Click here to Download MyLang App

ಶತಧಾರ - ಬರೆದವರು : ಹೇಮಂತ್ | ಡಿಟೆಕ್ಟಿವ್

(ಈ ಕಥೆಯಲ್ಲಿನ ಪಾತ್ರಗಳು ಪೌರಾಣಿಕ ಪಾತ್ರಗಳಾದರೂ ಇಲ್ಲಿನ ಕಥೆಯು ಲೇಖಕನ ಕಲ್ಪನೆಯಷ್ಟೇ)

ದೇವೇಂದ್ರನು ತನ್ನ ಪಾನಪಾತ್ರೆಯಲ್ಲಿದ್ದ ಸುರಪಾನವನ್ನು ಸವಿಯುತ್ತಿದ್ದನು.ಭವ್ಯಕೋಣೆಯಲ್ಲಿದ್ದ ದೀವಟಿಕೆಗಳ ಬೆಳಕು ಬಂಗಾರ ಲೇಪಿತ ಗೋಡೆಗಳಿಂದ ಪ್ರತಿಫಲಿಸಿ 'ಸ್ವರ್ಗ' ಎಂದರೆ ಇದು ಎಂದು ಸಾರಿ ಹೇಳುತ್ತಿತ್ತು.ಫಳಫಳನೆ ಹೊಳೆಯುತ್ತಿದ್ದ ರತ್ನಗಳಿಂದ ಸಿಂಗರಿಸಿದ್ದ ವಾತಾಯನವನ್ನೇ ನೋಡುತ್ತಿದ್ದ ದೇವೇಂದ್ರ.ಸಂದೇಶವನ್ನು ಹೊತ್ತ ದೇವಪಾರಿವಾಳ ಒಳಬಂದಿತು.'ಕೆಂಪು ಬಣ್ಣದ ಪತ್ರ ಯಾವುದೋ ತುರ್ತು ಸಂದರ್ಭದ ಸಂದೇಶ' ಎಂದುಕೊಂಡು ತೆರೆದು ನೋಡಿದನು.

ಒಮ್ಮೆಲೆ ಗಾಬರಿಯಿಂದ "ಯಾರಲ್ಲಿ?" ಎಂದು ಕರೆದನು.

ಹೊರನಿಂತಿದ್ದ ದ್ವಾರಪಾಲಕ ಬಂದು "ಅಪ್ಪಣೆ ದೇವರಾಜ" ಎಂದನು.

ದೇವೇಂದ್ರನು ಪಿರಿಸ್ಥಿತಿಯನ್ನು ಅರಿತು "ಯಾರನ್ನೂ ಒಳಬರಲು ಬಿಡಬೇಡ, ಏಕಾಂತದಲ್ಲಿದ್ದಾರೆಂದು ತಿಳಿಸು,ಮುಂದಿನ ಅಪ್ಪಣೆಯ ತನಕ ನೀನೂ ಒಳಬರಬೇಡ" ಎಂದನು.ದ್ವಾರಪಾಲಕನು ನಮಿಸಿ ತನ್ನ ಸ್ವಾಮಿ ವಚನವನ್ನು ಪಾಲಿಸಲು ಹೊರಟನು.

'ಅತಿರಹಸ್ಯವಾಗಿ ವಿಶ್ವಕರ್ಮರಲ್ಲಿಗೆ ಹೋಗುತ್ತಿದ್ದ ನನ್ನ ವಜ್ರಾಯುಧವನ್ನು ಕದಿಯುವವರು ಯಾರು?'.'ಈ ರಹಸ್ಯ ಹೇಗೆ ಹೊರಬಂತು?' ಎಂಬ ಸಾಲು ಸಾಲು ಪ್ರಶ್ನೆಗಳು ಇಂದ್ರನ ತಲೆಯಲ್ಲಿ ಓಡಾಡತೊಡಗಿದವು.ಇಂದ್ರನು ವಜ್ರಾಯುಧವನ್ನು ಕಾಲಕಾಲಕ್ಕೆ ಬೇಕಾದ ಮಾರ್ಪಾಟುಗಳನ್ನು ಮಾಡಿ ಮೇಲ್ದರ್ಜೆಗೇರಿಸಲು ವಿಶ್ವಕರ್ಮರಲ್ಲಿಗೆ ಕಳುಹಿಸುತ್ತಿದನು.ಹೇಗಾದರೂ ಮಾಡಿ ತನ್ನ ಆಯುಧವನ್ನು ಉಳಿಸಿಕೊಳ್ಳಬೇಕಾಗಿತ್ತು ಅವನಿಗೆ . ಆದರೆ ಸೈನ್ಯವನ್ನಾಗಲಿ, ಆಸ್ಥಾನಿಕರನ್ನಾಗಲಿ ಅವನು ಯಾರನ್ನೂ ನಂಬುವಂತಿರಲಿಲ್ಲ.ಏಕೆಂದರೆ ಗೌಪ್ಯ ರಹಸ್ಯವೊಂದು ಹೊರಗೆ ಗೊತ್ತಾಗಿದೆ ಎಂದಾದರೆ ಇದರಲ್ಲಿ ಒಳಗಿನವರ ಕೃತ್ಯವಿರಬಹುದು ಹಾಗಾಗಿ ತನ್ನ ಕೋಣೆಯೊಳಗಿನ ರಹಸ್ಯ ಮಾರ್ಗದಿಂದ ಸಶಸ್ತ್ರಧಾರಿಯಾಗಿ ಅಶ್ವಶಾಲೆಗೆ ಹೋದನು.
ಕುದುರೆಯನ್ನೇರಿ ಶತಧಾರವು ಸಾಗಿ ಹೋಗುವ ಮಾರ್ಗದಲ್ಲಿ ವೇಗವಾಗಿ ಹೊರಟನು.
ಮೂರು ಪ್ರಹರಗಳ ಅಖಂಡ ಪ್ರಯಾಣ( 1ಪ್ರಹರ=ಅಂದಾಜು3ಘಂಟೆಗಳು)ದ ನಂತರ ದೇವೇಂದ್ರನು 'ಸ್ವರ್ಣಾ' ನದಿಯ ತಟದ ದಾರಿಯಲ್ಲಿ ನೋಡುತ್ತಾನೆ!!.ಊಹಿಸಲೂ ಆಗದ ಪರಿಸ್ಥಿತಿಯೊಂದು ಸ್ವರ್ಗಸಾಮ್ರಾಟನಿಗೆ ಬಂದೊದಗಿತ್ತು. ಮರಗಳ ಕೆಳಗೆ ಸೈನಿಕರೂ ಕುದುರೆಗಳೂ ಅಪ್ಪಚ್ಚಿಯಾಗಿದ್ದವು.ವಜ್ರಾಯುಧವನ್ನು ಹೊತ್ತ ರಥ ಧ್ವಂಸವಾಗಿತ್ತು,ವಜ್ರಾಯುಧವು ಕಾಣೆಯಾಗಿತ್ತು.ಒಬ್ಬ ಮುಖಂಡನು ಕಾಣಲಿಲ್ಲ.ದೇವೇಂದ್ರ ದಿಗ್ಮೂಢನಾದ.
'ಈ ವಿಷಯ ರಾಕ್ಷಸರಿಗೆ ತಿಳಿದರೆ ನನ್ನ ದೌರ್ಬಲ್ಯ ತಿಳಿದಂತೆ ಅದು ದೊಡ್ಡ ಆಪತ್ತು, ದೇವತೆಗಳಿಗೆ ತಿಳಿಯಿತೋ ತಂತ್ರ,ಕುತಂತ್ರಗಳನ್ನು ಮಾಡಿ ನನ್ನ ಅಧಿಕಾರಕ್ಕೆ ಕುತ್ತು ತರುತ್ತಾರೆ. ಈ ವಿಷಯ ಯಾರಿಗೂ ತಿಳಿಯಬಾರದು ಆದರೆ ತಾನಾಗಿ ಇದರ ಬಗ್ಗೆ ತನಿಖೆ ಮಾಡುವಂತಿಲ್ಲ. ತಾನೇ ತನ್ನ ಸ್ಥಿಮಿತವನ್ನು ಕಳೆದುಕೊಂಡ ಬುದ್ಧಿ ಕಳೆದಿರುವ ವಸ್ತುವನ್ನು ಹೇಗೆ ಹುಡುಕಿಯಾತು?,ಹಾಗಾದರೆ ಈ ಕೆಲಸಕ್ಕೆ ಯಾರು ಸೂಕ್ತ?'
ದೇವೇಂದ್ರನಿಗೆ ಒಂದು ದಾರಿ ಹೊಳೆಯಿತು.ಕುದುರೆಯು ಬಳಲಿತ್ತಾದರೂ ಅದನ್ನೇ ಹತ್ತಿ ಅರಮನೆಗೆ ಹೊರಟ.
*** *** ***

ಥೇಟ್ ವಜ್ರಾಯುಧವನ್ನೇ ಹೋಲುವ ನಕಲೊಂದಿತ್ತು ಅದನ್ನೇ ರಾಜಖಡ್ಗವೆಂಬಂತೆ ಇರಿಸಿಕೊಂಡು ದೇವೇಂದ್ರನು ಆಸ್ಥಾನದ ಸಿಂಹಾಸನದಲ್ಲಿ ಆಸೀನನಾಗಿದ್ದನು.ಹೊಗಳುಭಟರ ಪರಾಕುಗಳು,ನೃತ್ಯಗಾರ್ತಿಯರ ನೃತ್ಯಸೇವೆ, ಪಂಡಿತ ಪಾಮರರ ಚರ್ಚಾಚಾತುರ್ಯಗಳ ಸಮ್ಮೇಳನವೇ ನಡೆದಿತ್ತು.ದೇವೇಂದ್ರ ಉಪಸ್ಥಿತನಿದ್ದನಾದರು ಅವನ ಮನಸ್ಸು ಶತಧಾರದ ಬಗ್ಗೆಯೇ ಯೋಚಿಸುತ್ತಿತ್ತು. ದೈನಂದಿನ ವಿಚಾರ ವಿಮರ್ಶೆ ವಿನಿಮಯಗಳು ನಡೆದವು. ದೇವೇಂದ್ರನು ಹೂಗುಟ್ಟಿದ್ದನಷ್ಟೇ,ಸಭೆಗಳು ಮುಗಿದು ದೇವೇಂದ್ರನೊಡಗೂಡಿ ಸಭಾಸದರು ಭೋಜನ ಮತ್ತು ವೀಳ್ಯವನ್ನು ಸ್ವೀಕರಿಸಿ ಹೊರಟರು.

