Click here to Download MyLang App

ವಾರ್ಷಿಕ ರಜೆ - ಬರೆದವರು : ಸುಧೀಕ್ಷ ಸದಾಶಿವ | ಸಾಮಾಜಿಕ

ನಾನು ಚಿಕ್ಕೋನಿರ್ಬೇಕಾದ್ರೆ, ವಾರ್ಷಿಕ ಪರೀಕ್ಷೆ ಇನ್ನೇನು ಮುಗೀತು ಅನ್ನೋಷ್ಟೊತ್ತಿಗೆ ಬೇಸಿಗೆ ರಜೆಯ ತಯಾರಿ ಶುರುವಾಗ್ತಿತ್ತು. ನನ್ನದೊಂಥರಾ ವಾಡಿಕೆಯ ರೀತಿಯಲ್ಲಿ ನಡೀತಾ ಇತ್ತು ರಜೆ. ಶಾಲೆಯಲ್ಲಿ ರಜೆಯ ಸಮಯದಲ್ಲಿ ಕೊಡ್ತಾ ಇದ್ದಿದ್ದು ಒಂದೇ ತೆರನಾದ ಮನೆಕೆಲಸ! ಪರೀಕ್ಷೆಯಲ್ಲಿ ಕೊಟ್ಟಿದ್ದ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆದುಕೊಂಡು ಹೋಗೋದು, ಜೊತೆಗೆ ೨೦ರವರೆಗೆ ಮಗ್ಗಿ ಬರಿಯೋದು. ಇದನ್ನೆಲ್ಲಾ ರಜೆ ಪ್ರಾರಂಭವಾದ ಮೊದಲೆರಡು ವಾರದಲ್ಲಿ ಮುಗಿಸಿಕೊಂಡ್ರೆ, ರಜೆ ಪೂರ್ತಿ ಆರಾಮಾಗಿ ಕಳೀಬೋದು ಅನ್ನೋದು ನನ್ನ ಸಿದ್ಧಾಂತ.

ಹಾಗೋ ಹೀಗೋ ಮಾಡಿ ಪುಟಗಟ್ಟಲೆ ಬರೆದು, ಆರಂತಸ್ತಿನಂತಿದ್ದ ಹೊರೆಯನ್ನು ಮೂರಂತಸ್ತಿನವರೆಗೆ ತರುವಷ್ಟರಲ್ಲಿ, ಬಳಲಿ-ಬೆಂಡಾಗಿ, ಸೋಂಬೇರಿಯಾಗಿ ಇಲ್ಲಸಲ್ಲದ ನಾಟಕಗಳೆಲ್ಲಾ ಶುರುವಾಗ್ತಿತ್ತು. "ಬರ್ದು ಬರ್ದು ಕೈಯೆಲ್ಲಾ ನೋವಮ್ಮಾ! ಸ್ವಲ್ಪ ಬರ್ದುಕೊಡಿ" ಅಂತ ತೋಪುಮೋರೆ ಹಾಕಿಕೊಂಡು ನಡೆಸುತ್ತಿದ್ದ ನಾಟಕ ನಮ್ಮಮ್ಮನ ಎದುರು ನಡೀತಿರ್ಲಿಲ್ಲ. ಅಂತಹ ನಾಟಕ ಶಾಲೆಯಲ್ಲಿರ್ಬೇಕಾದ್ರೆ ನಮಗಿಂತ ಜಾಸ್ತಿನೇ ಮಾಡಿಬಿಟ್ಟಿದ್ರು ಅವ್ರು. ಇನ್ನು ಅಪ್ಪನ ಹತ್ತಿರ ಬರ್ದುಕೊಡಿ ಎನ್ನುವ ಧೈರ್ಯವಂತೂ ಊರಾಚೆಗೆ ಬೀಡುಬಿಟ್ಟಿತ್ತು. ಏನಾದರೂ ತಪ್ಪು ಮಾಡಿದಾಗ ಅಪ್ಪ ಹೊಡಿಯದೇ/ಬೈಯ್ಯದೇ, ಮಾತಿಲ್ಲದ ಕಣ್ಣಿನಲ್ಲಿ ಸುಮ್ಮನೆ ಒಮ್ಮೆ ನೋಡಿದರೇನೇ ಚಡ್ಡಿ ಒದ್ದೆಯಾಗುತ್ತಿತ್ತು! (ಅಕ್ಷರಶಃ ಅಲ್ಲ! ಉಸಿರು ಬಿಟ್ಟರೆ ಒದ್ದೆಯಾಗಬಹುದೇನೋ ಎಂಬ ಕಲ್ಪನೆ!). ತುಂಬು ಕುಟುಂಬದಲ್ಲಿ ಬೆಳೆದು ಬರುವ ಪ್ರಯೋಜನವೆಂದರೆ ಇಂತಹ ಸಂದರ್ಭದಲ್ಲಿ ಅಪ್ಪ, ಅಮ್ಮ ಮಾತ್ರ ಆಯ್ಕೆಯಲ್ಲಿ ಇರ್ತಾ ಇರ್ಲಿಲ್ಲ. ದೊಡ್ಡಪ್ಪನ ಹತ್ತಿರ ಕಥೆ ಕೇಳುವ ನೆಪದಲ್ಲಿ ಒಂದಿಷ್ಟು, ದೊಡ್ಡಮ್ಮನಿಗೆ ಬರೆಯುವುದನ್ನ ಹೇಳಿಕೊಡುವ ನೆಪದಲ್ಲಿ ಇನ್ನೊಂದಿಷ್ಟು ಬರೆಸಿ, ಕೊಟ್ಟ ಮನೆಕೆಲಸವನ್ನೆಲ್ಲಾ ಮುಗಿಸಿ ಬ್ಯಾಗಿನಲ್ಲಿ ತುಂಬಿಟ್ಟರೆ, ಇನ್ನು ವಾಪಸ್ಸು ಶಾಲೆಗೆ ಹೋದಾಗ ಮಾಷ್ಟ್ರು,"ಏನೋ ಇದು! ಒಂದೇ ಬುಕ್ಕಲ್ಲಿ ಹತ್ತತ್ತು ಹ್ಯಾಂಡ್ ರೈಟಿಂಗ್ ಇದ್ಯಲ್ಲೋ!" ಎಂದು ಮೂದಲಿಸುವವರೆಗೂ ಅದರ ಬಗ್ಗೆ ಯೋಚನೆಯೇ ಇರ್ತಾ ಇರ್ಲಿಲ್ಲ.

