Click here to Download MyLang App

ಸಂಬಂಧಗಳು - ಬರೆದವರು : ಅನುಪಮಾ ದೇಬ್ ಗುಪ್ತಾ | ಸಾಮಾಜಿಕ


"ಅಲ್ವೇ ವಸಂತಿ,ನೀನು ಶುಭಾಳನ್ನು ಸೊಸೆ ಮಾಡ್ಕೋತೀಯೆನೆ?" ಅಡುಗೆಮನೆಯಲ್ಲಿ, ಚಹಾ ಸೋಸುತ್ತಾ,ತನ್ನ ಅಕ್ಕ ವಸಂತಿಯನ್ನು ಪ್ರಶ್ನಿಸಿದಳು ಸತ್ಯವತಿ.ಅದಕ್ಕುತ್ತರವಾಗಿ ವಸಂತಿ ನಗುತ್ತಾ "ನನಗೇಕೋ ಮನಸ್ಸಂತೂ ಇಲ್ಲ ಸತ್ಯಾ,ಅದೇನೋ ಕುಸುಮಾ,ಧನಂಜಯ ಇಬ್ರೂ ವರ್ಷಗಳಿಂದ ಅದೇ ರಾಗ ಹಾಡ್ತಾ ಇದಾರಪ್ಪ.ಆ ಕುಸುಮಾ ಸಾಲಾಗಿ ಮೂರು ಹೆಣ್ಣು ಹೆತ್ತಿದ್ದಾಳೆ. ಇನ್ನು ನಮ್ಮ ಧನಂಜಯನಿಗೆ ಅಂಥ ಒಳ್ಳೇ ಸಂಪಾದನೆ ಕೂಡಾ ಇಲ್ಲ.ಏನೋ ಒಂದು ನಾಲ್ಕೈದು ಅಂಗಡಿಗಳಲ್ಲಿ,ಒಂದು ಫ್ಯಾಕ್ಟರಿಯಲ್ಲಿ ಲೆಕ್ಕ ಬರೆದು ಗುಮಾಸ್ತಿಕೆ ಮಾಡಿ ಸಂಸಾರ ಸಾಗಿಸ್ತಾ ಇದಾನೆ. ಇನ್ನು ಮದ್ವೆನಲ್ಲಿ ಎಷ್ಟು ಮಾತ್ರ ಕೊಟ್ಟಾನು ಹೇಳು?ನಮ್ ಮಹೇಶ ಹೀರೋ ಥರ ಇದಾನೆ. ಈಗಂತೂ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಕೆಲ್ಸ ಬೇರೆ ಸಿಕ್ತು. ಮೊನ್ನೆ ಅಪ್ಪುರಾಯರ ತಮ್ಮ ಬಂದವ್ರು, ಅವ್ರ ಮಗಳ ವಿಷ್ಯ ಪ್ರಸ್ತಾಪಿಸಿದ್ರು.ತುಂಬಾ ಶ್ರೀಮಂತರು ಕಣೇ. ನಾನೇ,ನಮ್ ದೊಡ್ಡವ್ನಿಗೆ ಈಗ ಮದ್ವೆ.ಇನ್ನು ಮಹೇಶ್ ಗೆ ಇನ್ನಾ ನಾಲ್ಕೈದು ವರ್ಷ ಮಾಡೋಲ್ಲ,ಅಂದೆ.ಮಾಡಿದ್ರೆ ಅಂಥ ಕಡೆ ಸಂಬಂಧ ಮಾಡ್ಬೇಕು ನೋಡು"ಎಂದಾಗ ಸತ್ಯವತಿ ನಿಟ್ಟುಸಿರಿಟ್ಟಳು.
