Click here to Download MyLang App

ವೀರ ಯೋಧ - ಬರೆದವರು : ಇಂದಿರಾ ಹೆಗ್ಡೆ | ಸಾಮಾಜಿಕ

(ಈ ಕತೆ ವನಿತಾ ಮಲ್ಲಿಗೆ, ಮಂಜುವಾಣಿ, ಮುಂಗಾರು, ಉತ್ಥಾನ, ಪ್ರಜಾಮತ, ಗೆಳತಿ, ಸುದ್ದಿಸಂಗಾತಿ, ಕಸ್ತೂರಿ, ಕನ್ನಡಪ್ರಭ- ಪತ್ರಿಕೆಗಳಲ್ಲಿ ಪ್ರಕಟವಾಗಿದೆ.)

1965 -ಭಾರತ- ಪಾಕಿಸ್ತಾನ ಯುದ್ಧ ನಿಂತ ಶುಭ ಸಮಾಚಾರವನ್ನು ಹೊತ್ತ ಪತ್ರಿಕೆ ಭಾರತೀಯರ ಮನೆ ಮನೆಗೆ ನುಗ್ಗಿತು. ಜನರು ನೆಮ್ಮದಿಯ ಉಸಿರೆಳೆದರು.

ಆದರೆ ಯಶವಂತ್‍ಸಿಂಗ್ ಹಾಗೂ ಅವನ ಪತ್ನಿ ಇನ್ನೂ ಉಸಿರು ಬಿಗಿ ಹಿಡಿದೇ ಕುಳಿತಿದ್ದಾರೆ. ಯುದ್ಧ ಕ್ಷೇತ್ರಕ್ಕೆ ಹೋಗಿದ್ದ ಅವರ ಮಗ ರಾಕೇಶನಿಂದ ಯಾವ ಸಮಾಚಾರವೂ ಇದುವರೆಗೆ ಬಂದಿಲ್ಲ. ಯುದ್ಧ ನಿಂತು ಆಗಲೇ ಹದಿನೈದು ದಿನಗಳುರುಳಿದ್ದವು. ಹೆತ್ತವರ ಕಾತರ – ಕಾಳಜಿ ಮೇರೆ ಮೀರುತ್ತಿದೆ.

