವಾಸ್ಯೆಯ ದಿನ ಕಳೆದ ನಂತರ ರಾಜನ ನಡವಳಿಕೆ ಗಮನಿಸಬೇಕೆಂದೂ, ಗುಡ್ಡದ ಹನುಮಂತನ ತಾಯತ ತಂದು ರಾಜನಿಗೆ ಕಟ್ಟಬೇಕೆಂದೂ, ನಾಳೆಯ ದಿನ ಜನರೆಲ್ಲರೂ ಅವನಿಂದ ದೂರವಿರಬೇಕೆಂದು ತೀರ್ಮಾನಿಸಲಾಯಿತು!
ಮನೆಗೆ ಬಂದ ಕೂಡಲೇ ಟಿವಿ ನೋಡುತ್ತಿದ್ದ ರಾಜ , ಏನೂ ನಡೆದ ನೆನಪೇ ಇಲ್ಲವೆನ್ನುವಂತೆ “ ಅಜ್ಜೀ, ಊಟ ಬಡ್ಸು. ಜೋರು ಹಸಿವಾಗ್ತಿದೆ” ಎಂದಾಗ ಸೀತಮ್ಮ ಮತ್ತು ಪದುಮ ಕಣ್ಣೀರಾದರು. ಯುವರಾಜನಂತಿರುವ ತನ್ನ ಮೊಮ್ಮಗನಿಗೆ ಯಾರೋ ಕೆಟ್ಟದೃಷ್ಟಿ ಹಾಕಿದ್ದಾರೆ ಎಂದು ಹಿಡಿಶಾಪ ಹಾಕುತ್ತಾ, “ಬಾ ಮಗಾ, ನಾನೇ ತಿನ್ನಿಸ್ತೇನೆ” ಎಂದು ತಟ್ಟೆ ತುಂಬಾ ಅನ್ನ ಸಾರು ಹಾಕಿ ಮೊಮ್ಮಗನಿಗೆ ತುತ್ತು ಕೊಟ್ಟಳು. ಹೊಟ್ಟೆ ತುಂಬಾ ಊಟ ಮಾಡಿದ ಮೊಮ್ಮಗನ ಬೆನ್ನು ತಟ್ಟುತ್ತಾ, “ಜೋ ಜೋ ಶ್ರೀಕ್ರಿಷ್ಣ ಪರಮಾನಂದ….” ಎಂದು ಗುನುಗುತ್ತಾ ಮಲಗಿಸಿಯೂ ಬಿಟ್ಟಳು!
ಮರುದಿನ ಮಹಾಲಯ ಅಮವಾಸ್ಯೆ! ರಾಜನ ಹದಿನಾರನೇ ಹುಟ್ಟುಹಬ್ಬ. ಆದರೆ ಊರಿನ ಮುಖಂಡರ ನಿರ್ಣಯದಂತೆ ಅವನು ಯಾರನ್ನೂ ಭೇಟಿಯಾಗಲು ಹೋಗಲಿಲ್ಲ. ಯಾಕೋ ಅವನೂ ಆ ದಿನ ಸಪ್ಪಗಿದ್ದ. ಮಧ್ಯಾಹ್ನ ಹನ್ನೆರಡರ ಹೊತ್ತಿಗೆ ಹಿತ್ತಿಲಿಗೆ ಹೋದವನು ನದಿಯ ಕಡೆ ನೋಡಿ ಅಚ್ಚರಿಗೊಂಡ! ಊರಿಗೆ ಊರೇ ನದಿಯ ದಂಡೆಯಲ್ಲಿ ಸೇರಿರುವುದನ್ನು ನೋಡಿ ಅವನೂ ಓಡಿದ! ರಾಜನನ್ನು ಕಂಡಿದ್ದೇ ತಡ, ಜನರು ಹೆದರಿ ಅವನಿಗೆ ದಾರಿ ಮಾಡಿಕೊಟ್ಟು ದೂರ ಹೋಗಿ ನಿಂತರು. ರಾಜ ನೋಡಿದಾಗ ಜಟಾಧಾರಿಯಾದ ನಗ್ನ ಸಾಧುವೊಬ್ಬರು ನದಿಗೆ ಎದುರಾಗಿ ಒಂಟಿಕಾಲಿನಲ್ಲಿ ನಿಂತು , ಎರಡೂ ಕೈಗಳನ್ನು ಮೇಲಕ್ಕೆತ್ತಿ ನಮಸ್ಕಾರ ಮಾಡುತ್ತಾ ನಿಂತಿದ್ದಾರೆ! ಆ ಸಾಧುವಿನ ಕೊರಳಲ್ಲಿರುವ ತಲೆಬುರುಡೆಯ ಮಾಲೆ, ಮೈಗೆ ಬಳಿದ ಬೂದಿ ನೋಡಿ ಉತ್ತರಭಾರತದಿಂದ ಬಂದ ನಾಗಾ ಸಾಧುವೆಂದು ತಿಳಿದು ಜನರು ಗುಂಪುಕೂಡಿ ಅವರನ್ನು ನೋಡಲು ಸೇರಿದ್ದರು!
