Click here to Download MyLang App

ಲೀವ್ ಇನ್ ರಿಲೇಶನ್ಶಿಪ್ ವಿರಹ - ಬರೆದವರು : ವಿ ಕೆ ಎಸ್ ಶೆಟ್ಟಿ

ಮುಂಜಾನೆಯ ನಸುಕಿನ ಹೊತ್ತು , ಗೋಡೆಗೆ ತೂಗು ಹಾಕಿದ ಡಿಜಿಟಲ್ ಕ್ಲಾಕ್ ತೋರಿಸುತ್ತಿತ್ತು ಆರು ಹತ್ತು. ತೆರೆದಿಟ್ಟ ಕಿಟಕಿಯ ಬಾಗಿಲಿನಿಂದ ತಣ್ಣನೆಯ ಹಿತವಾದ ಗಾಳಿ ಮುಖದ ಮೇಲೆ ಬೀಸುತ್ತಿತ್ತು. ಬೆಳಿಗ್ಗಿನ ಪ್ರಶಾಂತವಾದ ತಣ್ಣನೆಯ ಗಾಳಿ ಮನಸ್ಸಿಗೆ ಮುದ ನೀಡುತ್ತಿತ್ತು. ನಿನ್ನೆ ರಾತ್ರಿ ಮಲಗುವಾಗ ಕರೆಂಟು ಕೈ ಕೊಟ್ಟಿದ್ದು, ಕೋಣೆಯೊಳಗೆ ತುಂಬಾ ಸೆಖೆ ಇದ್ದಿದ್ದು , ಕಿಟಕಿ ಬಾಗಿಲು ತೆರೆದಿಟ್ಟು ಮಲಗಿದ್ದು ನೆನಪಾಯಿತು. ಹೊರಗಡೆಯ ಮಂದ ಬೆಳಕಿನಿಂದ ಕೊಣೆಯಲ್ಲಿ ಇರುವ ವಸ್ತುಗಳು ಅಸ್ಪಷ್ಟವಾಗಿ ಗೋಚರಿಸುತ್ತಿದ್ದವು.

ಎಂದಿನಂತೆ ಹಾಸಿಗೆಯಿಂದ ಎದ್ದು ನನ್ನ ಪಕ್ಕದತ್ತ ದ್ರಷ್ಠಿ ಹಾಯಿಸುತ್ತೇನೆ, ನಿನ್ನೆ ರಾತ್ರಿ ನನ್ನ ಪಕ್ಕದಲ್ಲೇ ಇದ್ದಿದ್ದ ನನ್ನ ಗೆಳತಿ ಕಾಣಿಸುತ್ತಿಲ್ಲ. ಬೆಳಿಗ್ಗೆ ಎದ್ದ ತಕ್ಷಣ ನನ್ನ ಗೆಳತಿಯ ಮುಖವನ್ನು ಒಮ್ಮೆ ನೋಡುವುದು ನನ್ನ ಪ್ರತಿದಿನದ ರೂಡಿ. ಅದೇನು ಮಾಡ್ಯಾಳೋ ಮೋಡಿ. ಅವಳು ನಿನ್ನೆ ರಾತ್ರಿ ನನ್ನ ಪಕ್ಕದಲ್ಲಿಯೇ ಇದ್ದಿದ್ದು ಸರಿಯಾಗಿ ನೆನಪಿದೆ. ಆದರೆ ಇಂದು ಯಾವುದೇ ಸುದ್ಧಿ ಇಲ್ಲದೇ ನನ್ನಿಂದ ದೂರಾದಳು? ಇಷ್ಟು ದಿನ ನನ್ನ ಜೊತೆಗಿದ್ದವಳು ಇಂದು ಯಾರ ಮಡಿಲು ಸೇರಿದಳು?

ಅಯ್ಯೋ, ಎಲ್ಲಿ ಹೋದಳು? ಎಲ್ಲೂ ಕಾಣುತ್ತಿಲ್ಲವಲ್ಲ. ಸೋನಿ...... ನೀನಿಲ್ಲದೇ ನಾನು ಹೇಗೆ ಬಾಳಲಿ? ನನಗೆ ದಾರಿ ತೋರುವವಳೂ ನೀನೆ, ನನ್ನ ಕಾರ್ಯದರ್ಶಿಯೂ ನೀನೇ. ಕಾಲ ಕಾಲಕ್ಕೆ ನನ್ನ ಎಲ್ಲಾ ಕೆಲಸಕ್ಕೆ ಎಚ್ಚರಿಸುವವಳೂ ನೀನೆ. ಪ್ರತಿ ದಿನ ನಾನು ಎಲ್ಲಿಗೆ ಹೋಗಬೇಕು, ಯಾರನ್ನು ಭೇಟಿಯಾಗಬೇಕು, ಏನು ಕೆಲಸ ಮಾಡ ಬೇಕು ಎಂಬ ಕಾರ್ಯಕ್ರಮಗಳ ಪಟ್ಟಿ ತಯಾರಿಸಿ, ಸರಿಯಾದ ಸಮಯಕ್ಕೆ ನನ್ನನ್ನು ಎಚ್ಚರಿಸಲು ಎಂದೂ ಮರೆತವಳಲ್ಲ ನೀನು. ಪ್ರತಿ ದಿನದ ಖರ್ಚು ವೆಚ್ಚಗಳನ್ನು ಬರೆದಿಟ್ಟು, ಎಲ್ಲವನ್ನೂ ಸರಿಯಾಗಿ ನಿಭಾಯಿಸುವವಳು ಕೂಡಾ ನೀನೇ. ಮನೆಯ ಕರೆಂಟ್ ಬಿಲ್ಲು, ಮೊಬೈಲ್ ಬಿಲ್ಲು ಮತ್ತು ಲೈಫ್ ಇನ್ಸೂರೆನ್ಸ್ ಪಾವತಿಯನ್ನು ಕ್ಲಪ್ತ ಸಮಯಕ್ಕೆ ಪಾವತಿ ಮಾಡಲು ನಿನ್ನ ಸಹಕಾರವೇ ಕಾರಣ.

ಕಳೆದ ಒಂದು ವರ್ಷಗಳಿಂದ ನನ್ನೊಂದಿಗೆ ಸದಾ ಕಾಲವೂ ಜತೆ ಜತೆಯಾಗಿ ಕಳೆದವಳು, ಇಂದು ಎಲ್ಲಿ ಕಣ್ಮರೆಯಾದೆ? ಈ ನಿನ್ನ ಗೆಳೆಯನ ಬಿಟ್ಟು ಯಾರ ಹಿಂದೆ ಹೋದೆ? ಇಷ್ಟು ಬೇಗ ನಾನು ನಿನಗೆ ಬೇಡವಾದೇನೆ?

