Click here to Download MyLang App

ವಿಲಕ್ಷಣ - ಬರೆದವರು : ಗುರುರಾಜ ಕೊಡ್ಕಣಿ | ಹಾರರ್ಶಮಂತಕ ಏದುಸಿರು ಬಿಡುತ್ತಿದ್ದ.ಅದೆಷ್ಟು ದೂರದಿಂದ ಆ ದಟ್ಟ ಕಾಡಿನಲ್ಲಿ ಓಡುತ್ತ ಸಾಗಿದ್ದನೋ ಅವನಿಗೆ ತಿಳಿಯದು. ಹುಲ್ಲುಗಂಟಿಗಳನ್ನು ದಾಟಿ,ನಡುನಡುವೆ
ಮರಗಳನ್ನು ತಪ್ಪಿಸಿ ಜಿಗಿಯುತ್ತ ಮುಂದೆ ಸಣ್ಣದ್ದೊಂದು ದಾರಿಯೂ ಕಾಣದ ಗೊಂಡಾರಣ್ಯ ನಡುವೆ ನಿಂತವನಿಗೆ ತಾಳಲಾಗದ ಬಾಯಾರಿಕೆ. ಉಗುಳುನುಂಗುತ್ತ
ಹಿಂದಕ್ಕೆ ಒಮ್ಮೆ ತಿರುಗಿ ನೋಡಿದವನಿಗೆ ತನ್ನನ್ನು ಯಾರೋ ಬೆನ್ನಟ್ಟಿದ್ದಾರೆನ್ನುವ ಅನುಮಾನ.ಆದರೆ ಅವನ ಹಿಂದೆ ಯಾರೂ ಇದ್ದಂತೆನಿಸಲಿಲ್ಲ.ಕಾಡಿನಲ್ಲಷ್ಟು ಹಕ್ಕಿಗಳ
ಕೂಗು,ದೂರದಲ್ಲೆಲ್ಲೋ ’ಘೂಕ್,ಘೂಕ್’ಎಂದರಚುವ ಕೋತಿಗಳ ಅರಚಾಟ,ಇಷ್ಟೆಲ್ಲದರ ನಡುವೆ ಕಾಡುತ್ತಿರುವ ಅಗೋಚರ ಭಯ .ಅವನ ಕಾಲುಗಳಲ್ಲಿ
ಅಸಾಧ್ಯವಾದ ನೋವು.ಅಸಲಿಗೆ ತಾನು ಹುಚ್ಚನಂತೆ ಹಾಗೆ ಓಡುತ್ತಿದ್ದುದೇಕೆ ಎನ್ನುವುದು ಅವನಿಗೆ ನೆನಪಾಗದು. ಎಲ್ಲಿಂದ ಶುರುವಾಯಿತು,ಎಲ್ಲಿಗೆ ಹೋಗುತ್ತಿದೆ ತನ್ನ ಓಟ..? ಊಹುಂ,ಅದೂ ನೆನಪಾಗದು. ಎಲ್ಲಿಂದಲೋ ಓಡುತ್ತ ಬಂದವನು ಅಚಾನಕ್ಕಾಗಿ
ಎದುರಿಗೆ ಸಿಕ್ಕ ದೊಡ್ಡ ಮರಕ್ಕೆ ಅಪ್ಪಳಿಸಿ ಬಿದ್ದುಬಿಟ್ಟೆನೆಂಬ ಕಾರಣಕ್ಕೆ ಹಠಾತ್ ಆಗಿ ನಿಂತಿದ್ದು ಮಾತ್ರ ಅವನಿಗೆ ಗೊತ್ತು.ತಡೆಯಲಾಗದ ಅಶಕ್ತತೆಗೆ ಕುಸಿದು ಕುಳಿತವನನ್ನು
ನಡು ಮಧ್ಯಾಹ್ನದ ಕಾಡಿನ ಧಗೆ ಸುಡುತ್ತಿತ್ತು.ಬೆವರಿನಿಂದ ತೊಯ್ದು ಹೋಗಿದ್ದ ಅವನ ಕಷ್ಟ ನೋಡಲಾಗದು ಎನ್ನುವಂತೆ ಅದೆಲ್ಲಿಂದಲೋ ಬೀಸಿ ಬಂದ
ತಂಗಾಳಿಯ ಅಲೆಯೊಂದು ಅವನನ್ನು ಸವರಿಕೊಂಡು ಹೋಯಿತು.ಗಾಳಿಯ ತಂಪಿಗೆ ಕೊಂಚ ಹಾಯೆನಿಸಿ ಕುಳಿತಲ್ಲಿಯೇ ಬೆನ್ನ ಹಿಂದಿದ್ದ ಮರದ ಬೊಡ್ಡೆಗೆ ತಲೆಯಾನಿಸಿ
