Click here to Download MyLang App

ಸತ್ಯಮೂರ್ತಿಗಳ ಆತ್ಮಚರಿತ್ರೆ - ಬರೆದವರು : ಸಿರಿ ಮೂರ್ತಿ

ತುಂಬಿದ ಸಭಾಂಗಣ. ರಾಷ್ಟ್ರ ಪ್ರಶಸ್ತಿ ವಿಜೇತಸ್ಥರಿಗೆ ಸನ್ಮಾನ ಸಮಾರಂಭ. ಸಭೆಯ ಅಧ್ಯಕ್ಷರೂ, ಮುಖ್ಯ ಅತಿಥಿಗಳೂ ಬಂದಿದ್ದಾರೆ. ಎಲ್ಲರೂ ಸತ್ಯಮೂರ್ತಿಗಳಿಗೆ ಕಾಯುತ್ತಿದ್ದಾರೆ. ಹೇಳಿದ ಸಮಯಕ್ಕೇ ಹೋದರೇನು ಸ್ವಾರಸ್ಯ? ಜನ ಕಾಯಬೇಕು, ಹೆಚ್ಚಲ್ಲ ಬರೀ ಹತ್ತು ನಿಮಿಷ ಮಾತ್ರ. ಆಗ ತಾವು ಶ್ರೀಮದ್‌ಗಾಂಭೀರ್ಯದಲ್ಲಿ ಬರಬೇಕು, ಜೊತೆಗೆ ಅಪರ್ಣ ಇರಬೇಕು, ಜನ ಎದ್ದು ನಿಂತು ಸ್ವಾಗತಿಸಬೇಕು. ಇದು ಸತ್ಯಮೂರ್ತಿಗಳ ನಿಲುವು.

ಈ ಇಡೀ ವರ್ಷದಲ್ಲಿ ಅವರಿಗೆ ಸಂದ ಸನ್ಮಾನಗಳಿಗೆ ಲೆಕ್ಕವಿಲ್ಲ. ಪ್ರತಿ ಸಮಾರಂಭಗಳೂ ಹೊಸದೆಂಬಂತೆ ಸಂಭ್ರಮಿಸುತ್ತಾರೆ. ಅಪರ್ಣಳಿಗೆ ಅಷ್ಟು ಉತ್ಸಾಹವಿಲ್ಲ. ಆದರೆ ಅವರು ಒಬ್ಬರೇ ಬರುವುದಿಲ್ಲ ಎನ್ನುವುದೇ ಫೇಮಸ್‌ ಆಗಿದೆ. ಅವಳನ್ನು ಒತ್ತಾಯಿಸುತ್ತಾರೆ. ಸತ್ಯಮೂರ್ತಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿರುವುದು ಅವರಿಗೆ ಸಂತೃಪ್ತಿಯನ್ನು ಕೊಟ್ಟಿದೆ. ಅವರು ಬಯಸಿದ್ದೆಲ್ಲಾ ಪಡೆದಾಗಿದೆ. ಪ್ರೊಫೆಸರ್ ಹುದ್ದೆಯಿಂದ ನಿವೃತ್ತಿ ಪಡೆದಾಗಿದೆ. ಬರವಣಿಗೆ ಸಾಕೆನಿಸಿದೆ. ಇನ್ನು ವಿಶ್ರಾಂತ ಜೀವನ ನಡೆಸುವ ಯೋಚನೆ ಅವರದ್ದು. ಅಪರ್ಣಳಲ್ಲಿ ಹಾಗೆಯೇ ಹೇಳಿದ್ದಾರೆ.

ಸಭೆ ಪ್ರಾರಂಭವಾಯಿತು. ಪ್ರಾಸ್ತಾವಿಕ ಬಾಷಣದಲ್ಲಿ ಸತ್ಯಮೂರ್ತಿಯ ಸಾಧನೆ, ಅವರ ಬರಹದಲ್ಲಿರುವ ಮೌಲ್ಯಗಳೂ, ಅವರು ಸಮಾಜಕ್ಕೆ ಕೊಟ್ಟ ಉಪಯುಕ್ತ ಸಂದೇಶಗಳೂ, ಅವರ ಸರಳ ಸ್ವಭಾವಗಳನ್ನು ವಿಸ್ತಾರವಾಗಿ ಹೇಳಿದ್ದಾಯಿತು. ಸೀಮಿತ ಅವಧಿಯಲ್ಲಿ ಕೆಲವರು ಮಾತನಾಡಿದರು. ನಂತರ ಸತ್ಯಮೂರ್ತಿ ಮಾತುಗಳು.

“ನಾನು ಈ ಮಟ್ಟಕ್ಕೆ ಬೆಳೆಯಲು ನಿಮ್ಮ ನಿರಂತರ ಪ್ರೋತ್ಸಾಹವೇ ಕಾರಣ. ದೇಶಕ್ಕೆ, ಕನ್ನಡದ ಉಳಿವಿಗಾಗಿ ನನ್ನಿಂದಾದ ಸೇವೆ ಮಾಡುತ್ತೇನೆ” ಎಂದರು.

