Click here to Download MyLang App

ಸಾಹಸದ ಪರೀಕ್ಷೆ - ಬರೆದವರು : ಅಂಬಿಕಾ.ಆರ್

ತನ್ನ ಮುಂದೆ ಕೈಮುಗಿದು ನಿಂತಿರುವ ಯುವಕನನ್ನು ಕಾಶಣ್ಣ ನಾಯಕ ದೀರ್ಘವಾಗಿ ಗಮನಿಸುತ್ತಾನೆ. ಐದು ಅಡಿ ಮೂರು ಅಂಗುಲ ಎತ್ತರ ವಿರಬಹುದು, ಎಣ್ಣೆಗೆಂಪುಬಣ್ಣ, ವ್ಯಾಯಾಮ ಮಾಡಿ ಹುರಿಗೊಂಡ ದೇಹ. ವಯಸ್ಸು ಕೇವಲ 19 - 20 ಆದರೂ ಅವನ ಮುಖದ ಮೇಲಿದ್ದ ಗಾಂಭೀರ್ಯ ಅವನ ಮಾತಿನಲ್ಲಿದ್ದ ಆತ್ಮವಿಶ್ವಾಸ ಕಾಶಣ್ಣನ್ನನ್ನು ಸೆಳೆದವು. ನಾನು ಬೇಡಪಡೆ ಗೆ ಸೇರಿ ನಾಯಕರ ಸೇವೆ ಮಾಡಬೇಕು ಎಂದು ಕೇಳಲು ಬಂದಿದ್ದ ಯುವಕ. ಬೇಡ ಪಡೆ ಎಂದರೆ ಸುಲಭದ ಮಾತಲ್ಲ, ಬಹಳ ಕಷ್ಟಕರವಾದ ಜೀವನ. ನಾಯಕರಿಗಾಗಿ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಕೆಲಸ ಮಾಡುವ ಸೈನ್ಯ. ಕಾಡಿನಲ್ಲಿ, ಬೆಟ್ಟದಲ್ಲಿ , ಗುಹೆಗಳಲ್ಲಿ ಎಲ್ಲೆಂದರಲ್ಲಿ ನುಗ್ಗಿ ಸಾಗಬೇಕು. ಇವರದು ರಾತ್ರಿಯ ಬೇಟೆ. ಕತ್ತಲಲ್ಲಿ ನೆರಳಿನಂತೆ ನಡೆದು ವೈರಿಗಳನ್ನು ಕೊಂದು ಬರುತ್ತಿದ್ದರು. ಇವರ ನಾಯಕ ಕಾಶಣ್ಣ ನಾಯಕ. ಸಾಮಾನ್ಯವಾಗಿ ತಾವೇ ಬೇಡ ಪಡೆಗೆ ಸೇರಲು ಬರುವ ಯುವಕರು ಕಡಿಮೆ. ನವರಾತ್ರಿಯ ಸ್ಪರ್ಧೆಗಳಲ್ಲಿ ಗೆದ್ದ ಯುವಕರಿಗೆ ತರಬೇತಿ ನೀಡಿ ಈ ಪಡೆಗೆ ಸೇರಿಸಿಕೊಳ್ಳುತ್ತಿದ್ದರು.
ಯುವಕನ ಆಸೆಯನ್ನು ಕೇಳಿ ಇಲ್ಲ ಎನ್ನಲಾಗದೆ, ಕಷ್ಟದ ಪರೀಕ್ಷೆಗಳನ್ನು ಇವನು ಎದುರಿಸಬಲ್ಲೆನೆ ಎಂದು ನಿಶ್ಚಯಿಸಲಾಗದೆ ನಿಂತಿದ್ದ ಕಾಶಣ್ಣ. ಆ ಹುಡುಗ ತನ್ನ ಮುಂದೆ ನಿಂತಿದ್ದ, ನಿರಂತರ ವ್ಯಾಯಾಮದಿಂದ ಬೇಡ ಪಡೆಯ ಕಷ್ಟಕರವಾದ ಕೆಲಸಗಳಿಂದ ಕಲ್ಲಿನ ಮೂರ್ತಿಯಂತಿದ್ದ ಕಾಶಣ್ಣನನ್ನು ಕಾತುರನಾಗಿ ನೋಡುತ್ತಿದ್ದ. ಅವನು ತೋಳುಗಳು, ಎದೆ ಮತ್ತು ತೊಡೆಗಳ ಮಾಂಸಖಂಡಗಳು ಹುರಿ ಮಾಡಿದಂತೆ ಗಟ್ಟಿಯಾಗಿ ದೇಹಕ್ಕೆ ಒಂದು ಕವಚ ತೊಡಿಸಿದಂತೆ ಕಾಣಿಸುತ್ತಿದ್ದವು. ಅವನ ಕಣ್ಣುಗಳು ವೈರಿಯ ರಕ್ತವನ್ನು ಹೀರಿ ಕೆಂಪಾದಂತೆ ರಕ್ತವರ್ಣ ದಿಂದ ಹೊಳೆಯುತ್ತಿದ್ದವು. ನಾನು ಇವರಂತೆಯೇ ಆಗಬೇಕೆಂಬ ಆಸೆ ಭಾರ್ಗವನಲ್ಲಿ ಬಲವಾಗುತ್ತಾಹೋಯಿತು.