ಇನ್ನೇನು ರಜೆಯ ಮೂರನೇ ವಾರ ಪ್ರಾರಂಭ ಆಗ್ತಾ ಇದೆ ಅನ್ನೋವಾಗ ನನ್ನ ಸುತ್ತಾಟ ಪ್ರಾರಂಭವಾಗ್ತಿತ್ತು. ನಮ್ಮಜ್ಜಿಯ ಮನೆ ಕುಂದಾಪುರದ ಹತ್ತಿರ ಕೋಟ. ಪೇಟೆಯಿಂದ ಇನ್ನೂ ಐದಾರು ಕಿಲೋಮೀಟರ್ ದೂರ ಒಳಗೆ ಆಟೋದಲ್ಲಿ ಹೋಗ್ಬೇಕಿತ್ತು. ತೀರ್ಥಹಳ್ಳಿಯಿಂದ ಕೋಟಕ್ಕೆ ಒಂದೇ ಬಸ್ ಇರಲಿಲ್ಲ. ತೀರ್ಥಹಳ್ಳಿಯಿಂದ ಉಡುಪಿಗೆ ಹೋಗಿ ಅಲ್ಲಿಂದ ಕೋಟಕ್ಕೆ ಬೇರೆ ಬಸ್ಸು ಹಿಡೀಬೇಕಿತ್ತು. ಆದ್ದರಿಂದ ಅಜ್ಜಿ ಮನೆಗೆ ಹೊರಡಲು ಅಪ್ಪನ ಹಾಜರಿ ಜರೂರಿಯಾಗಿತ್ತು. ಕೆಲಸ ನಿಮಿತ್ತ ಬೆಂಗಳೂರು, ಕೊಪ್ಪದಲ್ಲೇ ಜಾಸ್ತಿ ಇರ್ತಿದ್ರು ಅಪ್ಪ. ಒಂದು ವೇಳೆ ಅಜ್ಜಿ ಮನೆಗೆ ಬಿಟ್ಟು ಬರುವುದಕ್ಕೆ ಅಪ್ಪ ಬರುವುದು ಒಂದೆರಡು ದಿನ ತಡವಾಗ್ತಾ ಇದ್ದಿದ್ರೆ, ಕೊಪ್ಪದ ಅತ್ತೆಯ ಮನೆಗೂ ಒಂದು ಚಿಕ್ಕ ಓಡಾಟ ಆಗ್ತಾ ಇತ್ತು. ತೀರ್ಥಹಳ್ಳಿಯ ಛಳಿಯಲ್ಲೇ ಥರಗುಟ್ಟುತ್ತಿದ್ದ ನಮ್ಮಮ್ಮ ಕೊಪ್ಪಕ್ಕೆ ಹೋಗ್ಬೇಕಂದ್ರೆ ಬ್ಯಾಗಿನ ತುಂಬಾ ಸ್ವೆಟರ್, ಮಂಕಿಕ್ಯಾಪ್ ತುಂಬಿರ್ತಾ ಇದ್ರು; ಅವರದ್ದಲ್ಲ, ನನ್ನದು! ಅವರಿಗಾಗೋ ಛಳಿ ನನ್ನ ಮೇಲೆ ಸ್ವೆಟರ್ ಬಿದ್ರೆ ಮಾತ್ರ ನಿಲ್ತಾ ಇತ್ತು. ಒಟ್ಟಿನಲ್ಲಿ ಕೊಪ್ಪದಲ್ಲಿದ್ದಾಗಲ್ಲೆಲ್ಲಾ ನನ್ನನ್ನು ಸ್ವೆಟರ್ ಹಾಕಿದ ಬಟ್ಟೆಯಂಗಡಿ ಬೊಂಬೆಯಂತೆ ನೋಡಲು ನಮ್ಮಮ್ಮನಿಗೆ ಅದೇನೋ ಒಂಥರಾ ಇಷ್ಟ. "ಬಿಸ್ಲು ಆ ಥರಾ ಇದೆ! ಇನ್ನೂ ಯಾಕೆ ಸ್ವೆಟರ್ ಹಾಕಿ ಕೂರ್ಸಿದ್ದಿ? ಬಿಂಗ್ರಿ ಥರಾ ಆಡ್ಬೇಡ" ಅಂತ ನಮ್ಮಪ್ಪ ಕುಹಕವಾಡಿ ಛೇಡಿಸುವುದು ನಮ್ಮಮ್ಮನ ಕಿವಿಗೆ ಬೀಳ್ತಾನೇ ಇರ್ಲಿಲ್ಲ! ಸಮುದ್ರದ ಬದಿಯ ಬಿರುಸಿನ ಬಿಸಿಲಿಗೆ ಒಗ್ಗಿ ಹೋಗಿದ್ದ ಅವರ ಮೈ ಮಲೆನಾಡಿನ ಥರಗುಟ್ಟುವ ಛಳಿಗೆ ಒಗ್ಗಿರಲೇ ಇಲ್ಲ. ಅವರಿಗಾಗುವಷ್ಟೇ ಛಳಿ ನಮಗೂ ಆಗ್ತಾ ಇದೆ ಅಂತ ಸ್ವೆಟರ್ರು, ಟೊಪ್ಪಿಯೊಳಗೆ ನನ್ನನ್ನು ಅವಿತಿಡುತಿದ್ದರು.

