Click here to Download MyLang App

ಲಾಕ್‌ಡೌನ್ - ಬರೆದವರು : ಅವಿರತ ಮಾವಿನಕುಳಿ | ಸಾಮಾಜಿಕ

ಚರ್ರ್...ಚರಪರಪಚರ...ಚರ್ರ್ ಅಂತ ಅಡಿಗೆಮನೆಯಿಂದ ಸದ್ದು ಬಂದಂತಾಯಿತು. ಇನ್‌ಸ್ಟಾಗ್ರಾಮ್‌ನಲ್ಲಿ ಕಾಲೇಜು ಗೆಳತಿಯೊಬ್ಬಳ ಫೋಟೋಗೆ ಬಂದ ಕಾಮೆಂಟುಗಳನ್ನು ಓದುತ್ತಾ ಅನ್ಯಮನಸ್ಕನಾಗಿದ್ದ ರಾಜೇಶ ಚರ್ರ್‌ಪರ್ರ್ ಸದ್ದು ಕೇಳಿ ಬೆಚ್ಚಿದ. ಓ, ಹಲ್ಲಿ ಅಡಿಗೆಮನೆಯಲ್ಲಿ ಪ್ಲಾಸ್ಟಿಕ್ ಕವರುಗಳ ಮೇಲೆಲ್ಲಾ ಓಡಾಡ್ತಿದೆ! ಹಾಳು ಹಲ್ಲಿ. ಅಥವಾ ಎರಡು ಮೂರು ಹಲ್ಲಿಗಳಿರಬಹುದು. ರಾಜೇಶನಿಗೆ ಮೈತುಂಬಾ ಮುಳ್ಳು ಚುಚ್ಚಿದಂತಾಯಿತು. ಹಾಳು ದರಿದ್ರ ಹಲ್ಲಿ ಅಂತ ಚೀರಿಬಿಡೋಣ ಅನ್ನಿಸಿತು. ಚೀರಬಹುದಲ್ಲ, ಇಷ್ಟಕ್ಕೂ ಮನೆಯಲ್ಲಿರೋದು ತಾನೊಬ್ಬನೇ ಅಲ್ಲವೇ. "ಥೂ ದರಿದ್ರ ಹಲ್ಲೀ..!!" ಅಂತ ಜೋರಾಗಿ ಒಮ್ಮೆ ಕೂಗಿದ. ಮರುಕ್ಷಣ ಅವನ ಕೂಗಿನ ನಿರರ್ಥಕತೆಯ ಬಗ್ಗೆ ನಾಚಿಕೆಯಾಯಿತು. ಅಡಿಗೆಮನೆ ಮರೆತುಹೋಗುವಂತೆ ರೂಮಿನ ಬಾಗಿಲು ಗಟ್ಟಿಯಾಗಿ ಮುಚ್ಚಿ ಲೈಟ್ ಆಫ್ ಮಾಡಿ ಮಲಗಿ ಮತ್ತೆ ಇನ್‌ಸ್ಟಾಗ್ರಾಮ್‌ನೊಳಗೆ ಮುಳುಗಿದ. ಆಮೇಲೆ ಮರೆಯಬಹುದು ಅಥವಾ ನಿದ್ದೆ ಬಂದುಬಿಡಬಹುದೆಂದು ವಾಟ್ಸಾಪ್‌ನಲ್ಲಿ ಅಪ್ಪನನ್ನು ಹುಡುಕಿ ಗುಡ್‌ನೈಟ್ ಮೆಸೇಜು ಮಾಡಿಬಿಟ್ಟ.

ಇಷ್ಟಕ್ಕೂ ಲಾಕ್‌ಡೌನ್ ಘೋಷಣೆಯಾದಾಗ ಆತಂಕಕ್ಕೊಳಗಾಗದೆ ಸ್ವಾಗತಿಸಿದ ಕೆಲವೇ ಜನರಲ್ಲಿ ರಾಜೇಶನೂ ಒಬ್ಬ. ದಿನವೂ ಕೆನರಾ ಬ್ಯಾಂಕಿನಲ್ಲಿ ನೂರಾರು ಜನರನ್ನು ನೋಡುತ್ತಾ ರೋಸಿಹೋಗಿದ್ದ. ಅವನು ಬ್ರಾಂಚಿನೊಳಗೆ ಸಾಲಗಳನ್ನು ನಿರ್ವಹಿಸುವ ಪೋಸ್ಟಿನಲ್ಲಿದ್ದು ಜನರನ್ನು ಯಾವಾಗಲೂ ಎದುರಾಗಬೇಕಿರಲಿಲ್ಲ. ಆದರೆ ಸದಾ ಸುತ್ತಲಿನ ಗಿಜಿಗಿಜಿ, ಆಗಾಗ ಕೆಟ್ಟುನಿಲ್ಲುವ ಏಸಿ, ಎಂದಿಗೂ ಮುಗಿಯದ ಫೈಲುಗಳ ಬೆಟ್ಟ, ಕುತ್ತಿಗೆಯಿಂದ ಬೆನ್ನಿಗೆ ಹರಿಯುತ್ತಾ ಚಿತ್ತವನ್ನೆಲ್ಲಾ ತನ್ನೆಡೆ ಸೆಳೆಯುವ ಸಣ್ಣ ಬೆವರಹನಿ, ಫೋನ್ ರಿಂಗಣದ ನಿಲ್ಲದ ಹಿನ್ನೆಲೆ ಸಂಗೀತ ಮತ್ತು ಇವೆಲ್ಲದರಿಂದ ತಾನು ವಿಚಲಿತನಾಗದೆ ಪಟಪಟನೆ ಕೆಲಸ ಮುಗಿಸಬೇಕೆಂದು ನಿರೀಕ್ಷಿಸುವ ಸಿಬ್ಬಂದಿ ಪಡೆ. ಅಷ್ಟಲ್ಲದೆ ಆ ಪೋಸ್ಟಿಗೆ ಬಂದು ನಾಲ್ಕು ತಿಂಗಳಷ್ಟೇ ಆಗಿದ್ದರಿಂದ ಸಂದೇಹಗಳು ಹೆಚ್ಚಾಗಿ ಎದುರಾಗುತ್ತಿದ್ದು, ಹೊಸಬನೆಂಬ ರಿಯಾಯಿತಿಯೂ ದೊರಕದಾಗಿತ್ತು. ಪ್ರಮೋಷನ್ ಆಗುವ ಮೊದಲು ಬೆಂಗಳೂರಿನ ಬ್ರಾಂಚಿನಲ್ಲಿ ಕ್ಯಾಷ್ ಕೌಂಟರ್‌ನಲ್ಲಿ ಇದ್ದದ್ದೇ ಚೆನ್ನಿತ್ತು ಎಂದು ಸುಮಾರು ಸಲ ಅನ್ನಿಸಿದ್ದಿದೆ. ಯಾಕಾದರೂ ಪ್ರಮೋಷನ್ ಆಯ್ಕೆ ಮಾಡಿಕೊಂಡು ಟ್ರಾನ್ಸ್‌ಫರ್ ತಗೊಂಡು ಈ ಮುಂಬಯಿಗೆ ಬಂದೆನಪ್ಪಾ ಎಂದು ಹಳಹಳಿಸಿದ್ದಿದೆ.