ಅಸಲಿಗೆ, ಶುಭಾಳ ನಾಮಕರಣದ ದಿನ ವಸಂತಿಯೇ,ಇವಳು ತನ್ನ ಸೊಸೆ ಎಂದು ಅಂದಿದ್ದು ಸತ್ಯವತಿಗೆ ತಿಳಿದಿದ್ದ ವಿಷಯವೇ.ಈಗ ಬದಲಾದ ಕಾಲದೊಂದಿದೆ ಮಾತಿನ ವರಸೆ ಬದಲಿಸಿದ್ದ ವಸಂತಿಗೆ ಎದುರಾಡಲು ಸಾಧ್ಯವಾಗದೇ ಸುಮ್ಮನಿದ್ದಳು ಸತ್ಯವತಿ.
ಇವರಿಬ್ಬರ ಈ ಸಂಭಾಷಣೆ ಕೇಳಿಸಿಕೊಂಡಿದ್ದಳು ಶುಭಾ.ಹೊರಗೆ ಆಡುತ್ತಿದ್ದವಳು,ನೀರು ಕುಡಿಯಲೆಂದು ಬಂದಾಗ ಅಚಾನಕವಾಗಿ ತನ್ನ ಹೆಸರು ಬಂದಿದ್ದು ಕೇಳಿ,ಪೂರ್ತಿ ಸಂವಾದ ಆಲಿಸಿದ ಶುಭಾಳ ಮೊಗ ಕಳೆಗುಂದಿತ್ತು.ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ಶುಭಾಳಿಗೆ ಸತ್ಯದ ಅರ್ಥವಾಗಿತ್ತು. ಮನೆಗೆ ಹೋದಾಕ್ಷಣ ಅಮ್ಮನ ಬಳಿ ಇದನ್ನು ಹೇಳಬೇಕು ಎಂದುಕೊಂಡಳು ಶುಭಾ.ಸದ್ದಿಲ್ಲದೇ ಅಲ್ಲಿಂದ ಕದಲಿದಳು.
********************
ಧನಂಜಯ ವಸಂತಿಯ ತಮ್ಮ,ಸತ್ಯವತಿಗೆ ಅಣ್ಣ. ಕುಸುಮಾ,ಧನಂಜಯ ದಂಪತಿಗಳಿಗೆ ಮೂವರು ಮಕ್ಕಳು,ಶುಭಾ,ವಿಭಾ ಮತ್ತು ಪ್ರಭಾ.ಆರ್ಥಿಕವಾಗಿ ಅಷ್ಟೇನೂ ಅನುಕೂಲವಿರಲಿಲ್ಲ.ಒಂದು ಸ್ವಂತ ಮನೆ ಇತ್ತು ಅಷ್ಟೇ.
ವಸಂತಿಗೆ ಇಬ್ಬರು ಗಂಡುಮಕ್ಕಳು,ರಮೇಶ ಮತ್ತು ಮಹೇಶ.ರಮೇಶ ಮೆಕ್ಯಾನಿಕ್ ಆಗಿ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ.ಮಹೇಶ ಚಿಕ್ಕಂದಿನಿಂದಲೂ ಬುದ್ದಿವಂತ.ಡಿಗ್ರಿ ಮುಗಿಸಿದ ಬಳಿಕ ಬ್ಯಾಂಕ್ ನಲ್ಲಿ ಕೆಲಸ ಸಿಕ್ಕಿತ್ತು.
ಶುಭಾ ಹುಟ್ಟಿದಾಗಲಿಂದ ಅವಳೇ ಮಹೇಶನ ಹೆಂಡತಿ ಎನ್ನುವ ಭಾವನೆ ಕುಟುಂಬದ ಎಲ್ಲರ ಮನಸ್ಸಿನಲ್ಲಿ ಇತ್ತು.ಅದಕ್ಕೆ ಕಾರಣ ವಸಂತಿಯೇ.ಹಾಗೆ ನೋಡಿದರೆ,ಮಹೇಶ,ಶುಭಾಳಿಗಿಂತ ಎಂಟು ವರ್ಷ ದೊಡ್ಡವನು.