ಕಣ್ಣುಮುಚ್ಚಿದ.ಕಣ್ಮುಚ್ಚಿ ಕೊಂಚ ವಿರಮಿಸಬೇಕು ಎಂದುಕೊಂಡಿದ್ದ ಶಮಂತಕನಿಗೆ ಮತ್ತೆ ಅಪಾಯದ ಮುನ್ಸೂಚನೆ.ಅಷ್ಟು ಹೊತ್ತು ಚಿಲಿಪಿಲಿಗುಡುತ್ತಿದ್ದ
ಪಕ್ಷಿಗಳು,ಕಿರುಚುತಿದ್ದ ಕೋತಿಗಳು ಏಕಾಏಕಿ ಮೌನವಾಗಿ ಹೋಗಿದ್ದು ಅವನ ಬೆನ್ನಹುರಿಯಾಳದಲ್ಲೊಂದು ನಡುಕ ಹುಟ್ಟಿಸಿತ್ತು..ಕಾಡಿನ ಅಂತಹ ಅಸಹನೀಯ ಮೌನವನ್ನು
ಸೀಳಿಕೊಂಡು ಬರುತ್ತಿದ್ದ ಸದ್ದೊಂದು ಅವನಲ್ಲಿ ತೀವ್ರವಾದ ಉದ್ವಿಗ್ನತೆಯನ್ನು ಹುಟ್ಟಿಹಾಕಿತ್ತು.ಯಾರೋ ನಿಧಾನಕ್ಕೆ ನಡೆದುಕೊಂಡು ತನ್ನತ್ತಲೇ ಬರುತ್ತಿದ್ದಾರೆನ್ನುವ
ಅನುಮಾನ ಅವನನ್ನು ಪುನ: ಕಾಡತೊಡಗಿತ್ತು.ಹರಡಿ ಬಿದ್ದಿದ್ದ ಮರದ ಒಣಗಿದೆಲೆಗಳ ಮೇಲೆ ಕ್ಷೀಣವಾಗಿ ಕೇಳಿಬರುತ್ತಿದ್ದ ಹೆಜ್ಜೆಗಳ ಶಬ್ದ. ಕುಳಿತಲ್ಲಿಯೇ ನಿಧಾನಕ್ಕೆ
ಎದ್ದುನಿಂತ ಶಮಂತಕ.ಮೂರಡಿ ಎತ್ತರದ ಹುಲ್ಲುಗಳ ನಡುವೆ ನಡೆಯುತ್ತಿರುವ ಜೀವಿ ತನಗೆ ಕಾಣಸುತ್ತಿಲ್ಲವೆಂದಾಗ ಅದು ಮನುಷ್ಯನಲ್ಲ ಬದಲಾಗಿ ಯಾವುದೋ
ಕಾಡುಪ್ರಾಣಿಯಿರಬೇಕೆನ್ನುವುದು ಅವನಿಗೆ ಖಚಿತವಾಗಿತ್ತು. ಪುನ: ಓಡೋಣವೆಂದರೆ ಒಂದು ಹೆಜ್ಜೆಯೂ ಮುಂದಿಡಲಾಗದ ಅಶಕ್ತ ಸ್ಥಿತಿ ಅವನ ಕಾಲ್ಗಳಲ್ಲಿ.ದಿಕ್ಕು ತೋಚದಂತಾಗಿ
ಮರದ ಕಾಂಡವನ್ನೇ ಅಂಟಿಕೊಂಡಂತೆ ನಿಂತುಕೊಂಡ ಶಮಂತಕನಿಗೆ ಹುಲ್ಲಿನ ತೆರೆಯಿಂದ ಸಣ್ಣಗೆ ಇಣುಕಿದ ಬಿಳಿಯ ಹೆಬ್ಬುಲಿಯನ್ನು ಕಂಡಾಗ ಅಕ್ಷರಶಃ ಮೃತ್ಯುವನ್ನು ಕಂಡ
ಅನುಭವ. ಅರೆಕ್ಷಣ ಅವನನ್ನೇ ದಿಟ್ಟಿಸಿದ ಬಿಳಿಹುಲಿ ಒಂದು ರಣಭೀಕರ ಘರ್ಜನೆಯೊಂದಿಗೆ ಒಮ್ಮೆ ಕೊಂಚ ಹಿಂದಕ್ಕೆ ಬಾಗಿ ಅವನ ಮೇಲೆರಗಿತ್ತು.ಏನೂ ಮಾಡಲಾಗದ ಅಂತಿಮ ಕ್ಷಣಗಳ
ಅಸಹಾಯಕತೆಯಿಂದ ತನ್ನೆರಡು ಕೈಗಳನ್ನು ತನ್ನತ್ತ ಹಾರಿ ಬರುತ್ತಿದ್ದ ಹುಲಿಯೆದುರು ಗುರಾಣಿಯಂತೆ ಎತ್ತಿ ಹಿಡಿದ ಶಮಂತಕ.