ಅಂತೂ ಅಪ್ಪನಿಗೆ ಬಿಡುವಾದಾಗ ಕೋಟದ ಕಡೆ ನಮ್ಮ ಪ್ರಯಾಣ ಶುರುವಾಗ್ತಾ ಇತ್ತು. ಪ್ರತೀ ವರ್ಷವೂ ಒಂದೇ ಮಾರ್ಗವಾಗಿ ಹೋಗ್ತಾ ಇದ್ದರೂ ಕೂಡಾ ಆಗುಂಬೆ ಘಾಟಿ ಇಳಿಯೋದು ಏನೋ ಒಂದು ರೀತಿ ರೋಮಾಂಚನಕಾರಿ ಅನುಭವ. ಬೇಸಿಗೆಯ ಆ ಸಮಯದಲ್ಲೂ ಅಲ್ಲಿ ಹಿಮ ತುಂಬಿಕೊಂಡಿರುತಿತ್ತು! ನಾನು ಚಿಕ್ಕವನಿರಬೇಕಾದ್ರೆ ಅಜ್ಜಿ ಮನೆಗೆ ಬಸ್ಸಿನಲ್ಲಿ ಹೋಗೋವಾಗ ಇದೇ ಹಿಮದ ರಾಶಿ ನೋಡಿ "ಅಯ್ಯಯ್ಯೋ! ಆಕಾಶ ಬೀಳ್ತಾ ಇದೆ, ಎಲ್ಲರೂ ಓಡಿ!" ಎಂದು ಬೊಬ್ಬೆಹೊಡೆದು ಚೀರಿದ್ದು ಪ್ರತಿ ಸಾರಿ ನೆನಪಿಸಿಕೊಂಡು ನನ್ನಪ್ಪ ತಮಾಷೆ ಮಾಡ್ತಾ ಇದ್ರು.

ಚಿಕ್ಕವನಿದ್ದಾಗಿನಿಂದಲೂ ನಾನು ಮಾತಿಗಿಳಿದರೆ ನಿಲ್ಲಿಸ್ತಾ ಇದ್ದಿದ್ದು ತೀರಾ ಕಡಿಮೆ. ನನ್ನ ಪ್ರಶ್ನೆಗಳ ಸುರಿಮಳೆಯಲ್ಲಿ ನೆನೆದು, ಒದ್ದೆಯಾಗಿ ತಾಳಲಾರದೇ ಮನೆಯವರೆಲ್ಲಾ ಸೇರಿ ನನಗೆ "ಚೊರೆ" ಎಂಬ ಅನ್ವರ್ಥ ನಾಮ ಇಟ್ಟುಬಿಟ್ಟಿದ್ರು (ಚೊರೆ=ಮಾತಿನಲ್ಲೇ ಮಂಡೆಕೆಡಿಸುವವನು). ನನ್ನ ಮಾತಿನ ವೇಗವನ್ನು ಹತೋಟಿಗೆ ತರಲಾರದೇ, ನನ್ನ ನಿರಂತರ ಪ್ರಶ್ನೆಗಳ ದಾಳಿಯಿಂದ ನಿರುತ್ತರರಾದವರ ಬಾಯಲ್ಲಿ ಬರ್ತಾ ಇದ್ದಿದ್ದು ಒಂದೇ ಪ್ರಶ್ನೆ "ಯಾರ್ ಮಾರಯ ನಿನ್ ಬಾಯಿಗೆ ಬಜೆ ಹಾಕಿದ್ದು?!" ಅಂತ! ಅದಕ್ಕೂ ತಲೆ ಓಡಿಸಿ, "ಅದೂ, ಬಜೆ ಹಾಕುವ ಟೈಮಲ್ಲಿ ಯಾರೋ ಮಿಸ್ಸಾಗಿ ಕೆಸುವಿನ ಸೊಪ್ಪು ಹಾಕಿದ್ರಂತೆ! ಅದ್ಕೇ ಹಿಂಗೇ!" ಅಂತ ನನ್ನನ್ನ ನಾನೇ ಛೇಡಿಸಿ ಮುಸಿಮುಸಿ ನಗ್ತೀನಿ.