ದೇವೆಂದ್ರನು ಅಗ್ನಿದೇವನನ್ನು ಕರೆದುಕೊಂಡು ತನ್ನ ಕೋಣೆಗೆ ಹೋದನು.
"ಏನಾದರೂ ಹೇಳಬೇಕಿತ್ತೆ ದೇವೇಂದ್ರ?" ಕೇಳಿದನು ಅಗ್ನಿದೇವ.

"ಹೌದು,ವಿಶ್ವಕರ್ಮರಲ್ಲಿಗೆ ಹೋಗುವ 'ಸ್ವರ್ಣಾ' ನದಿ ತಟದ ದಾರಿ ಗೊತ್ತಿದೆಯೇ?"

"ಗೊತ್ತಿದೆ ಏಕೆ?"

"ನಮ್ಮ ಸೈನಿಕರು ಅಲ್ಲಿ ಗಸ್ತು ತಿರುಗುವಾಗ ಅವರ ಮೇಲೆ ಆಕ್ರಮಣವಾಗಿದೆಯಂತೆ ದುರದೃಷ್ಟವಶಾತ್ ಅವರೆಲ್ಲ ಮೃತಪಟ್ಟಿದ್ದಾರಂತೆ"

ಅಗ್ನಿದೇವನು ಆವೇಶದಿಂದ"ನನ್ನ ಜೊತೆ ಕೆಲವು ಸೈನಿಕರನ್ನು ಕಳುಹಿಸಿ ದೇವ ಆಕ್ರಮಣಕಾರರನ್ನು ಹಿಡಿದು ತರುತ್ತೇನೆ, ರಾಕ್ಷಸರೆ ಇರಬೇಕು ರಾಕ್ಷಸರಾದರೆ ಅಲ್ಲಿಯೇ ಅವರನ್ನು ಭಸ್ಮ ಮಾಡುತ್ತೇನೆ"

ದೇವೇಂದ್ರನಿಗೆ ಏನು ಹೇಳುವುದೆಂದೆ ತಿಳಿಯಲಿಲ್ಲ,ಅಗ್ನಿಯೆಂದರೆ ಅಗ್ನಿಯೇ ಸರಿ.ಸದಾ ಜ್ವಲಿಸುತ್ತಿರುತ್ತಾರೆ ಎಂದುಕೊಂಡ. "ಬೇಡ ಅಗ್ನಿದೇವ ಮೊದಲು ಆ ಹತಗೊಂಡ ಸೈನಿಕರ ಮರಣೋತ್ತರ ಪರೀಕ್ಷೆ ನಡೆಸಿ ಮತ್ತು ಅವರ ಪಾರ್ಥಿವ ಶರೀರಗಳಿಗೆ ಆಯಾ ವ್ಯವಸ್ಥೆ ಮಾಡಿ ನಂತರ ನಮ್ಮ ನಡೆಯ ಬಗ್ಗೆ ಅಲೋಚಿಸೋಣ"
ಯಾವ ಕೆಲಸವನ್ನು ಏಕೆ ಮಾಡುತ್ತಿದ್ದೇನೆ ಎಂಬುದು ಬೇರೆಯವರಿಗೆ ತಿಳಿಯದಂತೆ ಮಾಡುವುದು ದೇವೇಂದ್ರನ ರಾಜನೀತಿಯೇ ಆಗಿತ್ತು.

"ನೀವು ಹೇಳುವುದು ಸರಿ ದೇವ, ಕೆಲಸವಾದ ಕೂಡಲೆ ನಿಮಗೆ ವರದಿ ನೀಡುತ್ತೇನೆ"ಎಂದು ಹೊರಟ.
ದೇವೇಂದ್ರನು ಗುಪ್ತಸಂದೇಶವೊಂದನ್ನು ದೇವಪಾರಿವಾಳಕ್ಕೆ ಕಟ್ಟಿ ಹಾರಿ ಬಿಟ್ಟ, ಆ ಪಾರಿವಾಳ ಕೈಲಾಸ ಪರ್ವತದಲ್ಲಿರುವ ಶಿವಗಣಗಳ ಅಧಿಪ ಗಜಾನನನ ನಿವಾಸದತ್ತ ಹಾರತೊಡಗಿತು.
*** *** ***
ಸೇವಕನೊಬ್ಬ ದೇವೇಂದ್ರನ ಕೋಣೆಗೆ ಬಂದು "ನಿಮ್ಮನ್ನು ಕಾಣಲು ಒಬ್ಬ ಅಪರಿಚಿತನು ಬಂದಿರುವನು 'ಗಜವೊಂದು ನನ್ನನ್ನಿತ್ತ ಕಳುಹಿಸಿತು' ಎನ್ನುತ್ತಿದ್ದಾನೆ.

"ಒಳಗೆ ಕಳುಹಿಸು"

ಸ್ವಲ್ಪ ಸಮಯದಲ್ಲಿ ಒಳಗೊಬ್ಬ ಅಗಂತುಕ ಬಂದು ನಿಂತಿದ್ದ. ಮುಡಿಗಟ್ಟಿದ್ದ ಕೇಶರಾಶಿ,ಕಣ್ಣಲ್ಲೆ ಸೂರ್ಯನಿದ್ದಾನೆಯೊ ಎಂಬಂತಹ ಕಾಂತಿ,ಭೀಮ ಬಲಿಷ್ಠ ಮೈಕಟ್ಟು,ಅವನ ಎರಡು ಹೆಜ್ಜೆಗಳಿಂದಲೆ ಅಗಂತುಕನ ಚುರುಕುತನವನ್ನು ದೇವೇಂದ್ರನು ಅಳೆದಿದ್ದ.

"ಗಜವೊಂದು ನನ್ನನ್ನಿತ್ತ ಕಳುಹಿಸಿತು, ನನ್ನ ಪರಿಚಯ ಶಿವಗಣ" ಎಂದು ಗುಪ್ತ ಸಂದೇಶದ ಪತ್ರವನ್ನು ದೇವೇಂದ್ರನಿಗೆ ಕೊಟ್ಟನು.

"ಸಂತೋಷ,ಶಿವಗಣಗಳಲ್ಲಿ ಎಷ್ಟು ಒಗ್ಗಟ್ಟು ಎಲ್ಲರೂ ತಮ್ಮನ್ನು ಶಿವಗಣವೆಂದು ಹೇಳುತ್ತಾರೆ,ತಮ್ಮ ಎಲ್ಲ ಕಾರ್ಯಗಳನ್ನು ಶಿವನ ಹೆಸರಲ್ಲೇ ಮಾಡುತ್ತಾರೆ" ಎಂದು ಹೊಗಳಿದ.

"ನಿಮ್ಮ ಸಂದೇಶದಂತೆ ನಮ್ಮ ಅಧಿಪ ಗಜಾನನರು ನನ್ನನ್ನಿಲ್ಲಿ ಕಳುಹಿಸಿದ್ದಾರೆ,ನಿಮ್ಮ ಸೇವೆಗಾಗಿ ನಾನು ಸಿದ್ಧ ಅಪ್ಪಣೆಯಾಗಲಿ" ಶಿವಗಣನು ತನ್ನ ಕಾರ್ಯವನ್ನಷ್ಟೇ ಗಮನಿಸುತ್ತಿದನು,ಹೊಗಳಿಕೆಯನ್ನಲ್ಲ.

ದೇವೇಂದ್ರ ಸುತ್ತಲೂ ಸೂಕ್ಷ್ಮದೃಷ್ಟಿ ಹರಿಸಿ ಸಣ್ಣದನಿಯಲ್ಲಿ
"ನನ್ನ ರಾಜಾಯುಧ ಕಳೆದುಹೋಗಿದೆ,ವಿಶ್ವಕರ್ಮರಲ್ಲಿಗೆ ಹೋಗುವ ದಾರಿಯಲ್ಲಿ , ಇದರ ತನಿಖೆ ನಡೆಸಿ,ನಮ್ಮವರಿಗಾರಿಗೂ ತಿಳಿಯಬಾರದು,ನನಗೆ ನನ್ನ ವಜ್ರಾಯುಧ ಬೇಕು, ಆದಷ್ಟು ಬೇಗ".ಎಂದನು

ಶಿವಗಣನು ನಮಸ್ಕರಿಸಿ ಮಿಂಚಿನ ವೇಗದಲ್ಲಿ ಎಂಬಂತೆ ನಡೆಯತೊಡಗಿದನು.
*** *** ***

"ಏನು ಹೇಳುತ್ತಿದ್ದೀರಿ ಶಿವಗಣ, ನೀವು ಹೇಳುತ್ತಿರುವುದು ಸತ್ಯವೇ?"

"ಹೌದು ದೇವ ,ನಿಮ್ಮ ಮುಖಂಡರೊಬ್ಬರು ಇಲ್ಲ ಹಾಗೂ ನಿಮ್ಮ ಸೈನಿಕರ ಗಾಯಗಳಲ್ಲಿ ನಿಮ್ಮ ಸೈನ್ಯದ್ದೆ ಬಾಣಗಳಿವೆ".

"ನಿಮ್ಮ ಮಾತಿನ ಅರ್ಥವೇನು?"

"ನಿಮ್ಮ ಮುಖಂಡರಿಗಷ್ಟೆ ರಥದಲ್ಲಿ ಶತಧಾರವಿರುವುದು ತಿಳಿದಿತ್ತು ಹಾಗಾಗಿ ಆ ಕಾಣೆಯಾದ ಮುಖಂಡ ಬಹುಶಃ ವಜ್ರಾಯುಧವನ್ನು ತೆಗೆದುಕೊಂಡು ಹೋಗಿರಬೇಕು ಮತ್ತು ಅವರೊಂದಿಗೆ ಬೇರೆ ಯಾರೋ ಕೈ ಜೋಡಿಸಿದ್ದಾರೆ ಆ ಎರಡು ದೊಡ್ಡ ಮರಗಳು ಸೈನ್ಯದ ಮೇಲೆ ಬೀಳಬೇಕೆಂದರೆ ಇದು ಎಲ್ಲವೂ ವ್ಯವಸ್ಥಿತವೇ ಆಗಿರಬೇಕು".

