Click here to Download MyLang App

ವೀರಗಲ್ಲು - ಬರೆದವರು : ಹರೀಶ ಕೃಷ್ಣಪ್ಪ

ದೊಡ್ಡಬಳ್ಳಾಪುರದ ಸ್ಥಾಪಕ ಮಲ್ಲಭೈರೇಗೌಡ ಕೋಟೆ ಪೇಟೆಗಳನ್ನು ಕಟ್ಟಿಸಿದ ನಂತರ, ಅವನ ಆಪ್ತಮಿತ್ರನಾದ ರಾಜೇಗೌಡ ಸಂಸಾರ ಸಮೇತನಾಗಿ ತನ್ನ ಹಳ್ಳಿಯನ್ನು ಬಿಟ್ಟು ಪೇಟೆಯಲ್ಲೇ ನೆಲೆಸಿದ್ದನು. ಪ್ರತಿ ದಿನ ವಾಯವಿಹಾರಕ್ಕೆ ಮಲ್ಲಭೈರೇಗೌಡ ಕಟ್ಟಿಸಿದ್ದ ನಾಗರ ಕೆರೆಯ ಮೇಲೆ ಹೋಗುವುದು ಇಬ್ಬರಿಗೂ ರೂಢಿ, ಅಂದೂ ಅದೇ ರೀತಿ ಅಲ್ಲಿಗೆ ಬಂದಿದ್ದರು. ಕೆರೆಯು ಮಳೆಯ ನೀರಿನಿಂದ ತುಂಬಿ ಕಣ್ಣುಗಳಿಗೆ ಮುದ ನೀಡುತ್ತಿತ್ತು. ಕೆರೆಯ ಕಟ್ಟೆಗಳನ್ನು ಕಲ್ಲುಗಳಿಂದ ಬಹಳ ಸೊಗಸಾಗಿ ಕಟ್ಟಿಸಿದ್ದನು.ಅದಕ್ಕೆ ಮೆಟ್ಟಿಲುಗಳು ಅದರ ಮೇಲೆ ಹನುಮಂತ ದೇವರ ದೇವಸ್ಥಾನವೂ ಮಲ್ಲಭೈರೇಗೌಡನ ಆಣತಿಯಂತೆ ನಿರ್ಮಿತವಾಗಿತ್ತು. ಒಂದು ಕಡೆ ಬಾನಿನ ನೀಲಿಯ ಬಣ್ಣದ ಪ್ರತಿಬಿಂಬದಿಂದ ಕೆರೆ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತಿತ್ತು. ಇನ್ನೊಂದು ಕಡೆ ಹಸಿರು ಪೈರುಗಳಿಂದ ಹಸಿರಾಗಿ ಕಣ್ಣಿಗೆ ತಂಪನ್ನು ನೀಡುತಿತ್ತು. ನಡುವೆ ಕಟ್ಟೆಯ ಹಾದಿ. ಅದರ ಜೊತೆಗೆ ಮುಂಜಾನೆಯ ಹಕ್ಕಿಗಳ ಚಿಲಿಪಿಲಿ. ಅಲ್ಲೊಂದು ಹೊಸ ವಾತಾವರಣವನ್ನೇ ಸೃಷ್ಟಿಸಿತ್ತು. ಆದರೂ ಅಂದೇಕೋ ರಾಜೇಗೌಡನಿಗೆ ತನ್ನ ಹಳ್ಳಿಗೆ ಹೋಗಬೇಕೆಂದು ಬಾರಿ ಹಂಬಲವಾಯಿತು. ತಕ್ಷಣ....

ಪ್ರಭುಗಳೇ!! ಇಂದು ಏಕೋ ನನ್ನ ಮನ ನನ್ನ ಹಳ್ಳಿಯ ಕಡೆ ಹೋಗಿ ಬರಬೇಕೆಂದು ಹೇಳುತ್ತಿದೆ. ಅಪ್ಪಣೆಯಿತ್ತರೆ , ಈಗ ಹೋಗಿ ಸಂಜೆಯ ಹೊತ್ತಿಗೆ ಬರುತ್ತೇನೆ.

ಮಿತ್ರ!!ನನಗೂ ಅದೇ ರೀತಿಯ ಆಲೋಚನೆ ಬರುತ್ತಿದೆ. ನನಗೂ ನಿನ್ನ ಹಳ್ಳಿಯನ್ನು ಮತ್ತೊಮ್ಮೆ ನೋಡುವ ಆಸೆಯಾಗಿದೆ. ಈಗಲೇ ಹೋಗೋಣ ನಾನೂ ಬರುತ್ತೇನೆ ಎಂದು ಅವನ ಉತ್ತರಕ್ಕೂ ಕಾಯದೇ. ಸೇವಕರಿಗೆ ಎರಡು ಕುದುರೆಗಳನ್ನು ಸಿದ್ಧಪಡಿಸುವಂತೆ ಆಜ್ಞಾಪಿಸಿದ.