ನನ್ನ ಈ ಮಾತನಾಡುವ ಪ್ರವೃತ್ತಿ ಅಜ್ಜಿಯಮನೆಗೆ ಬಸ್ಸಿನಲ್ಲಿ ಹೋಗ್ಬೇಕಾದ್ರೂ ನಿರರ್ಗಳವಾಗಿ ನಡೀತಾ ಇತ್ತು. ಪಕ್ಕ ಬಂದು ಕೂರ್ತಾ ಇದ್ದ ಯಾರೋ ಅಪರಿಚಿತರನ್ನ ಹಿಡಿದೆಳೆದು ಮಾತನಾಡಿ, ಕೊರೆದು, ಕೊನೆಗೆ ನನ್ನ ಕಾಟ ತಾಳಲಾರದೆ ಅವರು ಮಲಗಿರುವಂತೆ ನಾಟಕವಾಡಿದಾಗಲೂ ಅವರನ್ನು ಎಬ್ಬಿಸಿ "ಮಲ್ಕೊಂಡಿದ್ರಾ?" ಅಂತ ಕೇಳಿದಾಗ, ಹಲ್ಕಿರಿದ ನನ್ನ ಮುಖವನ್ನ ಒಮ್ಮೆ ನಮ್ಮಪ್ಪ ದುರುಗುಟ್ಟಿ ನೋಡಿದಾಗ ನನ್ನ ಮಾತು ಕೆಲವು ಕ್ಷಣಗಳವರೆಗೆ ನಿಲ್ಲುತಿತ್ತು. ಮೂರು ತಾಸಿನ ಪ್ರಯಾಣದ ನಂತರ ಕೋಟದ ತಂಗುದಾಣದಲ್ಲಿ ಬಂದು ಬಸ್ಸು ನಿಂತಾಗ, ಅಲ್ಲಿಂದ ಮತ್ತೆ ಅಜ್ಜಿ ಮನೆಗೆ ಹೋಗಲು ಆಟೋ ಹಿಡಿದು ಹತ್ತಿ ಕೂತು, ವಿಳಾಸವೇನೂ ಹೇಳದೇ ಬರೀ "ಕರಿಕುಂದರ್ ಮನೆಗೆ" ಅಂತ ಹೇಳಿದಕೂಡ್ಲೇ ಸರ್ರನೆ ಹೋಗಿ ಮನೆಯ ಮುಂದೆ ನಿಲ್ತಾ ಇದ್ದ ಆಟೋವನ್ನ ನೋಡಿ, ನಮ್ಮಜ್ಜ ಭಾರೀ ದೊಡ್ಡ ವ್ಯಕ್ತಿ ಅಂತ ಜಂಭದಿಂದ ಇಳೀತಿದ್ದೆ.

ತೀರ್ಥಹಳ್ಳಿಯ ಮನೆಗಿಂತಲೂ ಇಲ್ಲಿ ಜನಸಂಖ್ಯೆ ಜಾಸ್ತಿ ಇತ್ತು. ಅಜ್ಜ, ಅಜ್ಜಿ, ಭಾಸ್ಕರ ಮಾಮ, ಲಲಿತಾ ಮಾಮಿ, ಶೇಖರ ಮಾಮ, ವನಜ ಮಾಮಿ, ಸಂಜೀವ ಮಾಮ, ಸುಧಾ ಮಾಮಿ, ರಾಜೇಶಣ್ಣ, ರಮ್ಯಕ್ಕ, ರಂಜಿತಣ್ಣ, ಶರಣ್ಯಕ್ಕ, ಶಮಿತಕ್ಕ ಹಿಂಗೆ ಒಂದು ದೊಡ್ಡ ಹಿಂಡೇ ಇರ್ತಿತ್ತು. ತೆಂಗಿನ ತೋಟದ ನಡುವೆ ಇದ್ದ ಮನೆಯ ಎದುರು ಆಟೋ ಬಂದು ನಿಂತಕೂಡಲೇ, ತೋಟದ ಅದ್ಯಾವ್ದೋ ಮೂಲೆಯಲ್ಲಿ ಒಣಗಿ ಬಿದ್ದ ತೆಂಗಿನ ಹೆಡೆಯನ್ನು ದರ-ದರನೆ ಎಳೆದುಕೊಂಡು ಬರ್ತಾ ಇದ್ದ ಅಜ್ಜಿ ಬರ್ತಾನೆ "ನನ್ನ ದೇವ್ರು ಬಂತಾ? ಅಂತೂ ಬಂದ್ಯಾ ಮೊಮ್ಮಗನೇ?" ಎಂದು ಮರಳು ತುಂಬಿದ ಕೈಗಳಿಂದ ಹಿಡಿದೆಳೆದು ಆಲಂಗಿಸಿದಾಗ,"ಅಜ್ಜಿ ಕೋಳಿ ಮರಿ ಹಾಕಿದ್ಯಾ?!" ಅಂತನೇ ಕೇಳ್ತಿದ್ದಿದ್ದು ಪ್ರತೀ ಬಾರಿ. (ಕೋಳಿ ಮರಿ ಹಾಕಲ್ಲ, ಮೊಟ್ಟೆ ಇಡೋದು ಅಂತ ನಂಗೂ ಗೊತ್ತು ಕಣ್ರಪ್ಪಾ!). ನನ್ನ ಈ ಅಸಾಂದರ್ಭಿಕ ಪ್ರಶ್ನೆಗೆ ನಸುನಕ್ಕು "ಹಾಕಿತ್ ಮಗಾ, ಐದ್ ಮರಿ ಉಳ್ಕಂಡಿತ್ ಅಷ್ಟೇ. ಉಳ್ದಿದ್ದೆಲ್ಲಾ ಆ ಕಿಚ್ ಹಿಡ್ದ್ ಕಾಕಿ ಕಚ್ಕ ಹೋಯ್ತ್" ಅಂತ ಮರುಗ್ತಾ ಇದ್ರು. ಅಜ್ಜಿಯ ಬೇಸರಕ್ಕೆ ಕಾರಣವಾದ ಆ ಕಾಗೆಯಿಂದ ಕೋಳಿಮರಿಗಳನ್ನು ರಕ್ಷಿಸುವ ಹೊಣೆ ಕೆಲವು ದಿನಗಳವರೆಗೆ ನನ್ನ ಮೇಲಿರ್ತಿತ್ತು.

ಅಜ್ಜೀ ಮನೆಯ ದಿನಚರಿ ಇಂದೂ ಒಂಥರಾ ವಿಚಿತ್ರವಾಗಿ ಕಾಣತ್ತೆ. ಆಗಿನ ಕಾಲಕ್ಕೆ ಅಲ್ಲಿ ಟೀವಿಯಲ್ಲಿ ಬರ್ತಾ ಇದ್ದಿದ್ದೇ ಒಂದು ಚಾನೆಲ್ಲು; ದೂರದರ್ಶನ! ಪಿಟೀಲು ಕುಯ್ದುಕೊಂಡು ಶುರುವಾಗುವ ಅದರ ದನಿಯನ್ನು ಸಹಿಸಿಕೊಳ್ಳಲಾಗದೇ ಸೆಖೆಯ ಉರಿಬಿಸಿಲಲ್ಲೂ ತೋಟದ ಮರಳಿನಲ್ಲಿ, ನೀರು ಬಿಡುವ ತೋಡಿನಲ್ಲಿ ಅಂಗಿಯಿಲ್ಲದೇ ಒದ್ದಾಡಿಕೊಂಡು, ರಸಭರಿತ ಮಾವಿನಹಣ್ಣುಗಳನ್ನು ಕೊಯ್ದು ಮನಬಂದಂತೆ ತಿನ್ನುವುದು ಏನೋ ಒಂದು ರೀತಿಯ ಸುಖ. ಮಾವಿನ ಸೊನೆ ಮೈಮೇಲೆ ಬಿದ್ದು ಮೈ ಸುಟ್ಟರೂ ಮಾರನೆಯ ದಿನ ಮತ್ತೆ ಮರಕ್ಕೆ ಕಲ್ಲು ಹೊಡೆದೋ, ದೋಟಿಯಲ್ಲಿ ಕಿತ್ತೋ, ಒಟ್ಟಿನಲ್ಲಿ ಇದ್ದ ಆರು ಮರದ ವಿಭಿನ್ನ ರೀತಿಯ ಎಲ್ಲಾ ಮಾವಿನಹಣ್ಣುಗಳನ್ನೂ ತಿಂದು ತೇಗಿ, ಕೊನೆಗೆ ಅಜ್ಜಿ ಉಪ್ಪಿನಕಾಯಿ ಮಾಡಲು ಉಪ್ಪಿಗೆ ಹಾಕಿಟ್ಟ ಮಾವಿನ ಹೋಳುಗಳನ್ನು ಕಿಸೆಯಲ್ಲಿ ತುಂಬಿ ತೋಟದ ಕಡೆ ಓಡಿದ್ದು ಇನ್ನೂ ನೆನಪಿದೆ.

ಸೂರ್ಯ ಹುಟ್ಟುವ ಮೊದಲೇ ಹೆಂಗಸರೆಲ್ಲಾ ಎದ್ದು ಮೊದಲು ಮಾಡ್ತಿದ್ದ ಕೆಲಸವೇ ಗ್ರೈಂಡರ್ ಹಾಕೋದು! ಅದರ ಗೊರ-ಗೊರ ಸದ್ದಿಗೆ ಮನೆಮಂದಿಯೆಲ್ಲಾ ನಿಧಾನಕ್ಕೆ ಎದ್ದರೂ ನನ್ನ ಗೊರಕೆಯ ಮುಂದೆ ಗ್ರೈಂಡರ್ ತಣ್ಣಗಾಗ್ತಿತ್ತು. ಕೊನೆಗೆ ಕಡಿತಾ ಇದ್ದ ದೊಸೆ ಹಿಟ್ಟಿಗೆ ನೀರು ಕಡಿಮೆಯಾಗಿ ಕರ್ಕಶವಾಗಿ ಅದು ಕೊರ-ಕೊರನೆ ಅರಚಿದಾಗ ಅದರ ಗಾಯನವನ್ನು ಶಪಿಸುತ್ತಾ ಎದ್ದು, ಹಲ್ಲುಜ್ಜಿ ಎಲ್ಲರೊಂದಿಗೆ ಮಲ್ಲಿಗೆ ಗಿಡದಿಂದ ಹೂವು ಕೀಳಲು ತಟ್ಟೆ ಹಿಡ್ಕೊಂಡು ಹೋಗ್ತಾ ಇತ್ತು. ಆರೇಳು ಗಂಟೆಯ ಒಳಗೆಲ್ಲಾ ಎಲ್ಲಾ ಹೂ ಕಿತ್ತು, ಹೂ ಕಟ್ಟುತ್ತಾ ಕೂತ ರಮ್ಯಕ್ಕ, ಅತ್ತೆಯಂದಿರಿಗೆ ಕೊಟ್ಟ ನಂತರ ಮನೆಯ ಮಕ್ಕಳೆಲ್ಲಾ ಒಂದುಗೂಡಿ ತೋಟದ ಕಡೆಗೆ ಓಡ್ತಾ ಇದ್ವಿ. ಎಲ್ಲರೂ ಒಂದೊಂದು ಕೋಲು ಹಿಡಿದುಕೊಂಡು ಸಾಲಾಗಿ ಹೋಗಿ ತೆಂಗಿನ ಮರದ ಸುತ್ತಲೂ ಕೂತೆವೆಂದರೆ ಹಿಂದಿನ ದಿನದ ಮಾವಿನ ಹಣ್ಣಿನ ಕೊಳೆತ ನಾಥ ತುಂಬಿದ ಕಲ್ಮಶವೆಲ್ಲಾ ಹಿಂದಿನ ಬಾಗಿಲಿನಿಂದ ನಿರಾಯಾಸವಾಗಿ ಹೊರಬರುತ್ತಿತ್ತು. ಒಬ್ಬರಾದ ಮೇಲೊಬ್ಬರು ಕಥೆ ಹೇಳುತ್ತಾ, ಹೊರ ಬಂದ ಪಾಕ(!)ದ ಪಾಲು ಕೇಳಲು ನಾಮುಂದು-ತಾಮುಂದು ಎಂದು ಕದ್ದು ಬರುವ ಕಾಗೆಗಳನ್ನು ಓಡಿಸುತ್ತಾ, ಹೊಟ್ಟೆಯೆಲ್ಲಾ ಖಾಲಿಯಾದ ಮೇಲೆ ಒಂದು ಕೈಯಲ್ಲಿ ಚಡ್ಡಿಯನ್ನೂ, ಮತ್ತೊಂದು ಕೈಯಲ್ಲಿ ಮೇಲೆತ್ತಿ ಕಟ್ಟಿದ್ದ ಅಂಗಿಯನ್ನೂ ಹಿಡಿದು, ಆಗಷ್ಟೇ ಹೊರಬಂದ ಪಾಕದ ತುಣುಕುಗಳು ಎರಡೂ ಪಾರ್ಶ್ವಗಳಿಗೆ ತಾಗಬಾರದೆಂದು ಕಾಲೆರಡನ್ನೂ ಅಗಲಿಸಿ ಮನೆಕಡೆ ಹೋಗಿ, "ಅಮ್ಮಾ! ಆಯ್ತು!" ಅಂತ ಕೂಗುವಷ್ಟರಲ್ಲಿ ನೋಡಿ ನಗುವವರಿಗೆಲ್ಲಾ ಪುಗಸಟ್ಟೆ ಮನೋರಂಜನೆ ಸಿಕ್ಕಿರುತಿತ್ತು. ತೆಂಗಿನಮರಕ್ಕೆ ನೀರು ಬಿಡಲು ಹೋಗುವ ಮಾವಂದಿರರಿಗೆ ನಮ್ಮ ಈ "ಗಣಿಗಾರಿಕೆ"ಯಿಂದ ಕಾಲ್ತಪ್ಪಿಸಿ ನಡೆಯುವುದೇ ಒಂದು ದೊಡ್ಡ ಸವಾಲಾಗಿತ್ತು.