ಕಾಶಣ್ಣ "ಬೇಡ ಪಡೆ ಎಂದರೆ ಸುಲಭವಲ್ಲ. ನಿನ್ನ ಹೆಸರು ಏನೆಂದೆ? ಭಾರ್ಗವ.. ಭಾರ್ಗವ ನಲ್ಲವೆ? ಆದರೂ ನೀನು ಕೇಳುತ್ತಿದೆಯಾ ಎಂದು ಪರೀಕ್ಷೆ ಮಾಡುವೆ. ನಾಳೆ ಸಂಜೆ ಇದೇ ಹೊತ್ತಿಗೆ ಬಾ ನೋಡೋಣ" ಎಂದ. ಭಾರ್ಗವ ಸಂತೋಷದಿಂದ ತಲೆ ಆಡಿಸಿ ಮೈಬಗ್ಗಿಸಿ ವಂದಿಸಿ ಅಲ್ಲಿಂದ ಹೊರಟ.
ದುರ್ಗದ ಬಂಡೆಗಳನ್ನು ಓಡುತ್ತಾ ಜಿಗಿಯುತ್ತ ತನ್ನ ಮನೆಯ ಹಾದಿ ಹಿಡಿದವನಿಗೆ 'ಗಂಡುಭೂಮಿಯ ಮಗನಾಗಿ ಮದಕರಿನಾಯಕ ನಂತಹ ನಾಯಕರ ಪ್ರಜೆಯಾಗಿ ನಾನು ಕಷ್ಟಕ್ಕೆ ಹೆದರುವುದೇ ? ಏನು ಪರೀಕ್ಷೆ ಕೊಡುತ್ತಾರೆ ಕೊಡಲಿ ಒಂದು ಕೈ ನೋಡುವೆ' ಎಂದು ಯೋಚಿಸಿದ. ಮನೆಗೆ ಬಂದು ಊಟ ಮಾಡಿ ಮಲಗಿದ್ದಾಗ ಕಾತುರನಾಗಿದ್ದ ಅವನ ಬಳಿಗೆ ನಿದ್ದೆ ಸುಳಿಯಲೇ ಇಲ್ಲ.
ಬೆಳಗ್ಗೆ ಮುಂಜಾನೆಯೇ ಎದ್ದು ಪ್ರಾರ್ಥವಿದಿಯನ್ನೆಲ್ಲಾ ಮುಗಿಸಿಕೊಂಡು ತನ್ನ ಗರಡಿ ಮನೆಗೆ ಬಂದ. ಅಲ್ಲಿ ತನ್ನ ಗುರುಗಳಿಗೆ ವಿಷಯ ತಿಳಿಸಿ ಆಶೀರ್ವಾದ ಪಡೆದು ದಿನದ ವ್ಯಾಯಾಮಕ್ಕಿಂತ ಹೆಚ್ಚು ವ್ಯಾಯಾಮಗಳನ್ನು ಮಾಡಿದ. ಭಾರವಾದ ಕಲ್ಲುಗಳನ್ನು ಎತ್ತಿ ತನ್ನ ಶಕ್ತಿ ಸಾಮರ್ಥ್ಯಗಳನ್ನು ಸಾಣೆ ಹಿಡಿದ. ಸೂರ್ಯ ನೆತ್ತಿಯ ಮೇಲೆ ಬರುವ ಹೊತ್ತಿಗೆ ಮೈಯ್ಯೆಲ್ಲಾ ಬೆವರಿನಿಂದ ತೊಯ್ದು ಹೋಗಿತ್ತು. ಹೊಟ್ಟೆಯಲ್ಲಿ ಬೆಂಕಿ ಬಿದ್ದ ಹಾಗೆ ಹಸಿವು ಎದ್ದಿತು. ಭಾರ್ಗವ ಹತ್ತಿರದ ಕೊಳದಲ್ಲಿ ಮನಬಂದಂತೆ ಈಜಿ ದಣಿವಾರಿಸಿಕೊಂಡು ಮನೆಗೆ ಬಂದ. ತಾಯಿ ಕೊಟ್ಟ ರೊಟ್ಟಿ, ಬೆಣ್ಣೆ ,ಮಾಂಸದ ತುಂಡುಗಳನ್ನು ತಿಂದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ. ನಂತರ ಹಿಂದಿನ ದಿನ ಹೇಳಿದ ಜಾಗಕ್ಕೆ ಸಮಯಕ್ಕಿಂತ ಮುಂಚಿತವಾಗಿಯೇ ಬಂದು ನಿಂತ.