ಧಡಕ್ಕನೇ ಎದ್ದು ಕುಳಿತ ಶಮಂತಕನಿಗೆ ತಾನು ಕಂಡದ್ದು ಕನಸು ಎಂಬುದರಿವಾಗಲು ಕೊಂಚ ಸಮಯ ಹಿಡಿಯಿತು.ಎದ್ದು ಕುಳಿತವನ ಮೈಯೆಲ್ಲೊಂದು ಸಣ್ಣ
ಕಂಪನ.ಕೈಕಾಲುಗಳಲ್ಲಿ ವಿಚಿತ್ರ ನಿಶ್ಯಕ್ತಿ.ಮಧ್ಯರಾತ್ರಿಯ ಪ್ರಶಾಂತತೆಯ ನಡುವೆ ಅವನ ಎದೆಯಬಡಿತ ಹೊರಗೆ ಕೇಳಿಸುವಷ್ಟು ಜೋರಾಗಿತ್ತು.ಎದುರಿಗಿನ ಗೋಡೆಯ
ಮೇಲಿನ ಗಡಿಯಾರದತ್ತ ಕ್ಷಣಹೊತ್ತು ನೋಡಿದ ಶಮಂತಕ ಪಕ್ಕದ ಮೇಜಿನ ಮೇಲಿದ್ದ ನೀರಿನ ಬಾಟಲಿಯ ಮುಚ್ಚಳ ತೆರೆದು ಗಟಗಟನೆ ನೀರು
ಕುಡಿದ.ಭಂಗವಾದ ನಿದ್ರೆಯ ಪ್ರತಿಫಲವಾಗಿ ಶಮಂತಕನ ತಲೆಯೆಲ್ಲ ಭಾರ.ಬಿದ್ದ ಭಯಾನಕ ಕನಸಿನ ಪರಿಣಾಮವದು.ಸ್ವಲ್ಪ ಹೊತ್ತು ಮಂಚದ ಮೇಲೆ ಸುಮ್ಮನೇ
ಕುಳಿತವನು ದೀಪವಾರಿಸಿ ಮಂಚದ ಮೇಲೆ ಅಂಗಾತವಾದರೆ ಕಣ್ಗಳಿಗೆ ನಿದ್ರೆಯ ಸುಳಿವಿಲ್ಲ.ಕನಸಿನಲ್ಲಿ ಕಂಡಿದ್ದ ಹುಲಿಯ ಕೆಂಗಣ್ಣು,ಅದರ ಚೂಪಾದ
ಉಗುರುಗಳು,ಎದೆನಡುಗಿಸುವ ಘರ್ಜನೆ ಎಲ್ಲವೂ ಅವನಿಗೆ ಕನಸಿನ ಹೊರಗೂ ಸ್ಪಷ್ಟ.ಸಣ್ಣದ್ದೊಂದು ಕನಸಿಗೆ ಹೆದರುವಷ್ಟು ಪುಕ್ಕಲನಲ್ಲ ಅವನು.ಆದರೆ ಇದು
ಬರಿಯ ಕನಸಲ್ಲ. ಭೀಕರ ದುರ್ಘಟನೆಯೊಂದರ ಮುನ್ಸೂಚನೆ.ಅದೇ ಕನಸು ಅವನ ಬದುಕಿನಲ್ಲಿ ಹಿಂದೆಯೂ ಎರಡು ಬಾರಿ ಬಂದಿದೆ.ಪ್ರತಿಬಾರಿಯೂ ಬೆಳಗಿನ
ಜಾವಕ್ಕೆ ಬೀಳುವ ಬೀಭತ್ಸ ಸ್ವಪ್ನವದು.ಕನಸು ಬಿದ್ದಾಗಲೆಲ್ಲ ಸ್ವಪ್ನದ ಹುಲಿ ಅವನ ಬದುಕಿನಲ್ಲಿನ ಅತಿಪ್ರೀತಿಯ ವ್ಯಕ್ತಿಯೊಬ್ಬರನ್ನು ಕೊಂಡೊಯ್ಯುತ್ತದೆ.ಕನಸು ಬಿದ್ದ
ಇಪ್ಪತ್ನಾಲ್ಕು ಗಂಟೆಗಳೊಳಗಾಗಿ ಅವನ ಪರಮಾಪ್ತರೊಬ್ಬರ ಸಾವು ಉಂಟಾಗುತ್ತದೆ.ಅದನ್ನು ನೆನಸಿಕೊಂಡೇ ನಲುಗಿಹೋಗಿದ್ದ ಶಮಂತಕ.

ಬೆಳಿಗ್ಗೆಯೆದ್ದಾಗ ಶಮಂತಕನ ತಲೆ ಸಣ್ಣದಾಗಿ ನೋಯುತ್ತಿತ್ತು.ಹಾಸಿಗೆಯನ್ನು ಸರಿಪಡಿಸಿ ಬಚ್ಚಲಿಗೆ ತೆರಳಿದ ಶಮಂತಕ ಕಣ್ಣೆಲ್ಲ ಕೆಂಪಗಾಗಿದ್ದವು.ಯಾಂತ್ರಿಕವಾಗಿ