ಪ್ರಸ್ತುತ, ರಮೇಶನ ಮದುವೆ ನ ಎಂದು,ಧನಂಜಯ ಹಾಗೂ ಶುಭಾ,ವಸಂತಿಯ ಮನೆಗೆ ಬಂದಾಗ ಈ ಘಟನೆ ನಡೆದಿತ್ತು.ಕುಸುಮಾಗೆ ಜ್ವರ ಬಂದಿದ್ದ ಕಾರಣ ಮದುವೆಗೆ ಬರಲು ಆಗಿರಲಿಲ್ಲ.
ಮದುವೆ ಮುಗಿಸಿ ಮನೆಗೆ ಬಂದಾಕ್ಷಣ, ಅತ್ತೆ ಕೊಟ್ಟಿದ್ದ ತಿಂಡಿಯ ಪೊಟ್ಟಣವನ್ನು ಕುಸುಮಳ ಕೈಗಿಡುತ್ತಾ ಶುಭ ಹೇಳಿದಳು "ಅಮ್ಮಾ ಇನ್ನುಮುಂದೆ ಯಾರ ಇದಿರಿಗೂ ನೀವು ನನ್ನನ್ನು,ಮಹೇಶನ ಹೆಂಡತಿ ಆಗುವವಳು ಅಂತ ಹೇಳ್ಬೇಡಿ."ಎಂದು ಹೇಳಿ,ತಾನು ಕೇಳಿಸಿಕೊಂಡದ್ದನ್ನು ತಾಯಿಗೆ ಹೇಳಿದಳು.ಮೊದಲೇ ಮುಂಗೋಪಿಯಾಗಿದ್ದ ಕುಸುಮಾ,ಧನಂಜಯನ ಮೇಲೆ ಸಿಕ್ಕಾಪಟ್ಟೆ ರೇಗಾಡಿದಳು "ನೋಡಿದ್ರಾ ನಿಮ್ಮ ಅಕ್ಕನ ಕುಬುದ್ಧಿ?ನಿಮ್ಮ ಕುಟುಂಬದವರ ಹಣೆಬರಹವೇ ಇಷ್ಟು ಅನ್ನಿಸುತ್ತೆ.ಮಗನಿಗೆ ಬ್ಯಾಂಕ್ ನಲ್ಲಿ ಕೆಲಸ ಸಿಕ್ಕಿದಾಕ್ಷಣ ದೊಡ್ಡವರ ಮನೆಯ ಸಂಬಂಧ ಬೆಳೆಸುವ ಯೋಚನೆ ಮಾಡಿದ್ದಾಳೆ..ಇವ್ಳು ನನ್ನ ಮಗಳಿಗೆ ಅತ್ತೆ ಆಗ್ತಾಳೆ ಎಂದುಕೊಂಡು,ಬಂದಾಗಲೆಲ್ಲ ನಾನು ಮಾಡಿದ ಉಪಚಾರ ಕಮ್ಮಿಯೇ?ಚಕ್ಕುಲಿಯಂತೆ, ಹಪ್ಪಳ,ಸಂಡಿಗೆ ಎಲ್ಲ ಡಬ್ಬಿ ಡಬ್ಬಿ ತುಂಬಿಸಿ ಕಳಿಸಿದ್ದಕ್ಕೆ ಲೆಕ್ಕವಿಲ್ಲ. ಎಂಥ ಮೋಸಗಾರ ಜನ "ಎಂದು ಸಿಕ್ಕಾಪಟ್ಟೆ ಕೂಗಾಡಿದಳು.ಬಳಿಕ ಕೋಪ ಶುಭಾಳೆಡೆಗೆ ತಿರುಗಿತು "ನಿನ್ನ ಅದೃಷ್ಟವೇ ತೆಂಗಿನಕಾಯಿ ಚಿಪ್ಪು ಬಿಡು ನಿನ್ನ ಹಿಂದೆ ಇಬ್ರೂ ಹೆಣ್ಣು ಹುಟ್ಟಿದ್ದೂ ಅದಕ್ಕೇ"ಎಂದು ತಲೆಯ ಮೇಲೆ ಮೊಟಕಿದಳು.