ಸುತ್ತಲೂ ಕಾಣುತ್ತಿದ್ದ ಬುರುಜು ಬತೇರಿಗಳನ್ನು ಚಿಕ್ಕವಯಸ್ಸಿನಿಂದಲೂ ನೋಡಿದ್ದರೂ, ಇಂದು ತನ್ನನ್ನು ಕಾಯಲು ಬಂದ ಬಂಧುಗಳಂತೆ ಕಂಡವು. ಒಂದೊಂದು ಕಲ್ಲು ಅವನಲ್ಲಿ ಶಕ್ತಿ , ಆತ್ಮವಿಶ್ವಾಸ ತುಂಬುತ್ತಿತ್ತು. ದೂರದಲ್ಲಿ ಕುದುರೆಯ ಕರಪುಟವನ್ನು ಕೇಳಿ ತಿರುಗಿದ. ಕಾಶಣ್ಣ ನಾಯಕ ಕಾಣಲಿಲ್ಲ. ಏನು ನನಗೆ ಬರಲು ಹೇಳಿದ ಇವರು ಎಲ್ಲಿ ಹೋದರು ಎಂದು ಯೋಚಿಸಿದ.
ಆಗ ಎಲ್ಲಿಂದಲೋ ಬಂಡೆಗಳ ಮಧ್ಯದಿಂದ ನಾಲ್ಕೈದು ಜನ ಮುಖಮುಚ್ಚಿದ ವೀರಗಚ್ಚೆ ಹಾಕಿದ ಯೋಧರು ಇವನ ಮೇಲೆ ಆಕ್ರಮಣ ಮಾಡಿದರು. ಒಂದು ನಿಮಿಷ ಹಿಂದೆಗೆದರೂ, ಮತ್ತೆ ಅವರನ್ನು ಎದುರಿಸಿ ಕಾದಾಡಿದ ಭಾರ್ಗವ. ಅವನಿಗೆ ಉಸಿರು ತೆಗೆದುಕೊಳ್ಳಲೂ ಸಮಯ ಕೊಡದೆ ಅವರು ಎಲ್ಲಾಕಡೆಯಿಂದ ಅವನನ್ನು ಕೋಲಿನಿಂದ ಬಾರಿಸುತ್ತಿದ್ದರು. ಏಟುಗಳನ್ನು ತಪ್ಪಿಸಿಕೊಂಡು ಹೇಗೋ ಒಬ್ಬನ ಕೋಲನ್ನು ಕೆಳಗೆ ಬೀಳಿಸಿ ಮಿಂಚಿನ ವೇಗದಲ್ಲಿ ಅದನ್ನು ಕಾಲಿನಿಂದ ಹಾರಿಸಿ ಕೈಯಲ್ಲಿ ಹಿಡಿದ. ಅದನ್ನು ತನ್ನ ಸುತ್ತಲೂ ವೃತ್ತಾಕಾರದಲ್ಲಿ ತಿರುಗಿಸುತ್ತಾ, ಸುತ್ತಲಿದ್ದವರ ಹೊಡೆತಕ್ಕೆ ತಡೆಯಾಗುತ್ತಾ ತಾನೂ ಅವರನ್ನು ಹೊಡೆಯತೊಡಗಿದ. ಕೆಲವು ನಿಮಿಷಗಳ ಕಾದಾಟದ ನಂತರ ಹೇಗೆ ಬಂದರು ಹಾಗೆಯೇ ಅವರೆಲ್ಲ ಮಾಯವಾದರು. ಕೆಳಗೆ ಮುರಿದುಬಿದ್ದ ಕೋಲುಗಳ ನಡುವೆ ತನ್ನ ಕೋಲನ್ನು ಹಿಡಿದ ಭಾರ್ಗವ ಒಂಟಿಯಾಗಿ ನಿಂತಿದ್ದ !!