"ಛೇ.. ಮೋಸಗಾರರು ,ಮೋಸಗಾರರು... ಅವರಿಗೆ ಪಾಠ ಕಲಿಸಬೇಕು,ವಜ್ರಾಯುಧ ಅಷ್ಟು ಇಷ್ಟವಾದರೆ ಅದರ ಸಿಡಿಲ ಅಬ್ಬರವನ್ನೂ ಅವರು ಅನುಭವಿಸಬೇಕು,ನಿಮ್ಮ ಮುಂದಿನ ನಡೆ ಏನು ಶಿವಗಣ".

"ಅವರು ಹೆಚ್ಚೆಂದರೆ ಏಳು ಜನರಿರಬಹುದು ಆದರೆ ಅವರು ಎಲ್ಲಿದ್ದಾರೆ ಎಂಬುದು ಕಂಡುಹಿಡಿಯಲು ನನ್ನೊಬ್ಬನಿಂದ... ಬಹುಶಃ ಬಹಳ ದಿನಗಳು ಬೇಕಾಗುತ್ತವೆ."

"ನಮ್ಮ ಗೂಢಾಚಾರರನ್ನು ನೇಮಿಸಲೇ?"

"ಬೇಡ ವಿಷಯ ಹೊರಹೋದರೆ ಒಳಗಿನವರಿಂದಲೆ ತೊಂದರೆ ಉಂಟಾಗಬಹುದು."

"ಮತ್ತೇನು ಮಾಡುವುದು? ನನ್ನ ರಾಜಾಯುಧದ ಆಸೆ ಬಿಡಲೆ,ನನ್ನ ಸಾಮ್ರಾಜ್ಯದ ಆಸೆ ಬಿಡಲೆ?"ಭಾವೋದ್ರಿಕ್ತನಾದ ದೇವೇಂದ್ರ.

"ಸಮಾಧಾನ ಮಾಡಿಕೊಳ್ಳಿ ನನ್ನ ಬಳಿ ಒಂದು ಉಪಾಯವಿದೆ".

"ಏನು?ಹೇಳಿ ಬೇಗ" ದೇವೇಂದ್ರನ ಕಿವಿಕಣ್ಣುಗಳು ಕಾತುರದಲ್ಲಿದ್ದವು.

ಅಷ್ಟರಲ್ಲೇ
'ಅಗ್ನಿದೇವ ಆಗಮಿಸುತ್ತಿದ್ದಾರೆ' ಎಂದ ದ್ವಾರಪಾಲಕ,ಶಂಖನಾದವನ್ನು ಮೊಳಗಿಸಿದ.
ಶಿವಗಣ ದೇವೇಂದ್ರನ ಬ್ರಹತ್ ಕನ್ನಡಿಯ ಹಿಂದಿನ ಜಾಗದಲ್ಲಿ ಅವಿತ.

ದೇವೇಂದ್ರನು ಅಗ್ನಿದೇವನನ್ನು ಸ್ವಾಗತಿಸುತ್ತ "ಬನ್ನಿ ಅಗ್ನಿದೇವ,ಏನಾಯಿತು ವಿಚಾರ?"

"ಸೈನಿಕರು ಬಹುಶಃ ತಮ್ಮತಮ್ಮಲ್ಲೆ ಜಗಳವಾಡಿದ್ದಾರೆ ನಮ್ಮ ಸೈನ್ಯದ ಬಾಣಗಳೇ ಅವರ ದೇಹ ಹೊಕ್ಕಿವೆ ಜಗಳಕ್ಕೆ ಕಾರಣ ತಿಳಿದಿಲ್ಲ ಸೈನಿಕರ ಪಾರ್ಥಿವ ಶರೀರಗಳು ಅವರ ಕುಟುಂಬಗಳಿಗೆ ಹಸ್ತಾಂತರಿಸಿದ್ದೇವೆ ,ಆದರೆ ಏರಡು ದೊಡ್ಡ ಮರಗಳು ಬಿದ್ದಿರುವುದು ಹಾಗೂ ಒಬ್ಬ ಮುಖಂಡ ಕಾಣೆಯಾಗಿರುವುದು ಅನುಮಾನ ಮೂಡಿಸುತ್ತಿದೆ".

ದೇವೇಂದ್ರನಿಗೆ ಮಾತು ಒಮ್ಮೆ ನಿಂತಂತಾಯಿತು ಆದರೆ ಅಗ್ನಿದೇವನ ಗಮನ ಬದಲಿಸಬೇಕಿತ್ತು."ಹ..ಆಗಲಿ ಹಾಗೆಯೇ ಮೃತರ ಕುಟುಂಬಗಳಿಗೆ ಪರಿಹಾರಗಳನ್ನು ನೀಡುವ ವ್ಯವಸ್ಥೆ ಮಾಡಿ ಹೊರಡಿ".

ಆಶ್ಚರ್ಯವಾಯಿತು ಅಗ್ನಿದೇವನಿಗೆ ಮೂವತ್ತೆರಡು ಸೈನಿಕರು ಒಬ್ಬ ಮುಖಂಡ ಮೃತರಾಗಿದ್ದರೆ,ಮತ್ತೊಬ್ಬ ಮುಖಂಡ ಕಾಣೆಯಾಗಿದ್ದಾನೆ ದೇವೇಂದ್ರ ಚಿಂತೆಯೇ ಇಲ್ಲದಂತೆ ಇದ್ದಾರಲ್ಲ ಎಂದು ಕೇಳುವ ಮನಸ್ಸಾದರು ರಾಜಾಜ್ಞೆ ನೆನಪಿಗೆ ಬಂದು
"ಆಗಬಹುದು ದೇವರಾಜ"ಎಂದು ಅಗ್ನಿದೇವ ಹೊರಹೋದ.

ಅಗ್ನಿದೇವನು ಹೊರಹೋದದ್ದನ್ನು ಖಚಿತಪಡಿಸಿಕೊಂಡು ಶಿವಗಣನು ಹೊರಬಂದನು
"ನಾನು ಹೇಳಲಿಲ್ಲವೇ ದೇವರಾಜ ಇಂದ್ರ ಇದು ನಿಮ್ಮವರ ತಪ್ಪೇ ಎಂದು"

"ಹೌದು ನೀವು ನಿಜವನ್ನೇ ಹೇಳಿದ್ದೀರಿ,

ಸರಿ ಏನು ನಿಮ್ಮ ಉಪಾಯ?"
*** *** ***

"ಇಂದು ನನ್ನ ನೆನಪಾಯಿತೆ ಸ್ವಾಮಿ,ಬನ್ನಿ ಕುಳಿತುಕೊಳ್ಳಿ" ತೋರಿಸಿಯೂ ತೋರಿಸದ ಸಿಟ್ಟಲ್ಲಿ ಹೇಳಿದಳು ಶಚೀದೇವಿ

"ಅದು ಹಾಗಲ್ಲ ಪ್ರಿಯೆ ಲೋಕದ ಹಿತವನ್ನು ಕಾಯುವವರು ತಮ್ಮ ಹಿತವನ್ನು ಮರೆತೇ ಬಿಟ್ಟಿರುತ್ತಾರೆ,ನಿನಗೂ ತಿಳಿದಿದೆಯಲ್ಲ ಇಂದ್ರ ಪದವಿಯ ಒತ್ತಡ" ಶಚಿಯ ಅಂತಃಪುರದಲ್ಲಿ ಇಂದ್ರನ ವ್ಯಥೆ ಮಾರ್ದನಿಸಿತ್ತು.

"ಕ್ಷಮಿಸಿ ನಿಮ್ಮನ್ನು ಕಾಣಲಾಗದ ಕಂಗಾಲಲ್ಲಿ ಮಾತನಾಡಿದೆ,ಬಾಯಾರಿಕೆಗೆ ಏನಾದರೂ ಕೊಡಲೇ ದೇವ?"ಶಚಿದೇವಿಯ ಸಿಟ್ಟು ಇಳಿದು ಮಮಕಾರದ ಭಾವನೆ ಮೂಡಿತ್ತು.

"ಬೇಡ ದೇವಿ ಈಗ ನಾವಿಬ್ಬರು ಅತಿಥಿ ಸತ್ಕಾರಕ್ಕೆ ಹೋಗಬೇಕಿದೆ.ಶಿವಗಣದ ಅಧಿಪ, ಪ್ರಥಮ ಪೂಜಿತ ಏಕದಂತನ ಆಗಮನವಾಗಿದೆ".
ಶಚಿದೇವಿಗೊ ಗಣೇಶನೆಂದರೆ ಬಹಳ ಮಮತೆ ಪ್ರೀತಿ,ಸಂತೋಷದಿಂದಲೇ ಇಂದ್ರನ ಜತೆ ಹೊರಟಳು.

ಗಣಪತಿಯು ಸ್ವರ್ಗಲೋಕಕ್ಕೆ ಆಗಮಿಸಿದ್ದನು.ಶತಕೋಟಿ ಸೂರ್ಯರ ಪ್ರಭೆಗೆ ಸಮಾನವಾದ ಅವನ ತೇಜಸ್ಸಿಗೆ ಸ್ವರ್ಗದ ಸೌಂದರ್ಯವು ತಲೆ ತಗ್ಗಿಸಿ ನಿಂತಿತ್ತು. ಆಜಾನುಬಾಹು ಬಲಶಾಲಿ ದೇಹ,ಮಿಂಚಿನಂತೆ ಹೊಳೆಯುವ ಕಣ್ಣುಗಳು, ಗಜಾನನದಲ್ಲಿ ಮರೆಯಾಗಿಯೂ ಮೆರೆಯುತ್ತಿದ್ದ ಮುಗುಳುನಗೆ ಅವನು ಧರಿಸಿದ್ದ ಕೆಂಪು ಕಚ್ಚೆ, ಹೋಲಿಸಲೂ ಆಗದ,ಕಲ್ಪಿಸಲೂ ಆಗದ, ವರ್ಣಿಸಲೂ ಆಗದ ಶಕ್ತಿಯಾಗಿ ನಿಂತಿದ್ದನು ಬೆನಕ.