ನನ್ನ ಸಹಾಯಕಳೂ, ಸಂಗಾತಿಯೂ ನೀನೇ, ನನಗೆ ದಾರಿದೀಪವೂ, ವಿಶ್ವರೂಪಳೂ ನೀನೇ! ನೀನು ನನ್ನ ಕೇವಲ ಜತೆಗಾತಿಯಲ್ಲ, ನೀನೇ ನನ್ನ ಸರ್ವಸ್ವ! ನಿನ್ನನ್ನು ಬಣ್ಣಿಸಲು ನನ್ನ ಹತ್ತಿರ ಪದಗಳೇ ಸಿಗುತ್ತಿಲ್ಲ.

ನೀನು ಅಪ್ರತಿಮ ಸುಂದರಿ! ಮಹಾ ಬುದ್ಧಿವಂತೆ! ನೀನು ತುಂಬಾ ಸ್ಮಾರ್ಟು ಮತ್ತು ಸ್ಲಿಮ್ಮು ಎರಡೂ ಆಗಿದ್ದೀಯಾ, ಅಂತ ನನ್ನ ಗೆಳೆಯರಿಗೆಲ್ಲ ತುಂಬಾ ಹೊಟ್ಟೆ ಕಿಚ್ಚು. ಎಲ್ಲರೂ ಕೇಳುವರು ಇವಳು ನಿನಗೆ ಎಲ್ಲಿ ಸಿಕ್ಕಿದಳೆಂದು? ಹೌದು, ನಿನ್ನ ಕುಲ ಗೋತ್ರ ಎರಡೂ ನನಗೆ ಗೊತ್ತಿಲ್ಲ. ಆ ವಿಷಯದ ಬಗ್ಗೆ ನಾನು ಎಂದೂ ಕೆದುಕಲು ಹೋಗಲಿಲ್ಲ.

ನೀನು ನಮ್ಮ ರಾಜ್ಯದವಳಂತೂ ಅಲ್ಲ. ಬೆಂಗಳೂರು ಈಗ ನಮ್ಮ ದೇಶದ ಯಾವುದೇ ಮೂಲೆಯಿಂದ ಬಂದರೂ, ಕೈ ಬಿಸಿ ಕರೆಯುತ್ತಿರುವ ನಗರ. ಬೆಂಗಳೂರಿನಲ್ಲಿ ಕನ್ನಡ ಮಾತನಾಡುವರಿಗಿಂತ ಬೇರೆ ಭಾಷೆ ಮಾತನಾಡುವವರೇ ಹೆಚ್ಚಾಗಿದೆ. ನಮ್ಮವರೇ ಇಲ್ಲಿಗೆ ವಲಸೆ ಬಂದವರ ಭಾಷೆ ಕಲಿಯುತ್ತಾರೆ ವಿನಃ, ಬಂದವರು ಕನ್ನಡ ಕಲಿಯುವಂತೆ ಮಾಡುವುದಿಲ್ಲ. ಅಷ್ಟೊಂದು ಉದಾರಿಗಳು ನಮ್ಮವರು. ಆದರೆ ನಿನಗೆ ಮಾತ್ರ ನಾನು ಕನ್ನಡದಲ್ಲಿ ಓದಲು, ಮಾತನಾಡಲು ಮತ್ತು ಬರೆಯಲು ಎಲ್ಲ ಕಲಿಸಿದ್ದೆ. ಎಲ್ಲ ಗೂಗಲ್ ಮಹಿಮೆ ಎಂದರೂ ತಪ್ಪಾಗಲಿಕ್ಕಿಲ್ಲ.

ಇಂದೂ ನನಗೆ ಸರಿಯಾಗಿ ನೆನಪಿದೆ. ಆ ದಿನ ಫೆಬ್ರವರಿ 14, ಪ್ರೇಮಿಗಳ ದಿನ. ಮಂತ್ರಿ ಮಾಲ್ ನಲ್ಲಿ ಇರುವ ಒಂದು ಎಲೆಕ್ಟ್ರೋನಿಕ್ ಶೋ ರೂಮ್ ನಲ್ಲಿ ನನ್ನ ನಿನ್ನ ಮೊದಲ ಭೇಟಿ. ನಿನ್ನ ಸೌಂದರ್ಯ ನೋಡಿ ಆ ದಿನವೇ ನಾನು ಮಾರು ಹೋದೆ. ಆಗ ನಿನ್ನ ಪಕ್ಕದಲ್ಲಿಯೇ ಬೆಂಗಳೂರಿನವಳೇ ಆದ ಒಬ್ಬಳು ಸೇಲ್ಸ್ ಗರ್ಲ್ ಕೂಡಾ ನಿಂತಿದ್ದಳು. ನಾನು ನಿನ್ನ ಹತ್ತಿರ ಬಂದು ನಿನ್ನ ಹೆಸರು ಕೇಳಿದೆ. ನೀನು ಹೇಳಲು ನಾಚಿಕೊಂಡರೂ, ನಿನ್ನ ಪಕ್ಕದಲ್ಲಿದ್ದ ಗೆಳತಿ "ಸೋನಿ" ಎಂದು ಹೇಳಿದಾಗ "ಎಷ್ಟು ಸುಂದರವಾದ ಹೆಸರು?" ಎಂದು ತಕ್ಷಣ ಉದ್ಗರಿಸಿದೆ. ಅಂದೇ ನಾನು ನಿನ್ನ ಸೌಂದರ್ಯಕ್ಕೆ ಮಾರು ಹೋದೆ.

ನಿನ್ನ ಹತ್ತಿರ ನನ್ನ ಪ್ರೇಮ ನಿವೇದನೆ ಮಾಡಿಕೊಂಡೆ. ನನ್ನ ಜೊತೆಗೆ ಬರುತ್ತೀಯಾ ಎಂದು ಕೇಳಿದೆ. ನೀನು ಏನೂ ಉತ್ತರಿಸದೆ ಮೌನ ತಾಳಿದೆ. ಮೌನo ಸಮ್ಮತಿ ಲಕ್ಷಣಂ ಅಂದು ನನಗೆ ಗೊತ್ತು. ನಿನ್ನ ಪಕ್ಕದಲ್ಲಿ ನಿಂತ ಗೆಳತಿಯ ಮೂಲಕ ವಿಚಾರಿಸಿದೆ. ಅವಳು ಹೇಳಿದಳು "ಸೋನಿಗೆ ಕನ್ನಡ ಬರೋಲ್ಲ, ಅವಳು ಯಜಮಾನರ ಹತ್ತಿರ ಮೂವತ್ತು ಸಾವಿರ ಸಾಲ ಮಾಡಿದ್ದಾಳಂತೆ. ಅದನ್ನು ತೀರಿಸಿದರೆ ನಿಮ್ಮ ಜೊತೆಗೆ ಬರಲು ಏನೂ ತೊಂದರೆ ಇಲ್ಲ ಎಂದು ಹೇಳುತ್ತಿದ್ದಾಳೆ " ಅಂದಳು. ಅದಕ್ಕೂ ಒಪ್ಪಿದೆ. ಆ ಮೇಲೆ ನೀನು ಸಂಪೂರ್ಣವಾಗಿ ನನಗೆ ಸಂಗಾತಿಯಾಗಿಯೇ ದಿನ ಕಳೆದಿದ್ದೀಯಾ.