ಪೇಟೆಯಿಂದ ಆ ಹಳ್ಳಿ ಹೆಚ್ಚು ದೂರವಿರಲಿಲ್ಲ. ಕುಂದುರೆಗಳನ್ನು ಬೇಕಂತಲೇ ನಿಧಾನಗತಿಯಿಂದ ಓಡಿಸುತ್ತಿದ್ದರು. ಮೊದಲಿದ್ದ ಹಾದಿಗಿಂತ ಈಗ ದಾರಿ ವಿಶಾಲವಾಗಿದೆ. ಅಲ್ಲಲ್ಲಿ ಕಾವಲುದಳದವರು ದುಷ್ಟ ಮೃಗಗಳಿಂದ ದಾರಿಹೋಕರ ರಕ್ಷಣೆಗೆ ನಿಂತಿದ್ದಾರೆ. ಇಕ್ಕೆಲಗಳಲ್ಲಿ ಸೊಂಪಾಗಿ ಬೆಳೆದಿರುವ ಮರಗಿಡಗಳು. ಹೋಗುತ್ತಿರುವುದು ನಂದಿಬೆಟ್ಟದ ತಪ್ಪಲಿನಲ್ಲಿ ಅರ್ಕಾವತಿ ನದಿಯ ತೀರಕ್ಕೆ ಬಹಳ ಸಮೀಪ. ನದಿಯ ಕಡೆಯಿಂದ ತಂಪಾದ ಗಾಳಿ ಬೀಸುತ್ತಿದೆ.ಮಲ್ಲಭೈರೇಗೌಡನಂತೂ ಮೈಮರೆತು ಕಣ್ಣುಮುಚ್ಚಿಕೊಂಡಿದ್ದಾನೆ. ಕುದುರೆ ಮಾತ್ರ ಸುಮ್ಮನೆ ಮುಂದಕ್ಕೆ ಹೋಗುತ್ತಿದ್ದೆ.

ರಾಜೇಗೌಡನದೂ ಅದೇ ಪರಿಸ್ಥಿತಿ ಆದರೆ ಅವನು ಎಚ್ಚರದಿಂದ್ದಿದ್ದಾನೆ. ಮಲ್ಲಭೈರೇಗೌಡನ ಜೊತೆ ಈಗ ಆತ ಒಬ್ಬನೇ ಇದ್ದಾನೆ. ರಾಜನನ್ನು ಯಾವುದೇ ಅಪಾಯ ಜರುಗದಂತೆ ಕಾಪಾಡುವುದು ಅವನ ಕರ್ತವ್ಯ. ಏಕೆಂದರೆ ರಕ್ಷಣಾ ಭಟರು ಅವರಿಗಿಂತ ಸ್ವಲ್ಪ ದೂರದಲ್ಲಿ ಬರುತ್ತಿದ್ದಾರೆ.

ಪ್ರಭು!! ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಮೈ ಮರೆತಂತಿದೆ.?

ಮಿತ್ರ!! ರಾಜಶೇಖರ , ನಿನ್ನ ಹಳ್ಳಿಗೆ ಪ್ರಥಮ ಬಾರಿ ಬಂದಾಗಲೇ ಇಲ್ಲಿನ ವಾತಾವರಣವನ್ನು ನೋಡಿ ಬಹಳ ಸಂತೋಷಗೊಂಡಿದ್ದೆ. ಈಗ ಮತ್ತೆ ಬರುತ್ತಿರುವುದು ಇಂದೊಂದು ವಿಶೇಷವೇ ಸರಿ. ಈ ಬಾರಿ ಕಳೆದ ಬಾರಿಗಿಂತಲೂ ವಿಭಿನ್ನ ಅನುಭವವನ್ನು ಕೊಡುತ್ತಿದೆ. ಅದಕ್ಕೆ ನಿಧಾನವಾಗಿಯೇ ಹೋಗೋಣ , ಅವಸರವೇಕೆ?

ರಾಜೇಗೌಡ ನಗುತ್ತಾ ಪ್ರಭುಗಳ ಚಿತ್ತದಂತೇ ಹಾಗಲಿ, ಎಂದು ಅವನ ಜೊತೆ ಪಯಣ ಮುಂದುವರೆಸಿದ.ಸೂರ್ಯನು ನೆತ್ತಿಗೆ ಬರುವುದಕ್ಕೂ ಮುಂಚೆ ಅವರು ಹಳ್ಳಿಯನ್ನು ಸೇರಿದರು. ಆ ಹಳ್ಳಿಯ ಮುಖ್ಯ ದ್ವಾರದಲ್ಲಿ ಒಂದು ವೀರಗಲ್ಲಿತ್ತು. ಅದನ್ನು ಮಲ್ಲಭೈರೇಗೌಡ ಗಮನಿಸಿದ. ಅದರಲ್ಲಿ ಏನೋ ವಿಶೇಷತೆಯಿತ್ತು. ಮೊದಲ ಬಾರಿ ನೋಡಿದಾಗಲೂ ಅದೇ ರೀತಿಯ ಅನುಭವ. ಆಗ ಅದರ ಬಗ್ಗೆ ಕೇಳೋಣವೆಂದರೆ ಹುಲಿಯ ಬೇಟೆಯ ಕಾರ್ಯವಿತ್ತು. ಈ ಬಾರಿ ಅದರ ಬಗ್ಗೆ ತಿಳಿದುಕೊಳ್ಳಲೇಬೇಕು ಎಂದು ನಿರ್ಧರಿಸಿದ.

ಇಬ್ಬರೂ ಹಳ್ಳಿಯನ್ನು ವೀಕ್ಷಿಸಿ, ರಾಜೇಗೌಡ ತನ್ನ ಹೊಲಗದ್ದೆಗಳ ಪರಿಸ್ಥಿತಿಯನ್ನು ನೋಡಲು. ಅವು ಸಮೃದ್ಧಿಯಿಂದಲೇ ಇದ್ದದ್ದನ್ನು ಕಂಡು ಸಂತಸಗೊಂಡನು. ಅದನ್ನು ನೋಡಿಕೊಳ್ಳುತ್ತಿದ್ದ ರೈತರನ್ನು ಅಭಿನಂದಿಸಿದ. ನಂತರ ಹಳ್ಳಿಗರ ಯೋಗಕ್ಷೇಮವನ್ನು ವಿಚಾರಿಸಿ ,ಹಳ್ಳಿಯ ಪಕ್ಕದ ಗುಡ್ಡದ ಮೇಲಿದ್ದ ಪುರಾತನ ವಿಶ್ವನಾಥ ದೇವಸ್ಥಾನಕ್ಕೆ ಭೇಟಿಕೊಟ್ಟರು. ಅಲ್ಲಿ ದೇವರ ದರುಶನ ಪಡೆದುಕೊಂಡರು. ಗುಡ್ಡದ ಮೇಲಿಂದ ಆ ಹಳ್ಳಿಯನ್ನು ನೋಡುವುದು ಮತ್ತೊಂದು ವಿಶಿಷ್ಟವಾದ ಅನುಭವ. ಸುಂದರ ಪಾಕ್ಷಿಕ ನೋಟ. ಅಲ್ಲಿಯೇ ಒಂದು ಬಂಡೆಯ ಮೇಲೆ ಕುಳಿತು,

