Click here to Download MyLang App

ಶಾಲಿಗ್ರಾಮ - ಬರೆದವರು : ವಾಲವಿ ಹಿಟ್ನಳ್ಳಿ

“ ನಮ್ ಗುಂಡ್ಯಾಗ್ ಒಂದ್ ಕನ್ಯಾ ಇದ್ರ ಹೇಳ್ರೆಲಾ…….”
ನನ್ನ ಹಿಂದಿನಿಂದ ಒಂದು ಕೀರಲು ಸ್ವರ ನನ್ನದೇ ಮಾತಿನ ಶೈಲಿಯಲ್ಲಿ ಅಣಕಿಸಿತ್ತು. ಆ ಧ್ವನಿಯ ಒಡತಿಯನ್ನು ಕಾಣಲು ಕಾತರದಿಂದ ಹಿಂದಿರುಗಿ ನೋಡಿದೆ. ಯಾರೆಂದು ಗೊತ್ತಾಗಲಿಲ್ಲ. ನೆರೆದಿದ್ದ ಅನೇಕ ಸ್ತ್ರೀ ಪುರುಷರಲ್ಲಿ ಯಾರ ಧ್ವನಿ ಇದೆಂದು ಗುರುತಿಸಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಗೊಳ್ಳೆಂದು ನಗುವ ಅಲೆ ನನ್ನಲ್ಲಿ ಅವಮಾನದ ನೋವನ್ನು ಹುಟ್ಟುಹಾಕಿ, ಕಣ್ಣಲ್ಲಿ ಮಂದಾಕಿನಿ ಮಂದವಾಗಿ ಕಾಣಿಸಿದಳು. ಆಕೆ ಪ್ರವಾಹದೋಪಾದಿಯಲ್ಲಿ ಧುಮ್ಮಿಕ್ಕುವ ಮೊದಲೇ ವಿವಾಹದ ಊಟವನ್ನೂ ಮಾಡದೇ ಮನೆ ಸೇರಿ, ಧಾರಾಳವಾಗಿ ಧುಮ್ಮಿಕ್ಕಿ ಹರಿದು ಹೋಗಲು ಜಾಹ್ನವಿಗೆ ಜಾಗ ಮಾಡಿಕೊಟ್ಟೆ. ಪುಣ್ಯಕ್ಕೆ ಮಗ ಹಾಗೂ ಪತಿರಾಯ ಮನೆಯಲ್ಲಿರಲಿಲ್ಲ.
ಆಗಿದ್ದು ಇಷ್ಟೇ , ನನ್ನ ಮಗ ಗುಂಡ್ಯಾನ ಜೊತಿ ಓಣಿಯಲ್ಲಿ ಆಡುವ ಗುಂಡ್ಯಾನಕಿಂತ ಸಣ್ಣ ಹುಡುಗ ಪಮ್ಯಾಗ (ಪ್ರಮೋದ) ಕನ್ಯಾ ಸಿಕ್ಕಿ ಲಗ್ನ ಆಗ್ಲಿಕ್ಹತ್ತಿತ್ತು. ನನಗ ಇದು ಹೊಟ್ಯಾಗ್ ಖಾರಾ ಕಲಸಿದಂಗ ತ್ರಾಸ್ ಮಾಡಿತ್ತು. ಯಾಕಂದರ ನಮ್ ಗುಂಡ್ಯಾ ಪಮ್ಯಾನಕಿಂತ ಯಾವುದರಾಗೂ ಕಮ್ಮಿ ಇರಲಿಲ್ಲ. ಹಿಂದಿ ಚಲನಚಿತ್ರಗಳ ಹೀರೋಗಳಂಥ ಸಿಕ್ಸ್ ಪ್ಯಾಕ್ ಶರೀರ, ಎತ್ತರ ನಿಲುವು, ಹೊಂಬಣ್ಣ, ಸುಂದರ ಮುಖ, ವಾಸಕ್ಕೆ ಅಪ್ಪ ಕಟ್ಟಿಸಿದ ಬಂಗಲೆ, ಕಾರು, ಅಪ್ಪನ ಬಿಲ್ಡಿಂಗ್ ಕಾಂಟ್ರ್ಯಾಕ್ಟ್‌ ಕೆಲಸ, ಮನೆಯಲ್ಲಿ ಆಳು- ಕಾಳು, ಧನ- ಕನಕ ಯಾವುದೂ ಹುಡುಗಿಯರನ್ನು ಆಕರ್ಷಿಸಿರಲಿಲ್ಲ. ಕಾರಣ ಗುಂಡ್ಯಾ ಬೆಂಗಳೂರಾಗ್ ಇರಂಗಿಲ್ಲ ಅನ್ನೂದು ಒಂದು ಕಾರಣವಾದರೆ, ಗುಂಡ್ಯಾ ಬಿ.ಇ ಓದಿಲ್ಲ, ಎಸ್ ಎಸ್ ಎಲ್ ಸಿ ಮಾತ್ರ ಕಲತಾನ ಅನ್ನೂದು ಇನ್ನೊಂದು ಕಾರಣ ಆಗಿತ್ತು. ಅಲ್ಲದೇ ಜೀವನ ಪೂರ್ತಿ ಹಳೆ ಫರ್ನೀಚರ್ಸ್‌ (ಅತ್ತೆ – ಮಾವ) ಜೊತಿ ನಮ್‌ ಮಗಳು ಏಗಬೇಕಲ್ಲಾ ಎಂಬುದು ಕೂಡಾ ಕ.ಪಿ ಗಳ (ಕನ್ಯಾ ಪಿತೃ) ಹಿಂಜರಿಕೆಗೆ ಕಾರಣವಾಗಿತ್ತು. ಗುಂಡ್ಯಾಗss ಒಂದ್ ಕನ್ಯಾ ಸಿಕ್ಕು, ಮದುವೆಯಾಗಿ ನೆಮ್ಮದಿಯ ಬದುಕು ಸಾಗಿಸಿದರೆ ಸಾಕಪ್ಪಾ…. ನಾನು ನೆಮ್ಮದಿಯಿಂದ ಪ್ರಾಣ ಬಿಡ್ತೀನಿ, ಅನ್ನುತ್ತಾ ನಾನು ಕಂಡ ಕಂಡವರೆಲ್ಲರ ಮುಂದೂ “ನಮ್ಮ ಗುಂಡ್ಯಾಗss ಒಂದ್ ಕನ್ಯಾ ಇದ್ರ ಹೇಳ್ರೆಲಾ..” ಎಂದು ಹೇಳುವದು ಈಗೀಗ ಹಾಸ್ಯದ ವಸ್ತುವಾಗಿತ್ತು. ನನ್ನ ಹಿಂದಿನಿಂದ ಹುಡುಗರು ಹುಡುಗಿಯರು ನನ್ನ ಮಾತನ್ನು ಆಡಿ ಅಣಗಿಸುತ್ತಿದ್ದರು. ಎಷ್ಟೆಂದರೂ ಅವು ನೋವು ದುಃಖ ಅರೀಲಾರದ ಪಡ್ಡೆಗಳಲ್ವಾ?

ಆದರೇನು ಮಾಡಲಿ? ನನ್ನ ದು:ಖ ನನಗೆ……., ಇದ್ದೊಬ್ಬ ಏಕಮಾತ್ರ ಕುಲಪುತ್ರ, ಬ್ರಹ್ಮಚಾರಿಯಾಗಿಯೇ ಉಳಿದರೆ? ಎಂಬ ಚಿಂತೆಯ ಜೊತೆಗೆ ಮೂವತ್ತು ವಯಸ್ಸಿನ ಆತ ಅಂತರ್ಮುಖಿಯಾಗುತ್ತಾ ಜೀವನೋತ್ಸಾಹ ಕಳೆದುಕೊಳ್ಳುತ್ತಿದ್ದಾನೆಂಬ ಆತಂಕ ಒಂದೆಡೆ. ಹೀಗೇ ಆದರೆ ದುಶ್ಚಟಕ್ಕೆ ಬಲಿಯಾಗಿ ಜೀವನ ನರಕ ಮಾಡಿಕೊಂಡರೇನು ಗತಿಯೆಂಬ ಬೆಂಬಿಡದ ಭಯ, ಇವೆಲ್ಲವೂ ಸೇರಿ ಯಾರಾದರೂ ಗುಂಡ್ಯಾನ ಓರಿಗೆಯವರ ವಿವಾಹವಾಗುವ ಸುದ್ದಿ ಕೇಳಿದರೆ.. ಆ ದಿನವೆಲ್ಲ ಯಾರಿಗೂ ಕಾಣದಂತೆ ನನ್ನ ಸೆರಗು ಒದ್ದೆಯಾಗುತ್ತಿತ್ತು. ಹ್ಞಾ , ಇದೇನೂ ನನಗೆ ಹೊಸದಲ್ಲ, ಮೂವತ್ತು ವರ್ಷಗಳ ಹಿಂದೆಯೂ ಇದೇ ಪರಿಸ್ಥಿತಿ ಇತ್ತು. ಕೊಂಚ ಬದಲಾವಣೆ ಎಂದರೆ ಆಗ ಹೆಣ್ಣಾಗಿ ಹುಟ್ಟಿದ್ದಕ್ಕೆ ಕಂಗಳೊದ್ದೆಯಾದರೆ, ಈಗ ನನಗೆ ಗಂಡುಮಗ ಹುಟ್ಟಿದ್ದಕ್ಕೆ ಯಾತನೆ ಅನುಭವಿಸುತ್ತಿದ್ದೇನೆ. ವ್ಯತ್ಯಾಸ ಕೇವಲ ಲಿಂಗದಲ್ಲಾಗಿದೆ ವಿನಃ ಇನ್ನಾವುದರಲ್ಲೂ ಇಲ್ಲ.

“ ಅವ್ವಾ…. ‘ಶಾಲಿಗ್ರಾಮ’ ಬಂತು.”
ನಲವತ್ತೈದು ವರ್ಷಗಳ ಹಿಂದೆ ನೆರೆಮನೆಯ ನನ್ನ ಓರಿಗೆಯ ಗೆಳತಿ ತನ್ನವ್ವನಲ್ಲಿ ಪಿಸುನುಡಿದಿದ್ದು ನನಗೆ ಸ್ಪಷ್ಟವಾಗಿ ಕೇಳಿಸಿತ್ತು. ಹಿಂದೆಯೇ ಅವರವ್ವ ಗೊಳ್ಳನೇ ನಕ್ಕಿದ್ದು ಕೂಡಾ…….