ಯಶವಂತ - ರಂಜಿತಾರವರ ಹಿರಿಯ ಮಗ ರಾಕೇಶ್ ಹಾವು ಕಚ್ಚಿ, ಎರಡು ವರುಷಗಳ ಹಿಂದೆ ಪರಲೋಕ ಸೇರಿದ್ದ, ಬದುಕಿ ಉಳಿದವ ಇನ್ನೊಬ್ಬ ಮಗ ರಾಜೇಶ್ ಹೆತ್ತವರ ಕಣ್ಮಣಿ- ವಂಶದ ಕುಡಿ. ಮಗನ ಸುರಕ್ಷಿತತೆಯೇ ಅನಿಶ್ಚಿತತೆಯಲ್ಲಿ ಇರುವ ಈ ದಿನಗಳಲ್ಲೂ ಇರುವ ಒಬ್ಬ ಮಗನೂ ಸೈನ್ಯ ಸೇರಿದ್ದಾನೆ ಎಂದು ಆ ಹೆತ್ತವರು ಕುರುಬುತ್ತಿಲ್ಲ. ಪಂಜಾಬಿನ ಪ್ರತಿ ಮನೆಯೂ ಮಿಲಿಟರಿಯಲ್ಲೊಬ್ಬ ಮಗನಿರುವುದು ಹೆಮ್ಮೆಯ ಸಂಗತಿ ಎಂದು ಬೀಗುತ್ತದೆ. ತಲ- ತಲಾಂತರದಿಂದ ತಮ್ಮ ವಂಶದ ಕುಡಿಯೊಂದನ್ನು ತಾಯ್ನಾಡ ರಕ್ಷಣೆಗೆ ಕಳುಹಿಸಿ ಕೊಡಲಾಗುತ್ತದೆ. ಹುಟ್ಟು ಎಷ್ಟು ಸತ್ಯವೋ ಅಷ್ಟೇ ಸತ್ಯ ಸಾವು. ಹಾವು ಕಚ್ಚಿ ಸತ್ತ ಮಗನನ್ನು ನೆನೆಯುವಾಗ ಯುದ್ಧ ಕ್ಷೇತ್ರದಲ್ಲಿ ವೀರ ಮರಣವನ್ನಪ್ಪಬಹುದಾದ ಮಗನೇ ಭಾಗ್ಯವಂತ ಎಂದೆನಿಸುತ್ತದೆ. ಹೆತ್ತ ಹೃದಯ ಆಗ ಹೆಮ್ಮೆಯಿಂದ ಬೀಗುತ್ತದೆ. ಆದರೂ ಯುದ್ಧದ ದಿನಗಳಲ್ಲಿಯ ಮಾನಸಿಕ ತುಮುಲಕ್ಕೆ ಕೊನೆ ಮೊದಲುಂಟೆ? ಬೇಡ ಬೇಡವೆಂದರೂ ಕೆಟ್ಟ ವಿಚಾರಗಳೇ ತಲೆಯಲ್ಲಿ ದುಂಬಿಯಂತೆ ಕೊರೆಯುತ್ತದೆ. ಯಾವ ರೀತಿಯ ಸಮಾಧಾನಕ್ಕೂ ಮನಸ್ಸು ಒಡಂಬಡುತ್ತಿಲ್ಲ ದಾಹ! ಹಾಲುಣಿಸಿದ ಎದೆಗೆ ಇಂದು ದಾಹ! ಮಗನನ್ನು ಕಾಣಬೇಕೆಂಬ ಏಕಮೇವ ಹಂಬಲ. ಏನಾದನೋ... ಎಲ್ಲಿರುವನೋ ಯಾವ ಅವಸ್ಥೆಯಲ್ಲಿ ಒದ್ದಾಡುತ್ತಿರುವನೋ ...ವೈರಿಗಳ ವಶನಾಗಿ ಚಿತ್ರ ಹಿಂಸೆಯನ್ನು ಅನುಭವಿಸುತ್ತಿರುವನೋ...ಬೇಡ ... ಇದೆಲ್ಲ ಬೇಡವಾದ ವಿಚಾರಗಳು... ಕಲ್ಪಿಸಿದಾಗಲೇ ಮೈ ನಡುಕ ಬರುವ ವಿಷಯಗಳು. ಹೀಗೆಯೇ ಇನ್ನೆರಡು ದಿನ ಉರುಳಿದರೆ ಖಂಡಿತ ಇಬ್ಬರಿಗೂ ಹುಚ್ಚು ಹಿಡಿಯಬಹುದು. ಮೂಕ ವೇದನೆಯನ್ನನ್ನುಭವಿಸುತ್ತಿರುವ ದಂಪತಿಗಳು ಒಬ್ಬರ ಮುಖವನ್ನೊಬ್ಬರು ನೋಡಲೂ ಹಿಂಜರಿಯುತ್ತಿದ್ದಾರೆ.

ಯುದ್ಧ ನಿಂತು ಹದಿನೈದು ದಿನ ಉರುಳಿವೆ. ಪಾಕಿಸ್ತಾನೀಯರ ವಶವಾಗಿದ್ದ ಖೇಮ್‍ಕರಣ ಇನ್ನೂ ಅವರ ಅಧೀನದಲ್ಲಿಯೇ ಇದೆ. ಭಾರತೀಯ ಯೋಧರಿಗೆ ನೆಮ್ಮದಿ ಇಲ್ಲ. ಹಲವಾರು ದಿನಗಳ ಅವಿಶ್ರಾಂತ ಹೋರಾಟ ಕೊನೆಗೊಂಡಿತೆಂದು ಭಾವಿಸಲಾಗುತ್ತಿಲ್ಲ. ಯುದ್ಧ ಕ್ಷೇತ್ರದಲ್ಲಿಯ ಬೆಟಾಲಿಯನ್‍ಗಳು ಹಿಂತಿರುಗಲಿಲ್ಲ.