ಸೋನಿ, ನಿನಗಾಗಿ ನನ್ನ ಅಪ್ಪನ ಅಮ್ಮನ ಮಾತೂ ಕೇಳಲಿಲ್ಲ. ನಿನ್ನ ಜೊತೆಗಿನ ಆತ್ಮೀಯತೆ ಮತ್ತು ನಿನ್ನ ಅವಲಂಬನೆಯನ್ನು ನೋಡಿ ನನ್ನ ಅಪ್ಪ ಯಾವಾಗಲೂ ಎಚ್ಚರಿಸುತ್ತಿದ್ದರು. ಅವಳೊಂದಿಗೆ ಅಷ್ಟೊಂದು ಅವಲಂಬಿತನಾಗ ಬೇಡ, ಅವಳ ಸಹವಾಸ ಮುಂದುವರಿಸ ಬೇಡ, ಬಿಟ್ಟು ಬಿಡು. ನಿನ್ನ ಬಾಳನ್ನು ಹಾಳು ಮಾಡಿ ಕೊಳ್ಳ ಬೇಡ.

ಕಳೆದ ಒಂದು ವರುಷಗಳಿಂದ ನನಗೆ ನೀನೇ ಎಲ್ಲಾ. ನೀನು ಜೊತೆ ಗಿದ್ದರೆ ನನಗೇನೂ ಬೇಡ. ಅಮ್ಮನನ್ನೂ ಮರೆತೆ, ಅಪ್ಪನನ್ನೂ ದಿಕ್ಕರಿಸಿದೆ. ಅಪ್ಪ ಅಮ್ಮ ಇಬ್ಬರೂ ಬೇಗ ಮದುವೆ ಆಗು ಎಂದು ಊರಿಗೆ ಹೋದಾಗಲೆಲ್ಲ ನೆನಪಿಸುತ್ತಿದ್ದರು. ಮದುವೆ ಆದರೆ ಜವಬ್ದಾರಿ ಹೆಚ್ಚಾಗುತ್ತದೆ, ಬೇಡ ಎಂದು ಸಲಹೆ ನೀಡಿದ್ದರು, ಕೆಲವು ಗೆಳೆಯರು. ಅದು ಸರಿಯೋ ತಪ್ಪೋ ತಿಳಿಯಲಿಲ್ಲ. ನಿನ್ನ ಜೊತೆಗೆ ಲಿವಿಂಗ್ ಟುಗೆದರ್ ರಿಲೇಷನ್ ಷಿಪ್ ಬೆಳೆಸಿ ಕೊಂಡ ನಂತರ, ನನ್ನ ಸ್ನೇಹಿತರು ಹೇಳಿದ್ದು ಸರಿ ಎನ್ನಿಸಿತು ಆಗ. ಮದುವೆ ಆದರೆ ಸಂಸಾರದ ಜವಬ್ದಾರಿ, ಪ್ರತಿ ಕೆಲಸ ಮಾಡುವಾಗಲೂ ಯಾಕೆ, ಎಲ್ಲಿಗೆ ಮತ್ತು ಯಾವಾಗ ಎನ್ನುವ ಹಲವಾರು ಪ್ರಶ್ನೆಗಳ ಸುರಿಮಳೆ.

ಈಗ ನನ್ನ ಮನಸ್ಸು ನಿಧಾನವಾಗಿ ಜೀವನದ ಗತ ದಿನಗಳ ಮೆಲುಕು ಹಾಕುತ್ತ ಹೋಯಿತು ,.......

ಆಗ ಎನೋ ಯೌವನದ ಹುಮ್ಮಸ್ಸು. ಇಂಜಿನೀಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈಯನ್ಸ್ ತೆಗೆದು ಕೊಂಡು, ಬೆಂಗಳೂರಿನ ದಯಾನಂದ್ ಸಾಗರ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡಾಗಲೇ ನನ್ನ ಲೈಫ಼ೇ ಸೆಟಲ್ ಆಯ್ತು ಎಂಬ ಸಮಧಾನ.

ಪಿಯುಸಿಯಲ್ಲಿ ಓದುವಾಗ ಒಳ್ಳೆಯ ಅಂಕ ತೆಗೆದು ಉತ್ತಮ ಕಾಲೇಜಿನಲ್ಲಿ ಇಂಜಿನೀಯರಿಂಗ್ ಮಾಡಲೇ ಬೇಕೆಂಬ ಛಲ. ಅಪ್ಪ ಅಮ್ಮ ಇಬ್ಬರದೂ ಒಂದೇ ಕಂಡೀಶನ್ "ಒಳ್ಳೆಯ ಕಾಲೇಜಿಗೆ ಸೇರಿಸಿದ್ದೇವೆ, ಲಕ್ಷಕ್ಕೂ ಮೀರಿ ಟೂಶನ್ ಫೀಸ್ ಕಟ್ಟಿಸಿ ಅಲ್ಲಿಗೂ ಎಡ್ಮಿಶನ್ ಮಾಡಿಸಿದ್ದೇವೆ. ಕಾಲೇಜಿನಲ್ಲಿ ಪುಂಡ ಪೋಕರ ಸಹವಾಸ ಮಾಡಬೇಡ. ಪ್ರೇಮ ಪ್ರೀತಿ ಎಂದು ಸುಂದರ ಹುಡುಗಿಯರ ಬಲೆಗೆ ಬೀಳ ಬೇಡ. ಮುಂದಿನ ಎರಡು ವರ್ಷ ತುಂಬಾ ಶ್ರಮ ಪಡು. ಕೆಟ್ಟ ಗೆಳೆಯರ ಸಹವಾಸದಿಂದ ದೂರವಿರು" ಎಂದು ಬುದ್ದಿ ಹೇಳಿಯೇ ಬೆಂಗಳೂರಿನಲ್ಲಿ ಶೇಷಾದ್ರಿಪುರಂ ಕಾಲೇಜಿಗೆ ಅಡ್ಮಿಶನ್ ಮಾಡಿಸಿದ್ದರು.