ನನಗಂತೂ ಅಳು ಬಂದಿತ್ತು. ಆಡುವ ಮನವಿಲ್ಲದೇ ಮನೆಗೆ ಓಡಿದ್ದೆ. ಮನೆಯಲ್ಲೂ ನನಗೆ ಹೆಚ್ಚು ಸಾಂತ್ವನ ಹೇಳಿ ಧೈರ್ಯ ತುಂಬುವವರು ಯಾರೂ ಇರಲಿಲ್ಲ. ಹಾಗೆಂದು ನಾನು ಬಂಧುಗಳಿಲ್ಲದವಳೇನೂ ಅಲ್ಲ. ಮನೆ ಯಾವಾಗಲೂ ಬಂಧುಗಳಿಂದ ಗಿಜಿಗುಡುತ್ತಿತ್ತು. ಆದರೆ……, ನನ್ನನ್ನಪ್ಪಿ ಎದೆಗೊರಗಿಸಿಕೊಂಡು ತಲೆಸವರಿ, ‘ಕಪ್ಪಾದರೇನಂತೆ ನಿನ್ನ ಸಾಧನೆಗಳಿಂದ ನೀನೂ ಕೂಡಾ ‘ಕೃಷ್ಣ’ ನಂತೆ ‘ವ್ಯಾಸ’ರಂತೆ ಗುರುತಿಸಿಕೋ….. ಸಾಧನೆಯ ತುದಿಗೇರಿದಾಗ, ಜನಕ್ಕೆ ನಿನ್ನ ರೂಪ ಗೌಣವಾಗಿ ಸಾಧನೆ ಮಾತ್ರ ಮುಖ್ಯವಾಗುತ್ತದೆ’ ಎಂದು ಸಂತೈಸುವವರು ಯಾರೂ ಇರಲಿಲ್ಲ.
ಉರಿಯುವ ಗಾಯಕ್ಕೆ ಉಪ್ಪು ಹಾಕಿದಂತೆ,
“ನಿಗಿ ನಿಗಿ ತೊಳೆದ ಕೆಂಡ ಎಲ್ಲೋಗಿತ್ತು…..? ಈಗ ಮನಿ ನೆನಪಾತೇನು…..?”
ಎಂದೊಬ್ಬರು ಹೇಳಿದರೆ, ಇನ್ನೊಬ್ಬರು,
“ ಅಲ್ಲಿ ಆಕಿ ಗೆಳತ್ಯಾರು…… ಅದೇ…….. ಆ ಬೆಳ್ಳನ್ ಕಾಗಿಗೋಳು ಬಂದಿದ್ದು, ಅವನ್ನ ಮಾತಾಡಿಸಿಕೊಂಡು ಬರಲಿಕ್ಕಿ ಹೋಗಿದ್ಲು”
ಎಂದು ಹೇಳುತ್ತಾ ಎಲ್ಲರೂ ನಗುತ್ತಿದ್ದರೆ ನನಗಂತೂ ಬಾವಿಗೆ ಬಿದ್ದು ಸತ್ತು ಹೋಗಲೆ ಎಂದು ನೋವಾಗುತ್ತಿತ್ತು. ನಾನು ನೊಂದಷ್ಟೂ ಇವರಿಗೆ ವಿಕೃತ ಆನಂದವಾಗುತ್ತಿತ್ತು. ಇನ್ನೊಬ್ಬರನ್ನು ನೋಯಿಸಿ, ಅವರ ನ್ಯೂನ್ಯತೆ ಆಡಿಕೊಂಡು ನಗುವ ಹಾಸ್ಯಕ್ಕೆ ಸುಂಕಾಪುರ ಅವರು ರಾಕ್ಷಸ ನಗೆ ಎಂದು ಕರೆಯುತ್ತಾರೆ. ಇವರೂ ನನ್ನ ಪಾಲಿನ ರಾಕ್ಷಸರೇ ಆಗಿದ್ದರು. ಯಾಕೆ ಇವರು ನನ್ನ ಉಳಿದ ಯಾವ ಒಳ್ಳೆ ಅಂಶಗಳನ್ನು ನೋಡುವದಿಲ್ಲ?! ತರಗತಿಯಲ್ಲಿ ನಾನು ಸದಾ ಮೊದಲಿಗಳಾಗುತ್ತಿದ್ದೆ, ಸುಂದರವಾದ ರಂಗವಲ್ಲಿ ಬಿಡಿಸಿ ಅಂಗಳ ಅಂದಗೊಳಿಸುತ್ತಿದ್ದೆ. ಸುಂದರ ಕಲಾಕೃತಿ ಮಾಡಿ ಮನೆಯನ್ನು ಅಲಂಕರಿಸಿ ಅಚ್ಚುಕಟ್ಟುತನದಿಂದ ಮನೆ ಇಟ್ಟುಕೊಳ್ಳುತ್ತಿದ್ದೆ. ಎಲ್ಲ ಕೆಲಸದಲ್ಲೂ ಅವ್ವನಿಗೆ ನೆರವಾಗಿ ಆಕೆಯ ಎಪ್ಪತ್ತೈದರಷ್ಟು ಕೆಲಸ ಕಡಿಮೆ ಮಾಡುತ್ತಿದ್ದೆ. ಆದರೆ ಇದಾವುದೂ ಯಾರನ್ನೂ ಪ್ರಭಾವಿಸದೇ ನನ್ನ ಬಣ್ಣ ಮಾತ್ರ ಎಲ್ಲರಿಗೂ ಢಾಳಾಗಿ ಕಾಣುತ್ತದಲ್ಲಾ ಯಾಕೆ? ಎಂದೂ ಉತ್ತರ ಸಿಗದ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡು ತಳಮಳಿಸುತ್ತಿದ್ದೆ. ಸದಾ ನನಗೆ ನನ್ನ ಬಣ್ಣದ್ದೇ ಚಿಂತೆಯಾಗಿ ಬಹಳ ಕೀಳಿರಿಮೆಯಿಂದ ಬಳಲುತ್ತಾ ಜನರಿರುವ ಕಡೆ ಹೋಗುವದನ್ನೇ ಬಿಟ್ಟುಬಿಟ್ಟೆ. ಸದಾ ಚಿಪ್ಪಿನಲ್ಲಿ ಬಚ್ಚಿಟ್ಟುಕೊಳ್ಳುವ ಆಮೆಯಾಗಿಬಿಟ್ಟೆ.
ಶಾಲಿಗ್ರಾಮ, ಶಿವಲಿಂಗ, ಬೆಳ್ಳನ್ನ ಕಾಗೆ, ಅಮಾಸಿ, ತೊಳೆದ ಕೆಂಡ, ಕಾಳವ್ವ ಇತ್ಯಾದಿ ಅನೇಕಾನೇಕ ಅಭಿದಾನಗಳಿಂದ ಪ್ರಸಿದ್ಧವಾಗಿ ಮನೆಯಲ್ಲಂತೂ ಶಾಲಿಗ್ರಾಮವೇ ನನ್ನ ತೊಟ್ಟಿಲಿನ ಹೆಸರಂತೆ ಬಳಕೆಯಾಗಿ ಬೆಳೆಯತೊಡಗಿದೆ.
ಅಪ್ಪ ನನ್ನಂತೆ ಶಾಲಿಗ್ರಾಮ ಶಿಲೆಯ ಬಣ್ಣದವರಾಗಿದ್ದರೂ ಅಮ್ಮ ಮಾತ್ರ ರಸಪೂರಿ ಮಾವಿನ ಹಣ್ಣಿನ ಬಣ್ಣದವಳು. ಅಷ್ಟೇ ಅಲ್ಲ, ಬಹಳ ಸುಂದರಿ. ತನ್ನ ಸೌಂದರ್ಯದ ಬಗ್ಗೆ ಅಮ್ಮನಿಗೆ ತುಂಬಾ ಹೆಮ್ಮೆ. ತನ್ನ ಸುಂದರ ರೂಪಕ್ಕೆ ಮರುಳಾಗಿ ಯಾವುದಾದರೂ ಸುಂದರಾಂಗ ಖಂಡಿತ ಪಾಣಿಗ್ರಹಣ ಮಾಡುತ್ತಾನೆಂದು ಧೇನಿಕೆ ಹಾಕಿದ ಅವ್ವನಿಗೆ ಶಿವಲಿಂಗದ ಮಾರಿಯ ಅಪ್ಪ ಸಿಕ್ಕಿದ್ದು ಬಹಳ ಅಸಂತೋಷ ಉಂಟುಮಾಡಿತ್ತು. ಸಾಲಾಗಿ ಹುಟ್ಟಿದ ನಾಕು ಹೆಣ್ಣುಮಕ್ಕಳಲ್ಲಿ ಎರಡನ್ನು ಮದುವೆ ಮಾಡಲು, ಸುಂದರಿಯರಾಗಿದ್ದರೂ ಅವರುದ್ದಕ್ಕೂ ವರದಕ್ಷಿಣೆ, ವರೋಪಚಾರ, ಸಾಲಂಕೃತ ಕನ್ಯಾದಾನ ಬಾಣಂತನ, ಸೀಮಂತ ಅಂತೆಲ್ಲಾ ಖರ್ಚು ಮಾಡಿ ಸೋತು ಸುಣ್ಣವಾಗಿದ್ದರು ನನ್ನಜ್ಜ. ಕೊನೆಯವರಿಬ್ಬರ ಮದುವೆಯ ಹೊತ್ತಿಗೆ ಗಂಡು ಹೇಗಾದರೂ ಇರಲಿ, ಮದುವೆಯಾದರೆ ಸಾಕು, ಎಂದುಕೊಂಡು ಮನೆಯ ಅಳಿಯನಾದ, ಮತ್ತು ನೋಡಲು ಚನ್ನಿಗನಲ್ಲದ ಅಪ್ಪಂಗೆ ಅವ್ವನನ್ನು ಗಂಟು ಹಾಕಿದ್ದರು.
ಅವ್ವನಿಗೆ ಅಪ್ಪನ ರೂಪ, ಬಣ್ಣದ ಕುರಿತು ಯಾವಾಗಲೂ ಅಸಮಾಧಾನ. ಆ ದ್ವೇಷವನ್ನು ನನ್ನನ್ನು ಶಾಲಿಗ್ರಾಮವೆಂದು ಆಡಿಕೊಂಡು ಅಪ್ಪನ ಮೇಲಿನ ರೋಷ, ಸಿಟ್ಟು ಎಲ್ಲವನ್ನು ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಳೇನೋ?