ಮಿತ್ರ!! ನಂದಿ ಬೆಟ್ಟಕ್ಕೆ ಹೋದಾಗ.ಇದೇ ರೀತಿಯ ಬಂಡೆಯ ಮೇಲೆ ಕುಳಿತು ಹರಟೆ ಹೊಡೆಯುತ್ತೇವೆ. ಒಮ್ಮೆ ಅಲ್ಲಿ ಹುಲಿಯೊಂದು ಬಂದಿತ್ತು ಎಂದು , ತಾನು ನಂದಿ ಬೆಟ್ಟದಲ್ಲಿ ಮಾಡಿದ ಹುಲಿಯ ಬೇಟೆಯ ಬಗ್ಗೆ ಹೇಳುತ್ತಿರಲು, ಅಲ್ಲಿ ಸಮಯ ಹೋದದ್ದೇ ತಿಳಿಯಲಿಲ್ಲ. ಸೂರ್ಯನು ತನ್ನ ಪಯಣವನ್ನು ಮುಗಿಸುವ ಆತುರದಲ್ಲಿದ್ದನು. ಅದನ್ನರಿತ ಇಬ್ಬರೂ ಸೂರ್ಯನು ಮುಳುಗುವ ಹೊತ್ತಿಗೆ ಮುಂಚೆ ಹಿಂದಿರುಗಬೇಕೆಂದು ನಿರ್ಧರಿಸಿ. ತಪ್ಪಲಲ್ಲಿ ಕಟ್ಟಿದ್ದ ಕುದುರೆಯನ್ನೇರಿ ಕೋಟೆಯ ಕಡೆ ತಮ್ಮ ಸವಾರಿಯನ್ನು ಆರಂಭಿಸಿದರು. ಹಳ್ಳಿಯನ್ನು ದಾಟಿ, ಮುಖ್ಯ ದ್ವಾರದ ಬಳಿ ಬರಲು.ಮಲ್ಲಭೈರೇಗೌಡನ ದೃಷ್ಟಿ ಮತ್ತೆ ಆ ವೀರಗಲ್ಲಿನ ಮೇಲೆ ಹೋಯಿತು.

ಮಿತ್ರ!! ಈ ವೀರಗಲ್ಲನ್ನು ನೋಡಿದೆಯಾ? ಇದರಲ್ಲಿ ಏನೋ ವಿಶೇಷತೆಯಿದೆ. ಹುಲಿಯನ್ನು ಕೊಂದು ಇಲ್ಲವೇ, ಶತ್ರುಗಳೊಡನೆ ಹೋರಾಡಿ ಮಡಿದ ವೀರರ ಗೌರವವನ್ನು ಸೂಚಿಸುವ ವೀರಗಲ್ಲುಗಳನ್ನು ನೋಡಿದ್ದೇನೆ. ಆದರೆ ಇದು ವಿಚಿತ್ರವಾಗಿದೆ. ಇಡೀ ಕಲ್ಲಿನಲ್ಲಿ ಒಬ್ಬ ವೀರಬಾಲಕನು ಒಂದು ಕೈಯಲ್ಲಿ ಖಡ್ಗವನ್ನು ಮತ್ತೊಂದು ಕೈಯಲ್ಲಿ ದನಗಳನ್ನು ಮೇಯಿಸುವಾಗ ಉಪಯೋಗಿಸುವ ಕೋಲನ್ನು ಹಿಡಿದಿದ್ದಾನೆ. ಎಡಗಾಲಿನ ಕೆಳಗೆ ಹುಲಿಯ ಲಾಂಛನವಿರುವ ಗುರಾಣಿ ಬಿದ್ದಿದೆ.ತಲೆಕೂದಲನ್ನು ಹಳ್ಳಿಗರು ಕಟ್ಟುವ ರೀತಿಯಲ್ಲಿ ಕಟ್ಟಿದ್ದಾನೆ.ಆದರೆ ಅವನ ಬೆನ್ನ ಹಿಂದೆ ಶತ್ರುಗಳ ಬಾಣವೊಂದು ನಾಟಿದೆ. ಅವನ ಹಿಂದೆ ಹಸುಗಳು ಹಿಂಬಾಲಿಸುತ್ತಿವೆ. ಅವುಗಳ ಮುಗ್ದತೆ ಮತ್ತು ಸೌಮ್ಯತೆಯನ್ನು , ವೀರಬಾಲಕನ ಶೌರ್ಯವನ್ನು ,ಸಾಧಿಸಿದ ಸಾಧನೆಯ ಬಗ್ಗೆ ಹೆಮ್ಮೆಯನ್ನು ತೋರಿಸುತ್ತಿರುವ , ಶಿಲ್ಪಿಯ ಕೈ ಚಳಕ ನಿಜಕ್ಕೂ ಅದ್ಭುತ. ಏನಿದರ ವಿಶೇಷತೆ?
ಆತನ ಪ್ರಶ್ನೆಯನ್ನು ಆಲಿಸಿದ ರಾಜೇಗೌಡ,