ಹೀಗಾಗಿಯೇ ಲಾಕ್‌ಡೌನ್‌ನಿಂದಾಗಿ ಬ್ಯಾಂಕಿನಲ್ಲೂ ರಸ್ತೆಗಳಲ್ಲೂ ಜನಸಂದಣಿ ಕಮ್ಮಿಯಾಗಿ ತನ್ನ ಹೊಸಜೀವನದ ನಿಬಿಡತೆ ಕಡಿಮೆಯಾಗಬಹುದೇನೋ ಎಂದು ರಾಜೇಶ ಆಶಿಸಿದ್ದ. ಅವನು ಬಹುತೇಕ ಮರೆತೇಹೋಗಿದ್ದ ಹಳೆಯ ಬೈಕನ್ನು ಮರುದಿನವೇ ಧೂಳು ಕೊಡವಿ ಸಿದ್ಧಪಡಿಸಿದ. ಅವನು ಸಾಗುವ ದಾರಿಯಲ್ಲಿ ಮೊದಲು ಗಮನಿಸದ ಮರಗಳ ಛಾವಣಿ, ರಸ್ತೆಬದಿಯ ಗೋಡೆಗಳ ಮೇಲೆ ಪಾನ್‌ ಕಲೆಗಳು, ಪಕ್ಕದಲ್ಲೇ ಬುಳಬುಳನೆ ಹರಿದಾಡುವ ಇಲಿಗಳು, ಇವೆಲ್ಲಾ ಎದ್ದುಬಂದು ದೃಷ್ಟಿಪಥದಲ್ಲಿ ಕಂಡು, ತಾನು ಬಲ್ಲೆನೆಂದು ತಿಳಿದಿದ್ದ ಊರು ವಿಸ್ತರಣೆಯಾಯಿತು. ಮುಂಬಯಿಯ ಜನಸಂದಣಿಯ ಅದೇ ಟ್ರೈನಿನ ಅದೇ ಸೀಟು ಹಿಡಿಯುವ ಎಲ್ಲರ ನಿತ್ಯದ ಸಾಹಸದ ನಡುವೆ ಕಳೆದುಹೋಗಿದ್ದ ಖಾಲಿತನವೊಂದು ಎದ್ದು ಬಂದು ರೈಲುಹಳಿಗಳನ್ನೂ ಸ್ಟೇಷನ್ನುಗಳನ್ನೂ ಹೊದ್ದುಕೊಂಡಿತು. ಕರ್ಮಭೂಮಿಯಲ್ಲಿ ಮರೆಯಾಗಿಹೋಗಿದ್ದ ಅನಾರೋಗ್ಯದ ಮತ್ತು ಸಾವಿನ ಸಾಧ್ಯತೆ ಧುತ್ತೆಂದು ಎಚ್ಚರವಾಗಿ ಬಂದು, ಬ್ಯಾಂಕಿಗೆ ಲಗ್ಗೆಯಿಡುತ್ತಿದ್ದ ಜನರ ಗುಂಪು ಸಪೂರವಾಗಿಬಿಟ್ಟಿತು. ಸಿಬ್ಬಂದಿಯೂ ವಾರಕ್ಕೆ ಎರಡು ದಿನ ಕೆಲಸಕ್ಕೆ ಹೋದರೆ ಸಾಕು ಎಂದಾಯಿತು. ಮಹಾನಗರದಲ್ಲಿ ಮತ್ತೊಬ್ಬರ ಭುಜತಾಕದೆ ನಡೆಯಲೂ ಅಸಾಧ್ಯವಾಗಿದ್ದ ಬೀದಿಗಳಲ್ಲೂ ರಾಜೇಶ ಕೈಬೀಸಿ ನಡೆಯಲಾರಂಭಿಸಿದ. ಹೀಗೆ ಸೈಡ್‌ವಿಂಗಿನಲ್ಲಿ ಬಿಸುಟಿದ್ದ ಬೇಡದ ಸಂಗತಿಗಳೆಲ್ಲಾ ವೇದಿಕೆಯ ಮುಂಭಾಗಕ್ಕೆ ಬಂದು ವಿಜೃಂಭಿಸುವುದನ್ನು ತನ್ನ ಸ್ವಾರ್ಥಕ್ಕಾಗಿ ಸ್ವಾಗತಿಸಿದ್ದ ರಾಜೇಶ ಆವಾಕ್ಕಾಗಿದ್ದು ಹಲ್ಲಿಯೊಂದರ ರೂಪದಲ್ಲಿ ಇದು ಅವನ ಮನೆಯಲ್ಲಿಯೇ ಬಾಧಿಸಿದಾಗ ಮಾತ್ರ.

ಬಹುಶಃ ಮನೆ ವಿಶಾಲವಾಗಿದ್ದರೆ ಹಲ್ಲಿಯ ಇರುವೂ ತಿಳಿಯದಂತೆ ಇರಬಹುದಿತ್ತೇನೋ ಎಂದು ರಾಜೇಶ ಯೋಚಿಸಿದ್ದಿದೆ. ನಾಲ್ಕು ತಿಂಗಳ ಹಿಂದೆ ಮುಂಬಯಿಗೆ ಬಂದಾಗ, ಬಾಡಿಗೆ ಫ್ಲಾಟಿಗಾಗಿ ರಾಜೇಶ ಕುರ್ಲಾದಲ್ಲಿದ್ದ ತನ್ನ ಬ್ರಾಂಚಿನ ಸಮೀಪವೇ ಹುಡುಕಾಡಿದ್ದ. ಲೋಕಲ್ ರೈಲಿನಿಂದ ಜನ ದೊಪದೊಪನೆ ಉದುರುವುದನ್ನು ವಾಟ್ಸಪ್ ವೀಡಿಯೋಗಳಲ್ಲಿ ನೋಡಿ ಹೆದರಿಹೋಗಿದ್ದವನು, ರೈಲು ಹತ್ತುವ ಅಗತ್ಯವೇ ಬೀಳದಂತೆ ಬ್ರಾಂಚಿನಿಂದ ಮೂರೂವರೆ ಕಿಲೊಮೀಟರ್ ದೂರದಲ್ಲಿರುವ ಅಪಾರ್ಟ್ಮೆಂಟ್ ಕಂಡುಕೊಂಡ. ಅದನ್ನು ಬೆಂಗಳೂರು ಭಾಷೆಯಲ್ಲಿ ಅಪಾರ್ಟ್ಮೆಂಟ್ ಎನ್ನುವುದಕ್ಕಿಂತ ಹೌಸಿಂಗ್ ಸೊಸೈಟಿಯನ್ನು ತುಂಡುಮಾಡಿ ಮುಂಬಯಿ ಪರಿಭಾಷೆಯಲ್ಲಿ 'ಸೊಸೈಟಿ' ಎಂದು ಸಂಬೋಧಿಸುವುದೇ ರಾಜೇಶನಿಗೂ ಸೂಕ್ತವಾಗಿತ್ತು. ಅವನು ಇಲ್ಲಿಯವರೆಗೆ ತಿಳಿದಿದ್ದ ಸೊಸೈಟಿಯಾದರೋ ಒಂದು ಅಮೂರ್ತ ಪರಿಕಲ್ಪನೆಯಾಗಿತ್ತು. ಆದರೆ ಆ ಅಗೋಚರ ಸೊಸೈಟಿ ಅಥವಾ ಸಮಾಜದಂತೆಯೇ ಈ ಸೊಸೈಟಿ ಕೂಡ ಹೊರಗಿನಿಂದ ಕ್ರೂರವಾಗಿದ್ದು ಒಳಗೆ ಬೆಚ್ಚಗಿತ್ತು. ಈ ಸೊಸೈಟಿಯ ರೂಪ ಒಂದೇ ವಿಶಾಲ ಅಂಗಳದಲ್ಲಿ ಹಲವಾರು ಬ್ಲಾಕ್‌ಗಳಿಂದ ಕೂಡಿದ್ದು, ಒಂದೊಂದು ಬ್ಲಾಕ್‌ನಲ್ಲಿಯೂ ಸುಮಾರು ಇಪ್ಪತ್ತು ಮಹಡಿಗಳಿದ್ದ ಎರಡು ಮೂರು ಕಟ್ಟಡಗಳಿದ್ದವು. ಮೂರ್ನಾಲ್ಕು ದಶಕಗಳಷ್ಟು ವಯಸ್ಸಾದ ಈ ಕಟ್ಟಡಗಳೆಲ್ಲವೂ ಪಾಚಿ ಬಣ್ಣಕ್ಕೆ ತಿರುಗಿ ತನ್ನ ರೂಪ ಆಕಾರಗಳ ಬಗ್ಗೆ ಉದಾಸೀನದಲ್ಲಿದ್ದ ಮಹಾನಗರದ್ದೇ ಪ್ರತೀಕವಾಗಿದ್ದವು. ಒಂದೊಂದು ಕಟ್ಟಡದ ಪ್ರತಿ ಮಹಡಿಯಲ್ಲಿಯೂ ಆರೋ ಎಂಟೋ ಪುಟ್ಟ ಫ್ಲಾಟ್‌ಗಳು. ಈ ಫ್ಲಾಟ್‌ಗಳಿಂದ ಅವುಗಳ ಏಸಿ ಮೆಷೀನ್‌ಗಳು ಕಿಟಕಿಯಿಂದ ಆಚೆಬಂದು ಕೂತು ಆಯಾ ಕಟ್ಟಡದ ಮೈಮೇಲೆ ನೂರಾರು ಉಬ್ಬುಗಳಂತೆ ತೋರುತ್ತಿದ್ದವು.