ದೇವೇಂದ್ರನ ಆಸ್ಥಾನದ ಋಷಿ ಪಂಡಿತರೆಲ್ಲ .ಮಂತ್ರ-ವಾದ್ಯ-ಪದ್ಯಗಳ ಸೇವೆಯನ್ನು ನೀಡಿದರು.ದೊಡ್ಡ ಛತ್ರಗಳು,ಗಾಳಿ ಬೀಸುವ ಚಾಮರಗಳು ಗಣಪನಿಗಾಗಿ ತೊಯ್ದಾಡುತ್ತಿದ್ದವು.ಆಸ್ಥಾನಿಕರೆಲ್ಲರು ಪುಷ್ಪಗಳನ್ನು,ಸುಗಂಧದ್ರವ್ಯಗಳನ್ನು ಅರ್ಪಿಸಿದರು.ಸೇವಕಿಯರು ದೀಪ-ಆರತಿಗಳನ್ನು ಬೆಳಗಿದರು,ಗಣಪನಿಗೆ ಪರಮಾದ್ಭುತ ಸ್ವಾಗತವು ಸಿಕ್ಕಿತು. ಗಣಪನ ಭೋಜನಕ್ಕಾಗಿ ರಾಜಪಾಕಶಾಲೆಯಲ್ಲಿ ತಯಾರಾದ ವಿಧವಿಧ ಭಕ್ಷ್ಯ ಭೋಜ್ಯಗಳು ಲಂಬೋದರನನ್ನು ಸೇರಿದವು.ಬೆನಕನು ಸರ್ವ ಸಂತೃಪ್ತಿಯಿಂದ ಅತಿಥಿ ಗೃಹದಲ್ಲಿ ವಿಶ್ರಮಿಸಿದನು.
*** *** ***
ಗಣಪನು ಸಿಹಿಯಾದ ನಿದ್ದೆಯನ್ನು ಮುಗಿಸಿ ಏಳುವಾಗ, ದೇವೇಂದ್ರನು ಕೈಮುಗಿದು ನಿಂತಿರುತ್ತಾನೆ.ಆಶ್ಚರ್ಯಗೊಂಡ ಗಣಪ.

"ದೇವೇಂದ್ರ ಆಸೀನರಾಗಿ ಏಕೆ ಹೀಗೆ ನಿಂತಿದ್ದೀರಿ?"
ದೇವೇಂದ್ರನು ಹತ್ತಿರದ ಆಸನದಲ್ಲಿ ಕುಳಿತುಕೊಂಡನು.

"ಕ್ಷಮಿಸಿ ದೇವೇಂದ್ರ,ನಮ್ಮ ಆಗಮನದ ಬಗ್ಗೆ ನಿಮಗೆ ಮೊದಲೇ ತಿಳಿಸಬೇಕಿತ್ತು,ನಿಮಗೆ ತೊಂದರೆ ಕೊಟ್ಟಂತಾಯಿತು".

"ಖಂಡಿತ ಇಲ್ಲ ದೇವ,ನಿಮ್ಮ ಆಗಮನದಿಂದ ಸ್ವರ್ಗ ಪುನೀತವಾಗಿದೆ."

"ನಿಮ್ಮ ಸಂದೇಶ ಬಂದಾಗ ನಾನು ಯಾವುದೋ ಸಭೆಯಲ್ಲಿದ್ದೆ,ಹಾಗಾಗಿ ನಾನು ನಮ್ಮವನನ್ನು ಕಳುಹಿಸಿದೆ,ನಮ್ಮ ಬೇಹುಗಾರನಿಂದ ನಿಮಗೆ ಸಹಾಯವಾಯಿತೆ? ಏನು ವಿಚಾರ? ನಿಮ್ಮಲ್ಲಿ ಬೇಹುಗಾರರಿಗೇನೂ ಕೊರತೆ ಇದ್ದಂತಿಲ್ಲವಲ್ಲ?!."

ಇಂದ್ರನು ನಡೆದ ವೃತ್ತಾಂತವನ್ನೆಲ್ಲ ಸವಿವರವಾಗಿ ಹೇಳಿದನು.
"ಹೀಗಾಗಬಾರದಿತ್ತು ದೇವೇಂದ್ರ,ಪರವಾಗಿಲ್ಲ ಕಾಲಕ್ಕೆ ಕಾಲವೇ ಉತ್ತರ. ದೇವರಾಗಲಿ,ದೇವೇಂದ್ರನಾಗಲಿ ಯಾರೂ ವಿಧಿಯಿಂದ ಹೊರತಲ್ಲ,ನಿಮ್ಮ ತುಕಡಿಗಳು ಹೋಗಿವೆಯಲ್ಲ ವಜ್ರಾಯುಧ ಬೇಗನೆ ನಿಮ್ಮ ಕೈ ಸೇರುತ್ತದೆ."

"ವಿಘ್ನೇಶ್ವರ ನಿಮ್ಮ ಬೆಂಬಲವಿರುವಾಗ ನನಾಗಿನ್ನಾವ ಭಯವೂ ಇಲ್ಲ ,ನಿಮ್ಮ ಬೇಹುಗಾರ ಬಹಳ ಚತುರ ಖಂಡಿತ ನನ್ನ ಎಲ್ಲ ಆಯುಧಗಳು ನನ್ನ ಕೈಸೇರುತ್ತವೆ.

ಗಣಪನ ಸೂಕ್ಷ್ಮಮತಿಗೆ ಏನೋ ಅನ್ನಿಸಿತು.
"ಎಲ್ಲ ಆಯುಧಗಳು...!?,ಕಾಣೆಯಾದದ್ದು ಒಂದೇ ಆಯುಧವಲ್ಲವೇ?"

"ಹೌದು,ಆದರೆ ಶಿವಗಣನ ಉಪಾಯ ಬೇರೆಯೇ ಇದೆ"

"ಏನದು?"
*** *** ***

"ಸರಿ ನೀವು ನಿಜವನ್ನೇ ಹೇಳಿದ್ದೀರಿ,ಏನದು ಉಪಾಯ ಶಿವಗಣ"?ಉತ್ಸುಕನಾಗಿದ್ದನು ದೇವೇಂದ್ರ.

"ನನಗೆ ತಿಳಿದಂತೆ ಶತಧಾರವು ದಧೀಚಿ ಮಹರ್ಷಿಗಳ ಬೆನ್ನುಮೂಳೆಯಿಂದ ಮಾಡಲ್ಪಟ್ಟಿದ್ದು ಅದು
ಶತ್ರುಗಳಿಗೆ ಸಾಕ್ಷಾತ್ ಕಾಲಯಮನೇ,ಅಷ್ಟೇ ಅಲ್ಲ ಮಹರ್ಷಿಗಳ ದೇಹದ ಇತರ ಮೂಳೆಗಳು ಆಯುಧಾಗಾರದಲ್ಲಿವೆ ಅವು ಮಹಾಘಾತುಕಗಳೆ ಅಲ್ಲವೇ?"

"ಹೌದು, ಆದರೆ ಇದಕ್ಕೂ ನನ್ನ ಪರಿಸ್ಥಿತಿಗೂ ಏನು ಸಂಬಂಧ?"

"ಸಂಬಂಧವಿದೆ,ನಿಮ್ಮ ರಾಜಖಡ್ಗದ ಕಳುವು ಮಾಡಿದವರು ಬಹುಶಃ ನಿಮ್ಮ ಮೇಲೆ ಆಕ್ರಮಣ ಮಾಡುವ ಇರಾದೆಯಲ್ಲಿರಬಹುದು ಹಾಗೂ ದೇವಾನುದೇವತೆಗಳನ್ನು ಸೋಲಿಸಲು ವಜ್ರಾಯುಧವನ್ನು ಉಪಯೋಗಿಸಬಹುದು
ಎನಿಸುತ್ತಿದೆ".

"ಓಹೋ,ವಜ್ರದಿಂದ ವಜ್ರವನ್ನು ಕತ್ತರಿಸುವ ಯೋಜನೆ". ಕ್ರುದ್ಧನಾದ ದೇವೇಂದ್ರ

"ಹೌದು, ಹಾಗಾಗಿ ನಾವು ಇತರ ಮೂಳೆಗಳನ್ನು ವಿಶ್ವಕರ್ಮರಲ್ಲಿಗೆ ಕಳುಹಿಸಬೇಕು."

"ಏಕೆ?"

"ಅಕಾಸ್ಮಾತ್ ಯುದ್ಧವಾದರೆ ವಜ್ರಾಯುಧವನ್ನು ಎದುರಿಸಲು ಸರಿಸಮಾನ ಆಯುಧ ತಯಾರಿಸಲು ದಧೀಚಿಯ ಮೂಳೆಗಳಿಂದ ಮಾತ್ರ ಸಾಧ್ಯ ಇನ್ನೊಂದು ಮಾತೆಂದರೆ ಕಳುವು ಮಾಡುವ ಇರಾದೆ ಉಳ್ಳವರು ಈ ಮೂಳೆಗಳನ್ನು ಕದಿಯಲು ಬರಬಹುದು ಆಗ ನಾವು ಅವರನ್ನು ಹಿಡಿಯಬಹುದು."

ಶಿವಗಣನ ಯೋಜನೆ ಇಂದ್ರನಿಗೆ ಅರ್ಥವಾಗಿತ್ತು.
"ಸರಿ ಅದರ ಏರ್ಪಾಟು ಮಾಡುತ್ತೇನೆ ಮತ್ತು ಹಿಂದಿನಂತೆಯೇ ಈ ಬಾರಿಯೂ ಮುಖಂಡರ ರಕ್ಷಣೆಯಲ್ಲಿ ಆಯುಧಗಳನ್ನು ಕಳುಹಿಸುತ್ತೇನೆ ಮತ್ತು ನೀವು ನನ್ನ ವಿಶೇಷ ಕಾರ್ಯಾಚರಣಾ ತುಕಡಿಯೊಂದಿಗೆ ಆಯುಧಗಳನ್ನು ಹಿಂಬಾಲಿಸಿ,ಇದನ್ನು ತಿಳಿಯದ ಆಕ್ರಮಣಕಾರರು ಮೂಳೆಗಳನ್ನು ಕದ್ದೊಯ್ಯಲು ಮುತ್ತಿಗೆ ಹಾಕುತ್ತಾರೆ.ನಮ್ಮ ರಕ್ಷಣೆ ಮುರಿದರೂ ನಿಮ್ಮ ಬೆಂಗಾವಲು ಸೈನ್ಯ ಕಳ್ಳರ ಹೆಡೆಮುರಿ ಕಟ್ಟುತ್ತದೆ".