ಸತ್ಯಮೂರ್ತಿ ಒಳ್ಳೆಯ ವಾಗ್ಮಿ. ಅವರ ಮಾತುಗಳನ್ನು ಜನ ಆಸಕ್ತಿಯಿಂದ ಕೇಳುತ್ತಾರೆ. ಎಲ್ಲೂ ಹೆಚ್ಚು ಮಾತನಾಡದೆ ಜನರ ಆಸಕ್ತಿಯನ್ನವರು ಉಳಿಸಿಕೊಂಡಿದ್ದಾರೆ. ಅಧ್ಯಕ್ಷರ ಬಾಷಣದ ನಂತರ ಪ್ರಶ್ನೋತ್ತರಗಳು.
“ನಿಮ್ಮ ಮುಂದಿನ ಕಾದಂಬರಿ ಯಾವಾಗ ಪ್ರಕಟಗೊಳ್ಳುವುದು?”

ಎಲ್ಲಾ ಕಡೆಗಳಲ್ಲೂ ಇಂತಹ ಪ್ರಶ್ನೆಗೆ ‘ನೋಡಬೇಕು, ಯೋಚಿಸಿಲ್ಲ’ ಎನ್ನುತ್ತಿದ್ದ ಸತ್ಯಮೂರ್ತಿ ಇಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಜನ ಒಕ್ಕೊರಳಲ್ಲಿ ‘ಬರವಣಿಗೆ ಮುಂದುವರಿಸಿ’ ಎಂದು ಒತ್ತಾಯಿಸಿದರು.

‘ಇಲ್ಲ. ನನ್ನೊಳಗಿನ ಲೇಖಕ ವಿಶ್ರಾಂತಿ ಬಯಸುತ್ತಿದ್ದಾನೆ. ಒಳಗಿಂದ ಬರೆಯಬೇಕೆಂಬ ಒತ್ತಡವಿದ್ದಾಗ ಕಥೆ ಮೊಳಕೆಯೊಡೆಯುವುದುಬರೆಯತೊಡಗಿದಾಗ ಹಲವು ಮುಖಗಳು ಗೋಚರಿಸುತ್ತವೆ. ನಿರಾತಂಕವಾಗಿ ಹರಿವ ನೀರಿನಂತೆ ಯೋಚನೆ ಸಾಗುತ್ತದೆ. ಒಳಗೇ ಶೂನ್ಯವಾದಾಗ ಯಾವುದೂ ತೆರೆದುಕೊಳ್ಳದೆ ಬರವಣಿಗೆ ಸತ್ವವಿಲ್ಲದೆ ನೀರಸವಾಗುತ್ತದೆ’ ಎಂದರು.

‘ನೀವು ಆತ್ಮಚರಿತ್ರೆ ಬರೆಯಬಹುದಲ್ಲಾ. ನಿಮ್ಮಿಂದ ನಾವದನ್ನು ನಿರೀಕ್ಷಿಸುತ್ತೇವೆ’ ಎಂಬ ಒತ್ತಾಯಕ್ಕೆ ಆಗಲಿ ಪ್ರಯತ್ನಿಸುವೆ ಎಂದರು.

ವಂದನಾರ್ಪಣೆಯಲ್ಲಿ ಮುಂದಿನ ವರ್ಷ ಇದೇ ಸಭಾಂಗಣದಲ್ಲಿ ಸತ್ಯಮೂರ್ತಿಯ ಆತ್ಮ ಚರಿತ್ರೆ ಬಿಡುಗಡೆ ಹೊಂದಲೆಂಬ ಹಾರೈಕೆಯೊಂದಿಗೆ ಸಭೆ ಮುಕ್ತಾಯವಾಯಿತು.

ಊಟ ಮುಗಿಸಿ ಬರುವಾಗ ಗಂಟೆ ಹನ್ನೊಂದಾಗಿತ್ತು. ದಾರಿಯಲ್ಲಿ ಸತ್ಯಮೂರ್ತಿ ‘ಅಪರ್ಣಾ, ಎಲ್ಲಾ ಒತ್ತಾಯಿಸುತ್ತಿದ್ದಾರೆ ಆತ್ಮಚರಿತ್ರೆ ಬರೆದರೆ ಹೇಗೆ’ ಎಂದರು. ಅಪರ್ಣ ಆಗಲೇ ನಿದ್ದೆಗೆ ಜಾರಿದ್ದಳು.

ಮನೆಗೆ ಬಂದವಳು ಮಲಗಿಬಿಟ್ಟಳು. ಸತ್ಯಮೂರ್ತಿಗೆ ನಿದ್ರೆ ಬರಲಿಲ್ಲ. ಅವರ ಮನಸ್ಸು ಆತ್ಮಚರಿತ್ರೆ ಬರೆಯುವುದನ್ನು ಯೋಚಿಸುತ್ತಿತ್ತು. ಬೆಳಗಿನ ಜಾವದ ತನಕ ಅವರು ತಮಗೆ ಬಂದ ಪ್ರಶಸ್ತಿಗಳ, ಸನ್ಮಾನಗಳ, ಅವಕ್ಕೆಲ್ಲ ಕಿರೀಟವಿಟ್ಟಂತೆ ಬಂದ ರಾಷ್ರ್ಟಪ್ರಶಸ್ತಿಯ ಗುಂಗಿನಲ್ಲೇ ರಾತ್ರಿ ಕಳೆದರು.