ಬೋಳೇ ಸ್ವಭಾವದ ಧನಂಜಯ ದಿಕ್ಕು ತೋಚದೇ ಸುಮ್ಮನಿದ್ದರೆ,ಶುಭಾ ಅಳುತ್ತಾ ಕುಳಿತಳು.ಬಳಿಕ ತಂಗಿ ವಿಭಾ ಬಂದು "ಬಿಡೇ.ಅಮ್ಮನ ಈ ಕೂಗಾಟ ಹೊಸತೇನು?.ಬಾ.ಪಗಡೆ ಆಡೋಣ"ಎಂದು ಸಮಾಧಾನ ಮಾಡಿದಳು.
ವರ್ಷಗಳು ಕಳೆದವು.ಕಾರಣಾಂತರಗಳಿಂದ ಕುಸುಮಾ ಮತ್ತು ವಸಂತಿಯ ಭೇಟಿ ಆಗಲಿಲ್ಲ. ಒಮ್ಮೆ ವಸಂತಿ ಬಂದಿದ್ದಾಗ,ಕುಸುಮಾ,ಬೆಂಗಳೂರಿನ ಅವಳ ಅಕ್ಕನ ಮನೆಗೆ ಹೋಗಿದ್ದ ಕಾರಣ, ಶುಭಾ ಕಾಫಿ ಮಾಡಿಕೊಟ್ಟು ಕಳಿಸಿದಳು.ಧನಂಜಯ ಕೂಡಾ ವಸಂತಿಯ ಬಳಿಗೆ,ಆ ವಿಷಯವಾಗಿ ಏನೂ ಮಾತನಾಡದೇ ಮಾಮೂಲಾಗಿ ಇದ್ದುಬಿಟ್ಟ.
ಹತ್ತನೆಯ ತರಗತಿಯಲ್ಲಿ ಡಿಸ್ಟಿಂಕ್ಷನ್ ಪಡೆದ ಶುಭಾ ಕಾಲೇಜಿಗೆ ಸೇರಿದಳು.ಬಿ.ಎ ಎರಡನೆಯ ವರ್ಷದಲ್ಲಿದ್ದಾಗಲೇ, ಎಸ್.ಎಸ್.ಎಲ್.ಸಿ ಅಂಕಗಳ ಆಧಾರದ ಮೇಲೆ ಟೆಲಿಫೊನ್ಸ್ (ಪಿ ಅಂಡ್ ಟಿ)ಯಲ್ಲಿ ಕೆಲಸ ಸಿಕ್ಕಿದಾಗ ಮನೆಯಲ್ಲಿ ಹಬ್ಬದ ವಾತಾವರಣ.
ಶುಭಾಳಿಗೆ ಕೆಲಸ ಸಿಕ್ಕಿ ಮೂರು ನಾಲ್ಕು ತಿಂಗಳಾಗಿತ್ತು.ರಜೆಯಲ್ಲಿ ಬಂದಿದ್ದ ಸತ್ಯವತಿಯ ಮುಖಾಂತರ, ಅಪ್ಪುರಾಯರ ತಮ್ಮನ ಮಗಳಿಗೆ ಅವರು,ಇನ್ನು ಯಾವುದೋ ಸಿರಿವಂತರ ಮಗನ ಜೊತೆ ಮದುವೆ ನಿಷ್ಕರ್ಷೆ ಮಾಡಿದ ವಿಷಯ ತಿಳಿದು, ಒಳಗೊಳಗೇ ಸಂತಸಪಟ್ಟಳು ಕುಸುಮಾ.