"ನೀವು ದೇವರಾಜ ಎಂಬುದರಲ್ಲಿ ಸಂಶಯವಿಲ್ಲ,ಮಿಂಚಿನ ಬುದ್ಧಿಶಕ್ತಿ ನಿಮ್ಮದು".

"ಹೌದು,ಶಿವಗಣದ ಗೂಢಾಚಾರರ ಬುದ್ಧಿಶಕ್ತಿಯು ಕಡಿಮೆಯಿಲ್ಲ".
ಶಿವಗಣನು ಹೊರಟ,ದೇವೆಂದ್ರ ಖುದ್ದು ಹೋಗಿ ಆಯುಧಗಳ ಸಾಗಣೆಯ ವ್ಯವಸ್ಥೆಯನ್ನು ನೋಡಿಕೊಂಡನು.
*** *** ***

"ದೇವೇಂದ್ರ ನೀವು ಹೇಳುವುದು ಕೇಳುತ್ತಿದ್ದರೆ ಏನೋ ಹೆಚ್ಚು ಕಡಿಮೆ ಆಗಿದೆ ಎನಿಸುತ್ತಿದೆ".ನೆಲವನ್ನೇ ದಿಟ್ಟಿಸಿ ಗಣಪನು ಹೇಳಿದನು

"........" ದೇವೇಂದ್ರ ಅವಕ್ಕಾದ.

"ನೀವು ಹೇಳುವ ಪ್ರಕಾರ ನಮ್ಮ ಬೇಹುಗಾರ ನಿಮ್ಮ ಅಶ್ವಶಾಲೆಯ ಕುದುರೆಯೇರಿ ಆಯುಧಗಳ ಜೊತೆ ಹೋದನಲ್ಲವೇ?"

"ಹೌ... ಹೌದು"

"ಆದರೆ ಒಂದು ವಿಚಿತ್ರ ಸಂಗತಿಯಿದೆ, ನಾನು ಕಳುಹಿಸಿದ ಬೇಹುಗಾರನಿಗೆ ತಾನು ಸಾಕಿದ ಅಶ್ವವನ್ನು ಬಿಟ್ಟು ಬೇರೆ ಅಶ್ವಗಳನ್ನು ಸವಾರಿ ಮಾಡಲು ಬರುವುದಿಲ್ಲ ಹಾಗೂ ಅವನ ಅಶ್ವವನ್ನು ಬೇರೆ ಯಾರೂ ಸವಾರಿ ಮಾಡಲು ಆಗುವುದಿಲ್ಲ".

"ಅದು ಹೇಗೆ ಗಣಾಧಿಪ ಎಲ್ಲರೂ ಕಲಿಯುವ ಅಶ್ವವಿದ್ಯೆಯು ಒಂದೇ ಅಲ್ಲವೇ!?, ಅದರ ಪ್ರಕಾಕ್ರವೇ ಅಲ್ಲವೇ ಕುದುರೆಗಳನ್ನು ತರಬೇತುಗೊಳಿಸುವುದು?!"
ಅತ್ತ ಪ್ರಶ್ನೆಯು ಇತ್ತ ಆಶ್ಚರ್ಯವೂ ಸೇರಿ ದೇವೇಂದ್ರನಿಗೆ ಗೊಂದಲವುಂಟಾಗಿತ್ತು.

"ನೀವು ಹೇಳುವುದೇನೋ ಸರಿ ದೇವೇಂದ್ರ,ಆದರೆ ನಮ್ಮ ಹುಡುಗ ಅಶ್ವವಿದ್ಯೆಯನ್ನು ಕಲಿತವನಲ್ಲ,ಅವನೂ ಅವನ ಕುದುರೆಯೂ ಬಹಳ ಒಡನಾಡಿ,ಇವನು ಯಾವುದೋ ಸನ್ನೆ ಮಾಡುತ್ತಾನೆ,ಅದು ಆ ಕುದುರೆಗೆ ಅರ್ಥವಾಗುತ್ತದೆ ತಮಾಷೆಯೆಂದರೆ ನಮ್ಮ ಸನ್ನೆಗಳಿಗೆ ಅವನ ಕುದುರೆ ಹುಚ್ಚುಕುದುರೆಯಾಗುತ್ತದೆ, ಅದಕ್ಕಾಗಿಯೇ
ನಮ್ಮ ಗಣನನ್ನು ನಾವೆಲ್ಲ 'ವಿಚಿತ್ರಾಶ್ವ' ಎನ್ನುವುದು".

"ಆದರೆ ನನ್ನ ನಿಮ್ಮ ಗುಪ್ತಸಂದೇಶದಂತೆ 'ಗಜವೊಂದು ನನ್ನನ್ನಿತ್ತ ಕಳುಹಿಸಿತು' ಎಂದನು ಅವನು ಹಾಗೂ ತನ್ನನ್ನು ತಾನು ಶಿವಗಣನೆಂದು ಪರಿಚಯಿಸಿಕೊಂಡನು ಅವನ ಈ 'ವಿಚಿತ್ರಾಶ್ವ'ದ ಬಗ್ಗೆ ಏನೂ ಹೇಳಲೇ ಇಲ್ಲ".

"ಹಾಗಾದರೆ ಖಂಡಿತ ಏನೋ ಹೆಚ್ಚು ಕಡಿಮೆ ಆಗಿದೆ,ಆದರೆ ಏನು ಹೆಚ್ಚು?ಏನು ಕಡಿಮೆ? ನೋಡಬೇಕು, ಇಲ್ಲಿಂದ ವಿಶ್ವಕರ್ಮರಲ್ಲಿಗೆ ಹೋಗಲು ಹಿಡಿಯುವ ಸಮಯವೆಷ್ಟು? ಆರು ಪ್ರಹರಗಳಿರಬಹುದೇ?"

"ಹೌದು, ಆರು ಪ್ರಹರಗಳು (೧ಪ್ರಹರ=ಅಂದಾಜು ೩ಘಂಟೆ) ಆಯುಧಗಳು ಹೊರಟು ಎರಡು ಪ್ರಹರಗಳಾಯಿತು,ಗುಡ್ಡ ಕಾಡುಗಳನ್ನು ಸುತ್ತಿಕೊಂಡು ಹೋಗಬೇಕು."

"ಬೇಡ,ನನ್ನ ಮೂಷಿಕ ಎಂತಹ ದುರ್ಗಮ ಪ್ರದೇಶಕ್ಕಾದರೂ ಹೋಗುತ್ತದೆ,ನೀವು ರಸ್ತೆಯ ನಕಾಶೆ ಕೊಡಿ".

ದೇವೇಂದ್ರನು ಅತಿಥಿಗೃಹದ ಹೊರಗಿದ್ದ ಸೇವಕನಿಗೆ ಆದೇಶಿಸಿದನು.
ಗಣಪನು ತನ್ನ ಸೊಂಡಿಲಿನಿಂದ ವಿಚಿತ್ರ ಸದ್ದೊಂದನ್ನು ಹೊರಡಿಸಿದನು.ತಕ್ಷಣ ಒಂದು ಗರುಡ ಗಣಪನ ಬಳಿ ಬಂದಿತು. ಅಷ್ಟರಲ್ಲೇ ನಕಾಶೆ ಗಣಪನ ಕೈ ಸೇರಿತ್ತು ಅದನ್ನು ಕೂಲಂಕುಷವಾಗಿ ಪರಿಶೀಲಿಸಿ

"ಗರುಡ,ಇಲ್ಲಿಂದ ಉತ್ತರಕ್ಕೆ ಹಾರು,ಸೇನೆ ಕಂಡೊಡನೆ ಸುತ್ತುತ್ತಿರು".
ತಕ್ಷಣವೇ ಆ ಗರುಡ ವಾಯುವೆಗದಲ್ಲಿ ಹಾರಿತು.

"ದೇವೇಂದ್ರ ನಕಾಶೆ ನನ್ನ ಬಳಿ ಇರಲಿ,ನೀವು ಇಲ್ಲಿಯೇ ಇರಿ,ನಾನು ಹೋಗಿಬರುತ್ತೇನೆ,ನಿಮ್ಮ ಆಯುಧಗಳು ಹಾಗೂ ಕಳ್ಳರು ಶೀಘ್ರದಲ್ಲಿಯೇ ನಿಮ್ಮ ಕಣ್ಣಮುಂದಿರುತ್ತಾರೆ,ನಿಮ್ಮ ಸಹಾಯ ಬೇಕಾಗಬಹುದು ನನ್ನ ಗರುಡ ಬರುತ್ತದೆ".