ಪ್ರಭು!! ಹೊಯ್ಸಳರ ದಂಡನಾಯಕ ಗಂಗರಾಜ ಕ್ರಿಶ ೧೧೧೬ ರಲ್ಲಿ ಈ ಪ್ರದೇಶವನ್ನು ಚೋಳರ ಆಕ್ರಮಣದಿಂದ ರಕ್ಷಿಸಿ , ಅವರನ್ನು ಇಲ್ಲಿಂದ ಓಡಿಸಿದ. ಆ ಸಮಯದಲ್ಲಿ ಅವನಿಗೆ ಇಲ್ಲಿನ ಹಳ್ಳಿಗರು ಬಹಳ ಸಹಾಯ ಮಾಡಿದರು. ಸಹಾಯ ಮಾಡಿದವರಲ್ಲಿ ಈ ಬಾಲಕನೂ ಒಬ್ಬ. ಬಾಲಕನ ಹೆಸರು ತಿಳಿಯದಿದ್ದರೂ, ಈ ವೀರಗಲ್ಲನ್ನು ಅವನ ಗೌರವಾರ್ಥ ನಿರ್ಮಿಸಿದ್ದಾರೆ. ಅವನಿಗೆ "ವೀರಗಂಗ" ನೆಂಬ ಬಿರುದನ್ನೂ ಕೊಟ್ಟಿದ್ದಾರೆ.

ಸ್ವಲ್ಪ ವಿವರವಾಗಿ ಅವನ ಬಗ್ಗೆ ತಿಳಿಸುವೆಯಾ?

ಪ್ರಭು!! ಆ ಸಮಯದಲ್ಲಿ ಹೊಯ್ಸಳ ವಿಷ್ಣುವರ್ಧನ ಚೋಳರನ್ನು ತಲಕಾಡಿನಿಂದ ಸಂಪೂರ್ಣವಾಗಿ ಸೋಲಿಸಿದ ನಂತರ , ಚೋಳರ ಕಣ್ಣು ಈ ಪ್ರದೇಶದ ಮೇಲೆ ಬಿತ್ತು. ವಿಷ್ಣುವರ್ಧನನ ದಂಡನಾಯಕ ಗಂಗರಾಜ ಚೋಳರಿಂದ ಸಾಕಷ್ಟು ಪ್ರದೇಶಗಳನ್ನು ಗೆದ್ದುಕೊಂಡಿದ್ದ. ಆದರೂ ಬಳ್ಳಾಪುರದ ದಕ್ಷಿಣದ ಕೆಲವು ಭಾಗ ಇನ್ನೂ ಅವರ ಹಿಡಿತದಲ್ಲೇ ಇತ್ತು. ಹಳ್ಳಿಗರು ಗಂಗರಾಜನ ಪರ ನಿಂತಿದ್ದರು. ಗಡಿಯ ಪ್ರದೇಶದ ಹಳ್ಳಿಗರು, ತಾವು ಬೆಳೆದ ದವಸ ಧಾನ್ಯಗಳು ಶತ್ರುಗಳಿಗೆ ಸಿಗದಂತೆ, ಬಚ್ಚಿಟ್ಟಿದ್ದರು. ಆಹಾರ ಸಿಗದೆ ಬಹುಪಾಲು ಸೈನಿಕರು ಹಿಂದಕ್ಕೆ ಹೋಗುವಂತೆ ಮಾಡಿದ್ದರು. ಶತ್ರು ಸೈನಿಕರು ಗಡಿಯ ಹಳ್ಳಿಗರನ್ನು ಪೀಡಿಸುತ್ತಿದ್ದರು. ಮಾಕಳಿ ಬೆಟ್ಟದ ತಪ್ಪಲಲ್ಲಿದ್ದ ಒಂದು ಹಳ್ಳಿಯನ್ನು ಶತ್ರು ಸೈನಿಕರು ಮುತ್ತಿ, ಅಲ್ಲಿಯೇ ಡೇರೆಯನ್ನು ಹಾಕಿ. ಅವರನ್ನು ಗೃಹಬಂಧನದಲ್ಲಿಟ್ಟಿದ್ದರು. ಇದರಿಂದ ಹಲವು ಹಳ್ಳಿಗರು , ಆ ಹಳ್ಳಿಯನ್ನು ಬಿಟ್ಟು ಹತ್ತಿರದ ಕಾಡುಗಳಲ್ಲಿ ವಾಸ ಮಾಡುತ್ತಿದ್ದರು. ಕೆಲವರು ಬಂದು ಗಂಗರಾಜನ ಬಳಿ ತಮ್ಮ ಅಳಲನ್ನು ತೋಡಿಕೊಂಡರು. ಶತ್ರುಗಳ ಮೇಲೆ ಬೀಳುವುದಕ್ಕಿಂತ ಮುಂಚೆ ಅವರ ಬಲಾಬಲಗಳನ್ನು ಪರೀಕ್ಷಿಸಬೇಕು. ಸೈನಿಕನನ್ನು ಕಳಿಸಿದರೆ ಅಪಾಯ, ಗೂಢಾಚಾರರು ಇನ್ನೂ ವಿಷಯವನ್ನು ತರುವುದರಲ್ಲೇ ಇದ್ದಾರೆ. ಯಾರನ್ನು ಕಳಿಸುವುದು ಎಂದು ಯೋಚಿಸುತ್ತಿರಲು. ಅದನ್ನು ಗಮನಿಸಿದ ದನಕಾಯುವ ಹುಡುಗನೊಬ್ಬ ತಾನೇ ಮುಂದೆ ಬಂದು.