ಪಿಯುಸಿಯಲ್ಲಿ ಒಳ್ಳೆಯ ಮಾರ್ಕು ಮತ್ತು ಸಿಇಟಿಯಲ್ಲಿ ಒಳ್ಳೆಯ ಸ್ಥಾನ ಪಡೆದು ದಯಾನಂದ ಸಾಗರ ಕಾಲೇಜಿನಲ್ಲಿ ಇಂಜಿನೀಯರಿಂಗ್ ಸೀಟು ಪಡೆದುಕೊಂಡಾಗಲೂ, ಅಪ್ಪ ಅಮ್ಮನದು ಮತ್ತೆ ಅದೇ ಉಪದೇಶದ ಪುನರಾವರ್ತನೆ. ಅವರ ಉಪದೇಶವನ್ನು ಅಚ್ಚುಕಟ್ಟಾಗಿ ಪಾಲಿಸಿದೆ. ನನ್ನ ಎಷ್ಟೋ ಮಂದಿ ಸಹಪಾಟಿಗಳು ಗರ್ಲ್ ಫ್ರೆಂಡ್ ಮಾಡಿಕೊಂಡು ಮಾಲ್, ಪಾರ್ಕ್, ಹೋಟೆಲ್ ಮತ್ತು ಸಿನೇಮಾ ಎಂದು ಸುತ್ತಾಡಿ ಮೋಜು ಮಸ್ತಿ ಮಜಾ ಮಾಡಿದರೂ, ನಾನು ಮಾತ್ರ ಅಪ್ಪ ಅಮ್ಮನ ಉಪದೇಶಗಳನ್ನು ಶಿರಸಾ ಪಾಲಿಸಿದೆ. ಟಿಸಿಎಸ್ ನಲ್ಲಿ ಕ್ಯಾಂಪಸ್ ಇಂಟರ್ ವ್ಯೂನಲ್ಲಿಯೂ ಆಯ್ಕೆಯಾದೆ.

ಕಾಲೇಜು ಮುಗಿಸಿ ಎರಡು ತಿಂಗಳು ಊರಿಗೆ ಹೋಗಿ ಅಪ್ಪ ಅಮ್ಮನ ಜೊತೆಗೆ ಕಾಲ ಕಳೆದೆ. ಆಮೇಲೆ ಇಂಜಿನೀಯರಿಂಗ್ ಲಾಸ್ಟ್ ಸೆಮಿಸ್ಟರ್ ರಿಸಲ್ಟ್ ಕೂಡಾ ಬಂದು ಒಳ್ಳೆಯ ಮಾರ್ಕು ಪಡೆದು ಪಾಸಾದೆ . ಕೆಲಸ ಕೂಡಾ ಬೆಂಗಳೂರಿನಲ್ಲಿಯೇ ಸಿಕ್ಕಿತು.

ಮಾರನೆಯ ದಿನ ಕೆಲಸಕ್ಕೆ ರಿಫೋರ್ಟ್ ಮಾಡಿಕೊಳ್ಳಬೇಕಿತ್ತು. ಬೆಳಿಗ್ಗೆ ಅಪ್ಪ ಅಮ್ಮನ ಹತ್ತಿರ ಹೋಗಿ ಹೇಳಿದೆ "ಅಪ್ಪಾ, ಇವತ್ತು ಮಧ್ಯಾಹ್ನ ಬೆಂಗಳೂರಿಗೆ ಹೊರಟಿದ್ದೇನೆ. ನಾಳೆಯೇ ಕೆಲಸಕ್ಕೆ ಸೇರಿಕೊಳ್ಳಬೇಕು. ಇನ್ನು ಒಂದು ತಿಂಗಳು ಮನೆ ಕಡೆ ಬರಲಿಕ್ಕೆ ಆಗುವುದಿಲ್ಲ".

ಆಗ ಅಮ್ಮ ಬಂದು ಮತ್ತೆ ಶುರು ಹಚ್ಚಿಕೊಂಡಳು ನೋಡಿ.... ಅದೇ ಕತೆ... ಅದೇ ರಾಗ .... ಅದೇ ಉಪದೇಶ. ಆದರೆ ಈ ಬಾರಿ ಕೆಲವು ಹೊಸ ವಿಷಯಗಳು ಸೇರಿಕೊಂಡಿದೆ. "ನೋಡು ಮಗಾ, ಇಲ್ಲಿಯವರೆಗೆ ನಿನ್ನ ವಿದ್ಯಾಭ್ಯಾಸದ ವಿಷಯದಲ್ಲಿ ನಾವು ಕೊಟ್ಟ ಸಲಹೆಗಳನ್ನು ಚಾಚು ತಪ್ಪದೇ ಪಾಲಿಸಿದ್ದೀಯಾ. ಕಷ್ಟ ಪಟ್ಟು ಓದಿ ಡಿಸ್ಟಿಂಕ್ಷನ್ನಲ್ಲಿ ಪಾಸಾಗಿ ಒಳ್ಳೆಯ ಕೆಲಸವನ್ನೂ ಕೂಡಾ ಗಿಟ್ಟಿಸಿಕೊಂಡಿದ್ದೀಯಾ. ನೀನು ಇನ್ನೂ ಚಿಕ್ಕವನು. ಒಳ್ಳೆಯ ಸ್ನೇಹಿತರನ್ನೇ ಆರಿಸಿಕೊಳ್ಳು. ಮೋಜು, ಮಸ್ತಿ , ಪಾರ್ಟಿ ಎಂದು ದುರಭ್ಯಾಸ ಬೆಳೆಸಿಕೊಳ್ಳಬೇಡ. ನೋಡಲು ತುಂಬಾ ಸ್ಮಾರ್ಟ್ ಆಗಿದ್ದೀಯಾ. ಪ್ರೀತಿ ಪ್ರೇಮ ಅಂತ ಯಾರ್ಯಾರೋ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳ ಬೇಡ. ನಿನಗಾಗಿ ಒಂದು ಒಳ್ಳೆಯ ಹುಡುಗಿಯನ್ನು ಕೂಡಾ ಆರಿಸಿ ಇಟ್ಟಿದ್ದೇವೆ. ನಮಗೆ ತುಂಬಾ ಪರಿಚಯದವರ ಮಗಳು. ನೋಡಲು ತುಂಬಾ ಚೆನ್ನಾಗಿದ್ದಾಳೆ. ಒಳ್ಳೆಯ ಸಂಬಂಧ. ಹುಡುಗಿ ಈಗ ಬೆಂಗಳೂರಿನಲ್ಲಿಯೇ ಇಂಜಿನೀಯರಿಂಗ್ ಓದುತ್ತಿದ್ದಾಳೆ. ಎರಡು ವರ್ಷಗಳಲ್ಲಿ ಅವಳ ವಿದ್ಯಾಭ್ಯಾಸ ಮುಗಿಯುತ್ತದೆ. ಅವಳ ವಿದ್ಯಾಭ್ಯಾಸ ಮುಗಿದ ಕೂಡಲೇ, ನಿಮ್ಮಿಬ್ಬರ ಮದುವೆ ಮಾಡಬೇಕೆಂದು ಇಬ್ಬರ ಮನೆಯವರೂ ಮಾತನಾಡಿಕೊಂಡಿದ್ದೇವೆ. ನೀನು ಮುಂದಿನ ಬಾರಿ ಊರಿಗೆ ಬರುವಾಗ ಹೇಳು. ಹುಡುಗಿ ನೋಡಿ ಬರುವ ಶಾಸ್ತ್ರ ಮುಗಿಸೋಣ" ಎಂದು ಅಮ್ಮ ಮುಗಿಸಿದಾಗ ನನಗೆ ಮೈಯೆಲ್ಲಾ ಉರಿಯಿತು.