ಗಣಪನು ತನ್ನ ರಕ್ಷಾಕವಚವನ್ನು ಧರಿಸಿ, ಸಶಸ್ತ್ರನಾಗಿ ಅತಿಥಿಗೃಹದ ಮುಂದಿನ ಅಂಗಣದಿಂದ ಮೂಷಿಕನ ಮೇಲೆ ಹೊರಟನು.
ಇಂದ್ರನು ನಿಂತಲ್ಲೇ ಸ್ತಂಭೀಭೂತನಾದನು.
*** *** ***

ಶಾಂತವಾಗಿ ಹರಿಯುತ್ತಿದ್ದ 'ಸ್ವರ್ಣಾ' ನದಿಯ ದಂಡೆಯಲ್ಲಿ ಒಂದು ಚಿಕ್ಕ ಗಡಣವೇ ಹೊರಟಿತ್ತು. ಸುಂದರವಾಗಿರದಿದ್ದರೂ ಬಲಿಷ್ಠವಾಗಿದ್ದ ರಥ,ಅದರ ಹಿಂದೆ ಮುಂದೆ ಹದಿನಾರು ಸೈನಿಕರಿಗೆ ಒಬ್ಬ ಪ್ರಮುಖನಂತೆ ಒಟ್ಟು ಮೂವತ್ತೆರಡು ಸೈನಿಕರು ಇಬ್ಬರು ಪ್ರಮುಖರು. ದೊಡ್ಡದಲ್ಲದಿದ್ದರು ಚಿಕ್ಕದೂ ಅಲ್ಲದ ತುಕಡಿ ಜವುಗು ಮಣ್ಣಿನಲ್ಲಿ ಕುದುರೆಯ ಖರಪುಟದ ಸದ್ದೂ ಇಲ್ಲದಂತೆ ಚಲಿಸುತ್ತಿತ್ತು.ದೇವೇಂದ್ರನ ಆದೇಶವಾಗಿತ್ತು
ಸುರಕ್ಷಿತವಾಗಿ ಹೋಗಿ ಬರಲು.ಅದಕ್ಕಾಗಿಯೇ ಮುಂಚಿತವಾಗಿ ವಿಶ್ವಕರ್ಮರಲ್ಲಿಗೆ ಹೋಗುವ ಆ ಹಾದಿಯನ್ನು ದುರಸ್ತಿ ಮಾಡಲಾಗಿತ್ತು. ಆ ರಥದೊಳಗಿರುವುದು ಇಂದ್ರನ ವಜ್ರಾಯುಧವೆಂದು ಆ ಇಬ್ಬರು ಪ್ರಮುಖರಿಗಷ್ಟೇ ಗೊತ್ತಿತ್ತು. ಈ ಸುಸಮಯಕ್ಕಾಗಿ ಕಾದಿದ್ದ ಐವರು ಕಾಡಿನ ಮರೆಗಳಲ್ಲಿ ಬಿಲ್ಲು,ಖಡ್ಗಗಳನ್ನು ಹಿಡಿದು ಕುಳಿತಿದ್ದರು. ತುಕಡಿ ಅವರಿರುವ ತಿರುವಿಗೆ ಬರುತ್ತಿದ್ದಂತೆ ಆ ಪ್ರಮುಖರ ಎದೆಗೆ ಬಾಣಗಳು ನಾಟಿದ್ದವು. ನಾಯಕನಿಲ್ಲದ ಸೈನ್ಯ ಏನು ಮಾಡುವುದು? ಎಂದು ಯೋಚಿಸುತ್ತಿರುವಾಗಲೇ, ಈ ಐವರು ಮೊದಲೇ ಕಡಿದು ಸಿದ್ಧವಿರಿಸಿದ್ದ ಬ್ರಹದಾಕಾರದ ಮರಗಳನ್ನು ಬೀಳಿಸಿ ಮುಕ್ಕಾಲು ಪಾಲು ಸೈನ್ಯವನ್ನು ಹುಡಿ ಮಾಡಿದ್ದರು.ಉಳಿದ ಸೈನಿಕರು ಎತ್ತಲಿಂದ ಪ್ರಹಾರವಾಗುತ್ತಿದೆ ಎಂಬುದನ್ನು ತಿಳಿಯದೆ ಕಂಗಾಲಾಗಿದ್ದರು.ಒಬ್ಬ ಸೈನಿಕ ರಾಜ ಅರಮನೆಗೆ ದೇವಪಾರಿವಾಳವನ್ನು ತುರ್ತು ಸಂದೇಶ ಕಟ್ಟಿ ಹಾರಿಬಿಟ್ಟ. ಒಬ್ಬನು ಹಕ್ಕಿಗೆ ಗುರಿಯಿಟ್ಟಿದ್ದ ಬಾಣವನ್ನು ಕಿರುನಗೆಯೊಂದಿಗೆ ಕದಲಿಸಿ ಸೈನಿಕನೆಡೆಗೆ ಬಿಟ್ಟ.ಈ ಐವರ ಶರಾಘಾತದಿಂದ ಇದ್ದ ಹತ್ತು ಸೈನಿಕರು ನೆಲಕ್ಕುರುಳಿದರು,ವಜ್ರಾಯುಧ ಹಾಗೂ ಒಬ್ಬ ಪ್ರಮುಖನನ್ನು ಹೊತ್ತುಕೊಂಡರು.ಸೈನಿಕರನ್ನು ಘಾಸಿಗೊಳಿಸಿದ್ದ ತಮ್ಮ ಬಾಣಗಳನ್ನು ತೆಗೆದು ಸೈನಿಕರ ಬತ್ತಳಿಕೆಯ ಬಾಣಗಳನ್ನು ಗಾಯಗಳಲ್ಲಿ ಚುಚ್ಚಿ,ಕ್ಷಣಾರ್ಧದಲ್ಲಿ ಕಣ್ಮರೆಯಾದರು.
ಶತಧಾರವು ಕಳುವಾಗಿತ್ತು ,ಉಳಿದ ಆಯುಧಗಳು ಕೈ ಸೇರುವ ತಂತ್ರ ಸಿದ್ಧವಾಗಿತ್ತು.
*** *** ***
ಗಣೇಶನು ಶಿವಗಣಗಳ ಮುಖಂಡರ ಜೊತೆಗೆ ಸಂವಾದಭವನದಲ್ಲಿ ಸೈನ್ಯ ರಚನೆ,ಆಯುಧ ಸಾಮಗ್ರಿ ಇತ್ಯಾದಿಗಳ ಬಗ್ಗೆ ಚರ್ಚಿಸುತ್ತಿದನು.ಸಂದೇಶವನ್ನು ಹೊತ್ತ ದೇವೇಂದ್ರನ ರಾಜಪಾರಿವಾಳ ಗಣಪನ ಮುಂದೆ ಬಂದು ಕುಳಿತಿತ್ತು ಅದರ ಕಾಲಿಗೆ ಕಟ್ಟಿದ್ದ ಸಂದೇಶ ಓದಿದ
'ನಿಮ್ಮ ಬೇಹುಗಾರನೊಬ್ಬ ಬೇಕು 'ಗಜವೊಂದು ನನ್ನನ್ನಿತ್ತ ಕಳುಹಿಸಿತು' ಎಂಬುದಾಗಿ ದ್ವಾರಪಾಲಕರ ಬಳಿ ಹೇಳಲಿ' ಎಂದು ಬರೆದಿತ್ತು.

ಗಣಪನಿಗೆ ವಿಚಿತ್ರವೆನಿಸಿತು 'ದೇವಸೇನೆಯಲ್ಲಿ ಶೂರರೂ,ಬುದ್ಧಿವಂತರೂ ಇರುವಾಗ ಅನ್ಯರ ಅವಶ್ಯಕತೆಯಾದರೂ ಏನಿದೆ?,ಏನಾದರಿರಲಿ ಆದರೆ ಯಾರನ್ನು ಕಳುಹಿಸಲಿ?, ಅವನೇ ಸರಿ ಮೂಷಿಕಾಸುರನ ಬಲಾಬಲಗಳನ್ನು ತಿಳಿಯಲು ಹೋದ ಚತುರ'

"ಯಾರಲ್ಲಿ? ವಿಚಿತ್ರಾಶ್ವವನ್ನು ಬರಲು ಹೇಳಿ" ಆಜ್ಞಾಪಿಸಿದ ಗಣೇಶ.

ಮುಖಂಡರ ಸಭೆಗೆ ಸಂಧರ್ಭವೇನೆಂದೆ ತಿಳಿಯದಾಗಿತ್ತು.
ವಿಚಿತ್ರಾಶ್ವನು ಕೂಡಲೇ ಗಣಪನ ಮುಂದೆ ನಿಂತು "ಅಪ್ಪಣೆ ಸ್ವಾಮಿ"ಎಂದನು.
ಗಣಪನು ತನ್ನ ಸೊಂಡಿಲಿನಿಂದ ವಿವರವನ್ನು ವಿಚಿತ್ರಾಶ್ವನ ಕಿವಿಗೆ ಉಸುರಿದನು.

ವಿಚಿತ್ರಾಶ್ವನು ದೇವೇಂದ್ರನು ಕಳುಹಿಸಿದ ಗುಪ್ತಸಂದೇಶವನ್ನು ಹಿಡಿದು ಹೊರಟನು.

ವಿಚಿತ್ರಾಶ್ವನ ಕುದುರೆಯು ಕೊರಕಲುಗಳುಳ್ಳ ಕಡಿದಾದ ಹಾದಿಯಲ್ಲಿ ಇಳಿಯುತ್ತಿತ್ತು.ತಿಳಿಯಾದ ಮಂಜು ಬಿದ್ದಿದ್ದರಿಂದ ಕಲ್ಲು ಬಂಡೆಗಳು ಹತ್ತಿಯ ಉಂಡೆಗಳಂತೆ ಗೋಚರಿಸುತ್ತಿದ್ದವು.ವಿಚಿತ್ರಾಶ್ವನಿಗೆ ತನ್ನ ಕುದುರೆಯ ಮೇಲಿನ ನಂಬಿಕೆಯಿಂದಲೋ ಏನೋ ಶಿರಸ್ತ್ರಾಣವನ್ನಾಗಲಿ,ರಕ್ಷಾಕವಚವನ್ನಾಗಲಿ ಧರಿಸಿರಲಿಲ್ಲ.
ಕುದುರೆಯ ಮುಂದಿನ ಕಾಲು ಯೋಜಿಸಿ ಇಟ್ಟಿದ್ದ ಉರುಳಲ್ಲಿ ಸಿಕ್ಕಿ ಎಡವಿತ್ತು. ಭಾರೀ ಇಳಿಜಾರಿನ ಪ್ರದೇಶವಾದ್ದರಿಂದ ವಿಚಿತ್ರಾಶ್ವನು ಉರುಳಿ ಆ ಚೂಪು ಕಲ್ಲುಗಳಿಂದ ತೀವ್ರವಾಗಿ ಘಾಸಿಗೊಂದು ರಕ್ತದ ಮಡುವಿನಲ್ಲಿ ತನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದನು.