ಮಹಾಪ್ರಭು!! ಈ ಕೆಲಸವನ್ನು ನಾನು ಮಾಡಿಕೊಂಡು ಬರುತ್ತೇನೆ. ನಾನು ಆ ಹಳ್ಳಿಯವನೇ , ಅಲ್ಲಿಗೆ ಹೋಗಿ ಬರುವ ಎಲ್ಲಾ ಮಾರ್ಗಗಳು ಗೊತ್ತು. ಖಂಡಿತಾ ನಿಮಗೆ ಬೇಕಾದ ಮಾಹಿತಿಯನ್ನು ತರುತ್ತೇನೆ.

ಅದನ್ನು ಕೇಳಿ ಗಂಗರಾಜರು ಬಾಲಕನ ಧೈರ್ಯಕ್ಕೆ ಮೆಚ್ಚಿಗೆಯನ್ನು ಸೂಚಿಸಿದರಾದರೂ , ಅವನನ್ನು ಕಳಿಸಲು ಒಪ್ಪಲಿಲ್ಲ.

ಮಹಾಪ್ರಭು!! ಬಾಲಕನೆಂದು ಯೋಚಿಸದಿರಿ.ನನಗೆ ಆತ್ಮ ವಿಶ್ವಾಸವಿದೆ, ಈ ಕಾರ್ಯ ನಾನು ಸಾಧಿಸುತ್ತೇನೆ.

ನೀನಿನ್ನು ಪುಟ್ಟ ಬಾಲಕ, ಅವರಿಂದ ನಿನ್ನ ಪ್ರಾಣಕ್ಕೆ ಅಪಾಯ. ನಾನಿದಕ್ಕೆ ಒಪ್ಪಲಾರೆ.

ಕಂಸನನ್ನು ಕೊಂದ ಶ್ರೀಕೃಷ್ಣನು ಬಾಲಕನೇ , ಬಲಿಯನ್ನು ತುಳಿದ ವಾಮನನೂ ಬಾಲಕನೇ.ಆದರೆ ಅವರು ಆ ಕಾರ್ಯಗಳನ್ನು ಸಾಧಿಸಲಿಲ್ಲವೇ?ದಯವಿಟ್ಟು ಅವಕಾಶ ಕೊಡಿ ಆ ಕಾರ್ಯವನ್ನು ನಾನು ಸಾಧಿಸಿಯೇ ತೀರುತ್ತೇನೆ.

ಗಂಗರಾಜ ಕೊನೆಗೂ ಒಪ್ಪಿಗೆಯನ್ನು ಕೊಡಲಿಲ್ಲ.

ಆದರೆ ಬಾಲಕ ತನ್ನ ಛಲವನ್ನು ಬಿಡಲಿಲ್ಲ. ತಾನು ಆ ಕಾರ್ಯವನ್ನು ಸಾಧಿಸಲು ಏಕಾಂಗಿಯಾಗಿ ತನ್ನ ಹಸುಗಳೊಂದಿಗೆ ಹೊರಟ.

ಅರ್ಕಾವತಿ ನದಿಯ ದಕ್ಷಿಣದ ದಂಡೆಯ ಬಳಿ ಬಂದು ತಲುಪಿದನು. ಅಲ್ಲಿಂದ ಮಾಕಳಿ ಬೆಟ್ಟ ತುಂಬಾ ಸುಂದರವಾಗಿ ಕಾಣುತ್ತಿತ್ತು. ಅದರ ಕೆಳಗೆ ನನ್ನ ಹಳ್ಳಿ , ಶತ್ರುಗಳ ವಶದಲ್ಲಿದೆ ಎಂದು ವಿಷಾದದಿಂದಲೇ ಮುಂದುವರೆದ. ಅರ್ಕಾವತಿ ನದಿಯು ಸಣ್ಣದಾಗಿಯೇ ಹರಿಯುತ್ತಿತ್ತು. ನದಿಯ ದಂಡೆಯ ಇಕ್ಕೆಲಗಳು ಹಸಿರಿನಿಂದ ಕಣ್ಮನ ಸೆಳೆಯುವಂತಿತ್ತು. ಹಸುಗಳಿಗೆ ಬೇಕಾದ ಹುಲ್ಲು ಸಮೃದ್ಧವಾಗಿ ಬೆಳೆದಿತ್ತು. ಹಸುಗಳನ್ನು ಅಲ್ಲಿಯೇ ಮೇಯಲು ಬಿಟ್ಟು.ಈಜಿಕೊಂಡು ಹೋದರೆ ಶತ್ರುಗಳಿಗೆ ಅನುಮಾನ ಬರುತ್ತದೆ. ನದಿಯ ಇನ್ನೊಂದು ಬದಿಗೆ ಹೋಗಲು ಅಲ್ಲೊಂದು ಮರದಿಂದ ಮಾಡಿದ ಸಣ್ಣ ಸೇತುವೆಯಿತ್ತು. ಅದರ ಮೂಲಕವೇ ಹೋಗಲು ನಿರ್ಧರಿಸಿದ.

ಅಲ್ಲಿದ್ದ ಶತ್ರು ಕಾವಲು ಸೈನಿಕ ತಡೆದು,

ನಿಲ್ಲು!! ಬಾಲಕ ಎಲ್ಲಿಗೆ ಹೋಗುತ್ತಿದ್ದಿಯ? ಈ ಹಳ್ಳಿಗೆ ಯಾರೂ ಬರುವಂತಿಲ್ಲ, ಇದು ಸಂಪೂರ್ಣ ನಮ್ಮ ಹಿಡಿತದಲ್ಲಿದೆ.