ಒಂದು ಮೂರ್ತ ಹೆಸರಿನ ಹಂಗೂ ಇಲ್ಲದೆ ಬಿಲ್ಡಿಂಗ್ ನಂಬರ್ 92 ಎಂದು ಕರೆಸಿಕೊಳ್ಳುತ್ತಿದ್ದ ಇಂತಹ ಕಟ್ಟಡದ ಐದನೆಯ ಮಹಡಿಯಲ್ಲಿದ್ದ ಒಂದೇ ರೂಮಿನ ಪುಟ್ಟ ಫ್ಲಾಟನ್ನು ರಾಜೇಶ ಇಪ್ಪತ್ತೊಂದು ಸಾವಿರ ರೂಪಾಯಿಗಳಿಗೆ ಬಾಡಿಗೆಗೆ ಪಡೆದಿದ್ದ. ಬಾಗಿಲು ತೆಗೆದರೆ ಆರು ಹೆಜ್ಜೆಗೆ ಮುಗಿದುಹೋಗುವ ಹಾಲ್ ಅಥವಾ ಲಿವಿಂಗ್ ರೂಮು, ಅದರ ಎಡಕ್ಕೆ ಒಬ್ಬರು ಮಾತ್ರ ನಿಲ್ಲಬಹುದಾದ ಅಡಿಗೆಮನೆ ದಾಟಿದರೆ ಸ್ವಲ್ಪ ದೊಡ್ಡದಾದ ಬೆಡ್‌ರೂಮು ಮತ್ತು ಅಂಟಿಕೊಂಡ ಬಾತ್‌ರೂಮು. ಲಿವಿಂಗ್ ರೂಮಿಗೆ ಬಾಲ್ಕನಿ ಇತ್ತಾದರೂ ಅದು ಒಂದು ಕೋಲಿನಷ್ಟಿದ್ದು, ಒಗೆದ ಬಟ್ಟೆ ಒಣಗಿಸುವುದಕ್ಕೆ ಸೀಮಿತವಾಗಿತ್ತು. ಬೆಡ್‌ರೂಮಿನ ಕಿಟಕಿ ವಿಕಾರವಾಗಿ ಹೊರಗೆ ಚಾಚಿದ್ದು ಅದರ ಜಾಲರಿಗಳಲ್ಲಿ ಹಿಂದಿನ ಬಾಡಿಗೆದಾರರು ಎಸೆದಿದ್ದ ಅನೇಕ ಪ್ಲಾಸ್ಟಿಕ್ ವಸ್ತುಗಳು ಸಿಕ್ಕಿಕೊಂಡು ತೇಲಾಡುತ್ತಿದ್ದವು. ಈ ಊರಲ್ಲಿ ದುಡ್ಡಿಗೆ ಬೆಲೆಯೇ ಇಲ್ಲ ಎಂಬಂತಹ ಸವಕಲು ಮಾತುಗಳನ್ನಾಡುತ್ತಾ ಇಪ್ಪತ್ತೇಳು ವರ್ಷದ ಅವಿವಾಹಿತ ಯುವಕನೊಬ್ಬ ಮೂರು ವರ್ಷಗಳ ಮಟ್ಟಿಗೆ ಈ ಪುಟ್ಟ ಗೂಡನ್ನು ಸೇರಿಕೊಂಡದ್ದು ಅವನ ನೆರೆಹೊರೆಯವರಲ್ಲಿ, ಸೊಸೈಟಿಯ ವಾಚ್‌ಮನ್ನಿನಲ್ಲಿ, ಕುರ್ಲಾದ ಬೀದಿಬೀದಿಯ ತಿರುವುಗಳಲ್ಲಿ ಒಂದಿನಿತೂ ಆಸಕ್ತಿ ಕುತೂಹಲ ಮೂಡಿಸಿರಲಿಲ್ಲ.

ಈಗ ಲಾಕ್‌ಡೌನ್ ದೆಸೆಯಿಂದ ರಾಜೇಶನಿಗೆ ಈ ಫ್ಲಾಟನ್ನು ತನ್ನ ಮನೆಯನ್ನಾಗಿಸುವ ಶ್ರಮ ಮತ್ತು ಬಿಡುವಿಲ್ಲದ ಬ್ಯಾಂಕ್ ಕೆಲಸದಿಂದ ಸ್ವಲ್ಪ ವಿರಾಮವೇನೋ ದೊರಕಿತು. ಬ್ಯಾಂಕ್ ನಡೆಯಲೇಬೇಕಾದ್ದರಿಂದ ಊರಿಗೆ ಹೋಗಿಬಿಡುವುದಕ್ಕೆ ನಿರ್ಬಂಧವಿತ್ತು. ಅಡಿಗೆಯವರಿಗೆ ಮತ್ತು ಮನೆಗೆಲಸದವರಿಗೆ ಸೊಸೈಟಿಯಲ್ಲಿ ಅನುಮತಿಯಿರಲಿಲ್ಲ. ಹೀಗಾಗಿ ತಾನೇ ಅಡಿಗೆ ಮಾಡಿಕೊಂಡು ಮನೆ ಸ್ವಚ್ಛ ಮಾಡಿಕೊಳ್ಳುವ ಹೊಸ ಜೀವನಶೈಲಿಗೆ ರಾಜೇಶ ಅನುವಾಗತೊಡಗಿದ. ವಾರಕ್ಕೆ ನಾಲ್ಕು ದಿನ ಮನೆಯಲ್ಲಿಯೇ ಇರುವುದರಿಂದ ಕೋನಕೋನವನ್ನೂ ನೋಡುವ ಹೊಸಕಣ್ಣು ಬಂದಂತಾಗಿತ್ತು. ಇದರಿಂದಲೇ ಒಂದು ಮಧ್ಯಾಹ್ನ ಅಡಿಗೆಮನೆಯ ಶೆಲ್ಫಿನಲ್ಲಿ ಹಲ್ಲಿಯ ಹಿಕ್ಕೆ ಕಂಡಂತಾಗಿದ್ದು! ಆ ಕಪ್ಪು-ಬಿಳುಪಿನ ಸಣ್ಣ ಕಸವನ್ನು ಕಾಣುತ್ತಲೇ ರಾಜೇಶ ಬೆಚ್ಚಿಬಿದ್ದ. ತನ್ನ ಸುತ್ತ ಯಾವುದೋ ಮೂಲೆಯಲ್ಲಿ ಹಲ್ಲಿಯೊಂದು ಹಾಜರಿರಬಹುದು ಎನ್ನುವ ಸಂಗತಿ ಅವನಿಗೆ ಜೀರ್ಣವಾಗದ ಹಿಂಸೆಯಾಯಿತು. ಚಿಕ್ಕಂದಿನಿಂದ ರಾಜೇಶನಿಗೆ ಹಲ್ಲಿ ಕಂಡರೆ ವಿಚಿತ್ರ ತಳಮಳ. ಅದು ಇನ್ನೇನು ಬೀಳ್ತದೆ ಎಂದು ಭಯ ಹುಟ್ಟಿಸುವಂತೆ ಗೋಡೆಮೇಲೆ ಓಡಾಡುತ್ತಿದ್ದದೂ ಒಂದು ಕಾರಣ. ಇಷ್ಟಲ್ಲದೆ ಅದರ ಬಿಳಿ ಪೇಲವ ಹೊಟ್ಟೆ, ತರಿತರಿ ಮುಳ್ಳು ಚರ್ಮ, ಗಂಟೆಗಟ್ಟಲೆ ಒಂದೇಕಡೆ ಸ್ಥಿತವಿದ್ದು ತಟಕ್ಕನೆ ಸರಪರ ಓಡಿಬಿಡುವುದು, ನಿ...ಧಾ...ನ...ವಾ...ಗಿ ಹರಿದಾಡುವ ಅದರ ಬಾಲ, ಏನೋ ಹೇಳಲಿಕ್ಕಿದೆ ಬಾ ಇಲ್ಲಿ ಎನ್ನುವಂತೆ ತೋರುವ ಮೂತಿ… ರಾಜೇಶ ಒಮ್ಮೆ ಬೆವರಿ ಮೈ ಕೊಡವಿಕೊಂಡ. ಮತ್ತು ತತ್‍ಕ್ಷಣ ಆ ಶೆಲ್ಫಿನಲ್ಲಿದ್ದ ಡಬ್ಬಿಗಳನ್ನೆಲ್ಲಾ ತೆಗೆದು ಬಾಗಿಲುಮುಚ್ಚಿ ಇನ್ನೊಮ್ಮೆ ಅದಕ್ಕೆ ಕೈ ಹಾಕುವುದಿಲ್ಲವೆಂದು ನಿರ್ಧರಿಸಿದ. ಆ ಡಬ್ಬಿಗಳೆಲ್ಲಾ ಕಟ್ಟೆಯ ಮೇಲೆ ಕುಳಿತು ಅಡಿಗೆಮನೆ ಇನ್ನಷ್ಟು ಚಿಕ್ಕದಾಯಿತು.