ಹಲ್ಲುಜ್ಜಲಾರಂಭಿಸಿದವನ ಮನಸ್ಸು ಗೊಂದಲದ ಗೂಡು.ತನಗೆ ಬೀಳುವ ಕನಸಿನ ವಿಲಕ್ಷಣತೆಯೇ ಅವನಿಗೆ ಅರ್ಥವಾಗದು.ತನ್ನ ಚಿಕ್ಕಪ್ಪನೊಂದಿಗೆ ಮೈಸೂರಿನ
ಮೃಗಾಲಯದಲ್ಲಿ ಮೊದಲ ಬಾರಿಗೆ ಬಿಳಿಹುಲಿಯನ್ನು ಕಂಡಾಗ ಶಮಂತಕನಿಗೆ ಹನ್ನೆರಡರ ಪ್ರಾಯ.ಅದೇಕೋ ಮೊದಲ ನೋಟದಲ್ಲೇ ಬಿಳಿಹುಲಿ ಅವನಲ್ಲೊಂದು
ಭಯವನ್ನು ಹುಟ್ಟು ಹಾಕಿತ್ತು.ಬೋನಿನ ಸುತ್ತ ನೆರೆದಿದ್ದ ಅಷ್ಟೂ ಜನರನ್ನು ಬಿಟ್ಟು ಅವನತ್ತಲೇ ಧಾವಿಸಿ ಭೀಕರವಾಗಿ ಘರ್ಜಿಸಿದ್ದ ಹುಲಿಯ ರೌದ್ರಾವತಾರ ಕಂಡು
ಗಾಬರಿಯಾಗಿ ಭೋರೆಂದು ಅಳುತ್ತಿದ್ದ ಶಮಂತಕನನ್ನು ಸುಧಾರಿಸುವಷ್ಟರಲ್ಲಿ ಚಿಕ್ಕಪ್ಪನಿಗೆ ಸಾಕಾಗಿಹೋಗಿತ್ತು.ಸಂಜೆಯ ಹೊತ್ತಿಗೆ ಹುಬ್ಬಳ್ಳಿಯ ಬಸ್ಸು ಹತ್ತಿದ
ಇಬ್ಬರಿಗೂ ತೀರದ ದಣಿವು.ಬಸ್ಸನ್ನೇರಿದ ಕೆಲವೇ ಕ್ಷಣಗಳಿಗೆ ಚಿಕ್ಕಪ್ಪ ಗೊರಕೆ ಹೊಡೆಯಲಾರಂಭಿಸಿದರೆ, ಅರೆ ನಿದ್ರೆಯಲ್ಲಿದ್ದ ಶಮಂತಕನ ಮೇಲೆ ಮೊದಲ ಬಾರಿ
ನೆಗೆದಿತ್ತು ಸ್ವಪ್ನ ವ್ಯಾಘ್ರ.’ಹುಲಿ ಹುಲಿ’ಎನ್ನುತ್ತ ಬಸ್ಸಿನಲ್ಲಿ ಮಲಗಿದ್ದವರಿಗೆಲ್ಲ ಎಚ್ಚರವಾಗುವಂತೆ ಕಿರುಚಿಕೊಂಡಿದ್ದ ಶಮಂತಕನ ಬೆನ್ನನ್ನು ಹಿತವಾಗಿ ನೀವುತ್ತ
ಸಮಾಧಾನ ಮಾಡಿದ್ದ ಚಿಕ್ಕಪ್ಪ ಬಸ್ಸಿನಿಂದಿಳಿದು ಮನೆಯತ್ತ ಸಾಗುವಾಗ,’ಒಂದ್ ಕನಸಿಗ್ ಅಂಜತಾರೇನ್ಲೇ ಮಂಗ್ಯಾ,ಏನೂ ಆಗಾಂಗಿಲ್ಲ ಬಿಡು’ಎಂದೆನ್ನುತ್ತ
ದಾರಿಯುದ್ದಕ್ಕೂ ,’ದೊಡ್ಡ ಅಂಜ್ಬುರ್ಕ್ ಅದಿ ನೀ’ಎಂದು ಕಾಲೆಳೆದಿದ್ದರು.ಹಾಗೆ ’ಏನೂ ಆಗಾಂಗಿಲ್ಲ’ಎಂದು ಧೈರ್ಯ ತುಂಬಿದ್ದ ಚಿಕ್ಕಪ್ಪ ಅದೇ ದಿನ ಸಂಜೆ ಊರ
ಹೊರಗಿನ ಕೊಳಕು ಬಾವಿಗೆ ಬಿದ್ದು ನಿಗೂಢವಾಗಿ ಆತ್ಮಹತ್ಯೆಗೆ ಶರಣಾಗಿದ್ದರು.

ಸ್ನಾನಕ್ಕೆ ನಿಂತ ಶಮಂತಕನಿಗೆ ನೆತ್ತಿಯ ಮೇಲೆ ಬಿಸಿನೀರು ಬಿದ್ದು ಕಣ್ಣು ಮುಚ್ಚಿದಾಗಲೆಲ್ಲ ಕಾಣುತ್ತಿದ್ದದ್ದು ಚಿಕ್ಕಪ್ಪನ ವಿಕಾರವಾದ ಶವ.ಅದೇಕೋ ಏನೋ,ಚಿಕ್ಕಪ್ಪ