ಎತ್ತರದ ವ್ಯಕ್ತಿಯೊಬ್ಬನು ಬಂದು ಘಾಸಿಗೊಂಡ ವಿಚಿತ್ರಾಶ್ವನೊಂದಿಗಿದ್ದ ಗುಪ್ತ ಸಂದೇಶ ಪತ್ರವನ್ನು ತೆಗೆದುಕೊಂಡು
"ವಾಹನ ಸವಾರಿಯ ಮುನ್ನ ಶಿರಸ್ತ್ರಾಣವನ್ನು ಕಡ್ಡಾಯವಾಗಿ ಧರಿಸಬೇಕು ಗೆಳೆಯ" ಎಂದು ಹೇಳಿ ಹೊರಟ.
ಶಿರಸ್ತ್ರಾಣ ಧರಿಸದಿದ್ದಕ್ಕಾಗಿ ವಿಚಿತ್ರಾಶ್ವನು ತನ್ನ ಜೀವವನ್ನೇ ದಂಡವನ್ನಾಗಿ ಕಟ್ಟಬೇಕಾಯಿತು.
ಸ್ವರ್ಗಕ್ಕೆ ಜೀವಂತವಾಗಿ ಹೋಗಲು ಇವನಿಗೂ ಸಾಧ್ಯವಾಗಲಿಲ್ಲ.
ನೆನಪಿಡಿ ವಾಹನ ಸವಾರಿಯ ಮುನ್ನ ಶಿರಸ್ತ್ರಾಣವನ್ನು ಕಡ್ಡಾಯವಾಗಿ ಧರಿಸಬೇಕು.
*** *** ***

ಗರುಡನು ಎತ್ತರದಲ್ಲಿ ಸುತ್ತುತ್ತಿದ್ದುದ್ದನ್ನು ಗಣೇಶ ಗಮನಿಸಿದ.ಮೂಷಿಕವು ಗುಡ್ಡ ಕಾಡು ಎನ್ನದೆ ಶರವೇಗದಲ್ಲಿ ಸಾಗುತ್ತಿತ್ತು. ಅಲ್ಪ ಸಮಯದಲ್ಲೇ ಗಣಪ ದಧೀಚಿಯ ಮೂಳೆಗಳಿರುವ ರಥದ ಬಳಿ ಬಂದ.ಯಾರೋ ಐವರು ದೇವೇಂದ್ರನ ಸೇನೆಯೊಂದಿಗೆ ಹೋರಾಡುತ್ತಿದ್ದರು.ಇನ್ನು ಕೆಲವೇ ಸೈನಿಕರು ಉಳಿದುಕೊಂಡಿರುವುದನ್ನು ಮನಗಂಡ ಗಣೇಶ ತನ್ನ ಅಂಕುಶದೊಡನೆ ದಾಳಿಗಿಳಿದನು.
ಗಣಪನನ್ನು ಕಂಡು ಸೇನೆಯೂ,ಆ ಐವರು ದಿಗ್ಭ್ರಾಂತರಾದರೂ ಕೂಡ ತಮ್ಮ ಹೋರಾಟವನ್ನು ಮುಂದುವರಿಸಿದರು.
ಗಣಪನು ಮೊದಮೊದಲಿಗೆ ರಕ್ಷಣಾತ್ಮಕವಾಗಿ ಹೋರಾಡುತ್ತ ಅವರ ಪಾದಗಳ ಚಲನೆ,ಕಣ್ಣ ನೋಟ, ವಿವಿಧ ಪ್ರಹಾರಗಳ ತೀವ್ರತೆಯನ್ನು ಸೂಕ್ಷ್ಮವಾಗಿ ಗಮನಿಸಿದನು.ಗಣಗಳ ಅಧಿಪನಿಗೂ ಆ ಐವರ ಯುದ್ಧಕೌಶಲ ಅದ್ಭುತವೆನಿಸಿತ್ತು. ಗಣಪತಿಯು ಐವರ ಯುದ್ಧರೀತಿಯನ್ನು ಚೆನ್ನಾಗಿ ಅರಿತುಕೊಂಡು,ಕೆಲವೇ ಚಲನೆಗಳಲ್ಲಿ ಅವರನ್ನು ನಿಶಸ್ತ್ರರನ್ನಾಗಿ ಮಾಡಿ ತನ್ನ ಪಾಶದಿಂದ ಐವರನ್ನು ಬಂಧಿಸಿದನು.ದೇವಸೇನೆಯ ಉಳಿದ ಸೈನಿಕರು ಗಣಪನಿಗೆ ಕೈಮುಗಿದು ನಮಸ್ಕರಿಸಿದರು.
ಮತ್ತೆ ವಿಚಿತ್ರ ಸದ್ದೊಂದನ್ನು ಮಾಡಿದ ಗಣೇಶ.ಕೆಳಗಿಳಿದ ಗರುಡನಿಗೆ ದೇವೇಂದ್ರನನ್ನು ಕರೆ ತರುವಂತೆ ಹೇಳಿದನು,ಮೂಷಿಕನನ್ನು ಗರುಡನೊಂದಿಗೆ ಕಳುಹಿಸಿಕೊಟ್ಟನು.
**** *** ***

"ಬಹಳ ವಿಚಿತ್ರ ವಾಹನವಿದು ಗಜಾನನ ಎಲ್ಲೋ ನುಗ್ಗಿ ಇನ್ನೆಲ್ಲೋ ಹೊರಬಂದು ಕೊನೆಗೆ ಇಲ್ಲಿಗೆ ಬಂದಿತು".

"ಅದು ಹಾಗೆ ದೇವೇಂದ್ರ ಒಮ್ಮೆ ನಡೆದ ದಾರಿ ಅದು ಎಂದೂ ಮರೆಯುವುದಿಲ್ಲ".

"ಗಣಾಧಿಪ ಅದು ಬಂದ ದಾರಿ ದಾರಿಯಲ್ಲ ಕಾಡು-ಮೇಡು,ಸ್ವರ್ಗಸಾಮ್ರಾಟನಿಗೂ ನರಕ ದರ್ಶನ ವಾಯಿತು".

ಗಣಪನು ಬಂಧಿಸಿದ ಆ ಐವರನ್ನು ತೋರಿಸುತ್ತ
"ನೋಡಿ,ನಿಮ್ಮ ಶತಧಾರವನ್ನು ಕದ್ದವರು ಮತ್ತು ಇತರ ಆಯುಧಗಳನ್ನು ಕದ್ದೊಯ್ಯಲು ಬಂದವರು".

ದೇವೇಂದ್ರ ಒಮ್ಮೆಲೆ ಉಗ್ರನಾಗಿ ತನ್ನ ಒರೆಖಡ್ಗವನ್ನು ತೆಗೆದ.

"ದೇವೇಂದ್ರ ಆವೇಶ ಪಡಬೇಡಿ,ಇವರನ್ನು ನಾನು ವಿಚಾರಿಸುತ್ತೇನೆ".ಎಂದು ಗಣಪನು ದೇವೇಂದ್ರನನ್ನು ತಡೆದ.

"ನಾನು ಶಿವಪಾರ್ವತಿ ಸುತ ,ಶಿವಗಣಗಳ ಅಧಿಪ ನನ್ನ ಹೆಸರು ಗಣೇಶ,ವಿನಾಯಕ,ವಿಘ್ನೇಶ್ವರ ಹೀಗೆ ಅಷ್ಟೋತ್ತರ".

"ನಿಮ್ಮನ್ನು ನೋಡಿದೊಡನೆಯೇ ತಿಳಿಯಿತು ದೇವ ಆದರೆ ನಿಮ್ಮ ಮುಂದೆ ಹೋರಾಡದೆ ನಮಗೆ ವಿಧಿಯಿರಲಿಲ್ಲ,ಅದಕ್ಕಾಗಿ ಕ್ಷಮೆ ಯಾಚಿಸುತ್ತೇವೆ".
ಶಿವಗಣನೆಂದು ಪರಿಚಯಿಸಿಕೊಂಡವ ನುಡಿದ.

ಅವರ ದೈನ್ಯಭಾವವನ್ನು ಗಮನಿಸಿದ ಗಣೇಶ ಸೌಮ್ಯವಾಗಿಯೆ "ನೀವು ಈಗ ಈ ವೃತ್ತಾಂತಕ್ಕೆ ಕಾರಣರಾಗಿದ್ದೀರಿ.ನೀವಾರು? ಏಕೆ ಹೀಗೆಲ್ಲ ನಡೆಯಿತು? ಹೇಳಿ,ನಿಜವನ್ನೇ ನುಡಿಯಿರಿ ".

"ದೇವರ ಮುಂದೆ ಸುಳ್ಳಾಡಿದವರು ಬದುಕಿಯಾರೇ? ಖಂಡಿತ ಇಲ್ಲ ಸತ್ಯವನ್ನೇ ಹೇಳುತ್ತೇನೆ ನನ್ನ ಹೆಸರು ಶಾತಸಿಂಹ, ಈ ನಾಲ್ವರು ವೀರಾರ್ಕ,ಕೇಸರ,ಮಯೂಖ ಹಾಗೂ ವಿರಾಜ.ನಾನು ನಿಮ್ಮ ಬೇಹುಗಾರನಾನ್ನು ಬೀಳಿಸಿ ಕೊಂದ ಅಪರಾಧಿ ಮತ್ತು ನಾವೈವರು ವಜ್ರಾಯುಧ ಕದಿಯಲು ನಡೆಸಿದ ದಾಳಿಯ ಕುಖ್ಯಾತರು. ಆಯುಧಗಳನ್ನು ಕದ್ದೊಯ್ಯಲು ನಾನು ಬೇಹುಗಾರನಂತೆ ನಟಿಸಿ ಆಯುಧಗಳನ್ನು ಉಪಾಯವಾಗಿ ಹೊರಡಿಸಿದೆ,ಆದರೆ ವಿಘ್ನನಿವಾರಕನೇ ನಮ್ಮ ಪಾಲಿನ ವಿಘ್ನವಾದನು."ದೇವರ ಮೇಲಿನ ಭಕ್ತಿಯೊ ,ದೇವೇಂದ್ರನ ಮೇಲಿನ ಭಯವೋ ಸತ್ಯವು ಸತ್ಯವಾಗೆ ಹೊರಬಂದಿತು.

"ಕಾರಣ ?.."