ಅಂದು ರಾತ್ರಿ ಲಿವಿಂಗ್ ರೂಮಿನಲ್ಲಿ ನೆಟ್‌ಫ್ಲಿಕ್ಸ್ ಅಳವಡಿಸಿಕೊಂಡಿದ್ದ ಟಿವಿ ನೋಡುತ್ತಿದ್ದಾಗಲೇ "ಕಿಚ್ ಕಿಚ್ ಕಿಚ್ ಕಿಚ್…" ಎಂದು ಏರುದನಿಯ ಸದ್ದು ಅಡಿಗೆಮನೆಯಿಂದ ಬಂದಂತಾಗಿದ್ದು. ರಾಜೇಶನ ಕಿವಿ ನೆಟ್ಟಗಾಗಿ ತಕ್ಷಣ ಮ್ಯೂಟ್ ಮಾಡಿ ಮೌನದಲ್ಲಿ ಆಲಿಸಿದ. ನಿಖರವಾಗಿ ತಿಳಿಯಲಿಲ್ಲ. ಒಟ್ಟಿನಲ್ಲಿ ಹಲ್ಲಿಯೊಂದು ಈ ಮನೆಯಲ್ಲಿ ಝಾಂಡಾ ಹೂಡಿರುವ ಸಾಧ್ಯತೆ ಬಲವಾದಂತಾಯಿತು. ಆ ದಿನದಿಂದ ರಾಜೇಶ ಮನೆಯೊಳಗಿನ ಪ್ರತಿ ಸದ್ದು ಚಲನೆಯನ್ನು ತೀಕ್ಷ್ಣವಾಗಿ ಗಮನಿಸುವ ಪತ್ತೇದಾರನಾದ. ಕಾಣದ ಸಂಗತಿಗಳೇ ಅಲ್ಲವೆ ಮನುಷ್ಯನಲ್ಲಿ ಹೆಚ್ಚಿನ ಭಯ ಹುಟ್ಟಿಸೋದು! ಆದರೆ ಈ ಪತ್ತೇದಾರಿಕೆಯ ಅಗತ್ಯ ಹೆಚ್ಚು ದಿನ ಬೀಳಲಿಲ್ಲ. ಮಾರನೆಯ ಬೆಳಗ್ಗೆ ನಿದ್ದೆಗಣ್ಣಲ್ಲಿ ರೂಮಿಂದ ಆಚೆಬಂದು ಅಡಿಗೆಮನೆಯ ಲೈಟ್ ಹಾಕುತ್ತಿದ್ದಂತೆ ಮೂಲೆಯಲ್ಲಿ ನೆಲದಮೇಲೆ ಹಲ್ಲಿಯೊಂದು ಸರ್ರನೆ ಅಲ್ಲೇ ಸಂದಿಯೊಳಗೆ ನುಸುಳಿಬಿಟ್ಟಿತು. ರಾಜೇಶನ ಮೈ ತಣ್ಣಗಾಗಿಹೋಯಿತು. ಅವತ್ತು ರಾತ್ರಿಯೇ ಅವನು ರೂಮಿನಿಂದ "ದರಿದ್ರ ಹಲ್ಲೀ.." ಎಂದು ಕೂಗಿ ನಂತರ ಮಲಗಿದ್ದು.

ಮರುದಿನದಿಂದಲೇ ರಾಜೇಶ ಹಲವು ಬದಲಾವಣೆಗಳನ್ನು ಮಾಡಿಕೊಂಡ. ಲಿವಿಂಗ್ ರೂಮಿನಲ್ಲಿ ಟಿವಿ ನೋಡುತ್ತಾ ಊಟ-ತಿಂಡಿ ಮಾಡುತ್ತಿದ್ದವನು ಈಗ ಬೆಡ್‌ರೂಮಿನಲ್ಲಿ ಬಾಗಿಲು ಹಾಕಿಕೊಂಡು ಲ್ಯಾಪ್‌ಟಾಪ್‌ನಲ್ಲಿ ನೆಟ್‌ಫ್ಲಿಕ್ಸ್ ನೋಡುತ್ತಾ ಊಟ ಮಾಡಲಾರಂಭಿಸಿದ. ಹಿಂದುಮುಂದು ನೋಡುತ್ತಲೇ ಆದಷ್ಟೂ ತ್ವರಿತವಾಗಿ ಏನೋ ಒಂದು ಅಡಿಗೆ ಮಾಡಿ ಕುಕ್ಕರಿನಲ್ಲಿಟ್ಟು ಮತ್ತೆ ರೂಮು ಸೇರಿಕೊಂಡುಬಿಡುತ್ತಿದ್ದ. ಆ ದಿನ ಲೈಟ್ ಹಾಕಿದಾಕ್ಷಣ ಮನುಷ್ಯ ಬಂದನೆಂದು ಹಲ್ಲಿ ಓಡಿಹೋಗಿದ್ದರಿಂದ ಬಹುಶಃ ಹಲ್ಲಿಗೆ ಇದೇ ಸೂಚನೆಯಿರಬೇಕೆಂದು ತಿಳಿದು ದಿನವಿಡೀ ಬೆಳಕಿದ್ದರೂ ಅಡಿಗೆಮನೆ ಲೈಟ್ ಉರಿಸುತ್ತಿದ್ದ. ಅಡಿಗೆಮನೆಗೆ ನೇರವಾಗಿ ಕಿಟಕಿಯೇ ಇರದೆ ಕೇವಲ ಲಿವಿಂಗ್ ರೂಮಿನ ಬಾಲ್ಕನಿಯ ವಿಸ್ತರಣೆಯಷ್ಟೇ ಇತ್ತು. ಹೀಗಾಗಿ ಈ ಹಲ್ಲಿ ಮತ್ತೆ ಕಂಡರೂ ಅದನ್ನು ಓಡಿಸುವುದು ಹೇಗೆಂದು ಚಿಂತಿತನಾದ. ಇಷ್ಟಕ್ಕೂ ಅದು ಏನನ್ನು ತಿಂದು ಹೀಗೆ ಅಪರಿಚಿತರ ಮನೆಯಲ್ಲಿ ಬದುಕಿರುತ್ತದೆ ಮತ್ತು ಓಡಿಸುವುದು ಹೇಗೆಂದು ತಿಳಿಯಲು ಗೂಗಲ್ ಮೊರೆ ಹೋದನಾದರೂ, ಎಲ್ಲಾ ಪರಿಹಾರಗಳಲ್ಲೂ ಹಲ್ಲಿಯ ಚಿತ್ರ ವೀಡಿಯೋ ಇತ್ಯಾದಿ ತೋರುವುದರಿಂದ ತಡೆಯಲಾಗದೆ ಆ ಪ್ರಯತ್ನ ಬಿಟ್ಟ. ಮತ್ತು ಅದನ್ನು ಎಲ್ಲೆಂದರಲ್ಲಿ ಹಿಂಬಾಲಿಸಿ ತನಗೆ ಬೇಕಾದ ದಿಕ್ಕಿನಲ್ಲಿ ಚಲಿಸುವಂತೆ ಮಾಡಬೇಕಾದಲ್ಲಿ, ಅಷ್ಟು ಹೊತ್ತೂ ಅದನ್ನು ನೋಡುತ್ತಿರಬೇಕು! ರಾಜೇಶನಿಗೋ ಅದರ ಚಲನೆ ನೋಡುವುದಿರಲಿ, ನೆನಸಿಕೊಂಡರೂ ಮೈ ಝುಮ್ಮೆನ್ನುತ್ತಿತ್ತು. ಹಲ್ಲಿ ಇನ್ನೂ ಬೆಡ್‌ರೂಮು ಪ್ರವೇಶಿಸಿಲ್ಲ ಎಂಬುದೊಂದೇ ಅವನಿಗೆ ಸಮಾಧಾನವಾಗಿತ್ತು. ಅದನ್ನು ಖಾತರಿಪಡಿಸಿಕೊಳ್ಳಲು ರೂಮಿನಲ್ಲಿ ಮಂಚದ ಹಿಂದೆ, ಕೆಳಗೆ, ವಾರ್ಡ್‌ರೋಬ್ ಸುತ್ತ ಪದೇಪದೇ ಪರೀಕ್ಷಿಸುತ್ತಿದ್ದ.