ತರನ್ –ತರನ್ ಖೇಮ್ ಕರಣಕ್ಕೆ ಸಮೀಪವಿರುವ ಪ್ರದೇಶದಲ್ಲಿಯೇ ರಾಕೇಶನ ಬೆಟಾಲಿಯನ್ ಬೀಡು ಬಿಟ್ಟಿದೆ. ಖೇಮ್‍ಕರಣದಲ್ಲಿಯ ಪಾಕಿಸ್ತಾನಿ ಸೈನಿಕರು ಅಲ್ಲಿಯ ಮರಗಳನ್ನೂ ಬಿಡದೆ ತಮ್ಮ ದೇಶಕ್ಕೆ ಸಾಗಿಸುತ್ತಿದ್ದಾರೆ ಎಂಬ ಸುದ್ದಿ ಭಾರತೀಯ ಯೋಧರನ್ನು ರೊಚ್ಚಿಗೆಬ್ಬಿಸಿದೆ.

ರಾಜೇಶನಿದ್ದ ಯೂನಿಟ್ ಡೇರೆ ಹಾಕಿದ ಜಾಗ ಕಾಡಿನ ಅಂಚು. ರಾತ್ರಿಯ ಮೌನ ರಕ್ತ ಹೆಪ್ಪು ಗಟ್ಟಿಸುತ್ತಿತ್ತು. ತರೆಗೆಲೆಗಳಿಗೂ...... ಹೆಚ್ಚೇಕೆ ಬೀಸುವ ಗಾಳಿಗೂ ಜೋರಾಗಿ ಬೀಸಲು ನಡುಕ! ಭಾರತೀಯ ಯೋಧರ ರೋಮ ರೋಮವೂ ಕಣ್ಣಾಗಿ ಕಾಯುತ್ತಿರುವ ರೋಚಕ ಸನ್ನಿವೇಶ! ದಣಿದ ದೇಹಕ್ಕೆ ವಿಶ್ರಾಂತಿಯ ಅಗತ್ಯವಿದ್ದರೂ ರೊಚ್ಚಿಗೆದ್ದ ಮನಸ್ಸಿಗೆ ವೈರಿಗಳನ್ನು ನಿರ್ಮೂಲ ಮಾಡುವ ಛಲ!

ಅಂದು ರಾತ್ರಿ ಪಾಳಿಯ ಗಸ್ತು ತಿರುಗುವ ಒಬ್ಬ ಗಾರ್ಡ್ ಆಗಿ ರಾಕೇಶ ನೇಮಿಸಲ್ಪಟ್ಟ. ಕೊರೆಯುವ ಚಳಿಗೆ ಕೈಕಾಲುಗಳು ಮರಗಟ್ಟುತ್ತಿದ್ದರೂ ಮನಸ್ಸಿಗೆ ಇನ್ನೂ ಸ್ಫೂರ್ತಿ ಇದೆ. ಯುದ್ಧ ನಿಂತರೂ ಈ ಪಾಕಿಸ್ತಾನಿಗಳನ್ನು ನಂಬಬಾರದು. ಕಾಲು ಕೆರೆದು ಯುದ್ಧಕ್ಕೆ ಬರುವ ಅವರು ಎಂದಿದ್ದರೂ ಭಾರತಕ್ಕೆ ಕುತ್ತೇ ಸರಿ. ಪಾಕಿಸ್ತಾನೀಯರನ್ನು ನೆನೆಯುವಾಗ ರಾಜೇಶನ ದೇಹದಲ್ಲಿಯ ರಕ್ತ ಕತಕತನೇ ಕುದಿಯುತ್ತದೆ.

ಚಂದ್ರನ ಬೆಳಕು ಮೋಡದ ಮರೆಯಲ್ಲಿ ಸ್ವಲ್ಪ ಮಾತ್ರ ಬೆಳಗುತ್ತಿತ್ತು. ಆ ಬೆಳಕಿನಲ್ಲಿಯೇ ಅಸ್ಪಷ್ಟ ಮಾನವಾಕೃತಿಯೊಂದು ಕಂಡಂತಾಯಿತು ರಾಜೇಶನಿಗೆ. ಒಮ್ಮೆಲೆ ಸೆಟೆದು ನಿಂತ ರಾಜೇಶ್, ಕೈಲಿದ್ದ ಬಂದೂಕು ಗುರಿ ಇಡಲು ಸಿದ್ಧವಾಯಿತು.

“ಥಮ್...!” (ನಿಲ್ಲು)!

ಯೋಧನ ಬಾಯಿಂದ ಹೊರಟ ಸಂಹ ಗರ್ಜನೆ ಎಚ್ಚರ- ನಿದ್ದೆಯಲ್ಲಿದ್ದ ಸೈನಿಕರನ್ನು ಬಡಿದೆಬ್ಬಿಸಿತು. ಎಲ್ಲರ ಮೈಯಲ್ಲೂ ವಿದ್ಯುತ್ಸಂಚಾರ!

