Click here to Download MyLang App

ವಿಶೇಷ ಮಾತದಾನ - ಬರೆದವರು : ನಟರಾಜ್. ಎಸ್ | ಸಾಮಾಜಿಕ


(ನೈಜ ಘಟನೆ ಆಧಾರಿತ ಸಣ್ಣ ಕಥೆ)

ಆ ವ್ಯಕ್ತಿ ಸಹಾಯಕನೊಬ್ಬನ ನೆರವಿನೊಂದಿಗೆ ಮತಗಟ್ಟೆ ಪ್ರವೇಶಿಸಿದ. ವಿಕಲಚೇತನನಿರಬಹುದು ಎಂದುಕೊಂಡರು ಮತಗಟ್ಟೆ ಅಧಿಕಾರಿಗಳು. ಆದರೆ ಆತ ಸಮೀಪ ಬಂದಾಗಲೇ ಸತ್ಯದ ಅನಾವರಣವಾದದ್ದು. ಕಂಠಪೂರ್ತಿ ತೀರ್ಥ ಏರಿಸಿಕೊಂಡಿದ್ದನಾದ ಕಾರಣ ತಾತ್ಕಾಲಿಕ ಸಕಲಾಂಗವಿಕಲಚೇತನನಾಗಿದ್ದ! "ಏನ್ರಿ ಇದೂ....ನಿಲ್ಲೋಕೂ ಆಗದೇ ಇರೋ ಹಾಗೆ ಕುಡಿದಿದೀರಿ.....ಜೊತೆಗೆ ಕಣ್ಣು ಕಾಲು ಇಲ್ಲದವರ ತರಹ ಇನ್ನೊಬ್ಬರನ್ನ ಜೊತೆಗೆ ಕರೆದುಕೊಂಡು ಬಂದಿದ್ದೀರಿ...........ಏನ್ರಿ ಇದೆಲ್ಲ?" ಎಂದರು ಅಧ್ಯಕ್ಷಾಧಿಕಾರಿ. ತನಗೆ ಹುಷಾರಿಲ್ಲವೆಂದೂ, ಮತದಾನ ಮಾಡಲು ಈ ಸ್ಥಿತಿಯಲ್ಲಿ ತನಗೆ ಸಹಾಯಕನ ನೆರವು ಅನಿವಾರ್ಯವೆಂಬುದನ್ನು ತೊದಲುವ ನಾಲಿಗೆಯಲ್ಲಿ ಹೊರಳಿಸಲು ಆ ಕುಡುಕ ಪ್ರಯತ್ನಿಸಿದನಾದರೂ ಅರ್ಧಕರ್ಧ ಮಾತು ಗಂಟಲಲ್ಲೇ ಸಿಂಬಿ ಸುತ್ತಿಕೊಂಡಿತು ಹೊರ ಬರಲು ನಿರಾಕರಿಸಿತು.. ಆಕ್ಷೇಪಿಸಿದ ಅಧಿಕಾರಿಗಳಿಗೆ ಮುಂದಿನ ಜವಾಬನ್ನು ಸಹಾಯಕ ನೀಡಲು ಶುರುವಿಟ್ಟ. ಆತ ಅದಕ್ಕೆ ತಯಾರಾಗೇ ಬಂದಿದ್ದ ಎಂಬುದಲ್ಲಿ ಸಾಬೀತಾಗುತ್ತಿತ್ತು. "ಕುಡಿದು ಮತದಾನ ಮಾಡಬಾರದು ಎಂದು ಕಾನೂನಿದ್ಯಾ?" ಎಂಬ ಅವನ ಮೊದಲ ಪ್ರಶ್ನೆಗೇ ಆಧ್ಯಕ್ಷಾಧಿಕಾರಿ ನಿರುತ್ತರರಾಗಿ ಉಳಿದವರ ಮುಖ ಮುಖ ನೋಡಿದರು. ಉಳಿದ ಅಂಗವಿಕಲರಿಗೆ ಜೊತೆಗೊಬ್ಬರು ಇರಲು ಅವಕಾಶವಿರುವುದಾದರೆ ಸರಿಯಾಗಿ ನಿಲ್ಲಲೂ ಆಗದ ಸ್ಥಿತಿಯಲ್ಲಿರುವ ಈ ಪಾನಮತ್ತ ವ್ಯಕ್ತಿಗೆ ಸಹಾಯಕನ ನಿರಾಕರ ಘೋರಾತಿಘೋರ ಅನ್ಯಾವವೆಂಬ ಆತನ ವಾದ ಸರಣಿ ಮುಂದುವರಿಯಿತು. ತಡಬಡಿಸಿದ ಅಧಿಕಾರಿ ಪ್ರತ್ಯುತ್ತರಕ್ಕಾಗಿ ತಮ್ಮ ತರಬೇತಿಯ ನೆನಪನ್ನೆಲ್ಲಾ ಜಾಲಾಡತೊಡಗಿದರು. ಎಲ್ಲಿಯೂ ಕುಡುಕ ಮತದಾರರ ಬಗ್ಗೆ ಹೇಳಿದ್ದು ನೆನಪಾಗಲಿಲ್ಲ. ಮತದಾನದ ದಿನ ಮದ್ಯ ಮಾರಾಟ ನಿಷೇಧವಿರುತ್ತದೆ ಎಂಬುದು ನೆನಪಾದರೂ ಮದ್ಯಪಾನ ಮಾಡಬಾರದೆಂಬ ನಿಯಮವಿದೆಯೋ ಇಲ್ಲವೋ ಸರಿಯಾಗಿ ತಿಳಿದಿರಲಿಲ್ಲ. ಅದನ್ನವರು ತಳಿಯುವ ಪ್ರಮೇಯವೂ ಬಂದಿರಲಿಲ್ಲ. ಮದ್ಯ ಮಾರಾಟಕ್ಕೇ