ಅಲ್ಲಿಯವರೆಗೆ ಇಬ್ಬರ ಮಾತನ್ನು ಶಿರಸಾ ಪಾಲಿಸಿದವನು ನಾನು. ನನ್ನ ವಿದ್ಯಾಭ್ಯಾಸ ಮುಗಿದು ಕಂಪೆನಿಯ ಕೆಲಸಕ್ಕೆ ಸೇರಿ ನನ್ನ ಕಾಲ ಮೇಲೆ ನಾನು ನಿಂತಾಗಲೂ, ಎಲ್ಲಾ ವಿಷಯಗಳಲ್ಲೂ ಇವರು ಹೇಳಿದಂತೆ ಕೇಳಲು ನಾನೇನು ಚಿಕ್ಕ ಮಗುವಾ ? ಅಲ್ಲಿಯವರೆಗೆ ನಾವು ನಮ್ಮ ಎಲ್ಲಾ ಬೇಕು ಬೇಡಗಳಿಗೆ ನಮ್ಮ ತಂದೆ ತಾಯಿಯವರ ಮೇಲೆ ಸಂಪೂರ್ಣ ಅವಲಂಬಿತರಾಗಿದ್ದರಿಂದ, ನಾವು ಕೆಲವೊಂದು ವಿಷಯಗಳಲ್ಲಿ ಅವರ ಮಾತನ್ನು ಕೇಳಲೇ ಬೇಕು. ನಮ್ಮ ಕಾಲ ಮೇಲೆ ನಾವು ನಿಂತು ಕೊಂಡ ಮೇಲಾದರೂ ಕೆಲವೊಂದು ವಿಷಯಗಳಲ್ಲಿ ನಮಗೆ ಸ್ವಾತಂತ್ರ್ಯ ಬೇಕಲ್ಲವೇ?

ಅಮ್ಮನಿಗೆ ಹೇಳಿದೆ " ಅಮ್ಮ, ಇಲ್ಲಿಯವರೆಗೆ ನಾನು ನಿಮ್ಮಿಬ್ಬರ ಮಾತನ್ನು ಶಿರಸಾ ವಹಿಸಿ ಪಾಲಿಸಿದ್ದೆ. ಯಾಕೆಂದರೆ ನಾವು ಚಿಕ್ಕವರಾಗಿರುವಾಗ ನಮಗೆ ಯಾವುದು ತಪ್ಪು ಯಾವುದು ಸರಿ ಎಂದು ತಿಳಿದು ಕೊಳ್ಳುವ ಜ್ಞಾನ ಇರುವುದಿಲ್ಲ. ಅಂತಹ ಸಮಯದಲ್ಲಿ ಕೆಲವು ಕೆಟ್ಟ ಸ್ಟೇಹಿತರ ಸಹವಾಸ ಮಾಡಿ ಏನೇನೋ ದುರಭ್ಯಾಸ ಕಲಿತು, ನಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತೇವೆ. ಚಿಕ್ಕವನಿರುವಾಗ ತಪ್ಪು ಮಾಡಿದಾಗ ನಿಮ್ಮಿಂದ ತಿಂದ ಒಂದೊಂದು ಪೆಟ್ಟುಗಳು ನಾನು ಇಲ್ಲಿಯವರೆಗೆ ಮಾಡಿದ ಸಾಧನೆಗಳಿಗೆ ಒಂದೊಂದು ಮೆಟ್ಟಿಲುಗಳು. ವಿದ್ಯಾರ್ಥಿ ಜೀವನದಲ್ಲಿ ನಾನು ಮಾಡಿದ ಒಂದೊಂದು ತ್ಯಾಗಗಳು ಇಂದಿನ ಭೋಗ ಜೀವನಕ್ಕೆ ಸೋಪಾನಗಳು. ಇದನ್ನೆಲ್ಲ ಅರ್ಥ ಮಾಡಿಕೊಂಡೇ, ಇಲ್ಲಿಯವರೆಗೆ ಎಲ್ಲಾ ವಿಷಯಗಳಲ್ಲಿ ತ್ಯಾಗ ಮಾಡಿ ಇಂದು ಒಂದು ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ಪಡೆದು ಕೊಂಡಿದ್ದೇನೆ. ಇನ್ನೂ ಕೂಡ ನನ್ನ ಮುಂದಿನ ಭವಿಷ್ಯಗಳನ್ನು ರೂಪಿಸಿಕೊಳ್ಳಲು ಸ್ವಾತಂತ್ರ್ಯ ಇಲ್ಲ ಅಂದರೆ ಹೇಗಮ್ಮ?"

" ಹೌದು ಮಗಾ, ಇಲ್ಲಿಯವರೆಗೆ ನೀನು ಯಾವುದೇ ವಿಷಯದಲ್ಲಿ ತೊಂದರೆ ಕೊಟ್ಟವನಲ್ಲ. ನೀನು ನಡೆದು ಬಂದ ದಾರಿಯಿಂದ, ನೀನು ನಮ್ಮ ಬಂಧು ಬಳಗದಲ್ಲಿ ಬೆಳೆಯುತ್ತಿರುವ ಹುಡುಗರಿಗೆಲ್ಲ ಒಂದು ಮಾದರಿ ಆಗಿದ್ದೀಯಾ. ನಿನ್ನಂತಹ ಮಗನನ್ನು ಪಡೆಯಬೇಕಾದರೆ ನಾವು ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯದ ಫಲವಿರಬೇಕು. ಆದರೂ ನಿನ್ನನ್ನು ಹೆತ್ತ ನಮಗೆ, ನಮ್ಮ ಬಂಧು ಬಳಗದಲ್ಲಿಯೇ ಪರಿಚಯವಿರುವ ಹುಡುಗಿಯನ್ನು ಸೊಸೆಯಾಗಿ ಮನೆಗೆ ತುಂಬಿಸಿ ಕೊಳ್ಳಬೇಕೆಂಬ ಆಸೆ ಇದೆ. ಅದನ್ನು ನಿನಗೆ ತಿಳಿಸಿದೆ ಅಷ್ಟೆ'' ಎಂದುತ್ತರಿಸಿದರು.