ಬೆಳಿಗ್ಗೆ ಅಪರ್ಣಳಲ್ಲಿ ಕೇಳಿದರು ‘ಅಪರ್ಣ ಆತ್ಮಚರಿತ್ರೆ ಯಾವಾಗ ಪ್ರಾರಂಬಿಸುವುದು?’

ಅವರು ಕಥೆ ಕಾದಂಬರಿ ಪ್ರಾರಂಬಿಸುವ ಮುನ್ನ ಅಪರ್ಣ ದೇವಸ್ಥಾನದಲ್ಲಿ ಸೇವೆ ಮಾಡಿಸಿ ಸತ್ಯಮೂರ್ತಿಯ ಹಣೆಗೆ ಕುಂಕುಮ ಪ್ರಸಾದವಿಟ್ಟ ನಂತರ ಅವರು ಬರವಣಿಗೆ ಪ್ರಾರಂಭಿಸುವುದು. ತಾವು ದೇವರನ್ನು ನಂಬುವುದಿಲ್ಲ ಎಂಬ ತತ್ವವನ್ನು ಪಾಲಿಸಿಕೊಂಡು ಬಂದ ಸತ್ಯಮೂರ್ತಿ ಅಪರ್ಣಳ ನಂಬಿಕೆಯನ್ನು ಆಕ್ಷೇಪಿಸುವುದಿಲ್ಲ. ಅವರಿಗೆ ಅವರಂತಾ ನಾಸ್ತಿಕ ಗೆಳೆಯರ ಗುಂಪೇ ಇದೆ. ಮುಕ್ಕಾಲು ಮಂದಿ ತಮ್ಮ ಹೆಂಡತಿಯರೂ ಹಾಗೇ ಇರಬೇಕೆನ್ನುತ್ತಾರೆ. ಅಂತಾ ಹೆಂಡತಿಯರ ಪಾಲಿಗೆ ಸತ್ಯಮೂರ್ತಿ ದೇವ ಪುರುಷ. ಅಪರ್ಣಳಿಗೂ ದೊಡ್ಡ ಸ್ನೇಹವಲಯವಿದೆ. ವರ್ಷಕ್ಕೊಮ್ಮೆ ಅವಳು ಗಣಪತಿ ಪೂಜೆಯ ದಿನ ಅವರನ್ನೆಲ್ಲ ಆಹ್ವಾನಿಸುತ್ತಾಳೆ. ಸತ್ಯಮೂರ್ತಿ ಆ ಸಮಯದಲ್ಲಿ ಮನೆಯಲ್ಲಿರುವುದಿಲ್ಲ. ಪೂಜೆ ಮುಗಿದ ನಂತರ ಅಪರ್ಣ ಫೋನ್‌ ಮಾಡುತ್ತಾಳೆ. ತಮ್ಮ ಪಟ್ಟಾಲಂ ಜೊತೆಗೆ ಅವರು ಬರುತ್ತಾರೆ. ಅಪರ್ಣಳ ಜೊತೆ ಊಟಕ್ಕೆ ಕುಳಿತ ಪ್ರತಿಯೊಬ್ಬರನ್ನೂ ಅವರು ಮಾತನಾಡಿಸುತ್ತಾರೆ. ಬಾರದಿರುವವರನ್ನು ಮರೆಯದೆ ಯಾಕೆ ಬರಲಿಲ್ಲವೆಂದು ಕೇಳುತ್ತಾರೆ. ಸತ್ಯಮೂರ್ತಿಯಂತಾ ಗಂಡಸರೇ ವಿರಳ ಎನ್ನುವ ಹೊಗಳಿಕೆಗೆ ಪಾತ್ರರಾಗುತ್ತಾರೆ. ತಮಗೆ ಅಪರ್ಣಳಿಂದ ಉತ್ತರ ಬಾರದಾಗ ಮತ್ತೆ ಕೇಳಿದರು.

ಅಪರ್ಣ ಕೇಳಿದಳು ‘ಏನು ಪ್ರಾರಭಿಸುವಿರಿ?’

“ಆತ್ಮ ಚರಿತ್ರೆ, ನಿನ್ನೆ ಎಲ್ಲಾ ಒತ್ತಾಯಿಸಿದರಲ್ಲಾ ಬರೆಯೋಣ ಎಂದುಕೊಂಡಿದ್ದೇನೆ.”

ಅವಳು ಆಶ್ಚರ್ಯದಿಂದ ಕೇಳಿದಳು. “ನೀವು ಆತ್ಮಚರಿತ್ರೆ ಬರೆಯುತ್ತೀರಾ?”
“ಯಾಕೆ ಬರೆಯಬಾರದು?”
“ಏನು ಬರೆಯುವಿರಿ? ನಿಮ್ಮಿಂದ ಸಾಧ್ಯವೇ?”

“ಯಾಕೆ ಸಾಧ್ಯವಿಲ್ಲ?”