ನಿಷೇಧವಿದ್ದ ಮೇಲೆ ಅದನ್ನು ಪಾನ ಮಾಡುವ ಪ್ರಶ್ನೆಯೇ ಬಾರದು ಎಂದು ತರ್ಕಿಸಬಹುದಾದ ಕಾರಣ ಇದೊಂದು ಅಸಂಬದ್ಧ ವಿಷಯವೆಂದು ಚುನಾವಣಾ ಆಯೋಗವೂ ತೀರ್ಮಾನಿಸಿ ತರಬೇತಿಯಲ್ಲಿ ಸದರಿ ಅಂಶವನ್ನು ಕೈಬಿಟ್ಟಿರಬಹುದು. ಆಯೋಗದ ಉಪೇಕ್ಷೆ ಎಂತಹ ಸಮಸ್ಯೆ ತಂದೊಡ್ಡಿತಲ್ಲ ಎಂದು ಚಿಂತಾಕ್ರಾಂತರಾದರೂ ತಕ್ಷಣಕ್ಕೆ ಏನಾದರೂ ಮಾಡಲೇಬೇಕಿತ್ತು."ಕುಡಿದು ಬಂದು ಗಲಾಟೆ ಮಾಡುತ್ತೀರೇನ್ರಿ?" ಎಂದು ಅವರು ದೂರಾಲೋಚಿಸಿಯೇ ಹೇಳಿದರು. ಇದರಿಂದ ಮಾತಿಗೆ ಮಾತು ಬೆಳೆದು ಪೋಲೀಸರ ಮೂಲಕ ಆ ಕುಡುಕರನ್ನು ಆಚೆ ಹಾಕಿಸಬಹುದು ಎಂದವರು ಎಣಿಸಿದ್ದರು. ಆದರೆ ಮಾತು ಮುಂದುವರಿಸಿದ ಸಹಾಯಕ " ಅಲ್ಲ ಸ್ವಾಮಿ, ಈತನಿಗೆ ನಿಲ್ಲೋಕೂ ಆಗುತ್ತಿಲ್ಲ, ನೀವು ನೋಡಿದರೆ ಗಲಾಟೆ ಮಾಡ್ತೀರಿ ಅಂತೀರಲ್ಲ...ಆತ ಒಂದು ಮಾತನ್ನೂ ಆಡ್ತಾ ಇಲ್ಲ, ಇನ್ನು ಗಲಾಟೆ ಎಲ್ಲಿ ಸಾಧ್ಯ ನೀವೆ ಹೇಳಿ " ಎಂದು ಒಂದು ಚೂರೂ ತಡವರಿಸದೆ ವಕೀಲನಂತೆ ಲಾ ಪಾಯಿಂಟ್ ಹಾಕಿದ. ಇವನ ಮಾತಿಗೆ ಹೆಚ್ಚಿನ ಪುಷ್ಠಿ ನೀಡಲು ಕುಡುಕ ಈಗ ಸ್ವಲ್ಪ ಜೋರಾಗಿಯೇ ತೂರಾಡಿ ತನ್ನನ್ನು ಹಿಡಿದಿದ್ದ ಕೈಯ ಬಲವನ್ನೂ ಮೀರಿ ಬಿದ್ದೇ ಬಿಡುವವನಂತೆ ನಟಿಸಿದ. ಪಾನ ಮತ್ತ ವ್ಯಕ್ತಿಯಿಂದ ಯಾವ ತೊಂದರೆಯೂ ಅಲ್ಲಿ ನಡೆಯುತ್ತಿಲ್ಲವಾದ ಕಾರಣ ಆತನ ವಿರುದ್ಧ ಯಾವ ಕಾನೂನು ಕ್ರಮವೂ ಸಾಧ್ಯವಿಲ್ಲ ಎಂಬ ಅಂಶ ಈಗ ಅಧಿಕಾರಿಗೆ ನಿಚ್ಚಳವಾಗಿತ್ತು. ಆತನನ್ನು ಹೊರಹಾಕಲು ತಮಗೆ ಸಹಾಯವಾಗಬಹುದಾದ ಈ ಒಂದು ಅಂಶವೂ ಕೈಕೊಟ್ಟದ್ದು ಮತ್ತಷ್ಟು ಚಿಂಚಿತರನ್ನಾಗಿಸಿತಾದರೂ ಅವರನ್ನು ಹೆಚ್ಚು ಕಾಡಿದ್ದು ಅನೇಕಾನೇಕ ಡಿಗ್ರಿಗಳ ಒಡೆಯನಾಗಿ ವರ್ಷಗಳಿಂದ ಉನ್ನತ ಸರ್ಕಾರಿ ಸೇವೆ ಸಲ್ಲಿಸುತ್ತಿರುವ ತಾನು ಎಕಶ್ಚಿತ್ ಕುಡುಕನೊಬ್ಬನೆದುರಿಗೆ ತಡಬಡಿಸಬೇಕಾಗಿ ಬಂದ ಪರಿಸ್ಥಿತಿ ಬಗ್ಗೆ. 