ಸೈನಿಕರೇ!! ಈ ಹಳ್ಳಿಯಲ್ಲಿ ನನ್ನ ವಯಸ್ಸಾದ ಅಜ್ಜಿ ವಾಸಿಸುತ್ತಿದ್ದಾಳೆ. ಅವಳು ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಅವಳನೊಮ್ಮೆ ನೋಡಲು ಬಂದಿದ್ದೇನೆ.ದಯವಿಟ್ಟು ಅವಕಾಶ ನೀಡಿ.

ಸೈನಿಕನಿಗೆ ಬಾಲಕನ ದೈನ್ಯ ಸ್ಥಿತಿಯನ್ನು ನೋಡಿ ಮರುಕ ಬಂದು, ಅವನನ್ನು ತಂಡದ ನಾಯಕನ ಬಳಿ ಕರೆದುಕೊಂಡು ಹೋಗಿ, ಅವನ ಕೋರಿಕೆಯನ್ನು ತಿಳಿಸಿದ.

ತಂಡದ ನಾಯಕ ಬಾಲಕನನ್ನು ನೋಡಿ ನಕ್ಕನು. 'ಹಳ್ಳಿಗರನ್ನು ಮನೆಯಲ್ಲಿಯೇ ಉಳಿಯಲು ಆದೇಶಿಸಿದ್ದೇವೆ, ಆ ಆದೇಶವನ್ನು ನೀನು ಪಾಲಿಸಬೇಕು ತಿಳಿಯಿತೇ? ಎಂದು ಗಂಭೀರವಾಗಿ ಹೇಳಿದ.

ಖಂಡಿತಾ!! ಪಾಲಿಸುತ್ತೇನೆ. ಅನಾರೋಗ್ಯದ ಅಜ್ಜಿಯನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ.

ಅದು ಸರಿ ಆದೇಶ ಉಲ್ಲಂಘನೆಯಾದರೆ ನಿನಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಗಡುಸಾದ ಧ್ವನಿಯಲ್ಲಿ ಹೇಳಿ, ಪಕ್ಕದಲ್ಲಿದ್ದ ಇಬ್ಬರು ಸೈನಿಕರನ್ನು ಕರೆದು ಬಾಲಕನು ಸೇರಬೇಕಿದ್ದ ಮನೆಗೆ ಕರೆದುಕೊಂಡು ಹೋಗ ಬೇಕೆಂದು ಆಜ್ಞಾಪಿಸಿದ.

ಇಬ್ಬರು ಸೈನಿಕರು ಅವನನ್ನು ತಮ್ಮ ಡೇರೆಯ ಮೂಲಕ ಕರೆದುಕೊಂಡು ಹೋಗುತ್ತಿರುವಾಗ, ಕಣ್ಣಳತೆಯಲ್ಲೇ ಎಷ್ಟು ಕಾಲಾಳುಗಳು, ಎಷ್ಟು ಅಶ್ವದಳದವರು, ಯಾವ ಯಾವ ಆಯುಧ ಎಷ್ಟೆಷ್ಟಿವೆ ಎಂದು ಮನದಲ್ಲೇ ಲೆಕ್ಕಾಚಾರಮಾಡಿಕೊಂಡ. ಮತ್ತು ಆ ಡೇರೆಯಿಂದ ನದಿಯು ಎಷ್ಟು ದೂರದಲ್ಲಿದೆ ಎಂಬುದನ್ನು ತಿಳಿದುಕೊಂಡ. ಅವನು ಸೇರಬೇಕಾದ ಮನೆ ತಲುಪಿದ. ಅವನು ಅಲ್ಲಿಂದ ತಪ್ಪಿಸಿಕೊಳ್ಳದಂತೆ ಬಾಗಿಲ ಬಳಿ ಒಬ್ಬ ಸೈನಿಕ ಕಾವಲಿಗೆ ನಿಂತನು.

ಅಜ್ಜಿ ಅವನನ್ನು ಕಂಡು ಭಯಮಿಶ್ರಿತ ಆಶ್ಚರ್ಯದಿಂದ ಬರ ಮಾಡಿಕೊಂಡಳು. ಅಲ್ಲಿ ನಡೆಯುತ್ತಿರುವ ಶತ್ರುಗಳ ದೌರ್ಜನ್ಯಕ್ಕೆ ಅತೀವ ದುಃಖ ಗೊಂಡಿದ್ದಳು. ಆ ಬಾಲಕ ಮೃದು ಧ್ವನಿಯಲ್ಲಿ ತಾನು ಬಂದ ಕಾರ್ಯವನ್ನು ತಿಳಿಸಿ. ನಾನು ಇಲ್ಲಿನ ವಿಷಯವನ್ನು ಬೇಗ ತಿಳಿಸಿ , ಗಂಗರಾಜರು ಇಲ್ಲಿಗೆ ಬಂದು ಶತ್ರುಗಳಿಂದ ಈ ಹಳ್ಳಿಯನ್ನು ಮುಕ್ತಗೊಳಿಸುವಂತೆ ಮಾಡುತ್ತೇನೆ ಎಂದನು.

ಪುಟ್ಟಬಾಲಕನ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದರೂ, ನಡೆಯುವ ಅಪಾಯವನ್ನರಿತು. ಅವನನ್ನು ತಡೆದು ಬೇಡ ಈ ಕಾರ್ಯ ಅತ್ಯಂತ ಅಪಾಯಕರ , ನಿನಗೆ ಏನಾದರೂ ಆದರೆ ನಾನು ಸಹಿಸಲಾರೆ.