“ಬರೆಯುವ ಮುನ್ನ ಆ ಪದದ ಅರ್ಥವನ್ನು ತಿಳಿದುಕೊಳ್ಳಿ. ನಿಮ್ಮ ಆತ್ಮವಿಮರ್ಷೆ ಮಾಡಿಕೊಳ್ಳಿ. ಬರೀ ನಿಮ್ಮ ಹೊರಮುಖವನ್ನೇ ಬರೆಯುವಿರಾದರೆ ಅದು ಇನ್ನೊಂದು ಚಂದದ ಕಾದಂಬರಿ ಆದೀತಷ್ಟೆ. ಅದಕ್ಕೆ ಆ ಹೆಸರನ್ನಿಟ್ಟು ಹೆಸರಿಗೆ ಅವಮಾನ ಮಾಡಬೇಡಿ. ನಾನು ಇದರಲ್ಲಿ ಸಿಕ್ಕಿಕೊಳ್ಳಲಾರೆ. ನೀವುಂಟು ನಿಮ್ಮ ಆತ್ಮಚರಿತ್ರೆಯುಂಟು” ಎಂದು ಎದ್ದು ಹೋದಳು.

ಬರೀ ಎದ್ದು ಹೋಗಿದ್ದಲ್ಲ, ಒದ್ದು ಹೋದಂತೆ ಹೋದಳು. ಸತ್ಯಮೂರ್ತಿ ಕುಸಿದು ಕುಳಿತರು. ಅಪರ್ಣ ಅವರನ್ನು ಬೆತ್ತಲೆಮಾಡಿ ಬಯಲಲ್ಲಿ ನಿಲ್ಲಿಸಿದ್ದಳು. ಸಪ್ನಲೋಕದಲ್ಲಿ ವಿಹರಿಸುತ್ತಿದ್ದ ಅವರ ತೇಜೋವಧೆ ಮಾಡಿದ್ದಳು.
ಮದುವೆ ಆದಾಗಿಂದ ಸಹಧರ್ಮಿಣಿಯಾಗಿ ಸಹಚಾರಿಣಿಯಾಗಿ, ನನ್ನ ಬರಹವನ್ನು ತಿದ್ದಿ ತೀಡಿ ಉತ್ಕೃಷ್ಟ ವಿಮರ್ಶಕಿಯಾಗಿ, ಪ್ರತಿ ಹೆಜ್ಜೆಯಲ್ಲೂ ಬರಹದ ಜೊತೆಗಾತಿಯಾದ ಅಪರ್ಣ ತನಗೆ ಸಂಬಂಧವಿಲ್ಲವೆಂದು ಎದ್ದೇ ಹೋದಳಲ್ಲಾ. ‘ನಿಮಗೆ ಪ್ರಾಮಾಣಿಕವಾಗಿ ಬರೆಯುವ ಧೈರ್ಯವಿದೆಯಾ’ ಎಂದು ಸವಾಲ್‌ ಒಡ್ಡಿದಳಲ್ಲಾ, ಏನೆಂದು ತಿಳಿದಿದ್ದಾಳೆ ಈ ಸತ್ಯಮೂರ್ತಿಯನ್ನವಳು? ಬರೆಯಬೇಕು, ಬರೆದು ಮುಖಕ್ಕೆ ಹಿಡಿದು ಹೇಳಬೇಕು ‘ನೋಡು ನೀನಿಲ್ಲದೆ ಬರೆಯಲಾರೆ ಎಂದು ತಿಳಿದೆಯಲ್ಲಾ ನಿನ್ನ ಗಂಡ ಹೇಡಿಯಲ್ಲ’ ಎನ್ನಬೇಕು.
ಈ ಘಟನೆಯ ನಂತರ ಅಪರ್ಣ ಏನೂ ಆಗದಂತೆ ಇದ್ದುಬಿಟ್ಟಳು. ಸತ್ಯಮೂರ್ತಿಗೆ ತಮ್ಮ ಅಸಮಧಾನವನ್ನೋ, ಕೋಪವನ್ನೋ ತೋರಿಸಲಾಗಲಿಲ್ಲ. ಅದನ್ನು ಅವಳು ಅಸಹಾಯಕತೆ ಅಂದುಕೊಂಡರೆ? ತಾವೇ ಸಲಕರಣೆಗಳನ್ನು ಅಣಿಮಾಡಿಕೊಂಡರು. ಮನಸ್ಸಿನಲ್ಲೇ ದೇವರಿಗೆ ವಂದಿಸಿದರು. ಒಂದು ಬೆಳಿಗ್ಗೆ ಬರವಣಿಗೆ ಪ್ರಾರಂಭಿಸಿದರು. ತಮ್ಮ ಬಾಲ್ಯ, ತಾಯಿ, ತಂದೆ, ಅಣ್ಣ, ಅವನೊಡನೆ ಆಟ, ಪಾಠ, ಜಗಳ, ಬಡತನದ ಬವಣೆ ಬರೆಯುತ್ತಿದ್ದಂತೆ ತಾಯಿ ತಂದೆ ನೆನಪಿಗೆ ಬಂದರು. ಅಡಿಗೆ ಭಟ್ಟರಾಗಿ ಜೀವನ ನಡೆಸುತ್ತಿದ್ದ ತಂದೆಗೆ ಸಹಾಯಕರಾಗಿ ತಾಯಿ ಹೋಗುತ್ತಿದ್ದರು. ಓದಿನಲ್ಲಿ ಮುಂದಿದ್ದ ತಾನು ಬುದ್ದಿವಂತನೆಂದು ಕೆಲಸಕ್ಕೆ ಕರೆಯುತ್ತಿರಲಿಲ್ಲ. ಡಿಗ್ರಿ ಮುಗಿಸಿ ಅಣ್ಣ ಅವರೊಂದಿಗೆ ಅದನ್ನೇ ಉದ್ಯೋಗ ಮಾಡಿಕೊಂಡ. ತಾಯಿ ತಂದೆಯನ್ನು ಕಡೆಯ ತನಕ ನೋಡಿಕೊಂಡ. ಅವರಿಬ್ಬರು ಸಾಯುವಾಗಲೂ ತಾವು ದೇಶದಲ್ಲೇ ಇರಲಿಲ್ಲ. ಇದ್ದರೂ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲು ಹೋಗುತ್ತಿರಲಿಲ್ಲ. ಸತ್ಯಮೂರ್ತಿ ಹೇಳುವುದೊಂದು, ಮಾಡುವುದೊಂದು ಎಂದು ಜನರೆಂದಾರೆಂದು ಅಂಜಿಕೆಯಿತ್ತು. ಇಷ್ಟಕ್ಕೂ ಯಾರೂ ತಮ್ಮನ್ನು ನಿರೀಕ್ಷಿಸಿರಲಿಲ್ಲ ಎನ್ನುವುದು ಆಗ ಒಳ್ಳೆಯದಾಯಿತೆನಿಸಿದ್ದು ಈಗ ನೆನೆದರೆ ತಾನು ಅವರಿಗಾಗಿ ಏನೂ ಮಾಡಿರಲಿಲ್ಲ. ನನ್ನ ಇರುವನ್ನೇ ಮರೆಯುವಂತಿದ್ದುದು ನನ್ನ ಸ್ವಭಾವದಿಂದ ಎಂದು ಪಷ್ಚಾತ್ತಾಪವಾಗುತ್ತಿದೆ ಎನ್ನುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಾಗ ಮನಸ್ಸು ಸ್ವಲ್ಪ ಹಗುರವಾಯಿತು. ಅಲ್ಲಿಯ ತನಕ ಯಾವ ಅಡಚಣೆಯಿಲ್ಲದೆ ಉತ್ಪ್ರೇಕ್ಷೆ ಇಲ್ಲದೆ ಬರವಣಿಗೆ ವೇಗವನ್ನು ಪಡೆದುಕೊಂಡಿತು.

ವರ್ಷ ಹದಿನಾರಕ್ಕೆ ಬಂದಿತು. ಹಗಲು ಕಂಡ ಚಂದದ ಹುಡುಗಿಯರನ್ನು ರಾತ್ರಿ ಕನಸಿನಲ್ಲಿ ಅನುಭವಿಸಿದ್ದು, ಕ್ಲಾಸ್‌ಮೇಟ್‌ ಮಾಧುರಿಯ ಸ್ನೇಹ, ಅವಳ ಸಹವಾಸ. ಛೇ, ಅದನ್ಯಾಕೆ ಈಗ ಬರೆಯಬೇಕು? ತಾವು ಕಾಲೇಜಿನಲ್ಲಿ ಮೆಚ್ಚಿ, ಇವಳನ್ನೇ ಮದುವೆಯಾಗುವ ಕನಸು ಕಂಡದ್ದು, ಹೇಳಲು ಧೈರ್ಯಸಾಲದೆ, ಮುಂದೆ ಅವಳೇ ಅಣ್ಣನ ಹೆಂಡತಿಯಾಗಿ ಬಂದದ್ದೂ, ವಿಷಯವೇ ತಿಳಿಯದ ಅವರನ್ನು ಒಳಗೇ ದ್ವೇಷಿಸಿದ್ದು. ಈಗ ಬರೆದರೆ ಅವರ ದೃಷ್ಟಿಯಲ್ಲಿ ಏನಾದೇನು? ಮುಂದೆ ಅಪರ್ಣಳನ್ನು ಮೆಚ್ಚಿ ಮದುವೆಯಾಗಿದ್ದು. ಸತ್ಯಮೂರ್ತಿ ಪ್ರೊಫೆಸರ್‌ ಆದಾಗ ಅವಳು ಫೈನಲ್ ಇಯರ್ ಎಮ್‌ ಎ ಮಾಡುತ್ತಿದ್ದಳು. ಬರವಣಿಗೆ ಪ್ರಾರಂಭದ ದಿನಗಳವು. ಅಲ್ಲಿಲ್ಲಿ ಒಂದೊಂದು ಕಥೆಗಳು ಪ್ರಕಟಗೊಳ್ಳುತ್ತಿದ್ದವು. ಸಾಹಿತ್ಯಾಸಕ್ತಿಯಿದ್ದ ಅಪರ್ಣ ಅವರ ಕಥೆಗಳನ್ನು ಓದುತ್ತಿದ್ದಳು. ವಿಮರ್ಶಿಸುತ್ತಿದ್ದಳು. ಹೀಗೇ ಪರಿಚಯ ಸ್ನೇಹಕ್ಕೆ ತಿರುಗಿ, ಮದುವೆಯಾಯಿತು. ಆಗ ಆಕಾಂಕ್ಷೆಗಳೂ ಸೀಮಿತವಾಗಿದ್ದು, ಬದುಕು ಸುಂದರವಾಗಿತ್ತು. ಮುಂದೆ ಪ್ರಶಸ್ತಿಗಳು ಬರಲಾರಂಭಿಸಿದವು, ದಾಹ ಬೆಳೆಯಿತು. ಪಡೆಯುವ ಮಾರ್ಗ ಬೇರೆಯಾಗಿ, ನೈತಿಕತೆಯಿಲ್ಲದ ಮಾರ್ಗದಲ್ಲಿ ಅದ:ಪತನದ ಆಕರ್ಷಣೆ ಸೆಳೆಯಿತು. ಅವು ಒಂದಕ್ಕೊಂದು ಬೆಸುಗೆಯಾಗಿ ಕೀರ್ತಿ, ಪ್ರಶಸ್ತಿ, ಹಣಗಳ ಆಸೆ ಇಮ್ಮಡಿಯಾಯಿತು.
ನಾಲ್ಕಾರು ದಿನಗಳು ಹೊರಗಿನ ಸಹವಾಸದಲ್ಲಿದ್ದು ಮನೆಗೆ ಮರಳಿದಾಗ ಅಪರ್ಣಳನ್ನು ನೋಡಲು ಮೊದಮೊದಲು ತಪ್ಪಿತಸ್ಥ ಭಾವವಿರುತ್ತಿತ್ತು. ಕಡೆಗೆ ಮಾಮೂಲಾಯಿತು. ಅವಳಿಗೆ ಗೊತ್ತಿಲ್ಲದಿಲ್ಲ. ಹೇಗೆ ಸಹಿಸಿದಳು? ಮದುವೆಗೆ ಮುನ್ನ ಹೇಳಿದ್ದಳು ‘ನಿನ್ನ ಪ್ರತಿಭೆಯನ್ನು ಮೆಚ್ಚಿ ಮದುವೆಯಾಗುತ್ತಿದ್ದೇನೆ’. ಅದನ್ನು ಮೆಚ್ಚಿಯೇ ಇಷ್ಟು ವರ್ಷ ಬಾಳಿದಳಾ? ಭೂತಕಾಲದತ್ತ ಒಮ್ಮೆಯೂ ತಿರುಗಿ ನೋಡದೆ ವರ್ತಮಾನವನ್ನು ದಾಪುಗಾಲಿನಲ್ಲಿ ದಾಟುತ್ತಿದ್ದ ಸತ್ಯಮೂರ್ತಿಗೆ ಯೋಚಿಸಲು ಸಮಯವೆಲ್ಲಿತ್ತು? ಈಗ ತಿರುಗಿ ನೋಡಲಾಗುತ್ತಿಲ್ಲ. ನಾಚಿಗೆಯಾಗುತ್ತಿದೆ. ಇದನ್ನು ಬರೆಯುವುದೆಂತು? ಇನ್ನು ತಾವು ಗಳಿಸಿದ ಪ್ರಶಸ್ತಿ, ಕೀರ್ತಿ ಇದನ್ನು ವಿಸ್ತಾರವಾಗಿ ನಾಳೆ ಬರೆವೆ ಎಂದು ಮಲಗಿದರು. ಒಳದ್ವನಿ ಒಂದು ಪ್ರಶ್ನೆಯಿಟ್ಟು ‘ಬೆಳಿಗ್ಗೆ ಇದಕ್ಕುತ್ತರಿಸದೆ ಮುಂದೆ ಬರೆದರೆ ಎಚ್ಚರ’ ಎಂದು ಬೇತಾಳನಂತೆ ಗುಡುಗಿತು. ‘ನೀನು ಗಳಿಸಿದ್ದೆಲ್ಲಾ ನಿನ್ನನ್ನು ಅರಸಿ ಬಂದವಾ? ನಿನ್ನ ಪ್ರಭಾವ ಬಳಸಿ ಪಡೆದವಾ?’ ಎಂಬ ಪ್ರಶ್ನೆ ಉದ್ಭವಿಸಿ ಮೈ ಬೆವರಿತು. ತಮ್ಮ ಹೆಸರೇ ಇಲ್ಲದೆ ತಯಾರಾದ ಪಟ್ಟಿಯಲ್ಲಿ ಸತತ ಪ್ರಯತ್ನದಲ್ಲಿ ತನ್ನ ಹೆಸರು ಸೇರಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದು. ಪೆನ್ನು ಹಿಡಿಯಲಾರದೆ ಕೈ ನಡುಗಿತು.