ನಿತ್ಯ ಕರ್ಮಗಳೆಲ್ಲಾ ಮುಗಿದು ಬಿಸಿತಿಂಡಿ ತಿಂದು, ಕಾಯಿ ತುರಿದು ಉಳಿದ ಖಾಲಿ ಗೆರಟೆ ಚಿಪ್ಪುಗಳನ್ನು ಹಿಡಿದು ತೋಟದ ಮರಳಿನಲ್ಲಿ ಆಟ ಆಡಲು ಹೊರಟರೆ ಇನ್ನು ವಾಪಸ್ಸು ಬರ್ತಾ ಇದ್ದಿದ್ದೇ ಊಟಕ್ಕೆ. ಶತಮುಂಗೋಪಿಯಾದ ನನ್ನೊಡನೆ ಆಟವಾಡುತ್ತಾ, ಜಗಳಮಾಡಿ, ನಾನು ಸಿಟ್ಟಿನಿಂದ ಅದೇ ಪುಟ್ಟ-ಪುಟ್ಟ ಕೈಗಳಿಂದ ಮರಳನ್ನೆಲ್ಲಾ ಬಾಚಿ ಎಲ್ಲರ ತಲೆಯ ಮೇಲೆ ಹುಯ್ದಾಗ, ಶರಣ್ಯಕ್ಕ ಗಟ್ಟಿಯಾಗಿ "ಸಂಚಿಕ್ಕಪ್ಪಯ್ಯಾ, ಇಲ್ ಪುಟ್ಟ ಎಲ್ರ ಮಂಡಿ ಮೇಲ್ ಮರ್ಳ್ ಹಾಕ್ತಿದ್ದ!" ಎಂದು ಅರಚಿದ್ದು ಕೇಳಿ ಅಲ್ಲೇ ಬಿದ್ದಿದ್ದ ಒಣಗಿದ ಕೋಲನ್ನು ಹೆದರಿಸಲೆಂದು ತಂದು, ನಿಧಾನಕ್ಕೆ ಒಂದು ಹೊಡೆದದ್ದಕ್ಕೇ ಗಳಗಳನೇ ಅತ್ತು, ಮೂಗು ಸುರಿಸಿಕೊಳ್ಳುತ್ತಾ ಅವರೊಂದಿಗೆ ಕುಸ್ತಿಯಾಡಿದ್ದು ನೆನೆದರೆ ಇಂದೂ ನಗು ಮೂಡುತ್ತದೆ.