ಈ ಮಧ್ಯೆ ಕೊರೋನಾ ಸೋಂಕು ಮತ್ತದರ ಸುದ್ದಿಸಂಖ್ಯೆಗಳು ವ್ಯಾಪಕವಾಗಿ ಹಬ್ಬತೊಡಗಿದವು. ಬಿಲ್ಡಿಂಗ್ ನಂಬರ್ 91 ಮತ್ತು 92ರಲ್ಲಿ ಸುಮಾರು ಸೋಂಕಿನ ಕೇಸುಗಳಾಗಿದ್ದು, ರಾಜೇಶ ಸಂಜೆ ವಾಕ್ ಹೋಗಲೂ ಹಿಂಜರಿದ. ಬ್ಯಾಂಕಿಗೆ ಹೋಗದ ದಿನಗಳಲ್ಲಿ ಅಡಿಗೆಮನೆಯಲ್ಲಿ ಒಂದು ಗಂಟೆಯಲ್ಲಿ ತರಾತುರಿಯಲ್ಲಿ ಇಡೀ ದಿನಕ್ಕಾಗುವಷ್ಟು ಪಲಾವ್, ಟೊಮ್ಯಾಟೊ ರೈಸ್ ಅಥವಾ ಪುಳಿಯೋಗರೆ ಮಾಡಿಬಿಟ್ಟರೆ ಉಳಿದ ಹೊತ್ತೆಲ್ಲಾ ರೂಮಿನಲ್ಲೇ ಕಳೆಯತೊಡಗಿದ. ರೂಮಿನ ಗಲೀಜು ಜಾಲರಿಗಳ ಮೂಲಕ ಪಡೆದ ಸೀಮಿತ ಗಾಳಿ ಬೆಳಕೇ ಅವನಿಗೆ ಉಸಿರಾಯ್ತು. ಯಾಕೋ ಮೊದಲಿಗೆ ಬೇಸಿಗೆರಜೆಯಂತೆ ಖುಷಿಕೊಟ್ಟ ಲಾಕ್‌ಡೌನ್ ಎರಡು ಮೂರು ವಾರಗಳಲ್ಲಿಯೇ ರಾಜೇಶನಿಗೆ ಜೈಲುವಾಸದಂತೆ ಭಾಸವಾಯಿತು. ಇಷ್ಟಲ್ಲದೆ ಅಡಿಗೆಮನೆಯಲ್ಲಿ ಮೂಲೆಯಲ್ಲಿದ್ದ ಚಿಕ್ಕ ಸಿಂಕ್‌ನಲ್ಲಿ ಆಗಾಗ ಏನಾದರೂ ಸಿಕ್ಕಿಕೊಂಡು ನೀರು ಸಲೀಸಾಗಿ ಹೋಗದೇ ಕಟ್ಟಿಕೊಂಡು, ಕೆಲವೊಮ್ಮೆ ಪೊರಕೆ ಕಡ್ಡಿ ತೂರಿಸಿ ಕಳಿಸಬೇಕಾಗಿತ್ತು. ಆದರೆ ಈಗ ಈ ಸಿಂಕ್ ಪೈಪುಗಳ ಬಳಿಯೇ ಹಲ್ಲಿ ಆ ಬೆಳಗ್ಗೆ ಓಡಿಹೋಗಿದ್ದನ್ನು ರಾಜೇಶ ಕಂಡಿದ್ದ! ಪೈಪಿನೊಳಗೆ ಕಟ್ಟಿಕೊಳ್ಳುವುದಕ್ಕೆ ಈ ಹಳೆಯ ಕಟ್ಟಡದ ವಿನ್ಯಾಸವನ್ನು ಮೊದಲು ದೂಷಿಸುತ್ತಿದ್ದವನು ಇದೀಗ ಅದಕ್ಕೂ ಹಲ್ಲಿ ಕಾರಣವೇನೋ ಎಂದು ಯೋಚಿಸಿದ. ಪೈಪಿನ ಒಳಗಿಂದ ಅಥವಾ ಹೊರಗಿನ ತೇವಾಂಶ ನೆಕ್ಕಿಕೊಂಡೇ ನೀರಡಿಕೆ ಪೂರೈಸಿಕೊಳ್ಳುತ್ತೋ ಏನೋ.. ಆದ್ದರಿಂದ ಪೊರಕೆಕಡ್ಡಿ ತೂರುವಾಗ ಕೆಳಗಿಂದ ಹಲ್ಲಿಯೇ ಗಾಬರಿಯಾಗಿ ಹೊರಬಂದು ತನ್ನ ಕಾಲಿನ ಮೇಲೆಲ್ಲಾ ಹರಿದಾಡಿಬಿಡತ್ತೇನೋ ಎಂದು ಭಯವಾಗಿ ಸಿಂಕ್ ಕಟ್ಟಿಕೊಂಡಾಗೆಲ್ಲಾ ರಾಜೇಶ ತಾನೂ ಕಟ್ಟೆಯ ಮೇಲೆ ಕುಪ್ಪಳಿಸಿ ಸಿಂಕ್ ಪಕ್ಕದಲ್ಲಿ ಕೂತು ಕ್ಲೀನ್ ಮಾಡುವ ಸಾಹಸದಲ್ಲಿ ತೊಡಗಿದ. ತನ್ನಂತೆಯೇ ಹಲ್ಲಿಯೂ ಒಂದು ಮಾನಸಿಕ ಬೇಲಿ ಹಾಕಿಕೊಂಡು ಅದರೊಳಗೇ ಇದ್ದುಬಿಡಲಿ ಎಂದು ಆಶಿಸುತ್ತಾ ದಿನಾರಾತ್ರಿ ಮಲಗುತ್ತಿದ್ದ. ಬಹುಶಃ ಅದು ದಿನವೂ ಕಣ್ಣಿಗೆ ಕಾಣಿಸಿಕೊಂಡಿದ್ದರೆ ಅದರ ಉಪಸ್ಥಿತಿ ಮನೆಯ ಯಾವ ಭಾಗದಲ್ಲಿದೆ ಎಂಬುದು ತಿಳಿದು ಸ್ವಲ್ಪ ನಿರಾಳವಾಗುತ್ತಿದ್ದನೋ ಏನೋ. ಆದರೆ ಹಲ್ಲಿಯೂ ಭಯದಿಂದ ಮರೆಯಲ್ಲಿರುವುದು ಹೊಂಚುಹಾಕುವ ಶತ್ರುವಿನಂತೆ ರಾಜೇಶನಿಗೆ ತೋರಿತ್ತು.