ರಾಜೇಶನ ಗರ್ಜನೆಗೆ ಬರುತ್ತಿದ್ದ ವ್ಯಕ್ತಿ ಪ್ರತಿಕ್ರಿಯಿಸಲಿಲ್ಲ; ಮರು ಸಂದೇಶ ನೀಡಲಿಲ್ಲ! ನಡಿಗೆಯನ್ನು ಸ್ತಬ್ಧಗೊಳಿಸಲಿಲ್ಲ!

ಕೆರಳಿದ ರಾಜೇಶ ಮತ್ತೊಮ್ಮೆ ಗರ್ಜಿಸಿದ.

“ಥಮ್! ಕೋನ್ ಆತಾ ಹೈ?” ಸಿಡಿಲು ಬಡಿದಂತೆ ಇಡಿಯ ವಾತಾವರಣವೇ ಪ್ರತಿಕ್ರಿಯಿಸಿತು. ಆದರೆ ಆ ವ್ಯಕ್ತಿಯ ಮೇಲೆ ಯಾವ ಪರಿಣಾಮವನ್ನೂ ಉಂಟು ಮಾಡಲಿಲ್ಲ. ಬದಲಾಗಿ ಎಂಥವನ ತಾಳ್ಮೆಯನ್ನಾದರೂ ಕೆರಳಿಸುವ ಹುಚ್ಚಿ ಮಾತು.

“ತೇರಾ ಬಾಪ್?”

ಆತ ಹೂಂಕರಿಸಿದ. ರಾಜೇಶ ಗುರಿಯಿಟ್ಟು ಗುಂಡಿಯೊತ್ತಿದ!

ನಿಶ್ಯಬ್ದ ವಾತಾವರಣವನ್ನು ಕಲಕಿದ ಗುಂಡು ಮುಂದಿದ್ದ ವ್ಯಕ್ತಿಯ ಗುಂಡಿಗೆಯನ್ನು ಭೇದಿಸಿತು!

ಗಾರ್ಡ್ ಕಮಾಂಡರ್ ಬೆಳಕಿನೊಂದಿಗೆ ಬಂದ. ರೆಪ್ಪೆ ತೆರೆದು ಮುಚ್ಚುವುದರೊಳಗೆ ಬಂದೂಕುಧಾರಿ ಸೈನಿಕರು ಸನ್ನದ್ಧರಾಗಿ ನಿಂತರು. ವೀರ ಯೋಧನಂತೆ ಎದೆ ಸೆಟಿಸಿ ನಿಂತ ರಾಜೇಶನೂ ಮುಂದಿನ ಅಪ್ಪಣೆಗೆ ಕಾಯತೊಡಗಿದ.

“ಕ್ಯಾ ಹೋಗಯಾ?”

ತನ್ನ ಬ್ಯಾಟರಿಯನ್ನು ಸುತ್ತ ಬೆಳಗಿಸಿ ಗಾರ್ಡ್ ಕಮಾಂಡರ್ ಕೇಳಿದ.

“ಕೋಡ್‍ವರ್ಡ್‍ಕಾ ಬಿನಾ ಆದ್‍ಮೀ ಆಗೇ ಬಢಾ, ಮೈನೆ ಆ್ಯಕ್ಷನ್ ಲೇಲಿಯಾ?”

ಸೆಲ್ಯೂಟ್ ಹೊಡೆದು ನಿಂತ ರಾಜೇಶ್ ಉತ್ತರಿಸಿದ. ಬಿದ್ದ ವ್ಯಕ್ತಿಯ ತಪಶೀಲನೆಗೆ ಗಾರ್ಡ್ ಕಮಾಂಡರ್ ತೆರಳಿದ. ಉಳಿದ ಸೈನಿಕರು ಮೂಗಿನ ಹೊಳ್ಳೆಗಳನ್ನು ಅರಳಿಸುತ್ತಾ ವೈರಿಗಳ ಇರುವಿಕೆಯನ್ನು ಪತ್ತೆ ಹಚ್ಚಲು ಪ್ರಯತ್ನಿಸತೊಡಗಿದರು.