ಕೂಗಳತೆ ದೂರದಲ್ಲಿ ಸಮುದ್ರವಿದ್ದರೂ, ಭಾಸ್ಕರ ಮಾಮ, "ಇಗಾ, ಯಾರಾದ್ರೂ ಕಡ್ಲ್ ಬದಿ ಹೋರೆ ಬೋಳ್ ಮೇಲ್ ನಾಕ್ ಹಾಕ್ತೆ" ಎಂದು ಗದರಿಸಿದ ಮಾತುಗಳಿಗೆ ಹೆದರಿ, ಎಲ್ಲರೂ ಮಧ್ಯಾಹ್ನ ಮಲಗಿದ ಮೇಲೆ ಜೇಬಿನಲ್ಲೆರಡು ಮಾವಿನ ಹಣ್ಣು ತುಂಬಿ ಸಮುದ್ರದಂಡೆಯ ಮೇಲೆ ಗಾಳಿಗೆ ಮುಖವೊಡ್ಡಿ, ಎಲ್ಲರೂ ಏಳುವ ಮೊದಲೇ ಬೇಗನೇ ಓಡಿ ಬಂದು ಮೈಗಂಟಿದ ಸಮುದ್ರದ ಮರಳೆಲ್ಲಾ ತೊಳೆದುಕೊಂಡು, ಅಮಾಯಕರಂತೆ ಮತ್ತೆ ತೋಟದ ಬದಿಯ ತೋಡಿನ ನೀರಿನಲ್ಲಿ ಮರಳನ್ನು ಅದ್ದಿ, ಗೆರಟೆ ಚಿಪ್ಪಿನಲ್ಲಿ ತುಂಬಿ "ಇಡ್ಲಿ" ಮಾಡವುದರಲ್ಲಿ ತಲ್ಲೀನರಾಗುತ್ತಿದ್ವಿ. ಎಲ್ಲರೂ ಎದ್ದ ಮೇಲೆ, ಮಾಮೂಲಿನಂತೆ ಮರಳಿನಲ್ಲಿ ಆಟವಾಡಿದ್ದಕ್ಕೆ ಪೆಟ್ಟು ತಿಂದು, ತಲೆಗೆ ತೆಂಗಿನೆಣ್ಣೆ ಹುಯ್ಸಿಕೊಂಡು, ಅಮ್ಮ/ಅಜ್ಜಿ/ಅತ್ತೆಯರ ಕೈಯಲ್ಲಿ ಮಕ್ಕಳೆಲ್ಲರ ತಲೆ ತುಂಬಿದ ಹೇನು, ಮರಳು ತೆಗೆಯುವ ಕಾರ್ಯಕ್ರಮ ಭರದಿಂದ ಸಾಗುತ್ತಿತ್ತು.

ಕತ್ತಲಾಗುತ್ತಿದ್ದಂತೆ ಅಜ್ಜಿ ಮನೆಯ ಸುತ್ತಲೂ ಆವರಿಸುತ್ತಿದ್ದ ಕತ್ತಲು ಭಯಾನಕವಾಗಿರುತ್ತು. ಅಲ್ಲಿಗೆ ಬೀದಿದೀಪಗಳು ಬಂದೇ ಹೆಚ್ಚು ವರ್ಷಗಳೇನೂ ಆಗಿಲ್ಲ, ಜೊತೆಗೆ ಅಕ್ಕಪಕ್ಕದ ಮನೆಗಳೆಲ್ಲಾ ದೂರದಲ್ಲೇಲ್ಲೋ ಇದ್ದವು. ಕರೆಂಟು ಹೋದರೆ ಸೀಮೆ ಎಣ್ಣೆ ಚಿಮಣಿಯ ಅಡಿಯಲ್ಲಿ ಕೂತು, ಊಟದ ತಟ್ಟೆಯಲ್ಲಿದ್ದ ಮೀನಿನ ಮುಳ್ಳು ತೆಗೆದು ತಿನ್ನುವುದೇ ದೊಡ್ಡ ಸಾಹಸ! ಹಾಗೇ ತಿನ್ನೋಣವೆಂದರೆ ಗಂಟಲಲ್ಲಿ ಸಿಕ್ಕಿಕೊಂಡು ಕಾಟ ಕೊಡುವ ಮುಳ್ಳಿನ ಭಯ. ತಿನ್ನದೇ ಬಿಡೋಣವೆಂದರೆ ಹಿಡಿದೆಳೆದು ತರುವ ಜಿಹ್ವಚಾಪಲ್ಯ. ಒಟ್ಟಿನಲ್ಲಿ ಅನ್ನಕಿಂತಲೂ ಹೆಚ್ಚಿರುತಿದ್ದ ಮೀನಿನ ರಾಶಿಯನ್ನ ಹೊಟ್ಟೆ ಸೇರಿಸುವುದರಲ್ಲಿ ಹರಸಾಹಸ ಪಡಬೇಕಿತ್ತು. ರಾತ್ರಿ ಏಳು ಗಂಟೆಗೇ ಊಟ ಮುಗಿದು ಮಲಗುವ ತಯಾರಿ ನಡೆಯುತಿತ್ತು! ಅಜ್ಜಿ ಮನೆಯಲ್ಲಿ ಇದ್ದಷ್ಟೂ ಇವೆಲ್ಲಾ ಚಟುವಟಿಕೆ ನಿರಂತರವಾಗಿ ಸಾಗುತ್ತಿತ್ತು.