"ನಾವೈವರು ದಧೀಚಿ ಮಹರ್ಷಿಗಳ ಶಿಷ್ಯಂದಿರು,ನಾವು ಸಣ್ಣವರಿದ್ದಾಗ ಈ ದೇವೇಂದ್ರ ನಮ್ಮ ಗುರುಗಳ ಮೂಳೆಗಳನ್ನು ವೃತ್ತಾಸುರನನ್ನು ಸಂಹರಿಸಲೆಂದು ಪಡೆದುಕೊಂಡು ಹೋದರು,ತನ್ನ ಸಿಂಹಾಸನದ ಸ್ವಾರ್ಥಕ್ಕಾಗಿ ಮಹರ್ಷಿಯೊಬ್ಬರ ಪ್ರಾಣವನ್ನು ತೆಗೆದುಕೊಂಡಿದ್ದರು. ಅದು ನಮಗೆ ಸರಿ ಬರಲಿಲ್ಲ ,ಅಂದು ಹೊತ್ತಿದ್ದ ದ್ವೇಷದ ಕಿಚ್ಚಿನಿಂದ,ನಾಲ್ಕು ದಶಕಗಳ ಪರಿಶ್ರಮದಿಂದ ಯುದ್ಧ ಪ್ರಾವೀಣ್ಯತೆಯನ್ನು ಪಡೆದೆವು,ತಪಃಶಕ್ತಿಯಿಂದ ಸ್ವರ್ಗಲೋಕವನ್ನು ಸದೇಹಿಗಳಾಗಿ ಸೇರಿದೆವು.
ದೇವೇಂದ್ರ ವಜ್ರಾಯುಧ ಹಾಗೂ ಮೂಳೆಗಳನ್ನು ಕೇಳಿದರೆ ಕೊಡುವುದಿಲ್ಲ, ಯುದ್ಧ ಮಾಡಿ ಗೆಲ್ಲಲು ಸೈನ್ಯವಿಲ್ಲ,ಹಾಗಾಗಿ ಕಳ್ಳತನ ಮಾಡಿದೆವು."

"ಆದರೆ ನಿಮಗೆ ವಜ್ರಾಯುಧ ಸಾಗಿ ಹೋಗುವ ದಾರಿ,ದಿನ ಹೇಗೆ ತಿಳಿಯಿತು?"

"ವಜ್ರಾಯುಧವು ವಿಶ್ವಕರ್ಮರಲ್ಲಿಗೆ ಸಮಯಕ್ಕೆ ತಕ್ಕ ಮಾರ್ಪಾಟು ಅಗಬೇಕಾದ್ದರಿಂದ ಹೋಗಬೇಕಿತ್ತು,ಹೋಗಲು ಇದ್ದದ್ದು ಒಂದೇ ಮಾರ್ಗ ಅದು ಹದಗೆಟ್ಟಿತ್ತು ವಜ್ರಾಯುಧ ಆದಷ್ಟೂ ಬೇಗ ಹಾಗೂ ಆದಷ್ಟು ಸುರಕ್ಷಿತವಾಗಿ ತಲುಪಬೇಕೆಂದು ದಾರಿಯನ್ನು ದುರಸ್ತಿ ಮಾಡಿದ್ದರು ಇದನ್ನು ಗಮನಿಸಿದ ನಾವು ನಮ್ಮ ಸಿದ್ಧತೆಗಳನ್ನು ಮಾಡಿದೆವು".
ಸಣ್ಣ ವಿಚಾರಗಳು ಬುದ್ಧಿವಂತನನ್ನು ಮೂರ್ಖನನ್ನಾಗಿಯೂ,ಮೂರ್ಖನನ್ನು ಬುದ್ಧಿವಂತನನ್ನಾಗಿಯೂ ಬದಲಿಸಿಬಿಡುತ್ತವೆ.

ದೇವೇಂದ್ರನು ಕೇಳಿದನು "ನಮ್ಮ ಒಬ್ಬ ಮುಖಂಡ ಇಲ್ಲದಂತಾಗಿದ್ದನು,ಅವನೆಲ್ಲಿ
ನಿಮ್ಮ ಜೊತೆಯೇ ಇರಬೇಕಿತ್ತಲ್ಲವೇ?"

"ನಿಮ್ಮ ಆಲೋಚನೆಯ ಹಾದಿ ತಪ್ಪಿಸಲೇ ನಾವು ಅವನನ್ನು ಅಪಹರಿಸಿದ್ದು, ತನಿಖೆಯು ಪೂರ್ವಾಗ್ರಹಗಳಿಂದ ಕೂಡಿದ್ದರೆ ಪೂರ್ವಾಗ್ರಹಗಳೇ ಸತ್ಯವೆನಿಸುತ್ತವೆ ಹಾಗಾಗಿಯೇ ನಿಮ್ಮ ಸೈನಿಕರ ದೇಹಗಳಲ್ಲಿ ನಿಮ್ಮ ಬಾಣಗಳೇ ಸಿಕ್ಕಿದ್ದು".
ಪತ್ತೆದಾರ ಸುಳಿವನ್ನು ಹುಡುಕುತ್ತಾನೆ ಸತ್ಯವನ್ನಲ್ಲ, ಸುಳಿವು ಸತ್ಯದ ಮುಖವಾಡವಷ್ಟೇ ಅಸಲಿ ಮುಖ ಸತ್ಯವೇ

"ಹಾಗಾದರೆ ನಮ್ಮ ಬೇಹುಗಾರನ ಬಗ್ಗೆ ಹೇಗೆ ತಿಳಿಯಿತು?" ಕೇಳಿದನು ಗಣಪ.

"ದೇವೇಂದ್ರ ತನ್ನ ವೈಯಕ್ತಿಕ ಸಮಸ್ಯೆಯನ್ನು ಬಿಡಿಸಲು ನಿಕಟವರ್ತಿಗಳಿಗೆ ಕೊಡಲಾರರು ಎಂಬುದು ನಮಗೆ ತಿಳಿದಿತ್ತು ದೇವೇಂದ್ರನ ರಾಜಪಾರಿವಾಳ ಕೈಲಾಸದೆಡೆಗೆ ಹಾರಿದ್ದನ್ನು ಗಮನಿಸಿದ್ದೆವು ಅಲ್ಲಿಂದ ಎಲ್ಲವೂ ನಮ್ಮ ಕೈಗೆ ಬಂದಿತ್ತು".

"ಈ ಮೂಳೆಗಳನ್ನು ಕದ್ದೊಯ್ದು ನಿಮಗೇನು ಲಾಭ? " ಗಣಪನು ಕೇಳಿದ .

"ನಮಗೆ ಅದನ್ನು ಪ್ರಯೋಗಿಸಿ ಸಾಮ್ರಾಜ್ಯಗಳನ್ನು ಗೆಲ್ಲಬೇಕಿಲ್ಲ.ನಾವು ಈ ಮೂಳೆಗಳನ್ನು ಜೋಡಿಸಿ ನಮ್ಮ ವಿದ್ಯೆಯಿಂದ ಪುನಃ ದಧೀಚಿ ಮಹರ್ಷಿಯನ್ನು ಬದುಕಿಸುತ್ತಿದೆವು".

ಗಣಪತಿಯು ಇವರ ಮೂರ್ಖತೆಯನ್ನು ಕಂಡು ನಕ್ಕನು
"ಧಧೀಚಿಯವರು ಸಮಸ್ತ ಲೋಕವನ್ನು ವೃತ್ತನಿಂದ ಉಳಿಸಲು ಅವರಾಗಿಯೇ ಪ್ರಾಣತ್ಯಾಗ ಮಾಡಿದ್ದರು , ನೀವು ಅವರನ್ನು ಬದುಕಿಸುತ್ತೀರಿ ಎಂದಿಟ್ಟುಕೊಳ್ಳಿ ಅದು ಅವರಿಗೆ ಸಮಂಜಸವೇನಿಸುತ್ತಿತ್ತೆ? ಅವರ ಶಿಷ್ಯರಾಗಿ ನೀವು ದೇವೇಂದ್ರನ ಮೇಲೆ ,ದೇವಲೋಕದ ಮೇಲೆ ಷಡ್ಯಂತ್ರ ಹೂಡಿದ್ದು ತಿಳಿದಿದ್ದರೆ ಅವರು ನಿಮ್ಮನ್ನು ಕ್ಷಮಿಸುತ್ತಿದ್ದರೆ?"

"........."ಐವರು ನಿರುತ್ತರರಾದರು.

"ನಿಮ್ಮ ತಪ್ಪಿನ ಶಿಕ್ಷೆಗಳನ್ನು ದೇವೇಂದ್ರ ನೋಡಿಕೊಳ್ಳುತ್ತಾರೆ ಆದರೆ ನನ್ನದೊಂದು ಕಿವಿಮಾತು ನೀವು ದಧೀಚಿ ಮಹರ್ಷಿಗಳನ್ನು ಬದುಕಿಸಬೇಕಿಲ್ಲ,ಅವರಿಗಿಂತ ಹೆಚ್ಚು ಜ್ಞಾನ,ತಪಃಶಕ್ತಿಯನ್ನು ಪಡೆಯಲು ಸಾಧ್ಯವಿದೆ, ಜಗದ ಒಳಿತಿಗಾಗಿ ಬಾಳಲು ಸಾಧ್ಯವಿದೆ ನಿಮ್ಮಂತಹ ಶಿಷ್ಯರಿಂದ ಅವರ ಹೆಸರು ಚಿರಕಾಲ ಉಳಿಯುವುದು ಸಾಧ್ಯವಿದೆ ಅದರೆಡೆಗೆ ಗಮನಕೊಡಿ" ಎಂದನು.
ಆ ಐವರೂ ಮಂಡಿಯೂರಿ ತಲೆ ತಗ್ಗಿಸಿದರು.
"ದೇವೇಂದ್ರ ನಾನು ಅರಮನೆಗೆ ಹೋಗುತ್ತೇನೆ,ಬಹಳ ಹಸಿವಾಗಿದೆ ಶಚಿದೇವಿ ನನಗೇನಾದರು ಭಕ್ಷ್ಯ ಮಾಡಿರುತ್ತಾಳೆ.ನೀವು ಅವರನ್ನೂ, ಆಯುಧಗಳನ್ನು ತೆಗೆದುಕೊಂಡು ಬನ್ನಿ ಹಾಗೆಯೇ ವಜ್ರಾಯುಧವನ್ನು ಅವಿತಿಟ್ಟಿರುವ ಜಾಗವನ್ನು ತೋರಿಸಲು ಹೇಳಿ ನಿಮ್ಮ ಶತಧಾರ ನಿಮ್ಮ ಕೈಸೇರುತ್ತದೆ"ಎಂದು ಮೂಷಿಕನ ಮೇಲೆ
ಹೊರಟನು.