ಸಹಿಸೀ ಸಹಿಸೀ ಸಾಕಾಗಿ ನಾನೂ ಸಿಡಿದೇಳುತ್ತಿದ್ದೆ. ಮಾರುತ್ತರ ಕೊಡತೊಡಗಿದೆ. ಇದರಿಂದ ನಮ್ಮ ಸಂಬಂಧ ತೀರಾ ಹಳಸತೊಡಗಿತ್ತು. ಅಲ್ಲದೇ ಜಗಳಗಂಟಿ, ನಿಷ್ಟುರಿ ಎಂಬ ಇನ್ನೆರಡು ಅಭಿದಾನಗಳೂ ಸೇರಿಕೊಂಡವು ನನಗೆ.
ನೋಡಲು ಸೌಂದರ್ಯವೂ ಇಲ್ಲ, ಮೇಲೆ ಮನೆಯವರ ತಿರಸ್ಕಾರ, ಅಲಂಕಾರದಲ್ಲೂ ಆಸಕ್ತಿ ಇಲ್ಲದ್ದರಿಂದ ತೀರಾ ಕಳಪೆಯಾಗಿ ಕಾಣಿಸುತ್ತಿದ್ದೆ. ಯಾರಾದರೂ ಸಂಬಂಧಿಕರ ವಿವಾಹಕ್ಕೆ ಹೋದಾಗ ಸುಂದರಿಯೂ ನನ್ನ ಓರಿಗೆಯವಳೂ ಆದ ದೊಡ್ಡಮ್ಮನ ಮಗಳೊಂದಿಗೆ ಸದಾ ನನ್ನನ್ನು ಹೋಲಿಸುವುದು, ತೀರಾ ಚಿಕ್ಕದಾದ ಚಿಕ್ಕಮ್ಮನ ಮಗಳೊಂದಿಗೂ ಸಹ ನನ್ನೊಂದಿಗೆ ಸೌಂದರ್ಯದಲ್ಲಿ ಹೋಲಿಸಿ , ಇವಳ ಮದುವೆಯಾಗುವುದು ಬಹಳ ಕಷ್ಟವೆಂದು ಆಡಿಕೊಳ್ಳುವ ದೊಡ್ಡವರು, ವಿನಾಕಾರಣ ದೊಡ್ಡಮ್ಮನ ಹಾಗೂ ಚಿಕ್ಕಮ್ಮನ ಮಕ್ಕಳನ್ನು ಕಂಡರೆ ನನ್ನಲ್ಲಿ ದ್ವೇಷ ಮೂಡುವಂತೆ ಮಾಡುತ್ತಿದ್ದರು.
ದೊಡ್ಡಮ್ಮ ಒಂದು ದಿನ,
“ಈ ಶಾಲಿಗ್ರಾಮ ಸರೀದು (ಸರೋಜ ಎಂಬ ಹೆಸರು ದೊಡ್ಡವರ ಬಾಯಲ್ಲಿ ‘ಸರಿ’ ಆಗಿತ್ತು) ಒಂದss ನಮಗ ಲಗ್ನದ ಚಿಂತಿ ನೋಡ್ರೆವಾ. ಉಳದ್ ಹುಡುಗ್ಯಾರ್ ಯಾರದೂ ಚಿಂತಿ ಇಲ್ಲ. ಏನ್ಮಾ…..”
ಎಂದು ಇನ್ನೇನೋ ಹೇಳುವಷ್ಟರಲ್ಲಿ ನನ್ನಲ್ಲಿ ರೋಷ ಉಕ್ಕಿ ಬಂದು, ಮುಖ ಉಬ್ಬಿಸಿ
“ಮೊದ್ಲ ನಿನ್ ಚಿಂತಿ ನೀ ಮಾಡಕೋ ಮೌಸಿ, ನನ್ ಲಗ್ನದ್ ಚಿಂತಿ ಮಾಡ್ಲಿಕ್ಕಿ ನಮ್ ಅವ್ವ, ಅಪ್ಪ ಇನಾ ಜೀವಂತ ಇದಾರ “
ಎಂದು ಸಿಡಾರನೆ ಸಿಡುಕಿ ಉತ್ತರ ಕೊಟ್ಟಿದ್ದೆ. ಈಗಿನ್ನೂ ಹನ್ನೆರಡರ ಬಾಲೆ ನಾನು. ಈಗಲೇ ನನ್ನ ವಿವಾಹದ ಚಿಂತಿ ಇವರಿಗೆ ಹತ್ತಿತ್ತು.
“ಅವ್ ಸುಡ್ಲಿ, ಇದೇನ ಸುನೀ……. (ಸುನಯನಾ) ನಿನ್ ಮಗಳು ಈಟಿದ್ದಾಳ, ಈಗೇ ಹಿಂಗ್ ಮಾತಾಡ್ತಾಳ!! ಇಕಿ ನಾಳಿ ಗಂಡನ್ನ ಬುಟ್ಯಾಗ್ ಇಟ್ಕೊಂಡು ಮುಂಬಯಿ ಬಾಜಾರಿನ್ಯಾಗ ಮಾರಿ ಬರ್ತಾಳ ನೋಡ್ತಿರು. ಭಾಳ ಸಲಗೀ ಕೊಟ್ಟಿ ಇದಕ್ಕ.”
ಎನ್ನುತ್ತ ಅವ್ವನ ಮುಖ ಕೆಂಗಣ್ಣಿನಿಂದ ನೋಡಿದಳು ದೊಡ್ಡಮ್ಮ.
ಅವ್ವ ನನ್ನ ಕಡೆ ಕೆಂಗಣ್ಣು ಬೀರಿ ನೋಡಿದೆಯಾ ನಿನ್ ಯೋಗ್ಯತೆ? ಎಲ್ಲರೂ ಆಡಿಕೊಳ್ಳುವಂತೆ ಮಾಡಿದಿ, ಎಂಬ ಮುಖಭಾವ ಮಾಡಿ, ಅರ್ಧ ಅವಮಾನದಿಂದ, ಅರ್ಧ ಸಿಟ್ಟಿನಿಂದ ನನ್ನೆಡೆಗೆ ನೋಡಿದಳು.
ಒಬ್ಬರೂ ನಾನೇಕೆ ಸಿಡುಕಿ ಉತ್ತರ ಕೊಟ್ಟೆ ಎಂದು ವಿಮರ್ಶಿಸಲಿಲ್ಲ. ದೊಡ್ಡಮ್ಮ ನನಗೆ ಶಾಲಿಗ್ರಾಮವೆಂದು ನನ್ನೆದುರೇ ಕರೆದಿದ್ದು ಯಾರಿಗೂ ತಪ್ಪಾಗಿ ಕಾಣಲಿಲ್ಲ. ಸೌಂದರ್ಯವಿಲ್ಲದಿದ್ದರೂ ನನಗೂ ಮನಸ್ಸು ಇದೆ, ಭಾವನೆಗಳಿವೆ ಎಂದು ಇವರಾರಿಗೂ ಅನಿಸಲೇ ಇಲ್ಲ.
ಹೀಗೆ ದಿನಗಳು ಉರುಳಿದವು. ಎಸ್ ಎಸ್ ಎಲ್ ಸಿ ಪಾಸ್ ಆದ ಕೂಡಲೇ
“ಟಿ ಸಿ ಎಚ್ ಮಾಡಿಸಿ ಬಿಡೂಣು. ಏನೋ ನೌಕರಿ ಬಂದ್ರ ಈ ಶಾಲಿಗ್ರಾಮ ಮಾರಿಯಾಕಿನ್ನ ಯಾರರ ರೊಕ್ಕದ್ ಮಾರಿ ನೋಡಿ ಮದುವಿ ಆಗಬಹುದು ,”
ಎನ್ನುತ್ತ ಟಿಸಿಎಚ್ ಕಲಿಸಿದ್ದಳು ಅವ್ವ. ಅದಕ್ಕಾಗಿಯಾದರೂ ಆ ಮಹಾಮಾತೆಗೆ ನಮನ ಸಲ್ಲಿಸಲೇ ಬೇಕು. ಮುಂದೆ ನಾನು ಮನೆಯಲ್ಲೇ ಬಾಹ್ಯವಾಗಿ ಪರೀಕ್ಷೆ ಕಟ್ಟಿ ಡಿಗ್ರಿ , ಹಾಗೂ ಬಿಎಡ್ ಅನ್ನು ಮದುವೆಯಾದ ಮೇಲೆ ನನ್ನವರ ಅನಂತ ಸಹಕಾರದಿಂದ ಪೂರ್ಣಗೊಳಿಸಿಕೊಂಡೆ.
ಹಳ್ಳಿಯೊಂದರಲ್ಲಿ ಪೋಷ್ಟ್ ಮಾಸ್ತರ್ ಆಗಿದ್ದ ಅಪ್ಪನಿಗೆ ಭೂ ಸುಧಾರಣೆ ಎಂಬ ಕಾಯ್ದೆ ಮಹಾ ಬರೆಯನ್ನು ಎಳೆದಿದ್ದರಿಂದ ಸಮಸ್ತ ಹೊಲವನ್ನು ಕಳೆದುಕೊಂಡಿದ್ದ. ಆರಕ್ಕೇರದ ಮೂರಕ್ಕಿಳಿಯದ ಸಂಸಾರ ಅಪ್ಪನದು. ಎರಡೇ ಮಕ್ಕಳಿಗೆ ಸಾಕು ಮಾಡಿ ಕುಟುಂಬ ಯೋಜನೆ ಪಾಲಿಸಬೇಕೆಂದುಕೊಂಡರೂ ಅಚಾತುರ್ಯದಿಂದ ನಾನು ಮೂಡಿದೆನಂತೆ. ನನ್ನನ್ನು ಪಿಂಡದಲ್ಲೆ ಹೊಸಕಿ ಹಾಕಲು ಪ್ರಯತ್ನಿಸಿದರೂ ಗಟ್ಟಿ ಪಿಂಡವಾದ ನಾನು ಉಳಿದು ಬಿಟ್ಟಿದ್ದೆ. ಬೇಡದ ಮಗುವಾದ ನಾನು ಕೊನೆಯವರೆಗೂ ಹೆತ್ತವರ ತಿರಸ್ಕಾರದಲ್ಲೇ ದೊಡ್ಡವಳಾದೆ.