ರಜೆಯೆಲ್ಲಾ ಮುಗಿದು ಮರಳಿ ಹೊರಡುವ ದಿನ ಮನೆ ತುಂಬಾ ನೀರವ ಮೌನ! ಮಾವಿನ ಹಣ್ಣು, ಜೀಗುಜ್ಜೆಯ ಕಾಯಿ, ತೆಂಗಿನ ಕಾಯಿ, ಮೀನನ್ನೆಲ್ಲಾ ಚೀಲದಲ್ಲಿ ತುಂಬಿ, ಎಲ್ಲರ ಕಾಲಿಗೆ ಬಿದ್ದು ನಮಸ್ಕರಿಸಿ, ಪ್ರತಿ ಸಾರಿ ಅಳುವ ಅಮ್ಮ, ಅಜ್ಜಿ, ಅತ್ತೆಯರ ಮುಖ ನೋಡುತ್ತಿದ್ದರೆ ಮನದಲ್ಲಿ ಸಾವಿರಾರು ಪ್ರಶ್ನೆಗಳು ಮೂಡುತ್ತಿದ್ದವು. ಮತ್ತದೇ ಮೂರು ಗಂಟೆಯ ಪ್ರಯಾಣದ ನಂತರ ತೀರ್ಥಹಳ್ಳಿಯ ಮನೆಗೆ ಬಂದು, ಅಜ್ಜಿ ಮನೆಯ ಬಿಸಿಲಿನ ಬೇಗೆಯಲ್ಲಿ ಕರಿಗಟ್ಟಿದ ಮುಖವನ್ನು ನೋಡಿ ದೊಡ್ಡಪ್ಪ-ದೊಡ್ಡಮ್ಮ, "ಒಳ್ಳೇ ಕರಿ-ಕರಿ ಹೆಗ್ಗಣದ ಥರಾ ಆಗಿದ್ಯಲ್ಲೋ!" ಎಂದು ಗಹಗಹಿಸಿ ನಕ್ಕಾಗಲೇ ಅಜ್ಜಿ ಮನೆಯಲ್ಲಿ ದಿನಾಲೂ ತಿಂದ ಮಾವಿನ ಹಣ್ಣಿನ ನಾರು ಸಂಧಿಯಲ್ಲಿ ಸಿಕ್ಕಿ ಕುಳಿತು, ಹಳದಿಗಟ್ಟಿದ ಹಲ್ಲುಗಳು ಆಚೆ ಕಾಣಿಸ್ತಾ ಇದ್ದದ್ದು! ರಜೆಯೆಲ್ಲಾ ಮುಗಿದು ಶಾಲೆ ಪ್ರಾರಂಭವಾದ ದಿನ ಶಾಲೆಯಲ್ಲಿ ಟೀಚರ್ರು, ನನ್ನ ವಾಡಿಕೆಯ ರಜೆಯ ಅರಿವಿದ್ದವರಂತೆ, "ಏನೋ ಸುಧೀಕ್ಷ, ಈ ಸಲನೂ ಅಜ್ಜಿ ಮನೆಗೆ ಹೋಗಿದ್ಯಾ?"ಎಂದು ಕೇಳಿದಾಗ, ಆ ಬಾರಿ ರಜೆಯಲ್ಲಿ ತುಂಬಿದ ನೆನೆಪಿನ ಬುತ್ತಿಯೆಲ್ಲಾ ನಿಧಾನವಾಗಿ ಬಿಚ್ಚಿಕೊಳ್ಳುತ್ತಿದ್ದವು.

ಇದನ್ನೆಲ್ಲಾ ಈಗ ಹೇಳುವ ವ್ಯವಧಾನವೇಕಾಯಿತೆಂದರೆ, ಇನ್ನೇನು ಬೇಸಿಗೆ ರಜೆ ಪ್ರಾರಂಭವಾಗುವ ಸಮಯ. ಈಗಿರುವ "ನ್ಯೂಕ್ಲಿಯರ್" ಕುಟುಂಬಗಳಲ್ಲಿ ಇರುವ ಮಕ್ಕಳಿಗೆ "ಸಮ್ಮರ್ ಕ್ಯಾಂಪ್" ಎಂದು ಶುರುವಾಗಿರೋ ಹೊಸತಾದ ಬೆಳವಣಿಗೆ, ಟಿ.ವಿ., ಮೊಬೈಲು ಬಿಟ್ಟರೆ ಮನೆಯವರ, ಪ್ರಕೃತಿಯ ನಡುವೆ ಬೆಳೆಯುವ ಅವಕಾಶವಿದ್ದರೂ ಅದನ್ನು ಅವರಿಂದ ಕೀಳುವಂತಾಗಿದೆ. ಅಪ್ಪ-ಅಮ್ಮ ಬಿಟ್ಟು ಬೇರೆಯವರೊಡನೆ ಒಡನಾಟವಿಲ್ಲದೆ, ಮುಂದೆ ಬೆಳೆದು ದೊಡ್ಡವರಾದ ಮಕ್ಕಳು ಸಮಾಜದಲ್ಲಿ ಬೆರೆಯಲು ತೊಳಲಾಡುವ ರೀತಿಯನ್ನು ನೋಡಿದರೆ, "rank ಪಡೆದು ಉಪಯೋಗವೇನು?" ಎಂದೆನಿಸುತ್ತದೆ. ನೆನೆಪುಗಳು ಹಸನಾಗಿರುವ ಸಮಯದಲ್ಲೇ ಬುತ್ತಿ ಕಟ್ಟ ಬೇಕು, ಹಳಸಿ ಹೋದರೆ ತಿನ್ನುವ ಅನ್ನವನ್ನೂ ಬಿಸಾಕಬೇಕಾಗುತ್ತದೆ. ದೊಡ್ಡವರಾದವರು ತಮಗೆ ಸಮಯವಿಲ್ಲವೆಂದು ಮಕ್ಕಳ ಈ ಬೆಳವಣಿಗೆಗೆ ಸಮಯ ಕೊಡದೇ, ಸಂಸ್ಕಾರ-ಸಂಸಾರದ ಅರ್ಥ ತಿಳಿಸದೇ ಬಿಟ್ಟರೆ ಮುಂದೊಂದು ದಿನ ಅದೇ ಮಕ್ಕಳ ಬಳಿ ನಿಮಗೂ ಸಮಯವಿಲ್ಲದಂತಾಗುತ್ತದೆ.