"ಅದೇನು ಮಾಡತ್ತೆ ಅಂತ ಅದಕ್ಕೆ ಹೆದರ್ತೀಯ ಬಿಡೋ…" ಅಂತ ರಾಜೇಶ ಚಿಕ್ಕಂದಿನಲ್ಲಿ ಹಲ್ಲಿ ನೋಡಿ ಬೆಚ್ಚಿದಾಗೆಲ್ಲಾ ಅವನಪ್ಪ ಗದರುತ್ತಿದ್ದರು. ಹೆದರಿಕೆ ಅಲ್ಲ ಅಪ್ಪ, ಏನೋ ಒಂಥರಾ ಅಸಹ್ಯ ಎಂಬ ಮಾತನ್ನು ರಾಜೇಶ ನುಂಗಿಕೊಂಡು ಸುಮ್ಮನಾಗುತ್ತಿದ್ದ. ಬಹಳ ಹಿಂದೆಯೇ ಪತ್ನಿಯನ್ನು ಕಳೆದುಕೊಂಡ ಅವನಪ್ಪನ ಒಲವು ಒತ್ತಾಸೆಗಳೂ ಗದರಿಕೆಯ ರೂಪದಲ್ಲಿಯೇ ಇದ್ದವು. ಅವರ ಉದ್ಯೋಗವೂ ಕೆನರಾ ಬ್ಯಾಂಕಿನಲ್ಲಿಯೇ ಇದ್ದದ್ದರಿಂದ ರಾಜೇಶ ಕೆಲವು ವರ್ಷ ಅವರು ವರ್ಗಾವಣೆಯಾದ ಊರಿನಲ್ಲಿಯೂ ಉಳಿದಕಾಲ ಹಾಸ್ಟೆಲ್‌ಗಳಲ್ಲಿಯೂ ಕಳೆದಿದ್ದ. ಹೀಗಾಗಿ ಅವನಿಗೆ ದಶಕಗಳ ಕಾಲ ಉಳಿಯಬಹುದಾದ ಗೆಳೆಯರೇ ಸಿಗಲಿಲ್ಲ. ಆದರೂ ಅಪ್ಪನ ಆಣತಿಯಂತೆಯೇ ಐಬಿಪಿಎಸ್ ಪರೀಕ್ಷೆ ಬರೆದು ಕೆನರಾ ಬ್ಯಾಂಕಿನಲ್ಲಿಯೇ ಕೆಲಸ ಗಿಟ್ಟಿಸಿದಾಗ ಕೊನೆಗೂ ಅವರ ದನಿಯಲ್ಲಿ ಹೆಮ್ಮೆ ಗುರುತಿಸಿದ್ದ. ಅಷ್ಟರಲ್ಲಿ ಅಪ್ಪ ತಮ್ಮ ಯೋಜನೆಯಂತೆ ವಿಆರ್‌ಎಸ್ ಪಡೆದು ಬೆಂಗಳೂರಿನ ತಮ್ಮ ಹಳೆಯ ಮನೆ ಸಿದ್ಧಪಡಿಸಿಕೊಂಡು ಗೆಳೆಯ ಮೂರ್ತಿಯ ಜೊತೆ ಷೇರು ವ್ಯವಹಾರ ಮಾಡುತ್ತಾ ಕಾಲ ಹಾಕುತ್ತಿದ್ದರು. ರಾಜೇಶನ ವರ್ಗಾವಣೆಯ ಸಂದರ್ಭ ಬಂದಾಗ "ಒಳ್ಳೇದು, ಹೋಗು. ಮನುಷ್ಯ ಒಂದೇ ಕಡೆ ಇರಬಾರದು, ಬುದ್ಧಿ ಬೆಳೆಯಲ್ಲ. ನಂಗೆ ಒಬ್ಬನೇ ಇರೋದು ಅಭ್ಯಾಸವಿದೆ. ಹತ್ತಿರದಲ್ಲಿ ಮೂರ್ತಿ ಕುಟುಂಬ ಇದೆ. ಬೇರೆ ನೆಂಟರಿದ್ದಾರೆ. ನೀನು ಹೋಗಬೇಕು" ಎಂದಿದ್ದರು. ಅಷ್ಟು ಜೀವನಪಾಠ ಕೇಳಿಸಿಕೊಂಡು ಇಲ್ಲಿಗೆ ಬಂದ ತಾನು ಯಕಃಶ್ಚಿತ್ ಹಲ್ಲಿಗೆ ಹೆದರಿ ರೂಮಲ್ಲಿಯೇ ಲಾಕ್‌ಡೌನ್ ಆಗ್ತಿರೋದನ್ನ ಅಪ್ಪನ ಬಳಿ ಹಂಚಿಕೊಳ್ಳಲಾಗುತ್ತದೆಯೇ? ಇಷ್ಟಕ್ಕೂ ಹಲ್ಲಿಯಿಂದ ಮನಃಶಾಂತಿ ಹಾಳಾಗುತ್ತಿದೆಯೆಂದರೆ ಯಾರಾದರೂ ನಗುತ್ತಾರೆ. ಹಂಚಿ ಹಗುರಾಗಲು ಸಾಧ್ಯವಿಲ್ಲದ ವಿಷ ನುಂಗಿಕೊಳ್ಳುತ್ತಾ ರಾಜೇಶ ಒದ್ದಾಡಿದ.

ಒಂದೆರಡು ವಾರಗಳು ಹೀಗೇ ಕಳೆದವು. ಹಲ್ಲಿ ಕಾಣಿಸಿಕೊಳ್ಳದಿದ್ದರೂ ಆಗಾಗ ಅದರ ಹಿಕ್ಕೆ, "ಕಿಚ್ ಕಿಚ್ ಕಿಚ್.." ಕೂಗು ಅಥವಾ ಚಲಿಸುವ ಸದ್ದು ರಾಜೇಶನನ್ನು ಕದಡುತ್ತಿದ್ದವು. ಈ ಮಧ್ಯೆ ಲಾಕ್‌ಡೌನ್ ಹಂತ ಬದಲಿಸಿಕೊಳ್ಳುತ್ತಾ ವಾರಕ್ಕೆ ಮೂರ್ನಾಲ್ಕು ದಿನ ಬ್ಯಾಂಕಿಗೆ ಹೋಗಬೇಕಾಗಿ ಬಂತು. ಹಾಳು ಹಲ್ಲಿ ಓಡಾಡಿಕೊಂಡಿರಲಿ ಎಂದು ಲೈಟ್ ಆಫ್ ಮಾಡಿಯೇ ಬ್ಯಾಂಕಿಗೆ ಹೋಗಿ ಸಂಜೆ ವಾಪಸು ಬಂದ ಕೂಡಲೇ ಲೈಟ್ ಹಾಕಿ ಮೈಯೆಲ್ಲಾ ಕಣ್ಣಾಗಿ ಕಿವಿಯಾಗಿ ದಿಟ್ಟಿಸುತ್ತಿದ್ದ. ಸದ್ಯ ಇನ್ನೂ ತಾನು ಮಲಗುವ ರೂಮಿಗೆ ಬಂದಿಲ್ಲ ಎಂದು ನೆಮ್ಮದಿ ಇದ್ದರೂ ಪೂರಾ ಖಾತ್ರಿಯಿರಲಿಲ್ಲ. ಹೀಗಾಗಿ ಕೆಲವೊಮ್ಮೆ ಮೈಮೇಲೆ ಏನೋ ಸರಿದಂತಾಗಿ ಮಧ್ಯರಾತ್ರಿ ನಿದ್ದೆಯಿಂದ ಧಡಾರನೆ ಎದ್ದು ಕುಳಿತು ಅದು ಭ್ರಮೆಯಷ್ಟೇ ಎಂದು ಮನವರಿಕೆಯಾಗಿ ಬಾತ್‌ರೂಮಿಗೆ ಹೋಗುವ ಅಗತ್ಯ ಅದುಮಿಟ್ಟು ಮಲಗುತ್ತಿದ್ದ.

ಕ್ರಮೇಣ ಲಾಕ್‌ಡೌನ್ ಸ್ವಲ್ಪ ಸಡಿಲವಾಗಿ ಬೆಂಗಳೂರಿನಲ್ಲಿ ಸೋಂಕು ವೇಗವಾಗಿ ಹೆಚ್ಚಾಗುತ್ತಿರುವ ಸುದ್ದಿ ಬರತೊಡಗಿತು. ಇಲ್ಲಿಯವರೆಗೆ ದೂರದ ಅಮೂರ್ತ ವಿಷಯವಾಗಿದ್ದ ಸಾವು, ಸುತ್ತ ಸುಳಿದಾಡುತ್ತಾ ಯಾವ ದಿನದಲ್ಲಾದರೂ ಭೇಟಿ ಕೊಡಬಹುದಾದ ನೆಂಟನಾಯಿತು. ಮರೆಯಲ್ಲಿದ್ದುಕೊಂಡು ಆಗಾಗ ಕಿಚ್ ಕಿಚ್ ಸದ್ದು ಮಾಡುತ್ತಾ ಹತ್ತಿರದಲ್ಲೇ ಇರುವ ಸೂಚನೆ ಕೊಡತೊಡಗಿತು. ರಾಜೇಶನ ಅಪ್ಪನಂತೂ ಪ್ರತಿದಿನ ವಾಟ್ಸಾಪ್‌ನಲ್ಲಿ ನಗರದ ಮತ್ತು ಅವರಿರುವ ವಾರ್ಡಿನ ಸಾವಿನ ಸಂಖ್ಯೆಗಳನ್ನು ಕಳಿಸತೊಡಗಿದರು. ಪ್ರತಿ ಮೆಸೇಜಿನ ಜೊತೆ "ನಾನು ಆರಾಮಿದ್ದೇನೆ" ಎನ್ನುತ್ತಾರಾದರೂ ಅದರ ಹಿಂದಿನ ಆತಂಕ ಸ್ಪಷ್ಟವಿತ್ತು. ಅವರ ವಯಸ್ಸಿನ ಜೊತೆ ಅವರಿಗಿದ್ದ ಬಿಪಿ, ಇತ್ತೀಚೆಗೆ ಶುರುವಾಗಿದ್ದ ಅಸ್ತಮಾದಿಂದಾಗಿ ಭಯ ಇವನಿಗೂ ವರ್ಗಾವಣೆಯಾಗಿದ್ದರೂ ಹಾಗೇನಾಗಲಾರದು ಎಂಬ ಖಾಲಿ ಭರವಸೆಯಲ್ಲಿ ಹಗುರಾಗುತ್ತಿದ್ದ. ಆದರೆ ಒಂದು ಶೆಕೆಯ ರಾತ್ರಿ ಕನಸಿನಲ್ಲಿ ಅಪ್ಪನೊಂದಿಗೆ ತಾನು ಯಾವುದೋ ಗಾಡಿಯಲ್ಲಿ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡಿದ್ದು, ಕ್ರಮೇಣ ಆ ಗಾಡಿ ಆ್ಯಂಬುಲೆನ್ಸ್‌ ಎಂದು ಗೊತ್ತಾಗಿ ಅದರ ಸೈರನ್ ಸದ್ದು ಹಲ್ಲಿಯ "ಕಿಚ್ ಕಿಚ್ ಕಿಚ್…" ಸದ್ದಾಗಿ ಬೆಚ್ಚಿ ಎದ್ದುಬಿಟ್ಟ. ಆ ರಾತ್ರಿ ಮತ್ತೆ ಕಣ್ಣು ಮುಚ್ಚಿದರೆ ಕನಸು ಮುಂದುವರಿಯುತ್ತೇನೋ ಎಂಬ ಭಯದಲ್ಲಿ ಒದ್ದಾಡಿದ. ಆ ದುಃಸ್ವಪ್ನದ ನಂತರ ಅವನಿಗೆ ಇತ್ತೀಚೆಗೆ ಹಲ್ಲಿಯ ಬಗ್ಗೆ ಮೂಡಿದ್ದ ನಿರಪಾಯಕಾರಿ ಭಾವನೆ ದೂರವಾಗಿಹೋಯಿತು.