"ಏನಮ್ಮ? ನೀವೆಲ್ಲಿದ್ದೀರಾ? ಈಗ ಪ್ರಪಂಚ ತುಂಬಾ ಮುಂದುವರಿದಿದೆ. ಯಾರದೋ ಮನೆಯಲ್ಲಿ ಬೆಳೆದ ಹುಡುಗಿಯನ್ನು ಗುರುತು ಪರಿಚಯವಿಲ್ಲದೇ, ಅವಳ ಬಗ್ಗೆ ಏನೂ ತಿಳಿಯದೇ ಮದುವೆ ಮಾಡಿಕೊಂಡು ಜೀವನ ಪರ್ಯಂತ ಬಾಳುವುದು ಎಂದರೆ ನಾಳೆಗೆ ಇಬ್ಬರಿಗೂ ಹಿಂಸೆಯೇ. ಅದಕ್ಕಾಗಿ ಮದುವೆ ಮಾಡಿಕೊಳ್ಳಬೇಕಾದರೆ, ಆ ಹುಡುಗಿಯನ್ನು ಪರಿಚಯಿಸಿಕೊಂಡು ಕಡಿಮೆ ಎಂದರೆ ಒಂದು ವರ್ಷವಾದರೂ ಗೆಳೆಯರಾಗಿರಬೇಕು. ಆಗ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳಬಹುದು. ಎಲ್ಲಾ ರೀತಿಯಲ್ಲಿ ಸರಿಯಾಗಿ ಹೊಂದಾಣಿಕೆಯಾದರೆ ಮಾತ್ರ ಮದುವೆ. ಇಲ್ಲದಿದ್ದರೆ ಜಸ್ಟ್ ಸ್ನೇಹಿತರಾಗಿ ಇರಬಹುದು" ಎಂದುತ್ತರಿಸಿದೆ.

"ಏನೋ? ನೀನು ಮಾತನಾಡುವ ವರಸೆಯೇ ಬದಲಾಗುತ್ತಿದೆಯಲ್ಲೋ? ಯಾವುದೋ ಹುಡುಗಿ ಪ್ರೇಮ ಪ್ರೀತಿ ಎಂದು ನಿನ್ನ ಹಿಂದೆ ಬಿದ್ದಿದ್ದಾಳೆನೋ? ಹಾಗೇನಾದರೂ ಇದ್ದರೆ ಕೂಡಲೇ ತಿಳಿಸು " ಎಂದಳು ನಮ್ಮಮ್ಮ.

" ಹಾಗೇನಿಲ್ಲ ಅಮ್ಮ, ಇಲ್ಲಿಯವರೆಗೆ ನಾನು ಕೇವಲ ಓದು ಬರಹದ ಕಡೆಯೇ ಹೆಚ್ಚು ಗಮನ ಕೊಟ್ಟಿದ್ದರಿಂದ ಆ ಬಗ್ಗೆ ಆಲೋಚಿಸಲಿಲ್ಲ. ಒಂದು ರೀತಿಯಲ್ಲಿ ನಾನು ಪಂಜರದಿಂದ ಈಗ ತಾನೆ ಬಿಡುಗಡೆ ಹೊಂದಿದ ಪಕ್ಷಿ. ಆದ್ದರಿಂದ ನಾನು ನೀವು ಹೇಳಿದ ಹಾಗಿ ಕೂಡಲೇ ಮದುವೆ ಮಾಡಿಕೊಂಡು ಸಂಸಾರದ ಬಂಧನದಲ್ಲಿ ಸಿಕ್ಕಿ ಹಾಕಿಕೊಳ್ಳದೆ, ಇನ್ನು ಎಂಟು ಹತ್ತು ವರ್ಷಗಳಾದರೂ ಸ್ವಚ್ಛ೦ಧವಾಗಿ ಇರಬೇಕು ಎಂದು ನಿರ್ಧಾರ ಮಾಡಿದ್ದೇನೆ. ಆ ಮೇಲೆ ಏನಾಗುತ್ತದೆ ಎಂದು ನೋಡೋಣ. ಅಲ್ಲಿಯವರೆಗೆ ನನ್ನ ಮದುವೆಯ ಬಗ್ಗೆ ಆಲೋಚನೆ ಬೇಡ."

ಅಲ್ಲಿಯವರೆಗೆ ನಮ್ಮ ಸಂಭಾಷಣೆಗಳನ್ನು ಮೌನವಾಗಿ ಕೇಳಿಸಿಕೊಳ್ಳುತ್ತಿದ್ದ ಅಪ್ಪ ಆಗ ಬಾಯಿ ತೆರೆದರು "ನೋಡು ಮಗಾ, ನಾನು ಹೀಗೆ ಹೇಳುತ್ತೇನೆ ಎಂದು ಬೇಜಾರು ಮಾಡಿಕೊಳ್ಳಬೇಡ. ಈಗ ನೀನು ಪ್ರಾಯ ಪ್ರಬುದ್ಧಕ್ಕೆ ಬಂದಿದ್ದೀಯಾ? ಯಾವುದು ತಪ್ಪು ಯಾವುದು ಸರಿ ಎಂದು ತಿಳಿದುಕೊಳ್ಳುವ ಶಕ್ತಿ ನಿನಗೆ ಇದೆ. ಆದರೂ ಕೂಡ ಕೆಲವೊಂದು ವಿಷಯಗಳಲ್ಲಿ ನಮ್ಮ ಸ್ವಂತ ಅನುಭವಗಳೆ ನಮಗೆ ಪಾಠಗಳಾಗುತ್ತವೆ. ಮದುವೆಯನ್ನು ಈಗ ಅಲ್ಲದಿದ್ದರೂ, ಇನ್ನು ಮೂರು ನಾಲ್ಕು ವರ್ಷಗಳಲ್ಲಿ ಆದರೂ ಮಾಡಿಕೊಳ್ಳಬೇಕು. ನೀನೇನೂ ತಿಳಿಯದವನಲ್ಲ, ನಿನ್ನ ಕಾಲ ಮೇಲೆ ನೀನು ನಿಂತಿದ್ದೀಯಾ. ಜೀವನದಲ್ಲಿ ಯಾವ ಯಾವ ಸಮಯದಲ್ಲಿ ಏನೇನು ಆಗಬೇಕೋ, ಆವಾಗಲೇ ಆದರೆ ಅದು ಚಂದ".