ವಿವಾಹದ ವಯಸ್ಸಿಗೆ ಬಂದಾಗಲೇ ನನ್ನ ನಿಜವಾದ ಸಮಸ್ಯೆ ಶುರುವಾಗಿತ್ತು. ಫೋಟೋ ನೋಡಿಯೇ ಹಲವರು ಕುಂಡಲಿ ಕೂಡಿ ಬಂದಿಲ್ಲವೆಂದು ಹೇಳಿದರೆ, ಇನ್ನು ಕೆಲವರು ಕನ್ಯಾ ತೋರಿಸಲು ಹೋದಾಗಲೇ ಮುಖಕ್ಕೆ ಹೊಡೆದಂತೆ
“ಎಂತೆಂಥ ಸುಂದರ ಹುಡುಗಿಯರನ್ನು ನಮ್ ಹುಡುಗ ಒಲ್ಲೆ ಅಂತಾನ್ರೆವಾ….. ಈಗಿನ್ ಕಾಲದ ಹುಡುಗರಿಗಿ ಏನೂ ಹೇಳಲಾಸಲ್ಲ”
ಎನ್ನುತ್ತ, ನಿಮ್ಮ ಶಾಲಿಗ್ರಾಮ ಶಿಲೆಯ ಬಣ್ಣದ ಹುಡುಗಿಯನ್ನು ಒಪ್ಪುವನೇ? ಎಂಬ ಪರೋಕ್ಷಾರ್ಥ ಬರುವ ಮಾತಾಡುತ್ತಿದ್ದರು.
ದೂರದ ಊರುಗಳಿಗೆ ಮುಖ ಒಣಗಿಸಿಕೊಂಡು ಅಪ್ಪ, ನಾನು ಇಬ್ಬರೇ (ಹೆಚ್ಚು ಜನ ಹೋದರೆ ಬಸ್ ಚಾರ್ಜ್‌ ಖರ್ಚು ಬರುತ್ತಲ್ಲ) ಹೋಗಿ, ಹಸಿದು ಸಂಕಟವಾದರೂ ಅನೇಕರ ಮನೆಯಲ್ಲಿ ಕೇವಲ ಚಹಾ ಮಾತ್ರದಲ್ಲಿ ತೃಪ್ತರಾಗಿ ಅವಾರಾಡುವ ನೂರೊಂದು ಮಾತುಗಳನ್ನು ಸಹಿಸಿಕೊಂಡು ಹಿಂದುರುಗಿ ಮನೆಗೆ ಬಂದ ಮೇಲೆ ಊಟ ಕಾಣುತ್ತಿದ್ದೆವು.
ಹೆಚ್ಚು ಕನ್ಯಾ ಫೇಲ್ ಮಾಡಿದಾಂವಾ ಹೆಚ್ಚು ಶ್ರೇಷ್ಟ ಗಂಡು ಎಂದು ಹೆಮ್ಮೆಯಿಂದ ಬೀಗುತ್ತಿದ್ದರು. ಗಂಡಿನವರು. ಗಂಡು ಬೀಗರ ಆಟಾಟೋಪ, ಗತ್ತು, ಧಿಮಾಕು, ಎಷ್ಟು ಕೊಟ್ಟರೂ, ಏನು ಮಾನಪಾನ ಮಾಡಿದರೂ ಮುಗಿಯದ ಅವರ ಹಪಾಹಪಿ, ಒಂದಿಲ್ಲೊಂದು ಕಾರಣಕ್ಕೆ ಮುನಿಸಿಕೊಳ್ಳುವ ಪರಿ, ಮುದ್ದಿ ಪಲ್ಯಾ ಮಾಡ್ಸೀರಿ, ಹಾಗಲ ಕಾಯಿ ಪಲ್ಯ ಮಾಡಿಸಿಲ್ಲಾ, ಉದ್ದಿನ ವಡೆ , ಶಿರಾ ಮಾಡಿಸೀರಿ, ಅಷ್ಟೂ ತಿಳ್ಯಂಗಿಲ್ಲ ನಿಮಗ? ಊಟಕ್ಕ ಸಮೆ ಹಚ್ಚಿಟ್ಟಿಲ್ಲ, ಭೂಮಕ್ಕss ಮಂಡಿಗಿ ಮಾಡಿಸಿಲ್ಲ, ರಂಗೋಲಿ ಛಂದಗೆ ಹಾಕಿಲ್ಲ, ಕುದುರಿ ಬಿಳೀದಿಲ್ಲ, ಪೇಟಾ ತಂದಿಲ್ಲ, ನಮಗ ಊಟಕ್ಕನs ಕರೀಲಿಲ್ಲ. ನಮಗs ಸ್ನಾನಕ್ಕೆ ಬಿಸಿನೀರ ತೋಡಿಕೊಡಲಿಲ್ಲ, ಎಣ್ಣಿ ಹಚ್ಚಲಿಲ್ಲ, ಸೋಪು ಇಲ್ಲ, ಮುಗಿಯಲಾರದಷ್ಟು ಬೀಗರ ತಕರಾರುಗಳು, ಇವೆಲ್ಲಾ ಪೂರೈಸಿ ಸಾಲ ಸೋಲ ಮಾಡಿ, ಹೆಣ್ಣು ಮಕ್ಕಳುದ್ದಕ್ಕೂ ಹಣ ಖರ್ಚು ಮಾಡಿ, ಮಗಳನ್ನು ಸಾಗ ಹಾಕುವಷ್ಟರಲ್ಲಿ ‘ನೂರು ಜನ್ಮಕ್ಕೂ ನನಗೆ ಹೆಣ್ಣು ಮಗು ಬೇಡಪ್ಪಾ’ ಎಂದು ಹೆಣ್ಣು ಹೆತ್ತವರು ದೇವರಲ್ಲಿ ಪ್ರಾರ್ಥಿಸುವಂತಾಗುತ್ತಿತ್ತು.
ಹೀಗೆ ವರಾನ್ವೇಷಣೆ ಶುರುವಾದಾಗಲೇ ಅಪ್ಪನನ್ನು ಯಮ ಕರೆಸಿಕೊಂಡು ಬಿಟ್ಟಿದ್ದ. ವೈಧವ್ಯದ ಅವ್ವ ಎಲ್ಲಿಗೂ ಬರುವಂತಿಲ್ಲ. ಹೀಗಾಗಿ ಅಣ್ಣಂದಿರ ಹೆಗಲಿಗೆ ಕನ್ಯಾ ಕರೆದುಕೊಂಡು ಹೋಗುವ ಜವಾಬ್ದಾರಿ ಬಿತ್ತು. ಅಣ್ಣಂದಿರು ಓದಿನಲ್ಲಿ ಆಸಕ್ತಿ ಉಳ್ಳವರಲ್ಲ. ಹೀಗಾಗಿ ಅಪ್ಪನ ಪೋಷ್ಟ್ ನೌಕರಿ ನೋಡಿಕೊಂಡು ಒಬ್ಬ ಅಣ್ಣ ಹಳ್ಳಿಯಲ್ಲಿ ವಾಸವಾಗಿದ್ದರೆ, ಇನ್ನೊಬ್ಬ ಪಟ್ಟಣದಲ್ಲಿ ಮಂಡಿ ಲೆಕ್ಕ ಬರೆಯುತ್ತಾ ಅಲ್ಪ ಸಂಬಳದಲ್ಲಿ ಜೀವನ ಸಾಗಿಸುತ್ತಿದ್ದನು. ಇವರಿಗೆ ಕನ್ಯಾ ಊರೂರಿಗೆ ಕರೆದೊಯ್ದು ತೋರಿಸುವದು ಆರ್ಥಿಕ ಹೊರೆಯಾಗಿತ್ತು. ಅಲ್ಲದೇ ಎಷ್ಟು ತೋರಿಸಿದರೇನು? ಶಾಲಿಗ್ರಾಮ ಶಿಲೆಯ ಬಣ್ಣದವಳನ್ನು ಯಾರು ಮದುವೆಯಾಗುತ್ತಾರೆಂಬ ಉದಾಸೀನತೆ. ಹಾಗೊಂದು ವೇಳೆ ಎಲ್ಲಿಯಾದರೂ ಕನ್ಯಾ ತೋರಿಸಲು ಹೋಗುವ ಪ್ರಸಂಗ ಬಂದರೆ,
“ಕಾಲಿಗಿ ಗೆಜ್ಜಿ ಕಟಗೊಂಡು ಊರೂರ ಕನ್ಯಾ ಕರಕೊಂಡ್ ಎಷ್ಟ್ ತಿರಗಬೇಕೋ ಇನ್ನ”
ಅಂತಾ ಗೊಣಗುತ್ತಾ ಸಿಡಿಮಿಡಿ ಮಾಡುತ್ತಾ ಕರೆದೊಯ್ಯುತ್ತಿದ್ದರು.
“ಇಕೀ ಕೈ ಹಿಡಿಯೂ ಪುಣ್ಯಾತ್ಮ ಎಲ್ಲಿ ಕೂತಾನೋ ಏನೋವಾ… ಗಂಡಸ್ ಮಕ್ಕಳ ಲಗ್ನ ಹೂ ಎತ್ತಿದಂಗ ಸುಲಭ ಆಗಿ ಹೋತು. ಇರೂದು ಒಂದ್ ಹೆಣ್,… ಇದರ ಹಣೀ ಮ್ಯಾಲs ಬಾಸಿಂಗ್ ಕಟ್ಟೂ ಭಾಗ್ಯನರೆ ದೇವರು ಬರದಾನೋ ಇಲ್ಲೋ… “
ಎನ್ನುತ್ತಾ ನನ್ನೆದುರೆ ಅವ್ವ ಅಳುತ್ತಿದ್ದರೆ, ನನಗಂತೂ ಮದುವೆಯ ಕುರಿತು ಜಿಗುಪ್ಸೆ ಬಂದು ಬಿಡುತ್ತಿತ್ತು. ನನ್ನ ಬಗ್ಗೆಯೂ ಬೇಸರ ಮೂಡಿ ಇಂಥ ಬಾಳು ಬಾಳುವದಕ್ಕಿಂತ ಸಾಯುವದೇ ಲೇಸು ಅನಿಸುತ್ತಿತ್ತು. ಆದರೂ ಸಾಯಲು ಬೇಕಾದ ಪ್ರಚಂಡ ಧೈರ್ಯವಿರದೇ ಸುಮ್ಮನಾಗುತ್ತಿದ್ದೆ.