ಮರುರಾತ್ರಿ ನಿದ್ದೆಮಾಡಲು ಭಯವಾಗಲು, ವಿಶೇಷವಾಗಿ ಸುಸ್ತಾದ ದಿನಗಳಿಗೆಂದು ಇಟ್ಟಿದ್ದ ವಿಸ್ಕಿ ಬಾಟಲ್ ತೆಗೆದ. ಆ ರಾತ್ರಿ ವಿಸ್ಕಿಯ ಪ್ರಮಾಣ ಮತ್ತು ಪರಿಣಾಮ ಸ್ವಲ್ಪ ಹೆಚ್ಚೇ ಆಯಿತು. ಇದರಿಂದ ಒಂದೆಡೆ ಅಪ್ಪನ ಸಾವಿನ ಭಯ ಉಬ್ಬಿದರೆ ಇನ್ನೊಂದೆಡೆ ದರಿದ್ರ ಹಲ್ಲಿಯ ಬಗ್ಗೆ ಕೋಪವೇರಿತು. ಅಪ್ಪ ಆಕಸ್ಮಾತ್ ಈ ಸೋಂಕಿಗೆ ಒಳಗಾಗಿಬಿಟ್ಟರೆ ತಾನು ಅಲ್ಲಿ ತಲುಪುವ ಮೊದಲೇ ಅವರು ಇಲ್ಲವಾಗಬಹುದು! ಮುಖ ನೋಡಲೂ ಬಿಡುವುದಿಲ್ಲವಂತೆ! ಅನೇಕ ಘೋರ ಕಲ್ಪನೆಗಳು ರಾಜೇಶನನ್ನು ಬಾಧಿಸಿದವು. ತಾನು ಕೊನೆಯ ಸಲ ಅಪ್ಪನೊಂದಿಗೆ ಮುಖತಃ ಏನು ಮಾತನಾಡಿದೆ ಎಂಬುದು ಎಷ್ಟು ಯೋಚಿಸಿದರೂ ನೆನಪಾಗದೆ ಒದ್ದಾಡಿದ. ಅದೇ ಹೊತ್ತಿನಲ್ಲಿ ಈ ಹಲ್ಲಿಗೆ ತಾನು ಹೆದರುತ್ತಿರುವ ಪರಿ ನೆನೆದು ಅಸಹ್ಯಪಟ್ಟುಕೊಂಡ. ಇನ್ನಷ್ಟು ಕುಡಿದಮೇಲೆ ಅದೇ ಮತ್ತಿನಲ್ಲಿ ಅಡಿಗೆಮನೆಗೆ ಹೋಗಿ ಲೈಟ್ ಹಾಕಿ "ಏ ದರಿದ್ರ ಹಲ್ಲೀ…" ಎಂದು ಕಿರುಚಿದ. ಆಯ ತಪ್ಪುವಷ್ಟು ಕುಡಿದಿದ್ದವನು "ನಮ್ಮಪ್ಪ ಹೋಗ್ಬಿಟ್ರೆ ನಾನೇನು ಮಾಡ್ಲಿ ಹೇಳು…!" ಎಂದು ಅಲ್ಲೇ ಕಣ್ಣೀರು ಸುರಿಸಿದ. "ನಿಂಗೇನು ನಾನು ಹೆದರಲ್ಲ ಗೊತ್ತಾಯ್ತಾ" ಎಂದು ಅಬ್ಬರಿಸಿದ. ಹಾಗೆಯೇ ಅಸಂಬದ್ಧವಾಗಿ ಕೂಗಾಡುತ್ತಾ ಮಂಪರಿನಲ್ಲಿ ಅಡಿಗೆಮನೆ ಮತ್ತು ಲಿವಿಂಗ್ ರೂಮ್ ನಡುವೆ ನೆಲದ ಮೇಲೆಯೇ ನಿದ್ದೆಹೋಗಿಬಿಟ್ಟ.

ಮರುದಿನ ಎಚ್ಚರವಾದಾಗ ತಾನು ಮಲಗಿರುವ ಜಾಗ ಮತ್ತು ಸ್ಥಿತಿ ಕಂಡು ಗಾಬರಿಯಾಗಿ ಮೈಕೈ ತಡವಿಕೊಂಡ. ತಲೆ ಸಿಡಿದುಹೋಗುವಂತಹ ಹ್ಯಾಂಗೋವರ್ ಮತ್ತು ನೆನ್ನೆಯ ವರ್ತನೆಯ ಬಗೆಗಿನ ನಾಚಿಕೆ ಬಿಟ್ಟರೆ ಬೇರೆಯಾವ ಅಪಸವ್ಯವೂ ಇರಲಿಲ್ಲ. ತಾನು ಹಲ್ಲಿಯ ಬಿಡಾರದ ಬಳಿಯೇ ರಾತ್ರಿವಿಡೀ ಕಳೆದರೂ ತನಗೇನೂ ಆಗದಿರುವುದು ರಾಜೇಶನಿಗೆ ವಿಚಿತ್ರ ಬಗೆಯಲ್ಲಿ ನೆಮ್ಮದಿ ತಂದಿತು. ಭಯವನ್ನು ಎದುರಿಸುವುದೆಂದರೆ ಇದೇ ಇರಬೇಕೇನೋ ಎಂದುಕೊಂಡ. ಇದಾಗಿ ಕೆಲವು ದಿನ ಅವನ ಮನಸ್ಥಿತಿ ಸ್ವಲ್ಪ ಸುಧಾರಿಸಿ ನಿಧಾನವಾಗಿ ಲಿವಿಂಗ್ ರೂಮ್ ಬಳಸಲೂ ಆರಂಭಿಸಿದ.