'ಚುನಾವಣೆ ದಿನದಂದು ಮತಗಟ್ಟೆ ಅಧ್ಯಕ್ಷಾಧಿಕಾರಿಗೆ ಕ್ವಾಸಿ ಜುಡೀಶಿಯಲ್ ಪವರ್ ಇರುತ್ತದೆ. ಆತ ಆ ದಿನದ ಮಟ್ಟಿಗೆ ನ್ಯಾಯಾಧೀಶನಿದ್ದಂತೆ' ಎಂಬ ಮಾಸ್ಟರ್ ಟ್ರೈನರ್ ನ ಮಾತು ಕಿವಿಯಲ್ಲಿ ಅನುರಣಿಸಿತಾದರೂ ಅದರ ಹಿಂದೆಯೇ ಸಿಟ್ಟು ತಿರಸ್ಕಾರ ಮಿಶ್ರಿತ ಭಾವವೊಂದು ಮೂಡಿತು. ಕುಡುಕನೊಬ್ಬ ಒಡ್ಡಿರುವ ಸವಾಲು ನಿಭಾಯಿಸಲು ಸಾಧ್ಯವಾಗದಿದ್ದರೆ ಅಂತಹ ನ್ಯಾಯಾಧೀಶನ ಪಟ್ಟವೇಕೆ ಎನಿಸಿತು. ತಾವು ಅಷ್ಟಿಷ್ಟು ತಿಳಿದಿದ್ದ ಪ್ರಜಾಪ್ರತಿನಿಧಿ ಕಾಯ್ದೆ ೧೯೫೧ ರ ಮತ್ತೊಮ್ಮೆ ನೆನಪಿಸಿಸಿಕೊಳ್ಳಲು ಪ್ರಯತ್ನಿಸಿದರು. ಪಾನಮತ್ತರು ಮತ ಚಲಾಯಿಸಲು ಸಹಾಯಕರ ನೆರವು ಪಡೆಯಲು ಕಾನೂನಾತ್ಮಕ ಅವಕಾಶವಿಲ್ಲ ಎಂಬುದು ನಿರ್ವಿವಾದವಾಗಿತ್ತು. ತಕ್ಷಣವೇ ಮುಂದಿನ ಮಾತು ಹೊಳೆಯಿತು." ನೋಡಿ, ಅಂಗವಿಕಲರಿಗೆ ಮಾತ್ರ ಸಹಾಯಕ ಜೊತೆ ಇರಬಹುದು, ಈತ ಕುಡಿದು ನಿಲ್ಲಲಾಗುತ್ತಿಲ್ಲ ಎಂಬ ಕಾರಣಕ್ಕೆ ಇನ್ನೊಬ್ಬರು ಜೊತೆಯಲ್ಲಿ ಕಳಿಸಲಾಗದು" ಎಂದು ಖಡಾಖಂಡಿತವಾಗಿ ಘೋಷಿಸಿಬಿಟ್ಟರು. "ಅಲ್ಲ ಸ್ವಾಮಿ ತುಂಬಾ ಜನ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ, ಕೈ ಕಾಲು ಸ್ವಾದೀನ ಇಲ್ಲ ಅಂತ ಇನ್ನೊಬ್ಬರನ್ನ ಕರ್ಕೊಂಡು ಬಂದು ಓಟು ಹಾಕಿದರಲ್ಲ... ಅವರು ಹೇಳಿದ್ದೆಲ್ಲ ನಿಜ ಅಂತ ಹೇಗೆ ನಂಬಿದ್ರಿ? ಅವರೇನಾದ್ರೂ ಡಾಕ್ಟರ್ ಸರ್ಟಿಫಿಕೇಟ್ ತಂದಿದ್ರಾ? ಅಥವಾ ನಿಮ್ಮ ಮತದಾರರ ಪಟ್ಟೀಲಿ ಇವರು ಇಂತಹವರು ಎಂದು ಬರದಿದಾರ? ಆವಾಗ ಕಾಣದೆ ಇರೋ ಮೋಸ ಈಗ ಕಾಣಸ್ತಾ ಇದೆಯಲ್ಲ ನಿಮಗೆ... ಯಾವ ನ್ಯಾಯ ಸ್ವಾಮಿ ಇದು? ನೋಡಿ ಈ ಮನುಷ್ಯನಿಗೂ ಕಣ್ಣು ಸರಿಯಾಗಿ ಕಾಣಿಸ್ತಾ ಇಲ್ಲ...ಕೈ ಕಾಲು ಸ್ವಾದೀನ ಇಲ್ಲ. ಇದು ಆಕ್ಸಿಡೆಂಟಿಂದ ಆಗಿದ್ದ, ರೋಗ ಬಂದು ಆಗದ್ದಾ, ವಯಸ್ಸಾಗಿ ಆಗಿದ್ದ ಅಥವಾ ಕುಡಿದದ್ದರಿಂದ ಆಗಿದ್ದ ಅನ್ನೋದು ಮುಖ್ಯ ಅಲ್ಲ. ಅದನ್ನ ಹೇಳೋಕೆ ನೀವು ಡಾಕ್ಟರೂ ಅಲ್ಲ. ಮತದಾನದ ಸಮಯದಲ್ಲಿ ಆತನಿಗೆ ಸಹಾಯಕ ಬೇಕಾದ ಪರಿಸ್ಥಿತಿಯಲ್ಲಿದ್ದಾನೆ ಅಷ್ಟೆ. ನೀವು ಅದ್ಯಾಗೆ ಇಲ್ಲ ಅನ್ತೀರಿ..?" ಎಂದ ಸಹಾಯಕ. ಇಂತಹ ಲಾ ಪಾಯಿಂಟ್ ಬರಬಹುದೆಂದು ನಿರೀಕ್ಷಿಸದಿದ್ದ ಅಧಿಕಾರಿಗೆ ಸಣ್ಣಗೆ ಬೆವರು ಶುರುವಾಗಿತ್ತು. ಏನೋ ಹೇಳಲು ಮುಂದಾದ ಚುನಾವಣಾ ಏಜೆಂಟನೊಬ್ಬ ಅಧಿಕಾರಿಗೆ ಒದಗಿದ ಪರಿಸ್ಥಿತಿ ಕಂಡು ಮಾತುಗಳನ್ನು ಹಾಗೆಯೇ ನುಂಗುತ್ತ "ಏನೂ ಇಲ್ಲ...ಏನೂ ಇಲ್ಲ ಬಿಡಿ" ಎಂದು ತಡವರಿಸುತ್ತ ತನ್ನ ಜಾಗಕ್ಕೆ ತೆರಳಿದ. ಓಟು ಹಾಕಲು ಬಂದಿದ್ದ ಕೆಲವರು ಕಿಟಕಿಗಳ ಮೂಲಕ ಇಣುಕಿ ನೋಡಲು ಪ್ರಯತ್ನಿಸಿದವರು. ಅದನ್ನು ಕಂಡ, ಮತ ಹಾಕಿ ಹಿಂದಿರುಗುತ್ತಿದ್ದ ಮತ್ತಲವರು ಹಿಂದಿರುಗಿ ಬಂದು ಅವರ ಮೇಲೆ ಬಿದ್ದು ಇಣುಕಲೆತ್ನಿಸಿ ಅಲ್ಲಿ ಒಂದು ಗುಂಪು ಬೆಳೆಯಲು ಶುರುವಾಯಿತು. ಆಗ ಎಚ್ಚೆತ್ತ ಪೊಲೀಸ್ ಸಿಬ್ಬಂದಿ ಅವರನ್ನು ಕಳಿಸಲೆತ್ನಿಸಿದರಾದರೂ "ತಡೀರಿ ಮೇಡಮ್ಮಾರೆ...ಅದ್ಯಾಕಂಗಾಡೀರಿ" ಎಂದರು. ಅಷ್ಟು ಹೊತ್ತಿನ ವಾದ ವಿವಾದ ಆಲಿಸಿ ತನಗೂ ಮಾತನಾಡಲು ಅವಕಾಶ ಸಿಕ್ಕರೆ ಒಂದೆರಡು ಲಾ ಪಾಯಿಂಟ್ ಎಸೆದೇ ಬಿಡಬೇಕೆಂದು ಕಾಯುತ್ತಿದ್ದವನೊಬ್ಬ " ಪೋಲಿಸ್ ಮೇಡಮ್ಮಾರೆ...ನೀವು ಗಲಾಟೆ ಆದಾಗ ಮಾತ್ರ ಎಂಟ್ರಿ ಆಗಬಹುದು. ಹೇಳಕೆ ಕೇಳಕೆ ಒಳಗೆ ಸಾಹೇಬ್ರವ್ರೆ..ನಾವು ಊರ ಜನ ಅಂತ ಇದೀವಿ....." ಎಂದೇನನ್ನೋ ಬಡಬಡಿಸಿದ. ಅದಕ್ಕೂ ಹಲವರು ಹೌದೆಂದರು. ಪರಸ್ಥಳದಲ್ಲಿ ಏಕಾಂಗಿಯಾಗಿದ್ದಾಗ ಕಾನೂನು ಮಾತನಾಡುವುದು ಅಪಾಯಕರ ಎಂಬ ತಿಳಿವಳಿಕೆ ಪೋಲೀಸಮ್ಮನಿಗೆ ಅಧಿಕಾರಿಗಿಂತ ತುಸು ಹೆಚ್ಚೇ ಇತ್ತು. ಅದು ಆಕೆಯ ಕೆಲಸ ಕಲಿಸಿಕೊಟ್ಟ ತಿಳಿವಳಿಕೆ. ಅಲ್ಲದೆ ಪರಿಸ್ಥಿತಿ ಅಷ್ಟೇನೂ ಬಿಗಡಾಯಿಸಿಯೇನೂ ಇರಲಿಲ್ಲ. ಅದಿನ್ನೂ ವಾಕ್ಸಮರದ ಹಂತದಲ್ಲೇ ಇತ್ತು. ಆದರೂ ಅವರ ಕರ್ತವ್ಯ ಪ್ರಜ್ಞೆ ಎಚ್ಚರ ತಪ್ಪಲಿಲ್ಲ. ತಾನು ಇಲ್ಲಿರುವುದು ಪರಿಸ್ಥಿತಿ ಹದಗೆಡದಂತೆ ತಡೆಯಲೇ ಹೊರತು ಹದಗೆಟ್ಟ ಮೇಲೆ ಕ್ರಮ ಕೈಗೊಳ್ಳಲಲ್ಲ. ಏನೇ ತೊಂದರೆಯಾದರೂ ಇಲಾಖೆ ತನ್ನನ್ನು ಸುಮ್ಮನೆ ಬಿಡುತ್ತದೆಯೇ? ಮೇಲಿನವರ ಪ್ರಶ್ನೆಗಳಿಗೆ ಉತ್ತರಿಸಿ ಬಚಾವಾಗುವುದು ಸುಲಭದ ಮಾತೆ? ತತ್ ಈ ಕಾನ್ಸಟೇಬಲ್ ಕೆಲಸ ಯಾರಿಗೆ ಬೇಕು. ತನಗೆ ಆಗಬೇಕಿದ್ದ ಸಬ್ಇನ್ಸ್ಪೆಕ್ಟರ್ ಹುದ್ದೆ ಆಗಿದ್ದಿದ್ದರೆ ಈ ಪಡುಪಾಟಲು ಎಲ್ಲಿರುತ್ತಿತ್ತು. ಹಣ ಹೊಂದಿಸಲಾಗದೆ ಇಂಟರ್ವೂನಲ್ಲಿ ಪೇಲಾಗಿದ್ದ ತಮ್ಮ ನತದೃಷ್ಟ ದಿನಗಳು ಬೇಡವೆಂದರೂ ಅವರಿಗೆ ನೆನಪಾದವು. "ಅವನು ಕೇಳಾದ್ರಾಗೂ ಏನು ತಪ್ಪದೆ ಅಂತೀನಿ?" ಎಂದು ಪಕ್ಕದಲ್ಲೇ ಇದ್ದ ಒಬ್ಬ ಮತ್ತೊಬ್ಬನಿಗೆ ಹೇಳಿದ್ದು ಪೋಲೀಸಮ್ಮನನ್ನು ವಾಸ್ತವಕ್ಕೆ ಮರಳಿಸಿತು. ಈಗ ಅಲ್ಲಿ ಮತ್ತಷ್ಟು ಜನ ಜಮೆಯಾಗತೊಡಗಿದ್ದರು. ತಾನು ಏನಾದರೂ ಮಾಡಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತಿತ್ತು. ಈಗ ಆಕೆ ಮತಕೇಂದ್ರದ ಒಳಕ್ಕೆ ತೆರಳಿ " ಸುಮ್ಮನೆ ಬೇರೆಯವರಿಗೆ ತೊಂದರೆ ಮಾಡಬೇಡಿ....."ಎಂದು ಮುಂದೇನೋ ಹೇಳುವುದರ ಒಳಗೆ ಕುಡುಕನ ಸಹಾಯಕ ಮತ್ತೊಂದು ಲಾ ಪಾಯಿಂಟ್ ಎಸೆದ. " ನೋಡಿ ಪೋಲೀಸರೆ, ಅಧ್ಯಕ್ಷಾಧಿಕಾರಿ ಬಂದು ನಿಮಗೆ ರಿಪೋರ್ಟ್ ಮಾಡಿದರೆ ಮಾತ್ರ ನೀವು ಅ್ಯಕ್ಷನ್ ತಗಾಬಹುದು. ಅದು ಬಿಟ್ಟು ಅನಗತ್ಯವಾಗಿ ಕೇಂದ್ರದ ಒಳಗೆ ಬರುವಂತಿಲ್ಲ" ಎಂದ. ಆಕೆಗೆ ನಕಶಿಕಾಂತ ಉರಿದು ಹೋಯಿತು. "ಈ ಚಿಲ್ಲರೆ ಮಗನಿಗೆ ಬಾಂಬೆ ಕಟ್ಟು ಹಾಕಬೇಕು...ನನಗೇನಾದರೂ ಅಧಿಕಾರ ಇದ್ದಿದ್ರೆ ಹಾಗೇ ಮಾಡುತ್ತಿದ್ದೆ" ಎಂದು ಅಂದುಕೊಂಡರಾದರೂ ಏನೂ ಮಾಡುವಂತಿರಲಿಲ್ಲ. ತಾಳ್ಮೆ ಕಳೆದುಕೊಳ್ಳದೆ ನಿರುತ್ತರರಾಗಿ ಹೊರ ಬಂದರು. ಅಷ್ಟು ಹೊತ್ತಿಗೆ ಅಧ್ಯಕ್ಷಾಧಿಕಾರಿಗೆ ಮತ್ತೊಂದು ಅಂಶ ಹೊಳೆಯಿತು. ಆತ ಸಹಾಯಕನನ್ನುದ್ದೇಶಿಸಿ " ನೋಡಿ , ಆತ ಒಂದಷ್ಟು ಹೊತ್ತು ರೆಸ್ಟ್ ಮಾಡಿ ಆಮೇಲೆ ಬರಲಿ. ಆಗ ಸರಿಯಾಗಿರುತ್ತಾರೆ. ಆಗ ಓಟು ಹಾಕಲಿ" ಎಂದರು. 'ಎಣ್ಣೆ ಏಟು ಇಳಿದ ಮೇಲೆ ಬಂದು ಓಟು ಹಾಕಲಿ' ಎಂದು ಅವರು ಬಾಯಿ ಬಿಟ್ಟು ಹೇಳಲಾಗಲಿಲ್ಲ "ಅಲ್ಲ ಸ್ವಾಮಿ, ಆಯಪ್ಪ ಹೋಗಿ ಮಲಗಿ ಸಂಜೆ ಆರು ಗಂಟೆ ಒಳಗೆ ಎದ್ದು ಬರದೇ ಹೋದರೆ ಆಗ ಓಟು ಲಾಸ್ ಆದಂಗಾಗಲ್ವ. ಒಂದು ಕೆಲ್ಸ ಮಾಡಿ...