ಸ್ವಲ್ಪ ಹೊತ್ತು ಕಳೆದ ನಂತರ ತನ್ನ ಪ್ರಾರ್ಥನೆಯನ್ನು ಮುಗಿಸಿದ ಸಾಧುಗಳು ತಿರುಗಿ ನಿಂತು ರಾಜನನ್ನು ದಿಟ್ಟಿಸಿ ನೋಡಿದವರೇ , ಮೆಲ್ಲನೆ ನಡೆದು ಅವನ ಬಳಿಗೆ ಬಂದರು. ರಾಜನಿಗೆದುರಾಗಿ ನಿಂತು ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೇ ತಡ, ಜನರು ನಿಧಾನಕ್ಕೆ ಹಿಂದೆ ಸರಿಯತೊಡಗಿದರು! ನಾಗಾಸಾಧುಗಳ ಬಗ್ಗೆ ಕತೆಗಳನ್ನು ಕೇಳಿದ್ದ ಜನರು ಇವತ್ತು ಏನು ಘಟಿಸುವುದೋ ಎಂದು ಹೆದರಿ ಓಡಲು ಸಿದ್ಧರಾದರು! ಸೊಂಟದ ಮೇಲೆ ಎರಡೂ ಕೈಗಳನ್ನು ಇಟ್ಟುಕೊಂಡು ನಿಂತಿದ್ದ ರಾಜನ ಕಣ್ಣುಗಳು ನಿಧಾನಕ್ಕೆ ನೀಲಿಯಾಗುತ್ತಿದ್ದಂತೆ ಸಾಧುಗಳು ಮುಗುಳ್ನಕ್ಕರು! ಬರೋಬ್ಬರಿ ಐದು ನಿಮಿಷಗಳ ಕಾಲ ಕಣ್ಣುಗಳಲ್ಲೇ ಮಾತನಾಡಿಕೊಳ್ಳುವವರಂತೆ, ಕಲ್ಲಿನಂತೆ ನಿಂತ ಇಬ್ಬರನ್ನು ನೋಡಿ ಜನರು ಬೆಪ್ಪರಾದರು. ಕೊನೆಗೆ ಮೌನ ಮುರಿಯುವಂತೆ, ಸ್ವಲ್ಪ ದೂರದಲ್ಲಿ ಕಾಣಿಸುತ್ತಿದ್ದ ತೆಂಗಿನಮರವೊಂದನ್ನು ತೋರಿಸುತ್ತಾ ಸಾಧುಗಳು
“ಮಗೂ, ಇವತ್ತು ರಾತ್ರಿ ಹನ್ನೆರಡು ಗಂಟೆಗೆ ಆ ಮರ ಹತ್ತಿ ನನಗೆ ಎಳನೀರು ತಂದುಕೊಡುವೆಯಾ?” ಎಂದು ಪಿಸುಗುಟ್ಟಿದರು. ಅವರ ಮಾತಿನ ಅರ್ಥ ತಿಳಿದಂತೆ ರಾಜನೂ ಮುಗುಳ್ನಕ್ಕು ತಲೆಯಾಡಿಸಿದ.