ಸಿವಿಲ್ ಉಡುಪಿನಲ್ಲಿ ಇದ್ದ ಅಪರಿಚಿತ ಯಾರೆಂಬುದು ಸ್ಪಷ್ಟವಾಗಲಿಲ್ಲ. ಗೂಢಚಾರಿಯೇ ಇರಬಹುದು ಎಂಬ ಸಂಶಯವರ ಮನದಲ್ಲಿ ಗಟ್ಟಿಯಾಗಿ ನೆಲೆಯೂರಿತು.

ಎಲ್ಲರ ಹಿಂದೆ ನಿಂತು ನೋಡುತ್ತಿದ್ದ ರಾಜೇಶನಿಗೆ ಕತ್ತಲೆಯಲ್ಲಿ ಕಂಡ ಅಸ್ಪಷ್ಟ ಮುಖವನ್ನು ಎಲ್ಲೋ ನೋಡಿದ ನೆನಪಾಯಿತು.

“ಸಾಬ್......, ಸ್ವಲ್ಪ ಮುಖಕ್ಕೆ ಟಾರ್ಚ್ ಬೆಳಗಿ” ಎಂದ ರಾಜೇಶದ ಟಾರ್ಚ್ ಬೆಳಗಿದಾಗ ರಾಜೇಶನ ಸಂಶಯ ದಿಟವಾಯಿತು. ತಲೆ ಗಿರ ಗಿರನೆ ತಿರುಗಿ ಉಸಿರು ನಿಂತ ಅನುಭವ! ಒಂದು ಕ್ಷಣ ಹಿಂದೆ ಎದೆ ಸೆಟೆಸಿ ನಿಂತ ಯೋಧನ ಮೈಯೆಲ್ಲ ಒಮ್ಮೆಲೇ ನಿಶ್ಯಕ್ತ ! ಕಾಲಡಿಯ ಭೂಮಿಯೇ ಕುಸಿಯುತ್ತಿದೆ ಎಂದೆನಿಸಿದಾಗ, “ಹೇ ಭಗವಾನ್” ಎಂದುಸುರಿ ನೆಲಕ್ಕುರುಳಿದ, ನೆರೆದ ಸೈನಿಕರಿಗೆ ಅಚ್ಚರಿ!

ಗಾಯಾಳುವಿನ ಮುಚ್ಚಿದ ಕಣ್ಣುಗಳು ಈಗ ತೆರೆದುಕೊಂಡವು. ತೂಬು ಇಟ್ಟ ಅಣೆಕಟ್ಟಿನಿಂದ ಒಸರುವ ನೀರಿನಂತೆ ಗುಂಡು ಹೊಕ್ಕ ಜಾಗದಿಂದ ರಕ್ತ ಒಸರುತ್ತಿತ್ತು. ಆ ಜಾಗವನ್ನು ಎಡಗೈಯಿಂದ ಬಿಗಿ ಹಿಡಿದು ಬಲಗೈಯಲ್ಲಿ ಅತ್ತಿತ್ತ ಪರದಾಡಿದ. ಬಾಯಿಂದ ಕ್ಷೀಣವಾಗಿ.

“ಬೇ....ಟಾ.....ಬೇಟಾ...” ಎಂಬ ಸ್ವರ ಹೊರಡುತ್ತಿತ್ತು.

“ಬೇಟಾ ...ತೂನೇ ತೋ ಆಪ್ನಿೀ ಕರ್ತವ್ಯ ನಿಭಾಯಿ...ಯೇ ಕಾಮ್ ಕೇಲಿಯೇ ಕಭೀ ನಹೀಪಛ್‍ತಾನ... ಮೈ ತೋ ಇಸೀ ತರ ನಹೀ ಆನಾಥಾ...” ನಿಂತು ನಿಂತು ಹೊರಟ ಅಸ್ಪಷ್ಟ ಮಾತುಗಳು.

( ಮಗೂ... ನಿನ್ನ ಕರ್ತವ್ಯವನ್ನು ನೀನು ಮಾಡಿದೆ. ಈ ಕೆಲಸಕ್ಕಾಗಿ ಯಾವತ್ತೂ ಪಶ್ಚತಾಪ ಪಡಬೇಡ. ನಾನು ಈ ರೀತಿಯಾಗಿ ಬರಬಾರದಿತ್ತು.