ಸತ್ತ ದಿನದಂದೇ ಅವರ ಸಾವಿಗೂ,ತನ್ನ ಕನಸಿನ ಹುಲಿಗೂ ಅಲೌಕಿಕ ಸಂಬಂಧವಿದೆ ಎನ್ನಿಸಿಬಿಟ್ಟಿತ್ತು ಅವನಿಗೆ.ನೀರು ತುಂಬಿಕೊಂಡು ಊದಿಕೊಂಡಿದ್ದ ಚಿಕ್ಕಪ್ಪನ
ಶವದ ಬಾಯಿ ತೆರೆದು ಹೋಗಿ ಹಲ್ಲುಗಳು ಕರಾಳವಾಗಿ ಚಾಚಿಕೊಂಡದ್ದು ನೆನಪಾಗಿ ಮತ್ತೊಮ್ಮೆ ಬೆಚ್ಚಿಬಿದ್ದ ಶಮಂತಕ.ಗಡಿಬಿಡಿಯಲ್ಲಿ ಸ್ನಾನ ಮುಗಿಸಿ ದೇವರ
ಚಿತ್ರದೆದುರು ತುಪ್ಪದ ದೀಪವನ್ನು ಬೆಳಗಿ ಯಾವೊಂದು ಅಶುಭವಾರ್ತೆಯೂ ತನ್ನ ಕಿವಿಗೆ ಬೀಳದಿರಲಪ್ಪಾ ತಂದೆ ಎಂದು ಬೇಡಿಕೊಳ್ಳುವಷ್ಟರಲ್ಲಿ ’ಅನಿಸುತಿದೆ
ಯಾಕೋ ಇಂದು ’ಎಂದು ಹಾಡಲಾರಂಭಿಸಿತ್ತು ಅವನ ಮೊಬೈಲು.ತೀರ ಇಷ್ಟು ಬೆಳಗಿನ ಜಾವಕ್ಕೆ ಯಾರದಿರಬಹುದು ಫೋನು ಎಂದುಕೊಳ್ಳುತ್ತ ಮೇಜಿನ
ಮೇಲಿದ್ದ ಫೋನೆತ್ತಿ ನೋಡಲಾಗಿ ಸ್ಕ್ರೀನಿನ ಮೇಲೆ ’ಅಮ್ಮ’ ಎಂಬ ಹೆಸರು ಮಿಂಚುತ್ತಿತ್ತು . ಅಮ್ಮನ ಹೆಸರು ಕಾಣುತ್ತಲೇ ಅವನಿಗೆ ಹೃದಯ ಬಾಯಿಗೆ ಬಂದ
ಅನುಭವ.ಬೆಂಗಳೂರಿಗೆ ಬಂದ ಇಷ್ಟು ವರ್ಷಗಳಲ್ಲಿ ಅಮ್ಮ ಬೆಳಗ್ಗಿನ ಏಳುಗಂಟೆಗೆ ಫೋನು ಮಾಡಿರುವುದು ಇದೇ ಮೊದಲು.ಅಪ್ಪಿತಪ್ಪಿ ಭಾನುವಾರದಂದು ಬೆಳಿಗ್ಗೆ
ಎಂಟುಗಂಟೆಗೆ ಫೋನು ಮಾಡಿದರೂ ಅಮ್ಮ ಗಾಬರಿಯಾಗಿ,’ಇಷ್ಟ್ ಮುಂಜಾನೆ ಫೋನ್ ಹಚ್ಚತಾರೆನ ಭಾಡ್ಯಾ’ಎಂದು ಬಯ್ದದ್ದುಂಟು.ಹೀಗಿರುವಾಗ ಅವಳೇ
ಫೋನು ಮಾಡಿದ್ದಾಳೆಂದರೆ ಏನೋ ದುರ್ವಾರ್ತೆ ಕಾದಿದೆ ಎಂದುಕೊಳ್ಳುತ್ತ ನಡುಗುವ ಕೈಗಳಿಂದಲೇ ಫೋನು ಸ್ವೀಕರಿಸಿದ ಶಮಂತಕ ನಿಧಾನಕ್ಕೆ
’ಹಲೋ’ಎಂದ.’ಶಮಿ,ಎಲ್ಲದೀಪಾ ನಿಮ್ಮ ಅಪ್ಪಾಜಿಗೆ ಬಿಪಿ ಸಿಕ್ಕಾಪಟ್ಟೆ ಹೆಚ್ಚ್ ಆಗ್ಯೇದ.ಮುಂಜಮುಂಜಲೆ ನಾಕ್ ಗಂಟೆಗ್ ತ್ಯಲಿ ತಿರ್ಗಿ ಬಿದ್ದ ಬಿಟ್ಟಾರ್, ರಕ್ತ
ವಾಂತಿನೂ ಆಗೈತಿ,ಸಿದ್ಧಾರೂಡ ನರ್ಸಿಂಗ್ ಹೋಮ್ ಗ್ ಅಡ್ಮಿಟ್ ಮಾಡೇವಿ’ಎಂದು ಬಿಕ್ಕಲಾರಂಭಿಸಿದ್ದಳು ಅಮ್ಮ.ಒಮ್ಮೇಲೆ ತಲೆ ಸುತ್ತಿದಂತಾಯಿತು