ತುಂಬಾ ಗಟ್ಟಿಯಾಗಿದ್ದ ಅವ್ವನೂ ಇದ್ದಕ್ಕಿದ್ದಂತೆ ಒಂದು ದಿನ ಬಚ್ಚಲಲ್ಲಿ ಕಾಲು ಜಾರಿ ಬಿದ್ದು ಸೊಂಟಕ್ಕೆ ಪೆಟ್ಟಾಗಿ ಮಲಗಿದಲ್ಲೇ ಮಲಗಿದಳು. ಹಾಸಿಗೆಯಲ್ಲೇ ನಿತ್ಯ ಕರ್ಮಗಳನ್ನು ಮಾಡತೊಡಗಿದಾಗ ಎಷ್ಟೇ ಅವ್ವನನ್ನು ನಾನು ದ್ವೇಷಿಸುತ್ತಿದ್ದರೂ ಅವಳ ಸೇವೆಗೈಯುವದು ನನಗೀಗ ಅನಿವಾರ್ಯವಾಗಿತ್ತು.
ಈಗ ಅಣ್ಣಂದಿರಿಗೆ ಹೇಳಲು ಒಂದು ನೆವ ಸಿಕ್ಕಿತ್ತು. ನಾನು ಮದುವೆಯಾಗಿ ಹೋದರೆ ಅವ್ವನನ್ನು ನೋಡಿಕೊಳ್ಳಲು ಯಾರೂ ಇಲ್ಲದಂತಾಗುತ್ತದೆ. ಅನಕಾ ಮದುವೆ ಬೇಡ, ಎನ್ನುತ್ತಾ ಮುಂದೂಡತೊಡಗಿದರು. ಎರಡು ವರ್ಷಗಳ ವರೆಗೆ ಹಾಸಿಗೆಯಲ್ಲಿಯೇ ಎಲ್ಲ ನಿತ್ಯ ವಿಧಿ ಪೂರೈಸುತ್ತಾ ಕೊನೆಗೊಮ್ಮೆ ಅವ್ವನೂ ಭೂ ಋಣದಿಂದ ಮುಕ್ತಳಾಗಿದ್ದಳು. ಒಂದೇ ಒಂದು ದಿನ, ಒಂದೇ ಒಂದು ಒಳ್ಳೆಯ ಮಾತನ್ನೂ ಆಡದಿದ್ದ, ಒಳ್ಳೆಯ ಬಟ್ಟೆ , ಆಭರಣ ತೊಡಿಸಿ, ನಲಿದಾಡಿಸದ, ಹೂ ಮುಡಿಸಿ, ಬಿಗಿದಪ್ಪಿ ‘ನನ್ ಬಂಗಾರ,… ನನ್ ಮನಿ ಮಂಗಳಗೌರಿ ನೀ…’ ಎಂದು ಪ್ರೀತಿಯ ನುಡಿಯಾಡದ, ಕಪ್ಪಿದ್ದರೇನು? ಎಷ್ಟು ಅಚ್ಚುಕಟ್ಟುತನದಿಂದ ಕೆಲಸ ಮಾಡ್ತಿ, ಎಂಥ ಚಂದ ಚಿತ್ರ ತಗೀತಿ, ಎಷ್ಟ್ ಚಂದಗೆ ಮನಿ ಅಲಂಕಾರ ಮಾಡ್ತಿ? ಎಂದು ಒಂದಾದರೂ ನನ್ನ ಧನಾತ್ಮಕ ಗುಣಗಳನ್ನು ಜೀವದುದ್ದಕ್ಕೂ ಮೆಚ್ಚಿರದ ಅವ್ವ ಇನ್ನಿಲ್ಲವೆಂದಾದಾಗ, ನನಗಾವ ಭಾವವೂ ಸ್ಫುರಿಸಲೇ ಇಲ್ಲ. ಆಕೆ ಇರುವಷ್ಟು ದಿನ ನಿತ್ಯವೂ, ‘ಪಿಂಡದಲ್ಲೇ ನಿನ್ನ ಸಾಯಿಸಲು ನೋಡಿದೆ, ಕರಿಮಾರಿ… ಗಟ್ಟಿ ಪಿಂಡ ಉಳಿದುಬಿಟ್ಟಿ’ ಶಾಲಿಗ್ರಾಮದ ಮಾರಿಯಾಕಿ ನನ್ನರೆ ಹೋಲಬಾರದಿತ್ತ? ನಿನ್ಯಾರು ಮದ್ವಿ ಆಗಬೇಕು? ಮೊದ್ಲೇ ತ್ರಿಲೋಕ ಸುಂದರಿ, ಸಾಲದ್ದಕ್ಕ ಬಡತನ ನಮ್ಮದು, ಇತ್ಯಾದಿ ಸುಪ್ರಭಾತ ಕೇಳಿ ನನಗೂ ಸಾಕಾಗಿ ಹೋಗುತ್ತಿತ್ತು.
ಅವ್ವ ತೀರಿದ ನಂತರ ಅಣ್ಣಂದಿರದು ಹೊಸ ವರಸೆ ಶುರುವಾಗಿತ್ತು. ನಾನೊಬ್ಬನೇ ಯಾಕೆ ನಿನ್ನನ್ನು ನೋಡಿಕೊಳ್ಳಬೇಕು? ನಿನ್ನನ್ನು ನೋಡಿಕೊಳ್ಳಲು ನಿಮ್ಮಪ್ಪ ನಮಗೆ ಹಿಡಿಗಂಟು ಕೊಟ್ಟಿದ್ದಾನೆಯೇ? ಆಸ್ತಿ ಬಿಟ್ಟು ಹೋಗಿದ್ದಾನೆಯೇ ಇತ್ಯಾದಿ, ಇತ್ಯಾದಿ……
ಇನ್ನೊಬ್ಬ ಅಣ್ಣನ ಮನೆಯಲ್ಲೂ ಇದೇ ವರಾತ ಶುರುವಾದಾಗ ಯಾರದ್ದಾದರೂ ಮನೆಯ ಅಡಿಗೆ ಮಾಡಿ ಹೊಟ್ಟೆ ಹೊರೆಯಲು ತೀರ್ಮಾನಿಸಿದೆ. ಆದರೆ ಅದಕ್ಕಾದರೂ ಬಿಡುವರೆ ಈ ಅಣ್ಣಂದಿರು? ‘ಅಡಿಗಿ-ನೀರಾ ಮಾಡಿ ನಮ್ ಮರ್ಯಾದಿ ಕಳೀಬೇಕಂತ ಮಾಡೀ ಏನು? ನಮ್ಮದು ಸುತ್ತಲಿನ ಹತ್ತೂರಿಗಿ ಹೆಸರಾದ ಮನಿ.’ ಎಂಬ ಆಕ್ಷೇಪ. ‘ಹಾಗಿದ್ದರೆ ನಾನೇನು ಮಾಡಲಿ? ಎಲ್ಲಿ ಹೋಗಲಿ? ಹೋಗುವ ದಾರಿ ತೋರಿಸಿ,’ ಎಂದರೆ ‘ಎಲ್ಲಿಗಾದರೂ ಹೋಗು ನಮ್ಮನ್ನೇನು ಕೇಳುತ್ತಿ?’ ಎಂಬ ಭಾವದಲ್ಲಿ ಮಾತಾಡದೇ ಎದ್ದು ಹೋಗುತ್ತಿದ್ದರು.
ಇಂಥ ದುರ್ದಿನಗಳಲ್ಲೇ ಸರ್ಕಾರದಿಂದ ಒಂದೊಳ್ಳೆ ಸುದ್ದಿ ಬಂದಿತ್ತು. ಗ್ರಾಮಗಳಲ್ಲಿ 10 ನೇ ತರಗತಿವರೆಗೂ ಕಲಿತವರಿಗೆ ನೌಕರಿಯಲ್ಲಿ ಪ್ರತಿಶತ ಹದಿನೈದು ಕೃಪಾಂಕ ನೀಡಲು ಸರ್ಕಾರ ಮುಂದಾಗಿತ್ತು. ಅವ್ವ, ‘ಹೆಣ್ ಭಾರಗಿ ನಿನಗೇನು ಮಾಡುದು ಪ್ಯಾಟಿ ಸಾಲಿ?’ ಎನ್ನುತ್ತಾ ಹಳ್ಳಿಯಲ್ಲಿ ಶಾಲೆ ಕಲಿಸಿದ್ದು ಈಗ ಉಪಯೋಗಕ್ಕೆ ಬಂದಿತ್ತು.
ಅಂತೂ ನನ್ನ ಜೀವನದಲ್ಲಿ ದೊಡ್ಡ ತಿರುವು ಸಂಭವಿಸಿ ನಾನು ಸರಕಾರಿ ಪ್ರಾಥಮಿಕ ಶಾಲೆಯೊಂದರ ಶಿಕ್ಷಕಿಯಾದೆ. ಈಗ ಅಣ್ಣಂದಿರ ಮಾತಿನ ವರಸೆ ಬದಲಾಗಿತ್ತು. ಎದುರೆದುರೆ ಶಾಲಿಗ್ರಾಮವೆಂದು ಕರೆಯದೆ ಸರಕ್ಕ ಅನ್ನತೊಡಗಿದರು. ಶಾಲಿಗ್ರಾಮ ಪದ ಪಿಸುಮಾತಿನಲ್ಲಿ ನನ್ನ ಹಿಂದೆ ಬಳಕೆಯಾಗತೊಡಗಿತು. ಹಬ್ಬಗಳು ಬಂದಾಗ ‘ನನ್ನಲ್ಲಿ ಬಾ, ನಿನ್ನಲ್ಲಿ ಬಾ,’ ಎಂಬ ಕರೆಗಳು. ‘ಯಾಕs ಆ ಹಳ್ಳಿ ಊರಾಗ್ ಒಬ್ಬಕಿನೇ ಇರ್ತಿ? ನಮ್ಮಲ್ಲಿರು, ಇಲ್ಲಿಂದಲೇ ಹೋಗಿ - ಬಂದು ಮಾಡು, ನಿಮ್ ವೈನಿ ಹ್ಯಾಂಗೂ ಅಡಗಿ ಮಾಡ್ತಾಳಲ್ಲಾ….’ ಎಂಬ ಉದಾರತಾ ನುಡಿಗಳು ಉದುರತೊಡಗಿದವು. ಕಾರಣವೆಂದರೆ, ನಾನು ಅವರುಗಳ ಮನೆಗೆ ಹೋದಾಗ ಧಾರಾಳವಾಗಿ ಕೊಡುವ ರೊಕ್ಕದ ಪ್ರಭಾವ.