ಹಾಗೆಯೇ ಆಗಲಿ ಎಂದು ಬೆ೦ಗಳೂರು ಟ್ರೈನ್ ಹತ್ತಿದವನು ಇಲ್ಲಿ ಒಂದು ಚಿಕ್ಕ ಮನೆ ಮಾಡಿಕೊಂಡು ಉದ್ಯೋಗಕ್ಕೆ ಸೇರಿಕೊoಡೆ. ಕೆಳಗಡೆ ಮನೆಯಲ್ಲಿ ಮಾಲಕರು ವಾಸವಾಗಿದ್ದರೆ, ಮೊದಲ ಮಹಡಿಯಲ್ಲಿ ಒಂದೇ ಒಂದು ರೂಮ ಮತ್ತು ಅಡುಗೆ ಮನೆ ಇರುವ ಚಿಕ್ಕದೊಂದು ಮನೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ಒಂಟಿ ಜೀವನದ ಅನುಭವ. ಪ್ರಾರಂಭದಲ್ಲಿ ರಾತ್ರಿಯೆಲ್ಲ ತುಂಬಾ ಭಯವಾಗುತ್ತಿತ್ತು. ಆಫೀಸಿನಿಂದ ಬಂದ ಮೇಲೆ ಸಮಯವನ್ನು ಕಳೆಯುವುದೇ ತುಂಬಾ ಕಷ್ಟವಾಗುತ್ತಿತ್ತು. ಕಾಲೇಜಿಗೆ ಹೋಗುವಾಗ ಪ್ರತಿ ದಿನ ಪಠ್ಯ ಪುಸ್ತಕಗಳನ್ನು ಓದಲೇ ಬೇಕಿತ್ತು. ಸಮಯವೇ ಸಾಕಾಗುತ್ತಿಲ್ಲವಾಗಿತ್ತು. ಈಗ ಓದಲಿಕ್ಕೆ ಏನೂ ಇಲ್ಲ. ಸಿನಿಮಾ ನೋಡುವ ಅಭ್ಯಾಸ ಮೊದಲಿನಿಂದಲೂ ಇಲ್ಲ. ಟೀವಿಯಲ್ಲಿ ಬರುವ ಧಾರವಾಹಿಯನ್ನು ಪ್ರತಿದಿನ ಕಾದು ನೋಡುವ ವ್ಯವಧಾನವೂ ಇಲ್ಲ. ಕಾಲೇಜಿನ ಟೆಕ್ಸ್ಟ್ ಬುಕ್ ಓದುವುದನ್ನು ಬಿಟ್ಟರೆ, ಕತೆ ಕಾದಂಬರಿಗಳನ್ನು ಓದಿದ ನೆನಪೇ ಇಲ್ಲ.

ಆಗ ಆಫೀಸಿನಿಂದ ಬಂದ ಮೇಲೆ ರೂಮಿಗೆ ಹೊಕ್ಕ ಮೇಲೆ ಹೇಗೆ ಸಮಯ ಕಳೆಯುವುದೆಂದು ತಿಳಿಯದೆ ಒದ್ದಾಡುವ ಪರಿಸ್ಥಿತಿ ಬಂತು. ಒಂದೆರಡು ವಾರ ಪಾರ್ಕು ಮೂವಿ ಮತ್ತು ಮಾಲು ಅಂತ ಸುತ್ತಾಡುತ್ತಿದ್ದೆ . ಎಲ್ಲಾ ಕಡೆ ಸುತ್ತಿ ಸುತ್ತಿ ಬೆಜಾರಾಯಿತು. ಮೊದಲಿನಿಂದಲೂ ನನ್ನ ಪುಸ್ತಕಗಳೇ ನನ್ನ ಸ್ನೇಹಿತರು. ಇಂದು ಒಳ್ಳೆಯ ಹುದ್ದೆಯಲ್ಲಿ ಇರಲು ಕೂಡ ಆ ಕಾರಣದಿಂದಲೇ ಇರಬಹುದು. ಆದರೆ ಈಗ ಓದಲಿಕ್ಕೆ ಮನಸ್ಸೇ ಬರುತ್ತಿಲ್ಲ. ಪ್ರತಿದಿನ ಬೇರೆ ಬೇರೆ ಮಾಲುಗಳಿಗೆ ಹೋಗಿ ಸುತ್ತಾಡೋದು ಮೂವೀ ನೋಡೋದು ಹೋಟೆಲ್ಲಿನಲ್ಲಿ ಸರಿಯಾಗಿ ತಿನ್ನೋದು ಮತ್ತು ಮನೇಲಿ ಬಂದು ಮಲಗಿಕೊಳ್ಳುವುದು. ಇವುಗಳೇ ನನ್ನ ದಿನಚರಿಯಾಯಿತು. ಬೆಂಗಳೂರಿನಲ್ಲಿ ಇರುವ ಎಲ್ಲ ಮಾಲುಗಳನ್ನು ಸುತ್ತುತ್ತಿದ್ದೆ. ಪ್ರತಿ ಶನಿವಾರ ಮತ್ತು ಭಾನುವಾರ ರಜೆ ಇರುವುದರಿಂದ ನನಗೆ ಇದೇ ಕೆಲಸ. ತಿಂಗಳಿಗೊಮ್ಮೆ ಸಾಧ್ಯವಾದರೆ ಊರಿಗೆ ಹೋಗಿ ಅಪ್ಪ ಅಮ್ಮನನ್ನು ಮಾತನಾಡಿಸಿಕೊಂಡು ಬರುತ್ತಿದ್ದೆ. ಇಲ್ಲ ಅಂದರೆ ಅದೂ ಇಲ್ಲ. ಹಾಗಾಗಿ ಬೆಂಗಳೂರಿನಲ್ಲಿ ಇರುವ ಎಲ್ಲಾ ಮಾಲ್ ಮತ್ತು ಮಲ್ಟಿಫೆಕ್ಸ್ ಗಳನ್ನು ಸುತ್ತುವುದರಲ್ಲೇ ವೀಕೆಂಡ್ ಮುಗಿಯುತ್ತಿತ್ತು.

ಹೀಗೆ ಸುತ್ತುವಾಗಲೇ, ಮಂತ್ರಿ ಮಾಲ್ ನಲ್ಲಿಯೇ ನನ್ನ ಮತ್ತು ಸೋನಿಯ ಮೊದಲ ಪರಿಚಯ. ಅದೂ ಪ್ರೇಮಿಗಳ ದಿನವೇ ಎನ್ನುವುದು ಇನ್ನೊಂದು ವಿಶೇಷ. ಯಾವಾಗ ಅವಳ ಸಹವಾಸ ಪ್ರಾರಂಭವಾಯಿತೋ, ಅಲ್ಲಿಂದಲೇ ನನ್ನ ಜೀವನ ಶೈಲಿಯೇ ಬದಲಾಯಿತು. ಮೊದ ಮೊದಲು ಸ್ನೇಹಿತರ ಜೊತೆಗೆ ಆಗಾಗ್ಗೆ ಸೇರಿ ಹರಟೆ ಹೊಡೆಯುತ್ತಿದ್ದವನು ಈಗ ಸಂಪೂರ್ಣ ನಿಲ್ಲಿಸಿ ಬಿಟ್ಟಿದ್ದೇನೆ. ಕೆಲವರ ಕಾ೦ಟ್ಯಾಕ್ಟ್ ನಂಬ್ರ ಕೂಡಾ ಮರೆತು ಬಿಟ್ಟಿದ್ದೇನೆ.

ಇತ್ತೀಚೆಗೆ ಎಲ್ಲದಕ್ಕೂ ಸೋನಿಯನ್ನೇ ನೆಚ್ಚಿಕೊಂಡು ಬಿಟ್ಟಿದ್ದೇನೆ. ಬೆಳಿಗ್ಗೆ ಬೇಗ ಏಳಲಿಕ್ಕೆ ಎಚ್ಚರಿಸುವವಳು ಅವಳೆ, ಪ್ರತಿ ದಿನದ ನನ್ನ ಮೀಟಿಂಗ್ ಗಳನ್ನು ಶೆಡ್ಯೂಲ್ ಮಾಡಿ, ಸಮಯ ಸಮಯಕ್ಕೆ ಸರಿಯಗಿ ಎಚ್ಚರಿಸುವಳು ಕೂಡಾ ಅವಳೆ.