ಇಲ್ಲೇ ಮಲಗಾಕೆ ಜಾಗ ಕೊಡಿ, ಆಮೇಲೆ ಬೇಕಾದ್ರೆ ನೀವೇ ಎಬ್ಬಿಸಿ ಓಟು ಹಾಕಿಸಿಕೊಳ್ಳಿ...ನಾನೇನೋ ಒಂದು ಓಟು ವೇಸ್ಟ್ ಆಗೋದು ಬೇಡ ಅಂತ ಹೆಲ್ಪ್ ಮಾಡೋಕೆ ಬಂದ್ರೆ ನನ್ನನ್ನೆ ಅನುಮಾನಿಸುತ್ತೀರಾ?" ಎಂದು ತಾನೊಬ್ಬ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡುತ್ತಿರುವ ಸ್ವಯಂಸೇವಕ ಎಂಬಂತೆ ಬಿಂಬಿಸಿಕೊಂಡ. ಅವನ ತಕರಾರುಗಳಿಗೆ ಅಧಿಕಾರಿ ತಕ್ಕ ಉತ್ತರ ನೀಡಲಾಗದೆ ತಡವರಿಸುವಂತಾಗಿದ್ದು ಅವನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತ್ತು."ಅಲ್ಲಾರಿ ಅವರು ಕುಡಿದು ಬಂದಿದಾರೆ...." ಎಂದೇನೋ ಹೇಳಲು ಮುಂದಾದ ಅಧಿಕಾರಿಯ ಮಾತನ್ನು ತುಂಡರಿಸಿದ ಆತ " ಸರಿ ಬಿಡಿ, ಕುಡಿದವರು ಓಟು ಹಾಕಬಾರದು ಅಂತ ಕಾನೂನಿದೆಯಾ" ಎಂದು ತನ್ನ ಹಳೆಯ ಪ್ರಶ್ನೆಯನ್ನೇ ಮತ್ತೆ ಎಸೆದ. "ನೋಡಿ ಕುಡಿದು ಓಟು ಹಾಕಬಾರದು ಅಂತ ಕಾನೂನಿಲ್ಲ ನಿಜ ಆದರೆ ಕುಡಿದು ಬಂದವರಿಗೆ ಸಹಾಯಕನನ್ನು ನೀಡಬೇಕು ಅಂತಾನೂ ಕಾನೂನಿಲ್ಲ" ಎಂದು ದ್ವನಿ ಏರಿಸಿದರು ಅಧಿಕಾರಿ. ಅದಾಗಲೇ ಹೊರಗಿನ ಕ್ಯೂ ಸ್ವಲ್ಪ ಬೆಳೆದಿತ್ತು. ಅದರಲ್ಲಿದ್ದ ಕೆಲ ಹೆಂಗಸರು ಅಧಿಕಾರಿಯ ಮಾತು ಸರಿ ಎಂಬಂತೆ ಗುಸುಗುಸು ಶುರುಮಾಡಿದರು. ಅವರು ಅದಾಗಲೆ ಸರದಿಯಲ್ಲಿ ನಿಂತು ಕಾಲು ಗಂಟೆಯ ಮೇಲಾಗಿತ್ತು. "ಈ ಕುಡುಕರಿಂದ ಯಾವ ಕೆಲಸಾನೂ ಸರಿಯಾಗಿ ನಡಿಯಂಗಿಲ್ಲ" ಎಂದಳೊಬ್ಬಾಕೆ ಮೆಲು ದನಿಯಲ್ಲಿ. ತಾನು ಅನಗ್ಯವಾಗಿ ಶಾಲೆಯ ಜಗುಲಿಯ ಮೇಲೆ ಕಾಯಬೇಕಾದದ್ದಕ್ಕೆ ಆಕೆಗೆ ಕೋಪ. ಓಟು ಮುಗಿಸಿಕೊಂಡು ಆಕೆ ಮಹಿಳಾ ಸಂಘಕ್ಕೆ ಆ ವಾರದ ಉಳಿತಾಯ ಐವತ್ತು ರೂಪಾಯಿಗಳನ್ನು ಕಟ್ಟಲು ವಿಷಾಲಾಕ್ಷಮ್ಮನ ಮನೆಗೆ ಹೋಗಬೇಕಿತ್ತು. ಲೇಟಾಗಿ ಕಟ್ಟಿದರೆ ಐದು ರೂಪಾಯಿ ದಂಡ ಬೇರೆ....'