ಸ್ನೇಹವಲಯ ದೊಡ್ಡದಿತ್ತು. ಆದರೆ ಒಳಗೇ ಯಾರಲ್ಲೂ ವಿಶ್ವಾಸವಿರಲಿಲ್ಲ. ಸದಾ ಸಂಶಯ. ತನ್ನನ್ನು ಮೀರಿ ಬೆಳೆದಾರೆಂಬ ಜಾಗ್ರತೆ. ಅವರು ಬೇಕಿತ್ತು. ಜೊತೆಯಾಗಿ ನೆಡೆಯಲಲ್ಲ. ಹಿಂಬಾಲಕರಾಗಿ. ಇನ್ನು ತಮ್ಮ ಬರವಣಿಗೆ. ತಮ್ಮೊಳಗಿದ್ದ ಲೇಖಕನ ಬದುಕು ಎಷ್ಟು ಸ್ವಚ್ಚ, ಸರಳ, ಸುಂದರ. ಅವರ ಕಾದಂಬರಿಯಲ್ಲಿ ಬರುವ ಗಂಡ ಹೆಂಡಿರ ನಿರ್ವ್ಯಾಜ್ಯ ಪ್ರೀತಿ, ಹೆಣ್ಣಿಗಿರುವ ಸಮಾನತೆ, ಪಾವಿತ್ರ್ಯತೆ, ಸಹಭಾಗಿತ್ವ, ಅವನು ಹೆಂಡತಿಯ ಕಷ್ಟ ಸುಖಗಳು ತನ್ನದೇ ಅಂದುಕೊಂಡಿದ್ದ. ಅವಳ ಆಸಕ್ತಿಗೆ ಸ್ಪಂದಿಸುತ್ತಿದ್ದ. ಸಮಾಜದ ಬಡವರ ಕಷ್ಟಗಳಿಗೆ ಸಹಾಯ ಹಸ್ತ ನೀಡುತ್ತಿದ್ದ. ಜನ ಬದುಕೂ ಬರಹ ಒಂದೇ ಎಂದು ನಂಬಿದ್ದರು. ಆ ನಂಬಿಕೆಯಲ್ಲಿ ಅವರನ್ನು ಗೌರವಿಸುತ್ತಿದ್ದರು.