ಗಾಯಾಳುವಿನ ಕೈಗಳು ರಾಜೇಶನ ಬೆನ್ನನ್ನು ಸವರುತ್ತಿದ್ದವು. ಗಾಯಾಳುವಿನ ಕಣ್ಣುಗಳಲ್ಲಿ ವಿಲಕ್ಷಣ ಹೊಳಪು! ಮುಖದಲ್ಲಿ ಧನ್ಯತಾ ಭಾವ!

ಮನೆಯೆದುರು ಬಂದು ನಿಂತ ಜೀಪಿನಿಂದ ಇಳಿದ ಮಗನನ್ನು ಕಂಡು ರಂಜಿತಾಳ ಕಣ್ಣಿಂದ ಆನಂದಬಾಷ್ಪಗಳುರುಳಿದವು. ಓಡಿ ಹೋಗಿ ಮಗನನ್ನು ತಬ್ಬಿ ಲೊಚಲೊಚನೇ ಮುದ್ದಿಸಿದಳು. ಯುದ್ಧ ಕ್ಷೇತ್ರದಿಂದ ಸಜೀವವಾಗಿ ಹಿಂತಿರುಗಿದ ಮಗನ ದೇಹದುದ್ದಕ್ಕೂ ಕೈಯಾಡಿಸಿ ಲಟಿಕೆ ಮುರಿದಳು. ಒಳಗೆ ಓಡಿಹೋಗಿ ಆರತಿ ತಂದು ಬೆಳಗಲು ಕೈಯೆತ್ತಿದ ತಾಯಿಯ ಕೈಯನ್ನು ತಡೆದು ಗದ್ಗದಿತನಾಗಿ , “ಮಾ......!” ಅಂದ ರಾಜೇಶ.

ಮಗನ ಕೈಯನ್ನು ಸರಿಸಿ ಆಕೆ ಆರತಿ ಎತ್ತಿದಳು. ಒಳಗೆ ಹೋಗಿ ದೇವರಿಗೆ ತುಪ್ಪದ ದೀಪ ಹಚ್ಚಿದಳು. ರಂಜಿತಳ ಸಂಭ್ರಮವನ್ನು ರಾಕೇಶನೊಂದಿಗೆ ಬಂದಿದ್ದ ಸೈನಿಕರಿಂದಲೂ ನೋಡಲಾಗಲಿಲ್ಲ.

ಮಗನ ಬಳಿ ಬಂದು ಕುಳಿತು,

“ಭಗವಾನ್, ತುಝೆ ಲಾಖ್... ಲಾಖ್... ಶುಕ್ರಿಯಾ...”ಅನ್ನುತ್ತಾ ಮಗನನ್ನೇ ಕಣ್ಣಲ್ಲಿ ತುಂಬಿಕೊಳ್ಳಲು ಪ್ರಯತ್ನಿಸಿದಳು.

“ಮಾ...” ಅನ್ನುತ್ತಾ ಅವಳ ಮಡಿಲಿಗೊರಗಿದ ರಾಜೇಶ ಗಳಗಳನೇ ಅತ್ತ. ಅವನ ನಾಲಿಗೆ ಮರಗಟ್ಟಿ ಹೋಗಿದೆ.

“ಏನಾಯಿತು ಮಗು?” ಮಗನ ತಲೆಯನ್ನು ಮೇಲೆತ್ತಲು ಪ್ರಯತ್ನಿಸಿ ನುಡಿದಳಾಕೆ. ಮಿಲನದ ಸಂತಸದಿಂದಲೋ, ಯುದ್ಧ ರಂಗದಲ್ಲಿ ಪ್ರಾಣಾಂತಿಕ ಸನ್ನಿವೇಶದಿಂದ ಪಾರಾದ ಸಂದರ್ಭವನ್ನೋ ನೆನೆಸಿಯೋ ಮಗ ಅಳುತ್ತಿದ್ದಾನೆಂದು.