ಎಲ್ಲಿಗೋದ್ರೂ ಒಂದಲ್ಲಾ ಒಂದು ಗೋಳು, ಇಲ್ಲಿ ನೋಡಿದರೆ ಈ ರಗಳೆ' ಎಂದಾಕೆ ಯೋಚಿಸುತ್ತಿದ್ದಳು. "ಅಕ್ಕೊ ಸುಮ್ಮಿರು, ನಿಮಿಗೆ ಕಾನೂನೆಲ್ಲ ಗೊತ್ತಾಗಲ್ಲ" ಎಂದ ಸ್ವಘೋಷಿತ ಸಹಾಯಕ. ಹಳ್ಳಿ ಮುಕ್ಕಗಳ ಎದುರಿಗೆ ತನ್ನ ಜ್ಞಾನದ ಪ್ರದರ್ಶನದ ಅಪೂರ್ವ ಅವಕಾಶ ಬಿಡುವುದಾದರೂ ಹೇಗೆ? " ನೋಡಿ ಸ್ವಾಮಿ" ಆತ ಮುಂದುವರಿಸಿದ "ಆಯಪ್ಪನ ಜೊತೆ ಬರಬೇಕು ಅಂತ ನನಗೇನೂ ತೆವಲೇ?, ಒಂದು ವಿಚಾರ ಮಾಡಿ...ಆತ ಒಬ್ಬನೆ ಓಟು ಹಾಕೋಕೆ ಹೋಗಿ ಏನಾದರೂ ಹೆಚ್ಚು ಕಡಿಮೆ ಆಗಿ ಯಾವುದರ ಮೇಲಾದರೂ ಬಿದ್ದು ಓಟು ಮಿಶಿನ್ ಏನಾದರೂ ಡ್ಯಾಮೇಜ್ ಆದ್ರೆ ನಾನು ಜವಾಬ್ದಾರ ಅಲ್ಲ" ಎಂದು ತನ್ನ ಮೇಲೆ ಓಟಿಂಗ್ ಮಷಿನ್ ಮತ್ತು ಹೊಸದಾಗಿ ಬಂದಿರುವ ವಿವಿಪ್ಯಾಟ್ ಯಂತ್ರ ಇತ್ಯಾದಿಗಳ ರಕ್ಷಣೆಯ ಜವಾಬ್ದಾರಿಯ ಭಾರವನ್ನು ಆರೋಪಿಸಿಕೊಂಡ. ಇತ್ತ ಅಧ್ಯಕ್ಷಾಧಿಕಾರಿಯ ಬೆವರು ಹೆಚ್ಚಾಗಿ ತಲೆ ಬುರುಡೆಯ ರೋಮಗಳ ಬುಡದಿಂದ ನೀರು ಕುತ್ತಿಗೆಯ ಮೇಲೆಲ್ಲ ಇಳಿದು ಶರಟಿನ ಕಾಲರನ್ನು ತೋಯಿಸಿ ನೆನೆದ ಜಾಗ ವಿಸ್ತರಿಸುತ್ತಾ ಹೋದಂತೆ ಜನಗಳ ಗುಸುಪಿಸು ಸಹ ಹೆಚ್ಚಾಗಿ ಅವರ ತಿಳಿವಳಿಕೆ ಮತ್ತು ಕಾರ್ಯಧಕ್ಷತೆಯೇ ಪ್ರಶ್ನಾರ್ಹವಾಗಿ ಕಾಣತೊಡಗಿದವು. ಕೇಂದ್ರದ ಇತರೆ ಉಪ ಅಧಿಕಾರಿಗಳು ಏನು ಹೇಳಲಾರದೆ ಗಾಂಭೀರ್ಯ ನಟಿಸುತ್ತಾ ಕುಳಿತರು. ತಮ್ಮದಲ್ಲದ ತಲೆನೋವು ಅವರಿಗೆ ಕುತೂಹಲಕಾರಿ ಗುಪ್ತ ಮನರಂಜನೆಯನ್ನೂ ಒದಗಿಸುತ್ತಿದ್ದುದ್ದು ಸುಳ್ಳಲ್ಲ. ಅಲ್ಲೀಗ ಒಂದೆರಡು ನಿಮಿಷ ಮೌನ. ಎದುರಾಳಿಯ ಎದೆ ಮತ್ತಷ್ಟು ಹಿಗ್ಗಿತ್ತು.ಅಲ್ಲಿಯವರೆಗೂ ಏನೂ ಮಾತನಾಡದೇ ಇದ್ದ ಉಪಾಧ್ಯಕ್ಷಾಧಿಕಾರಿಗೆ ತಾನೂ ಈ ಸಂಧಿಗ್ದದಲ್ಲಿ ಅಧ್ಯಕ್ಷಾಧಿಕಾರಿಯಷ್ಟೇ ಭಾಗೀದಾರ ಎನಿಸಿರಬೇಕು. ಅಥವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದೆಂದು ಅಲ್ಲಿಯವರೆಗೂ ದೀರ್ಘಾಲೋಚನಾ ಮಗ್ನರಾಗಿದ್ದರೆಂದು ಕಾಣುತ್ತದೆ. ತಟ್ಟನೆ ಎದ್ದು ಬಂದ ಅವರು ಪರಿಹಾರವೊಂದನ್ನು ಸೂಚಿಸಿದರು. "ನೋಡಿ, ಯಾರೇ ಮತದಾರನಿಗೆ ಮತ್ತೊಬ್ಬರು ಸಹಾಯಕರಾಗಿ ಬರುವುದಾದರೆ ಅವರು ಮತದಾರನ ಹತ್ತಿರದ ಸಂಬಂಧಿಯಾಗಿರಬೇಕು