ಕಣ್ಣುಗಳು ಪುನಃ ಕಂದುಬಣ್ಣ ತಳೆಯುತ್ತಿದ್ದಂತೆ ಒಂದಕ್ಷರ ಮಾತನಾಡದೆ ತನ್ನ ಮನೆಗೆ ನಡೆದ. ಸಾಧುಗಳು ತಮ್ಮ ಪಾಡಿಗೆ ತಮ್ಮ ದಾರಿ ಹಿಡಿದು ಹೋದರು! ಆದರೆ ಭಯಗೊಂಡದ್ದು ಮಾತ್ರ ರಾಂಪುರದ ಜನತೆ! ನಾಗಾಸಾಧುಗಳು ರಾಜನಿಗೆ ಏನನ್ನೋ ಹೇಳಿದ್ದು, ಆತ ಮುಗುಳ್ನಕ್ಕು ತಲೆಯಾಡಿಸಿದ್ದನ್ನು ನೋಡಿದವರು ಮನೆಗೆ ಸೇರಿ ಬಾಗಿಲು ಹಾಕಿಕೊಂಡರು! ಏನೋ ನಡೆಯಬಾರದ್ದು ನಡೆದುಹೋಗತ್ತೇನೋ ಅನ್ನುವಂತೆ ಸ್ವಘೋಷಿತ ಕರ್ಫ್ಯೂ ವಿಧಿಸಿಕೊಂಡು ರಾಂಪುರ ಸ್ತಬ್ಧವಾಯಿತು!
ಆ ದಿನವಿಡೀ ಮೌನವಾಗಿದ್ದ ರಾಜ ರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿ ಸಾಧುಗಳು ತೋರಿಸಿದ ತೆಂಗಿನಮರವನ್ನು ಹತ್ತಲು ಶುರು ಮಾಡಿದ! ಅವನು ಹತ್ತಿದಂತೆಲ್ಲಾ ಮರ ಇನ್ನೂ ಬೆಳೆಯಲು ತೊಡಗಿ, ಕಾಯಿ ಕೈಗೆ ಎಟುಕದಂತಾಗಿ ರಾಜ ಕೈ ಕಾಲು ಸೋಲುವವರೆಗೆ ಹತ್ತುತ್ತಲೇ ಹೋದ! ಎಷ್ಟು ಹತ್ತಿದರೂ ಸಾಲದಂತಾಗಿ ಸುಸ್ತಾಗಿ ಹೋದವನು ಕೆಳಗೆ ನೋಡಿದರೆ ತನ್ನ ಮನೆ ಒಂದು ಸಣ್ಣ ಪೆಟ್ಟಿಗೆಯಂತೆ ಕಾಣಿಸುತ್ತಿದೆ! ಕೆಳಗೆ ಇಳಿಯಲು ಕೂಡ ತನ್ನಿಂದ ಸಾಧ್ಯವಿಲ್ಲ ಎಂದು ಗೊತ್ತಾದ ಕೂಡಲೇ ಇದು ನಾಗಾಸಾಧುಗಳ ಆದೇಶ ಎಂದು ರಾಜನಿಗೆ ತಿಳಿದುಹೋಯಿತು! ಮುಗುಳ್ನಕ್ಕವನ ಕಣ್ಣು ನೀಲಿಯಾಗುತ್ತಿದ್ದಂತೆ ತನ್ನ ಎರಡೂ ಕೈಗಳನ್ನು ಮರದಿಂದ ಬಿಡಿಸಿಕೊಂಡು ಹೊರಕ್ಕೆ ಚಾಚಿಕೊಂಡ. ಒಮ್ಮೆ ನಿಡಿದಾದ ಉಸಿರೆಳೆದುಕೊಂಡು, ಕಣ್ಣು ಮುಚ್ಚಿಕೊಂಡು ಕಾಲುಗಳನ್ನು ಅಗಲಿಸಿದ!

ಕತೆಯ ಆರಂಭದಲ್ಲಿ ಓದುಗರಿಗೆ ಮೂಡಿದ ಪ್ರಶ್ನೆಗೆ ಈಗ ಉತ್ತರ ದೊರಕಿತು ಅಲ್ಲವೇ?