ಅಷ್ಟು ಹೊತ್ತಿಗೆ ಕಾಶಣ್ಣ ಅತ್ತಕಡೆಯಿಂದ ಕುದುರೆಯ ಮೇಲೆ ಬಂದನು. "ನಿನ್ನ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಮೆಚ್ಚಿದೆ. ಯುದ್ಧದ ಕಲೆಯಲ್ಲಿ ನೀನು ಇನ್ನೂ ಪಳಗಬೇಕು. " ಎಂದ. "ನೀವು ಹೇಳಿಕೊಟ್ಟಿದ್ದನ್ನು ನಾನು ಚೆನ್ನಾಗಿ ಕಲಿಯುವೆ" ಎಂದು ಭಾರ್ಗವ ಭರವಸೆ ನೀಡಿದ. ಮುಂದೆ ಕಾಶಣ್ಣ ಅವನನ್ನು ಒಂದು ಗುಹೆಯ ಬಳಿಗೆ ಕರೆದುಕೊಂಡು ಹೋದನು. ಅದರ ಬಾಯಿಯನ್ನು ಒಂದು ದೊಡ್ಡ ಬಂಡೆ ಮುಚ್ಚಿತ್ತು. ಭಾರ್ಗವನಿಗೆ " ಈ ಬಂಡೆಯನ್ನು ಪಕ್ಕಕ್ಕೆ ಎತ್ತಿಹಾಕಿ ಒಳಗಿರುವ ಖಡ್ಗವನ್ನು ತೆಗೆದುಕೊಂಡು ಬಾ" ಎಂದು ಹೇಳಿದನು. ಅವನು ಆ ಗುಹೆಯ ಬಾಗಿಲಲ್ಲಿ ಬಂದು ನಿಂತನು. ಇದು ಸುಲಭದ ಕೆಲಸವಾಗಿರಲಿಲ್ಲ. ಬಂಡೆ ಗುಹೆಯ ಅರ್ಧಭಾಗವನ್ನು ಮಾತ್ರ ಮುಚ್ಚಿತ್ತು, ಆದರೆ ಅದು ಮುಂಚಿನಿಂದ ಇದ್ದಂತೆ ಕಾಣಲಿಲ್ಲ. ಹೊಸದಾಗಿ ತಂದು ಹಾಕಿದ್ದಾರೆ. ಹಾಗಾಗಿ ಅದನ್ನು ಎತ್ತಬಹುದು ಎಂದು ತಿಳಿದುಕೊಂಡ. ತನ್ನ ಮೈಯಿನ ಶಕ್ತಿಯನ್ನೆಲ್ಲ ಕೇಂದ್ರೀಕರಿಸಿ ಮನಸ್ಸನ್ನು ಗಟ್ಟಿ ಮಾಡಿಕೊಂಡು ಆ ದಪ್ಪ ಬಂಡೆಯನ್ನು ಒಂದು ಸಲ ಅಲ್ಲಾಡಿಸಿದ. ಅದರ ತೂಕದ ಅಂದಾಜು ಮಾಡಿ ಕೆಳಬಾಗವನ್ನು ಗಟ್ಟಿಯಾಗಿ ಹಿಡಿದು ಶಕ್ತಿಯನ್ನೆಲ್ಲಾ ಹಾಕಿ ನಿಧಾನವಾಗಿ ಪಕ್ಕಕ್ಕೆ ಸರಿಸಿದ. ಅವನ ಕೆಲಸವನ್ನು ಗಮನಿಸಿದ ಕಾಶಣ್ಣ "ಹುಡುಗ ನಿಧಾನಿ ಎಲ್ಲವೂ ಸುಲಭ ಎಂದು ತಿಳಿಯದೆ ಅಳೆದು ಕೆಲಸ ಮಾಡುತ್ತಾನೆ" ಎಂದುಕೊಂಡ.