ವಿಜಯಿಯಾಗಿ ಸೇನೆಯಿಂದ ಮರಳಿದ ರಾಜೇಶನನ್ನು ಅಭಿನಂದಿಸಲು ಅವನ ಬಂಧು ವರ್ಗದವರೂ ಸೇರಿಸರು. ಆದರೆ ರಾಜೇಶ ತಾಯಿಯ ಮಡಿಲಿನಿಂದ ಮುಖ ಎತ್ತಲಿಲ್ಲ. ಅರ್ಥವಾಗದೆ ಒಬ್ಬರನ್ನೊಬ್ಬರು ನೋಡುತ್ತಿದ್ದಂತೆ ಹೊರಗಡೆ ಮತ್ತೆ ಕೆಲವರು ಆಗಮನ.

“ಮಗೂ...... ನಿನ್ನನ್ನು ಕಾಣದೆ ಒಂದು ಕ್ಷಣವೂ ಇರಲಾಗಲಿಲ್ಲ. ನಿನ್ನಪ್ಪ ನಿನ್ನೆ ಬೆಳಗ್ಗೆಯೇ ನಿನ್ನ ಯುನಿಟ್ಟನ್ನು ಅರಸಿಕೊಂಡು ಹೋದರು.”

“ಮಾ...” ರಾಜೇಶ್ ಗೊಗ್ಗುರ ದನಿಯಿಂದ ಚೀರಿದ.

“ಹೌದು ಮಗೂ... ನಿನ್ನಿಂದ ಸಮಾಚಾರವೇ ಇರಲಿಲ್ಲ. ಕೆಂಡದ ಮೇಲೆ ನಿಂತಂತಾಗಿತ್ತು ನಮ್ಮ ಸ್ಥಿತಿ.

ರಾಜೇಶ್ ಮತ್ತೂ ರೋಧಿಸಿದ. ಆಗಲೂ ರಂಜಿತಾಳಿಗೆ ಮಗನ ತಹ-ತಹದ ಅರಿವುಂಟಾಗಲಿಲ್ಲ. ಅವನ ಕಣ್ಣಲ್ಲಿ ನೀರು ಹರಿಯುವುದಕ್ಕೆ ಕಾರಣವೂ ಗೊತ್ತಾಗಲಿಲ್ಲ.

ಮಗ ಏನಾದರೂ ಅಚಾತುರ್ಯವೆಸಗಿದನೇ? ಯುದ್ಧ ರಂಗದಿಂದ ಹೇಡಿಯಂತೆ ಓಡಿ ಬಂದನೆ? ಎಂದೂ ಅನಿಸದಿರಲಿಲ್ಲ. ಒಂದು ಕ್ಷಣ. ಅಷ್ಟರಲ್ಲೆ ಯಶವಂತ ಸಿಂಗನ ಶವವನ್ನು ಮನೆಯೊಳಗೆ ತಂದಿರಿಸಿದರು ಜವಾನರು. ತನ್ನ ಸುತ್ತ ಇದೇನು ನಡೆಯುತ್ತಿದೆ ಎಂದು ಅರ್ಥವಾಗಲಿಲ್ಲ ರಂಜಿತಾಳಿಗೆ. “ಕ್ಯಾ ಬಾತ್ ಹೈ ಬೇಟಾ... ಎನ್ನುತ್ತ ಮಗನನ್ನೊಮ್ಮೆ ಬಲವಾಗಿ ಕುಲುಕಿದಳು.

“ಮಾ... ನಿನ್ನ ಕುಂಕುಮ ಭಾಗ್ಯವನ್ನು ಅಳಿಸಿದವನು ನಾನೇ ಮಾ...”

ಮತ್ತೆ ರೋಧನ

ರಂಜಿತ ಶಿಲೆಯಂತಾದಳು.

ತಾಯಿಯ ಮೌನ ರಾಕೇಶನಿಗೆ ಇರಿಯುವ ಶೂಲವಾಯಿತು.

“ಅಮ್ಮಾ ಮಾತನಾಡು...ಅಮ್ಮಾ... ಹೇಳು...... ಅಪ್ಪನನ್ನೇ ಕೊಂದ ಕೊಲೆಗಡುಕನಿಗೆ ಏನಾದರೂ ಶಿಕ್ಷೆ ನೀಡು.”

ರಾಜೇಶ ಗೋಡೆಗೆ ತಲೆ ಚಚ್ಚತೊಡಗಿದ. ಅವನ ತಲೆಯನ್ನು ತನ್ನೆದೆಗೆ ಆನಿಸಿ ಗದ್ಗದ ಕಂಠದಿಂದ ರಂಜಿತ ಅಂದಳು. “ಏನದು ಮಗೂ ಸರಿಯಾಗಿ ಹೇಳು.”