ಶಮಂತಕನಿಗೆ.ಎರಡು ದಿನಗಳ ಹಿಂದಷ್ಟೇ ವೈದ್ಯರ ಬಳಿ ಪರೀಕ್ಷೆಗೆ ತೆರಳಿದ್ದ ಅಪ್ಪ ತನ್ನ ರಕ್ತದೊತ್ತಡ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆಯೆಂಬುದಾಗಿ
ತಿಳಿಸಿದ್ದರು.ತಾನು ದಿನವೂ ಬೆಳಗ್ಗೆಯೆದ್ದು ವಾಕಿಂಗು,ವ್ಯಾಯಾಮ ಮಾಡುವುದರ ಪರಿಣಾಮವದು ಎಂದು ಹೆಮ್ಮೆಯೂ ಪಟ್ಟಿದ್ದರು.ಈಗ ಏಕಾಏಕಿ
ಹೀಗಾಗಿದೆಯೆಂದರೆ ಇದು ನಿಗೂಢ ಕನಸಿನ ಪರಿಣಾಮವೇ ಎಂದುಕೊಂಡ ಶಮಂತಕ. ಏನು ಹೇಳುವುದೆಂದು ತಿಳಿಯದೇ ಸುಮ್ಮನೇ ಅಮ್ಮನ ಬಿಕ್ಕುವಿಕೆಯನ್ನು
ಕೇಳಿಸಿಕೊಂಡ.’ಶಮಿ,ನೀ ಹೆಂಗರ್ ಮಾಡಿ ಬಂದ್ ಬಿಡು.ನನಗ ಅಂಜಿಕಿ ಆಗಾಕತ್ತೈತಿ’ಎಂಬ ಅಮ್ಮನ ಮಾತುಗಳಿಗೆ ಏನೆನ್ನುವುದೋ
ತಿಳಿಯದಾಯಿತು.ಹುಬ್ಬಳ್ಳಿಯಲ್ಲಿ ಇದ್ದಿದ್ದು ಅಪ್ಪ ಅಮ್ಮ ಇಬ್ಬರೇ.ಇದ್ದೊಬ್ಬ ಚಿಕ್ಕಪ್ಪ ಯಾವತ್ತಿಗೋ ತೀರಿಕೊಂಡಿದ್ದ.ಅಮ್ಮನಿಗೆ ಗಾಬರಿಯಾಗುವುದು ಸಹಜವೇ.’ನೀ
ಏನ್ ಅಂಜಬೇಡ,ನಾ ಕೂಡ್ಲೇ ಹುಬ್ಳಿ ಬಸ್ ಹತ್ತತೀನಿ’ಎಂದು ಸಮಾಧಾನ ಮಾಡಿದ ಶಮಂತಕ.ಸರಿಯಾಗಿ ಎಂಟುಗಂಟೆಗೆ ಮೆಜೆಸ್ಟಿಕ್ ನಿಂದ ಹುಬ್ಬಳ್ಳಿಗೆ
ತೆರಳುವ ಬಸ್ಸಿರುವುದು ಅವನಿಗೆ ತಿಳಿದಿತ್ತು.ಬೇರೇನನ್ನೂ ಯೋಚಿಸದೆ ಬ್ಯಾಗೊಂದಕ್ಕೆ ಕೈಗೆ ಸಿಕ್ಕ ಬಟ್ಟೆಗಳನ್ನು ತುರುಕಿದ.ಬ್ರಷ್ಷು ,ಸೋಪುಗಳನ್ನು ಊರಿನಲ್ಲಿ
ಕೊಂಡರಾಯ್ತು ಎಂದು ಯೋಚಿಸಿದವನೇ ಮನೆಯ ಬಾಗಿಲಿಗೆ ಬೀಗ ಜಡಿದು ರಿಕ್ಷಾವನ್ನೇರಿ ಮೆಜೆಸ್ಟಿಕನತ್ತ ಪಯಣಿಸಿದ. ರಿಕ್ಷಾದಲ್ಲಿ ಕುಳಿತು ತನ್ನ ಮೇಲಾಧಿಕಾರಿ
ಫೋನು ಮಾಡಿ ಪರಿಸ್ಥಿತಿಯನ್ನು ಅರುಹಿದ.ಟ್ರಾಫಿಕ್ಕಿನ ಕಾರಣದಿಂದ ಕೊಂಚ ತಡವಾಗಿಯೇ ಮೆಜೆಸ್ಟಿಕ್ ತಲುಪಿಕೊಂಡ ಶಮಂತಕನಿಗೆ ನಿಲ್ದಾಣದಲ್ಲಿ ಹುಬ್ಬಳ್ಳಿಯ
ಬಸ್ಸು ಕಂಡಾಗ ದೊಡ್ಡ ಸಮಾಧಾನ. ಬಸ್ಸು ಸಾಕಷ್ಟು ಖಾಲಿಯೇ ಇತ್ತು.ಬಸ್ಸಿನ ಸೀಟೊಂದರಲ್ಲಿ ಕುಳಿತು ನಿರ್ವಾಹಕನ ಬಳಿ ಟಿಕೆಟ್ಟು ಕೇಳಿ ಪಡೆಯುವಷ್ಟರಲ್ಲಿ
ಬಸ್ಸು ನಿಧಾನವಾಗಿ ನಿಲ್ದಾಣದಿಂದ ಚಲಿಸಲಾರಂಭಿಸಿತ್ತು.