ಬಂಡೆಯನ್ನು ಸರಿಸಿದ ಭಾರ್ಗವ ಮೈ ಕೈ ಕೊಡವಿಕೊಂಡು ಗುಹೆಯ ಒಳಗೆ ಹೋಗಲು ತಯಾರಾದ. " ಅದು ತುಂಬಾ ಇಕ್ಕಟ್ಟಾದ ಜಾಗ. ನಿಧಾನವಾಗಿ ನೋಡಿಕೊಂಡು ಹೋಗು" ಎಂದು ಕಾಶಣ್ಣ ಎಚ್ಚರಿಕೆ ನೀಡಿದರು. ಸರಿ ಎಂದು ತಲೆ ಹಾಕಿ ಭಾರ್ಗವ ಮುನ್ನಡೆದ. ಮೊದಲು ತಲೆಯೆತ್ತಿ ನಡೆಯಲು ಆಗುತ್ತಿದ್ದರೆ ಮುಂದೆ ನಡೆಯುತ್ತಾ ಬಾಗಿ ನಡೆದನು. ಹತ್ತು ಹೆಜ್ಜೆ ಹೋಗುವ ವೇಳೆಗೆ ಗುಹೆಯು ಇನ್ನೂ ಕಿರಿದಾಗಿ ಅಂಬೆಗಾಲಿಡುತ್ತಾ ಸಾಗಬೇಕಾಗಿತ್ತು. ಮುಂದೆ ಇನ್ನು ಸಣ್ಣದಾಗಿ ದಾರಿಯು ಮೇಲಕ್ಕೆ ಹೋಗುತ್ತಿತ್ತು. ಈಗ ಪೂರ್ತಿ ಮಲಗಿ ತನ್ನ ಒಳ ಶಕ್ತಿಯಿಂದಲೂ , ಕೈಗಳ ಬಲದಿಂದಲೂ ದೇಹವನ್ನು ಮುಂದಕ್ಕೆ ಸರಿಸುತ್ತಾ ಹೋದನು. ಆ ಸುರಂಗದ ಕೊನೆಗೆ ಒಂದು ದೊಡ್ಡ ಕಲ್ಲಿನ ಮೇಲೆ ಎಲ್ಲಿಂದಲೋ ಬೀಳುತ್ತಿದ್ದ ಸಣ್ಣ ದೀಪದ ಬೆಳಕಿನಲ್ಲಿ ಹೊಳೆಯುತ್ತಿದ್ದ ಕತ್ತಿ ಕಂಡಿತು. ಅದನ್ನು ತೆಗೆದುಕೊಂಡು ಬಾಯಲ್ಲಿ ಕಚ್ಚಿ ಹಿಡಿದು ಹಿಂದಕ್ಕೆ ತಿರುಗಲು ಜಾಗ ಇಲ್ಲದಿದ್ದರಿಂದ ಹಾಗೆ ತನ್ನ ಕೈಗಳ ಬಲದ ಮೇಲೆ ಹಿಂದೆ ಬಂದನು. ಅಂಬೆಗಾಲಿಡುವ ಜಾಗದ ತನಕ ಕಷ್ಟಪಟ್ಟು ಬಂದು ಅಲ್ಲಿ ಕುಳಿತು ಸುಧಾರಿಸಿಕೊಂಡನು. ಅಷ್ಟು ಹೊತ್ತಿಗೆ ಕತ್ತಲೆ ಕವಿದು ಗುಹೆಯ ಹೊರಭಾಗ ಕಾಣುತ್ತಲೇ ಇರಲಿಲ್ಲ. ಹೊರಗಿದ್ದ ಕಾಶಣ್ಣ ಒಂದು ಪಂಜನ್ನು ಹಚ್ಚಿ ಗುಹೆಯ ಬಾಗಿಲಬಳಿ ಹಿಡಿದನು. ಅದರ ಬೆಳಕಿನಲ್ಲಿ ಭಾರ್ಗವ ಹೊರಭಾಗಕ್ಕೆ ಬಂದು ಅಲ್ಲಿ ನಿಂತಿದ್ದ ಕಾಶಣ್ಣ ನಾಯಕನ ಪಾದದ ಬಳಿ ಕತ್ತಿಯನ್ನು ಇಟ್ಟು ನಮಸ್ಕರಿಸಿದನು. ಅವನ ಸಾಮರ್ಥ್ಯವನ್ನೂ ಛಲವನ್ನೂ ನೋಡಿ ಪ್ರೀತಿಯಿಂದ ತನ್ನ ಕಾಲ ಬಳಿ ಕುಳಿತ ಹುಡುಗನ ತಲೆ ನೀವರಿಸಿದನು ಕಾಶಣ್ಣ. ನಂತರ ಎಬ್ಬಿಸಿ ಕತ್ತಿಯನ್ನು ಅವನಿಗೇ ಕೊಟ್ಟನು. ಭಾರ್ಗವನು ಮಹಾ ಪ್ರಸಾದದಂತೆ ಅದನ್ನು ತೆಗೆದುಕೊಂಡು ಕಣ್ಣಿಗೆ ಒತ್ತಿಕೊಂಡನು.