ಅದಾಗಿ ಎರಡು ತಿಂಗಳ ಬಳಿಕ ಹಬ್ಬಕ್ಕೆಂದು ಶುಭಾ ಊರಿಗೆ ಬಂದಾಗ ವಸಂತಿಯ ಆಗಮನವಾಯ್ತು.ಕುಸುಮಾ ನಗುಮೊಗದ ಮುಖವಾಡ ಧರಿಸಿ,ಸ್ವಾಗತಿಸಿದಳು.ಊಟೋಪಚಾರ ಮುಗಿದ ಬಳಿಕ ವಸಂತಿ ಮೆಲ್ಲಗೆ "ಕುಸುಮಾ ಮತ್ತೆ ನಿಮ್ಮ ಶುಭಾಳನ್ನು ಸೊಸೆ ಮಾಡಿಕೊಳ್ಳಬೇಕು ಅಂತ ಮೊದಲಿನಿಂದ ನನ್ನ ಮನಸ್ಸು ಆನ್ನೋದು ನಿನಗೆ ಗೊತ್ತೇ ಇದೆ"ಎಂದು ಪ್ರಾರಂಭಿಸಿದಾಗ,ಅಲ್ಲೇ ಇದ್ದ ಧನಂಜಯ "ಹೌದಕ್ಕ.ಆದ್ರೆ ಒಂದ್ ಮಾತು ನೀನು ಮಹೇಶನಿಗೆ ಕೇಳು.ನಾನು ಶುಭಾಳನ್ನು ವಿಚಾರಿಸ್ತೀನಿ'ಎಂದ.ಅದಕ್ಕೆ ವಸಂತಿ "ಅವ್ನಿಗೆ ಒಪ್ಪಿಗೆ ಇದೆ ಬಿಡು.ಶುಭಾಳನ್ನು ಏನು ಕೇಳೋದು.ಗೊತ್ತಿರುವ ವಿಷಯ ತಾನೇ?"ಎಂದಳು.ಇದನ್ನು ಕೇಳಿಸಿಕೊಂಡ ಶುಭಾ ಸುಮ್ಮನೇ ಇದ್ದವಳು,ಮಾರನೆಯ ದಿನ ವಸಂತಿ,ಊರಿಗೆ ಹೊರಟಾಗ ನುಡಿದಳು "ಅತ್ತೆ,ನಾನು ಮಹೇಶನನ್ನು ಮದುವೆ ಆಗೋಕೆ ರೆಡಿ ಇಲ್ಲ.ಅವ್ನು ನನಗಿಂತ ಎಂಟು ವರ್ಷ ದೊಡ್ಡವ್ನು. ಅಷ್ಟೇ ಅಲ್ಲ.ರಕ್ತ ಸಂಬಂಧದಲ್ಲಿ ಮದ್ವೆ ಆಗೋದು,ಮುಂದಿನ ಸಂತಾನಕ್ಕೆ ಒಳ್ಳೆಯದಲ್ಲ ಅಂತ ವೈಜ್ಞಾನಿಕ ಕಾರಣಗಳೇ ಇವೆ.ಹಾಗಾಗಿ ನೀವು ಅವ್ನಿಗೆ ಬೇರೆ ಹುಡುಗಿ ಹುಡುಕಿ ದಯವಿಟ್ಟು"ಎಂದು ಖಡಾಖಂಡಿತವಾಗಿ ಹೇಳಿದಳಲ್ಲದೆ,ಬಿಟ್ಟ ಕಣ್ಣು ಬಿಟ್ಟಂತೆ ತನ್ನನ್ನೇ ನೋಡುತ್ತಾ ನಿಂತಿದ್ದ ತಂದೆ ತಾಯಿಗೆ "ನನಗೂ ಭಾವನೆಗಳು ಅನ್ನುವುದೊಂದಿದೆ.ನನ್ನ ಅದೃಷ್ಟ ಕಳಪೆಯೋ ತಿಪ್ಪೆಯೋ ಗೊತ್ತಿಲ್ಲ.ಆದರೆ ಸಮಯಕ್ಕನುಸಾರವಾಗಿ ಬದಲಾಗುವವರ ಸೊಸೆಯಾಗಲು ನಾನು ಸಿದ್ಧಳಿಲ್ಲ"ಎಂದು ಹೇಳಿ ಒಳ ನಡೆದಳು ಶುಭಾ.

ಅನುಪಮಾ ದೇಬ್ ಗುಪ್ತಾ