“ನಾನು ರಾತ್ರಿ ಪಾಳಯದಲ್ಲಿ ಗಸ್ತು ತಿರುಗುತ್ತಿದ್ದೆ. ಆಗ ಅಲ್ಲಿಗೆ ಬಂದರು. ತಂದೆಯ ಗುರುತು ನನಗೆ ಸಿಗಲಿಲ್ಲ. ಕತ್ತಲೆಯಲ್ಲಿ ಮಸುಕು ಮಸುಕಾಗಿ ಕಂಡ ವ್ಯಕ್ತಿಯನ್ನು ವೈರಿಯೇ ಇರಬಹುದೆಂದು ಗ್ರಹಿಸಿದೆ. ನಿಯಮದಂತೆ ಗುರುತಿಗಾಗಿ ಕೋಡ್‍ವರ್ಡ್ ಕೇಳಿದೆ. ಆದರೆ ಅದರ ಬಗ್ಗೆ ಗೊತ್ತಿರದ ತಂದೆ ನನ್ನ ಸ್ವರದ ಗುರುತು ಹಿಡಿದು ನಿನ್ನಪ್ಪ ಎಂದರು. ಆ ಸ್ವರದಲ್ಲಿ ಅಡಗಿದ್ದ ಮಮತೆಯೂ ನನ್ನರಿವಿಗೆ ಬರಲಿಲ್ಲ. ಬದಲಾಗಿ ವೈರಿಯ ಉದ್ಧಟತನದ ಮಾತೆಂದು ಭ್ರಮಿಸಿ ಗುಂಡು ಹಾರಿಸಿದೆ.”

ಬಲು ಪ್ರಯಾಸದಿಂದ ದುಃಖವನ್ನು ತಹಬಂದಿಗೆ ತಂದು ನುಡಿದ ರಾಜೇಶ ತಾಯಿಯತ್ತ ನೋಡಿದ. ಮಗನ ಕಣ್ಣುಗಳಲ್ಲಿಯ ವೇದನೆಯ ಆಳವನ್ನು ಅರಿತ ತಾಯಿ ಮಗನನ್ನೇ ಸಮಾಧಾನಿಸಿದಳು.

“ನೀನು ನಿನ್ನ ಕರ್ತವ್ಯ ಮಾಡಿದೆ ಮಗೂ. ಭಾರತಾಂಬೆಯ ರಕ್ಷಣೆಗೆ ನಿಂತ ನಿನ್ನ ಗಮನ ವೈರಿಯತ್ತಲೇ ಇರಬೇಕಾದುದು. ನಿನ್ನಪ್ಪ ಯುದ್ಧ ಕ್ಷೇತ್ರಕ್ಕೆ ಹೋಗಬಾರದಿತ್ತು. ಆದರೂ ಮನಸ್ಸು ಕೇಳಲಿಲ್ಲ. ನಿನ್ನನ್ನು ಕಾಣಬೇಕೆಂಬ ಹಂಬಲ ಅವರನ್ನಲ್ಲಿಗೆ ಎಳೆದೊಯ್ದಿತು. ಕರುವನ್ನು ಹಿಂಬಾಲಿಸಿದ ಹಸುವಿನಂತೆ ನಿನ್ನನ್ನರಸಿ ಹೋದರು. ನಿನ್ನದು ಯಾವ ತಪ್ಪೂ ಇಲ್ಲ. ನಿನ್ನ ಕರ್ತವ್ಯವನ್ನು ದಕ್ಷತೆಯಿಂದ ಮಾಡಿ ಅವರ ಕೀರ್ತಿಯನ್ನು ಬೆಳಗಿದೆ.”

ಮಗನಿಗಾಗಿ ತನ್ನ ದುಃಖವನ್ನು ನುಂಗಿದಳಾಕೆ. ನೆರೆದವರೆಲ್ಲರೂ ತಲೆದೂಗಿದರು ರಂಜಿತಳ ಮಾತಿಗೆ.

ಸಕಲ ಗೌರವದೊಂದಿಗೆ ಸೇನೆಯೇ ಯಶವಂತಸಿಂಗನ ಅಂತ್ಯಕ್ರೀಯೆ ನಡೆಯಿಸಿತು.