ಮತ್ತು ಯಾವ ಕಾರಣಕ್ಕೆ ಸಹಾಯ ಬೇಕಾಗಿದೆ ಎಂದು ಘೋಷಿಸಿ ಸಹಿ ಹಾಕಬೇಕು. ನೀವು ಈತನಿಗೆ ಹತ್ತಿರದ ಸಂಬಂಧಿಯೇ?" ಎಂದರವರು. ಮೊದಲ ಬಾರಿಗೆ ತಡವರಿಸುವ ಸರದಿ ಎದುರಾಳಿಯದ್ದಾಗಿತ್ತು. "ಇಲ್ಲ... ಅಂಗಂತ ಆಗದೇ ಇರೋವರಿಗೆ ಸಹಾಯ ಮಾಡದು ತಪ್ಪಾ.." ಎಂದವನ ದ್ವನಿ ತನ್ನ ಗಡಸನ್ನು ಕಳೆದುಕೊಳ್ಳುತ್ತಿರುವುದು ಅನುಭವಜನ್ಯವಾಗುತ್ತಿತ್ತು. ಅಧಿಕಾರಿಯ ದ್ವನಿ ಹೆಚ್ಚು ಸ್ಥಿರವಾಯಿತು "ಹಾಗಾದರೆ, ನೀವು ಸಹಾಯಕರಾಗಿ ಹೋಗುವುದು ಬೇಡ....ಅವರೊಬ್ಬರೇ ಓಟಿಂಗ್ ಮಾಡಲು ಪ್ರಯತ್ನಿಸಲಿ....ತೀರಾ ಆಗದಿದ್ದರೆ ಅಧ್ಯಕ್ಷಾಧಿಕಾರಿ ಹೋಗಿ ಅಗತ್ಯ ಮಾರ್ಗದರ್ಶನ ನೀಡಿ ಬರಲಿ. ಇದನ್ನೂ ಮೀರಿ ಆತ ಮಶೀನ್ ಗೆ ಡ್ಯಾಮೇಜ್ ಏನಾದರೂ ಮಾಡಿದರೆ ಪೋಲೀಸಿನವರಿಗೆ ಒಪ್ಪಿಸುತ್ತೇವೆ. ಆಗ ಆತ ಮತ್ತು ಸಹಾಯಕ ಇಬ್ಬರೂ ವಿಚಾರಣೆ ಎದುರಿಸಬೇಕಾಗತ್ತೆ...ಅಲ್ಲಿ ಜಜ್ ಎದುರಿಗೆ ನಿಮ್ಮಗೆ ಇಷ್ಟ ಬಂದಂತೆ ವಾದಿಸಬಹುದು....". ಅಲ್ಲೀ ವರೆಗೂ ಮಾತು ತೊದಲುತ್ತಿದ್ದ ಕುಡುಕನ ಅಮಲೂ ಸ್ವಲ್ಪ ಇಳಿದಿರಬೇಕು. "ಹೋಗ್ಲಿ ಬುಡಿ ಸಾಹೇಬ್ರೆ....ನನಗೆ ತಿಳಿದಂಗೆ ಓಟು ಹಾಕ್ತೀನಿ..." ಎಂದವನು ಓಟಿಂಗ್ ಕಂಪಾರ್ಟಮೆಂಟಿಗೆ ಹೋದಾಗ "ಯಾವ ಬಟನ್ ಒತ್ತಬೇಕು ಇದ್ರಾಗೆ?" ಎಂದ. "ಬಲಭಾಗದಲ್ಲಿರುವ ನೀಲಿ ಬಟನ್" ಎಂದು ಹೇಳಿ ಮುಗಿಸುವ ಮುಂಚೆಯೇ ಓಟನ್ನೂ ಹಾಕಿದ್ದ. ಆದರೆ ಬೀಳಲೂ ಇಲ್ಲ, ಸಹಾಯದ ಅವಶ್ಯಕತೆಯೂ ಬೀಳಲಿಲ್ಲ. "ಯಾವುದಕ್ಕೆ ಒತ್ತಿದೋ ಮಾರಾಯ...ನಿನ್ನನ್ನ ಹೆಂಗಯ್ಯ ನಂಬದು...ಎರಡು ಕ್ವಾಟ್ರೂ ವೇಸ್ಟು...." ಎಂದೇನನ್ನೋ ಗೊಣಗುತ್ತಾ ಅಸಮಾಧಾನದಿಂದ ಸ್ವ ಘೋಷಿತ ಸಹಾಯಕ ಹೊರಗೆ ಹೆಜ್ಜೆ ಹಾಕಿದ. ಕರೆದುಕೊಂಡು ಬಂದಿದ್ದವನನ್ನು ಮರಳಿ ಕರೆದೊಯ್ಯಲೂ ಮರೆತ.
ಇತ್ತ ಬೆವರು ಒರೆಸಿಕೊಂಡ ಅಧ್ಯಕ್ಷಾಧಿಕಾರಿ ಆಯೋಗದವರೇ ಒದಗಿಸಿದ್ದ ಕ್ಯಾನ್ ನೀರನ್ನು ಬಗ್ಗಿಸಿಕೊಂಡು ಕುಡಿದು ಸ್ವಸ್ಥಾನದಲ್ಲಿ ಕುಳಿತು ನಿಟ್ಟುಸಿರು ಬಿಟ್ಟದ್ದು ತುಸು ಜೋರಾಗಿಯೇ ಕೇಳಿಸಿತು.