ಬರವಣಿಗೆ ಪ್ರಾರಂಭಿಸಿ ತಿಂಗಳಾಗುತ್ತಿದೆ. ಅದು ಬಾಲ್ಯಾವಸ್ಥೆಯಲ್ಲೇ ಇದೆ.

ಅಪರ್ಣ ಏನೂ ನಡೆದಿಲ್ಲವೆನ್ನುವಂತಿದ್ದು ಅವರ ಅಹಂಕಾರವನ್ನು ಕೊಲ್ಲುತ್ತಿದ್ದಾಳೆ. ಒಳಗಿದ್ದ ರಾಡಿಗಳು ಥಕ ಥಕ ಕುದಿದು ಕೆಸರು ಮುಖಕ್ಕೆ ರಾಚುತ್ತಿವೆ. ಬರವಣಿಗೆಯ ವಿಚಾರ ಬಿಟ್ಟು ಬೇರೆಲ್ಲದರಲ್ಲೂ ಮೊದಲಿನ ಅಪರ್ಣಳಾಗಿಯೇ ಇದ್ದಾಳೆ. ಅವರ ಉಡುಗೆ, ತೊಡುಗೆ, ದಿನ ನಿತ್ಯ ತೆಗೆದುಕೊಳ್ಳುವ ಮಾತ್ರೆ, ಇಷ್ಪಪಡುವ ಊಟ, ತಿಂಡಿ ಯಾವುದೂ ಲೋಪವಾಗದಂತೆ ನೋಡಿಕೊಳ್ಳುತ್ತಿದ್ದಾಳೆ.

ಈ ಅರವತ್ತೈದು ವರ್ಷದಲ್ಲೂ ಸತ್ಯಮೂರ್ತಿ ಶಿಸ್ತಿನ ಸಿಪಾಯಿ, ಚಟುವಟಿಕೆಯ ಮನುಷ್ಯ, ಆಕರ್ಷಕವಾಗಿದ್ದಾರೆಂದು ಸಹದ್ಯೋಗಿ ಮಹಿಳೆಯರಿಂದ, ವಿದ್ಯಾರ್ಥಿನಿಯರಿಂದ ಪ್ರಶಂಸಿಸಲ್ಪಡುವಾಗ ‘ಇದರ ಕ್ರೆಡಿಟ್‌ ನಿನಗೆ ಸಲ್ಲಬೇಕು’ ಎಂದು ಆಕೆಯಲ್ಲಿ ಹೇಳಬೇಕಿತ್ತು. ಅವರು ಹೇಳಲಿಲ್ಲ. ಅವರಿಗೆ ಅರ್ಜುನ ಬಬ್ರುವಾಹನರ ಸಂವಾದ ನೆನಪಾಗುತ್ತಿದೆ. ಬಬ್ರುವಾಹನ ಹೇಳುತ್ತಾನೆ. ‘ನೀನು ಗಳಿಸಿದ ಜಯ, ಗೆದ್ದ ರಾಜ್ಯ ನಿನ್ನಿಂದ ಆಗಿದ್ದಲ್ಲ. ಕಾರಣಕರ್ತ, ಶ್ರೀಕೃಷ್ಣ, ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ’.