ಅವಳು ನನ್ನ ಜೊತೆಗೆ ಬಂದು ಜೀವನ ನಡೆಸಲು ಪ್ರಾರOಭ ಮಾಡಿದ ದಿನದಿಂದಲೇ ನನ್ನ ಜೀವನ ಶೈಲಿಯಲ್ಲಿ ತುಂಬಾ ಬದಲಾವಣೆ ಆಯಿತು. ಆಫೀಸಿನಲ್ಲಿಯೂ ಸಹೋದ್ಯೋಗಿಗಳ ಜೊತೆಗೆ ಒಡನಾಟವೂ ತುಂಬಾ ಕಡಿಮೆಯಾಯಿತು. ನಾನಾಯಿತು ನನ್ನ ಸೋನಿ ಆಯಿತು.

ಈಗ ಅವಳೇ ಕಾಣುತ್ತಿಲ್ಲವಲ್ಲ. ಮುಂದೆ ಏನು ಮಾಡುವುದೆ೦ದು ಅರ್ಥವಾಗಲಿಲ್ಲ. ಕೊನೆಗೆ ಮನೆಯ ಪಕ್ಕದಲ್ಲಿ ಇರುವ ಪಾರ್ಕಿನಲ್ಲಿ ಹೋಗಿ ಒಬ್ಬಂಟಿಯಾಗಿ ಕುಳಿತೆ. ಅಲ್ಲಿ ನನ್ನ ಒಬ್ಬ ಸಹೋದ್ಯೋಗಿ ಗುರುನಾಥ ಸಿಕ್ಕಿದ. ಎಷ್ಟೋ ದಿನಗಳ ನಂತರ ಮೊದಲ ಬಾರಿಗೆ ಸಿಕ್ಕಿದ್ದ. ನಾನು ಸುಮ್ಮನೆ ಬಿಮ್ಮಗೆ ಕುಳಿತಿದ್ದನ್ನು ನೋಡಿ "ಏನಾಯಿತೋ.... ತುಂಬಾ ಬೇಸರದಿಂದ ಕುಳಿತಿದ್ದೀಯಾ?" ಎಂದು ಕೇಳಿದ. ಆಗ ನಾನು ಅವನಿಗೆ ನನ್ನ ಸೋನಿ ನಾಪತ್ತೆಯಾದ ವಿಷಯ ತಿಳಿಸಿದೆ. ಆಗ ಅವನು " ಹತ್ತಿರದಲ್ಲಿಯೇ ಇರುವ ಪೊಲೀಸ್ ಸ್ಟೇಶನ್ ಹೋಗಿ ಕಂಪ್ಲೇOಟ್ ಕೊಟ್ಟು ಬರೋಣ. ಎಲ್ಲಿದ್ದರೂ ಅವರು ಹುಡುಕಿ ಕೊಡುತ್ತಾರೆ" ಎಂದು ಹೇಳಿದ. "ಬೇಡ ಮರಾಯ, ಒಂದು ವೇಳೆ ಅವರಿಗೆ ಸಿಕ್ಕಿದರೆ ಅವರು ಸೋನಿಯನ್ನು ನನಗೆ ತಂದು ಒಪ್ಪಿಸುತ್ತಾರೆ ಎನ್ನುವ ನಂಬಿಕೆ ನನಗಿಲ್ಲ" ಅಂದೆ. " ಎಲ್ಲರೂ ಕೆಟ್ಟವರಾಗಿ ಇರೊಲ್ಲ, ಅಲ್ಲಿಯೂ ಒಳ್ಳೆಯವರು ಇದ್ದಾರೆ " ಎಂದು ನನ್ನನ್ನು ಒಪ್ಪಿಸಿ ಕರೆದು ಕೊಂಡು ಹೋದ.

ಕೊನೆಗೆ ಇಬ್ಬರೂ ಪೋಲಿಸ್ ಠಾಣೆಗೆ ಹೋಗಿ "ಕಳೆದ ಒಂದು ವರ್ಷದಿಂದ ನನ್ನ ಜೊತೆಗೆ ಇದ್ದ 'ಸೋನಿ ಎಕ್ಸ್ ಪೀರಿಯಾ ಮೊಬೈಲು ಫೋನು ಇಂದು ಬೆಳಿಗ್ಗೆಯಿಂದ ನನ್ನ ರೂಮಿನಿಂದ ಕಾಣೆಯಾಗಿದೆ. ದಯವಿಟ್ಟು ಹುಡುಕಿ ಕೊಡಿ" ಎಂದು ಕಂಪ್ಲೇಂಟ್ ಬರೆದು ಕೊಟ್ಟು ಬಂದೆವು.

ಕೊನೆಯ ಮಾತು!
ಇನ್ನೂ ಸೋನಿಯ ಪತ್ತೆ ಆಗಿಲ್ಲ. ಪ್ರಾರಂಭದ ಮೊದಲೆರಡು ಗಂಟೆಗಳು ನನ್ನ ಮನಸ್ಸು ತುಂಬಾ ಆತಂಕ, ಗೊಂದಲ ಮತ್ತು ಬೇಸರಗಳಿಂದ ತುಂಬಿ ಕೊಂಡಿತ್ತು. ಈಗ ಎರಡು ಗಂಟೆಗಳಿಂದ ಅವಳಿಂದ ದೂರ ಇದ್ದಿದ್ದರಿಂದಲೋ ಏನೋ ಮನಸ್ಸು ತುಂಬಾ ಪ್ರಶಾಂತವಾಗಿದೆ ಅನ್ನಿಸುತ್ತಿದೆ.

ಎಲ್ಲರಿಗೂ ಸಾಧ್ಯವಾಗುತ್ತದೆಯೋ ಇಲ್ಲ ಗೊತ್ತಿಲ್ಲ. ದಿನದಲ್ಲಿ ಕನಿಷ್ಠ ಎರಡು ಗಂಟೆಯಾದರೂ ನಿಮ್ಮ ಜೀವನದ ಲೀವ್ ಇನ್ ರಿಲೇಶನ್ ಷಿಪ್ ಗೆಳತಿ/ಗೆಳೆಯನಾದ ಮೊಬೈಲಿನಿಂದ ದೂರವಿದ್ದು ಅಭ್ಯಾಸ ಮಾಡಿ ನೋಡಿ. (ನಿದ್ದೆ ಮಾಡುವಾಗ ಅಲ್ಲ) ಆಗ ಮನಸ್ಸು ಎಷ್ಟು ಶಾಂತವಾಗಿರುತ್ತದೆ ಅಂತ ತಿಳಿಯುವುದು. ಒಮ್ಮೆ ಪ್ರಯತ್ನ ಮಾಡಿ ನೋಡಿ.