ಅಲ್ಲಿಗೆ ಮುಗಿಯಲಿಲ್ಲ ಅವನ ಪರೀಕ್ಷೆ. ಕಾಶಣ್ಣ ಅವನನ್ನು ಕರೆದುಕೊಂಡು ಅಲ್ಲಿಂದ ಸ್ವಲ್ಪ ದೂರದಲ್ಲಿ ಇನ್ನೊಂದು ಗುಹೆಯ ಬಳಿಗೆ ಹೋದನು. ನನ್ನ ಹಿಂದೆ ಬಾ ಎಂದು ಸಂಜ್ಞೆ ಮಾಡಿ ಮುಂದೆ ನಡೆದನು. ಕಡಿದಾದ ದಾರಿಯಲ್ಲಿ ಐವತ್ತು ಗಜ ನಡೆದು ಹೋದರು. ಮುಂದೆ ಒಂದು ದೊಡ್ಡ ಹಳ್ಳ. ಅದರ ಆಚೆ ಬದಿಗೆ ಒಂದು ಬಂಡೆ. ಆ ಕತ್ತಲೆ ಕಮರಿಯ ಆಳವೂ ತಿಳಿಯುತ್ತಿರಲಿಲ್ಲ ತಳವೂ ಕಾಣುತ್ತಿರಲಿಲ್ಲ. " ಭಯ ಆಗುತ್ತಿದೆಯೋ?" ಎಂದು ಕೇಳಿದ ಕಾಶಣ್ಣ. ಮುಂದೆ ಏನು ಎಂದು ಅರಿಯದ ಮಗುವಿನಂತೆ ಭಾರ್ಗವ ನಡುಗುವ ಎದೆಯನ್ನು ತಳಹದಿಗೆ ತಂದು "ನೀವಿರುವಾಗ ನನಗೆ ಏಕೆ ಭಯ?" ಎಂದನು. " ಈಗ ನಾನು ಮಾಡಿದಂತೆ ಮಾಡಬೇಕು . ಈ ಪಂಜನ್ನು ಹಿಡಿದಿಕೊ . ನಾನು ಈ ಹಳ್ಳದಲ್ಲಿ ಜಿಗಿಯುತ್ತೇನೆ. ನೀನು ಜಿಗಿಯುವೆಯಾ ?" ಎಂದು ಕೇಳಿದ. ಭಾರ್ಗವ "ಖಂಡಿತವಾಗಿ" ಎಂದನು. " ಹಾಗಾದರೆ ನಾನು ಕೆಳಗೆ ಜಿಗಿದು ನಿನ್ನನ್ನು ಕೂಗಿದ ಮೇಲೆ ನೀನು ಹಾರು. ನೆಲಕ್ಕೆ ಕಾಲು ತಾಕಿದ ತಕ್ಷಣ ಕಾಲಿನಿಂದ ಗಟ್ಟಿಯಾಗಿ ಹಿಡಿ. ಆಚೀಚೆ ಹೆಚ್ಚು ಜಾಗವಿಲ್ಲ. ಬಿದ್ದರೆ ನಿನಗೆ ನಾನೂ ಇಲ್ಲ, ನನಗೆ ನೀನೂ ಇಲ್ಲ " ಎಂದನು ಕಾಶಣ್ಣ. ಸರಿ ಎಂಬಂತೆ ತಲೆ ಆಡಿಸಿದ ಭಾರ್ಗವ.