ತಾವೂ ಲಿಂಗದ ಬಣ್ಣದವರಿದ್ದರೂ, ಕುಳ್ಳಗೆ ದಪ್ಪಗಿದ್ದರೂ, ಯಾವ ಆರ್ಥಿಕ ಅನುಕೂಲವಿಲ್ಲದವರಾಗಿದ್ದಾಗ್ಯೂ ಸಹ, ಕೇವಲ ಗಂಡಿನ ರೂಪ ಪಡೆದು ಹುಟ್ಟಿದ ಮಹಾಶಯನೂ ಕೂಡಾ ನನ್ನನ್ನು ನಿರಾಕರಿಸುತ್ತಿದ್ದವರು, ಈಗೀಗ ನನ್ನ ದುಡ್ಡಿನ ಮಹಿಮೆಯಿಂದಾಗಿ ತಾವೇ ಯಾರ ಕಡೆಯಿಂದಾದರೂ ಕೇಳಿಸಲು (ಕನ್ಯಾ ಕೊಡಿ ಎಂದು) ಶುರು ಮಾಡಿದ್ದರು. ಅವರು ನನ್ನನ್ನು ನೇರವಾಗಿ ಹೇಗೆ ಕೇಳುತ್ತಾರೆ? ಕೇಳಿದರೂ ನಾನು ಅಣ್ಣಂದಿರನ್ನು ಕೇಳಿ ಎಂದೇ ಹೇಳುತ್ತಿದ್ದೆ. ಅವರು ಅಣ್ಣಂದಿರ ಬಳಿ ಹೋಗಿ ಕೇಳಿದಾಗ ‘ಆಕಿ… ಮದುವೀ ಮ್ಯಾಲಿನ ಆಸಕ್ತಿನೇ ಕಳಕೊಂಡಾಳ್ರಿ, ಋಷಿ ಪಂಚಮಿ ಹಿಡಿಯುವ ವಯಸ್ಸಾತು ಇನ್ನೇನ್ ಮದುವಿ ಆಗ್ತಾಳ?’ (ಮೂವತ್ತಕ್ಕೆ ಋಷಿ ಪಂಚಮಿ ಹಿಡಿಯೂ ವಯಸ್ಸು ಅಣ್ಣಂದಿರ ಪ್ರಕಾರ!!!) ಇತ್ಯಾದಿ ಹೇಳಿ ಸಾಗ ಹಾಕುತ್ತಿದ್ದರು. ಏಕೆಂದರೆ ನಾನು ಮದುವೆಯಾದರೆ ಅವರಿಗೆ ಬರುವ ಆರ್ಥಿಕ ಸಹಾಯ ನಿಲ್ಲುತ್ತದೆಂಬ ಆತಂಕ.
ನಾನು ನೌಕರಿ ಮಾಡುವ ಹಳ್ಳಿಗೆ ಸಮೀಪದಲ್ಲಿರುವ ಪಟ್ಟಣದಲ್ಲಿ ಮನೆ ಮಾಡಿ ಆ ಹಳ್ಳಿಗೆ ಹೋಗಿ-ಬಂದು ಮಾಡುತ್ತಿದ್ದೆ. ಮನೆಯ ಯಜಮಾನತಿ ಬಹಳ ವ್ಯವಹಾರ ಕುಶಲಿ, ಲೋಕ ಕಂಡವಳು. ಆಕೆಯ ಮಗ ಕೇವಲ ಮ್ಯಾಟ್ರಿಕ್ ಮುಗಿಸಿದ್ದನೇ ವಿನಃ ಹೆಚ್ಚು ಕಲಿತಿರಲಿಲ್ಲ. ನಗರದ ಬಿಲ್ಡಿಂಗ್ ಕಾಂಟ್ರ್ಯಾಕ್ಟ್ ಮಾಡುವವರ ಕೈ ಕೆಳಗೆ ಕೆಲಸಕ್ಕೆ ಹೋಗುತ್ತಿದ್ದ. ನೋಡಲು ಸುಂದರನಾಗಿದ್ದರೂ ಜೀವನಕ್ಕೆ ಭದ್ರವಾದ ನೌಕರಿ ಇಲ್ಲದ್ದರಿಂದ ಮದುವೆಯಾಗಲು ಹಿಂದೇಟು ಹಾಕಿ ಮೂವತ್ತೈದಾದರೂ ಕೂಡಾ ಬ್ರಹ್ಮಚಾರಿಯಾಗಿ ಉಳಿದಿದ್ದ. ವಾಸಕ್ಕೆ ಪುಟ್ಟ ಮನೆ. ಅದರಲ್ಲೇ ಒಂದು ರೂಮು ನನಗೆ ಬಾಡಿಗೆಗೆ ನೀಡಿ ಒಂದರಲ್ಲಿ ತಾಯಿ ಮಗ ವಾಸವಿದ್ದರು. ಆಕೆ ನೇರವಾಗಿ ನನ್ನನ್ನೇ
“ನಿನಗ… ನನ್ ಮಗನ್ ಮದ್ವಿ ಆಗಲಿಕ್ಕಿ ಇಚ್ಛಾ ಅದs ಏನವಾ…? ಅಂವಂಗ ಅಗದೀ ಸಣ್ಣ ಪಗಾರ ಅದ. ಆದ್ರs ನಿಂದು ಕಾಯಂ ಪಗಾರ ಇರೂದರಿಂದ ಜೀವನಾ ಆರಾಮ ಕಳೀತದ. ನಮ್ ಹುಡುಗ್ಗss ಅಡಕೀ ಹೋಳಿನ್ ಚಟ ಸಹಿತ ಇಲ್ಲ. ನೀ ಹ್ಞೂ ಅಂದ್ರ ನಿಮ್ ಮನ್ಯಾಗ ಹಿರ್ಯಾರ್ ಹತ್ರ.. ಯಾರನ್ನರ ನಡೂನವರಿಗಿ ಕಳಸೂಣಂತ ಏನಂತಿ?”
ಅಂದಾಗ ನನಗೆ ಹೇಳಲು ಏನೂ ಉಳಿದಿರಲಿಲ್ಲ. ಹೆಣ್ಣಿಗೆ ಸಹಜ ನಾಚಿಕೆಯಿಂದ ನಾನು ಒಪ್ಪಿಗೆಯ ಗೋಣ್‌ ಹಾಕಿ ಶಾಲೆಗೆ ಬಂದಿದ್ದೆ. ಇವರಿಗೂ ಅಣ್ಣಂದಿರು ತಮ್ಮ ಮಾಮೂಲಿ ಡೈಲಾಗ್ ಹೇಳಿದರಂತೆ ಆದರೆ ಆಕೆ(ಮುಂದೆ ಅವರೇ ನನ್ನ ಅತ್ತೆಯೂ ಆದರು.) ‘ನಿಮ್ ಹುಡುಗಿನ್ನs ಕೇಳಿನೇ ಇಲ್ಲಿ ಬಂದೀವಿ, ಆಕೀದು ಒಪ್ಗಿ ಅದ’ ಅಂದಾಗ ಮುಂದೇನೂ ಮಾತಾಡಲಾಗದೇ…
ಆದರೆ, ‘ನಾವು ಬಡವರು, ಐದು ಪೈಸೆ ಲಗ್ನಕ್ಕೆ ಖರ್ಚು ಮಾಡಲು ಸಾಧ್ಯವಿಲ್ಲ’ಎಂದು ಖಡಾಖಂಡಿತ ಹೇಳಿದರಂತೆ. ಅದಕ್ಕೂ ಅತ್ತೆಯವರು ‘ಆಕೀದೇ ನೌಕರಿ ಅದ, ಬ್ಯಾಂಕ್ ಲೋನ್ ಮಾಡಿ ತನ್ನ ಮದುವೀ ಖರ್ಚ್ ತಾನೇ ನೋಡಕೋತಾಳ. ನಿಮಗೇನ್ ತ್ರಾಸ್ ಕೊಡಂಗಿಲ್ಲ’ ಎಂದು ಹೇಳಿ ನನ್ನ ಹತ್ತಿರ ಬಂದು ನಡೆದುದೆಲ್ಲಾ ಹೇಳಿ,
“ಸ್ವಲ್ಪ ಹಣ ಬ್ಯಾಂಕಿಂದ ಲೋನ್ ತಗಿಯವಾ… ಯಾವುದರss ಗುಡ್ಯಾಗ ಹಾಲು ಅನ್ನ ಹಾಕಿ ಅಕ್ಕಿಕಾಳ ಹಾಕಿ ಬಿಡ್ತೀನಿ, ನಿನಗೂ ಭಾಳ ಹೊರಿ ಆಗಬಾರದು ನೋಡು,”
ಎಂದು ಪಕ್ಕಾ ವ್ಯವಹಾರದ ಮಾತು ಹೇಳಿದ್ದರು. ಯಾಕೆಂದರೆ ವಿಪರೀತ ಸಾಲ ಮಾಡಿ ಕೂತರೆ, ನಾಳೆ ತಮ್ಮ ಮಗನಿಗೇ ತೊಂದರೆ ಎಂದು ತಿಳಿದಿತ್ತು. ಅಂತೂ ಗೊಂಬಿ ಮದುವಿ ಮಕ್ಕಳು ಮಾಡುವಂತೆ ನನ್ನ ವಿವಾಹ ಯಾವ ಆಡಂಬರವಿಲ್ಲದೆ, ಶಾಸ್ತ್ರಕ್ಕೆ ಕೊರತೆಯಾಗದಂತೆ ಚಾಣಾಕ್ಷ ಅತ್ತೆ ಪೂರೈಸಿ ಕೈ ತೊಳೆದುಕೊಂಡರು.