ನಿಲ್ದಾಣವನ್ನು ದಾಟಿದ ಬಸ್ಸು ತುಮಕೂರಿನ ಮಾರ್ಗವಾಗಿ ತೆರಳಲಾರಂಭಿಸಿದರೆ ಶಮಂತಕನ ತಲೆಯೆನ್ನುವುದು ಯೋಚನೆಗಳ ಸಾಗರ.ಸೋದರನ ಸಾವಿನ
ಮುನ್ನಾದಿನವೂ ಕನಸು ತನ್ನನ್ನು ಕಾಡಿದ್ದು ಅವನಿಗೆ ನೆನಪಿತ್ತು.ಆರು ವರ್ಷಗಳ ಹಿಂದೆ ಹೆತ್ತವರಿಗೆ ತಿಳಿಯದಂತೆ ಮೊದಲ ಬಾರಿ ಬಿಯರ್ ಹೀರಿ ಮಂಚಕ್ಕೊರಗಿದ್ದ
ಶಮಂತಕನಿಗೆಎರಡೇ ನಿಮಿಷಕ್ಕೆ ಗಾಢನಿದ್ರೆ.ಬಿಯರಿನ ನಶೆಯ ಪರಿಣಾಮವೆನ್ನುವಂತೆ ಕನಸಿಲ್ಲದ ನಿದ್ರೆಯ ಆನಂದವನ್ನು ಅವನು ಅನುಭವಿಸುತ್ತಿದ್ದರೆ,ಅವನ
ಸುಖವನ್ನು ಹಾಳುಗೆಡವಲು ಮತ್ತೆ ಘರ್ಜಿಸಿತ್ತು ಬಿಳಿಹುಲಿ..!!ಹುಲಿ ತನ್ನೆಡೆಗೆ ನೆಗೆಯುತ್ತಲೇ ಮಂಚದ ಮೇಲಿಂದ ಕೆಳಗೆ ಬಿದ್ದು ಹೋಗಿದ್ದ ಶಮಂತಕ.ಬಿದ್ದ
ಹೊಡೆತಕ್ಕೆ ಬಲಭುಜ ನೋಯುತ್ತಿದ್ದರೆ ಅಲ್ಲಿಯೇ ಪಕ್ಕದಲ್ಲಿ ಮಲಗಿದ ತಮ್ಮ ಉದಯನಿಗೆ ಎಚ್ಚರವೇ ಇಲ್ಲ.ನಿದ್ರೆಗಣ್ಣಿನಲ್ಲಿಯೇ ಭುಜವನ್ನು ನೀವಿಕೊಳ್ಳುತ್ತ ಮಂಚವೇರಿ
ಮಲಗಿಕೊಳ್ಳುವಾಗ ಸಮಯ ಬೆಳಗಿನ ನಾಲ್ಕು ಗಂಟೆಯೆನ್ನುವುದು ಕತ್ತಲಾವರಿಸಿದ್ದ ಕೋಣೆಯ ಗಡಿಯಾರದಲ್ಲಿ ಅಸ್ಪಷ್ಟವಾಗಿ ಕಾಣುತ್ತಿತ್ತು.ಕಷ್ಟಪಟ್ಟು ಹೊರಳಾಡುತ್ತ
ನಿದ್ರಿಸಿದವನನ್ನು ಬೆಳಗಿನ ಜಾವದ ಅಮ್ಮನ ಹೃದಯ ವಿದ್ರಾವಕ ಆಕ್ರಂದನ ಎಚ್ಚರಿಸಿತ್ತು.ಹಾಗೊಂದು ಕೂಗು ಕೇಳಿ ಬಚ್ಚಲಿನೆಡೆಗೆ ಓಡಿದರೆ ಅಲ್ಲಿ ಕಾಣಿಸಿತ್ತು
ತಮ್ಮನ ಶವ..!! ನಸುಕಿನಲ್ಲಿಯೇ ಸ್ನಾನ ಮಾಡಲು ಹೋಗಿ ನೀರು ಕಾಯಿಸುವ ಕಾಯ್ಲ್ ನಿಂದ ಶಾಕ್ ತಗುಲಿ ಸುಟ್ಟು ಕರಕಲಾಗಿ ಹೋಗಿದ್ದ ಉದಯ..!!

ತನ್ನ ಅತ್ಯಾಪ್ತರನ್ನು ಕೊಲ್ಲುವುದಕ್ಕಾಗಿಯೇ ಬಿಳಿಹುಲಿ ಬರುತ್ತದೆ ಎಂಬುದು ಆಗ ಅವನಿಗೆ ಖಚಿತವಾಗಿತ್ತು.ಬದುಕಿದ್ದರೇ ಈಗ ಇಪ್ಪತ್ತಾಗಿರುತ್ತಿತ್ತು ಉದಯನಿಗೆ
ಎಂದುಕೊಳ್ಳುವಷ್ಟರಲ್ಲಿ ಬಸ್ಸು ತುಮಕೂರಿನ ನಿಲ್ದಾಣವನ್ನು ತಲುಪಿಕೊಂಡಿತ್ತು.’ತಿಂಡಿಗೆ ಹತ್ತು ನಿಮಿಷ ಟೈಂ ಇದೆ ನೋಡಿ ಸರ್’ಎಂಬ ಕಂಡಕ್ಟರಿನ ಮಾತು ಕೇಳಿ
ಉಪಹಾರಕ್ಕಾಗಿ ಬಸ್ಸಿಳಿದ ಶಮಂತಕ ತೀರದ ಯೋಚನೆಗಳಲ್ಲಿಯೇ ಮುಳುಗಿ ಅನ್ಯಮನಸ್ಕನಾಗಿ ಪ್ಲಾಟಫಾರ್ಮಿನತ್ತ ನಡೆಯಲಾರಂಭಿಸಿದ್ದ.ಅಪ್ಪನಿಗೆ ಬಿಪಿ