ಕಾಶಣ್ಣ ಒಂದೇ ಸಾರಿಗೆ ಕೆಳಕ್ಕೆ ಜಿಗಿದ. ಒಂದೆರಡು ನಿಮಿಷಗಳ ಮೌನ!.... ಆ ಕತ್ತಲೆ ಅವನನ್ನು ನುಂಗಿದಂತೆ ಭಾಸವಾಯಿತು. ಆಗ ಧಪ್ಪ್!!! ಎಂದು ಕೆಳಗೆಲ್ಲೋ ಪಾತಾಳದಲ್ಲಿ ಎಂಬಂತೆ ಶಬ್ದ ಬಂತು. "ಹಾ , ಹಾರು " ಎಂದಿತು ಧ್ವನಿ. ಭಾರ್ಗವ ಮೊದಲು ಪಂಜನ್ನು ಕೆಳಗೆ ಹಾಕಿ ದೇವರನ್ನು ನೆನೆದು ಕೆಳಗೆ ಜಿಗಿದ. ಅವನು ಹೃದಯವೇ ನಿಂತಂತಹ ಅನುಭವ!! ಕೆಲವು ನಿಮಿಷಗಳ ನಂತರ ಕಣ್ಣು ಬಿಟ್ಟಾಗ ಕಾಶಣ್ಣ ಅವನನ್ನು ತಬ್ಬಿ ಹಿಡಿದಿದ್ದ. ಉಸಿರಾಟ ಸರಿಯಾಗಲು ಒಂದೆರಡು ನಿಮಿಷಗಳೇ ಬೇಕಾಯಿತು. ನಂತರ ಮುಂದುವರಿದು ಅಲ್ಲಿದ್ದ ಒಂದು ಸಣ್ಣ ಗುಹೆಯಲ್ಲಿದ್ದ ದುರ್ಗಾ ದೇವಿಯ ಎದುರು ನಿಂತರು. ಅಲ್ಲಿ ದೀಪಗಳು ಉರಿಯುತ್ತಿದ್ದವು. ದೇವಿಗೆ ಪೂಜೆ ಮಾಡಲಾಗಿತ್ತು. ಇಬ್ಬರೂ ದೇವಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಅಲ್ಲಿದ್ದ ಭಂಡಾರವನ್ನು ಹಣೆಗೆ ಇಟ್ಟುಕೊಂಡರು. ಅಲ್ಲಿಂದ ಗುಹೆಯ ಹಾದಿ ಕೆಳಮುಖವಾಗಿ ನಡೆಯಿತು. ಅಂತೂ ಕೊನೆಗೆ ಅವರು ಬಯಲಿನಲ್ಲಿ ಬಂದು ನಿಂತರು.
ಕಾಶಣ್ಣ ಕೊನೆಯ ಪರೀಕ್ಷೆ ಹುಡುಗನ ಧೈರ್ಯವನ್ನು , ಮಾತನ್ನು ಪಾಲಿಸುವುದನ್ನು ಪರೀಕ್ಷಿಸುವುದರಲ್ಲೂ ಭಾರ್ಗವ ಗೆದ್ದು ಬಂದಿದ್ದನು. ಕಾಶಣ್ಣ ಸಂತೋಷದಿಂದ ಅವನನ್ನು ತಬ್ಬಿ " ನಿನ್ನ ಪರೀಕ್ಷೆಗಳೆಲ್ಲಾ ಮುಗಿದವು. ಈ ಗಂಡುಭೂಮಿ ಚಿತ್ರದುರ್ಗ ಕ್ಕೆ ಸರಿಯಾದ ಗಂಡಾಗಿರುವೆ. ನಿನ್ನನು ಪೂರ್ತಿ ತಯಾರುಮಾಡಿ ನಮ್ಮ ನಾಯಕರಿಗೆ ನಿನ್ನನು ಅರ್ಪಿಸುವೆ . ನಿನಗೆ ಶುಭವಾಗಲಿ" ಎಂದು ಹರಿಸಿದನು. ಆ ಮಾತನ್ನು ಕೇಳಿ ಭಾರ್ಗವನ ಕಾಣ್ಣಲ್ಲಿ ನೀರು ಬಂತು, ಸಂತೋಷದಿಂದ ಮಾತು ಮೌನವಾಯಿತು. ಕೈ ಮುಗಿದು ನಿಂತಿದ್ದ ಅವನ ದೇಹ ಕಾಶಣ್ಣನಿಗೆ ಮನಸ್ಸಿನಲ್ಲಿಯೇ ಧನ್ಯವಾದಗಳನ್ನು ಅರ್ಪಿಸುತ್ತಿತ್ತು.