ಆರಂಭದಲ್ಲಿ ನನ್ನ ಬಣ್ಣದ ಬಗ್ಗೆ ತಕರಾರಿದ್ದರೂ ನಂತರದಲ್ಲಿ ನನ್ನವರು ನನ್ನೊಂದಿಗೆ ತುಂಬಾ ಹೊಂದಿಕೊಂಡರು. ಯಾವುದಕ್ಕೂ ಆಕ್ಷೇಪ ತೆಗೆಯದೇ ಮುಖ್ಯವಾಗಿ ನನ್ನನ್ನು ಶಾಲಿಗ್ರಾಮವೆಂದು ಹಂಗಿಸದೇ ಎಂಥ ಸಂದರ್ಭದಲ್ಲೂ ನನಗೆ ನೋವಾಗದಂತೆ ನಡೆದುಕೊಳ್ಳುತ್ತಿದ್ದರು. ಯಾರಾದರೂ ‘ನಮ್ ಹುಡುಗss ನಟ ಇದ್ದಂಗ್ ಇದ್ದಾನ. ಇಂಥಾಂವಗ ಎಂಥ ಹೆಣ್ ಹುಡಕೀಯವಾ’ ಎಂದು ಅಂದರೆ ಅತ್ತೆಯವರೂ, ನನ್ನವರೂ ನನ್ನನ್ನು ವಹಿಸಿಕೊಂಡು,
“ರೂಪss ಏನ್ರಿ ನಾಕ ದಿನ ಹರೆ ಇದ್ದಾಗ ಇರ್ತದ, ಆಮ್ಯಾಲ ಹೋಗ್ತದ. ಕೊನಿತನಕ ಬರೂದು ಗುಣ ಒಂದೆ. ಆಕಿ ನಮ್ಮನ್ನೆಲ್ಲ ಹೊಂದಕೊಂಡು, ಹಚಗೊಂಡು ಹೋದ್ರ ಅದಕಿಂತಾ ಹೆಚ್ಚಿಗೇನ್ ಬೇಕು?”
ಎಂದು ಹೇಳಿ ಬಾಯಿ ಮುಚ್ಚಿಸಿ ಬಿಡುತ್ತಿದ್ದರು. ನನ್ನದೇ ಮನೆ ಇದು ಎಂದಾಗ ಆ ಪುಟ್ಟ ಮನೆಯನ್ನೂ ಹುರುಪಿನಿಂದ ಅಲಂಕರಿಸುತ್ತಿದ್ದೆ. ಸುಂದರ ರಂಗವಲ್ಲಿಗಳು ಎಂತವರನ್ನೂ ನಮ್ಮ ಮನೆಯತ್ತ ತಿರುಗಿ ನೋಡುವಂತೆ ಮಾಡುತ್ತಿದ್ದವು. ಅತ್ತೆಯವರೂ ಓಣಿಯ ಜನ ನನ್ನ ಧನಾತ್ಮಕ ಅಂಶಗಳನ್ನು ಹೊಗಳಿದ್ದನ್ನು ತಪ್ಪದೇ ನನಗೆ ವರದಿ ಒಪ್ಪಿಸುತ್ತಿದ್ದರು. ಅತ್ತೆ ಮನೆಯಲ್ಲಾದರೂ ನನ್ನ ಶಾಲಿಗ್ರಾಮ ಬಣ್ಣ ಗೌಣವಾಗಿ ಉಳಿದ ಅಂಶಗಳು ಬೆಳಕಿಗೆ ಬರುತ್ತಿದ್ದದ್ದು ಸಂತಸ ತಂದಿತ್ತು. ಮನದ ಸಂತಸ ಮೊಗದಲ್ಲೂ ತುಂಬಿ ಕಳೆಕಳೆಯಾಗಿ ಕಾಣಿಸಹತ್ತಿದ್ದೆ, ಕಪ್ಪು ಬಣ್ಣದಲ್ಲೂ ಸಹ.
ಇಂತಿರುವ ದಿನಗಳಲ್ಲೇ ನಾನು ತಾಯಿಯಾಗುವ ಸೂಚನೆ ಕಾಣಿಸಿಕೊಳ್ಳಹತ್ತಿದವು. ನಿಜವಾಗಿ ಸಂತಸವಾಗಬೇಕಾಗಿತ್ತು ನನಗೆ. ಆದರೆ,…….. ಬೆಂಬಿಡದ ಆತಂಕ ಶುರುವಾಗಿತ್ತು. ಕಾರಣವಿಷ್ಟೇ ನನಗೆ ಹುಟ್ಟುವ ಮಗು ಹೆಣ್ಣಾದರೆ, ಅದೂ ಶಾಲಿಗ್ರಾಮ ಬಣ್ಣದ್ದೇ ಆದರೆ, ನಾನು ಅನುಭವಿಸಿದ ನೋವನ್ನೆಲ್ಲಾ ಅನುಭವಿಸಬೇಕಲ್ಲವಾ? ದೇವರೇ ನಾನೊಬ್ಬಳೇ ನೂರು ಜನ್ಮಕ್ಕಾಗುವಷ್ಟು ನೋವುಂಡಿದ್ದೇನೆ. ನನ್ನ ಮಗುವೂ ನನ್ನದೇ ನೋವು ಅನುಭವಿಸಬೇಕೆ? ಏನು ಮಾಡಲಿ? ಹಗಲೂ ರಾತ್ರಿ ಚಿಂತಿಸಿ, ಮನೆಯವರಿಗೆ ತಿಳಿಸದೇ ದವಾಖಾನೆಗೆ ಓಡಿ, ಭ್ರೂಣ ಗಂಡಾ,? ಹೆಣ್ಣಾ? ಪತ್ತೆ ಹಚ್ಚಲು ವೈದ್ಯರ ಸಹಾಯ ಬೇಡಿದ್ದೆ. ಹೆಣ್ಣಾದರೆ ಭ್ರೂಣವನ್ನು ತೆಗೆಸಬೇಕೆಂದುಕೊಂಡಿದ್ದೆ. ಯಾಕೋ ಪಾಪ ಪ್ರಜ್ಞೆ ಕಾಡಿತ್ತು. ಹುಟ್ಟುವ ಹಕ್ಕನ್ನೂ ಹೆಣ್ಣಾಗಿದ್ದಕ್ಕೆ ನನ್ನ ಮಗು ಕಳೆದುಕೊಳ್ಳಬೇಕೆ? ಎನಿಸಿತ್ತು. ಆದರೆ, ಎಲ್ಲರಿಂದ ಅಂದು ಆಡಿಸಿಕೊಂಡು ನಿತ್ಯವೂ ನನ್ನಂತೆ ನನ್ನ ಮಗುವೂ ನರಕದ ಬಾಳು ಬಾಳಬೇಕೆ? ನಾನು ಅನುಭವಿಸಿದ್ದೆ ಸಾಕು. ನನ್ನ ಮಗಳ ನೋವು ನೋಡಲಾರೆ. ಏನಾದರಾಗಲಿ ಹೆಣ್ಣು ಭ್ರೂಣವಿದ್ದರೆ ತೆಗೆಸಿಬಿಡುತ್ತೇನೆಂದು ನಿರ್ಧರಿಸಿ ಬಿಟ್ಟೆ. ಆದರೆ ವೈದ್ಯರು ಗಂಡು ಹೆಣ್ಣು ತಿಳಿಸುವದಿಲ್ಲ. ಎಂದು ನಿರಾಕರಿಸಿದಾಗ ನಾನು ದೇವರ ಮೊರೆ ಹೊಕ್ಕಿದ್ದೆ. ಸದಾ ನನಗೆ ಹೆಣ್ಣು ಹುಟ್ಟಿದರೆ ಹೇಗೆಂದು ಚಿಂತಿಸುತ್ತಾ, ಕನಸಿನಲ್ಲೂ ಹೆಣ್ಣು ಹುಟ್ಟಿ ಅದನ್ನು ಎಲ್ಲರೂ ಶಾಲಿಗ್ರಾಮವೆಂದು ಹೀಯಾಳಿಸಿದಂತೆ ಕನಸಾಗಿ ಬೆಚ್ಚುತ್ತಿದ್ದೆ. ಕಂಡ ಕಂಡ ದೇವರುಗಳಿಗೆಲ್ಲಾ ಹರಕೆ ಹೊತ್ತು ಗಂಡುಮಗುವಿಗಾಗಿ ಪ್ರಾರ್ಥಿಸುತ್ತಿದ್ದೆ. ನನ್ನ ಮೊರೆ ಕೇಳಿ ದೇವರು, ಗಂಡು ಸಂತಾನವನ್ನಿತ್ತಾಗ ನನಗಾದ ಹೆಮ್ಮೆ, ಸಂತಸ ಅಷ್ಟಿಷ್ಟಲ್ಲ. ಅನೇಕ ದೇವರುಗಳ ಹರಕೆ ತೀರಿಸಲಿಕ್ಕೇ ಅನೇಕ ಸಾವಿರಗಳು ಕೈಬಿಟ್ಟರೂ ಗಂಡು ಮಗ ಜನಿಸಿದ ಖುಷಿಯಲ್ಲಿ ಎಲ್ಲವೂ ಗೌಣವಾಗಿತ್ತು.
ಮದುವೆಯ ನಂತರ ಹಣಕಾಸಿನ ಅನುಕೂಲದಿಂದಾಗಿ ನಮ್ಮವರು ಸ್ವತಂತ್ರವಾಗಿ ಬಿಲ್ಡಿಂಗ್‌ ಕಾಂಟ್ರ್ಯಾಕ್ಟ್ ಹಿಡಿಯತೊಡಗಿ, ವ್ಯವಹಾರ ಕುಶಲಿಯಾದ ಇವರಿಗೆ ಲಕ್ಷ್ಮೀ ಒಲಿದುಬಂದಿದ್ದಳು. ಆರ್ಥಿಕ ಸ್ಥಿತಿ ಬಹಳ ಅನುಕೂಲವಾಗಿ ವಾಸಕ್ಕೆ ಡೂಪ್ಲೆಕ್ಸ್‌ ಮನೆ, ಆಭರಣ, ಓಡಾಡಲು ಕಾರು, ಬ್ಯಾಂಕಿನಲ್ಲಿ ಡೆಪಾಜಿಟ್ ಹೀಗೆ ಎಲ್ಲಾ ಅನುಕೂಲಗಳು ಸಂಭವಿಸಿ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ನೆಮ್ಮದಿಯ ಸಂಸಾರವಾಗಿತ್ತು ನನ್ನದು. ಮಗ ಅವರಪ್ಪನಂತೆ ಸುಂದರಾಂಗ. ಮುಖ್ಯವಾಗಿ ಶಾಲಿಗ್ರಾಮದ ಬಣ್ಣವಿರಲಿಲ್ಲ. ಮುಂದೆ ಹುಟ್ಟುವ ಮಗು ಹೆಣ್ಣಾದರೆ ಏನು ಮಾಡಲಿ ಎಂಬ ಆತಂಕದಿಂದ ಒಂದೇ ಮಗುವಿಗೆ ನನ್ನವರನ್ನು ಒಪ್ಪಿಸಿ ಸಾಕು ಮಾಡಿದ್ದೆ. ಆರ್ಥಿಕ ತೊಂದರೆ ಆಗುತ್ತದೆಂಬ ಹೆದರಿಕೆಗಿಂತ ನನಗೆ ಹೆಣ್ಣು ಹುಟ್ಟಿದರೆ ಹೇಗೆಂಬ ದಿಗಿಲೇ ಅಧಿಕವಾಗಿತ್ತು.