ಅಜ್ಜಿ!! ಇಲ್ಲಿ ಶತ್ರುಗಳ ನೆರಳಿನಲ್ಲಿದ್ದು ಪ್ರತಿ ಕ್ಷಣ ಸಾಯುವುದಕ್ಕಿಂತ. ಅವರನ್ನು ಮಣಿಸುವುದಕ್ಕೆ ಸಹಾಯಮಾಡುವುದು ಒಳ್ಳೆಯದಲ್ಲವೇ.ಬಹಳ ಹೊತ್ತಿನ ಮಾತುಕತೆಯ ನಂತರ. ಅಜ್ಜಿ ತನ್ನ ಮೊಮ್ಮಗನಿಗೆ, ಈಗ ಹೋಗುವುದು ಬೇಡ ಸ್ವಲ್ಪ ಕತ್ತಲಾಗಲಿ ಎಂದಳು.

ಇಲ್ಲಿಂದ ತಪ್ಪಿಸಿಕೊಳ್ಳವುದು ಸುಲಭದ ಕೆಲಸವಲ್ಲ. ಕತ್ತಲಾದ ಮೇಲೆ ಅಜ್ಜಿಯ ಸಹಾಯದಿಂದ ಹಿಂದಿನ ಭಾಗದಲ್ಲಿರುವ ಕಿಟಕಿಯ ಮೂಲಕ ಸ್ವಲ್ಪವೂ ಶಬ್ಧವಾಗದಂತೆ ಹೊರ ಬಂದ. ಕತ್ತಲಲ್ಲಿ ಎತ್ತಕಡೆ ಹೋಗುತ್ತಿದ್ದಾನೆಂದು ತಿಳಿಯದು. ಡೇರೆಯ ಕಡೆ ಹೆಜ್ಜೆಯಾಕುತ್ತಿದ್ದ, ಅದರ ವಿರುದ್ಧ ದಿಕ್ಕಿಗೆ ಅರ್ಕಾವತಿ ನದಿಯಿರುವುದು. ಕ್ಷಣಕಾಲ ಯೋಚಿಸಿ ಅಲ್ಲಿದ್ದ ಕತ್ತಿ ಗುರಾಣಿಯೊಂದನ್ನು ತೆಗೆದುಕೊಂಡು, ನದಿಯ ಕಡೆ ಮೆಲ್ಲನೆ ಹೊರಟನು. ಕತ್ತಿ ಮತ್ತು ಗುರಾಣಿ ಅವನಿಗೆ ಭಾರವೆನಿಸಿದರೂ, ಅವುಗಳನ್ನು ತಾನು ಇಲ್ಲಿಗೆ ಬಂದಿರುವ ಕುರುಹುಗಳಾಗಿ ಗಂಗರಾಜರರಿಗೆ ತೋರಿಸುವುದು ಆವನ ಉದ್ದೇಶವಾಗಿತ್ತು.ಆದರೆ ಸ್ವಲ್ಪ ದೂರ ಹೋದವನು ಅಲ್ಲಿಯೇ ನಿಂತ. ಅವನ ದೃಷ್ಟಿ, ಶತ್ರು ಸೈನಿಕರ ಸಭೆಯ ಕಡೆ ಹರಿಯಿತು.ಅವರು ಸಭೆಯಲ್ಲಿ ಮುಂದಿನ ಧಾಳಿಯ ಬಗ್ಗೆ ಚರ್ಚಿಸುತ್ತಿದ್ದರು. ಅದನ್ನು ಸಂಪೂರ್ಣವಾಗಿ ಆಲಿಸಿದನು. ಸಭೆಯು ವಿಸರ್ಜಿನೆಗೊಂಡಿತು. ಹೆಚ್ಚು ಸಮಯ ವ್ಯರ್ಥಮಾಡದೇ ಆದಷ್ಟೂ ನದಿಯ ತೀರದಲ್ಲೇ ಸ್ವಲ್ಪ ದೂರ ನಡೆದು, ಡೇರೆಯಿಂದ ಬಹು ದೂರ ಬಂದಿದ್ದನು. ಈ ಬಾರಿ ಸೇತುವೆಯನ್ನು ಉಪಯೋಗಿಸುವ ಹಾಗಿಲ್ಲ. ನದಿಯನ್ನು ನಿಧಾನವಾಗಿ ದಾಟಬೇಕು. ಸ್ವಲ್ಪ ಶಬ್ಧವಾದರೂ ಶತ್ರು ಬಾಣಗಳ ಸುರಿಮಳೆಯಾಗುತ್ತದೆ. ಕತ್ತಿಯನ್ನು ಸೊಟ್ಟಕ್ಕೆ ಸಿಕ್ಕಿಸಿಕೊಂಡು ಗುರಾಣಿಯನ್ನು ಒಂದು ಕೈಯಲ್ಲಿಡಿದು , ನದಿಯಲ್ಲಿ ಕಾಲಿಟ್ಟನು.ಅಷ್ಟೇನೂ ನೀರಿರದ ಕಾರಣ ನಡೆದುಕೊಂಡೇ ಹೋಗಲು ಸಾಧ್ಯವಾಯಿತು. ನೀರು ಅವನ ಕತ್ತಿನವರೆಗೂ ಬಂದಿತ್ತು. ಇನ್ನೇನು ದಾಟಿ ದಡವನ್ನು ಸೇರಬೇಕು. ಅಷ್ಟರಲ್ಲಿ ಕಲ್ಲೊಂದಕ್ಕೆ ಎಡವಿ ಬಿದ್ದುಬಿಟ್ಟ. ಬಿದ್ದ ರಭಸಕ್ಕೆ ಗುರಾಣಿ ಅಲ್ಲಿದ್ದ ಒಂದು ಕಲ್ಲಿಗೆ ತಾಗಿ ಜೋರಾದ ಶಬ್ಧ ಮೂಡಿತು. ಕೂಡಲೇ ಓಡಿ ಪಕ್ಕದಲ್ಲಿದ್ದ ಪೊದೆಯಲ್ಲಿ ಸೇರಿಕೊಂಡ.ಅಷ್ಟರಲ್ಲಿ ಒಂದು ಬಾಣ ಆವನ ಪಕ್ಕದಲ್ಲೇ ಹಾದುಹೋಯಿತು. ಅದರ ನಂತರ ಮತ್ತೊಂದು ಆವನ ತಲೆಯ ಮೇಲೆ ಹಾದು ಹೋಯಿತು.