ಊಟದ ಸಮಯವಾದರೂ ಒಳಕ್ಕೆ ಬಾರದ ಸತ್ಯಮೂರ್ತಿಯನ್ನು ಕರೆಯಬಂದ ಅರ್ಪಣಳಿಗೆ ಟೇಬಲ್ಲಲ್ಲಿ ತಲೆಯಿಟ್ಟು ಮಲಗಿದ ಅವರನ್ನು ನೋಡಿ ಗಾಬರಿಯಾಯಿತು. ತನ್ನಿಂದ ಅವರಿಗೆ ಬೇಸರವಾಗಿದೆಯೆಂದು ಬಲ್ಲಳು. ಅವಳಿಗದು ಬೇಸರವಾಗಿಲ್ಲ. ಅವಳು ವೈವಾಹಿಕ ಜೀವನದ ಆನಂದವನ್ನು ಅನುಭವಿಸಿದ್ದು ಅಲ್ಪ ಕಾಲ ಮಾತ್ರ. ಆ ಕಾಲದಲ್ಲಿ ಅವಳು ಅವರನ್ನು ತನ್ನ ಎದೆಯ ಗೂಡಿನಲ್ಲಿಟ್ಟು ಆರಾಧಿಸಿದ್ದಳು. ಆ ಬೆಚ್ಚಗಿನ ಗೂಡಿನಲ್ಲಿ ಹಾಯಾಗಿದ್ದ ಸತ್ಯಮೂರ್ತಿ ಬೆಳೆಯತೊಡಗಿದಂತೆ ಅವಳ ಪುಟ್ಟ ಗೂಡು ಸಾಲದಾಯಿತು. ಬಲಿತ ರೆಕ್ಕೆ, ಉಕ್ಕುವ ಪ್ರಾಯ. ಹಾರಲಾರಂಬಿಸಿ, ಹಾರುತ್ತಾ, ಹಾರುತ್ತಾ ಸಿಕ್ಕಿದ್ದೆಲ್ಲವನ್ನೂ ದೋಚುತ್ತಾ ಎತ್ತರೆತ್ತರಕ್ಕೆ ಹಾರುತ್ತಿದ್ದರೆ ಅಪರ್ಣ ಅವರೆತ್ತರಕ್ಕೆ ಹಾರುವ ಪ್ರಯತ್ನವನ್ನೂ ಮಾಡದೆ ತಟಸ್ಥಳಾಗಿ ಉಳಿದು ಬಿಟ್ಟಳು. ಅವರೆಲ್ಲಾ ಹಾರಾಟಗಳು ತಿಳಿದೂ ಅವರಲ್ಲಿದ್ದ ಲೇಖಕ ಅವಳು ಆರಾಧಿಸುವನಾಗಿದ್ದ. ಅವರ ಬರಹವನ್ನು ಮೆಚ್ಚುವ ಅಭಿಮಾನಿಗಳಲ್ಲಿ ಅವಳು ಮೊದಲಿಗಳಾಗಿದ್ದಳು.

ಏಳಿ ಊಟಕ್ಕೆ ಬನ್ನಿ. ಅವರ ತಲೆ ತಟ್ಟಿ ಹೇಳಿದಳು. ತಲೆಯೆತ್ತಿ ಸತ್ಯಮೂರ್ತಿ ಅವಳನ್ನೂ ತಾನು ಟೇಬಲ್ಲಲ್ಲಿ ಬರೆದಿಟ್ಟ ಹಾಳೆಗಳನ್ನೂ ನೋಡಿದರು. ಒಮ್ಮೆಗೇ ಅವುಗಳನ್ನು ಹರಿದು ಚಿಂದಿ ಚಿಂದಿ ಮಾಡಿ ಕೋಣೆ ತುಂಬೆಲ್ಲಾ ಬಿಸುಟರು. ಮೂಕ ಪ್ರೇಕ್ಷಕಿಯಾಗಿ ನಿಂತಿದ್ದ ಅಪರ್ಣಳ ಎದೆಗೊರಗಿ ಬಿಕ್ಕುತ್ತಾ ‘ನಾನು ಪ್ರಾಮಾಣಿಕವಾಗಿ ಆತ್ಮಚರಿತ್ರೆ ಬರೆಯಲಾರೆ. ನನ್ನಿಂದ ಬರೆಯಲಾಗುತ್ತಿಲ್ಲ. ನಾನು ಸೋತುಹೋದೆ ಅಪರ್ಣ’ ಎಂದರು. ತನ್ನ ಎದೆಗೊರಗಿ ಬಿಕ್ಕುತ್ತಿದ್ದ ಸತ್ಯಮೂರ್ತಿಯ ವರ್ತನೆ ಆಟದಲ್ಲಿ ಸೋತ ಪುಂಡ ಮಗುವೊಂದು ಮೈ ಕೈ ಕೆಸರಾಗಿ ಅಮ್ಮನನ್ನು ಅಪ್ಪಿದಂತೆನಿಸಿತು. ತಾಯಿಯಂತೆ ಅವರ ತಲೆ ನೇವರಿಸುತ್ತಿದ್ದಳು. ಅವಳ ಪುಟ್ಟ ಗೂಡನ್ನು ಅಶ್ರಯಿಸಿ ಸತ್ಯಮೂರ್ತಿ ವಿರಮಿಸಿದರು.