ಇದಾದ ಐದನೆಯ ದಿನ ರಾಜೇಶ ಬೆಳಗ್ಗೆ ಎದ್ದಾಗಲೇ ವಾಟ್ಸಾಪ್‌ನಲ್ಲಿ ಅಪ್ಪನ ಮೆಸೇಜಿತ್ತು. "ಯಾಕೋ ಸಣ್ಣಗೆ ಜ್ವರ, ಆದರೆ ಗಾಬರಿ ಬೇಡ". ರಾಜೇಶ ತತ್ತರಿಸಿಹೋಗಲು ಇಷ್ಟೇ ಸಾಕಿತ್ತು. ತಕ್ಷಣವೇ ಬೆಂಗಳೂರಿಗೆ ಹೋಗಲು ಏನೇನು ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹುಡುಕಾಡಲು ಶುರುವಿಟ್ಟ. ತುಸುಹೊತ್ತಿನಲ್ಲಿ ಎಂಟ್ಹತ್ತು ವೆಬ್‌ಸೈಟುಗಳು ತೆರೆದುಕೊಂಡು ಹತ್ತಾರು ಮಾರ್ಗಸೂಚಿಗಳನ್ನು ಓದುತ್ತಾ ಕಣ್ಣು ಮಂಜಾದವು. ದಾರಿಗಾಣದೆ ಬ್ಯಾಂಕಿನ ಎಲ್ಲಾ ವಾಟ್ಸಾಪ್ ಗ್ರೂಪುಗಳಲ್ಲಿ ಮೆಸೇಜ್ ಕಳಿಸಿಬಿಟ್ಟ. ಆದರೆ ಎಲ್ಲರೂ ತಲೆಗೊಂದು ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾ ಇನ್ನಷ್ಟು ಗೊಂದಲ ಹೆಚ್ಚಿಸಿದರು. ಅಷ್ಟರಲ್ಲಿ ಒಬ್ಬರು ಕೊಲೀಗ್ ಎರಡು ಡಾಕ್ಯುಮೆಂಟ್ ಕಳಿಸಿ ಇದರಲ್ಲಿರುವುದಷ್ಟನ್ನೇ ಮಾಡಿ ಎಂದರು. ಪರಿಚಯದ ಬ್ಯಾಂಕ್ ಗ್ರಾಹಕರೊಬ್ಬರು ಇ-ಪಾಸ್ ಬೇಗ ಸಿಗುವಂತೆ ಸಹಾಯ ಮಾಡಿದರು. ಖುದ್ದು ಬ್ರಾಂಚ್ ಮ್ಯಾನೇಜರ್ ಅವತ್ತು ರಾತ್ರಿಗೇ ವಿಮಾನದ ಟಿಕೆಟ್ ಬುಕ್ ಮಾಡಿಸಿ ವಾಟ್ಸಾಪ್‌ನಲ್ಲಿ ಕಳಿಸಿ, ನಿಧಾನವಾಗಿ ಗೂಗಲ್ ಪೇ ಮಾಡಿ ಪರವಾಗಿಲ್ಲವೆಂದು ಇನ್ನೊಂದು ಮೆಸೇಜ್ ಕಳಿಸಿದರು.

ಕ್ರಮೇಣ ಎಲ್ಲಾ ದಾಖಲೆಗಳು ಸಿದ್ಧವಾಗುತ್ತಾ ಮಧ್ಯೆ ತನ್ನ ಬ್ಯಾಗ್ ಪ್ಯಾಕ್ ಮಾಡಿಕೊಂಡು ಓಲಾ ಟ್ಯಾಕ್ಸಿ ಬುಕ್ ಮಾಡಲು ಅನುವಾಗುವಷ್ಟರಲ್ಲಿ ಬೆಂಗಳೂರಿನಿಂದ ಮೂರ್ತಿ ಅಂಕಲ್ ಫೋನ್ ಮಾಡಿ " ಮಾಮೂಲಿ ಫ್ಲೂ ಅಂತ ಕಾಣತ್ತೆ, ಕೊರೋನಾ ಸೂಚನೆಗಳಿಲ್ಲ, ಬರೋದೇನು ಬೇಡ ಬಿಡು" ಅಂದರು. ರಾಜೇಶನಿಗೆ ಸಮಾಧಾನವಾಗುವ ಮಾತೇ ಇರಲಿಲ್ಲ. "ಇಲ್ಲ ಬರ್ತಿದೀನಿ, ಎಲ್ಲಾ ಬುಕ್ ಆಗಿದೆ" ಎಂದು ಫೋನ್ ಕಟ್ ಮಾಡಿ ಟ್ಯಾಕ್ಸಿ ಬುಕ್ ಮಾಡಿದ. ಅವನ ನಿರ್ಧಾರ ದೃಢವಾಗಿತ್ತು. ಏನಾದರಾಗಲಿ, ತಾನೂ ಬೆಂಗಳೂರಲ್ಲಿ ಹೋಂ ಕ್ವಾರಂಟೈನ್ ಆಗಿ ಅಪ್ಪನ ಜೊತೆ ಸ್ವಲ್ಪ ದಿನ ಕಳೆಯುವುದು. ಅವರು ಪೂರ್ತಿ ಹುಷಾರಾದಮೇಲೆ ಕೆಲವು ದಿನಗಳ ಮಟ್ಟಿಗಾದರೂ ಇಲ್ಲಿಗೇ ಕರೆದುಕೊಂಡು ಬಂದುಬಿಡೋದು. ನಾನು ಹಲ್ಲಿ ನೋಡಿ ಹೆದರಿದರೆ ಅವರು ಗದರಲಿ.

ಮತ್ತೊಮ್ಮೆ ಎಲ್ಲಾ ದಾಖಲೆ ಪರಿಶೀಲಿಸಿಕೊಳ್ಳುವಷ್ಟರಲ್ಲಿ ಟ್ಯಾಕ್ಸಿ ಬಂದಾಗಿತ್ತು. ಟ್ಯಾಕ್ಸಿಯವನಿಗೆ ಫೋನ್ ಮಾಡಿ "ದೋ ಮಿನಿಟ್" ಎಂದು ಬ್ಯಾಗ್ ಹೊರಗಿಟ್ಟುಕೊಂಡು, ಮನೆಯೊಳಗೆ ಬಾಗಿಲುಗಳನ್ನು ಭದ್ರಪಡಿಸಿ ಸಿಲಿಂಡರ್ ಆಫ್ ಮಾಡಿದ. ಫ್ಯಾನು ಏಸಿ ಎಲ್ಲಾ ಆಫ್ ಮಾಡಿ ಲೈಟುಗಳನ್ನೂ ಆಫ್ ಮಾಡುವಷ್ಟರಲ್ಲಿ ಕೈ ತಡೆಯಿತು. ಒಮ್ಮೆ ಯೋಚಿಸುವಂತಾಯಿತು ರಾಜೇಶನಿಗೆ. ತಾನು ಬರುವುದು ಮೂರು ವಾರಗಳೇ ಆಗಬಹುದು. ಅಲ್ಲಿಯವರೆಗೆ ಲೈಟ್ ಆನ್ ಇದ್ದರೆ ತಾನಿದ್ದೇನೆಂದು ತಿಳಿದು ಹಲ್ಲಿ ಹೆಚ್ಚು ಓಡಾಡದೆ ಒಂದೇಕಡೆ ಲಾಕ್‌ಡೌನ್ ಆಗಬಹುದು. ಲೈಟ್ ಆಫ್ ಮಾಡಿಹೋದರೆ ಪೂರ್ತಿ ಸ್ವಾತಂತ್ರ್ಯ ಕೊಟ್ಟಂತಾಗಿ ವಾಪಸು ಬರುವಷ್ಟರಲ್ಲಿ ಮನೆ ತುಂಬೆಲ್ಲಾ ಹಲ್ಲಿಗಳು ಓಡಾಡುತ್ತಿರಬಹುದು ಎಂದು ನೆನೆಸಿ ರಾಜೇಶನಿಗೆ ಕಸಿವಿಸಿಯಾಯಿತು. ಹಾಗಾದರೆ ಅದರ ಮೇಲೆ ಲಾಕ್‌ಡೌನ್ ಹೇರಿ ಹೊರಟುಹೋಗಲೆ? ಲೈಟ್ ಉರಿಸಲೇ, ಆಫ್ ಮಾಡಲೇ?! ಟ್ಯಾಕ್ಸಿಯವನು ಮತ್ತೆ ಫೋನ್ ಮಾಡಿದ, ಬೇಗ ಬನ್ನಿ ಸರ್ ಎನ್ನಲು ಇರಬೇಕು. ರಾಜೇಶ ತನ್ನ ಇಲ್ಲಿಯವರೆಗಿನ ಲಾಕ್‌ಡೌನ್ ಅನುಭವದ ಬಗ್ಗೆ ಒಮ್ಮೆ ಯೋಚಿಸಿದ. ಅನುಮಾನವೇ ಉಳಿಯದಂತಾಯಿತು. ಲೈಟ್ ಆಫ್ ಮಾಡಿ ಬೀಗಹಾಕಿ ಡ್ರೈವರನ ಕರೆ ಸ್ವೀಕರಿಸಿ "ಆ ರಹಾ ಹೂಂ" ಎಂದ.