ಪೊದೆಯ ಮತ್ತೊಂದು ತುದಿಗೆ ಬರುವಷ್ಟರಲ್ಲಿ ಬಾಣವೊಂದು ಅವನ ಬೆನ್ನನ್ನು ನಾಟಿತ್ತು. ಅಪಾರವಾದ ನೋವು, ಅದನ್ನು ಸಹಿಸಿಕೊಂಡು ಬಹಳ ಕಷ್ಟಪಟ್ಟು ಅಲ್ಲಿಂದ ಗಂಗರಾಜರ ಬಳಿಗೆ ಬರುವಷ್ಟರಲ್ಲಿ ಸೂರ್ಯೋದಯವಾಗಿತ್ತು. ಅವನು ಮೇಯಿಸುತ್ತಿದ್ದ ಹಸುಗಳು ಆವನ ಹಿಂದೆಯೇ ಬಂದಿದ್ದವು.

ಅವನ ಕೈಲಿದ್ದ ಗುರಾಣಿ ಕೆಳಗೆ ಬಿತ್ತು, ಅದರಲ್ಲಿ ಜೋಳರ ಲಾಂಛನ ಹುಲಿಯ ಚಿತ್ರವಿತ್ತು. ಕೈಲಿದ್ದ ಕತ್ತಿಯನ್ನು ಗಂಗರಾಜನಿಗೆ ಕೊಟ್ಟನು.

ಆವನ ಸ್ಥಿತಿಯನ್ನು ನೋಡಿ ಗಂಗರಾಜನು ಮರುಕಗೊಂಡನು.ತಕ್ಷಣ ವೈದ್ಯನನ್ನು ಕರೆಸಲು ಆಜ್ಞಾಪಿಸಿದನು.

ಅವನು ನಗುತ್ತಾ, ಅಷ್ಟು ಸಮಯವಿಲ್ಲ. ನಿಮಗೆ ಮುಖ್ಯವಾದ ವಿಷಯ ತಿಳಿಸಬೇಕೆಂದು,ಜೀವವಿಡಿದು ಬಂದಿದ್ದೇನೆ.ತಾನು ನೋಡಿದ ಸೈನ್ಯದ ಗಾತ್ರವನ್ನು ತಿಳಿಸಿ ಮತ್ತು ಅಲ್ಲಿಂದ ತಪ್ಪಿಸಿಕೊಂಡು ಬರುವಾಗ , ಶತ್ರುಗಳು ಯುದ್ಧಕ್ಕೆ ಸಿದ್ಧರಾಗುತ್ತಿದ್ದ ಬಗ್ಗೆ ಸಂಪೂರ್ಣವಾಗಿ ತಿಳಿಸಿದ. ಮಾಹಿತಿಯನ್ನು ನೀಡುತ್ತಲೇ ತಾನು ಸಾಧಿಸಿದ ಕಾರ್ಯಕ್ಕೆ ಹೆಮ್ಮೆಗೊಂಡು,ದೇಶಸೇವೆ ಮಾಡಿದ ತೃಪ್ತಿಯಿಂದ ನಗುತ್ತಾ ಕೊನೆಯುಸಿರೆಳೆದ. ಅವನು ಕೊಟ್ಟ ಅಮೂಲ್ಯವಾದ ಮಾಹಿತಿ ಗಂಗರಾಜನಿಗೆ ಜೋಳರನ್ನು ಸಂಪೂರ್ಣವಾಗಿ ಸೋಲಿಸಲು ಅನುಕೂಲವಾಯಿತು.

ಅವನ ಸಾಹಸದ ನೆನಪಿಗಾಗಿ ಅವನಿಗೆ "ವೀರಗಂಗ" ಎಂಬ ಬಿರುದನ್ನು ಕೊಟ್ಟು , ಈ ವೀರಗಲ್ಲನ್ನು ನಿರ್ಮಿಸಿದ್ದಾರೆ. ಎಂದು ರಾಜೇಗೌಡ ಬಹಳ ಹೆಮ್ಮೆಯಿಂದ ಕಥೆಯನ್ನು ಮುಗಿಸಿದನು.
ಕಥೆಯನ್ನು ಕೇಳುತ್ತಿದ್ದ ಮಲ್ಲಭೈರೇಗೌಡ ಭಾವುಕನಾಗಿ ಆ ಬಾಲಕನನ್ನು ಬಹಳ ಕೊಂಡಾಡಿದನು. ಆ ವೀರಬಾಲಕ ಹುಟ್ಟಿರುವ ಈ ನಾಡು ಶ್ರೇಷ್ಠವಾದುದು. ಅದರಿಂದಲೇ ಇಲ್ಲಿರುವವರೆಲ್ಲ ಹುಟ್ಟು ಕಲಿಗಳು. ಭಲೇ!! ಇಂತಹ ನಾಡನ್ನು ಆಳುವ ಸೌಭಾಗ್ಯ ದೊರೆತದ್ದು ನನ್ನ ಪುಣ್ಯ, ಎಂದು ತಮ್ಮ ಪಯಣವನ್ನು ಮುಂದುವರೆಸಿದರು.

ಆವರು ದೊಡ್ಡಬಳ್ಳಾಪುರದ ಕೋಟೆಯನ್ನು ತಲುಪುವುದರಲ್ಲಿ ಸೂರ್ಯಾಸ್ತವಾಗಿತ್ತು.