ಮಗ, ನೋಡಲು ಮಾತ್ರ ಅಪ್ಪನಂತೆ ಇರದೇ ವಿದ್ಯೆಯಲ್ಲೂ ಅಪ್ಪನಂತೆ, ಮ್ಯಾಟ್ರಿಕ್ ಮುಗಿಸುವಷ್ಟರಲ್ಲಿ ಮೂರುಸಲ ಡುಮ್ಕಿ ಹೊಡೆದು ಉಸ್ಸಪ್ಪಾ ಎಂದು ಕುಳಿತುಬಿಟ್ಟ. ಆದರೆ….. ಅವರಪ್ಪನಂತೆ ವ್ಯವಹಾರ ಕುಶಲಿ. ಅಪ್ಪನ ಕಸುಬು ಮುಂದುವರಿಸಿದ್ದ. ಆಧುನಿಕ ತಾಂತ್ರಿಕತೆ ಮೈಗೂಡಿಸಿಕೊಂಡು ವ್ಯವಹಾರದಲ್ಲಿ ಅಪ್ಪನಿಗಿಂತ ಮುಂದುವರಿದು ಏ1 ಕಾಂಟ್ರ್ಯಾಕ್ಟರ್ ಬಿರುದು ಸಂಪಾದಿಸಿದ.
ಆದರೇನು ಬಂತು? ಬೆಂಗಳೂರಿನಲ್ಲಿ ವಾಸವಾಗಿರದ, ಕೇವಲ ಎಸ್ ಎಸ್ ಎಲ್ ಸಿ ಫೇಲಾದ ಇವನನ್ನು ಮದುವೆಯಾಗಲು ಯಾವ ಪುಣ್ಯಾತ್‌ಗಿತ್ತಿಯೂ ಮನಸ್ಸು ಮಾಡಲಿಲ್ಲ. ಈಗ ಕನ್ಯಾ ತೋರಿಸಲು ಊರೂರು ಅಲೆಯುವಂತಿಲ್ಲ. ವರದವರೇ ಊರೂರು ಅಲೆದು ಕನ್ಯಾ ನೋಡಬೇಕಿತ್ತು. ಕನ್ಯಾಗಳು ಕೆಲವು ಸಲ ವರನ ಕಡೆಯವರು ಬಂದಿದ್ದಾರೆಂದು ತಿಳಿದರೂ ಕೂಡ, ಉದಾಸೀನತೆಯಿಂದ ಮೈಮುರಿಯುತ್ತಾ ಮೊಣಕಾಲವರೆಗೆ ಚಡ್ಡಿ ಮಾತ್ರ ಧರಿಸಿ ಮೇಲೆ ಸ್ಲೀವ್‌ಲೆಸ್ ಟಾಪ್‌ ಮಾತ್ರ ಧರಿಸಿ ಬಂದು ಕಾಲಮೇಲೆ ಕಾಲು ಹಾಕಿ ಕುಳಿತುಕೊಂಡು ಬಂದವರಿಗೆ ಹಾಯ್ ಎಂದು ಮಾತಾಡಾಸಿ ಒಂದು ಮುಗುಳ್ನಗು ಬೀರಿದರೆ ದೊಡ್ಡದು. ನಂತರ ಕನ್ಯಾದ ತಾಯಿಯ ವಿಚಾರಣೆ ಶುರುವಾಗುತ್ತಿತ್ತು.
‘ನಮ್ ಹುಡುಗಿ ಬೆಂಗಳೂರು ಹುಡುಗನ್ನ ಮದುವೆಯಾಗಲು ಇಷ್ಟಪಡ್ತಾಳ, ಕನಿಷ್ಟ ಮೂವತ್ತು ಲಕ್ಷ ಪ್ಯಾಕೇಜ್ ಇರುವ ಹುಡುಗನಾದರೆ ನೋಡೋಣ, ಚಿಕ್ಕ ಪಟ್ಟಣದವರನ್ನು ಈಗಿನ ಹುಡುಗ್ಯಾರು ಒಲ್ಲೆ ಅಂತಾರ,’
ಬೆಂಗಳೂರಾಗ ಸ್ವಂತ ಮನಿ ಇದ್ರ ನೋಡ್ರಿ, ಫಾರಿನ್ ಒಳಗ ನೌಕರಿ ಇರೂ ಹುಡುಗ ಇದ್ರ ನೋಡ್ರಿ, ನಮ್ಮಾಕಿ ಎಂ ಟೆಕ್ ಮಾಡ್ಯಾಳ, ಎಸ್ ಎಸ್‌ ಎಲ್‌ ಸಿ ಪಾಸಾದ ಹುಡುಗನಿಗೆ ಹೇಗೆ ಕೊಡುವುದು? ಇತ್ಯಾದಿ ಇತ್ಯಾದಿ ಮುಗಿಯದ ಡಿಮ್ಯಾಂಡುಗಳು. ಲಗ್ನ ಆದ ಮ್ಯಾಲ ನಾವಿಬ್ಬರೂ (ಕ.ಪಿ) ಹುಡುಗೀ ಜೋಡೀನೆ ಇರ್ತೀವಿ. ಅದಕ್ಕSS ಹುಡುಗನ ಅಪ್ಪಾ ಅವ್ವಾ ಅಂವನ್ ಜೊತಿ ಇದ್ದರ ಸುಮ್ನೆ ರಗಳೆ, ಆದಷ್ಟು ಹಳೆ ಫರ್ನೀಚರ್ಸ್‌ ಇರಲಾರದ ಹುಡುಗ ಇರಬೇಕು, ಅಂದ್ರs ಕನ್ಯಾ ಕೊಡ್ತೀವಿ. ಇಂಥ ರಗಳೆ ಕೇಳೀ ಕೇಳೀ ಸಾಕಾಗುತ್ತಿತ್ತು. ಎಲ್ಲ ಶರತ್ತುಗಳಿಗೆ ಒಪ್ಪಿ ಎರಡೂ ಕಡೆಯ ಖರ್ಚನ್ನು ನಿಭಾಯಿಸಿ ಮದುವೆ ಮಾಡಿಕೊಳ್ಳುತ್ತೇನೆಂದರೂ ಹುಡುಗಿ ಮನೆಯವರು ತಯಾರಿರಲಿಲ್ಲ. ಕಲಿಯದ ಹುಡುಗಿ, ಅಂದವಿಲ್ಲದ ಹುಡುಗಿ ಹೇಗಿದ್ದರೂ ಪರವಾಗಿಲ್ಲ, ಹೆಣ್ಣಿನ ರೂಪವೊಂದಿದ್ದರೆ ಸಾಕೆಂದರೂ ಸಹ ಹುಡುಗಿಯರು ಸಿಗುತ್ತಿಲ್ಲ.
ನನ್ನಂಥವರು ಹೆಣ್ಣಿನ ಬವಣೆಗಂಜಿ ಒಂದೇ ಗಂಡು ಮಗುವನ್ನು ಪಡೆದುದರ ಪರಿಣಾಮ, ಭ್ರೂಣದಲ್ಲೇ ಮಗುವಿನ ಲಿಂಗ ಪತ್ತೆ ಹಚ್ಚಿ ಹೆಣ್ಣು ಮಗುವಿನ ಹುಟ್ಟುವ ಹಕ್ಕನ್ನೂ ಕಸಿದುಕೊಂಡ ಪರಿಣಾಮವನ್ನು ನಮ್ಮ ಗಂಡು ಮಕ್ಕಳು ಅನುಭವಿಸುವಂತಾಗಿದೆ.
ಕಾಲ ಹೀಗೆ ಬದಲಾಗುತ್ತದೆ ಎಂದು ತಿಳಿದಿದ್ದರೆ, ಹೆಣ್ಣು ಮಗುವನ್ನೇ ಪಡೆಯುತ್ತಿದ್ದೆವಲ್ಲಾ ಎಂದು ಹಪಹಪಿಸುವಂತಾಗಿದೆ. ಎಲ್ಲಿಯಾದರೂ ಹುಡುಗನ ಮದುವೆ ಅದೇ ಜಾತಿಯ ಹುಡುಗಿಯೊಂದಿಗೇ ನಡೆಯುತ್ತಿದೆ ಎಂದು ಗೊತ್ತಾದರೆ, ಹೌದಾ?!!!!! ಎಂದು ತೀವ್ರ ಆಶ್ಚರ್ಯದಿಂದ ಹುಬ್ಬೇರಿಸುವಂತಾಗಿದೆ. ಹುಡುಗನಿಗೆ ಹುಡುಗಿ ಸಿಕ್ಕಿದ್ದಾಳೆ ಎಂದರೆ ಲಾಟ್ರಿ ಹೊಡೆದಷ್ಟು ಸಂತಸವಾಗಹತ್ತಿದೆ.
ಇಲ್ಲಿ ನಾನೂ ನನ್ನ ಮಗನೂ ಕೊರಗಿ ಕೊರಗಿ ಹುಡುಗಿಗಾಗಿ ಶಬರಿಯಂತೆ ಕಾಯುತ್ತಿದ್ದೇವೆ. ರಾಮನಂತೆ, ಹುಡುಗಿ ಬಂದು ನಮ್ಮ ಕಾಯುವಿಕೆಗೆ ಮುಕ್ತಿ ಹಾಡುವಳೇ???
ಕಾಲವೇ ಉತ್ತರಿಸಬೇಕು.