ಬಂದಿರುವುದು ನಿನ್ನೆಮೊನ್ನೆಯಲ್ಲ.ಹದಿನೈದು ವರ್ಷಗಳಿಂದಲೂ ಅದು ಅವರೊಟ್ಟಿಗಿದೆ. ಆದರೆ ಈ ಹಿಂದೆ ಒಮ್ಮೆಯೂ ಅವರು ತಲೆ ತಿರುಗಿ ಬಿದ್ದದ್ದು ತನಗೆ
ನೆನಪಿಲ್ಲ. ಸಾಮಾನ್ಯ ಸಂದರ್ಭವಾಗಿದ್ದರೆ ಬಹುಶ: ತಾನು ಊರಿಗೆ ತೆರಳುತ್ತಲೂ ಇರಲಿಲ್ಲ.ಈಗಿನ ಪರಿಸ್ಥಿತಿಯೇ ಬೇರೆ.ತನ್ನ ಮನಸ್ಸಲ್ಲೇನೋ
ಕೋಲಾಹಲ.ಏನು ಮಾಡವುದೆಂದು ತಿಳಿಯದೇ ಕೈಕೈ ಹಿಸುಕಿಕೊಂಡ ಶಮಂತಕ.ಅಪ್ಪನಿಗೆ ಏನೂ ಆಗುವುದಕ್ಕೆ ಬಿಡಬಾರದು,ಈ ಬಾರಿ ಕನಸು ಸೋಲಬೇಕು
ಎಂಬ ರೋಷ ಅವನಲ್ಲುಕ್ಕಿತು.ಇದೊಂದು ಬಾರಿ ಗೆದ್ದುಬಿಟ್ಟರೆ ಮಾನಸಿಕ ತಜ್ನರನ್ನು ಕಂಡು ಕನಸು ಬೀಳದಿರುವಂತೆ ಚಿಕಿತ್ಸೆ ಪಡೆಯುತ್ತೇನೆ ಎಂದುಕೊಂಡ.ಆದರೆ
ಇದು ಕೇವಲ ಒಂದು ಮಾನಸಿಕ ಸಮಸ್ಯೆಯಾಗಿದ್ದರೆ ಸಾವುಗಳೇಕೆ ಸಂಭವಿಸುತ್ತಿದ್ದವು ಎಂಬ ತರ್ಕ ಅವನಲ್ಲುಂಟಾಯಿತು.ಬಹುಶ: ಯಾವುದೋ ಅಗೋಚರ
ಶಕ್ತಿಯ ಕಂಟಕವಿದು,ಭಟ್ಟರನ್ನೋ,ಮಾಂತ್ರಿಕರನ್ನೋ ಕಂಡು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ನಿಶ್ಚಯಿಸಿದ.ಅಷ್ಟರಲ್ಲಿ ಅವನ ಹಿಂದಿನಿಂದ ಯಾರೋ
’ಏಯ್,ಏಯ್’ಎಂದರಚಿದ ಸದ್ದು.ಏನಾಯಿತೆಂದು ಶಮಂತಕ ತಿರುಗುವಷ್ಟರಲ್ಲಿ ಚಾಲಕನಿಲ್ಲದೆ ನಿಂತಿದ್ದ ಬಸ್ಸೊಂದು ಧಿಗ್ಗನೇ ಅವನ ಎದೆಗೆ ಗುದ್ದಿತ್ತು.ಗುದ್ದಿದ
ವೇಗಕ್ಕೆ ಅಸಾಧ್ಯವಾದ ನೋವು ಅವನಿಗೆ.ಪಕ್ಕಕ್ಕೆ ಸರಿಯೋಣವೆಂದುಕೊಂಡರೆ ತಾನು ಪ್ಲಾಟ್ ಫಾರ್ಮ್ ಮೇಲಿನ ಕಂಬ ಮತ್ತು ಬಸ್ಸಿನ ನಡುವಣ ಜಜ್ಜಿ
ಹೋಗಿದ್ದೇನೆ ಎಂಬುದು ಅರಿವಾಯಿತು.ಕ್ಷಣಾರ್ಧದಲ್ಲಿ ಬೆನ್ನು ಮುರಿದ ಅನುಭವ.ಮುರಿದು ಹೋದ ಎದೆಗೂಡಿನ ಫಲವಾಗಿ ಬಾಯಿ ತುಂಬ ರುಧಿರಧಾರೆ. ಏನೂ
ಮಾಡಲಾಗದ ಅಸಹಾಯಕತೆಯಲ್ಲಿ ಬಸ್ಸಿನ ಗಾಜಿನತ್ತ ನೋಡಿದ.ಗಾಜಿನ ಮೇಲ್ತುದಿಯಲ್ಲಿ ಅಂಟಿಸಿದ್ದ ಸ್ಟಿಕ್ಕರಿನಲ್ಲಿದ್ದ ಹುಲಿಯೊಂದು ತನ್ನನ್ನೇ ದಿಟ್ಟಿಸಿದಂತಾಯ್ತು
ಅವನಿಗೆ.ಕಣ್ಣುಗಳನ್ನೊಮ್ಮೆ ಹಿಗ್ಗಿಸಿ ಕ್ಷಣಕಾಲ ಹುಲಿಯ ಚಿತ್ರವನ್ನು ದಿಟ್ಟಿಸಿದ ಶಮಂತಕ ಕ್ಷೀಣವಾಗಿ ನಸುನಕ್ಕ. ನಿಧಾನಕ್ಕೆ ಅವನ ಕಣ್ಗಳು
ಮುಚ್ಚಿಹೋದವು.ದೂರದಲ್ಲೆಲ್ಲೋ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಮಲಗಿದ್ದ ಶಮಂತಕನ ಅಪ್ಪ ಕಣ್ಣು ತೆರೆದಿದ್ದರು.